‘ಮೇಲೆ ಇದೀಯಲ್ಲಾ ಇಗ್ನಾಸಿಯೋ, ಏನಾದರೂ ಕೇಳಿಸುತ್ತಾ ಎಲ್ಲಾದರೂ ಬೆಳಕು ಕಾಣುತ್ತಾ?’
‘ಏನೂ ಕಾಣಿಸತಾ ಇಲ್ಲ.’
‘ಇಷ್ಟು ಹೊತ್ತಿಗೆ ನಾವು ಅಲ್ಲಿರಬೇಕಾಗಿತ್ತು.’
‘ಸರೀ, ನನಗೇನೂ ಕೇಳತಾ ಇಲ್ಲ.’
‘ಗಮನ ಇಟ್ಟು ನೋಡು, ಇಗ್ನಾಸಿಯೋ.’
ಉದ್ದನೆಯ ಕಪ್ಪು ನೆರಳು ಬತ್ತಿದ ತೊರೆಯ ಬಳಿಯಲ್ಲಿ, ಬಂಡೆಗಳ ಮೇಲೆ ಏರುತ್ತ ಇಳಿಯುತ್ತ ದೊಡ್ಡದಾಗುತ್ತ ಚಿಕ್ಕದಾಗುತಿದ್ದ ಸಾಗುತಿದ್ದವು. ತಟ್ಟಾಡುತ್ತ ಹೆಜ್ಜೆ ಹಾಕುವ ಒಂದೇ ನೆರಳಿನ ಹಾಗಿದ್ದವು. ನೆಲದ ಅಂಚಿನಿಂದ ಬೆಂಕಿಯ ಉಂಡೆಯ ಹಾಗೆ ಚಂದ್ರ ಮೇಲೆ ಬಂದ.
‘ಇಷ್ಟು ಹೊತ್ತಿಗೆ ನಾವು ಆ ಊರಲ್ಲಿರಬೇಕಾಗಿತ್ತು, ಇಗ್ನಾಸಿಯೋ. ನಿನ್ನ ಕಿವಿ ಮುಚ್ಚಿಕೊಂಡಿಲ್ಲ. ನಾಯಿ ಬೊಗಳುತ್ತವೇನೋ ನೋಡು. ತೊನಾಯಾ ಊರು ಬೆಟ್ಟದ ಹಿಂದೆಯೇ ಇದೆ ಅಂದಿದ್ದರು. ನಾವು ಬೆಟ್ಟ ದಾಟಿ ಎಷ್ಟು ಹೊತ್ತಾಯಿತು. ಜ್ಞಾಪಕ ಇದೆಯಾ, ಇಗ್ನಾಸಿಯೋ?’
‘ಹೂಂ. ಏನೂ ಕಾಣತಾ ಇಲ್ಲ ನನಗೆ.’
‘ಸುಸ್ತಾಗಿಬಿಟ್ಟೆ.’
‘ಕೆಳಗಿಳಿಸು ನನ್ನ.’
ಮುದುಕ ಗೋಡೆಗೆ ಒರಗಿ ಭುಜದ ಮೇಲಿನ ಭಾರ ಅತ್ತಿತ್ತ ಸರಿಸಿಕೊಂಡ. ಕಾಲು ಕುಸಿಯುತಿದ್ದರೂ ಕೂರುವ ಮನಸ್ಸು ಮಾಡಲಿಲ್ಲ. ಅವನು ಕೂತಿದ್ದರೆ ಎಷ್ಟೋ ಹೊತ್ತಿಗೆ ಮೊದಲು ಅವರು ಅವನ ಬೆನ್ನ ಮೇಲೆ ಕುಳ್ಳಿರಿಸಿದ್ದ ಮಗನನ್ನು ಮತ್ತೆ ಹೆಗಲಿಗೇರಿಸಿಕೊಳ್ಳಲು ಆಗುತ್ತಿರಲಿಲ್ಲ. ಅವನನ್ನು ಹೊತ್ತು ಕೊಂಡೇ ನಡೆದು ಬಂದಿದ್ದ.
‘ಹೇಗಿದೆ ಈಗ?’
‘ತುಂಬಾ ಕೆಟ್ಟನಿಸತ್ತೆ.’
ಇಗ್ನಾಸಿಯೋ ಜಾಸ್ತಿ ಮಾತಾಡಲಿಲ್ಲ. ಅವನ ಮಾತು ಕಡಿಮೆಯಾಗುತ್ತ ಇತ್ತು. ಆಗೀಗ ನಿದ್ರೆ ಹೋದ ಹಾಗೆ ಇರುತಿತ್ತು. ಒಂದೊಂದು ಸಾರಿ ಮೈ ಥಣ್ಣಗಾಗುತಿತ್ತು. ಮೈ ನಡುಗುತಿತ್ತು. ಕುದುರೆ ಸವಾರನ ರಿಕಾಪಿನ ಹಾಗೆ ಅವನ ಹಿಮ್ಮಡಿ ಅಪ್ಪನ ಪಕ್ಕೆಗೆ ಬಲವಾಗಿ ಒತ್ತುತಿತ್ತು. ಅವನ ಕೈ ಅಪ್ಪನ ಕೊರಳು ಬಳಸಿ ತಲೆಯನ್ನು ಹಿಡಿದು ಅದು ಗಿಲಕಿಯೋ ಅನ್ನುವ ಹಾಗೆ ಅಲ್ಲಾಡಿಸುತಿತ್ತು.
ನಾಲಗೆ ಕಡಿದುಕೊಂಡೇನೆಂದು ಅಪ್ಪ ಹಲ್ಲು ಬಿಗಿ ಹಿಡಿದ.
‘ತುಂಬಾ ನೋವಾಗುತ್ತದಾ?’ ಮಗನನ್ನು ಕೇಳಿದ.
‘ಸ್ವಲ್ಪ,’ ಅಂದ ಇಗ್ನಾಸಿಯೋ.
ಮೊದಲಾದರೆ ಇನ್ನಾಸಿಯೋ ‘ಇಳಿಸು ನನ್ನ, ಇಲ್ಲೇ ಬಿಟ್ಟು ಹೋಗು. ನೀನು ಮುಂದೆ ನಡಿ, ನಾನು ನಾಳೆಯೋ, ಸ್ವಲ್ಪ ಆರಾಮವಾದ ಮೇಲೋ ಬರುತೇನೆ,’ ಅನ್ನುತಿದ್ದ. ಹಾಗೆ ಒಂದೈವತ್ತು ಸಾರಿ ಅಂದಿರಬಹುದು. ಈಗ ಮಾತಾಡಲಿಲ್ಲ. ಚಂದ್ರ ಕಾಣುತಿದ್ದ. ಅವರ ಮುಖದ ನೇರಕ್ಕೆ, ದೊಡ್ಡ ಕೆಂಪು ಚಂದ್ರ, ಅವರ ಕಣ್ಣಿಗೆ ಬೆಳಕು ತುಂಬುತಿದ್ದ. ನೆಲದ ಮೇಲೆ ಅವರ ನೆರಳು ಕಪ್ಪಗೆ ಹಿಗ್ಗುವ ಹಾಗೆ ಮಾಡುತಿದ್ದ.
‘ಯಾವ ಕಡೆಗೆ ಹೋಗತಾ ಇದೇನೋ ಗೊತ್ತೇ ಆಗತಾ ಇಲ್ಲ.’ ಅಂದ ಅಪ್ಪ. ಉತ್ತರ ಬರಲಿಲ್ಲ.
ಮೇಲೆ ಇದ್ದ ಮಗನ ಮುಖವನ್ನು ಬೆಳುದಿಂಗಳು ಬೆಳಗಿತ್ತು. ರಕ್ತವಿರದ ವಿವರ್‍ಣ ಮುಖ ಮಂದ ಬೆಳಕನ್ನು ಕನ್ನಡಿಸುತಿತ್ತು. ಇತ್ತ ಕೆಳಗೆ ಅಪ್ಪ ಕೇಳುತಿದ್ದ.
‘ಕೇಳಿಸುತ್ತಾ ಇಗ್ನಾಸಿಯೋ ನಿನಗೆ? ನನಗೆ ಕಣ್ಣು ಸರಿಯಾಗಿ ಕಾಣಲ್ಲ.’
ಉತ್ತರವಿಲ್ಲ.
ತಡವರಿಸಿಕೊಂಡು ಮುಂದೆ ಸಾಗಿದ ಅಪ್ಪ. ಬೆನ್ನು ಬಾಗುತಿತ್ತು, ನೆಟ್ಟಗೆ ಮಾಡುತಿದ್ದ, ಮತ್ತೆ ಎಡವಿ ತಟ್ಟಾಡುತಿದ್ದ.
‘ಇದು ರಸ್ತೆಯೇ ಅಲ್ಲ. ತೊನಾಯಾ ಊರು ಬೆಟ್ಟದ ಹಿಂದೆಯೇ ಇದೆ ಅಂದಿದ್ದರು. ನಾವು ಬೆಟ್ಟ ದಾಟಿ ಬಂದೆವು. ತೊನಾಯಾ ಇನ್ನೂ ಕಾಣತಾ ಇಲ್ಲ. ಹೋಗಲಿ ಅಂದರೆ ಊರು ಹತ್ತಿರ ಇದೆ ಅನ್ನುವಾಗ ಕೇಳಿಸುವ ಶಬ್ದ ಕೂಡ ಇಲ್ಲ. ಅಲ್ಲಿ, ಮೇಲಿನಿಂದ ನಿನಗೆ ಏನು ಕಾಣುತದೆ ಹೇಳಬಾರದಾ, ಇಗ್ನಾಸಿಯೋ?’
‘ಅಪ್ಪಾ, ನನ್ನ ಇಳಿಸು.’
‘ತುಂಬ ನೋವಾ?’
‘ಹೂಂ.’
‘ನಿನ್ನ ತೊನಾಯಾಕ್ಕೆ ಕರಕೊಂಡು ಹೋಗತೇನೆ. ಅಲ್ಲಿ ಡಾಕ್ಟರು ಇದಾರಂತೆ. ನಿನ್ನ ಕರಕೊಂಡು ಹೋಗತೇನೆ. ನಿನಗೆ ಔಷಧ ಕೊಡತಾರೆ. ಇಷ್ಟು ಹೊತ್ತು ನಿನ್ನ ಹೊತ್ತುಕೊಂಡು ಬಂದಿದೀನಿ. ಈಗ ಯಾರಾದರೂ ಬಂದು ನಿನ್ನ ಮುಗಿಸಲಿ ಅಂತ ಇಲ್ಲಿ ಬಿಟ್ಟು ಹೋಗಲ್ಲ.’
ಸ್ವಲ್ಪ ತಟ್ಟಾಡಿದ. ಆಯ ತಪ್ಪಿ ಒಂದೆರಡು ಹಜ್ಜೆ ಎತ್ತೆತ್ತಲೋ ಹೋದವು. ಮತ್ತೆ ನೆಟ್ಟಗೆ ನಡೆದ.
‘ನಿನ್ನ ತೊನಾಯಾಕ್ಕೆ ಕರಕೊಂಡು ಹೋಗತೇನೆ.’
‘ಇಳಿಸು ನನ್ನ.’
ದನಿಗೆ ಬಲವಿರಲಿಲ್ಲ. ಪಿಸುಮಾತಿಗಿಂತ ಮೆಲ್ಲಗಿತ್ತು. ‘ಸ್ವಲ್ಪ ನಿದ್ರೆ ಮಾಡಬೇಕು,’ ಅಂದ.
‘ಭುಜದ ಮೇಲೆ ಕೂತುಕೊಂಡೇ ಮಾಡು, ಈಗ ಸರಿಯಾಗಿ ಹಿಡಕೊಂಡಿದೀನಿ.’
ಸ್ವಚ್ಛ ಆಕಾಶದಲ್ಲಿ ಮೇಲೇರುತಿದ್ದ ಚಂದ್ರ ಈಗ ನೀಲಿಯಾಗುತಿದ್ದ. ಬೆವರಿನಲ್ಲಿ ತೊಯ್ದ ಮುದುಕನ ಮುಖ ಬೆಳಕಿನ ಪ್ರವಾಹಕ್ಕೆ ಸಿಕ್ಕಿತ್ತು. ಚಂದ್ರ ಕಣ್ಣು ಕುಕ್ಕದ ಹಾಗೆ ನೋಟ ತಗ್ಗಿಸಿದ. ತಲೆ ತಗ್ಗಿಸಲು ಆಗುತ್ತಿರಲಿಲ್ಲ. ಮಗನ ಕೈಗಳನ್ನ ಭದ್ರವಾಗಿ ಹಿಡಿದುಕೊಂಡ.
