ಚಿತ್ರ: ಪಿಕ್ಸಾಬೇ

ಪಟ್ಟಣದ ರಾಜರಸ್ತೆಗೆ ತಾಗಿದ ಸಮತಟ್ಟಾದ ಆ ಸ್ಥಳದ ಮೂಲೆಯಲ್ಲಿ ನಿಂತುಕೊಂಡು ಆ ಕಪ್ಪು ಹುಡುಗ ರಸ್ತೆಯನ್ನು ದಿಟ್ಟಿಸುತ್ತಿದ್ದ. ಅವನ ಕಣ್ಣೆಲ್ಲಾ ಸಾಮಿಲ್ಲಿನಿಂದ ಖರೀದಿಸಿ ತಲೆಹೂರೆಯಾಗಿ ರೀಪು ಕಟ್ಟಿಗೆಗಳನ್ನು ಒಯ್ಯುತ್ತಿರುವ ಆ ಹೆಂಗಸಿನ ಮೇಲೆಯೇ ಇತ್ತು. ಕಟ್ಟಿಗೆಗೆ ಸುತ್ತಿದ ಒಂದು ಬದಿಯ ಹಗ್ಗ ಸಡಿಲವಾದುದರಿಂದ ಒಂದು ರೀಪು ಡಾಮರು ನೆಲಕ್ಕೆ ಅನತಿ ದೂರದಲ್ಲಿ ಬಿತ್ತು. ಹುಡುಗ ಒಂದೇ ಉಸಿರಿಗೆ ಓಡಿಹೋಗಿ ಆ ರೀಪಿನ ತುಂಡನ್ನು ಹೆಕ್ಕಿ ತಂದ. ಅದು ಸುಮಾರು ಮೂರು- ಮೂರುವರೆ ಅಡಿ ಉದ್ದದ ಮತ್ತು ಸುಮಾರು ೩ ಇಂಚು ಅಗಲದ ರೀಪು ತುಂಡು. ಹುಡುಗ ರೀಪು ತುಂಡು ಕೈಯಲ್ಲಿ ಹಿಡಿದುಕೊಂಡು ಪಕ್ಕದ ಟೆಂಟಿನತ್ತ ಸಾಗಿದ.

ಎರಡು ಮರದ ಕಂಬಗಳನ್ನು ೧೦ ಅಡಿ ಅಂತರಕ್ಕೆ ಹೂತು ಅದಕ್ಕೆ ಹಸಿರು ಬಣ್ಣದ ಪ್ಲಾಸ್ಟಿಕನ್ನು ಇಳಿ ಬಿಟ್ಟು ಮುರುಕಲು ಟೆಂಟಿನ ಒಳಗೆ ಒಬ್ಬಳು ಮುದುಕಿ ಮಲಗಿದ್ದು ಹುಡುಗ ಅವಳ ತಲೆಯ ಹತ್ತಿರವಿದ್ದ ಕತ್ತಿಯನ್ನು ಎತ್ತಿ ಕೊಂಡು ಸಮತಟ್ಟಾದ ಆ ಸ್ಥಳದ ಮೂಲೆಗೆ ಬಂದ. ಅವನಿಗೆ ಆ ರೀಪಿನ ತುಂಡಿಗೆ ರೂಪು ಕೊಡುವ ತವಕ. ತನ್ನ ಯೋಚನೆಯಂತೆ ಕೆಲವು ಕಡೆ ಕೆತ್ತಿದ. ಕೊನೆಗೆ ಆದಕ್ಕೊಂದು ಬ್ಯಾಟಿನ ರೂಪ ಕೊಟ್ಟ. ಅವನ ಮುಖದಲ್ಲಿ ಮಂದಹಾಸ ಮೂಡಿತು. ಬಹುದಿನದ ಅವನ ಕನಸು ಇವತ್ತು ಸಾಕಾರಗೊಂಡಿವೆ. ಬ್ಯಾಟನ್ನು ತನ್ನ ಎರಡೂ ಕೈಗಳಲ್ಲಿ ಹಿಡಿದುಕೊಂಡು ಒಮ್ಮೆ ಗಾಳಿಯಲ್ಲಿ ಬೀಸಿದ. ಎಡಕ್ಕೆ, ಬಲಕ್ಕೆ ನೇರ ಹಾಗೂ ತಿರುಗಿಕೊಂಡು ಬ್ಯಾಟನ್ನು ಬೀಸಿದ. ಅವನಿಗೆ ಬಹಳ ಸಂತೋಷವಾಯಿತು. ಅವನ ಕಲ್ಪನೆಯ ಬ್ಯಾಟು ಸಾಕಾರಗೊಂಡಿತು. ಹುಡುಗ ಓಡುತ್ತಾ ಪುನಃ ಟೆಂಟನ ಒಳಗೆ ಹೊಕ್ಕಿದ. ಹರಿದ ಬೆತ್ತದ ಬುಟ್ಟಿಗೆ ಕೈಹಾಕಿ ಅದರೊಳಗೆ ಜೋಪಾನವಾಗಿಟ್ಟ ಸಣ್ಣ ಬಾಲನ್ನು ತೆಗೆದ. ಅದನ್ನು ತನ್ನ ಕೈಯಿಂದ ನಯವಾಗಿ ಸವರಿದ. ಅದು ಮುದುಕಿಯೊಂದಿಗೆ ಕಾಡಿ ಬೇಡಿ ಖರೀದಿಸಿದ ಮಕ್ಕಳ ಆಟದ ಚೆಂಡು. ಮತ್ತೆ ಟೆಂಟಿನಿಂದ ಹೊರಕ್ಕೆ ಬಂದು ನೆಲಕ್ಕೆ ಬಾಲನ್ನು ಹೊಡೆಯುತ್ತಾ ಕ್ಯಾಚ್ ಹಿಡಿಯುತ್ತಾ ಆಟವಾಡುತ್ತಿದ್ದ. ಅದೊಂದು ಸಮತಟ್ಟಾದ ಸುಮಾರು ೩ ಸೆಂಟ್ಸ್ ವಿಸ್ತೀರ್ಣದ ನೆಲ. ರಸ್ತೆಗೆ ತಾಗಿ ಇದ್ದ ಆ ಸ್ಥಳದ ಒಂದು ಬದಿಯಲ್ಲಿ ಒಂದು ಅಂಗನವಾಡಿ ಕಟ್ಟಡ ಇದ್ದು ಅದು ಯಾವಾಗಲೂ ಮುಚ್ಚಿಕೊಂಡಿರುತ್ತಿತ್ತು. ರಾತ್ರಿ ಹೊತ್ತು ಮಾತ್ರ ಅದು ಭಿಕ್ಷುಕರ, ಕುಡುಕರ ಹಾಗೂ ವ್ಯಭಿಚಾರಿಗಳ ಆಶ್ರಯ ತಾಣವಾಗುತಿತ್ತು . ಮಳೆಗಾಲ ಹೊರತುಪಡಿಸಿದರೆ ಬಾಕಿ ಕಾಲದಲ್ಲಿ ಈ ಮೂರು ಸೆಂಟ್ಸ್ ಸ್ಥಳದಲ್ಲಿ ಒಂದಲ್ಲ ಒಂದು ಕುಟುಂಬಗಳು ತಾತ್ಕಾಲಿಕ ಡೇರೆ ಹಾಕಿಕೊಂಡು ವಾಸಿಸುತ್ತಿದ್ದುವು. ಕೆಲವೊಮ್ಮ ಹಕ್ಕಿ ಪಿಕ್ಕಿ ಜನಾಂಗಗಳು, ಕೊರವಂಜಿಗಳು, ಜಾತಕ ಹೇಳುವ ಜೋಗಿಗಳು, ಆದಿವಾಸಿಗಳು, ಭಿಕ್ಷುಕರು ಎಲ್ಲಿಂದಲೋ ಬಂದು ಕೆಲವು ತಿಂಗಳು ನೆಲೆನಿಂತು ಎಲ್ಲಿಗೋ ಹೊರಟು ಹೋಗುತಿದ್ದರು. ಇವರು ಎಲ್ಲಿಂದ ಬರುತ್ತಾರೆ ಮತ್ತು ಎಲ್ಲಿಗೆ ಹೋಗುತ್ತಾರೆ ಎಂದು ಯಾರಿಗೂ ತಿಳಿಯದು. ಯಾರಿಲ್ಲದಿದ್ದರೆ ಕೊನೆಯ ಪಕ್ಷ ಭಿಕ್ಷುಕರು, ಕುಷ್ಟರೋಗಿಗಳು ತಮ್ಮ ಹರಕು ಮುರುಕು ಚಾಪೆಗಳನ್ನು ಹಾಸಿಕೊಂಡು ಆ ಮರದ ಕೆಳಗೆ ಬಿದ್ದಿರುತಿದ್ದರು. ಕೆಲವೂಮ್ಮೆ ಸಣ್ಣ ರೇಡಿಯೋದಿಂದ ಹಾಡುಗಳು ಕೇಳಿ ಬರುತಿದ್ದುವು. ಆ ಜಾಗೆಯ ಇನ್ನೊಂದು ಮೂಲೆಯಲ್ಲಿ ಮೂರು ತುಂಡು ಕೆಂಪು ಕಲ್ಲಿನಿಂದ ಒಲೆ ನಿರ್ಮಿಸಿದ್ದು ಇದು ಸದಾ ಕಾಲ ಇರುತಿದ್ದು ಯಾರು ಬಂದರೂ ಇದನ್ನು ಉಪಯೋಗಿಸಬಹುದು. ಈ ಜಾಗದಲ್ಲಿ ಮಳೆಗಾಲ ಹೊರತು ಪಡಿಸಿದರೆ ಬಾಕಿ ದಿನಗಳಲ್ಲಿ ಆಗಾಗ್ಗೆ ಹೊಗೆ ಹೋಗುತಿದ್ದು ಅಡುಗೆ ತಯಾರಾಗುತಿದ್ದುವು. ಇಲ್ಲಿ ಏನು ಬೇಯಿಸುತ್ತಾರೆ ಎಂದು ಯಾರು ತಲೆಕೆಡಿಸಿಕೊಂಡಿಲ್ಲ.

ಟೆಂಟಿನ ಒಳಗೆ ಮಲಗಿದ್ದ ಮುದುಕಿ ಎದ್ದು ಬಂದು ಆ ಒಲೆಯ ಕಡೆ ನಡೆದಳು. ಒಲೆಯ ಮೇಲೆ ಪಾತ್ರೆ ಇಟ್ಟು, ಏನೋ ಬೇಯಿಸತೊಡಗಿದಳು. ದಟ್ಟವಾದ ಹೊಗೆ ಆ ಪ್ರದೇಶವನ್ನು ಆವರಿಸಿತು. ಅದರೊಂದಿಗೆ ಏನೋ ಬೇಯುವ ವಾಸನೆ! ಆ ಹುಡುಗ ಇವಾವುದರ ಪರಿವಯಿಲ್ಲದೆ ತನ್ನ ಬಾಲಿನೊಂದಿಗೆ ಆಟವಾಡುತಿದ್ದ. ಆ ಸಮತಟ್ಟಾದ ಪ್ರದೇಶದ ಎದುರಿಗೆ ಸುಮಾರು ಐದು ಅಡಿ ಎತ್ತರದ ವಿಶಾಲವಾದ ಕಲ್ಲಿನ ಕಾಂಪೌಂಡು ಇತ್ತು. ಹುಡುಗ ಕಂಪೌಂಡಿನ ಎದುರು ನಿಂತುಕೊಂಡು ಬಾಲನ್ನು ಕಂಪೌಂಡು ಗೋಡೆಗೆ ಬೀಸಿ ಹೊಡೆಯುತ್ತಿದ್ದ. ಅಷ್ಟೇ ಭರದಿಂದ ಹಿಂದೆ ಬರುವ ಬಾಲನ್ನು ಒಂದು ಕೈಯಲ್ಲಿ ಬೇರೆ ಬೇರೆ ಭಂಗಿಯಲ್ಲಿ ಹಿಡಿಯಲು ಪ್ರಯತ್ನಿಸುತಿದ್ದ. ಸ್ವಲ್ಪ ಹೊತ್ತಿನ ನಂತರ ತನ್ನ ಬ್ಯಾಟನ್ನ ಕೈಗೆತ್ತಿಕೊಂಡು ಬಾಲನ್ನು ಎಡಕೈಯಿಂದ ಮೇಲೆ ಬಿಸಾಡಿ ಬ್ಯಾಟಿನಿಂದ ಬಲವಾಗಿ ಗೋಡೆ ಕಡೆಗೆ ಹೊಡೆಯುತಿದ್ದ. ಒಂದು ಸಲವೂ ಅವನ ಗುರಿ ತಪ್ಪುತ್ತಿರಲಿಲ್ಲ. ಹೊಡೆತ ಬಲವಾದಷ್ಟು ಅವನಿಗೆ ಖುಷಿಯಾಗುತಿತ್ತು . ಆಟ ಆಡಿ ಸುಸ್ತಾದ ಹುಡುಗ ಬ್ಯಾಟ್ ಮತ್ತು ಬಾಲನ್ನು ತಗೆದುಕೊಂಡು ತನ್ನ ಟೆಂಟಿನ ಒಳಗೆ ಜೋಪಾನವಾಗಿಟ್ಟು ಹೊರಗೆ ಬಂದ.

