ಸಾಹಿತಿ ಸುಂದರಯ್ಯನವರಿಗೆ ಪುಸ್ತಕದ ಬಾಬು ಮುಂಗಡ ಹಣವನ್ನು ಸಂಗಪ್ಪ ಕೊಟ್ಟುಬಿಟ್ಟ. ಆ ಸಂದರ್ಭದಲ್ಲಿ ಸುಂದರಯ್ಯ ಶಾನುಭೋಗರು ಮತ್ತು ಸಂಗಪ್ಪ ಲೋಕಾಭಿರಾಮವಾಗಿ ಮಾತಾಡ್ತ ಇದ್ದಾಗ ಸುಂದರಯ್ಯ ಹೇಳಿದರು: “ಸಂಗಪ್ನೋರೆ ನೀವು ನಿಜವಾಗ್ಲೂ ಸಮಾಜ ಸೇವೆಗೇ ಅಂತ್ಲೇ ದೈವದ ಅವತಾರವಾಗಿ ಹುಟ್ಟಿರೋರು. ನನ್ನ ಪುಸ್ತಕದಲ್ಲಿ ನಿಮ್ಮ ಬಗ್ಗೆ ಹಾಗೇ ಬರೀತೇನೆ. ಲೋಕದ ಹಿತಕ್ಕಾಗಿ ಹೀಗೆ ಸಾಕ್ಷಾತ್ ಪರಮಾತ್ಮನೇ ಯಾವ್ಯಾವುದೋ ರೂಪದಲ್ಲಿ ಕಾಣಿಸ್ಕೊಳ್ತಾನೆ ಅನ್ನೋದಿಕ್ಕ ನಮ್ಮ ಹಿಂದಿನ ಸಾಹಿತ್ಯದಲ್ಲಿ ಸಾಕುಬೇಕಷ್ಟು ಉದಾಹರಣೆ ಇದೆ; ಆಧಾರ ಇದೆ. ನಿಮ್ಮನ್ನ ಹಾಗೇ ಚಿತ್ರಿಸಿ ಹೊಸ ಸಾಹಿತ್ಯದಲ್ಲಿ ಕ್ರಾಂತಿ ಮಾಡ್ತೀನಿ. ಕೆಲವರು ಬೇರೆ ರೀತಿ ಕ್ರಾಂತಿಗಿಂತಿ ಅಂತಾರೆ. ನಾನಾದರೋ ಹೊಸ ಸಾಹಿತ್ಯದಲ್ಲಿ ಬರೀದೇ ಇರೋ ರೀತಿ ಬರೆದು ಎಲ್ಲರಿಗೂ ದಂಗುಬಡಿಸ್ತೇನೆ.”
ಶಾನುಭೋಗರೂ ದನಿಗೂಡಿಸಿದರು: “ಅದು ಸರಿ ಸ್ವಾಮಿ. ನಾನು ಇದಕ್ಕೇ ಸಂಗಪ್ನೋರ್ಗೆ ಹೇಳಿದ್ದೆ: ಕಾಲ ಕೂಡಿ ಬರ್ಬೇಕೂಂತ. ಈಗ ಬಂತು ನೋಡಿ, ಈಗ ಕಾವ್ಯವೇ ಸೃಷ್ಟಿಯಾಗುತ್ತೆ. ಆದರೂ ನಮ್ಮ ಸಂಗಪ್ನೋರು ಇನ್ನೊಂದು ಕೆಲಸ ಬಿಟ್ಟಿದ್ದಾರೆ…”
“ಏನ್ ಬಿಟ್ಟಿದ್ದೀನಿ ಸ್ವಾಮಿ? ಅದೇನ್ ಹೇಳ್ಬಿಡಿ, ಜನತೆಗೆ ಉಪಕಾರ ಆಗೋದಾದ್ರೆ ಮಾಡೇ ಬಿಡಾನ” – ಸಂಗಪ್ಪ ಉಮೇದಿನಿಂದ ಕೇಳಿದ.
“ನೋಡಿ ನೀವು ಏನೇನೊ ಮಾಡಿದ್ರಿ; ಆದ್ರೆ ನಿಮಗೆ ಮಾತ್ರ ಯಾರೂ ಏನೂ ಮಾಡ್ಲಿಲ್ಲ.”
“ಅಂದ್ರೆ?”
“ನಿಮಗೆ ಸನ್ಮಾನ ಗಿನ್ಮಾನ ಮಾಡಾದ್ ಬೇಡವೆ?”
“ಛೆ! ಛೆ! ಅದೆಲ್ಲ ಯಾಕೆ ನನಗೆ. ನೋಡಿ ಸುಂದರಯ್ನೋರು ಪುಸ್ತಕ ಬರೀತಾರೆ. ಜನಕ್ಕೆ ನನ್ನ ಸೇವೆ ಏನೂಂತ ಗೊತ್ತಾಗಿದೆ. ಇನ್ನೇನು ಬೇಕು ಇಷ್ಟಕ್ಕೂ ದೇವರು ಅದಾಗಲೇಬೇಕು ಅಂತ ತೀರ್ಮಾನಿಸಿದ್ರೆ ನಾನ್ಯಾಕೆ ಬೇಡ ಅನ್ನಲಿ? ಎಲ್ಲಾ ಅವನಿಚ್ಛೆ”
-ಸಂಗಪ್ಪ ಸನ್ಮಾನ ತಪ್ಪಬಾರದು, ತಾನೇ ಉತ್ಸಾಹ ತೋರಿದಂತೆಯೂ ಆಗಬಾರದು, ಹಾಗೇ ಉತ್ತರಕೊಟ್ಟ.
ಸುಂದರಯ್ಯನವರಿಗೂ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. “ನಿಮ್ಮಂಥೋರ್ಗೆ ಆಗದೆ ಇದ್ರೆ ಹೇಗೆ ಹೇಳಿ, ನಾನು ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದ್ದೇನೆ; ನೀವು ಸಮಾಜಕ್ಕೆ ಸೇವೆ ಸಲ್ಲಿಸಿದ್ದೀರಿ. ಉಭಯತ್ರರೂ ಸನ್ಮಾನ ಪಾತ್ರರು” – ಎಂದು ತಮ್ಮ ಮಾತೂ ಸೇರಿಸಿದರು.
ಸುಂದರಯ್ಯ ಹೋದಮೇಲೆ ಶಾನುಭೋಗರು ಜುಟ್ಟು ಕೊಡವಿ ಕಟ್ಟಿದರು. ಏಕ್‌ದಂ “ನಿಮಗೆ ಬುದ್ಧಿ ಇಲ್ಲ ಸಾವ್ಕಾರ್ರೆ” ಎಂದರು. ಎಂದೂ ಕೇಳದ ಮಾತು ಕೇಳಿ ಸಂಗಪ್ಪ ಮುಖದ ತುಂಬ ಆಶ್ಚರ್ಯಸೂಚಕ ಚಿಹ್ನೆ ಧರಿಸಿದ. ಶಾನುಭೋಗರೇ ಮುಂದುವರಿಸಿದರು; “ಅವಯ್ಯ ಅದೇ ಸಾಹಿತಿ ಸುಂದ್ರಯ್ಯ ಅದ್ಯಾವತ್ತು ಬರೀತಾನೊ ಏನ್ಕತೆಯೊ ನಿಮ್ಮ ಮೇಲೆ ಕಾವ್ಯಾನ. ಆಗ್ಲೆ ಅಡ್ವಾನ್ಸ್ ಕೊಟ್ಟಿರಿ; ಸನ್ಮಾನ ಮಾಡ್ತೀನಿ ಅಂತ ಮಾತೂ ಕೊಟ್ಟಿರಿ. ಏನಿದೆಲ್ಲ? ಸನ್ಮಾನ ಆದ್ಮೇಲೆ ಆತ ಬರೀದೆ ಇದ್ರೆ ಮನೆ ಮುಂದೆ ನಿಂತ್ಕಂಡು ಬಾಯಿ ಬಡ್ಕಬೇಕು. ಅಷ್ಟೆ”
“ಏನ್ರೀ ಹಿಂಗಂತೀರಿ? ಹಂಗಾರೆ ನನ್ನ ಪುಸ್ತಕ…?”
“ಬರುದ್ಮೇಲಲ್ವ ಪುಸ್ತಕದ ವಿಷಯ. ನಿಮ್ಮ ಎಚ್ಚರ ನಿಮಗಿರ್ಬೇಕು ಅಂತ ಹೇಳಿದೆ. ಸಾಹಿತಿಗಳ ವಿಚಾರ ನಂಗೊತ್ತಿಲ್ವ? ನಾನ್ ಅದೆಷ್ಟು ಷಟ್ಪದಿ ಕಾವ್ಯ ಬರ್ದಿದ್ದೀನಿ, ಏನ್ಕತೆ!
“ನಿಮ್ಮ ಷಟಪ್ ಕಾವ್ಯ ಹಂಗಿರ್ಲಿರಿ. ಈಗ ನನ್ನ ಗತಿ ಏನು?”
ಒಂದು ಕೆಲ್ಸ ಮಾಡೋಣ; ಮೊದಲು ನಿಮಗೆ ಸನ್ಮಾನ ಆಗ್ಲಿ, ದೊಡ್ಡದಾಗಿ ಬೆಂಗಳೂರಲ್ಲೇ ನಡೀಲಿ, ನಿಮಗೇನ್ ಕಡಿಮೆ? ಯಾವ ಮಂತ್ರಿ ಬೇಕಾದ್ರು ಬಡಬಡಾಂತ ಬರ್ತಾನೆ. ನಿಮ್ಮ ಸನ್ಮಾನಕ್ಕೆ ಆ ಸುಂದರಯ್ಯ ಪುಸ್ತಕ ಬರ್ಕೊಡ್ಲಿ; ಆಮೇಲೆ ನಮ್ಮೂರಲ್ಲಿ ಅವನಿಗೆ, ಬಾಯಿ ಬಾಬಾ ಸಮ್ಮುಖದಲ್ಲೇ ಸನ್ಮಾನ ಮಾಡೋಣ.”
“ಅದೇನೊ ನೀವೇ ಎಲ್ಲಾ ಮಾಡ್ಬೇಕು.”
“ನೀವ್ಯಾಕೆ ಯೋಚ್ನೆ ಮಾಡ್ತೀರಿ? ಹಣ ಒಂದ್ ಕೊಡಿ, ನಾನು ನಿಮ್ಮ ಮಾನಸ ಗುರುಗಳಲ್ವ, ಕೊಳಕು ಮಠಾಧೀಶ ಶುದ್ಧಾಂತ ರಂಗಸ್ವಾಮಿ, ಅವರೇ ಮುಂದೆ ಬಿದ್ದು ಮಾಡೋ ಹಾಗೆ ಏರ್ಪಾಡು ಮಾಡ್ತೇನೆ.”
“ಸರಿ ಕಣ್ರಿ, ಎಷ್ಟಾನ ಖರ್ಚಾಗ್ಲಿ, ಮಾಡ್ರಿ”
* * *
ಕೊಳಕು ಮಠದ ಶುದ್ಧಾಂತರಂಗಸ್ವಾಮಿ ಎಂದರೆಯಾರು? ಆ ಮಠ ಯಾವುದು? ಅಂತ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಯೆದ್ದಿರಲೇಬೇಕು. ಇದೇನಪ್ಪ ಇದ್ದಕ್ಕಿದ್ದಂತೆ ಈ ಸ್ವಾಮಿ ವಿಷಯ ತೂರಿಬಂತು ಹಿಂದೆ ಮುಂದೆ ಇಲ್ಲದೆ ಅಂತಲೂ ಅನ್ನಿಸಿರಬೇಕು. ನಾನು ಮಾಡ್ತಾ ಇರೋದೆ ಹಾಗಲ್ಲವೆ? ಎಷ್ಟೋ ಪಾತ್ರಗಳು ಸಂಗಪ್ಪನ ಸಾಹಸಗಳ ಚಿತ್ರಣಕ್ಕೆ ಪೂರಕವಾಗಿ ಮಾತ್ರ ಬಂದು ಹೋಗುತ್ತವೆ. ಎಲ್ಲ ಪಾತ್ರಗಳಿಗೂ ಸಮಾನ ಅವಕಾಶ ಇರಬೇಕೆಂದರೆ ಹೇಗೆ ಸಾಧ್ಯ? ಕೃತಿಯ ಸಂಯೋಜನೆಗೂ ಒಂದು ವ್ಯವಸ್ಥೆ ಇರುತ್ತಲ್ಲವೆ? ಅದರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನವೊ ಅಷ್ಟಷ್ಟು ಅವಕಾಶ. ಹೀಗೆ ಈಗ ಶುದ್ಧಾಂತ ರಂಗಸ್ವಾಮಿಗಳ ವಿಷಯವೂ ಹಾಗೇ.
‘ಕೊಳಕು ಮಠ’ ಅಂತ ಅವರ ಮಠಕ್ಕೆ ಹೆಸರು ಬಂದದ್ದು ಒಂದು ವಿಶೇಷವೆಂದೇ ಹೇಳಬೇಕು. ಮಠದ ಮೂಲ ಹೆಸರು ಅದೇನೊ ಮೂರು ಮೈಲಿ ಉದ್ದವಿದೆ. ಜನಕ್ಕೆ ಅಷ್ಟುದ್ದ ಹೇಳೋದು ಎಷ್ಟು ಕಷ್ಟ ಅಂತ ಗೊತ್ತೇ ಇದೆಯಲ್ಲ. ಆದ್ದರಿಂದ ಮಠದ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಹೊಸ ಹೆಸರು ರೂಢಿಗೆ ಬಂತು. ಬೆಂಗಳೂರು ನಗರದ ಹೊರವಲಯದಲ್ಲಿ ದೊಡ್ಡ ಬೋಳು ಮೈದಾನದ ನಡುವೆ ಇದ್ದ ಈ ಮಠದ ಸುತ್ತಮುತ್ತ ಜನರು, ಪ್ರಾಣಿಗಳು, ಪಕ್ಷಿಗಳು ಸಾಕಷ್ಟು ಕೊಳಕು ಕಾಣಿಕೆ ಕೊಟ್ಟಿದ್ದರು. ಆದ್ದರಿಂದ ಜನರು ಗುರುತಿಗಾಗಿ ತಮಾಷೆಯಿಂದಲೋ ಏನೊ ‘ಕೊಳಕು ಮಠ’ ಎಂದು ಕರೆದದ್ದು ರೂಢಿಗೆ ಬಂದು ಅದೇ ಖಾಯಮ್ಮಾಯಿತು. ಇದು ಮಠದ ಒಳಭಾಗಕ್ಕೂ ಅನ್ವಯಿಸುತ್ತದೆಯೋ ಎಂದು ಕೇಳಬೇಡಿ. ಅಲ್ಲಿರುವ ಸ್ವಾಮಿಗಳೇನು ಸಾಮಾನ್ಯರಲ್ಲ. ‘ಬಹಿರಂಗದ ಬಗ್ಗೆಯೇಕೆ ತಲೆ ಕೆಡಿಸಿಕೊಳ್ಳುವಿರಿ; ಅಂತರಂಗ ಶುದ್ಧವಾಗಿರಲಿ ಸಾಕು’ ಎಂಬುದು ಅವರ ಅಭಿಪ್ರಾಯ. ‘ಬಹಿರಂಗ ಕೊಳಕಾದರೂ ಅಂತರಂಗ ಶುದ್ಧವಾಗಿರಲಿ’ ಎಂಬುದು ಅವರ ಅಮೃತವಾಣಿ! ಮಠದ ಬಹಿರಂಗವಂತೂ ಕೊಳಕು ಇನ್ನು ಅಂತರಂಗಕ್ಕೂ ಅದೇ ಅನ್ವಯಿಸಲಿ – ಅನ್ನೋದು ಕೆಲವರ ಕುಹಕ! ಯಾರು ಏನೇ ಅನ್ನಲ್ಲಿ ಸಂಗಪ್ಪನ ಸಮೀಪದ ಸ್ವಾಮಿಗಳಾಗಿದ್ದ ಇವರು ಸದಾ ಅಂತರಂಗ ಶುದ್ಧಿ ತತ್ವದ ಪ್ರತಿಪಾದಕರಾಗಿದ್ದರು.
ಅಂತರಂಗ ಶುದ್ಧಿ ಪ್ರಾಧಾನ್ಯವನ್ನು ಪ್ರತಿಪಾದಿಸಿದ್ದಕ್ಕಾಗಿ ಸ್ವಾಮಿಗಳೇ ತಮ್ಮ ಹೆಸರನ್ನು ‘ಶುದ್ಧಾಂತ ರಂಗಸ್ವಾಮಿ’ ಎಂದು ಕರೆದುಕೊಂಡಿದ್ದರು. ಈ ಸ್ವಾಮಿಗಳ ಬಳಿ ಅಂತರಂಗ ಶುದ್ಧಿಗಾಗಿ ಬರುವವರು ಸಂಖ್ಯೆ ಅಗಾಧ. ಸಂಗಪ್ಪನಂಥ ಬಂಡವಾಳಗಾರ, ಜಮೀನ್ದಾರರೂ, ಎಲ್ಲ ಗ್ರೇಡಿನ ಮಂತ್ರಿಗಳೂ, ರಾಜಕಾರಣಿಗಳೂ, ಬುದ್ಧಿಜೀವಿಗಳೆಂದು ಪ್ರಸಿದ್ಧರಾದವರೂ, ಹೀಗೇ ಎಲ್ಲ ಕ್ಷೇತ್ರದ ಜನರು ಬರೋದು ಆಶೀರ್ವಾದ ಪಡೆಯೋದು – ಅಷ್ಟೇ ಅಲ್ಲ, ಎಂಥ ಕಷ್ಟದ ಕೆಲಸವನ್ನಾದರೂ ಮಾಡಿಸಿಕೊಳ್ಳಲು ನಡೆದು ಬಂದ ಸಂಪ್ರದಾಯ. ಕೆಲವು ಕೆಲಸಗಳು ಫೋನಿನಲ್ಲೇ ಆಗಿಬಿಡುತ್ತಿದ್ದವು. ಇನ್ನು ಇವರೇ ಮಂತ್ರಿ ಮನೆಗೆ ನಡುರಾತ್ರಿ ದರ್ಶನ ಕೊಟ್ಟರಂತೂ ಮುಗಿದೇ ಹೋಯಿತು. ಇದರಲ್ಲಿ ಅದೇನೋ ಮಂತ್ರ ಶಕ್ತಿಯಿದೆಯೆಂದು ‘ದೊಡ್ಡ ಕುಳ’ಗಳೆಲ್ಲ ಕಾಲ ಬಳಿಯೇ ಇದ್ದವು.
ಶಾನುಭೋಗರು ಇವರನ್ನು ಭೇಟಿ ಮಾಡಿ ವಿಷಯ ತಿಳಿಸಿದಾಗ ತಡ ಮಾಡದ ಶುದ್ಧಾಂತ ರಂಗಸ್ವಾಮಿಗಳು ಚಟಾಪಟ್ ಹೇಳಿದರು: “ನಮ್ಮ ಸಂಗಪ್ಪನಿಗೆ ಸನ್ಮಾನ ಆಗೋದಾದ್ರೆ ನಾವೇ ಮುಂದೆ ನಿಲ್ತೇವೆ. ನಮ್ಮ ಅಧ್ಯಕ್ಷತೆಯಲ್ಲೇ ಸನ್ಮಾನ ಸಮಿತಿ ಮಾಡೋಣ. ಆದರೆ ನಮ್ಮ ಮಠದ ಅಂತರಂಗ ಶುದ್ಧಿ ಯೋಜನೆಗೆ ಎಷ್ಟು ಫಂಡ್ ಕೊಡೋಕೆ ಸಾಧ್ಯ ಅನ್ನೋದರ ಮೇಲೆ ಕಾರ್ಯಕ್ರಮದ ಸ್ವರೂಪ ನಿಂತಿದೆ.”
ಶಾನುಭೋಗರು ಚೌಕಾಶಿ ವ್ಯಾಪಾರ ಶುರು ಮಾಡಿದರು. ಇಬ್ಬರೂ ಕಡೆಗೆ ಒಂದು ಒಪ್ಪಂದಕ್ಕೆ ಬಂದರು. ಕಡೆಯಲ್ಲಿ ಸ್ವಾಮಿಗಳು ಅಪ್ಪಣೆ ಕೊಡಿಸಿದರು: “ನೀವು ಒಪ್ಪಿಕೊಂಡಷ್ಟು ಕೊಡಲೇಬೇಕು; ಸಂಗಪ್ಪನಿಗೂ ತಿಳಿಸಿ, ಇದರಿಂದ ಆತನ ಕೀರ್ತಿ ಶಿಖರ ಮುಟ್ಟುತ್ತೆ. ಸೀದಾ ದೇವರ ಸನ್ನಿಧಿಗೇ ಅವನ ಪ್ರಸಿದ್ದಿ ಪಾದ ಬೆಳೆಸುತ್ತೆ. ಅಂಥಾದ್ದರಲ್ಲಿ ನಮ್ಮ ಒಪ್ಪಂದಕ್ಕೆ ಚ್ಯುತಿ ಬರಬಾರದು. ಈ ವಿಷಯದಲ್ಲಿ ನಿಮ್ಮಿಬ್ಬರ ಅಂತರಂಗ ಶುದ್ಧಿಯಾಗಿರಬೇಕು. ನಾವಾದರೂ ಜನತೆಯ ಅಂತರಂಗ ಶುದ್ಧಿ ಯೋಜನೆಗಾಗಿ ಸ್ವೀಕರಿಸುತ್ತಿದ್ದೇವೆ. ಇದು ಜನಸೇವೆಯ ಕಾರ್ಯ. ಅದಕ್ಕಾಗಿ ಒತ್ತಿ ಹೇಳುತ್ತಿದ್ದೇವೆ, ನಿಮ್ಮಿಬ್ಬರ ಅಂತರಂಗ ಶುದ್ಧವಾಗಿರಲಿ.”
“ಎಲ್ಲ ನಿಮ್ಮ ಆಶೀರ್ವಾದ ಸ್ವಾಮಿ. ಒಂದು ವಾರದಲ್ಲಿ ನಮ್ಮ ಅಂತರಂಗ ಶುದ್ದೀನ ಸಾಬೀತು ಮಾಡ್ತೇವೆ. ಅದೇನೋ ಸಿನಿಮಾ ತಗ್ಯೋದು, ಅದುನ್ನ ಮರೀಬೇಡಿ ಸ್ವಾಮಿ. ಅದುಕ್ಕೆಂತಲೇ ಇಷ್ಟೊಂದು ಫಂಡಿಗೆ ಒಪ್ಪಿದ್ದು. ಇನ್ನೂ ಸಾವ್ಕಾರ್ರಿಗೆ ಬೇರೆ ಹೇಳಬೇಕಲ್ಲ.”
“ಇದೆಲ್ಲ ಪರಸ್ಪರ ಅಂತರಂಗವನ್ನು ಅರ್ಥ ಮಾಡ್ಕೊಳ್ಳೋ ಕೆಲಸ. ನಿಮ್ಮ ಅಂತರಂಗ ಶುದ್ದೀನ ನೀವು ಸಾಬೀತು ಮಾಡಿ; ನಮ್ಮ ಅಂತರಂಗ ಶುದ್ಧಿ ಸನ್ಮಾನದ ದಿನ ಸಾಬೀತಾಗುತ್ತೆ. ಹೇಗೆ ನಡೆಯುತ್ತೆ ಅಂತ ನೋಡಿ; ವಾರ್ತಾ ಮಂತ್ರೀನ ಕರೆಸುತ್ತೇನೆ. ಅದರೆ ಒಂದು ಎಚ್ಚರ ಇರಲಿ ಈ ಅಂತರಂಗದ ಒಪ್ಪಂದ ಎಲ್ಲೂ ಯಾವತ್ತೂ ಬಹಿರಂಗಕ್ಕೆ ಬರಕೂಡದು.”