‘ನಿನಗೋಸ್ಕರ ಇದನ್ನ ಮಾಡತಾ ಇಲ್ಲ ನಾನು. ತೀರಿಕೊಂಡಳಲ್ಲ ನಿಮ್ಮಮ್ಮ ಅವಳಿಗಾಗಿ ಕಷ್ಟಪಡತಾ ಇದೇನೆ. ಅವಳು ಹೆತ್ತ ಮಗ ನೀನು. ಅದಕ್ಕೇ ನಾನು ಕಷ್ಟಪಡತಾ ಇದೇನೆ. ನೀನು ಬಿದ್ದಿದ್ದ ಕಡೆಯೇ ನಿನ್ನ ಬಿಟ್ಟು ಬಂದಿದ್ದರೆ, ಹೀಗೆ ನಿನ್ನ ಎತ್ತಿಕೊಂಡು ಡಾಕ್ಟರ ಹತ್ತಿರ ಕರೆದುಕೊಂಡು ಹೋಗದೆ ಇದ್ದಿದ್ದರೆ ಅವಳ ಆತ್ಮ ಬಂದು ಬಂದು ನನ್ನ ಕಾಡುತಿತ್ತು. ನನ್ನ ಧೈರ್‍ಯ, ನನ್ನ ಶಕ್ತಿ ಎಲ್ಲಾ ಅವಳೇ, ನೀನಲ್ಲ. ಮೊದಲಿನಿಂದಲೂ ನೀನು ನನಗೆ ಕಷ್ಟ, ಅವಮಾನ, ನಾಚಿಕೆ ಅಲ್ಲದೆ ಬೇರೇ ಏನೂ ಕೊಟ್ಟಿಲ್ಲ.’
ಮಾತಾಡತಾ ಇದ್ದ ಹಾಗೆ ಬೆವರಿದ ಇರುಳ ಗಾಳಿ ಬೆವರನ್ನು ಆರಿಸಿತು. ಒಣಗಿದ ಬೆವರ ಮೇಲೆ ಮತ್ತೆ ಬೆವರು ಮೂಡಿತು.
‘ನನ್ನ ಬೆನ್ನು ಮುರಿದರೂ ಸರಿ. ನಿನ್ನ ತೊನಾಯಾಕ್ಕೆ ಕರಕೊಂಡು ಹೋಗತೇನೆ. ನಿನಗೆ ಆಗಿರುವ ಗಾಯಕ್ಕೆ ಔಷಧ ಹಾಕಿಸತೇನೆ. ಸ್ವಲ್ಪ ಸುದಾರಿಸಿಕೊಂಡಮೇಲೆ ನೀನು ಮತ್ತೆ ಕೆಟ್ಟ ದಾರಿ ಹಿಡೀತೀಯ ಅನ್ನುವುದು ಗೊತ್ತು. ಆದರೂ ಪರವಾಗಿಲ್ಲ. ನೀನು ದೂರ ಇದ್ದರೆ ಅಷ್ಟೇ ಸಾಕು. ನಿನ್ನ ಸುದ್ದಿ ಏನೇನೂ ನನ್ನ ಕಿವಿಗೆ ಬೀಳದೆ ಇದ್ದರೆ ಸಾಕು. ಹಾಗಿದ್ದುಬಿಡು, ಇನ್ನೇನೂ ಕೇಳಲ್ಲ. ನನ್ನ ಮಟ್ಟಿಗೆ ನೀನು ನನ್ನ ಮಗನೇ ಅಲ್ಲ. ನಿನ್ನ ಮೈಯಲ್ಲಿರುವ ನನ್ನ ರಕ್ತಕ್ಕೆ ಶಾಪ ಹಾಕಿದ್ದೇನೆ. ನೀನು ಬೀದಿಗೆ ಬಿದ್ದೆ, ಜನರನ್ನ ದೋಚುತ್ತೀ ಕೊಲ್ಲುತ್ತೀ, ಅರಿಯದ ಜನರನ್ನ ಸಾಯಿಸುತ್ತೀ ಅನ್ನುವುದು ಗೊತ್ತಾದಾಗ ಶಾಪ ಹಾಕಿದೆ. ನನ್ನ ಗೆಳೆಯ ಟ್ರಾಂಕ್ವಿಲಿನೋ, ನಿನಗೆ ನಾಮಕರಣ ಮಾಡಿದವನು, ಅವನನ್ನೂ ಬಿಡಲಿಲ್ಲ ನೀನು. ಇವನು ನನ್ನ ಮಗನೇ ಅಲ್ಲ ಅಂತ ಅವತ್ತೇ ತೀರ್ಮಾನ ಮಾಡಿದೆ.
‘ಏನಾದರೂ ಕಾಣಿಸುತ್ತಾ ಕೇಳಿಸುತ್ತಾ ನೋಡು. ನನಗಂತೂ ಕಿವಿ ಸರಿಯಾಗಿಲ್ಲ.’
‘ಏನೂ ಕಾಣಲ್ಲ.’
‘ನಿನ್ನ ಹಣೇಬರಹ ಚೆನ್ನಾಗಿಲ್ಲ.’
‘ಬಾಯಾರಿಕೆ ಆಗತಿದೆ.
‘ತಡಕೋಬೇಕು. ಇನ್ನೇನು ಇಲ್ಲೇ ಇರಬೇಕು. ರಾತ್ರಿ ತುಂಬ ಹೊತ್ತಾಗಿದೆ ಅಂತ ಮನೆಗಳ ದೀಪ ಆರಿಸಿರಬೇಕು. ಕೊನೇ ಪಕ್ಷ ನಾಯಿ ಬೊಗಳುವುದಾದರೂ ಕೇಳಿಸಬೇಕು ನಿನಗೆ. ಕೇಳಿಸಿಕೋ.’
‘ನೀರು ಬೇಕು.’
‘ಇಲ್ಲಿ ನೀರಿಲ್ಲ. ಬರೀ ಕಲ್ಲು. ತಡಕೋ ಬೇಕು ನೀನು, ನೀರಿದ್ದರೂ ನಿನ್ನ ಇಳಿಸಿ ನೀರು ಕುಡಿಸುವುದಕ್ಕೆ ಆಗಲ್ಲ. ನಿನ್ನ ಮತ್ತೆ ನನ್ನ ಹೆಗಲ ಮೇಲೆ ಏರಿಸುವುದಕ್ಕೆ ಇಲ್ಲಿ ಯಾರೂ ಇಲ್ಲ. ನಾನು ಒಬ್ಬನೇ ನಿನ್ನ ಮೇಲೆ ಎತ್ತಲಾರೆ.’
‘ಬಾಯಿ ಒಣಗತಾ ಇದೆ. ಕಣ್ಣು ಎಳೀತಾ ಇದೆ.’
‘ಹುಟ್ಟಿದಾಗಿನಿಂದಲೂ ನೀನು ಹೀಗೇ, ನಿದ್ರೆ ಮಾಡಿದ್ದವನು ಹಸಿವು ಅಂತ ಏಳುತಿದ್ದೆ. ತಿಂದು ಮತ್ತೆ ಮಲಗುತಿದ್ದೆ. ಅಮ್ಮನ ಎದೆ ಹಾಲೆಲ್ಲ ಮುಗಿಸಿದ್ದೆ. ನಿನಗೆ ನೀರು ಕುಡಿಸುತಿದ್ದಳು. ನಿನ್ನ ಹೊಟ್ಟೆ ತುಂಬುತಾ ಇರಲೇ ಇಲ್ಲ. ಹುಚ್ಚು ಹಿಡಿದ ಹಾಗೆ ಒಂದೇ ಸಮ ಅಳತಾ ಇದ್ದೆ. ಹುಚ್ಚು ನಿನ್ನ ನೆತ್ತಿಗೆ ಏರುತ್ತದೆ ಅಂದುಕೊಂಡಿರಲಿಲ್ಲ. ನಿನ್ನಮ್ಮ, ಪುಣ್ಯಾತ್ಮಳು, ದೇವರ ಪಾದ ಸೇರಿದಳು, ನೀನು ಗಟ್ಟಿಮುಟ್ಟಾಗಿ ಒಳ್ಳೆಯವನಾಗಿ ಬೆಳೆಯಬೇಕು ಅನ್ನುತಿದ್ದಳು. ನೀನು ದೊಡ್ಡವನಾಗಿ ಅವಳನ್ನ ನೋಡಿಕೊಳ್ಳುತೀಯ ಅಂದುಕೊಂಡಿದ್ದಳು. ನಿನ್ನ ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಅವಳಿಗೆ. ಅವಳಿಗೆ ಇನ್ನೊಂದು ಮಗು ಆಯಿತು. ಅವಳ ಜೀವ ತಿಂದು ಹಾಕಿತು. ಅವಳೇನಾದರೂ ಬದುಕಿದ್ದರೆ ಇವಾಗ ನೀನೇ ಅವಳನ್ನ ಕೊಂದಿರುತಿದ್ದೆ.’
ಬೆನ್ನ ಮೇಲಿದ್ದವನು ಹಿಮ್ಮಡಿಯಲ್ಲಿ ಪಕ್ಕೆಗೆ ಒತ್ತುವುದು ನಿಂತಿತ್ತು. ಭುಜದ ಮೇಲೆ ಅವನ ಕಾಲು ಸಡಿಲವಾಗಿ ನೇತುಬಿದ್ದು ಜೋಲಾಡುತಿದ್ದವು. ಇಗ್ನಾಸಿಯೋನ ತಲೆ ಅವನು ಬಿಕ್ಕಳಿಸುತ್ತಿರುವ ಹಾಗೆ ಅದುರುತ್ತಿದೆ ಅನ್ನಿಸಿತು ಅಪ್ಪನಿಗೆ, ಅವನ ತಲೆಗೂದಲ ಮೇಲೆ ದಪ್ಪ ಹನಿ ಬಿದ್ದ ಹಾಗೆ ಅನಿಸಿತು.
‘ಅಳತಾ ಇದೀಯ ಇಗ್ಯಾಸಿಯೋ? ನಿನ್ನ ಅಮ್ಮನ ಜ್ಞಾಪಕ ಬಂದು ಅಳು ಬರತಾ ಇದೆ ಅಲ್ಲವಾ? ನೀನು ಅಮ್ಮನಿಗೆ ಅಂತ ಏನೂ ಮಾಡಲಿಲ್ಲ. ಅಪ್ಪ ಅಮ್ಮನ ಋಣ ತೀರಿಸಲಿಲ್ಲ. ಪ್ರೀತಿ ಮರುಕದ ಬದಲಾಗಿ ಕೆಟ್ಟತನ ತುಂಬಿಕೊಂಡೆ. ಈಗ ನೋಡಿದೆಯಾ? ನಿನ್ನ ಮೈಯೆಲ್ಲ ಗಾಯ. ನಿನ್ನ ಗೆಳೆಯರಿಗೆ ಏನಾಯಿತು? ಅವರನ್ನೂ ಕೊಂದರಾ? ನಮಗೆ ಯಾರೂ ದಿಕ್ಕಿಲ್ಲ. ನಾವು ಸತ್ತರೂ ಪರವಾಗಿಲ್ಲ ಅನ್ನುತಿದ್ದರೇನೋ ನಿನ್ನ ಗೆಳೆಯರು. ಆದರೆ ನೀನು ಇಗ್ನಾಸಿಯೋ? ನಿನಗೆ ನಾವು ಇದ್ದೆವಲ್ಲ?’
ಕೊನಗೂ, ಊರು. ಬೆಳುದಿಂಗಳಲ್ಲಿ ಮಿರುಗುವ ಚಾವಣಿಗಳು ಅವನಿಗೆ ಕಂಡವು. ಮಗನ ಭಾರ ಹೆಚ್ಚಿತು ಅನ್ನಿಸಿತು. ಕಾಲು ಕುಸಿದಂತೆ ಅನ್ನಿಸಿ ಮತ್ತೆ ಪ್ರಯತ್ನಪಟ್ಟು ನೇರವಾಗಿ ನಡೆದ ಮೊದಲ ಮನೆ ಕಂಡ ತಕ್ಷಣ ಗೋಡೆಗೆ ಒರಗಿ ಮೈಯ ಕೀಲು ಕಳಚಿತೋ ಅನ್ನುವ ಹಾಗೆ ಜಾರಿ ಕೂತುಕೊಂಡ.
ತನ್ನ ಕತ್ತನ್ನು ಅಮುಕಿ ಹಿಡಿದಿದ್ದ ಮಗನ ಬೆರಳನ್ನು ಕಷ್ಟಪಟ್ಟು ಬಿಡಿಸಿದ. ನಾಯಿ ಬೊಗಳುವ ಶಬ್ದ ಎಲ್ಲೆಲ್ಲಿಂದಲೂ ಕೇಳುವುದಕ್ಕೆ ಶುರುವಾಯಿತು.
‘ನಿನಗೆ ಕೇಳಿಸಲಿಲ್ಲವಾ ಇಗ್ನಾಸಿಯೋ? ಯಾಕೆ ಹೇಳಲಿಲ್ಲ? ಆಸೆಯ ಸುಖ ಕೂಡ ಸಿಗದ ಹಾಗೆ ಮಾಡಿದೆಯಲ್ಲ.’
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : No oyes ladrar los perros? | Can’t you hear the dogs barking?