ಬೆಳಕು ಬೆಳಕು ಕೊನೆಯಿರದ ಬೆಳಕು ಕತ್ತಲೆಗೆ ಖಣವೆ ಇಲ್ಲ.
ಪ್ರಾಣದಲ್ಲಿ ಅಜ್ಞಾತ-ಖಾತ ತೆರೆವುದು ರಹಸ್ಯವೆಲ್ಲ.
ಜಡದಗಾಧ ಆಖಾತ ಮುಂಚೆ ಮುಚ್ಚಿತ್ತು ತನ್ನ ನೆಲೆಯ.
ಲವಲವಿಕೆಯಲ್ಲಿ ಎಚ್ಚೆತ್ತು ಈಗ ಎತ್ತಿಹುದು ತನ್ನ ತಲೆಯ.

ಬೆಳಕು, ಹೊತ್ತಿರದ ಬೆಳಕು ತನ್ನ ತಾನಾದ ಅಚ್ಚವೆಳಕು
ಪಾವಿತ್ರ್ಯ ಮುದ್ರೆಯಲ್ಲಿದ್ದ ಗೂಢ ತೆರೆದಿತ್ತು ತನ್ನ ಫಡಕು
ಬೆಳಕು ಬೆಳಕು ಕಿಚ್ಚೆದ್ದ ಬೆಳಕು ಆನಂತ್ಯ ಹೃದಯರತ್ನ
ಎದೆಯಲೆನ್ನ ಪ್ರಸ್ಪಂದಿಸುತ್ತ ಅರಳಿದೆ ಗುಲಾಬಿ ನೂತ್ನ.

ಬೆಳಕೊ ಬೆಳಕೊ ನರನಾಡಿಯಲ್ಲಿ ತುತ್ತೂರಿ ಕುಣಿವುತೆದ್ದು
ಧ್ಯಾನಸ್ಥ ಬೆಳಕು! ಆ ಕಾವಿನಿಂದ ಜೀವಾಣು ತಣಿವುತಿದ್ದು
ಆನಂದ ಮುಗ್ಧ, ಸುಸಮಾಧಿಯಲ್ಲಿ ಪ್ರಜ್ವಲಿಸುತಿಹುದು ತೀರಾ
ಅಮೃತ ಸ್ಪರ್ಶ ನೆನೆವಂತೆ ರಸದಿ ನಾಂದಿಹವು ಪುಟ್ಟಪೂರಾ.

ದೀಪ್ತಿ ಸಾಗರದ ಬೃಹದ್ಗರ್ಭದಲ್ಲಿ ಸ್ತಂಭದಂತೆ ನಿಂತೆ
ಮೂಲದಗ್ನಿಯನು ಮೇಲಿನಗ್ನಿಯಲಿ ಒಂದುಗೊಳಿಸುವಂತೆ!
*****