ಅವಳು

ಅವಳು

ಶ್ರಾವಣ ಮಾಸದ ಶನಿವಾರ, ಶನೇಶ್ವರ ದೇವರ ಅರ್‍ಚಕನಾದ ನಾನು ದಿನ ಪೂಜೆಗೆ ಹೋಗುವ ಸಮಯಕ್ಕೆ ಮೊದಲು ದೇವಸ್ಥಾನಕ್ಕೆ ಹೊರಟಿದ್ದೆ. ಮಾಮೂಲಿ ಶನಿವಾರಗಳು ದೇವಸ್ಥಾನದಲ್ಲಿ ಜನರಿಂದ ಗಿಜಿಗುಡುತ್ತಾ ಇದ್ದ ದೇವಸ್ಥಾನದಲ್ಲಿ ಇನ್ನೂ ಶ್ರಾವಣ ಶನಿವಾರಗಳು ಬಂತೆಂದರೆ ಕೇಳಬೇಕೆ.

ಈ ದಿವಸ ಬೆಳಿಗ್ಗೆ ಪ್ರಾರ್‍ಥನಾ ಕಾಲದಲ್ಲಿಯೇ ತೋಟದ ಮನೆ ಶಂಕರ ರಾಯರ ಮಗ ಶನಿ ಶಾಂತಿ ಹೋಮ ಮಾಡಿಸುವುದಾಗಿ ಹೇಳ ಬೇಕಾದ ಸಾಮಾನುಗಳ ಪಟ್ಟಿ ಪಡೆದು ಹೋಗಿದ್ದ. ಹೋಮ ಆಚಾರತ್ವ ವಹಿಸಲು ಸತೀಶ್‌ಶರ್‍ಮರಿಗೆ ಹೇಳಿದ್ದೆ. ಹಾಗೇ ಬರುವಾಗ ಕೈಂಕರ್ಯಕ್ಕಾಗಿ ಜೊತೆಗೆ ಹೋಮಕ್ಕೆ ದ್ರವ್ಯ ಹಾಕಲು ಸಹಾಯಕ್ಕಾಗಿ ಇನ್ನೊಬ್ಬರನ್ನು ಕರೆದುಕೊಂಡು ಬರುವಂತೆ ಸತೀಶ್ಶರ್ಮರಿಗೆ ಹೇಳಿದ್ದೆ. ಹೇಳಿದ ಸಮಯಕ್ಕೆ ಅರ್ಧ ತಾಸು ಮುಂದಾಗಿ ಬರುವುದೇ ಸತೀಶ್ಶರ್ಮರ ವಾಡಿಕೆ. ಹಾಗೇ ಹೋಮಕ್ಕೆ ಕುಂಡ ಹಾಕುವುದರಿಂದ ಹಿಡಿದು ನವಗ್ರಹ ಜೋಡಿಸುವುದು, ಮಂಡಲ ಹಾಕುವುದು ಇತ್ಯಾದಿ ಸಣ್ಣಪುಟ್ಟ ಕೆಲಸಗಳನ್ನು ತುಂಬಾ ಶ್ರದ್ಧೆಯಿಂದ ಮಾಡುವ ಮನೋಭಾವ ಸತೀಶ್ಶರ್ಮರದ್ದು. ಹೀಗಾಗಿಯೇ ಅವರಿಗೆ ನಮ್ಮ ಭಾಗದಲ್ಲಿ ಉತ್ತಮವಾದ ಹೆಸರಿತ್ತು. ಹಾಗೆ ಯಾರು ಎಷ್ಟು ಸಂಭಾವನೆ ಕೊಡಲಿ ಅದರಲ್ಲೇ ತೃಪ್ತಿ ಪಡುವ ದೊಡ್ಡ ಮನಸ್ಸು ಅವರಲ್ಲಿತ್ತು. ಹೀಗಾಗಿ ಯಾರೇ ಹೋಮ ಮಾಡಿಸಿದರೂ ಶರ್ಮರಿಗೆ ಹೇಳುವುದು ನಮ್ಮ ದೇವಸ್ಥಾನದ ವಾಡಿಕೆ, ಶರ್ಮರಿಗೆ ಪುರುಸೊತ್ತು ಇಲ್ಲ ದಿನದಲ್ಲಿ ಅವರು ಉಡುಪರನ್ನೋ, ಧೀಕ್ಷಿತರನ್ನೋ ಛಾತ್ರನ್ನೋ ಕಳಿಸಿಕೊಡುತ್ತಿದ್ದರು. ಒಪ್ಪಿಕೊಂಡು ಕೈ ಕೊಡುವ ಗುಣ ಅವರಲ್ಲಿ ಇರಲಿಲ್ಲ.

ನಾನು ದೇವಸ್ಥಾನಕ್ಕೆ ಹೋದಾಗ ದೇವಸ್ಥಾನ ಜಗಲಿ ಮೇಲೆ ಸತೀಶ್ ಶರ್ಮರು ನವಗ್ರಹ ಮಂಡಲದ ರಚನೆಯಲ್ಲಿ ತೊಡಗಿದರು. ಅವರ ಸಂಗಡಿಗರು ಹೋಮಕ್ಕೆ ತಯಾರಿ ಮಾಡುತ್ತಿದ್ದರು. ನಾನು ಶಂಕರರಾಯರ ಮಗನ ನಿರೀಕ್ಷೆಯಲ್ಲಿದೆ, ದೇವಸ್ಥಾನ ಶುಚಿ ಕಾರ್‍ಯದಲ್ಲಿ ದೀಪು ಮಗ್ನನಾಗಿದ್ದ. ದೇವರ ವಿಗ್ರಹದ ಕುರಿತು ಅವನಿಗೆ ಅಪಾರ ಪ್ರೀತಿ. ವಿಗ್ರಹಕ್ಕೆ ತಿಂಗಳಿಗೊಮ್ಮೆ ಎಳ್ಳು ಎಣ್ಣೆ ಸ್ನಾನ ಮಾಡಿಸಿ ಪ್ರತ್ಯಕ್ಷ ಶನೀಶ್ವರ ಎದ್ದು ಬಂದಿದ್ದಾನೋ ಎನ್ನುವ ರೀತಿ ವಿಗ್ರಹಕ್ಕೆ ಕಳೆ ನೀಡುವುದರಲ್ಲಿ ದೀಪುವಿನ ಪಾತ್ರ ಹಿರಿದಾಗಿತ್ತು. ನಾನು ದೇವಸ್ಥಾನ ಒಪ್ಪಿ ಕೊಂಡಾಗಿನಿಂದ ನನ್ನ ಬಳಿ ಇರುವ ಏಕಮೇವ ಸಂಗಡಿಗ ಅವನಾಗಿದ್ದ. ನಾನು ಸಿಟ್ಟಿನಲ್ಲಿ ಏನೇ ಬೈಯಲ್ಲಿ ಅದನ್ನು ಅವನು ಮನಸ್ಸಿಗೆ ಹಾಕಿಕೊಳ್ಳದೆ ಮತ್ತೆ ತಾನೇ ನಗುತ್ತಾ ನನ್ನೆದುರು ಬಂದಾಗ ನನ್ನ ಸಿಟ್ಟಿನ ಕುರಿತಾಗಿ ನನಗೆ ಕೆಲವು ಬಾರಿ ಮನಸ್ಸು ನೋವಾಗಿದುದಿದೆ. ಆದರೇನು ಮಾಡುವುದು ನನಗೆ ಸಿಟ್ಟು ಬಂದರೆ ತಡೆಯಲಾಗದು.