– ಶುದ್ಧಾಂತರಂಗಸ್ವಾಮಿ ಕಟ್ಟಪ್ಪಣೆ ಮಾಡಿದರು.
“ಎಲ್ಲಾದರೂ ಉಂಟೆ ಸ್ವಾಮಿಗಳೇ, ನಿಮ್ಮ ಆದರ್ಶವನ್ನು ಶಿರಸಾ ವಹಿಸಿ ನಾವು ಅನುಸರಿಸುತ್ತೇವೆ. ನಿಮಗೆ ಹಣ ಒಪ್ಪಿಸೋದಷ್ಟೇ ನಮ್ಮ ಕೆಲಸ ಉಳಿದದ್ದೆಲ್ಲ ನಿಮ್ಮದು. ಆದರೆ ಸಂಗಪ್ಪನವರ ಕೀರ್ತಿ ಎಷ್ಟು ಎತ್ತರಕ್ಕೆ ಹೋಗೋಕೂಂದ್ರೆ…”
“ಮತ್ತೆ ಮಾತು ಬೇಡ, ಪ್ರಸಿದ್ಧಿಯಿಂದ ಫಲ ಇಲ್ದಿದ್ರೆ ಪಣಂ ಎಲ್ಲಿ ಬಿಡ್ತಾ ಇದ್ದ ನಮ್ಮ ಭಕ್ತ ಶಿರೋಮಣಿ ಸಂಗಪ್ಪ?”
“ಸರಿ ಸ್ವಾಮಿ, ನಾನಿನ್ನು ಬರ್ತೇನೆ.”
“ಜೈ ಅಂತರಂಗ ಶುದ್ಧಿ” – ಎಂದು ಸ್ವಾಮಿಗಳು ಆಶೀರ್ವದಿಸಿದರು. ಶಾನುಭೋಗರು ಕೂಡಲೆ ಸಾಹಿತಿ ಸುಂದರಯ್ಯನವರ ಬಳಿಗೆ ಹೋದರು.
* * *
ಶುದ್ಧಾಂತರಂಗಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಿತಿ ರಚಿತವಾಯಿತು. ‘ಅಂತರಂಗ ಶುದ್ಧಿ ಯೋಜನೆ’ಯ ಅಂಗವಾಗಿ ಸಂಗಪ್ಪನವರಿಗೆ ಸನ್ಮಾನ ಎಂದೇ ಪ್ರಚಾರ ಮಾಡಲಾಯಿತು.
ಇದನ್ನು ಸನ್ಮಾನ ಸಮಾರಂಭದಲ್ಲಿ ಶುದ್ಧಾಂತರಂಗ ಸ್ವಾಮಿಗಳೇ ವಿವರಿಸಿದ ಬಗೆ
ಹೀಗಿದೆ:
“ಅಂತರಂಗ ಶುದ್ಧಿ ಯೋಜನೆಯ ಅಂಗವಾಗಿ ಯಾಕೆ ನಮ್ಮ ಸನ್ನಿಧಾನವು ಸಂಗಪ್ಪನವರನ್ನು ಸನ್ಮಾನಿಸುತ್ತದೆಯೆಂದರೆ – ಅವರು ಹಿಂದಿನಿಂದಲೂ ಅಂತರಂಗ ಸ್ವಚ್ಛತೆಗೆ ಹೆಸರಾದವರು. ಪರಂತು, ಭೂದಾನ ಮಾಡಿದರು; ಗೇಣಿದಾರರಿಗೆ ಸ್ವಂತ ಇಚ್ಛೆಯಿಂದಲೇ ಜಮೀನು ಬಿಟ್ಟುಕೊಟ್ಟರು. ಗಾಂಧೀಗುಡಿ ಕಟ್ಟಿಸಿದರು. ಪರಂತು ಅನೇಕಾನೇಕ ಸೇವಾ ಕಾರ್ಯಗಳನ್ನು ಮಾಡಿ ದೇಶಕ್ಕೆ ಮಾದರಿಯಾದರು. ಇತ್ತೀಚೆಗೆ ನಮ್ಮ ಸನ್ನಿಧಾನದಲ್ಲೂ ಯೋಗ್ಯ ರೀತಿಯಲ್ಲಿ ನಡೆದುಕೊಂಡು ನಮ್ಮ ಅನೇಕ ಯೋಜನೆಗಳಿಗೆ ಸಕ್ರಿಯ ಸಹಕಾರ ನೀಡಿ ಅಂತರಂಗ ಶುದ್ಧಿಯನ್ನು ಸಾಬೀತು ಮಾಡಿದ್ದಾರೆ. ಇಂಥ ಜನಸೇವಾ ದುರಂಧರರಿಗೆ ಸನ್ಮಾನ ಮಾಡುವುದು ಜಗತ್ತಿನ ಜನರಲ್ಲಿ ಅಂತರಂಗದ ಶುದ್ಧಿಗೆ ಪ್ರೇರಣೆಯಾಗುತ್ತದೆ. ಪರಂತು ನಾವು ಈ ಕಾರ್ಯವನ್ನು ಮನಸಾರೆ ಮಾಡುತ್ತಿದ್ದೇವೆ…”
