ಏಕಾಂತವು ಮಳೆಯಂತೆ.
ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು.
ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು,
ಏರುವುದು ತನ್ನ ಹಕ್ಕು ಅನ್ನುವಂತೆ.
ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು.
ಮಬ್ಬು ಕತ್ತಲ ವೇಳೆಯಲ್ಲಿ
ಊರ ಬೀದಿಗಳೆಲ್ಲ ಮುಂಜಾವಿನತ್ತ ತಿರುಗಿರುವಾಗ,
ಬಯಸಿದಾಸೆಗಳೆಲ್ಲ ತೀರಿಹೋಗಿ ಮೈಗಳೆಲ್ಲ
ದುಃಖದಲ್ಲಿ ಒಂಟಿಯಾಗಿರುವಾಗ,
ಒಬ್ಬರನ್ನೊಬ್ಬರು ದ್ವೇಷಿಸುವ ಮನುಷ್ಯರೆಲ್ಲ
ಅದೇ ಹಾಸುಗೆಯಲ್ಲಿ ನಿದ್ದೆಯಲ್ಲಿ ಅವಿತಿರುವಾಗ.
ಏಕಾಂತ ನದಿಯತ್ತ ಹರಿದುಹೋಗುವುದು.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke
















