ಏಕದಂತಮುಪಾಸ್ಮಹೇ

ಏಕದಂತಮುಪಾಸ್ಮಹೇ

ಸಂಜೆ ಕಪಿಲಳ್ಳಿ ಕಾಡಿನಿಂದ ವಾಪಾಸಾದ ತನ್ನ ಗಂಡನ ಮುಖದಲ್ಲಿ ಭಯ, ಗಾಬರಿ ತಾಂಡವವಾಡುತ್ತಿದ್ದುದನ್ನು ಕಂಡು ದೇವಕಿಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೇ ಮಂಕಾಡಿಸಿ ಏಳಿದರೂ ಗಂಡ ಚನಿಯ ಮಲೆಕುಡಿಯನಿಂದ ಉತ್ತರವಿಲ್ಲ. ಏನಾಗಿರಬಹುದು ಇವರಿಗೆ? ಎಲ್ಲಾದರೂ ಕುಡೋಳು ಕುಟ್ಟಿತೆ? ಏನಾದರೂ ಸೋಂಕೆ? ಅಥವಾ ಕಾಡಿನ ಪ್ರೇತ ಚೇಷ್ಟೆಯಾ? ಕೇಳಿ ಕೇಳಿ ಬಚ್ಚಿಹೋಗಿ ಕೊನೆಗೆ, “ಮಣ್ಣು ಹಾಕಲಿ. ಮನಸ್ಸಾದಾಗ ತಾನಾಗಿಯೇ ಬಾಯಿ ಬಿಡುತ್ತಾರೆ” ಎಂದು ಮನೆಯ ಕೆಲಸಗಳಲ್ಲಿ ಮುಳುಗಿಹೋದಳು.

ರಾತ್ರಿಯಾದರೂ ಚನಿಯ ಮಲೆಕುಡಿಯ ಸೊಲ್ಲೆತ್ತಲಿಲ್ಲ. ‘ನಾನಿವತ್ತು ಊಟ ಮಾಡುವುದಿಲ್ಲ’ವೆಂದು ಇದ್ದಕ್ಕಿದ್ದಂತೆ ಏಕಪಕ್ಷೀಯವಾಗಿ ಘೋಷಿಸಿ ಚಾಪೆ ಬಿಡಿಸಿ ಮುಸುಕೆಳೆದುಕೊಂಡು ಮಲಗಿಬಿಟ್ಟ. ಮಕ್ಕಳಿಬ್ಬರು ಅಮ್ಮನ ಮುಖವನ್ನು ನೋಡಿದರು. ದೇವಕಿಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ.

ಮಧ್ಯರಾತ್ರಿ ಗಂಡನ ದೇಹದ ಬಿಸಿ ಹೆಚ್ಚಾದಂತೆ ಅನಿಸಿ ಒತ್ತಿನಲ್ಲಿ ಮಲಗಿದ್ದ ದೇವಕಿ ಎದ್ದು ಹಣೆ ಮುಟ್ಟಿ ನೋಡಿದಳು. ಸುಡುತ್ತಿದೆ! “ದೇವರೇ, ಇದೇನು ಜ್ವರವಪ್ಪಾ ಇವರಿಗೆ” ಎಂದುಕೊಳ್ಳುತ್ತಿರುವಾಗ, “ಅಯ್ಯಯ್ಕೋ, ಬೇಡ ಬೇಡಾ” ಎಂದು ಚನಿಯ ಮಲೆಕುಡಿಯ ದಢಕ್ಕನೆ ಎದ್ದು ಕೂತು, “ಅಯ್ಯೋ….. ನನ್ನದೇನಿಲ್ಲ…. ನನ್ನದೇನಿಲ್ಲ. ನಾನು ಕೊಂದದ್ದಲ್ಲ. ಗಣಪತೀ… ಗಣಪತೀ…” ಎಂದು ತೊದಲಿದ. “ಇದೆಂತದ್ದು ನಿಮ್ಮ ಕರ್ಮ? ನನ್ನನ್ನು ನೋಡಿ ಗಣಪತಿ ಎನ್ನುತ್ತೀರಲ್ಲಾ? ನಾನು ನಿಮಗೆ ಗಣಪತಿಯ ಹಾಗೆ ಕಂಡೆನೆ? ನಾನು ಕೊಂದದ್ದಲ್ಲ ಎಂದಿರಲ್ಲಾ? ನಿಜ ಹೇಳಿ, ಕಾಡಿನಲ್ಲಿ ಏನಾಯಿತು? ನನ್ನಲ್ಲೂ ಹೇಳದೆ ಮನಸ್ಸಲ್ಲೇ ಇಟ್ಟುಕೊಂಡದ್ದಕ್ಕೆ ಹೀಗಾಗಿದೆ ನೋಡಿ” ಎಂದು ತಲೆ ನೇವರಿಸಿದಳು. ಅವಳ ಮಾತು ಕೇಳಿ ಅವನು ವಾಸ್ತವಕ್ಕೆ ಬಂದ. “ಬಿಸಿನೀರಿದ್ದರೆ ಕೊಡು. ದೊಂಡೆಯ ಪಸೆ ಆರಿಹೋಗಿದೆ.” ಅವಳು ತಂದುಕೊಟ್ಟ ನೀರು ಕುಡಿದು ಸುಧಾರಿಸಿಕೊಂಡು ಚನಿಯ ಮಲೆಕುಡಿಯ ಅಂದು ನಡೆದುದನ್ನು ನೆನಪಿಸಿಕೊಂಡ.

ಕಪಿಲಳ್ಳಿಯ ಉತ್ತರ ದಿಕ್ಕಿನ ಕಾಡಿಗೆ ಅಂಟಿಕೊಂಡಂತೆ ಇದೆ ಚನಿಯ ಮಲೆಕುಡಿಯನ ಆಶ್ರಯ ಮನೆ. ಅದಕ್ಕೆ ಒಂಟಿ ಲೈಟಿನ ಭಾಗ್ಯಜ್ಯೋತಿಯೂ ಇದೆ. ಚನಿಯ ಮಲೆಕುಡಿಯನದು ಕಾಡನ್ನೇ ನಂಬಿದ ಬದುಕು. ಉತ್ತರ, ಪೂರ್ವ ಮತ್ತು ದಕ್ಷಿಣಗಳಲ್ಲಿ ಕಪಿಲಳ್ಳಿ ಕಾಡುಗಳಿಂದ ಆವೃತ್ತವಾಗಿದ್ದು ಪಶ್ಚಿಮದಿಂದೊಂದು ಪ್ರವೇಶ ಮಾರ್ಗವಿದೆ. ಮಧ್ಯದಲ್ಲಿ ತಪಸ್ವಿನಿಯ ಜುಳು ಜುಳು. ಉತ್ತರದ ಕಾಡು ಅರ್ಜುನ ಪರ್ವತ, ಭೀಮನ ಪರ್ವತ, ಈಶ್ವರ ಪರ್ವತಗಳ ಇಳಿಜಾರುಗಳಲ್ಲಿ ಹಬ್ಬಿಕೊಂಡಿದೆ. ವನವಾಸ ಕಾಲದಲ್ಲಿ ಪಾಂಡವರು ಇಲ್ಲೇ ಇದ್ದರೆಂದೂ ಅರ್ಜುನ ಪರ್ವತ ಮತ್ತು ಈಶ್ವರ ಪರ್ವತಗಳ ತಪ್ಪಲಲ್ಲಿ ಹಂದಿಗಾಗಿ ಅರ್ಜುನ-ಈಶ್ವರ ಘನಘೋರ ಯುದ್ಧ ಮಾಡಿದರೆಂದೂ ಕಪಿಲಳ್ಳಿ ಜನ ಕತೆ ಹೇಳುತ್ತಾರೆ. ಭೀಮನ ಪರ್ವತದಲ್ಲಿ ಹೆಬ್ಬಾವೊಂದು ಭೀಮನನ್ನು ನುಂಗಿ ಕೊನೆಗೆ ಧರ್ಮರಾಯನ ಜಾಣತನಕ್ಕೆ ಮನಸೋತು ಅವನನ್ನು ಬಿಟ್ಟುಕೊಟ್ಟಿತೆಂದೂ ಇನ್ನೊಂದು ಕತೆಯಿದೆ. ಈ ಮೂರು ಪರ್ವತಗಳನ್ನು ದಾಟಿ ಆಚೆಗಿಳಿದರೆ ನಿಗೂಢವಾದ ಬೆಟ್ಟಗುಡ್ಡಗಳು ಮತ್ತು ದಟ್ಟ ಅರಣ್ಯ. ಅಲ್ಲೆಲ್ಲಾದರೂ ದಾರಿ ತಪ್ಪಿ ಬಿಟ್ಟರೆ ಮತ್ತೆ ಬದುಕಿ ಬರುವ ಮಾತೇ ಇಲ್ಲ.

ಕಪಿಲಳ್ಳಿಯ ಉತ್ತರ ಕಾಡೆಂದರೆ ಚನಿಯ ಮಲೆಕುಡಿಯನಿಗೆ ಅಂಗೈಯ ಗೆರೆಗಳಷ್ಟು ಪರಿಚಿತ. ಎಲ್ಲಿ ಹಂದಿ, ಬರಿಂಕ, ಮೊಲ, ಕಡವೆಗಳಿವೆ, ಎಲ್ಲಿ ಕಾಡುಕೋಳಿಯ ಮೊಟ್ಟೆ ಸಿಗುತ್ತದೆ, ಎಲ್ಲಿ ಪಿಲಿಕಂದಡಿ ಮತ್ತು ಆನೆಕಂದಡಿಗಳಿವೆ, ಎಲ್ಲಿ ಚಿರತೆಗಳಿವೆ, ಎಲ್ಲಿ ಕಾಡುಕೋಣಗಳು ಮತ್ತು ಆನೆಗಳು ಓಡಾಡುತ್ತವೆ, ಎಲ್ಲಿ ಮುಜಂಟಿ, ಕೋಲ್ಚ, ಪೆರಿಯ ಜೇನು ನೊಣಗಳು ಗೂಡು ಕಟ್ಟುತ್ತವೆ, ಎಲ್ಲಿ ಸೀಗೆ, ದಾಲ್ಚಿನ್ನಿ, ನರುವೋಳು ಕಾಯಿ ಮತ್ತು ಉಂಡೆಹುಳಿ ಸಿಗುತ್ತದೆ, ಎಲ್ಲಿ ಓಟೆ ಮತ್ತು ಬೆತ್ತ ಬೆಳೆಯುತ್ತದೆ ಎನ್ನುವುದನ್ನು ಅವನು ಕರಾರುವಾಕ್ಕಾಗಿ ಹೇಳಬಲ್ಲ. ಒಮ್ಮೊಮ್ಮೆ ಅವನು ಉರುಳಿಟ್ಟು ಮೊಲ, ಕಾಡು ಕೋಳಿ ಹಿಡಿದು ಮನೆಗೆ ತರುವುದಿದೆ. ಸೀಗೆಕಾಯಿ, ನರುವೋಳು, ದಾಲ್ಚಿನ್ನಿ ಮತ್ತು ಜೇನು ಮಾರಿ ಅವನು ಹಣ ಸಂಪಾದಿಸಿದರೂ ಕಾಡಿನಿಂದ ಬೆತ್ತ ತಂದು ಬುಟ್ಟಿ, ಕುರ್ಚಿ ಹೆಣೆದು ಕಪಿಲಳ್ಳಿಯ ಸಹಕಾರಿ ಸಂಘಕ್ಕೆ ಮಾರುವುದು ಅವನ ನೈಜ ಕಾಯಕ. ಸ್ವಂತ ಉಪಯೋಗಕ್ಕೆಂದು ಅವನು ಭಟ್ಟಿ ಇಳಿಸಿದರೂ ಮಾರುವುದಿಲ್ಲ. ತೀರಾ ಅಗತ್ಯ ಬಿದ್ದವರಿಗೆ ಬೀಡಿ, ಹೊಗೆಸೊಪ್ಪು, ತರಕಾರಿಗಳೊಡನೆ ವಿನಿಮಯ ಮಾಡಿ ಕೆಲವು ವಲಯಗಳಲ್ಲಿ ಪ್ರಸಿದ್ಧಿ ಪಡೆದಿದ್ದ.

ಇತ್ತೀಚೆಗೆ ಕೆಲವು ವಾರಗಳಿಂದ ಅವನಿಗೆ ಬೆತ್ತದ ಬಿಳಲುಗಳಿಂದ ಸ್ವಲ್ಪ ಕೆಳಗಡೆಯಲ್ಲಿ ಆನೆಯ ಲದ್ದಿ ಕಾಣ ಸಿಗುತ್ತಿತ್ತು. ಒಂದು ದಿನ ಹಬೆಯಾಡುವ ಆನೆಯ ಲದ್ಬಿಯನ್ನು ಕಂಡು ಕಂಗಾಲಾಗಿ, “ಅಪ್ಪಾ ಗಣಪತೀ, ಎಲ್ಲಿದ್ದೀಯೋ? ನನಗೇನೂ ಮಾಡಬೇಡಪ್ಪಾ” ಎಂದು ಕೈ ಮುಗಿದುಕೊಂಡೇ ಬೆತ್ತದ ಬಿಳಲುಗಳಿದ್ದಲ್ಲಿಗೆ ಬಂದು ಮುಟ್ಟಿದ್ದ. ಸ್ಪಲ್ಪ ಹೊತ್ತು ನಿಶ್ಶಬ್ದದಲ್ಲಿ ಎಲ್ಲಾದರೂ ಆನೆಯ ಹೆಜ್ಜೆಯ ಸಪ್ಪಳವೋ, ಕೊಂಬೆ ಮುರಿಯುವ ಶಬ್ದವೋ ಕೇಳಲೆಂದು ಕಿವಿಯಾನಿಸಿದ್ದ. ಒಂದು ಸಲ ಬಿದಿರ ಹಿಂಡಲೊಂದನ್ನು ಮರ್ದಿಸುತ್ತಿದ್ದ ಆನೆಯನ್ನು ಕಂಡಾಗ ಹೆದರಿ ಅವನ ಎದೆ ಬಿರಿದು ಹೋಗುವಂತಾದರೂ ಕುತೂಹಲದಿಂದ ಅಡಗಿಕೊಂಡೇ ಅದರ ಲೀಲಾ ವಿನೋದಗಳನ್ನು ಗಮನಿಸಿದ. ಅದರ ಎರಡು ಚೂಪಾದ ಬೃಹತ್ ದಂತಗಳು ಎಲ್ಲಿ ತನ್ನನ್ನು ಯಾವತ್ತಾದರೂ ಇರಿದು ಹಾಕುತ್ತವೋ ಎಂಬ ಭೀತಿ ರೋಮ ರೋಮಗಳಲ್ಲಿ ಮೂಡಿ, “ಅಪ್ಪಾ ಗಣಪತೀ, ನಿನ್ನ ಹಾಗೇ ನನಗೂ ಕಾಡಿನಿಂದಲೇ ಬದುಕು. ನಿನಗೆ ಅಡ್ಡ ಬರಲು ನನ್ನಿಂದ ಸಾಧ್ಯವಾ? ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡು” ಎಂದು ಕೈ ಮುಗಿದಿದ್ದ. ಅವನ ಇರವು ಗಮನಕ್ಕೇ ಬಾರದೆ ಆನೆ ತಾನಾಗಿಯೇ ಹೊರಟುಹೋದ ಮೇಲೆಯೇ ಅವನು ಅಡಗುದಾಣದಿಂದ ಹೊರಬಂದು ಬೆತ್ತದ ಬಿಳಲುಗಳತ್ತ ಹೋದದ್ದು.

ಕಾಡಿನಲ್ಲಿ ಗುಂಪು ಆನೆಗಳಿಗಿಂತ ಒಂಟಿ ಆನೆ ಅಪಾಯಕಾರಿಯೆಂದು ಅವನಿಗೆ ಕೇಳಿ ಗೊತ್ತಿತ್ತು. ಅದು ಸಲಗ. ಅದರ ವರ್ತನೆ ಯಾವ ಕ್ಷಣದಲ್ಲಿ ಹೇಗಿರುತ್ತದೆಂದು ಊಹಿಸಲೂ ಸಾಧ್ಯವಿಲ್ಲ. ಮನುಷ್ಯರನ್ನು ಕಂಡಾಗ ಅಟ್ಟಿಸಿಕೊಂಡು ಬರುವ ಮದ ಅದಕ್ಕೆ. ಆನೆ ಎದುರಾದರೆ ನೇರವಾಗಿ ಓಡದೆ ಅಡ್ಡಾದಿಡ್ಡಿ ಓಡಬೇಕು. ಬಿದಿರ ಮಳೆ ಸಿಕ್ಕರೆ ಅದರ ಸುತ್ತು ಓಡುವುದು ಎಷ್ಟೋ ಕ್ಷೇಮ ಎಂದು ಅವನು ಅವನಂತೆ ಕಾಡು ನುಗ್ಗುವವರಿಗೆ ಹೇಳಿದ್ದಿದೆ. ಆನೆ ಎದುರಾದರೆ ಓಡಿಯೋ, ಮಂಗನಂತೆ ಮರ ಹತ್ತಿಯೋ ಬಚಾವಾದೇನು ಎಂಬ ಧೈರ್ಯವೂ ಅವನಲ್ಲಿತ್ತು. ಆದರೆ ಆನೆಯ ಎರಡು ಬೃಹತ್ ದಂತಗಳು ಅವನ ತಲೆ ತಿನ್ನತೊಡಗಿದವು.

ಬಹಳ ದೂರದ ಕಾಡಲ್ಲಿ ದೊಡ್ಡ ಮೀಸೆಯ ಕಾಡುಗಳ್ಳನೊಬ್ಬ ಗ್ಯಾಂಗುಕಟ್ಟಿ ಆನೆಗಳನ್ನು ಕೊಂದು ದಂತ ಮಾರಿ ಕೋಟಿಗಟ್ಟಲೆ ಸಂಪಾದಿಸಿದ್ದು, ಯಾವನೋ ಸಿನಿಮಾ ನಟನನ್ನು ಹೊತ್ತೊಯ್ದು ಗಂಟು ಹೆಚ್ಪಿಸಿದ್ದು, ಹಳೆ ಮಂತ್ರಿಯೊಬ್ಬನನ್ನು ಕೊಂದು ಹಾಕಿದ್ದು ಅವನಿಗೆ ಟ್ರಾನ್ಸಿಸ್ಟರ್ ಕೇಳಿ ಗೊತ್ತಿತ್ತು. ಅವನೆಂದಿಗೂ ಆಕಾಶವಾಣಿಯ ಬೆಳಗ್ಗಿನ ಪ್ರದೇಶ ಸಮಾಚಾರ ಮತ್ತು ರಾತ್ರೆಯ ವಾರ್ತೆ ತಪ್ಪಿಸಿಕೊಂಡವನಲ್ಲ. ಆ ದೊಡ್ಡ ಮೀಸೆಯ ಕಳ್ಳನನ್ನು ಹಿಡಿಯಲು ಪೋಲಿಸರು ಏನೆಲ್ಲಾ ಪ್ರಯತ್ನ ಮಾಡಿದರೂ ಅವನು ಅದು ಹೇಗೋ ಬಚಾವಾಗಿ ತನ್ನ ಪರಾಕ್ರಮ ತೋರಿಸುತ್ತಲೇ ಇದ್ದ. ಅವನ ಖಾಯಂ ಕಾಡಲ್ಲಿ ದಂತವಿರುವ ಆನೆಗಳೆಲ್ಲಾ ಮುಗಿದು ಅವನೀಗ ದಂತವಿರುವ ಆನೆಗಳಿಗಾಗಿ ಹೊಸ ಕಾಡುಗಳಲ್ಲಿ ಹುಡುಕಾಟ ನಡೆಸುತ್ತಿದ್ದಾನೆಂದು ಕಪಿಲಳ್ಳಿ ಜನ ಮಾತಾಡಿಕೊಳ್ಳುತ್ತಿದ್ದರು. ಅವನೆಲ್ಲಾದರೂ ಕಪಿಲಳ್ಳಿ ಕಾಡಿಗೆ ಬಂದರೆ ದಂತಕ್ಕಾಗಿ ಈ ಗಣಪತಿಯನ್ನು ಗುಂಡಿಟ್ಟು ಕೊಲ್ಲುತ್ತಾನೆ. ಬದುಕಿಗಾಗಿ ಹಗಲಿಡೀ ಕಾಡು ಅಲೆಯುವ ತನ್ನನ್ನು ಪೋಲೀಸು ಮಾಹಿತಿದಾರನೆಂದು ತಪ್ಪು ತಿಳಿದು ಬಂದೂಕಿನಿಂದ ಸುಟ್ಬು ಬಿಡುತ್ತಾನೆ. “ಅಯ್ಯೋ ಗಣಪತಿ, ಆ ಕಳ್ಳನಿಂದ ನನ್ನನ್ನು ಕಾಪಾಡು. ನಿನ್ನನ್ನೂ ಕಾಪಾಡಿಕೋ” ಎಂದು ಆನೆ ಲದ್ದಿ ಕಂಡಾಗೆಲ್ಲಾ ಅವನು ಹೇಳಿಕೊಳ್ಳುತ್ತಿದ್ದ.

ನಿನ್ನೆ ಅವನು ಬೆತ್ತದ ಬಿಳಲುಗಳನ್ನು ತರಲು ಹೋಗುವಾಗ ಮೂಗಿಗೇನೋ ಅಸಹ್ಯ ವಾಸನೆ ರಾಚಿದಂತಾಗಿ ವಾಸನೆಯ ಮೂಲವನ್ನು ಶೋಧಿಸುತ್ತಾ ಹೋದರೆ ಅವನು ಕಂಡದ್ದೇನು? ಅವನ ಗಣಪತಿ ದೊಡ್ಡ ಬಂಡೆಯ ಹಾಗೆ ಬಿದ್ದುಕೊಂಡಿದೆ. ಕಾಡು ನೊಣಗಳು ಜಂಯ್ ಎಂದು ಅವನ ಮೈಮೇಲೆಲ್ಲಾ ಹಾರಾಡುತ್ತಿವೆ. ನರಿಗಳೋ, ಕಾಡಹಂದಿಗಳೋ ಅವನ ಬೃಹತ್ ಉದರದ ಮಾಂಸವನ್ನು ತಿಂದು ಹಾಕಿವೆ. ಇರುವೆ, ಹುಳ ಹುಪ್ಪಡಿಗಳು ಅವನ ದೊಡ್ಡ ದೇಹದಿಂದ ಪಾಲು ಪಡೆದುಕೊಳ್ಳುತ್ತಿವೆ. ಗಣಪತಿ ಸತ್ತು ಹೋಗಿದ್ದಾನೆ!

ಚನಿಯ ಮಲೆಕುಡಿಯ ಗಡಗಡ ನಡುಗಿಹೋದ. ಇದು ಖಂಡಿತವಾಗಿಯೂ ಆ ದೊಡ್ಡ ಮೀಸೆ ಕಾಡುಗಳ್ಳನದೇ ಕೆಲಸ. ಪಾಪದ ಗಣಪತಿಗೆ ಅವನಿಂದ ತನ್ನನ್ನೇ ರಕ್ಷಿಸಿಕೊಳ್ಳಲಾಗಲಿಲ್ಲ. ಇನ್ನು ನನ್ನನ್ನು ಕಾಪಾಡುವವರು ಈ ಪ್ರಪಂಚದಲ್ಲಿ ಯಾರೂ ಇಲ್ಲ ಎಂಬ ಭಾವನೆ ಮೂಡಿ ಹೆದರಿ ಕಂಗಾಲಾಗಿ ಅತ್ತಿತ್ತ ನೋಡಿದ. ಅವನಿಗೆ ಯಾರೂ ಕಾಣಿಸದಿದ್ದರೂ ಅಲ್ಲಲ್ಲಿರುವ ಬಂಡೆಗಳ ಎಡೆಯಿಂದ ಅಪರಿಚಿತ ಕಣ್ಣುಗಳು ತನ್ನನ್ನೇ ದುರುಗುಟ್ಟಿ ನೋಡುತ್ತಿರುವಂತೆ, ಕೋವಿಯ ನಳಿಗೆಗಳು ತನ್ನೆದೆಗೆ ಸರಿಯಾಗಿ ಗುರಿಯಿಟ್ಟು ಕುದುರೆಯ ದುಮಲು ಸಿದ್ಧವಾದಂತೆ ಭಾಸವಾಗಿ ಕಾಲುಗಳ ಶಕ್ತಿ ಉಡುಗುತ್ತಿದ್ದರೂ ಹಿಂದಕ್ಕೆ ನೋಡದೆ ಓಟಕಿತ್ತ. ಅಲ್ಲಲ್ಲಿ ಕಲ್ಲುಗಳಿಗೆ ಎಡವಿ, ಬೇರುಗಳಿಗೆ ಕಾಲು ಸಿಕ್ಕಿಕೊಂಡು ಬಿದ್ದ. ಮನೆಗೆ ಇನ್ನೂ ಒಂದು ಮೈಲಿಯಿದೆ ಎಂದಾದಾಗ ಸಿಕ್ಕ ತೋಡಲ್ಲಿ ನೀರು ಕುಡಿದು, ಸ್ವಲ್ಪ ಹೊತ್ತು ಕೂತು, ಅಲ್ಲೇ ಬಿದ್ದಿದ್ದ ಹೆಬ್ಬಲಸಿನ ಹಣ್ಣುಗಳಿಂದ ಒಂದಷ್ಟು ತೊಳೆ ಕಿತ್ತು ತಿಂದು, ಕಾಲುಗಳಿಗೆ ಬಲ ಬರಿಸಿಕೊಂಡು ನಿಧಾನವಾಗಿ ಮನೆ ಸೇರಿದ್ದ.

ರಾತ್ರೆ ಅವನಿಗೆ ಏನೆಲ್ಲಾ ಕನಸುಗಳು. ಒಂದೆಡೆಯಿಂದ ತಾನು ಗಣಪತಿ ಎಂದು ಹೆಸರಿಟ್ಟ ಆನೆ ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವಂತೆ, ಮತ್ತೊಂದೆಡೆಯಿಂದ ದೊಡ್ಡ ಮೀಸೆಯ ಕಾಡುಗಳ್ಳನ ಗ್ಯಾಂಗು ಕೋವಿಗಳಿಂದ ತನ್ನನ್ನು ಸುತ್ತುವರಿದಂತೆ, ಇನ್ನೊಂದೆಡೆಯಿಂದ ಸಾಕ್ಷಾತ್ ಗಣಪತಿ ದೇವರು ‘ಆನೆಯನ್ನು ನೀನೇ ಕೊಂದಿದ್ದೀಯಾ. ಅದಕ್ಕೆ ತಕ್ಕ ಶಿಕ್ಷೆ ಅನುಭವಿಸು’ ಎಂದು ಸೊಂಡಿಲು ಚಾಚಿ ಇವನನ್ನೆತ್ತಿ ಬಂಡೆಕಲ್ಲಿಗೆ ಅಪ್ಪಳಿಸಿದಂತೆ.

ಅವನು ಹೇಳಿದ್ದು ಕೇಳಿ ದೇವಕಿ ಇಷ್ಟೇನಾ ಎಂದುಕೊಂಡು, “ಸತ್ತ ಆನೆಯನ್ನು ನೀವು ಹತ್ತಿರಕ್ಕೆ ಹೋಗಿ ಸರಿಯಾಗಿ ನೋಡಿದ್ದೀರಾ?” ಎಂದು ಕೇಳಿದ್ದಕ್ಕೆ ಅವನು, “ಇಲ್ಲಪ್ಪಾ… ದೊಡ್ಡ ಮೀಸೆಯ ಕಾಡುಗಳ್ಳನ ನೆನಪಾಗಿ ಹೆದರಿ ಓಡಿಬಂದೆ” ಎಂದ. “ನಿಮ್ಮ ತಲೆಯೊಳಗೆ ಬೊಂಡು ಇರುತ್ತಿದ್ದರೆ ನೀವು ಹೀಗೆ ಹೆದರಿ ಓಡಿ ಬಂದು ಮಲಗಿಕೊಳ್ಳುತ್ತಿರಲಿಲ್ಲ. ಈಗ ನೀವು ನಿದ್ದೆ ಮಾಡಿ, ಬೆಳಗ್ಗೆ ನೋಡಿಕೊಳ್ಳುವಾ” ಎಂದು ಅವನನ್ನು ಎಳೆದುಕೊಂಡಳು. ಅವನು ಅವಳನ್ನು ತಬ್ಬಿ ಹಿಡಿದು ಎದೆಯಲ್ಲಿ ತಲೆಯಿಟ್ಟು ಬೆಳಗ್ಗಿನವರೆಗೆ ಹಾಯಾಗಿ ನಿದ್ರಿಸಿದ.

ಎದ್ದಾಗ ಅವನ ಜ್ವರ ಬಿಟ್ಟಿತ್ತು. ಬೆಳಗ್ಗಿನ ತಿಂಡಿಯಾಗಿ ಮಕ್ಕಳು ಶಾಲೆಗೆ ಹೋದ ಮೇಲೆ ದೇವಕಿಯೆಂದಳು, “ಹೊರಡಿ. ನಿಮ್ಮೊಟ್ಟಿಗೆ ನಾನೂ ಬರುತ್ತೇನೆ. ಆನೆ ವಾಸನೆ ಹೊಡಿಯುತ್ತಿದೆ ಎನ್ನುತ್ತೀರಿ. ಅದನ್ನು ದಂತಕ್ಕಾಗಿ ದೊಡ್ಡ ಮೀಸೆಯ ಕಾಡುಗಳ್ಳ ಕೊಂದಿದ್ದರೆ ಅದರ ದಂತ ಎಂದೋ ಕೊಂಡು ಹೋಗಿರುತ್ತಾನೆ. ಮತ್ತೇಕೆ ಹೆದರಿಕೆ? ನೀವು ಇಲ್ಲದ ಆತಂಕ ತುಂಬಿಕೊಂಡು ಜ್ವರ ಬರಿಸಿಕೊಳ್ಳುತ್ತೀರಿ. ನಾವಿಬ್ಬರೂ ಹೋಗಿ ಸರಿಯಾಗಿ ನೋಡಿ ಬಂದು ಬಿಡುವಾ.”

ಚನಿಯ ಮಲೆಕುಡಿಯನಿಗೆ ಧೈರ್ಯವೇ ಬರಲಿಲ್ಲ. “ಬೇಡ ದೇವಕೀ, ಇನ್ನು ಬೆತ್ತವೂ ಬೇಡ, ಜೇನೂ ಬೇಡ. ದೊಡ್ಡ ಮೀಸೆಯ ಕಾಡುಗಳ್ಳ ಒಂದೇ ಆನೆಗೆ ತೃಪ್ತನಾಗುತ್ತಾನೆಂದು ಭಾವಿಸಿದೆಯಾ? ಈ ಮೂರು ಪರ್ವತಗಳ ಇಳಿಜಾರುಗಳಲ್ಲಿರುವ ಕಾಡು, ಆಚೆ ಪೂರ್ವದ ಕಾಡು, ಈಚೆ ದಕ್ಷಿಣದ ಕಾಡು ಎಲ್ಲಾ ಸೇರಿದರೆ ಎಷ್ಟು ದೊಡ್ಡದಾಗುತ್ತದೆ ನೀನೇ ಯೋಚಿಸು. ಕಡಿಮೆಯೆಂದರೂ ಈ ಮೂರು ಕಾಡುಗಳಲ್ಲಿ ನೂರ ಐವತ್ತಕ್ಕಿಂತ ಹೆಚ್ಚೇ ಆನೆಗಳಿರಬಹುದು. ಇಂಥಾ ಕಾಡಿಗೆ ಜೀವದ ಮೇಲೆ ಆಸೆ ಇರುವ ಯಾವ ಪೋಲಿಸ ಬಂದಾನು, ಯಾವ ಗಾರ್ಡ ಬಂದಾನು? ನಾನೀಗ ಹೋದರೆ ನನ್ನನ್ನು ದೊಡ್ಡ ಮೀಸೆಯ, ಕಾಡುಗಳ್ಳ ಗುಂಡು ಹೊಡೆದು ಕೊಲ್ಲುತ್ತಾನೆ. ನಿನ್ನನ್ನು ಎತ್ತಿಕೊಂಡು ಹೋಗಿ ಇಟ್ಟುಕೊಳ್ಳುತ್ತಾನೆ. ನಮ್ಮ ಮಕ್ಕಳ ಗತಿಯೇನಾಗಬೇಕು?”

ದೇವಕಿ ಅವನ ಕೈ ಹಿಡಿದು ಅನುನಯದಲ್ಲಿ ಹೇಳಿದಳು. “ಇಲ್ಲದ್ದು ಯೋಚಿಸಬೇಡಿ. ನೀವು ತುಂಬಾ ಹೆದರಿದ್ದಕ್ಕೆ ಏನೆಲ್ಲಾ ಯೋಚನೆಗಳು ಬರುತ್ತಿವೆ. ಆನೆ ಸತ್ತು ಹೋದ ಮೇಲೆ ದೊಡ್ಡ ಮೀಸೆಯ ಕಾಡುಗಳ್ಳ ಅಲ್ಲೇ ಇರಲು ಅವನಿಗೇನು ಹುಚ್ಚೆ? ಸತ್ತ ಆನೆಯನ್ನೊಮ್ಮೆ ನಾನು ನೋಡಬೇಕು. ಆಗ ಎಲ್ಲಾ ಸಂಶಯ ನಿವಾರಣೆಯಾಗುತ್ತದೆ. ನೀವು ಇಲ್ಲವೆನ್ನಬಾರದು.”

ಚನಿಯ ಮಲೆಕುಡಿಯ ಉಪಾಯವಿಲ್ಲದೆ ಹೊರಟ. ಆನೆಯ ದೇಹ ಕೊಳೆತು ವಾಸನೆ ಅಷ್ಟು ದೂರಕ್ಕೇ ರಾಚುತ್ತಿತ್ತು. ಇಬ್ಬರು ಮೂಗು ಮುಚ್ಚಿಕೊಂಡು ಬಾಯಲ್ಲಿ ಉಸಿರಾಡುತ್ತಾ ಆನೆಯ ತಲೆಯ ಭಾಗಕ್ಕೆ ಬಂದರು. ದೇವಕಿ ಉದ್ದನೆಯ ಕೋಲಿನಿಂದ ತಲೆಯನ್ನು ಅತ್ತಿತ್ತ ಹೊರಳಿಸಲು ಯತ್ನಿಸಿದಳು. ಅವಳಿಂದ ಸಾಧ್ಯವಾಗದಾಗ ಚನಿಯ ಮಲೆಕುಡಿಯನೂ ಸೇರಿಕೊಂಡ. ನೋಡಿದರೆ ಆನೆಯ ಒಂದು ದಂತ ಕಾಣೆಯಾಗಿದೆ, ಒಂದು ಮಾತ್ರ ಉಳಿದುಕೊಂಡಿದೆ. “ನಿಮ್ಮ ದೊಡ್ಡ ಮೀಸೆ ಕಾಡುಗಳ್ಳನೇ ಇದನ್ನು ಕೊಂದಿದ್ದರೆ ಎರಡೂ ದಂತ ಹೊತ್ತೊಯ್ಯುತ್ತಿದ್ದ. ಇಲ್ಲಿ ಒಂದು ಮಾತ್ರ ಉಳಿದುಕೊಂಡಿದೆ. ಅಂದರೆ ನಿಮ್ಮ ಹಾಗೆ ಇಲ್ಲಿಗೆ ಬಂದವರು ಯಾರೋ ಒಂದನ್ನು ಕದ್ದುಕೊಂಡು ಹೋಗಿದ್ದಾರೆ. ನಿಮ್ಮ ಗಣಪತಿ ನಮ್ಮ ಭಾಗ್ಯಕ್ಕೆ ಇದೊಂದನ್ನು ಉಳಿಸಿದ್ದಾನೆ. ಮಾಂಸವೆಲ್ಲಾ ಕೊಳೆತು ಹೋಗಿರುವುದರಿಂದ ಸುಲಭವಾಗಿ ಬಂದೀತು. ಎಳೆದುಕೊಳ್ಳಿ ಅದನ್ನು.”

ಚನಿಯ ಮಲೆಕುಡಿಯ ಕೈ ಮುಗಿದು ಬೇಡ ದೇವಕೀ ಬೇಡವೇ ಬೇಡ ಅದು ಸಾಕ್ಷಾತ್ ಗಣಪತಿ, ಗಣಪತಿಯ ದಂತ ತೆಗೆದುಕೊಂಡು ಹೋದರೆ ನಮಗೆ ಒಳ್ಳೆಯದಾಗುವುದಿಲ್ಲ. ಆನೆಯನ್ನು ಕೊಂದವರ ಪಾಪ ನಮ್ಮ ಮೇಲೆ ಬರುತ್ತದೆ. ಮತ್ತೆ ನಿನಗೆ ಗೊತ್ತಲ್ಲ? ಆನೆಯ ದಂತ ಕೊಂಡು ಹೋದವರಿಗೆ ಜೈಲೇ ಗತಿ. ಬಿಡುಗಡೆಯೇ ಇಲ್ಲ. ಸತ್ತ ಆನೆಯನ್ನು ನೋಡಿಯೇ ನನಗೆ ಜ್ವರ ಬಂತು. ಇನ್ನು ದಂತ ಕೊಂಡು ಹೋದರೆ ನಾನು ಸತ್ತೇ ಹೋದೇನು.”

