ನಂಟಿನ ಕೊನೆಯ ಬಲ್ಲವರಾರು?

ನಂಟಿನ ಕೊನೆಯ ಬಲ್ಲವರಾರು?

ಚಿತ್ರ: ಸೋಮವರದ

ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ ಬಂದೆ. ಸೂರ್ಯ ಮರೆಯಾಗುತ್ತಿದ್ದ. ಕ್ಷಣಕ್ಷಣವೂ ಮುಗಿಲು ಅದ್ಭುತ ಬಣ್ಣಗಳನ್ನು ಪಡೆದುಕೊಳ್ಳುತ್ತಿತ್ತು. ಮೋಹಕ ಸಂಜೆ ಅದಾಗಿತ್ತು. ಹಕ್ಕಿಗಳು ಮುಗಿಲಕಡೆಯಿಂದ ಗೂಡಿಗೆ ಮರಳುತ್ತಿದ್ದವು. ಬಂಗಾರದ ಕೊಡದ ಆಕಾರ ತಾಳಿದ ಸೂರ್ಯ ನೀಲ ಸಮುದ್ರ ಸಮೀಪಿಸ್ತುತ್ತಿದ್ದಂತೆ ನಾನಾ ರೂಪ ತಳೆದು ಮರೆಯಾದ. ಪ್ರಭಾಕರ ನನ್ನತ್ತ ತಿರುಗಿ ಹೇಳಿದ ’ನೀನು ತುಂಬಾ ಅದೃಷ್ಟವಂತ, ಕಡಲ ಬಳಿಯ ಸ್ನೇಹ ನಮ್ಮನ್ನೆಲ್ಲಾ ಮರೆಸಿಬಿಟ್ಟಿದೆ. ನೀನು ಊರಿಗೆ ಬರದೆ ಎಷ್ಟು ವರ್ಷಗಳಾದವು.’

ಕೊನೆಗೂ ಬಾಯ್ಬಿಟ್ಟನಲ್ಲಾ ಎಂಬ ಖುಷಿಯಿಂದ ನಾನು ಮಾತಿಗಿಳಿದೆ. ’ಏನಿಲ್ಲ, ನಾನೊಬ್ಬನಿದ್ದರೆ ಕಡಲ ಬಳಿ ಬರುವುದು ಅಪರೂಪ. ಹೀಗೆ ಊರಿಂದ ನಿನ್ನಂಥ ಸ್ನೇಹಿತರು ಬಂದ್ರೆ ಕಡಲಕಿನಾರೆಗೆ ಕರೆತರುವುದು. ಆದ್ರೆ ಈ ಕಡಲು ಹೆಣ್ಣಿ ದ್ದಂಗೆ, ವ್ಯಾಮೋಹ ಮಾತ್ರ ಎಂದಿಗೂ ಮುಗಿಯದ್ದು.’ ಎಂದೆ.

ಹಾಗೆ ಊರಿನ ವಿಷಯಗಳನ್ನು ಕೆದಕುವುದು, ನೆನಪುಗಳತ್ತ ಪಯಣ ಹೊರಡುವುದು ನನ್ನ ಉದ್ದೇಶವಾಗಿತ್ತು. ವರ್ತಮಾನದಲ್ಲಿ ಭೂತ ತಾನೆ ಬೆಂಬಿಡದ ಪ್ರಯಾಣಿಕ. ಒಳಮನಸ್ಸಿನ ನಿಜ ಯಾತ್ರಿಕನನ್ನು ಕಡಲ ಕಿನಾರೆಯಲ್ಲಿ ಕುಣಿಸುವುದು, ಹದಿನಾರರ ಹರಯದಲ್ಲಿ ಕಾಡಿದ ಜವ್ವನೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲದಿಂದಲೇ ’ಕಡಲೆಂದ್ರೆ ಹೆಣ್ಣಿದ್ದಂಗೆ’ ಎಂಬ ಪೀಠಿಕೆ ಹಾಕಿದ್ದೆ. ಆದ್ರೆ ಪ್ರಭಾಕರ ಊರಿನ ನೆನಪುಗಳಿಂದ ತಪ್ಪಿಸಿಕೊಂಡು ಬಂದು ಸರ್ವಸಂಗ ಪರಿತ್ಯಾಗಿಯಂತೆ ಕುಳಿತಿದ್ದ. ಬದುಕಿನ ಜಂಜಾಟದಲ್ಲಿ ಸೋತವನಂತೆ ಕಂಡ ಆತ ಬಯಸಿದವಳನ್ನೆ ಮದ್ವೆ ಆಗಿದ್ದರೂ, ಹಣ ಮಾಡಲಾಗದ, ಸರ್ಕಾರಿ ನೌಕರಿ ಹಿಡಿಯಲಾಗದ ಸೋಲು ಆತನ ಮುಖದಲ್ಲಿ ಕಾಣುತ್ತಿತ್ತು. ಮುಖದಲ್ಲಿ ಬೆಳೆದಿದ್ದ ಕುರುಚಲು ಗಡ್ಡ, ಜೋತು ಬಿಳುಲು ಪ್ರಾರಂಭಿಸಿದ್ದ ಕೆನ್ನೆ, ನಾಲ್ವತ್ತರ ಗಡಿಯಲ್ಲಿದ್ದರೂ ೬೦ ವರ್ಷದವನಂತೆ ಕಾಣುತ್ತಿದ್ದ.

‘ನೀನು ಬದಲಾಗಿಲ್ಲ. ಕಾಂತ್ರಿಯ ಹುಚ್ಚು ಬಿಟ್ಟಿಲ್ಲ. ನಿನ್ಗೆ ನೆನಪುಗಳು ಕಾಡುವುದಿಲ್ಲ. ಉಪಕಾರವನ್ನು ಸ್ಮರಿಸದವ ನೀನು’ ಎಂದು ಹುಸಿ ಮುನಿಸಿನೊಂದಿಗೆ ಟೀಕಿಸುತ್ತಿದ್ದ. ’ಇರ್ಲಿ ಬಿಡು ಅದೆಲ್ಲಾ ಯಾಕೆ’ ಎಂಬ ಹಾರಿಕೆಗೆ ಕೊನೆಗೂ ಹಠ ಸಾಧಿಸ್ದೆ. ಜಾತಿಗಿಂತ ಪ್ರೀತಿ ದೊಡ್ಡದು ಎಂದು ತೋರಿಸ್ದೆ. ಕರುಣೆಯನ್ನು ಹೊದ್ದ ನೀನು, ಊರ್ಗೆ ಬರದಷ್ಟು ಕಠಿಣ ಮನಸ್ಸೇಕೆ’ ಎಂದು ಕೆದಕಲು ಹವಣಿಸಿದ. ವಿವರಿಸುವ ಗೋಜಿಗೆ ಹೋಗದೆ, ’ಅದೆಲ್ಲಾ ನಿನ್ಗೆ ಅರ್ಥವಾಗಲ್ಲ’ ಎಂದು ಮೌನವಾದೆ.

‘ಶೇಷಪ್ಪ ಹೋಗಿ ಬಿಟ್ಟಾ’ ಎನ್ನುತ್ತಾ ಊರಿನ ವಿಷಯ ತೆಗೆದ ಪ್ರಭಾಕರ. ನನ್ಗೆ ಕಥೆ ಆರಂಭವಾಯ್ತು ಎಂಬ ಸಂತಸ ಒಳಗೊಳಗೆ ಮೂಡಿತು. ಶೇಷಪ್ಪ ಎಂಥ ಕಾಯಕ ಜೀವಿ. ಮೊನ್ನೆ ಮೊನ್ನೆ ಎರಡು ಕೌದಿ ಹೊಲ್ದ ಕೊಟ್ಟಿದ್ದ. ಅದರ ಮ್ಯಾಲೆ ಮಲ್ಗಿದಾಗಲೆಲ್ಲಾ ಶೇಷಪ್ಪ ನೆಪ್ಗ ಬರ್ತಾನೆ. ನಿನ್ಗೂ ನೆಪ್ಪ ಇರ್ಬೋದು. ಯಾರ ಮನ್ಯಾಗೂ ಹಂಗಾ ಉಣ್ಣಾವಲ್ಲ ಆತ. ಕೌದಿ ಹೊಲ್ಯಾಕ ಶುರು ಮಾಡಿದ್ರ ಸಂಜೀಕ ಏಳ್ತಿದ್ದ. ಸತ್ತಾಗ ಆತ ಬಿಟ್ಟು ಹೋಗಿದ್ದು ಮೈಲಾರ ಲಿಂಗಪ್ಪನ ಗುಡ್ಯಾಗ ಒಂದ್ ಚೆಂಬು. ಸಿಲ್ವರ ತಾಟು, ಕೋಲು, ಒಂದ್ ಜೊತಿ ಕೌದಿ. ಹಾಸಕವೊಂದು….ಹೊತ್ಕಾಳಕವೊಂದು…..ಎನ್ನುತ್ತಾ ಮಾತು ಮುಂದುವರಿಸಿದ.

ಮುಂದೆ ಏನೇನು ಕತೆಯೊಳಗೆ ಟರ್ನಿಂಗ್ ಅಕೈತಿ. ಕಡಲ ಕಿನಾರೆಯೊಳಗೆ ಯಾರ್ಯಾರ ಬಂದು ಹೋಗ್ತಾರಾ ಎಂದು ಕೇಳುತ್ತಾ ಕುಳಿತೆ. ಪ್ರಭಾಕರ ಊರನ್ನ ಬಿಟ್ಟು ಬಂದಿದ್ದರೂ ಆತನನ್ನ ಊರು ಸುತ್ತಿಕೊಂಡಿತ್ತು. ಇಡೀ ಊರನ್ನು ಕಿನಾರಿ ಬಳಿ ಬಿಚ್ಚಿಟ್ಟ….

ಶೇಷಪ್ಪ ಸತ್ತ ದಿನ ಪದ್ಮಕ್ಕ ಅತ್ತಿದ್ದು, ಅದೂ ಅಷ್ಟೊಂದು ಗೋಳೋ ಅಂತ ಅತ್ತಿದ್ದು ಯಾಕ ಅಂತ ಇವತ್ತಿಗೂ ಹೊಳಿವಲ್ದು ನೋಡ್ ನನ್ಗೆ ಅಂದವ್ನೆ ’ಪದ್ಮಕ್ಕನ್ದು ಎಂಥಾ ಗುಣ ನಮ್ಮವ್ವಂದು, ದೇವರಂಥಾಕಿ. ಆಕಳಂಥಾ ಗಂಡ, ಮಿಟಕಲಾಡಿ ಹೆಣ್ಮಕ್ಕಳು, ಹರಾಮಿ ಮಗ, ಆಕೀಗ ಹೊರಿಯಾಗಿದ್ದು ಹೆಣ್ಮಕ್ಕಳಲ್ಲ. ದಿನಕ್ಕೊಬ್ಬರೊಡನೆ ಜಗಳವಾಡಿಕೊಂಡು ಬರುತ್ತಿದ್ದ ಮಗ ದ್ಯಾವ. ಕ್ಯಾತೆ ಮಾಡಿಕೊಳ್ಳುತ್ತಿದ್ದ ಮಗನ್ದು ಒಂಥರಾ ಚಿಂತಿ. ಕದ್ದು ಮುಚ್ಚಿ ವಾರಿಗೆಯ ಗಂಡುಗಳ ನಿದ್ದೆ ಕೆಡಿಸುತ್ತಿದ್ದ ಹಿರಿಯ ಮಗ್ಳು ಗಂಗೀ, ಬಡಕಲು ದೇಹದಿಂದ ಕಾಯಿಲೆ ಬಂದವಳಂತಿದ್ದ ಎರಡನೇ ಮಗ್ಳು ನಿಂಗಿದ್ದು ಮತ್ತೊಂಥರ ಚಿಂತಿ. ಹಿರಿಯ ಮಗ್ಳು . ಎದಿಮಟ್ಟ ಬೆಳ್ದು ನಿಂತಿದ್ಲು. ಪದ್ಮಕ್ಕ ಮಗಳ ಮದ್ವಿ ಮಾಡುವ ಲೆಕ್ಕಾಚಾರದಲ್ಲಿದ್ಲು. ಆದರೆ ಗಂಗೀ ಹೈಸ್ಕೂಲು ಮೇಟ್ ಚಂದ್ರಕಾಂತನೊಡನ ಅಪೇರ್ ಸುರು ಹಚ್ಚಿಕೊಂಡಳಾ. ಕಳ್ಳತನ ಮೂರ್ದಿನಾ. ಹಾದ್ರ ಆರ್ದಿನಾ ಅನ್ನಂಗ್ಹ ಮುಚ್ಚಿಡಕಾ ಆಗೋದಿಲ್ಲ. ಅವ್ವಾ ಹಾದ್ರ ಮಾಡ್ತಾಳಂತಾ, ಮಕ್ಕಳೂ ಮಾಡಿದ್ರಾ? ಪದ್ಮಕ್ಕ ನಡೆವ ಹಾದಿಗೆ ಸಾವಿರ ಕಾರಣ ಅದವು. ಮಕ್ಳಿಗೇನ್ ಕಡಿಮ್ಯಾಗಿತ್ತಂತ. ಪದ್ಮಕ್ಕನ್ನಾ ಜನ ಸೂಳಿ ಅಂತಾರ. ಮ್ಯಾಗಲ ಮನಿ ಕರೀಗೌಡ್ರ ಹೆಂಡ್ತಿ ದ್ಯಾಮಕ್ಕಂತೂ ’ನನ್ನ ಸವ್ತಿ ಸಾವ್ನ ಎಂದು ಕಂಡೆನೂ. ಮುನಿಮುರ್ಕಿಗೆ ಊರಿನ ಹರ್ಯಾದ್ ಹುಡುಗ್ರು ಸಾಲಾಂಗಿಲ್ಲ. ಪ್ಯಾಟಿ ಬಸ್ವಿ ಆಗ್ಯಾಳ, ಮಿಂಡ್ರಗಾಳಿ ’ಅಂತಾ ಶಾಪ ಹಾಕ್ತಿರ್ತಾಳೇ. ಆದ್ರ ನನ್ಗೆ ಪದ್ಮಕ್ಕ ಅಂತಾಕಿ ಅಂತ ನನ್ಗ ಅನಸ್ವಲ್ದು. ಆಕ್ಯಾರ ಏನ್ ಮಾಡ್ಯಳು. ಎಂಥ ಚಂದುಳ್ಳ ಚಲ್ವಿ ಆಕಿ. ರಥಿ ಇದ್ದಾಂಗ್ಹ ಅದಾಳ. ’ನೋಡಿದವ್ರ ಎದಿ ಇರಿವಾಂಗ್ಹ’ ಆಕಿ ಎದ್ರಿಗೆ ಬಂದ್ರ ನೋಡ್ದೆ ಇರೋ ಗಂಡಸ್ರೇ ಇಲ್ಲ. ಪ್ರೀತಿ, ಆರೈಕಿ, ವಾತ್ಸಲ್ಯ, ಮಾತಿನ ಕುಡಿನೋಟದ್ಹಾಗ ಪದ್ಮಕ್ಕನ ಮೀರ್ಸಿದವ್ರ ಇಲ್ಲ. ಅದ್ಕ ಊರಾಗ ಯಾರೆ ದೊಡ್ದವ್ರ ಬಂದ್ರು ಅಲ್ಲಿ ಪದ್ಮಕ್ಕ ಸೇವಾ ಇರೋದಾ. ಒಮ್ಮೆ ಆಕಿ ಮಾತು, ಆರೈಕೆ, ಕೈ ರುಚಿ ಕಂಡೋರು ಆಕಿಗೆ ಹೊಳ್ಳಿ ಮಾತಾಡಂಗಿಲ್ಲ.’ ಎಂದು ಪದ್ಮಕ್ಕನ ಪಾತ್ರ ಪರಿಚಯ ಮಾಡ್ದ ಪ್ರಭಾಕರ.

