ಪ್ರಕರಣ ೩

ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು ಕೋಟನ್ನೂ, ಸರಿಗೆಯಿಲ್ಲದ ರುಮಾಲನ್ನೂ ಹಾಕಿಕೊಂಡಿದ್ದಾರೆ. ಅವರ ಪಕ್ಕದಲ್ಲಿ ಹೊಸದಾಗಿ ಪ್ರೊಬೇಷನರಿ ಅಸಿಸ್ಟೆಂಟ್ ಕಾಮಿಷನರ್ ಹುದ್ದೆಗೆ ಬಂದ ದಿವಾನರ ಆಳಿಯನೋ, ಕೌನ್ಸಿಲರ ಮಗನೋ ಎನ್ನುವಂತೆ ರಂಗಣ್ಣ ದಿವ್ಯವಾದ ಸರ್ಜ್ ಸೂಟನ್ನು ಧರಿಸಿ ಒಂದೂವರೆ ಅಂಗುಲದ ಭಾರಿ ಶೆಟ್ಟರ ಸರಿಗೆ ರುಮಾಲನ್ನು ಇಟ್ಟು ಕೊಂಡಿದ್ದಾನೆ. ಕೈ ಯಲ್ಲಿ ದಂತದ ಕೈಪಿಡಿಯ ಒಳ್ಳೆಯ ಹೊಳಪಿನ ಕರಿಯ ಬೆತ್ತ, ಅವನ ಇಬ್ಬರು ಸಣ್ಣ ಹುಡುಗರು ಒಳ್ಳೆಯ ಬಟ್ಟೆಗಳನ್ನು ಧರಿಸಿಕೊಂಡು ಪಕ್ಕದಲ್ಲಿ ಗಂಭೀರವಾಗಿ ನಿಂತಿದ್ದಾರೆ. ಹಳಬರಿಗೂ ಹೊಸಬರಿಗೂ ಸಂಭಾಷಣೆ ನಡೆಯುತ್ತಿದೆ. ಮೇಷ್ಟರುಗಳು ಅಲ್ಲಲ್ಲೇ ಗುಂಪು ಸೇರಿ ಮಾತುಗಳನ್ನಾಡುತ್ತಿದಾರೆ. ಹೊಸ ಇನ್ಸ್‍ಪೆಕ್ಟರ ಠೀವಿಯನ್ನು ನೋಡಿ ಬೆರಗಾಗಿದ್ದಾರೆ. ಕೆಲವರು ಕದೀಮರು, ’ಈ ಠೀವಿಯೆಲ್ಲ ಎರಡು ದಿನ. ಇಲ್ಲಿ ಬಹಳ ದಿನ ಈ ಇನ್‌ಸ್ಪೆಕ್ಟರು ಇರೋದಿಲ್ಲ’ ಎಂದು ಕಾಲಜ್ಞಾನ ಹೇಳುತ್ತಿದ್ದಾರೆ. ಹಳ್ಳಿಗಳ ಕಡೆಯಿಂದ ಬಂದ ಕೆಲವರು ಮೇಷ್ಟರುಗಳು ಕೈಯಲ್ಲಿ ನಿಂಬೇಹಣ್ಣುಗಳನ್ನು ಹಿಡಿದು ಕೊಂಡು ಆ ಇನ್ಸ್‍ಪೆಕ್ಟರುಗಳ ಬಳಿಗೆ ಹೋಗಿ ನಮಸ್ಕಾರ ಮಾಡಿ ಆ ಹಣ್ಣುಗಳನ್ನು ಕೊಡುತ್ತಿದಾರೆ. ಹಳೆಯ ಇನ್‌ಸ್ಪೆಕ್ಟರು ಆ ಮೇಷ್ಟುರುಗಳ ಯೋಗಕ್ಷೇಮವನ್ನು ವಿಚಾರಿಸುತ್ತ ಒಳ್ಳೆಯ ಮಾತು ಆಡುತ್ತಿದಾರೆ. ಆದರೆ ರಂಗಣ್ಣನಿಗೆ ಆ ಮಾತಿನ ಸರಣಿ ಮೆಚ್ಚಿಕೆಯಾಗಲಿಲ್ಲ. ‘ಒಳ್ಳೆಯದು ಹೋಗು, ನಿನಗೆ ಹೊಸಹಳ್ಳಿ ಗೇನೆ ವರ್ಗ ಮಾಡಿಕೊಡುವಂತೆ ಇವರಿಗೆ ಹೇಳುತ್ತೇನೆ.’ ‘ನಿನ್ನದೇನು ಅರಿಕೆ ? ಪ್ರಮೋಷನ್ ಬೇಕೆಂದು. ಆಗಲಿ, ಚೆನ್ನಾಗಿ ಕೆಲಸಮಾಡುತ್ತಾ ಇರು. ಸಾಹೇಬರು ಪ್ರಮೋಷನ್ ಕೊಡುತ್ತಾರೆ’ ಎಂದು ಮುಂತಾಗಿ ಮೇಷ್ಟರುಗಳನ್ನು ಏಕವಚನದಲ್ಲಿಯೇ ಆ ಇನ್ಸ್‍ಪೆಕ್ಟರ್ ಮಾತನಾಡಿಸುತ್ತಾರಲ್ಲ, ಉಪಾಧ್ಯಾಯರಿಗೆ ತಕ್ಕ ಗೌರವವನ್ನು ತೋರಿಸುವುದಿಲ್ಲವಲ್ಲ, ಜವಾನರಿಗಿಂತ ಕೀಳಾಗಿ ಹೀಗೆ ಸಂಬೊಧಿಸಬಹುದೇ? ಹಿಂದೆ ಭಾಭಾ ಸಾಹೇಬರು ಹಳ್ಳಿಯ ಸ್ಕೂಲುಗಳಿಗೆ ಭೇಟಿ ಕೊಡುತ್ತಿದ್ದಾಗ ಉವಾಧ್ಯಾಯರನ್ನು – ಆಗ ಅವರಿಗೆ ತಿಂಗಳಿಗೆ ಐದೇ ರುಪಾಯಿ ಸಂಬಳ – ಬಹಳ ಮರ್ಯಾದೆಯಿಂದ ಮಾತನಾಡಿಸುತ್ತಿದ್ದರೆಂಬುದನ್ನು ಈಗಲೂ ಜನರು ಹೇಳುತ್ತಾರೆ’- ಎಂದು ಮೊದಲಾಗಿ ಮನಸ್ಸಿನಲ್ಲೇ ಹೇಳಿಕೊಳ್ಳುತ್ತ ಚಿಂತಿಸುತ್ತಿದ್ದನು. ಆದ್ದರಿಂದ ಆ ಉಪಾಧ್ಯಾಯರು ತನಗೆ ಕೈ ಮುಗಿದಾಗ, “ಏನು ಮೇಷ್ಟರೆ? ಆರೋಗ್ಯವಾಗಿದ್ದೀರಾ? ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ? ಪಾಠ ಶಾಲೆಯಲ್ಲಿ ಎಷ್ಟು ಜನ ಮಕ್ಕಳಿದ್ದಾರೆ?’ ಎಂದು ಮರ್ಯಾದೆಯಿಂದ ಮಾತನಾಡಿಸಿದನು. ಸಾಮಾನ್ಯ ಪಂಚೆಯ ಹಳೇ ಇನ್‌ಸ್ಪೆಕ್ಟರು ಸರ್ಜಸೂಟಿನ ಹೊಸ ಇನ್ಸ್‍ಪೆಕ್ಟರನ್ನು ದುರುಗುಟ್ಟಿಕೊಂಡು ನೋಡುತ್ತ, ‘ಎಲ್ಲಿಯೋ ಎಳಸು. ಹೊಸದಾಗಿ ಕಣ್ಣು ಬಿಡುತ್ತಿದೆ’ ಎಂದು ಮನಸ್ಸಿನಲ್ಲಿಯೇ ಆಡಿಕೊಂಡರು.

ಸಭೆ ಸೇರಿತು. ವೇದಿಕೆಯ ಮೇಲೆ ಹೊಸಬರೂ ಹಳಬರೂ ಕುರ್ಚಿಗಳ ಮೇಲೆ ಕುಳಿತರು. ಪದ್ದತಿಯಂತೆ ದೇವರ ಸ್ತೋತ್ರ, ಹುಡುಗಿಯರಿಂದ ಹಾಡು, ಸ್ವಾಗತ ಪದ್ಯಗಳು ಮತ್ತು ಭಾಷಣಗಳು ಆದುವು. ಹಳೆಯ ಇನ್‌ಸ್ಪೆಕ್ಟರು ಉಪಾಧ್ಯಾಯರಿಗೆಲ್ಲ ದೊಡ್ಡದೊಂದು ಹಿತೋಪದೇಶವನ್ನು ಮಾಡಿದರು. ತರುವಾಯ ಹೊಸಬರು ಮಾತನಾಡಬೇಕೆಂದು ಉಪಾಧ್ಯಾಯರು ಪ್ರಾರ್ಥನೆ ಮಾಡಿಕೊಂಡರು. ಏನು ಮಾಡುವುದು? ಭಾಷಣಕ್ಕೆ ರಂಗಣ್ಣ ಸಿದ್ಧನಾಗಿ ಬಂದಿರಲಿಲ್ಲ. ನಾಲ್ಕು ಮಾತುಗಳನ್ನಾದರೂ ಹೇಳ ಬೇಕು. ಹಿಂದಿನ ಇನ್‌ಸ್ಪೆಕ್ಟರುಗಳಂತೆಯೇ ಕರುಣೆಯಿಂದ ಕಾಪಾಡಿಕೊಂಡು ಬರುವ ಭರವಸೆ ಕೊಡ ಬೇಕು. ಈಗ ನೋಡಿದರೇನೇ ಭಯವಾಗುತ್ತದೆ. ಮುಂದೆ ಹೇಗೆ ತಾನೆ ನಿಭಾಯಿಸುತ್ತೇವೊ ತಿಳಿಯದು – ಎಂದು ಕುಚೋದ್ಯದ ಕಾರ್ಯದರ್ಶಿ ಕೈ ಮುಗಿದುಕೊಂಡು ಹೇಳಿದನು. ಆಗ ರಂಗಣ್ಣನು ನಗುತ್ತ ಎದ್ದು ನಿಂತುಕೊಂಡು, ‘ಉಪಾಧ್ಯಾಯರನ್ನು ಕಂಡರೆ ನನಗೇನ ಭಯವಾಗುತ್ತದೆ. ಅದರಲ್ಲಿಯೂ ನಿಮ್ಮ ಕಾರ್ಯದರ್ಶಿಗಳಂಥ ಕದೀಮರನ್ನು ನಾನು ಹೇಗೆ ತಾನೆ ನಿಭಾಯಿಸುತ್ತೇನೆಯೋ ತಿಳಿಯದು. ಸದ್ಯ ನೀವುಗಳೆಲ್ಲ ಕರುಣೆಯಿಂದ ನನ್ನನ್ನು ಕಾಪಾಡಿ ಕೊಂಡು ಬರಬೇಕೆಂದು ಅರಿಕೆ ಮಾಡಿ ಕೊಳ್ಳುತ್ತೇನೆ’ ಎಂದು ಹೇಳಿದನು. ಕೂಡಲೇ ಸಭೆಯಲ್ಲಿ ಕರತಾಡನಗಳೂ ಹರ್ಷ ಸೂಚಕ ಧ್ವನಿಗಳೂ ತುಂಬಿ ಹೋದುವು. ಬಳಿಕ ನಾಲ್ಕು ಉಪಚಾರದ ಮಾತುಗಳನ್ನು ಹೇಳಿ ತನ್ನ ಕೈಲಾದಷ್ಟು ಮಟ್ಟಿಗೆ ಉಪಾಧ್ಯಾಯರ ಹಿತರಕ್ಷಣೆಯನ್ನು ಮಾಡುವುದಾಗಿಯೂ ಎಲ್ಲರೂ ತಂತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕೆಂದೂ ತಿಳಿಸಿದನು. ‘ಮುಖ್ಯವಾಗಿ, ಉಪಾಧ್ಯಾಯರಿಗೆ ಹೇಳ ಬೇಕಾದ ಒಂದು ಮಾತಿದೆ. ನೀವುಗಳು ಯಾರೂ ಅರ್ಜಿಗಳನ್ನು ಸಲ್ಲಿಸುವುದಕ್ಕಾಗಲಿ ಅಹವಾಲುಗಳನ್ನು ಹೇಳಿ ಕೊಳ್ಳುವುದಕ್ಕಾಗಿ ನಿಮ್ಮ ನಿಮ್ಮ ಹಳ್ಳಿಗಳನ್ನು ಬಿಟ್ಟು ಜನಾರ್ದನ ಪುರಕ್ಕೆ ಬರಬೇಡಿ. ಆ ಬಗ್ಗೆ ಶ್ರಮವಹಿಸಬೇಡಿ; ಹಣ ಖರ್ಚುಮಾಡ ಬೇಡಿ. ಮನೆಯ ಮುಂದೆ, ಕಚೇರಿಯ ಮುಂದೆ ನಿಂತು ಕಾಯುವುದು ಉಪಾಧ್ಯಾಯರ ಗೌರವಕ್ಕೆ ಹಾನಿ, ಬೇಕಾದ ವಿಷಯವನ್ನು ಕಾಗದದಲ್ಲಿ ತಿಳಿಸಿ ಟಪ್ಪಾಲಿನಲ್ಲಿ ಹಾಕಿ. ನಿಮಗೆ ಖರ್ಚೇನೂ ಆಗುವುದಿಲ್ಲ. ತಕ್ಕ ಪರಿಹಾರವನ್ನು ನಾವೇ ಮಾಡಿ ಕೊಡುತ್ತೇವೆ. ಸರ್ಕಿಟಿನ ಕಾಲದಲ್ಲಿ ಮತ್ತು ಉಪಾಧ್ಯಾಯರ ಸಂಘಗಳ ಸಭೆ ನಡೆಯುವ ಕಾಲದಲ್ಲಿ, ನಾವೇ ನಿಮ್ಮ ಯೋಗಕ್ಷೇಮವನ್ನು ವಿಚಾರಿಸುತ್ತೇವೆ. ಧಾರಾಳವಾಗಿ ನಮ್ಮ ಹತ್ತಿರ ನಿಮ್ಮ ಕಷ್ಟ ದುಃಖಗಳನ್ನು ಆಗ ಹೇಳಿಕೊಳ್ಳಬಹುದು. ನಮ್ಮ ಗುಮಾಸ್ತರಿಗೆ ದಕ್ಷಿಣೆ ಕೊಟ್ಟು ಅನುಗ್ರಹ ಸಂಪಾದಿಸಲು ಪ್ರಯತ್ನ ಪಡಬೇಡಿ, ಏನಿದ್ದರೂ ನೇರವಾಗಿ ನಮ್ಮ ಬಳಿಗೆ ಬಂದು ಹೇಳಿ ಕೊಳ್ಳಿ. ನಿಮ್ಮ ಗೌರವವನ್ನು ಕಾಪಾಡಿಕೊಳ್ಳುವ ಹಾಗೆ ವರ್ತಿಸುತ್ತೀರೆಂದು ನಂಬುತ್ತೇವೆ’ ಎಂದು ಹೇಳಿ ಕುಳಿತುಕೊಂಡನು. ಹೂವು ಗಂಧಗಳ ವಿನಿಯೋಗವಾಯಿತು. ಸಭೆ ಮುಕ್ತಾಯವಾಯಿತು. ಹಳಬರು ಹೊರಟು ಹೋದರು ; ಹೊಸಬರು ಇನ್ಸ್‍ಪೆಕ್ಟರ್ ಸ್ಥಾನದಲ್ಲಿ ಸ್ಥಾಪಿತರಾದರು.

ಇದೆಲ್ಲ ನಡೆದು ಒಂದು ವಾರವಾಯಿತು. ಕಚೇರಿಯ ಕೆಲಸದ ಮರ್ಮಗಳನ್ನೆಲ್ಲ ರಂಗಣ್ಣ ತಿಳಿದುಕೊಳ್ಳಲು ಪ್ರಯತ್ನ ಪಟ್ಟನು. ತನ್ನ ರೇಂಜಿನ ವ್ಯಾಪ್ತಿಯನ್ನು ನಕ್ಷೆಯನ್ನಿಟ್ಟು ಕೊಂಡು ನೋಡಿದನು. ಹಳ್ಳಿ ಗಳ ಕಡೆ ಸರ್ಕಿಟು ಹೋಗಬೇಕೆಂದು ಅವನಿಗೆ ಆಶೆ ಬಹಳವಾಗಿತ್ತು. ಸರ್ಕಿಟು ಹೋದರೆ ಊಟಕ್ಕೆ ಏನು ಮಾಡಬೇಕು? ಅಡಿಗೆ ಮಾಡುವವರು ಯಾರು? ಗುಮಾಸ್ತ ಶಂಕರಪ್ಪನನ್ನು ಕರೆದು ಸರ್ಕೀಟಿನ ವಿವರಗಳನ್ನು ಕೇಳಿ ತಿಳಿದುಕೊಂಡನು. ಹಿಂದಿನ ಇನ್ಸ್‍ಪೆಕ್ಟರು ಒಂದೊಂದು ದಿನ ಬೆಳಗ್ಗೆ ಹೋಗಿ ಸಾಯಂಕಾಲಕ್ಕೆ ಹಿಂದಿರುಗುತ್ತಿದ್ದರು ; ಒಂದೊಂದು ಸಂದರ್ಭದಲ್ಲಿ ಮೇಷ್ಟರುಗಳ ಮನೆಗಳಲ್ಲಿ ಊಟ ಮಾಡುತ್ತಿದ್ದರು ; ಒಂದೊಂದು ಸಂದರ್ಭದಲ್ಲಿ ಯಾರಾದರೂ ಗ್ರಾಂಟ್ ಸ್ಕೂಲು ಮೇಷ್ಟರು ಸಮೀಪದಲ್ಲಿದ್ದರೆ ಅವರಿಂದ ಅಡಿಗೆ ಮಾಡಿಸುತ್ತಿದ್ದರು,- ಹೀಗೆ ಸಂದರ್ಭ ನೋಡಿಕೊಂಡು ಮಾಡುತ್ತಿದ್ದರು ಎಂದು ಅವನು ಹೇಳಿದನು. ಶಂಕರಪ್ಪ ಸ್ವಲ್ಪ ಹಳಬ, ಲೌಕಿಕ ತಿಳಿದವನು, ‘ಸ್ವಾಮಿಯವರಿಗೆ ಹಿಂದಿನವರ ಪದ್ದತಿ ಸರಿಬೀಳುವುದಿಲ್ಲ. ತಾವು ಶ್ರೀಮಂತರು, ತಮ್ಮ ಗೌರವಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತೀರಿ. ತಮ್ಮ ಹಾಗೆ ಇಲ್ಲಿಯ ಅಮಲ್ದಾರರೇ ಉಡುಪು ಧರಿಸುವುದಿಲ್ಲ. ಇನ್ನು ತಾವು ಅಡಿಗೆಯವನಿಲ್ಲದೆ ಸರ್ಕಿಟು ಹೋಗುವುದಿಲ್ಲ ಎಂಬುದನ್ನು ಯಾರಾದರೂ ಹೇಳಬಲ್ಲರು. ಹಿಂದಿನವರ ಕಾಲದಲ್ಲೆಲ್ಲ ಇಲಾಖೆಯ ಗೌರವವನ್ನು ಕಾಪಾಡಿಕೊಂಡು ಬರಲಿಲ್ಲ. ತಮ್ಮ ಕಾಲದಲ್ಲಿ ಆ ಗೌರವವನ್ನು ಎತ್ತಿ ಹಿಡಿಯಬೇಕು’ ಎಂದು ಹೇಳಿದನು.

ರಂಗಣ್ಣನಿಗೆ ಆ ಸ್ತೋತ್ರ ಶ್ರವಣದಿಂದ ಸಂತೋಷವಾಯಿತು. ‘ಶಂಕರಪ್ಪ ! ಇಲ್ಲಿ ಅಡಿಗೆಯವರು ಸಿಕ್ಕುತ್ತಾರೆಯೇ ? ಏನು ಸಂಬಳ ಕೊಡ ಬೇಕಾದೀತು?’ ಎಂದು ಕೇಳಿದನು.

‘ಸ್ವಾಮಿ, ವಿಚಾರಿಸಿದರೆ ಸಿಕ್ಕ ಬಹುದು. ಯಾರಾದರೂ ಹೋಟಲ್ ಮಾಣಿಗಳನ್ನು ಕೇಳಬೇಕು. ಹದಿನೈದು ರೂಪಾಯಿಗಳನ್ನಾದರೂ ಸಂಬಳ ಕೇಳಬಹುದು. ಆದರೆ ಅಷ್ಟೆಲ್ಲ ಖರ್ಚು ಅನಾವಶ್ಯಕ ಸ್ವಾಮಿ ! ಈಗ ನಮ್ಮ ಕಚೇರಿಯಲ್ಲಿ ಒಬ್ಬ ಜವಾನನ ಕಲಸ ಖಾಲಿಯಿದೆ. ತಿಂಗಳಿಗೆ ಹತ್ತು ರೂಪಾಯಿ ಸಂಬಳ, ಸರ್ಕಿಟಿನಿಂದ ಭತ್ಯ ಸರಾಸರಿ ಅವನಿಗೆ ತಿಂಗಳಿಗೆ ಐದು ರೂಪಾಯಿ ಗಿಟ್ಟುತ್ತದೆ. ಅಪ್ಪಣೆಯಾದರೆ ಒಬ್ಬ ಬ್ರಾಹ್ಮಣ ನನ್ನು ಗೊತ್ತು ಮಾಡುತ್ತೇನೆ. ನಮ್ಮ ಪೈಕಿಯೆ ಒಬ್ಬಾತ ಇದ್ದಾನೆ.’ ರಂಗಣ್ಣನಿಗೆ ಆ ಸಲಹೆ ಚೆನ್ನಾಗಿದೆಯೆಂದು ತೋರಿತು. ಹಾಗೆಯೇ ಮಾಡಿ ಶಂಕರಪ್ಪ ! ಆದರೆ ಮನುಷ್ಯ ಚೊಕ್ಕಟವಾಗಿರಬೇಕು ; ಮತ್ತು ಕೈ ದುಡುಕು ಇರಬಾರದು’ ಎಂದು ಹೇಳಿದನು. ಅದರಂತೆ ಗೋಪಾಲ ಎಂಬ ಯುವಕನನ್ನು ನೇಮಕ ಮಾಡಿಕೊಂಡದ್ದಾಯಿತು. ಈ ಮಾತುಗಳು ಮುಗಿಯುವ ಹೊತ್ತಿಗೆ ಟಪಾಲು ಬಂತು. ಅದರಲ್ಲಿ ಶಂಕರಪ್ಪನ ವಿಳಾಸಕ್ಕೆ ಮೈಸೂರು ಸರ್ಕಾರಿ ಮೇಲೆ ಕಳುಹಿಸಿದ್ದ ದಪ್ಪವಾದೊಂದು ಕಟ್ಟೊಂದು ಬಂದಿತ್ತು. ರಂಗಣ್ಣ ಅದನ್ನು ಅವನ ಕೈಗೆ ಕೊಟ್ಟು ‘ಇದೇನು ಶಂಕರಪ್ಪ ! ಈ ಕಟ್ಟು?’ ಎಂದು ಕೇಳಿದನು. ಅವನು ಒಂದು ಕ್ಷಣ ಮೌನವಾಗಿದ್ದು ಬಳಿಕ, ‘ಸ್ವಾಮಿಯವರಿಗೆ ಇದೆಲ್ಲ ಹೊಸದು. ಆದರೆ ರೇಂಜುಗಳಲ್ಲಿ ಹೀಗೆಲ್ಲ ನಡೆಯುತ್ತದೆ’ ಎಂದನು. ಆ ಉತ್ತರದಿಂದ ರಂಗಣ್ಣನಿಗೆ ಏನೊಂದೂ ಅರ್ಥವಾಗಲಿಲ್ಲ.

‘ಇವೇನು ಕಚೇರಿಯ ಕಾಗದಗಳೇ?’ ಎಂದು ರಂಗಣ್ಣ ಊಹೆ ಮಾಡಿ ಕೇಳಿದನು.

‘ಹೌದು ಸ್ವಾಮಿ! ಇನಸ್ಪೆಕ್ಟರವರು ಫೈಸಲ್ ಆಗದೇ ಇದ್ದ ಕೆಲವು ಕಾಗದಗಳನ್ನೂ ಅರ್ಜಿಗಳನ್ನೂ ಜೊತೆಯಲ್ಲಿ ತೆಗೆದು ಕೊಂಡು ಹೋಗಿದ್ದರು. ಈಗ ಅವುಗಳಿಗೆಲ್ಲ ಉತ್ತರಗಳನ್ನು ಬರೆದು ಕಳಿಸಿದ್ದಾರೆ. ಜೊತೆಗೆ ಸ್ಕೂಲುಗಳ ತನಿಖೆ ವರದಿಗಳನ್ನು ಹಿಂದೆ ಬರೆದಿರಲಿಲ್ಲ ; ಅವುಗಳನ್ನೂ ಬರೆದು ಕಳಿಸಿದ್ದಾರೆ.’

‘ಆ ಕಾಗದಗಳನ್ನೆಲ್ಲ ನಾನೇ ಫೈಸಲ್ ಮಾಡುತ್ತಿದ್ದೆನಲ್ಲ ?’
‘ತಾವು ಹೊಸಬರು ; ತಮಗೆ ಆ ವಿಷಯಗಳ ಪರಿಚಯ ಆಗಿರುವುದಿಲ್ಲ. ಅವರು ಅದನ್ನೆಲ್ಲ ಪರಿಚಯ ಮಾಡಿಕೊಂಡಿದ್ದವರು. ಆದ್ದರಿಂದ ಅವರೇ ಫೈಸಲ್ ಮಾಡಬೇಕೆಂದು ತೆಗೆದುಕೊಂಡು ಹೋಗಿದ್ದರು.’

‘ನನಗೆ ತಿಳಿಯದೆ ಇಂಥ ಕಾರಬಾರು ನಡೆಯಬಾರದು ಶಂಕರಪ್ಪ! ಆ ಕಾಗದಗಳನ್ನು ನನ್ನ ಕೈಯಲ್ಲಿ ಕೊಟ್ಟು ಹೀಗೆಮಾಡಿ ಎಂದು ಸಲಹೆ ಕೊಟ್ಟಿದ್ದರೆ ನಾನೇ ಫೈಸಲ್ ಮಾಡುತ್ತಿದ್ದೆ, ಚಾರ್ಜು ಕೊಟ್ಟು ಹೋದ ಮೇಲೆ ಇಲ್ಲಿಯ ಕಾಗದಗಳನ್ನೆಲ್ಲಾ ನನಗೆ ಕೊಟ್ಟು ಹೋಗಬೇಕಾಗಿತ್ತು. ಒಳ್ಳೆಯದು. ಆ ಕಟ್ಟಿನಲ್ಲಿರುವುದನ್ನು ನನಗೆ ಮೊದಲು ತೋರಿಸಿ ಆಮೇಲೆ ರವಾನೆ ಮಾಡಿ, ಎಲ್ಲಕ್ಕೂ ಹಿಂದಿನ ತಾರೀಕನ್ನು ಹಾಕಿ ರುಜು ಮಾಡಿದ್ದಾರೆ ಎಂದು ಕಾಣುತ್ತದೆ.’

‘ಹೌದು ಸ್ವಾಮಿ.’
‘ಸರಿ, ನಾನೇ ಅವರಿಗೆ ಬರೆಯುತ್ತೇನೆ. ಉಳಿದಿರುವ ಕಾಗದಗಳನ್ನೆಲ್ಲ ಹಿಂದಕ್ಕೆ ಕಳಿಸಿಬಿಡಲಿ.’

‘ಆಪ್ಪಣೆ ಸ್ವಾಮಿ!?’
‘ನಾಳೆ ಬೆಳಗ್ಗೆ ಯಾವುದಾದರೂ ಒಂದೆರಡು ವಾರ ಶಾಲೆಗಳನ್ನು ನೋಡಿಕೊಂಡು ಬರುತ್ತೇನೆ ಹತ್ತನೆಯ ತಾರೀಕಿನಿಂದ ಸರ್ಕಿಟು ಹೊರಡೋಣ ?

‘ಅಪ್ಪಣೆ ಸ್ವಾಮಿ!’

ಶಂಕರಪ್ಪನು ಹೊರಟು ಹೋದನು ರಂಗಣ್ಣನಿಗೆ ಹೀಗೆ ಕಚೇರಿಯ ಹೊಸ ಹೊಸ ಅನುಭವಗಳುಂಟಾದುವು. ಗೋಡೆಗೆ ನೇತು ಹಾಕಿದ್ದ ನಕ್ಷೆಯನ್ನು ನೋಡುತ್ತ ನಾಳೆ ಕಂಬದಹಳ್ಳಿ ಕಡೆಗೆ ಹೋಗಿ ಬರುತ್ತೇನೆ. ರಸ್ತೆ ಇರುವ ಹಾಗೆ ಕಾಣುತ್ತದೆ ; ಹೋಗಿ ಬರುವುದು ಎಲ್ಲ ಹತ್ತು ಹನ್ನೆರಡು ಮೈಲಿಗಳಷ್ಟು ದೂರ ಆಗುತ್ತದೆ. ಆದ್ದರಿಂದ ಬೈಸ್ಕಲ್ ಮೇಲೆ ಬೆಳಗ್ಗೆ ಏಳು ಗಂಟೆಗೆ ಹೊರಟರೆ ಹತ್ತು ಗಂಟೆಗೆಲ್ಲ ಹಿಂದಿರುಗಿ ಬರಬಹುದು’ ಎಂದು ತೀರ್ಮಾನಿಸಿ ಕೊಂಡನು.
*****