ಒಲವೇ… ಭಾಗ – ೪

ಅಕ್ಷರ…, ನೀನು ಬೇಸರ ಮಾಡ್ಕೊಳಲ್ಲ ಅಂದ್ರೆ ಒಂದು ಮಾತು…

ಆಯ್ತು, ಅದೇನೂಂತ ಹೇಳು. ನನ್ನವನ ಮಾತಿಗೆ ನಾನೇಕೆ ಬೇಸರ ಮಾಡ್ಕೋ ಬೇಕು?

ಏನಿಲ್ಲಾ…, ನಾವಿಬ್ರು ಹೀಗೆ ದಿನಾ ಒಟ್ಟಿಗೆ ಓಡಾಡೋದನ್ನ ಹತ್ತಾರು ಜನ ನೋಡ್ತಾರೆ. ನೋಡಿದವರು ಸುಮ್ಮನಿದ್ದರೆ ಪವಾಗಿಲ್ಲ. ಅವರವರ ಮನಸ್ಸಿಗೆ ತೋಚಿದ ರೀತಿಯಲ್ಲಿ ನೂರಾರು ತರ ಮಾತಾಡ್ಕೋತ್ತಾರೆ. ಯಾವತ್ತಾದರೂ ಒಂದು ದಿನ ನಮ್ಮಿಬ್ಬರ ನಡುವೆ ಮನಸ್ತಾಪ ಬಂದು ನಾವಿಬ್ಬರು ಬೇರೆಯಾದ್ರೆ ನಿನ್ನ ಮದ್ವೆಯಾಗೋದಕ್ಕೆ ಯಾರು ತಾನೇ ಮುಂದೆ ಬತಾರೆ ಹೇಳು? ಅವಳು ಅಭಿಮನ್ಯುವಿನೊಂದಿಗೆ ಸುತ್ತಾಡಿ ಮಜಾ ಮಾಡಿದವಳು ಎಂದು ಆಡಿಕೊಳ್ಳುವ ಜನ ನಿನ್ನ ಮದ್ವೆಗೆ ಅಡ್ಡಗಾಲು ಹಾಕುವುದರಲ್ಲಿ ಸಂಶಯವಿಲ್ಲ. ನಾನಾದರೆ ಒಬ್ಬ ಹುಡುಗ, ಸಮಾಜ ಏನು ಹೇಳೋದಿಲ್ಲ. ಆದರೆ ನಿನ್ನ ಬಗ್ಗೆ ನೂರಾರು ಇಲ್ಲದ ಕತೆಗಳನ್ನು ಕಟ್ಟಿ ಬದುಕನ್ನೇ ಹಾಳು ಮಾಡಿ ಬಿಡ್ತಾರೆ. ಅದಕ್ಕೆ ನಾವಿಬ್ಬರು ಅಪರೂಪಕ್ಕೊಮ್ಮೆ ಭೇಟಿಯಾಗುವ. ದೂರ ಇದ್ದಷ್ಟು ಪ್ರೀತಿ ಜಾಸ್ತಿ ಇರುತ್ತೆ. ಏನಂತಿಯ?

ಅಭಿಮನ್ಯುವಿನ ಮಾತು ಕೇಳಿ ಅಕ್ಷರ ಒಂದು ಕ್ಷಣ ಆತಂಕಕ್ಕೀಡಾದವಳಂತೆ ವರ್ತಿಸಿದಳು. ಕೋಪದಿಂದ ಮತ್ತಷ್ಟು ವೇಗವಾಗಿ ಕಾರನ್ನು ಚಾಲಿಸಿದಳು. ಈ ಹುಡುಗರ ಹಾಳಾದ ಬುದ್ಧಿಯೇ ಹೀಗೆ. ಒಬ್ಬರನ್ನೂ ಕೂಡ ಸರಿಯಾಗಿ ಪ್ರೀತಿ ಮಾಡೋದಿಲ್ಲ  ಅಂದುಕೊಂಡಳು.

ಛೇ…, ನಿನ್ನ ಬಗ್ಗೆ ಎಷ್ಟೊಂದು ಕನಸುಗಳನ್ನು ಕಟ್ಟಿಕೊಂಡಿದ್ದೆ ಗೊತ್ತಾ? ಆದರೆ ನೀನು ಈ ತರ ಹೇಳ್ತಿಯ ಅಂತ ಕನಸು, ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ನಿನ್ನ ಮಾತು ಕೇಳಿದ್ರೆ ನನ್ನ ಪ್ರೀತಿಸೋ ಮನಸ್ಸು ನಿನ್ಗೆ ಇಲ್ಲ ಅಂದಂಗಾಯ್ತು. ಇಲ್ದಿದ್ರೆ ಈ ರೀತಿಯ ಮಾತುಗಳನ್ನು ಯಾಕಾದ್ರೂ ಆಡ್ತಾ ಇದ್ದೆ? ಎಲ್ಲಾ ಹುಡುಗರ ಹಣೆಬರಹವೇ ಇಷ್ಟು. ಇಷ್ಟವಿದ್ರೆ ಪೀತಿಸ್ತಾರೆ, ಇಲ್ದಿದ್ರೆ ಕೈ ತೊಳೆದುಕೊಳ್ತಾರೆ. ಅಂಥಹ ಸಾಲಿಗೆ ನೀನು ಸೇಕೊಂಡಿದ್ದೀಯ. ನಾನೊಬ್ಬಳು ಪೆದ್ದಿ. ಹಿಂದೆ ಮುಂದೆ ಆಲೋಚನೆ ಮಾಡದೆ ದುಡುಕಿ ನಿರ್ಧಾರ ಕೈಗೊಂಡೆ. ಕನಸು ಕೈಗೂಡುವ ಮುನ್ನವೇ ನೀನು ಈ ರೀತಿ ನಡ್ಕೋಬಾರದಿತ್ತು. ಅಕ್ಷರ ಕಣ್ಣೀರು ಸುರಿಸುತ್ತಾ ಕಾರು ಚಾಲಿಸುತ್ತಿದ್ದಳು.

ನೀನು ಹೀಗೆ ಕಣ್ಣೀರು ಸುರಿಸುತ್ತಾ ಗಾಡಿ ಓಡಿಸ್ಬೇಡ. ಸಣ್ಣ ವಯಸ್ಸಿನಲ್ಲಿಯೇ ವೈಕುಂಠ ಸೇರಿಕೊಳ್ಳುವ ಆಸೆ ನನ್ಗಂತೂ ಇಲ. ನಮ್ಮಿಬ್ಬರಿಗೆ ಇನ್ನೂ ಮದ್ವೆಯಾಗಿಲ್ಲ, ಮಕ್ಕಳಾಗಿಲ್ಲ. ಇಷ್ಟು ಬೇಗ ಶಿವನಪಾದ ಸೇಕೊಂಡು ಅಲ್ಲಿ ಸುಖವಾಗಿರೋದಕ್ಕೆ ಸಾಧ್ಯನಾ? ಕಣ್ಣೀರಿನ ಕಡಲಾದ ಆಕೆಯಲ್ಲಿ ನಗೆಯ ಹೊನಲು ಹರಿಸಲು ವ್ಯರ್ಥ ಕಸರತ್ತು ಮಾಡಿದ.

ಹೌದು, ಅದೇ ಒಳ್ಳೆಯದ್ದು. ಆದಷ್ಟು ಬೇಗ ಇಬ್ರು ವೈಕುಂಠ ಸೇರಿಕೊಳ್ಳುವ. ಇಲ್ಲಂತೂ ನಾವಿಬ್ಬರು ಒಂದಾಗೋದಕ್ಕೆ ಸಾಧ್ಯವೇ ಇಲ್ಲ. ನಿನ್ಗಂತೂ ಅದರ ಬಗ್ಗೆ ಆಸಕ್ತಿನೇ ಇಲ್ಲದ ಮೇಲೆ ಒಂದಾಗುವುದಾದರೂ ಹೇಗೆ? ವೈಕುಂಠದಲ್ಲಾದ್ರೂ ಒಂದಾಗುವ ಮನಸ್ಸು ಮಾಡ್ತಿಯ ಅಂದ್ಕೋತ್ತಿನಿ ಕಣ್ಗಳಲ್ಲಿ ತುಂಬಿಕೊಂಡಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮತ್ತಷ್ಟು ವೇಗವಾಗಿ ಕಾರನ್ನು ಚಾಲಿಸಿದಳು.

ಹುಡುಗಿಯರೊಂದಿಗೆ ಮಾತಾಡೊದೇ ತಪ್ಪು. ಪ್ರತಿಯೊಂದು ಮಾತಿಗೂ ಒಂದೊಂದು ಅರ್ಥ ಕಲ್ಪಿಸಿಕೊಂಡು ಕಣ್ಣೀರು ಸುರಿಸಲು ಪ್ರಾರಂಭಿಸುತ್ತಾರೆ. ಇನ್ನು ಸಮಾಧಾನ ಪಡಿಸಲು ಆ ದೇವರೇ ಧರೆಗಿಳಿದು ಬರಬೇಕೆಂದು ಮನದಲ್ಲಿಯೇ ಗೊಣಗಿಕೊಂಡ. ಸ್ವಲ್ಪ ಹೊತ್ತಿನ ಬಳಿಕ ಆಯ್ತು, ದಿನಾ ಭೇಟಿಯಾಗುವ. ನೀನೇನು ಚಿಂತೆ ಮಾಡ್ಕೋ ಬೇಡ. ಹಣೆಬರಹದಲ್ಲಿ ಏನು ಬರೆದಿದೆಯೋ ಅದೇ ಆಗೋದು. ಒಂದು ಮಾತು ಹೇಳೋದಕ್ಕೆ ಇಷ್ಟ ಪಡ್ತೇನೆ. ನಾನು ನಿನ್ನಿಂದ ದೂರವಾಗೋದಕ್ಕೆ ಬಯಸ್ತಾ ಇಲ್ಲ. ನಿನ್ನೊಂದಿಗೆ ಜೀವನ ಪರ್ಯಂತ ಬಾಳ್ವೆ ನಡೆಸೋದಕ್ಕೆ ನಿರ್ಧಾರ ಮಾಡಿದ್ದೇನೆ. ಆದರೆ….

ಮುಂದೆನೋ ಹೇಳಲು ಹೊರಟ ಅಭಿಮನ್ಯುವಿನ ಮಾತಿಗೆ ಅಡ್ಡಹಾಕಿ ಆದ್ರೆ, ಗೀದ್ರೆ ಏನೂ ಇಲ್ಲ. ನನ್ನ ಪ್ರೀತಿ ಮಾಡ್ಬೇಕು ಅಷ್ಟೆ. ಜೀವನಪೂರ್ತಿ ನನ್ನೊಂದಿಗೆ ಬದುಕಬೇಕೆಂದು ನಿರ್ಧರಿಸಿ ಆದ ಮೇಲೆ ಅಂಜಿಕೆ ಯಾಕೆ ಹೇಳು? ನಾನ್ಗಂತೂ ನಿನ್ನ ದಿನಾ ನೋಡ್ಲೇ ಬೇಕು, ನಿನ್ನೊಂದಿಗೆ ಮಾತಾಡ್ಲೇ ಬೇಕು. ಇಲ್ದಿದ್ರೆ ಮನಸ್ಸು ಕೇಳೋದಿಲ್ಲ್ಲ ಅಂದ ಆಕೆಯ ಮೊಗದಲ್ಲಿ ಹಿಡಿದ ಹಟ ಸಾಧಿಸಿದ ಸಂತೋಷ ತುಂಬಿಕೊಂಡಿತು.

ಈವಗಲಾದ್ರೂ ಕಾರನ್ನ ಸ್ವಲ್ಪ ನಿಧಾನವಾಗಿ ಓಡಿಸಬಹುದಲ್ವ? ಅಭಿಮನ್ಯುವಿನ ಕೋರಿಕೆಗೆ ನಸುನಗೆ ಬೀರಿ ಕಾರನ್ನು ಒಂದು ಬದಿಗೆ ನಿಲ್ಲಿಸಿ ಅಭಿಮನ್ಯುವಿನ ಹಣೆಗೆ ಪ್ರೀತಿಯಿಂದ ಚುಂಬಿಸಿ ಐ ಲವ್ ಯೂ ಅಭಿ ಅಂದಳು. ಆಕೆಯನ್ನು ಬರಸೆಳೆದು ಗಾಢವಾಗಿ ಚುಂಬಿಸಿದ ಅಭಿಮನ್ಯು ಐ ಟೂ ಲವ್ ಯೂ ಅಂದ.

ಒಬ್ಬರನ್ನೊಬ್ಬರು ಮೈ ಮರೆತು ಗಾಢವಾಗಿ ಚುಂಬಿಸಿದರು. ಆ ಕ್ಷಣ ಇಬ್ಬರು ತಮ್ಮನ್ನು ತಾವೇ ಮರೆತು ಪ್ರೀತಿಯ ಧ್ಯಾನದಲ್ಲಿ ಮುಳುಗಿ ಅದರಿಂದ ಹೊರ ಹೊಮ್ಮುತ್ತಿದ್ದ ಆನಂದವನ್ನು ಆಸ್ವಾದಿಸಿಕೊಳ್ಳತೊಡಗಿದರು. ಹೃದಯ ಬಡಿತ ಹೆಚ್ಚಾಗಿ ಒಬ್ಬರ ಬಿಸಿಯುಸಿರು ಮತ್ತೊಬ್ಬರಿಗೆ ಸೋಕಿ ಪುಳಕಿತಗೊಂಡರು. ಮನಸ್ಸು ತುಂಬಾ ಹಗುರ ಅನ್ನಿಸತೊಡಗಿತು.

ಸಾಕು ಅಭಿ, ಮುಂದಿನ ಭಾಗ ಮುಂದಿನ ಭೇಟಿಯಲ್ಲಿ ಮುಂದುವರೆಸುವ ಅಂದ ಅಕ್ಷರ ಕಾರು ಚಾಲನೆ ಮಾಡ ತೊಡಗಿ ದಳು. ಮಡಿಕೇರಿ ಸೇರಿಕೊಳ್ಳುವವರೆಗೂ ಒಂದೇ ಒಂದು ಮಾತು ಹೊರ ಹೊಮ್ಮದೆ ಇದ್ದರೂ ಇಬ್ಬರು ತಮ್ಮ ಕಣ್ಗಳಲ್ಲಿಯೇ ಮಾತಾಡಿಕೊಳ್ಳಲು ಪ್ರಾರಂಭಿಸಿದರು. ಅಭಿಮನ್ಯುವಿನ ಕಣ್ಸನ್ನೆಗೆ ಆಕೆ ನಾಚಿ ನೀರಾಗಿ ಹೋಗುತ್ತಿದ್ದಳು. ಇಬ್ಬರ ಕಣ್ಗಳಲ್ಲಿ ಸಂತೃಪ್ತಿಯ ಭಾವ ತುಂಬಿಕೊಂಡಿತು. ಯುದ್ಧದಲ್ಲಿ ಜಯಿಸಿ ಸಂತೋಷ, ಆತ್ಮವಿಶ್ವಾದೊಂದಿಗೆ ತಮ್ಮ ಸಾಮ್ರಾಜ್ಯಕ್ಕೆ ಹಿಂತಿರುಗುವ ಸೈನಿಕರಂತೆ ಇಬ್ಬರು ಬೀಗುತ್ತಿದ್ದರು. ಮಡಿಕೇರಿ ಸೇರಿಕೊಳ್ಳುವಷ್ಟರೊಳಗೆ ಹಿತವಾದ ಕತ್ತಲು ಆವರಿಸಿಕೊಳ್ಳಲು ಪ್ರಾರಂಭಿಸಿತು. ಅಭಿಮನ್ಯುವನ್ನು ಇಳಿಸಿ ಅಕ್ಷರ ತನ್ನ ಮನೆಯ ಕಡೆ ತೆರಳಿದಳು.

ಕಾರಿನಿಂದ ಇಳಿದು ಬರುತ್ತಿದ್ದ ಅಭಿಮನ್ಯುವನ್ನು ಗೆಳೆಯ ರಾಹುಲ್ ರೇಗಿಸಲು ಅಣಿಯಾಗಿ ನಿಂತಿದ್ದ. ಇಷ್ಟೊಂದು ದಿನ ಗುಟ್ಟಾಗಿ ಇದ್ದ ಇಬ್ಬರ ಒಡನಾಟ ಗೆಳೆಯನೆದುರು ಬಯಲುಗೊಂಡ ಕ್ಷಣವದು. ಆಕೆಯೊಂದಿಗೆ ಅಭಿಮನ್ಯು ಇಟ್ಟುಕೊಂಡಿರುವ ಒಡನಾಟದ ಬಗ್ಗೆ ಅಲ್ಲಿ ಇಲ್ಲಿ ಕೇಳಿ ತಿಳಿದುಕೊಂಡಿದ್ದ ರಾಹುಲ್ ಇಂಥಹ ಒಂದು ಪ್ರತ್ಯಕ್ಷ ಸಾಕ್ಷಿಗಾಗಿ ಕಾಯುತ್ತಿದ್ದ. ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಅಭಿಮನ್ಯು ಇದೊಂದು ವಿಚಾರವನ್ನು ಮಾತ್ರ ಯಾಕೆ ಬಚ್ಚಿಟ್ಟ? ಎಂಬ ಕೊರಗು ಅವನಲ್ಲಿ ಕಾಡದೆ ಇರಲಿಲ್ಲ.

ಏನ್ ಗುರು, ಒಳ್ಳೆಯ ಹುಡುಗಿಯನ್ನೇ ಬುಟ್ಟಿಗೆ ಹಾಕ್ಕೊಂಡಿದ್ದಿಯಲ್ಲ!? ಎಲ್ಲಾ ಹುಡುಗರು ಅವಳ ಹಿಂದೆ ಓಡಾಡ್ತಾ ಇರುವಾಗ ಅವಳು ಮಾತ್ರ ನಿನ್ನ ಬೆನ್ನು ಬಿದ್ದಿದಾಳಲ್ಲ. ನೀನು ಏನೋ ಮೋಡಿ ಮಾಡಿದ್ಯಾ ಬಿಡು. ಇಲ್ದಿದ್ರೆ ಅವಳು ನಿನ್ಗೆ ಸಿಗುವಂತವಳಲ್ಲ. ನನ್ಗೂ ಸ್ವಲ್ಪ ಆ ಕಲೆಯನ್ನ ಹೇಳ್ಕೊಡೋ. ನಾನು ಒಂದು ಒಳ್ಳೆಯ ಹುಡುಗಿಯನ್ನ ಪಟಾಯಿಸ್ತಿನಿ ಅಂದ ರಾಹುಲ್ ಪ್ರೀತಿ ಎಲ್ಲಿಂದ ಪ್ರಾರಂಭವಾಯಿತು, ಹೇಗೆ ಪ್ರಾರಂಭವಾಯಿತೆಂದು ತಿಳಿದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದ.

ನೀನಂದುಕೊಂಡಂತೆ ಏನಿಲ್ಲ ಬಿಡು ಅಂದು ಅಭಿಮನ್ಯು ವಿಷಯದಿಂದ ಜಾರಿಕೊಳ್ಳಲು ಪ್ರಯತ್ನಿಸಿದ. ಆದರೆ ಇಂತಹ ಉತ್ತರದಿಂದ ರಾಹುಲ್ ತೃಪ್ತನಾಗುವ ವ್ಯಕ್ತಿಯಲ್ಲ. ನೀನು ಏನೇ ಹೇಳು. ನನ್ಗಂತೂ ತುಂಬನೇ ಖುಷಿಯಾಗಿದೆ. ಒಳ್ಳೆಯ ಹುಡುಗಿಯನ್ನೇ ಆಯ್ಕೆ ಮಾಡ್ಕೊಂಡಿದ್ದೀಯ. ಎಲ್ಲದಕ್ಕಿಂತ ಮೊದ್ಲು ಪ್ರೀತಿಗೆ ಹೇಗೆ ಶುರು ಆಯ್ತು ಅಂತ ಹೇಳು. ನಾನು ಸ್ವಲ್ಪ ಕೇಳಿ ಸಂತೋಷ ಪಡ್ತೇನೆ. ಜೊತೆಗೆ ಇದೇ ಖುಷಿಯಲ್ಲಿ ಎಲ್ರಿಗೂ ಪಾರ್ಟಿ ಕೊಟ್ಬಿಡು. ರಾಹುಲ್ ಪಾರ್ಟಿಗಾಗಿ ಪೀಡಿಸತೊಡಗಿದ.

ಇನ್ನು ಇವನೆದುರು ಪ್ರೀತಿಯ ವಿಷಯ ಮುಚ್ಚಿಟ್ಟರೆ ಎಲ್ಲರ ಮುಂದೆ ಜನ್ಮ ಜಾಲಾಡಿ ಬಿಡುತ್ತಾನೆಂದು ತಿಳಿದು ಎಲ್ಲಾ ವಿಚಾರ ವನ್ನು ತೆರೆದಿಡುವ ಪ್ರಯತ್ನ ಮಾಡಿದ. ಏನು ಮಾಡ್ಲಿ ಹೇಳು. ಅದು ನನ್ನ ಹಣೆಬರಹ. ಹಣೆಬರಹದಲ್ಲಿ ಹೀಗೆ ಆಗೋದು ಅಂತ ಬರೆದಿದ್ದರೆ ಅದನ್ನು ತಪ್ಪಿಸೋದಿಕ್ಕೆ ಯಾರಿಂದ ಸಾಧ್ಯ ಹೇಳು? ಈಗ ತಾನೇ ಲೈಟಾಗಿ ಲವ್‌ಸ್ಟ್ರಾಟ್ ಆಗಿದೆ. ಆ ವಿಷಯ ಒತ್ತಟ್ಟಿಗಿರಲಿ ಬಿಡು. ಉಳಿದವರು ಎಲ್ಲಿ? ಎಲ್ರಿಗೂ ಬರೋದಕ್ಕೆ ಹೇಳು. ನಿನ್ನ ಕೋರಿಕೆಯಂತೆ ಒಂದು ಪಾರ್ಟಿ ಮಾಡಿಬಿಡುವ ಸಂತೋಷದಿಂದ ಪಾರ್ಟಿ ನಡೆಸೋದಕ್ಕೆ ಒಪ್ಪಿಗೆ ಸೂಚಿಸಿದ.

ಹಾಗಾದ್ರೆ ನೀನು ಆಕೆಯ ಪ್ರೀತಿಯ ಬಲೆಗೆ ಬಿದ್ದೆ ಅಂದಂಗಾಯ್ತು. ಒಂದು ನಿಮಿಷ ಇರು ಎಲ್ಲರಿಗೆ ಬರೋದಕ್ಕೆ ಹೇಳ್ತೇನೆ ಎಂದು ಸಂತೋಷದಲ್ಲಿ ಕುಣಿದಾಡಿದ ರಾಹುಲ್ ಸ್ನೇಹಿತರಿಗೆ ಫೋನಾಯಿಸಿ ಬರ ಮಾಡಿಕೊಂಡ. ಗೆಳೆಯನ ಔತಣಕೂಟದ ಸಂದೇಶ ದೊರೆತೊಡನೆ ಗೆಳೆಯರಾದ ಸಂಜಯ್, ಅರುಣ, ಪುರುಷೋತ್ತಮ್ ಒಟ್ಟಿಗೆ ಆಗಮಿಸಿ ಪ್ರೀತಿಯ ಬಲೆಗೆ ಬಿದ್ದ ಗೆಳೆಯನಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.

ಗೆಳೆಯರೆಲ್ಲ ಒಟ್ಟಾಗಿ ಸೇರದೆ ಹಲವು ತಿಂಗಳುಗಳೇ ಸರಿದು ಹೋಗಿತ್ತು. ಸುದೀರ್ಘ ಅವಧಿಯ ಬಳಿಕ ಮತ್ತೆ ಎಲ್ಲರು ಒಂದುಗೂಡಿದಕ್ಕೆ ಎಲ್ಲರಲ್ಲೂ ಸಂತಸ ಮನೆಮಾಡಿಕೊಂಡಿತು. ಮೊದಲಿನಂತೆ ದಿನನಿತ್ಯ ಕುಡಿಯೋದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲರು ಒಂದೊಂದು ಉದ್ಯೋಗಕ್ಕೆ ಸೇರಿಕೊಂಡು ಅದರಲ್ಲಿಯೇ ಮುಳುಗಿ ಹೋಗಿದ್ದರು. ಇನ್ನು ಒಟ್ಟಿಗೆ ಸೇರಲು ಸಮಯವಾದರೂ ಎಲ್ಲಿಂದ?

ಬಾರ್‌ನಲ್ಲಿ ಒಂದೊಂದು ಗುಂಪು ಒಂದೊಂದು ಕ್ಯಾಬಿನ್‌ನಲ್ಲಿ ಕುಳಿತು ಮಂದ ಬೆಳಕಿನಲ್ಲಿ ವಿವಿಧ ವಿಚಾರಗಳ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಪ್ರೇಮಾಂಕುರವಾದ ವಿಚಾರಕ್ಕೆ ಔತಣ ಕೂಟ ಏರ್ಪಡಿಸಿದ್ದ ಗೆಳೆಯರ ಗುಂಪು ಸಹ ಒಂದು ಕ್ಯಾಬಿನ್‌ನಲ್ಲಿ ಕುಳಿತು ಹರಟೆಯಲ್ಲಿ ತಲ್ಲೀನರಾದರು.

ಇಂದಿನ ಪಾರ್ಟಿಯ ವಿಶೇಷತೆ ಏನೆಂದು ಹೇಳಿ ಬಿಡ್ತೇನೆ ಎಂದು ಭಾಷಣ ಬಿಗಿಯುವವನಂತೆ ಎದ್ದು ನಿಂತ ರಾಹುಲ್ ಅಭಿಮನ್ಯುವಿನೆಡೆಗೊಮ್ಮೆ ನೋಡಿ ಕಿರುನಗೆ ಬೀರಿ ಮಾತು ಶುರು ಹಚ್ಚಿಕೊಂಡ. ಮೊದಲನೆಯದಾಗಿ ಅಭಿಮನ್ಯು ವ್ಯಾಪಾರ ವಹಿವಾಟಿನಿಂದ ಉತ್ತಮ ಬದುಕು ಕಂಡುಕೊಂಡಿದ್ದಾನೆ. ಎರಡನೆಯದಾಗಿ ಅಕ್ಷರ ಎಂಬ ಮುದ್ದಾದ ಹುಡುಗಿಯ ಬಲೆಗೆ ಬಿದ್ದು ಬಿಟ್ಟಿದ್ದಾನೆ. ಈಗತಾನೇ ಲೈಟಾಗಿ ಲವ್ ಶುರು ಆಗಿದೆ ಅಂತ ಹೇಳ್ಕೊಂಡಿದ್ದಾನೆ. ಇದು ಎಲ್ಲದಕ್ಕಿಂತ ಸಂತೋಷದ ವಿಚಾರ. ಅವರಿಬ್ಬರ ಪ್ರೀತಿ ಗಟ್ಟಿಯಾಗಿ ನೆಲೆಯೂರಲಿ ಎಂಬುದೇ ನನ್ನ ಹಾರೈಕೆ  ಎಂದು ಚುಟುಕು ಭಾಷಣ ಮುಗಿಸಿ ಕುಳಿತ.

ಎಲ್ಲರು ಅವರವರಿಗೆ ಬೇಕಾದ ಬ್ರ್ಯಾಂಡ್‌ನ ಡ್ರಿಂಕ್ಸ್ ಆರ್ಡರ್ ಮಾಡಿಕೊಂಡರು. ವೈಟರ್ ಎಲ್ಲವನ್ನು ತಂದಿಟ್ಟು ಅವನ ಪಾಡಿಗೆ ತೆರಳಿದ. ಎಲ್ಲರು ಒಟ್ಟಾಗಿ ಸೇರಿ ಚೀಯಸ್ ಹೇಳಿಕೊಂಡರು. ಕುಡಿಯದೆ ಹಲವು ಸಮಯವಾಗಿತ್ತು. ಹಾಗಾಗಿ ಒಂದು ಪೆಗ್ ಏರಿಸುತ್ತಿದ್ದಂತೆ ನಶೆ ತಲೆಗೇರಿ ಕುಳಿತು ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡು ಎಲ್ಲರನ್ನು ಮಾತಿಗೆ ಹಚ್ಚಿತು. ಎರಡು ಪೆಗ್ ಏರಿಸುವುದರೊಳಗೆ ಸಾಕು ಅನ್ನಿಸತೊಡಗಿತು. ಹಿಂದೆಲ್ಲಾ ಎಲ್ಲರೂ ಸೇರಿ ದಿನಾ ಕುಡಿಯೋರು.

ಆಗ ಮಾಡಲು ಏನು ಕೆಲಸವಿರಲ್ಲ. ಕುಡಿಯೋದು, ಸುತ್ತಾಡೋದೇ ಒಂದು ಕೆಲಸವಾಗಿತ್ತು. ಯಾರಾದರೊಬ್ಬರ ಬಳಿ ಹಣ ಇದ್ದೇ ಇರುತಿತ್ತು. ಆದರೆ ಈಗ ಎಲ್ಲರು ಬದಲಾಗಿದ್ದಾರೆ. ಎಲ್ಲರು ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಒಟ್ಟಿಗೆ ಸೇರುವುದೇ ಅಪರೂಪ. ಪುನಃ ಎಲ್ಲರು ಒಟ್ಟಿಗೆ ಸೇರಿ ಒಂದಷ್ಟು ಹರಟೆ ಹೊಡೆಯೋದಕ್ಕೆ ಅವಕಾಶ ಮಾಡಿಕೊಟ್ಟ ಅಭಿಮನ್ಯುವಿಗೆ ಅರುಣ ಧನ್ಯವಾದ ಸಮರ್ಪಿಸಿ ಗ್ಲಾಸಿನಲ್ಲಿ ಕೊನೆಯದಾಗಿ ಉಳಿದಿದ್ದ ಒಂದು ಸಿಪ್‌ಅನ್ನು ಏರಿಸಿಕೊಂಡ.

ಎಲ್ಲರಿಗಿಂತ ಒಂದು ಪೆಗ್ ಜಾಸ್ತಿ ಏರಿಸಿದ ಸಂಜಯ್ ಕಳವಳಗೊಂಡವನಂತೆ ಅಭಿಮನ್ಯುವಿನ ಕಡೆಗೆ ನೋಡಿ ಏನ್ ಗುರು ಹೋಗಿ, ಹೋಗಿ ಆ ಹುಡುಗಿನ ಪ್ರೀತಿ ಮಾಡ್ಬಿಟ್ಟೆಯಲ್ಲ? ಪ್ರೀತಿ ಮಾಡ್ತಾ ಇರೋದು ಸಂತೋಷ ಪಡುವ ವಿಚಾರವೇ ಸರಿ. ಆದರೆ ಅವಳಪ್ಪ ಸರಿ ಇಲ್ಲ ಕಣೋ. ಈ ವಿಚಾರ ಅವನ ಕಿವಿಗೇನಾದ್ರು ಬಿದ್ರೆ ನಿಮ್ಮಿಬ್ಬರನ್ನ ಜೀವ ಸಹಿತ ಉಳಿಸೋದಿಲ್ಲ. ಸದಾ ಕಿರುಕುಳ ಕಟ್ಟಿಟ್ಟ ಬುತ್ತಿ. ತುಂಬಾ ಸಿಟ್ಟಿನ ಮನುಷ್ಯ. ಅವನೊಬ್ಬನನ್ನ ನಿಭಾಯಿಸಿದರೆ ನೀನು

ಪ್ರೀತಿಯಲ್ಲಿ ಗೆದ್ದ ಹಾಗೆ ಕುಡಿದ ಮತ್ತಿನಲ್ಲಿ ಸತ್ಯದ ವಿಷಯ ತೆರೆದಿಟ್ಟು ಆತಂಕದ ವಾತಾವರಣ ಸೃಷ್ಟಿಸಿದ.
ಪ್ರೀತಿ ಈಗಷ್ಟೇ ಚಿಗುರೊಡೆದಿದೆ. ಈಗಲೇ ಮುಂದೆ ನಡೆಯಬೇಕಾಗಿರುವ ವಿಚಾರದ ಬಗ್ಗೆ ಯೋಚನೆ ಮಾಡಿ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ. ಅಲ್ಲಿ ತನಕ ಜೀವನ ಹೇಗೆ ಸಾಗುತ್ತದೆಯೋ ಹಾಗೆಯೇ ಮುಂದುವರೆಯಬೇಕೆಂದು ನಿರ್ಧರಿಸಿದ ಅಭಿಮನ್ಯು ಸಂಜಯ್‌ನ ಮಾತನ್ನು ತಲೆಗೆ ಹಾಕಿಕೊಳ್ಳಲಿಲ್ಲ.

ಕಷ್ಟದಲ್ಲೇ ಬೆಳೆದು ಬಂದವನಿಗೆ ಇಷ್ಟವಾದ ಸಣ್ಣದೊಂದು ಕಷ್ಟ ಎದುರಿಸಲು ಸಾಧ್ಯವಿಲ್ಲವೇ? ಸಂಜಯ್ ಹೇಳಿದಂತೆ ಆಕೆಯನ್ನು ಪ್ರೀತಿಸೋದು ಮುಳ್ಳಿನ ಹಾಸಿಗೆ ಮೇಲೆ ಮಲಗಿದ ಹಾಗೆ ಎಂಬ ಅರಿವು ಅಭಿಮನ್ಯುವಿಗೆ ಇತ್ತಾದರೂ ಅದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಕೂಡದೆಂದು ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ನಿರ್ಧರಿಸಿದ್ದ. ಸಮಸ್ಯೆ ಬಂದಾಗ ಎದುರಿಸಿದರಾಯಿತು ಎಂಬ ನಿಲುವು ಅವನಲ್ಲಿ ಬಲಗೊಂಡಿತು.

ಜೀವನದಲ್ಲಿ ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ಸುಖಕ್ಕಿಂತ ದುಃಖವನ್ನೇ ಹೆಚ್ಚಾಗಿ ಅನುಭವಿಸಿ ಬಂದಿದ್ದೇನೆ. ಇಂಥಹ ಒಂದು ಜೀವನ ಅವಳಪ್ಪನಿಂದ ಕೊನೆಗೊಂಡರೆ ನನಗೇನು ದುಃಖವಿಲ್ಲ. ಕೊನೆಪಕ್ಷ ನನ್ನ ಹೆಸರು ಪೇಪರ್‌ನಲ್ಲಾದ್ರೂ ಬತದೆ ಅಲ್ವ? ಅದೇ ನನ್ಗೆ ಸಂತೋಷ. ಆ ಸೌಭಾಗ್ಯ ನಿಮ್ಗಂತು ಇಲ್ಲ ಬಿಡಿ ಗೆಳೆಯನ ಗಂಭೀರವಾದ ಮಾತಿಗೆ ಅಭಿಮನ್ಯು ಹಾಸ್ಯದ ತೆರೆ ಎಳೆದ.

ಪ್ರೀತಿಗೋಸ್ಕರ ನೀನು ಜೀವ ಬಿಡೋದೇನೋ ಸರಿ. ಆದರೆ ನಿನ್ನೊಂದಿಗೆ ಸದಾ ಒಡನಾಡಿಕೊಂಡಿರುವ ನಮ್ಮನ್ನು ಪೊಲೀಸರು, ಪತ್ರಕರ್ತರು ನೆಮ್ಮದಿಯಾಗಿ ಇರೋದಕ್ಕೆ ಬಿಡ್ತಾರಾ!? ಪೊಲೀಸರು ವಿಚಾರಣೆ ಹಾಳುಮೂಳು ಅಂತ ಆಗಿಂದಾಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸದೆ ಬಿಡೋದಿಲ್ಲ. ಪತ್ರಕರ್ತರು ಅದನ್ನು ರಸವತ್ತಾಗಿ ಬರೆಯದೆ ಬಿಡೋದಿಲ್ಲ. ಎಷ್ಟೇ ಆದ್ರೂ ಲವ್‌ಸ್ಟೋರಿ ಅಲ್ವ? ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ ಅರುಣ ವಕೀಲನಂತೆ ವಾದಮಂಡಿಸಿ ಸಿಗರೇಟಿಗೆ ಬೆಂಕಿ ತಗುಲಿಸಿ ನೆಮ್ಮದಿಯಾಗಿ ಒಂದು ದಮ್ಮ್  ಎಳೆದು ಸಮ್ಮನಾಗಿಬಿಟ್ಟ.

ಎಲ್ಲರು ಸೇರಿರುವುದೇ ಸಂತೋಷ ಹಂಚಿಕೊಳ್ಳುವುದಕೋಸ್ಕರ. ಆದರೆ, ಪಾರ್ಟಿ ಗಂಭೀರವಾದ ಚರ್ಚೆಯ ಕಡೆಗೆ ವಾಲುತ್ತಿರುವುದನ್ನು ಗಮನಿಸಿದ ರಾಹುಲ್ ಎಲ್ಲರನ್ನು ಸಹಜ ಸ್ಥಿತಿಗೆ ತರಲು ಮುಂದಾದ. ಎಲ್ಲರು ಸೇರಿ ಅವನ ತಲೆ ಹಾಳು ಮಾಡ್ಬೇಡಿ. ಈಗ ತಾನೇ ಲವ್ ಮಾಡೋದಕ್ಕೆ ಶುರು ಮಾಡಿದ್ದಾನೆ. ಇವಾಗ್ಲೇ ಹೆದರಿಸೋದಕ್ಕೆ ಪ್ರಾರಂಭ ಮಾಡಿದ್ರೆ ಹೇಗೆ? ಮದ್ಯದ ನಶೆ ತಲೆಗೇರಿದೊಡನೆ ಎಲ್ಲರಿಗೂ ಎಲ್ಲಿಲ್ಲದ ಧೈರ್ಯ ಎದೆಯೊಳಗೆ ತುಂಬಿಕೊಳ್ಳುತ್ತೆ. ಆದರೆ, ನೀವಿಬ್ಬರು ಆತಂಕದ ವಿಚಾರವನ್ನೇ ಮಾತಾಡ್ತಾ ಕೂತಿದ್ದೀರ. ಮುಂದೆ ಆಗುವುದರ ಬಗ್ಗೆ ಇವಾಗ್ಲೇ ಯಾಕೆ ಚಿಂತೆ ಮಾಡ್ಬೇಕು. ಅವರಿಬ್ಬರು ಪಯಣಿ ಸುತ್ತಿರುವ ಪ್ರೀತಿಯ ದೋಣಿ ದಡ ಸೇರುವ ವಿಶ್ವಾಸ ನನ್ಗಂತು ಇದೆ ರಾಹುಲ್ ಆತಂಕಗೊಂಡವರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ.

ಏನೇ ಹೇಳಿದರೂ ಸಂಜಯ್ ಮಾತ್ರ ತೃಪ್ತನಾಗಲಿಲ್ಲ. ತೃಪ್ತನಾಗುವ ವ್ಯಕ್ತಿಯೂ ಅಲ್ಲ. ಹುಟ್ಟುವಾಗಲೇ ಭಯ ಎಂಬುದು ಅವನ ಬೆನ್ನಿಗಂಟಿಕೊಂಡು ಬಂದಿತ್ತು. ಈ ಹಿಂದೆ ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಪಾರ್ಟಿ ಮುಗಿಯೋದಕ್ಕೆ ಸ್ವಲ್ಪ ಹೊತ್ತು ಹೆಚ್ಚಾದರೂ ಕಳವಳಕ್ಕೆ ಒಳಗಾಗಿ ಬಿಡುತ್ತಿದ್ದ. ಹೊತ್ತಲ್ಲದ ಹೊತ್ತಿಗೆ ಮನೆಗೆ ಕಾಲಿಟ್ಟರೆ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದು ನನ್ನ ಮನೆಯಿಂದ ಹೊರಗಟ್ಟಿದರೆ ಏನು ಗತಿ? ಹಾಗೊಂದ್ವೇಳೆ ಏನಾದರು ನಡೆದರೆ ನನ್ನ ಬದುಕೇ ನಾಶವಾಗಿ ಬಿಡುತ್ತದೆ ಎಂದು ಆತಂಕಕ್ಕೆ ಒಳಗಾಗಿ ಬಿಡುತ್ತಿದ್ದ. ರಾತ್ರೋ ರಾತ್ರಿ ಮನೆಗೆ ಹೋಗುವಾಗ ದೆವ್ವಗಿವ್ವ ಬಂದು ನನ್ನ ಕೊಂದು ಬಿಟ್ರೆ? ಎಂದು ಮನದಲ್ಲಿಯೇ ಹುಚ್ಚುಚ್ಚಾಗಿ ಏನೇನೋ ಕಲ್ಪಿಸಿಕೊಡು ಆತಂಕ ಪಡುವ ಸಂಜಯ್ ಮನದಲ್ಲಿ ಸಹಜವಾಗಿಯೇ ಇಂತಹ ಆತಂಕದ ಪ್ರಶ್ನೆಗಳು ಉದ್ಭವಿಸುವುದು ಸಾಮಾನ್ಯ. ಅಭಿಮನ್ಯುವಿನ ಪ್ರೀತಿಯ ವಿಚಾರದಲ್ಲಿ ಮತ್ತೆ ಆತಂಕಕ್ಕೆ ಒಳಗಾದ ಸಂಜಯ್ ತನ್ನ ಮನದೊಳಗೆ ಕವಿದಿರುವ ಆತಂಕವನ್ನು ಹೊರಗೆಡವಲು ಮುಂದಾದ.

ಅಭಿಮನ್ಯು ಸಾಗುತ್ತಿರುವ ಹಾದಿ ನೋಡಿದ್ರೆ ನನ್ಗೆ ಭಯ ಆಗ್ತಾ ಇದೆ. ಅವನು ಪಯಣಿಸುತ್ತಿರುವ ದೋಣಿ ದಡ ತಲುಪಬೇಕೆಂಬುದು ನನ್ನ ಬಯಕೆ. ಆದರೆ ಮಾರ್ಗದ ಮಧ್ಯ ಸಮಸ್ಯೆ ಎದುರಾದರೆ!? ಮತ್ತೆ ಕಳವಳ ತೋಡಿಕೊಂಡ.

ಎಲ್ಲರ ಮಾತನ್ನು ತುಂಬಾ ಹೊತ್ತಿನಿಂದ ಶಾಂತಚಿತ್ತತೆಯಿಂದ ಆಲಿಸುತ್ತಿದ್ದ ಪುರುಷೋತ್ತಮ್ ಕೈಯಲ್ಲಿದ್ದ ಸಿಗರೇಟನ್ನು ಅಸ್ಟ್ರೆಯಲ್ಲಿ ಹೊಸಕಿಹಾಕಿ ಸಂಜಯ್ ಕಡೆಗೆ ನೋಟ ಬೀರಿ ಅವಳಪ್ಪನನ್ನ ಸ್ಪೈಡರ್‌ಮ್ಯಾನ್‌ನ ಶೌರ್ಯಕ್ಕೆ ಹೋಲಿಕೆ ಮಾಡಿ ಮಾತಾಡ್ಬೇಡ. ಅವನನ್ನ ಎದುರಿಸೋ ತಾಕತ್ತು ನಮ್ಗೆ ಇಲ್ವ? ಅವರೊಂದು ತಂತ್ರ ಹೆಣೆದರೆ ಅದಕ್ಕೆ ಪ್ರತಿ ತಂತ್ರ ಹೆಣೆದರೆ ಆಯ್ತು. ಒಂದ್ವೇಳೆ ಏನಾದರೂ ತಕರಾರು ತೆಗೆದರೆ ಹತ್ತಿಮೂಟೆತರ ಎತ್ತಿ ಕಾವೇರಿ ನದಿಗೆ ಎಸೆದು ಬಿಡುವ ಪುರುಷೋತ್ತಮ್ ಹಾಸ್ಯದ ಧಾಟಿಯಲ್ಲಿ ಹೇಳಿದ.

ಏಯ್…, ತಲೆಕೆಟ್ಟು ಹಾಗೇನಾದ್ರು ಮಾಡ್ಲಿಕ್ಕೆ ಹೋಗ್ಬೇಡ. ಅವಳಪ್ಪ ಸತ್ತೋದ್ರೆ ಅಭಿಮನ್ಯು ಸುಮ್ನೆ ಇತಾನಾ? ಮಾವನನ್ನ ಕಳ್ಕೊಂಡ ದುಃಖದಲ್ಲಿ ನಿನ್ನ ಮೇಲೆ ಕೇಸ್ ಜಡಿಯದೆ ಬಿಡೋದಿಲ್ಲ, ಕೊನೆಗೆ ಪೊಲೀಸರು ನಿನ್ನ ಏರೋಪ್ಲೇನ್ ಹತ್ತಿಸದೆ ಬಿಡೋದಿಲ್ಲ ರಾಹುಲ್‌ನ ಮಾತಿಗೆ ಎಲ್ಲರು ಕಿರುನಗೆ ಬೀರಿದರು.

ಒಂದು ವಿಷಯವಂತೂ ಚೆನ್ನಾಗಿ ನೆನಪಿಟ್ಕೋ ಅಭಿಮನ್ಯು. ಈ ಹುಡುಗಿಯರಿದ್ದಾರಲ್ಲ, ಅವರನ್ನು ಎಲ್ಲಾ ಕಾಲಕ್ಕೂ ನಂಬೋ ಹಾಗಿಲ್ಲ. ಊಸರವಳ್ಳಿ ತರ ಬಣ್ಣ ಬದಲಾಯಿಸ್ತನೇ ಇತಾರೆ. ನೀನಿಲ್ಲದೆ ನಾನಿಲ್ಲವೆಂದು ಡೈಲಾಗ್ ಹೊಡೆಯುತ್ತಾ ಕೊನೆಗೊಂದು ದಿನ ತಮ್ಮ ಘನತೆಗೆ ತಕ್ಕಂತ ಹುಡುಗ ಸಿಕ್ಕರೆ ಪ್ರೀತಿಸಿದ ಹುಡುಗನಿಗೊಂದು ಗುಡ್‌ಬೈ ಹೇಳಿ ಹೊರಟು ಬಿಡ್ತಾರೆ. ನಾಲ್ಕೈದು ವರ್ಷಗಳ ಹಿಂದೆ ಎಲ್ಲರ ವಿರೋಧ ಕಟ್ಟಿಕೊಂಡು ಪ್ರೀತಿ ಮಾಡಿ ಮದ್ವೆ ಆದ ಪ್ರಕಾಶ್-ಲಕ್ಷ್ಮೀದೇವಿ ಜೋಡಿಯ ಕತೆ ಈಗೇನಾಗಿದೆ ಅಂತ ನಿಮ್ಗೇನಾದ್ರು ಗೊತ್ತಾ…!? ಎಂದು ಅರುಣ ಬೇರೊಬ್ಬರ ಕತೆಯನ್ನು ಪಾರ್ಟಿಗೆ ಎಳೆ ತಂದ.

ಎಲ್ಲರು ಇಲ್ಲ ಎಂದು ತಲೆ ಅಲ್ಲಾಡಿಸಿದರು. ಅರುಣನಿಗೆ ಅಷ್ಟೇ ಸಾಕಿತ್ತು. ನೈಜ ಘಟನೆಗೆ ಸ್ವಲ್ಪ ಮಸಾಲೆ ಸೇರಿಸಿ ರಸವತ್ತಾಗಿ ಹೇಳಲು ಅಣಿಯಾದ. ಪ್ರಕಾಶ್ ತರಕಾರಿ ವ್ಯಾಪಾರ ಮಾಡಿಕೊಂಡು ಅವನ ಪಾಡಿಗೆ ನೆಮ್ಮದಿಯಾಗಿದ್ದ. ವಾರಕ್ಕೊಂದು ಸಲ ತರಕಾರಿ ಕೊಂಡುಕೊಳ್ಳೋದಕ್ಕೆ ಬತಾ‌ಇದ್ದ ಲಕ್ಷ್ಮೀದೇವಿ ತನ್ನ ಮೋಹಕ ನೋಟ ಬೀರಿ ಒಂದೆರಡು ತರಕಾರಿಗಳನ್ನು ಹೆಚ್ಚಿಗೆ ಬುಟ್ಟಿಗೆ ಹಾಕಿಕೊಂಡು ಹೋಗ್ತಾ ಇದ್ದಳು. ಒಂದಷ್ಟು ಸಮಯದ ನಂತರ ಅವನನ್ನೇ ಬುಟ್ಟಿಗೆ ಹಾಕ್ಕೊಂಡ್ಲು. ಪ್ರಕಾಶ್ ಎಲ್ಲರ ವಿರೋಧ ಕಟ್ಟಿಕೊಂಡು ಮದ್ವೆ ಕೂಡ ಆದ. ಒಂದೆರಡು ವರ್ಷಗಳ ತನ್ಕ ಎಲ್ಲಾ ಚೆನ್ನಾಗಿಯೇ ಇತ್ತು. ಸಮಸ್ಯೆ ಪ್ರಾರಂಭವಾಗಿದ್ದೇ ಅವನಿಗೆ ಕಾಯಿಲೆ ಕಾಣಿಸಿಕೊಂಡ ನಂತರ. ಹಾಳಾದ ಕಾಯಿಲೆ ಬಂದು ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಂಡ.

ಸೊಂಟದ ಸ್ವಾಧೀನ ಕಳೆದುಕೊಂಡು ದಾಂಪತ್ಯ ಜೀವನ ನಡೆಸುವುದಾದರೂ ಹೇಗೆ? ಆಕೆಗೆ ಯವ್ವನದ ಸುಖ ಬೇಕು. ಆದರೆ, ಅವನಿಂದ ನೀಡೋದಕ್ಕೆ ಸಾಧ್ಯವಾಗ್ಲಿಲ್ಲ. ಗಂಡನ ಸೊಂಟ ಬಿದ್ದೋಗಿದ್ದೇ ತಡ ಆಕೆ ಬೇರೊಬ್ಬನ ಕೈ ಹಿಡಿದುಬಿಟ್ಟಳು. ಆಕೆಯ ಮನವೊಲಿಸಿ ಮತ್ತೆ ಮನೆಗೆ ಕಕೊಂಡುಬಂದು ಹೊಸ ಜೀವನ ಪ್ರಾರಂಭಿಸಲು ನಿರ್ಧರಿಸಿದ. ಬಂದವಳು ಸುಮ್ಮನಿರಲಿಲ್ಲ. ಮನೆಯಲ್ಲಿದ್ದ ಸಾಮಾಗ್ರಿಗಳನ್ನೆಲ್ಲ ಹೊತ್ತೊಯ್ದಳು. ಈಗ ಪ್ರಕಾಶ್ ಅನಾಥ. ಟೀ ಕಾಯಿಸಿ ಕುಡಿಯೋದಕ್ಕ್ಕೂ ಒಂದು ಸಣ್ಣ ಪಾತ್ರೆ ಕೂಡ ಇಲ್ಲ ಕಣ್ರೋ, ಎಲ್ಲ ಬಾಚ್ಕೊಂಡೋದ್ಲು. ಇಂಥಹ ಹುಡುಗಿಯರಿಗೇನು ಪ್ರಪಂಚದಲ್ಲಿ ಕೊರತೆ ಇಲ್ಲ ಎಂದು ಅರುಣ ತನ್ನ ಸ್ತ್ರೀ ಕುಲದ ಧ್ವೇಷವನ್ನು ಉದಾಹರಣೆ ಸಹಿತ ವಿವರಿಸಿ ಸಂತೋಷದಿಂದ ಒಂದು ಪೆಗ್ ಏರಿಸಿಕೊಂಡ.

ಅದಾಗಲೇ ಸಾಕಷ್ಟು ಹೊತ್ತು ಕಳೆದುಹೋಗಿತ್ತು. ಚರ್ಚೆ ಮಾಡುತ್ತಾ ಇದ್ರೆ ಬೆಳಗಾಗೋದು ನಿಶ್ಚಿತ ಎಂದು ತಿಳಿದ ರಾಹುಲ್ ಚರ್ಚಾಕೂಟಕ್ಕೆ ವಿರಾಮಹಾಕಿ ಎಲ್ಲರನ್ನು ಹೊರಡಿಸಿದ. ಬಾರ್‌ನಿಂದ ಹೊರ ಬಿದ್ದಾಗ ಗಂಟೆ ಹನ್ನೊಂದು ಸರಿದು ಹನ್ನೆರಡರ ಕಡೆಗೆ ನಡಿಗೆ ಹಾಕುತಿತ್ತು. ಅಭಿಮನ್ಯು ಮನೆ ಸೇರಿಕೊಳ್ಳುವಷ್ಟರೊಳಗೆ ವಾತ್ಸಲ್ಯ ನಿದ್ರೆಗೆ ಜಾರಿದ್ದರು. ಅಭಿಮನ್ಯು ಮನೆ ಸೇರುವುದಕ್ಕೆ ಹೊತ್ತು ಗೊತ್ತು ಇರುವುದಿಲ್ಲ. ಹೀಗಾಗಿ ವಾತ್ಸಲ್ಯ ಮಗನಿಗೆ ಬೇಕಾದಷ್ಟು ಊಟವನ್ನು ಇಟ್ಟು ಮಲಗಿ ಬಿಡುತ್ತಿದ್ದರು. ಊಟ ಮುಗಿಸಿಕೊಂಡು ಕಂಬಳಿ ಹೊದ್ದು ಮಲಗಲು ಅಣಿಯಾಗುವಷ್ಟರಲ್ಲಿ ಅಕ್ಷರಳ ಮೊಬೈಲ್ ಕರೆ ಬಂತು.

ಹಲೋ…, ನಿದ್ರೆ ಬಲಿಲ್ವ? ಮೊದಮೊದಲು ಪ್ರೀತಿ ಮಾಡೋರಿಗೆ ಹೀಗೆಲ್ಲ ಆಗೋದು ಸಾಮಾನ್ಯ. ತಲೆ ಕೆಡಿಸ್ಕೋಬೇಡ. ನಾಳೆ ಸಂಜೆ ಭೇಟಿಯಾಗಿ ಮಾತಾಡೋಣ ಅಂದ ಅಭಿಮನ್ಯು, ಮಾತುಮುಗಿಸಲು ಮುಂದಾದ.

ಗಂಟೆ ಹನ್ನೆರಡು ಬಾರಿಸಿದರೂ ಆಕೆಯ ಬಳಿ ನಿದ್ರೆ ಸುಳಿಯಲೇ ಇಲ್ಲ. ಆಗಿಂದಾಗೆ ಅಭಿಮನ್ಯುವಿನ ನೆನಪುಗಳು ಆಕೆಯ ಮನದೊಳಗೆ ಸಾಗರದ ಅಲೆಗಳಂತೆ ಬಂದು ಅಪ್ಪಳಿಸತೊಡಗಿದವು. ಪ್ರೀತಿ ಚಿಗುರೊಡೆದಿರುವುದಕ್ಕೆ ಆಕೆಯಲ್ಲಿ ಉಂಟಾಗಿರುವ ಸಂತೋಷಕ್ಕೆ ಎಣೆಯೇ ಇರಲಿಲ್ಲ. ಆ ಸಂತೋಷದಲ್ಲಿ ನಿದ್ರೆ ಮರೆತು ಹೋಯಿತು. ಅಭಿಮನ್ಯುವಿನ ಧ್ಯಾನ ಮಾಡುತ್ತಾ ಕುಳಿತುಬಿಟ್ಟಳು. ಸಾಕಷ್ಟು ಹೊತ್ತು ಬೆಡ್‌ಮೇಲೆ ಹೊರಳಾಡಿದರೂ ನಿದ್ರೆ ಬಳಿ ಸುಳಿಯಲೇ ಇಲ್ಲ. ಒಂದಷ್ಟು ಹೊತ್ತು ಅಭಿಮನ್ಯುವಿನೊಂದಿಗೆ ಮಾತಾಡದೆ ಇದ್ದರೆ ಮನಸ್ಸಿಗೆ ನೆಮ್ಮದಿ ಸಿಗೋದಿಲ್ಲವೆಂದು ಅಭಿಮನ್ಯುವಿಗೆ ಫೋನಾಯಿಸಿದ್ದಳು.

ಏನಾದ್ರು ಮಾತಾಡೋ, ನನ್ಗಂತೂ ನಿದ್ರೆನೇ ಬತಾ ಇಲ್ಲ. ಎಲ್ಲದಕ್ಕೂ ನೀನೇ ಕಾರಣ. ನೆಮ್ಮದಿಯಾಗಿ ನಿದ್ರೆ ಮಾಡ್ಲಿಕ್ಕೂ ಬಿಡ್ತಾ ಇಲ್ಲ. ಕನಸಲ್ಲೂ ಬಂದು ಕಾಡ್ತಾ ಇತಿಯ…

ನಾನು ಕನಸಿನಲ್ಲಿ ಬಂದು ಕಾಡ್ತಾ ಇದ್ರೆ ನೀನು ತಡರಾತ್ರಿಯಲ್ಲಿ ಫೋನ್ ಮಾಡಿ ಕಾಡ್ತಾ ಇದ್ದಿಯ. ಗಂಟೆ ಹನ್ನೆರಡು ಕಳೆದಿದೆ. ನನ್ಗಂತೂ ನಿದ್ರೆ ತೂಗ್ತಾ ಇದೆ. ನಾವಿಬ್ರು ಹೀಗೆ ಮಾತಾಡ್ತಾ ಇದ್ರೆ ಅಮ್ಮನಿಗೆ ಎಚ್ಚರವಾಗಿ ನನ್ಗೆ ಒದೆ ಬೀಳುತ್ತೆ ಅಷ್ಟೆ ಅಂದ ಅಭಿಮನ್ಯು ಫೋನ್ ಸಂಪರ್ಕ ಕಡಿತಗೊಳಿಸಿ ನಿದ್ರೆಗೆ ಜಾರಿದ.

ಅಭಿಮನ್ಯು ನಿದ್ರೆಗೆ ಜಾರಿ ಕೆಲವು ಗಂಟೆಗಳು ಕಳೆಯುವಷ್ಟರೊಳಗೆ ಮತ್ತೆ ಮೊಬೈಲ್ ಅರಚಿಕೊಳ್ಳಲು ಪ್ರಾರಂಭಿಸಿತು. ಇದ್ಯಾರಪ್ಪ ತಡರಾತ್ರಿಯಲ್ಲಿ ಕರೆ ಮಾಡ್ತಾ ಇರೋದು ಎಂದು ದಡಬಡಾಯಿಸುತ್ತಾ ಮೇಲೆದ್ದು ಮೊಬೈಲ್ ಕೈಗೆತ್ತಿಕೊಂಡ. ಹಲೋ ಮೈಡಿಯರ್ ಸ್ವೀಟ್ ಹಾರ್ಟ್ ಅತ್ತಿಂದ ಅಕ್ಷರಳ ಧ್ವನಿ ಕೇಳಿಸಿತು.

ನೀನಿನ್ನೂ ಮಲ್ಕೊಂಡೇ ಇದ್ದೀಯ? ಗಂಟೆ ಆರಾಯ್ತು, ಸೋಂಬೇರಿ ತರ ಮಲ್ಕೋ ಬೇಡ. ಬೇಗ ಎದ್ದು ರೆಡಿಯಾಗು. ದಿನಾ ನೀನು ಹೀಗೆ ಸೂರ್ಯ ಉದಯಿಸಿದರೂ ಮಲ್ಕೊಂಡಿದ್ರೆ ದಿನಾ ಬೆಳಗ್ಗೆ ಫೋನ್ ಮಾಡಿ ಕಿರುಕುಳ ಕೊಟ್ಟೇ ಕೊಡ್ತಿನಿ. ಇನ್ನು ಮುಂದೆ ದಿನನಿತ್ಯ ಆರು ಗಂಟೆಯೊಳಗೆ ಎದ್ದಿರಬೇಕು. ಇಲ್ದಿದ್ರೆ ನಾನೇ ನಿನ್ಗೆ ಅಲರಂ ಆಗ್ತೇನೆ ಅಂದಳು.

ಆಯ್ತು ಬಿಡು, ಎಲ್ಲಾ ನನ್ನ ಹಣೆಬರಹ ಎಂದು ಗೊಣಗುತ್ತಾ ಹಾಸಿಗೆಯಿಂದ ಮೇಲೆದ್ದ ಅಭಿಮನ್ಯು ಅಮ್ಮ ಮಾಡಿಟ್ಟ ತಿಂಡಿಯನ್ನು ತಿಂದು ಕಚೇರಿ ಕಡೆಗೆ ನಡೆದ. ಕಚೇರಿ ತೆರೆಯುವುದಕ್ಕಿಂತ ಮುಂಚೆಯೇ ರಾಹುಲ್ ಅಭಿಮನ್ಯುವಿನ ಆಗಮನಕ್ಕಾಗಿ ಕಾದು ಕುಳಿತ್ತಿದ್ದ. ಇವನಿಗೇನಾಗಿದೆ? ಇಷ್ಟೊಂದು ಬೆಳಗ್ಗೆ ಬಂದು ಕೂತ್ಕೊಂಡಿದ್ದಾನಲ್ಲ. ಏನಾದ್ರು ಅನಾಹುತ ಆಗಿರಬಹುದೇ? ಎಂದು ಆತಂಕಗೊಂಡು ರಾಹುಲ್ ಬಳಿ ಆಗಮಿಸಿದ.

ಗುರು ಗೋವಾಕ್ಕೆ ಹೋಗೋಣ್ವ? ಎಲ್ಲರು ಒಟ್ಟಿಗೆ ಹೋಗೋಣ ಅಂಥ ತೀರ್ಮಾನ ಮಾಡಿದ್ದೇವೆ. ನಾಳೆನೇ ಹೊರಡೋಣ. ನೀನು ಕೂಡ ಬಬೇಕು ಕೋರಿಕೆ ಮುಂದಿಟ್ಟ ರಾಹುಲ್.

ಸದ್ಯ ಯಾವುದೇ ಅನಾಹುತವಾಗಿಲ್ಲವೆಂದು ನಿಟ್ಟುಸಿರು ಬಿಟ್ಟ. ಬೆಳ್ಳಂಬೆಳಗೆ ಸಂತಸದ ಸುದ್ದಿ ಕೇಳಿ ಅಭಿಮನ್ಯುವಿನ ಮನಸ್ಸು ಹಿಗ್ಗಿ ಹೋಯಿತು. ಒಂದೇ ಕಡೆ ಇದ್ದು ಮನಸ್ಸು ಜಡ್ಡುಗಟ್ಟಿ ಹೋಗಿದೆ. ಎಲ್ಲಿಗಾದ್ರು ಹೋಗಿ ಒಂದಷ್ಟು ಸಮಯ ಕಳೆಯಬೇಕೆಂದು ಅಂದುಕೊಂಡಿದ್ದ. ಅಂತಹ ಒಂದು ಸಂದರ್ಭ ಈಗ ಒದಗಿ ಬಂದದಕ್ಕೆ ಸಂತಸಗೊಂಡ.

ಹೊರಡೋಣ ಅದಕ್ಕೇನಂತೆ. ನನ್ಗೂ ಇಲ್ಲಿದ್ದು ಬೋರ್ ಹೊಡಿಯ್ತಾ ಇದೆ. ದಿನ ಬೆಳೆಗಾದರೆ ಅದೇ ಜನ, ಅದೇ ಊರನ್ನ ನೋಡಿ, ನೋಡಿ ಸಾಕಾಗಿ ಹೋಗಿದೆ. ಟೂರ್ ಹೋಗದೆ ಸಾಕಷ್ಟು ವರ್ಷಗಳೇ ಕಳೆದುಹೋಗಿದೆ. ಈಗ ಬಂದಿರುವ ಅವಕಾಶ ಮಿಸ್ ಮಾಡಿಕೊಳ್ಳೋದಿಲ್ಲ. ನಾನಂತು ಈಗ್ಲೇ ಹೊರಡ್ಲಿಕ್ಕೆ ಸಿದ್ಧವಾಗಿದ್ದೇನೆ ಉತ್ಸಾಹದಿಂದ ಹೇಳಿದ.

ಸಂಜೆ ರಾಜಾಸೀಟ್ ಉದ್ಯಾನವನದಲ್ಲಿ ಅಕ್ಷರಳನ್ನು ಭೇಟಿಯಾದ ಅಭಿಮನ್ಯು ಗೋವಾ ಪ್ರವಾಸದ ವಿಚಾರ ತೆರೆದಿಟ್ಟ. ನಾಳೆ ಸ್ನೇಹಿತರೆಲ್ಲ ಗೋವಾಕ್ಕೆ ಹೋಗ್ತಾ ಇದ್ದೇವೆ. ಬರುವುದಕ್ಕೆ ಒಂದೆರಡು ದಿನ ಅಗ್ಬೊಹುದು. ಟೂರ್ ಹೋಗದೆ ಸಾಕಷ್ಟು ವರ್ಷಗಳೇ ಕಳೆದು ಹೋಗಿದೆ. ಒಂದೆರಡು ದಿನ ಹೊರಗೆ ಇದ್ದು ಬಂದರೆ ಮನಸ್ಸಿಗೆ ಸ್ವಲ್ಪ ಹಿತ ಅನ್ನಿಸ್ಬೊಹುದು. ಸಾಧ್ಯವಾದ್ರೆ ನೀನು ಬಂದ್ಬಿಡು ಕೇಳಿದ.

ಅಭಿಮನ್ಯುವನ್ನು ಒಂದುದಿನ ಕೂಡ ಬಿಟ್ಟು ಇರಲಾಗದ ಆಕೆಗೆ ಅಭಿಮನ್ಯು ಹೊರಗೆ ಹೋಗುತ್ತಿದ್ದಾನೆಂಬ ಮಾತನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಹೋಯಿತು. ಗೋವಾಕ್ಕ್ಕೆ ಹೋಗೋದೇನೋ ಸರಿ. ಆದರೆ ನನ್ನ ಪರಿಸ್ಥಿತಿನ ಅರ್ಥಮಾಡ್ಕೊಂಡಿದ್ದೀಯ? ನಿನ್ನ ಬಿಟ್ಟು ಒಂದು ದಿನ ಕೂಡ ನನ್ಗೆ ಇರೋಕಾಗಲ್ಲ. ನಿನ್ನ ಕಳುಹಿಸಿಕೊಡೋದಕ್ಕೆ ಮನಸ್ಸು ಒಪ್ಪುತ್ತಿಲ್ಲ ಅಭಿ. ಬೆಳಗ್ಗೆ ಹೋಗಿ ಸಂಜೆ ಬರುವುದಾದ್ರೆ ಪವಾಗಿಲ್ಲ. ಎರಡು ದಿನ ನಿನ್ನ ಬಿಟ್ಟು ಹೇಗೆ ತಾನೇ ಇಲಿ? ಅದರ ಬಗ್ಗೆ ಸ್ವಲ್ಪನಾದ್ರು ಯೋಚ್ನೆ ಮಾಡಿದ್ದೀಯ?

ದಿನಾ ಅಭಿಮನ್ಯುವಿನ ಬಿಸಿಯಪ್ಪುಗೆಯಲ್ಲಿ ಬಂಧಿಯಾಗಿ ಲೋಕವನ್ನೇ ಮರೆತು ಸಂತೋಷದಿಂದ ಕಾಲ ಕಳೆಯಲು ಬಯಸುವ ಆಕೆಗೆ ಎರಡು ದಿನ ಅಗಲಿ ಇದ್ದರೆ ಎರಡು ಜನ್ಮ ಅನುಭವಿಸಬೇಕಾದಷ್ಟು ಪ್ರೀತಿ ಕಳೆದುಹೋಗುತ್ತದೆಯೋ ಎನೋ ಎಂಬ ಭಯ. ಒಂದೇ ಒಂದು ದಿನ ಕೂಡ ಭೇಟಿಯಾಗದೆ ಇದ್ದರೆ ಚಡಪಡಿಸುವ ಆಕೆಗೆ ಎರಡು ದಿನ ಅಭಿಮನ್ಯು ತನ್ನ ಬಳಿ ಇರುವುದಿಲ್ಲ ಎಂಬ ಮಾತನ್ನು ಕಲ್ಪನೆ ಸಹ ಮಾಡಿಕೊಳ್ಳಲು ಸಾಧ್ಯವಾಗದೆ ಹೋಯಿತು.

ಅಭಿಮನ್ಯುವಿಗೆ ಅಕ್ಷರ ತೋರುತ್ತಿರುವ ಪ್ರೀತಿ ಸ್ವಲ್ಪ ಅತಿಯಾಯಿತು ಅನ್ನಿಸದೆ ಇರಲಿಲ್ಲ. ಹುಡುಗಿಯರು ಅಗತ್ಯಕ್ಕಿಂತ ಹೆಚ್ಚಾಗಿಯೇ ಪ್ರೀತಿ ತೋರಿಸುತ್ತಾರೆ. ಎಲ್ಲಿಗೂ ಹೋಗಲು ಬಿಡದೆ ಕಟ್ಟಿಹಾಕಿ ಬಿಡುತ್ತಾರೆ. ಒಂದೆರಡು ದಿನ ದೂರ ಇದ್ದರೆ ಏನಾಗಿ ಬಿಡುತ್ತದೆ? ಅದಕ್ಕೂ ಒಪ್ಪಿಗೆ ಕೊಡ್ತಾ ಇಲ್ಲ. ರಾಹುಲ್‌ಗೆ ಬಂದೇ ಬತೇನೆ ಅಂತ ಮಾತು ಕೊಟ್ಟಾಗಿದೆ. ಈಗ ಬರೋದಿಲ್ಲ ಅಂದರೆ ಏನಂದುಕೊಳ್ಳುತ್ತಾನೋ ಏನೋ? ಈ ವಿಚಾರ ಇವಳಿಗೆ ಹೇಳಿದ್ದೇ ದೊಡ್ಡ ತಪ್ಪಾಯ್ತೆಂದು ಅಂದುಕೊಂಡ.

ಅಗಲಿಕೆ ಎಂಬುದು ಪ್ರೀತಿಯನ್ನು ಮತ್ತಷ್ಟು ಹತ್ತಿರ ತಂದು ನಿಲ್ಲಿಸಿಬಿಡುತ್ತದೆ. ಹತ್ತಿರ ಇದ್ದಷ್ಟು ದಿನ ಪ್ರೀತಿ ಎಷ್ಟೊಂದು ಗಾಢವಾಗಿದೆ ಎಂಬುದು ಅರಿವಿಗೆ ಬರುವುದೇ ಇಲ್ಲ. ಅಗಲಿಕೆಯ ಕ್ಷಣದಲ್ಲಿ ಮಾತ್ರ ಪ್ರೀತಿ ಎಷ್ಟೊಂದು ತೀವ್ರ ಸ್ವರೂಪ ಪಡೆದುಕೊಂಡಿದೆ ಎಂಬುದು ಮನವರಿಕೆಯಾಗುತ್ತದೆ. ದೂರ ಇದ್ದಷ್ಟು ಪ್ರೀತಿ ಹೆಚ್ಚಾಗಿರುತ್ತದೆ. ನದಿ ಸಾಗರವನ್ನು ಸೇರಿಕೊಳ್ಳುವ ತವಕದಲ್ಲಿ ಓಡುವ ಹಾಗೆ ದೂರ ಇದ್ದಾಗ ಯಾವಾಗ ಪ್ರೀತಿಯ ದಡ ಸೇರಿಸಿಕೊಂಡು ಪ್ರೀತಿಯ ಆನಂದವನ್ನು ಆಸ್ವಾದಿಸುವ ಕ್ಷಣ ಬರುತ್ತದೆಯೋ ಎಂದು ಮನಸ್ಸು ಕ್ಷಣ ಕ್ಷಣಕ್ಕೂ ತುಡಿಯುತ್ತಿರುತ್ತದೆ ಎಂದು ಆಕೆಗೆ ಮನವರಿಕೆ ಮಾಡಿಕೊಟ್ಟರೂ ಆಕೆ ಒಪ್ಪುವ ಸ್ಥಿತಿಯಲ್ಲಿರಲಿಲ್ಲ.

ಅಭಿ, ದಯವಿಟ್ಟು ನನ್ನ ಮಾತುಕೇಳು. ನೀನು ಹೋಗ್ಬೇಡ.. ಹೋಗ್ಬೇಡ… ಹೋಗ್ಬೇಡ… ಅಷ್ಟೇ. ಇದ್ಕಿಂತ ಹೆಚ್ಚಿಗೆ ಹೇಳೋದಿಲ್ಲ. ನೀನು ಎರಡು ದಿನ ಬಿಟ್ಟು ಹೋದ್ರೆ ನಾನು ನೀರಿನಿಂದ ದಡಕ್ಕೆ ಎತ್ತಿ ಎಸೆದ ಮೀನಿನಂತೆ ವಿಲವಿಲನೆ ಒದ್ದಾಡ್ತನೇ ಇತೇನೆ. ಆ ದಡದಲ್ಲಿ ಬಿದ್ದು ಒದ್ದಾಡುವ ಮೀನಿನ ಪರಿಸ್ಥಿತಿ ನನ್ಗೂ ಬಲಿ ಅಂತ ಬಯಸೋದಾದ್ರೆ ಧಾರಾಳ ವಾಗಿ ಹೋಗ್ಬೊಹುದು. ಅದಕ್ಕೆ ನನ್ನ ಅಭ್ಯಂತರವಿಲ್ಲ ತುಸು ಕೋಪ ತೋರ್ಪಡಿಸಿದಳು.

ಅಭಿಮನ್ಯು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ. ಒಬ್ಬರ ಆಸೆ ಈಡೇರಿಸಲು ಹೋದರೆ ಮತ್ತೊಬ್ಬರ ಮುನಿಸು ಎದುರಿಸುವ ಪರಿಸ್ಥಿತಿ. ಒಂದು ಕ್ಷಣ ಕೂತು ಅತ್ತು ನಿರಾಳವಾಗಿ ಬಿಡುವ ಅನ್ನಿಸಿತು. ಸ್ವಲ್ಪ ಹೊತ್ತು ಮೌನಕ್ಕೆ ಮಾರುಹೋಗಿ ಮತ್ತೆ ಏರಿದ ಧ್ವನಿಯಲ್ಲಿ ಮಾತನಾಡತೊಡಗಿದ.

ಹುಚ್ಚುಚ್ಚಾಗಿ ಏನೇನೋ ಕಲ್ಪನೆ ಮಾಡ್ಕೊಂಡು ಮಾತಾಡ್ಬೇಡ. ನನ್ಗೆ ಕೋಪ ಬತಾ ಇದೆ. ನೀನು ನನ್ನ ಮೇಲೆ ಎಷ್ಟು ಪ್ರೀತಿ ಇಟ್ಟಿದೆಯೋ ಅಷ್ಟೇ ಪ್ರೀತಿ ಸ್ನೇಹಿತರು ಕೂಡ ಇಟ್ಟಿದ್ದಾರೆ. ಅವರ ಆಸೆಗಳಿಗೆ ತಣ್ಣೀರೆರಚಲು ನನ್ಗಂತೂ ಇಷ್ಟ ಇಲ್ಲ ಮುಖ ಊದಿಸಿಕೊಂಡು ಮನದಲ್ಲಿದ್ದ ಕೋಪವನ್ನೆಲ್ಲ ಹೊರಗೆಡವಿದ.

ಹಾಗಾದ್ರೆ ನನ್ನ ಆಸೆಗಳಿಗೆ ತಣ್ಣೀರು ಎರಚಬೇಕು ಅಂದುಕೊಡಿದ್ದೀಯ? ತೀಕ್ಷ್ಣವಾಗಿ ಕೇಳಿದಳು.

ನೀನು ಹಾಗೆ ಅಂದುಕೊಂಡ್ರೆ ನಾನೇನು ಮಾಡ್ಲಿಕ್ಕೆ ಸಾಧ್ಯವಿಲ್ಲ ಆಕೆಯ ಪ್ರಶ್ನೆಗೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿ ಇನ್ನು ಮಾತನಾಡಿ ಸುಖವಿಲ್ಲವೆಂದು ನಿರ್ಧರಿಸಿ ರಾಜಾಸೀಟ್‌ನಿಂದ ಎದ್ದು ಆಕೆಗೆ ಒಂದು ಮಾತು ಕೂಡ ಹೇಳದೆ ನಡೆದುಬಿಟ್ಟ. ಭಾರವಾದ ಮನಸ್ಸಿನೊಂದಿಗೆ ಆತ ಹೋಗುವ ಹಾದಿಯನ್ನೇ ನೋಡುತ್ತಾ ಕುಳಿತ ಆಕೆಯ ಕಣ್ಗಳಲ್ಲಿ ನೀರು ತುಂಬಿಕೊಂಡಿತು. ರಾಜಾಸೀಟ್‌ನಲ್ಲಿ ತುಂಬಿದ ಜನರೆದುರು ದುಃಖವನ್ನು ತೋರ್ಪಡಿಸಿಕೊಳ್ಳಲು ಸಾಧ್ಯವಾಗದೆ ನೋವನ್ನು ನುಂಗಿಕೊಂಡಳು. ಪ್ರೀತಿಯಲ್ಲಿ ಬಂದ ಮೊದಲ ವಿರಸ ಅದು. ಹೀಗಾಗಿ ಆಕೆ ಅಗತ್ಯಕ್ಕಿಂತ ಹೆಚ್ಚಾಗಿ ಆತಂಕಕ್ಕೊಳಗಾಗಿ ನೊಂದುಕೊಂಡು ದುಃಖದ ಕಡಲಲ್ಲಿ ತೇಲತೊಡಗಿದಳು.

ಪ್ರೀತಿ ಇಲ್ಲಿಗೆ ಕೊನೆಯಾಗಿ ಹೋದರೆ? ಎಂಬ ಪ್ರಶ್ನೆ ಆಗಿಂದಾಗೆ ಮನದೊಳಗೆ ಕಾಡಲು ಪ್ರಾರಂಭಿಸಿ ಮತ್ತಷ್ಟು ದುಃಖ ತರಿಸಿತು. ಬೀಸುವ ತಂಗಾಳಿಯು ಕೂಡ ದುಃಖವನ್ನು ಹೊತ್ತು ತಂದ ಅನುಭವ. ಛೇ, ಈ ಹುಡುಗರೆಂದರೆ ಇಷ್ಟೇನಾ? ಹುಡುಗಿಯರ ಮಾತಿಗೆ ಒಂದು ಬೆಲೆಯೇ ಇಲ್ಲವೇ? ಸದಾ ತನ್ನೊಂದಿಗೆ ಇರಬೇಕೆಂದು ಆಸೆ ಪಡೋದೂ ತಪ್ಪಾ? ನಾನು ನನಗಿಂತ ಹೆಚ್ಚಾಗಿ ಅವನನ್ನ ಪ್ರೀತಿ ಮಾಡಿದ್ದೇ ತಪ್ಪಾ? ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಇಂಥಹ ಹತ್ತಾರು ಪ್ರಶ್ನೆಗಳ ನಡುವೆ ಅಭಿಮನ್ಯುವಿನೊಂದಿಗೆ ನಡೆದುಕೊಂಡ ರೀತಿ ಸರಿ ಇಲಿಲ್ವ? ಎಂಬ ಪ್ರಶ್ನೆ ಆಕೆಯಲ್ಲಿ ಮತ್ತಷ್ಟು ದುಗುಡ ಹೆಚ್ಚಿಸಿತು. ಅಭಿಮನ್ಯು ತನ್ನೊಂದಿಗೆ ಎಂದೂ ಮರು ಮಾತಾಡಿದವನಲ್ಲ. ಇಂದು ಪ್ರೀತಿಯನ್ನೇ ತಿರಸ್ಕರಿಸುವ ರೀತಿಯಲ್ಲಿ ಎದ್ದು ಹೊರಟು ಹೋಗಿದ್ದಾನೆ. ಹೊರಡುವ ಮುನ್ನ ಒಂದು ಮಾತು ಕೂಡ ಆಡದೆ. ಅವನಿಗೆ ಏನನ್ನಿಸಿತೋ ಏನೋ? ಹೌದು. ತಪ್ಪು ನನ್ನಿಂದಲೇ ಆಗಿದೆ. ಸದಾ ತನ್ನೊಂದಿಗೇ ಇರಬೇಕೆಂದು ಬಯಸುವಂತೆ ಆತನ ಸ್ನೇಹಿತರು ಕೂಡ ನಮ್ಮೊಂದಿಗೆ ಅಭಿಮನ್ಯು ವರ್ಷದಲ್ಲಿ ಒಂದೆರಡು ದಿನವಾದ್ರೂ ಕಳೆಯಲಿ ಎಂದು ಆಸೆ ಪಡೋದ್ರಲ್ಲಿ ತಪ್ಪೇನಿದೆ? ಕಳುಹಿಸಿಕೊಡುವುದೇ ವಾಸಿ ಇತ್ತು. ಕಳುಹಿಸಿಕೊಟ್ಟಿದ್ರೆ ಇಷ್ಟೊಂದು ರಾದ್ಧಾಂತಗಳೇ ನಡೆಯುತ್ತಿರಲಿಲ್ಲವೆಂದು ಅಂದುಕೊಂಡ ಅಕ್ಷರ ರಾಜಾಸೀಟ್ ಮುಂಭಾಗದ ಬೆಟ್ಟದಲ್ಲಿ ಕಣ್ಮರೆಯಾಗುತ್ತಿದ್ದ ಸೂರ್ಯನನ್ನೇ ನೋಡುತ್ತಾ ಏಕಾಂತದಲ್ಲಿ ಹಲವು ಹೊತ್ತು ಕಳೆದು ಮನೆಯ ಹಾದಿ ಹಿಡಿದಳು.

ತುಂಬಾ ದು:ಖಿತನಾದ ಅಭಿಮನ್ಯು ಕಚೇರಿಯಲ್ಲಿ ಒಂದಷ್ಟು ಹೊತ್ತು ಕಳೆದು ಬೇಗನೆ ಮನೆಗೆ ತೆರಳಿದ. ಮನೆಗೆ ಬೇಗನೆ ಬಂದ ಮಗನನ್ನು ಕಂಡ ವಾತ್ಸಲ್ಯ ಏನ್ ಮಗ ನಾಳೆ ಟೂರ್ ಹೋಗ್ಬೇಕೂಂತ ಬೇಗ ಬಂದಿದ್ದೀಯ? ನಾನು ಅವಾಗ್ಲೇ ಹೊರಡೋದಕ್ಕೆ ಬೇಕಾದ ಬಟ್ಟೆಗಳಿಗೆಲ್ಲ ಐರನ್ ಮಾಡಿಟ್ಟಿದ್ದೇನೆ ಅಂದರು.

ಹಾಳಾದ ಟೂರೂ ಬ್ಯಾಡ, ಏನೂ ಬೇಡ ಅಂತ ಅನ್ನಿಸ್ತಾ ಇದೆ. ನನ್ಗೆ ಟೂರ್ ಹೋಗ್ಲಿಕ್ಕೆ ಮನಸ್ಸಿಲ್ಲ. ಆ ಬಗ್ಗೆ ಏನು ಮಾತಾಡ್ಬೇಡ. ಊಟ ಇದ್ರೆ ಹಾಕು ಎಂದು ಕೈ ತೊಳೆದು ಊಟಕ್ಕೆ ಕುಳಿತುಕೊಂಡ.

ಮಗನಿಗೆ ಮೊದಲೇ ಮೂಗಿನ ತುದಿಯಲ್ಲಿ ಕೋಪ ಇನ್ನು ಮಾತಾಡಿ ಸುಖವಿಲ್ಲ ಅಂದುಕೊಂಡರು. ಟೂರ್ ಕ್ಯಾನ್ಸಲ್ ಆಗಲು ಕಾರಣವೇನೆಂದು ತಿಳಿದುಕೊಳ್ಳಲು ಆಸಕ್ತಿ ಇತ್ತಾದರೂ ಮಗನ ಕೋಪಕಂಡು ಆ ಬಗ್ಗೆ ಮಾತಾಡದೆ ಊಟ ಬಡಿಸಿದರು.

ಊಟ ಮುಗಿಸಿಕೊಂಡ ಅಭಿಮನ್ಯು ನಾಳೆ ದಿನ ಗೆಳೆಯರಿಗೆ ಹೇಗೆ ಮುಖ ತೋರಿಸುವುದೆಂದು ಚಿಂತೆಯಲ್ಲಿ ಮುಳುಗಿ ಮೆಲ್ಲನೆ ನಿದ್ರೆಗೆ ಜಾರಿದ. ಬೇಗ ಮಲಗಿದ್ದರಿಂದ ಬೆಳಗ್ಗಿನ ಜಾವ ಐದು ಗಂಟೆಗೆ ಎಚ್ಚರವಾಯಿತು. ಎದ್ದು ಶುಚಿಯಾಗಿ ಕಚೇರಿ ಕಡೆಗೆ ನಡೆದ. ಬೆಳಗ್ಗಿನ ಜಾವ ಎಲ್ಲಾ ಸ್ನೇಹಿತರು ಗೋವಾಕ್ಕೆ ಹೊರಡೋದಕ್ಕೆ ಕಿಟ್ ಸಹಿತ ತಯಾರಾಗಿ ನಿಂತಿದ್ದರು.

ಅಭಿಮನ್ಯು,  ಏನಿದು ನಿನ್ನ ಅವತಾರ? ಗೋವಾಕ್ಕೆ ಬರೋ ಹಾಗೆ ಕಾಣ್ತಾ ಇಲ್ಲ? ಕೇಳಿದ ರಾಹುಲ್.

ಏನ್ಮಾಡೋದು ಎಲ್ಲಾ ನನ್ನ ಹಣೆ ಬರಹ. ನಿಮ್ಮೊಂದಿಗೆ ಹೊರಡೋದಕ್ಕೆ ದೇಹ, ಮನಸ್ಸು ಎರಡೂ ಕೂಡ ಸಿದ್ಧವಾಗಿ ನಿಂತಿತ್ತು. ಈ ಬಗ್ಗೆ ನನ್ಗೂ ಅಕ್ಷರಳಿಗೂ ಸ್ವಲ್ಪ ಮಾತಾಯ್ತು. ಟೂರ್ ಹೋಗ್ಬೇಡ ಅಂತ ಹಟ ಹಿಡ್ದು ಕೂತಿದ್ದಾಳೆ. ಇನ್ನೇನು ಮಾಡ್ಲಿಕ್ಕೆ ಸಾಧ್ಯ ಹೇಳು? ನೀವು ಹೋಗಿ ಬನ್ನಿ. ಮತ್ತೊಂದು ಸಲ ಎಲ್ಲಿಗಾದ್ರು ಹೋಗೋಣ ಅಂದ.

ಅಭಿಮನ್ಯುವಿನ ಮಾತು ರಾಹುಲ್‌ಗೆ ಸಹಜವಾಗಿಯೇ ಕೋಪ ತರಿಸಿತು. ಒಂದು ಹುಡುಗಿಗೋಸ್ಕರ ಸ್ನೇಹಿತರನ್ನೇ ಮರೆಯೋ ಮಟ್ಟಕ್ಕೆ ತಲುಪಿ ಬಿಟ್ಟನಲ್ಲ? ಎಂದು ಮನದಲ್ಲಿಯೇ ಅಂದುಕೊಂಡ. ಗುರು, ಎಲ್ಲರು ದೇವರ ಜಪ ಮಾಡ್ಕೊಂಡು ಕೂತಿದ್ರೆ ನೀನು ಮಾತ್ರ ಅವಳ ಜಪ ಮಾಡ್ಕೊಂಡು ಕೂತಿದ್ದೀಯ. ಪ್ರೀತಿ..ಪ್ರೀತಿ… ಅಂತ ದಿನದ ಇಪ್ಪತ್ತನಾಲ್ಕು ಗಂಟೆನೂ ಅದರಲ್ಲಿಯೇ ಕಾಲ ಕಳಿಬೇಡ. ಸ್ವಲ್ಪ ಸಮಯವನ್ನಾದರೂ ಬೇರೆ ವಿಷಯದ ಕಡೆಗೆ ಗಮನ ಹರಿಸೋದಕ್ಕೆ ಮೀಸಲಿಡು. ಅವಳು ನಿನ್ನ ಕೈ ಹಿಡಿದರೆ ನಮ್ಗೆಲ್ಲರಿಗೂ ಸಂತೋಷ. ಒಂದ್ವೇಳೆ ಕೈಕೊಟ್ಟರೆ ನೀನು ಆಕಾಶನೇ ನೋಡ್ಕೊಂಡು ಕೂತ್ಕೊಂಡಿರಬೇಕಷ್ಟೆ. ಹುಡ್ಗೀರನ್ನ ತುಂಬಾ ನಂಬ್ಲಿಕ್ಕೆ ಹೋಗ್ಬೇಡ. ಒಂದಲ್ಲಾ ಒಂದು ದಿನ ಕೈ ಕೊಟ್ಟೇ ಕೊಡ್ತಾರೆ. ಆಗ ನಿನ್ನ ಸಂತೈಸೋದಕ್ಕೆ ಸ್ನೇಹಿತರು ಪಕ್ಕದಲ್ಲಿ ರುತ್ತಾರೆಯೇ ಹೊರತು ಆ ನಿನ್ನ ಪ್ರೇಯಸಿ ಅಲ್ಲ. ಇದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೋ. ಯಾವತ್ತಿಗಾದ್ರು ಉಪಯೋಗಕ್ಕೆ ಬಬೊದು ಎಂದ ರಾಹುಲ್ ಸಿಡುಕುತ್ತಲೇ ಉಳಿದ ಸ್ನೇಹಿತರೊಂದಿಗೆ ಗೋವಾದ ಕಡೆಗೆ ಪಯಣ ಬೆಳೆಸಿದ.

ಗೆಳೆಯರು ಸಿಡುಕಿ ತೆರಳಿದ ನಂತರ ಅಭಿಮನ್ಯು ತುಂಬಾ ದುಃಖಿತನಾದ. ಎನೋ ಕಳೆದುಕೊಂಡ ಅನುಭವ. ಹೀಗೆ ಹಲವು ದಿನಗಳು ದುಃಖದಲ್ಲಿ ಉರುಳಿ ಹೋಯಿತು. ದಿನ ಕಳೆದಂತೆ ಒಂಟಿತನ ಕಾಡಲು ಪ್ರಾರಂಭವಾಯಿತು. ಅಕ್ಷರಳನ್ನು ಭೇಟಿಯಾಗದೆ ಸರಿಸುಮಾರು ಹದಿನೈದು ದಿನಗಳು ಸರಿದು ಹೋಗಿತ್ತು. ಅಕ್ಷರ ಮಾತ್ರ ಇನಿಯನ ಆಗಮನಕ್ಕಾಗಿ ದಿನನಿತ್ಯ ಸಂಜೆ ರಾಜಾಸೀಟ್‌ನಲ್ಲಿ ಕಾದು ಕುಳಿತಿರುತ್ತಿದ್ದಳು. ಪ್ರತಿ ದಿನ ಬಂದು ಕುಳಿತಾಗಲೂ ಇಂದು ಅಭಿಮನ್ಯು ಬಂದೇ ಬರುತ್ತಾನೆ ಅಂದುಕೊಳ್ಳುತ್ತಿದ್ದಳು. ಬಾರದೆ ಇದ್ದಾಗ ನಿರಾಸೆಯಿಂದ ಹಿಂತಿರುಗುವುದು ನಿತ್ಯದ ಕಾಯಕವಾಯಿತು. ಈ ವಿಚಾರ ಅಭಿಮನ್ಯುವಿಗೆ ಗೊತ್ತಿಲ್ಲದ್ದೇನು ಇಲ್ಲ. ಆದರೂ ಭೇಟಿಯಾಗುವ ಮನಸ್ಸು ಮಾತ್ರ ತೋರಲಿಲ್ಲ.

ಪ್ರೀತಿಗಾಗಿ ಹಂಬಲಿಸುತ್ತಾ ಒಂದಲ್ಲಾ ಒಂದು ದಿನ ಬಂದೇ ಬರುತ್ತಾನೆ ಎಂಬ ಬಲವಾದ ನಂಬಿಕೆ, ಆಶಾವಾದದೊಂದಿಗೆ ಅಕ್ಷರ ಎಂದಿನಂತೆ ರಾಜಾಸೀಟ್‌ಗೆ ಭೇಟಿ ನೀಡುವ ಕಾಯಕ್ರಮ ಮಾತ್ರ ರದ್ದು ಪಡಿಸುತ್ತಿರಲಿಲ್ಲ. ಅಂದು ಭಾನುವಾರ. ಇಡೀ ನಗರವೇ ರಜೆಯ ಗುಂಗಿನಲ್ಲಿತ್ತು. ಭಾನುವಾರ ಬಂತೆಂದರೆ ಮಡಿಕೇರಿಯಲ್ಲಿ ಮೌನ ಮನೆ ಮಾಡಿಕೊಳ್ಳುತ್ತದೆ. ಜನ, ವಾಹನ ಸಂಚಾರ ಅತ್ಯಂತ ವಿರಳ. ಭಾನುವಾರ ಕಳೆಯೋದೇ ಕಷ್ಟದ ಕೆಲಸ. ಅಭಿಮನ್ಯುವಿಗೆ ಒಂಟಿತನ ತೀವ್ರವಾಗಿ ಕಾಡಲು ಪ್ರಾರಂಭವಾಯಿತು. ಅಂದು ಅಕ್ಷರಳನ್ನು ಭೇಟಿಯಾಗಲೆಂದೇ ಹೊರಟು ನಿಂತ.

ಸಂಜೆಯ ತಂಗಾಳಿಗೆ ಮೈಯೊಡ್ಡಿ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಮನದಲ್ಲಿ ಏನೋ ಚಿಂತಿಸುತ್ತಾ ಕುಳಿತ್ತಿದ್ದ ಅಕ್ಷರಳ ಬಳಿ ಬಂದ ಅಭಿಮನ್ಯು ಆಕೆ ಏನು ಹೇಳಿದರೂ ಪವಾಗಿಲ್ಲ, ಸಹಿಸಿಕೊಳ್ಳುತ್ತೇನೆಂಬ ನಿರ್ಧಾರದೊಂದಿಗೆ ಆಕೆಯ ಪಕ್ಕದಲ್ಲಿಯೇ ಬಂದು ಕುಳಿತ.

ಅಕ್ಷರ, ಅಭಿಮನ್ಯುವನ್ನು ಒಮ್ಮೆ ನೋಡಿ ಮತ್ತೊಂದು ಕಡೆ ಮುಖ ತಿರುಗಿಸಿ ಕುಳಿತುಬಿಟ್ಟಳು. ಇಷ್ಟು ದಿನ ಇನಿಯನಿಗಾಗಿ ಕಾದು ಇದೀಗ ಬಳಿ ಬಂದ ಇನಿಯನೊಂದಿಗೆ ಒಂದು ಮಾತು ಕೂಡ ಆಡದೆ ಮೌನವೃತ ಆಚರಿಸತೊಡಗಿದಳು. ಅವನಿಗೂ ಅಗಲಿಕೆಯ ನೋವು ಅರ್ಥವಾಗಲಿ ಎಂಬುದು ಆಕೆಯ ತೀರ್ಮಾನ. ಹಾಗಾಗಿ ಇಂಥಹ ಒಂದು ಮೌನವೃತ. ಅಭಿಮನ್ಯುವಿಗೆ ಏನು ಹೇಳಬೇಕೆಂದು ತೋಚದೆ ಆಕೆಯ ಮೊಗವನ್ನೇ ನೋಡುತ್ತಾ ಕುಳಿತುಬಿಟ್ಟ. ಆಕೆ ಏನೂ ಗೊತ್ತಿಲ್ಲದ ವಳ ಹಾಗೆ ಯಾವುದೇ ಪ್ರತಿಕ್ರಿಯೆ ಇಲ್ಲದೆ ಕಲ್ಲುಬಂಡೆಯಂತೆ ಕುಳಿತ್ತಿದ್ದಳು. ಅಭಿಮನ್ಯು ನಿಧಾನವಾಗಿ ಆಕೆಯ ಕೈ ಹಿಡಿದು ಕ್ಷಮಿಸಿಬಿಡು ಅಕ್ಷರ. ಇಷ್ಟೇ ನನ್ನಿಂದ ಹೇಳೋದಕ್ಕೆ ಸಾಧ್ಯ ದುಃಖದಿಂದ ಹೇಳಿದ.

ಅಕ್ಷರ ಕೂಡ ಆ ಒಂದು ಮಾತಿಗೋಸ್ಕರ ಹಲವು ದಿನಗಳಿಂದ ಕಾಯುತ್ತಿದ್ದಳು. ಅಭಿಮನ್ಯುವಿನ ಮಾತು ಕೇಳುತ್ತಿದ್ದಂತೆ ಆಕೆಯ ಕಣ್ಗಳು ಜಲಪಾತವಾದವು. ಕಣ್ಣೀರು ಒರೆಸಿಕೊಳ್ಳುತ್ತಾ ನನ್ನ ಕ್ಷಮಿಸು ಬಿಡು ಅಭಿ, ತಪ್ಪು ನಂದೂ ಇದೆ. ಮನದಲ್ಲಿ ಇಷ್ಟೊಂದು ಪ್ರೀತಿ ಇಟ್ಟುಕೊಂಡು ಹದಿನೈದು ದಿನಗಳ ಕಾಲ ನನ್ನಿಂದ ದೂರವಾಗಿ ಹೇಗೆ ತಾನೇ ಇದ್ದೆ ಹೇಳು? ಒಂದು ದಿನವಾದರೂ ನನ್ನ ನೆನಪು ಕಾಡ್ಲಿಲ್ವ? ಒಂದು ದಿನವಾದರೂ ನನ್ನ ಭೇಟಿಯಾಗಬೇಕೂಂತ ಅನ್ನಿಸ್ಲಿಲ್ವ? ನೀನು ಎಲ್ಲಿ ಬೈದು ಬಿಡ್ತಿಯೋ ಅಂತ ಭಯದಲ್ಲಿ ನಿನ್ಗೆ ಫೋನ್ ಕೂಡ ಮಾಡ್ಲಿಲ್ಲ. ಒಂದಲ್ಲಾ ಒಂದು ದಿನ ಪ್ರೀತಿಗಾಗಿ ಹಂಬಲಿಸಿ ಬಂದೇ ಬತಿಯ ಎಂಬ ಆಸೆಯೊಂದಿಗೆ ಒಂದು ದಿನ ಕೂಡ ತಪ್ಪದೆ ನಿನ್ಗೋಸ್ಕರ ಇದೇ ಜಾಗದಲ್ಲಿ ಕಾಯ್ತಾ ಇದ್ದೆ. ನೀನು ಬಂದೇ ಬತಿಯ ಎಂಬ ನಿರೀಕ್ಷೆಯೊಂದಿಗೆ. ಅದು ಇಂದು ನಿಜವಾಗಿದೆ. ಇಲ್ಲಿ ನಾವಿಬ್ಬರು ಗೆದ್ದಿಲ್ಲ ಅಭಿ, ನಮ್ಮಿಬ್ಬರ ಪ್ರೀತಿ ಗೆದ್ದಿದೆ. ಇದು ಹೀಗೆಯೇ ಚಿರಕಾಲ ಇರಲಿ ಕಣ್ಗಳಲ್ಲಿ ತುಂಬಿದ ಕಣ್ಣೀರ ಹನಿಗಳನ್ನು ಒರೆಸಿಕೊಳ್ಳುತ್ತಾ ಅವನ ತೋಳಿಗೆ ತಲೆ‌ಒರಗಿಸಿ ಕುಳಿತಳು.

ಅಭಿ, ಇನ್ನೆಂದು ನನ್ನ ಬಿಟ್ಟು ಹೋಗಲ್ಲ ತಾನೆ…? ಆ ಪ್ರಶ್ನೆಯಲ್ಲಿ ಆತಂಕವಿತ್ತು, ತುಂಬಲಾರದಷ್ಟು ನೋವಿತ್ತು.

ಕಣ್ಣಂಚಿನಿಂದ ಬಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಇಲ್ಲ ಎಂಬ ಕಣ್ಸನ್ನೆಯ ಮಾತುಗಳನ್ನು ಆಡಿ ಆಕೆಯ ಕೈಯನ್ನು ಭದ್ರವಾಗಿ ಹಿಡಿದುಕೊಂಡ. ಸಾವೇನಾದರು ಬಳಿ ಬಂದು ನಿಂತು ಹೊರಡು ಅಂದರೆ ಒಂದು ನಿಮಿಷ ತಾಳು, ನನ್ನಾಕೆಯ ಮಡಿಲಲ್ಲಿ ಒಂದು ಕ್ಷಣ ವಿಶ್ರಮಿಸಿ ನಿನ್ನಡೊನೆ ಬರುವೆ ಎಂದು ಜವರಾಯನಿಗೆ ಹೇಳಿ ಇಬ್ಬರಲ್ಲಿರುವ ಗಾಢವಾದ ಪ್ರೀತಿಯನ್ನು ಜವರಾಯನಿಗೂ ಮನವರಿಕೆ ಮಾಡುವ ತವಕ ಅವನಲ್ಲಿತ್ತು. ಸಾವೇನಾದರು ಬಳಿ ಬರುವುದಾದರೆ ಅದು ನನ್ನಾಕೆ ಬಳಿ ಇರುವ ಕ್ಷಣದಲ್ಲಿ ಬಂದು ಬಿಡಲಿ. ಆಕೆಯ ಮೊಗವನ್ನೇ ನೋಡುತ್ತಾ ಇಹಲೋಕ ತ್ಯಜಿಸಿಬಿಡಬೇಕೆಂಬ ಆಸೆ ಮನದಲ್ಲಿ ಮೊಳಕೆಯೊಡೆಯಿತು. ಅಂಥಹ ಒಂದು ಕಲ್ಪನೆ ಮನದಲ್ಲಿ ಮೂಡಿದಾಗ ಬೆಟ್ಟದಷ್ಟು ದೊಡ್ಡದಾದ ಪ್ರೀತಿಯನ್ನು ಆಕೆಯ ಮೇಲಿಟ್ಟಿದ್ದೇನೆ, ಅಷ್ಟೊಂದು ಪ್ರೀತಿ ಇದ್ದರೂ ಹದಿನೈದು ದಿನಗಳ ಕಾಲ ಆಕೆಯನ್ನು ಅಗಲಿ ಇರಲು ತನ್ನಿಂದ ಹೇಗೆ ತಾನೇ ಸಾಧ್ಯವಾಯಿತೆಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ.

ಹದಿನೈದು ದಿನಗಳ ಅಗಲಿಕೆಯಿಂದ ಕಂಗಾಲಾಗಿದ್ದ ಆಕೆಯಲ್ಲೀಗ ಪ್ರೀತಿ ಪುನರ್ಜನ್ಮ ಪಡೆದುಕೊಂಡು ಬಂದಿದೆ ಅನ್ನಿಸಿತು. ರಾಜಾಸೀಟ್ ಮುಂಭಾಗದಲ್ಲಿ ಸಾಕಷ್ಟು ಪ್ರವಾಸಿಗರು ಬಂದು ಸೇರಿಕೊಳ್ಳಲು ಪ್ರಾರಂಭಿಸಿದರು. ಒಂದಷ್ಟು ಹೊತ್ತು ಏಕಾಂತ ದಲ್ಲಿ ಕಳೆಯಬೇಕೆಂದು ನಿರ್ಧರಿಸಿದ ಅಕ್ಷರ, ಅಭಿ, ಅಲ್ನೋಡು. ಅಲ್ಲಿ ದೂರದಲ್ಲಿ ಕಾಣ್ತಾ ಇದೆಯಲ್ಲ. ಆ ಗುಡ್ಡಕ್ಕೆ ಹೋಗೋಣ್ವ? ಇದುವರೆಗೂ ನಾನು ಅಲ್ಲಿಗೆ ಹೋಗ್ಲೇ ಇಲ್ಲ. ಕಕೊಂಡೋಗು ರಾಜಾಸೀಟ್ ಎಡಭಾಗದಲ್ಲಿರುವ ಗುಡ್ಡದ ಕಡೆಗೆ ಕೈ ತೋರಿಸಿ ಅಲ್ಲಿಗೆ ಕರೆದೊಯ್ಯುವಂತೆ ಕೋರಿಕೆ ಮುಂದಿಟ್ಟಳು.

ಆಯ್ತು, ನಡಿ ಹೋಗೋಣ ಎಂದು ರಾಜಸೀಟ್‌ನಿಂದ ಆಕೆಯನ್ನು ಗುಡ್ಡದ ಕಡೆಗೆ ಕರೆದೊಯ್ದ. ಆ ಗುಡ್ಡದಲ್ಲಿ ಸಾಮಾನ್ಯ ವಾಗಿ ಹೆಚ್ಚು ಜನರಿರುವುದಿಲ್ಲ. ವಾತಾವರಣ ಪ್ರಶಾಂತವಾಗಿರುತ್ತದೆ. ಒಟ್ಟಿನಲ್ಲಿ ಪ್ರೇಮಿಗಳಿಗೆ ಕಾಲ ಕಳೆಯೋದಕ್ಕೆ ಹೇಳಿ ಮಾಡಿಸಿದಂಥಹ ಜಾಗ ಅನ್ನಬಹುದು.

ಪ್ರವಾಸಿ ಮಾಹಿತಿ ಕೇಂದ್ರ ತೆರೆಯುವುದಕ್ಕೂ ಮುಂಚೆ ಅಕ್ಷರ ನೀಡಿದ್ದ ಐವತ್ತು ಸಾವಿರ ರೂ.ಗಳನ್ನು ಹಿಂತಿರುಗಿಸಲೆಂದು ಅಭಿಮನ್ಯು ಹಣದೊಂದಿಗೆ ಆಗಮಿಸಿದ್ದ. ಗುಡ್ಡ ತಲುಪಿದಂತೆ ಜೇಬಿನಿಂದ ಹಣ ತೆಗೆದು ಆಕೆಯ ಕೈಗಿತ್ತ. ಅಕ್ಷರ ನನ್ಗಂತೂ ಇಂದು ತುಂಬಾನೇ ತೃಪ್ತಿಯಾಗಿದೆ, ಇಂದಿನಿಂದ ನಾನು ಯಾರಿಗೂ ಸಾಲಗಾರನಲ್ಲ ಹೆಮ್ಮೆಯಿಂದ ಹೇಳಿಕೊಂಡ.

ಆಕೆಗೆ ಅದ್ಯಾಕೋ ಸರಿ ಕಾಣಿಸಲಿಲ್ಲ. ಅಭಿಮನ್ಯುವಿಗೆ ತನ್ನ ಮೇಲೆ ಇನ್ನೂ ಸಿಟ್ಟು ಹೋಗಿಲ್ಲ ಅಂದುಕೊಂಡಳು. ಮನದೊಳಗೆ ಕೋಪ ಮಾಯವಾಗಿದ್ದರೆ ಹಣ ತಂದುಕೊಡುತ್ತಿರಲಿಲ್ಲ. ಸಾಕು ಇವಳ ಸಹವಾಸ, ಎಲ್ಲವನ್ನೂ ಇಂದಿಗೆ, ಇಲ್ಲಿಗೆ ಮುಗಿಸಿ ಬಿಡುವ ಎಂಬ ನಿರ್ಧಾರದೊಂದಿಗೆ ಹಣದೊಂದಿಗೆ ಬಂದಿರಬಹುದೇನೋ ಎಂದು ಮನದಲ್ಲಿಯೇ ಅಂದುಕೊಂಡಳು.

ಯಾಕೆ ನನ್ಮೇಲೆ ಇರೋ ಕೋಪ ಇನ್ನೂ ಹೋಗಿಲ್ವ? ನಾನೇನಾದ್ರು ಹಣ ಕೇಳಿದ್ನಾ? ನನ್ಗೆ ಹಣ ಕೊಡುವ ಅವಶ್ಯಕತೆನೇ ಇಲ್ಲ. ಹಣಕೊಟ್ಟು ಋಣ ತೀರಿಸಿಕೊಂಡು ನನ್ನಿಂದ ದೂರ ಆಗ್ಲಿಕ್ಕೆ ನೋಡ್ತಾ ಇದ್ದೀಯಾ…!?

ಪುನಃ ಯಡವಟ್ಟಾಯ್ತಲ್ಲ. ಸಣ್ಣಪುಟ್ಟ ವಿಚಾರಕ್ಕೂ ಹುಡುಗಿಯರು ಏನೆಲ್ಲೋ ಕಲ್ಪನೆ ಮಾಡ್ಕೋತ್ತಾರೆ. ಅಷ್ಟಕ್ಕೂ ಅಭಿಮನ್ಯು ಪ್ರೀತಿಗೆ ಮಂಗಳ ಹಾಡುವ ಉದ್ದೇಶದಿಂದ ಹಣ ಹಿಂತಿರುಗಿಸುತ್ತಿಲ್ಲ. ಎಷ್ಟು ದಿನಾಂತ ಸಾಲ ಹಿಂತಿರುಗಿಸದೆ ಇರೋದು? ಇಂದಲ್ಲದಿದ್ದರೂ ನಾಳೆಯಾದರು ಕೊಡಲೇ ಬೇಕು. ಆದರೆ, ಇಂತಹ ಪರಿಸ್ಥಿತಿಯಲ್ಲಿ ಹಣ ಹಿಂತಿರುಗಿಸಬಾರದಿತ್ತು ಎಂಬ ಆಲೋಚನೆ ಅವನ ಮನದೊಳಗೆ ಸುಳಿಯಿತು.

ಎಲ್ಲವನ್ನು ತಪ್ಪಾಗಿ ಅರ್ಥೈಸಿಕೊಂಡು ದುಃಖ ಪಡ್ಬೇಡ. ನೀನು ಆಡಿದ ಮಾತು ನಿನ್ಗೆ ಮತೋಗಿಬೊಹುದು. ಆದರೆ, ನನ್ಗೆ ನೆನಪಿದೆ. ‘ನನ್ನ ಮದ್ವೆಯ ಸಂದರ್ಭ ಹಣ ಹಿಂತಿರುಗಿಸದರೆ ಸಾಕು ಅಂತ ನೀನು ಹಣ ಕೊಡುವಾಗ ಹೇಳಿದ್ದೆ. ಆದರೆ, ನಾವಿಂದು ಒಬ್ಬರನ್ನೊಬ್ಬರು ಪ್ರೀತಿಸಿ ಸಪ್ತಪದಿ ತುಳಿಯೋದಕ್ಕೆ ನಿರ್ಧರಿಸಿಯಾಗಿದೆ. ನೀನು ಬೇರೆಯವರನ್ನು ಮದ್ವೆಯಾಗುವುದಾದರೆ ನಿನ್ನ ಮಾತಿನಂತೆ ಮದ್ವೆ ಸಂದರ್ಭ ಸಾಲ ಹಿಂತಿರುಗಿಸ್ತಾ ಇದ್ದೆ. ಆದರೆ ನಾನೇ ನಿನ್ನ ಕೈಹಿಡಿಯುವವನು ಎಂದು ನಿರ್ಧರಿಸಿದ ಮೇಲೆಯೂ ಕೂಡ ಹಣ ಹಿಂತಿರುಗಿಸದೆ ಇದ್ದರೆ ಹೇಗೆ? ನೀನು ಹಣ ತಗೊಳ್ಳಲ್ಲ ಅಂದ್ರೆ ನೀನು ಬೇರೊಬ್ಬನೊಂದಿಗೆ ವಿವಾಹವಾಗೋದಕ್ಕೆ ಇಷ್ಟಪಡ್ತಾ ಇದ್ದೀಯ ಅಂತ ನಾನು ತಿಳ್ಕೊತ್ತೇನೆ. ನಾನು ಹಾಗೆ ತಿಳ್ಕೋಬಾದು ಅನ್ನುವುದಾದ್ರೆ ನೀನು ಹಣ ಸ್ವೀಕಾರ ಮಾಡ್ಲೇ ಬೇಕು

ನಿನ್ನೊಂದಿಗೆ ಮಾತಿನಲ್ಲಿ ಗೆಲ್ಲೋದಕ್ಕೆ ನನ್ನಿಂದ ಸಾಧ್ಯವಿಲ್ಲ ಬಿಡು. ಮಾತಿನಲ್ಲಿಯೇ ಮುತ್ತು ಪೋಣಿಸಿ ಬಿಡ್ತಿಯ. ಅಂತು, ಇಂತೂ ನಾನು ಹಣ ಕೇಳ್ಕೊಳೋಹಾಗೆ ಮಾಡ್ಬಿಟ್ಟೆ ಅಂದ ಅಕ್ಷರ ಹಣ ಪಡೆದುಕೊಂಡು ಸ್ವಲ್ಪ ಹೊತ್ತು ಸುಮ್ಮನಾದಳು. ಮತ್ತೆ ಏನೋ ಮರೆತು ಹೋದದ್ದು ನೆನಪಾದವಳಂತೆ ಮಾತನಾಡಳು ಪ್ರಾರಂಭಿಸಿದಳು.

ಅಭಿ, ನಾವಿಬ್ರು ಹೀಗೆ ಪ್ರೀತಿ ಮಾಡ್ತನೇ ಜೀವನ ಪೂರ್ತಿ ಕಳೆದು ಬಿಡ್ತೇವೆ ಅಂತ ಅನ್ನಿಸ್ತಾ ಇದೆ. ಯಾವಾಗ ಮದ್ವೆ ಮಾಡ್ಕೊಳ್ಳೋಣ? ಕೇಳಿದಳು.

ಅಷ್ಟೊಂದು ಅವಸರ ಏನು? ನಾಲ್ಕೈದು ವರ್ಷ ಕಳೆಯಲಿ ಬಿಡು, ಆ ನಂತರ ನೋಡೋಣ. ಎಂದು ಆಕೆಯನ್ನು ತೋಳಲ್ಲಿ ಬಳಸಿ ಚುಂಬಿಸಿದ. ಆಕೆಯೂ ಬಿಗಿದಪ್ಪಿಕೊಂಡು ಮುತ್ತಿಕ್ಕಿದಳು.

ಛೀ.., ಕಳ್ಳ. ಕೈ ಎಲ್ಲೆಲ್ಲೋ ಒಡಾಡ್ತಾ ಇದೆಯಲ್ಲೋ? ಇದನ್ನೆಲ್ಲ ಮದ್ವೆಯಾದ ನಂತರ ಇಟ್ಟುಕೊಳ್ಳುವ. ಈಗ್ಲೇ ಎಲ್ಲಾ ನಡೆದು ಹೋದ್ರೆ ಮುಂದೇನೈತೆ ಮಜಾ? ಎಲ್ಲ ಈಗ್ಲೇ ಮುಗಿದೋದ್ರೆ ನಾಳೆ ದಿನ ನಾವಿಬ್ರು ಮದ್ವೆಯಾಗುವಾಗ ಮಕ್ಕಳು ಅಕ್ಷತೆಕಾಳು ಹಾಕುವ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತೆ ಅಂದ ಅಕ್ಷರ ಮತ್ತೆ ಅವನನ್ನು ತೋಳಿಂದ ಬಂಧಿಸಿ ಗಾಢವಾಗಿ ಚುಂಬಿಸಿದಳು.

ಇವತ್ತಿಗಿಷ್ಟು ಸಾಕು. ಇನ್ನು ಜಾಸ್ತಿ ಕೇಳ್ಬೇಡ. ಕೇಳಿದರೆ ಒದೆ ಬೀಳುತ್ತೆ ಅಷ್ಟೆ ಎಂದು ಅಕ್ಕರೆಯಿಂದ ಹೇಳಿ ಅಭಿ, ನಿನ್ಗೆ ಯಾವ ಮಕ್ಕಳನ್ನು ಕಂಡ್ರೆ ಖುಷಿ? ಗಂಡೋ ಅಥವಾ ಹೆಣ್ಣೋ? ಕೇಳಿದಳು.

ಯಾಕೆ ಇಂಥಹ ಪ್ರಶ್ನೆ. ಗಂಡು, ಹೆಣ್ಣು ಎರಡೂ ನನಗಿಷ್ಟ. ಎರಡಿದ್ರೆ ನಿನ್ಗೇನು ಕಷ್ಟನಾ?

ಕಷ್ಟ ನನ್ಗಲ್ಲದೆ ನಿನ್ಗೇನಿದೆ? ಹೆರುವ ಕಷ್ಟ ನಿನ್ಗೇನಾದ್ರು ಇದೆಯ? ಒಂದೇ ಒಂದು ಮಗು ಸಾಕು. ಅದಕ್ಕಿಂತ ಹೆಚ್ಚು ಮಕ್ಕಳು ಬೇಡ್ವೆ ಬೇಡ.

ಸದ್ಯಕಂತು ಇಬ್ಬರಿಗೂ ಮದುವೆಯಾಗುವ ಮನಸ್ಸು ಇಲ್ಲದಿದ್ದರೂ ವಿವಾಹದ ಬಗ್ಗೆ, ವೈವಾಹಿಕ ಜೀವನದ ಬಗ್ಗೆ ಗಂಡ- ಹೆಂಡತಿ ಕೂಡ ಚರ್ಚೆ ಮಾಡಿಕೊಳ್ಳದಷ್ಟು ಚರ್ಚೆ ಅವರಿಬ್ಬರ ನಡುವೆ ನಡೆಯುತ್ತಲೇ ಇರುತ್ತದೆ. ಮದುವೆಗೂ ಮುನ್ನ ಎಲ್ಲವೂ ನಿರ್ಧಾರ ಆಗಿಬಿಡಬೇಕು. ನಂತರ ಯಾವುದೇ ಗೊಂದಲ ಆಗಬಾರದೆಂಬ ಮುಂದಾಲೋಚನೆ ಇಬ್ಬರ ಮನದಲ್ಲಿ ಇದ್ದಂತೆ ಗೋಚರಿಸುತಿತ್ತು.

ಅಕ್ಷರ, ನೀನು ಏನೇ ಹೇಳು. ನನ್ಗೆ ಎರಡು ಮಕ್ಕಳು ಬೇಕೇ ಬೇಕು. ನೀನು ಹೀಗೆ ಒಂದೇ ಮಗು ಮಾತ್ರ ಸಾಕು ಅಂತ ಜಪ ಮಾಡ್ಕೊಂಡು ಕೂತ್ರೆ ನಿನ್ಗೆ ಅವಳಿ-ಜವಳಿ ಮಕ್ಕಳು ಹುಟ್ಟೋದು ಗ್ಯಾರಂಟಿ ಅಂದ ಅಭಿಮನ್ಯು ಆಕೆಯನ್ನು ನೋಡಿ ಜೋರಾಗಿ ನಕ್ಕ.

ಅಬ್ಬಬ್ಬಾ ಏನೇನೋ ಹೇಳಿ ಹೆದರಿಸ್ಬೇಡ. ನನ್ಗೆ ಹೆರಿಗೆ ನೋವು ನೆನಸಿಕೊಂಡ್ರೆ ಮೈ ಜುಮ್ಮೆನ್ನುತ್ತೆ. ನಿನ್ಗೆ ಅದರ ನೋವೇನಾದ್ರು ಗೊತ್ತಾ? ನಾಲ್ಕೈದು ಮಕ್ಕಳನ್ನು ಹಡೆದು ಹೆರಿಗೆ ನೋವನ್ನು ಅನುಭವಿಸಿದವಳ ರೀತಿಯಲ್ಲಿ ಹೆಣ್ಣೆಂಬ ಒಂದೇ ಕಾರಣಕ್ಕೆ ಹೆರಿಗೆ ನೋವಿನ ಬಗ್ಗೆ ಪ್ರಶ್ನಿಸತೊಡಗಿದಳು.

ಮಹಿಳೆಯರು ಒಂಭತ್ತು ತಿಂಗಳು ಅನುಭವಿಸುವ ನರಕಯಾತನೆ ಆಕೆಗೆ ಮಾತ್ರ ಗೊತ್ತು. ಆ ದೇವರಿಗೂ ಕೂಡ ಗೊತ್ತಾಗೋದಿಲ್ಲ. ಹೆರಿಗೆ ನಂತರ ಹೆಣ್ಣಿಗೆ ಪುನರ್ಜನ್ಮ ಆದ ಅನುಭವ ಆಗಿಬಿಡುತ್ತೆ ನಿಟ್ಟುಸಿರು ಬಿಡುತ್ತಾ ಹೇಳಿದಳು.

ನಿನ್ನ ಮಾತು ಕೇಳ್ತಾ ಇದ್ರೆ ಎರಡು ಮಗು ಹಡೆಯೋದಿರಲಿ, ಒಂದು ಮಗು ಸಹ ಹಡೆಯೋ ಸ್ಥಿತಿಯಲಿಲ್ಲ. ಇನ್ನು ಎರಡನೇ ಮಗುವಿನ ಕನಸು ಕಟ್ಟಿಕೊಳ್ಳದೆ ಇರುವುದೇ ವಾಸಿ. ಹೆಣ್ಣು ಮಗುವಾದರೆ ನನಗಿಷ್ಟ. ಪ್ರಕೃತಿಯ ಮಡಿಲಲ್ಲಿ ಒಂದಾದ ನಮಗೆ ಹುಟ್ಟೋ ಮಗುವಿಗೆ ‘ಪ್ರಕೃತಿ ಎಂದು ಹೆಸರಿಡಬಹುದಲ್ವ? ಅದ್ಕೋಸ್ಕರ ಹೆಣ್ಣು ಮಗು ಹುಟ್ಟಲಿ

ನಿನ್ನ ಉತ್ಸಾಹ, ಆಸೆ, ಆಕಾಂಕ್ಷೆಗಳನ್ನು ನೋಡ್ತಾ ಇದ್ರೆ ಮಗು ಹುಟ್ಟಿದ ನಂತರ ನನ್ನ ಪ್ರೀತಿ ಮಾಡುವುದನ್ನೇ ಮರೆತು ಮಗುವಿನೊಂದಿಗೆ ಕಾಲ ಕಳೆದು ಬಿಡ್ತಿಯ ಅನ್ನಿಸ್ತಾ ಇದೆ ಅಂದಳು. ಅಭಿಮನ್ಯು ಆಕೆಯ ಮಾತು ಕೇಳಿಸಿಕೊಂಡು ನಕ್ಕು ಸುಮ್ಮನಾದ.

ರಾಜಾಸೀಟ್‌ನಲ್ಲಿ ಮೆಲ್ಲನೆ ಕತ್ತಲು ಆವರಿಸಿಕೊಳ್ಳಲು ಪ್ರಾರಂಭಿಸಿದಾಗ. ಎದ್ದೇಳು ಹೋಗುವ, ಇಂದಿನ ಪ್ರಣಯಲೀಲೆ ಇಲ್ಲಿಗೆ ಮುಕ್ತಾಯ ಮಾಡುವ. ಸೂರ್ಯ ಕಣ್ಮರೆಯಾಗ್ತಾ ಇದ್ದಾನೆ. ಆದಷ್ಟು ಬೇಗ ಮನೆ ಸೇರಿಕೊಳ್ಳುವ. ಅಂದಹಾಗೆ ನಾಳೆ ನನ್ಗೆ ರಜೆ. ಬೆಳಗ್ಗೆ ಬೇಗ ಎದ್ದು ಓಂಕಾರೇಶ್ವರ ದೇವಾಲಯಕ್ಕೆ ಹೋಗೋಣ. ನೀನು ಬಂದು ಬಿಡು ಒಟ್ಟಿಗೆ ದೇವರ ದರ್ಶನ ಮಾಡ್ಕೊಂಡು ಬರೋಣ ಆಕೆಯ ಕೋರಿಕೆಗೆ ಅಭಿಮನ್ಯು ಸಮ್ಮತಿ ಎಂಬಂತೆ ತಲೆಯಲ್ಲಾಡಿಸಿ ಆಯ್ತು ಅಂದ. ರಾಜಾಸೀಟ್‌ನ ರಸಸಂಜೆಯ ಗುಂಗಿನಲ್ಲಿ ಇಬ್ಬರು ಮಾತಾಡುತ್ತಾ ಮನೆ ಸೇರಿಕೊಂಡರು.

ಅಭಿಮನ್ಯುವಿಗೆ ದೇವರು, ಪೂಜೆ ಪುನಸ್ಕಾರ ಅಂದ್ರೆ ಅಷ್ಟಕಷ್ಟೆ. ಸಂಕಷ್ಟದ ದಿನಗಳನ್ನೇ ಹೆಚ್ಚಾಗಿ ಎದುರಿಸಿದ ಅವನಿಗೆ ದೇವರ ಬಗ್ಗೆ ಆಸಕ್ತಿಯಂತು ಬೆಳೆಯಲೇ ಇಲ್ಲ. ಸಂಕಷ್ಟದಲ್ಲಿರುವಾಗ ಸ್ಪಂದಿಸದ ದೇವರು ನಮಗ್ಯಾಕೆ ಬೇಕು? ಎಂಬ ಮನಸ್ಥಿತಿ ಯವನು. ದೇವಾಲಯಕ್ಕೆ ಭೇಟಿ ನೀಡಿ ಹಲವು ವರ್ಷಗಳೇ ಸರಿದು ಹೋಗಿತ್ತು. ಆದರೆ, ಇಂದು ದೇವರ ದರ್ಶನಕ್ಕೆ ಹೊರಟು ನಿಂತಿದ್ದಾನೆ. ದೇವರ ದರ್ಶನಕ್ಕೆ ಅನ್ನುವುದಕ್ಕಿಂತ ಆಕೆಯ ದರ್ಶನಕ್ಕೆ ಹೊರಟು ನಿಂತಿದ್ದಾನೆ ಅನ್ನಬಹುದು. ಆದರೆ, ಅಕ್ಷರ ತದ್ವಿರುದ್ಧ ಮನಸ್ಥಿತಿಯವಳು. ದಿನನಿತ್ಯ ದೇವರಿಗೆ ಕೈ ಮುಗಿಯದೆ ಇದ್ದರೆ ನಿದ್ರೆ ಬರೋದಿಲ್ಲ. ವಾರಕ್ಕೊಮ್ಮೆಯಾದರು ದೇವಾಲಯಕ್ಕೆ ಹೋಗದೆ ಇರುತ್ತಿರಲಿಲ್ಲ.

ಮರುದಿನ ಮುಂಜಾನೆ ಇಳಿ ಬಿಸಿಲಿನಲ್ಲಿ ದೇವಾಲಯದಲ್ಲಿ ಅಭಿಮನ್ಯುವಿಗಾಗಿ ಕಾದು ಕುಳಿತ್ತಿದ್ದಳು. ಅಭಿಮನ್ಯು ರಾತ್ರಿ ನಿದ್ರೆಗೆಟ್ಟವನಂತೆ ಆಕಳಿಸಿಕೊಂಡು ಮೆಲ್ಲನೆ ಹೆಜ್ಜೆಯೂರುತ್ತಾ ಸುತ್ತಮುತ್ತಲಿನ ಕಟ್ಟಡ, ಪರಿಸರವನ್ನು ಹಿಂದೆಂದು ನೋಡದವನಂತೆ ಎಲ್ಲವನ್ನು ಶಾಂತಚಿತ್ತತೆಯಿಂದ ನೋಡಿಕೊಂಡು ಬರುತ್ತಿದ್ದ.

ಏಯ್ ಕೋತಿ ದೇವಸ್ಥಾನಕ್ಕೆ ಬರುವಾಗ್ಲಾದ್ರು ಸ್ವಲ್ಪ ಬೇಗ ಬಬಾದ್ದ? ಎಷ್ಟು ಹೊತ್ತಿಂದ ಇಲ್ಲಿ ಕಾಯ್ತ ಇದ್ದೇನೆ ಅಂತ ಗೊತ್ತ್ತಾ? ಎಲ್ಲರು ಪೂಜೆ ಮುಗಿಸಿಕೊಂಡು ಹೋದರು. ನಾನು ಮಾತ್ರ ನಿನ್ನ ಕಾಯ್ಕೊಂಡು ಇಲ್ಲೇ ಬಾಕಿ. ನಡಿ ಬೇಗ ಹೋಗೋಣ ಎಂದು ಅಭಿಮನ್ಯುವನ್ನು ದೇವಾಲಯದ ಕಡೆಗೆ ಕರೆದೊಯ್ದಳು. ‘ಏನ್ ಅವಸರ ಮಾಡ್ತಾಳೋ, ದೇವರೇನು ಓಡಿ ಹೋಗ್ತಾನಾ? ಎಂದು ಮನದಲ್ಲಿಯೇ ಗೊಣಗಿಕೊಂಡ.

ದೇವಾಲಯದೊಳಗೆ ಕಾಲಿಟ್ಟಂತೆ ಆಕೆಯನ್ನು ಮೆಚ್ಚಿಸಲು ಎಂದೂ ಕಾಣದ ಭಕ್ತಿ ಅವನಲ್ಲಿ ಕಂಡಿತು. ಆಕೆಯೊಂದಿಗೆ ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇವರಿಗೆ ಅಡ್ಡ ಬಿದ್ದು ತೀರ್ಥ ಪ್ರಸಾದ ಸ್ವೀಕರಿಸಿ ಒಂದಷ್ಟು ಹೊತ್ತು ದೇವಾಲಯ ಆವರಣದಲ್ಲಿ ಕುಳಿತುಕೊಂಡರು.

ಅಕ್ಷರ ದೇವಾಲಯದಲ್ಲಿ ಏನೆಲ್ಲ ಮಾಡಿದಳೋ ಅದನ್ನೆಲ್ಲ ಅನುಕರಿಸುತ್ತಾ ಹೋಗುವುದಷ್ಟೇ ಅವನ ಪಾಲಿನ ಕೆಲಸವಾಗಿತ್ತು. ದೇವರ ಮೇಲೆ ಶ್ರದ್ಧೆ, ಭಕ್ತಿ ಕೇವಲ ತೋರ್ಪಡಿಕೆಗಷ್ಟೆ. ಮನದೊಳಗೆ ಅವಳದ್ದೇ ಜಪ. ದೇವಾಲಯಕ್ಕೆ ಬಂದು ಸುಮ್ಮನೆ ಕುಳಿತರೆ ಆಕೆ ಸುಮ್ಮನಿರುವುದಿಲ್ಲವೆಂದು ತಿಳಿದು ದೇವರ ಪ್ರಾರ್ಥನೆಯಲ್ಲಿ ಸಕ್ರೀಯವಾಗಿ ತನ್ನ ದೇಹವನ್ನು ಮಾತ್ರ ತೊಡಗಿಸಿಕೊಂಡಿದ್ದ. ಆದರೆ ಮನಸ್ಸು ಇನ್ಯಾವುದರ ಕಡೆಯೋ ಇತ್ತು. ದೇವಾಲಯದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ ಹೊರ ಬಂದರು.

ದೇವರ ಹತ್ರ ಏನು ಕೇಳ್ಕೊಂಡೆ? ಕುತೂಹಲದಿಂದ ಕೇಳಿದಳು.

ನನ್ನ ಇಲ್ಲಿಗೆ ಕಕೊಂಡು ಬಂದಿರೋದು ನೀನು. ನೀನು ಏನು ಪ್ರಾರ್ಥನೆ ಮಾಡ್ಕೊಂಡೆ ಅಂತ ಮೊದ್ಲು ಹೇಳು

ನಾವಿಬ್ಬರು ಹಿಗೆಯೇ ನೂರುಕಾಲ ಸುಖವಾಗಿ ಬಾಳ್ಬೇಕು. ಅಭಿಮನ್ಯು ಬೇಯಾರ ಸ್ವತ್ತಾಗಬಾರದು. ಅಭಿಮನ್ಯು ನನಗೆ ಸೇರಬೇಕಾದ ಸ್ವತ್ತು. ಹಾಗಾಗಿ ಇಬ್ಬರನ್ನು ಒಂದುಮಾಡುವ ಜವಾಬ್ದಾರಿ ನಿನ್ನದು ಎಂದು ದೇವರ ಮುಂದೆ ಮನದಲ್ಲಿ ಆಡಿಕೊಂಡ ಮಾತುಗಳಲ್ಲಿ ಒಂದಕ್ಷರವೂ ಆಚೀಚೆ ಆಗದಂತೆ ಅಭಿಮನ್ಯುವಿನ ಎದುರು ತೆರೆದಿಟ್ಟಳು. ಆಕೆಯ ಮಾತು ಕೇಳಿ ಅಭಿಮನ್ಯುವಿಗೆ ನಗು ತಡೆದುಕೊಳ್ಳಲಾಗಲಿಲ್ಲ. ದೇವಾಲಯಕ್ಕೆ ಹೋಗೋದು, ಪ್ರಾರ್ಥನೆ ಮಾಡುವುದು ಕೆಲಸವಿಲ್ಲದವರಿಗೊಂದು ಕೆಲಸವಷ್ಟೆ ಎಂದು ತಿಳಿದು ಬದುಕು ನಡೆಸುತ್ತಿರುವವನಿಗೆ ಇಂತಹ ವಿಚಾರ ಹೇಳಿದರೆ ನಗು ಬಾರದೆ ಇರಲು ಸಾಧ್ಯವೇ? ಸ್ವಲ್ಪ ಹೊತ್ತು ನಕ್ಕು ಸುಧಾರಿಸಿಕೊಂಡ.

ಅಕ್ಷರ, ಈ ವಿಚಾರವನ್ನೆಲ್ಲ ದೇವರಿಗೆ ಹೇಳ್ಬೇಕಾಗಿತ್ತಾ? ನಮ್ಮಿಬ್ಬರಲ್ಲಿ ಗುಟ್ಟಾಗಿ ಇರಬೇಕಾದ ವಿಚಾರ ಮೂರನೇ ವ್ಯಕ್ತಿಗೆ ಯಾಕೆ ಹೇಳ್ದೆ? ಅಷ್ಟಕ್ಕೂ ದೇವರು ನೀವು ನನ್ನ ಮುಂದೆ ಅಡ್ಡಬೀಳ್ಬೇಕು, ಪ್ರದಕ್ಷಿಣೆ ಹಾಕ್ಬೇಕು, ಕಾಣಿಕೆ ಡಬ್ಬಕ್ಕೆ ಹಣ ಹಾಕ್ಬೇಕು ಅಂತ ಯಾವತ್ತಾದರು ಕೇಳಿದ್ದುಂಟಾ? ಇದೆಲ್ಲ ನಾವು ಸೃಷ್ಟಿ ಮಾಡಿಕೊಂಡಿರುವುದಷ್ಟೆ. ಎಲ್ಲರು ದೇವರೇ ನನ್ಗೆ ಒಳ್ಳೆಯದು ಮಾಡು, ನನ್ನ ಕುಟುಂಬಕ್ಕೆ ಒಳ್ಳೆಯದ್ದು ಮಾಡು ಅಂತ ದಿನ ಬೆಳಗಾದರೆ ಸಾಕು ದೇವರಿಗೆ ಪಟ್ಟಿ ಸಲ್ಲಿಸೋದಕ್ಕೆ ಪ್ರಾರಂಭ ಮಾಡಿಬಿ ಡ್ತಾರೆ. ದೇವರಿಗಂತು ಪುರುಸೋತ್ತೇ ಇಲ್ಲ. ದೇವರು ದಿನಕ್ಕೆ ಕೋಟ್ಯಾಂತರ ಭಕ್ತರ ಬೇಡಿಕೆ ಪಟ್ಟಿಗಳನ್ನು ಪರಿಶೀಲಿಸಿ ಯಾರಿಗೆ ಒಳ್ಳೆಯದು ಮಾಡ್ಬೇಕೂಂತ ತೋಚದೆ ಗೊಂದಲಕ್ಕೊಳಗಾಗಿ ಸುಮ್ನೆ ಇದ್ದುಬಿಡ್ತಾನೆ. ಅದ್ಕೆ ನಾನು ‘ದೇವರಿಗೆ ಒಳ್ಳೆಯದಾಗಲಿ ಅಂತ ಕೇಳ್ಕೊಂಡೆ. ಮೊದ್ಲು ದೇವರ ಬದುಕು ಸುಂದರವಾಗ್ಬೇಕು. ದೇವರ ಬದುಕೇ ಚೆನ್ನಾಗಿಲ್ಲದಿದ್ದರೆ ನಮ್ಮ ಬದುಕನ್ನ ಅವನು ಹೇಗೆ ತಾನೇ ಸರಿಪಡಿಸೋದಕ್ಕೆ ಸಾಧ್ಯ? ಅಭಿಮನ್ಯು ದೇವರ ಮೇಲಿರುವ ನಿರಾಸಕ್ತಿಯನ್ನು ತನ್ನದೇ ಶೈಲಿಯಲ್ಲಿ ತೋರ್ಪಡಿಸಿದ.
ಅಭಿಮನ್ಯುವಿನ ಮಾತು ಕೇಳಿ ಆಕೆಗೂ ನಗು ಬಂತು. ನೀನು ದೇವರನ್ನು ನಂಬದಿದ್ದರೂ ಪವಾಗಿಲ್ಲ. ನಾನು ನಂಬುತ್ತೇನೆ. ನಂಬಿದ ದೇವರು ನಮ್ಮಿಬ್ಬರನ್ನ ಖಂಡಿತ ಕೈಬಿಡೋದಿಲ್ಲ ಅಂದಳು.

ದೇವರೇನು ಕೈ ಹಿಡಿಯೋದಕ್ಕೆ ಸಾಧ್ಯವಿಲ್ಲ, ಸದ್ಯಕ್ಕೆ ನಾನು ಕೈ ಹಿಡ್ಕೋತ್ತೇನೆ ಅಂದ ಅಭಿಮನ್ಯು ಆಕೆಯ ಕೈ ಹಿಡಿದುಕೊಂಡು ದೇವಾಲಯ ಆವರಣದಿಂದ ಹೊರಗೆ ಕರೆತಂದ. ದೇವಾಲಯ ಹೊರ ಭಾಗದಲ್ಲಿ ಕೆಲವು ಭಿಕ್ಷುಕರು ಕುಳಿತ್ತಿದ್ದರು. ಒಬ್ಬಾಕೆ ಅಕ್ಷರಳ ಬಳಿ ಬಂದು ಅಮ್ಮ ಭಿಕ್ಷೆ ಹಾಕಿ ಎಂದು ಬೇಡಿಕೊಂಡಳು. ಚಿಲ್ಲರೆ ಇಲ್ಲವಾದ್ದರಿಂದ ಹತ್ತು ರೂಪಾಯಿಯನ್ನು ಆಕೆಯ ಕೈಗಿತ್ತಳು. ಭಿಕ್ಷೆ ಬೇಡುವ ಸಂದರ್ಭ ಕನಿಷ್ಠ ಐವತ್ತು ಪೈಸೆಯಿಂದ ಒಂದು ರೂಪಾಯಿವರೆಗೆ ಮಾತ್ರ ಕಾಣುತ್ತಿದ್ದ ಭಿಕ್ಷುಕಿಗೆ ಹತ್ತು ರೂಪಾಯಿಸಿ ಕಂಡು ಸಂತೋಷ ಉಕ್ಕಿ ಬಂದು ನಿಮ್ಮಿಬ್ಬರಿಗೆ ನೂರು ಮಕ್ಕಳಾಗಲಿ ಎಂದು ಹರಸಿದಳು.

ನಿನ್ನೆ ತಾನೇ ಮಕ್ಕಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದ ಇಬ್ಬರಿಗೆ ಮತ್ತೆ ಮಕ್ಕಳ ಬಗ್ಗೆ ಚರ್ಚಿಸಲು ಭಿಕ್ಷುಕಿ ವೇದಿಕೆಯೊದಗಿಸಿದಳು. ಒಂದು ಮಗು ಸಾಕೆಂದು ನಿರ್ಧರಿಸಿದ ಅಕ್ಷರ ಭಿಕ್ಷುಕಿಯ ಮಾತು ಕೇಳಿ ನಾಚಿ ನೀರಾದಳು. ಒಂದು ಮಗು ವನ್ನು ಹಡೆಯುವುದೇ ಕಷ್ಟ ಎಂದು ತೀರ್ಮಾನಿಸಿದ ಆಕೆಯ ನಿರ್ಧಾರದ ಮುಂದೆ ಭಿಕ್ಷುಕಿಯ ಮಾತಿನಿಂದ ಎರಡು ಸೊನ್ನೆ ಸೇರಿಕೊಂಡು ನೂರು ಮಕ್ಕಳಾಯಿತು.

ಅಭಿಮನ್ಯುವಿಗೆ ಭಿಕ್ಷುಕಿಯ ಮಾತುಕೇಳಿ ನಗು ಸಹಿಸಲು ಸಾಧ್ಯವಾಗಲಿಲ್ಲ. ಅಕ್ಷರ, ನಾನೇನೋ ಎರಡು ಮಕ್ಕಳಿಗೆ ಆಸೆ ಪಟ್ಟೆ. ಆದರೆ ಆ ಭಿಕ್ಷುಕಿ ನಿನ್ಗೆ ನೂರು ಮಕ್ಕಳಾಗಲಿ ಎಂದು ಹರಸಿದ್ದಾಳೆ. ಆಕೆಯ ಹರಕೆ ಫಲಿಸದೆ ಇರೋದಿಲ್ಲ. ಆಗ ನಿನ್ನನ್ನ ಆ ದೇವರೇ ಕಾಪಾಡ್ಬೇಕು. ಮಹಾಭಾರತದಲ್ಲಿ ಗಾಂಧಾರಿ ನೂರು ಮಕ್ಕಳನ್ನು ಹಡೆದಳು ಎಂದು ಕೇಳಿದ್ದೇನೆ. ನೀನು ಆಧುನಿಕ ಗಾಂಧಾರಿ ಎಂದು ಛೇಡಿಸಿದ.

ಸಾಕು ಸುಮ್ನಿರು, ಅವಳಂದುಕೊಂಡಂತೇನು ಆಗೋದಿಲ್ಲ ಅಂದ ಆಕೆಯ ಮುಖ ನಾಚಿಕೆಯಿಂದ ಕೆಂಪೇರಿತು. ಭಿಕ್ಷುಕಿ ಹೇಳಿದ ಮಾತಿನಿಂದ ಕಳವಳಗೊಂಡು ಸುತ್ತಲೂ ಒಮ್ಮೆ ಕಣ್ಣಾಡಿಸಿದಳು. ಪರಿಚಯದವರು ಯಾರು ಇರಲಿಲ್ಲ. ನೆಮ್ಮದಿಯ ನಿಟ್ಟುಸಿರು ಬಿಟ್ಟಳು. ಇಬ್ಬರು ಗಂಡ-ಹೆಂಡತಿಯೆಂದು ತಿಳಿದು ಭಿಕ್ಷುಕಿ ಆ ಮಾತನ್ನು ಆಡಿದ್ದಳು. ‘ದೇವರೇ ಆ ಭಿಕ್ಷುಕಿಯ ಮಾತನ್ನ ಯಾರಾದರು ಕೇಳಿಸಿಕೊಂಡಿದ್ದರೆ ಏನು ಗತಿ? ಅಂದುಕೊಂಡಳು.

ಹಲವು ಸಮಯದ ಬಳಿಕ ಅಭಿಮನ್ಯುವಿನ ಮನದೊಳಗೆ ಸಂತೋಷದ ನದಿ ಉಕ್ಕಿ ಹರಿಯತೊಡಗಿತು. ಈ ದಿನವಿಡೀ ಅಕ್ಷರಳೊಂದಿಗೆ ಮುದ್ದು, ಮುದ್ದು ಮಾತನಾಡುತ್ತಾ, ಚೇಷ್ಟೆ ಮಾಡುತ್ತಾ ಕಳೆದು ಬಿಡಬೇಕೆಂದು ಅನ್ನಿಸಿ ಅಬ್ಬಿಫಾಲ್ಸ್‌ಗೆ ಹೋಗೋಣ್ವ? ಎಂದು ಕೇಳಿದ.

ಆಕೆಗೂ ಅಭಿಮನ್ಯುವಿನೊಂದಿಗೆ ಇಡೀ ದಿನ ಕಳೆಯುವ ಮನಸ್ಸಿತ್ತಾದರೂ ಬೇಗನೆ ಬತೇನೆ ಅಂತ ಮನೆಯಲ್ಲಿ ಹೇಳಿ ಬಂದಿದ್ದಳು. ಹೊತ್ತು ಮೀರಿದರೆ ಮನೆಯಲ್ಲಿ ಕಳವಳ ಪ್ರಾರಂಭವಾಗಿಬಿಡುತ್ತದೆ ಎಂಬ ಭಯ. ದೇವಾಲಯಕ್ಕೆ ನಡೆದುಕೊಂಡೇ ಬಂದಿದ್ದಳು. ಕಾರು ತಂದಿದ್ದರೆ ಅಬ್ಬಿಫಾಲ್ಸ್‌ಗೆ ಹೋಗಿ ಬರಬಹುದಿತ್ತು. ಅಬ್ಬಿಫಾಲ್ಸ್‌ಗೆ ಹೋಗಿ ಬರಬೇಕಾದರೆ ಕನಿಷ್ಠ ಮೂರು ಗಂಟೆಯಾದರೂ ಬೇಕೇ ಬೇಕು. ಮನೆಯ ಹಾದಿ ಹಿಡಿಯುವುದೇ ಒಳ್ಳೆಯದು ಅಂದುಕೊಂಡಳು. ಆದರೆ, ಅಭಿಮನ್ಯು
ಹಿಡಿದ ಹಟ ಬಿಡುವವನಲ್ಲ. ಮತ್ತೆ, ಮತ್ತೆ ಒತ್ತಾಯಪಡಿಸಿದ. ಅವನ ಒತ್ತಾಯಕ್ಕೆ ಆಕೆ ತಲೆಬಾಗಿ ನಡಿ, ಹೋಗೋಣ ಅಂದಳು.

ಮಡಿಕೇರಿ ನಗರಕ್ಕೆ ಆಗಮಿಸಿದ ಇಬ್ಬರು ಆಟೋ ಏರಿ ಅಬ್ಬಿಫಾಲ್ಸ್ ಕಡೆಗೆ ಪಯಣ ಬೆಳೆಸಿದರು. ಸುಮಾರು ೮ ಕಿ.ಮೀ. ಪಯಣ. ಮಾರ್ಗದ ಉದ್ದಕ್ಕೂ ಹಚ್ಚ
ಹಸುರಿನಿಂದ ಕಂಗೊಳಿಸುವ ವನರಾಶಿ ಎಲ್ಲರನ್ನೂ ಸ್ವಾಗತಿಸುತಿತ್ತು. ಆಹ್ಲಾದಕರವಾಗಿ ಬೀಸುತ್ತಿದ್ದ ತಂಗಾಳಿ ಪ್ರೀತಿಯ ಸಂದೇಶವನ್ನು ಹೊತ್ತು ತರುತ್ತಿದ್ದ ಅನುಭವವಾಯಿತು. ಕಣ್ಣಾಡಿಸಿದ ಕಡೆಗಳಲೆಲ್ಲ ಹಸಿರು ತುಂಬಿಕೊಂಡಿತ್ತು. ಮಾರ್ಗದ ಮಧ್ಯ ಸಿಗುವ ಕಾಫಿ ತೋಟಗಳು, ಗುಡ್ಡಗಳು, ತಿರುವು ರಸ್ತೆಗಳು ಆ ಪರಿಸರದ ಸೌಂದರ್ಯ ವನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿನ ಪ್ರಕೃತಿಯ ರಮಣೀಯ ದೃಶ್ಯ ನೋಡುತ್ತಾ ಇದ್ದರೆ ಯಾರಿಗಾದರೂ ಇಲ್ಲಿಯೇ ನೆಲೆನಿಂತು ಬಿಡುವ ಅನ್ನಿಸದೆ ಇರದು.

ಆಟೋರಿಕ್ಷಾದಿಂದ ಇಳಿದು ರಿಕ್ಷಾದವನಿಗೆ ಒಂದೈವತ್ತು ರೂಪಾಯಿ ನೀಡಿದ ಅಭಿಮನ್ಯು ಅಕ್ಷರಳನ್ನು ಜಲಪಾತದ ಕಡೆಗೆ ಕರೆದೊಯ್ದ. ಮುಖ್ಯ ರಸ್ತೆಯಿಂದ ಸುಮಾರು ೧ ಕಿ.ಮೀ. ನಷ್ಟು ಕಾಫಿ ತೋಟದಲ್ಲಿ ಕಾಲ್ನಡಿಗೆಯಲ್ಲಿ ಪಯಣ ಬೆಳೆಸುತ್ತಿದ್ದಂತೆ ಎದುರಿನಿಂದ ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿದ್ದ ಅಬ್ಬಿಫಾಲ್ಸ್ ಗೋಚರಿಸಿತು. ಅಬ್ಬಿಫಾಲ್ಸ್ ಮುಂಭಾಗದಲ್ಲಿ ಪ್ರವಾಸಿಗರ ದಂಡೇ ನೆರೆದಿತ್ತು. ಮಳೆಗಾಲ ಕಳೆದೊಡನೆ ಜಲಪಾತಗಳ ಸೊಬಗನ್ನು ವೀಕ್ಷಿಸುವುದೇ ಮನಕ್ಕೊಂದು ಆನಂದ. ಅದೇ ಸೂಕ್ತ ವಾದ ಸಮಯ. ಪ್ರಕೃತಿಯ ಮಡಿಲಿನಿಂದ ಧುಮ್ಮಿಕ್ಕಿ ಹರಿಯುವ ಜಲಪಾತ ಪ್ರಕೃತಿ ಮಾತೆಗೆ ಹೂ ಮುಡಿಸಿದಂತೆ ಗೋಚರಿಸುತಿತ್ತು. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಪರಿಸರ, ಆಹ್ಲಾದಕರ ವಾತಾವರಣ. ಇಂಥಹ ಸುಂದರ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದರೆ ಸ್ವರ್ಗವನ್ನೇ ನೋಡಿದ ಅನುಭವ.

ಜಲಪಾತದ ಮುಂಭಾಗದಲ್ಲಿ ನಿರ್ಮಿಸಿರುವ ತೂಗುಸೇತುವೆಯಲ್ಲಿ ನಿಂತು ಜಲಪಾತದ ಸೊಬಗನ್ನು ಸವಿದರು. ಧುಮ್ಮಿಕ್ಕಿ ಹರಿಯುವ ಜಲಧಾರೆಯಿಂದ ಹೊರಹೊಮ್ಮುತ್ತಿದ್ದ ನೀರಿನ ಎರಚಲುಗಳನ್ನು ಗಾಳಿಯು ಪ್ರವಾಸಿಗರ ಕಡೆಗೆ ಹೊತ್ತು ತರುತಿತ್ತು.

ಆಗಿಂದಾಗೆ ಗಾಳಿಯೊಂದಿಗೆ ತೂರಿ ಬರುತ್ತಿದ್ದ ಎರಚಲಿನಿಂದ ಜಲಪಾತದ ಮುಂಭಾಗದಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಲು ಸಾಧ್ಯವಾಗಲಿಲ್ಲ. ನೀರಿನ ಎರಚಲಿಗೆ ಎಲ್ಲರು ಚಳಿಯಿಂದ ನಡುಗಲು ಪ್ರಾರಂಭಿಸಿದರು. ಅಕ್ಷರ ಅಭಿಮನ್ಯುವನ್ನು ಗಟ್ಟಿಯಾಗಿ ತಬ್ಬಿಕೊಂಡು ತುಂಬಾ ಚಳಿ ಆಗ್ತಾ ಇದೆ. ಹೊರಡೋಣ್ವಾ? ಅಂದಳು.

ಮತ್ತೊಂದಷ್ಟು ಹೊತ್ತು ಜಲಪಾತದ ಸೊಬಗನ್ನು ಸವಿಯುತ್ತಾ ಕಳೆದ ನಂತರ ಇಬ್ಬರು ತೋಟದ ಹಾದಿಯಲ್ಲಿ ಕ್ರಮಿಸಿ ಮುಖ್ಯ ರಸ್ತೆಯನ್ನು ಸೇರಿಕೊಂಡರು. ರಸ್ತೆಯಲ್ಲಿ ಯಾವುದೇ ಆಟೋರಿಕ್ಷಾ ಸಿಗಲಿಲ್ಲವಾದ್ದರಿಂದ ಮಡಿಕೇರಿವರೆಗೆ ಕಾಲ್ನಡಿಗೆ ಯಲ್ಲಿಯೇ ತೆರಳುವ ಅನಿವಾರ್ಯತೆ ನಿರ್ಮಾಣಗೊಂಡಿತು. ಇಬ್ಬರು ಮಾತಾಡುತ್ತಾ ಮೆಲ್ಲನೆ ಹೆಜ್ಜೆಯ ಮೇಲೆ ಹೆಜ್ಜೆಯನ್ನೂರುತ್ತಾ ನಡಿಗೆ ಹಾಕಿದರು.

ಬೆಟ್ಟಗುಡ್ಡಗಳಿಂದ ಕೂಡಿರುವ ರಸ್ತೆಯಲ್ಲಿ ಕಾಲ್ನಡಿಗೆಯ ಪಯಣದಿಂದ ಅಕ್ಷರ ಬಳಲಿದಳು. ಅಭಿ, ನನ್ ಕೈಯಿಂದ ನಡಿಯೋದಕ್ಕೆ ಆಗ್ತಾ ಇಲ್ಲ. ಹೊತ್ಕೊಂಡು ಹೋಗೋ ವಿನಯವಾಗಿ ಕೇಳಿಕೊಂಡಳು.

ಕೈಯಲ್ಲಿ ನಡಿಯೋದಕ್ಕೆ ನೀನೇನು ಕೋತಿನಾ? ಕಾಲಲ್ಲಿ ನಡೆದರೆ ಸಾಕು. ನನ್ನಿಂದ ಹೊತ್ಕೊಳ್ಳೋದಕ್ಕೆ ಆಗೋದಿಲ್ಲ ಆ ಆಹ್ಲಾದಕರ ವಾತಾವರಣದಲ್ಲಿಯೂ ಆಕೆಯ ಮೊಗದಲ್ಲಿ ಬೆವರಿನ ಹನಿಗಳು ಇಳಿಯಲು ಪ್ರಾರಂಭಿಸಿತು. ಆಕೆಗೆ ಮತ್ತಷ್ಟು ಆಯಾಸವಾಗದಿರಲೆಂದು ತೋಳಲ್ಲಿ ಬಳಸಿಕೊಂಡ. ಇನಿಯನ ಅಪ್ಪುಗೆಯಿಂದ ಸಂತುಷ್ಟಳಾದ ಅಕ್ಷರ ಪಯಣದ ಆಯಾಸವನ್ನು ಮೆಲ್ಲನೆ ಮರೆಯತೊಡಗಿದಳು. ‘ಈ ಕೆಲ್ಸ ಮೊದ್ಲೇ ಮಾಡ್ಬಾದಿತ್ತಾ? ಅಂದುಕೊಂಡಳು.

ದಾರಿಯುದಕ್ಕೂ ಆಡುತ್ತಿದ್ದ ಮಧುರವಾದ ಮಾತುಗಳು ದೇಹಕ್ಕಾದ ದಣಿವನ್ನು ಮರೆಸಿತು. ಪ್ರೀತಿಯ ಪಿಸುಮಾತುಗಳು ಆ ದಾರಿಯನ್ನು ಸಣ್ಣದಾಗಿಸಿತು. ಮಾರ್ಗದ ಮಧ್ಯ ಒಂದಷ್ಟು ಹೊತ್ತು ಕುಳಿತು ಹರಟೆಯಲ್ಲಿ ತಲ್ಲೀನರಾದರು.

ಅಭಿ, ಒಂದು ಬೈಕ್ ತಗೊಳ್ಳೋ. ಬೈಕಿದ್ದಿದ್ರೆ ಇಷ್ಟೊತ್ತಿಗೆ ಮಡಿಕೇರಿ ತಲುಪಬಹುದಿತ್ತು.

ಬೈಕ್ ತಗೋಳ್ಳೋದಕ್ಕೇನು ನಿಮ್ಮಪ್ಪ ಕಾಸ್ ಕೊಡ್ತಾನಾ…!?

ಅಪ್ಪ-ಗಿಪ್ಪ ಅಂದ್ರೆ ಒದೆ ಬೀಳುತ್ತೆ ಅಷ್ಟೆ. ಅವ್ರು ನಿನ್ನ ಮಾವ ಕಣೋ. ಪ್ರೀತಿಯಿಂದ ಬೈಕ್ ತಗೋಳ್ಳೋದಕ್ಕೆ ಮಾವ ದುಡ್ಡು ಕೊಡ್ತಾರ? ಅಂತ ಕೇಳಿದ್ರೆ ನಾನೇ ಅಪ್ಪನಿಗೆ ಹೇಳಿ ನಿನ್ಗೊಂದು ಬೈಕ್ ಕೊಡಿಸ್ತಿನಿ. ಗೊತ್ತಾಯ್ತಾ? ಎಂದು ರಾಗವಾಗಿ ಹೇಳಿ ಅವನ ಮೂತಿಗೆ ಪ್ರೀತಿಯಿಂದ ಹಿತವಾಗಿ ತಿವಿದಳು.

ಅಯ್ಯೋ ದೇವರೇ, ಮದ್ವೆಗೂ ಮುಂಚೆನೇ ವರದಕ್ಷಿಣೆನಾ? ಒಟ್ನಲ್ಲಿ ಎಲ್ಲಾ ಕೊಟ್ಟು ನನ್ನ ಕಟ್ಟಿ ಹಾಕ್ಬೇಕೂಂತ ತೀರ್ಮಾನ ಮಾಡಿದಂಗಿದೆ ನಿನ್ನ ಆಲೋಚನೆ. ನಿಮ್ಮಪ್ಪ…, ಅಂದ್ರೆ ನನ್ನ ಮಾವ ಮಗಳನ್ನು ಕೊಟ್ಟು ಮದ್ವೆ ಮಾಡಿಸಿದ್ರೆ ಅಷ್ಟೇ ಸಾಕು. ಬೈಕೇನು ಕೊಡೋದು ಬೇಡ. ನಮ್ಮಿಬ್ಬರ ಮದ್ವೆಗೆ ನಿಮ್ಮಪ್ಪ ವಿಲನ್ ಆಗದಿದ್ರೆ ಸಾಕು. ಅದೇ ನನ್ಗೆ ದೊಡ್ಡ ವರದಕ್ಷಿಣೆ ಮುಂದಿನ ಪ್ರೇಮಯುದ್ಧವನ್ನೊಮ್ಮೆ ನೆನಸಿಕೊಂಡು ಭಯದಿಂದ ಹೇಳಿದ.

ನೀನಂದುಕೊಂಡಂತೇನು ನಮ್ಮಪ್ಪ ಇಲ್ಲ, ನಾನು ಹೇಳಿದ್ದಕ್ಕೆಲ್ಲ ಅಪ್ಪ ಸೈ ಅಂತಾರೆ. ಎಷ್ಟೇ ಆದ್ರೂ ಅಪ್ಪನ ಮುದ್ದಿನ ಮಗಳಲ್ವ ನಾನು? ನನ್ನ ಒಂದು ದಿನ ನೊಡದೆ ಇದ್ರೆ ಅಪ್ಪ ಚಡಪಡಿಸ್ತನೇ ಇತಾರೆ. ಅಪ್ಪನಿಗೆ ಒಂದು ಮಾತು ಹೇಳಿದ್ರೆ ಸಾಕು. ನಮ್ಮಿಬ್ಬರ ಮದ್ವೆನ ನಾಳೆನೇ ಅದ್ಧೂರಿಯಾಗಿ ಮಾಡಿ ಮುಗಿಸ್ತಾರೆ. ಆ ನಂಬಿಕೆ ನನ್ಗಿದೆ? ಅಪ್ಪನ ಬಗ್ಗೆ ಗೌರವದಿಂದ ಹೇಳಿಕೊಂಡು ಬೀಗಿದಳು.

ನಿಮ್ಮಪ್ಪನಿಗೆ ಹೋಗಿ ಹೇಳು, ಜಾಸ್ತಿ ಪ್ರೀತಿ ಇಟ್ಕೋಬೇಡ ಅಂತ. ಯಾಕೆಂದ್ರೆ ನಾಳೆದಿನ ನಾನು ನಿನ್ನ ಮದ್ವೆಯಾಗಿ ಕಕೊಂಡು ಬಂದ ನಂತರ ಪದೇ ಪದೆ ನಮ್ಮ ಮನೆಗೆ ನಿನ್ನ ನೋಡ್ಲಿಕ್ಕೆ ಬಂದ್ರೆ ನನ್ಗೆ ಕಷ್ಟವಾಗುತ್ತೆ. ಅದರಲ್ಲೂ ನಾವಿಬ್ಬರು ರೋಮ್ಯಾನ್ಸ್ ಮೂಡಲ್ಲಿರುವಾಗ ಬಂದ್ರೆ ಇನ್ನೂ ಕಷ್ಟ ನೋಡು ಹಾಸ್ಯದ ತೆರೆ ಎಳೆದ.

ಸದಾಶಿವನಿಗೆ ಅದೇ ಧ್ಯಾನ ಅಂದಂಗಾಯ್ತು ನಿನ್ನ ಕತೆ. ಸುತ್ತಿ ಬಳಸಿ ಪುನಃ ಅಲ್ಲಿಗೆ ಬಂದು ಬಿಡ್ತಿಯ. ಅಭಿ, ನಾವಿಬ್ರು ಪ್ರೀತಿಸ್ತಾ ಇರೋ ವಿಚಾರ ಮನೆಗೆ ತಿಳಿಸ್ಲಾ? ಮನೆಯವರೊಂದಿಗೆ ಎಲ್ಲಾ ವಿಚಾರ ಹಂಚಿಕೊಳ್ತೇನೆ. ಇದೊಂದು ವಿಚಾರವನ್ನು ಮಾತ್ರ ಯಾಕೆ ಬಚ್ಚಿಡ್ಬೇಕು? ನಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ಯಾರು ಕೂಡ ವಿರೋಧ ಮಾಡೊಲ್ಲ. ನಿನ್ಗೊತ್ತಾ…, ನನ್ನ ಸ್ನೇಹಿತೆ ತುಳಸಿ ಇದ್ದಾಳಲ್ಲ, ಅವಳು ಒಂದು ಹುಡುಗನನ್ನ ಪ್ರೀತಿಸ್ತಾ ಇದ್ಲು. ಮನೆಯವರಿಗೆ ಗೊತ್ತಾಗಿ ಅವಳಿಗೆ ಹೊಡು, ಬಡ್ದು ಬೇರೆಯ ಹುಡುಗನೊಂದಿಗೆ ಮದ್ವೆ ಮಾಡಿಸಿಬಿಟ್ರು. ಆ ವಿಚಾರ ಗೊತ್ತಾಗಿ ಅಪ್ಪ-ಅಮ್ಮ ಮನೆಯಲ್ಲಿ ಏನು ಮಾತಾಡ್ಕೋಳ್ತಾ ಇದ್ರು ಅಂತ ಗೊತ್ತಾ?: ‘ಅವರವರು ಇಷ್ಟ ಪಡುವವರೊಂದಿಗೆ ಮದ್ವೆ ಮಾಡಿಸಿಬಿಡಬೇಕು. ಬಲವಂತವಾಗಿ ಮದ್ವೆ ಮಾಡಿಸಿದ್ರೆ ಸುಖವಾಗಿ ಬದುಕು ನಡೆಸೋದಕ್ಕೆ ಸಾಧ್ಯನಾ? ಅಂತ ಮಾತಾಡಿಕೊಳ್ತಾ ಇದ್ರು. ಅಪ್ಪ, ಅಮ್ಮನ ಮಾತು ಕೇಳಿದ ನಂತರ ನನ್ಗಂತೂ ತುಂಬನೇ ಖುಷಿಯಾಯ್ತು. ಯಾವತ್ತಿದ್ರೂ ನಮ್ಮಿಬ್ಬರ ಪ್ರೀತಿಯನ್ನ ಅಪ್ಪ, ಅಮ್ಮ ತಿರಸ್ಕಾರ ಮಾಡೊಲ್ಲ ಎಂಬ ನಂಬಿಕೆ ಇದೆ ತುಂಬಾ ಸಂಭ್ರಮದಿಂದ ಪ್ರತಿಯೊಂದು ಮಾತನ್ನೂ ಆಡಿ ಮುಗಿಸಿದಳು.

ಆಕೆ ಆಡುತ್ತಿದ್ದ ಪ್ರತಿಯೊಂದು ಮಾತು ಅಭಿಮನ್ಯುವಿನಲ್ಲಿ ಆತಂಕ ಹೆಚ್ಚುವಂತೆ ಮಾಡಿತು. ಅಪ್ಪಿ, ತಪ್ಪಿ ಆಕೆ ಮನೆಯವರಿಗೆ ಪ್ರೀತಿಯ ವಿಷಯ ತಿಳಿಸಿಬಿಟ್ಟರೆ ಏನು ಗತಿ? ಎಂದು ಕಳವಳಕ್ಕೆ ಒಳಗಾದ. ಯಾವ ಅಪ್ಪ, ಅಮ್ಮ ತಾನೇ ಮಗಳ ಪ್ರೀತಿ ಯನ್ನು ಒಪ್ಪಿಕೊಳ್ಳೋದಕ್ಕೆ ಸಾಧ್ಯ? ಅಷ್ಟೊಂದು ಸುಲಭವಾಗಿ ಯಾರೂ ಪ್ರೇಮ ವಿವಾಹಕ್ಕೆ ಹಸಿರುನಿಶಾನೆ ತೋರುವುದಿಲ್ಲವೆಂಬ ಸತ್ಯ ಅಭಿಮನ್ಯುವಿಗೆ ಚೆನ್ನಾಗಿ ಗೊತ್ತಿತ್ತು. ಇದೆಲ್ಲ ಆಕೆಗೆ ಅರ್ಥವಾಗೋದಿಲ್ಲ. ಆಕೆಗೆ ಸಮಸ್ಯೆ, ಕಷ್ಟ, ನೋವುಗಳ ಅರಿವಿಲ್ಲ. ಆ ಅರಿವಿನ ಕೊರತೆಯೇ ಆಕೆಯನ್ನು ಹೀಗೆಲ್ಲ ಮಾತಾಡಿಸುತ್ತಿದೆ ಅಂದುಕೊಂಡ.

ಒಬ್ಬರು ಮತ್ತೊಬ್ಬರ ಮನೆಯ ಹೆಣ್ಣುಮಕ್ಕಳ ಬಗ್ಗೆ ಕೂತ್ಕೊಂಡು ಮಾತಾಡೋದು ಬಹಳ ಸುಲಭ. ಆದರೆ ಅವರವರ ಮಕ್ಕಳ ವಿಚಾರ ಬಂದಾಗ ಅವರು ಕೈಗೊಳ್ಳುವ ತೀರ್ಮಾನಗಳೇ ಬೇರೆ. ಯಾವುದೇ ವಿಚಾರವನ್ನು ಬೇಕಾದರೆ ಅಪ್ಪ, ಅಮ್ಮ ಒಪ್ಪಿಕೊಳ್ಳುತ್ತಾರೆ. ಆದರೆ, ಪ್ರೀತಿಯನ್ನಲ್ಲ.! ಮಗಳು ಎಲ್ಲಿ ಪ್ರೀತಿಸಿ ಮೋಸ ಹೋಗಿ ಬಿಡುತ್ತಾಳೋ ಎಂಬ ಭಯ ಸಹಜವಾಗಿಕಾಡುತ್ತ ದೆ. ಎರಡನೆಯದಾಗಿ ಕಾಡುವ ಭಯ ಕುಟುಂಬದ ಗೌರವದ ಪ್ರಶ್ನೆ ಎದುರಾದಾಗ. ಈ ಎರಡು ಭಯಗಳೇ ಸಾಕು ಪ್ರೀತಿಗೆ ಮಂಗಳ ಹಾಡೋದಕ್ಕೆ. ಬಡತನದಲ್ಲಿ ಬೆಳೆದು ಬಂದ ಅಭಿಮನ್ಯು ಶ್ರೀಮಂತರ ತುಳಿತವನ್ನೂ ಎದುರಿಸಿ ಬಂದಿದ್ದಾನೆ. ಶ್ರೀಮಂತರು ತೋರ್ಪಡಿಕೆಗೆ ಆಡುವ ಮಾತುಗಳು, ತೋರಿಸುವ ಪ್ರೀತಿ, ಕೊನೆಗೆ ಕಾಲಿನಲ್ಲಿ ಹೊಸಕಿ ಹಾಕುವ ನೀತಿಯನ್ನೆಲ್ಲ ಅನುಭವಿಸಿ ಬೆಳೆದವನಿಗೆ ತಿಳಿದಿಲ್ಲವೇ ಶ್ರೀಮಂತರ ಹಣೆಬರಹ.!

ಅಕ್ಷರ…, ನಮ್ಮಿಬ್ಬರ ಪ್ರೀತಿಯನ್ನ ಕೊಲ್ಬೇಕೂಂತ ನಿರ್ಧಾರ ಮಾಡಿದ್ದೀಯ? ಹಾಗೊಂದ್ವೇಳೆ ಅಂದ್ಕೊಂಡಿದ್ರೆ ಈಗ್ಲೇ ಮನೆಗೆ ಹೋಗಿ ಎಲ್ಲಾ ವಿಚಾರ ಹೇಳಿ ಬಿಡು ತೀಕ್ಷ್ಣವಾಗಿ ಹೇಳಿದ.

ಏನೇ ಹೇಳಿದರು ಆಕೆಗೆ ಅಭಿಮನ್ಯುವಿನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಆಕೆಗೆ ಅಪ್ಪ, ಅಮ್ಮನ ಮೇಲೆ ಇನ್ನಿಲ್ಲದ ಅಕ್ಕರೆ, ಗೌರವ, ನಂಬಿಕೆ ಇತ್ತು. ತಾನು ಕೈಗೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ, ತನ್ನ ಪ್ರತಿಯೊಂದು ನಿಲುವನ್ನೂ ಗೌರವಿಸುತ್ತಾರೆಂಬ ಭರವಸೆ ಆಕೆಯ ತಲೆಯೊಳಗೆ ತುಂಬಿಕೊಂಡಿತ್ತು. ತುಳಸಿಯ ವಿಚಾರದಲ್ಲಿ ಅಪ್ಪ, ಅಮ್ಮ ಆಡಿಕೊಂಡ ಮಾತು ಆಕೆಯಲ್ಲಿ ಇನ್ನಷ್ಟು ವಿಶ್ವಾಸವನ್ನು ತುಂಬಿಸಿತ್ತು.

ಆಕೆ ಅಮ್ಮನ ಎದುರು ಹರಟೆಗೆ ಕುಳಿತಾಗಲೆಲ್ಲ ನನ್ಗೆ ಸ್ವ ಜಾತಿಯವರನ್ನ ಕಂಡ್ರೆ ಆಗೋದಿಲ್ಲ. ನಾನೇದ್ರೂ ಮದ್ವೆಯಾಗೋ ದಾದ್ರೆ ಅದು ಬೇರೆ ಜಾತಿಯ ಹುಡುಗನೊಂದಿಗೆ ಮಾತ್ರ ಅನ್ನುತ್ತಿದ್ದಳು. ಹರಟೆ ಮತ್ತಷ್ಟು ಮುಂದುವರೆದಾಗ ರಾಜಾಸೀಟ್ ನಲ್ಲಿ ಅಭಿಮನ್ಯುವಿನೊಂದಿಗೆ ತೋಳಲ್ಲಿ ತೋಳು ಬಳಸಿಕೊಂಡು ಮುದ್ದಾಡುವ ವಿಚಾರ ಸೇರಿದಂತೆ ಕೆಲವೊಂದು ವಿಚಾರ ಗಳನ್ನು ಬಚ್ಚಿಟ್ಟು ಉಳಿದೆಲ್ಲ ವಿಚಾರಗಳನ್ನು ತೆರೆದಿಡುತ್ತಿದ್ದಳು. ಆದರೆ, ಒಂದು ದಿನ ಕೂಡ ಲೀಲಾವತಿ ಮಗಳ ನಡೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಅಮ್ಮ ನಮ್ಮಿಬ್ಬರ ಪ್ರೀತಿಗೆ ಮೌನ ಸಮ್ಮತ್ತಿ ವ್ಯಕ್ತಪಡಿಸುತ್ತಿದ್ದಾರೆಂದು ಅಂದುಕೊಂಡು ಆಕೆ ಸಂತೋಷದ ಅಲೆಯ ಮೇಲೆ ತೇಲುತ್ತಿದ್ದಳು. ಬಚ್ಚಿಡುವ ವಿಷಯವನ್ನೆಲ್ಲ ಬಚ್ಚಿಟ್ಟು ಉಳಿದ ವಿಷಯಗಳನ್ನು ಮಾತ್ರ ತೆರೆದಿಟ್ಟರೆ ಲೀಲಾವತಿಗೆ ಹೇಗೆ ತಾನೇ ಗೊತ್ತಾಗಬೇಕು ಮಗಳು ಅಭಿಮನ್ಯುವನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರ!?

ಅಭಿ, ಅಮ್ಮನಿಗೆ ನಮ್ಮಿಬ್ಬರ ಪ್ರೀತಿಯ ಪ್ರತಿಯೊಂದು ವಿಚಾರ ಕೂಡ ಗೊತ್ತಿಬೊಹುದು. ಎಲ್ಲ್ಲ ನಾನೇ ಹೇಳ್ಲಿ ಅಂತ ಕಾಯ್ತಾ ಇಬೇಕು. ಅಮ್ಮ ಕೇಳೋದಕ್ಕಿಂತ ಮುಂಚೆ ನಾನೇ ಹೇಳಿ ಬಿಡ್ತೇನೆ ತನ್ನ ಹಳೆಯ ನಿಲುವಿಗೆ ಕಟ್ಟುಬಿದ್ದು ಆಕೆ ಆಡುತ್ತಿದ್ದ ಪ್ರತಿಯೊಂದು ಮಾತು ಅಭಿಮನ್ಯುವಿನ ಎದೆ ಬಡಿತ ಹೆಚ್ಚಿಸಿತು. ಮುಂದೇನು ಅನಾಹುತ ಮಾಡಿಬಿಡುತ್ತಾಳೋ ಎಂಬ ಭಯ ಕಾಡಲು ಪ್ರಾರಂಭಿಸಿತು. ಪ್ರೀತಿಯ ವಿಚಾರ ಮನೆಯ ಹೊಸ್ತಿಲು ತುಳಿದರೆ ಆಗುವ ಅನಾಹುತದ ಬಗ್ಗೆ ಆಕೆಗೇನು ಗೊತ್ತು? ಇವಳಿಂದ ಮುಂದೆ ದೊಡ್ಡ ಮಹಾಭಾರತವೇ ನಡೆಯಲಿಕ್ಕಿದೆ ಎಂದು ಆತಂಕಕ್ಕೊಳಗಾಗಿ ಆಕೆಯೆಡೆಗೆ ದೃಷ್ಟಿ ಹಾಯಿಸಿ ಏನಾದ್ರೂ ಮಾಡ್ಕೊಂಡು ಸಾಯಿ. ಏನಾದ್ರು ಅನಾಹುತ ಆದ್ರೆ ಕಣ್ಣೀರು ಸುರಿಸಿಕೊಂಡು ನನ್ನಹತ್ರ ಬಬೇಡ ಅಭಿಮನ್ಯುವಿನ ಮಾತಿನ ಧಾಟಿಯಿಂದ ಆತಂಕಗೊಂಡ ಅಕ್ಷರ ಆಯ್ತು ಬಿಡು, ನಿನ್ಗೆ ಇಷ್ಟ ಇಲ್ಲದೆ ಮೇಲೆ ನಾನು ಹೇಳೋದಿಲ್ಲ. ಈಗ ಖುಷಿ ಆಯ್ತಾ…? ಹುಸಿಮುನಿಸು ತೋರಿದಳು.

ಪ್ರೀತಿಯ ಮುಂದಿನ ಹೆಜ್ಜೆಯ ಬಗ್ಗೆ ಮಾತಾಡೋದು ಸಾಕಿನ್ನು ಅನ್ನಿಸಿತು. ಇತ್ತೀಚೆಗಂತೂ ಪ್ರೀತಿಯ ವಿಚಾರ ಮಾತಾಡಿದಾಗಲೆಲ್ಲ ಆತಂಕವೆಂಬುದು ಹತ್ತಿರ ಬಂದು ಕುಳಿತುಬಿಡುತಿತ್ತು. ಇನ್ನು ಹೆಚ್ಚು ಕಾಲ ಪ್ರೀತಿ ಮಾಡುತ್ತಾ ಕುಳಿತಿರಲು ಸಾಧ್ಯವಿಲ್ಲ. ವಯಸ್ಸು ಹೆಚ್ಚಾಗತೊಡಗಿದಂತೆ ಆತಂಕ ಹೆಚ್ಚಾಗ ತೊಡಗಿತು. ಕಾಲ ತನ್ನ ಪಾಡಿಗೆ ಸದ್ದಿಲ್ಲದೆ ಓಡುತ್ತಿದೆ. ಅದನ್ನು ಹಿಡಿದಿಡಲು ಯಾರಿಂದ ತಾನೇ ಸಾಧ್ಯ? ಆದಷ್ಟು ಬೇಗ ಮದುವೆ ಮಾಡಿಕೊಳ್ಳಬೇಕೆಂಬ ಮನಸ್ಸು ಇಬ್ಬರಲ್ಲೂ ಮೆಲ್ಲನೆ ಮೊಳಕೆಯೊಡೆಯಲು ಪ್ರಾರಂಭಿಸಿತು. ಆದರೆ, ಪ್ರೀತಿಯ ಮುಂದಿನ ಹೆಜ್ಜೆ ಹೇಗಿಡಬೇಕೆಂದು ಚರ್ಚೆಗೆ ಕುಳಿತಾಗಲೆಲ್ಲ ಚರ್ಚೆ ಹಾದಿ ತಪ್ಪಿಹೋಗುತಿತ್ತು. ಆ ವಿಚಾರದ ಬಗ್ಗೆ ಒಂದಷ್ಟು ದಿನ ಮಾತಾಡದೆ ಇರುವುದೇ ವಾಸಿ. ಮನಸ್ಸನ್ನು ಸ್ವಲ್ಪ ದಿನ ಬೇರೆ ವಿಚಾರದ ಕಡೆಗೆ ಕರೆದೊಯ್ಯುವುದು ಉತ್ತಮ ಅನ್ನಿಸುತಿತ್ತು.

ಸ್ವಲ್ಪ ಹೊತ್ತು ವಿಶ್ರಾಂತಿಯ ಬಳಿಕ ಮೇಲೆದ್ದು ಕಾಲ್ನಡಿಗೆಯ ಪಯಣ ಮುಂದುವರೆಸಿದರು. ಆ ಮಾರ್ಗದಲ್ಲಿ ಬಿಡುವಿಲ್ಲದೆ ಪ್ರವಾಸಿಗರ ವಾಹನಗಳು ಓಡಾಡುತ್ತಿದ್ದವು. ಪ್ರವಾಸಿಗರನ್ನು ನೋಡಿ ಇಬ್ಬರ ಮಾತು ಪ್ರವಾಸೋದ್ಯಮದ ಕಡೆಗೆ ಹೊರಳಿತು. ಇತ್ತೀಚೆಗಂತೂ ಸ್ಥಳೀಯರಿಗಿಂತ ಪ್ರವಾಸಿಗರೇ ಮಡಿಕೇರಿಯಲ್ಲಿ ಹೆಚ್ಚಾಗಿ ತುಂಬಿಕೊಂಡಿರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿ ಗೊಂಡಂತೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಂಡಿದೆ. ಆದರೆ ಒಂದು ಬೇಸರದ ಸಂಗತಿ ಅಂದರೆ ಪ್ರವಾಸೋದ್ಯಮದ ಅಭಿವೃದ್ಧಿಯ ಭರಾಟೆಯಲ್ಲಿ ಇಲ್ಲಿನ ಪ್ರಕೃತಿ ಕಣ್ಮರೆಯ ಹಾದಿ ತುಳಿಯುತ್ತಿದೆ. ಹಸಿರಿನ ಸೆರಗು ಹೊದ್ದು ಮಲಗಿರುವ ಬೆಟ್ಟಗುಡ್ಡಗಳಲ್ಲಿ ರಿಸಾರ್ಟ್‌ಗಳು ತಲೆ ಎತ್ತಿ ನಿಲ್ಲುತ್ತಿವೆ. ವರ್ಷಗರುಳಿದಂತೆ ಇಲ್ಲಿನ ಪ್ರಕೃತಿ ಸೊಬಗು ಮಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಮನ್ಯು ಪರಿಸರವಾದಿಯಂತೆ ಮಾತಾಡತೊಡಗಿದ.

ರಿಸಾರ್ಟ್ ನಿರ್ಮಾಣವಾದ್ರೆ ನಿನ್ಗೇನು ಹೊಟ್ಟೆ ಹುರಿ, ರಿಸಾರ್ಟ್ ನಿರ್ಮಾಣದಿಂದ ಭೂಮಿಯ ಬೆಲೆ ಗಗನಕ್ಕೇರಿದೆ. ಇಲ್ದಿದ್ರೆ ಇಲ್ಲಿಯ ಮಣ್ಣನ್ನು ಕೊಂಡುಕೊಳ್ಳುವುದಕ್ಕೂ ಜನ ಮುಂದೆ ಬತಾ ಇಲಿಲ್ಲ. ಈಗ ನೋಡು ಇಲ್ಲಿನ ಮಣ್ಣಿಗೋಸ್ಕರ ಹೊರಗಿನ ವರು ಮುಗಿಬೀಳ್ತಾ ಇದ್ದಾರೆ. ಜಿಲ್ಲೆಯ ಕಾಫಿ ಬೆಳೆಗಾರರು ಇರುವ ತೋಟವನ್ನೆಲ್ಲ ಮಾರಿ ಬೆಂಗಳೂರಿನಲ್ಲಿ ಸೆಟ್ಲಾಗಿ ನೆಮ್ಮದಿ ಜೀವನ ನಡೆಸ್ತಾ ಇದ್ದಾರೆ ಅಭಿಮನ್ಯುವಿನ ಮಾತಿಗೆ ತದ್ವಿರುದ್ಧ ನಿಲುವನ್ನು ತಳೆದಳು.

ಈ ನೆಮ್ಮದಿ ಎಲ್ಲಾ ಕಾಲ ಇರೋದಿಲ್ಲ ನೋಡು, ಇವತ್ತು ತೋಟ ಮಾರಿದವರು ನಾಳೆದಿನ ಕಷ್ಟ ಎದುರಿಸುತ್ತಾರೆ. ಹಳ್ಳಿಯಲ್ಲಿ ಸಿಗುವ ಸುಖ ನಗರದಲ್ಲಿ ಸಿಗೋದಿಲ್ಲ. ಒಂದಲ್ಲಾ ಒಂದು ದಿನ ಜಿಲ್ಲೆ ತೊರೆದವರು ಮತ್ತೆ ಬಂದೇ ಬತಾರೆ. ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ ಹಾಗೆ. ಬೆಂಗಳೂರಿನ ಬಗ್ಗೆ ನೂರಾರು ಕಲ್ಪನೆ ಕಟ್ಟಿಕೊಂಡು ಎಲ್ಲರು ಹೋಗ್ತಾರೆ. ಜೇಬಲ್ಲಿ ಹಣ ಖಾಲಿಯಾದಂತೆ ಮರಳಿ ಜಿಲ್ಲೆಗೆ ಬಂದುಬಿಡ್ತಾರೆ. ಅಭಿಮನ್ಯು ಕೊಡಗಿನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ.

ಅಯ್ಯೋ ಸಾಕು ನಿಲ್ಸು. ಯಾಯಾರೋ ಕಟ್ಟೋ ರಿಸಾರ್ಟ್ ಬಗ್ಗೆ ನಾವ್ಯಾಕೆ ಇಷ್ಟೊಂದು ತಲೆ ಕೆಡಿಸ್ಕೋಬೇಕು. ನಮ್ಮ ವಿಚಾರ ಏನಾದ್ರು ಇದ್ರೆ ಮಾತಾಡೋಣ. ನಮ್ಮಿಬ್ಬರ ಪ್ರೀತಿ ಶುರುವಾದಲ್ಲಿಂದ ನೀನು ನಿನ್ನ ಆಪ್ತ ಗೆಳತಿ ಭಾಗ್ಯಳನ್ನ ಮರೆತೇ ಬಿಟ್ಟಿದ್ದಿಯ ಅಂತ ನನ್ಗೆ ಅನ್ನಿಸ್ತಾ ಇದೆ. ಅವಳು ತುಂಬಾ ಕೋಪ ಮಾಡ್ಕೊಂಡಿಬೊಹುದು ಭಾಗ್ಯಳನ್ನು ಮರೆತ ಅಭಿಮನ್ಯುವನ್ನು ಎಚ್ಚರಿಸಿದಳು.

ಅವಳನ್ನ ಮರೆಯೋದಕ್ಕೆ ಹೇಗೆ ತಾನೇ ಸಾಧ್ಯ ಹೇಳು? ಸಣ್ಣ ವಯಸ್ಸಿನಲ್ಲಿಯೇ ಒಟ್ಟಿಗೆ ಆಡಿ ಬೆಳೆದವರು. ಏನೇ ವಿಚಾರ ಇದ್ರೂ ಹಂಚಿಕೊಳ್ತಾಳೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮಿಬ್ಬರನ್ನ ಪ್ರೀತಿಯಲ್ಲಿ ಬಂಧಿಸಿದ್ದೇ ಅವಳು. ನಮ್ಮಿಬ್ರನ್ನ ಒಂದುಮಾಡಿದ್ದಕ್ಕೆ ಅವಳಿಗೆ ಧನ್ಯವಾದ ಹೇಳ್ಲೇ ಬೇಕು

ಧನ್ಯವಾದ ಹೇಳೋ ಸಮಯದಲ್ಲಿ ಹೇಳಿದ್ರೆ ಚೆನ್ನಾಗಿತಾ ಇತ್ತು. ವರ್ಷ ಕಳೆದ ನಂತರ ಧನ್ಯವಾದ ಹೇಳೋದಕ್ಕೆ ಹೋದ್ರೆ ಅವಳ ಮನಸ್ಸಿಗೆ ನೋವಾಗೋದಿಲ್ವ? ಲವ್ವರ್ ಸಿಕ್ಕಿದ್ಮೇಲೆ ನನ್ನ ಮರೆತು ಬಿಟ್ಟಿದ್ದಾನೆ ಅಂತ ಅಂದುಕೊಂಡಿತಾಳೋ ಏನೋ…

ಅವಳಿಗೆ ಕೋಪ ಬರೋದಕ್ಕೆ ಸಾಧ್ಯನೇ ಇಲ್ಲ. ನಾನು ಏನೇ ತಪ್ಪು ಮಾಡಿದ್ರೂ ಕ್ಷಮಿಸಿ ಬಿಡ್ತಾಳೆ. ಒಟ್ಟಿಗೆ ಆಡಿ ಬೆಳೆದವರು ನಾವು. ಹೀಗಿರುವಾಗ ಅವಳ ಸ್ವಭಾವ ಹೇಗೆ ಅಂತ ನನ್ಗೆ ಗೊತ್ತಿಲ್ವ? ಅವಳು ಇಷ್ಟೊಂದು ಸಣ್ಣ ವಿಷಯಕ್ಕೆಲ್ಲ ಮುನಿಸಿಕೊಳ್ಳೋದಿಲ್ಲ. ಇವತ್ತೇ ಅವಳನ್ನ ಭೇಟಿಯಾಗ್ತೇನೆ ಅಂದ. ಇಬ್ಬರ ಮಾತು ಮುಗಿಯುವಷ್ಟರಲ್ಲಿ ಮಡಿಕೇರಿ ತಲುಪಿತು. ಸಾಕಷ್ಟು ನಡೆದು ಇಬ್ಬರು ದಣಿದಿದ್ದರು. ನಗರದೊಳಗೆ ಪ್ರವೇಶಿಸುತ್ತಿದ್ದಂತೆ ಅಕ್ಷರ ಆಟೋ ಏರಿ ಮನೆ ಸೇರಿಕೊಂಡಳು.
*  *  *

ಮಧ್ಯಾಹ್ನದ ಊಟ ಮನೆಯಲ್ಲಿಯೇ ಮುಗಿಸಿಕೊಂಡ ಅಭಿಮನ್ಯು ಒಂದಷ್ಟು ಹೊತ್ತು ವಿಶ್ರಾಂತಿ ತೆಗೆದುಕೊಂಡು ಭಾಗ್ಯಳ ಮನೆಯ ಕಡೆ ಪಯಣ ಬೆಳೆಸಿದ. ಅಭಿಮನ್ಯುವಿನ ಮನೆಯಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಭಾಗ್ಯಳ ಮನೆ ಇದೆ. ಅಷ್ಟೊಂದು ದೂರ ನಡೆದೇ ಸಾಗಿದ. ಆಕೆಯ ಮನೆಯಂಗಳ ಪ್ರವೇಶಿಸುತ್ತಿದ್ದಂತೆ ನಾಯಿಗಳು ತಮ್ಮ ಪೌರುಷ ತೋರಿಸಲು ಪ್ರಾರಂಭಿಸಿದವು. ಭಾಗ್ಯಳ ಮನೆಗೆ ಭೇಟಿ ನೀಡದೆ ಒಂದು ವರ್ಷ ಸರಿದು ಹೋಗಿತ್ತು. ಹೀಗಾಗಿ ನಾಯಿಗಳಿಗೂ ಅಭಿಮನ್ಯುವಿನ ಪರಿಚಯ ಮರೆತು ಹೋದಂತಿತ್ತು.

ನಾಯಿಗಳ ಬೊಗಳುವಿಕೆಯ ಸದ್ದಿನಿಂದ ಮನೆಯೊಳಗಿನಿಂದ ಓಡಿ ಬಂದ ಭಾಗ್ಯ ಅಭಿಮನ್ಯುವನ್ನು ಮನೆಯೊಳಗೆ ಕರೆದೊಯ್ದಳು. ನಿಮ್ಮ ಮನೆಯಲ್ಲೇನು ನಾಯಿಗಳಿಗೆ ಅನ್ನ ಹಾಕೋದಿಲ್ವ? ಮನುಷ್ಯನ ತಿನ್ನೋದಕ್ಕೆ ಬತಾ ಇದೆ. ನೀನು ಬೇಗ ಬಂದದ್ದು ನನ್ನ ಭಾಗ್ಯ. ಇಲ್ದಿದ್ರೆ ನಾಯಿಗಳು ನನ್ನ ಬಲಿ ತಗೊಳ್ತಾ ಇತ್ತೇನೋ!

ನೆನಪಾದಾಗಲೆಲ್ಲ ಓಡೋಡಿ ಬತಾ ಇದ್ದೋನು. ಈಗ ಮನೆಯ ಹಾದಿಯನ್ನೇ ಮರೆತು ಬಿಟ್ಟಿದ್ದೀಯ. ವರ್ಷಕ್ಕೊಮ್ಮೆ ಬಂದ್ರೆ ನಾಯಿಗಳು ಬೊಗಳದೆ ಇನ್ನೇನು ತಾನೆ ಮಾಡ್ತವೆ ಹೇಳು? ಪ್ರೀತಿ ಪ್ರಾರಂಭ ಆದ ನಂತರ ಇತ್ತ ಕಾಲಿಟ್ಟಿದ್ದೇ ಇಲ್ಲ. ಅಕ್ಷರ ನಿನ್ನ ಚೆನ್ನಾಗಿ ನೋಡ್ಕೊಳ್ತಾ ಇಬೊಹುದು. ಅದಕ್ಕೆ ನನ್ನ ಮರೆತು ಬಿಟ್ಟಿದ್ದೀಯ. ಅದ್ಸರಿ ಅಕ್ಷರ ಹೇಗಿದ್ದಾಳೆ? ಜೊತೆಗೆ ಕಕೊಂಡು ಬಬೊಹುದಿತ್ತಲ್ಲ? ಅವಳನ್ನ ನೋಡದೆ ವರ್ಷಗಳೇ ಉರುಳಿ ಹೋಗಿದೆ. ನೀನು ಬರೊದೇ ಅಪರೂಪ. ಇನ್ನು ಅವಳನ್ನೆಲ್ಲಿ ಕಕೊಂಡು ಬತಿಯ ಹೇಳು ಹುಸಿಮುನಿಸು ತೋರ್ಪಡಿಸಿದಳು.

ಒಂದು ವರ್ಷ ತನಕ ಭಾಗ್ಯಳ ಮನೆಯ ಕಡೆಗೆ ತಲೆಹಾಕಿ ನೋಡದದ್ದಕ್ಕೆ ಏನಾದರೊಂದು ಕಾರಣ ಹೇಳಲೇ ಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡ. ಏನಾದರೊಂದು ಕುಂಟುನೆಪ ಹೇಳಿ ಜಾರಿಕೊಳ್ಳಲು ನಿರ್ಧರಿಸಿದ. ಕೋಪ ಮಾಡ್ಕೋಬೇಡ ಭಾಗ್ಯ. ನನ್ನ ಪರಿಸ್ಥಿತಿ ಅರ್ಥಮಾಡ್ಕೋ. ಮೊದಲಿನಂತೆ ನನ್ಗೆ ಬಿಡುವಿಲ್ಲ. ಕೆಲವು ವರ್ಷಗಳ ಹಿಂದೆ ನಿರುದ್ಯೋಗಿಯಾಗಿ ಅಲೆಯ್ತಾ ಇದ್ದೆ. ಆಗ ಮಾಡ್ಲಿಕ್ಕೆ ಏನು ಕೆಲ್ಸ ಇಲಿಲ್ಲ ನೋಡು. ನಿನ್ನ ನೋಡ್ಲಿಕ್ಕೆ ಓಡೋಡಿ ಬತಾ ಇದ್ದೇ. ಆದರೆ ಈಗ ಕೈತುಂಬ ಕೆಲ್ಸ ಇದೆ. ಒಂದಷ್ಟು ಸಮಯ ಸಿಕ್ಕರೆ ಅಕ್ಷರಳೊಂದಿಗೆ ಕಳೆದು ಬಿಡ್ತೇನೆ. ಇಲ್ದೆದ್ರೆ ಅವಳು ಮುಖನ ಕುಂಬಳಕಾಯಿ ಮಾಡ್ಕೋತ್ತಾಳೆ. ಮದ್ವೆಯಾಗಿ ಸಂಸಾರವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗ್ಬೊಹುದು. ಆದ್ರೆ ಪ್ರಿಯತಮೆಯನ್ನ ಮೆಚ್ಚಿಸೋದು, ಆಕೆಯನ್ನ ನಿಯಂತ್ರಣದಲ್ಲಿಡೋದು ತುಂಬಾ ಕಷ್ಟದ ಕೆಲ್ಸ. ಈ ಲವ್ ಒಂಥರಾ ಸಂಸಾರ ಇದ್ದ ಹಾಗೆ. ನಿಭಾಯಿಸೋದು ಬಹಳ ಕಷ್ಟ ಅಭಿಮನ್ಯು ಒಂದು ವರ್ಷ ಭಾಗ್ಯಳ ಮನೆಗೆ ಭೇಟಿ ಕೊಡದೆ, ಒಂದು ದೂರವಾಣಿ ಕರೆಯೂ ಕೂಡ ಮಾಡದೆ ದೂರ ಉಳಿದದ್ದಕ್ಕೆ ಹೀಗೊಂದು ಸುಳ್ಳಿನ ಕತೆ ಹೆಣೆದು ಆಕೆಯ ಮುಂದಿಟ್ಟುಬಿಟ್ಟ.
ಆ ವಿಚಾರ ಒತ್ತಟ್ಟಿಗಿಲಿ, ನಿಮ್ಮ ಪ್ರೀತಿ ಎಲ್ಲಿಗೆ ಬಂದು ತಲುಪಿದೆ ಹೇಳು? ಮನೆಯಲ್ಲಿ ಏನು ಕಿರಿಕಿರಿ ಇಲ್ಲತಾನೆ? ಕೇಳಿದಳು
ಪ್ರೀತಿ ಇದ್ದಲ್ಲಿ ಕಿರಿಕಿರಿ ಇಲೇ ಬೇಕಲ್ವ? ಪ್ರೀತಿಸಿದ ಮೇಲೆ ನೂರಾರು ಸಮಸ್ಯೆಗಳು ಎದುರಾಗೋದು ಸಹಜ. ಅದನ್ನೆಲ್ಲ ಎದುರಿಸಲು ಮಾನಸಿಕವಾಗಿ ಸಿದ್ಧವಾಗಿಟ್ಟಿದ್ದೇನೆ. ಆತ್ಮವಿಶ್ವಾಸದಿಂದ ಹೇಳಿದ.

….. ಮುಂದುವರೆಯುವುದು

ಕಾದಂಬರಿ ಪುಟ ೩೧-೫೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ನೀಲಕಂಠಗೆ ನಾರಿ ಒಲಿದು ಬೆಳಗಾರತಿ
Next post ಮಂಗಳಾರತಿ ಎತ್ತಿ ಮಂತ್ರಶಕ್ತಿಯರು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys