ನಿಂಗನ ನಂಬಿಗೆ

ನಿಂಗನ ನಂಬಿಗೆ

ಚಿತ್ರ: ಆಮೀರ್‍ ಮೊಹಮ್ಮದ್ ಖಾನ್

ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ – ತಾನು ಮಲೆನಾಡ ಮಗಳೆಂದು ! ಊರ ಸುತ್ತಲೂ ಎಲೆ ತೋಟಗಳು, ತೋಟಗಳಲ್ಲಿ ಯಾವಾಗಲೂ ಕಿರಚುವ ಯಾತದ ಬಾವಿಗಳು, ಗಿಡಗಳಲ್ಲಿ ಸುಳಿದು ಮೈಗೆ ತಂಪನ್ನುಂಟು ಮಾಡುವ ಗಾಳಿ – ಹೊಸೂರಿಗೆ ಒಂದು ಬಗೆಯ ಕಳೆ ತಂದು ಕೊಟ್ಟಿದೆ. ಊರ ಹತ್ತಿರವೇ ಒಂದು ಚಿಕ್ಕ ಹಳ್ಳ ಹರಿಯುತ್ತಿದೆ. ಆ ಹಳ್ಳದ ಎರಡೂ ಪಕ್ಕಕ್ಕೆ ಹಾಯಾಗಿ ಒರಗಿರುವ ಪಚ್ಚ ಪಯರಿನ ಹೊಲಗಳು, ಪರ‌ಊರಿಂದ ಬಂದವರಿಗೆ, ಹೊಸೂರ ಹೆಮ್ಮೆಯನ್ನು ಗೊತ್ತು ಮಾಡಿ ಕೊಡುವದರಲ್ಲಿ ಸಂದೇಹವಿಲ್ಲ!

ಹೊಸೂರು ಚಿಕ್ಕದೆಂದು ಮೊದಲೇ ಹೇಳಿದ್ದೇನೆ. ಹೊಸೂರು ಪ್ರವೇಶಿಸುವವರಿಗೆ ಮೊದಲು ಕಣ್ಣಿಗೆ ಬೀಳುವವು-ಗುಡಿಸಲು, ತುಸು ಒಳಗೆ ಬಂದರೆ ಹಂಚಿನ ಚಪ್ಪರಗಳು, ಊರ ಮಧ್ಯದಲ್ಲಿ ನಾಲ್ಕಾರು ದೊಡ್ಡ ಮನೆಗಳು. ಆಯಿತು ಇದುವೇ ಹೊಸುರು! ಈ ಚಿಕ್ಕ ಹಳ್ಳಿಯಲ್ಲಿ ತೋಟದ ಸ್ವಾಮಿ ರಾಯರನ್ನು ಅರಿಯದವರಾರೂ ಇಲ್ಲ. ಸ್ವಾಮಿರಾಯರು ಊರ ಪ್ರತಿಷ್ಠಿತ ಗೃಹಸ್ಥರಲ್ಲೊಬ್ಬರು. ಜನರಲ್ಲಿ ಬೆರೆತು ಬದುಕುವ ಹದವು ಅವರಿಗೆ ಜನ್ಮತಃ ಬಂದುದು, ಹೊಸೂರು ಹಳ್ಳದ ಹತ್ತಿರವೇ ಅವರಿಗೊಂದು ತೋಟವಿದೆ. ತುಸು ಮುಂದಕ್ಕೆ ಹೋದರೆ ಅಲ್ಲಿಯೊಂದು ಅವರ ಹೊಲವೂ ಉಂಟು. ಊರ ಮಧ್ಯದಲ್ಲಿ ಅಷ್ಟು ದೊಡ್ಡದಲ್ಲದಿದ್ದರೂ- ತೀರ ಸಣ್ಣದಲ್ಲದ ಮನೆ ಇದೆ. ಮನೆಯ ಮಡದಿಯಂತೂ ರಾಯರ ಮಹಾಲಕ್ಷ್ಮಿಯೇ ಸರಿ ! ರಾಯರಿಗೆ ಒಂದು ಗಂಡು ಹಾಗು ಒಂದು ಹೆಣ್ಣು ಹೀಗೆ ಸಂತತಿ. ಒಟ್ಟಿನ ಮೇಲೆ ರಾಯರು ಸುಖಿಗಳು. ಸ್ವಾಮಿರಾಯರು ಊರ ಜಗಳಗಳು ಹಬ್ಬದಂತೆ ಹಾಗೂ ಜನರ ಮನಸ್ಸು ನೋಯದಂತೆ ಹದವಾಗಿ ಮಾತನಾಡಿ ಹಳ್ಳಿಯ ವಾತಾವರಣವನ್ನು ತಿಳಿಯಾಗಿಡುವದರಲ್ಲಿ ಬಹುಬಲ್ಲಿದರು. ಸುತ್ತು ಮುತ್ತಣ ಹಳ್ಳಿಗಳಲ್ಲಿಯೂ ಅವರ ಮಾತಿಗೆ ಒಂದು ಬೆಲೆ ಇದೆ.

ಸ್ಪಾಮಿರಾಯರಿಗೆ ಆ ಊರ ಸಂಗಣ್ಣ ಶೆಟ್ಟರಮೇಲೆ ವಿಶ್ವಾಸ ಬಹಳ. ಸಂಗಣ್ಣ ಶೆಟ್ಟರಾದರೂ ರಾಯರಲ್ಲಿ ಒಂದು ಗೆಳೆತನದ ಸಲುಗೆಯಿಂದ ಮಾತನಾಡುವರು, ನಗುವರು, ಚೇಷ್ಟೆ ಮಾಡುವರು. ಪ್ರತಿದಿವಸ ಸಂಜೆಗೆ ಶೆಟ್ಟರೂ ಸ್ವಾಮಿರಾಯರೂ ಕೂಡಿ ತೋಟದ ಕಡೆಗೆ ತಿರುಗಾಡುವದಕ್ಕೆ ಹೋಗುವ ರೂಢಿ, ಸಂಜೆಯಾಗುತ್ತಲೇ ರಾಯರು ತಮ್ಮ ಬಿಳಿ ರುಮಾಲ ತಲೆಗೆ ಸುತ್ತಿ, ಕಾಲಲ್ಲಿ ಮೊಚ್ಚೆ ಮೆಟ್ಟಿ, ಶೆಟ್ಟರ ಅಂಗಡಿಗೆ ಬಂದು ಏಳಪಽ ಶೆಟ್ಟಿ ನಿನ್ನ ಹೊಟ್ಟೆ ಇಷ್ಟ ಕರಗಲಿ!” ಎಂದು ಚೇಷ್ಟೆ ಮಾಡುವರು. ಶೆಟ್ಟೆಯಾದರೂ ವಿನೋದ ಪ್ರಿಯ. ಶೆಟ್ಟಿಯ ಹೊಟ್ಟೆ ಬೆಳೆದರ ಊರಾಗಿನ ನಾಕ ಜನಕ್ಕೆ ಸಾಲ ಸಿಕ್ಕಿತು ತಿಳಿತ ?” ಎಂದು ಗಹಗಹಿಸಿ ನಗುವ. ಹೀಗೆ ಚೇಷ್ಟೆ ಮಾಡುತ್ತ ಇಬ್ಬರೂ ತೋಟಕ್ಕೆ ಹೋಗುವರು. ಪ್ರತಿದಿವಸದಂತೆ ರಾಯರು ಒಂದು ದಿನ ಶೆಟ್ಟಿಯನ್ನು ಕರೆದುಕೊಂಡು ತೋಟಕ್ಕೆ ಹೊರಟಾಗ ಶೆಟ್ಟಿ ಸುಮ್ಮನೆ ಬರುವದನ್ನು ಕಂಡು ಸ್ವಾಮಿರಾಯರು “ಯಾಕೊ… ಶೆಟ್ಟಿ ಬಹಳ ವಿಚಾರ ನಡದದ?” ಎಂದರು.

“ಸ್ವಾಮಿರಾಯ! ಬಾಳೇವು ಬದಕು ಬೆಳಿಬೇಕಾದರ……. ನಾವು ಸಮ್ಮನ ಇರಾಕ ಆಗುದುಲ್ಲಾ….”

“ಅಂದರೇನೋ ಸ್ಪಷ್ಟ ಹೇಳಲಾ”

“ಇಷ್ಟೂ ತಿಳಿಬಾರದ ನಿನಗ… ನಿನ? ಇದ್ದದ್ದು ಇಟಕೊಂತ ಹೋದರ ಸಾವುಕಾರ ಹ್ಯಾಂಗ ಆಗೋದು?”

“ಅಂದರ ತುಡುಗ ಮಾಡಬೇಕಂತಿಯೇನು?”

“ಅಲಲಲ! ಇದಕ ನೋಡ ನಿಮಗಽ……….. ರಾಯರಿಗೆ ಬುದ್ಧಿ ಇಲ್ಲ ಅನ್ನೊದು”

“ಅಲ್ಲೋ ಶೆಟ್ಟಿ ಇದ್ದ ಬುದ್ಧಿ ಎಲ್ಲ ಸಾವುಕಾರ ಆಗೋದಕ್ಕೆ ಖರ್ಚು ಮಾಡಿ ಬಿಡಬೇಕಂತಿ ಏನು?” ಎಂದು ರಾಯರು ನಗುತ್ತಿರುವಾಗಲೇ ಎದುರಿನಲ್ಲಿ ನಾಲ್ಕಾರು ಹಳ್ಳಿಗರು ದನ ಹೊಡೆದುಕೊಂಡು ಬರುವದನ್ನು ಕಂಡು ಶೆಟ್ಟಿ “ಸ್ವಾಮಿರಾಯ, ಈ ಒಕ್ಕಲಿಗರಿಗೆ ಹಿಂದೆ ಮುಂದಿನ ವಿಚಾರನ ಇರುದುಲ್ಲ ನೋಡು” ಎಂದು ನುಡಿದ. ಅದಕ್ಕೆ ಸ್ವಾಮಿರಾಯ ಪ್ರತಿಯಾಗಿ “ಅವರಿಗೆ ಇಲ್ಲದ ಹವ್ಯಾಸ ಇರುದುಲ್ಲ ನೋಡು. ಚಿಂತಿ ಅವರ ಹತ್ತಿರ ಬರುದುಲ್ಲ” ಎಂದು ನುಡಿದು ತಮ್ಮ ಕೈಬಡಿಗಿ ಬೀಸಿದರು. ರಾಯರು ನುಡಿದ ಮಾತಿನಿಂದ ಶೆಟ್ಟಿಯ ಮನಸ್ಸು ತಿಳಿಯಾಗಲಿಲ್ಲ. ಶೆಟ್ಟಿಯು ಏನೋ ಯೋಚನೆ ಮಾಡಿದಂತೆ ಮಾಡಿ “ಸ್ವಾಮಿರಾಯ ನೀ ತ್ವಾಟದಾಗಿರು… ನಾ ಈಗ ಬರತೆನಿ” ಎಂದು ಹೇಳಿ, ದನ ಹೊಡೆದುಕೊಂಡು ಬರುವ ಜನರ ಕಡೆಗೆ ನಡೆದು ಬಿಟ್ಟ ! ಸ್ವಾಮಿರಾಯ ಸಾವುಕಾಶವಾಗಿ ತೋಟವನ್ನು ಹೊಕ್ಕು ತೋಟದಲ್ಲಿಯ ಸೊಬಗನ್ನು ಕಂಡು ಹಿಗ್ಗಿ ಬಾವಿಯ ಕಟ್ಟೆಯ ಮೇಲೆ “ರಾಮ ರಾಮ” ಎಂದು ಕುಳಿತುಕೊಂಡರು.

ಸಂಗಣ್ಣ ಶೆಟ್ಟರು ತಮ್ಮ ಕಡೆಗೆ ಬರುವುದನ್ನು ಕಂಡು ಒಕ್ಕಲಿಗರು ವಿನಯದಿಂದ ನಿಂತು “ಶರಣರೀ ಶೆಟ್ಟರ” ಎಂದು ನಮಸ್ಕಾರ ಮಾಡಿದರು. ಶೆಟ್ಟರು “ಏ ನಿಂಗ್ಯಾ ನಾ ನಿನಗ ಎಷ್ಟ ಹೇಳಬೇಕು ಅಂಗಡೀಕಡೇಬಾ ಅಂತ.” ಎಂದು ನಿಂಗನ ಕಡೆಗೆ ನೋಡಿ ಗದ್ದರಿಸಿದರು. ನಿಂಗ ಸಾವುಕಾಶ ವಾಗಿ “ಶೆಟ್ಟರ ಇನ್ನೆರಡ ದಿವಸ ತಡೀರಿ, ನಮ್ಮ ತಾಯಿ ಊರಿಗೆ ಹೋಗ್ಯಾಳರಿ” ಎಂದ.

“ಎಲೆ…. ನೀ ಬಾಳ ಬೆರಕಿ ಆದೇಳು. ನೀ ಬಾಳ ನಿಮ್ಮ ಅವ್ವನ ಮಾತ ಕೇಳಾವ, ಸಾಲಾ ಮಾಡುಮುಂದ ನಿಮ್ಮ ಅವ್ವನ್ನ ಕೇಳಿ ಮಾಡಿದ್ದೇನು?” ಶೆಟ್ಟರ ಸಿಟ್ಟು ಕಣ್ಣಿನಲ್ಲಿ ಕಾಣಿಸಿಕೊಂಡಿತು. ಇವರ ಮಾತಿಗೆ ಇನ್ನುಳಿದ ಒಕ್ಕಲಿಗರು ಬಿದ್ದು ಬಿದ್ದು ನಕ್ಕರು. ನಿಂಗನು ಮಾತ್ರ ಹುಚ್ಚನಂತೆ ನಿಂತು ಕೊಂಡ. ಸಾಲದ ಶೂಲ ಸಾಮಾನ್ಯವೆ ? ಒಕ್ಕಲಿಗರ ಗುಂಪಿನಲ್ಲೊಬ್ಬ “ಏ ನಿಂಗಣ್ಣ, ನೀ ಸಣ್ಣ ಹುಡುಗ, ನಿನಗೆ ತಿಳ್ಳಾಕಿಲ್ಲ ಕೇಳು-ಶೆಟ್ಟರ ಮರ್ಜಿ ಕಳಕೊಂಡರ ನೀ ಬಾಳೇವು ಹ್ಯಾಂಗ ಮಾಡಿ? ಹೋಗು, ಶೆಟ್ಟರು ಹ್ಯಾಗ ಹೇಳತಾರ ಹಾಗ ಮಾಡು. ಅವರು ಬಡವರ ಭಾಗ್ಯೆವು ತಿಳಿತ ಮಳ್ಳ!” ಎಂದ, ಅದಕ್ಕೆ ನಿಂಗ ನಿರ್ವಾಹವಿಲ್ಲದೆ “ಆತರಿ ಶೆಟ್ಟರ ರಾತ್ರಿ ನಿಮ್ಮ ಅಂಗಡಿ ಕಡ್ಯಾಕ ಬರತೇನಿ” ಎಂದು ದನಗಳನ್ನು ಮುಂದೆ ಹೊಡೆದ. ಇತ್ತ ಶೆಟ್ಟರು ತ್ವರಿತ ಹೆಜ್ಜೆ ಹಾಕುತ್ತ ಸ್ವಾಮಿರಾಯರ ತೋಟ ಸೇರಿದರು.

ಈ ಸಂಗತಿ ಜರುಗಿ ನಾಲ್ಕಾರು ದಿನಗಳಾಗಿರಬಹುದು. ಎಂದಿನಂತೆ ಸ್ವಾಮಿರಾಯರು ಸಾಯಂಕಾಲ ತಮ್ಮ ತೋಟಕ್ಕೆ ಹೋಗಿದ್ದರು. ತಿರುಗಿ ಬರಬೇಕಾದರೆ ತುಸು ಕತ್ತಲೆಯೇ ಆಯಿತು. ವೇಳೆಯಾಯಿತೆಂದು ಗಡಿ ಬಿಡಿಯಿಂದ ಮನೆಗೆ ಬಂದು ಸೇರಿದರು. ರಾಯರು ಮನೆಗೆ ಬಂದಾಗ ಮನೆಯ ಪಡಸಾಲೆಯಲ್ಲಿ ನಿಂಗನ ತಾಯಿ, ಮಲ್ಲ ರಾಯರ ಮಡದಿಯೊಡನೆ ಏನೋ ದುಃಖ ತೋಡಿಕೊಳ್ಳುತ್ತ ಕುಳಿತಿದ್ದರು. ರಾಯರು ಬಂದೊಡನೆ ಅವರ ಕಾಲಿಗೆ ಬಿದ್ದು “ಎಪ್ಪಾ ನನ್ನ ನಿಂಗನ್ನ ಉಳಸರಿ” ಎಂದು ಅಳಹತ್ತಿದಳು. ರಾಯರಿಗೆ ಇದಾವದು ತಿಳಿಯದೆ “ಏ ಮಲ್ಲವ್ವ ಎದ್ದರ ಏಳು. ನಿನಗೇನಾಗೇದ ಹೇಳು” ಎಂದು ಸಮಾಧಾನ ಮಾಡಿದರು. ಮಲ್ಲವ್ವ ಬಿಕ್ಕುತ್ತ “ಎಪ್ಪ ನಮ್ಮ ಊರ ಮುಂದಿನ ಹೊಲಾ ಶೆಟ್ಟರ ಬಾಯಾಗ ಬಿತ್ತರಿ ಹ್ಯಾಗಾರ ಮಾಡಿ ಬಡವ ನಿಂಗನ್ನ ಉಳಸರಿ, ನಾ ಊರಿಗೆ ಹೋದಾಗ ಶೆಟ್ಟರು ನಿಂಗನ್ನ ಬೆದರಸಿ ಕಾಗದ ಬರೆಸಿಕೊಂಡಾರ್ರಿ.”

“ನಿಂಗ ಶೆಟ್ಟರ ಕಡೆ ಯಾಕ ಸಾಲಾ ಮಾಡಿದ್ದ?”

“ನಾ ಊರಿಗೆ ಹೋದದ್ದು ನೋಡಿ ಹೊಲ ಬರೆಸಿಕೊಂಡಾರಿ-ಬೆದರಿಸಿ, ನಮ್ಮ ನಿಂಗ ಎತ್ತು ಕೊಳ್ಳಾಕ ನೂರು ರೂಪಾಯಿ ತಂದಿದ್ದ!” ರಾಯರು ತುಸು ಅತ್ತ ಇತ್ತ ಶತಪಥ ಮಾಡಿ ಲೋಡಿಗೆ ಆತು ಕುಳಿತು ಕೊಂಡರು. ಅಂದು ಶೆಟ್ಟಿಯು ತಮ್ಮೆದುರಿನಲ್ಲಿ ತನ್ನ ಸಾವುಕಾರಿಕೆ ಹೆಚ್ಚಿಸುವ ದರ ಬಗ್ಗೆ ಮಾತನಾಡಿದ ಸಂದಿಗ್ಧ ಮಾತುಗಳ ಅರ್ಥ ರಾಯರಿಗೆ ಹೊಳೆಯಿತು. ಬಡ ನಿಂಗನ ಗೋಣು ಮುರಿಯುವ ಹಂಚಿಕೆ ಕಂಡು ಮನದಲ್ಲಿ ಮರುಗಿ “ಏ…. ಮಲ್ಲವ್ವ ನಿನ್ನ ಮಾರಿ ನೋಡಿ ನಾ ರೂಪಾಯಿ ಕೊಡತೇನಿ ಹೊಲಾ ಬಿಡಿಸಿಕೋ ತಿಳಿತಿಲ್ಲೊ”

“ಎಪ್ಪಾ ದೇವರು ನಿಮಗ ಚಲೋದು ಮಾಡ್ಲ್ರಿ” ಎಂದು ಹಾಡಿ ಹರಿಸಿ ಮಲ್ಲವ್ವ ಮನೆಗೆ ಹೋದಳು.

