ದೂರದೊಂದು ಹಾಡಿನಿಂದ
ಮೂಡಿಬಂದ ಕನ್ನಡ;
ನನ್ನ ಮುದ್ದು ಕನ್ನಡ
ಕಾಣದೊಂದು ಶಕ್ತಿಯಿಂದ
ಉಸಿರಿಗಿಳಿದ ಕನ್ನಡ;
ನನ್ನ ಪ್ರಾಣ ಕನ್ನಡ
ನೀಲಿ ಕಡಲ ಅಲೆಗಳಿಗೆ
ದನಿಯ ಕೊಟ್ಟ ಕನ್ನಡ;
ಸಪ್ತಸ್ವರ ಕನ್ನಡ
ತೇಲಾಡುವ ಮೋಡಗಳಿಗೆ
ಮುತ್ತನಿಟ್ಟ ಕನ್ನಡ;
ಸಹ್ಯಾದ್ರಿಯ ಕನ್ನಡ
ಬಳುಕಾಡುವ ಹೊಂಬಾಳೆಗೆ
ಸ್ಫೂರ್ತಿ ತಂದ ಕನ್ನಡ;
ಭೃಂಗಾಳಿಯ ಕನ್ನಡ
ತೂಗಾಡುವ ಗಿಡಮರಕೆ
ಕಂಪನೆರೆದ ಕನ್ನಡ; ಕಸ್ತೂರಿ ಕನ್ನಡ
ಬೇಲೂರಿನ ಬಾಲೆಯರಿಗೆ
ನೆಲೆ ನೀಡಿದ ಕನ್ನಡ;
ಶಿಲ್ಪದುಸಿರು ಕನ್ನಡ
ಅರಿಯದೆನ್ನ ಹೃದಯ ಬಿರಿಸಿ
ಕವಿ ಮಾಡಿದ ಕನ್ನಡ;
ನುಡಿ ಚೇತನ ಕನ್ನಡ
*****