ಮದುವೆಯಾಯಿತು ಉಷೆಗೆ ಮಸಣ ಮಂಟಪದಲ್ಲಿ.
ಕೇಳಲಿಲ್ಲವೆ ಊರು, ಜನರದರ ವೈಖರಿಯ?
ವರನ ಬಳಗವು ಬಂದು ನಿಂತಿತ್ತು, ಅಲ್ಲಲ್ಲಿ
ಹೆಜ್ಜೆ ಹೆಜ್ಜೆಗು ವಧುಗೆ ಕಾಲ ಕೂಡಿಟ್ಟುರೆಯ
ಮೂಳೆಯಾಭರಣಗಳ ಬಳುವಳಿಯ ನೀಡುತ್ತ!
ವಧುವಿನದು ಮೃದುಪಾದ ನೊಂದರಾಗದು ಎನುತ
ನಾಲ್ವರಾಕೆಯು ಕುಳಿತ ಪಾಲಕಿಯನೆತ್ತುತ್ತ
ಮಂಟಪಕೆ ತಂದರದ, ದಿಬ್ಬಣಕೆ ಸಂಗೀತ
ವರನ ಬಳಗದ ನಾಯಿ ನರಿಗಳದು. ರಣಹದ್ದು
ವಹಿಸಿ ಪೌರೋಹಿತ್ಯ, ಅರ್ಪಿಸಿತು ಆಕೆಯನು
ಅಗ್ನಿಯುಡಿಯಲಿ, ಒಡನೆ ಜ್ವಾಲೆ ಬಾಹುಗಳೆದ್ದು
ಉಷೆಯನಾಲಂಗಿಸುತ ಚಪ್ಪರಿಸಿ ಕೇಕೆಯನು
ಹಾಕುತಿರೆ- ಮೋಡಗಳು ಸ್ತಬ್ಧ ಮೌನದಿ ನಿಂತು
ನೋಡಿದುವು. ಸಿಡಿದಿತ್ತು ಜೀವನದ ಕೊನೆ ತಂತು!
*****