ಧನ್ವಂತರಿ

ಧನ್ವಂತರಿ

ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ ಗೆಳೆಯ ಬಸವರಾಜ್ ಬಿರಾದರ್‌ನ ಲಗ್ನಕ್ಕಾಗಿ ಕೆಂಭಾವಿಗೆ ಬಂದಿದ್ದರು. ಮದುವೆ ಮಾರ್ಚ್ ತಿಂಗಳಿನಲ್ಲಿ ಆಗಿನ್ನೂ ಬೇಸಿಗೆ ಆರಂಭವಾಗಿತ್ತು. ಆದರೂ ವಿಪರೀತ ಬಿಸಿಲು. ಮದುವೆಯ ಮನೆಯಲ್ಲಿ ಮುಹೂರ್ತದ ಶಾಸ್ತ್ರಗಳು ನಡೆಯುತ್ತಿದ್ದವು. ಆ ಸಮಯದಲ್ಲಿ ನಾಲ್ಕು ಜನ ಯುವಕರು ಒಬ್ಬ ಹಿರಿಯರನ್ನು ಎತ್ತಿಕೊಂಡು ಬಂದು ಒಳಗೆ ಮಲಗಿಸಿದರು. ಬಿಸಿಲಿನ ತಾಪಕ್ಕೆ ಅವರು ತಲೆ ಸುತ್ತಿಬಿದ್ದಿದ್ದರು. ಯಾರೋ ನೀರು ತಂದು ಮುಖಕ್ಕೆ ಚುಮುಕಿಸಿದರು. ಮತ್ತೊಬ್ಬರು ಅವರ ಬಾಯಿಗೆ ನೀರು ಹಾಕಿದರು. ಮತ್ತೊಬ್ಬರು ಬೀಸಣಿಗೆ ತಂದು ಗಾಳಿ ಬೀಸತೊಡಗಿದರು. ಏನಾಯಿತು…? ಏನಾಯಿತು…? ಎಂದು ಎಲ್ಲರೂ ಸುತ್ತುವರಿದರು. ಅಲ್ಲಿಗೆ ಬಂದಿದ್ದ ಕುಕ್ಕನೂರು ಮಾಸ್ಟರ್‌ರವರು ನೆರೆದಿದ್ದವರನ್ನು ಗದರಿ ದೂರ ಕಳಿಸಿದರು. ಅವರಿಗೆ ಗಾಬರಿ ಮಾಡಬೇಡೀ, ಗಾಳಿ ಆಡಲು ಬಿಡ್ರಿ. ಯಾರಾದ್ರೂ ಡಾಕ್ಟರ್ ಇದ್ರೆ ಕರೀರಿ” ಎಂದರು. ಒಬ್ಬ ಯುವಕ ಹೇಳಿದ “ನಮ್ಮ ಬಸ್ರಜಾನೇ ಡಾಕ್ಟರ್ ಅದಾನಲ್ಲ?” ಆದರೆ ಆತ ಮದುಮಗ ಹಣೆಗೆ ಬಾಸಿಂಗ ಕಟ್ಟಿಕೊಂಡು ಹಸೆಮಣೆಯ ಮೇಲೆ ಕುಳಿತಿದ್ದಾನೆ. ಅವನು ಹೇಗೆ ಎದ್ದು ಬಂದು ಇವರಿಗೆ ಚಿಕಿತ್ಸೆ ನೀಡುವುದು? ಡಾ|| ಕೃಷ್ಣಪ್ರಸಾದ್ ಎದ್ದು ಬಂದು ಇಲ್ಲಿ ಏನು ನಡೆಯುತ್ತಿದೆ ಎಂದು ನೋಡಿದರು. ಆ ಹಿರಿಯರನ್ನು ಮಲಗಿಸಿದಲ್ಲಿಗೆ ಹೋಗಿ, ಗುಂಪು ಕಟ್ಟಿದವರನ್ನು ಕುಳಿತುಕೊಳ್ಳಲು ಹೇಳಿ ಮಲಗಿದ್ದ ವ್ಯಕ್ತಿಯನ್ನು ಪರೀಕ್ಷಿಸಿದರು. ತಮ್ಮ ಚೀಲದಿಂದ ಸ್ಕೆತೋಸ್ಕೋಪ್ ತಂದು ಅವರ ಎದೆಯ ಮೇಲೆ, ಹೊಟ್ಟೆಯ ಮೇಲೆ ಬೆನ್ನಿನ ಮೇಲೆಲ್ಲಾ ಇಟ್ಟು ನೋಡಿದರು. ತಮ್ಮ ಚೀಲದಿಂದ ಒಂದು ಪೊಟ್ಟಣ ತೆಗೆದು ಅದರಲ್ಲಿದ್ದ ಪುಡಿಯನ್ನು ನೀರಿನಲ್ಲಿ ಕಲೆಸಿ ಕುಡಿಸಿದರು. ನಂತರ ಪಕ್ಕದಲ್ಲಿದ್ದವರ ಕಡೆ ನೋಡಿ ಮುಗುಳುನಕ್ಕರು.

“ಅವರಿಗೇನೂ ಆಗಿಲ್ಲ. ಆರಾಮವಾಗಿದ್ದಾರೆ. ಸ್ವಲ್ಪ ಹೊತ್ತು ಬೀಸಣಿಗೆ ಬೀಸಿರಿ. ಆರಾಮ ಮಾಡಲಿ ಸರಿ ಹೋಗ್ತಾರೆ. ಬಿಸಿಲಿನ ಬೇಗೆಗೆ ಸ್ವಲ್ಪ ತಲೆ ಸುತ್ತು ಬಂದು, ಜ್ಞಾನ ಹೋದಂತೆ ಆಗಿತ್ತು. ಈಗ ಸರಿಯಾಗಿದ್ದಾರೆ. ತಿಂಡೀನೋ, ಊಟಾನೋ ತಯಾರಾಗಿದ್ದರೆ ತಿನ್ನಲು ಕೊಡಿ.” ಎಂದರು.

ಮಲಗಿದ್ದ ಹಿರಿಯರು ಎದ್ದು ಕುಳಿತು ವೈದ್ಯರಿಗೆ ಕೈ ಮುಗಿದರು. ಮದುವೆ ಕಾರ್ಯಕ್ರಮಗಳು ಸಾಂಗವಾಗಿ ಮುಗಿದವು. ಸಂಜೆ ಬಸವರಾಜ್ ಬಿರಾದರ್ ರವರ ಮನೆಯ ಮುಂದಿನ ಮೈದಾನದಲ್ಲಿ ಆರತಕ್ಷತೆಯಂತೆ ಒಂದು ಸಣ್ಣ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಹಳ್ಳಿಯ ಜನರು ಆ ಪ್ರದೇಶದ ಗ್ರಾಮೀಣ ಸೊಗಡು ತುಂಬಿದ ಜಾನಪದ ನೃತ್ಯ ಪ್ರದರ್ಶನ ಮಾಡಿದರು. ಹತ್ತಾರು ಹೆಂಗಸರು ಜಾನಪದ ಗೀತೆಗಳನ್ನು ಹಾಡಿದರು. ಎಲ್ಲರಿಗು ಉಂಡಿ (ಬೇಸನ್ ಲಡ್ಡು) ಮತ್ತು ಮಂಡಾಳ್ ಒಗ್ಗರಣೆ ವಿತರಿಸಲಾಯಿತು. ಎಲ್ಲರೂ ತಿಂಡಿ ತಿಂದು ಚಹಾ ಕುಡಿಯುತ್ತಿದ್ದರು. ಆ ಸಮಯದಲ್ಲಿ ಮತ್ತೊಬ್ಬ ಮಹಿಳೆ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿ ಬಿದ್ದರು. ಡಾ|| ಕೃಷ್ಣ ಪ್ರಸಾದ್ ಅವರನ್ನು ಪರೀಕ್ಷಿಸಿ ಕೆಲವು ಔಷಧಗಳನ್ನು ಕೊಟ್ಟರು. ಮರುದಿನ ಗೆಳೆಯರಿಬ್ಬರೂ ಸುರಪುರ, ಹತ್ತಿಗುಡೂರು, ಕೆಂಭಾವಿ, ಪೇಟ್ ಅಮ್ಮಾಪುರ, ತಿಂಥಿಣಿ, ಶೆಲ್ಲಿಗಿ ಎಲ್ಲಾ ಸುತ್ತಾಡಿ ಬಂದರು. ಮತ್ತೆರಡು ದಿನಗಳಲ್ಲಿ ಶಹಾಪುರ, ಯಾದಗಿರಿ, ಕಲಬುರ್ಗಿ, ಕಮಲಾಮರ ಎಲ್ಲಾ ಸುತ್ತಾಡಿ ಬಂದರು. ಅಲ್ಲಿನ ಜನಜೀವನ, ಜನರ ಬಡತನ, ಅನಾರೋಗ್ಯ ಪರಿಸ್ಥಿತಿ ಎಲ್ಲಾ ಕಂಡು ಮರುಗಿದರು.

ಡಾ|| ಕೃಷ್ಣಪ್ರಸಾದ್ ಮತ್ತು ಡಾ|| ಬಸವರಾಜ್ ಬಿರಾದರ್ ಇಬ್ಬರೂ ಮಣಿಪಾಲಕ್ಕೆ ಹಿಂದಿರುಗಿ ತಮ್ಮ ವೈದ್ಯಕೀಯ ಸೇವೆಯಲ್ಲಿ ನಿರತರಾದರು. ಕೆಲವೇ ದಿನಗಳಲ್ಲಿ ಡಾ|| ಬಿರಾದರ್ ಕೆಂಭಾವಿಗೆ ಹೋಗಿ ತಮ್ಮ ಪತ್ನಿ ಪಾರ್ವತಿಯನ್ನು ಮಣಿಪಾಲಕ್ಕೆ ಕರೆದುಕೊಂಡು ಬಂದರು. ಕೃಷ್ಣಪ್ರಸಾದ್, ಬಿರಾದರ ದಂಪತಿಗಳನ್ನು ತಮ್ಮ ಮನೆಗೆ ಊಟಕ್ಕೆ ಕರೆದರು. ಕೃಷ್ಣಪ್ರಸಾದ್ ಇನ್ನೂ ಮದುವೆಯಾಗಿರಲಿಲ್ಲ. ಮನೆಯಲ್ಲಿ ತಂದೆ, ತಾಯಿ, ಅಣ್ಣ, ಅತ್ತಿಗೆ, ತಮ್ಮ, ತಂಗಿ ಎಲ್ಲರೂ ಇದ್ದರು ಕೃಷ್ಣ ಪ್ರಸಾದರ ತಂದೆಗೆ ಅಡಿಕೆ ತೋಟ, ತೆಂಗಿನ ತೋಟ, ಗದ್ದೆ ಎಲ್ಲಾ ಇತ್ತು. ಮನೆ ಮಂದಿ ಎಲ್ಲರೂ ತೋಟಕ್ಕೆ ಹೋಗುತ್ತಿದ್ದರು. ಕೆಲಸದ ಆಳುಗಳ ಜೊತೆಗೆ ತಾವೂ ಕೈ ಜೋಡಿಸುತ್ತಿದ್ದರು. ಸಾಕಷ್ಟು ವರಮಾನವಿತ್ತು. ಸಂಸಾರ ಸುಗಮವಾಗಿ ಸಾಗುತ್ತಿತ್ತು. ಕೃಷ್ಣಪ್ರಸಾದರಿಗೆ ಚೆನ್ನಾಗಿ ಓದಿ ಡಾಕ್ಟರ್ ಆಗಿ ಜನ ಸೇವೆ ಮಾಡಬೇಕೆಂಬ ಆಸೆ ಇತ್ತು. ಅದೇ ಪ್ರಕಾರ ಪಿ.ಯು.ಸಿ.ಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದು ಮಣಿಪಾಲ ಮೆಡಿಕಲ್ ಕಾಲೇಜು ಸೇರಿ ಎಂ.ಬಿ.ಬಿ.ಎಸ್ ಮಾಡಿದರು. ಮುಂದೆ ಎಂ.ಡಿ. ಮಾಡಿ ಯಾವುದಾದರೂ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ತೆಗೆದು ಬಡವರ ಸೇವೆ ಮಾಡಬೇಕೆಂಬ ಬಯಕೆ ಬಲವಾಗಿ ನೆಲೆಯೂರಿತ್ತು. ಈಗ ಅಕಸ್ಮಾತ್ತಾಗಿ ಕೆಂಭಾವಿಗೆ ಹೋದಾಗ ಅಲ್ಲಿನ ಬಡ ಜನರ ಪರಿಸ್ಥಿತಿ ನೋಡಿ ಅಲ್ಲಿಯೇ ಕ್ಲಿನಿಕ್ ತೆರೆದು ಜನರ ಸೇವೆ ಮಾಡಬೇಕೆಂದು ನಿರ್ಧರಿಸಿದರು. ಅದರ ಬಗ್ಗೆ ಡಾ|| ಬಸವರಾಜ್ ಬಿರಾದರ್‌ರವರ ಜೊತೆ ಚರ್ಚಿಸಿದರು. ಬಿರಾದರ್‌ರವರು ಈ ವಿಚಾರಕ್ಕೆ ಪ್ರೋತ್ಸಾಹ ನೀಡಲಿಲ್ಲ. “ಮೊದಲು ನೀವು ಎಂ.ಡಿ ಮುಗಿಸಿ ನಂತರ ಬೆಂಗಳೂರಿನಲ್ಲಿಯೋ, ಮುಂಬಯಿಯಲ್ಲಿಯೋ ಯಾವುದಾದರೂ ಹೈಟೆಕ್ ಆಸ್ಪತ್ರೆಯಲ್ಲಿ ನೌಕರಿಗೆ ಸೇರಿ ಸ್ವಲ್ಪ ಅನುಭವ ಮತ್ತು ಹಣ ಸಂಪಾದಿಸಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಭದ್ರವಾದ ಮೇಲೆ ವಿದೇಶಕ್ಕೆ ಹೋಗಿ ಬರುವ ಯೋಚನೆ ಮಾಡಿ, ಆಮೇಲೆ ಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ಹೋಗಿ ಸೇವೆ ಮಾಡುವಿರಂತೆ. ನಾನಂತೂ ಹಾಗೆಯೇ ಮಾಡೋಣವೆಂದಿದ್ದೀನಿ, ನೀವೂ ಹಾಗೆಯೇ ಮಾಡಿರಿ.” ಎಂದು ತಮ್ಮ ಪತ್ನಿಯನ್ನು ಕೇಳಿದರು. ಅವರು ಸುಮ್ಮನೆ ಮುಗುಳು ನಕ್ಕರು. ನಂತರ ನಿಧಾನವಾಗಿ ಹೇಳಿದರು.

“ಆಯ್ಯೋ ಆದೆಲ್ಲಾ ನನಗೇನು ಗೊತ್ತಾಗುತ್ತೆ, ನಿಮ್ಮಿಷ್ಟವೇ ನನ್ನಿಷ್ಟ” ಎಂದರು.

ಆದರೆ ಕೃಷ್ಣಪ್ರಸಾದ್‌ರವರಿಗೆ ತಾವು ಇಂದಲ್ಲ ನಾಳೆ ಕೆಂಭಾವಿಗೆ ಹೋಗಿ ಜನಸೇವೆ ಮಾಡಬೇಕೆಂಬ ಇಚ್ಛೆ ಬಲವಾಯಿತು.
* * *

ಡಾ|| ಕೃಷ್ಣಪ್ರಸಾದ್ ಎಂ.ಡಿ. ಪದವಿ ಮುಗಿದ ಮೇಲೆ ಕೆಂಭಾವಿಗೆ ಹೋಗಿ ಕ್ಲಿನಿಕ್ ತೆರೆಯುವ ಬಗ್ಗೆ ತಮ್ಮ ತಂದೆಯವರನ್ನು ಕೇಳಿದರು. ಅವರು ಧಾರಾಳವಾಗಿ ಮಾಡು ಜನಸೇವೆಯೇ ಜನಾರ್ದನ ಸೇವೆ, ಆದರೆ ನಿಮ್ಮ ತಾಯಿ, ಅಣ್ಣ, ಅತ್ತಿಗೆ ಎಲ್ಲರನ್ನೂ ಕೇಳಿ ಎಲ್ಲರ ಸಹಮತವಿದ್ದರೆ ಮಾತ್ರ ಹೋಗು ಎಂದರು. ತಂದೆಯವರು ಒಪ್ಪಿದಷ್ಟು ಸುಲಭವಾಗಿ ತಾಯಿಯವರು ಒಪ್ಪಲಿಲ್ಲ. ತಮ್ಮ ಪ್ರೀತಿಯ ಮಗ ತಮ್ಮ ಕಣ್ಣ ಮುಂದೆಯೇ ಇರಬೇಕೆಂಬುದು ಅವರ ಇಚ್ಛೆಯಾಗಿತ್ತು. ಅಣ್ಣ ಅತ್ತಿಗೆ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟರು. ವಾರಕ್ಕೊಮ್ಮೆಯೋ ಎರಡು ವಾರಗಳಿಗೊಮ್ಮೆಯೋ ಖಂಡಿತ ಮನೆಗೆ ಬಂದು ಹೋಗುತ್ತೇನೆ ಎಂದು ಅಮ್ಮನಿಗೆ ಆಶ್ವಾಸನೆ ನೀಡಿ ಕೆಂಭಾವಿಗೆ ಹೊರಡಲು ಸಿದ್ಧರಾದರು. ಗೆಳೆಯ ಬಿರಾದರ್‌ನನ್ನು ಭೇಟಿ ಮಾಡಿ ತಮ್ಮ ನಿರ್ಧಾರವನ್ನು ತಿಳಿಸಿ, ಈ ತಮ್ಮ ಯೋಜನೆಗೆ ಬಿರಾದರ್‌ನ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರ ಕೋರಿದರು. ಇವರ ಒಳ್ಳೆಯ ಉದ್ದೇಶವನ್ನು ಮನಗಂಡ ಬಿರಾದರ್ ಆಗಲಿ ಗೆಳೆಯ ಈ ನಿಮ್ಮ ಸೇವೆಗೆ ಮತ್ತು ಯೋಜನೆಗೆ ನನ್ನ ಸಂಪೂರ್ಣ ಸಹಕಾರವಿದೆ. ನೀವು ಯಾವಾಗ ಹೋಗೋಣವೆಂದರೆ ಆಗ ಊರಿಗೆ ಹೊರಡಲು ನಾನು ರೆಡಿ ಎಂದರು.

ಬರುವ ಶನಿವಾರವೇ ಹೊರಡೋಣವೆಂದು ನಿರ್ಧರಿಸಿದರು. ಮಣಿಪಾಲದಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಯಾದಗಿರಿಗೆ, ಅಲ್ಲಿಂದ ಬಸ್ಸಿನಲ್ಲಿ ಸುರಪುರಕ್ಕೆ ಕೊನೆಗೆ ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಕೆಂಭಾವಿಗೆ ಹೋಗಿ ಸುಸ್ತಾಗಿ ಮನೆ ತಲುಪಿದರು. ಮನೆ ತಲುಪಿದ ಸ್ವಲ್ಪ ಹೊತ್ತಿನಲ್ಲಿಯೇ ಕೆಂಭಾವಿಯ ಹಿರಿಯರೆಲ್ಲರೂ ಬಂದು ಈ ವೈದ್ಯ ಮಿತ್ರರಿಬ್ಬರನ್ನು ಭೇಟಿ ಮಾಡಿ ಅಭಿನಂದಿಸಿದರು. ಮನೆಗೆ ಬಂದ ಹತ್ತಾರು ಜನ ಹಿರಿಯರನ್ನು ಮನೆಯ ಮುಂದಿನ ಜಗುಲಿಯ ಮೇಲೆ ಕೂರಿಸಿ ಎಲ್ಲರಿಗೂ ಚೂಡಾ ಮತ್ತು ಚಹಾ ನೀಡಿ ಸತ್ಕರಿಸಲಾಯಿತು. ನಂತರ ನಿಧಾನವಾಗಿ ಡಾ|| ಬಸವರಾಜ್ ಮಾತು ಆರಂಭಿಸಿದರು.

“ನಾನು ಮತ್ತು ನನ್ನ ಗೆಳೆಯ ಮಣಿಪಾಲ್ ಮೆಡಿಕಲ್ ಕಾಲೇಜಿನಾಗ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. ಪಾಸ್ ಮಾಡಿ ಬಂದೀವಿ, ಈಗ ನೌಕರೀಗ ಸೇರಬೇಕಂತ ಹೊಂಟಿವ್ರಿ. ಇಷ್ಟು ಓದಿರೋ ನಮಗೆ ಚಲೋ ಆಸ್ಪತ್ರೆಯಾಗ ನೌಕರಿ ಸಿಗತೈತ್ರೀ, ಚಲೋ ಪಾಗಾರಾನೂ ಸಿಗತೈತ್ರಿ. ಆದ್ರ ಈ ನಮ್ಮ ಕೆಂಭಾವಿ ಗ್ರಾಮದ ಜನಗಳ ಸೇವೆ ಮಾಡಬೇಕಂತ ವಿಚಾರೈತ್ರಿ. ಅದಕ ಗೆಣೆಯ ಪ್ರಸಾದವರೂ ನಾನೂ ಕೂಡಿ ಇಲ್ಲೇ ಒಂದು ಸಣ್ಣ ದವಾಖಾನೆ ಸುರು ಮಾಡುವಂತೆ ಮಾಡೀವ್ರಿ” ಹಳ್ಳಿಯ ಜನಕ್ಕೆ ಇವರ ವಿಚಾರ ಕೇಳಿ ಬಹಳ ಸಂತೋಷವಾಯ್ತು. ಹಿರಿಯರಾದ ನಿಂಗಪ್ಪಗೌಡ್ರು ಎದ್ದು ನಿಂತು ಹೇಳಿದರು.

“ಭಾಳ ಛಲೋ ಆಯ್ತು ನೋಡ್ರೀಯಪ್ಪಾ. ಆ ಸಿವಾ ನಿಮಗೆ ಒಳ್ಳೇದು ಮಾಡ್ಲಿ. ಒಡನೆ ದವಾಖಾನೆ ತೆರೆಯೋ ಸಿದ್ದ ಮಾಡ್ಕೊಳ್ರಲ್ಲಾ” ಎಂದರು.

ಎಲ್ಲಿ ದವಾಖಾನೆ ತೆರೆಯುವುದು? ಅದಕ್ಕೆಷ್ಟು ಖರ್ಚಾಗಬಹುದು? ಕ್ಲಿನಿಕ್ ತೆರೆಯಲು ಲೈಸನ್ಸ್ ಯಾರು ಕೊಡುತ್ತಾರೆ ಎಂದೆಲ್ಲಾ ಚರ್ಚಿಸಿದರು. ಅದೇ ದಿನ ಸಂಜೆಯ ವೇಳೆಗೆ ಆ ಊರಿನ ಮುಖ್ಯರಸ್ತೆಯಲ್ಲಿದ್ದ ಅರ್ಜುನ್‌ರವರು ತಮ್ಮ ವಾಣಿಜ್ಯ ಮಳಿಗೆಯಲ್ಲಿರುವ ಎರಡು ಕೊಠಡಿಗಳನ್ನು ಇವರ ಕ್ಲಿನಿಕ್‌ಗೆ ಬಿಟ್ಟುಕೊಡುವುದಾಗಿ ಹೇಳಿದರು. ಒಂದು ಕೊಠಡಿ, ಬಂದ ಜನರು ಕುಳಿತುಕೊಳ್ಳುವುದಕ್ಕೆ ಮತ್ತೊಂದು ಕೊಠಡಿ, ವೈದ್ಯರುಗಳು ರೋಗಿಗಳನ್ನು ಪರೀಕ್ಷಿಸಿ ಔಷಧಿ ಕೊಡುವ ವಿಭಾಗಕ್ಕೆ ಹಿಂದಿನ ಭಾಗದಲ್ಲಿ ಶೌಚಾಲಯ ಮತ್ತು ವಾಶ್ ಬೇಸಿನ್ ಇತ್ಯಾದಿ ಕಟ್ಟಿಸಿಕೊಡುವುದಾಗಿ ತಿಳಿಸಿದರು. ಮರುದಿನ ಗೆಳೆಯರಿಬ್ಬರೂ ಸುರಪುರ ಮತ್ತು ಯಾದಗಿರಿಗೆ ಹೋಗಿ ಲೈಸೆನ್ಸಿಗೆ ಅರ್ಜಿ ಕೊಟ್ಟು ಬಂದರು. ದವಾಖಾನೆಗೆ ಬೇಕಾಗುವ ಮೇಜುಗಳು, ಕುರ್ಚಿಗಳು, ಅಲಮೇರಾಗಳು, ಶೋಕೇಸುಗಳು, ಕೆಲವು ಯಂತ್ರೋಪಕರಣಗಳು ಎಲ್ಲವನ್ನು ಬೆಂಗಳೂರಿನಿಂದಲೇ ತರುವ ನಿರ್ಧಾರ ಮಾಡಿದರು. ಬೆಂಗಳೂರಿಗೆ ಹೋಗಿ ಹಲವಾರು ವಸ್ತುಗಳನ್ನು ಕೊಂಡು ಒಂದು ಟ್ರಾನ್ಸ್‌ಪೋರ್ಟ್ ಕಂಪನಿಯ ವಾಹನದಲ್ಲಿ ಕಳಿಸಿದರು. ದವಾಖಾನೆಗೆ ಏನು ಹೆಸರಿಡಬೇಕೆಂದು ಯೋಚಿಸಿ, ಇತರ ಗೆಳೆಯರೊಂದಿಗೆ ಚರ್ಚಿಸಿ ಕೊನೆಗೆ “ಧನ್ವಂತರಿ ಕ್ಲಿನಿಕ್” ಎಂದು ನಿರ್ಧರಿಸಿದರು. ಕ್ಲಿನಿಕ್ ಬೋರ್ಡು ಮತ್ತು ವೈದ್ಯರಿಬ್ಬರ ಹೆಸರುಗಳ ಬೋರ್ಡುಗಳು ಎಲ್ಲವನ್ನು ಸಿದ್ಧಗೊಳಿಸಿದರು. ಆಗಿನ ಕಾಲದಲ್ಲಿ ವೈದ್ಯರೇ ರೋಗಿಗಳನ್ನು ಪರೀಕ್ಷಿಸಿ ಔಷಧಿಗಳನ್ನು ಕೊಡುತ್ತಿದ್ದರು. ಅಪರೂಪಕ್ಕೆ ಒಮ್ಮೊಮ್ಮೆ ಔಷದಿಗಳನ್ನು ಬರೆದುಕೊಡುತ್ತಿದ್ದರು.

ಲೈಸೆನ್ಸ್ ದೊರೆಯುವ ವೇಳೆಗೆ, ಬೆಂಗಳೂರಿನಿಂದ ಪೀಠೋಪಕರಣಗಳು ಬಂದು ತಲುಪಿದವು. ದವಾಖಾನೆಗೆ ಸುಣ್ಣಬಣ್ಣ ಬಳಿದು ಎಲ್ಲವೂ ಸಿದ್ಧವಾದ ಮೇಲೆ ಒಂದು ಒಳ್ಳೆಯ ದಿನ ನೋಡಿ ಕ್ಲಿನಿಕ್ಕಿನ ಉದ್ಘಾಟನೆಯಾಯಿತು. ಉದ್ಘಾಟನೆಗೆ ಊರಿನ ಹಿರಿಯರೂ, ಶಿಕ್ಷಕರೂ, ರೈತರು, ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಸುರಪುರದ ರಾಜ ಮನೆತನದವರು, ಕಾಲೇಜಿನ ಪ್ರಿನ್ಸಿಪಾಲರು ಮುಂತಾದ ಗಣ್ಯರೆಲ್ಲರೂ ಬಂದಿದ್ದರು. ಉದ್ಘಾಟನೆಯಾದ ಮರುದಿನದಿಂದಲೇ ದವಾಖಾನೆಗೆ ರೋಗಿಗಳು ಬರತೊಡಗಿದರು. ವೈದ್ಯ ಮಿತ್ರರು ರೋಗಿಗಳನ್ನು ಚೆನ್ನಾಗಿ ಪರೀಕ್ಷಿಸಿ ಔಷಧಿಗಳನ್ನು ಕೊಡುತ್ತಿದ್ದರು. ರೋಗಿಗಳು ಬೇಗ ಗುಣಮುಖರಾದರು. ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ದಾದಿಯರನ್ನು ಕರೆಸಿ, ಅತ್ಯಂತ ಗೌರವದಿಂದ ಅವರ ಸಹಕಾರ ಕೋರಿದರು. ಇವರುಗಳು ಸರಿಪಡಿಸಲಾಗದ ಗಂಭೀರ ಸಮಸ್ಯೆ ಇರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸುತ್ತಿದ್ದರು. ಅದೇ ರೀತಿ ಗರ್ಭಿಣಿ ಸ್ತ್ರೀಯರನ್ನು ಸ್ತ್ರೀರೋಗ ಸಮಸ್ಯೆ ಇರುವ ಮಹಿಳೆಯರನ್ನು ಇವರು ಸರ್ಕಾರಿ ಆಸ್ಪತ್ರೆಗೆ ಕಳಿಸುತ್ತಿದ್ದರು. ದೊಡ್ಡ ದೊಡ್ಡ ಸಮಸ್ಯೆ ಇರುವ ರೋಗಿಗಳನ್ನು ಕಲಬುರ್ಗಿ ಆಸ್ಪತ್ರೆಗೋ, ಬೆಂಗಳೂರಿನ ಆಸ್ಪತ್ರೆಗೋ ಪತ್ರ ಕೊಟ್ಟು ಕಳಿಸುತ್ತಿದ್ದರು. ಒಂದು ತಿಂಗಳು ಕೃಷ್ಣಪ್ರಸಾದ್‌ರವರು ಬಿರಾದರ್‌ರವರ ಮನೆಯಲ್ಲಿಯೇ ಇದ್ದರು. ನಂತರ ತಮ್ಮ ಕ್ಲಿನಿಕ್ಕಿನ ಮಹಡಿಯ ಮೇಲೆ ಹೊಸದಾಗಿ ನಿರ್ಮಿಸಿದ ಒಂದು ಮನೆಯಲ್ಲಿ ವಾಸಿಸತೊಡಗಿದರು. ಆದರೆ ಊಟಕ್ಕೆ ಮಾತ್ರ ಇವರ ಮನೆಗೆ ಬರುತ್ತಿದ್ದರು. ಇವರ ದವಾಖಾನೆಯಲ್ಲಿ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಹಾಗಾಗಿ ರೋಗಿಗಳನ್ನು ಒಳಬಿಡಲು ಒಬ್ಬ ಹುಡುಗನನ್ನು, ಔಷಧಿಗಳನ್ನು ವಿತರಿಸಲು ಒಬ್ಬ ಕಾಂಪೌಂಡರ್‌ನನ್ನು ಕೆಲಸಕ್ಕೆ ನೇಮಿಸಿಕೊಂಡರು. ಸ್ತ್ರೀ ರೋಗಿಗಳನ್ನು ಪರೀಕ್ಷಿಸಲು ಮತ್ತು ಬ್ಯಾಂಡೇಜ್ ಕಟ್ಟಲು ಒಬ್ಬ ದಾದಿಯನ್ನು ನೇಮಿಸಿದರು. ಇವರಿಬ್ಬರ ಸೇವೆ ಮತ್ತಾವ ಆಸ್ಪತ್ರೆಗೂ ಕಡಿಮೆ ಇಲ್ಲ ಎಂದು ತಿಳಿದ ಸಾವಿರಾರು ಸಾರ್ವಜನಿಕರು ಇವರ ಬಳಿ ಶುಶ್ರೂಷೆಗೆ ಬರತೊಡಗಿದರು. ಇವರ ಆರ್ಥಿಕ ಪರಿಸ್ಥಿತಿಯೂ ಸ್ವಲ್ಪ ಸುಧಾರಿಸತೊಡಗಿತು.

ಡಾ|| ಕೃಷ್ಣ ಪ್ರಸಾದ್‌ರವರು ವಾರಕ್ಕೊಮ್ಮೆಯೋ, ಹದಿನೈದು ದಿನಗಳಿಗೊಮ್ಮೆಯೋ ಉಡುಪಿಗೆ ಹೋಗಿ ತಮ್ಮ ತಂದೆ ತಾಯಿ, ಅಣ್ಣ, ಅತ್ತಿಗೆ ಎಲ್ಲರನ್ನು ಭೇಟಿಮಾಡಿ ಬರುತ್ತಿದ್ದರು. ಕೆಲಸದ ಒತ್ತಡ ಹೆಚ್ಚಾದುದ್ದರಿಂದ ಬರು ಬರುತ್ತಾ ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹೋಗಿ ಬರತೊಡಗಿದರು. ಇವರು ಊರಿಗೆ ಹೋದಾಗಲೆಲ್ಲಾ ಇವರ ತಾಯಿ, ಇವರನ್ನು ಮದುವೆ ಮಾಡಿಕೊಂಡು ಸುಖವಾಗಿ ಸಂಸಾರ ಮಾಡಿಕೊಂಡಿರು ಎಂದು ಒತ್ತಾಯ ಮಾಡುತ್ತಿದ್ದರು. ಇವರು ಆಗಲಿ ನೋಡೋಣ ಎಂದು ಹೇಳಿ ಕೆಂಭಾವಿಗೆ ಹಿಂತಿರುಗುತ್ತಿದ್ದರು. ಹೀಗೆಯೇ ಒಂದು ವರ್ಷ ಕಳೆದು ಹೋಯಿತು. ಬಸವರಾಜ್ ಬಿರಾದರ್‌ರವರ ಪತ್ನಿಗೆ ಒಂದು ಗಂಡು ಮಗುವಾಯಿತು. ಆ ಮಗು ಬೆಳೆದು ದೊಡ್ಡದಾದರೆ ಆ ಮಗುವನ್ನು ಇಲ್ಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿಸುವುದು ಅವರಿಗೆ ಇಷ್ಟವಿರಲಿಲ್ಲ. ಆ ಸಮಯ ಬಂದಾಗ ನೋಡೋಣ ಎಂದು ಸುಮ್ಮನಾದರು. ಬೇಸಿಗೆಯ ದಿನಗಳಲ್ಲಿ ಇವರ ಬಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿ ಇರುತ್ತಿದ್ದರಿಂದ ಆಗ ದಿನರಾತ್ರಿ ರೋಗಿಗಳ ಸೇವೆ ಮಾಡುತ್ತಿದ್ದರು. ಆದರೂ ಆರ್ಥಿಕವಾಗಿ ಅಷ್ಟೇನೂ ಅನುಕೂಲವಿರುತ್ತಿರಲಿಲ್ಲ. ಇವರ ಕಷ್ಟ ನೋಡಿ ಒಬ್ಬ ಹುಡುಗ ನಾನು ಬೇಸಿಗೆ ರಜೆಯಲ್ಲಿ ನಿಮ್ಮೊಂದಿಗಿದ್ದು ನಿಮಗೆ ಸಹಾಯ ಮಾಡುತ್ತೇನೆ ಎಂದು ಸ್ವಯಂಸೇವಕನಾಗಿ ಬಂದು ಇವರ ಕ್ಲಿನಿಕ್ಕಿನಲ್ಲಿ ಕೆಲಸ ಮಾಡತೊಡಗಿದ. ಈ ವಿಷಯ ತಿಳಿದು ಇನ್ನೂ ನಾಲ್ಕು ಜನ ಹುಡುಗರು ಇಬ್ಬರು ವಿದ್ಯಾರ್ಥಿನಿಯರೂ ಬಂದು ಇವರ ದವಾಖಾನೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ಅದೇ ರೀತಿ ಇಬ್ಬರು ಶಾಲಾ ಶಿಕ್ಷಕಿಯರೂ ಬಂದು ಸ್ವಯಂ ಸೇವಕರಾಗಿ ಇವರ ಸೇವೆಯಲ್ಲಿ ಸಹಾಯ ಹಸ್ತ ನೀಡಿದರು. ಹೀಗೆಯೇ ಧನ್ವಂತರಿ ಕ್ಲಿನಿಕ್ ಅತ್ಯಂತ ಹೆಸರುವಾಸಿಯಾಗಿ ಜನಸೇವಾ ಕೇಂದ್ರವಾಗಿ ಬೆಳೆಯತೊಡಗಿತು.

ಬಿಡುವಿನ ವೇಳೆಯಲ್ಲಿ ಡಾ|| ಕೃಷ್ಣಪ್ರಸಾದ್‌ರವರು ತಮ್ಮ ಸಹಾಯಕರೆಲ್ಲರನ್ನು ಕೂಡಿಸಿಕೊಂಡು ಸಭೆ ನಡೆಸುತ್ತಿದ್ದರು. ಆ ಸಮಯದಲ್ಲಿ ಒಂದು ವಿಚಾರ ಹೇಳಿದರು. ನಾವು ನಮ್ಮಲ್ಲಿಗೆ ಬರುವ ಜನರಿಗೆ ಸ್ವಚ್ಛತೆಯ ಬಗ್ಗೆ ತಿಳಿಸಿ ಹೇಳಬೇಕು. ರೋಗ ಬಂದಾಗ ಚಿಕಿತ್ಸೆ ನೀಡುವುದು ಮುಖ್ಯವಲ್ಲ. ರೋಗ ಬರದಂತೆ ತಡೆಗಟ್ಟುವುದೂ ಅಷ್ಟೇ ಮುಖ್ಯ ಎಂದರು. ಆ ದಿನಗಳಲ್ಲಿ ಕೆಂಭಾವಿ, ಸುರಪುರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮನೆಗಳಲ್ಲಿ ಶೌಚಾಲಯಗಳಿರಲಿಲ್ಲ. ಬೆಳಗ್ಗೆ ಎದ್ದರೆ ಚೊಂಬು ಹಿಡಿದು ಗುಡ್ಡಕ್ಕೆ ಹೋಗುತ್ತಿದ್ದರು. ಅದರಿಂದಲೇ ಎಷ್ಟೋ ಕಾಯಿಲೆಗಳು ಬರುತ್ತಿದ್ದವು. ಮನೆಯಲ್ಲಿ ಶೌಚಾಲಯ ಕಟ್ಟಿಸಿ ಅದನ್ನು ಬಳಸುವಂತೆ ಜನರಿಗೆ ತಿಳಿಸಿ ಹೇಳುತ್ತಿದ್ದರು.

ನೀರನ್ನು ಕುದಿಸಿ, ಆರಿಸಿ ಕುಡಿಯಲು ಹೇಳುತ್ತಿದ್ದರು. ಬಟ್ಟೆಗಳನ್ನು ಚೆನ್ನಾಗಿ ಒಗೆದು ಒಣಗಿಸಿ ನಂತರವೇ ತೊಡಬೇಕು ಎಂದು ಹೇಳುತ್ತಿದ್ದರು. ಇದಲ್ಲದೆ ಅನೇಕ ವೈದ್ಯಕೀಯ ಸಲಹೆಗಳನ್ನು ಕೊಡುತ್ತಿದ್ದರು. ಆ ಭಾಗದ ಜನರಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿತ್ತು. ಸಹಿ ಮಾಡುವ ಬದಲು ಹೆಬ್ಬೆಟ್ಟೊತ್ತುವುದು ಬಹಳ ಅನಾಗರಿಕ ಪದ್ಧತಿ. ಎಲ್ಲರೂ ಅಕ್ಷರ ಕಲಿಯಬೇಕು. ಕನಿಷ್ಠ ತಮ್ಮ ಹೆಸರು ಬರೆಯುವುದನ್ನಾದರೂ ಕಲಿಯಬೇಕು ಎಂದು ಹೇಳುತ್ತಿದ್ದರು. ತಾವೇ ಸ್ಲೇಟು ಬಳಪ ತರಿಸಿಟ್ಟು ಇವರ ಕ್ಲಿನಿಕ್ಕಿಗೆ ಬರುವ ರೋಗಿಗಳಿಗೆ ಮತ್ತು ಅವರ ಮನೆಯವರಿಗೆ ಅಕ್ಷರ ಬರೆಯುವುದನ್ನು ಕಲಿಸಿ, ಕೊನೆಯ ಹಾಳೆಯ ಮೇಲೆ ಲೇಖನಿಯಿಂದ ಸಹಿ ಮಾಡುವುದನ್ನು ಕಲಿಸತೊಡಗಿದರು. ಈ ರೀತಿಯ ಸಾಕ್ಷರತಾ ಆಂದೋಲನದಲ್ಲಿ ಇದರ ಸಹಾಯಕರಾದ ವಿದ್ಯಾರ್ಥಿಗಳೂ ಸಹಾಯಕರೂ ಮತ್ತು ಉಪಧ್ಯಾಯಿನಿಯರೂ ಕೈ ಜೋಡಿಸಿದರು. ಈ ರೀತಿ ಹಲವು ಹತ್ತು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿರುವ ಇವರ ಕೀರ್ತಿ ಎಲ್ಲೆಡೆ ಹರಡತೊಡಗಿತು.
* * *
ಒಂದು ದಿನ ಡಾ|| ಬಸವರಾಜ್ ಬಿರಾದರ್‌ರವರು ಗೆಳೆಯ ಡಾ|| ಕೃಷ್ಣ ಪ್ರಸಾದ್‌ರವರನ್ನು ಕೂಡಿಸಿಕೊಂಡು ಒಂದು ಪ್ರಸ್ತಾಪವಿಟ್ಟರು. “ನೋಡಿ ಪ್ರಸಾದ್ ನಾನು ಒಂದು ವಿಷಯ ಹೇಳ್ತೀನಿ. ದಯವಿಟ್ಟು ತಪ್ಪು ತಿಳೀಬೇಡಿ. ನನ್ನ ಲಗ್ನದ ಸಮಯದಲ್ಲಿ ನೀವು ಈ ಊರಿಗೆ ಬಂದ್ರಿ. ಇಲ್ಲಿನ ಜನರ ಬಡತನ, ಆರೋಗ್ಯದ ಸಮಸ್ಯೆಗಳು ಎಲ್ಲಾ ನೋಡಿದ್ರಿ, ಇಲ್ಲಿಯೇ ಇದ್ದುಕೊಂಡು ಇಲ್ಲಿನ ಜನರ ಸೇವೆ ಮಾಡಬೇಕೆಂದು ನಿಂತ್ರಿ, ನಾನೂ ನಿಮ್ಮ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿದೆ. ಆದರೆ ನನಗೆ ಇಲ್ಲಿಯೇ ಇದ್ದು ಜನ ಸೇವೆ ಮಾಡಿಕೊಂಡು ಉಳಿಯುವುದು ನಮ್ಮ ವೈಯಕ್ತಿಕ ಬೆಳವಣಿಗೆಗೆ ತೊಂದರೆಯಾಗಬಹುದು ಅಂತ ಕಾಣುತ್ತದೆ. ನಾನು ಈ ಮೊದಲೇ ಹೇಳಿದ್ದೆ. ನಾವಿಬ್ಬರೂ ಮುಂದೆ ಓದಿ, ಬೆಂಗಳೂರಿನ ದೊಡ್ಡ ದೊಡ್ಡ ಹೈಟೆಕ್ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕು, ನಂತರ ವಿದೇಶಕ್ಕೆ ಹೋಗಬೇಕು ಅಂತ. ಎಲ್ಲಾ ಬೆಳವಣಿಗೆಗಳನ್ನು, ಆರ್ಥಿಕ ಲಾಭವನ್ನು ಬದಿಗೊತ್ತಿ ಗ್ರಾಮೀಣ ಜನರ, ಬಡವರ ಸೇವೆ ಮಾಡಬೇಕು ಎಂದು ನಿಂತಾಗ, ನಾನೂ ಕೂಡಾ ನಿಮ್ಮ ಜೊತೆ ನಿಂತು, ನಿಮ್ಮ ಉದಾತ್ತ ಮನೋಭಾವಕ್ಕೆ ನಿಮ್ಮ ನಿಸ್ವಾರ್ಥ ಸೇವೆಗೆ ಸಹಾಯ ನೀಡಿದೆ. ಸ್ವಂತ ಬೆಳವಣಿಗೆಯತ್ತ ಸ್ವಲ್ಪ ಗಮನಹರಿಸಬೇಕಾಗಿದೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ, ಒಳ್ಳೆಯ ವಿದ್ಯಾಭ್ಯಾಸಕ್ಕೆ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕಾಗಿ ನಾನು ಬೆಂಗಳೂರಿಗೆ ಹೋಗಿ ನೆಲೆಸಬೇಕೂಂತ ನಿರ್ಧಾರ ಮಾಡಿದ್ದೀನಿ. ಕ್ಲಿನಿಕ್‌ಗೆ ನಾನೂ ನಿಮ್ಮ ಪಾಲುದಾರನಾಗಿ ಮುಂದುವರೆಸುತ್ತೀನಿ. ಹೇಗೂ ಈಗ ಕ್ಲಿನಿಕ್ಕಿನಲ್ಲಿ ನಾಲ್ಕಾರು ಜನ ಕೆಲಸಗಾರರೂ, ಸ್ವಯಂ ಸೇವಕರೂ ಇದ್ದಾರೆ. ನೀವು ದಯವಿಟ್ಟು ಒಪ್ಪಿದರೆ ನನ್ನ ಹೆಂಡತಿ, ಮಗು ಮತ್ತು ತಾಯಿಯವರನ್ನು ಕರೆದುಕೊಂಡು ಬೆಂಗಳೂರಿಗೆ ಹೊರಡುತ್ತೇನೆ.”

ಡಾ|| ಕೃಷ್ಣಪ್ರಸಾದ್ ಏನನ್ನುತ್ತಾರೋ ಎಂದು ಡಾ| ಬಿರಾದರ್‌ರವರಿಗೆ ಆತಂಕವಿತ್ತು. ಪ್ರಸಾದ್‌ರವರು ಮುಗುಳು ನಕ್ಕು ಹೇಳಿದರು. “ಧಾರಾಳವಾಗಿ ಹೋಗಿಬನ್ನಿ ಬಿರಾದರ್, ನಾನು ಇಲ್ಲಿನ ಸೇವೆಯನ್ನು ಮುಂದುವರಿಸಿಕೊಂಡು ಹೋಗ್ತೇನೆ. ನಾನು ಕಾಲೇಜಿನಲ್ಲಿ ಓದುವಾಗಲೇ ನಿರ್ಧರಿಸಿದ್ದೆ. ನಾನು ಹಣ ಮಾಡಬೇಕು, ಹೆಸರು ಮಾಡಬೇಕು, ಆಸ್ತಿ ಮಾಡಬೇಕು ಎಂದೆಲ್ಲಾ ಆಸೆಪಡುವುದಿಲ್ಲ. ವೈದ್ಯಕೀಯ ಮಾಡುತ್ತಾ ಎಲ್ಲಾದರೂ ಗ್ರಾಮೀಣ ಪ್ರದೇಶದಲ್ಲಿ ನೆಲೆಸಬೇಕು ಅಂತ. ಅಂತಹ ಒಂದು ಅವಕಾಶ ಇಲ್ಲಿ ಸಿಕ್ಕಿದೆ. ನಾನು ಕ್ಲಿನಿಕ್‌ನ ನಡೆಸಿಕೊಂಡು ಹೋಗ್ತಿನಿ. ನೀವು ಬೆಂಗಳೂರಿಗೆ ಹೋಗಿ ಒಳ್ಳೆಯ ನೌಕರಿ ಹಿಡಿದು ಜನರ ಸೇವೆ ಮಾಡಿರಿ. ದೇವರು ನಿಮಗೆ ಒಳ್ಳೆಯದು ಮಾಡಲಿ.” ಎಂದು ಹೇಳಿ ಅವರ ಕೈ ಕುಲುಕಿ ಎದ್ದು ಒಳ ಹೋದರು. ಅವರಿಗಾಗಿ ಕಾಯುತ್ತಿದ್ದ ರೋಗಿಗಳನ್ನು ಪೂರಾ ಮನಸ್ಸಿಟ್ಟು ಪರೀಕ್ಷಿಸತೊಡಗಿದರು.

ಮಾತುಕತೆಯಾಗಿ ಸರಿಯಾಗಿ ಒಂದು ವಾರಕ್ಕೆ ಡಾ|| ಬಿರಾದರ್ ತಮ್ಮ ತಾಯಿ, ಹೆಂಡತಿ ಮತ್ತು ಮಗುವನ್ನು ಕರೆದುಕೊಂಡು ಬೆಂಗಳೂರಿಗೆ ಹೋದರು.

ಡಾ|| ಕೃಷ್ಣ ಪ್ರಸಾದ್‌ರವರು ಎಂದಿನಂತೆ ಪೂರ್ತಿ ಲಕ್ಷ್ಯವಿಟ್ಟು ತಮ್ಮಲ್ಲಿಗೆ ರೋಗಿಗಳನ್ನು ನೋಡಿ ಶುಶ್ರೂಷೆ ಮಾಡುತ್ತಿದ್ದರು. ಡಾ|| ಬಿರಾದರ್‌ರವರು ಎರಡು ತಿಂಗಳಿಗೋ ಒಮ್ಮೆ ಬಂದು ಎರಡುದಿನ ಇದ್ದು ಹೋಗುತ್ತಿದ್ದರು. ಅದೂ ಕಡಿಮೆಯಾಗಿ ವರ್ಷ ಎರಡು ವರ್ಷಕ್ಕೋ ಒಮ್ಮೆ ಹೋಗತೊಡಗಿದರು. ಅದೇ ರೀತಿ ಡಾ|| ಕೃಷ್ಣಪ್ರಸಾದ್‌ರವರು ತಮ್ಮ ಊರಿಗೆ ಬರುವುದೂ ಕಡಿಮೆಯಾಯಿತು. ಈ ಮಧ್ಯೆ ಅವರ ತಾಯಿಯವರು ತಂದೆಯವರೂ ಬಹಳ ವಯಸ್ಸಾಗಿ ಮನೆಯಲ್ಲಿಯೇ ಮನೆಯಲ್ಲಿ ಬಹಳ ಜನ ಇದ್ದರು. ಹಾಗಾಗಿ ಕೃಷ್ಣಪ್ರಸಾದ್‌ರವರಿಗೆ ತಂದೆಯವರ ಚಿಂತೆ ಇರಲಿಲ್ಲ. ಆದರೂ ತಪ್ಪದೆ ಆಗಾಗ ಹೋಗಿ ತಂದೆಯವರನ್ನು ಮತ್ತು ಅಣ್ಣ, ಅತ್ತಿಗೆಯವರನ್ನೂ ನೋಡಿಕೊಂಡು ಬರುತ್ತಿದ್ದರು.
* * *

ಕೆಂಭಾವಿಯಿಂದ ಅನತಿ ದೂರದಲ್ಲಿಯೇ ಇದ್ದ ಒಂದು ಗ್ರಾಮದಲ್ಲಿ ಒಬ್ಬ ಮಹಿಳೆಗೆ ಪ್ರಸವವಾಯಿತು. ಆ ಹಳ್ಳಿಯಲ್ಲಿಯೇ ಇದ್ದ ಒಬ್ಬ ಸೂಲಗಿತ್ತಿ ಮತ್ತು ಆ ಮಹಿಳೆಯ ತಾಯಿ ಸೇರಿ ಹೆರಿಗೆ ಮಾಡಿಸಿದರು. ದುರದೃಷ್ಟವಶಾತ್ ವಿಪರೀತ ರಕ್ತಸ್ರಾವವಾಗಿ ಆ ಮಹಿಳೆ ತೀರಿಕೊಂಡಳು. ಅವಳ ತಾಯಿ ಆ ಮಗುವನ್ನು ಬಹಳ ಕಷ್ಟಪಟ್ಟು ಸಾಕುತ್ತಿದ್ದರು. ಒಮ್ಮೆ ಆ ಮಗುವಿಗೆ ಸೌಖ್ಯವಿಲ್ಲದೆ ಡಾ|| ಕೃಷ್ಣಪ್ರಸಾದ್‌ರವರ ಬಳಿಗೆ ಕರೆದುಕೊಂಡು ಬಂದರು. ಆ ಮಗು ತಾಯಿ ಹಾಲಿನ ಕೊರತೆ, ಪೌಷ್ಠಿಕತೆಯ ಕೊರತೆಯಿಂದ ಬಳಲುತ್ತಿತ್ತು. ವೈದ್ಯರು ಆ ಮಗುವಿಗೆ ಶುಕ್ರೂಷೆ ಮಾಡಿ ಫೀಸ್ ತೆಗೆದುಕೊಳ್ಳುವುದಕ್ಕೆ ಬದಲು, ತಾನೇ ಆ ಮಗುವಿನ ಅಜ್ಜಿಗೆ ಸಾಕಷ್ಟು ಹಣ ಕೊಟ್ಟು ಮಗುವಿನ ಪಾಲನೆ ಪೋಷಣೆ ಚೆನ್ನಾಗಿ ಮಾಡಿರಿ ಎಂದು ಹೇಳಿ, ಆಶೀರ್ವದಿಸಿ ಕಳಿಸಿದರು. ಒಂದು ವರ್ಷವಾಗುವುದರೊಳಗೆ ಆ ಮಗುವಿನ ತಂದೆ ಬೇರೊಂದು ಮದುವೆ ಮಾಡಿಕೊಂಡು ತನ್ನ ಹೊಸ ಹೆಂಡತಿಯೊಡನೆ ಕಲಬುರ್ಗಿಗೆ ಹೊರಟು ಹೋದ. ಕೆಲವೇ ದಿನಗಳಲ್ಲಿ ಆ ಮಗುವಿನ ಅಜ್ಜಿಯೂ ತೀರಿ ಹೋದರು. ಆ ಮಗು ಅಕ್ಷರಶಃ ಅನಾಥ ಮಗುವಾಯಿತು. ಆ ಮಗುವಿನ ತಂದೆಗೆ ಒಬ್ಬ ಅಕ್ಕ ಇದ್ದರು. ಅವರಿಗೆ ಸುಮಾರು ಐವತ್ತು ವರ್ಷ ವಯಸ್ಸು ಆಕೆಗೂ ಮೂರು ಮಕ್ಕಳಿದ್ದರು. ಆಕೆ ಆ ಮಗುವನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸಾಕಲು ತೊಡಗಿದರು. ಆಕೆಯ ಹೆಸರು ಸಿದ್ದಮ್ಮ, ಅವಳ ಗಂಡ ಬರಮಪ್ಪ, ಅವರೂ ಬಡವರೇ ಅವರಿವರ ಹೊಲದಲ್ಲಿ ಕೂಲಿ, ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಹೇಗೋ ಮೂರರ ಜೊತೆಗೆ ಮತ್ತೊಂದು ಎಂದು ಈ ಮಗುವನ್ನು ನೋಡಿಕೊಳ್ಳುತ್ತಿದ್ದರು.

ಈ ಮಧ್ಯೆ ಆ ಮಗುವಿಗೆ ಮತ್ತೆ ವಾಂತಿ, ಭೇಧಿ ಶುರುವಾಗಿ ಡಾ|| ಕೃಷ್ಣಪ್ರಸಾದ್‌ರವರ ಬಳಿಗೆ ಕರೆದುಕೊಂಡು ಬಂದರು. ಅವರು ಆ ಮಗುವನ್ನು ಪರೀಕ್ಷಿಸಿ, ಔಷಧಿ ಕೊಟ್ಟು, ಒಳ್ಳೆಯ ಪೌಷ್ಠಿಕ ಆಹಾರ ಕೊಡುವಂತೆ ಸಿದ್ದಮ್ಮನವರಿಗೆ ತಿಳಿಸಿದರು. ಅವರು ಗೋಳಾಡುತ್ತ ಈ ಬಿಸಿಲಲ್ಲಿ ಕುಡಿಯಲು ನೀರಿಲ್ಲ, ತಿನ್ನಕ್ಕೆ ಊಟವಿಲ್ಲ. ಕೂಲಿ ಸಿಕ್ತಾ ಇಲ್ಲ. ನಾವೇ ಸಾಯ್ತಾ ಇದ್ದೀವಿ. ನಮ್ಮ ಮಕ್ಕಳನ್ನೇ ನಮಗೆ ಸಾಕೋದಕ್ಕೆ ಆಗ್ತಾ ಇಲ್ಲ ಇನ್ನು ಈ ಮಗೂನ ನಾನೆಲ್ಲಿಂದ ಸಾಕಲಿ ಎಂದರು.

ಡಾಕ್ಟರ್ ಕೃಷ್ಣಪ್ರಸಾದ್‌ರವರಿಗೆ ಇವರ ಮಾತು ಮತ್ತು ಅಸಹಾಯಕ ಪರಿಸ್ಥಿತಿ ಸಂಪೂರ್ಣವಾಗಿ ಅರ್ಥವಾಯಿತು. ಇದಕ್ಕೇನಾದರೂ ಪರಿಹಾರ ಹುಡುಕಬೇಕೆಂದು ಯೋಚಿಸಿದರು. ಸಿದ್ದಮ್ಮನವರನ್ನು ಸ್ವಲ್ಪ ಹೊತ್ತು ಕುಳಿತುಕೊಳ್ಳುವಂತೆ ಹೇಳಿದರು.

ತಮ್ಮ ಸಹಾಯಕ ಒಬ್ಬ ಹುಡುಗನನ್ನು ಕಳಿಸಿ ಹೋಟೆಲಿನಿಂದ ಮಗುವಿಗೆ ಹಾಲು ಮತ್ತು ಸಿದ್ದಮ್ಮನವರಿಗೆ ಚಹಾ ತರಿಸಿಕೊಟ್ಟರು. ನಂತರ ಉಳಿದಿದ್ದ ನಾಲ್ಕು ರೋಗಿಗಳನ್ನು ಪರೀಕ್ಷಿಸಿ, ಔಷಧಿಗಳನ್ನು ಕೊಟ್ಟು ಕಳಿಸಿದರು. ನಂತರ ತಮ್ಮ ಸಹಾಯಕನನ್ನು ಕಳಿಸಿ ರಾಧಾ ಮೇಡಂರವರು ಶಾಲೆಯಿಂದ ಬಂದಿದ್ದರೆ ಅವರನ್ನು ಕರೆದುಕೊಂಡು ಬಾ ಎಂದು ಕಳಿಸಿದರು. ರಾಧಾ ಮೇಡಮ್‌ರವರು ತಮ್ಮ ತರಗತಿಗಳನ್ನು ಮುಗಿಸಿ ಧನ್ವಂತರಿ ಕ್ಲಿನಿಕ್‌ಗೆ ಬಂದರು. ಡಾ|| ಕೃಷ್ಣಪ್ರಸಾದ್‌ರವರು ಸಿದ್ದಮ್ಮನವರನ್ನು ರಾಧಾರವರಿಗೆ ಪರಿಚಯ ಮಾಡಿಸಿ, ಅವರ ತಮ್ಮನ ಮಗುವಿನ ಸಮಸ್ಯೆಯನ್ನು ವಿವರವಾಗಿ ತಿಳಿಸಿದರು. ಅತ್ಯಂತ ಬಡತನವಿರುವ ಈ ದಂಪತಿಗಳಿಗೆ ಈ ಮಗುವನ್ನು ಸಾಕುವುದಕ್ಕೆ ಆಗುತ್ತಿಲ್ಲ. ಇದನ್ನು ಯಾವುದಾದರೂ ಅನಾಥ ಶಿಶು ನಿವಾಸದಲ್ಲಿ ಸೇರಿಸುವ ಪ್ರಯತ್ನ ಮಾಡೋಣ ಎಂದರು. ಇನ್ನೊಂದು ಯೋಚನೆ ಎಂದರೆ ಯಾರಾದರೂ ಈ ಮಗುವನ್ನು ದತ್ತು ತೆಗೆದುಕೊಳ್ಳುವುದಿದ್ದರೆ ಅದಂತೂ ಆ ಮಗುವಿಗೆ ಮತ್ತು ದತ್ತು ತೆಗೆದುಕೊಳ್ಳುವವರಿಗೆ ಇಬ್ಬರಿಗೂ ಒಳ್ಳೆಯದಾಗುತ್ತದೆ ಎಂದರು.

ರಾಧಾರವರು ಈ ವಿಷಯವನ್ನು ಸಿದ್ದಮ್ಮನವರಿಗೆ ತಿಳಿಸಿ ಹೇಳಿದರು. ಸಿದ್ದಮ್ಮನವರು ಖಂಡಿತ ಹಾಗೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದರು. ಆದರೆ ಆ ಸುತ್ತಮುತ್ತಲ ಪಟ್ಟಣಗಳಲ್ಲಿ ಎಲ್ಲಿಯೂ ಅನಾಥ ಶಿಶು ನಿವಾಸಗಳು ಇರಲಿಲ್ಲ. ಕಲಬುರ್ಗಿಯಲ್ಲಿಯೋ, ಬೆಂಗಳೂರಿನಲ್ಲಿಯೋ ಹೋಗಿ ವಿಚಾರಿಸಬೇಕಾಗಿತ್ತು. ಆಗಿನ ಕಾಲದಲ್ಲಿ ದೂರವಾಣಿ ಸೌಕರ್ಯ ಇರಲಿಲ್ಲ. ಕಲಬುರ್ಗಿ ಅಥವಾ ಬೆಂಗಳೂರಿಗೆ ದೂರವಾಣಿ ಕರೆ ಮಾಡಬೇಕೆಂದರೆ ಟ್ರಂಕಾಲ್ ಬುಕ್ ಮಾಡಿ ಕಾಯಬೇಕಿತ್ತು. ಇನ್ನು ಸೆಲ್ ಫೋನ್‌ನ ಪರಿಕಲ್ಪನೆಯೇ ಇರಲಿಲ್ಲ. ಹಾಗಾಗಿ ತಕ್ಷಣ ವಿಚಾರಿಸುವುದು ಬಹಳ ಕಷ್ಟವಾಗಿತ್ತು. ಇನ್ನು ಯಾರಾದರೂ ಮಕ್ಕಳಿಲ್ಲದವರು ದತ್ತು ತೆಗೆದು ಕೊಳ್ಳುವರೇ ಎಂದು ಚಿಂತಿಸಿದರು. ಉತ್ತರ ಕರ್ನಾಟಕದ ಈ ಭಾಗದಲ್ಲಿ ಎಲ್ಲರ ಮನೆಗಳಲ್ಲಿಯೂ ನಾಲ್ಕು, ಆರು ಹೀಗೆ ಬೇಕಾದಷ್ಟು ಮಕ್ಕಳಿರುತ್ತಿದ್ದವು. ಸ್ವಲ್ಪ ಅನುಕೂಲಸ್ಥರು ಅವರು ರೈತರಿರಬಹುದು, ವ್ಯಾಪಾರಿಗಳಿರಬಹುದು, ಶಿಕ್ಷಕರಿರಬಹುದು, ಅಂತಹ ಎಷ್ಟೋ ಜನರಿಗೆ ಎರಡೆರಡು ಲಗ್ನ ಆಗಿ ಎರಡು ಪತ್ನಿಯರಿಗೂ ಸಾಕಷ್ಟು ಮಕ್ಕಳಿದ್ದವು. ಇನ್ನು ಈ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳುವವರಾರು? ಆಗಲಿ ಈ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ನಿರ್ಧರಿಸಿ ಎರಡು ದಿನ ಬಿಟ್ಟು ಬರಲು ಸಿದ್ದಮ್ಮನವರಿಗೆ ಹೇಳಿ ಕಳಿಸಿದರು. “ದಯವಿಟ್ಟು ಹಾಗೆ ಮಾಡಿ ಪುಣ್ಯ ಕಟ್ಟಿಕೊಳ್ಳಿ” ಎಂದು ಸಿದ್ದಮ್ಮನವರು ಕೈ ಮುಗಿದು ಹೊರಟರು.

ಡಾ| ಕೃಷ್ಣಪ್ರಸಾದ್ ಮತ್ತು ರಾಧಾರವರು ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಕೊನೆಗೆ ಒಂದು ನಿರ್ಧಾರಕ್ಕೆ ಬಂದರು. ಎರಡು ದಿನಗಳ ಬಳಿಕ ಸಿದ್ದಮ್ಮ, ಬರಮಪ್ಪ ಮತ್ತು ಆ ಮಗುವನ್ನು ಕರೆದುಕೊಂಡು ಕಲಬುರ್ಗಿಗೆ ಹೋಗಿ, ಮೊದಲು ಆ ಮಗುವಿನ ತಂದೆ ಹನುಮಪ್ಪನನ್ನು ಭೇಟಿಮಾಡಿ, ಅವನೇ ಈ ಮಗುವನ್ನು ಸಾಕುವಂತೆ ಮನ ಒಲಿಸಬೇಕು. ಅದು ಸಾಧ್ಯವಾಗದಿದ್ದರೆ, ಯಾವುದಾದರೂ ಅನಾಥಾಲಯದಲ್ಲಿ ಸೇರಿಸಿಬರುವುದು ಎಂದು ನಿರ್ಧರಿಸಿದರು. ಅದೇ ಪ್ರಕಾರ ಸಿದ್ದಮ್ಮ, ಬರಮಪ್ಪ ಮತ್ತು ಮಗುವನ್ನು ಕರೆದುಕೊಂಡು, ಕೃಷ್ಣಪ್ರಸಾದ್ ಮತ್ತು ರಾಧಾರವರು ಕಲಬುರ್ಗಿಗೆ ಹೋದರು. ಏನೋ ಒಂದು ಸಣ್ಣ ಎಳೆ ಹಿಡಿದು ಹತ್ತಾರು ಕಡೆ ವಿಚಾರಿಸಿ ಹನುಮಪ್ಪನನ್ನು ಹುಡುಕಿದರು. ಅವನು ಕಲ್ಲು ಗಣಿಯಲ್ಲಿ ಕೂಲಿ ಮಾಡುತ್ತಿದ್ದ. ಅವನ ಹೊಸ ಹೆಂಡತಿಯೂ ಕೂಲಿ ಮಾಡುತ್ತಿದ್ದಳು. ಅವರಿಗೆ ಈಗ ಒಂದು ಗಂಡು ಮಗುವಾಗಿತ್ತು. ಆ ಮಗುವನ್ನು ಒಂದು ಮರದ ಕೆಳಗೆ ಮಲಗಿಸಿ ಅವರಿಬ್ಬರೂ ಕೂಲಿ ಮಾಡುತ್ತಿದ್ದರು. ಆ ಮಗು ಕೂಡಾ ಅಪೌಷ್ಠಿಕತೆಯಿಂದ ಬಳಲುತ್ತಿತ್ತು. ಹನುಮಪ್ಪ ದಂಪತಿಯೊಂದಿಗೆ ಈ ಮಗುವನ್ನು ದತ್ತು ಕೊಡುವ ವಿಷಯ ಅಥವಾ ಅನಾಥಾಲಯ ಸೇರಿಸುವ ವಿಷಯ ಚರ್ಚಿಸಿದರು. ಅವನು ಅದಕ್ಕೆ ಒಪ್ಪಿ ದಯವಿಟ್ಟು ಹಾಗೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ. ಡಾ|| ಕೃಷ್ಣರವರು ಮತ್ತು ರಾಧಾರವರು ತಡ ಮಾಡದೆ ಬಿಳಿ ಹಾಳೆ ತಂದು ಹನುಮಪ್ಪ ಬರೆದಂತೆ ಒಂದು ಕಾಗದ ಬರೆದು, ತನ್ನ ಈ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಲು ಅಥವಾ ಯಾರಿಗಾದರೂ ದತ್ತು ಕೊಡಲು ತನ್ನದೇನು ಅಭ್ಯಂತರವಿಲ್ಲ ಮತ್ತು ಸಂಪೂರ್ಣ ಒಪ್ಪಿಗೆಯಿದೆ ಎಂದು ಬರೆಸಿ, ಅವನ ಕೈಲಿ ಸಹಿ ಹಾಕಿಸಿಕೊಂಡರು. ಅವನ ಹೆಂಡತಿಯ ಕೈಲಿ ಹೆಬ್ಬೆಟ್ಟು ಒತ್ತಿಸಿಕೊಂಡರು. ಸಿದ್ದಮ್ಮ ಮತ್ತು ಬರಮಪ್ಪನವರನ್ನು ಸಾಕ್ಷಿಗಳೆಂದು ಅವರದೂ ಹೆಬ್ಬೆಟ್ಟು ಒತ್ತಿಸಿಕೊಂಡರು. ತಾವಿಬ್ಬರೂ ಸಾಕ್ಷಿಗಳಾಗಿ ಸಹಿ ಮಾಡಿದರು. ಇಷ್ಟೆಲ್ಲಾ ಆಗುವ ವೇಳೆಗೆ ರಾತ್ರಿಯಾಯಿತು. ಇನ್ನು ಅನಾಥಾಲಯಕ್ಕೆ ಯಾವಾಗ ಹೋಗುವುದು? ಅದು ಎಲ್ಲಿದೆ ಎಂದು ಹೇಗೆ ವಿಚಾರಿಸುವುದು? ಹೀಗಾಗಿ ಆ ರಾತ್ರಿ ಒಂದು ಹೋಟೆಲಿನಲ್ಲಿ ಎರಡು ಕೋಣೆಗಳನ್ನು ತೆಗೆದುಕೊಂಡು ಉಳಿದರು. ರಾತ್ರಿ ಇಡೀ ಯಾರಿಗೂ ನಿದ್ರೆ ಇಲ್ಲ. ಮುಂದೇನು ಮಾಡುವುದೆಂದು ಚಿಂತಿಸುತ್ತಾ ರಾತ್ರಿ ಕಳೆದರು.

ಮರುದಿನ ಬೆಳಿಗ್ಗೆ ಬೇಗ ಎದ್ದು ತಯಾರಾಗಿ, ರಾಧಾರವರ ಪರಿಚಿತರಾದ ಒಬ್ಬ ವಕೀಲರ ಮನೆಗೆ ಹೋದರು. ಅವರು ಇವರ ಪ್ರಸ್ತಾವನೆಯನ್ನು ಕೇಳಿ, ಇವರುಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಮತ್ತು ಸರ್ಕಾರಿ ಅನಾಥ ಶಿಶು ನಿವಾಸಕ್ಕೆ ಕರೆದುಕೊಂಡು ಹೋದರು. ಅನಾಥಾಲಯದಲ್ಲಿ ಈಗಾಗಲೇ ಬಹಳಷ್ಟು ಮಕ್ಕಳಿದ್ದು ಸರಿಯಾದ ಸೌಲಭ್ಯಗಳಿರಲಿಲ್ಲ. ಈಗಿರುವ ಮಕ್ಕಳನ್ನೇ ನೋಡಿಕೊಳ್ಳಲು ನಮಗೆ ಆಗುತ್ತಿಲ್ಲ. ಇನ್ನು ಒಂದು ಮಗುವನ್ನು ಸೇರಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ನೀವು ಬೆಂಗಳೂರಿಗೋ, ಧಾರವಾಡಕ್ಕೋ ಹೋಗಿ ಪ್ರಯತ್ನಿಸಿರಿ ಎಂದರು.

ಇನ್ನು ಮಗುವನ್ನು ದತ್ತುಕೊಡುವ ವಿಷಯ ಕೇಳಿದಾಗ ಈ ಜಿಲ್ಲೆಯಲ್ಲಿ ಜನಸಂಖ್ಯೆ ವಿಪರೀತವಾಗಿದೆ. ಯಾರೂ ದತ್ತು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಹಾಗೆ ತೆಗೆದುಕೊಂಡವರು ಮಗುವನ್ನು ತಮ್ಮ ಮಗುವಂತೆ ಸಾಕದೆ, ಮನೆಯ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಹಾಗಾಗಿ ನಾವು ಮಕ್ಕಳನ್ನು ದತ್ತು ಕೊಡುವ ಪದ್ಧತಿಯನ್ನೇ ನಿಲ್ಲಿಸಿದ್ದೇವೆ ಎಂದರು. ಸರಿ ಕಲಬುರ್ಗಿಗೆ ಬಂದದ್ದಕ್ಕೆ ಒಂದಷ್ಟು ವಿಷಯ ತಿಳಿಯಿತು. ಒಂದಷ್ಟು ಕೆಲಸವಾಯಿತು. ಇನ್ನು ಮುಂದೇನು ಮಾಡಬೇಕು ಎಂಬುದನ್ನು ನಾಳೆ ನಿರ್ಧರಿಸೋಣವೆಂದು ಸುರಪುರಕ್ಕೆ ಹಿಂತಿರುಗಿದರು. ಅಲ್ಲಿ ಕೆಲವು ವಸ್ತುಗಳನ್ನು ಔಷಧಿಗಳನ್ನು ಕೊಂಡು ಕೆಂಭಾವಿಗೆ ಹಿಂತಿರುಗಿದರು.

ಕೆಂಭಾವಿಗೆ ಬಂದಮೇಲೆ ಸಿದ್ದಮ್ಮ ಬರಮಪ್ಪರವರಿಗೆ ನೀವು ಮಗುವನ್ನು ಕರೆದುಕೊಂಡು ಮನೆಗೆ ಹೋಗಿ, ನಾವು ಈ ಮಗುವಿನ ವಿಷಯ ಏನು ಮಾಡುವುದೆಂದು ಚರ್ಚಿಸಿ ಏನಾದರೂ ಒಂದು ವ್ಯವಸ್ಥೆ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟು ಕಳಿಸಿದರು. ರಾಧ ಮೇಡಂರವರು ನಾಳೆ ಶಾಲೆಯ ಕೆಲಸ ಮುಗಿಸಿ ಸಂಜೆ ಬಂದು ಭೇಟಿಯಾಗುವುದಾಗಿ ಹೇಳಿ ತಮ್ಮ ಮನೆಗೆ ಹೊರಟರು. ಡಾ|| ಕೃಷ್ಣಪ್ರಸಾದ್‌ರವರು ರಾತ್ರಿ ಇಡೀ ಈ ಮಗುವಿನ ವಿಚಾರವನ್ನೇ ಯೋಚಿಸುತ್ತಾ ಮಲಗಿದರು.
* * *

ಮತ್ತೆರಡು ದಿನ ತಮ್ಮ ರೋಗಿಗಳ ಶುಶ್ರೂಷೆಯಲ್ಲಿ ನಿರತರಾದರು. ರಾಧಾ ಮೇಡಂರವರೂ ಕೂಡಾ ಎರಡು ದಿನ ಈ ಕಡೆ ಬರಲಿಲ್ಲ. ಒಂದು ರವಿವಾರ ಅವಸರ ಅವಸರವಾಗಿ ಡಾಕ್ಟರ ಮನೆಗೆ ಬಂದು ಈ ಸಂಜೆ ಊಟಕ್ಕೆ ನಮ್ಮ ಮನೆಗೆ ಬನ್ನಿ, ಈ ಮಗುವಿನ ಬಗ್ಗೆ ಒಂದು ನಿರ್ಧಾರ ತೆಗೆದುಕೊಂಡಿದ್ದೀನಿ ಎಂದರು. ಡಾ| ಕೃಷ್ಣಪ್ರಸಾದ್‌ರವರು “ಖಂಡಿತ ಬರುತ್ತೀನಿ ಮೇಡಂ” ಎಂದರು.

ರಾತ್ರಿ ಎಂಟು ಗಂಟೆಗೆ ರಾಧಾರವರ ಮನೆಗೆ ಊಟಕ್ಕೆ ಹೋದರು. ರಾಧಾರವರು ರೇಷ್ಮೆ ಸೀರೆಯುಟ್ಟು ಹೂಮುಡಿದು ಬಹಳ ಉತ್ಸಾಹದಿಂದ ಓಡಾಡುತ್ತಿದ್ದರು. ರಾಧಾರವರ ತಾಯಿ ಸುಸ್ತಾಗಿ ಮಲಗಿದ್ದರು. ಡಾಕ್ಟರನ್ನು ನೋಡಿ ಎದ್ದು ನಿಂತು, ಕೈ ಮುಗಿದು ಸ್ವಾಗತಿಸಿದರು. ರಾಧಾರವರೇ ಅಡುಗೆ ಮಾಡಿ ಡಾಕ್ಟರವರಿಗೆ ಊಟಕ್ಕೆ ಬಡಿಸಿದರು. ನಂತರ ತಾವೂ ಊಟ ಮಾಡಿದರು. ಅವರ ತಾಯಿಯವರ ಊಟ ಆಗಿತ್ತು. ಮೂವರೂ ಆರಾಮಾಗಿ ಕುಳಿತು ಮಾತನಾಡತೊಡಗಿದರು. ಆ ಸಮಯದಲ್ಲಿ ರಾಧಾರವರು ಮಗುವಿನ ವಿಷಯ ತೆಗೆದರು. ಆ ಮಗುವನ್ನು ನಾವೇ ದತ್ತು ತೆಗೋಳ್ಳೋಣ. ನಾನೇ ಅದರ ತಾಯಿ… ಮತ್ತು (ಸಂಕೋಚದಿಂದ ಹೇಳಿದರು) ನೀವೇ ಅದರ ತಂದೆ”. ಹಾಗೆಯೇ ರಿಜಿಸ್ಟ್ರೇಷನ್ ಮಾಡಿಸೋಣ. ಅಂದರೆ…. ನಾವಿಬ್ಬರೂ ರಿಜಿಸ್ಟರ್ಡ್ ಮದುವೆ ಮಾಡಿಕೊಳ್ಳೋಣ. ದಯವಿಟ್ಟು ನನ್ನನ್ನು ನಿಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿ, ನಾವಿಬ್ಬರೂ ಕೂಡಿ ಬಡಜನರ ಸೇವೆ ಮಾಡೋಣ.” ಎಂದು ಹೇಳಿ ಕೃಷ್ಣಪ್ರಸಾದರ ಕಾಲಿಗೆ ಎರಗಿದರು. ಕೃಷ್ಣ ಪ್ರಸಾದರವರಿಗೆ ಏನು ಹೇಳಲೂ ತೋಚಲಿಲ್ಲ. ನಮಸ್ಕಾರ ಮಾಡಿದ ರಾಧಾರವರನ್ನು ಎರಡೂ ಕೈಯಲ್ಲಿ ಮೇಲೆತ್ತಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಅವರ ಕೈಹಿಡಿದು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ರಾಧಾರವರು ದಯವಿಟ್ಟು ಒಪ್ಪಿಕೊಳ್ಳಿ ಎಂಬಂತೆ ದೈನ್ಯರಾಗಿ ನೋಡಿದರು. ಕೃಷ್ಣ ಪ್ರಸಾದ್‌ರವರು ರಾಧಾರವರ ಕೈ ಹಿಡಿದು ಎಬ್ಬಿಸಿದರು. ಇಬ್ಬರೂ ಹೋಗಿ ಅವರ ತಾಯಿಯವರ ಪಾದಗಳಿಗೆ ಎರಗಿದರು. ಆ ವೃದ್ಧ ಮಾತೆ ಏನೂ ಹೇಳಲು ತೋಚದೆ ಕಣ್ತುಂಬಿ ಬಂದು, ಕೈ ಎತ್ತಿ ಇವರಿಬ್ಬರನ್ನು ಆಶೀರ್ವದಿಸಿದರು.

ಕೆಲವೇ ದಿನಗಳಲ್ಲಿ ಯಾದಗಿರಿಯ ಸಬ್‌ರಿಜಿಸ್ಟ್ರಾರ್‌ರವರ ಕಛೇರಿಯಲ್ಲಿ ರಾಧಾಕೃಷ್ಣರ ಮದುವೆ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು. ಅದಾದ ಒಂದು ವಾರದಲ್ಲಿ ಕೆಂಭಾವಿಯ ಆ ಅನಾಥ ಮಗುವನ್ನು ಇವರಿಬ್ಬರ ಮಗ ಎಂದು ದತ್ತು ತೆಗೆದುಕೊಂಡು ಅದರ ರಿಜಿಸ್ಟ್ರೇಷನ್ ಮಾಡಿಸಿದರು. ಆ ಮಗುವಿಗೆ “ಅನಿರುದ್ಧ” ಎಂದು ಹೆಸರಿಟ್ಟರು ರಾಧಾ-ಕೃಷ್ಣ ದಂಪತಿಗಳು ಅತ್ಯಂತ ಪ್ರೀತಿಯಿಂದ ಮತ್ತು ಶ್ರದ್ಧೆಯಿಂದ ಅಂದಿನಿಂದ ಗ್ರಾಮೀಣ ಬಡವರ ಸೇವೆ ಮಾಡುತ್ತಿದ್ದಾರೆ. ಆಗಿನ ಕಾಲದಲ್ಲಿ ದೂರದರ್ಶನದ ಪರಿಕಲ್ಪನೆಯೇ ಇರಲಿಲ್ಲ. ಇವರ ಸೇವೆಯನ್ನು ಬಾನುಲಿಯವರಾಗಲಿ, ಯಾವುದೇ ಪತ್ರಿಕೆಯವರಾಗಲಿ ಪ್ರಚಾರ ಮಾಡಲಿಲ್ಲ. ಯಾವುದೇ ಪ್ರಚಾರಕ್ಕೆ ಹಾಗೂ ಪ್ರಶಸ್ತಿಗೆ ಇವರು ಎಂದೂ ಆಸೆಪಟ್ಟವರಲ್ಲ. ಸದ್ದು ಗದ್ದಲವಿಲ್ಲದೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸದಾಕಾಲ ಸೇವಾನಿರತರಾಗಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿಪಾಡು
Next post ಕನಸುಗಣ್ಣಿನ ಹುಡುಗಿ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…