ಆದ್ರ ಪದ್ಮಕ್ಕನ ಗಂಡ, ರುದ್ರಪ್ಪ ಹೆಸರಿಗಷ್ಟ ರುದ್ರಪ್ಪ, ಸಾಧು ಎತ್ತಿನಂಥವ, ಚಪಾತಿ ಹಿಟ್ಟಿದ್ದಂಗ್ಹ. ಹೆಂಗ ಬೇಕಾದಾಂಗ್ಹ ಹಿಗ್ಗಿಸಬೋದು. ಹೊಲಕ್ಕ ಹೋಗಿ ರಂಟಿ ಹೋಡಿತಾನ. ಮನೀಗ ನೀರ ತರ್ತಾನಾ. ದನಕರ ಆರೈಕಿ ಮಾಡ್ತಾನ ಅನ್ನೊದು ಬಿಟ್ರ, ಪದ್ಮಕ್ಕನ ಸಮನಾಗಿ ಆಕಿಗ ಹೊಂದುವಾಂಗ್ಹ ಸಮನಾದ ಜೋಡಿ ಅಲ್ಲ ಆತ. ಪೆದ್ದು ಪೆದ್ದಣ್ಣನಂತ ಮನುಷ್ಯ. ಮಾತು ಕಮ್ಮಿ. ಹೊಲಕ್ಕ ಹೋಗಿ ಬಂದ, ಉಂಡ ಮಲ್ಗಿದಾ ಅಂದ್ರ ಮತ್ತ ಮುಂಜಾನಿ ದನದ ಕೊಟ್ಗಿ ಸಗ್ಣಿ ಬಳದ, ರೊಟ್ಟಿ ಉಂಡ ಹೊಲಕ್ಕ ಹೊಂಟ್ನಾ……ಇಷ್ಟು ಆತನ ದಿನಚರಿ. ಪದ್ಮಕ್ಕನಂಥ ಚಲ್ವಿನ ಪೆದ್ದು ಸ್ವಾಭಾವ್ದ ರುದ್ರಪ್ಪನಗೆ ಕಟ್ಟಿದ್ದು ಒಂದು ಕತಿನಾ. ಸುಂದರಿ ಪದ್ಮಕ್ಕ ಸುತ್ತಣ ಹಳ್ಳಿಯಲ್ಲಿ ಹೆಸರು ಮಾಡಿದ್ಲು. ಹತ್ತಳ್ಳಿಯಲ್ಲಿ ಆಕಿಯಂಥ ಸುಂದ್ರಿನಾ ಇರ್ಲಿಲ್ಲ. ಇದೇ ನೆಪ ಆಗಿ ಗೌಡ್ರ ಜಾತಿಯ ಹರೆಯದ ಹುಡ್ಗರು ಆಕಿಗೆ ಗಂಟ ಬಿದ್ದ ಮಾಡ್ಬಾರ್ದ ಮಾಡಿ, ಹೊಟ್ಟಿ ಬರಿಸಿದ್ರು. ಮ್ಯಾಗಳಗೇರಿ ಆಸ್ಪತ್ರಿಯ ಸ್ಟೆಲ್ಲಾ ಮನಿಯೊಳ್ಗ ಕದ್ದು ಮುಚ್ಚಿ ಅಬಾಶನ್ ಮಾಡಿದ್ದು ಆಗಿತ್ತು. ಸುದ್ದಿ ಮುಚ್ಚಿಡಕಾ ಆಗಲಿಲ್ಲ. ಪದ್ಮಕ್ಕನ ಅಪ್ಪ ಟಿಡಿಬಿ ಮೆಂಬ್ರ ಆಗಿ ಮೆರ್ದವಾ. ಮಗ್ಳ ಮನವೊಲ್ಸಿ ದೂರದ ಸಂಬಂಧಿ ರುದ್ರಪ್ಪಗಾ ಮದ್ವಿ ಮಾಡಿ ಮುಗ್ಸಿ ಕೈತೊಳ್ಕಂಡಿದ್ದ.

ಪದ್ಮಕ್ಕ ಸಹ ಅಪ್ಪನ ಮಾತ್ಗೆ ಮರು ಮಾತನಾಡ್ದೆ ರುದ್ರನ ಜೊತ್ಗೆ ಆಗ್ನಿಕುಂಡ ಸುತ್ತಿದ್ಲು. ಆದ್ರ ಮನಿಯೊಳಗೆ ಯಜಮಾನಿನೂ ಆಕಿ ಆಗಿದ್ಲು. ಮದ್ವಿಯಾದ ಮೊದಲದಿನದಿನದಿಂದ ಮೊದಲಗಿತ್ತಿ ಆಗಿದ್ಲು. ಮನಿ, ವ್ಯವಹಾರ, ಮಕ್ಳ ಶಾಲಿ, ಹೊಟ್ಟಿನೆತ್ತಿ ಎಲ್ಲಾ ಪದ್ಮಕ್ಕಂದ. ಎಲ್ಲಾ ಬಾರ ಹೊತ್ಲು. ನಮ್ಮೂರಗ ಜಾತಿ ಇಲ್ಲದ ನಡ್ದಕೊಳ್ಳೋ ಹೆಣ್ಣೆಂಗಸು ಅಂದ್ರ ಆಕಿ. ಯಾವ ಜಾತಿ ಮಕ್ಕಳ ಇರ್ಲಿ, ಶಾಲಿ, ಕಾಲೇಜ್ ಕಲ್ಯಾಕ ಅತ್ಯಾವ ಅಂದ್ರ, ಮನ್ಗಿ ಕರ್ದು, ಶರಬತ್ ಕೊಡ್ದೆ ಕಳಿಸ್ದಾಕೀನ ಅಲ್ಲ. ಅಪ್ಪನ ಟಿಡಿಬಿ ಮೆಂಬರ್ ರಾಜ್ಕೀಯ ಆಕಿ ರಕ್ತದಾಗ ಹರಿದಿತ್ತಂತ ಕಾಣ್ತಾದ.

ಶೇಷಪ್ಪಾ ಸಾಯಕ ತಿಂಗ್ಳ ಹಿಂಚೆ ಹೇಳ್ತಿದ್ದ. ’ನೀವಿನ್ನು ಹುಡುಗ್ರು, ಪದ್ಮಕ್ಕ ಹರೆದಾಗಿಂದ ನಾ ಬಲ್ಲೆ. ಬಾಳ ಸಂಬಾಳ್ಸಿಕೊಂಡ ಬಂದಾಳ. ಊರಾಗಿನ ಇಬ್ರು ಗೌಡ್ರ ಜಗಳದಾಗ ಊರಿಗೆ ಊರೇ ಉರಿದು ಹೋಗ್ತಿತ್ತು. ಆಕಿ ಇಬ್ರುನ್ನೂ ಹದ್ದು ಬಸ್ತಿನಲ್ಲಿಟ್ಕೊಂಡು ಬೆಂಕಿ ಬೀಳದನ್ನಾ, ಹೆಣ ಉರೋಳದನ್ನಾ ತಪ್ಸಿದ್ಲು. ಅಂಗ ನೋಡಿದ್ರಾ ಜಗಳಕ್ಕ ಕಾರ್ಣ ದೊಡ್ಡದೇನಲ್ಲಾ. ಬಸವಣ್ಣ ದೇವ್ರ ಹಬ್ಬದಾಗ ’ಗೋಳಿ’ನ ಹರಾಜ್ ಹಾಕಿದ್ರು ಸವಾಲು ಕೂಗಾದ್ರಾಗ ಇಬ್ರು ಗೌಡ್ರಿಗೆ ಜಿದ್ದು ಹತ್ತಿತು. ಇಬ್ರಿಗೂ ಪ್ರತಿಷ್ಠೆ ಪ್ರಶ್ನೆ. ’ಗೂಳಿ’ನ್ನಾ ಮನಿ ತರ್ಬೇಕು ಎಂಬ ಹಠದಲ್ಲಿ ಸವಾಲಿಗೆ ’ಪ್ರತಿ ಸವಾಲು’ ಕೂಗುತ್ತಾ ಹೋದ್ರು. ದೊಡ್ಡಗೌಡ ಸಾವಿರ ರೂ. ಅಂದ್ರ, ಕರೀಗೌಡ ಸಾವಿರದ ಐನೂರು ಅನ್ನಾವ. ದೊಡ್ಡಗೌಡ ಸಾವಿರದ ಆರುನೋರು ಅಂದ್ರ, ಕರೀಗೌಡ ಸಾವಿರ್ದ ಏಳ್ನೂರು ಅನ್ನವಾ. ಹಿಂಗಾ ನೂರು ನೂರು ಏರಿಸುತ್ತಾ ಸವಾಲಿನ ಜಿದ್ದು ‘ಹೊಡದಾಟಕ್ಕ’ ತಿರುಗತೈತಿ ಅನ್ನೋವಷ್ಟತ್ಗೆ ಪದ್ಮಕ್ಕ ಅಗಸರ ನಿಂಗನ್ನ ಕೂಡ ಕರಿಗೌಡ್ರಗ ಕರಿಕಳ್ಸಿದ್ಲು.

ಕರೀಗೌಡ ಅವಸರದಲ್ಲಿ ಬಂದ ನಿಂಗನ್ನ ನೋಡಿ’ಏನ್ಲೆ ಅಂತ ಕಣ್ಣಿಂದ್ಲೆ ಕೇಳ್ದ’ ಬದಿಗೆ ಬರುವಂತೆ ಸನ್ನೇ ಮಾಡ್ದ. ನಿಂಗ ಮೆಲ್ಲಗೆ, ’ಗೌಡ್ರ, ಪದ್ಮಕ್ಕ ಅರ್ಜೆಂಟ್ ಮಾತಾಡದೈತಿ, ಕರ್ಕೊಂಬಾ ಅಂತ ಕಳಿಸ್ಯಾರ್ರಿ.’

‘ಆತು, ನಡಿ’ ಅಂದವ್ರೆ ಸವಾಲನ್ನು ಕೂಗುತ್ತಿದ್ದ ಮೆತ್ಲಳ್ಳಿ ಪರಮೇಶಿ ಕಡೆ ತಿರುಗುತ್ತಿದ್ದಂತೆ, ಸವಾಲು ಮುಗಿಸುವ ಹಂತಕ್ಕೆ ಬಂದಿದ್ದು ಕೇಳಿಸ್ತು. ಮೆತ್ಲಳ್ಳಿ ದೊಡ್ಡಗೌಡ್ರು ಕೊನೆಯ ಸಲ ಕೂಗಿದ್ದ ಆರು ಸಾವಿರ ಒಂದು ಸಾರಿ, ಎರ್ಡ ಸಲ, ಮೂರು ಸಲ ಎಂದು ಮುಗ್ಸಿದ.

ಅವನಿಗೂ ಸವಾಲು ಕೂಗಿ ಸಾಕಾಗಿತ್ತು. ಸವಾಲು ಮುಗಿಯುದ್ದಂತೆ ಕರೀಗೌಡ್ರು ಸೀದಾ ಪದ್ಮಳ ಮನೆಯತ್ತ ದಾಪುಗಾಲು ಹಾಕಿದ್ರು. ಸವಾಲಿನಲ್ಲಿ ಗೂಳಿ ಪಡೆಯದಿದ್ದರೂ, ಪದ್ಮಳನ್ನು ಗೆದ್ದ ’ಗತ್ತು’ ಕರೀಗೌಡನ ಮೀಸೆಯ ತುದಿಗೆ ಕುಣಿಯುತ್ತಿತ್ತು. ಕರೀಗೌಡ್ರ ಬಸಣ್ಣ ದೇವ್ರ ಜಾತ್ರಿಯ ಧ್ವಜ ಮತ್ತು ಗೂಳಿ ಸವಾಲಿನ ಪ್ರಕ್ರಿಯೆ ನಂತರ ತಕ್ಷಣ ಹೊರಟ ಪರಿಣಾಮ ’ಹೊಡದಾಟ ತಪ್ತು’ ಅಂತ ಶೇಷಪ್ಪ ನಿಟ್ಟುಸುರು ಬಿಟ್ಟಿದ್ದ.

ಅದೆನ ಅಂಥಾ ಕೆಲ್ಸ ನಿಂದು ಗೂಳಿಕರ ಸವಾಲ ನಡಿಬೇಕರನಾ ಹೇಳಿಕಳ್ಸದಾ? ದೊಡ್ಡಗೌಡ ’ಗೂಳಿನ ಹೊಡ್ಕಂಡ ಎಂಬ ಕರಿಗೌಡ್ರ ಸಿಡುಕು ಮಿಶ್ರಿತ ಮೋಹದ ಮಾತು ಕೇಳಿ ಪದ್ಮಕ್ಕ ’ಆ ಗೂಳಿ ಮಾತ ವತ್ತಟ್ಟಿಗಿರಲಿ, ನಡ್ರಿ ಹೊಳ್ಗಿ ಮಾಡಿನಿ, ಕೈಕಾಲು ಮಖ ತೊಳ್ಕಂಡು ಬನ್ರಿ.’

‘ಆಯ್ ಈಗಿನ್ನ ಉಂಡೀನಿ, ರಾತ್ರಿಗೆ ನೋಡ್ತಿನಿ ಬೇಕಾದ’ ಎಂದ್ರು ಗೌಡ್ರು.

ಗೌಡನ ಮಾತಿನ ಒಳಾರ್ಥ ಅರಿತ ಪದ್ಮಕ್ಕ ’ಕೊಗಳಿಯಿಂದ ಮಕ್ಕಳ ಕಟಗೊಂಡು ಅಕ್ಕ ಬ್ಯಾರೆ ಬಂದಾಳ. ಇವತ್ತೆಲ್ಲಿ ಆಕೈತಿ, ನಾಡ್ದು ಹೊಕ್ಕಾಳ ಆಕಿ….’ ಇನ್ನೆರಡು ದಿನ ಕೂಡಾಕ ಆಗದಿಲ್ಲಾ ಅಂಬ ಸೂಚನೆ ಇತ್ತು ಆಕಿ ಮಾತಿನಲ್ಲಿ.

ಅಂಗಾರ ನಾ ಹೊಕ್ಕೀನಿ. ತೋಟದ ಕಡಿಕರ ಹೋಗಿ ಬರ್ತೀನಿ ಎಂದು ಗೌಡ್ರು ಅವಸರ ಮಾಡಿದ್ರು. ಒಳಗ ’ಚಾ’ಕಿಟ್ಟೀನಿ ಕುಡ್ದ ಹೊದ್ರಾತು ಎಂದು ಗೌಡ್ರ ನಡೆಗೆ ತಡೆಯೊಡ್ಡಿದ್ಲು.

* * *
ಕರಿಗೌಡ ಇಷ್ಟು ಅವಸರಿಂದ ಸವಾಲು ಬಿಟ್ಟು ಹಿಂದೆ ಸರಿದ ಗೂಡಾರ್ಥ ತಿಳಿದ ದೊಡ್ಡ ಗೌಡ ’ಸುಂಕ್ಲಿ’ ಪದ್ಮಿ ಕರೀಕಳ್ಸಿರ್ಬೇಕು ಎಂದು ಒಳ್ಗಾ ಲೆಕ್ಕ ಹಾಕಿದ್ರು. ಗೌಡನ ಲೆಕ್ಕಾಚಾರದ ಒಳಮರ್ಮ ಅರಿತ ಮೇಟಿ ಕೊಟ್ಟಪ್ಪ ’ಗೌಡ ಆ ಅಗಸರ ನಿಂಗ ಬಂದು ಕರಕೊಂಡು ಹೋದ’ ಎಂದು ಬಾಯಗಲಿಸಿ ’ತಲೀ’ಕೆರೆದ.

ಹೋಗ್ಲಿ ಬಿಡ್ಲೆ…..ಬಸ್ಸಣ್ಣ ದೇವ್ರ ಕೃಪೆಯಿಂದ ಬಂಗಾರದಂಥ ’ಗೂಳಿ’ ಸಿಗ್ತು. ನಡೀ ದೇವರ ದರ್ಶನ ಮಾಡಿ ’ಬ್ಯಾಡರ ಸಿದ್ಲಿಂಗಿ ಕಡೆ ಹೋಗಾನು. ಹೇಳಿಯಿಲ್ಲ. ಮತ್ತೆ? ಅಂದ್ರು ಗೌಡ್ರು.

ಹೇಳಿನ ಗೌಡ್ರ, ಸಿದ್ಲಿಂಗಕ್ಕಾ ಮುಂಜಾನೀನ ಸೂಚ ಕೊಟ್ಟಿದ್ಲು. ಸಂಜೀಕ ಮರಿಬ್ಯಾಡ ಕೊಟ್ರಪ್ಪಾ, ರಾತ್ರಿ ಊಟಾನು ಇಲ್ಲೇನಾ, ದೊಡ್ಡ ಗೌಡ್ರಿಗೆ ಹೇಳ್ಬಿಡು ಅಂದಿದ್ಲು ಎಂದ. ಗೌಡ ನಕ್ಕ. ಮಾತಾಡಲಿಲ್ಲ. ಪಿರುತಿ ಯಿಂದ ಕೊಟ್ರನ ಹೆಗಲ ಮ್ಯಾಲ ಕೈಯಾಡಿಸಿದ್ರು.

* * *
ಮನೆ ಮುಂದೆ ಬಂದಾಗ್ಲೆಲ್ಲ ಭಕ್ತಿ ಯಿಂದ ಸಣ್ ಮಾಡಿ, ಹುಲ್ಲು ಹಾಕಿ ಜನರೆಲ್ಲಾ ಪ್ರೀತಿಸುತ್ತಿದ್ದರು ಪ್ಯಾಟಿ ಬಸ್ವಿಯನ್ನು. ಊರಿನ ದೇವತೆಗೆ ಬಿಟ್ಟಿದ್ದ ’ಆಕಳು’ ಪ್ಯಾಟಿ ಬಸ್ವಿ. ಊರೆಂಬ ಊರಿಗೆ ಪ್ಯಾಟಿ ಬಸ್ವಿ ಸುಂದರಿಯಂತಿತ್ತು. ಇದು ಬೆಳೆವ ಮುನ್ನ ಕರುವಿದ್ದಾಗ ಮಾಗಡಿ ಜಾತ್ರೆಯಿಂದ ತಂದದ್ದು. ಹಾಲಿನಂಥ ಬಿಳಿ ಬಣ್ಣ, ಬೆಗರಿ ಕೋಡಿನಂಥ ಕರು. ಎರಡು ವರ್ಷದಲ್ಲಿ ಬೇಕಾಬಿಟ್ಟಿ ಹೊಲ ಮೇಯ್ದು, ಆಕಳಾಗಿ ಬೆಳೆದು ಬೆದೆಗೆ ಬಂದಿತ್ತು. ಊರ ದೇವತೆಗೆ ಬಿಟ್ಟ ಪ್ಯಾಟಿ ಬಸ್ವಿ ಆದ ಕಾರಣ ಬೇಕಾದ್ದ ಹೊಲ ಹೊಕ್ಕು ಫಸಲನ್ನು ತಿಂದು ಬೆಳೆದಿತ್ತು. ಯಾರ ಹೊಲ ಹೊಕ್ಕರು ಬೆದರಿಸಿ ಬ್ಯಾರೆ ಹೊಲದ ಕಡೆಗೆ ಅಟ್ಟುತ್ತಿದ್ದುದು ಬಿಟ್ರೆ, ಒಂದು ಪೆಟ್ಟನ್ನು ಸಹ ಅದು ತಿಂದಿರಲಿಲ್ಲ. ಸುಖದಿಂದ ಬೆಳೆದಿದ್ದ ಪ್ಯಾಟಿ ಬಸ್ವಿ ಬೆದೆಗೆ ಬಂದ ಮೊದಲ ವರುಷ ಊರ ಗೂಳಿಯಿಂದಲೇ ಕಟ್ಟಿಸಲಾಗಿತ್ತು.

ಆ ದಿನ ’ಬಸ್ವಿ’ಯ ಹಿಂಬದಿಯ ಕಾಲುಗಳ ಹತ್ತಿರ ಹೊಟ್ಟೆಕೆಳಗೆ ಎರಡು ನೊಗಗಳನ್ನು ಕತ್ತರಿ ಆಕಾರದಲ್ಲಿ ಹಾಕಿ ಕೆಂಚ ಮತ್ತು ದ್ಯಾಮ ಹಿಡಿದಿದ್ದರು. ಶಿವು ದೂರದಿಂದ ಗೂಳಿಯನ್ನು ಪ್ರೇರೇಪಿಸಿ ಓಡಿಸಿಕೊಂಡು ಬಂದ. ಗೂಳಿ ತನ್ನೆರಡು ಮುಂಗಾಲು ಎತ್ತಿ ಹಾರಿದ ರಭಸಕ್ಕೆ ಬಸ್ವಿ ದುಂಡಗಾಯ್ತು. ಬಸ್ವಿಗೆ ಗೂಳಿ ಹತ್ತಿಸಿದ ದೃಶ್ಯ ಕಂಡ ಸುತ್ತಲಿದ್ದ ಮಕ್ಕಳು, ಪುಂಡಪೂಲಿಗಳು ಸಿಳ್ಳೆ ಹಾಕಿ ಕೂಗಿ ಗದ್ದಲ ಎಬ್ಬಿಸಿದವು. ಗೂಳಿ ಮತ್ತೊಮ್ಮೆ ಬಸ್ವಿಯ ಮೇಲತ್ತಿದ್ದಾಗ ಮಕ್ಕಳ ಕೇಕೆ ಕಂಡ ಗೌಡ್ರು’ಲೇ ಹುಡ್ಗರ ಅಂಗ್ಯಾಕ ಕೂಗ್ತಿರಲೇ’ ಎಂದು ಗದರಿಸಿದ್ರು. ಗೌಡರನ್ನ ಕಂಡ ಬಸ್ಸ್ಯಾ ’ಈ ಲೌಡಿ ಮಗ ಪದ್ಮಕ್ಕನ ಹಿಂಗಾ ಗಜ್ಜ ಹಾಕ್ತಿದ್ನೇನೋ’ ಅಂತ ಮನದಲ್ಲೇ ಗುನಗಿಕೊಂಡ. ನಾಯಿ ಪಿಟ್ಟಿ ಹಾಕಿದ್ರೆ ಕಲ್ಲಿಂದ ಹೊಡೆದೋ, ಕೊಲಿನಿಂದ ತಿವಿದೋ ಮಜಾ ನೋಡುತ್ತಿದ್ದ ಹುಡ್ಗರು ಇಲ್ಲಿ ತಮ್ಮ ಕೈಗೆ ಸಿಗ್ದ ಗೂಳಿ-ಬಸ್ವಿ ಸಂಭೋಗವನ್ನು ಕಂಡು ಕೇಕೆ ಹಾಕಿ ಸುಖಪಟ್ಟವು.
* * *

ಹಬ್ಬದ ನಂತರ ಕರಿಗೌಡ್ರಿಗೆ ಪದ್ಮಕ್ಕನ ಮನೆಗೆ ಬರಲಾಗಲಿಲ್ಲ. ಹಬ್ಬ ಕಳೆದು ಎರಡು ದಿನವಾಗಿತ್ತು. ಹೊಸಪೇಟೆಗೆ ತುರ್ತಾಗಿ ಬರಲು ಅವರ ಸಂಬಂಧಿ ಮಲ್ಲನ ಗೌಡ್ರು ಹೇಳಿಕಳಿಸಿದ್ರು. ಮನೆ ಮಂದಿನ ಕಟ್ಟೆಗೆ ಕುಳಿತು ’ಬರ್ಕ್ಲಿ’ ಸಿಗರೇಟು ಸೇದುತ್ತಿದ್ದ ದೊಡ್ಡ ಗೌಡ್ರು ಮಧ್ಯಾಹ್ನದ ಎರಡು ಗಂಟೆ ಬಸ್ಸನ್ನು ಅವಸರದಿಂದ ಕರೀಗೌಡ ಏರುವುದನ್ನು ಕಂಡವರೇ ಸಂಗಾತಿ ಕೊಟ್ರನ್ನ ಕರ್ದು ’ಲೇ ಇವತ್ತು ರಾತ್ರಿ ಪದ್ಮಿಗೆ’ ಎನ್ನುತ್ತಿದ್ದಂತೆ ಮುಂದಿನದನ್ನ ಅರಿತ ಕೊಟ್ರಪ್ಪ ’ಗೌಡ್ರ ಸಂಜೀಕ ಏನರಾ ಕೇಳಕ್ಕಂತ ನೆವ ಮಾಡ್ಕೆಂಡು ಹೋಗಿ, ಕೇಳಕ್ಕೊಂಡು ಬರ್ತೀನ’ ಅಂದ.

* * *
’ಅಮ್ಮ ನೀ ಹೇಳ್ಬೇಡ, ನಾನು ಚಂದ್ರಕಾಂತ ಜೊತ್ಗೆ ಮಾತ್ನಾಡಿದರೆ ಏನಾತು? ಪರೀಕ್ಷೆ ಹತ್ತಿರ ಬಂದಾವು, ಗೈಡ್ ಕೇಳ್ದೆ, ನಾನ್ ನಾನ್ನಾಂಗ ಏನ ಮಾಡಿಲ್ಲ.’ ಎಂಬ ಮಗಳು ಗಂಗೀ ಪ್ರಶ್ನೆ ಕೇಳಿ ದಂಗಾದ ಪದ್ಮಕ್ಕ ಮುಂದೆ ಮಾತಾಡಲಿಲ್ಲ. ಗಂಗೆ ಮತ್ತು ಪದ್ಮಕ್ಕನ ಜಗಳ ಈಗೀಗ ತೀರಾ ಹೆಚ್ಚಾಗೈತಿ ಎಂದು ಪ್ರಭಾಕರ ಮುಂದುವರಿಸಿದ. ನನ್ನ ಕಿವಿ ಚುರುಕಾದವು. ಗಂಗೆಯ ಕಥೆಗೆ ಹೊಸ ನಾಯಕನ ಪ್ರವೇಶ ಆಗಿರಬಹುದೇ? ಅಥ್ವಾ ಚಂದ್ರಕಾಂತ ಒಬ್ಬನೇ ಇದ್ದಾನೋ ಎಂದು ಮನದಲ್ಲೇ ಅಂದುಕೊಂಡೆ.

ಆಗತಾನೆ ಎಸ್ಸೆ ಎಲ್ಸಿಗೆ ಕಾಲಿಟ್ಟಿದ್ದ ಗಂಗೆ ಪರೀಕ್ಷೆಯ ನೆಪಮಾಡಿ ಚಂದ್ರಕಾಂತ ನೊಡನೆ ಪ್ರಣಯ ಆರಂಭಿಸಿದ್ದಳು. ಚಂದ್ರ ಸಹ ಕಿಲಾಡಿಯೆ. ಅದು ಇದು ಹೇಳ್ದಾಂಗ ಮಾಡಿ, ಆ ಪುಸ್ತಕ, ಈ ಗೈಡು ಕೊಟ್ಟಾಂಗ ಮಾಡಿ, ಪದೇ ಪದೇ ಪದ್ಮಕ್ಕನ ಸುದ್ದಿಕೇಳಿ ಗಂಗೆಯನ್ನು ಕೆಣಕುತ್ತಿದ್ದ. ಆಕಿ ಜೊತ್ಗೆ ಮಾಡಿದ್ದನ್ನೆಲ್ಲಾ ಹೇಳಿಕೊಂಡು ತಿರುಗುತ್ತಿದ್ದ. ಬೆರ್ಕಿ ಚಂದ್ರನ ಸಾಹಸ ಕೇಳಿ ವಾರಿಗೆ ಹುಡ್ಗರು ಹೊಟ್ಟೆ ಉರಿಸಿಕೊಳ್ಳುವುದಷ್ಟೇ ಕೆಲ್ಸ ಆಗಿತ್ತು.

ಕೊನೆಗೆ ಇವರ ಪ್ರಣಯ ಹಾಗೆ ಮುಂದುವರಿಯಿತು. ಚಂದ್ರಕಾಂತ ಪಾಸಾಗಿ ಕಾಲೇಜು ಸೇರ್ದ. ಗಂಗೆ ಪೇಲಾಗಿ ಮನ್ಯಾಗ ಉಳಿದ್ಲು. ಚಂದ್ರಕಾಂತ ಬಂದಾಗೆಲ್ಲಾ ಏನೇನು ತಂದುಕೊಟ್ಟು ಕಟಿಯಾಕ ಶುರುಮಾಡ್ದ. ಕೊನೆಗೆ ಕದ್ದು ಮುಚ್ಚಿದ್ದ ಪ್ರಣಯ….. ಅಬಾಷನ್ ಮಾಡ್ಸತನಕ ಹೋಯ್ತು. ಪದ್ಮಕ್ಕ ಗಂಗೆಯ ರದ್ಧಾಂತ ನೋಡಿ ಗಂಡು ಹುಡುಕಾಕ ಶುರು ಮಾಡಿದ್ಲು. ಅಂತೂ ಕೊನಿಗೆ ಗಂಗೆಯ ಮದ್ವೆ ಸಹ ಅವಸರದಲ್ಲಿ ನಡದೋಯ್ತು ಎಂದು ಪ್ರಭಾಕರ ಹೇಳಿದಾಗ ಗಂಗೆಯ ಬಗ್ಗೆ ಇದ್ದ ಅಲ್ಪ ವ್ಯಾಮೋಹ ’ಚಳಕ್’ ಅಂತ ಜಾರಿಹೋಯ್ತು. ಆದರೂ ಗಂಗೆ ನನ್ನೊಂದಿಗೆ ಹರಟಿದ್ದು, ಮುತ್ತು ಕೊಟ್ಟಿದ್ದು ಮತ್ತೆ ಮತ್ತೆ ನೆನಪಾಗ ತೊಡಗಿತು.

ನಾನು ಇಲ್ಲಿಗೆ ಹೋಗ್ತಿನಿ ಅಂದಾಗ ಪದ್ಮಕ್ಕ ’ನಿನ್ನನ್ನ ಕರಕೊಂಡು ಬಾರಪ್ಪ’ ಅಂದ್ಲು. ಗಂಗೆ ಊರಿಗೆ ಬಂದಿರ್ತಾಳ. ಉಗಾದಿ ಬಂತಲ್ಲ….. ಎಂದ ಪ್ರಭಾಕರ. ’ಗಂಗೆ ಬಂದಿರ್ತಾಳ’ ಎಂಬ ಶಬ್ದ ನನ್ನಲ್ಲಿ ಪ್ರತಿಧ್ವನಿಸ ತೊಡಗಿತು. ಎದೆಯಲ್ಲಿ ಸಣ್ಣಗೆ ಯಾವುದೋ ಸೆಳೆತ ಆರಂಭವಾಯ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾರ್ಥಕ್ಕೆ ಗೆಳೆತನ
Next post ಮದುವೆಯಾಯಿತು ಉಷೆಗೆ

ಸಣ್ಣ ಕತೆ

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…