ಸಂದರ್ಶನ

ಸಂದರ್ಶನ

ಸುಪ್ರಸಿದ್ಧ ಕವಿಗಳೂ ಸಾಹಿತಿಗಳೂ ಆಗಿದ್ದ ಶ್ರೀ – ರಾಯರ ಸಂದರ್ಶನ ತೆಗೆದುಕೊಳ್ಳುವದಕ್ಕೆಂದು ಮೊದಲೇ ನಿಗದಿಯಾದಂತೆ ನನ್ನ ಮಿತ್ರ ಆನಂದನ ಜತೆ ಗೂಡಿ ಅವರ ಮನೆಯನ್ನು ಹತ್ತು ನಿಮಿಷ ಮೊದಲೇ ತಲುಪಿದ್ದಾಗಿತ್ತು. ಹೆಸರಾಂತ ಮಂದಿಯ ಸಂದರ್ಶನ ಮಾಡಿ ಫೋಟೋ ಸಮೇತ (ಫೋಟೋ ತೆಗೆಯುವದು ಆನಂದನ ಕೆಲಸ ಅವನ ಬಳಿ ಆದಕ್ಕೆ ಬೇಕಾಗುವ ಕ್ಯಾಮರಾ, ಲೆನ್ಸುಗಳಿದ್ದವು) ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸುವುದು ನನ್ನ ಆಗಿನ ಹವ್ಯಾಸವಾಗಿತ್ತು. ಕಾಲೇಜು ಮುಗಿಸಿ ಬೇರೆ ಕೆಲಸವಿಲ್ಲದೆ ಅಲೆಯುತ್ತಿದ್ದ ನನಗೆ ಅದರಿಂದ ಆಗಾಗ ಸಾಕಷ್ಟು ಹಣ ಸಂಪಾದನೆಯಾಗುತ್ತಿತ್ತು. ಈಗ ಪತ್ರಿಕೆಯೊಂದು ರಾಯರ ಸಂದರ್ಶನ ಲೇಖನವನ್ನು ಅಪೇಕ್ಷಿಸುವದರಿಂದ ನಾನು ಅವರ ಮನೆಗೆ ಫೋನುಮಾಡಿ ಭೇಟಿಯ ಸಮಯವನ್ನು ನಿಗದಿಪಡಿಸಿಕೊಂಡಿದ್ದೆ. ನಾವು ಮನೆಯನ್ನು ತಲುಪಿದಾಗ ಅವರು ಚಾವಡಿಯಲ್ಲಿ ಹಾಕಿದ್ದ ಆರಾಮ ಕುರ್ಚಿಯಲ್ಲಿ ಕಾಲುಗಳನ್ನು ಮೆಲಕ್ಕೆ ಚಾಚಿ ಧ್ಯಾನಾಸಕ್ತರಂತೆ ಒರಗಿ ಕುಳಿತಿದ್ದರು. ಅವರು ನಿದ್ದೆ ಮಾಡುತ್ತಿದ್ದಾರೋ ಅಥವಾ ಯಾವುದೋ ವಿಚಾರದಲ್ಲಿದ್ದಾರೋ ತಿಳಿಯದಂಥ ಭಂಗಿ ಅದು. ಬಹುಶಃ ಯಾವುದೋ ವಿಚಾರದಲ್ಲಿ ಮಗ್ನರಾಗಿರಬೇಕು. ಯಾಕೆಂದರೆ ಅವರ ಪಕ್ಕದಲ್ಲಿ ಕೆಲವು ಮಂದಿ ಕುಳಿತು ಏನನ್ನೋ ಚರ್ಚೆ ಮಾಡುತ್ತಿದ್ದರು. ಅವರಲ್ಲಿ ಇಬ್ಬರನ್ನು ನಾನು ಹೆಸರಿನಿಂದ ಬಲ್ಲವನಾಗಿದ್ದೆ. ಒಬ್ಬರು ಕಾಲೇಜು ಅಧ್ಯಾಪಕರು; ಸಾಹಿತ್ಯವಲಯದಲ್ಲಿ ಅಷ್ಟಿಷ್ಟು ಹೆಸರು ಮಾಡಿದ್ದರು. ಇನ್ನೊಬ್ಬರು ಕನ್ನಡದ ಹೆಸರಾಂತ ವಿಮರ್ಶಕರು, ರಾಯರ ಆಪ್ತ ಸ್ನೇಹಿತರು, ಶಿಷ್ಯರು, ಅನುಯಾಯಿಗಳು. ಅವರ ಕಾವ್ಯದ ಮೇಲೆ ಸಾಕಷ್ಟು ಕೆಲಸ ಮಾಡಿದವರು. ರಾಯರ ಪ್ರಸಿದ್ದಿಯ ಮೇಲೆಯೇ ಈ ವಿಮರ್ಶಕವರೇಣ್ಯರ ಪ್ರಸಿದ್ದಿಯೂ ನೆಲಸಿತ್ತು ಎಂದು ಬೇಕಾದರೂ ಹೇಳಬಹುದು.

ರಾಯರು ನನ್ನನ್ನು ಕಂಡು ಎಚ್ಚತ್ತರು. ಒಂದು ವಿಧವಾಗಿ ನಕ್ಕರು. ಹಾ! ಒಳ್ಳೆ ಗಳಿಗೆಯಲ್ಲೇ ಬಂದಿರಿ. ನಾನಿಂದು ಸತ್ಯವನ್ನೇ ನುಡಿಯಬೇಕೆಂದು ಮನಸ್ಸು ಮಾಡಿದ್ದೇನೆ. ಎಷ್ಟೋ ದಿನಗಳಿಂದ ನನ್ನದೊಂದು ಆತ್ಮಕಥೆ ಬರೆಯಬೇಕೆಂದರೆ ಹೇಗೆ ಎಂಬ ವಿಚಾರ ಮನಸ್ಸಿನಲ್ಲಿತ್ತು ಆದರೆ ಬರೆಯುವ ಶಕ್ತಿ ಕೈಗೆ ಇಲ್ಲ. ಯಾರಾದರೂ ಬರೆದುಕೊಳ್ಳುವುದಾದರೆ ಹೇಳಿ ಬರೆಸಬಲ್ಲೆ. ತಾನು ಬರೆಯುತ್ತೇನೆ ಎಂದು ನಮ್ಮ ವಿಮರ್ಶಕಶಿಷ್ಯರೇನೋ ಹೇಳುತ್ತಿದ್ದಾರೆ. ನೋಡೋಣ. ಈಗ ಹೇಗಿದ್ದರು ತಾವು ಬಂದಿದ್ದೀರಿ. ಅದೇನು ಪ್ರಶ್ನೆಗಳಿವೆಯೋ ಕೇಳಿರಿ ಎಂದರು.

ರಾಯರ ಸಂದರ್ಶನಕ್ಕೋಸ್ಕರ ನಾನು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಅವರ ಕವನ ಸಂಕಲನಗಳು ಏನೇನು, ಅವು ಯಾವ ಯಾವ ಇಸವಿಯಲ್ಲಿ ಪ್ರಕಟವಾದವು. ಅವಕ್ಕೆ ಯಾವ ಯಾವ ಪ್ರಶಸ್ತಿಗಳು ಬಂದವು. ವಿಮರ್ಶಕರು (ಸದ್ಯ ಅಲ್ಲಿ ಉಪಸ್ಥಿತರಿದ್ದ ವಿಮರ್ಶಕವರೇಣ್ಯರೂ ಸೇರಿದಂತೆ) ಅವರ ಬಗ್ಗೆ ಏನೇನು ಹೇಳಿದ್ದಾರೆ, ಯಾವ ಯಾವ ಸಾಹಿತ್ಯ ವಾಗ್ವಾದಗಳಲ್ಲಿ ರಾಯರ ಹೆಸರು ಕೇಳಿ ಬಂದಿದೆ ಇತ್ಯಾದಿಗಳನ್ನು ಅಭ್ಯಾಸ ಮಾಡಿಕೊಂಡಿದ್ದೆ. ಸಂದರ್ಶನ ಕಾರ್ಯದಲ್ಲಿ ನಾನೆಷ್ಟು ಪಳಗಿದ್ದೆನೆಂದರೆ ಆಕಾಶವಾಣಿಯವರು ಕೂಡ ನನ್ನನ್ನು ಈ ಕೆಲಸಕ್ಕೆ ಆಗಾಗ್ಗೆ ಗೊತ್ತು ಮಾಡುವುದಿತ್ತು. ಟೇಪ್ ರಿಕಾರ್ಡರನ್ನು ಅವರ ಮುಂದಿರಿಸಿ “ನಿಮ್ಮ ಮೊತ್ತಮೊದಲ ಕವಿತೆ ಯಾವುದು ಸಾರ್?” ಎಂದು ಕೇಳಿದೆ. ರಾಯರು ತಮ್ಮ ಕಣ್ಣುಗಳನ್ನು ಮುಚ್ಚಿಕುಳಿತರು. ಆಹಾ! ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದುಕೊಂಡೆ. ಒಂದು ಕ್ಷಣ ಸುಮ್ಮನೆ ಕುಳಿತವರು ಕಣ್ಣುಗಳನ್ನು ತೆರೆದು ನಕ್ಕರು. “ಅದೊಂದು ದೊಡ್ಡ ಕತೆ. ಸತ್ಯವನ್ನೆ ಹೇಳುತ್ತೇನೆ ಎಂದೆನೆಲ್ಲ ಕೇಳಲೆಂದು ಬಂದವರು ನೀವು . ಹೇಳಲೇ?” ಎಂದು ಕೇಳಿದರು. ಹತ್ತಿರ ಕುಳಿತಿದ್ದ ವಿಮರ್ಶಕ ವರೇಣ್ಯರ ಮುಖ ನೋಡಿದರು. ಎಲ್ಲರೂ ಬಹಳ ಕುತೂಹಲದಿಂದ ಕುಳಿತಿದ್ದರು. ಆನಂದ ಒಂದು ಕ್ಲಿಕ್ ಮಾಡಿದ. ತುಂಬ ಸೈಕಲಾಜಿಕಲ್ ನಿಮಿಷಗಳಲ್ಲಿ ಆತ ಹಾಗೆ ಮಾಡುತ್ತಾನೆ. ಅವನು ಅಂದು ತೆಗೆದ ಚಿತ್ರಗಳಲ್ಲೆಲ್ಲಾ ಈ ಮೊದಲ ಚಿತ್ರವೇ ಬಹಳ ಚೆನ್ನಾಗಿ ಬಂದದ್ದು. ಆ ಚಿತ್ರವನ್ನು ಉಪಯೋಗಿಸುವ ಸಂದರ್ಭ ನಮಗೆ ಒದಗಲಿಲ್ಲ.

“ನನ್ನ ಹೆಸರಿನಲ್ಲಿ ಮೊತ್ತ ಮೊದಲು ಪ್ರಕಟವಾದ ಕವಿತೆ ಕಂಪನ. ಇದು ಆಗಿನ ಸುಪ್ರಸಿದ್ಧ ಪತ್ರಿಕೆ ಯೊಂದರಲ್ಲಿ ಪ್ರಕಟವಾಯಿತು. ನಂತರ ಆ ಪತ್ರಿಕೆಯ ಸಂಪಾದಕರು ನನಗೆ ಪತ್ರ ಬರೆದು ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ, ಇಂಥದ್ದೇ ಕವಿತೆಗಳಿದ್ದರೆ ಕಳಿಸಿಕೊಡಿ ಎಂದು ಕೇಳಿದರು. ನಾನು ಒಂದರ ಮೇಲೊಂದರಂತೆ ಕಳಿಸತೊಡಗಿದೆ.

ಓದುಗರ ಹಾಗು ವಿಮರ್ಶಕರ ಗಮನಕ್ಕೆ ಬಂದೆ. ಕನ್ನಡದ ಯಾವ ಕವಿಯ ಹಾದಿಯೂ ಇಷ್ಟು ಸುಗಮವಾಗಿರಲಾರದು…..” ರಾಯರ ಈ ಮಾತನ್ನು ಕೇಳಿ ನನಗೆ ತುಸು ನಿರಾಸೆಯಾಯಿತೆಂದೇ ಹೇಳಬೇಕು. ಯಾಕೆಂದರೆ ಇದು ಯಾರೂ ಮೆಚ್ಚುವ ಜೀವನ ಚರಿತ್ರೆ ಯಲ್ಲ. ಕಷ್ಟದಿಂದ ಮೇಲೆ ಬರುವ ಜನರನ್ನೇ ಓದುಗರು ಒಪ್ಪುವದು.

ಹಲವು ಲೇಖನಗಳನ್ನು ಪತ್ರಿಕೆಗಳಿಗೆ ಕಳಿಸಿ; ಅವು ಮರಳಿಬಂದು, ನಿರಾಸೆಗೊಂಡು ನಂತರ ಅದು ಹೇಗೋ ಫಕ್ಕನೆ ಸಾಹಿತಿ ಪ್ರಸಿದ್ಧನಾಗುವ ಪವಾಡವನ್ನೇ ಜನರು ನಿರೀಕ್ಷಿಸುವುದು. ಅದು ಏನಾದರೇನು ನಮ್ಮದೇ ಊರವರಾದ ರಾಯರ ಕುರಿತು ನಮಗೆಲ್ಲ ಬಹಳ ಅಭಿಮಾನವಿತ್ತು. ರಾಯರು ಹೇಳಿದರು : “ನಾನು ಆಗ ಕಾಲೇಜಿನಲ್ಲಿ ಓದುತ್ತಿದ್ದೆ. ನಾನು ನನ್ನ ಸಹಪಾಠಿ ಮಿತ್ರನೂ ಒಂದೇ ಕೋಣೆಯಲ್ಲಿ ವಾಸಮಾಡುತ್ತಿದ್ದೆವು. ಆತನ ಹೆಸರು ಸದಾಶಿವ. ತೆಳ್ಳಗೆ ಬೆಳ್ಳಗೆ ಇದ್ದ. ದಿನ ಬಿಟ್ಟು ದಿನ ಅವನಿಗೆ ಜ್ವರ ಬರುತ್ತಿತ್ತು. ಜ್ವರವಿಲ್ಲದ ದಿನಗಳಲ್ಲಿ ಅವನು ಕವಿತೆಗಳನ್ನು ಬರೆಯುತ್ತಿದ್ದ. ನನಗೆ ಓದಿ ಹೇಳುತ್ತಿದ್ದ. ಅವನು ಎಷ್ಟು ಚೆನ್ನಾಗಿ ಬರಯುತ್ತಿದ್ದನೆಂದರೆ ಅವನ ಹಾಗೆ ಬರೆಯುವದು ನನ್ನಿಂದ ಸಾಧ್ಯವಾದರೆ ಎಂದು ನನಗೆ ಅನ್ನಿಸುತ್ತಿತ್ತು. ಒಂದುದಿನ ಅವನ ಜ್ವರ ಉಲ್ಬಣವಾಗಿ ಅವನನ್ನು ಆಸ್ಪತ್ರೆಗೆ ಸೇರಿಸಬೆಕಾಗಿ ಬಂತು. ಅಲ್ಲಿ ಅವನು ತೀರಿಕೊಂಡ……”

“ಅವನ ಸಾವು ನಿಮ್ಮ ಮೇಲೆ ಪರಿಣಾಮ ಬೀರಿರಬೇಕಲ್ಲವೆ? “ನನ್ನ ಪ್ರಶ್ನೆ.

“ಸದಾಶಿವನಿಗೆ ಸೇರಿದ ಪುಸ್ತಕಗಳನ್ನೂ, ಬಟ್ಟೆಬರೆಗಳನ್ನೂ ನಾನು ಅವನ ಮನೆಯವರಿಗೆ ತಲುಪಿಸಿದೆ. ಅವನ ಕವಿತೆಗಳ ಹಸ್ತಪ್ರತಿಗಳನ್ನು ಮಾತ್ರ ನನ್ನ ಬಳಿ ಇರಿಸಿಕೊಂಡೆ. ’ಕಂಪನ’ ಕವಿತೆಯ ಮೊದಲ ಹೆಸರು ’ಸ್ಪಂದನ’ ಎಂದಿತ್ತು…..” ಹೀಗೆಂದು ರಾಯರು ಸುಮ್ಮನಾದರು. ಇದೇನು ಇವರು ಹೇಳಿತ್ತಿದ್ದಾರೆ ಎಂದೇ ನಮಗಾರಿಗೂ ಅರ್ಥವಾಗಲಿಲ್ಲ. ರಾಯರು ನಮ್ಮ ದೊಡ್ಡ ಕವಿಗಳು. ಅನೇಕ ಪ್ರಶಸ್ತಿಗಳನ್ನು ಗೆದ್ದವರು. ಅವರು ಚರ್ಚಾಸ್ಪದ ವ್ಯಕ್ತಿಗಳಾಗಿ ಎಂದೂ ಇರಲಿಲ್ಲವೆಂದೇನಲ್ಲ. ಇಂಥವರ ಮೊದಲನೆ ಕವನದ ಹಿಂದೆ ಒಂದು ಕತೆಯಿದೆ ಎಂದರೆ ನಂಬುವದು ಹೇಗೆ, ನಂಬದೆ ಇರುವುದು ಹೇಗೆ? ವಿಮರ್ಶಕವರೇಣ್ಯರು ಕುರ್ಚಿಯನ್ನು ಸಮೀಪಕ್ಕೆ ಎಳೆದು ಕುಳಿತರು. ಅವರಿಗೂ ಇದು ಹೊಸ ಸುದ್ದಿ ಯಾಗಿತ್ತು. ಎಂದರೆ ಇದು ತನಕ ಯಾರಿಗೂ ಗೊತ್ತಿರದ ಸಂಗತಿಗಳನ್ನು ರಾಯರು ಇಂದು ಈ ಸಂದರ್ಶನದಲ್ಲಿ ಹೇಳುತ್ತಿದ್ದರು- ಚಾರಿತ್ರಿಕ ಮಹತ್ವವುಳ್ಳ ಘಟನೆ. ಸಾಹಿತಿಗಳೇ ವಿಮರ್ಶಕರೇ ಓದುಗರೇ ಏಳಿ ಎಚ್ಚರಾಗಿರಿ! ಕೇಳಿರಿ! ಎನ್ನುತ್ತಿತ್ತು ನನ್ನ ಎದೆ ಬಡಿತ.

“ನಿಮ್ಮ ಮೊದಲನೆ ಕವನ ಸಂಕಲನದ ಹೆಸರು ’ಕೆಂಪನ ಮತ್ತು ಇತರ ಕವಿತೆಗಳು’ ಎಂದಿತ್ತು. ಅದಕ್ಕೆ ಪಂಜೆ ಮಂಗೇಶರಾಯ ಪ್ರಶಸ್ತಿ ಕೂಡ ಬಂತು” ಎಂದೆ.

ಸದಾಶಿವನ ಹಸ್ತ ಪ್ರತಿಗಳಲ್ಲಿ ನೂರೈವತ್ತಕ್ಕೂ ಮಿಕ್ಕಿದಂತೆ ಅಪ್ರಕಟಿತ ಕವಿತೆಗಳಿದ್ದುವು. ಅವನ್ನು ನಾನು ಎರಡು ಮೂರು ವರ್ಷಗಳ ಅಂತರದಲ್ಲಿ ಮೂರು ಸಂಕಲನಗಳಾಗಿ ಪ್ರಕಟಿಸಿದೆ. ಮೊದಲ ಸಂಕಲನದ ಹೆಸರು ’ಕಂಪನ ಮತ್ತು ಇತರ ಕವಿತೆಗಳು.’ ಎರಡನೆಯದು ’ಪ್ರಳಯ ಮತ್ತು ಇತರ ಕವಿತೆಗಳು.’ ಮೂರನೆಯೆದು ’ಅಗ್ನಿ ವರ್ಷ ಮತ್ತು ಇತರ ಕವಿತೆಗಳು.’ ಸದಾಶಿವನ ಕವಿತೆಗಳನ್ನು ನಾನು ಯಥಾವತ್ತಾಗಿ ಪ್ರಕಟಿಸಲಿಲ್ಲ. ಅವುಗಳ ಶೀರ್ಷಿಕೆಗಳನ್ನು ಬದಲಿಸಿದೆ, ವಾಕ್ಯ ವಿಧಾನಗಳನ್ನು ಮೊಟಕುಗೊಳಿಸಿದೆ. ಒಮ್ಮೊಮ್ಮೆ ಒಂದು ಕವಿತೆಯ ಸಾಲುಗಳನ್ನು ಇನ್ನೊಂದು ಕವಿತೆಯಲ್ಲಿ ಬೆರೆಸುತ್ತಿದ್ದೆ. ಈ ಪ್ರಯೋಗದಿಂದ ಒಂದು ರೀತಿಯ ಹೊಸತನ ಕವಿತೆಗಳಲ್ಲಿ ತೋರಿಬಂತೆಂದು ತೋರುತ್ತದೆ. ಜನರು ಮೆಚ್ಚಿಕೊಂಡರು, ಪ್ರಶಸ್ತಿಗಳು ಬಂದುವು. ಹೆಸರು ಬಂತು. ನನ್ನನ್ನು ಪ್ರಶ್ನಿಸುವವರು ಇರಲಿಲ್ಲ….”

ಪಕ್ಕದಲ್ಲಿ ಕುಳಿತಿದ್ದ ವಿಮರ್ಶಕರು ನನ್ನ ಕಡೆ ನೋಡಿ ಟೇಪ್ ರೆಕಾರ್ಡರನ್ನು ತೋರಿಸಿ ಏನೇನೋ ಸನ್ನಗಳನ್ನು ಮಾಡುತ್ತಿದ್ದರು. ಮೊದಲು ನನಗದು ಏನೆಂದೇ ಅರ್ಥವಾಗಲಿಲ್ಲ. ಕೊನೆಗೆ ಗೊತ್ತಾಯಿತು, ರೆಕಾರ್ಡರನ್ನು ನಿಲ್ಲಿಸುವಂತೆ ಅವರು ನನಗೆ ಸೊಚನೆಕೊಡುತ್ತಿದ್ದರು. ಆದರೆ ನಾನು ರೆಕಾರ್ಡರನ್ನು ನಿಲ್ಲಿಸಲಿಲ್ಲ.

“ನಾನೇಕೆ ಹೀಗೆ ಮಾಡಿದೆನೆಂದು ನನಗೆ ನಾನೇ ಕೇಳಿ ಕೊಂಡಿದ್ದೇನೆ. ನನಗೆ ನಾನೇ ಉತ್ತರಿಸಿಯೂ ಇದ್ದೇನೆ. ಸದಾಶಿವ ನನಗೆ ಕವಿತೆಗಳನ್ನು ಓದಿ ಹೇಳುತ್ತಿದ್ದ. ನನ್ನ ಸಲಹೆ ಕೇಳುತ್ತಿದ್ದ. ಅಲ್ಲಲ್ಲಿ ಒಂದೆರಡು ಪದಗಳನ್ನು ಕೂಡ ನನ್ನ ಮಾತಿನಂತೆ ಬದಲಿಸುತ್ತಿದ್ದ. ಅವನ ಬರವಣಿಗೆಯ ಕ್ರಿಯೆಯಲ್ಲಿ ನಾನು ಭಾಗಿ ಯೆಂಬ ಭಾವನೆಯನ್ನು ನನ್ನ ಮನಸ್ಸಿನಲ್ಲಿ ಮೂಡಿಸುತ್ತಿದ್ದ. ಅದ್ದರಿಂದಲೇ ಅವನ ಕೃತಿಗಳು ನನ್ನವೇ ಎಂಬ ಯೋಚನೆ ನನ್ನ ಮನಸ್ಸಿಗೆ ಬಂತೆ? ಅಥವಾ ಸದಾಶಿವನಂತೆ ನಾನಾಗಬೇಕು ಎಂಬ ನನ್ನ ಆಂತರ್ಯದ ಬಯಕೆಯಿಂದ ನಾನೇ ಸದಾಶಿವ ಎಂದು ನನ್ನ ಮನಸ್ಸು ಹೇಳಿಕೊಂಡಿತೆ? ಹೇಗಿದ್ದರೂ ಈ ದಿಕ್ಕಿನಲ್ಲಿ ಒಮ್ಮೆ ಹೆಜ್ಜೆ ಯಿಟ್ಟ ನನ್ನನ್ನು ಹಿಡಿದು ನಿಲ್ಲಿಸುವವರು ಯಾರೂ ಇರಲಿಲ್ಲ. ಸದಾಶಿವನ ಕವಿತೆಗಳ ಬಂಡವಾಳ ಮುಗಿಯುವಷ್ಟರಲ್ಲಿ ನಾನು ಕನ್ನಡದ ಪ್ರಸಿದ್ಧ ಕವಿಯಾಗಿಬಿಟ್ಟಿದ್ದೆ. ಕನ್ನಡವಷ್ಟೇ ಏಕೆ, ತೆಲುಗು, ತಮಿಳುಭಾಷೆಗಳಿಗೂ ನನ್ನ ಕವಿತೆಗಳು ಭಾಷಾಂತರಗೊಳ್ಳತೊಡಗಿದ್ದುವು. ಇಷ್ಟರಲ್ಲಿ ನನಗೆ ಒಂದು ತಂತ್ರ ಕರಗತವಾಗಿತ್ತು. ಯಾವುದೇ ಒಂದು ರಚನೆಯನ್ನು ಓದಿ ತಕ್ಷಣ ಅದನ್ನು ಬದಲಾಯಿಸಿ ಇನ್ನೊಂದನ್ನಾಗಿ ಮಾಡುವ ತಂತ್ರ. ಇದೊಂದು ರೀತಿಯ ರೂಪಾಂತರ ಕ್ರಿಯೆ. ಇದರಲ್ಲಿ ನಾನೆಷ್ಟು ಪಳಗಿದ್ದೆನೆಂದರೆ ನನ್ನ ಮೂಲ ಪ್ರತಿಭೆಯಿರುವುದು ಇದರಲ್ಲೇ ಎಂಬುದು ನನಗೆ ಖಚಿತವಾಗಿ ಹೋಗಿತ್ತು. ಮುಂದೆ ನಾನು ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದತೊಡಗಿದೆ. ಸ್ಪಾನಿಶ್, ಪೋರ್ಚುಗೀಸ್, ಚೈನೀಸ್, ಜರ್ಮನ್, ಇಂಗ್ಲೀಷ್ ಕವಿಗಳ ಕವಿತೆಗಳು ನನ್ನ ಕೈಯಲ್ಲಿ ಕನ್ನಡದ ರೂಪ ಪಡೆದವು….”

“ಕನ್ನಡದ ನೆರೂದಾ ಅಂತ ನಿಮ್ಮನ್ನ ಒಬ್ಬ ವಿಮರ್ಶಕರು ಕರೆದಿದ್ದಾರೆ…..’

“ಕನ್ನಡದ ನೆರೂದಾ ಅಂತ ಕರೆದಿದ್ದಾರೆ. ವಿಚಿತ್ರವೆಂದರೆ ನೆರೂದಾನ್ನ ಮಾತ್ರ ನಾನು ಓದಿದ್ದು ಬಹಳ ನಂತರ. ಆಗ ನಾನು ಬರೆಯುವ ಪ್ರಮಾಣ ಕಡಿಮೆಯಾಗಿತ್ತು. ಇರಲಿ, ನನ್ನ ಇನ್ನೊಂದು ಕಾವ್ಯಸ್ಫೂರ್ತಿಯನ್ನು ಇಲ್ಲಿ ಹೇಳಬೇಕು. ಕಾಲೇಜು ಅಧ್ಯಾಪಕನಾದ ನಾನು ಆಗಾಗ್ಗೆ ನನ್ನ ವಿದ್ಯಾರ್ಥಿಗಳಿಂದ ಕವಿತೆಗಳನ್ನು ಬರೆಸತೊಡಗಿದೆ – ಏನಾದರೊಂದು ವಿಷಯ ಕೊಟ್ಟು. ಆ ಕವಿತೆಗಳನ್ನು ನಂತರ ಕೊಲಾಜ್ ಮಾಡುತ್ತಿದ್ದೆ. ಚಿತ್ರಕಲೆಯಲ್ಲಿ ಗೌರವಯುಕ್ತವಾದ ಈ ತಂತ್ರವನ್ನು ಕಾವ್ಯ ಪ್ರಪಂಚದಲ್ಲಿ ನಾನು ಬಳಕೆಗೆ ತಂದೆ; ಆದರೆ ಅದು ಮಾತ್ರ ಬಹಳ ಜನಕ್ಕೆ ಗೊತ್ತಿಲ್ಲ. ಇಲ್ಲಿಯೂ ನಾನು ಯಾಕೆ ಹೀಗೆ ಮಾಡಿದೆ ಎಂದು ನನಗೆ ನಾನೇ ಕೇಳಿಕೊಂಡಿದ್ದೇನೆ. ಇಡಿಯ ಸಾಹಿತ್ಯ ಕ್ರಿಯೆಯನ್ನೇ ನಾನು ಗೇಲಿ ಮಾಡುತ್ತಿರುವೆನೆ? ಹಾಗೆಂದು ಕೊಳ್ಳುವಂತೆ ಇರಲಿಲ್ಲ. ನನ್ನ ಸಾಹಿತ್ಯಾಸಕ್ತಿ ಅತ್ಯಂತ ಗಂಭೀರವಾದುದು. ನಾನು ಬರೆಯದೆ ಇರುತ್ತಿದ್ದರೆ ಬದುಕುವುದೇ ದುಸ್ಸಾಧ್ಯವಾಗುತ್ತಿತ್ತು. ನನಗನಿಸುವಂತೆ ನನಗೆ ಕಾವ್ಯ ಮುಖ್ಯವಾಗಿತ್ತೇ ಹೊರತು ನನ್ನ ಹೆಸರಲ್ಲ. ನಾನು ದೈವ ಭಕ್ತನಾಗಿರುತ್ತಿದ್ದರೆ ಗದುಗಿನ ನಾರಣಪ್ಪನಂತೆ, ದೇವರೇ! ನಾನು ಕೇವಲ ಲಿಪಿಕಾರ; ನಿಜವಾದ ಕವಿಯೆಂದರೆ ನೀನೇ ಎನ್ನುತ್ತಿದ್ದೆ. ಪ್ರಕಾಶಕರು ಒಪ್ಪುತ್ತಿದ್ದರೆ ನನ್ನ ಹೆಸರು ಹಾಕದೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೆ. ಈ ಸೃಷ್ಟಿಗಿಂತ ಮಿಗಿಲಾದ ಕಾವ್ಯ ಯಾವುದಿದೆ? ಇಂಥ ದೊಡ್ಡ ಕಾವ್ಯವನ್ನೇ ಅಲ್ಲಲ್ಲಿ ಹೆಕ್ಕಿ ಸೇರಿಸಿ ನಾವು ಕವಿತೆಯೆಂದು ಮಾಡುತ್ತೇವೆ. ಜಾನಪದ ಹಾಡುಗಳನ್ನು ನೋಡಿ, ಇವುಗಳನ್ನು ಒಬ್ಬೊಬ್ಬ ಕವಿಗಳು ನಿರ್ಮಿಸಿದರೆ? ಅಥವಾ ಜನರ ಬಾಯಿಯಲ್ಲಿ ನಿರ್ಮಾಣಗೊಂಡು ತಲೆ ಮಾರಿನಿಂದ ತಲೆಮಾರಿಗೆ ಹರಿದು ಬಂದಿರಬಹುದೆ? ಹೀಗೆ ಬರುತ್ತ ಈ ಹಾಡುಗಳು ಬದಲಾಗಿರಬೇಕಲ್ಲವೆ? ಇಲ್ಲಿ ಕವಿ ಅಪ್ರಧಾನವಾಗಿ ಕಾವ್ಯವೇ ಪ್ರಧಾನವಾಗುವ ಒಂದು ವಿದ್ಯಮಾನವಿದೆ. ನನ್ನ ಕಾವ್ಯವನ್ನು ಆ ದೃಷ್ಟಿ ಯಿಂದ ನೋಡಬೇಕಾಗುತ್ತದೆ-ಅದು ನನ್ನದೆನ್ನುವುದಕ್ಕಿಂತ ಈ ಲೋಕದ್ದು ಎಂದರೂ ಸರಿಯೆ. ಪಿಕಾಸೋವಿನ ರೆಡೀಮೇಡ್ ಗಳ ಬಗ್ಗೆ ನೀವು ಕೇಳಿರಬೇಕಲ್ಲವೆ? ಅದೇ ರೀತಿ ಮೈಖೆಲ್ ಶಾಂಪ್- ಆತ ಕಮೋಡ್ ಒಂದನ್ನು ಬುಡಮೇಲು ಮಾಡಿ ಅದಕ್ಕೆ ಕಾರಂಜಿ ಎಂಬ ಹೆಸರಿಟ್ಟುದ್ದರಿಂದ ಅದು ಅವನದಾಯಿತೆ? ಅವನದಲ್ಲದಿದ್ದರೆ ಅದು ಯಾರದ್ದು? ಹೆಸರಿಡುವ ಮೊದಲು ಅಲ್ಲಿ ಕಾರಂಜಿಯಿತ್ತೆ? ಕಲೆ ಹಾಗೂ ಸಾಹಿತ್ಯದಲ್ಲಿ ಇಂಥ ತಾತ್ವಿಗ ಪ್ರಶ್ನೆಗಳು ಹಾಸುಹೊಕ್ಕಾಗಿವೆ. ಒಂದರ್ಥದಲ್ಲಿ ಮನುಷ್ಯನ ಜೀವನದಷ್ಟೇ ಅವು ನಿಗೊಢವಾದುವು. ನಮ್ಮ ಸಾಹಿತ್ಯ ವಿಮರ್ಶೆ ಇಂಥ ಮೂಲಭೂತವಾದ ಪ್ರಶ್ನೆಗಳನ್ನು ಇದುವರೆಗೆ ಎತ್ತಿಲ್ಲ. ಕುವೆಂಪು ಮಾತ್ರವೇ ನಮ್ಮ ಲೇಖಕರನ್ನು ಸಲಾಗಿ ನಿಲ್ಲಿಸಿದರೆ ಒಬ್ಬನ ಕೈ ಇನ್ನೊಬ್ಬನ ಜೇಬಿನಲ್ಲಿರುತ್ತದೆ ಎಂದು ಹೇಳಿದರು…..”

ಅಷ್ಟರಲ್ಲಿ ಒಳಗಿನಿಂದ ಕಾಫ಼ಿ ತಿಂಡಿ ಬಂದುವು. “ತೆಗೆದುಕೊಳ್ಳಿ. ನಾನು ಮಾತ್ರ ಕಾಫ಼ಿ ಕುಡಿಯುವ ಹಾಗಿಲ್ಲ. ಡಾಕ್ಟರರು ಅದರ ಮೇಲೆ ನಿಷಿದ್ಧ ಹೇರಿದ್ದಾರೆ. ಅದೇ ರೀತಿ ಸಿಗರೇಟು ಕೂಡ ಸೇದುವಂತಿಲ್ಲ. ಅದರ ಬದಲಿಗೆ ಸದ್ಯ ಔಷಧಿ ಸೇವನೆ ನಡೆದಿದೆ, “ಎಂದು ರಾಯರು ಕೆಲವು ಮಾತ್ರೆಗಳನ್ನು ನುಂಗಿ ಒಂದು ಗ್ಲಾಸು ಕುದಿಸಿದ ನೀರನ್ನು ಕುಡಿದರು. ಕೆಲವು ದಿನಗಳಿಂದ ಅವರ ಆರೋಗ್ಯ ಸರಿಯಿಲ್ಲವೆಂದು ತಿಳಿಯಿತು. ಒಮ್ಮೆ ಮಾಳಿಗೆ ಮೆಟ್ಟಲಿನಿಂದ ಉರುಳಿಬಿದ್ದು ಸಾಕಷ್ಟು ದಿನ ಹಾಸಿಗೆ ಹಿಡಿದಿದ್ದರು. ಇವೆಲ್ಲ ವೃದ್ದಾಪ್ಯದ ಮಾಮೂಲಿ ಸಂಗತಿಗಳು. ಅವುಗಳ ಬಗ್ಗೆ ಅವರು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಆದರೂ ಅವರು ಚಟುವಟಿಕಗಳಿಗೆ ಕಡಿವಾಣ ಹಾಕಿದಂತಾಗಿತ್ತು. ಮೊದಲಿನಂತೆ ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು, ಸಾಹಿತ್ಯ ಕೃಷಿ ನಡೆಸುವುದು ಈಗ ಸಾಧ್ಯವಿರಲಿಲ್ಲ.

ಸಂದರ್ಶಕನಾಗಿ ನನ್ನ ಬಳಿ ಅನೇಕ ಮಾಮೂಲಿ ಪ್ರಶ್ನೆಗಳಿದ್ದವು. ಹೊಸ ಲೇಖಕರಿಗೆ ನಿಮ್ಮ ಸಂದೇಶವೇನು? ಸಾಹಿತ್ಯ ಚಳುವಳಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಕಾಡೆಮಿ ಪ್ರಶಸ್ತಿಗಳು ಅಗತ್ಯವೆ? ಸಾಹಿತ್ಯದ ರಾಜಕೀಯವನ್ನು ಎದುರಿಸುವುದು ಹೇಗೆ? ಸಾಹಿತ್ಯ ಕ್ಷೇತ್ರದಲ್ಲಿ ಆರೋಗ್ಯಕರ ವಾತಾವರಣವನ್ನು ಉಂಟು ಮಾಡುವುದು ಹೇಗೆ? ಸಾಹಿತಿ ಕಮಿಟೆಡ್ ಆಗಿರಬೇಕೆ ಬೇಡವೆ ಇತ್ಯಾದಿ ಇತ್ಯಾದಿ. ಆದರೆ ಈ ಪ್ರಶ್ನೆಗಳೆಲ್ಲವೂ ಒಮ್ಮೆಲೆ ಅರ್ಥಹೀನವಾದಂತೆ ನನಗೆ ತೋರಿದವು. ಯಾವ ಪ್ರಶ್ನೆಯೂ ಪ್ರವೇಶಿಸದಂಥ ಒಂದು ಗಹನವಾದ ಇರುವಿಕೆಯ ಮುಂದೆ ನಾನು ಕುಳಿತಂತೆ ಅನಿಸಿತು. ಅಥವಾ ನನ್ನ ಸಕಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದಂತೆ- ಈ ಪ್ರಶ್ನೆಗಳನ್ನು ರಾಯರೇ ಸ್ವತಃ ನನಗೆ ಕೇಳುತ್ತಿದ್ದಂತೆ. ಅವರೀಗ ಕಣ್ಣುಗಳನು ಮುಚ್ಚಿ ಕುಳಿತಿದ್ದರು. ಹೆರೆಯದ ಗಡ್ಡಾ, ನರೆತ ಕೂದಲು, ನಿರಿಗಂಟದ ಮುಖ. ಉತ್ತು ಹಾಗೆಯೇ ಬಿಟ್ಟ ಭೂಮಿಯಂತೆ, ಒಮ್ಮೆಲೆ ಹೆಪ್ಪುಗಟ್ಟಿದ ಸಮುದ್ರದಂತೆ. ಇಷ್ಟು ವರ್ಷಗಳೂ ಒಳಗೇ ಒಂದು ಅಗ್ನಿ ಪರ್ವತವನ್ನು ಈ ವ್ಯಕ್ತಿ ಇಟ್ಟುಕೊಂಡಿದ್ದರೆ? ಅಗ್ನಿ ವರ್ಷ ಮತ್ತು ಇತರ ಕವಿತೆಗಳು, ಈಗ ಅನೇಕ ಕಡೆ ಪಠ್ಯಪುಸ್ತಕವಾಗಿತ್ತು. ಕನ್ನಡದ ವಿದ್ಯಾರ್ಥಿಗಳು ಈ ಕವಿತೆಗಳನ್ನು ಓದುತ್ತಿದ್ದಾರೆ.

“ಇಷ್ಟು ವರ್ಷಗಳನಂತರ ಈಗ ಯಾಕೆ ಇದೆಲ್ಲ ಹೇಳಬೇಕೆಂದು ನಿಮಗೆ ಅನಿಸಿದೆ? ಅದೂ ನನ್ನಂಥ ಒಬ್ಬ ಸಾಮಾನ್ಯ ವ್ಯಕ್ತಿಯ ಮುಂದೆ?” ಎಂದು ನಾನು ಕೇಳಿದೆ. ಆ ಮಾತಿಗೆ ರಾಯರು ಉತ್ತರಿಸಲಿಲ್ಲ. ನನ್ನ ಪ್ರಶ್ನೆ ನಿಜಕ್ಕೂ ಪೆದ್ದಾಗಿತ್ತೆಂದು ನನಗೇ ಅನಿಸಿತು. ಇನ್ನೇನೂ ಕೇಳುವುದಕ್ಕಿಲ್ಲದೆ ನಾನು ಈ ಪ್ರಶ್ನೆಯನ್ನು ಕೇಳಿದಂತಿತ್ತು. ಆದರೆ ರಾಯರು ಉತ್ತರಿಸದಿದ್ದುದು ಆ ಕಾರಣಕ್ಕಾಗಿ ಅಲ್ಲ; ಅವರೀಗ ಸಣ್ಣಕೆ ನಿದ್ದೆ ಮಾಡುತ್ತಿದ್ದರು. ಅವರು ತಿಂದ ಮಾತ್ರೆಗಳ ಪ್ರಭಾವವೋ ಏನೋ. ಅವರ ಉಸಿರು ಒಂದು ಲಯದಲ್ಲಿ ಮೇಲೆ ಕೆಳಗೆ ಇಳಿಯುತ್ತಿತ್ತು. ಅರೆತೆರೆದ ಕಣ್ಣುಗಳು; ಅರೆತೆರೆದ ತುಟಿಗಳು. ನಿದ್ದೆಯ ಆ ಇನ್ನೊಂದು ಲೋಕದಿಂದ ಅವರು ನಮ್ಮನ್ನೆಲ್ಲ ನೋಡುತ್ತಿದ್ದ ಹಾಗೆ ಕಂಡಿತು. ಸಾಹಿತ್ಯ ಲೋಕದ ಎಷ್ಟೋ ಅಲ್ಲೋಲ ಕಲ್ಲೋಲಗಳನ್ನು ಹಾದು- ಪತ್ರಿಕೆಗಳನ್ನು ನಡೆಸಿ, ಪುಸ್ತಕಗಳನ್ನು ಪ್ರಕಟಿಸಿ, ಪ್ರಶಸ್ತಿಗಳನ್ನು ಗೆದ್ದು, ವಿವಾದಗಳಿಗೆ ಕಾರಣರಾಗಿ, ಹೊಸ ತಲೆ ಮಾರೊಂದನ್ನು ಸೃಷ್ಟಿಸಿ, ದೇಶ ವಿದೇಶಗಳನ್ನು ಸುತ್ತಿ (ಅವರ ಒಂದು ಪುಸ್ತಕದ ಹೆಸರೇ ’ದೇಶ ವಿದೇಶ’ ಎಂಬುದಾಗಿತ್ತು,) ಕಳೆದ ಹಲವು ವರ್ಷಗಳಿಂದ ಊರಿಗೆ ಮರಳಿ, ಕರೆಯಣೆದ ಹಡಗಿನಂತೆ ಅವರು ಸುಮ್ಮನಾಗಿದ್ದರು. (’ಕರೆಯಣೆದ ಹಡಗಿನಂತೆ’ ಎಂಬ ಮಾತು ಯೇಟ್ಸ್ ಕುರಿತು ಆಡೆನ್ ಹೇಳುವುದು- ಯೇಟ್ಸ್ ಮೇಲೆ ಅವನು ಬರೆದ ಪದ್ಯದಲ್ಲಿ – ಯೇಟ್ಸ್ ಮರಣಾನಂತರ. ಇದೇಕೋ ನನಗೆ ರಾಯರ ಮುಖವನ್ನು ನೋಡುವಾಗ ನೆನಪಿಗೆ ಬಂದಿತ್ತು.)

ಸಂದರ್ಶನ ಹೀಗೆ ಅನಿರೀಕ್ಷಿತವಾಗಿ ಮುಕ್ತಾಯಕ್ಕೆ ಬಂದುದರಿಂದ ನಾವು ಎದ್ದೆವು. ಆನಂದ ಒಂದು ರೀಲು ಫೋಟೋ ತೆಗೆದು ತನ್ನ ಕೆಲಸ ನೆರವೇರಿಸಿದ್ದ. ನನ್ನ ಕೆಸೆಟ್ಟು ಭರ್ತಿಯಾಗಿತ್ತು-ಆದರೆ? ಅಲ್ಲಿದ್ದವರಿಗೆ ವಂದಿಸಿ ನಾವು ಬಸ್ಸು ಹಿಡಿಯಲು ಹೊರಬಿದ್ದೆವು. ನಾನೆಂದೂ ಇಂಥ ಗೊಂದಲದಲ್ಲಿ ಬಿದ್ದಿರಲಿಲ್ಲ. ಈ ಸಂದರ್ಶನವನ್ನು ಪ್ರಕಟಿಸಬೇಕೆ ಬೇಡವೆ? ಪತ್ರಿಕೆಯವರಾದರೂ ಇದನ್ನು ಸ್ವೀಕರಿಸಲು ಒಪ್ಪುತ್ತಾರೆಯೆ ಇಲ್ಲವೆ? ಓದುಗರ, ವಿಮರ್ಶಕರ ಪ್ರತಿಕ್ರಿಯೆ ಹೇಗಿರುತ್ತದೆ? ಈ ಚಿಂತೆಯಲ್ಲಿ ನಾನು ಮುಳುಗಿರುತ್ತ ಹಿಂದಿನಿಂದ ಯಾರೋ ಓಡಿ ಬರುತ್ತಿರುವುದು ಗೊತ್ತಾಯಿತು. ತಿರುಗಿ ನೋಡಿದಾಗ, ವಿಮರ್ಶಕರೇಣ್ಯರು. ಅವರು ನನ್ನನ್ನು ತಡೆದು ಹೇಳಿದರು. “ನೋಡಿ, ಈ ಸಂದರ್ಶನವನ್ನು ಪ್ರಕಟಿಸಬೇಡಿ. ರಾಯರಿಗೆ ಮೈ ಸರಿಯಿಲ್ಲ. ಮಾಳಿಗೆ ಮೆಟ್ಟಲಿಂದ ಕೆಳಗೆ ಬಿದ್ದ ಮೇಲೆ ಅವರು ವಿಚಿತ್ರವಾಗಿ ಮಾತಾಡಲು ಸುರು ಮಾಡಿದ್ದಾರೆ. ಅವರು ಕಾಲೇಜು ಓದುತ್ತಿರುವಾಗ ಸದಾಶಿವನೆಂಬುವನ ಜತೆ ವಾಸ ಮಾಡಿದ್ದುದು, ಆ ಕತೆಯೆಲ್ಲ ಕೇವಲ ಅವರ ಕಲ್ಪನೆ. ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ಕಾಲೇಜಿಗೆ ಹೋದವರು ಅವರು. ಈ ಕೆಸೆಟ್ಟನ್ನು ಇಲ್ಲಿ ಕೊಡಿ. ನಂತರ ಹಿಂತಿರುಗಿಸುತ್ತೇನೆ.”

ಆ ಕೆಸೆಟ್ಟು ನನಗೆ ಅತ್ಯಂತ ಬೆಲೆಬಾಳುವ ವಸ್ತುವಾಗಿತ್ತು, ಅದನ್ನು ಪ್ರಕಟಿಸಬೇಕೆಂಬ ಆಸೆಯೇನೂ ನನಗಿಲ್ಲ, ಆದರೆ ಅದು ನನ್ನ ಬಳಿ ಇರಲಿ- ಎಂಬ ನನ್ನ ವಿಚಾರಗಳನ್ನು ಅವರಿಗೆ ಹೇಗೆ ತಿಳಿಯಹೇಳಲಿ? ರೆಕಾರ್ಡರಿನಿಂದ ಕೆಸೆಟ್ಟನ್ನು ತೆಗೆದುಕೊಟ್ಟೆ. ಅದನ್ನವರು ಜೇಬಿನಲ್ಲಿ ಹಾಕಿಕೊಂಡರು.”ರಾಯರ ಈ ಮಜಲಿನ ಬಗ್ಗೆ ನಾನೇ ಒಂದು ಲೇಖನ ಬರೆಯಬೇಕೆಂದಿದ್ದೇನೆ. ಅದರಲ್ಲಿ ಈ ಎಲ್ಲ ಸಂಗತಿಗಳನ್ನು ವಿವರಿಸಲಿದ್ದೇನೆ. ನೀವು ಪಾಪ ವೃಥಾ ಶ್ರಮ ತೆಗೆದುಕೊಳ್ಳಬೇಕಾಗಿ ಬಂತು” ಎಂದು ನನಗೆ ಸಹಾನುಭೂತಿ ತೋರಿಸಿ ಅವರು ಹಿಂತೆರೆಳಿದರು. “ಏನು ಮಾಡಿಬಿಟ್ಟಿಯೋ!” ಎಂದು ಆನಂದ ರೇಗಿದ. “ಸದ್ಯ ನೀನು ತೆಗೆದ ರೀಲನ್ನು ಅವರು ಬೇಕೆಂದು ಒತ್ತಾಯಿಸಲಿಲ್ಲವಲ್ಲ” ಎಂದು ಅವನನ್ನು ಸಮಾಧಾನಪಡಿಸಿದೆ . ನಂತರ ಫೋಟೋಗಳನ್ನು ಪರಿಷ್ಕರಿಸಿ ಅವನ್ನು ನನ್ನ ಖಾಸಗಿ ಸಂಗ್ರಹಕ್ಕೆ ಸೇರಿಸಿದೆ- ರಾಯರ ಅನೇಕ ಭಂಗಿಗಳನ್ನು ಆನಂದ ಅವುಗಳಲ್ಲಿ ಸೆರೆಹಿಡಿದಿದ್ದ. ಈ ಭಂಗಿಗಳನ್ನು ನೋಡುತ್ತ ಈತ ಒಬ್ಬ ಋಷಿಯಂತೆ, ಅವಧೂತನಂತೆ, ಸಾಧಕನಂತೆ, ಬಹಳ ದೂರ ಪ್ರಯಾಣ ಹೋದ ಯಾತ್ರಿಕನಂತೆ ನನಗೆ ಕಂಡರು. ಹೆಸ್ ನ ಕಾದಂಬರಿ “ಸಿದ್ದಾರ್ಥ”ದ ಕೊನೆಯಲ್ಲಿ ಸಿದ್ದಾರ್ಧನ ಮುಖದ ಮೇಲೆ ಗೋವಿಂದನು ಕಾಣುವ ಜಗತ್ತಿನ ದಿವ್ಯದರ್ಶನದಂತೆ-ಅಂಥ ಅದೇ ರೀತಿಯ ಒಂದು ಅನುಭವ ನನ್ನ ಪಾಲಿಗೆ ಒದಗಿತು.

ಇಲ್ಲ; ನಾನು ಆ ಸಂದರ್ಶನವನ್ನು ನನ್ನ ನೆನಪಿನ ಆಧಾರದಿಂದ ಕೂಡ ಎಲ್ಲೂ ಪ್ರಕಟಿಸಲಿಲ್ಲ. ಈಗ ಬರೆಯುತ್ತಿರುವಾಗ ಕೂಡ ಹೆಸರುಗಳನ್ನು ಮರೆಮಾಚಿದ್ದೇನೆ. ಇಲ್ಲಿ ಬರೆದ ಕವಿತೆಗಳ ಹೆಸರು ಕೂಡ ಕೇವಲ ಕಲ್ಪನೆಯವು. “ಅಗ್ನಿ ವರ್ಷ ಮತ್ತು ಇತರ ಕವಿತೆಗಳು” ಎಂಬಂಥ ಒಂದು ಸಂಕಲನವೇ ಇಲ್ಲ. ಮನುಷ್ಯನ ಕಣ್ಣುಗಳು ಹೆಚ್ಚು ಬೆಳಕನ್ನು ತಾಳಲಾರವು ಎಂದು ಯಾವನೋ ಕವಿ ಹೇಳಿಲ್ಲವೆ? ಅದು ನಿಜ. ಈ ಸಂದರ್ಶನ ವಾದ ಒಂದೆರಡು ವರ್ಷಗಳಲ್ಲಿ ರಾಯರು ತೀರಿಹೋದರು. ಅವರೀಗ ಕನ್ನಡ ಸಾಹಿತ್ಯದ-ಅಷ್ಟೇ ಏಕೆ, ಜಗತ್ತಿನ ಒಟ್ಟಾರೆ ಸಾಹಿತ್ಯದ-ಒಂದು ಭಾಗವಾಗಿದ್ದಾರೆ. ಅವರ ಕುರಿತು ಎಷ್ಟೋ ಲೇಖನಗಳು ಬಂದಿವೆ. ಪುಸ್ತಕಗಳು ಬಂದಿವೆ ಆದರೆ ಅವರು ಸಂದರ್ಶನದಲ್ಲಿ ನನಗೆ ಹೇಳಿದ ವಿಚಾರಗಳು ಮಾತ್ರ ಎಲ್ಲಿಯೂ ಬಂದಿಲ್ಲ. ಅಂದು ಉಪಸ್ಥಿತರಿದ್ದ ವಿಮರ್ಶಕರೂ ಕೂಡ ತಾವು ಬರೆಯುತ್ತೇವೆ ಎಂದಿದ್ದ ಪುಸ್ತಕವನ್ನು ಬರೆದ ಹಾಗೆ ಅನಿಸುವುದಿಲ್ಲ. ರಾಯರು ಹೇಳಿದ ಮಾತುಗಳು ಬುದ್ಧಿ ಭ್ರಮಣೆಯ ಮಾತುಗಳೇ, ನಿಜವಾದ ನೆನಪುಗಳೇ ಎಂದು ನಿರ್ಧರಿಸುವುದಕ್ಕೆ ಯಾವ ಪ್ರಮಾಣಗಳೂ ಇಲ್ಲ. ಒಂದು ವೇಳೆ ನಿಜವಾದ ಮಾತುಗಳೇ ಎಂದಾದರೆ, ಅವನ್ನು ಹೇಳುವ ಅಗತ್ಯವಾದರೂ ಏನಿತ್ತು ಎಂಬುದು ನನಗಿನ್ನೂ ನಿಗೂಢವಾದ ಸಂಗತಿಯೇ ಆಗಿದೆ. ಅವರ ಮಾತಿನಿಂದ ಅಪ್ರತಿಭರಾದ ಆ ವಿಮರ್ಶಕವರೇಣ್ಯರ ಮನಸ್ಥಿತಿ ಯನ್ನು ನಾನು ಅರ್ಥಮಾಡಬಲ್ಲೆ. ನಾವು ನಿರ್ಮಿಸಿಕೊಂಡ ಜಗತ್ತನ್ನು ಮುರಿದು ಕಟ್ಟುವುದಕ್ಕೆ ಯಾರಿಗೂ ಮನಸ್ಸಿರುವುದಿಲ್ಲ. ಅಷ್ಟಕ್ಕೂ ನಿಜ ಯಾವುದು ಸುಳ್ಳು ಯಾವುದೂ ಎಂಬುದನ್ನು ನಿರ್ಣಯಿಸುವುದೇನೂ ಸುಲಭವಲ್ಲ. ಒಂದು ವೇಳೆ ರಾಯರಿಗೆ ನಿಜಕ್ಕೂ ಬುದ್ಧಿ ಭ್ರಮಣೆಯೇ ಆಗಿದ್ದರೆ? ಮಾಳಿಗೆಯ ಮೆಟ್ಟಲಿನಿಂದ ಕೆಳಕ್ಕೆ ಬಿದ್ದಾಗ ಅವರ ತಲೆಗೆ ಪೆಟ್ಟಾಗಿ ನೆನಪಿನ ಕೊಂಡಿಗಳು ಕಳಚಿರಬಹುದಲ್ಲವೆ? ಕಲ್ಪನೆಯ ಯಾವುದೋ ಕೇಂದ್ರ ಉದ್ರೇಕಗೊಂಡಿರಬಹುದಲ್ಲವೆ? ಅವರ ಫೋಟೋಗಳನ್ನು ನೋಡುತ್ತ ನಾನು ನನ್ನ ಮುಖಗಳನ್ನೇ ಅಲ್ಲಿ ಕಾಣುತ್ತಿದ್ದೆನೆಂದು ತೋರುತ್ತದೆ.
*****
ಕೀಲಿಕರಣ ಮಾಡಿದವರು: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಹ
Next post ಶ್ರೀ’ಯವರನ್ನು ನೆನೆದು

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…