ಕಣ್ಣು, ಮೂಗು, ಬಾಯಿ
ಕೈಕಾಲು ಇನ್ನೂ ಮೂಡಿರದ
ಜೀವಧಾತುವಿನ ಮಿಸುಕಾಟ
ಹೊಯ್ದಾಡುವ ಭ್ರೂಣಗಳು
ಗರ್‍ಭದಲ್ಲಿ ಮಿಸುಕುವ
ಜೀವದ್ರವದ ಎದೆಬಡಿತ
ಅಸ್ಪಷ್ಟ ಜೀವದ ಚಲನೆ
ಲಿಂಗಪತ್ತೆ ಮಾಡಿದ್ದು
ಮನುಜನ ಸಾಧನೆ ಎನ್ನಲೆ?
ವಿಜ್ಞಾನದ ಕತ್ತರಿಯಿಂದ
ಹೆಣ್ಣು ಭ್ರೂಣಗಳಿಗೆ ನಿಷೇಧ
ಹೊಕ್ಕಳ ಬಳ್ಳಿಯನ್ನು ಕಡಿದು
ಮೃತ್ಯು ಕೂಪಕೆ ತಳ್ಳಿದ
ನಿರ್‍ದಾಕ್ಷಿಣ್ಯದ ಕತ್ತರಿಪ್ರಯೋಗ
ಜೀವಗಳ ಉಸಿರಾಟ ಕಡಿವ
ನಿಷೇಧಗಳ ಹೇರಿ
ಹಸಿ ಭ್ರೂಣಗಳ ಬಲಿ
ಗುಬ್ಬಿ ಗೂಡುಗಳಲ್ಲಿ
ಸೇರಿದ ಎಷ ಸರ್‍ಪ
ಕೂಡಿಟ್ಟ ಮೊಟ್ಟೆಗಳನ್ನು
ತಿಂದು ತೇಗಿದರೇನು?
ಹಲ್ಲು ಕೀಳುವ ವಾರಾಸುದಾರರು
ಹುಟ್ಟಿ ಬರುತ್ತಾರೆ ಮುಂದೆ
ಸಾಯಿಸಿದ ಹೆಣ್ಣು ಭ್ರೂಣಗಳ
ಲೆಕ್ಕ ಕೇಳುತ್ತಾರೆ,
ಎಲ್ಲ ನಿಷೇಧಗಳ ಕಿತ್ತು ಹಾಕುತ್ತಾರೆ.
*****