ನಿಂಗ ಮಲ್ಲವ್ವ ಕೂಡಿ ತಮ್ಮ ಹೊಲ ಬಿಡಿಸಿಕೊಂಡದ್ದು ಶೆಟ್ಟರಿಗೆ ಕೆಲವು ದಿವಸ ಒಡೆಯಲಾರದ ಒಗಟವಾಯಿತು. ತಮ್ಮ ಹೊಲದ ಹತ್ತರವೇ ಇರುವ ನಿಂಗನ ಹೊಲ ತಮಗೆ ಬರಬೇಕೆಂದು ಹಾಕಿದ ಶೆಟ್ಟರ ಹೊಂಚು ಬಯಲಾಯಿತು. ಶೆಟ್ಟಿಯೂ ಸೂಕ್ಷ್ಮವಾಗಿ ವಿಚಾರಮಾಡಿ ಕೊನೆಗೆ ಸ್ವಾಮಿ ರಾಯನೇ ಇದಕ್ಕೆ ಕಾರಣವೆಂದು ತಿಳಿದು ಮನದಲ್ಲಿಯೇ ಸ್ವಾಮಿರಾಯನ ಬಗ್ಗೆ ಮತ್ಸರ ಬಡಹತ್ತಿದ. ಎದುರು ಮಾತನಾಡವಷ್ಟು ಧೈರ್ಯ ಶೆಟ್ಟರಿಗಿರದಿದ್ದರೂ ಸ್ವಾಮಿರಾಯರನ್ನು ಹಿಂದೆ ಅಲ್ಲಗಳೆಯುವದಕ್ಕೆ ಪ್ರಾರಂಭ ಮಾಡಿದರು. ಮೂರು ನಾಲ್ಕು ವರುಷಗಳು ಹೀಗೆಯೇ ಗತಿಸಿದವು. ಈಗ ಸ್ವಾಮಿರಾಯರ ಹಿರಿಯ ಮಗ ಮುಂಬಯಿಯಲ್ಲಿ ಕಲಿಯುವದಕ್ಕೆ ಹೋಗಿದ್ದ. ಮಗಳ ಮದುವೆಯಂತೂ ಮಾಡಲೇ ಬೇಕಾಗಿತ್ತು. ಸ್ವಾಮಿರಾಯರು ದುಡ್ಡಿನ ತೊಂದರೆಯಲ್ಲಿ ಮುಳುಗಿ ಏಳುತ್ತಿದ್ದರು. ಪ್ರತಿದಿವಸ ರಾಯರಿಗೂ ಅವರ ಪತ್ನಿಗೂ ಮಗಳ ಮದುವೆಯ ಬಗ್ಗೆ ವಾದವು ನಡೆಯುತ್ತಲೇ ಇದ್ದಿತು. ರಾಯರು ಮನಸ್ಸಿನಲ್ಲಿಯೇ ಕೊರಗಿ ಸೊರಗುತ್ತಿದ್ದರು. ಮತ್ತು ಇತ್ತಿತ್ತ ಲಾಗಿ ಶೆಟ್ಟಿಯ ಕಡೆಗೆ ಹೋಗುವುದನ್ನೇ ಬಿಟ್ಟಿದ್ದರು. ಇದರ ಅರ್ಥವನ್ನು ಶೆಟ್ಟೆ ಬೇರೆಯಾಗಿಯೇ ಮಾಡಿಕೊಂಡ ! ಒಂದು ದಿನ ರಾಯರು ತೋಟಕ್ಕೆ ಹೋಗಿ ಎಂದಿನಂತೆ ತೋಟದ ಬಾವಿಯ ಕಟ್ಟೆಯ ಮೇಲೆ ಕುಳಿತುಕೊಂಡರು. ಮನಸ್ಸು ಮಾತ್ರ ಚಿಂತೆಯನ್ನೇ ನೇಯುತ್ತಿತು. ವಿಚಾರ…….. ವಿಚಾರ ತಲೆ ತುಂಬೆ ವಿಚಾರ ! ಹೀಗಿರುವಾಗ ಅವರಿಗೆ ಒಂದು ಯೋಚನೆ ತಟ್ಟನೆ ಹೊಳೆಯಿತು. ತಮ್ಮ ತೋಟಿಗ ಹಿಡಿತದಿಂದ ಬಾಳುವೆ ಮಾಡುವವ, ಅವನ ಹತ್ತಿರ ತುಸು ದುಡ್ಡು ಸಿಗಬಹುದು. ಆದ್ದರಿಂದ ಸಾಲ ಕೇಳಬೇಕೆಂದು ನಿರ್ಧರಿಸಿ, ಅಲ್ಲಿಯೇ ಬಾಳೆಗಿಡಗಳಿಗೆ ನೀರು ತಿರುವುತ್ತಿರುವ ಕರಿಯಪ್ಪನಿಗೆ “ಏ ಕರಿಯಪ್ಪ ಬಾ ಇಲ್ಲೆ” ಎಂದು ಕೂಗಿದರು.

ಕರಿಯಪ್ಪ ರಾಯರಿಗೆ ಮನ್ನಣೆ ಕೊಟ್ಟನೋ ಇಲ್ಲವೋ ಎನ್ನುವಂತೆ ಬಂದು ತುಸು ಗಡುಸು ಧ್ವನಿಯಲ್ಲಿ “ಯಾಕರೀ……. ರಾಯರಽ ಎಂದ. ರಾಯರು ತುಸು ಮೆಲ್ಲಗೆ “ಕರಿಯಪ್ಪಾ ನಾ ನಿನಗೊಂದು ಮಾತಕೇಳತೇನಿ” ಅದಕ್ಕೆ ಕರಿಯಪ್ಪ “ಆದೇನ್ರೀ….ಅಂಥಾದು” ಎಂದು ಸಂಶಯವನ್ನೇ ತೆಗೆದುಕೊಂಡ. ರಾಯರು ಅವನ ವಿಚಿತ್ರ ರೀತಿಯನ್ನು ಕಂಡು ಚಕಿತರಾಗಿ “ಮತ್ತೇನು ಇಲ್ಲ, ನಿನ್ನ ಕಡೆ ಒಂದು ಸಾವಿರ ರೂಪಾಯಿ ಇದ್ದರ ಕೊಡು ಸಾಲ ಅಂತ” ಎಂದರು. ಕರಿಯ ತುಸು ನಕ್ಕು “ರಾಯರ್ಽ ನಿಂಗನ್ನರ ಕೇಳ್ರಿ. ನಿಮ್ಮ ತೋಟ ಮಾಡಾಕ ಅಡ್ಯಾಡಾಕ ಹತ್ಯಾನು” ಎಂದು ಕೊಂಕು ನುಡಿದ. ಶೆಟ್ಟಿ ಊರಿದ ಬೀಜ ಮೊಳಕೆ ಒಡೆದಿತ್ತು! ಈ ರೀತಿಯ ಮಾತುಗಳನ್ನು ಕರಿಯನಾಡುವನೆಂದು ರಾಯರು ತಿಳಿದಿರಲಿಲ್ಲ. ಅವರಿಗೆ ತುಸು ಅಸಹ್ಯವೆನಿಸಿತು.

“ಕರಿಯಪ್ಪ ನೀ ನನ್ನ ತೋಟಿಗ, ನಿನ್ನ ಬಿಟ್ಟು ಯಾರಿಗೂ ತೋಟ ಕೊಡೂದಿಲ್ಲ. ನೀನು ನನಗ ಸಾಲಕೊಡೂದು ಬ್ಯಾಡ” ಎಂದು ಹೇಳಿ ಮತ್ತೆ ನಿನ್ನ ಕೆಲಸ ಮಾಡು; ನಾ ಹರಕತ್ತ ಮಾಡಿದೆ” ಎಂದರು. ಕರಿಯ ಸಾವಕಾಶವಾಗಿ ಕಾಲ್ದೆಗೆದ; ಧಾರಣಿಗಳ ಏರು ಇಳಿತಗಳಿಂದ ತೋಟದಲ್ಲಿ ಅವರಿಗೆ ಬರುವಷ್ಟು ಬರುತ್ತಿರಲಿಲ್ಲ. ಶೆಟ್ಟರ ಪ್ರೋತ್ಸಾಹದಿಂದ ತೋಟಿಗ ಕರಿಯಪ್ಪ ಮೊದಲಿನಂತೆ ದುಡಿಯದಾದ, ಮುಂಬಯಿಯಲ್ಲಿದ್ದ ಮಗನಿಗೆ ಪ್ರತಿ ತಿಂಗಳ ಹಣಕಳಿಸಬೇಕು. ರಾಯರಿಗೆ ಯಾವ ವಿಚಾರವೂ ಹೊಳೆಯದಾಯಿತು. ವಿಚಾರದಿಂದ ತಲೆ ಭಾರವಾಗಿರಲು ರಾಯರು ಮನೆಯ ಕಡೆಗೆ ಸಾವಕಾಶವಾಗಿ ಹೊರಟರು. ಸುತ್ತಲೂ ಕತ್ತಲು ಕವಿಯುತ್ತಿತ್ತು!

ರಾಯರ ಮನೆಯ ಹಾದಿಯಲ್ಲಿಯೇ ಸಂಗಣ್ಣ ಶೆಟ್ಟರ ಅಂಗಡಿ. ರಾಯರು ಅಂಗಡಿಯ ಮುಂದೆ ಬರುವದಕ್ಕೂ ಶೆಟ್ಟಿ, ಹೊರಗೆ ಬರುವದಕ್ಕೂ ಸರಿಹೋಯಿತು! ಶೆಟ್ಟಿ ಒಮ್ಮೆಲೆ “ರಾಯರ್ಽ ಬರ್ರಿ…. ಯಾಕೋ ಬಹಳ ಸೊರಗೀರಿ? ನಮ್ಮ ಕಡ್ಯಾಕ ಈಗ ಬರೋದ ಬಿಟ್ಟಿರಿ!” ಎಂದು ರಾಯರನ್ನು ಮಾತನಾಡಿಸಿದ.

“ಶೆಟ್ಟೀ ಮನಸ್ಸಿನ್ಯಾಗ ಆರಾಮ ಇಲ್ಲ…. ನಡದದಽತೀರಿತು” ಎಂದು ನಿರುತ್ಸಾಹದ ಧ್ವನಿಯನ್ನು ಎಳೆದರು.

“ಬರೀ ಸ್ವಾಮಿರಾಯರ ಒಳ್ಯೇಕ. ಕುಂದರಿ….”ಎಂದು ಶೆಟ್ಟಿ ರಾಯರನ್ನು ಒಳಗೆ ಕರೆದ. ಅಂಗಡಿಯಲ್ಲಿ ಜನರೂ ಇರಲಿಲ್ಲ. ಈಗಾಗಲೇ ರಾತ್ರಿಯೂ ಆಗಿದ್ದಿತು; ರಾಯರು “ಶೆಟ್ಟಿ ನಿನ್ನ ಸಾವಕಾರಿಕಿ ದಿನ ದಿನ ಬೆಳೀಲಿಕ್ಕೆ ಹತ್ತಿತು. ಆದರ ನನಗ ದುಡ್ಡಿನ ಕೊರತಿ ತಪ್ಪಲೊಲ್ಲದು ” ಎಂದು ಲೋಡಿಗೆ ಆತು ಕುಳಿತು ನುಡಿದರು. ಶೆಟ್ಟಿ ಮುಗುಳು ನಗೆ ನಕ್ಕು:-

“ನಾ ಅದೀನಿ ನಿಮಗ್ಯಾಕ ರೂಪಾಯಿ ಚಿಂತಿ? ಎಷ್ಟು ಬೇಕು ಅಷ್ಟು ತೊಗಳರಿ” ಎಂದು ಒಮ್ಮೆಲೆ ನುಡಿದ.

“ಶೆಟ್ಟಿ ನಿನ್ನಂತ ಗೆಳೆಯಾ ಇದ್ದರ ನನಗೇನ ಚಿಂತಿ?”

“ನಮಗೇನ್ರಿ ರಾಯರ ಸಾಲಾಕೊಡೋರು…. ತೊಗಳ್ರೆಲ ರೂಪಾಯಿ” ಎಂದ.

“ಶೆಟ್ಟಿಯ ವ್ಯವಹಾರ-ಚಾತುರ್ಯ ರಾಯರಿಗೆ ಹೊಳೆಯಲಿಲ್ಲ. ಶೆಟ್ಟಿಯ ಕಡೆಯಿಂದ ಎರಡು ಸಾವಿರ ರೂಪಾಯಿ ಸಾಲವಾಗಿ ತೆಗೆದುಕೊಂಡು ಮನೆಗೆ ಬಂದರು.

ರಾಯರ ಮಗಳು ಪದ್ಮಯ, ವಿವಾಹದ ಕಾರ್ಯ ದುಡ್ಡಿನ ತೊಂದರೆಯಲ್ಲಿ ಹಿಂದು ಬಿದ್ದಿತ್ತು. ರಾಯರು ಈಗ ಮದುವೆಯ ವಿಚಾರ ಮುಂದುವರಿಸಿದರು. ತಮ್ಮ ಹಿಂದಿನ ಬೀಗತನದ ಸಂಬಂಧ ಪುನಃ ನೆನೆದುಕೊಂಡು ತಮ್ಮ ಹೆಂಡತಿಯ ತಮ್ಮ ಶ್ಯಾಮನಿಗೆ ಮಗಳನ್ನು ಕೊಡುವದು ನಿಶ್ಚೈಸಿದರು. ಮನೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿದರು. ವೈಶಾಖಮಾಸದಲ್ಲಿ ಲಗ್ನವಾಗ ತಕ್ಕದ್ದು. ರಾಯರ ಮಗನೂ ತನ್ನ ಪರೀಕ್ಷೆ ತೀರಿಸಿಕೊಂಡು ಊರಿಗೆ ಬಂದ. ಮದುವೆಯೂ ಆಯಿತು! ಮಗಳನ್ನು ಅತ್ತೆಯ ಮನೆಗೆ ಕಳುಹಿ ರಾಯರೂ ಅವರ ಪತ್ನಿಯ ಸುಖವಾಗಿ ಕುಳಿತುಕೊಂಡರು. ಆದರೆ ಶೆಟ್ಟಿಯು ಮಾತ್ರ ತನ್ನ ಜಾಲ ಹೆಣೆಯುತ್ತಲೇ ಇದ್ದ! ರಾಯರು ಶೆಟ್ಟಿಯನ್ನು ನಂಬಿದ್ದರು. ಆದರೆ ಆದಷ್ಟು ತೀವ್ರವಾಗಿ ಅವನ ಸಾಲ ತೀರಿಸಬೇಕೆಂದು ಯೋಚನೆಯನ್ನು ನಡಿಸಿದ್ದರು.

ಒಂದು ದಿನ ಮುಂಜಾನೆ ರಾಯರು ಸ್ನಾನ ತೀರಿಸಿಕೊಂಡು ಪಡಸಾಲೆಯಲ್ಲಿ ಲೋಡಿಗೆ ಆತು ಕುಳಿತುಕೊಂಡಿದ್ದರು. ಮುಖದ ಮೇಲೆ ಸಮಾಧಾನದ ಕಳೆಯು ಎದ್ದು ಕಾಣುತ್ತಿತ್ತು! ತಮ್ಮ ಬಾಯಿಯಲ್ಲಿಯೇ ಸಾವುಕಾಶವಾಗಿ “ಹರಿನಿನ್ನೊಲಮೆಯು ಆಗೋತನಕ… ಅರಿತು ಸುಮ್ಮನಿರುವದು ಲೇಸು” ಎಂದು ಗುಣುಗುಟ್ಟುತ್ತಿರುವಾಗಲೇ, ನಿಂಗ, ಮಲ್ಲವ್ವ ಬಂದು ರಾಯರಿಗೆ ನಮಸ್ಕಾರ ಮಾಡಿದರು.

“ಯಾಕ ಮಲ್ಲವ್ವ ಏನ ಬೇಕಾಗಿತ್ತು?” ಮಲ್ಲವ್ವ ನಿಂಗನ ಕಡೆಗೆ ನೋಡಿದಳು. ಮತ್ತೆ ರಾಯರು

“ನಿಂಗಾ ಮತ್ಯೇನ ಪೇಚ ತಂದೀದಿ?”

ನಿಂಗ ನಗುತ್ತ ಕಟ್ಟೆಯ ಮೇಲೆ ಕುಳಿತುಕೊಂಡ. ಮಲ್ಲವ್ವ ಮುಂದೆ ಬಂದು “ಎಪ್ಪಾ ನಾ ಒಂದ ಮಾತ ಕೇಳತೇನ್ರಿ ಸಿಟ್ಟಾಗಬ್ಯಾಡ್ರಿ.”

“ಏನಽ ಮಲ್ಲವ್ವ ನಾ ಎಂದರು ಸಿಟ್ಟಾಗಿ ಮಾತ ಆಡೇನ ? ಇರಲಿ ಈಗ ಏನ ಬೇಕು?”

ಮಲ್ಲವ್ವ ಸುತ್ತಲೂ ನೋಡಿ ಸಾವಕಾಶವಾಗಿ “ಎಪ್ಪಾ ನೀವು ಶೆಟ್ಟರ ಕಡೆ ಸಾಲಾ ತಂದೀರಂತ!”

ಮಲ್ಲವ್ವನ ಮಾತು ಮುಗಿಯುವದರಲ್ಲಿಯೇ “ನಿನಗ ಯಾರ ಹೇಳಿದರು ಈ ಮಾತು?” ಎಂದರು.

“ನಾ ನಿನ್ನೆ ಹೊಲದಿಂದ ಬರೋ ಮುಂದ ಶೆಟ್ಟರು ನಿಮ್ಮ ಹೆಸರು ತಗೊಂಡು ಒದರಾಡಾಕ ಹತ್ತಿದ್ದರ್ರಿ…. ಸಾಲಾ ವಯ್ದಿವರು ತಿರುಗಿ ಕೊಡ್ಲೇ ಇಲ್ಲ ಅಂತ”

ಈ ಮಾತನ್ನು ಕೇಳಿ ರಾಯರು ಮೌನವಾಗಿ ಕುಳಿತು ಬಿಟ್ಟರು. ದುಡ್ಡಿಗಾಗಿ ತಮ್ಮ ಮಾನ ಹೋಯಿತಲ್ಲ ಎಂದು ಮನದಲ್ಲಿಯೇ ನೊಂದರು. ಶೆಟ್ಟಿ ತಮ್ಮ ಮಿತ್ರನೆಂದು ನಂಬಿದ್ದರೂ – “ಶೆಟ್ಟಿ ತನ್ನ ಲೆಕ್ಕ ಬಿಡಲಿಲ್ಲ” ಎಂಬ ಮಾತು ಅವರ ಹೃದಯಕ್ಕೆ ಬಲವಾಗಿ ಚುಚ್ಚಿತು; ರಾಯರು ಸುಮ್ಮನೆ ಕುಳಿತದ್ದು ಕಂಡು ನಿಂಗ;

“ಎಪ್ಪ ನಾ ಬಡವ, ನಿಮಗೆ ಗೊತ್ತ್ಽ ಅಯಿತಿ. ಆದರ….ಽ”

“ಆದರ ಏನೋ ನಿಂಗ” ಎಂದು ರಾಯರು ಮೌನ ಮುರಿದರು.

“ನಮ್ಮ ಅವ್ವನ ಪುಣ್ಯದಿಂದ…. ಹಾಗೆ ದುಡುದು ಆಟ ಗಂಟ ಮಾಡೇನ್ರಿ….. ನಿಮಗ….?”

“ನೆಟ್ಟಗ ಹೇಳೋ ನಿಂಗ…. ಏನುಮಾಡಬೇಕಂತಿ ?”

“ಎಪಾ ನೀವು ಈ ಗಂಟು ಶೆಟ್ಟರಿಗೆ ಕೊಟ್ಟ ಬಿಡ್ರಿ…. ನಿಮ್ಮ ಮಾನ ಅಂದರೆ ನಮ್ಮ ಮಾನ ಇದ್ದಾಂಗ್ರಿ?”

ರಾಯರು ಮಲ್ಲವ್ವನ ಕಡೆಗೆ ನೋಡಿದರು. ಮಲ್ಲವ್ವ “ನೀವು….ಏನು ತಿಳಕೋ ಬ್ಯಾಡ್ರಿ…. ನಿಮ್ಮ ಹತ್ಯಾಕ ನಮ್ಮ ಗಂಟಿದ್ರ…. ನಮ್ಮ ಮನ್ಯಾಗ ಇದ್ದಾಂಗ್ರಿ, ನಿಮ್ಮ ಮ್ಯಾಲೆ ನಮ್ಮ ನಂಬಿಗೆ ಇಲ್ಲರೆ?” ಎಂದು ನುಡಿದು ತನ್ನ ಪೂರ್ಣ ಸಮ್ಮತಿ ಕೊಟ್ಟಳು.

ತಾಯಿ ಮಗನ ಮಾತು ಕೇಳಿ ರಾಯರು ಧ್ಯಾನ ಮಗ್ನರಾದರು. ಒಮ್ಮೆ ಮನಸ್ಸು ಸರಳ ಜೀವನದ ನಿಂಗನನ್ನು ಕೊಂಡಾಡುತ್ತಿತ್ತು; ಮತ್ತೊಮ್ಮೆ ಶೆಟ್ಟಿಯ ಹೀನ ವೃತ್ತಿಗೆ ಹೇಸಿಕೊಳ್ಳುತ್ತಿತ್ತು. ಮಲ್ಲವ ಇದಾವದನ್ನು ಅರಿಯದೆ “ಎಪ್ಪಾ ಸಂಜೀನ್ಯಾಗ ಬರತೇವಿ” ಎಂದು ಮಗನನ್ನು ಕರೆದುಕೊಂಡು ಹೊರಟೇ ಬಿಟ್ಟಳು. ರಾಯರ ಮಡದಿ ನಡುಮನೆಯ ಬಾಗಿಲಿನಲ್ಲಿ ನಿಂತು ಮೌನವಾಗಿ ಕುಳಿತ ರಾಯರನ್ನು ನೋಡುತ್ತಲೇ ಇದ್ದರು.

ಮೌನದಲ್ಲಿಯೂ ಒಂದು ದಿವ್ಯ ಸಮಾಧಾನವಿಲ್ಲವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಮಾನ
Next post ನನ್ನ ವೀಣೆಯು ಮಲಗಿದೆ!

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…