ಮಗಳಿಗಾಗಿ ಪ್ರಾರ್‍ಥನೆ

ಊಳಿಡುತ್ತಿದೆ ಮತ್ತೆ ಬಿರುಗಾಳಿ. ನನ್ನ ಮಗು
ತೊಟ್ಟಿಲಿನ ಕಟಕಟೆ, ಹೊದಿಕೆಗಳ ಮರೆಗಡಗಿ ನಿದ್ದೆ ಮಾಡುತ್ತಿದೆ. ಅಟ್ಲಾಂಟಿಕಕ್ಕೆ ಹುಟ್ಟಿ ಅಟ್ಟಿ ಹಾಯುವ ಗಾಳಿ
ಹುಲ್ಲು ಛಾವಣಿ ಮೆದೆಯ ಎತ್ತಿ ಹಾರಿಸದಂತೆ
ತಡೆವ ಅಡ್ಡಿಯೆ ಇಲ್ಲ – ಒಂದು ಬೆತ್ತಲೆ ಗುಡ್ಡ
ಗ್ರೆಗರಿ ಕಾಡನ್ನಷ್ಟು ಬಿಟ್ಟು ಮನಸ್ಸಿಗೆ ಏಕೋ
ಅತಿ ವಿಷಣ್ಣತೆ ಕವಿದು ಕಳೆದೊಂದು ತಾಸಿನಿಂದ
ಪ್ರಾರ್‍ಥಿಸುತ್ತಿದ್ದೇನೆ ನಾನು, ಅತ್ತಿಂದಿತ್ತ ತಿರುಗುತ್ತ ಶತಪಥ.

ಪ್ರಾರ್‍ಥಿಸುತ್ತಿದ್ದೇನೆ ತಿರುಗುತ್ತ ಶತಪಥ
ನನ್ನ ಈ ಎಳೆಮಗುವಿಗಾಗಿ; ಕೇಳುತ್ತಿದೆ:
ಕಡಲ ಮೇಲಿನ ಗಾಳಿ ಕೂಗು ಹಾಕುತ್ತಿದೆ ಮೇಲೆ ಗೋಪುರದಲ್ಲಿ,
ಸೇತುವೆ ಕಮಾನುಗಳ ಬುಡದಲ್ಲಿ, ಸೆರೆಗೊಂಡ
ತೊರೆಯ ದಂಡೆಗೆ ಬೆಳೆದ ಎಲ್ಮ್ ವೃಕ್ಷಗಳಲ್ಲಿ.
ಚಂಡಸಾಗರದ ಮಾರಕ ಮುಗ್ಧತೆಗೆ ಹುಟ್ಟಿ,
ಉನ್ಮತ್ತ ನಗಾರಿಬಡಿತಕ್ಕೆ ಕುಣಿಯುತ್ತ,
ಬರಲಿದ್ದ ಕಲ್ಪ ಇದೊ ಬಂದೆ ಬಿಟ್ಟಿತು ಎನಿಸಿ
ಭ್ರಮಿಸುತ್ತಿದ್ದೇನೆ ನಾನು ಉದ್ದೀಪ್ತ ಲಹರಿಯಲ್ಲಿ.

ಚೆಲುವು ಹರಸಲಿ ಅವಳ ಒಂದು ಮಿತಿಯಲ್ಲಿ.
ಆಗಂತುಕನ ಕಣ್ಣ, ಕನ್ನಡಿಯೆದುರು ನಿಂತ ತನ್ನ
ದಿಕ್ಕೆಡಿಸುವಷ್ಟು ಇರದಿರಲಿ, ಅತಿ ಚೆಲುವೆಯರು
ಚೆಲುವೊಂದೆ ಜೀವನದ ಪರಮಾರ್‍ಥ ಎಂದಣಿಸಿ
ಸಹಜಕಾರುಣ್ಯಕ್ಕೆ ಎರವಾಗಿ ಬಾಳುವರು,
ಯೋಗ್ಯವಾದದ್ದನ್ನು ಆರಿಸಿಕೊಳ್ಳಬಲ್ಲ,
ಹೃದಯ ತೆರೆದಿಡಬಲ್ಲ ಆಪ್ತತೆಯ ಕಳಕೊಂಡು
ನಿಜ ಸ್ನೇಹ ಸಿಗದ ಬಾಳುವರು ಕಡೆಗೂ.

ಅಂಥ ಚೆಲುವೆ ಹೆಲೆನ್ ಎಂಥ ನೀರಸ ಮಂಕುಬಾಳ್ವೆ ನಡೆಸಿದ್ದಾಯ್ತು!
ಮುಂದೊಬ್ಬ ಪೆದ್ದನಿಂದಷ್ಟು ತೊಂದರೆ ಬಂತು!
ಕಡಲ ನೊರೆಯಿಂದೆದ್ದ, ತಂದೆ ಇರದಿದ್ದ
ಆ ಸೌಂದರ್‍ಯರಾಣಿ ಏನೆಲ್ಲ ಪಡೆಯುವುದಿತ್ತು!
ಆದರೂ ಅವಳು ಪತಿಯನ್ನಾಗಿ ಆಯ್ದದ್ದು
ಕಿಸುಗಾಲ ಕಮ್ಮಾರನನ್ನ.
ಇಂಥ ಸುಭಗೆಯರು ನಿಸ್ಸಂದೇಹವಾಗಿಯೂ ತಮ್ಮ
ಸಪ್ಪೆಯೂಟಕ್ಕೆ ಮತ್ತೇನೋ ಮಸಾಲೆಯನ್ನ
ಬೆರಸಿ ಉಣ್ಣುವರು, ಹೀಗಾಗಿ ಅಕ್ಷಯಪಾತ್ರ ವ್ಯರ್‍ಥವಾಗುವುದು.

ನಯ ನಡಾವಳಿ ಮುಖ್ಯ ಕಲಿಯಬೇಕಾದ್ದು ಅವಳು;
ಹೃದಯ ದಾನಕ್ಕೆ ಸಿಕ್ಕುವುದಲ್ಲ, ಅತಿ ಚೆಲುವು
ಇಲ್ಲದವರೆಲ್ಲರೂ ಶ್ರಮಿಸಿ ಪಡವಂಥದು.
ಮೈವೆತ್ತ ಚೆಲುವಿಗೇ ಮರುಳಾದವರು ಕೂಡ
ಚೆಲುವಿನಿಂದಾಗಿಯೇ ವಿವೇಕ ಗಳಿಸುವರು.
ಹುಚ್ಚಲೆದು, ಒಲಿದು, ಯಾರಿಗೊ ನಲ್ಲ ತಾನೆಂದು
ಭ್ರಮೆ ತಳೆದು ಕಂಗೆಟ್ಟ ಎಷ್ಟೊ ಬಡಪಾಯಿಗಳು
ಕರೆವ ಅಂತಃಕರಣದಲ್ಲಿ ನೆಲೆನಿಲ್ಲುವರು,

ಮರೆಗೆ ಹಚ್ಚಗೆ ಬೆಳೆದ ಮರವಾಗಿರಲಿ ಅವಳು,
ಮೂಡುವ ವಿಚಾರಗಳು ಹಾಡುಹಕ್ಕಿಯ ಹಾಗೆ
ನಾದದ ಉದಾತ್ತತೆಯನ್ನು ಬೇರೆ ಜಂಜಡವಿರದೆ
ಹಂಚುತ್ತಿರಲಿ ಸುತ್ತ ಎಲ್ಲ ಕಡೆಗೆ.
ಅಟ್ಟಿ ಹೋದರೂ ಅದು ಆಟಕ್ಕಾಗಿರಲಿ,
ಜಗಳವನ್ನೂ ಸಹ ಖುಷಿಗಷ್ಟೆ ಕಾಯಲಿ.
ಹಸಿರಾದ ಅಶೋಕ ಮರದತ ಬಾಳಲಿ ಅವಳು
ಬೇರಿಳಿಸಿ ಒಂದೇ ನಿರಂತರ ಪ್ರಿಯಸ್ಥಳದಲ್ಲಿ.

ಬತ್ತಿ ಹೋಗಿದೆ ನನ್ನ ಚಿತ್ತ ಇತ್ತೀಚೆಗೆ
ನಾನೊಲಿದ ಜೀವಗಳು, ನಾನೂಲಿದ ಸೌಂದರ್‍ಯ
ಮೇಲು ನೆಲೆಗೇರದೆ, ಆದರೂ ಅದಕ್ಕೆ ಗೊತ್ತು
ಉಸಿರು ಕಟ್ಟಿಸುವ ದ್ವೇಷ ಎಲ್ಲಕ್ಕೂ ಮೀರಿದ ಕೇಡು
ಎಂಬ ಸತ್ಯ. ದ್ವೇಷಕ್ಕೆ ನೆಲೆಗೊಡದ ಮನಸ್ಸಿದ್ದ ಪಕ್ಷಕ್ಕೆ
ಯಾವುದೇ ದಾಳಿ ಬಿರುಗಾಳಿ ಹೊಡೆತಗಳೂ
ಹರಿಯಲಾರವು ಹಕ್ಕಿಯನ್ನು ಮರದೆಲೆಯಿಂದ.

ಎಲ್ಲಕ್ಕೂ ಹೀನವಾದದ್ದು ಬೌದ್ಧಿಕ ದ್ವೇಷ,
ಧೋರಣೆಯೆ ಶಾಪ ಎನ್ನುವುದ ಅರಿಯಲಿ ಅವಳು;
ನಾನೆ ಕಂಡಿಲ್ಲವೆ, ಹೆಣ್ಣು ಜೀವಗಳಲ್ಲೆ ಅತಿ ಚೆಲುವೆಯೊಬ್ಬಳು,
ಅಕ್ಷಯ ಪಾತ್ರದಿಂದಲೆ ಮೂಡಿ ಬಂದವಳು
ಮತಭ್ರಾಂತಳಾಗಿ ತನ್ನ ಹಠಕ್ಕೆ ಬಿದ್ದು
ಸಾಧುಜನ ಶುಭವೆಂದು ತಿಳಿದ ಸಮಸ್ತವನ್ನೂ,
ಅಕ್ಷಯ ಪಾತ್ರವನ್ನೂ, ರೋಷಕಾರುವ ಹಳೆಯ
ಗಾಳಿತಿದಿಗಾಗಿ ಮಾರಿಬಿಟ್ಟಿದ್ದನ್ನು?

ಎಲ್ಲ ದ್ವೇಷಗಳನ್ನೂ ಹೀಗೆ ಹೊರಗಟ್ಟಿತೋ
ಮರಳಿ ಪಡೆಯುವುದು ಆತ್ಮ ಮೂಲ ಮುಗ್ಧತೆಯನ್ನು;
ತಾನು ಆತ್ಮಾರಾಮ, ತನಗೆ ತನ್ನಿಂದಲೇ ಆನಂದ ಸಂತೃಪ್ತಿ
ಆತಂಕ ಕೂಡ, ತನ್ನಿಚ್ಛೆಯೆನ್ನುವುದೆಲ್ಲ
ದೈವೇಚ್ಛೆಯೇ ಎಂದು ತಿಳಿಯುವುದು. ಅಂಥವಳು
ಯಾರೆ ಮುಖ ಗಂಟಿಡಲಿ, ಎಷ್ಟೇ ಊಳಲಿ ಗಾಳಿ,
ಎಲ್ಲ ತಿದಿ ಬಿರಿಯಲಿ, ಸುಖಿಯಾಗಿ ಉಳಿಯುವಳು.

ಸಕಲ ವಿಧಿಬದ್ಧ ಸಭ್ಯಾಚಾರ ಸಂಪನ್ನ
ಗೃಹಕ್ಕೆ ಕರೆದೊಯ್ಯಲಿ ಕೈಹಿಡಿದವನು ಅವಳನ್ನು;
ಸೊಕ್ಕು ದ್ವೇಷಗಳು ರಸ್ತೆ ಬದಿಯಲ್ಲಿ
ಮಾರಾಟಕ್ಕಿಟ್ಟಂಥ ಸರಕುಗಳು.
ಹುಟ್ಟಬಲ್ಲವು ಹೇಗೆ ಸೌಂದರ್‍ಯ, ಮುಗ್ಧತೆ
ಶಿಷ್ಟನಡತೆಗೆ ಪರಂಪರೆಗೆ ಎಡೆಯಿಲ್ಲದಲ್ಲಿ?
ಶಿಷ್ಟಾಚಾರವೆಂದರೇ ಸಮೃದ್ಧ ಅಕ್ಷಯ ಪಾತ್ರೆ,
ಹಬ್ಬುವ ಆಲಕ್ಕೆ ಬೇರೆ ಹೆಸರೇ ಪರಂಪರೆ.
*****

ಆನ್ ಬಟ್ಲರ್ ಏಟ್ಸ್ ಕವಿಯ ಮಗಳು ೧೯೧೯ ರಲ್ಲಿ ಹುಟ್ಟಿದವಳು. ಕವನ ಬರೆದ ವರ್‍ಷವೂ ಆದೇ.

ತೊಟ್ಟಿಲ ಬಳಿ ನಿಂತ ತಂದೆ ಮಗುವಿನ ಭವಿಷ್ಯದ ಬಗ್ಗೆ ಕಳಕಳಿಯಿಂದ ಚಿಂತಿಸುತ್ತಿದ್ದಾನೆ. ತನ್ನ ಮಗಳಿಗೆ ಚೆಲುವಿನ ಆಶೀರ್‍ವಾದವಿರಲಿ, ಆದರೆ ಅದು ಒಂದು ಮಿತಿಯಲ್ಲಿರಲಿ ಎನ್ನುತ್ತಾನೆ ಕವಿ. ಚೆಲುವೆಯರಾಗಿದ್ದ ಹೆಲೆನ್ ಮತ್ತು ವೀನಸ್‌ರಿಗೆ ಚೆಲುವೇ ದಾರಿತಪ್ಪಿಸಿತು. ಮಾಡ್‌ಗಾನಳ ವಿಷಯವನ್ನೂ ಕವಿ ಮರೆಯಲ್ಲಿ ಹೇಳುತ್ತಾನೆ. ಎಂಟನೆಯ ಸ್ಟಾಂಜಾದಲ್ಲಿ ಪ್ರಸ್ತಾಪಿತವಾಗುವ ಹೆಣ್ಣು ಮಾಡ್‌ಗಾನಳೇ. ಕಡೆಯ ಸ್ಟಾಂಜಾದಲ್ಲಿ ಕವಿ ಪರಂಪರೆಯನ್ನು ಕುರಿತು ಮಾಡುವ ಹೇಳಿಕೆಗಳು ಗಮನಾರ್‍ಹವಾಗಿವೆ.

(೬) ಏಟ್ಸನಿಗೆ ಆಪ್ತಳಾಗಿದ್ದ ಲೇಡಿ ಗ್ರೆಗರಿಗೆ ಸೇರಿದ ವನ.
(೨೬) ಹೋಮರನ ಇಲಿಯಡ್ ಮಹಾಕಾವ್ಯದ ನಾಯಕಿ, ಹೆಲೆನ್ ಅಪೂರ್‍ವ ಚೆಲುವೆ. ಗಂಡ ಮೆನೆಲಾಸನನ್ನು ಬಿಟ್ಟು ಪ್ಯಾರಿಸ್ ಎಂಬ ರಾಜಕುಮಾರನ ಜೊತೆ ಓಡಿಹೋದಳು. ಅವಳ ಕಾರಣದಿಂದಾಗಿ ಟ್ರೋಜನ್ ಮತ್ತು ಗ್ರೀಕ್ ನಾಗರಿಕತೆಗಳೆರಡೂ ಪರಸ್ಪರ ಘರ್‍ಷಣೆಗೆ ನಿಡು ಅನೇಕ ಅನಾಹುತಗಳಿಗೆ ಕಾರಣವಾಯಿತು.

(೨೮-೨೯) ಸಮುದ್ರದಿಂದ ಎದ್ದು ಬಂದವಳು ವೀನಸ್. ದೇವತೆಗಳ ವಿಶ್ವಕರ್‍ಮನನ್ನು ವರಿಸಿದವಳು.

(೩೩) ಏಟ್ಸ್ ಪ್ರಸ್ತಾಪಿಸುವ ‘ಹಾರನ್ ಆಫ್ ಪ್ಲೆಂಟಿ’ಯನ್ನು ಅಕ್ಷಯಪಾತ್ರೆ ಎಂದು ಅನುವಾದಿಸಲಾಗಿದೆ.

ಮೂಲ: ವಿಲಿಯಂ ಬಟ್ಲರ್ ಏಟ್ಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೩
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೮

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys