ಗೆಳತಿ ಅತ್ತು ಬಿಡು ಒಂದು ಸಲ
ಈ ಆಷಾಢ ಮಳೆಯ ಮುಸುಲಧಾರೆಯಂತೆ
ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು
ಈ ಸುಂಟರಗಾಳಿಯಂತೆ,
ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು
ಮಹಾಪೂರದಲ್ಲಿ ಕಡ್ಡಿ ಕಸದಂತೆ
ಗೆಳತಿ, ನೇಣು ಹಾಕಿಕೊಳ್ಳಬೇಡ
ಬಾವಿ ಬೀಳಬೇಡ, ಮನೆಯವರ
ಒದೆತ ತಿನ್ನಲೂ ಬೇಡ.
ಒಳಗೊಳಗೆ ಬೆಂಕಿ ಮಂಜುಗಡ್ಡೆ ಆಗಲೂ ಬೇಡ
ಬಾ! ನೀನು ನೀನಾಗು ಬಾ
ಬೆಳಗಿನ ಎಳೆ ಬಿಸಿಲಿನಂತೆ
ನಸುಕಿನ ಹೂವಿನಂತೆ
ಕಡಲ ತೊರೆಯ ನೊರೆಯಂತೆ
ಚಿಗುರು ಹುಲ್ಲಿನಂತೆ
ಬೆಳಗಿನ ಮೃದು ಮಣ್ಣಿನಂತೆ.
ಆದರೂ ನೀನು ನೀನಾಗುತ್ತಿಲ್ಲ
ಕೊನೆಗೆ ನೀನು ನೀನಾಗಲೇ ಇಲ್ಲ.
ನಿನ್ನ ಸಹನೆಯ ರಕ್ತ
ನನ್ನಲ್ಲಿಳಿಸಿದೆ ಕಿಚ್ಚು
ಮೊಗ್ಗೆಗಳೇ ಹೂವುಗಳಾಗಿ ಯಾಕೆ ಅರಳುತ್ತೀರಿ
ಅನ್ನುತ್ತೇನೆ
ಯಾವ ಕಟುಕರು ಮುಡಿದುಕೊಳ್ಳಲು
ನೀವು ಚಿತ್ತಾರದ ರಂಗಿನ ಸೊಬಗಾಗುತ್ತೀರಿ,
ಚಿನ್ನರ ಲೋಕದ ಚೆಲುವಿನಲ್ಲಷ್ಟೇ ಖುಷಿ ನಿಮಗೆ
ಭವಿಷ್ಯದ ಭೋರ್ಗರೆವ ಹೊಡೆತಕ್ಕೆ ಸಿಗುತ್ತಿರಲ್ಲ;
ಪ್ರಕೃತಿ ಮಾತೆ
ಅದೆಷ್ಣು ಮುಗ್ಧ ಮೊಗ್ಗುಗಳಿಗೆ
ಜನ್ಮ ಕೊಟ್ಟು ಕಿಚ್ಚಿಡುವ
ನಿನ್ನ ಬಸಿರಿನ್ನೂ ಶಾಂತವಾಗಿಲ್ಲವೆ?
ಸಾಕಿನ್ನು ಬಂಜರಾಗು
ಇದ್ದ ಮೊಗ್ಗುಗಳಿಗೆ ಇದೇ ಕಡೆಯೆಂದು
ಶಾಪವೂ ಹಾಕು
ಒಮ್ಮೆ ನೀನು ಬರಡಾಗು
ಮರುಭೂಮಿಯಾಗು
ಇದ್ದ ನಾಯಿಗಳೆಲ್ಲ ಬೊಗಳಿ
ಬೊಬ್ಬೆ ಹೊಡೆದು ಬಿದ್ದುಹೋಗುವಾಗ
ನೀನು ಓಯಸಿಸ್ ಆಗು
ತುಂಬಿ ಹರಿವ ಗಂಗೆ ಮಾತ್ರ
ಎಂದೂ ಆಗಬೇಡ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)