ನರಸಿಂಗ

ನರಸಿಂಗ

ನರಸಿಂಗ ಅನ್ನುವುದು ಗೋಪಾಲಕೃಷ್ಣ ಅಡ್ಯಂತಾಯರು ಪ್ರೀತಿ ದ್ವೇಷಗಳಿಂದ ಸಾಕಿದ ನಾಯಿಯ ಹೆಸರು. ಚೆನ್ನಾಗಿ ಮುದ್ದುಮಾಡುತ್ತಿದ್ದ ಅವರೇ ಕೆಲವೊಮ್ಮೆ ಅದಕ್ಕೆ ಕಣ್ಣು ಮೋರೆಯೆನ್ನದೆ ಹೊಡೆಯುತ್ತಿದ್ದರು. ಇನ್ನು ಕೆಲವೊಮ್ಮೆ ಮನೆಯಲ್ಲಿ ಇಂಥದೊಂದು ಪ್ರಾಣಿಯಿದೆಯೆಂಬ ಸಂಗತಿಯನ್ನೇ ಮರೆತುಬಿಟ್ಟಂತೆ ಅದನ್ನು ಕಡೆಗಣಿಸುತ್ತಿದ್ದುದೂ ಇತ್ತು. ಅಡ್ಯಂತಾಯರ ವಿವಿಧ ಮೂಡುಗಳು ನರಸಿಂಗನ ಮೇಲೆ ಪ್ರಕಟಗೊಳ್ಳುತ್ತಿದ್ದುವು. ಮೊದಮೊದಲು ಅಚ್ಚರಿಗೊಳ್ಳುತ್ತಿದ್ದ ನಾಯಿ ಕ್ರಮೇಣ ಇದೆಲ್ಲದಕ್ಕೂ ಹೊಂದಿಕೊಂಡ ಹಾಗಿತ್ತು. ಮುದ್ದು ಮಾಡಿದಾಗ ಹೆಚ್ಚಿನ ಲವಲವಿಕೆಯನ್ನು ತೋರುತ್ತಲೂ ಇರಲಿಲ್ಲ; ಒದ್ದು ಹೊಡೆದು ಮಾಡಿದಾಗ ಅತ್ತು ಕರೆದು ರಂಪ ಎಬ್ಬಿಸುತ್ತಲೂ ಇರಲಿಲ್ಲ. ಎಲ್ಲರಿಗೂ ಆಶ್ಚರ್ಯ ಕರವಾದ ರೀತಿಯಲ್ಲಿ ನರಸಿಂಗ ಒಂದು ತಾತ್ವಿಕ ಮನೋಧರ್ಮವನ್ನು ಬೆಳಿಸಿಕೊಂಡಂತೆ ಇತ್ತು.

ಅಡ್ಯಂತಾಯರಿಗೆ ನರಸಿಂಗ ದೊರಕಿದ್ದು ಒಂದು ಆಕಸ್ಮಿಕ. ಅವು ಮಳೆಗಾಲದ ಪೂರ್ವದ ದಿನಗಳಾಗಿದ್ದುವು. ಒಂದೇ ಸಮನೆ ಹೊಡೆಯುತ್ತಿದ್ದ ಬಿಸಿಲು ಒಮ್ಮೆಗೆ ಮಾಯವಾಗಿ ತಟ್ಟನೆ ಪಡುವಣದಲ್ಲಿ ಮೋಡಗಳು ತುಂಬಿ ಗಾಳಿ ಮಳೆ ರಪರಪನೆ ಹೊಡೆಯಲು ಸುರುವಾಯಿತು. ಕಾರ್ಯಾಧ ಕುಂಬಳೆಗೆ ಬಂದಿದ್ದ ಅಡ್ಯಂತಾಯರು ಈ ಅಕಾಲ ವರ್ಷದಿಂದ ಆಶ್ರಯ ಪಡೆಯಲೆಂದು ಪಕ್ಕದ ಅಂಗಡಿಯ ಮಾಡಿನ ಕೆಳಗೆ ಓಡಿಹೋಗಿ ನಿಂತರು. ಆಗಿನ್ನೂ ಅವರು ಕಾರು ಜೀಪುಗಳನ್ನು ತೆಗೆದುಕೊಂಡಿರಲಿಲ್ಲ. ಕಾರು ಜೀಪುಗಳನ್ನು ತೆಗೆದುಕೊಂಡುದು, ಬಸ್ ಸರ್ವೀಸ್ ಇಟ್ಟುದು ಎಲ್ಲ ಕೆಲವು ವರ್ಷಗಳ ನಂತರ. ಆದರೂ ಆ ಕಾಲಕ್ಕಾಗಲೇ ಗೋಪಾಲಕೃಷ್ಣ ಆಡ್ಯಂತಾಯರು ಕುಂಬಳೆಯ ಸುತ್ತಮುತ್ತಲಿನ ಗಣ್ಯರಲ್ಲಿ ಒಬ್ಬನೆಂದು ಹೆಸರುಗಳಿಸಿದ್ದರು. ಅವರಾಗಿಯೇ ಮಾಡಿನ ಕೆಳಗೆ ಆಶ್ರಯ ಪಡೆಯದೆ ಬೀದಿಯಲ್ಲಿ ಮಳೆಗೆ ನೆನೆದುಕೊಂಡು ಹೋಗುತ್ತಿದ್ದರೆ ಅವರನ್ನು ತಿಳಿದವರು ಓಡಿಬಂದು ತಮ್ಮ ಕೊಡೆಗಳನ್ನು ಹಿಡಿಯದೆ ಇರುತ್ತಿರಲಿಲ್ಲ.

ಆಡ್ಯಂತಾಯರು ಹಾಗೆ ಆಶ್ರಯಪಡೆದುದು ಒಂದು ಇಸ್ತ್ರಿ ಅಂಗಡಿಯ ಮುಂದೆ. ಸುಮಾರು ಮೂವತ್ತು ಮೂವತ್ತೈದು ವರ್ಷ ವಯಸ್ಸಿನ ಹೆಂಗಸೊಬ್ಬಳು ಕೆಂಪಗೆ ಕಾಯುತ್ತಿದ್ದ ಕೆಂಡಗಳನ್ನು ಇಸ್ತ್ರಿಯ ಪೆಟ್ಟಿಗೆಯಲ್ಲಿ ತುಂಬುತ್ತಿದ್ದಳು. ಆಡ್ಯಂತಾಯರ ಪರಿಚಯ ಆಕೆಗೆ ಖಂಡಿತ ಇದ್ದಿರಲಾರದು. ತಮಿಳುನಾಡಿನ ಯಾವುದೋ ಊರಿನಿಂದ ಕೆಲಸ ಹುಡುಕುತ್ತ ಬಂದವಳು ಅವಳು. ಅಡ್ಯಂತಾಯರನ್ನು ಕಂಡು ನಸು ನಕ್ಕಳು. ತಲೆ ಒರೆಸಲು, ತೊಳೆದು ಶುಭ್ರವಾದ ಬಟ್ಟೆ ಕೊಟ್ಟಳು.

ಸಂಜೆಯಾಗಿತ್ತು. ಮಳೆ ಜೋರಾಗುತ್ತ ಹೋಗುತ್ತಿತ್ತು. ತಮಿಳು ಹೆಂಗಸು ಆಡ್ಯಂತಾಯರಿಗೆ ಕೂಡಲು ಒಳಗಿನಿಂದ ಕುರ್ಚಿಯೊಂದನ್ನು ತಂದಿರಿಸಿದಳು. ಅದರಲ್ಲಿ ಕುಳಿತ ಆಡ್ಯಂತಾಯರ ಲಕ್ಷ್ಯ ಅಂಗಡಿಯ ಇನ್ನೊಂದು ಮೂಲೆಗೆ ಹರಿಯಿತು. ಒಂದು ಹೆಣ್ಣು ನಾಯಿ ತನ್ನ ನಾಲ್ಕಾರು ಮರಿಗಳೊಡನೆ ಮಲಗಿತ್ತು. ಮರಿಗಳು ಒಂದರಮೇಲೊಂದು ಬಿದ್ದು ನಿದ್ದೆ ಹೋಗಿದ್ದವು.

“ಈ ಮರಿಗಳು ಚೆನ್ನಾಗಿವೆ” ಎಂದರು ಅಡ್ಯಂತಾಯರು.

“ಹೂಂ”, ಎಂದಳು ಇಸ್ತ್ರಿಯವಳು. ಬಟ್ಟೆಯೊಂದನ್ನು ಮೇಜಿನ ಮೇಲೆ ಹರಡಿ ಪೆಟ್ಟಿಗೆ ಬಿಸಿಯಾಗುವುದಕ್ಕೆ ಕಾಯುತ್ತಿದ್ದಳು.

“ಒಂದನ್ನು ನಾನು ತೆಗೆದುಕೊಂಡು ಹೋಗಲೇ?”

“ಓಹೋ.”

ಮಳೆ ನಿಂತು ಅಡ್ಯಂತಾಯರು ಅಲ್ಲಿಂದ ಹೊರಡುವಾಗ ಬಹಳ ಹೊತ್ತಾಗಿತ್ತು. ಬೀದಿಗಿಳಿದವರನ್ನು ಆಕೆಯೇ ಕರೆದು, “ನಾಯಿಮರಿ ಬೇಕು ಎಂದಿದ್ದಿರಲ್ಲ?” ಎಂದು ಜ್ಞಾಪಿಸಿದಳು. “ಹೌದು, ಮರೆತೇ ಬಿಟ್ಟಿದ್ದೆ” ಎನ್ನುತ್ತ ಒಂದನ್ನು ಎತ್ತಿಕೊಂಡು ಹೊರಬಿದ್ದರು. ಕೊನೆಯ ಬಸ್ಸು ಹಿಡಿದು ನಾಲ್ಕು ಮೈಲಿ ದೂರದ ತಮ್ಮ ಊರಿಗೆ ಬಂದು ಸೇರಿದಾಗ ರಾತ್ರಿ ಹತ್ತು ಗಂಟಿ. ಈ ಮಧ್ಯೆ ಯಾರಿಗೂ ಕಾಣದಂತೆ ಆ ನಾಯಿ ಮರಿಯನ್ನು ಬಸ್ ಸ್ಟಾಂಡಿನಲ್ಲೋ ಮನೆ ತಲಪುವ ಮೊದಲು ಸಿಗುವ ಬಯಲಿನಲ್ಲೋ ಬಿಟ್ಟು ಬಿಡುವ ಯೋಚನೆ ಅವರ ತಲೆಯಲ್ಲಿ ಸುಳಿದಿತ್ತು. ಆದರೆ ಏಕೋ ಹಾಗೆ ಮಾಡದೆ ಹಾಗೆಯೇ ಮನೆಗೆ ತಂದಿದ್ದರು. ಬೇಕು ಬೇಡಗಳ ನಡುವೆ ತೀರ್ಮಾನಿಸಲಾರದೆ ಕೊಂಡವನ ಸ್ಥಿತಿಯಾಗಿತ್ತು ಅವರದು. ಪತ್ನಿ ಸುನಂದಮ್ಮ ನಾಯಿ ಮರಿಯನ್ನು ಸ್ವಾಗತಿಸಲಿಲ್ಲ. ಮೊಮ್ಮಗ ರವಿ ಸಂತೋಷದಿಂದ ಕುಣಿದಾಡಿದ. ಉಳಿದವರು ಯಾರೂ ತಮ್ಮ ಭಾವನೆಗಳನ್ನು ಪ್ರಕಟಪಡಿಸುವುದಕ್ಕೆ ಹೋಗಲಿಲ್ಲ. ಅಡ್ಯಂತಾಯರು ಕೆಲಸದಾಳು ಚನಿಯನಿಗೆ ಮರಿಯನ್ನು ಒಂದೆಡೆ ಮಲಗಿಸಲು ಹೇಳಿದರು. ರಾತ್ರಿಯೆಲ್ಲಾ ಅದು ತನ್ನ ತಾಯಿಯನ್ನು ಕಾಣದೆ ಅಳುತ್ತಲೇ ಇತ್ತು. ಅದಕ್ಕೆ ಸುನಂದಮ್ಮ ಗಂಡನನ್ನು ಸಾಕಷ್ಟು ತರಾಟೆಗೆ ತೆಗೆದುಕೊಂಡರು. ಅಡ್ಯಂತಾಯರು ಏನೂ ಹೇಳಲಿಲ್ಲ. ಅವರ ಮನಸ್ಸು ಬೇರೆ ವಿಚಾರಗಳಲ್ಲಿ ನೆಲಸಿದಂತೆ ಇತ್ತು.

ಅಡ್ಯಂತಾಯರು ಹಲವಾರು ಕೆಲಸ ಕಾರ್ಯಗಳನ್ನು ಹಚ್ಚಿಕೊಂಡು ಸದಾ ಆಚೀಚೆ ಓಡಾಡುತ್ತಿರುವ ವ್ಯಕ್ತಿ. ಅವರು ಮನೆಯಲ್ಲಿ ಇರುವುದೇ ಅಪರೂಪ-ಕುಂಬಳೆ, ಮಂಜೇಶ್ವರ, ಮಂಗಳೂರು, ಕಾಸರಗೋಡು, ಕಣ್ಣಾನೂರು, ಪುತ್ತೂರು ಉಪ್ಪಿನಂಗಡಿ, ಸುಳ್ಯ ಹೀಗೆ ತಲೆಗೆ ಹೊಕ್ಕ ಗುಂಗು ಒಯ್ದಲ್ಲಿಗೆ ಎದ್ದು ಹೋಗುತ್ತಿದ್ದರು. ಹೋದರೆ ಮತ್ತೆ ಅವರು ಮರಳುವುದು ಯಾವಾಗ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಮನೆಯಲ್ಲಿ ಅವರಿದ್ದ ದಿನವಂತೂ ಅವರನ್ನು ನೋಡಿ ಮಾತನಾಡಲು ಸಲಹೆ ವಿಚಾರಗಳನ್ನು ಪಡೆಯಲು ಬರುತ್ತಿದ್ದವರು ಅನೇಕ.

ಅವರಿಗೆ ಸ್ವಂತದ್ದಾಗಿ ಆಡಿಕೆ ವ್ಯಾಪಾರವಿತ್ತು. ಇದನ್ನು ತೊದಗಿ ಒಂದು ನೆಲೆಗೆ ತಂದು ಈಗ ಮಕ್ಕಳಿಗೆ ಉಸ್ತುವಾರಿ ವಹಿಸಿಕೊಟ್ಟಿದ್ದರು. ತಾವು ಕುಂಬಳೆಯಲ್ಲಿ ಕಬ್ಬಿಣ ಸ್ಟೀಲು ಇತ್ಯಾದಿಗಳ ಅಂಗಡಿಯೊಂದನ್ನು ತೆರೆದು ವ್ಯಾಪಾರ ವಿಸ್ತರಿಸುವ ಸನ್ನಾಹದಲ್ಲಿದ್ದರು. ಇದಕ್ಕೋಸ್ಕರ ರಾಷ್ಟ್ರೀಕೃತ ಬ್ಯಾಂಕೊಂದರಿಂದ ಸಾಲ ಪಡೆಯಲು ಪ್ರಯತ್ನ ನಡೆಸಿದ್ದರು. ’ಅದಕ್ಕೆಂದು ಅಡ್ಯಂತಾಯ ಇಂಡಸ್ಟ್ರೀಸ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಬೇಕಾಯಿತು. ಅಡ್ಯಂತಾಯರಿಗೆ ಸಾಲದ ಅಗತ್ಯವೇನೂ ವಾಸ್ತವದಲ್ಲಿ ಇರಲಿಲ್ಲ. ಇನ್ಕಮ್ಟ್ಯಾಕ್ಸ್ ಇಲಾಖೆಯವರ ಕಣ್ಣಿಗೆ ಮಣ್ಣೆರಚುವುದಕ್ಕೆ ಇದೆಲ್ಲ ತಂತ್ರಗಳು.

ಇಂಥ ವಹಿವಾಟುಗಳಲ್ಲಿ ತೊಡಗಿದ ಅವರಿಗೆ ತಾನು ಪೇಟೆಯಿಂದ ತಂದಿದ್ದ ನಾಯಿಮರಿಯ ಬಗ್ಗೆ ಮರೆತೇ ಹೋಗಿತ್ತು. ಅದು ನೆನಪಾದ್ದು ಸುಮಾರು ಒಂದು ವರ್ಷದ ನಂತರ. ಒಂದು ದಿನ ಚಾವಡಿಯಲ್ಲಿ ಅಡ್ಯಂತಾಯರು ಚಿಕ್ಕದೊಂದು ಆಪ್ತರ ಸಭೆ ನಡೆಸಿದ್ದರು. ಅದು ಊರ ರಾಜಕೀಯಕ್ಕೆ ಸಂಬಂಧಿಸಿದ ಸಭೆ. ಇದು ತನಕ ಯಾವ ರಾಜಕೀಯದಲ್ಲೂ ಇದ್ದಿರದ ಅಡ್ಯಂತಾಯರನ್ನು ಏಕಕಾಲಕ್ಕೆ ಎರಡು ಬೇರೆ ಬೇರೆ ಪಕ್ಷಗಳು ಬೆಂಬಲಕ್ಕೋಸ್ಕರ ಸಮೀಪಿಸಿದ್ದುವು. ಒಂದು, ಕೇಂದ್ರದಲ್ಲೂ ರಾಜ್ಯಗಳಲ್ಲಿಯೂ ಅಧಿಕಾರಲ್ಲಿದ್ದ ಕಾಂಗ್ರೆಸ್ ಪಕ್ಷ; ಇನ್ನೊಂದು ವ್ಯಾಪಾರಿ ವಲಯದಲ್ಲಿ ಜನಪ್ರಿಯವಾಗಿದ್ದು ಈಗ ತನ್ನ ಪ್ರಭಾವವನ್ನು ಇತರೆಡೆಗಳಲ್ಲೂ ವಿಸ್ತರಿಸಲು ತಯಾರಾಗಿದ್ದ ಜನಸಂಘ. ಈಗೇನು ಮಾಡಬೇಕು. ಯಾವ ಪಕ್ಷಕ್ಕೆ ಸೇರಿದರೆ ಅನುಕೂಲ, ಯಾವುದಕ್ಕೂ ಸೇರದೆ ಮೊದಲಿನಂತೆಯೆ ಇರುವುದರಿಂದ ಆಗುವ ನಷ್ಟಗಳೇನು-ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಲೆಂದು ಅಂದಿನ ಸಭೆ ಕರೆದಿದ್ದರು. ಅಂದಿನ ಸಭೆಯಲ್ಲಿ ಈ ಯಾವ ವಿಷಯಗಳೂ ಇತ್ಯರ್ಥವಾಗದೆ ಮುಂದಿನ ವಾರ ಮತ್ತೆ ಸೇರುವುದೆಂದು ನಿರ್ಣಯಿಸಿದರು. ಆದರೆ ಅದಕ್ಕೆ ಮೊದಲು ಊರ ಗಣ್ಯ ಶ್ರೀಮಂತರಲ್ಲೊಬ್ಬರಾದ ಹಳೆಮನೆ ನಾರಾಣಯ್ಯನವರು ಯಾವುದೋ ಮುಖ್ಯ ಸಂಗತಿಯೊಂದನ್ನು ವಿವರಿಸುತ್ತಿದ್ದಾಗ ಕಪ್ಪುಬಣ್ಣದ ನಾಯಿಮರಿಯೊಂದು ಓಡಿ ಬಂದು ಹಿಸ್ ಮಾಸ್ಟರ್ಸ್ ವ್ಯಾಸ್ ನಂತೆ ಅವರೆದುರು ಕುಳಿತುಕೊಂಡಿತು. ಇದು ನಾರಣಯ್ಯನವರ ಹೊರತು ಉಳಿದೆಲ್ಲ ಮಂದಿಯ ಮೋಜಿಗೆ ಕಾರಣವಾಯಿತು. ಅಷ್ಟರಲ್ಲಿ ಹಿಂದಿನಿಂದಲೆ ಬಂದ ಚನಿಯ ಮರಿಯ ಕುತ್ತಿಗೆಯಿಂದ ಎತ್ತಿ ಅದನ್ನು ಹೊರಗೆ ಹಾಕಿದ.

ಎಲ್ಲರೂ ಹೋದ ಮೇಲೆ ಅಡ್ಯಂತಾಯರು ಚನಿಯನನ್ನೂ ನಾಯಿಮರಿಯನ್ನೂ ಕರೆಸಿ, “ಇದು ಎಲ್ಲಿಯ ನಾಯಿ?” ಎಂದು ವಿಚಾರಿಸಿದರು.

“ನಮ್ಮದೇ” ಎಂದ ಚನಿಯ.

“ಏನಿದರ ಹೆಸರು?”

“ಕರಿಯ”

“ಕರಿಯ ಗಿರಿಯ ಏನೂ ಬೇಡ. ನರಸಿಂಗ ಎಂದಿರಲಿ. ಒಂದು ಸಂಕಲೆ ಯಲ್ಲಿ ಬಿಗಿ. ದಿನಾ ಸಂಜೆ ನಾಲ್ಕು ಗಂಟೆಗೆ ಬಿಟ್ಟರೆ ಸಾಕು.” ಹೀಗೆ ಆಜ್ಞಾಪಿಸಿದರು.

ಅಂದಿನಿಂದ ಕರಿಯ ನರಸಿಂಗನಾಗಿ ಅದರ ಶುಕ್ರ ಮತ್ತು ಶನಿದೆಸೆಗಳು ಏಕಕಾಲದಲ್ಲಿ ಆರಂಭವಾದವು. ನರಸಿಂಗನಿಗೆ ಮಲಗಲು ಪ್ರತ್ಯೇಕವಾದ ಒಂದು ಜಾಗದ ಏರ್ಪಾಟಾಯಿತು; ಕೊರಳಿಗೊಂದು ಸಂಕಲೆ ಬಂತು. ಊಟಕ್ಕೆ ತಟ್ಟೆ, ಹಾಲಿಗೆ ಸಾಸರು. ಆಗಾಗ ಡಾಗ್ ಬಿಸ್ಕಿಟುಗಳು. ಚನಿಯನ ಮೂಲಕ ಅಲ್ಪ ಸ್ವಲ್ಪ ಮಾಂಸಾಹಾರ; ಆತ ಹೊಳೆಯಿಂದ ಹಿಡಿದ ಸಿಹಿ ಮೀನುಗಳ ಸ್ಪೆಶಲ್ ಊಟ. ಒಂದೆರಡು ತಿಂಗಳುಗಳಲ್ಲೆ ನರಸಿಂಗನಲ್ಲಿ ಇದರ ಪರಿಣಾಮ ಕಂಡುಬರದೆ ಇರಲಿಲ್ಲ. ಅದು ಸಾಕಷ್ಟು ದಪ್ಪವಾಯಿತು. ಅಪರಿಚಿತರು ಮನೆಯಂಗಳಕ್ಕೆ ಕಾಲಿಡಲು ಹೆದರ ತೊಡಗಿದರು.

ಇದೆಲ್ಲದರ ಜತೆಜತೆಯಲ್ಲೇ ಅಡ್ಯಂತಾಯರು ತಮಗೆ ಸಮಯವಿದ್ದಾಗಲೆಲ್ಲ ನರಸಿಂಗನನ್ನು ಸಮೀಪ ಕರೆಸಿಕೊಂಡು ಅದಕ್ಕೆ ಬೇರೆ ಬೇರೆ ರೀತಿಯ ತರಬೇತಿಗಳನ್ನು ಕೊಡಲು ಮನಸ್ಸು ಮಾಡಿದರು. ಪಳಗಿದ ನಾಯಿಗಳು ಚೆಂಡುಗಳನ್ನು ಹೆಕ್ಕಿ ತರುವುದನ್ನು, ಹಿಂಗಾಲುಗಳಲ್ಲಿ ನಿಂತು ನಡೆಯುವುದನ್ನು, ವೃತ್ತಗಳ ನಡುವಿನಿಂದ ಜಿಗಿಯುವುದನ್ನು ಅವರು ನೋಡಿದ್ದರು. ನರಸಿಂಗನಿಗೆ ಇಂಥ ಚಳಕಗಳನ್ನು ಕಲಿಸಲು ಅವರ ಯತ್ನ. ಚೆಂಡೊಂದನ್ನು ದೂರ ಒಗೆದು, “ಚೆಂಡು ತಾ!” ಎಂದು ಅದಕ್ಕೆ ಅಜ್ಞಾಪಿಸುತ್ತಿದರು. ಅದು ಏನೆಂದು ಅರ್ಥವಾಗದೆ ಮಿಕಮಿಕನೆ ನೋಡುತ್ತ ಬಾಲ ಅಲ್ಲಾಡಿಸುತ್ತಿತ್ತು. ಅಡ್ಯಂತಾಯರು ಬೆತ್ತದಿಂದ ಅದಕ್ಕೆ ರಪರಪನೆ ಎರಡು ಬಾರಿಸಿ ಚೆಂಡು ಇರುವ ತಾಣಕ್ಕೆ ಎಳೆದುಕೊಂಡು ಹೋಗುತ್ತಿದ್ದರು.

ನಂತರ ಹಿಂಗಾಲುಗಳ ಮೇಲೆ ನಿಂತು ನಡೆಯುವ ಅಭ್ಯಾಸ. ಮುಂಗಾಲುಗಳನ್ನು ಬೆತ್ತದಿಂದ ಎತ್ತಿ ಹಿಡಿದು”ನಡೆ!ನಡೆ!” ಎಂದು ಅಡ್ಯಂತಾಯರು ನಾಯಿಗೆ ನಿರ್ದೇಶಿಸುತ್ತಿದ್ದರು. ಅದು ಮುಗ್ಗರಿಸಿ ಬೀಳುತ್ತಿತ್ತು. ಬೆನ್ನ ಹಿಂದೆ ಒದೆತ ಕೂಡ. ಹೀಗೆ ವಿವಿಧ ರೀತಿಯ ತರಬೇತಿಗಳು ಮುಗಿದಾಗ ಇಬ್ಬರೂ ಸುಸ್ತಾಗುತ್ತಿದ್ದರು. ನಂತರ ಅಡ್ಯಂತಾಯರು ಎಣ್ಣೆ ಹಚ್ಚಿ ಮಾಲೀಸು ಮಾಡಿಸಿಕೊಳ್ಳಲು ಹೋಗುತ್ತಿದ್ದರು. ಈ ಮಾಲೀಸು ಹೆಚ್ಚಾಗಿ ವಾರಕ್ಕೆ ಎರಡು ಬಾರಿ ನಡೆಯುತ್ತಿತ್ತು, ಅದಕ್ಕೆ ಪ್ರತ್ಯೇಕ ಇಬ್ಬರು ಆಳುಗಳಿದ್ದರು. ಸುಮಾರು ಒಂದು ಗಂಟೆ ಹೊತ್ತಿನ ತನಕ ಸಾಗುವ ಕ್ರಿಯೆ ಇದು. ಅಪರೂಪಕ್ಕೆ ಕೆಲವೊಮ್ಮೆ ಅಡ್ಯಂತಾಯರು ಅಂಥದೇ ಕ್ರಿಯೆಯನ್ನು ನರಸಿಂಗನ ಮೇಲೆ ನಡೆಸಲು ಚನಿಯನಿಗೆ ನಿರ್ದೇಶಿಸುತ್ತಿದ್ದರು. ಚನಿಯ ದನಿಯ ನಿರ್ದೇಶದಂತೆ ನರಸಿಂಗನಿಗೆ ಎಣ್ಣೆ ಹಚ್ಚಿ ಮಾಲೀಸು ಮಾಡಿ ಹತ್ತಿರದ ಹೊಳೆಗೆ ಕೊಂಡು ಹೋಗಿ ಸ್ನಾನ ಮಾಡಿಸುತ್ತಿದ್ದರು. ಅಡ್ಯಂತಾಯರಿಗೆ ಮನಸ್ಸು ಬಂದರೆ ಅವರು ಖುದ್ದಾಗಿ ಈ ಕಾರ್ಯಕ್ಕೆ ಇಳಿಯುತ್ತಿದ್ದರು. ನರಸಿಂಗನನ್ನು ಹೊಳೆ ನೀರಿನಲ್ಲಿ ಅಷ್ಟು ದೂರಕ್ಕೆ ಎಸೆದು ಅದು ತೇಕುಮುಳುಕು ಹಾಕಿಕೊಂಡು ಈಜಿ ಬಂದು ದಡ ಸೇರುವ ತಮಾಷೆಯನ್ನು ನೋಡುವುದು ಅವರಿಗೊಂದು ಖುಷಿ.

ದಿನದಲ್ಲಿ ನರಸಿಂಗನಿಗೆ ಅತ್ಯಂತ ಪ್ರಿಯವಾದ ಮುಹೂರ್ತವೆಂದರೆ ಸಂಜೆಯ ನಾಲ್ಕು ಗಂಟೆ. ಚಾವಡಿಯ ದೊಡ್ಡ ನಾಯಕ್ಸ್ ಗಡಿಯಾರ ಡಣಾಡಣನೆ ನಾಲ್ಕು ಬಾರಿ ಬಡಿದ ತುಸುವೇ ಹೊತ್ತಿನಲ್ಲಿ ನರಸಿಂಗನಿಗೆ ಸಂಕಲೆಯಿಂದ ಬಿಡುಗಡೆ ಸಿಗುತ್ತಿತ್ತು. ಸಂಕಲೆ ಕಳಚಿದ ತಕ್ಷಣ ಅದು ಅಂಗಳಕ್ಕೆ ಜಿಗಿದು ಗೇಟು ಹಾರಿ ಗುಡ್ಡಗದ್ದೆ ಬಯಲುಗಳೆನ್ನದೆ ಓಡುತ್ತಿತ್ತು. ಮತ್ತೆ ಮನೆಗೆ ಮರಳುವುದು ಕತ್ತಲು ಕವಿದ ಮೇಲೆಯೇ ಸರಿ.

ಒಂದು ಸಂಜೆ ಹೀಗೆ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸ್ವೇಚ್ಛೆಯಿಂದ ತಿರುಗಾಡುತ್ತಿದ್ದ ನರಸಿಂಗನಿಗೆ ಒಂದು ಹುಚ್ಚು ನಾಯಿ ಕಚ್ಚಿತು. ತಟ್ಟನೆ ಆಕ್ರಮಿಸಿ ಕಚ್ಚಿ ಅಷ್ಟೇ ತಟ್ಟನೆ ಅದು ಮಾಯವಾಗಿತ್ತು. ನರಸಿಂಗನಿಗೆ ಎಡಕಿವಿಯ ಹಿಂಬದಿಗೆ ಗಾಯವಾಗಿ ಸ್ವಲ್ಪ ನೆತ್ತರು ಸೋರಿ ತುಸು ಹೊತ್ತಿನಲ್ಲಿ ನಿಂತಿತು. ಅದು ಹುಚ್ಚು ನಾಯಿ ಎಂಬುದರಲ್ಲಿ ಯಾವ ಸಂದೇಹವೂ ನರಸಿಂಗನಿಗೆ ಇರಲಿಲ್ಲ. ಸ್ವಾಸ್ಥ್ಯವಿರುವ ಯಾವ ನಾಯಿಯೂ ಹೀಗೆ ಮುನ್ಸೂಚಿನ ಕೊಡದೆ ದಾಳಿ ಮಾಡುವುದಿಲ್ಲ; ನಂತರ ಹೇಳದೆ ಕೇಳದೆ ಹೀಗೆ ಪರಾರಿಯಾಗುವುದೂ ಇಲ್ಲ. ಆಳೆತ್ತರದ ಒಣಹುಲ್ಲು ಬೆಳಿದಿತ್ತು. ನರಸಿಂಗ ಒಂದು ವೇಳೆ ಆ ನಾಯಿಯನ್ನು ಓಡಿಸಿಕೊಂಡು ಹೋಗಿದ್ದರೂ ಅದನ್ನು ಕಂಡುಹಿಡಿಯುವುದು ಈ ಹುಲ್ಲಿನ ನಡುವೆ ಅಸಾಧ್ಯವಾಗಿತ್ತು. ಅಂಥ ಯಾವ ಹುಚ್ಚು ಸಾಹಸಕ್ಕೂ ಕೈಯಿಕ್ಕದೆ ಅದು ತನ್ನ ದೈನಂದಿನ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮನೆಗೆ ಮರಳಿತು.

ತನಗೆ ಹುಚ್ಚುನಾಯಿ ಕಡಿದಿದೆಯೆಂಬ ಸಂಗತಿಯನ್ನು ಮನೆಯವರಿಗೆ ತಿಳಿಸುವುದು ಹೇಗೆ ಎಂಬುದೊಂದು ಸಮಸ್ಯೆಯಾಯಿತು. ಕಿವಿಯ ಹಿಂದಿನ ಗಾಯ ಎದುರಿಗೆ ಕಾಣಿಸಲಾರದು. ಒಂದು ವೇಳೆ ಕಾಣಿಸಿದರೂ ಅದು ಹುಚ್ಚುನಾಯಿಯ ಕಡಿತ ಇರಬಹುದು ಎಂದು ಯಾರಾದರೂ ಊಹಿಸುವುದು ಉಂಟೆ? ಹೊತ್ತಿಗೆ ಮೊದಲು ಮನೆಗೆ ಮರಳಿದ ನರಸಿಂಗನನ್ನು ಯಾರೂ ಗಮನಿಸಿದಂತೆ ಕಂಡು ಬರಲಿಲ್ಲ. ಎಲ್ಲ ಆಳುಮಕ್ಕಳೂ ಅವರವರ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದರು. ಎಲ್ಲೋ ಹೋಗಿದ್ದು ಆಗತಾನೆ ಮರಳಿದ್ದ ಅಡ್ಯಂತಾಯರು ಲೆಕ್ಕಪತ್ರಗಳ ಪರಿಶೋಧನೆಯಲ್ಲಿ ತೊಡಗಿದ್ದರು. ನರಸಿಂಗ ಅವರ ಮುಂದೆ ಹೋಗಿ ಬಾಲ ಆಡಿಸಿತು. ಅವರು ಛೂಛೂ ಅಂದರು. ಲೆಕ್ಕಪತ್ರಗಳ ಲೆಜ್ಜರ್ ಪುಸ್ತಕಗಳಿಂದ ಕಣ್ಣು ಕೀಳಲಿಲ್ಲ. ನರಸಿಂಗ ಧೈರ್ಯ ಮಾಡಿ ಅವರ ಪಾದವನ್ನು ನೆಕ್ಕಿತು. ಅಂದು ಅಡ್ಯಂತಾಯರು ಯಾವುದೋ ವ್ಯಾಪಾರದಲ್ಲಿ ಒಂದೆರಡು ಸಹಸ್ರ ರೂಪಾಯಿಗಳನ್ನು ಕಳೆದುಕೊಂಡು ಕೆಟ್ಟ ಮೂಡಿನಲ್ಲಿದ್ದುದನ್ನು ಅದು ಊಹಿಸುವುದು ಕೂಡ ದುಸ್ತರವಾಗಿತ್ತು. ಅವರು ತಟ್ಟನೆ ಕೋಪಗೊಂಡು ಸದಾ ಜತೆಯಲ್ಲಿರುತ್ತಿದ್ದ ಬೆತ್ತದಿಂದ ನರಸಿಂಗನಿಗೆ ಎರಡೆರಡು ಏಟು ಬಿಗಿದು ಓಡಿಸಿದರು.

ಕೆಲವೊಮ್ಮೆ ನರಸಿಂಗನಿಗೆ ಅನಿಸುತ್ತಿತ್ತು – ಮನುಷ್ಯರು ಎಷ್ಟು ಮೂರ್ಖರೂ ಅಪಾಯಕಾರಿಗಳೂ ಆಗಿರುತ್ತಾರೆ! ಅವರಿಗೆ ಪ್ರಾಣಿಜಗತ್ತಿನ ಬಗ್ಗೆ ಏನೇನೂ ತಿಳಿದಿರುವುದಿಲ್ಲ. ಆದರೂ ಎಲ್ಲಾ ತಿಳಿದವರಂತೆ ವರ್ತಿಸುತ್ತಾರೆ. ತಮ್ಮ ಬೇಕು ಬೇಡಗಳನ್ನು ಪ್ರಾಣಿ ಜಗತ್ತಿನ ಮೇಲೆ ಹೊರಿಸಿ ಸುಖಪಡುತ್ತಾರೆ. ಅದಕ್ಕೆ ಹೊಂದುವಂತೆ ಪ್ರಾಣಿಗಳನ್ನು ಪಳಗಿಸುತ್ತಾರೆ. ಕೇವಲ ಈಜುವ ಮೋಜು ನೋಡುವುದಕ್ಕೆಂದು ನೀರಿಗೆ ಎಸೆಯುವ ಚಪಲಕ್ಕೆ ಏನು ಹೇಳಬೇಕು? ಪ್ರಾಣಿಗಳು ಕಲಿಯದೆಯೆ ಈಜಿ ಬದುಕಿಕೊಳ್ಳಬಲ್ಲವು. ಎಷ್ಟು ಚಿಕ್ಕ ನಾಯಿಮರಿಯಾದರೂ ಸ್ವಲ್ಪ ದೂರ ಈಜಬಲ್ಲುದು. ಇದು ನೋಡಿ ಮನುಷ್ಯರಿಗೆ ಆಶ್ಚರ್ಯವಾಗುತ್ತದೆ. ಇನ್ನು ನಾಲ್ಕು ಕಾಲಿನ ಪ್ರಾಣಿಗಳಿಗೆ ಎರಡು ಕಾಲಿನಲ್ಲಿ ನಡೆಯಲು ಕಲಿಸುವ ಜಂಜಾಟ ಯಾಕೆ? ಯಾರೋ ಚೆಂಡೆದೆಸ ಕೂಡಲೇ ಅದನ್ನು ಯಾಕೆ ಹೆಕ್ಕಿ ತಂದುಕೊಡಬೇಕು? ಚಿಟಿಕೆ ಹಾಕಿದ ತಕ್ಷಣ ಯಾಕೆ ನೆಗೆಯಬೇಕು? ಒಬ್ಬರ ಸುಖದುಃಖವನ್ನು ಇನ್ನೊಬ್ಬರು ಯಾಕೆ ಆಡಿ ತೋರಿಸಬೇಕು? ಒತ್ತಾಯಿಸಿ ಹೀಗೆ ದುಡಿಯಲು ಹುಚ್ಚುವವರಿಗೆ ಯಾವ ಸಂತೋಷ?

ನರಸಿಂಗನ ಕಿವಿಗೆ ಗಾಯವಾದುದನ್ನು ಯಾರೂ ಗಮನಿಸಲಿಲ್ಲ. ರಾತ್ರಿಯ ಊಟ ಹಾಕಿ ಚನಿಯ ಅದನ್ನು ಯಥಾಪ್ರಕಾರ ಸಂಕಲೆಯಲ್ಲಿ ಬಂಧಿಸಿ ಹೋದ. ಇತರರು ಅವರವರ ದೈನಂದಿನದಲ್ಲಿ ಮುಳುಗಿದರು. ಅಡ್ಯಂತಾಯರು ತಾವು ಮಲಗಲು ಹೋಗುವ ತನಕ ಎಲ್ಲರೊಂದಿಗೂ ಸಿಡಿಮಿಡಿ ಗುಟ್ಟುತ್ತಲೇ ಇದ್ದರು. ವ್ಯಾಪಾರದಲ್ಲಿ ಅವರೆಂದೂ ಇಷ್ಟು ದೊಡ್ಡ ಮೊತ್ತದ ನಷ್ಟ ಅನುಭವಿಸಿರಲಿಲ್ಲ. ಈಗ ಈ ಮೊತ್ತವನ್ನು ಭರ್ತಿಮಾಡುವ ವಿವಿಧ ಉಪಾಯಗಳ ಕುರಿತು ಅವರ ಮನಸ್ಸು ಚಿಂತಿಸತೊಡಗಿತು. ಹೀಗಿರುತ್ತ ಅವರಿಗೆ ನರಸಿಂಗನ ಖಯಾಲಿ ಹಚ್ಚಿಕೊಳ್ಳುವುದಕ್ಕೆ ಸಮಯವಾದರೂ ಎಲ್ಲಿತ್ತು?

ಸದ್ಯ ಒಂದು ಭಾರೀ ಮೊತ್ತದ ಕಾಂಟ್ರಾಕ್ಟ್ ಕೆಲಸದ ಟೆಂಡರಿಗೆ ಅವರು ಅರ್ಜಿ ಹಾಕಿ ಕುಳಿತಿದ್ದರು. ಅದು ಮುಖ್ಯ ರಸ್ತೆಯಿಂದ ತಮ್ಮ ಊರಿಗೆ ಮಾರ್ಗ ಕಡಿಯುವ ಕೆಲಸ. ಈಗಾಗಲೇ ಇರುವ ಕಾಲುಹಾದಿಯನ್ನು ಕಡಿದು ವಿಸ್ತರಿಸುವುದು. ಕಾಂಟ್ರಾಕ್ಟ್ ಸಿಕ್ಕಿದರೆ ಈಗ ಆಗಿದ್ದ ನಷ್ಟದ ಹತ್ತು ಪಟ್ಟು ಲಾಭ ಕೈಸೇರುವುದರಲ್ಲಿ ಸಂದೇಹವೇ ಇರಲಿಲ್ಲ. ಕಾಂಟ್ರಾಕ್ಟ್ ಸಿಗುವುದೇ ಕಷ್ಟದ ಸಂಗತಿ. ಅದೇ ಊರಿನ ಬ್ಯಾರಿಯೊಬ್ಬನು ಅದಕ್ಕಾಗಿ ಪ್ರಯತ್ನಿಸುತ್ತಿದ್ದುದು ಎಲ್ಲರಿಗೂ ಗೊತ್ತಿತ್ತು. ಆತ ಕಾಂಟ್ರಾಕ್ಟ್ ಕೆಲಸದಲ್ಲಿ ಅನುಭವಿ ಬೇರೆ. ಸಾಕಷ್ಟು ರಾಜಕೀಯ ಪ್ರಭಾವವಿದ್ದರೆ ಯಾವುದೂ ಕಷ್ಟವಲ್ಲ ಎಂಬುದೀಗ ಅಡ್ಯಂತಾಯರಿಗೆ ವೇದ್ಯವಾಗಿತ್ತು. ಇಲ್ಲದಿದ್ದರೆ ಬೀಡಿ ಕೆಲಸದವರಿಂದ ತೊಡಗಿ ಸೇಂದಿ ಕಾಂಟ್ರಾಕ್ಟ್ ದಾರರವರೆಗೆ ಎಲ್ಲರೂ ಯಾಕೆ ಒಂದೊಂದು ಪಾರ್ಟಿಯ ಮೆಂಬರುಗಳಾಗಿರುತ್ತಾರೆ?