ಜನರ ಚಪ್ಪಾಳೆಯೊ ಚಪ್ಪಾಳೆ. ಸಂಗಪ್ಪ ಠೀವಿಯಿಂದ ನಗುತ್ತ ಜನಕ್ಕೆ ಕೈಮುಗಿದ; ಚಪ್ಪಾಳೆ ನಿಂತ ಮೇಲೆ ಸ್ವಾಮಿಗಳು ಮುಂದುವರಿಸಿದರು: ಈ ಕೆಲಸದಲ್ಲಿ ಸಂಗಪ್ಪನವರ ಸ್ನೇಹಿತರಾದ ಶಾನುಭೋಗರು ಬಹಳ ಶ್ರಮಿಸಿದ್ದಾರೆ. ಅಲ್ಲದೆ ಈ ದಿನ ಸಂಗಪ್ಪನವರನ್ನು ಕುರಿತು ಮಹಾನ್ ಸಾಹಿತಿ ಸುಂದರಯ್ಯನವರು ಒಂದು ಮಹಾನ್ ಕಾವ್ಯವನ್ನು ಬರೆದಿದ್ದು, ಬಿಡುಗಡೆ ಮಾಡಲಾಗಿದೆ. ಇದೂ ಸಹ ಅಂತರಂಗ ಶುದ್ಧಿಯ ಪ್ರತೀಕ. ಯಾಕೆಂದರೆ ಯಾವುದೇ ಫಲಾಪೇಕ್ಷೆಯಿಲ್ಲದೆ ಅವರು, ಸಂಗಪ್ಪನವರ ಸೇವೆಯನ್ನು ಕೇಳಿ ತಿಳಿದುಕೊಂಡು ಜನತೆಯ ಮನೋವಿಕಾಸಕ್ಕಾಗಿ ಸೇವಾ ಪ್ರೇರಣೆಗಾಗಿ ಇಂಥವರ ಬಗ್ಗೆ ಕಾವ್ಯರಚನೆ ಸಾಧುವೆಂದು ತೀರ್ಮಾನಿಸಿದ್ದರು. ಪರಂತು, ಅವರು ತಮ್ಮ ಮಾತಿನಂತೆ ನಡೆದು ಅಂತರಂಗ ಶುದ್ಧಿಗೆ ಸಾಕ್ಷಿಯಾಗಿದ್ದಾರೆ. ಸಂಗಪ್ಪನವರ ಮುಂದೆ ನಿಂತು ಇಂಥ ಸಾಹಿತಿಗಳಿಗೆ ಸನ್ಮಾನ ಮಾಡಬೇಕಾದ್ದು ಕರ್ತವ್ಯ. ಯಾಕೆಂದರೆ ಸೇವಾಮನೋಧರ್ಮಿಗಳು ಋಣವನ್ನು ಉಳಿಸಿಕೊಳ್ಳುವುದು ಅಂತರಂಗ ಶುದ್ಧಿಗೆ ಅಡ್ಡಿಯಾಗುತ್ತದೆ. ಪರಂತು ಅವರು ಆ ಕೆಲಸ ಮಾಡಬೇಕೆಂದು ನಾವು ಅಪ್ಪಣೆ ಕೊಡಿಸುತ್ತೇವೆ.”
ಸಂಗಪ್ಪ ಕೂಡಲೆ ಕೈಮುಗಿದು ಅಪ್ಪಣೆ ಪಾಲಿಸುವುದಾಗಿ ತಲೆ ಬಾಗಿದ, ಜನಗಳಿಂದ ಮತ್ತೊಮ್ಮೆ ಚಪ್ಪಾಳೆ. ಸ್ವಾಮಿಗಳು ಮುಂದುವರಿಸಿದರು:
“ಅಂತರಂಗ ಶುದ್ಧಿಯನ್ನು ಸಾಬೀತು ಮಾಡಿರುವವರು ಇಲ್ಲಿ ಇನ್ನೊಬ್ಬರು ಉಳಿದಿದ್ದಾರೆ. ಅವರೆಂದರೆ ಈ ದಿನ ನಮ್ಮೆದುರಿಗಿರುವ ನಮ್ಮ ಭಕ್ತರಾದ ವಾರ್ತಾ ಮಂತ್ರಿಗಳು. ಸಂಗಪ್ಪನವರು ಸರ್ಕಾರದ ನೀತಿಗಳನ್ನು ಸ್ವ-ಇಚ್ಛೆಯಿಂದ ಅನುಸರಿಸಿದ ಆದರ್ಶವಾದಿಗಳು. ಅವರ ಬಗ್ಗೆ ಸರ್ಕಾರ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿ, ದೇಶಾದ್ಯಂತ ತೋರಿಸಿ ಅಂತರಂಗ ಶುದ್ಧಿಗೆ ಪ್ರೇರಣೆ ನೀಡಬೇಕಾದ್ದು ಧರ್ಮ. ಪರಂತು ಸಚಿವರು ಈ ಕೆಲಸವನ್ನು ನಮ್ಮ ಸಲಹೆಯ ಮೇರೆಗೆ, ಮನಗಂಡು, ಸರ್ಕಾರದ ವತಿಯಿಂದ ಸಾಕ್ಷ್ಯಚಿತ್ರ ತಯಾರಾಗಲು ಮುಖ್ಯ ಕಾರಣಕರ್ತರಾಗಿದ್ದಾರೆ. ಈ ದಿನ ಈ ಚಿತ್ರವನ್ನು ಸಮಾರಂಭದ ನಂತರ ಪ್ರದರ್ಶಿಸಲಾಗುತ್ತದೆ. ಮಾನ್ಯ ಮಂತ್ರಿಗಳಿಗೆ, ಸರ್ಕಾರಕ್ಕೆ ನಮ್ಮ ಸನ್ನಿಧಾನದ ಆಶೀರ್ವಾದ, ಶುಭ ಹಾರೈಕೆ ಸದಾ ಇರುತ್ತದೆ. ನಮ್ಮ ಅಂತರಂಗ ಶುದ್ಧಿಯನ್ನು ನಾವು ಇವರ ವಿಚಾರದಲ್ಲೂ ಮರೆಯುವುದಿಲ್ಲ. ಒಟ್ಟಿನಲ್ಲಿ ಈ ಸನ್ಮಾನ ಸಮಾರಂಭ ‘ಅಂತರಂಗ ಶುದ್ದಿ ಯೋಜನೆ’ಯ ಅತ್ಯುತ್ತಮ ಸಾಕ್ಷಿಯಾಗಿದೆ ಎಂಬುದು ನಮ್ಮಗಳ ಅಭಿಪ್ರಾಯವಾಗಿದೆ. ಪರಂತು ಈ ಯೋಜನೆಯ ಯಶಸ್ಸಿಗೆ ಎಲ್ಲರೂ ಸಹಕರಿಸಿ ನಮ್ಮ ಆಶೀರ್ವಾದಕ್ಕೆ ಪಾತ್ರರಾಗಬೇಕು…”
ಸಂಗಪ್ಪ ಶಾನುಭೋಗರ ಕಡೆ ಕೃತಜ್ಞತೆಯ ಭಾವದಿಂದ ನೋಡುತ್ತಿದ್ದ. ಅವರಿಗೂ ಈತನ ಅಂತರಂಗ ಶುದ್ಧಿ ಸಾಬೀತಾಗಿತ್ತಾದ್ದರಿಂದ ಖುಷಿಯಾಗಿಯೇ ಇದ್ದರು.
ಇವೆಲ್ಲ ಸಂಗಪ್ಪನ ಸಾಹಸಗಳ ವಿಪರ್ಯಾಸ!
* * *
ಪ್ರಿಯ ಓದುಗರೆ, ಇನ್ನು ಸಂಗಪ್ಪನ ಸಾಹಸಗಳು ಸಾಕು; ಇದಿಷ್ಟು ಎಲ್ಲವನ್ನೂ ಹೇಳಬಹುದು. ಈಗ ಮುಗಿಸುತ್ತಾ ಇದ್ದೀನಿ ಅಂದರೆ ನನ್ನ – ನಿಮ್ಮ ಸಂಬಂಧ ಇದಕ್ಕೆ ಸಂಬಂಧಿಸಿದಂತೆ ಮುಗೀತು ಅಂತ ಅಲ್ಲ. ಅರ್ಥಪೂರ್ಣವಾಗಿ ಪ್ರಾರಂಭವಾಗೋದು ಈಗಲೇ, ಓದಿ ಒರೆಗೆ ಹಚ್ಚಿ ಸಾಮರ್ಥ್ಯ ಇರೋರು ಇದನ್ನು ವಿಮರ್ಶಿಸಿದಾಗ, ಸಕಾರಣವಾಗಿ ಹೊಗಳಿದಾಗ ಅಥವಾ ತೆಗಳಿದಾಗ ಆದೊಂದು ಗಂಭೀರ ಸಂವಾದಕ್ಕೆ ಕಾರಣ ಆದಾಗ, ನನ್ನ – ನಿಮ್ಮ ಸಂಬಂಧ ಇನ್ನೂ ಅರ್ಥಪೂರ್ಣ. ಈ ಬರಹ ಮತ್ತು ನಿಮ್ಮ ಸಂಬಂಧ ನನ್ನ ಮತ್ತು ನಿಮ್ಮ ನಡುವಿನ ಸಂಬಂಧವಾಗಲಿ; ಸಂವಾದವಾಗಲಿ, ನಮಸ್ಕಾರ.
(೧೯೮೧)
*****
ಮುಗಿಯಿತು