ಸಾವಿಗೊಂದು ಸ್ಮಾರಕ

ಸಾವಿಗೊಂದು ಸ್ಮಾರಕ

ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ “ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ” ಎಂದು.

ಅಲಹಾಬಾದಿನ ವಿದುರ್‌ಕಾ ಹಳ್ಳಿಯ ಈ ಮಾಸ್ತರೆಂದರೆ ಮಕ್ಕಳಿಗೆ ಬಹು ಪ್ರೀತಿ. ಗಜರಾಜ್ ಸಿಂಗ್ ಎಷ್ಟೋ ಮಕ್ಕಳ ಬಾಳನ್ನು ರೂಪಿಸಿ ಅವರ ಭವ್ಯ ಭವಿಷ್ಯವನ್ನು ರೂಪಿಸಿದ್ದರು. ಅದರಲ್ಲಿ ಅವರಿಗೆ ಎಷ್ಟೋ ಸಂತೃಪ್ತಿ ಸಿಕ್ಕಿದ್ದರೂ ತಮ್ಮೀ ಮಗನ ಉದ್ಧಂಡ ಮಾತುಗಳು ಅವರ ಕರುಳನ್ನು ಕಿವಿಚುತ್ತಿತ್ತು.

“ನೀವು ನನ್ನ ತಂದೆ ತಾಯಿಗಳಲ್ಲ, ನನ್ನ ಶತ್ರುಗಳು” ಎಂದು ದೂಷಿಸುವ ಮಗ ಸರ್ವೇಂದ್ರ ಪೋಲಿಸ್ ಇನ್‌ಸ್ಪೆಕ್ಟರ್ ಆಗಿದ್ದುದು ಒಂದು ವಿಪರ್ಯಾಸವಾಗಿತ್ತು.

ಮಕ್ಕಳು ಬೇಕೆಂದು ಎಷ್ಟೋ ಪರಿತಪಿಸಿ, ಕಂಡ ಕಂಡ ದೈವಕ್ಕೆ ಕೈಮುಗಿದು, ಮದುವೆಯಾಗಿ ೧೬ ವರ್ಷಕ್ಕೆ ಹುಟ್ಟಿದ್ದ ಸರ್ವೆಂದ್ರ. ಅವನನ್ನು ಸುಮತಿ ಗಜರಾಜ್ ಬಹಳ ಪ್ರೀತಿಯಿಂದ ಸಾಕಿ ಪಾಲಿಸಿದ್ದಳು. ಅವರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಮಗುವಿಗೆ ಲಾಲನೆ ಪಾಲನೆಮಾಡಿ ಸರ್ವೇಂದ್ರವನ್ನು ಬೆಳಸಿದ್ದರು. ಅವನು ಬೆಳೆಯುತ್ತಾ ತನ್ನ ಉದ್ಧಟತನ ಅಹಂಕಾರ ಪ್ರದರ್ಶಿಸುತ್ತಾ ಬಂದ. ಅವನನ್ನು ಯಾವ ರೀತಿಯಲ್ಲೂ ತಿದ್ದಿ ನೇರದಾರಿಗೆ ತರಲು ಅಶಕ್ತರಾಗಿದ್ದರು. ಬೆಳೆಯುವ ಸರ್ವೇಂದ್ರನಿಗೆ ಶಾಲೆಯಲ್ಲಿ ಸಹವಾಸದೋಷವಿತ್ತು. ಅದರ ಜೊತೆ ಮದುವೆಯಾಗಿ ಬಹಳ ವರ್ಷಗಳ ಮೇಲೆ ಅಪರೂಪಕ್ಕೆ ಹುಟ್ಟಿದ ಮುದ್ದು ಮಗನ ಮೇಲೆ ಗಜರಾಜ್ ದಂಪತಿಗಳು ತಮ್ಮ ಅತಿಯಾದ ಪ್ರೀತಿಯನ್ನು ತೋರಿದ್ದರು.

ಬುದ್ದಿ ತಿಳಿಯುವ ನಾಲ್ಕು ಐದು ವರ್ಷ ಬಂದಾಗಿನಿಂದಲೂ ಹಠಮಾರಿತನ, ರೊಚ್ಚೆಗೈಯುವುದು ಅವನಿಗೆ ರೂಢಿಯಾಗಿಬಿಟ್ಟಿದ್ದಿತು.

ತಮ್ಮ ಶಾಲೆಯಲ್ಲಿದ್ದರೆ ತಂದೆಯೇ ಮಾಸ್ತರೆನ್ನುವ ನೆಪದಿಂದ ಶಿಸ್ತಿನ ಬಿಗಿ ಸಡಿಲವಾಗುವುದೆಂದು ಅವನನ್ನು ಒಳ್ಳೆಯ ಮಿಲಿಟರಿ ಶಾಲೆಗೆ ಹಾಕಿದ್ದರು. ಶಾಲೆಯ ಕಟ್ಟು ನಿಟ್ಟಳೆಯನ್ನು ಸರಿಯಾಗಿ ಪಾಲಿಸಿ, ಓದಿ ಬರಹದಲ್ಲಿ ಸಾಮಾನ್ಯ ಪ್ರಗತಿ ಪಡೆದಿದ್ದ. ಅವನ ಅಸಮ್ಮತ, ಅಸ್ವಾಭಾವಿಕ ಉದ್ದಂಡ ವರ್ತನೆ ಮಾತ್ರ ತಂದೆ ತಾಯಿಗೆ ಸೀಮಿತವಾಗಿತ್ತು. ಅವರ ಮಾತು ಅವನಿಗೆ ಬಹಳ ಅಪ್ರಿಯವೆನಿಸುತಿತ್ತು.

“ಸರ್ವೇಂದ್ರ! ಸ್ವಲ್ಪ ಮನೆಗೆಲಸಗಳಲ್ಲಿ ತಂದೆ ತಾಯಿಗೆ ಸಹಾಯ ಮಾಡಬೇಕಪ್ಪ” ಎಂದು ಗಜರಾಜ್ ಅವರು ಎಂದಾದರೂ ಕೇಳಿಕೊಂಡಾಗ ಸರ್ವೇಂದ್ರ ಸಿಡಿದು ಬೀಳುತ್ತಿದ್ದ.

“ಮಗನನ್ನು ಕತ್ತೆ ಎಂದುಕೊಂಡಿದ್ದೀರಾ? ನಿಮಗೆ ಮನೆ ಗೆಲಸದಲ್ಲಿ ಸಹಾಯ ಮಾಡುತ್ತಾ ನನ್ನ ಬೆನ್ನು ಈಗಲೇ ಬಗ್ಗಿಹೋಗಬೇಕಾ? ತಂದೆತಾಯಿಗಳಾದ ನೀವು ಮಗನಿಗಾಗಿ ಇಷ್ಟು ಮಾಡಬಾರದೆ? ಅಲ್ಲದೇ ಮನೆಗೆಲಸ ನೀವೇ ಮಾಡಿದರೆ ನಿಮ್ಮ ಕೈಕಾಲು ಸವೆದು ಹೋಗುವುದಿಲ್ಲ” ಎಂದು ಕಿರುಚಾಡುತ್ತಿದ್ದ.

ತಾಯಿ ಸುಮತಿಗೆ ಅವನ ಮಾತುಗಳಿಂದ ಆಘಾತವಾಗುತಿತ್ತು “ಪ್ರಾಣವಿರುವವರೆಗೂ ನಾನು ಈ ಮನೆಯ ಕೆಲಸಗಳನ್ನು ಮಾಡಲು ಹಿಂಜರಿಯುವುದಿಲ್ಲ, ಅವನಿಗೆ ಒಂದಲ್ಲ ಒಂದು ದಿನ ಬುದ್ದಿ ಬರುತ್ತದೆ. ತನ್ನ ಕರ್ತವ್ಯವನ್ನು ಅವನು ಅರಿತುಕೊಳ್ಳುತ್ತಾನೆ ವೃಥಾ ಅವನನ್ನು ಉದ್ರೇಕಿಸಬೇಡಿರಿ” ಎಂದು ಹೇಳುತ್ತಿದ್ದರು.

ಹೆಮ್ಮರವಾಗಿ ಬೆಳದಿದ್ದ ಸರ್ವೇಂದ್ರನ ನಿಲುವನ್ನು ಯಾವ ರೀತಿಯಲ್ಲೂ ಬಗ್ಗಿಸಲಾರದಾಗಿದ್ದರು. ಪೊಲೀಸ್ ಪೇದೆಯಾಗಿ ಸಮಾಜದಲ್ಲಿ ಶಿಸ್ತು ತರುವ ಕೆಲಸದಲ್ಲಿದ್ದು ಅವನ ವರ್ತನೆ ತಂದೆ ತಾಯಿಯರಲ್ಲಿ ಅತ್ಯಂತ ಭಿನ್ನವಾಗಿತ್ತು. ಹೊರಗಿದ್ದಾಗ ಶಿಸ್ತು ನಿಯಮ ಪಾಲಿಸುವ ಸರ್ವೇಂದ್ರ ತಂದೆ ತಾಯಿಯ ಮೇಲೆ ವ್ಯಾಘ್ರನಂತೆ ಎರಗುತ್ತಿದ್ದ.

ಒಮ್ಮೆ ಸರ್ವೇಂದ್ರನ ತಾಯಿ ಸುಮತಿ ಜ್ವರ ಬಡಿದು ಒಂದು ದಿನ ಹಾಸಿಗೆ ಹಿಡಿದು ಬಿಟ್ಟರು. ಗಜರಾಜ್ ಶಾಲೆ ಮನೆಯ ಕೆಲಸಗಳನ್ನು ಮಾಡಿ ಅಡಿಗೆ ಕೆಲಸ ಪೂರೈಸಿ ಪತ್ನಿಗೆ ಔಷಧೋಪಚಾರ ಮಾಡಿ ಶಾಲೆಗೆ ಹೋಗುತ್ತಿದ್ದರು. ಅಂದು ಸರ್ವೇಂದ್ರ ಮನೆಯಲ್ಲಿ ಆರಾಮವಾಗಿ ಕುಳಿತಿದ್ದ. ಗಜರಾಜ್ ಅವರು ಮಗನನ್ನು ಕರೆದು ತಾಯಿಯನ್ನು ತಾವು ಶಾಲೆಯಿಂದ ಬರುವವರೆಗೂ ನೋಡಿಕೊಳ್ಳಲು ಕೇಳಿಕೊಂಡರು.

ಸರ್ವೇಂದ್ರನಿಗೆ ಕೋಪ ನೆತ್ತಿಗೇರಿತು. “ನಾನು ಮನೆಯ ನಾಯಿ ಎಂದು ನೀವು ಭಾವಿಸಿದ್ದೀರಾ ? ನಾನು ನಿಮ್ಮ ಸೇವೆ ಮಾಡುವುದಕ್ಕೆ ತಯಾರಿಲ್ಲ, ಅಮ್ಮನನ್ನು ಕಾದು ನೋಡಿಕೊಳ್ಳುತ್ತಾ ಕುಳಿತರೆ ನನ್ನ ಬೇರೆ ಕೆಲಸಗಳು ಆಗುವುದಿಲ್ಲ. ನನಗೆ ನಿಮ್ಮಿಂದ ಎಷ್ಟು ಬೇಗ ದೂರ ಹೋದರೆ ಅಷ್ಟೇ ಸಾಕು. ನೀವು ಸತ್ತರೆ ನಿಮ್ಮಿಬ್ಬರ ದೇಹವನ್ನು ನಾನು ನಾಯಿಗೆ ತಿನ್ನಲು ಹಾಕುವೆ ತಿಳೀತಾ?” ಎಂದು ಕರ್ಣಕಠೋರವಾದ ಕರುಳ ಕುಯ್ಯುವ ಕ್ರೂರ ಮಾತುಗಳನ್ನಾಡುತ್ತಿದ್ದ.

“ನಾವು ನಮ್ಮ ಸರ್ವಸ್ವವನ್ನು ಕೊಟ್ಟು ಪ್ರಾಣಕ್ಕೆ ಸಮನಾದ ಪ್ರೀತಿ ಕೊಟ್ಟು ಬೆಳೆಸಿದವು. ಅವನಿಗೆ ಯಾವುದರ ಕೊರತೆಯೂ ಆಗದಂತೆ ನೋಡಿಕೊಂಡೆವು. ಅವನು ಬಳಲಿದಾಗ, ಬಿದ್ದಾಗ, ಎದ್ದಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆವು. ಅವನು ಆರೋಗ್ಯವಂತನಾಗಿರಲು ಅದೆಷ್ಟೊ ಶ್ರಮಿಸಿದೆವು. ಅವನಿಗೆ ನಾವು ಕೊಡದಿದ್ದದು ಏನೂ ಇರಲಿಲ್ಲ, ಮಗನ ಬಾಯಿಂದ ನಾವು ಇಂತಹ ಮಾತುಗಳನ್ನು ಕೇಳಬೇಕೇ?” ಎಂದು ಗಜರಾಜ್ ಸುಮತಿಯವರು ಗೊಳೋ ಎಂದು ಅಳುತ್ತಿದ್ದರು. ಅವರ ದುಃಖ ಸಾಗರದಂತೆ ಭೋರ್ಗರೆದು ಉಮ್ಮಳಿಸಿ ಬರುತಿತ್ತು. ಬದುಕಿರುವಾಗ ನಮಗೆ ಸಿಗದ ಗೌರವ ಪ್ರೀತಿ ಇನ್ನು ನಾವು ಸತ್ತ ಮೇಲೆ ನಮ್ಮ ಮಗ ನಮಗೆ ಕೊಡಲಾರನೆಂಬ ಕಟು ಸತ್ಯ ಅವರನ್ನು ಒಂದು ಸಂಕಲ್ಪಕ್ಕೆ ಪ್ರೇರೇಪಿಸಿತು.

ಗಜರಾಜ್ ಮತ್ತು ಸುಮತಿ ದಂಪತಿಗಳು, ಇತರ ವೃದ್ಧದಂಪತಿಗಳ ಜೊತೆ ಸೇರಿ ಒಂದು ಸಮಾಲೋಚನೆ ಮಾಡಿದರು. ನಾವುಗಳು ಬದುಕಿರುವಾಗಲು, ಸತ್ತಮೇಲು ನಮ್ಮ ಮಕ್ಕಳ ಮೇಲೆ ಆಧಾರಿತವಾಗಿರಬಾರದು. ಅವರಿಗೆ ಜನ್ಮ ಕೊಟ್ಟು ಅವರನ್ನು ಬೆಳೆಸುವುದು ಮಾತ್ರ ನಮ್ಮ ಕರ್ತವ್ಯ. ಅವರಿಂದ ಏನನ್ನೂ ಆಶಿಸುವುದು ತರವಲ್ಲ ಫಲಾಪೇಕ್ಷೆಯಿಲ್ಲದ ಪುತ್ರಪ್ರೇಮವನ್ನು ನಾವು ತೋರಿದ್ದೇವೆ. ಅವನಿಂದ ನಾವು ಸ್ವರ್ಗ ಲೋಕ ಪ್ರಾಪ್ತಿಯನ್ನು ಆಸೆಪಡುವುದುಂಟೆ? ನಾವು ಬದುಕಿರುವಾಗಲೇ ನಮ್ಮ ಬಾಳನ್ನು ನರಕ ಮಾಡಿರುವ ನಮ್ಮ ಮಗ ನಮಗೆ ಸದ್ಗತಿ ಕೊಟ್ಟಾನೆ?” ಎಂದು ನೂರು ತರಹ ಯೋಚಿಸಿ ತಾವು ಬದುಕಿರುವಾಗಲೆ ತಮ್ಮವೈಕುಂಠ ಸಮಾರಾಧನೆಯನ್ನು ಒಂದು ದಿನ ಗೊತ್ತುಮಾಡಿ ಎಲ್ಲರಿಗೂ ಭೋಜನವಿತ್ತರು. ಹಾಗೇ ತಮ್ಮ ಮನೆಯ ತೋಟದ ಅಂಗಳದಲ್ಲಿ ಮೂರು ಅಡಿ ಎತ್ತರದ ಗೋರಿಗಳನ್ನು ನಿರ್ಮಿಸಿದರು. ಅದರ ಮೇಲೆ ಒಳ್ಳೆಯ ಶಿಲ್ಪಕಲಾವಿದನಿಂದ ತಮ್ಮಿಬ್ಬರ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಎದೆ ಭುಜಗಳಿರುವ ಶಿಲ್ಪವನ್ನು ಮಾಡಿಸಿದರು. ಅದನ್ನು ಮೂರು ಅಡಿಯ ಗೋರಿಯ ಮೇಲಿರಿಸಿದರು. ಅದಕ್ಕೆ ಅಮೃತ ಶಿಲೆಯ ಫಲಕದಲ್ಲಿ “ಕ್ರೂರ ಜಗತ್ತಿಗೆ ವಿದಾಯ ಹೇಳುತ್ತೇವೆ. ದೈವಪಾದಕ್ಕೆ ಶರಣಾಗುತ್ತೇವೆ” ಎಂದು ಬರೆಸಿದರು.

ಗಜರಾಜ್ ಮತ್ತು ಸುಮತಿ ದಂಪತಿಗಳಿಗೆ ಬದುಕಿನಲ್ಲಿ ತಾವು ಪಡೆಯದ ಭಾಗ್ಯಕ್ಕೆ, ಸಾವಿನಲ್ಲಿ ತಾವು ಕಾಣದಿರುವ ಸದ್ಧತಿಗೆ ತಾವೇ ನಿರ್ಮಿಸಿಕೊಂಡ ಸಾವಿನ ಸ್ಮಾರಕ ಅವರ ಬಾಳಿಗೆ ಮಹತ್ವ ಕೊಟ್ಟಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಿಸುಮಾತು
Next post ಕೊಳ ಮತ್ತು ನಾನು

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…