“ಈಗ ನಾವಿದನ್ನು ಕೊಂಡು ಹೋಗದಿದ್ದರೆ ಇನ್ನೊಬ್ಬ ಕೊಂಡು ಹೋಗುತ್ತಾನೆ. ಎಲ್ಲರೂ ನಿಮ್ಮ ಹಾಗೆ ಹೆದರುಪುಕ್ಕಲರೆದುಕೊಂಡಿದ್ದೀರಾ? ಇಷ್ಟು ದೊಡ್ಡ ಮೀಸೆ ಹೊತ್ತರೂ ಎಷ್ಟು ಹೆದರಿಕೆ ನಿಮಗೆ? ಇದು ತಾನಾಗಿ ಬಂದ ಭಾಗ್ಯ, ಈ ಕಾಡಿನಲ್ಲಿ ಯಾರು ನಮ್ಮನ್ನು ನೋಡುತ್ತಾರೆ? ನಿಮಗೆ ಧೈರ್ಯವಿಲ್ಲದಿದ್ದರೆ ಬೇಡ ನಾನಿದನ್ನು ಹೇಗಾದರೂ ಒಯ್ಯುವವಳೇ.”

ದೇವಕಿ ದಂತವನ್ನು ಎಳೆದಳು. ಮಾಂಸ ಕೊಳೆತು ಹೋಗಿದ್ದುದರಿಂದ ದಂತ ಸಲೀಸಾಗಿ ಕೈಗೆ ಬಂತು. ಇದನ್ನು ಹೀಗೇ ಮನೆಗೆ ಒಯ್ಯುವಾಗ ಯಾರಾದರೂ ಕಂಡರೆ? ಗಂಡ ಹೆಂಡತಿ ಸೇರಿ ಬೆತ್ತದ ಬಿಳಲುಗಳ ಸಣ್ಣದೊಂದು ಹೊರೆ ಮಾಡಿ ಮಧ್ಯದಲ್ಲಿ ದಂತವನ್ನಿರಿಸಿ ಹೊತ್ತು ಕೊಂಡು ನಿಧಾನವಾಗಿ ನಡೆದು ಮನೆ ಸೇರಿದರು. ದೇವಕಿ ದೊಡ್ಡ ಗೋಣಿ ಚೀಲವೊಂದರಲ್ಲಿ ದಂತವನ್ನು ತುರುಕಿ ಭದ್ರವಾಗಿ ಕಟ್ಟಿ ಅಟ್ಟದ ಮೂಲೆಯಲ್ಲಿಟ್ಟು ಕೆಳಗಿಳಿದಳು. ನೋಡ್ತಾ ಇರಿ ನಮ್ಮ ಅದೃಷ್ಟ ಇದರಿಂದ ಹೇಗೆ ಬದಲಾಯಿಸುತ್ತದೆಂದು. ಸ್ವಲ್ಪ ದಿನ ಕಳೆದ ಮೇಲೆ ಇದನ್ನು ಪೇಟೆಯಲ್ಲಿ ವಿಲೇವಾರಿ ಮಾಡಬೇಕು. ನೀವೊಬ್ಬರೇ ಹೋದರೆ ಕೆಲಸ ಕೆಡುತ್ತದೆ ನಮ್ಮ ಪಂಚಾಯತಿ ಅಧ್ಯಕ್ಷರಲ್ಲಿ ಗುಟ್ಟಾಗಿ ಮಾತಾಡಿ ಬಂದದ್ದರಲ್ಲಿ ಕಾಲು ಭಾಗ ಅವರಿಗೆ, ಉಳಿದದ್ದು ನಮಗೆ ಎಂದು ತೀರ್ಮಾನ ಮಾಡಿಕೊಂಡರಾಯಿತು.”

ಅಂದು ಸಂಜೆ ಇಬ್ಬರು ಅಪರಿಚಿತರು ಚನಿಯ ಮಲೆಕುಡಿಯನ ಮನೆಗೆ ಬಂದರು. ತಾವು ಮಫ್ತಿಯಲ್ಲಿರುವ ಪೋಲಿಸರೆಂದೂ ಕಪಿಲಳ್ಳಿಯ ಕಾಡಲ್ಲಿ ಸತ್ತು ಬಿದ್ದ ಆನೆಯ ಬಗ್ಗೆ ದೂರು ಬಂದದ್ದಕ್ಕೆ ಇಲಾಖೆ ತಮ್ಮನ್ನು ತನಿಖೆಗೆ ಕಳಿಸಿ ಕೊಟ್ಟಿದೆಯೆಂದೂ ತಮ್ಮ ಬಗ್ಗೆ ಹೇಳಿಕೊಂಡಾಗ ಚನಿಯ ಮಲೆಕುಡಿಯನ ಕೈಕಾಲು ಬಿದ್ದು ಹೋದಂತಾಯಿತು. ಜಗಲಿಯಲ್ಲೇ ಕೂತ ಮಫ್ತಿ ಪೋಲಿಸರಿಗೆ ದೇವಕಿ ಸುಟ್ಟ ಹಪ್ಪಳ ಮತ್ತು ಬಿಸಿಬಿಸಿ ಚಾಯ ಮಾಡಿಕೊಟ್ಟು ಸತ್ಕರಿಸಿದಳು. ಚನಿಯ ಮಲೆಕುಡಿಯನಿಂದಲೇ ಎರಡು ಬೀಡಿ ತೆಗೆದುಕೊಂಡು ಸೇದುತ್ತಿರುವಂತೆ ಸ್ವಲ್ಪ ಕುಳ್ಳಗಿರುವವನೆಂದ. ಆನೆಯನ್ನು ದಂತಕ್ಕಾಗಿಯೇ ಕೊಂದಿರುವ ಬಗ್ಗೆ ನಮಗೆ ಸಂಶಯವೇ ಇಲ್ಲ. ನಿಮ್ಮ ಮನೆ ಕಾಡಿಗೆ ತಾಗಿಕೊಂಡಂತೆ ಇರುವುದರಿಂದ ನಿಮ್ಮಿಂದ ಇಲಾಖೆಗೆ ನೆರವಾದೀತೆಂದು ನೇರವಾಗಿ ಇಲ್ಲಿಗೇ ಬಂದಿದ್ದೇವೆ. ಇಲಾಖೆಗೆ ಸಿಕ್ಕ ಖಚಿತ ವರ್ತಮಾನದ ಪ್ರಕಾರ ಇದು ಆ ದೊಡ್ಡ ಮೀಸೆಯ ಕಾಡುಗಳ್ಳನದೇ ಕೆಲಸ. ಆನೆಯ ಪೋಸ್ಟ್ ಮಾರ್ಟಂ ಆದ ಮೇಲೆ ಅದರ ಮರಣದ ನಿಜವಾದ ಕಾರಣ ಗೊತ್ತಾಗುತ್ತದೆ. ಏನಾದರೂ ನೀವು ಎಚ್ಚರಿಕೆಯಿಂದ ಇರಬೇಕು. ಇದು ಅವನದ್ದೇ ಕೆಲಸವೆಂದಾದರೆ ಅವನು ಎರಡೂ ದಂತ ಒಯ್ದಿರುತ್ತಾನೆ.”

ಚನಿಯ ಮಲೆಕುಡಿಯನಾಗ, “ಇದು ಅವನ ಕೆಲಸವಲ್ಲವೇ ಅಲ್ಲ” ಎಂದವನು ತನ್ನ ತಪ್ಪಿನ ಅರಿವಾಗಿ ನಾಲಿಗೆ ಕಚ್ಚಿಕೊಂಡ ತಕ್ಷಣ ಎದ್ದು ನಿಂತ ಎತ್ತರದವ ಚನಿಯ ಮಲೆಕುಡಿಯನ ಕಾಲರ್ ಹಿಡಿದೆತ್ತಿ ಕೆನ್ನೆಗೊಂದು ಲಾಟಾಲನೆ ಬಿಗಿದು, “ಕಪಿಲಳ್ಳಿಗೆ ಬರುವಾಗಲೇ ಇದು ನಿನ್ನದೇ ಕೆಲಸ ಇರಬೇಕೆಂದು ನಮಗೆ ಅಂದಾಜು ಸಿಕ್ಕಿತ್ತು. ಈಗ ನಿಜ ಬೊಗಳಿದ್ದಿ. ಬೋಳಿಮಗ್ನೆ, ಎಲ್ಲಿಟ್ಟಿದ್ದೀಯಾ ಹೇಳು, ಈಗಲೇ ಎರಡು ದಂತಗಳನ್ನು ತಂದೊಪ್ಪಿಸಿದಿಯೋ ಬದುಕಿದೆ. ಇಲ್ಲದಿದ್ದರೆ ನಿನ್ನನ್ನು ಗುಂಡಿ ತೆಗೆದು ಹೂತು ಬಿಡುತ್ತೇನೆ” ಎಂದು ಅಬ್ಬರಿಸಿದ. ಆರಂಭದಲ್ಲಿ ಅಷ್ಟು ನೈಸಾಗಿ ಮಾತಾಡಿ ತಾನು ಕೊಟ್ಟ ಹಪ್ಪಳ ತಿಂದು ಚಾ ಕುಡಿದವರು ಗಂಡನ ಬೆಪ್ಪುತನಕ್ಕೆ ಹೀಗೆ ತಿರುಗಿ ಬಿದ್ದುದನ್ನು ನೋಡಿ ಕಂಗಾಲಾದ ದೇವಕಿ, “ನಿಲ್ಲಿಸಿ….. ನಿಲ್ಲಿಸಿ….. ಇದೇನು ನೀವು ಮಾಡ್ತಿರೋದು. ನಮ್ಮಲ್ಲಿ ದಂತ ಎಲ್ಲಿಂದ ಬರಬೇಕು” ಎನ್ನುತ್ತಾ ಅಡ್ಡ ಬಂದಳು. ತಕ್ಷಣ ಕುಳ್ಳ ಪೋಲಿಸ ಅವಳನ್ನು ಅವುಚಿ ಹಿಡಿದುಕೊಂಡು, “ಮಹಾಪತಿವ್ರತೆ ಸಾವಿತ್ರಿ ಸತ್ಯವಾನನನ್ನು ಉಳಿಸಿಕೊಳ್ಳಲು ಬರುತ್ತಿದ್ದಾಳೆ. ಆನೆಯನ್ನು ಕೊಂದದ್ದು ದೊಡ್ಡ ಮೀಸೆಯ ಕಾಡುಗಳ್ಳನ ಕೆಲಸವಲ್ಲವೆಂದು ನಿನ್ನ ಗಂಡ ಬೊಗಳಿದ್ನಲ್ಲಾ? ಅದರ ಅರ್ಥ ಇವನಿಗೆ ಆನೆಯನ್ನು ಕೊಂದವರು ಯಾರೆಂದು ಗೊತ್ತಿದೆಯೆಂದು ತಾನೆ? ಇವನನ್ನು ಉಳಿಸಿಕೊಳ್ಳಬೇಕೆಂದರೆ ಆ ದಂತಗಳನ್ನು ತಂದುಕೊಡು. ಇಲ್ಲದಿದ್ದರೆ ನಿನ್ನನ್ನು ಹೀಗೇ ಎತ್ತಿಕೊಂಡು ಹೋಗಿ ಇಲ್ಲೇ ಒಳಗೆ ನಿನ್ನ ಗಂಡನ ಕಣ್ಣೆದುರೇ ಕೆಡವಿಕೊಳ್ತೇನೆ” ಎಂದ.

ಎತ್ತರದ ಪೋಲಿಸನ ಏಟಿಗೆ ತತ್ತರಿಸಿ ಹೋಗಿದ್ದ ಚನಿಯ ಮಲೆಕುಡಿಯ ತನ್ನ ಕಣ್ಣೆದುರೇ ನಡೆಯಬಹುದಾದ ಅಕೃತ್ಯವನ್ನು ನೆನೆದು ಕಂಗಾಲಾಗಿ, “ದಮ್ಮಯ್ಯ… ಅವಳಿಗೇನೂ ಮಾಡಬೇಡಿ. ಒಂದು ನಿಮಿಷ ನಿಲ್ಲಿ” ಎಂದು ಕೈಮುಗಿದು ದೇವಕಿಗೆ ಹೇಳಿದ. “ದೇವಕೀ, ನಾನು ಹೇಳಿದ್ದೆ ನಿನಗೆ, ಅದು ಗಣಪತಿ ಅಂತ. ಅದರ ದಂತ ಮನೆಗೆ ತಂದರೆ ಉದ್ದಾರವಾಗೋದಿಲ್ಲ ಅಂತ. ನೀನು ಕೇಳಲಿಲ್ಲ. ಈಗ ನೋಡು ಇಲ್ಲಿಯವರೆಗೆ ಬಂತು. ಇನ್ನೂ ಏನೇನಾಗ್ಬೇಕೂಂತ ಕಾಯ್ತಿದ್ದೀಯಾ? ತಂದ್ಕೋಡು ಅದನ್ನು” ಎಂದವನೇ “ನಮ್ಮನ್ನು ಬಿಡಿ” ಎಂದು ಮಫ್ತಿ ಪೋಲಿಸರನ್ನು ಯಾಚಿಸಿದ. ಮಫ್ತಿ ಪೋಲಿಸರು ಇಬ್ಬರನ್ನೂ ಬಿಟ್ಟರು. ಚನಿಯ ಮಲೆಕುಡಿಯ ಸುಧಾರಿಸಿಕೊಂಡು ಹೇಳಿದ. “ನೋಡಿ ಕಪಿಲೇಶ್ವರನ ಮೇಲೆ ಆಣೆ ಮಾಡಿ ಸತ್ಯ ಹೇಳುತ್ತಿದ್ದೇನೆ. ನಿನ್ನೆ ನಾನು ಕಾಡಿಗೆ ಹೋದಾಗ ಅಸಹ್ಯ ವಾಸನೆ ಬಂದು ಇದೇನೆಂದು ಹುಡುಕುತ್ತಾ ಹೋದರೆ ಆನೆ ಸತ್ತು ಬಿದ್ದಿತ್ತು. ನಾನು ಇದು ದೊಡ್ಡ ಮೀಸೆಯ ಕಾಡುಗಳ್ಳನದೇ ಕೆಲಸವೆಂದು ವಿಪರೀತ ಭಯದಿಂದ ಓಡಿ ಬಂದುಬಿಟ್ಟೆ. ಇವತ್ತು ಬೆಳಿಗ್ಗೆ ದೇವಕಿಯೇ ನನ್ನ ಹೆದರಿಕೆ ದೂರ ಮಾಡಲು ಅಲ್ಲಿಗೆ ನನ್ನನ್ನು ಕರಕೊಂಡು ಹೋದದ್ದು. ನಮಗೆ ಸಿಕ್ಕಿದ್ದು ಒಂದೇ ದಂತ ನಾವದನ್ನು ತಂದದ್ದು ನಿಜ. ದೊಡ್ಡ ಮೀಸೆಯ ಕಾಡುಗಳ್ಳನೇ ಆನೆಯನ್ನು ಹೊಂದಿದ್ದರೆ ಒಂದು ದಂತವನ್ನು ಯಾಕೆ ಉಳಿಸುತ್ತಿದ್ದ? ನನಗಿಂತ ಮೊದಲು ಆನೆಯನ್ನು ನೋಡಿದವರು ಯಾರೋ ಒಂದು ದಂತ ಕೊಂಡುಕೊಂಡು ಹೋಗಿರಬೇಕು. ಅದಕ್ಕೇ ನಾನೆಂದದ್ದು ಇದು ದೊಡ್ಡ ಮೀಸೆಯ ಕಾಡುಗಳ್ಳನ ಕೆಲಸವಲ್ಲವೆಂದು.”

ಕುಳ್ಳ ಪೋಲಿಸನೆಂದ. “ನೀನು ಕತೆ ಕಟ್ಟುವುದು ಬೇಡ. ಒಂದು ದಂತ ಕೊಂಡು ಹೋದವರು ಇನ್ನೊಂದನ್ನು ಚನಿಯ ಮಲೆಕುಡಿಯ ಉದ್ಧಾರವಾಗಲೆಂದು ಅಲ್ಲಿ ಬಿಟ್ಟು ಹೋಗಲು ಅವರೇನು ನಿನ್ನ ಮಾವಂದಿರೆ? ಸರಿ, ಈಗ ಇರುವುದನ್ನು ಒಮ್ಮೆ ನೋಡುವಾ.” ದೇವಕಿ ತಂದಿಟ್ಟ ಗೋಣಿಕಟ್ಟನ್ನು ಬಿಚ್ಚಿ ಚನಿಯ ಮಲೆಕುಡಿಯ ದಂತವನ್ನು ಪೋಲಿಸರಿಗೆ ತೋರಿಸಿದ. ಅವರದನ್ನು ಮತ್ತೆ ಗೋಣಿ ಚೀಲದಲ್ಲೇ ಇರಿಸಿ ಭದ್ರವಾಗಿ ಕಟ್ಟಿಸಿ ವಶಕ್ಕೆ ತೆಗೆದುಕೊಂಡರು. ಕುಳ್ಳ ಪೋಲಿಸ ಮಾತು ಮುಂದುವರಿಸಿದ. “ಒಂದು ದಂತ ತಂದುಕೊಟ್ಟಿದ್ದೀರಿ. ಇನ್ನೊಂದು ದಂತ ಎಲ್ಲಿದೆಯೆಂದು ಹೇಳಬೇಕಾದವರು ನೀವೇ, ಆನೆ ಸತ್ತದ್ದು ಹೇಗೆಂದು ಪೋಸ್ಟ್ ಮಾರ್ಟಂ ಮಾಡಿ ಗೊತ್ತಾದ ಮೇಲೆ ನಮ್ಮ ತನಿಖೆ ಮುಂದುವರಿಯುತ್ತದೆ. ಗುಂಡೇಟಿನಿಂದ ಸತ್ತಿದ್ದರೆ ಖಂಡಿತವಾಗಿ ಅದು ದೊಡ್ಡ ಮೀಸೆಯ ಕಾಡುಗಳ್ಳನದೇ ಕೆಲಸ, ವಿಷಪ್ರಾಶನದಿಂದ ಸತ್ತಿದ್ದರೆ ಡವುಟ್ಟು ಬರುವುದು ನಿಮ್ಮಿಬ್ಬರ ಮೇಲೆಯೇ. ಇನ್ನು ಹೆಣ್ಣಾನೆಗಾಗಿ ನಡೆದ ಜಗಳದಲ್ಲಿ ಸತ್ತಿದ್ದರೆ ಆನೆಯನ್ನು ಕೊಂದ ಕೇಸು ನಿಮ್ಮ ಮೇಲೆ ಬರುವುದಿಲ್ಲ. ಆದರೆ ದಂತದ ಅಪಹರಣ ಕೇಸಿನಿಂದ ನೀವು ಬಚಾವು ಆಗುವಂತಿಲ್ಲ. ನೀವು ತಂದದ್ದು ಒಂದೇ ದಂತ ಎಂದು ಸಾಧಿಸುತ್ತೀರಿ. ನೋಡಿದರೆ ಇದು ಇಲ್ಲಿ ಇತ್ಯರ್ಥವಾಗುವ ಹಾಗೆ ಕಾಣುವುದಿಲ್ಲ. ಮನೆಗೆ ಬೀಗ ಹಾಕಿ ಹೊರಡಿ, ಹಸಿರಂಗಡಿ ಪೋಲಿಸು ಸ್ಟೇಶನ್ನಿನಲ್ಲಿ ನಿಮ್ಮನ್ನು ಸಾಹೇಬ್ರು ಲಾಕಪ್ಪಿಗೆ ಹಾಕಿ ವಿಚಾರಣೆ ನಡೆಸಿ ಸ್ಟೇಟುಮೆಂಟು ರೆಡಿಯಾಗಿ ನೀವಿಬ್ಬರು ರುಜು ಮಾಡಿದ ಮೇಲೆ ಮ್ಯಾಜಿಸ್ಟ್ರೇಟರ ಎದುರು ನಿಮ್ಮನ್ನು ಪ್ರೊಡ್ಯೂಸ್ ಮಾಡುತ್ತೇವೆ. ಅವರು ಕಡಿಮೆಯೆಂದರೂ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಆರ್ಡರು ಮಾಡಿಯಾರು. ಅದಾಗಿ ಕೋರ್ಟಲ್ಲಿ ನಿಮ್ಮ ವಿಚಾರಣೆಯಾದ ಮೇಲೆಯೇ ನೀವು ತಪ್ಪಿತಸ್ಥರೋ, ಅಲ್ಲವೋ ಎನ್ನುವುದು ತೀರ್ಮಾನವಾಗುವುದು. ಏನಿಲ್ಲವೆಂದರೂ ಇಷ್ಟೆಲ್ಲಾ ಮುಗಿಯಲು ಎರಡು ಮೂರು ವರ್ಷ ಹಿಡಿದೀತು.”

ಕುಳ್ಳ ಪೋಲಿಸನ ಮಾತು ಕೇಳಿ ದೇವಕಿ ಗಡಗಡಗಡ ನಡುಗಿ ಹೋದಳು. ಮನೆಗೆ ಬಾಗಿಲು ಹಾಕಿ ಹೊರಟು ಬಿಟ್ಟರೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಇನ್ನು ಹಸಿರಂಗಡಿ ಸ್ಟೇಶನ್ನಿನಲ್ಲಿ ನಮ್ಮನ್ನು ಎಷ್ಟು ದಿನ ಲಾಕಪ್ಪಿನಲ್ಲಿ ಹಾಕ್ತಾರೋ? ಹೆಣ್ಣು ಹೆಂಗುಸಾದ ತನ್ನನ್ನು ಕುಳ್ಳ ಪೋಲಿಸ ಇಲ್ಲೇ ತನ್ನ ಗಂಡನದುರೇ ಹೀಗೆ ನಡೆಸಿಕೊಂಡ. ಇನ್ನು ಲಾಕಪ್ಪಿಗೆ ಹಾಕಿದರೆ ಅಲ್ಲಿ ಯಾರಾರು ಏನೇನು ಮಾಡುತ್ತಾರೋ? ಅದಾಗಿ ನ್ಯಾಯಾಂಗ ಬಂಧನವಂತೆ. ಮತ್ತೆ ಕೋರ್ಟು ವಿಚಾರಣೆ ಇದಕ್ಕೆಲ್ಲಾ ಹಣ ತರುವುದು ಎಲ್ಲಿಂದ? ಕೊನೆಗೆ ಅವಳು ಧೈರ್ಯಮಾಡಿ ಹೇಳಿದಳು. “ನೀವಿಬ್ಬರು ನನ್ನ ಅಣ್ಣಂದಿರೆಂದು ತಿಳಿದುಕೊಂಡು ಬೇಡಿಕೊಳ್ಳುತ್ತಿದ್ದೇನೆ. ನಮ್ಮ ತಪ್ಪನ್ನು ನೀವು ಕ್ಷಮಿಸಬೇಕು. ನಾವು ನೋಡುವಾಗ ಇದ್ದ ಒಂದೇ ದಂತವನ್ನು ನಾವು ತಂದದ್ದು ನಿಜ. ಇನ್ನೊಂದನ್ನು ಯಾರೋ ಕೊಯಿದುಕೊಂಡು ಹೋಗಿರಬೇಕು. ಏನೋ ಗಡಿಬಿಡಿಯಾಗಿ ಇದೊಂದನ್ನು ಉಳಿಸಿರಬೇಕು. ಈ ತಾಳಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾವು ಆನೆಯನ್ನು ಕೊಂದಿಲ್ಲ. ಎರಡು ದಂತ ತಂದಿಲ್ಲ. ಈ ಮಾತನ್ನು ಬೇಕಿದ್ದರೆ ಕಪಿಲೇಶ್ವರನ ನಡೆಯಲ್ಲಿ ನಿಂತು ಪ್ರಮಾಣ ಮಾಡಿ ಹೇಳುತ್ತೇನೆ. ಆನೆಯಲ್ಲಿ ಗಣಪತಿಯನ್ನು ಕಾಣುವವರು ಆನೆಯನ್ನು ಕೊಲ್ಲುತ್ತಾರಾ? ನಾವು ಬಡವರು ನಿಜ. ಆದರೆ ಕಳ್ಳರಲ್ಲ. ಈ ದಂತ ತೆಗೆದುಕೊಂಡು ಹೋಗಿ, ಎಲ್ಲೂ ನಮ್ಮ ಹೆಸರನ್ನು ಹೇಳಿ ಮಕ್ಕಳನ್ನು ಬೀದಿಪಾಲು ಮಾಡಬೇಡಿ.”

ಕುಸಿದು ಕುಳಿತು ಮುಸಿಮುಸಿ ಅಳುತ್ತಿದ್ದ ದೇವಕಿಯನ್ನು ನೋಡಿ ಪೋಲಿಸರು ಕರಗಿದರು. ಕುಳ್ಳ ಪೋಲಿಸ ಹೇಳಿದ. “ನಾವೇನೋ ನಿನ್ನ ಮಾತು ನಂಬುತ್ತೇವೆ. ಆದರೆ ಸಾಹೇಬ್ರು ಕೇಳ್ತಾರಾ? ಅವರನ್ನು ಹಣದಿಂದಲೇ ಮಾತಾಡಿಸಬೇಕು. ಕಡಿಮೆಯೆಂದರೂ ಐದುಸಾವಿರ ಬೇಕಾಗುತ್ತದೆ.”

ಚನಿಯ ಮಲೆಕುಡಿಯ ಒಳಹೋಗಿ ಟ್ರಂಕನ್ನು ಜಾಲಾಡಿದ. ಸಿಕ್ಕ ಆರುನೂರು ಚಿಲ್ಲರೆ ತಂದುಕೊಟ್ಟ. ದೇವಕಿ ವೆಂಕಟ್ರಮಣ ದೇವರಿಗೆಂದು ಇರಿಸಿದ್ದ ಮುಡಿಪ್ಪು ಒಡೆದು ಚಿಲ್ಲರೆ ಲೆಕ್ಕಮಾಡಿ ಮುನ್ನೂರ ಎಪ್ಪತ್ತು ತಂದುಕೊಟ್ಟಳು. ಹಣವನ್ನು ತೆಗೆದುಕೊಂಡ ಕುಳ್ಳ ಪೋಲಿಸ “ಇದು ನಾವಿಬ್ಬರು ಪಟ್ಟ ಕಷ್ಟಕ್ಕಾಯಿತು. ಸಾಹೇಬ್ರಿಗೆ ಇದರಲ್ಲಿ ಕೊಡಲು ಏನು ಉಳಿಯುತ್ತದೆ?” ಎಂದು ವರಸೆ ಬದಲಿಸಿದ. ದೇವಕಿ ಬೇಡಿಕೊಂಡಳು. ಇನ್ನು ನಮ್ಮಲ್ಲಿ ಏನೂ ಉಳಿದಿಲ್ಲ. ನಿಮ್ಮ ಕಾಲಿಗೆ ಬೀಳುತ್ತೇನೆ. ನಮ್ಮನ್ನು ಬಿಟ್ಟುಬಿಡಿ.”

ಮಫ್ತಿ ಪೋಲಿಸರು ಎದ್ದು ಹೋಗುವ ಸೂಚನೆಯೇ ಕಾಣಲಿಲ್ಲ. ಚನಿಯ ಮಲೆಕುಡಿಯ ಮತ್ತು ದೇವಕಿ ಒಳಹೋಗಿ ಸ್ವಲ್ಪ ಹೊತ್ತು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ದೇವಕಿ ಹೊರಬರುವಾಗ ಅವಳ ಕೈಯಲ್ಲಿ ಬಂಗಾರದ ನೆಕ್ಲೇಸು ಮತ್ತು ಎರಡು ಬಳೆಗಳಿದ್ದವು ಅವನ್ನು ಕುಳ್ಳ ಪೋಲಿಸರ ಕೈಗೆ ಹಾಕಿ ದೇವಕಿ ಕಂಬನಿ ಮಿಡಿದಳು. ಇದು ಮಗಳ ಮದುವೆಗೆಂದು ಮಾಡಿಟ್ಟ ಚಿನ್ನ, ಇನ್ನು ಕೊಡಲಿಕ್ಕೆ ಈ ತಾಳಿಯೊಂದನ್ನು ಬಿಟ್ಟು ಬೇರೇನೂ ಉಳಿದಿಲ್ಲ.”

ಇಷ್ಟಾಗುವಾಗ ಮಕ್ಕಳು ಶಾಲೆಯಿಂದ ಬಂದಿದ್ದರು. ಸುತ್ತ ಕತ್ತಲು ಕವಿದಿತ್ತು. ಮಕ್ಕಳಿಗೆ ಸಂಗತಿಯೇನೆಂದೇ ಅರ್ಥವಾಗದೆ ಪೋಲಿಸರನ್ನು ಪಿಳಿಪಿಳಿ ನೋಡುತ್ತಿದ್ದರು. ಕುಳ್ಳ ಪೋಲಿಸ ಅವರ ಬೆನ್ನು ತಟ್ಟಿ, “ಹೆದರಬೇಡಿ ಮಕ್ಕಳೇ, ನಾವು ನಿಮ್ಮ ಮಾವಂದಿರು. ಇಲ್ಲೊಂದು ಸಣ್ಣ ತಪ್ಪಾಗಿ ಹೋಗಿದೆ. ಅದು ಬೇರೆಯವರಿಗೆ ಗೊತ್ತಾದರೆ ನಿಮ್ಮ ತಂದೆ, ತಾಯಿ ಜೈಲಲ್ಲಿ ಇರಬೇಕಾಗುತ್ತದೆ. ಅವರನ್ನು ಕಾಪಾಡಲು ಬಂದವರು ನಾವು. ಇಲ್ಲಿಗೆ ನಾವು ಬಂದದ್ದನ್ನು ಇಲ್ಲಿ ನಡೆದದ್ದನ್ನು ಯಾರಿಗೂ ಹೇಳಬೇಡಿ. ಹೇಳಿದರೆ ಇವರಿಬ್ಬರಿಗೆ ಜೈಲೇ ಗತಿ” ಎಂದು ಐದರ ನೋಟುಗಳನ್ನು ಅವರ ಕೈಗಿರಿಸಿದ. ದೇವಕಿ ಕೊಟ್ಟ ಚಿನ್ನವನ್ನು ಜೇಬಿಗೆ ಸೇರಿಸಿ, “ಯಾವ ಕಾರಣಕ್ಕೂ ದಂತದ ಬಗ್ಗೆಯಾಗಲೀ, ನಮ್ಮ ಬಗ್ಗೆಯಾಗಲೀ ಯಾರಲ್ಲೂ ಬಾಯಿ ಬಿಡಬೇಡಿ, ಬಿಟ್ಟರೆ ಮತ್ತೆ ಲಾಕಪ್ಪು, ನ್ಯಾಯಾಂಗ ಬಂಧನ ಮತ್ತು ಕೋರ್ಟು ವಿಚಾರಣೆಯೇ ಗತಿ, ನಾವಿದನ್ನು ಸಾಹೇಬ್ರಿಗೆ ಕೊಟ್ಟು ಕೇಸನ್ನು ಮುಚ್ಚಿ ಹಾಕುತ್ತೇವೆ” ಎಂದ. ದಂತದ ಗೋಣಿಯನ್ನು ದೊಡ್ಡ ಪೋಲಿಸ ಎತ್ತಿಕೊಂಡ. ಇಬ್ಬರೂ ಕತ್ತಲಲ್ಲಿ ಕಣ್ಮರೆಯಾದ ಮೇಲೆ ದೇವಕಿ ಮಕ್ಕಳಿಬ್ಬರನ್ನೂ ತಬ್ಬಿಕೊಂಡು “ದೇವರೇ” ಎಂದು ಕಣ್ಣೀರು ಮಿಡಿದಳು.

ಮರುದಿನ ಮಧ್ಯಾಹ್ನ ಒಂದು ಲೋಡು ಖಾಕಿ ಡ್ರೆಸ್ಸಿನವರು, ಪಂಚಾಯತು ಅಧ್ಯಕ್ಷರು, ಕಾಡಿನ ದಾರಿ ಗೊತ್ತಿರುವ ಮಣ್ಣ ಮತ್ತು ತುಕ್ರ ಜೀಪಲ್ಲಿ ಬಂದಿಳಿದು ಚನಿಯ ಮಲೆಕುಡಿಯನ ಮನೆಯ ಮುಂದಿನಿಂದಲೇ ಕಾಡು ಹೊಕ್ಕರು. ಸಂಜೆಯಾಗುವಾಗ ಅದೇ ದಾರಿಯಾಗಿ ವಾಪಾಸಾಗಿ ಜೀಪು ಹತ್ತಿ ಹೊರಟು ಹೋದರು. ಆ ವರೆಗೆ ಅಂಗೈಯಲ್ಲಿ ಜೀವ ಹಿಡಿದುಕೊಂಡಿದ್ದ ಚನಿಯ ಮಲೆಕುಡಿಯ ಮತ್ತು ದೇವಕಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾದದ್ದು ಅವರು ಹೊರಟು ಹೋದ ಮೇಲೆಯೇ. ಚನಿಯ ಮಲೆಕುಡಿಯ ಆಗಾಗ, “ಅಯ್ಯೋ ಗಣಪತೀ….. ಇನ್ನೂ ನಮಗೇನೇನು ಇದೆಯಪ್ಪಾ?” ಎಂದು ಹೇಳಿಕೊಳ್ಳುತ್ತಲೇ ಇದ್ದ. ಮಫ್ತಿ ಪೋಲಿಸರ ಒರಟು ಮಾತುಗಳು, ಕೂಡಿಟ್ಟ ಹಣ, ಮಗಳು ದೊಡ್ಡವಳಾದ ಮೇಲೆ ಅವಳಿಗೆ ಹಾಕಿ ಚೆಂದ ನೋಡಲೆಂದು ಇರಿಸಿದ್ದ ಬಳೆ ಮತ್ತು ಮಾಲೆ ಯಾರ್ಯಾರ ಪಾಲಾಗಿ ಹೋದ ಶಾಕ್‌ನಿಂದ ಹೊರಬರಲಾಗದ ದೇವಕಿ ಚನಿಯ ಮಲೆಕುಡಿಯನನ್ನು ಹೇಗೆ ತಾನೇ ಸಮಾಧಾನಿಸಿಯಾಳು?

ಮರುದಿನ ಲೋಕಾಭಿರಾಮ ಮಾತಾಡಲು ಚನಿಯ ಮಲೆಕುಡಿಯನಲ್ಲಿಗೆ ಬಂದ ತಿಮ್ಮಣ್ಣ ಶೆಟ್ಟಿ ಮಾತಿನ ಮಧ್ಯೆ ಹೇಳಿದ. “ನಿಮಗೆ ಗೊತ್ತುಂಟಾ ಚನಿಯಣ್ಣ? ಕಾಡಿನಲ್ಲಿ ದೊಡ್ಡದೊಂದು ಆನೆ ಸತ್ತುಬಿದ್ದಿದೆಯಂತೆ. ಯಾರೋ ಪೋಲಿಸ್ ಕಂಪ್ಲೇಂಟು ಕೊಟ್ಟಿದ್ದಕ್ಕೆ ನಿನ್ನೆ ಒಂದು ಲೋಡು ಫಾರೆಸ್ಟರು, ಪೋಲಿಸರು ಬಂದು ನೋಡಿಕೊಂಡು ಹೋದ್ರಲ್ಲಾ? ಆನೆಯ ಎರಡೂ ದಂತ ಯಾರೋ ಎಗರಿಸಿಕೊಂಡು ಹೋಗಿದ್ದಾರಂತೆ. ಈ ವರೆಗೆ ಒಂದೂ ಸಿಕ್ಕಿಲ್ಲವಂತೆ. ಇದು ಆ ದೊಡ್ಡ ಮೀಸೆ ಕಾಡುಗಳ್ಳನದ್ದೇ ಕೆಲಸವಂತೆ. ಅವನನ್ನು ಹಿಡಿಯಲು ದೊಡ್ಡ ಮಿಲಿಟರಿಯೇ ಕಪಿಲಳ್ಳಿಗೆ ಬರುತ್ತದಂತೆ!”

ಚನಿಯ ಮಲೆಕುಡಿಯ ಮತ್ತು ದೇವಕಿ ಮುಖ ಮುಖ ನೋಡಿಕೊಂಡರು. ಅವರಿಗೆ ಇದು ದೊಡ್ಡ ಮೀಸೆಯ ಕಾಡುಗಳ್ಳನ ಕೆಲಸವಲ್ಲವೆಂದು ಗೊತ್ತು. ಆದರೆ ಹಾಗೆ ಹೇಳಿಯೇ ಅಲ್ಲವೇ ಅವರು ಒಂದು ದಂತದೊಂದಿಗೆ, ದುಡ್ಡು, ಚಿನ್ನ ಕಳಕೊಂಡದ್ದು. ಅಷ್ಟು ಜಾಣ್ಮೆಯಿಂದ ಮಾತಾಡಿ ದಂತದ ವಿಷಯ ಬಯಲಿಗೆಳೆದು ಬಂಗಾರ ಸಮೇತ ಅದನ್ನು ದೋಚಿಕೊಂಡು ಹೋದರಲ್ಲಾ, ಅವರು ಹಾಗಾದರೆ ಪೋಲಿಸರಲ್ಲ! ಅವರು ಯಾರು? ತಮಗಿಂತಲೂ ಮೊದಲೇ ಒಂದು ದಂತವನ್ನು ಒಯ್ದವರು ಯಾರು? ಮಫ್ತಿ ಪೋಲಿಸರಂತೆ ಬಂದವರೇ ಆನೆಯನ್ನು ಕೊಂದದ್ದೆ? ಯಾರಲ್ಲಿ ಕೇಳುವುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಚ್ಚು
Next post ಚುನಾವಣೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys