ವಾಮನ ಮಾಸ್ತರರ ಏಳು ಬೀಳು

ವಾಮನ ಮಾಸ್ತರರ ಏಳು ಬೀಳು

ಚಿತ್ರ: ಮ್ಯಾಟಿ ಸಿಂಪ್ಸನ್

“ಏಳು!” ಅಂದರು ವಾಮನ ಮಾಸ್ತರರು.

ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ ತನ್ನ ತಲೆಯನ್ನು ಅನಿಸಿ ಕುಳಿತಿದ್ದ.

“ಏಳು!” ಅಂದರು ವಾಮನ ಮಾಸ್ತರರು ಇನ್ನೊಮ್ಮೆ, ತಗ್ಗಿದ ಆದರೆ ಕಠಿಣವಾದ ಧ್ವನಿಯಲ್ಲಿ.

ರಾಜಪ್ಪ ಇದೊಂದು ತಲೆಹರಟೆ ಎನ್ನುವ ಭಾವವನ್ನು ಮೋರೆಯಲ್ಲಿ ಬೇಕಾದಷ್ಟು ಪ್ರದರ್ಶಿಸುತ್ತ. ಬೇಕೋ ಬೇಡವೋ ಎನ್ನುವಂತೆ ಏಳುವ ಶಾಸ್ತ್ರಮಾಡಿ, ಏಳುವ ಮೊದಲೆ ಕುಳಿತುಕೊಂಡ. ಉಳಿದ ಹುಡುಗರು ಪ್ರತಿದಿನವೂ ರಾಜಪ್ಪ ಏಳುತ್ತಾನೋ ಇಲ್ಲವೋ, ಏಳದಿದ್ದರೆ ಮಾಸ್ತರರು ಏನು ಮಾಡುತ್ತಾರೆ, ಏನಾಗುತ್ತದೆ, ಎಂದು ಕುತೂಹಲದಿಂದ ನಿರೀಕ್ಷಿಸುತ್ತಿದ್ದು, ಕೊನೆಗೆ ಏನು ಆಗದಿರುವುದನ್ನು ಗಮನಿಸಿ ಈ ವಿದ್ಯಮಾನವನ್ನು ಕಡೆಗಣಿಸುತ್ತಿದ್ದರು. ಪ್ರತಿದಿನ ಶಾಲೆ ಆರಂಭವಾಗುವ ಮೊದಲಿನ ಪ್ರಾರ್ಥನೆಯಂತೆ ವಾಮನ ಮಾಸ್ತರರ ಕ್ಲಾಸಿನಲ್ಲಿ ರಾಜಪ್ಪನ ಪ್ರಸಂಗ ರೂಢಿ ಯಾಗಿಬಿಟ್ಟಿತ್ತು. ಎಷ್ಟರಮಟ್ಟಿಗೆ ಎಂದರೆ ರಾಜಪ್ಪನೂ ಕೂಡ ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿರಲಿಲ್ಲ, ಮೊದಲ ಸಲ ಮಾತ್ರ ಮುಷ್ಟಿಬಿಗುದು, ನೀನು ಏಳದಿದ್ದರೆ ನಾನು ಏಳಿಸುತ್ತೇನೆ. ಇಲ್ಲವೇ ಅನುಭವಿಸು, ಎನ್ನುವ ರೀತಿಯಲ್ಲಿ ಸಿಟ್ಟಿನಿಂದ ಅವನನ್ನು ಎಬ್ಬಿಸಹೋದಾಗ ರಾಜಪ್ಪ ನೋಡಿದ ನೋಟಕ್ಕೆ ವಾಮನ ಮಾಸ್ತರರು ಅವಾಕ್ಕಾಗಿ ಅರ್ಧದಲ್ಲೆ ನಿಂತುಬಿಟ್ಟರು. ಅವರ ಸೆಟೆದ ಮಾದ ಖಂಡಗಳು ಬಿಗಿ ಕಳಚಿಕೊಂಡುವು. ಗಂಭೀರವಾದ ಒಂದು ಪ್ರಸಂಗವನ್ನು ನಿರೀಕ್ಷಿಸಿದ ಕ್ಲಾಸಿನ ವಿದ್ಯಾರ್ಥಿಗಳಿಗೆಲ್ಲ ನಿರಾಶೆಯಾಗಿರಬೇಕು. ಆದರೂ ಈ ಬಿಗಿ ವಾತಾವರಣ ಕೆಲವು ದಿನ ಮುಂದುವರಿದು ಕೊನೆಗೆ ತನ್ನಿಂತಾನೆ ಅರಿಹೋಯಿತು.

ಎಲ್ಲರ ಮಟ್ಟಿಗೆ, ಆದರೆ ವಾಮನ ಮಾಸ್ತರರ ಮಟ್ಟಿಗಲ್ಲ. ಕ್ಲಾಸನ್ನು ಪ್ರವೇಶಿಸಿದಾಗ ಪದ್ಧತಿಯಂತೆ ಎಲ್ಲ ವಿದ್ಯಾರ್ಥಿಗಳೂ ಏಳುತ್ತಿದ್ದರು. ರಾಜಪ್ಪ ಮಾತ್ರ ಏಳುತ್ತಿರಲಿಲ್ಲ. ಮಾಸ್ತರರು ಅವನಿಗೆ “ಏಳು!”ಅನ್ನುವುದು. ಅವನು ಏಳುವ ಶಾಸ್ತ್ರ ಮಾಡುವುದು. ಮುಂದುವರಿಯುತ್ತಲೇ ಇತ್ತು. ಇದೂ ಅಲ್ಲದೆ ಅವನಿಗೆ ಯಾವ ಪ್ರಶ್ನೆಯನ್ನೂ ಕೇಳುವ ಹಾಗಿರಲಿಲ್ಲ. ಕೇಳಿದರೆ ಆತ ಏಳಬೇಕಾದರೆ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದ. ಹೀಗೆ ಎಬ್ಬಿಸಿದಕ್ಕೆ ಸಿಟ್ಟಾದವನಂತೆ ಮೊಟಕು ಉತ್ತರ ಹೇಳಿ, “ಕೂತುಕೊ” ಎನ್ನುವುದಕ್ಕೆ ಕಾಯದೆ ಕೂತುಬಿಡುತ್ತಿದ್ದ. ಇದಾದರೂ ಒಂದು ಸಮಸ್ಯೆ ಯಾಗಿರಲಿಲ್ಲ. ರಾಜಪ್ಪನಿಗೆ ಯಾವ ಪ್ರಶ್ನೆ ಹಾಕುವುದೂ ಬೇಡ ಎಂದು ಇಡಬಹುದು. ಇಟ್ಟೂ ಆಗಿತ್ತು. ಆದರೆ ಗುರುಗಳು ತರಗತಿಯನ್ನು ಪ್ರವೇಶಿಸುವಾಗ ವಿದ್ಯಾರ್ಥಿಗಳು ಎದ್ದು ನಿಂತು ಗೌರವ ಸೂಚಿಸುವ ಹಳೆಪದ್ಧತಿಯನ್ನು ಈತ ಧಿಕ್ಕರಿಸಿದರೆ ಅದನ್ನು ಕಡೆಗಣಿಸುವುದು ಸಾಧ್ಯವಿರಲಿಲ್ಲ. ಸಾಧ್ಯವೂ ಹೇಗೆ ಎಂಬುದರೆ ಬಗ್ಗೆ ವಾಮನ ಮಾಸ್ತರರು ಹಲವು ದಿನಗಳಿಂದ ತಲೆ ಬಿಸಿ ಮಾಡಿಕೊಂಡಿದ್ದರು. ಕಡೆಗಣಿಸಿದರೆ ಅದರಿಂದಾಗುವ ತೊಂದರೆಗಳು ಹಲವಾರು. ಮುಖ್ಯ ಕ್ಲಾಸಿನ ಇತರ ವಿದ್ಯಾರ್ಥಿಗಳು. ರಾಜಪ್ಪನನ್ನು ಅನುಸರಿಸಬಹುದು. ಈಗಾಗಲೇ ಅಂಥ ಚಿಹ್ನೆಗಳನ್ನು ಅವರು ಗಮನಿಸುತ್ತಿದ್ದರು. ಲಂಬವಾಗಿ ನಿಲ್ಲುತ್ತಿದ್ದವರ ಸೊಂಟ ನಿಮಿರುವ ಮೊದಲೆ ಕೂತು ಬಿಡಲು ಸುರುಮಾಡಿದ್ದರು. ಒಂದು ತರಗತಿಯಲ್ಲಿ ನಡೆಯುತ್ತಿದ್ದ ಈ ಪ್ರಸಂಗ ಇನ್ನಿತರ ತರಗತಿಗಳಿಗೂ ಹರಡಬಹುದು. ಶಾಲೆಯ ಒಟ್ಟಾರೆ ಶಿಸ್ತು ಹಾಳಾಗಬಹುದು, ಬರೇ ಒಬ್ಬ ಕೆಟ್ಟ ವಿದ್ಯಾರ್ಥಿಯ ಮೇಲ್ಪಂಕ್ತಿ ಯಿಂದಾಗಿ. ಆದ್ದರಿಂದ ಇವನನ್ನು ಈಗಲೆ ದಾರಿಗೆ ತರಬೇಕಾಗಿತ್ತು. ಅಲ್ಲದೆ ಇಷ್ಟು ವರ್ಷಗಳ ಅಧ್ಯಾಪಕ ಜೀವನದಲ್ಲಿ ಗಳಿಸಿದ್ದ ಗೌರವವನ್ನು ಕೇವಲ ಒಬ್ಬ ವಿದ್ಯಾರ್ಥಿಯ ದೆಸೆಯಿಂದ ನಷ್ಟಪಡಿಸಿಕೊಳ್ಳಲು ಅವರು ತಯಾರಿರಲಿಲ್ಲ.

ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಮಾಸ್ತರರು ಆಳವಾಗಿ ಚಿಂತಿಸತೊಡಗಿದರು. ಕ್ಲಾಸಿನಲ್ಲಿ ಶಿಸ್ತಿನ ಬಗ್ಗೆ, ಗೌರವದ ಬಗ್ಗೆ, ವಿಧೇಯತೆಯ ಬಗ್ಗೆ ದಿನೇ ದಿನೇ ಕೊಟ್ಟ ಉಪದೇಶದಿಂದ ಪ್ರಯೋಜನವಾಗಲಿಲ್ಲ. ಉಳಿದ ವಿದ್ಯಾರ್ಥಿಗಳು ಬೋರಾಗಿ ಆಕಳಿಸಲು ಸುರು ಮಾಡುತ್ತಿದ್ದರಲ್ಲದೆ, ರಾಜಪ್ಪನ ಮೇಲೆ ಯಾವ ಪರಿಣಾಮವೂ ಉಂಟಾಗಲಿಲ್ಲ. ರಾಜಪ್ಪನನ್ನು ಕರೆದು ಖಾಸಗಿಯಾಗಿ ತಿಳಿಹೇಳುವ ಪ್ರಯತ್ನವನ್ನು ಆತ ಮೊದಲಲ್ಲೇ ಸೋಲಿಸಿದ. “ಕ್ಲಾಸು ಮುಗಿದು ನನ್ನನ್ನು ಬಂದು ಕಾಣು”ಎಂದು ಮಾಸ್ತರರ ಅಧ್ಯಾಪಕರ ಕೋಣೆಯಲ್ಲಿ ಕಾದು ಕುಳಿತದ್ದೊಂದೆ ಬಂತು.

ರಾಜಪ್ಪ ತಂದೊಡ್ಡಿದ ಸಮಸ್ಯೆ ಯನ್ನು ಎರಡು ಮೂರು ದಾರಿಗಳಿಂದ ಎದುರಿಸಬಹುದಿತ್ತು. ಆದರೆ ಒಂದೊಂದಕ್ಕೂ ಅದರದ್ದೇ ಅದ ಕೊರತೆಗಳಿದ್ದವು. ಮುಖ್ಯ, ಯಾವ ಶಿಕ್ಷೆಯನ್ನೂ ಕೊಡುವಂತಿರಲಿಲ್ಲ. ಏಳು ಎಂದರೆ ಏಳದವನನ್ನು ಬೆಂಚಿನ ಮೇಲೆ ನಿಲ್ಲಿಸುವುದಾಗಲಿ, ಬಾಗಿಲ ಬಳಿ ನಿಲ್ಲಿಸುವುದಾಗಲಿ, ತರಗತಿಯಿಂದ ಹೊರಗೆ ಹಾಕುವುದಾಗಲಿ ದೂರವೇ ಉಳಿಯುತು. ದೈಹಿಕ ದಂಡನೆಗಳನ್ನು ಕೊಡಬಹುದಿತ್ತು. ಆದರೆ ಅದರ ಪರಿಣಾಮಗಳು ಏನಾಗಬಹುದೆಂದು ಊಹಿಸಲು ಸಾಧ್ಯವಿರಲಿಲ್ಲ. ರಾಜಪ್ಪನ ಕಣ್ಣುಗಳಲ್ಲಿ ತನ್ನನ್ನು ನೋಡುವಾಗ ಹಗೆತನ ಹೊಳೆಯುತ್ತಿತ್ತು. ಅವನ ಮೇಲೆ ಕೈಮಾಡಿ ಅವಮಾನಕರವಾದ ಪರಿಣಾಮಗಳಿಗೆ ಒಳಗಾದರೆ ಅದು ತಾನೇ ಮೈಮೇಲೆ ಹಾಕಿಕೊಳ್ಳುವ ಗ್ರಹಚಾರ. ಅಲ್ಲದೆ ಹೆಡ್ ಮಾಸ್ತರರ ಮಗ ಕ್ಲಾಸಿನಲ್ಲಿ ಕೂತು ಬೇರೆ ಇದನ್ನೆಲ್ಲ ಗಮನಿಸುತ್ತಿದ್ದಾನೆ. ರಾಜಪ್ಪ ಹೀಗೆ ಧಿಕ್ಕರಿಸುತ್ತಿರುವುದರಿಂದಾಗಿ ವಾಮನ ಮಾಸ್ತರರಿಗೆ ಕ್ಲಾಸಿನ ಇತರ ತಂಟಲುಮಾರಿಗಳನ್ನು ಶಿಕ್ಷಿಸಲೂ ಸಾಧ್ಯವಾಗುತ್ತಿರಲಿಲ್ಲ.

ಅವನ ಹಾಜರಿಯನ್ನು ಹಾಕದಿರಬಹುದಿತ್ತು. ಆದರೆ ಹಾಜರಿಯ ಮೇಲೆ ರಾಜಪ್ಪನಿಗೆ ಆಸಕ್ತಿ ಯಿದ್ದಂತಿರಲಿಲ್ಲ. ಹೆಸರು ಕೂಗಿದೊಡನೆ ಎಲ್ಲರೂ ಯಸ್ಸಾರ್ ಎಂದರೆ ಇವನು ಮಾತ್ರ ಯಸ್….ಎನ್ನುವವನು. ಕೆಲವೊಮ್ಮೆ ಅದೂ ಇಲ್ಲ. ಅವನು ಶಾಲೆಯ ಗುಮಾಸ್ತನನ್ನು ಆಮೇಲೆ ಹೋಗಿ ಕಾಣುತ್ತಾನೆ. ಪರೀಕ್ಷೆಯಲ್ಲಿ ಫ಼ೇಲು ಮಾಡಬಹುದಿತ್ತು. ಆದರೆ ಕಣಿಷ್ಕ ಎನ್ನುವುದರ ಬದಲು ಕ ಎಂದು ಬರೆದದ್ದಕ್ಕೇ ಅರ್ಧ ಮಾರ್ಕು ಕೇಳುವ ಹೆಡ್ ಮಾಸ್ತರರ ಮಗನಿರುವ ಕ್ಲಾಸಿನಲ್ಲಿ ರಾಜಪ್ಪನನ್ನು ಫ಼ೇಲು ಮಾಡುವುದು ಕಷ್ಟ. ಒಂದು ವೇಳೆ ವಾಮನ ಮಾಸ್ತರರು ಹಾಗೆ ಫ಼ೇಲು ಮಾಡಿದರೂ ಸರಕಾರಿ ಆಜ್ಞೆಯ ಪ್ರಕಾರ ಕ್ಲಾಸಿನಲ್ಲಿ ಯಾರನ್ನೂ ತಡೆಹಿಡಿಯುವಂತಿರಲಿಲ್ಲ.

ಇದೆಲ್ಲವನ್ನೂ ಪೂರ್ವಾಭಾವಿಯಾಗಿ ತಿಳಿದವನಂತೆ ರಾಜಪ್ಪ ಮಾತ್ರ ಯಾವ ಮಾನಸಿಕ ತೊಳಲಾಟದಲ್ಲೂ ಸಿಕ್ಕದ ಡೆಸ್ಕಿಗೆ ಒರಗಿ ಕೂತಿರುತ್ತಿದ್ದ. ತೂಕಡಿಕೆ ಬಂದರೆ ನಿದ್ದೆ. ಎಚ್ಚರವಾದೊಡನೆ ಒಂದು ಚೆಕ್ಲೆಟ್ ಬಾಯಿಗೆ ಹಾಕಿ ಜಗಿಯುತ್ತ ಕ್ಲಾಸಿನಲ್ಲಿ ನಡೆಯುವ ಮೋಜನ್ನು ನೋಡುತ್ತಿದ್ದ. ಇವನು ಹೀಗೆ ಅವುಡು ಜಗಿಯುತ್ತಿರಬೇಕಾದರೆ ವಾಮನ ಮಾಸ್ತರರ ಪಿತ್ಥ ನೆತ್ತಿಗೇರುತ್ತಿತ್ತು. ಅವರ ಧ್ವನಿ ಗಡುಸಾಗಿ, ಎತ್ತರವಾಗಿ, ಇಂಡಿಯಾ ದೇಶದ ಚರಿತ್ರೆಯಲ್ಲಿ ನಡೆದ ಹಲವಾರು ದಾಳಿಗಳೂ, ಯುದ್ಧಗಳೂ, ಸೋಲುಗಳೂ ಇಲ್ಲಿ ನಾಲ್ಕು ಗೋಡೆಗಳೊಳಗೆ ಪುನರಾವರ್ತನೆ ಯಾಗುತ್ತಿದ್ದವು.

ರಾಜಪ್ಪನ ಪ್ರಸಂಗವನ್ನು ಹೆಡ್ ಮಾಸ್ತರರಿಗೆ ದೂರುವ ಹಾಗಿರಲಿಲ್ಲ. ಹೆಡ್ ಮಾಸ್ತರರು ತನ್ನ ನೆರವಿಗೆ ಬಂದಾರೆಂಬ ಯಾವ ನಂಬಿಕೆಯೂ ಇರಲಿಲ್ಲ.

“ರಾಜಪ್ಪ ಎಲ್ಲಾ ಕ್ಲಾಸುಗಳಲ್ಲೂ ಹೀಗೆ ವರ್ತಿಸುತ್ತಿದ್ದಾನೆಯೆ?” ಎಂದು ಅರ್ಥಬರುವಂತೆ ತನಗೆ ಈ ಪ್ರಶ್ನೆಯಲ್ಲಿ ಯಾವ ಆಸಕ್ತಿಯೂ ಇಲ್ಲದ ಧ್ವನಿಯಲ್ಲಿ ಮಾಸ್ತರರು ಪರ್ಯಾಯವಾಗಿ ಆ ಕ್ಲಾಸಿನ ಒಂದೆರಡು ಸಾಧು ಹುಡುಗರನ್ನು ಕೇಳಿದರು. ಇದಕ್ಕೆ ಸಮರ್ಪಕವಾದ ಉತ್ತರ ಸಿಗಲಿಲ್ಲ.

ಹೀಗೆ ವಾಮನ ಮಾಸ್ತರರು ಮನಸ್ಸಿನೊಳಗೇ ನೊಂದರು. ಊಟಮಾಡುವಾಗಲೂ, ಪಾಠಮಾಡುವಾಗಲೂ, ಮನೆಯಲ್ಲಿ ಹೆಂಡತಿಯೊಂದಿಗೆ ಇರುವಾಗಲೂ ರಾಜಪ್ಪನ ಭೂತ ಎದುರಿಗೆ ಧುತ್ತೆಂದು ಬಂದು ನಿಲ್ಲುತ್ತಿತ್ತು. ಅವರ ಪಾಠವನ್ನೂ ಇದು ಬಾಧಿಸುತ್ತಿತ್ತು. ಮೊದಲು ವಾಮನ ಮಾಸ್ತರರೆ ಪಾಠಗಳು ಮನೋರಂಜಕವಾಗಿರಲಿ ಎಂದು ಆಗಾಗ ಜೋಕಿನ ಮಸಾಲೆ ಅರಯುತ್ತಿದ್ದುದುಂಟು. ಆಗ ಗೊಳ್ಳನೆ ನಗೆಯ ಹೊನಲೆಬ್ಬಿಸುವ ವಿದ್ಯಾರ್ಥಿಗಳನ್ನು ಬೇಕಾದಾಗ ಮತ್ತೆ ನಿಯಂತ್ರಿಸುತ್ತ ಪಾಠ ಮುಂದುವರೆಸುತ್ತಿದ್ದರು. ಆದರೆ ಈಗ ಪಾಠ ಹೇಳುವ ಮನಸ್ಸೇ ಇರಲಿಲ್ಲ. ಬರೇ ಧ್ವನಿ ಮಾತ್ರ ಉತ್ತರವಾಗಿತ್ತಿತ್ತಷ್ಟೆ. ಕ್ಲಾಸು ಎಂದೊಡನೆ ಮುಖದ ಮಾಂಸ ಖಂಡಗಳು ವಿಚಿತ್ರ ರೀತಿಯಾಗಿ ಸೆಟೆದುಕೊಂಡು, ನಗುವುದಾಗಲಿ, ನಗೆಯ ಮಾತು ಆಡುವುದಾಗಲಿ ಅಸಾಧ್ಯವಾಗುತ್ತಿತ್ತು. ಬರೇ ರಾಜಪ್ಪನ ತರಗತಿಯಲ್ಲಲ್ಲ. ಇತರ ತರಗತಿಗಳಲ್ಲೂ ಹೀಗೆ ಆಗತೊಡಗಿತು. ಮೊದಲು ವಾಮನ ಮಾಸ್ತರರು ಹೆಂಡತಿ ಯೊಂದಿಗೆ ಶಾಲೆಯ ಸುದ್ದಿಗಳನ್ನು ಹೇಳಿ ಆಕೆಯನ್ನೂ ನಗಿಸುವುದಿತ್ತು. ಆದರೆ ಈಗ ಅಂಥ ಮನಸ್ಥಿತಿಯೇ ಇರಲಿಲ್ಲ. ಇದು ಆಕೆಯ ಗಮನಕ್ಕೆ ಬಂದು “ಇತ್ತೀಚಿಗೆ ಏಕೆ ಒಂದು ಥರಾ ಇದ್ದೀರಿ? ಮೈ ಯಲ್ಲಿ ಹುಷಾರಿಲ್ಲವೆ? “ಎಂದು ಕೇಳಿದ್ದೂ ಉಂಟು. ಏನು ಹೇಳುವುದು ಆಕೆಗೆ?

ವಾಮನಮಾಸ್ತರರು ಮಾನಸ ಶಾಸ್ತ್ರ ಪರವಾದ ದಾರಿಯಿಂದ ರಾಜಪ್ಪನನ್ನು ಸಮೀಪಿಸಬಹುದೇ ಎಂದು ಪ್ರಯತ್ನಿಸತೊಡಗಿದರು. ಅವನ ವರ್ತನೆ, ಹವ್ಯಾಸಗಳನ್ನು ಗುಪ್ತವಾಗಿ ಅಭ್ಯಾಸ ಮಾಡತೊಡಗಿದರು. ರಾಜಪ್ಪ ಸುಮಾರು ಎಂಟೂವರೆ ಗಾಗಲೆ ಶಾಲೆಗೆ ಹಾಜರಾಗುತ್ತಿದ್ದ. ಆತ ಒಂದು ಗುಂಪು ಕಟ್ಟಿಕೊಂಡಿದ್ದಾಗಿ ತಿಳಿದು ಬಂತು. ಈ ಗುಂಪು ಬಿಡುವಿನ ವೇಳೆಯಲ್ಲಿ, ಶಾಲೆಯ ಹತ್ತಿರವೇ ಇರುವ ಒಳ್ಳೆಯ ಅಂಗಡಿಯನ್ನು ಬಿಟ್ಟು, ಶಾಲೆಯಿಂದ ಒಂದೆರಡು ಫ಼ರ್ಲಾಂಗು ದೂರವಿರುವ ಕಚಡಾ ಅಂಗಡಿಗೆ ಹೋಗಿ ತಿಂಡಿತೀರ್ಥ ಸೇವಿಸುತ್ತಿತ್ತು. ನಂತರ ಅದೇ ಅಂಗಡಿಯಿಂದ ಬೀಡಿ ಸಿಗರೇಟು ಇತ್ಯಾದಿಗಳನ್ನು ಖರೀದಿಸಿಕೊಂಡು ಹತ್ತಿರದ ಗೇರುಮರವನ್ನು ಹತ್ತಿ ಕುಳಿತುಕೊಳ್ಳುತ್ತಿತ್ತು. ಶಾಲೆಯ ಗಂಟೆಯ ಸದ್ದು ಕೇಳಿದ ಮೇಲೆಯೇ ಅದು ಅಲ್ಲಿಂದ ಕದಲುವುದು. ರಜಾದಿನಗಳಲ್ಲಿ – ರಜಾದಿನಗಳಲ್ಲೆಂದೇನು, ಶಾಲಾ ದಿನಗಳಲ್ಲಿ ಕೂಡ ಸಾಯಂಕಾಲ ತಪ್ಪಿಸಿಕೊಂಡು – ಬಾಡಿಗೆ ಸೈಕಲ್ಲುಗಳಲ್ಲಿ ಈ ಗುಂಪು ಪೇಟೆ ಕಡೆಗೆ ಸಿನಿಮಾ ನೋಡಲೋ ಯಾಕೋ ಹೋಗುವುದಿದೆಯೆಂದು ಗೊತ್ತಾಯಿತು. ಹತ್ತು ಮೈಲಿ ಸುತ್ತಳತೆಯಲ್ಲಿ ಜಾತ್ರೆ, ಉತ್ಸವ, ಬಯಲಾಟ ಏನಿದ್ದರೂ ಈ ಗುಂಪು ಅಲ್ಲಿ ಹಾಜರಾಗಿ ಸಂತೆಗಳಲ್ಲಿ ಸುಳಿದಾಡುತ್ತಿತ್ತು. ಒಂದು ದಿನ ಅವರು ಸೋಮಸುಂದರ ಎಂಬ ವಿದ್ಯಾರ್ಥಿಯನ್ನು ಅಧ್ಯಾಪಕರ ಕೋಣೆಗೆ ಕರೆದು.

“ನಿನ್ನೆ ಅಪರಾಹ್ನದ ಕ್ಲಾಸುಗಳನ್ನು ತಪ್ಪಿಸಿಕೊಂಡು ಎಲ್ಲಿ ಹೋಗಿದ್ದೆ?” ಎಂದು ಕೇಳಿದರು.

“ನಾನೆಲ್ಲಿ ತಪ್ಪಿಸಿಕೊಂಡಿದ್ದೆ ಸಾ? ” ಎಂದು ಆತ ಆಶ್ಚರ್ಯವನ್ನು ನಟಿಸಿದ.

“ಹಾಜರು ಪಟ್ಟಿಯಲ್ಲಿ ಚೆಕ್ಮಾಡಿದ್ದೇನೆ ನಾನು.”

“ಕೆಲವೊಮ್ಮೆ ಹಾಗಾಗುತ್ತೆ ಸಾ. ಅದನ್ನು ಸರಿಮಾಡಿಕೊಳ್ತೇನೆ ಸಾ.”

“ನಿನ್ನೆ ಅಪರಾಹ್ನ ನೀನು, ರಾಜಪ್ಪ, ಕೇಶವ ಮತ್ತು ಕುಷ್ಟಯ್ಯ ಬಾಡಿಗೆ ಸೈಕಲ್ ಮಾಡಿಕೊಂಡು, ಕುಂಬಳೆಗೆ ಹೋಗಿ ಸಿನಿಮಾ ನೋಡಿದಿ ರೀ ಅಂತ ನನಗೆ ಗೊತ್ತಾಗಿದೆ…..”

ಕೋಣೆಯಲ್ಲಿ ಕುಳಿತು ಬೀಡಿ ಸೇದುತ್ತಿದ್ದ ಇನ್ನಿಬ್ಬರು ಅಧ್ಯಾಪಕರಲ್ಲಿ ಒಬ್ಬರು ನಡುವೆ ಬಾಯಿ ಹಾಕಿದರು.

“ಹೇಗಿತ್ತಯ್ಯ ಸಿನಿಮ? ಯಾವ ಸಿನಿಮ?”

ಸೋಮಸುಂದರ ನಕ್ಕ.

“ಅಯ್ಯೋ ಅದೆಂಥ ಸಿನಿಮಾ ಸಾ. ಕೆಟ್ಟ ತಮಿಳು ಸಿನೆಮ. ಅದಕ್ಕೆಲ್ಲಾ ಕ್ಲಾಸು ತಪ್ಪಿಸಿಕೊಂಡು ಯಾರು ಹೋಗುತ್ತಾರೆ ಸಾ?”

ಕೇಶವ ಮತ್ತು ಕುಷ್ಟಯ್ಯನನ್ನು ಕರೆದು ಕೇಳಿದಾಗಲೂ ಇಂಥ ಯಾವದೋ ಸಿದ್ಧವಾದ ಉತ್ತರ ಸಿಕ್ಕಿತಷ್ಟೆ. ಇಂಥ ವಿಚಾರಣೇಯಿಂದಾಗಿ ವಾಮನ ಮಾಸ್ತರರಿಗೆ ತಿಳಿದುಬಂದದ್ದು ರಾಜಪ್ಪ ಕೆಟ್ಟವರ ಗುಂಪಿನಲ್ಲಿದ್ದಾನೆ ಎಂದು ಮಾತ್ರ. ಈಗ ರಾಜಪ್ಪ ನನ್ನು ಉದ್ಧಾರ ಮಾಡಿ ಗುಂಪನ್ನು ಒಡೆಯಬೇಕೋ, ಗುಂಪನ್ನು ಒಡೆದು ರಾಜಪ್ಪ ನನ್ನು ಉದ್ಧಾರ ಮಾಡಬೇಕೋ, ಎಲ್ಲಾ ಕೈಬಿಟ್ಟು ತಪಸ್ಸಿಗೆ ಹೋಗಬೇಕೋ ಅವರಿಗೆ ತಿಳಿಯಲಿಲ್ಲ.

ಇತ್ತ ಕ್ಲಾಸಿನಲ್ಲಿ ಮಾತ್ರ ವಾಮನ ಮಾಸ್ತರರ ಏಳು ಬೀಳು ನಿತ್ಯ ನಡೆಯುತ್ತಲೇ ಇತ್ತು ಹೀಗೆ ಚಿಂತಾಕ್ರಾಂತನಾಗಿ ಎಂದಿನಂತೆ ಒಂದು ನಸುಕಿನಲ್ಲಿ ಕೆಟ್ಟನಿದ್ದೆಯಿಂದ ಎಚ್ಚರಾಗುತ್ತಲೆ ಅವರಿಗೆ ಫಕ್ಕನೆ ಒಂದು ಸಂಗತಿ ಹೊಳೆಯಿತು, ನಂತರ ನಿದ್ದೆಯೆ ಬರಲಿಲ್ಲ. ಎದ್ದು ಒಂದು ದಿನಕ್ಕಾಗಿ ರಜೆಯ ಅಪೇಕ್ಷಾ ಪತ್ರ ಬರೆದು ತಯಾರು ಮಾಡಿದರು. ಬೆಳಗಾಗುತ್ತಲೆ ಅದನ್ನು ತೆಗೆದುಕೊಂಡು ಹೋಗಿ ನೆರೆಮನೆಯ ಶಾಲಾ ವಿದ್ಯಾರ್ಥಿಯೊಬ್ಬನ ಮೂಲಕ ಹೆಡ್ ಮಾಸ್ತರರಿಗೆ ತಲುಪಿಸುವ ಏರ್ಪಾಡು ಮಾಡಿದರು. ಬೆಳಿಗ್ಗೆ ಕಾಫ಼ಿ ತಿಂಡಿ ತೆಗೆದುಕೊಳ್ಳುತ್ತಿರುವಂತೆ ಮಾಸ್ತರರು ತಮ್ಮ ತಾಯಿ ಯೊಡನೆ. “ಅಲ್ಲಮ್ಮಾ, ಮೇಲಿನ ಮನೆ ರಾಮಕೃಷ್ಣಯ್ಯನಿಗೂ ನಮಗೂ ಯಾಕೆ ಹೊಕ್ಕು ಬಳಕೆ ಇಲ್ಲ? ಎಂದು ಕೇಳಿದರು. ಮಾಸ್ತರರ ತಾಯಿಗೆ ಸುಮಾರು ಅರುವತ್ತೈದು ವಯಸ್ಸು ಆಕೆ ಪುರಾಣ ಬಿಚ್ಚತೊಡಗಿದರು. ಈ ಪುರಾಣ ಹಲವುಬಾರಿ ಕೇಳಿದ್ದು. ಅದರಿಂದೇನೂ ಸ್ಪಷ್ಟವಾಗಲಿಲ್ಲ. ಯಾರು ಯಾರಿಗೋ ಹಣ ಕೊಡಬೇಕಾಗಿತ್ತು.ಕೊಡದೆ ತಪ್ಪಿಸಿಕೊಂಡರು ಎಂದಷ್ಟೆ ಗೊತ್ತಾಯಿತು.

ಪೂರ್ವಾಹ್ನ ಸುಮಾರು ಹತ್ತು ಗಂಟೆಯ ಹೊತ್ತಿಗೆ ವಾಮನ ಮಾಸ್ತರರು ಹೆಂಚು ಹಾಕಿದ ಎರಡಂತಸ್ತಿನ ಮೇಲಿನ ಮನೆಯ ಗೇಟಿನ ಮುಂದೆ ನಿಂತು. “ರಾಮಕೃಷ್ಣಯ್ಯ ಇದ್ದಾರೆಯೆ?” ಎಂದು ಕೂಗುತ್ತಿದ್ದರು. ಒಳಗೆ ಸಂಕಲೆಯಲ್ಲಿ ಕಟ್ಟಿಹಾಕಿದ್ದ ಎರಡು ಊರನಾಯಿಗಳು ಒಂದೇ ಸವನೆ ಬೊಗಳತೊಡಗಿದವು. ಅಂಗಳ ದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಲ್ಲಿ ಒಬ್ಬ ಮಾಸ್ತರರ ಬಳಿಗೆ ಬಂದು. “ಏನು ಬೇಕು?” ಎಂದು ವಿಚಾರಿಸಿ, “ಯಜಮಾನರು ಮಂಗುಳೂರಿಗೆ ಹೋಗಿದ್ದಾರೆ. ಬರುವಾಗ ರಾತ್ರಿ ಯಾಗಬಹುದು.” ಎಂದು ತಿಳಿಸಿದ. ಒಂದು ದಿನದ ರಜಾ ಹಾಳಾದ್ದಕ್ಕೆ ಪಶ್ಚಾತ್ತಾಪ ಪಡುತ್ತ. ಉರಿಯುವ ಬಿಸಿಲಲ್ಲಿ ಮಾಸ್ತರರು ವಾಪಸಾದರು.

ಮರುದಿನ ಮುಂಜಾನೆಯೆ ಅವರು ಮತ್ತೆ ಮೇಲಿನ ಮನೆಯ ಗೇಟಿನ ಮುಂದೆ ಒಂದು ಕೂಗುತ್ತಿದ್ದರು. ಈಗ ಹೊರಗೆ ಬಂದು ನೋಡಿದ್ದು ರಾಜಪ್ಪ ಮಾಸ್ತರರೆಂದು ತಿಳಿದು ಆತ ಒಳಗೆ ಹೋಗಿ ತಂದೆಗೆ ಹೇಳಿ ಎಲ್ಲೋ ಮಾಯವಾದ. ಕೆಲವು ಮಕ್ಕಳು ಆಚೀಚೆ ಯಿಂದ ಬಂದು ಕುತೂಹಲದಿಂದ ಬಂದು ನೋಡುತ್ತ ನಿಂತರು. ಒಂದು ಚಾವಡಿ ಯಲ್ಲಿ ಕೂಡ್ರುವಂತೆ ಇನ್ನಾರೋ ಹೇಳಿದರು. ಅಂಗಳದಲ್ಲಿ ಗೋಟಡಿಕೆಯ ಬೃಹತ್ತಾದ ರಾಸಿ ಹಾಕಿ ನಾಲಕ್ಕು ಆಳುಗಳು ಅವನ್ನು ಚೊಕ್ಕಟಗೊಳಿಸುವುದರಲ್ಲಿ ಮಗ್ನರಾಗಿದ್ದರು. ಒಂದು ಕುರ್ಚಿಯಲ್ಲಿ ಮಾಸ್ತರರು ಕೂತು, ಯಾವ ರೀತಿ ತಾನು ಮಾತಾಡಿದರೆ ಉತ್ತಮ ಎಂಬ ಬಗ್ಗೆ ಚಿಂತಿಸುತ್ತಾ, ಮೌನವಾಗಿ ರಿಹರ್ಸಲ್ ಮಾಡುತ್ತಿದ್ದರು.

ರಾಮಕೃಷ್ಣಯ್ಯ ಹೊರಗೆ ಬರುವುದಕ್ಕೆ ಸ್ವಲ್ಪವೇ ಹೊತ್ತು ಹಿಡಿಯುತು. ಬಂದವರೇ ಮಾಸ್ತರರನ್ನು ಕಂಡು. “ವಾಮನ ಮಾಸ್ತರರಲ್ಲವೆ? ನಮ್ಮ ಹುಡುಗ ಬಂದು ಹೇಳಿದ. ಅತ್ಯಂತ ಅಪರೂಪ ದರ್ಶನ. ಕೂತುಕೊಳ್ಳಿ.” ಎಂದು ಹೇಳಿ ಆಳುಗಳ ಕಡೆ ತಿರುಗಿ ಅಂದಿನ ಕೆಲಸ ಕಾರ್ಯಗಳ ಬಗ್ಗೆ ನಿರ್ದೇಶನ ಕೊಡತೊಡಗಿದರು. ಒಳಗಿನಿಂದ ಹೆಣ್ಣುಮಕ್ಕಳು ಹೊರಗೆ ಇಣಿಕಿ ನೋಡಿ ಮತ್ತೆ ಕಾಣದಾದರು. ಒಬ್ಬೊಬ್ಬರಾಗಿ ಇನ್ನಷ್ಟು ಕೆಲಸದವರು ಬಂದರು. ರಾಮಕೃಷ್ಣಯ್ಯ ನವರ ತಮ್ಮಂದಿರು ಯಾವ ಯಾವದೋ ಬಾಗಿಲುಗಳಿಂದ ಪ್ರತ್ಯಕ್ಷವಾಗಿ ಅಣ್ಣನಿಂದ ಅಪ್ಪಣೆ ತೆಗೆದುಕೊಂಡು ಆಳುಗಳನ್ನು ಕರೆದುಕೊಂಡು ಕೆಲಸ ಮಾಡಿಸುವುದಕ್ಕೆ ಹೋದರು.

ಇಷ್ಟೆಲ್ಲ ಆದ ಮೇಲೆ ರಾಮಕೃಷ್ಣಯ್ಯ ಮಾಸ್ತರರ ಕಡೆ ತಿರುಗಿ ತಾವೂ ಒಂದು ಕುರ್ಚಿ ಸಮೀಪಕ್ಕೆ ಎಳೆದು ಕುಳಿತುಕೊಂಡರು. ಕುಳಿತಾಗ ಕುರ್ಚಿ ತುಂಬುವ ಬೊಜು ದೇಹ. ಒಂದಿಂಚು ಬೆಳೆದಿದ್ದ ತಲೆಗೂದಲು. ಗಡ್ಡ, ಒಂದೇ ರೀತಿಯ ಬೂದು ಬಣ್ಣಕ್ಕೆ ತಿರುಗಿದ್ದವು. ಮೇಲೆ ಒಂದು ಪುಟ್ಟದಾದ ಜುಟ್ಟು. ಇಡೀ ಲೋಕ ತನಗಾಗಿ ಜೀವಿಸುತ್ತಿದೆ ಎನ್ನುವ ಧೋರಣೆ ಏನು, ಬೇಗ ಹೇಳಿ ಮುಗಿಸಿ, ಬೇರೆ ಕೆಲಸವಿದೆ, ಎನ್ನುವ ತುರ್ತು ಮುಖದ ಮೇಲೆ.

ಮಾಸ್ತರರು ಹೇಳಿದರು. ಕೆಲವು ತಲೆಮಾರುಗಳಿಂದ ನಮ್ಮ ಕುಟುಂಬಕ್ಕೂ ನಿಮ್ಮ ಕುಟುಂಬಕ್ಕೂ ಹೊಕ್ಕೂ ಬಳಕೆ ಇಲ್ಲ. ಒಂದೇ ಗ್ರಾಮದವರಾಗಿದ್ದು ಕೊಂಡು ನಾವು ಹೀಗಿರುವುದು ಸರಿಯಲ್ಲ. ಹಿಂದಿನವರು ಯಾರೇನು ತಪ್ಪು ಮಾಡಿದ್ದರೂ ನಾವದನ್ನು ಸರಿಪಡಿಸಬಹುದು. ವಿದ್ಯಾವಂತರಾದ ನಾವೇ ಅದನ್ನು ಮಾಡಬೇಕು.

ರಾಮಕೃಷ್ಣಯ್ಯ ಬಾಯಲ್ಲಿದ್ದ ಎಲೆ ಅಡಿಕೆ ಜೊಲ್ಲನ್ನು ದೂರ ಅಂಗಳ ದಾಚೆ ಉಗಿದು ಬಂದರು. ಮಾಸ್ತ್ರೇ ಎಂದು ಪೀಠಿಕೆ ಹಾಕಿದರು. ಮಾಸ್ತರರು ಆತಂಕದಿಂದ ಅವರ ಮುಖವನ್ನೇ ನೋಡುತ್ತಿದ್ದರು. ರಾಮಕೃಷ್ಣಯ್ಯ ಹೇಳಿದರು. “ಇದೆಲ್ಲ ಒಮ್ಮೆ ಹೂತುಹಾಕಿದ ವಿಷಯ. ಈಗ ಯಾಕೆ ಅಗೆಯಬೇಕೆನ್ನುತ್ತೀರ? ತಪ್ಪೋ ಸರಿಯೋ ಮಾಡಿದವರು ಈಗ ಇಲ್ಲ. ಅವರು ಮಾಡಿದ ಒಳ್ಳೇದು ಕೆಟ್ಟದ್ದನ್ನು ನಾವು ಅನುಭವಿಸಬೇಕು. ಅನುಭವಿಸುತ್ತಾ ಇದ್ದೇವೆ, ಈಗ ಇನ್ನಿದನ್ನು ಕೆದಕಬೇಕು ಎಂದರೆ…. ಇದೆಲ್ಲ ಹಣಕಾಸಿನ ವ್ಯವಹಾರದಲ್ಲಿ ಆರಂಭವಾದ್ದು. ಎಂದು ನೀವು ಕೇಳಿರಬೇಕು. ನಿಮ್ಮ ತಂದೆಯ ಪ್ರಾಯ ನನಗೆ ಆದ್ದರಿಂದ ಈ ವಿಷಯ ನಿಮಗಿಂತ ಹೆಚ್ಚು ಗೊತ್ತು ನನಗೆ….”

“ನಮ್ಮ ಕುಟುಂಬದವರು ನಿಮ್ಮ ಕುಟುಂಬದವರಿಂದ ತೆಗೆದ ಸಾಲ ವಾಪಸುಕೊಡಲಿಲ್ಲ, ಎಂದಲ್ಲವೇ ಸಂಗತಿ?” ಇದಕ್ಕಾಗಿ ತಲೆ ತಲಾಂತರ ಹೊಕ್ಕು ಬಳಕೆ ಮಾಡದಿರುವುದೆ? ಅದು ಏನಿದ್ದರೂ ಸರಿಪಡಿಸಬೇಕೆಂದು ನನ್ನ ಆಸೆ” ಅಂದರು ಮಾಸ್ತರರು.

“ಬರೇ ಹಣದ ವಿಷಯವಾದರೆ, ಏನು ದೊಡ್ಡ ಸಂಗತಿ? ಅದಲ್ಲ, ನಿಮಗೆ ಇದೆಲ್ಲ ಯಾಕೆ ಹೇಳಿ ಬೇಜಾರು ಪಡಿಸಬೇಕು? ಆದರೂ ಇದೇನೂ ಹೊಸ ಸಂಗತಿ ಯಲ್ಲ ಬಿಡಿ, ಈ ಊರಿನವರಿಗೆಲ್ಲಾ ತಿಳಿದೇ ಇರುವುದು. ನಿಮ್ಮ ತಾತಾ ನಮ್ಮ ತಂದೆ ಯಿಂದ ಕಷ್ಟದ ಕಾಲದಲ್ಲಿ ಮುನ್ನೂರು ರೂಪಾಯಿ ಸಾಲ ತೆಗೆದುಕೊಂಡರು. ಒಂದು ನೋಟು ಬರೆದುಕೊಟ್ಟರು. ಸಾಲಿಯಾನ ಶೇಕಡಾ ಆರೂಕಾಲರ ಬಡ್ಡಿಯಂತೆ ಮೂರು ವರ್ಷದ ವೈದೆ ಹಾಕಿದರು. ವೈದೆಯೇನೋ ಕಳೆಯಿತು. ಹಣವೂ ಇಲ್ಲ. ಬಡ್ಡಿಯೂ ಇಲ್ಲ. ನೋಟನ್ನಾದರೂ ಊರ್ಜಿತಗೊಳಿಸೋಣವೆಂದು ನಮ್ಮ ತಂದೆ ನಿಮ್ಮ ಮನೆತನಕ ಹೋಗಿ, ಒಂದು ಸಹಿಯನ್ನಾದರೂ ಹಾಕಿ ಎಂದು ಕೊಟ್ಟರೆ ನಿಮ್ಮ ತಾತ ಅದನ್ನು ಹರಿದು ಬಿಸಾಡಿ, ನಿನ್ನ ಹಣಕ್ಕೆ ಕೋರ್ಟಿಗೆ ಹೋಗಯ್ಯ ಎಂದು ಹಂಗಿಸಿ ಅವಮಾನಪಡಿಸಿದರು. ನಮ್ಮ ತಂದೆಗೆ ಮುನ್ನೂರು ರೂಪಾಯಿ ದೊಡ್ಡದಲ್ಲ ಆದರೆ ಹೀಗೆ ಕಣ್ಣೆದುರೆ ವಿಶ್ವಾಸಘಾತ ಮಾಡಿದರಲ್ಲ ನಿಮ್ಮವರು ಎಂದು ಇರಲಿ ಬಿಡಿ ಮಾಸ್ತ್ರೆ, ಈಗ ನಿಮ್ಮ ಹಿರಿಯರೂ ಇಲ್ಲ. ನಮ್ಮ ಹಿರಿಯರೂ ಇಲ್ಲ. ಆಗಿನ ಮುನ್ನೂರು ರೂಪಾಯಿ ಎಂದರೆ ಈಗಿನ ಮೂರು ಸಾವಿರದ ಫಲ…..”

ಈ ಕೊನೆಯ ವಾಕ್ಯ ಕೇಳಿ ವಾಮನಮಾಸ್ತರರ ಮಾತನಾಡಲೆಂದು ತೆರೆದ ಬಾಯಿ ಅರ್ಧಕ್ಕೆ ನಿಂತಿತ್ತು. ಏನು ಹೇಳುವುದೆಂದು ಅವರಿಗೆ ತೋರಲಿಲ್ಲ. ಕನಿಷ್ಟ ಮುನ್ನೂರಾದರೆ ಈ ದಂತಕತೆಯ ಸಾಲವನ್ನು ಕೊಟ್ಟು ಸಂದಾಯಿಸಿ ಕೈ ತೊಳೆದು ಕೊಳ್ಳಬಹುದಿತ್ತು. ಮಾಸ್ತರರ ಮೌನವನ್ನು ನೋಡಿಯೇ ಏನೋ, ರಾಮಕೃಷ್ಣಯ್ಯ ನಸುನಕ್ಕು “ನಾನೇನೂ ಮೂರು ಸಾವಿರ ಕೊಡಿ ಎಂದು ಕೇಳುವುದಿಲ್ಲ. ನನಗೆ ಮೂಲ ಧನ ವಾಪಸು ಬಂದರೆ ಸಾಕು, ಅಷ್ಟನ್ನೂ ನಾನಾಗಿ ಕೇಳಲಿಲ್ಲ ಎಂದು ತಿಳಿಯರಿ” ಎಂದರು.

ಮುಂದೆ ನಡೆದ ಮಾತುಕತೆಯ ಪ್ರಕಾರ ಸಾಲದ ಪ್ರಕರಣವನ್ನು ಎರಡು ಕುಟುಂಬದವರೂ ಮರೆಯುವುದೆಂತಲೂ, ವಾಮನ ಮಾಸ್ತರರು ರಾಜಪ್ಪನಿಗೆ ಮೇಲಿನ ಮನೆಯಲ್ಲಿ ಒಂದು ವರ್ಷ ಪ್ರತಿ ರವಿವಾರ ಪಾಠ ಹೇಳಿಕೊಡುವುದೆಂತಲೂ, ಜೋಯಿಸರಲ್ಲಿ ಕೇಳಿ ಅವರು ಹೇಳಿದಂತೆ ಬೇಕು ಬೇಕಾದ ದೇವರುಗಳನ್ನು ತೃಪ್ತಿಪಡಿಸುವುದೆಂತಲೂ, ನಿಶ್ಚಯವಾಯಿತು. ಇದರಂತೆ ಮುಂದಿನ ರವಿವಾರವೆ ಮಾಸ್ತರರು ಮೇಲಿನ ಮನೆಗೆ ಹೋಗಿ ರಾಜಪ್ಪನನ್ನು ಭೇಟಿಮಾಡಿ ಪಾಠ ಸುರು ಮಾಡಿದರು.

ಕ್ಲಾಸಿನಲ್ಲಿ ರಾಜಪ್ಪನ ಸಮಸ್ಯೆ ತನ್ನಿಂತಾನೆ ಬಗೆಹರಿದು ಹುಡುಗರೆಲ್ಲರಿಗೂ ಆಶ್ಚರ್ಯವಾಗತೊಡಗಿತು. ವಾಮನ ಮಾಸ್ತರರು ಕ್ಲಾಸಿಗೆ ಪ್ರವೇಶಿಸಿದೊಡನೆ ಎಲ್ಲರೊಂದಿಗೆ ಅವನೂ ಎದ್ದು ನಿಲ್ಲುತ್ತಿದ್ದ. ಅಪರೂಪಕ್ಕೆ ಕೇಳಿದ ಪ್ರಶ್ನೆಗಳಿಗೆ ಗೊತ್ತಿದ್ದರೆ ಉತ್ತರಿಸುತ್ತಿದ್ದ. ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆಂದು ಮರ್ಯಾದೆಪೂರ್ವಕ ಹೇಳುತ್ತಿದ್ದ. ವಾಮನ ಮಾಸ್ತರರಾದರೂ ಅನಗತ್ಯವಾದ ಪ್ರಶ್ನೆಗಳನ್ನು ಅವನಿಗೆ ಹಾಕುತ್ತಿರಲಿಲ್ಲ.

ಈಗ ಮಾಸ್ತರರೂ ರಾಜಪ್ಪನೂ ಎಷ್ಟು ಅನ್ಯೋನ್ಯವಾಗಿದ್ದರೆಂದರೆ: ಒಂದು ದಿನ ಬೆಳಿಗ್ಗೆ ಎಂದಿನಂತೆ ವಾಮವ ಮಾಸ್ತರರು ಒಂದು ಕೈಯಲ್ಲಿ ಕೊಡೆ, ಇನ್ನೊಂದರಲ್ಲಿ ಮಧ್ಯಾಹ್ನದ ಬುತ್ತಿ ಚೀಲ ತೆಗೆದುಕೊಂಡು ಶಾಲೆಗೆ ಹೊರಟಿದ್ದರು. ಮನೆಯಿಂದ ಶಾಲೆಗೆ ಮೂರು ಮೈಲಿ ಉದ್ದದ ಕೆಂಪು ಮಣ್ಣಿನ ಕೆಂಪು ಮಣ್ಣಿನ ರಸ್ತೆ. ಒಂದು ಮೈಲಿ ಕ್ರಮಿಸಿದೊಡನೆ, ಎಡಬದಿಯಿಂದ ಸೇರುವ ಇನ್ನೊಂದು ರಸ್ತೆಯಿಂದ ರಾಜಪ್ಪ ಬಂದು ಸೇರಿಕೊಂಡ. ಅವನ ಹೆಗಲಿನಲ್ಲಿ ಪುಸ್ತಕಗಳ ಚೀಲ. ರಾಜಪ್ಪ ನಕ್ಕ. ಸ್ವಲ್ಪ ಅಧಿಕಾರದ ಧ್ವನಿಯಲ್ಲಿ ಮಾಸ್ತರರು ಕೇಳಿದರು :

“ನಿನ್ನೆ ಕ್ಲಾಸಿಗೆ ಬರಲಿಲ್ಲವಲ್ಲಾ, ಎಲ್ಲಿಗೆ ಹೋಗಿದ್ದೆ?”
“ನಿನ್ನೆ ನಾನು ಶಾಲೆಗೇ ಬರಲಿಲ್ಲ ಸಾರ್”
“ಯಾಕೆ, ಅಂದೆ, ಹುಷಾರಿಲ್ಲವೆ?”
“ತುರ್ತು ಕೆಲಸ ಇತ್ತು ಸಾರ್. ಮಂಗಳೂರಿಗೆ ಹೋಗಿದ್ದೆ.”
“ಏನು ಕೆಲಸ?”
“ಒಳ್ಳೆ ಸಿನಿಮಾ ನೊಡದೆ ತುಂಬ ಕಾಲವಾಗಿತ್ತು. ಮೊನ್ನೆ ಸಾಯಂಕಾಲಾನೇ ಹೋಗಿದ್ದೆ. ಮೂರು ನೋಡಿದೆ, ಸಾರ್. ನಮ್ಮ ಈ ದರಿದ್ರ ಊರಲ್ಲೇನಿದೆ, ಸಾರ್….”

ರಾಜಪ್ಪ ತಡೆದ.”ಸಾರ್, ಒಂದ್ನಿಮಿಷ ಈ ಚೀಲ ಹಿಡಿದುಕೊಂಡಿರಿ. ಒಂದು ಸಾಮಾನು ತೆಗೆದುಕೊಳ್ಳೋದಿದೆ. ಪೆನ್ನಿಗೆ ಸ್ವಲ್ಪ ಶಾಯಿನೂ ಹಾಕಬೇಕು.” ಎಂದು ಹೇಳಿ ತನ್ನ ಚೀಲವನ್ನು ಮಾಸ್ತರರಿಗೆ ಕೊಟ್ಟು, ಈಗಾಗಲೆ ಹಿಂದಕ್ಕೆ ಹಾಕಿದ ಅಂಗಡಿ ಕಡೆಗೆ ನಡೆದ. ಮಾಸ್ತರರು ರಾಜಪ್ಪನ ಚೀಲವನ್ನು ಹೆಗಲಿಗೆ ಹಾಕಿಕೊಂಡು ಕಾದರು.

ರಾಜಪ್ಪನಿಗೆ ಪೆನ್ನಿಗೆ ಶಾಯಿ ತುಂಬಿಸಬೇಕಿತ್ತೇನೋ ಖರೆ. ಆದರೆ ಅದಕ್ಕಿಂತ ಮುಖ್ಯವಾಗಿ ಸ್ವಲ್ಪ ಚಿಕ್ಲೆಟ್, ಸಿಗರೇಟು ತೆಗೆದುಕೊಳ್ಳಬೇಕಿತ್ತು. ಅಂಗಡಿಯಲ್ಲಿ ಶಾಲೆಗೆ ಹೋಗುವ ಕೆಲವು ಗೆಳೆಯರು ಸಿಕ್ಕಿದರು. ಅಲ್ಲಿಂದ ಹೊರಬೀಳಲು ತಯಾರಾದ ಆ ಹುಡುಗರು ಮಾಸ್ತರರು ಮುಂದೆ ಹೋಗಲು ಕಾದಿದ್ದರು. ಇವರನ್ನು ಕಂಡ ರಾಜಪ್ಪ ಅಂಗಡಿಯ ಹೊರಗಿಂದಲೆ, “ಸಾರ್, ನೀವು ಮುಂದೆ ಹೋಗಿ. ನಾನು ಹಿಂದಿಂದ ಬರ್ತನೆ.” ಎಂದು ಕೈ ಬಾಷೆಯನ್ನು ಸೇರಿಸಿ ಕೂಗಿ ಹೇಳಿದ.

ವಾಮನ ಮಾಸ್ತರರು ಒಬ್ಬರೇ ಮುಂದು ವರಿದರು. ಚಿರಪರಿಚಿತವಾದ ಹಾದಿ ಯನ್ನು ದಿನಕ್ಕೆರಡು ಬಾರಿಯಂತೆ ಕಳೆದ ಹನ್ನೆರಡು ವರ್ಷಗಳಿಂದ ನಡೆದಿದ್ದರು. ಮೊದಲ ವರ್ಷಗಳಲ್ಲಿ ನಡೆಯುತ್ತ ಸುತ್ತಲಿನ ಪ್ರಶಸ್ತ ಭೂಮಿಯ, ದೂರದ ಪಶ್ಚಿಮ ಬೆಟ್ಟಗಳ, ಹತ್ತಾರು ಮೈಲಿಯಾಚೆ ಕಂಡೂ ಕಾಣಿಸಿದ ಸಮುದ್ರದ ಸೌಂದರ್ಯವನ್ನು ಸವಿಯುತ್ತಿದ್ದರು. ನಡೆಯುವ ಏಕಾಂತದಲ್ಲಿ ಮನಸ್ಸಿನೊಳಗಿನ ಕಲ್ಪನೆಗಳನ್ನು ಬಿಚ್ಚುತ್ತಿದ್ದರು. ತಮ್ಮ ಸ್ನಾತಕ ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಮುಗಿಸಿ ಸ್ವಂತ ಊರಿಗೆ ಮರಳಿ, ತಾವು ಕಲಿತ ಮಾತೃ ಶಾಲೆಯಲ್ಲೆ ಅಧ್ಯಾಪಕರಾದಾಗ ಇಲ್ಲಿ ನನಗೊಂದು ಮನೆಯಿದೆ, ಪುಟ್ಟ ಜಮೀನಿದೆ, ಈ ಊರು ನನ್ನದು. ಈ ಶಾಲೆ ನನ್ನದು, ಈ ವಿದ್ಯಾರ್ಥಿಗಳನ್ನು ಮುಂದೆ ತರುತ್ತೇನೆ ಎಂದೆಲ್ಲ ಕನಸು ಕಂಡಿದ್ದರು. ಕುಂಬಳೆರಾಜರ ಬಗ್ಗೆ ಒಂದು ಸಂಶೋಧನಾತ್ಮಕ ಪುಸ್ತಕ ಬರೆಯಬೇಕು. ಖಾಸಗಿಯಾಗಿ ಸ್ನಾತಕೋತ್ತರ ಪದವಿ ಗಳಿಸಬೇಕು ಎಂಬ ಬಯಕೆಯಿತ್ತು. ಇವೆಲ್ಲ ವಾಮನ ಮಾಸ್ತರರ ಇನ್ನೊಂದು ಮುಖ. ಇದು ಯಾರಿಗೂ ಕಾಣಿಸದ್ದು. ಕಾಣಿಸುತ್ತಿದ್ದುದು ಬಿಳಿ ಪಂಟಿ, ಜುಬ್ಬಾ ಧರಿಸಿ ಮೇಲೊಂದು ಮಡಚಿದ ಶಾಲು ಹಾಕಿದ ವಾಮನ ಮಾಸ್ತರರು. ಸದಾ ಆತಂಕ ಸೂಚಿಸುತ್ತ ನೀರು ಜಿನುಗುವ ಕಣ್ಣುಗಳುಳ್ಳ ಬಿಸಿಲಿಗೆ ನಡೆದು ಜಿಡ್ಡುಗಟ್ಟಿದ ಮುಖ. ಇದರಾಚಿಗಿನ ಬೆಟ್ಟಿಗಳೂ ಸಮುದ್ರಗಳೂ ಯಾರಿಗೆ ಬೇಕು?

ಬಿಸಿಲೇರುವಷ್ಟರಲ್ಲಿ ಮಾಸ್ತರರು ಶಾಲೆ ಸೇರಿದರು. ಕೊಡೆಯನ್ನೂ, ಚೀಲವನ್ನೂ ಒಂದೆಡೆ ಇರಿಸಿ, ಮೋರೆಗೂ ಕಾಲಿಗೂ ನೀರು ಹಾಕಿಕೊಂಡು ಬಂದರು, ಒಬ್ಬ ಹುಡುಗನನ್ನು ಕರೆದು ರಾಜಪ್ಪನ ಚೀಲವನ್ನು ಕೊಟ್ಟು ಆತನಿಗೆ ಮುಟ್ಟಿಸಲು ಹೇಳಿದರು. ಇತರ ಅಧ್ಯಾಪಕರು ಬಂದು ಸೇರಿದರು. ಶಾಲೆಯ ಗದ್ದಲ ಆರಂಭವಾಯಿತು. ಗಂಟೆ, ಪ್ರಾರ್ಥನೆ, ಕ್ಲಾಸು.

ವಾಮನ ಮಾಸ್ತರರು ಎರಡನೇ ಪೀರಿಯಡಿನಲ್ಲಿ ರಾಜಪ್ಪನ ಕ್ಲಾಸಿಗೆ ಬಂದರು. ಎಲ್ಲರೂ ಪದ್ಧತಿಯಂತೆ ಎದ್ದುನಿಲ್ಲುವ ಶಾಸ್ತ್ರ ಮಾಡಿ ಕೂತುಕೊಂಡರು. ಮಾಸ್ತರರು ಹಾಜರಿ ಕರೆಯತೊಡಗಿದರು. ರಾಜಪ್ಪ ಗೈರು ಹಾಜರು. ಅವನ ಚೀಲದ ಜವಾಬ್ದಾರಿ ತೆಗೆದುಕೊಂಡ ಹುಡುಗ ಇನ್ನೇನು ಮಾಡುವುದು ಎಂಬ ರೀತಿಯಲ್ಲಿ ಮಾಸ್ತರರ ಕಡೆ ನೋಡಿದ. ಮಾಸ್ತರರು ಅವನನ್ನು ಅವಗಣಿಸಿ, ಹಾಜರಿ ಮುಗಿಸಿ, ಕಳೆದ ಕ್ಲಾಸಿನಲ್ಲಿ ಭಾರತದ ಚರಿತ್ರೆ ಎಲ್ಲಿ ನಿಂತಿತ್ತೋ ಅಲ್ಲಿಂದ ಮತ್ತೆ ಮುಂದುವರಿಸಿದರು.

ಯಾರೋ ಎತ್ತರದ ಧ್ವನಿಯಲ್ಲಿ ಮಾತಾಡುತ್ತಿರುವುದು ಕೇಳಿ ಅಧ್ಯಾಪಕರ ಕೋಣೆಯಲ್ಲಿ ಕುಳಿತಿದ್ದವರು ಕಿವಿ ನಿಮಿರಿಸಿದರು. ಅದೊಂದು ನಿರರ್ಗಳವಾದ ರಾಜಕೀಯ ಭಾಷಣದಂತೆ ಕೇಳಿಬರುತ್ತಿತ್ತು. ಹತ್ತಿರದಿಂದಲೇ ಬರುತ್ತಿದೆಯೆಂದು ತೋರಿತು. ಆಶ್ಚರ್ಯದಿಂದ ಹೋಗಿ ನೋಡಿದರು. ಅದು ವಾಮನ ಮಾಸ್ತರರ ತರಗತಿಯಿಂದ ಬರುತ್ತಿತ್ತು. ಮಾಸ್ತರರು ಆವೇಶಭರಿತರಾಗಿ ಮಾತಾಡುತ್ತಿದ್ದರು. ಎರಡನೇ ಪೀರಿಯಡ್ ಕಳೆದ ಗಂಟೆ ಬಾರಿಸಿತು. ವಾಮನ ಮಾಸ್ತರರು ತರಗತಿಯಿಂದ ಹೊರಬರಲಿಲ್ಲ. ಅವರ ಕಣ್ಣುಗಳು ಉಂಡೆ ಉಂಡೆಯಾಗಿ ಬೆಂಕಿಯ ಕನಲಿನಂತೆ ಹೊಳೆಯುತ್ತಿದ್ದವು. ಕೊರಳ ಸೆರೆಗಳು ಉಬ್ಬಿದ್ದುವು. ಅವರು ಮುಷ್ಟಿ ಬಿಗಿದು ಕೈಯೆತ್ತರಿಸಿ ಬಯ್ಗಳಿನ ಮಳೆ ಕರೆಯುತ್ತಿದ್ದರು. ಒಳಗೆ ಕುಳಿತ ಅವರ ವಿದ್ಯಾರ್ಥಿಗಳು ಅವಾಕ್ಕಾಗಿ ನೋಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಾಗಿಲ ಮುಂದೆ ಶಾಲೆಗೆ ಶಾಲೆಯೇ ಸೇರಿತು.

ನಂತರ ಅವರನ್ನು ಅಧ್ಯಾಪಕರ ಕೋಣೆಗೆ ಒಯ್ಯಲಾಯಿತು. ಯಾರೋ ಅವರ ಮುಖಕ್ಕೆ ತಣ್ಣೀರು ಎರಚಿದರು. ಬಾಯಿಗೆ ನೀರು ಹಾಕಿದರು. ಮತ್ತೆ ತಮ್ಮ ತಮ್ಮೊಳಗೆ ಗುಸಗುಸ ಮಾತಾಡಿಕೊಳ್ಳತೊಡಗಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮೋನ್ಮಾದ
Next post ಮಿಂಚುಳ್ಳಿ ಬೆಳಕಿಂಡಿ – ೫೮

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…