ಕಾಂಗ್ರೆಸ್ ಸೇರುವುದೆಂದು ಅವರು ಈಗಾಗಲೆ ನಿರ್ಧರಿಸಿಯಾಗಿತ್ತು. ಈ ನಿರ್ಧಾರ ಕೈಗೊಳ್ಳುವಂತೆ ಅವರನ್ನು ಪ್ರೇರೇಪಿಸಿದ್ದು ದಳವಾಯಿ ವೆಂಕಪ್ಪಯ್ಯ ಎಂಬವರು. ಇವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಎರಡೆರಡು ಬಾರಿ ಸೆರೆಮನೆವಾಸ ಅನುಭವಿಸಿದವರು. ಅದರ ಕುರಿತಾಗಿ ಅವರೇ ಹೇಳುವ ಅನೇಕ ಕತೆ ಗಳಿದ್ದುವು. ಅವರ ಪ್ರಕಾರ ಭಾರತದ ಪ್ರತಿಯೊಬ್ಬ ಪ್ರಜೆಯೂ ಕಾಂಗ್ರೆಸಿಗನಾಗಿಯೇ ಹುಟ್ಟುತ್ತಾನೆ. ಅದ್ದರಿಂದ ಕಾಂಗ್ರೆಸಿಗೆ ಸೇರುವುದು ಎಂಬುದೊಂದಿಲ್ಲ. ಕಾಂಗ್ರೆಸ್ ತನ ಕೆಲವರಲ್ಲಿ ಪ್ರಕಟವಾಗಿರುತ್ತದೆ; ಇನ್ನು ಕೆಲವರಲ್ಲಿ ಸುಪ್ತವಾಗಿರುತ್ತದೆ ಅಷ್ಟೆ. ಸುಪ್ತವಾಗಿರುವ ಕಾಂಗ್ರೆಸ್ ತನವನ್ನು ಅಡ್ಯಂತಾಯರು ಪ್ರಕಟಗೊಳಿಸಿದರೆ ಸಾಕು. ಈ ರೀತಿ ವಾದಿಸಿ ಅವರು ಅಡ್ಯಂತಾಯರ ಹೊಯ್ದಾಡುತ್ತಿದ್ದ ಮನಸ್ಸಿಗೆ ವಿಶ್ರಾಂತಿಯನ್ನು ಕೊಟ್ಟಿದ್ದರು. ದಳವಾಯಿ ವೆಂಕಪ್ಪಯ್ಯ ಈಗ ಕುಂಬಳೆಯಲ್ಲೊಂದು ಹೋಟೆಲಿನ ಮಾಲಿಕ, ಗುಪ್ತವಾಗಿ ಸಟ್ಟಾ ಏಜೆಂಟ್ ; ಲಕ್ಷಾಧಿಪತಿ. ಅಡ್ಯಂತಾಯರು ಕುಂಬಳೆಗೆ ಹೋದಾಗಲೆಲ್ಲ ವೆಂಕಪ್ಪಯ್ಯನಿಗೆ ಭೇಟಿ ನೀಡುವುದು ಪದ್ಧತಿಯಾಗಿತ್ತು. ಅಪರೂಪಕ್ಕೆ ಬೆಂಗಳೂರಿಗೋ ಮುಂಬಯಿಗೋ ಹೋಗಬೇಕಾದ ಪ್ರಸಂಗ ಬಂದರೆ ಒಬ್ಬರಿಗೊಬ್ಬರು ಜೊತೆಯಾಗಿರುತ್ತಿದ್ದರು.

ಕರಿಯ ಎಂಬ ಚೆನ್ನಾದ ಹೆಸರನ್ನು ತೆಗೆದು ನರಸಿಂಗ ಎಂಬ ಹೆಸರನ್ನು ನಾಯಿಗೆ ಇರಿಸಿದುದು ಚನಿಯನಿಗೆ ಇಷ್ಟವಾಗಿರಲಿಲ್ಲ. ನರಸಿಂಗ ಎಂಬುದು ತಮಾಷೆ ಯಾಗಿ ತೋರುತ್ತಿತ್ತು. ಅದು ಬಡಪಾಯಿ ನಾಯಿಯನ್ನು ಗೇಲಿ ಮಾಡಿದ ಹಾಗೆ. ಆದರೂ ದನಿ ಹೇಳಿದ ಮೇಲೆ ಎರಡು ಮಾತಿಲ್ಲ. ನರಸಿಂಗ ಎಂಬ ಹೆಸರು ಖಾಯಮ್ಮಾಗಿತ್ತು. ಆ ಹೆಸರಿನಿಂದ ಕರೆದಾಗ ನಾಯಿ ಎಲ್ಲಿದ್ದರೂ ಓಡಿಕೊಂಡು ಬರುತ್ತಿತ್ತು. ನರಸಿಂಗನ ಚಾಕರಿ ಹೆಚ್ಚಾಗಿ ಚನಿಯನ ಕೆಲಸ. ಮನೆ ತುಂಬ ಜನವಿದ್ದರೂ ಅದು ಹೇಗೋ ನಾಯಿ ಚನಿಯನ ಜವಾಬ್ದಾರಿಗೆ ಸೇರಿಕೊಂಡುಬಿಟ್ಟಿತ್ತು. ಅದಕ್ಕೆ ಸಂಕಲೆ ಹಾಕುವುದು, ಬಿಡುವುದು, ಊಟ ತಿಂಡಿ ಕೊಡುವುದು, ಅದು ಮಲಗುವ ಜಾಗ ಶುಚಿ ಮಾಡುವುದು ಇತ್ಯಾದಿ. (ಈ ಜಾಗವನ್ನು ಫ಼ಿನೈಲ್ ಹಾಕಿ ದಿನವೂ ಗುಡಿಸಬೇಕೆಂದು ಅಡ್ಯಂತಾಯರ ಖಾಯಮ್ಮಾದ ಅಣತಿಯಿತ್ತು.)

ನರಸಿಂಗ ತುಸು ಮಂಕಾಗಿರುವುದನ್ನು ಒಂದು ದಿನ ಚನಿಯ ಗಮನಿಸಿದ. ನಾಲ್ಕು ಗಂಟೆಗೆ ಸಂಕಲೆ ಕಳಚಿದಾಗ ಎಂದಿನಂತೆ ಅದು ಅಂಗಳಕ್ಕೆ ಜಿಗಿದು ಓಡಲಿಲ್ಲ. ರಾತ್ರಿ ಹೊತ್ತು ಅದರ ಮುಂದೆ ಇರಿಸಿದ್ದ ಊಟದ ತಟ್ಟೆ ಬೆಳಗ್ಗೆ ಕೂಡ ಹಾಗೆಯೇ ಇತ್ತು. ಚನಿಯ ಈ ಸಂಗತಿಯನ್ನು ಮನೆ ಯಜಮಾನಿಗೆ ಹೇಳಿದ. ಸುನಂದಮ್ಮ ಅದನ್ನು ತಲೆಗೆ ಹಾಕಿಕೊಳ್ಳಲಿಲ್ಲ. ನಂತರ ಅಡ್ಯಂತಾಯರಿಗೆ ಹೇಳಿ ನೋಡಿದ. ಅವರು ಅದಕ್ಕೆ ಅಜೀರ್ಣವಾಗಿರಬಹುದು. ಒಂದೆರಡು ದಿನಗಳಲ್ಲಿ ಸರಿಹೋಗುತ್ತದೆ ಎಂದು ಹೇಳಿದರು.

ನರಸಿಂಗನಿಗೆ ಭಯಂಕರವಾಗಿ ತಲೆ ನೋಯುತ್ತಿತ್ತು. ಎತ್ತಲು ಅಸಾಧ್ಯವಾದಷ್ಟು ಭಾರ ಎನಿಸುತ್ತಿತ್ತು. ಯಾವ ಸ್ಪಷ್ಟವಾದ ವಿಚಾರಗಳೂ ತಲೆಯೊಳಗೆ ಮೂಡುತ್ತಿರಲಿಲ್ಲ. ಸ್ನಾಯುಗಳೆಲ್ಲ ದುರ್ಬಲವಾದಂತೆ ಯಾರೋ ತನ್ನನ್ನು ಒಂದಿಂಚೂ ಬಿಡದೆ ಹೊಡೆದು ಹಾಕಿದಂತೆ ಆಹಾರ ಕಂಡರೇ ವಾಕರಿಕೆ ಬರುವಂತೆ ಆಗುತ್ತಿತ್ತು. ಕಣ್ಣ ಮೇಲೆ ಪರದೆ ಎಳಿದಂತೆ ಏನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೂ ಮನೆಯಲ್ಲಿ ಎಲ್ಲ ದೈನಂದಿನ ಚಟುವಟಿಕೆಗಳೂ ಹೇಳಿ ಮಾಡಿಸಿದಂತೆ ಸರಾಗವಾಗಿ ನಡೆಯುತ್ತಿವೆ ಎಂಬುದು ಅದಕ್ಕೆ ಗೊತ್ತಿತ್ತು. ಮಕ್ಕಳು ಶಾಲೆಗೆ ಹೋಗಿ ಬರುತ್ತಿದ್ದರು. ಸುನಂದಮ್ಮ ಎಲ್ಲರನ್ನೂ ಬೈದುಕೊಂಡು ಏನನ್ನೂ ಮಾಡದೆ ಎಲ್ಲವನ್ನೂ ತಾನೆ ಮಾಡಿದಂತೆ ನಟಿಸುತ್ತಿದ್ದರು. ಮನೆಯ ಸೊಸೆಯಂದಿರು ತಮ್ಮೊಳಗೆ ಪೈಪೋಟಿ ನಡೆಸುತ್ತ ಓಡಾಡಿಕೊಂಡಿದ್ದರು. ಒಂದು ನಿಮಿಷ ಸಮಯ ಸಿಕ್ಕರೂ ಚನಿಯ ಕೊಟ್ಟಿಗೆಯ ಮರೆಯಲ್ಲಿ ಬೀಡಿ ಸೇದುತ್ತ ನಿಂತುಬಿಡುತ್ತಿದ್ದ. ಅಡ್ಯಂತಾಯರೀಗ ಹೊಸದಾಗಿ ಜೀಪೊಂದನ್ನು ಖರೀದಿಸಿದ್ದು ಅದನ್ನು ನಡೆಸಲು ಕಲಿಯುತ್ತಿದ್ದರು. ಹೇಳಿಕೊಡುವುದಕ್ಕೆ ತಾತ್ಕಾಲಿಕವಾಗಿ ಚಾಲಕನೊಬ್ಬ ಬಂದಿದ್ದ. ಅವನಿಗೆ ದಪ್ಪವಾದ ಮೀಸೆಯಿದ್ದು ಡಕಾಯಿತನಂತೆ ಕಾಣಿಸುತ್ತಿದ್ದ. ಅವನು ಮನೆಗೆ ಬಂದ ಮೊದಲ ದಿನ ನರಸಿಂಗ ಬಿಡದೇ ಬೊಗಳಿ ತನ್ನ ಅಸಮಾಧಾನ ಅಸಮ್ಮತಿಗಳನ್ನು ಪ್ರದರ್ಶಿಸಿ ಸಾಕಷ್ಟು ಗದರಿಸಿಕೊಂಡಿತ್ತು. ಆತ ಬಹಳ ಕೆಟ್ಟದಾಗಿ ನೋಡಿ ಮೀಸೆ ಕುಣಿಸಿ ಜೀಪು ತೆಗೆದುಕೊಂಡು ಹೋಗಿದ್ದ.

ಇದಾಗಿ ಒಂದು ದಿನ –

ನಾಯಕ್ಸ್ ಗೋಡೆ ಗಡಿಯಾರ ಡಣಾಡಣನೆ ನಾಲ್ಕು ಬಾರಿ ಹೊಡೆದುದು ಏಳು ಸಮುದ್ರಗಳ ಆಚೆಯಿಂದಲೋ ಎಂಬಂತೆ ನರಸಿಂಗನ ಕಿವಿಗೆ ಕೇಳಿಸಿದೆ. ಯಾರೋ ಒಂದು ಅದರ ಕುತ್ತಿಗೆಯಿಂದ ಸಂಕಲೆಯನ್ನು ಕಳಚಿ ದೂಡಿಬಿಟ್ಟಿದ್ದಾರೆ. ನರಸಿಂಗನಿಗೆ ಎಲ್ಲಿ ಹೋಗುವುದಕ್ಕೂ ಇಷ್ಟವಿಲ್ಲ. ಕಾಲುಗಳು ಮಣಭಾರವಾದರೆ ತಲೆ ಖಂಡುಗಭಾರ. ಆದರೂ ಅದೃಶ್ಯ ಶಕ್ತಿಯೊಂದು ಮುನ್ನಡೆಸುವಂತೆ ನರಸಿಂಗ ಮುನ್ನಡಿಯಿಟ್ಟಿತು. ಜಗಲಿ ದಾಟಿ ಅಂಗಳಕ್ಕೆ ಇಳಿಯಿತು. ಯಾರು ಯಾರೋ ಏನೇನೋ ಮಾತಾಡಿಕೊಳ್ಳುತ್ತಿದ್ದರು. ಸಮುದ್ರದ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುವಂಥ ಒಂದೇ ಸದ್ದು ಕಿವಿಯಲ್ಲಿ. ಎಲ್ಲವೂ ಮಸುಕು ಮಸುಕು, ಯಾರೋ ಎದುರು ಬಂದರು. ತನ್ನನ್ನು ಹಿಡಿದು ಕೊಲ್ಲಲು ಬಂದಂತೆ ಕಂಡಿತು. ನರಸಿಂಗ ಹಾಗೆ ಬಂದ ವ್ಯಕ್ತಿಯನ್ನು ಕಚ್ಚಿ ಮುಂದಕ್ಕೆ ನೆಗೆಯಿತು. ಕೈಕಾಲುಗಳಿಗೆ ಸ್ವಲ್ಪ ಬಲ ಬಂದ ಹಾಗೆ ತೋರಿತು. ಬಲವೇನು! ಗಾಳಿಯಲ್ಲಿ ಹಾರುವಂತೆ ಅನಿಸಿತು. ಮುಂದೆ ಏನೇನಿದೆ ಎಂಬುದನ್ನು ಗಮನಿಸಲಿಲ್ಲ. ಓಟವೊಂದೇ ಮುಖ್ಯವಾಯಿತು. ಗುಡ್ಡಬಯಲು ಗದ್ದೆಕಾಡುಗಳಲ್ಲಿ ಇನ್ನೆಂದೂ ಓಡಿರದ ಹಾಗೆ ಓಡಿತು. ಹೀಗೆ ಓಡುತ್ತ ಅದಕ್ಕೆ ಓಡುತ್ತಿರುವುದು ತಾನು ಎಂಬ ಸಂಗತಿ ಮರೆತೇ ಹೋಯಿತು. ತನ್ನಿಂದ ಪ್ರತಿಯೊಂದು ವಸ್ತುವೂ ತಪ್ಪಿಸಿಕೊಳ್ಳುತ್ತಿದೆ ಎಂದೆನಿಸಿ ಇದೇಕೆ ಹೀಗೆಂದು ತನಗೆ ತಾನೆ ಕೇಳಿತು.

ಇತ್ತ ಅಡ್ಯಂತಾಯರು ನೆತ್ತರು ಸುರಿಯುತ್ತಿರುವ ತಮ್ಮ ಮುಂಗೈಯನ್ನು ನೋಡಿದರು. ಅವರು ಹಿಂದೆಂದೂ ನಾಯಿಯಿಂದ ಕಡಿಸಿಕೊಂಡಿರಲಿಲ್ಲ. ನಾಯಿ ಕಡಿತಕ್ಕೆ ಇಷ್ಟೊಂದು ನೋವು ಬರುತ್ತದೆಂದು ಊಹಿಸಿಯೂ ಇರಲಿಲ್ಲ. ಗಾಯವಾದ ಸ್ಥಳದಲ್ಲಿ ನರಗಳು ಸೆಳೆಯುತ್ತಿದ್ದವು. ಅವರು ಕಾರ್ಯಾರ್ಥ ಪೇಟೆಗೆ ಹೋಗಿದ್ದವರು ಆಗ ಆನೆ ಮರಳಿದ್ದರು. ನಾಯಿ ಯಾಕೆ ಒಂದು ಥರಾ ಇದೆ ನೋಡೋಣವೆಂದು ಅದನ್ನು ಹಿಡಿದು ನಿಲ್ಲಿಸುವ ಯತ್ನ ಮಾಡಿದ್ದರು. ಅದು ತನಕ ಮಂಕನಂತಿದ್ದ ನಾಯಿ ಗಬಕ್ಕನೆ ಕೈಯನ್ನು ಕಚ್ಚಿ ಮಿಂಚಿನ ವೇಗದಲ್ಲಿ ಓಡಿಹೋಗಿತ್ತು.

ಅಡ್ಯಂತಾಯರಿಗೆ ಮೊದಲು ಅನಿಸಿದ್ದು ಸಹನೆ ಮೇರಿದ ಸಿಟ್ಟು. ನರಸಿಂಗ ಕೈಗೆ ಸಿಗುತ್ತಿದ್ದರೆ ಅಲ್ಲೆ ಅದರ ಸಮಾಧಿಯಾಗುತ್ತಿತ್ತು. ನಂತರ ಅವರು ನಾಯಿಯ ಈಚಿನ ಸ್ವಭಾವದ ಕುರಿತು ಚಿಂತಿಸಿದಾಗ ಅದಕ್ಕೆ ಹುಚ್ಚು ಹಿಡಿದಿರಬಹುದು ಅನಿಸಿತು. ಎರಡು ದಿನಗಳಿಂದ ಅದು ಆಹಾರ ತಿಂದಿರಲಿಲ್ಲ. ಮಂಕಾಗಿತ್ತು. ಊರಲ್ಲಿ ಹುಚ್ಚು ನಾಯಿಗಳಿಗೇಗೂ ಕಮ್ಮಿಯಿಲ್ಲ. ನರಸಿಂಗನ ಸಂಜೆಯ ತಿರುಗಾಟದ ಸಮಯ ಅಂಥದೊಂದು ನಾಯಿ ಅದನ್ನು ಕಚ್ಚಿರಬಹುದು. ಹೀಗೆ ಚಿಂತಿಸುವಷ್ಟರಲ್ಲಿ ಎಲ್ಲರೂ ಗಾಬರಿಯಿಂದ ಬಂದು ಸೇರಿದರು. ಮಕ್ಕಳಿಂದ ಪ್ರಥಮ ಚಿಕಿತ್ಸೆಯಾಯಿತು. ನರಸಿಂಗನಿಗೆ ಹುಚ್ಚು ಹಿಡಿದುದು ಖಂಡಿತವೆಂಬುದೇ ಎಲ್ಲರ ಮತವಾಗಿತ್ತು.

ಅಡ್ಯಂತಾಯರಿಗೀಗ ನರಸಿಂಗನನ್ನು ಹಿಡಿದು ಕೊಲ್ಲುವುದು ಹೇಗೆಂಬುದು ಸಮಸ್ಯೆ ಯಾಯಿತು. ಇಲ್ಲದಿದ್ದರೆ ಅದು ಇನ್ನಷ್ಟು ಮಂದಿಗೆ ಕಡಿದು ಸಾಂಕ್ರಾಮಿಕ ರೋಗ ಹಬ್ಬಿಸುವ ಸಾಧ್ಯತೆ ಯಿತ್ತು. ರಾತ್ರಿಗೆ ಮೊದಲೇ ಅದನ್ನು ಹಿಡಿಯಬೇಕೆಂದು ಅವರು ನಿರ್ಧರಿಸಿದರು. ಅದಕ್ಕೆಂದು ಚನಿಯ ಮೊದಲಾಗಿ ಆಳುಕಾಳುಗಳನ್ನು ಕಲೆ ಹಾಕಿ ಪುಟ್ಟದೊಂದು ದಳವನ್ನು ಸಿದ್ಧಪಡಿಸಿದರು. ಅವರು ದೊಣ್ಣೆ ಕತ್ತಿ ಮುಂತಾದ ಆಯುಧಗಳನ್ನು ತೆಗೆದುಕೊಂಡರೆ ಅಡ್ಯಂತಾಯರು ತಮ್ಮ ತೋಟೆ ಕೋವಿಯನ್ನು ಎತ್ತಿಕೊಂಡರು. ಊರಿನ ಒಂದು ಬದಿಯಲ್ಲಿ ಹೊಳೆಯೊಂದು ಹರಿದು ಹೋಗುತ್ತಿತ್ತು. ಈ ಹೊಳೆ ದಾಟಿ ನಾಯಿ ತಪ್ಪಿಸಿಕೊಳ್ಳುವ ಸಂಭವವೇನೂ ಇರಲಿಲ್ಲ. ಉಳಿದ ಮೂರು ಕಡೆಗಳಿಂದ ಆಕ್ರಮಣಕಾರರು ಮುಂದೊತ್ತಿದರು.

ಅದು ಬೇಸಿಗೆಯ ಕಾಲ. ಒಣ ಹುಲ್ಲು ಪೊದೆಗಳು ಎತ್ತಲೂ ಬೆಳೆದಿದ್ದವು. ಬಗ್ಗಿದರೆ ಮೈ ಗೀರುವ ಮುಳ್ಳುಗಳು. ಚಪ್ಪಲಿಯ ಎಡೆಯಿಂದ ಪಾದಕ್ಕೆ ಚುಚ್ಚುವ ನೆಗ್ಗಿ ಕಣೆಗಳು. ಇವನ್ನೆಲ್ಲ ನಿವಾರಿಸುತ್ತ ಮುಂದುವರಿಯಬೇಕಿತ್ತು. ಇವರು ಮುಂದರಿದಂತೆ ಏನೆಂದು ನೋಡುವ ಕುತೂಹಲದಿಂದ ಬಂದವರೂ ಸೇರಿಕೊಂಡರು. ಪಶ್ಚಿಮದಲ್ಲಿ ಸೂರ್ಯ ಇಳಿದು ಕತ್ತಲು ಪಸರಿಸಿತು. ಆದರೆ ಅಡ್ಯಂತಾಯರು ಕಾಡಿಗೆ ಹೊಕ್ಕರೆ ಹಳೆಹುಲಿ. ಕೈಯ ನೋವು ಏರುತ್ತಿದ್ದರೂ ಅವರು ಒಳ್ಳೆ ಹುರುಪಿನಿಂದಿದ್ದರು. ಅವರ ಬಳಿ ಐದು ಸೆಲ್ಲುಗಳ ಟಾರ್ಚಿತ್ತು. ಅದರ ಸಹಾಯದಿಂದ ಬೇಟೆ ಮುಂದರಿಸಿದರು. ಸ್ವಲ್ಪ ಸಮಯದಲ್ಲಿ ಪೊದೆಯೊಂದರಿಂದ ಏನೋ ಎದ್ದಹಾಗಾಯಿತು. ಅಡ್ಯಂತಾಯರು ಈಡಿಟ್ಟು ಹೊಡೆದರು. ನೋಡಿದರೆ ಬಲಿತ ಮುಳ್ಳು ಹಂದಿ, ಚನಿಯ ಅದನ್ನು ಹೆಗಲಿಗೇರಿಸಿಕೊಂಡ. ರಾತ್ರಿ ತುಂಬಾ ಹೊತ್ತಾದರೂ ನರಸಿಂಗನ ಸುಳಿವಿಲ್ಲ. ಕೊನೆಗೆ ಮರಳುವುದೆಂದು ನಿರ್ಧರಿಸಿ ಎಲ್ಲರೂ ಮುಖ್ಯ ರಸ್ತೆಗೆ ಬಂದರು. ನರಸಿಂಗ ಅಲ್ಲಿ ಸತ್ತು ಬಿದ್ದಿತ್ತು. ಪಕ್ಕದ ಮನೆಯೊಂದರಿಂದ ಹಾರೆ ಪಿಕಾಸು ತಂದು ಅದನ್ನು ಸಾಕಷ್ಟು ಆಳದಲ್ಲಿ ಹೊಳಿ ಹಾಕಿದ್ದಾಯಿತು.

ಅಂದಿರುಳು ಚನಿಯನು ತನ್ನ ಪರಿವಾರದೊಂದಿಗೆ ಮುಳ್ಳು ಹಂದಿಯ ಚರ್ಮ ಸುಲಿದು ಅಂಗಳದಲ್ಲಿ ಬೆಂಕಿ ಹಾಕಿ ಮಾಂಸ ಸುಟ್ಟು ಬಾರ್ಬೆಕ್ಯೂ ಮಾಡಿದನು. ಜತೆಯಲ್ಲಿ ಕುಡಿಯುವುದಕ್ಕೆ ಗೇರು ಹಣ್ಣಿನ ರಸದಿಂದ ತಯಾರಿಸಿದ ಕಟುವಾದ ಅರಾಕ್ ಕೂಡ ಇತ್ತು. ಅವರು ಅಂಗಳದಲ್ಲೇ ಮಲಗಿದರು. ಒಳ್ಳೆ ಜೀವಿಗಳು ಸತ್ತಮೇಲೆ ನಕ್ಷತ್ರಗಳಾಗುತ್ತಾರೆ ಎಂದು ಚನಿಯನ ನಂಬಿಕೆಯಾಗಿತ್ತು. ಕರಿಯನೂ ಸತ್ತು ನಕ್ಷತ್ರವಾಗಿರಲೇಬೇಕಲ್ಲ? ಆಕಾಶದಲ್ಲಿ ಅದನ್ನು ಚನಿಯನ ಕಣ್ಣುಗಳು ಹುಡುಕುತ್ತಿದ್ದುವು. ಆದರೆ ಮಲಗಿದ ಎರಡೇ ನಿಮಿಷಗಳಲ್ಲಿ ಅವನಿಗೆ ನಿದ್ದೆ ಬಂದು ಬಿಟ್ಟಿತು.

ಅಡ್ಯಂತಾಯರ ಅವಸ್ಥೆ ಬೇರೆಯೇ ಇತ್ತು. ಕೈ ಸಿಡಿತದಿಂದ ಅವರಿಗೆ ನಿದ್ದೆ ಬಂದಿರಲಿಲ್ಲ. ಹುಚ್ಚಿನ ರೋಗಾಣುಗಳೀಗ ತನ ದೇಹವನ್ನು ಹೊಕ್ಕಿವೆ ಎಂಬ ಭೀತಿ ಅವರನ್ನು ಕಾಡತೊಡಗಿತು. ಮರುದಿನ ಜೀಪಿನಲ್ಲಿ ಕುಂಬಳೆಗೆ ಹೋದರು. ಅಲ್ಲಿ ಬೇಕಾದ ಚುಚ್ಚುಮದ್ದು ಸ್ಟಾಕಿರಲಿಲ್ಲ. ಡ್ರೈವರನಿಗೆ ಜೀಪನ್ನು ಕಾಸರಗೋಡಿಗೆ ಬಿಡುವಂತೆ ಹೇಳಿದರು. ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಸದ್ಯಕ್ಕೆ ಇತ್ತು. ಗಾಯವನ್ನು ಪರೀಕ್ಷಿಸಿದ ಡಾಕ್ಟರು ಒಟ್ಟು ಹದಿನಾಲ್ಕು ಇಂಜೆಕ್ಷನು ತೆಗೆದುಕೊಳ್ಳಬೇಕಾಗುವುದು ಎಂದರು. ಅದರ ಮೊದಲನೆಯ ಕಂತಿನ ಸೂಜಿ ಹೊಟ್ಟೆಗೆ ಚುಚ್ಚಿದಾಗ ಅಡ್ಯಂತಾಯರ ಕಣ್ಣು ಗಳು ನಕ್ಷತ್ರಗಳನ್ನು ಕಂಡುವೋ! ಕೆಂಪಗೆ ಕಾಯುತ್ತಿದ್ದ ಕೆಂಡಗಳನ್ನು ಕಂಡುವೋ; ಅವರ ಬಾಯಿಯಿಂದ “ಆಹಾ! ಆಹಾ! ಎಂಬ ಉದ್ಗಾರಗಳು ಮಾತ್ರ ಹೊರ ಬಿದ್ದುವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಯಾಸಿ
Next post ವೇದನೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys