ಮಾಗಿಯ ಚಳಿಗೆ ಕವಿತೆ ಕಂಬಳಿ

ಮಾಗಿಯ ಚಳಿಗೆ ಕವಿತೆ ಕಂಬಳಿ

ಈ ೨ಂಂ೭ರ ಡಿಸೆಂಬರಿನಲ್ಲಿ ಎರಡು ವಾರಗಳ ರಜಕ್ಕೆ ಮನೆಗೆ ಬಂದಾಗ ನನಗೆ ಕಾಯುತ್ತಿದ್ದ ಅತ್ಯಂತ ಖುಷಿಯಾದ್ದು ಕೆಲವು ಹೊಸ ಕವನ ಸಂಕಲನಗಳನ್ನು ಕಂಡು. ಮಾಗಿಯ ಚಳಿಗೆ ಕಂಬಳಿ ಸಿಕ್ಕಷ್ಟು ಸಂತೋಷವಾಯಿತು. ಕತೆ ಕಾದಂಬರಿ ವಿಮರ್ಶೆ ಎಂಬ ಸಕಲ ಪ್ರಕಾರಗಳಲ್ಲೂ ನನಗೆ ಸಮಾನಾಸಕ್ತಿಯನ್ನು ಹೊಂದಿದ್ದರೂ ಕವಿತೆಗೆ ಮನಸೋಲುವಷ್ಟು ಬಹುಶಃ ಇನ್ನು ಯಾವುದಕ್ಕೂ ಸೋಲಲಾರೆ. ಇಲ್ಲ. ಇತರ ಸಾಹಿತ್ಯ ಪ್ರಕಾರಗಳಲ್ಲಿ ಇಲ್ಲದ ಯಾವುದೋ ಒಂದು ಜಾದೂ ಒಂದು ಕವಿತೆಯ ಪ್ರಕಾರದಲ್ಲಿ ಇದೆ. ವಿ. ಎಸ್. ನೈಪಾಲರು ಕಾದಂಬರಿಯ ಕಾಲ ಮುಗಿಯಿತು. ಇನ್ನೇನಿದ್ದರೂ ಪ್ರವಾಸ ಚಿತ್ರಣ ಮಾತ್ರ ಉಳಿದದ್ದು ಎಂದಾಗ ನನಗೇನೂ ಅನಿಸಲಿಲ್ಲ; ಯಾರಾದರೂ ಇಂಥ ಮಾತನ್ನು ಕವಿತೆಯ ಬಗ್ಗೆ ಹೇಳಿದರೆ ನಾನು ಖಂಡಿತಕ್ಕೂ ತಲ್ಲಣಗೊಂಡೇನು. ಆದರೆ ಕವಿತೆ ಎಂದೂ ಕೊನೆಗೊಳ್ಳುವುದಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಧಿಸುವುದಕ್ಕೆ ಎಂಬಂತೆ ಹೊಸ ಹೊಸ ಕವನಸಂಕಲನಗಳು ಪ್ರಕಟವಾಗುತ್ತಲೇ ಇವೆ. ಈ ರೀತಿಯ ಪ್ರಮಾಣಕ್ಕೆ ಕರುಬುವವರೂ ಇದ್ದಾರೆ: ಸಂಖ್ಯೆ ಮುಖ್ಯವಲ್ಲ, ಗುಣ ಮುಖ್ಯ ಎಂಬ ಕಾರಣಕ್ಕೆ. ಅಂಥವರ ಕಾಳಜಿ ಅರ್ಥಪೂರ್ಣವಾದರೂ ಸಂಖ್ಯಾವೈಪುಲ್ಯ ಕೂಡಾ ಕಾವ್ಯಾಸಕ್ತಿಯ ಒಂದು ಸೂಚಿಯೆಂದು ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲಿ ನಾನು ಮುಖ್ಯವಾಗಿ ನಾಲ್ಕು ಕವನ ಸಂಕಲನಗಳ ಬಗ್ಗೆ ಟಿಪ್ಪಣಿ ಬರೆಯಲು ಬಯಸುತ್ತೇನೆ.

ಮೊದಲನೆಯದು ಹುಬ್ಬಳ್ಳಿಯ ಡಾ. ಡಿ.ಎಸ್. ಕರ್ಕಿ ಸಾಹಿತ್ಯವೇದಿಕೆ ಪಕಟಿಸಿರುವ ಮೋಹನಚಂದ ಪಾಟೀಲರ ಚೊಚ್ಚಲ ಕೃತಿ “ಬಾಗಿಲುಗಳು”. ಶಾಂತಿನಾಥ ದೇಸಾಯಿಯವರ ಒಡನಾಡಿಯಾಗಿದ್ದು, ಈಗ ಉದ್ಯಮವೊಂದರಲ್ಲಿ (ಕಾರ್ಖಾನೆಯಲ್ಲಿ) ಕೆಲಸ ಮಾಡುತ್ತಿರುವ ಪಾಟೀಲರ ಕವಿತೆಗಳು ಬಿಡಿ ಬಿಡಿಯಾಗಿ ಅಲ್ಲಲ್ಲಿ ಪ್ರಕಟವಾಗಿದ್ದರೂ, ಕನ್ನಡ ಸಾರಸ್ವತ ಲೋಕಕ್ಕೆ ಅವರದು ಹೊಸ ಸೇರ್ಪಡೆ. ಅನೇಕ ವರ್ಷಗಳ ನನ್ನ ಗಾಢ ಅನುಭವ, ಚಿಂತನ-ಮಂಥನಗಳಿಂದ ಹರಳುಗಟ್ಟಿದ ನನ್ನ ಕವನಗಳು ಯಾವುದೇ ಒಂದು ವಿಷಯ ಅಥವಾ ವಿಚಾರಕ್ಕೆ ಬದ್ಧವಾಗದೆ, ಅದು ಬೇಡ ಇದು ಬೇಡ ಎನ್ನದೆ, ಅದೂ ಬೇಕು ಇದೂ ಬೇಕು ಎನ್ನುತ್ತ ವಿವೇಕ ಪ್ರಜ್ಞೆಯ ನೆಲೆಯ ಮೇಲೆ ಮೂಡಿಬಂದು ಲೌಕಿಕ -ಅಲೌಕಿಕ, ಭೌತಿಕ ಸ್ತರದಲ್ಲಿ ವಿಹರಿಸುತ್ತ, ಕೇವಲ ಗೇಯಗೀತಗಳಾಗಿ ಉಳಿಯದೆ, ಸಾಮಾಜಿಕ ಕಳಕಳಿಯ, ಪರಿಸರ ಕಾಳಜಿಯ, ಆಧ್ಯಾತ್ಮಿಕ ಹಂಬಲಗಳಿಗೆ ಸ್ಪಂದಿಸುವ ಗದ್ಯ-ಪದ್ಯಗಳಾಗಿಯೂ ರೂಪುಗೊಂಡು ನನ್ನ ಚೊಚ್ಚಲು ಕವನ ಸಂಕಲನ ‘ಬಾಗಿಲುಗಳು’ದಲ್ಲಿ ಅರಳಿವೆ’ ಎಂಬುದಾಗಿ ಪಾಟೀಲರು ತಮ್ಮ ಮಾತಿನಲ್ಲಿ ಹೇಳಿಕೊಂಡುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ ಎನ್ನುವುದು ಈ ಸಂಕಲನದ ಕವಿತೆಗಳನ್ನು ಓದಿದರೆ ಗೊತ್ತಾಗುತ್ತದೆ. ಈ ತರ ಬದ್ಧತೆಯ ಸಂಕುಚಿತತೆಯನ್ನು ಬಿಟ್ಟು ಸಕಲವನ್ನೂ ಸ್ವೀಕರಿಸುವ ಮನೋಭಾವ ತೀರಾ ಅಪರೂಪವಾದ ಈ ಕಾಲದಲ್ಲಿ ಪಾಟೀಲರು ಹೀಗೆ ಹೇಳುತ್ತಿರುವುದೇ ದೊಡ್ಡ ಸಂಗತಿ. ಶೈಲಿಯಲ್ಲೂ ಪಾಟೀಲರದು ಎಲ್ಲಾ ಸ್ತರದಲ್ಲೂ ಕೈಯಾಡಿಸುವಂಥ ಮನೋಧರ್ಮ. ಆದ್ದರಿಂದಲೇ ಈ ಚಿಕ್ಕ ಸಂಕಲನದಲ್ಲಿ ಆಧುನಿಕ ಕನ್ನಡ ಕಾವ್ಯದ ಇಡೀ ಅಡ್ಡನೋಟವೊಂದು ನಮಗೆ ಸಿಕ್ಕಿದಂತಾಗುತ್ತದೆ. ವಿಶಿಷ್ಟವಾದ ಪ್ರಯೋಗಗಳನ್ನೂ ಪಾಟೀಲರು ನಡೆಸಿದ್ದಾರೆ. ‘ಸಂತೆಯ ನಂತರ’, ‘ಕಾಂಕ್ರೀಟ ಮಿಶ್ರಣ ಯಂತ್ರ’, ‘ಗಾಂಧೀ ತಾತ’ನ ಕುರಿತಾದ ಎರಡೆರಡು ರಚನೆಗಳು ಇಲ್ಲಿ ಹೆಸರಿಸಬಹುದಾದವು. ‘ಕಾಂಕ್ರೀಟ ಮಿಶ್ರಣ ಯಂತ್ರ’ವಂತೂ ಅನನ್ಯವೆಂದೇ ಹೇಳಬಹುದು. ‘ನನಗೆ ಕಾಂಕ್ರಿಟ ಮಿಶ್ರಣ ಯಂತ್ರವನ್ನು ಕವನದಲ್ಲಿ ತರಬೇಕಿತ್ತು’ ಎಂದು ಆರಂಭವಾಗುವ ಈ ಕವಿತೆಯಲ್ಲಿ ಒಂದು ವಿಚಿತ್ರವಾದ ಚಿತ್ರಕತ್ವವೂ ಇದೆ; ಕಾರಣ ಈ ಕಾಂಕ್ರೀಟ ಮಿಶ್ರಣ ಯಂತ್ರ ಕವಿತೆಯೊಳಗೆ ಬರುತ್ತಲೇ ಕವಿತೆ ಮಧ್ಯದಲ್ಲಿ ದಪ್ಪವಾಗುತ್ತಲೂ ಇರುತ್ತದೆ. ಆದರೆ ಕವಿತೆ ನಮಗೆ ಇಷ್ಟವಾಗುವುದು ಅದಕ್ಕಲ್ಲ; ಅದು ಎಷ್ಟೊಂದು ಪರೋಕ್ಷವಾಗಿ ಆದರೆ ಅಷ್ಟೇ ಅದ್ಭುತವಾಗಿ ಕಾರ್ಮಿಕ ಜಗತ್ತೊಂದನ್ನು ನಮ್ಮೆದುರು ಬಿಚ್ಚಿಡುತ್ತದೆ ಎಂಬುದಕ್ಕೆ. ಕವಿತೆ ನೇರ ಮಾತುಗಳಿಂದ ಸೊರಗಿರುವ ಸಂದರ್ಭದಲ್ಲಿ ಇಂಥ ಪರೋಕ್ಷ ತಂತ್ರ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.

ಎರಡನೆಯದು ಹಿಂದೆ ಬೆಂಗಳೂರಲ್ಲಿ ಪತ್ರಿಕಾರಂಗದಲ್ಲಿದ್ದು ಈಗ ಹೈದರಾಬಾದಿನ ರಾಮೋಜಿರಾಮ್ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುತ್ತಿರುವ ಜಿ. ಎನ್. ಮೋಹನ್ ಅವರ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಎಂಬ (ಬಹುಶಃ ಮೊದಲ) ಕವನ ಸಂಕಲನ-ಬೆಂಗಳೂರಿನ ಅಭಿನವದ ಪ್ರಕಟಣೆ. ಈ ಕವಿಯಾದರೆ ಕನ್ನಡ ಕಾವ್ಯಕ್ಷೇತ್ರಕ್ಕೆ ಮೋಹನಚಂದರಷ್ಟು ಅಪರಿಚಿತ ಹೆಸರೇನಲ್ಲ. ಆಗಾಗ್ಗೆ ಇವರ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೂ, ಅದಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಗಣ್ಯ ಕಾವ್ಯಾಸಕ್ತರ ವಲಯದಲ್ಲಿ ಚರ್ಚಿಸಲ್ಪಡುತ್ತಲೂ ಇದ್ದಂಥವು. ಆದ್ದರಿಂದ ಮೋಹನ್‌ರ ಕವನ ಸಂಕಲನ ನಿರೀಕ್ಷಿತವೇ; ತಡವಾಗಿಯಾದರೂ ಅರಳಿದ ಹೂವು. ಸಂಕಲನಕ್ಕೆ ಹೆಸರು ನೀಡಿದ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಎಂಬ ಕವಿತೆಯೇ ಕುತೂಹಲಕಾರಿ. ಇಲ್ಲಿ ಈ ‘ಷೇಕ್ಸ್‌ಪಿಯರ್’ ಮತ್ತು ಕವಿಯ ನಂಟು ಸೂರ್ಯನಿಗೆ ಸೂರ್ಯಕಾಂತಿಯಂತೆ ನನ್ನಂಥ ಹಲವಾರು ಪೇಕ್ಸ್‌ಪಿಯರ್ ಪ್ರೇಮಿಗಳನ್ನು ಅವರ ಕವಿತೆಯೆಡೆಗೆ ತಕ್ಷಣ ತಿರುಗುವಂತೆ ಮಾಡುತ್ತದೆ. ಇದೇ ಕವಿ ನಮಗೆ ಆರಂಭದಲ್ಲೇ ಹಾಕುವ ಮೋಡಿ. ಆಡೆನ್‌ದೋ ಇನ್ನು ಯಾರದೋ ಸಾನೆಟ್ ಒಂದರಲ್ಲಿ ಷೇಕ್ಸ್‌ಪಿಯರ್ ನಮ್ಮ ಪ್ರಶ್ನೆಗಳಿಗೆ ಅತೀತ ಎಂಬ ಮಾತು ಬರುತ್ತದೆ. ಮೋಹನ್‌ರ ಕವಿತೆ ಇದಕ್ಕೆ ವಿರುದ್ಧವಾಗಿ ಪ್ರಶ್ನೆಗಳನ್ನು ಹಾಕುವುದಿದ್ದರೆ ಷೇಕ್ಸ್‌ಪಿಯರಿಗೇ ಎಂಬ ಧಾಟಿ ಹಿಡಿಯುತ್ತದೆ. ಇದು ಯಾಕೆ ಷೇಕ್ಸ್‌ಪಿಯರಿಗೇ ಪಶ್ನೆಗಳು ಎಂಬುದನ್ನು ತಿಳಿಯಬೇಕಾದರೆ ನಾವು ಮೋಹನರ ಕವಿತೆಗಳನ್ನು (ನಟರಾಜ ಹುಳಿಯಾರರ ಸೊಗಸಾದ ಮುನ್ನುಡಿಯೊಂದಿಗೆ) ಓದಬೇಕು: ಇಲ್ಲಿ ಷೇಕ್ಸಪಿಯರ್ ನಮ್ಮೆಲ್ಲರನ್ನು ಹುಟ್ಟಿಸಿ ಬೇರೆ ಬೇರೆ ತೊಳಲುಗಳಲ್ಲಿ ಜೀವಿಸುವಂತೆ ಮಾಡಿದ ವಿಧಾತೃವಿಗೆ ಸಮನಾಗಿ ಬರುತ್ತಾನೆ ಎನ್ನುವುದು ತುಂಬಾ ಮನೋಜ್ಞವಾದ ಕಲ್ಪನೆಯಾಗುತ್ತದೆ. ಮೋಹನರ ಕವಿತೆಗಳನ್ನು ಓದುತ್ತಿರುವಂತೆ ಅವರು ಮೇಜರ್ ಕವಿ ಷೇಕ್ಸ್‍ಪಿಯರ್ ಜತೆ ಮಾತ್ರವೇ ಅಲ್ಲ, ಇತರ ಸಣ್ಣಪುಟ್ಟ ಕವಿಗಳ ಜತೆಯೂ ಸಂಭಾಷಣೆ ನಡೆಸುವಂತೆಯೂ ಕಂಡುಬರುತ್ತದೆ; ಆದ್ದರಿಂದ ಮೋಹನರ ಕವಿತೆಯ ರೀತಿ ಅಂತರ್ ಪಠ್ಯಗಳನ್ನು ಹೊಸೆಯುವಂತಿದ್ದು ಅದು ನಮ್ಮನ್ನು ಹಲವಾರು ಪಥಗಳಲ್ಲಿ ಹಿಂದೆ ಮುಂದೆ ಚಲಿಸುವಂತೆ ಮಾಡುತ್ತದೆ. ಮೊದಲ ಸಂಕಲನದಲ್ಲೇ ಇಷ್ಟನ್ನೆಲ್ಲ ಸಾಧಿಸಿದವರು ಅಪರೂಪ.

ಮೂರನೆಯದು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿರುವ ಜಿ. ಕೆ. ರವೀಂದ್ರಕುಮಾರರ ನಾಲ್ಕನೆಯ ಕವನ ಸಂಕಲನ ಬೆಂಗಳೂರಿನ ಸಂಚಯ ಪ್ರಕಾಶನದವರು ಪ್ರಕಟಿಸಿರುವ ‘ಒಂದು ನೂಲಿನ ಜಾಡು.’ ನಾಲ್ಕೈದು ವರ್ಷಗಳ ಹಿತಮಿತವಾದ ಅವಧಿಯಲ್ಲಿ ಒಂದೊಂದು ಒಳ್ಳೆಯ ಕವನ ಸಂಕಲನಗಳನ್ನು ಹೊರತರುತ್ತಿರುವ ರವೀಂದಕುಮಾರ್ ಕನ್ನಡಕಾವ್ಯಕ್ಷೇತ್ರಕ್ಕೆ ಹೊಸಬರಲ್ಲ; ತಮ್ಮ ಮೊದಲ ಕವನ ಸಂಕಲನ ‘ಸಿಕಾಡ’ಕ್ಕೇ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದುಕೊಂಡರು. ರವೀಂದ್ರ ಕುಮಾರರು ಭಾಷೆಯನ್ನು ಬಳಸಿಕೊಳ್ಳುವ ರೀತಿ ತುಂಬಾ ಆಕರ್ಷಕವಾದುದು. ‘ಕದವಿಲ್ಲದ ಊರಿನಲ್ಲಿ’ ಎಂಬ ಹೆಸರಿನ ಅವರ ಎರಡನೆಯ ಸಂಕಲನದೊಳಗಣ ‘ಅಮಟೆ ಅಮಟೆ’ ಕವಿತೆಗೆ ಮಾರುಹೋಗದವರಿಲ್ಲ. ನನಗಂತೂ ಇದು ಬಹು ಆಪ್ಯಾಯಮಾನವಾದ ಕವಿತೆ. ಆರಂಭದಲ್ಲೇ ಹೆಸರು ಗಳಿಸುವ ಕವಿಯ ಮೇಲೆ ಅದನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಸ್ವತಃ ಕವಿಯೇ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾನೆ ಎಂದಲ್ಲ; ಓದುಗರು ಮತ್ತು ವಿಮರ್ಶಕರು ಅಂಥ ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಅವರು ಅದನ್ನು ಇಟ್ಟುಕೊಂಡಿರುತ್ತಾರೆ ಎನ್ನುವುದೇ ಕವಿಯ ಮೇಲೆ ಒಂದು ಹೊರೆಯಾಗಬಹುದು. ಕವಿಯನ್ನು ಸ್ವಪ್ರಜ್ಞೆಗೆ ಒಳಪಡಿಸಬಹುದಾದ ಇನ್ನೊಂದು ಸಂಗತಿಯೆಂದರೆ ಸಮಕಾಲೀನ ಕಾವ್ಯದ ಒಲವುಗಳು. ರವೀಂದ್ರ ಕುಮಾರ್ ಇದೆಲ್ಲದಿಂದಲೂ ಮುಕರಾಗಬಲ್ಲ ಶಕ್ತ ಕವಿ. ಆದರೂ ‘ಒಂದು ನೂಲಿನ ಜಾಡು’ ನೋಡಿದರೆ ಅವರ ಕಾವ್ಯ ಸಮಯಕ್ಕೆ ಮೊದಲೇ ‘ಮಾಗುತ್ತ’, ಮರ್ಯಾದಸ್ತವಾಗುತ್ತ ಹೋಗುವಂತೆ ಕಾಣುತ್ತದೆ. ಅವರಿಗೆ ಇದಕ್ಕೆಲ್ಲ ಇನ್ನೂ ಸಮಯವಾಗಿಲ್ಲ ಎಂದು ಯಾರಾದರೂ ಹೇಳಬೇಕು. ಆದರೆ ಸಂಕಲನದ ಕೊನೆಯ ಕೊನಾರ್ಕ ಪದ್ಯಗಳಂಥ ರಚನೆಗಳು ಕವಿಯ ಮಾಂತ್ರಿಕ ಶಕ್ತಿಗೆ ನಿದರ್ಶನಗಳಾಗಿ ಉಳಿದಿರುವುದು ಶುಭಸೂಚನೆ.

ಇನ್ನು ನಾಲ್ಕನೆಯದೂ, ಇಲ್ಲಿ ಪರಿಶೀಲನೆಗೆ ತೆಗೆದುಕೊಂಡವಲ್ಲಿ ಕೊನೆಯದೂ ಆಗಿರುವುದು ಯಶವಂತ ಚಿತ್ತಾಲರ ಮೊತ್ತಮೊದಲ ಕವನ ಸಂಕಲನ ‘ದಣಪೆಯಾಚೆಯ ಓಣಿ’-ಬೆಂಗಳೂರಿನ ಪ್ರಿಸಮ್ ಬುಕ್ಸ್‌ನ ಪ್ರಕಟಣೆ. ಚಿತ್ತಾಲರು ಇಲ್ಲಿನ ರಚನೆಗಳನ್ನು ಕವಿತೆಗಳೆಂದು ಕರೆಯದೆ ‘ಲಬಸಾ’ಗಳೆಂದು (ಲಯಬದ್ಧ ಸಾಲುಗಳು) ಕರೆದಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣಗಳು ಎರಡು: ಮೊದಲನೆಯದಾಗಿ, ಕಾದಂಬರಿಕಾರರಾದ ತಾವು ಕವಿಯಾಗಿದ್ದ ತಮ್ಮ ಅಣ್ಣ ಗಂಗಾಧರ ಚಿತ್ತಾಲರ ಕ್ಷೇತ್ರವನ್ನು ಪ್ರವೇಶಿಸಲು ಇಷ್ಪಪಡುವುದಿಲ್ಲ; ಎರಡನೆಯದಾಗಿ, ಈ ರಚನೆಗಳಿಗೆ ಕವಿತೆಯ ಬಂಧವಿದ್ದರೂ ಅವಕ್ಕೆ ಕವಿತೆಯ ಗಂಧವಿಲ್ಲ, ಆದ್ದರಿಂದ ಇವು ಕವಿತೆಯ ಕರಡು ರೂಪಗಳು. ಈ ಎರಡೂ ಕಾರಣಗಳು ನಮಗೆಲ್ಲ ಹಿರಿಯರಾಗಿದ್ದೂ ಗಂಗಾಧರ ಚಿತ್ತಾಲರ ಮುಂದೆ ಕಿರಿಯರಾಗಿರುವ ಯಶವಂತ ಚಿತ್ತಾಲರ ವಿನಯವನ್ನು ಸೂಚಿಸುತ್ತವೆ. ಲಬಸಾ ಎಂದಾಗಲಿ, ಕವಿತೆ ಎಂದಾಗಲಿ, ಹೇಗೇ ನೋಡಿದರೂ ಇಲ್ಲಿ ಅಡಕವಾಗಿರುವ ರಚನೆಗಳು ಗಮನಾರ್ಹವಾದುವು ಎನ್ನುವುದರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ, ಚಿತ್ತಾಲರ ಭಾಷೆ ನಮ್ಮನ್ನು ಅವರೊಳಗಿನ ಸಂವೇದನಾ ಪ್ರಪಂಚಕ್ಕೆ ಕೊಂಡೊಯ್ಯುವಂಥದು. ಹಾಗೂ ಆ ಪ್ರಪಂಚ ಅವರ ಕಥಾಪ್ರಪಂಚದಷ್ಟೇ ನವುರಾದುದು ಕೂಡಾ. ಆದ್ದರಿಂದ ಇಲ್ಲಿ ಪದ್ಯ ಗದ್ಯದ ಭಿನ್ನತೆಯ ಪ್ರಶ್ನೆಯೇ ಏಳುವುದಿಲ್ಲ. ಇಲ್ಲಿ ಮುಖ್ಯವಾಗಿ ನನ್ನನ್ನು ಆಕರ್ಶಿಸಿದ್ದು ಸಂಕಲನದ ಮೊದಲ ಕವಿತೆಯಾದ ‘ಬ್ಯಾಂಡ್ ಸ್ಟಾಂಡಿನ ಬಂಡೆಗಳು.’ ಚಿತ್ತಾಲರು ಮುಂಬಯಿಯಲ್ಲಿ ಇರುವ ಪ್ರದೇಶವೇ ಬ್ಯಾಂಡ್ ಸ್ಟಾಂಡ್ ಎಂಬ ಬಾಂದ್ರಾದ ಸಮುದ್ರ ತೀರ. ತೀರ ತುಂಬಾ ಕಲ್ಲುಗಳು-ಅವು ಪಕೃತಿ ನಿರ್ಮಿತ ಆಕಾರದಲ್ಲಿರದೆ, ಸೌಧಗಳನ್ನು ಕಟ್ಟಸುವುದಕ್ಕೆ ಒಡೆದು ಹಾಕಿದಂಥವು; ದಿನವೂ ಬಂಡೆಗಲ್ಲುಗಳನ್ನು ಸಿಡಿಮದ್ದಿನಿಂದ ಒಡೆಯುವ ಸದ್ದೇ ಸದ್ದು. ಕವಿಗೆ ಇದೊಂದು ನಿರಂತರ ನೋವಿನ ಅನುಭವ. ಮಾನವನ ಹಿಂಸೆಯ ಮುಂದೆ ಎದುರಿನ ಸಮುದ್ರದಂತೆ ಅವರೂ ನಿಸ್ಸಹಾಯಕರು.

ಅನೇಕ ಕವಿತೆಗಳಲ್ಲಿ ಚಿತ್ತಾಲರ ಕಾವ್ಯಭಾಷೆಗೆ ಗೋಪಾಲಕೃಷ್ಣ ಅಡಿಗರನ್ನು ನೆನಪಿಸುವ ಶಕ್ತಿಯಿದೆ; ಅದೇ ರೀತಿ ಕೆಲವೆಡೆ ಯೇಟ್ಸ್‌ನಂತೆ ನಾಮಪದಗಳನ್ನು ಒಂದರ ಮೇಲೊಂದು ತರುತ್ತ ಭೂತಕಾಲವನ್ನು ಪುನರ್ಸೃಷ್ಟಿಸುವುದರಲ್ಲಿ ಅವರು ಯಶಸ್ವಿಯಾಗುತ್ತಾರೆ. ಚಿತ್ತಾಲರ ಬರಹ ಎಲ್ಲೂ ದುರ್ಬಲ ಎನಿಸುವುದಿಲ್ಲ.

ಕವನ ಸಂಕಲನದ ಮುದ್ರಣ ಮತ್ತು ಪ್ರಕಟಣೆ ಯಾವಾಗಲೂ ಒಂದು ಸಂಭ್ರಮದ ಸನ್ನಿವೇಶ. ಪುಸ್ತಕ ವಿನ್ಯಾಸ ಯಾರನ್ನೇ ಆದರೂ ತಟ್ಟನೆ ಆಕರ್ಷಿಸುವ ಸಂಗತಿಯಾದ್ದರಿಂದ ಕವಿಗಳು, ಪ್ರಕಾಶಕರು, ಮುದ್ರಕರು ಆ ಕುರಿತು ಸಾಕಷ್ಟು ತಲೆ ಕೆಡಿಸಿಕೊಳ್ಳುವುದು ಸಾಮಾನ್ಯ. ಯಾವ ಆಕಾರ, ಯಾರಿಂದ ಮುಖಪುಟ, ಯಾವ ಬಣ್ಣ, ಯಾವ ಕಾಗದ, ಯಾರಿಂದ ಮುನ್ನುಡಿ, ಯಾರ ಬೆನ್ನುಡಿ, ಯಾರುಯಾರಿಗೆ ಕೃತಜ್ಞತೆ. ಯಾರಿಗೆ ಅರ್ಪಣೆ, ಕವಿ ತನ್ನ ಕವಿತೆಗಳ ಕುರಿತು ಹೇಳಿಕೊಳ್ಳುವುದೇನು, ಎಲ್ಲಿ ಮುದ್ರಣ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಪ್ರಕಾಶಕರು ಯಾರು? ಇವು ಯಾವುವೂ ಕವಿತೆಗಳ ಪಠ್ಯದ ಮೇಲೆ ಯಾವುದೇ ಪ್ರಭಾವ ಬೀರದೆ ಇದ್ದರೂ ಅವುಗಳ ಓದಿನ ಮೇಲೆ ಅಪ್ರತ್ಯಕ್ಷವಾದ ಪ್ರಭಾವ ಬೀರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ನಿಟ್ಟಿನಿಂದ ಕವಿಗಳಲ್ಲಿರುವಂತೆಯೇ ಅವರುಗಳ ಕವನ ಸಂಕಲನಗಳಲ್ಲಿಯೂ ಕಾಣಿಸುವ ಸೂಕ್ಷ್ಮವಾದ ವರ್ಗಭೇದವನ್ನು ಜನ ಎಷ್ಪರ ಮಟ್ಟಿಗೆ ಸ್ವೀಕರಿಸಿಕೊಂಡಿದ್ದಾರೆಂದರೆ ಇದು ಮಾತಿಗೊಂದು ವಿಷಯವೇ ಅಲ್ಲ ಎನ್ನುವಂತೆ. ಆದರೂ ಇದೊಂದು ಕಣ್ಣಿಗೆ ಹೊಡೆದು ಕಾಣಿಸುವ ಸತ್ಯ. ಉದಾಹರಣೆಗೆ, ಮೇಲೆ ಹೆಸರಿಸಿದ ನಾಲ್ಕೂ ಪುಸ್ತಕಗಳಲ್ಲಿ ಚಿತ್ತಾಲರದು ಉಳಿದವಕ್ಕಿಂತ ಎಲ್ಲ ರೀತಿಯಲ್ಲೂ ಪ್ರತ್ಯೇಕ: ಅದರ ಆಕಾರ (ರಾಯಲ್), ಹೊದಿಕೆಯ ಅಲೀವ್ ಹಸಿರಿನ ಬಣ್ಣ, ಪ್ರಕಾಶನ ಸಂಸ್ಥೆ (ಪ್ರಿಸಮ್), ಮುದ್ರಣ (ಬಿಲಿಯೆಂಟ್ ಪ್ರಿಂಟರ್ಸ್, ಬೆಂಗಳೂರು), ವಿಶಿಷ್ಟ ಕಾಗದ, ತೊಗಲುಗೊಂಬೆಯ ಕಲೆ -ಸಕಲವೂ “ಕ್ಲಾಸಿಕ್ ದೇಶಕಾಲ ನಡೆಸುವ ಸಾಹಿತಿ ವಿವೇಕ ಶಾನಭಾಗ ಹಾಗೂ ಆ ಪತ್ರಿಕೆಯ ವಿನ್ಯಾಸಕಾರ ಚೆನ್ನಕೇಶವರ ಪ್ರಯತ್ನದಿಂದ ಇಷ್ಟೊಂದು ಒಳ್ಳೆಯ ಪುಸ್ತಕ ಸಾಧ್ಯವಾಗಿದೆ. ಆದ್ದರಿಂದ ಆರುವತ್ತು ಪುಟಗಳ ಪುಸ್ತಕಕ್ಕೆ ಎಪ್ಪತ್ತು ರೂಪಾಯಿ ಪುಟಸಂಖ್ಯೆಯ ದೃಷ್ಟಿಯಿಂದ ದುಬಾರಿಯೆನಿಸಿದರೂ, ಇದೊಂದು ‘ಸಂಗ್ರಹಯೋಗ್ಯ ವಸ್ತು’ವೆಂದೂ ತೋರುವುದರಿಂದ ಬೆಲೆ ಜಾಸ್ತಿಯೆನಿಸುವುದಿಲ್ಲ! ಹಾಗೂ ಈ ನಾಲ್ಕೂ ಕೃತಿಗಳಲ್ಲಿ ಇದೊಂದರಲ್ಲೇ ನಾವು ‘ಈ ಪ್ರಕಟಣೆಯ ಯಾವುದೇ ಭಾಗವನ್ನು ಪ್ರಕಾಶಕರ ಲಿಖಿತ ಅನುಮತಿಯಿಲ್ಲದೇ, ವಿದ್ಯುನ್ಮಾನಕ, ಕಂಪ್ಯೂಟರ್ ಡಿಸ್ಕೆಟ್, ವಿಡಿಯೋ ಮುಂತಾದ ಯಾವುದೇ ರೂಪದಲ್ಲೂ ಬಳಸುವಂತಿಲ್ಲ’ ಎಂಬ ಬೆದರಿಕೆಯ ಮಾತನ್ನೂ ಕಾಣುವುದು. ಅಂತಿಮದಲ್ಲಿ ಚಿತ್ತಾಲರ ಕವಿತೆಗಳು ಯಾಕಾಗಿ, ಯಾರಿಗಾಗಿ, ಹಾಗೂ ಈ ಬೆದರಿಕೆಯ ಅರ್ಥವೇನು ಎಂದು ಆಶ್ಚರ್ಯವಾಗುತ್ತದೆ!

ಟಿಪ್ತಣಿ: ಜಿ.ಎನ್.ಮೋಹನರದು ಎರಡನೆಯ ಸಂಕಲನ ಎಂದು ತಿಳಿಯಿತು. ಮೊದಲನೆಯ ಪ್ರಕಟಣೆ ‘ಸೋನೆಮಳೆಯ ಸಂಜೆ’ ಅಕ್ಷರ ಪ್ರಕಾಶನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕಾಂತ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys