ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ
ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ;
ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ
ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ.
ಕಡಿದಾದ ಮೇರುಗಿರಿ ನೆತ್ತಿಯನ್ನೇರಿ ರವಿ
ನಡುವಯಸ್ಸಿನ ಕ್ಷಾತ್ರದಲ್ಲಿ ಝಗಝಗಿಸಿರುವ,
ಮರ್ತ್ಯ ದೃಷ್ಟಿಗಳು ಆ ಸ್ವರ್ಣಯಾತ್ರೆಯ ನೋಡಿ
ಆರಾಧಿಸುತ್ತಿವೆ ಅವನ ಆ ಸಿರಿ ಚೆಲುವ.
ಆದರೂ ತುತ್ತತುದಿಗೇರಿ ಬಳಲಿದ ಭಾನು
ಮುಪ್ಪೇರಿ ರಥಸಹಿತ ಹಗಲಿನಿಂದುರುಳುವನು;
ಹಿಂದೆ ಆರಾಧಿಸಿದ ನೋಟಗಳೆ ಈಗವನು
ಕೆಳನೆಲೆಗೆ ಜಾರಿರಲು ಬೇರೆಡೆಗೆ ಹೊರಳುವುವು.
ನಿನ್ನ ನಡುಹಗಲ ನೀನೂ ಹಾಗೆ ಮೀರದಿರು
ಮಗನಿರದೆ ಮುಗಿವವಗೆ ಲೋಕ ಗೌರವ ಕೊಡದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 7
Lo in the Orient when the gracious light
