ಹುಡುಗನ ದೃಷ್ಟಿ ರಸ್ತೆಯಲ್ಲಿ ನೆಟ್ಟಿತು. ಅಗಾಗ್ಗೆ ಅವನು ರಸ್ತೆಯನ್ನು ದೃಷ್ಟಿಸುತಿದ್ದ. ಸ್ವಲ್ಪ ಹೊತ್ತಿನಲ್ಲಿ ಅವನ ಮುಖದಲ್ಲಿ ಮಂದಹಾಸ ಮೂಡಿತು. ಹೌದು. ಅವನ ಮನಸ್ಸಿನ ಲೆಕ್ಕಾಚಾರದಂತೆ ಮಕ್ಕಳು ಶಾಲೆ ಮುಗಿಸಿ ಮನೆಯ ಕಡೆಗೆ ರಸ್ತೆಯಲ್ಲಿ ನಡೆದು ಹೋಗತೊಡಗಿದರು. ಹುಡುಗ ಅವರೆಲ್ಲರನ್ನು ಬಹಳ ಸನಿಹದಿಂದ ನಿಂತು ನೋಡುತಿದ್ದ. ಹೆಚ್ಚಿನ ಹುಡುಗರು ಅವನು ದಿನಾಲು ನೋಡುವ ಪರಿಚಿತರಾಗಿದ್ದರೂ ಅವರಾರೂ ಇವನ ಬಗ್ಗೆ ಗಮನಹರಿಸುತ್ತಿರಲಿಲ್ಲ. ಮಕ್ಕಳ ರಸ್ತೆಯ ಪೆರೇಡ್ ಮುಗಿದ ಕೂಡಲೇ ಹುಡುಗ ಚುರುಕಾದ. ತನ್ನ ಹರಿದ ಚಡ್ಡಿಯನ್ನು ಮೇಲಕ್ಕೆ ಎಳೆದುಕೊಂಡ. ಬಲಗೈಯಲ್ಲಿ ಸೊಂಟದ ದಾರವನ್ನು ಹಿಡಿದು, ನೂಲನ್ನು ಸೊಂಟಕ್ಕೆ ಬಲವಾಗಿ ಎಳೆದು ಗಟ್ಟಿ ಮಾಡಿಕೊಂಡ. ಅವನ ಚಡ್ಡಿಯ ಹಿಂಬದಿಯಲ್ಲಿ ದೊಡ್ದ ತೂತು ಬಿದ್ದಿದ್ದು ಅವನಿಗೆ ಅದೊಂದು ಸಮಸ್ಯೆಯಾಗುತಿತ್ತು . ಒಮ್ಮೆ ಎಡಗೈಯನ್ನು ಹಿಂದಕ್ಕೆ ಕೊಂಡು ಹೋಗಿ ಪಿರ್ರೆಗಳನ್ನು ಚಡ್ಡಿಯ ಮೇಲಿಂದ ಮುಟ್ಟಿ ನೋಡಿದ. ಚರ್ಮದ ಸ್ಪರ್ಶ ಆಗದಂತೆ ಚಡ್ಡಿಯ ತೂತು ಮರೆಯಾಗಿದ್ದು ಅವನಿಗೆ ಸ್ವಲ್ಪ ಸಮಾಧಾನವಾಯಿತು. ಅಲ್ಲಿಂದ ಚಂಗನೆ ಓಡಿಕೊಂಡು ಎದುರಿನ ಕಂಪೌಂಡು ಹತ್ತಿ ಅದರ ಮೇಲೆ ಕುಳಿತುಕೊಂಡ. ತಂಪಾದ ತಂಗಾಳಿ ಅವನ ಬೆತ್ತೆಲೆ ಮೈಗೆ ಹಿತ ನೀಡುತಿತ್ತು. ಹುಡುಗ ಕಂಪೌಂಡಿನ ಮೇಲೆ ಕುಳಿತು ಇಡೀ ಸ್ಥಳವನ್ನು ವೀಕ್ಷಿಸಿದ. ಅದೊಂದು ದೊಡ್ಡ ಸರಕಾರಿ ಮೈದಾನ. ವಾರದ ಎಲ್ಲಾ ದಿನಗಳಲ್ಲೂ ಅಲ್ಲಿ ವಿವಿಧ ರೀತಿಯ ಕ್ರೀಡೆಗಳು ನಡೆಯುತಿದ್ದುವು. ಮೈದಾನದ ಕೆಳಗಿನ ಅರ್ಧಭಾಗದಲ್ಲಿ ಪುಟ್‌ಬಾಲ್ ಪಂದ್ಯಾಟ ನಡೆಯುತಿತ್ತು. ಬಣ್ಣ ಬಣ್ಣದ ಧ್ವಜಗಳನ್ನು ಕಂಬಗಳಿಗೆ ಸಾಲಾಗಿ ಕಟ್ಟಿದ್ದರು. ಅವುಗಳು ಗಾಳಿಗೆ ಹಾರಾಡುತಿದ್ದು ಅದನ್ನು ನೋಡುವುದೇ ಅವನಿಗೆ ಸಂತೋಷ. ಹೆಚ್ಚಿನ ಜನರು ಪುಟ್ಬಾಲ್ ಪಂದ್ಯಾಟವನ್ನು ನೋಡಲು ಮೈದಾನದ ಸುತ್ತಲೂ ನೆರೆದಿದ್ದರು. ಆಟಗಾರರು ವಿವಿಧ ಬಣ್ಣ ಬಣ್ಣದ ಟೀ ಶರ್ಟ್‌, ಚಡ್ಡಿ ಧರಿಸಿದ್ದು ಕಾಲುಗಳಿಗೆ ಕಲರ್ ಸಾಕ್ಸ್‌ಗಳನ್ನು ಎಳೆದುಕೊಂಡು ಆಟದ ವಿವಿಧ ಬಣ್ಣದ ಶೂಗಳನ್ನು ಹಾಕಿಕೊಂಡಿದ್ದರು. ಮೈದಾನದ ಮೇಲಿನ ಇನ್ನರ್ಧ ಭಾಗದಲ್ಲಿ ಅಲ್ಲಲ್ಲಿ ಹುಡುಗರು, ಯುವಕರು ಬೇರೆ ಬೇರೆ ಟೀಂ ಮಾಡಿಕೊಂಡು ಕ್ರಿಕೆಟ್ ಆಡುತಿದ್ದರು. ಇದಾವುದರ ಪರಿವೆಯಿಲ್ಲದೆ ಆ ಹುಡುಗ ಶಾಲಾ ಮಕ್ಕಳ ಬರವನ್ನೇ ಕಾಯುತಿದ್ದನು. ಅವನ ನಿರೀಕ್ಷೆಯಂತೆ ಕೆಲವೇ ಕ್ಷಣಗಳಲ್ಲಿ ಹುಡುಗರು ಬರತೊಡಗಿದರು. ಹುಡುಗನ ಮುಖ ಅರಳತೊಡಗಿತು. ಸುಮಾರು ಇಪ್ಪತ್ತು ಹುಡುಗರು ಬ್ಯಾಟ್ ಬಾಲ್ ವಿಕೆಟ್ ಹಿಡಿದುಕೊಂಡು ಆ ಹುಡುಗ ಕುಳಿತ ಮೈದಾನದ ಒಂದು ಮೂಲೆಗೆ ಬಂದರು. ಹೆಚ್ಚಿನ ಹುಡುಗರನ್ನು ಅವನು ಹಲವು ತಿಲಗಳಿಂದ ನೋಡುತಿದ್ದ. ಪ್ರತಿಯೊಬ್ಬರ ಚಲನ ವಲನ ಮತ್ತು ಮಾತುಗಳನ್ನು ಆ ಕಂಪೌಂಡಿನ ಮೇಲೆ ಕುಳಿತುಕೊಂಡು ಗಮನಿಸುತಿದ್ದ. ಹುಡುಗರು ಗರಿ ಗರಿಯ ಕಲರ್ ಟೀ ಶರ್ಟ್‌, ಚಡ್ಡಿ ಧರಿಸಿದ್ದರು. ಬೆಲೆಬಾಳುವ ಕಲರ್ ಶೂಗಳು, ಸಾಕ್ಸ್‌ಗಳು ಅವನನ್ನು ಮರುಳು ಮಾಡಿದ್ದುವು. ಅವರ ತಮಾಷೆ, ಜೋಕ್ಸ್ ಅವನಿಗೆ ಅರ್ಥವಾಗದಿದ್ದರೂ ಏನೋ ಒಂದು ತರಹದ ಮುದ ನೀಡುತಿತ್ತು. ಹುಡುಗರು ಎರಡು ಪಂಗಡಗಳಾಗಿ ಹಂಚಿ ಹೋದರು. ಕೆಲವರು ಫೀಲ್ಡಿಂಗಿಗಾಗಿ ಮೈದಾನಿನ ವಿವಿಧ ದಿಕ್ಕಿನಲ್ಲಿ ನಿಂತುಕೊಂಡರು. ಇನ್ನು ಕೆಲವರು ದೂರದಲ್ಲಿ ಕುಳಿತುಕೊಂಡು ತಾವು ತಂದಂತಹ ತಿಂಡಿ ತಿನಿಸುಗಳನ್ನು ಹಂಚಿಕೊಂಡು ತಿನ್ನುತಿದ್ದರು. ಹುಡುಗನ ಒಂದು ಕಣ್ಣು ಅವರ ಆಟದ ಮೇಲೆ ನೆಟ್ಟಿದ್ದರೆ ಇನ್ನೊಂದು ಕಣ್ಣು ಅವರು ತಿನ್ನುವ ತಿಂಡಿ ತಿನಿಸುಗಳ ಮೇಲೆ ಇತ್ತು. ಕೆಲವು ಹುಡುಗರು ಬ್ಯಾಟಿಂಗ್ ಮಾಡುವಾಗ ಬಾಲನ್ನು ಸರಿಯಾಗಿ ಅಂದಾಜಿಸದೆ ಔಟ್ ಆಗುವಾಗ ಅವನಿಗೆ ನಗು ಬರುತಿತ್ತು. ಒಂದು ಹೆಜ್ಜೆ ಮುನುಗ್ಗಿ ಬಾರಿಸುತಿದ್ದರೆ ಬಾಲ್ ಸರಿಯಾಗಿ ಬ್ಯಾಟಿಗೆ ಸಿಗುತಿತ್ತು ಎಂದು ಅವನು ಲೆಕ್ಕ ಹಾಕುತಿದ್ದನು. ಪ್ರತೀ ಸಾರಿ ಹುಡುಗರು ತಪ್ಪು ಬ್ಯಾಟಿಂಗ್ ಮಾಡಿದಾಗ ಅವನು ಛೆ! ಛೆ! ಅನ್ನುತಿದ್ದ. ತನ್ನ ಕೈಯಿಂದ ಅಂಗೈಯನ್ನು ತಿಕ್ಕಿಕೊಳ್ಳುತಿದ್ದ. ಕೆಲವು ಹುಡುಗರು ಯದ್ವಾ ತದ್ವ ಬೌಲಿಂಗ್ ಮಾಡಿದಾಗ ಅವನಿಗೆ ನಿರಾಶೆಯಾಗುತಿತ್ತು. ಆ ನಿರಾಶೆಯಲ್ಲಿ ತನ್ನ ಕೈ ಬೆರಳ ಉಗುರನ್ನು ಕಚ್ಚಿಕೊಳ್ಳುತಿದ್ದ. ಏನಿದ್ದರೂ ಅವನದ್ದು ಏಕಪಾತ್ರಾಭಿನಯ. ಅವನ ಮನಸ್ಸಿನ ತುಮುಲ ಯಾರಿಗೂ ಅರ್ಥವಾಗದು. ಆಡುತ್ತಿರುವ ಶಾಲಾ ಹುಡುಗರ ಬಾಲ್, ಬ್ಯಾಟ್, ವಿಕೆಟನ್ನು ಒಮ್ಮೆ ಕೈಯಿಂದ ಮುಟ್ಟಬೇಕು ಎಂದು ಅವನಿಗೆ ಆಗಾಗ್ಗೆ ಎಣಿಸುತಿತ್ತು. ಅವರ ಶರ್ಟ, ಚಡ್ಡಿ, ಶೂಗಳನ್ನು ಬಹಳ ಸಮೀಪದಿಂದ ನೋಡಲು ತವಕ ಪಡುತಿದ್ದ. ಆದರೆ ಅವರು ಆಡುವ ಸಮಯದಲ್ಲಿ ಗೋಡೆಯ ಮೇಲಿಂದ ಅವರ ಬಳಿ ಹೋಗಲು ಹೆದರಿಕೆಯಾಗುತಿತ್ತು.

ಕತ್ತಲು ಆವರಿಸುತಿದ್ದಂತೆ ಹುಡುಗರು ತಮ್ಮ ಆಟದ ಸಾಮಗ್ರಿಗಳನ್ನು ಹೊತ್ತುಕೊಂಡು ತಮ್ಮ ತಮ್ಮ ಮನೆಗೆ ಹೋಗುತಿದ್ದರು. ಹುಡುಗ ಅವರು ಹೋಗುವುದನ್ನೇ ಬಹಳ ನಿರಾಶೆಯಿಂದ ನೋಡುತಿದ್ದ. ಮತ್ತೆ ಗೋಡೆಯ ಮೇಲಿಂದ ಮೈದಾನಕ್ಕೆ ಧುಮುಕಿ ಹುಡುಗರು ಕುಳಿತಿದ್ದ ಸ್ಥಳದತ್ತ ಹೋಗುತಿದ್ದ. ಅವರು ತಿಂದು ಬಿಸಾಡಿದ ಬಿಸ್ಕಿಟಿನ ಖಾಲಿ ಪೊಟ್ಟಣಗಳನ್ನು ಹೆಕ್ಕಿ ಹಿಂದೆ ಮುಂದೆ ತಿರುಗಿಸುತಿದ್ದ. ಅವನಿಗೆ ಓದಲು ಬಾರದು. ಆದರೂ ಆ ಖಾಲಿ ಪೊಟ್ಟಣಗಳ ಮೇಲಿನ ಚಿತ್ರಗಳನ್ನು ನೋಡುತಿದ್ದ. ಒಮ್ಮೊಮ್ಮೆ ಖಾಲಿ ಪೊಟ್ಟಣಗಳ ಒಳಗೆ ಹುಡಿಯಾದ ತುಂಡು ಬಿಸ್ಕಿಟುಗಳು ಸಿಗುತಿತ್ತು. ಆ ತುಂಡು ಬಿಸ್ಕಿಟುಗಳನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸಿ ಖುಷಿ ಪಡುತಿದ್ದ. ರಜಾದಿನಗಳಲ್ಲಿ ಹುಡುಗರು ಐಸ್‌ಕ್ರೀಂಗಾಗಿ ಪಂದ್ಯ ಕಟ್ಟುತಿದ್ದರು. ಆಗ ಅವನಿಗೆ ಶಾಲಾ ಹುಡುಗರು ಅರ್ಧರ್ಧ ತಿಂದು ಬಿಸಾಡಿದ ಐಸ್‌ಕ್ರೀಂ ಪೊಟ್ಟಣ ಸಿಗುತಿತ್ತು. ಅವುಗಳನ್ನು ಎತ್ತಿ ಕೊಂಡು ತನ್ನ ಕಿರುಬೆರಳಿನಿಂದ ಅಳಿದುಳಿದ ಐಸ್‌ಕ್ರೀಂನ್ನು ಸವರಿಕೊಂಡು ನಾಲಗೆಗೆ ತಾಗಿಸುತಿದ್ದ. ಆಗ ಅವನಿಗೆ ತುಂಬಾ ಸಂತೋಷವಾಗುತಿತ್ತು. ನಂತರ ಹುಡುಗ ಏನೋ ಹಾಡು ಗುಣುಗುಟ್ಟುತ್ತಾ ಆ ಕಂಪೌಂಡು ಹತ್ತಿ ಹಿಂಬದಿಗೆ ಇಳಿದು ತನ್ನ ಡೇರೆಯಲ್ಲಿ ಸೇರಿಕೊಳ್ಳುತಿದ್ದ. ಇದು ಈ ಕಪ್ಪು ಹುಡುಗನ ದೈನಂದಿನ ಕಾರ್ಯಕ್ರಮವಾಗಿತ್ತು. ಕೆಲವು ವಾರಗಳಿಂದ ಒಂದು ದಿನವೂ ತಪ್ಪಿಸದೆ ಅವನು ಕ್ರಿಕೆಟ್ ಆಟವನ್ನು ನೋಡುತಿದ್ದ. ಭಾನುವಾರ ಬಂದರಂತೂ ಹುಡುಗನಿಗೆ ತುಂಬಾ ಖುಷಿ. ಆ ದಿವಸ ಬೇರೆ ಟೀಮಿನವರೊಂದಿಗೆ “ಮ್ಯಾಚ್” ನಡೆಯುತಿದ್ದು ಸೋತ ಟೀಮನವರು ಗೆದ್ದ ಟೀಮಿನವರಿಗೆ ಐಸ್‌ಕ್ರೀಂ ಕೊಡಿಸಬೇಕು. ಯಾರು ಸೋತರೂ ಯಾರು ಗೆದ್ದರೂ ಆ ಹುಡುಗನಿಗೆ ಮಾತ್ರ ಶಾಲಾ ಮಕ್ಕಳು ಬಿಸಾಡಿದ ಐಸ್‌ಕ್ರೀಂ ತೊಟ್ಟೆಯೊಳಗಿನ ತುಣುಕು ಐಸ್‌ಕ್ರೀಂ ದೂರೆಯುತಿತ್ತು.

ಎಂದಿನಂತೆ ಅಂದು ಕೂಡಾ ಆ ಅರೆಬತ್ತಲೆ ಕಪ್ಪು ಹುಡುಗ ಕಂಪೌಂಡಿನ ಮೇಲೆ ಕುಳಿತು ಮಕ್ಕಳ ಕ್ರಿಕೆಟ್ ಆಟವನ್ನು ವೀಕ್ಷಿಸುತಿದ್ದ. ಸ್ವಲ್ಪ ಹೊತ್ತಿನಲ್ಲಿ ಶಾಲಾ ಹುಡಗನೊಬ್ಬ ಹೊಡೆದ ಬಾಲ್ “ಸಿಕ್ಸರ್” ಆಗಿ ಅವನತ್ತ ಧಾವಿಸಿ ಬಂತು. ಇನ್ನೇನು! ಅವನು ತಲೆಯ ಮೇಲಿಂದ ಪಾಸಾಗಿ ಕಂಪೌಂಡಿನ ಹೊರಗೆ ಬೀಳುತಿತ್ತು. ಹುಡುಗ ಚಂಗನೆ ತನ್ನ ಬಲಗೈಯನ್ನು ಮೇಲೆತ್ತಿ ಸ್ವಲ್ಪ ಮೇಲಕ್ಕೆ ಜಿಗಿದು ಆ ಬಾಲನ್ನು ಒಂದೇ ಕೈಯಲ್ಲಿ ಹಿಡಿದುಬಿಟ್ವ. ಬಾಲನ್ನು ಹಿಡಿದ ರಭಸಕ್ಕೆ ಹುಡುಗ ಆಯತಪ್ಪಿ ಮೈದಾನದ ಒಳಗೆ ಬಿದ್ದ. ಆದರೂ ಅವನ ಬಲಗೈ ಮೇಲಿತ್ತು, ಮತ್ತು ಬಾಲನ್ನು ಮುಷ್ಟಿಯೊಳಗೆ ಹಿಡಿದುಕೊಂಡಿದ್ದ. ನೆಲದಿಂದ ಚಂಗನೆ ಎದ್ದ ರಭಸಕ್ಕೆ ಅವನ ಹರಿದ ಚಡ್ಡಿ, ಸೊಂಟದ ಕಪ್ಪು ದಾರ ಬಿಟ್ಟು ನೆಲಕ್ಕೆ ಬಿತ್ತು. ಅಲ್ಲಿಗೆ ಒಡಿ ಬಂದ ಹುಡುಗರು ಆ ಹುಡುಗನ ಸಾಹಸಕ್ಕೆ ಬೆರಗಾದರು. ಅವನ ದಿಗಂಬರ ರೂಪ ನೋಡಿ ನಕ್ಕುಬಿಟ್ಟರು. ಹುಡುಗ ಸಾವರಿಸಿಕೊಂಡು ತಕ್ಷಣ ಬಗ್ಗಿ ತನ್ನ ಚಡ್ಡಿಯನ್ನು ಮೇಲೆಳೆದುಕೊಂಡು ಬಾಲನ್ನು ಅವರ ಎದುರು ನೆಲದಲ್ಲಿ ಇಟ್ಟು ಹೆದರುತ್ತಾ ದೂರ ನಡೆದ. ಹುಡುಗರಿಗೆ ಆಶ್ಚರ್ಯವಾಯಿತು. ಆ ಐದು ಅಡಿ ಎತ್ತರದ ಕಂಪೌಂಡಿನಿಂದ ಜಿಗಿದು ಒಂದು ಕೈಯಲ್ಲಿ ಬಾಗಿ ಹಿಡಿದ ಕ್ಯಾಚ್ ಮತ್ತು ಧೈರ್ಯ ನೋಡಿ ಅವಕ್ಕಾದರು. ಅವನ ಕಪ್ಪು ಬಣ ಹರಿದ ತುಂಡು ಚಡ್ಡಿ, ಭಯ ಮಿಶ್ರಿತ ಮುಖ ನೋಡಿ ಹುಡುಗರಿಗೆ ಮರುಕವಾಯಿತು.

“ಪೆಟ್ಬಾಯಿತೇನೊ?” ಒಬ್ಬ ವಿಚಾರಿಸಿದ.
“…..”
“ಕಾಲು ಏನಾದರೂ ಉಳುಕಿದೆಯೇ” ಇನ್ನೊಬ್ಬ ಕೇಳಿದ.
“…..”
“ನಿನ್ನ ಮನೆಯಲ್ಲಿದೆ?” ಮತ್ತೊಬ್ಬನ ಪ್ರಶ್ನೆ .
ಏನು ಕೇಳಿದರೂ ಹುಡುಗ ನಗುತ್ತಾ ತಲೆ ಅಲ್ಲಾಡಿಸುತಿದ್ದ.
“ನಿನ್ನ ಹೆಸರೇನು.?”
“….”
ಹುಡುಗರು ಮುಖ ಮುಖ ನೋಡಿದರು. ಯಾವುದಕ್ಕೂ ಅವನಿಂದ ಪ್ರತಿಕ್ರಿಯೆ ಇಲ್ಲ. ಹುಡುಗರು ತಮ್ಮ ತಮ್ಮೊಳಗೆ ಮಾತನಾಡತೊಡಗಿದರು. ಬಹುಶಃ ಇವನು ಈ ರಾಜ್ಯದವನಲ್ಲ. ತಮಿಳು ಅಥವಾ ಆಂದ್ರ ಪ್ರದೇಶದವನಿರಬೇಕು. ಇಲ್ಲಿ ಎಲ್ಲಿಯೋ ಹೋಟೇಲ್ ಕೆಲಸಕ್ಕೆ ಸೇರಿರಬೇಕು ಎಂದು ತೀರ್ಮಾನಕ್ಕೆ ಬಂದರು. ಒಬ್ಬ ಹುಡುಗ ಕೇಳಿದ. “ಪೇರ್” “ಪೇರ್” ಕಪ್ಪು, ಹುಡುಗನಿಗೆ ಈಗ ಅರ್ಥವಾಯಿತು. ಮೆಲ್ಲ ಬಾಯ್ತರೆದು ಹೇಳಿದ “ಕೂರ”

ಗೊಳ್ಳೆಂದು ಹುಡುಗರೆಲ್ಲರೂ ನಕ್ಕರು. ಇವನ ಹೆಸರು ಅವರಿಗೆ ತಮಾಷೆಯಾಗಿ ಕಂಡಿತು. “ನಮ್ಮೊಟ್ಟಿಗೆ ಆಡ್ತಿಯೇನು?” ಬ್ಯಾಟನ್ನು ಎತ್ತಿ ಒಮ್ಮ ಬೀಸಿ ತೋರಿಸಿದ ಬಾಲಕ. ಕಪ್ಪು ಹುಡುಗನಿಗೆ ಸಂತೋಷವಾಯಿತು. ಜೋರಾಗಿ ತಲೆ ಅಲ್ಲಾಡಿಸಿ ಒಪ್ಪಿಗೆ ನೀಡಿದ. ಕಪ್ಪು ಹುಡುಗನನ್ನು ಮೈದಾನಕ್ಕೆ ಕರೆದುಕೊಂಡು ಹೋಗಿ ಕೈಗೆ ಬ್ಯಾಟ್ ಕೊಟ್ಟರು. ಅವನು ಬ್ಯಾಟನ್ನು ಒಮ್ಮೆ ತದೇಕ ಚಿತ್ತದಿಂದ ನೋಡಿದ. ಬಲಗೈಯಿಂದ ಮೇಲಕ್ಕೆ ಎತ್ತಿ ಹಿಡಿದ. ಬ್ಯಾಟಿನ ಒಳಭಾಗ ಹಾಗೂ ಹೊರಭಾಗವನ್ನು ತನ್ನ ಎಡಕೈಯಿಂದ ಸವರಿದ. ಅದರಲ್ಲಿ ಬರೆದ ಅಕ್ಷರಗಳ ಮೇಲೆ ಕೈಯಾಡಿಸಿದ. ಬ್ಯಾಟಿನ ಕೈಗೆ ಸುತ್ತಿದ ರಬ್ಬರ್ ಶೀಟನ್ನು ಮುಟ್ಟಿದ. ಅವನ ಜೀವಮಾನದಲ್ಲಿ ಇಂತಹ ಒಂದು ಬ್ಯಾಟನ್ನು ಮುಟ್ಟುವುದೇ ಪ್ರಥಮ ಬಾರಿಯಾಗಿತ್ತು. ಅವನ ಖುಷಿಗೆ ವಾರವೇ ಇರಲಿಲ್ಲ. ಬಾಲಕರನ್ನು ಒಮ್ಮೆ ಕೃತಜ್ಞತೆಯಿಂದ ನೋಡಿದ. ತುಂಬಾ ತಿಳಿದವನಂತೆ ಗಂಭೀರ ಮುಖದೊಂದಿಗೆ ಕ್ರೀಸಿಗೆ ನಡೆದ. ಈಗ ಈ ಕಪ್ಪು ಹುಡುಗ ಮೊದಲಿನ ನಗು ಮುಖದ ಸೌಮ್ಯ ಹುಡುಗನಾಗಿ ತೋರಲಿಲ್ಲ. ಅವನ ಮುಖ ಗಡಸಾಯಿತು. ಬ್ಯಾಟನ್ನು ಕ್ರೀಸಿಗೆ ತಾಗಿಸಿ ಬಾಗಿ ನಿಂತಿದ್ದ. ಅವನಿಗೆ ಬೌಲ್ ಮಾಡುವ ಹುಡುಗ ಕಾಣಲಿಲ್ಲ. ತನ್ನ ಹಿಂದ ನಿಂತ ವಿಕೆಟ್ ಕೀಪರ್ ಬಗ್ಗೆಯೂ ಅವನಿಗೆ ಗಮನ ಇರಲಿಲ್ಲ. ಅವನ ಧ್ಯಾನ ಒಂದೇ. ಬಾಲ್. ಹೌದು. ಅವನು ಬಾಲಿನ ನಿರೀಕ್ಷೆಯಲ್ಲಿದ್ದ. ಶಾಲಾ ಬಾಲಕ ದೂರದಿಂದ ಓಡಿಕೊಂಡು ಬಂದು ಬಾಲ್ ಎಸೆದ. ಈ ಕಪ್ಪು ಹುಡುಗ ಸರಿಯಾದ ನಿಖರ ಗುರಿಯೊಂದಿಗೆ ಕರಾರುವಕ್ಕಾಗಿ ಬ್ಯಾಟನ್ನು ಬೀಸಿದ. ಬಾಲ್ ಬೌಂಡರಿ ಗುರಿ ದಾಟಿ ಸಿಕ್ಸಿಗೆ. ಮುಂದಿನದು ಗ್ರೌಂಡ್‌ಶಾಟ್. ಬೌಂಡರಿಗೆ. ಮೂರನೆಯದು ಸಿಕ್ಸ್, ನಾಲ್ಕನೇ ಐದನೇ ಬಾಲ್‌ಗಳು ಬೌಂಡರಿಗೆ. ಆ ಹುಡುಗ ಒಂದು ಬಾಲನ್ನು ವಿಕೆಟ್ ಕೀಪರ್‌ಗೆ ಬಿಡದ ಚಚ್ಚುತಿದ್ದ. ಅವನ ಮೈಮೇಲೆ ಆವೇಶ ಬಂದಂತೆ ಕಾಣುತಿತ್ತು. ಅವನ ಒಂದೇ ಒಂದು ಗುರಿ ತಪ್ಪಲಿಲ್ಲ. ಒಂದು ಎರಡು ರನ್ ತೆಗೆಯುವ ಅವಶ್ಯಕತೆಯೂ ಉಂಟಾಗಲಿಲ್ಲ. ಬೌಲರ್‌ಗಳು ಸುಸ್ತಾದರು. ಶಾಲಾ ಹುಡುಗರು ಈ ಕಪ್ಪು ಬಾಲಕನಿಗೆ ಬೌಲ್ ಮಾಡಲು ಹೆದರತೊಡಗಿದರು. ಒಂದೈದು, ಹತ್ತು ನಿಮಿಷದಲ್ಲಿ ಬೌಲರ್ಗಳ ಮಾನ ಹರಾಜಾಗಿತ್ತು. ಎಲ್ಲಾ ಶಾಲಾ ಹುಡುಗರೂ ಮುಖ ಪ್ರೇಕ್ಷಕರಾದರು. ಎಲ್ಲರೂ ಓಡಿ ಬಂದು ಅವನನ್ನು ಅಭಿನಂದಿಸುವವರೇ ಅವರ “ಶೇಕ್‌ಹ್ಯಾಂಡ್” ಅವನಿಗೆ ವಿಚಿತ್ರವಾಗಿ ಕಾಣುತಿತ್ತು. ಆ ಶಾಲಾ ಬಾಲಕರ ಮಧ್ಯೆ “ಕೂರ” “ಶೂರ” ಆದ. ಎಲ್ಲರೂ ಅವನನ್ನು ಶೂರ ಎಂದು ಕರೆಯತೊಡಗಿದರು. ಶಾಲಾ ಬಾಲಕರ ಟೀಮಿನಲ್ಲಿ ಅವನು ಖಾಯಂ ಸದಸ್ಯನಾದ. ಶೂರನಿಗೆ ಬ್ಯಾಟಿಂಗ್, ಬೌಲಿಂಗ್, ವಿಕೆಟ್ ಕೀಪಿಂಗ್‌ನಲ್ಲೂ ಪ್ರಥಮ ಸ್ಥಾನ. ಅವನು ಒಂದು ಹೊತ್ತೂ ಗೈರು ಹಾಜರಾಗದೆ, ಆಡಲು ಬರುತಿದ್ದ. ಕೊನೆಕೊನೆಗೆ ಆ ಟೀಮಿನ ಬೆನ್ನೆಲುಬಾದ. ಅವನಿಲ್ಲದೆ ಆ ಟೀಮಿನ ಕಲ್ಪನೆಯೇ ಅಸಾಧ್ಯವೆಂಬ ಪರಿಸ್ಥಿತಿ ಉಂಟಾಯಿತು.

ಮುಂದಿನ ಭಾನುವಾರ ಒಂದು ಸಣ್ಣ ಟೂರ್ನಮೆಂಟ್. ಶಾಲಾ ಮಕ್ಕಳ ನಾಲ್ಕು ಟೀಂಗಳು. ಎರಡು ನೇರ ಸಮಿ ಫೈನಲ್ ಹಾಗೂ ಒಂದು ಫೈನಲ್ ಪಂದ್ಯ. ಎಲ್ಲಾ ಹದಿನಾಲ್ಕು, ವರ್ಷದೊಳಗಿನ ಸಣ್ಣ ಪೋರರು. ಈ ಪಂದ್ಯಗಳನ್ನು ಭಾನುವಾರ ಬೆಳಿಗ್ಗೆಯೇ ಇಟ್ಟಿದ್ದರು. ಶೂರನ ಟೀಂ ಎಲ್ಲಾ ತಯಾರಿ ನಡೆಸಿತು. ಹಲವು ಸಾರಿ ಚರ್ಚೆ, ತರ್ಕ, ಜಗಳಗಳು ನಡೆದು ಕೊನೆಗೆ ಸರ್ವಾನುಮತದಿಂದ ಹನ್ನೊಂದು ಮಂದಿಯ ಟೀಂ ಆಯ್ಕೆ ಮಾಡಿಯಾಯಿತು. ಹತ್ತು ಓವರಿನ ಪಂದ್ಯ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಶೂರನಿಗೆ ಮೊದಲ ಆದ್ಯತೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ವಿಕೆಟ್ ಕೀಪಿಂಗ್ ಸ್ಥಾನವೂ ಎಂದಿನಂತೆ ಶೂರನಿಗೇ ಸಂದಿತು. ಶೂರ ಆ ಟೀಮಿನ ಟ್ರಂಪ್‌ಕಾರ್ಡ್. ಒಮ್ಮೆಯೂ ಕಪ್ ಎತ್ತದ ಈ ತಂಡ ಈ ಸಾರಿ ಕಪ್ ಎತ್ತಿಯೇ ಸಿದ್ದ ಎಂಬ ಛಲ. ಈ ಛಲದ ರೂವಾರಿ ಶೂರ.

ಶೂರನ ತಂಡಕ್ಕೆ ಇನ್ನೊಂದು ಸಮಸ್ಯೆ ಎದುರಾಯಿತು. ಟೂರ್ನಮೆಂಟ್ ಎಂದ ಮೇಲೆ ಎಲ್ಲರೂ ಸ್ಪೋರ್ಟ್ಸ್‌ ಶರ್ಟ್‌, ನಿಕ್ಕರ್, ಶೂ, ಸಾಕ್ಸ್, ಕ್ಯಾಪ್ ಧರಿಸಲೇಚೇಕು ಇಲ್ಲದಿದ್ದರೆ ಟೀಂ ಸಪ್ಪೆಯಾಗಿ ಕಾಣುತ್ತದೆ ಮತ್ತು ಎದುರು ಟೀಮಿನವರ ಅಪಹಾಸ್ಯಕ್ಕೆ ಗುರಿಯಾಗುತ್ತದೆ. ಶೂರನ ಟೀಮಿನ ಹುಡುಗರಲ್ಲಿ ಇದೆಲ್ಲಾ ಇದ್ದರೂ, ಶೂರನಿಗೆ ಹರಿದ ಚಡ್ಡಿ ಬಿಟ್ಟರೆ ಬೇರೇನೂ ಇಲ್ಲ. ಶೂರನ ತಂಡದ ನಾಯಕ ತುರ್ತು ಸಭೆ ಕರೆದ. ಎಲ್ಲರೂ ಹಣ ವಂತಿಗೆ ಹಾಕಿ, ಶೂರನಿಗೆ ಡ್ರೆಸ್ ಖರೀದಿಸುವುದೆಂದು ತೀರ್ಮಾನಿಸಲಾಯಿತು. ಶೂರನ ಹತ್ತಿರ ಅವನದೇ ಎತ್ತರದ ಹುಡುಗನನ್ನು ನಿಲ್ಲಿಸಿ ಅವನ ಅಳತೆಯ ರೆಡಿಮೇಡ್ ಡ್ರೆಸ್ ತರುವುದೆಂದು ನಿರ್ಣಯಿಸಲಾಯಿತು. ಶೂ ತರಲು ಕಾಗದದಲ್ಲಿ ಶೂರನ ಕಾಲಿನ ಅಳತೆ ತೆಗೆಯಲಾಯಿತು. ಹಣವನ್ನು ಸಂಗ್ರಹಿಸಿ ಟೀಮಿನ ನಾಯಕನಿಗೆ ಕೊಟ್ಟು ಡ್ರೆಸ್ ತರುವ ಜವಬ್ದಾರಿಯನ್ನು ಅವನಿಗೆ ಹೊರಿಸಲಾಯಿತು ಶೂರನ ಸಂತೋಷಕ್ಕೆ ಮೇರೆಯೇ ಇಲ್ಲ. ರಾತ್ರಿ ಹಗಲು ಅವನಿಗೆ ಡ್ರೆಸ್‌ನದೇ ಕನಸು. ರಾತ್ರಿ ಟೆಂಟಿನಲ್ಲಿ ಮುದುಕಿಯೊಂದಿಗೆ ಮಲಗಿದಾಗಲೆಲ್ಲಾ ಅವನಿಗೆ ಕನಸುಗಳ ಸರಮಾಲೆ ಹೊಸ ಡ್ರೆಸ್ ಹಾಕಿ ಮೈದಾನದ ಸುತ್ತ ಓಡಾಡಿದ್ದು. ಬೌಲಿಂಗ್ ಮಾಡಿದ್ದು. ವಿಕೆಟ್ ದೊರಕಿದಾಗಲೆಲ್ಲಾ ಹುಡುಗರು ತನ್ನನ್ನು ಎತ್ತಿ ಕೇಕೆ ಹಾಕಿದ್ದು ಬ್ಯಾಟ್ ಬೀಸಿ ಸಿಕ್ಸರ್, ಬೌಂಡರಿ ಬಾರಿಸಿ ಮಕ್ಕಳ ಚಪ್ಪಾಳೆ ಗಿಟ್ಟಿಸಿಕೊಂಡದ್ದು. ಬಿಸ್ಕಿಟ್, ಐಸ್‌ಕ್ರೀಂ ತಿಂದದು – ಇನ್ನು ಏನೇನೋ ಕನಸುಗಳು. ಒಂದೈದು ದಿವಸ ಶೂರ ಕನಸುಗಳ ರಾಶಿಯಲ್ಲಿ ತೇಲಾಡಿದ. ಟೂರ್ನಮೆಂಟನ ದಿನ ಬಂತು. ಶೂರನ ಟೀಮಿನ ನಾಯಕ ಹುಡುಗರನ್ನು ಒಟ್ಟುಗೂಡಿಸಿ ಶೂರನ ಡ್ರೆಸ್, ಶೂಗಳೊಂದಿಗೆ ಮೈದಾನಕ್ಕೆ ಬಂದನು. ಹುಡುಗರ ಕಣ್ಣು ಮೈದಾನದ ಆಟದ ಪಿಚ್ ಹತ್ತಿರವೇ ನೆಟ್ಟಿತ್ತು. ಯಾವಾಗಲೂ ಪ್ರತೀ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಶೂರ ಪಿಚ್ ಹತ್ತಿರ ಇರುತಿದ್ದ. ಇತರ ದಿನಗಳಲ್ಲೂ ಸಂಜೆ ಹೊತ್ತು ಮೈದಾನದಲ್ಲಿ ಮೊದಲು ಹಾಜರಾಗುವುದು ಶೂರನೇ. ಆದರೆ ಇವತ್ತು ಶೂರ ಕಂಡು ಬರಲಿಲ್ಲ. ಹುಡುಗರಿಗೆ ದಿಗಿಲಾಯಿತು. ಅವರು ಗುಂಪು ಗುಂಪಾಗಿ ಮೈದಾನದ ಮೂಲೆ ಮೂಲೆ ಓಡುತ್ತಾ ಶೂರನನ್ನು ಹುಡುಕುತಿದ್ದರು. ‘ಶೂರ’ ‘ಶೂರ’ ಎಂದು ಎಷ್ಟು ಕೂಗಿಕೊಂಡರೂ ಶೂರ ಕಾಣಲಿಲ್ಲ. ಗಂಟೆ ೯ ಅಗತೊಡಗಿತು. ಉಳಿದ ಟೀಮಿನವರು ಗುಂಪು ಗುಂಪಾಗಿ ಸೇರಿಕೊಂಡು ಎದುರು ಪಾಳಯದವರನ್ನು ಯಾವ ರೀತಿ ಸೋಲಿಸುವುದು ಎಂಬ ಬಗ್ಗೆ ‘ಚಕ್ರವ್ಯೂಹ’ ಹೆಣೆಯುತಿದ್ದರು. ಆದರೆ ಶೂರನ ಟೀಮಿನ ನಾಯಕ ಶೂರನಿಲ್ಲದೆ ಕಂಗಾಲಾದ. ಇನ್ನೇನು! ಕೆಲವೇ ನಿಮಿಷದಲ್ಲಿ ಟೂರ್ನಮೆಲಟ್ ಶುರು ಆಗಬೇಕು. ಕೊನೆಯ ಪ್ರಯತ್ನವಾಗಿ ಕೆಲವು ಹುಡುಗರು ಗೋಡೆ ಹತ್ತಿ ಶೂರನ ಟೆಂಟು ಇದ್ದ ಸ್ಥಳಕ್ಕೆ ನಡೆದರು. ಆದರೆ ಅಲ್ಲಿ ಟೆಂಟು ಇರಲಿಲ್ಲ. ಅಲ್ಲಿ ಕಂಬ ನೆಟ್ಟ ಗುಂಡಿಗಳು, ಹಗ್ಗ ಹಾಗೂ ಹಳೇ ಬಟ್ಟೆ ತುಂಡುಗಳು ಮಾತ್ರ ಇದ್ದುವು. ಮಕ್ಕಳು ಏನೋ ಹುಡುಕುತಿದ್ದುದನ್ನು ನೋಡಿ, ಅಲ್ಲಿಯೇ ನಿಂತಿದ್ದ ವಯಸ್ಕರೊಬ್ಬರು ವಿಚಾರಿಸಿದರು. ಹುಡುಗರು ಇಲ್ಲಿ ಟೆಂಟಿನಲ್ಲಿದ್ದ ಮುದುಕಿ ಬಗ್ಗೆ, ಶೂರನ ಬಗ್ಗೆ ಮಾಹಿತಿ ಕೇಳಿದರು. ವಯಸ್ಕರು ನಗುತ್ತಾ ಉತ್ತರಿಸಿದರು. “ಅವರು ಮನೆ ಮಠ ಆಸ್ತಿ ಪಾಸ್ತಿ ಒಂದೂ ಇಲ್ಲದ ಅಲೆಮಾರಿ ಜನಾಂಗಗಳು. ಇವತ್ತು ಈ ಊರಾದರೆ ನಾಳೆ ಇನ್ನೆಲ್ಲೋ…..”

ಹುಡುಗರು ತಲೆಗೆ ಕೈಯಿಟ್ಟುಕೊಂಡು ಅಲ್ಲಿಯೇ ಕುಸಿದು ಕುಳಿತರು. ಅನತಿ ದೂರದಲ್ಲಿ ಖಾಲಿ ಒಲೆಯ ಒಳಗಿನ ಬೂದಿ ರಾಶಿಯಿಂದ ಸಣ್ಣಗೆ ಹೊಗೆ ಗಾಳಿಯಲ್ಲಿತೇಲಿ ಬರುತಿತ್ತು.
*****