ಹೋಮದ ಜವಾಬ್ದಾರಿಯನ್ನು ಸತೀಶ್ಶರ್ಮರ ಹೆಗಲಿಗೇರಿಸಿದ ನಾನು ದೇವಾಲಯದ ಕಡೆಗೆ ಹೊರಟೆನು. ನನ್ನ ದೃಷ್ಟಿ ದೇವಾಲಯ ತುದಿಯಲ್ಲಿ ದೇವರನ್ನೇ ನೋಡುತ್ತಾ ಕುಳಿತ ಇಪ್ಪತ್ತೈದರ ತರುಣಿಯ ಕಡೆ ಹೊರಳಿತು. ಹೌದು ಆಕೆಯನ್ನು ನಾನು ಈ ಹಿಂದೆ ದೇವಾಲಯದ ಆವರಣದಲ್ಲಿ ಎಲ್ಲಿಯೂ ಕಂಡಿಲ್ಲವಲ್ಲ. ಯಾವುದೇ ವ್ಯಕ್ತಿಯನ್ನು ಒಮ್ಮೆ ನೋಡಿದರೆ ಸಾಕು ಸದಾಕಾಲ ನೆನಪಿಡುವ ವ್ಯಕ್ತಿಯ ನಾನು. ಹೇಗೆ ನನ್ನ ಮನಸ್ಸಿಗೆ ಬುದ್ದಿಗೆ ಕೆಲಸ ನೀಡಿದೆ.

ಹೌದು.

ಆ ವ್ಯಕ್ತಿಯನ್ನು ನಾನೆಂದೂ ನೋಡಿಲ್ಲ…..

ಆಕೆ ಯಾವುದೋ ಅವ್ಯಕ್ತ ಚಿಂತೆಯಿಂದ ಬಳಲುತ್ತಾ ಇರುವಂತೆ ನನಗೆ ತೋರಿ ಬಂತು. ನಾನು ನೋಡಿದ್ದ ಅವಳ ಗಮನಕ್ಕೆ ಬಂದಿರಲಿಕ್ಕೆ ಸಾಕು, ಅವಳು ತನ್ನ ನೋಟ ಬದಲಾಯಿಸಿದಳು.

ಸತೀಶ್ ಶರ್‍ಮಾ ಹೋಮಕ್ಕೆ ಜೋಡಿಸಿಕೊಂಡು ಕಾಯುತ್ತಾ ಕುಳಿತಿರುವಾಗ ಶಂಕರ ರಾಯರ ಸಂಸಾರ ಆ ಕಡೆಯಿಂದ ಬಂತು. ಶರ್ಮರು ರಾಯರನ್ನು ಕರೆದು ಫಲ ಸಮರ್ಪಣೆ ತಟ್ಟೆಯನ್ನು ಅವರ ಕೈಗೆ ಕೊಟ್ಟು ದೇವರ ಬಳಿ ಕರೆತಂದು ದೇವರ ಮುಂದೆ ನಿಲ್ಲಿಸಿ ಅವರ ಗೋತ್ರ ಪ್ರವರ ಹೇಳಿದ ನಂತರ ಮಂತ್ರಾಕ್ಷತೆ ಹಾಕಿಸಿ ದೇವರ ಮುಂದೆ ಇಟ್ಟರೆ. ದೀಪು, ಸತೀಶ್ಶರ್ಮ ಸೇರಿಕೊಂಡು ಹೋಮ ಪ್ರಾರಂಭ ಮಾಡಿದಾಗ ನಾನು ಶನೀಶ್ವರ ದೇವಸ್ಥಾನ ಕಡೆಗೆ ಹೊರಟೆ. ಆಗ ಆ ಯುವತಿ ದೇವಸ್ಥಾನ ಕಡೆಗೆ ಬರತೊಡಗಿದಳು.

ದೀಪ ದೇವರಿಗೆ ಅಭಿಷೇಕ ಮಾಡಿ ತುಳಸಿ ಹೂವು ಹಾಕಿ ಅಲಂಕಾರ ಮಾಡಿ ಮುಗಿಸಿದ. ನಾನು ಪೂಜೆ ಪ್ರಾರಂಭ ಮಾಡಿದ್ದೆ. ದೇವಸ್ಥಾನದ ಆಡಳಿತ ಮಂಡಳಿಯವರು ದೇವರ ಪೂಜೆ ಊರಿಗೆಲ್ಲಾ ಕೇಳಲೆಂಬ ಉದ್ದೇಶದಿಂದ ದೇವಸ್ಥಾನಕ್ಕೊಂದು ಮೈಕು ಕೊಟ್ಟಿದ್ದರು. ನಾನು ಪೂಜೆ ಮಾಡಲು ಪ್ರಾರಂಭ ಮಾಡಿದ ಮೇಲೆ ಮೈಕಾಸುರ ಅರ್‍ಭಟ ಕೇಳಿ ಊರಿನ ಜನರೆಲ್ಲಾ ದೇವಸ್ಥಾನ ಕಡೆ ಬರತೊಡಗಿದರು. ಶ್ರಾವಣ ಶನಿವಾರ ಹಾಗೂ ಧನುರ್‍ಮಾಸದ ಸಮಯದಲ್ಲಿ ಕೊಡುವ ಚರ್‍ಪಿಗಾಗಿ ಹುಡುಗರು ಸೈನ್ಯವೇ ದೇವಾಲಯದ ಕಡೆಗೆ ಬರುತಿತ್ತು.

ದೇವರಿಗೆ ಪುಷ್ಪಪೂಜೆ, ಆವರಣ ಪೂಜೆ, ನಾಮ ಪೂಜೆ, ಮಾಡಿ ಮುಗಿಸಿ ಅಷ್ಟೋತ್ತರ ಪೂಜೆಯನ್ನು ಮಾಡಿ ಮುಗಿಸುವಾಗ ಸತೀಶ್‌ ಶರ್ಮರ ಹೋಮದ ಪೂರ್‍ಣಾಹುತಿ ಮುಗಿದಿತ್ತು. ದೇವರಿಗೆ ಮತ್ತು ಹೋಮಕ್ಕೆ ಮಂಗಳಾರತಿ ಮಾಡಿ ಹೋಮದ ಸೇವಾಕರ್‍ತ್ರುಗಳಾದ ಶಂಕರರಾಯರ ಸಂಸಾರಕ್ಕೆ ಮೊದಲು ಮಂಗಳಾರತಿ ಕೊಟ್ಟು ಉಳಿದ ಭಕ್ತಾದಿಗಳಿಗೆ ಕೊಡಲು ದೀಪು ಹೊರಟನು. ಮಂಗಳಾರತಿ ಕೊಟ್ಟು ನಂತರ ಅಕ್ಷತೆ ಕೊಟ್ಟು ದೇವಿಗೆ ಪ್ರಾರ್‍ಥನೆ ಮಾಡಿ ಮಂಡಲದ ಮೇಲೆ ಅಕ್ಷತೆ ಹಾಕಿದಂತೆ ಬಂದಂತಹ ಭಕ್ತಾದಿಗಳಿಗೆ ದೀಪು ವಿನಂತಿ ಮಾಡಿಕೊಂಡನು. ಸತೀಶ್ ಶರ್ಮರು ತಮ್ಮ ಕಂಚಿನ ಕಂಠ ದಲ್ಲಿ ಮಂತ್ರ ಪುಪ್ಪ ಹೇಳತೊಡಗಿದಾಗ ಇಡೀ ದೇವಸ್ಥಾನವೇ ನಿಶಬ್ದವಾಗಿ ಕೇಳಿಸಿಕೊಂಡಿತು.

ಹೊರಗೆ ಟೇಬಲ್ ಮತ್ತು ಚೇರನ್ನು ಜೋಡಿಸಿಕೊಂಡು ಬಂದಂತಹ ಭಕ್ತಾದಿಗಳಿಗೆ ತೀರ್‍ಥ, ಕುಂಕುಮ, ಹೂ ಪ್ರಸಾದ ಜೊತೆಗೆ ಬಾಳೆಹಣ್ಣಿನ ರಸಾಯನ ಕೊಡುವುದರಲ್ಲಿ ದೀಪು ನಿರತನಾದನು. ದೇವಸ್ಥಾನದ ಗದ್ದಲ ಮುಗಿದ ನಂತರ ನನ್ನ ಗಮನ ಮತ್ತೆ ಆ ಯುವತಿ ಕಡೆ ಹೊರಳಿತು.

ಹಣೆಗೆ ಪೂರ್‍ಣ ಚಂದಿರನಂತೆ ಅರ್‍ಚನೆ ಮಾಡಿದ ಕುಂಕುಮ ವನ್ನು ಇಟ್ಟುಕೊಂಡು, ತನ್ನ ಹೂವಿನಂತಹ ಜಡೆ ಮಲ್ಲಿಗೆ ಹೂವು ಮುಡಿದುಕೊಂಡು ರಸಾಯನ ತಿನ್ನುವುರಲ್ಲೇ ನಿರತಳಾಗಿದ್ದಳು.

ಹುಣ್ಣಿಮೆಯ ಚಂದಿರನ ತುಣುಕೊಂಡು ಭೂಮಿಗೆ ಬಿದ್ದಿದೆಯೇನೋ ಎನ್ನುವಂತಹ ಅಪರೂಪದ ರೂಪ ಲಾವಣ್ಯ ಅವಳಲ್ಲಿತ್ತು. ಅದೇಕೋ ಬೇಡ ಬೇಡವೆಂದರೂ ನನ್ನ ಕಣ್ಣುಗಳು ಅವಳನ್ನು ಹುಡುಕುತ್ತಾ ಹೊರಟಿತ್ತು.

ತಿಂಡಿ ತಿಂದು ಕೈ ತೊಳೆದು ದೇವರಿಗೆ ಕೈ ಮುಗಿದು ನಮಸ್ಕಾರ ಮಾಡಿ ಆ ತರುಣಿ ಮಾಯವಾದಾಗಲೇ ನಾನು ವಾಸ್ತವ ಪ್ರಪಂಚಕ್ಕೆ ಬಂದಿದ್ದು. ಆಗಲೇ ದೀಪು “ಏನ್ ಸಾರ್ ಮನೆಗೆ ಹೋಗುವ ಯೋಚನೆ ಇಲ್ಲವೇ? ಸತೀಶ್ ಶರ್ಮರು, ಶಂಕರರಾಯರ ಮನೆಯವರೆಲ್ಲಾ ಆಗಲೇ ಹೋದರು. ಶರ್‍ಮರು ಮುಂದಿನ ಹುಣ್ಣಿಮೆಗೆ ಸತ್ಯನಾರಾಯಣ ಪೂಜೆಗೆ ಬರುವುದಿಲ್ಲವಂತೆ ಬದಲಿಗೆ ಜನ ಮಾಡುವಂತೆ ಹೇಳಿ ಹೋಗಿದ್ದಾರೆ”.

ದೀಪು ಏನು ಹೇಳುತ್ತಿದ್ದಾನೋ ನನಗೊಂದು ಅರ್ಥವಾಗಲಿಲ್ಲ. ನನ್ನ ಮನಸ್ಸು ಪೂರ್ಣ ಆಕೆಯಲ್ಲೇ ನೆಲೆಯಾಗಿತ್ತು. ದೀಪುವಿನ ಬೈಕೇರಿ ನಮ್ಮ ಮನೆಗೆ ಹೊರಟೆ, ದೀಪು ಮನೆ ಬಳಿ ಬೈಕ್ ನಿಲ್ಲಿಸಿ “ಸಾರ್ ನಾನು ಇನ್ನೊಂದು ವಾರ ಅಕ್ಕನ ಮನೆಯ ಕಡೆ ಹೋಗ್ತಾ ಇದ್ದೀನಿ. ದೇವಸ್ಥಾನಕ್ಕೆ ಬರಲಾಗುತ್ತಿಲ್ಲ” ಎಂದು ಸುರ್ ಅಂತ ಮಾಯವಾದ.

ನಾನು ಮನೆಗೆ ಬಂದು ಬಾಗಿಲು ತೆರೆದು, ತಣ್ಣೀರು ಸ್ನಾನ ಮಾಡಿದೆ. ಅಮ್ಮ ಇಲ್ಲಿಗೆ ಬಂದಾಗಿನಿಂದ ಮದುವೆಯಾಗುವಂತೆ ಒತ್ತಾಯ ಮಾಡುತ್ತಲೇ ಇದ್ದಾಳೆ. ಆದರ ಮದುವೆಯ ಕಡೆ ನನ್ನ ಗಮನವೇ ಇಲ್ಲ. ಇಬ್ಬರು ತಂಗಿಯ ಮದುವೆ ನಂತರ ನಾನು ಮದುವೆಯಾಗುವ ನಿರ್‍ಧಾರ ಮಾಡಿದ್ದೆ.

ವಾರಾಹಿ ಯೋಜನೆಯಡಿ ನಮ್ಮ ಇಡೀ ಜಮೀನುಗಳು ಮುಳುಗಿ ಹೋಗಿತ್ತು. ನಮ್ಮ ಗದ್ದೆಗೆ ಅಲ್ಪ ಸ್ವಲ್ಪ ಪರಿಹಾರವು ಸಿಕ್ಕಿತ್ತು. ಆದರೆ ಅವರು ಕೊಟ್ಟ ಹಣ ನೋಡು ನೋಡುತ್ತಲೇ ಕರಗಿ ಹೋಗಿತ್ತು. ಇದೇ ಸಮಯದಲ್ಲಿ ನನ್ನ ಹಿರಿಯ ತಂಗಿಗೆ ಬಾಳೆಗದ್ದೆ ಕಡೆಯಿಂದ ಉತ್ತಮ ಸಂಬಂಧ ಬಂತು. ಮದುವೆ ಮಾಡಿ ಕೈ ತೊಳೆದುಕೊಳ್ಳುವಾಗಲೇ ನಮ್ಮ ತಂದೆಯವರ ಆಕಸ್ಮಿಕ ಮರಣಕ್ಕೆ ತುತ್ತಾದರು. ನಂತರ ಕಿರಿಯ ತಂಗಿಗೂ ಉತ್ತಮ ಸಂಬಂಧ ಬಂತು. ಆಕೆಯ ಮದುವೆಯನ್ನು ಮಾಡಿ ಮುಗಿಸಿದ ನಂತರ ನನಗೆ ಸ್ವಲ್ಪ ನೆಮ್ಮದಿ ಬೇಕಾಗಿತ್ತು. ನೆಮ್ಮದಿಯನ್ನು ಅರಸುತ್ತಾ ನಾನು ಬೆಂಗಳೂರನ್ನು ಸೇರಿದ್ದು, ಆದರೆ ಅಮ್ಮ ಊರಿನ ನಂಟು ತೊರೆದು ಬೆಂಗಳೂರಿಗೆ ಬರಲು ಒಪ್ಪದಿದ್ದಾಗ ನಾನೊಬ್ಬನೇ ಬಂದು ಬೆಂಗಳೂರು ಸೇರಿದೆ. ಮೊದಲಿಗೆ ನಮ್ಮೂರಿನವರೇ ಆದ ರಂಗಣ್ಣನ ಮಲೆಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತೀರ್ಥ ಪ್ರಸಾದ ಕೊಡುವ ಕೆಲಸ ಹಿಡಿದೆ, ಅವರ ಜೊತೆಗೆ ಇರತೊಡಗಿದೆ. ಆದರೆ ಅವರ ಸಂಸಾರ ಕಿರಿಕಿರಿಯಿಂದ ಬೇರೆಯದೇ ದೇವಸ್ಥಾನ ಹುಡುಕುತ್ತಿರುವಾಗ ಆಗಷ್ಟೆ ಪ್ರತಿಷ್ಠೆಯಾಗಿದ್ದ ಶನೀಶ್ವರ ದೇವಸ್ಥಾನದ ಮಂಡಲ ಪೂಜೆಗೆ ಸೇರಿಕೊಂಡೆ.

ಮಂಡಲ ಪೂಜೆ ಚೆನ್ನಾಗಿ ಮಾಡಿರುವುದನ್ನು ನೋಡಿ ದೇವಸ್ಥಾನ ಕಮಿಟಿಯವರು ನೀವು ಮುಂದೆ ಮುಂದುವರಿಸಿ ಕೊಂಡು ಹೋಗಿ ಎಂದಾಗ ನನಗೋ ತುಂಬಾ ಖುಷಿ. ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ಕಾಲು ಮೇಲೆ ನಿಲ್ಲವಂತಹ ಅವಕಾಶ ಸಿಕ್ಕ ಬಗ್ಗೆ ನನಗೆ ಖುಷಿಯೇ ಖುಶಿ.

ಹಾಗೂ ಹೀಗೂ ದೇವಸ್ಥಾನ ಉನ್ನತೀಗೊಳ್ಳುವಾಗ ನನಗೂ ಕೆಲಸ ಜಾಸ್ತಿಯಾಗತೊಡಗಿತು, ಆಗ ನನಗೊಬ್ಬ ಸಹಾಯಕನ ಅವಶ್ಯಕತೆ ಬಿದ್ದಾಗ ಕಣ್ಣಿಗೆ ಬಿದ್ದವನೇ ಈ ‘ದೀಪು’ ಅವನ ಗುಣ ನಡತೆ ನನಗಿಷ್ಟ ವಾದಾಗ ಅವನನ್ನು ನನ್ನ ಆಪ್ತ ವಲಯಕ್ಕೆ ಸೇರಿಸಿಕೊಂಡೆ.

ಅಮ್ಮ ನಾನು ಊರಿಗೆ ಬಂದಾಗಲೆಲ್ಲಾ ಹೇಳುವ ಅಥವಾ ಕೇಳುವ ಪ್ರಶ್ನೆ ಒಂದೇ – “ಯಾವಾಗ ಮದುವೆ ಆಗುತ್ತೀ?”

ಅದಕ್ಕೆ ಬರೀ ಮುಗುಳು ನಗುವೇ ನನ್ನ ಉತ್ತರ. ಯಾಕೆಂದರೆ ಬ್ರಾಹ್ಮಣ ಹುಡುಗರಿಗೆ ಹುಡುಗಿ ಸಿಗುವುದು ಈಗಿನ ಕಾಲದಲ್ಲಿ ಕಷ್ಟ. ಅದರಲ್ಲೂ ಅಡುಗೆ ವೃತ್ತಿ, ಪುರೋಹಿತ ವೃತ್ತಿ ಮಾಡುವವರಿಗೆ ಯಾರು ತಾನೇ ಹೆಣ್ಣು ಕೊಡುತ್ತಾರೆ? ಆದರೆ ಅಮ್ಮನಿಗೆ ಏನು ತಾನೇ ಗೊತ್ತು. ತನ್ನ ಮಗನಿಗೆ ಯಾರಾದರೂ ಹೆಣ್ಣನ್ನು ಕೊಡುತ್ತಾರೆಂಬ ದೂರ ಆಸೆ ಅವಳಿಗೆ ಹಾಗೂ ಆಕೆ ಒಮ್ಮೆ ಹೇಳಿದ್ದು ಉಂಟು.

“ಪ್ರಾಯ ಸರಿಯುವುದರೊಳಗೆ ಮದುವೆಯಾಗಿ ಬಿಡು, ಜಾತಿ ಪ್ರಶ್ನೆ ಈಗ ಬಿಡು.” ಅಮ್ಮನ ಈ ಮಾತು ಕೇಳಿ ಕಾಲ ಎಷ್ಟು ಬದಲಾಗಿದೆ. ಹಿಂದೆಲ್ಲ ಅಮ್ಮ ಜಾತಿಯ ಕಟ್ಟು ನಿಟ್ಟಿನಲ್ಲಿ ಬೆಳೆದವಳು.

ಮನಸ್ಸು ಅದು ಏಕೋ ಇಂದು ಭಾರೀ ಹಿಂದೆ ಓಡತೊಡಗಿತ್ತು. ಮತ್ತೆ ನಾನು ನಿದ್ರಾವಸ್ಥೆಗೆ ಜಾರಿದ್ದೆ ನನಗೆ ತಿಳಿಯಲಿಲ್ಲ.

ಮರುದಿನ ಭಾನುವಾರ ಬೆಳಿಗ್ಗೆ ಮಾಮೂಲಿನಂತೆ ದೇವಸ್ಥಾನಕ್ಕೆ ಹೋದಾಗ ಆಕೆ ಅಲ್ಲಿ ಮತ್ತೆ ಪ್ರತ್ಯಕ್ಷಳಾದಳು. ಆದರೆ ಮಾತುಕತೆ ಇಲ್ಲ. ಆದರೂ ನಾನೇ ಒತ್ತಾಯಿಸಿ.

“ಏನಮ್ಮ ನಿನ್ನ ಹೆಸರು?”

“ಸೌಮ್ಯ…”

“ನಿಮ್ಮ ಊರು ಯಾವುದು?”

“ರಾಮನಗರ”

“ನಿಮ್ಮ ತಂದೆಯವರ ಹೆಸರು?”

“ಚಂದ್ರಶೇಖರ ಶಾಸ್ತ್ರಿ”

“ಇಲ್ಲಿಗೇಕೆ ಬಂದಿರುವಿರಾ?”

“……..”

“ನಿಮ್ಮ ತಂದೆ ತಾಯಿಗೆ ನೀವು ಇಲ್ಲಿಗೆ ಬಂದ ಕಾರಣ ತಿಳಿದಿದೆಯೇ?”

“……..”

ನನ್ನ ಮುಂದಿನ ಎಲ್ಲಾ ಪ್ರಶ್ನೆಗಳಿಗೆ ಆಕೆಯ ಉತ್ತರ ಮೌನವಾಗಿತ್ತು.

ದೇವಸ್ಥಾನದ ಮುಂದಿನ ಕಟ್ಟೆಯ ಮೇಲೆ ಕುಳಿತು ಆಕಾಶವನ್ನು ನೋಡುತ್ತಾ ಕುಳಿತು ಆ ಯುವತಿ ನನಗೆ ಪ್ರಶ್ನೆಯಾಗಿ ಕೊಡತೊಡಗಿದಳು. ಸುಮಾರು ಮೂರು ನಾಲ್ಕು ದಿವಸ ಪ್ರಸಾದದ ಸಮಯಕ್ಕೆ ಸರಿಯಾಗಿ ಕೈಯೊಡ್ಡುತ್ತಿದ್ದ ಆಕೆ ಮುಖ ನನಗೆ ರಾತ್ರಿ ಕನಸಿನಲ್ಲಿ ಕಾಡುತ್ತಿತ್ತು.

ಮತ್ತೆ ಶ್ರಾವಣಾ ಎರಡನೇ ಶನಿವಾರ ಬಂತು. ಆ ದಿವಸ ಸುಳುಗೋಡು ತಿಮ್ಮಪ್ಪಯ್ಯ ಮಗ ಸುರೇಂದ್ರ ನವಗ್ರಹ ಶಾಂತಿ ಇಟ್ಟುಕೊಂಡಿದ್ದ. ನಾನು ಬೆಳಿಗ್ಗೆ ಎದ್ದು ಬೇಗ ದೇವಸ್ಥಾನಕ್ಕೆ ಹೋದೆ. ದೇವರ ಪೂಜೆ ಮುಗಿದು ಹೋಮ ಮುಗಿದು ಪ್ರಸಾದ ಹಂಚಿದರೂ ಆ ಯುವತಿ ಮಾತ್ರ ನಾ ಪತ್ತೆಯಾಗಿದ್ದಳು. ನಾನು ಯಾಕೋ ಅವಳನ್ನು ಹುಡುಕಿದೆ. ಇಡೀ ಜಾಗವನ್ನೆಲ್ಲ ಜಾಲಾಡಿದರೂ ಆ ಅನಾಮಿಕ ಸುಂದರಿ ಸುಳಿವು ಇಲ್ಲ. ಕೊನೆಗೂ ಆಕೆ ಬಂದಂತೆ ಮಾಯವಾಗಿ ಹೋಗಿ ಬಿಟ್ಟಳು. ಆಕೆ ಬಗ್ಗೆ ನನಗೆ ಯಾಕಿಷ್ಟು ಪ್ರೀತಿ ವಿಶ್ವಾಸ ಅನ್ನುವ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಮಾತ್ರ ಹೊಳೆಯಲೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀಡು ಚೈತನ್ಯ
Next post ನನ್ನ ಪ್ರಾಣ ಕನ್ನಡ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…