ನಿನ್ನ ಮಗಳಾದ ಲಕ್ಷ್ಮಿಯಂತೆ ಸೌಂದರ್ಯದ ತವರಲ್ಲ ನಾನು
ಓ! ಸಮುದ್ರ!
ಆದರೆ ಮಗುವಿನಂತೆ ನಿನ್ನನು ಪ್ರೀತಿಸಿದೆ! ಕರುಣಿಸು ತಂದೆ!
ನಾರಾಯಣನಂತೆ ಲಕ್ಷ್ಮೀಲೋಲನಲ್ಲ, ಶೇಷಶಾಯಿಯಲ್ಲ ಓ! ಸಮುದ್ರ!
ಅವನಂತೆ ಪಾರಾಯಣ ಮಾಡಿದೆ ನಿನ್ನ! ಉರವಣಿಸೆನ್ನ ಮನವ, ತಂದೆ!
ಚಂದ್ರನಂತೆ ನಿನ್ನ ಹೈದಯವನು ಉಕ್ಕೇರಿಸಿದವನಲ್ಲ, ಓ! ಸಮುದ್ರ!
ಆದರೆ ನಿನ್ನ ಮಹಿಮೆಯ ನೋಡಿ ಉಕ್ಕೇರಿದವನು, ತಂದೆ!
ನೀಲಕಂಠನಂತೆ,-ನಿನ್ನನುರಿಸಿದ ವಿಷವ ನುಂಗಿಲ್ಲ, ಓ! ಸಮುದ್ರ!
ಆದರೆ ರಾಕ್ಷಸರಂತೆ ಅಮೃತವನೊಂದೆ ಬಯಸಿದವನಲ್ಲ, ಕರುಣಿಸು ತಂದೆ!
ದೇವನಂತೆ ಮತ್ಸ್ಯಕೂರ್ಮವಾಗಿ ನಿನ್ನ ತೊಡೆಯ ಮೇಲಾಡಿಲ್ಲ,
ಓ! ಸಮುದ್ರ!
ಆದರೆ ಕೂರ್ಮ-ಮತ್ಸ್ಯಗಳಲ್ಲಿ ಸಹ ದೇವರನ್ನು ಕಂಡಿರುವೆನು, ತಂದೆ!
ದೇವತೆಗಳಂತೆ ನಿನ್ನಾಳವನು ಮಂಥಿಸಿ ತಿಳಿದಿಲ್ಲ, ಓ! ಸಮುದ್ರ!
ಆದರೆ ಚಿಂತಿಸಲು ಅದು ಕಣ್ಣೆದುರಿಗೆ ತಾನಾಗಿ ಹೊಳೆದಿಹುದು, ತಂದೆ!
ಶೆಲ್ಲಿಯಂತೆ ಮರಣದ ತೆರೆಯೆತ್ತಿ, ನಿನ್ನನ್ನು ನೋಡಿದವನಲ್ಲ
ಓ! ಸಮುದ್ರ!
ಆದರೆ ನಿನ್ನ ತೆರೆತೆರೆಯಲ್ಲಿ ಹುಟ್ಟುಸಾವಿನ ಗುಟ್ಟನು, ಕಾವ್ಯದ
ಶೆಲೆಯನು ಕಂಡೆನು, ತಂದೆ!
ಹಿಂದಿನ ಕಾವ್ಯದಲ್ಲಿಯಂತೆ ನಿನ್ನ ರೂಪವಿಲ್ಲಿ ಥಳಥಳಿಸಿಲ್ಲ, ಓ! ಸಮುದ್ರ!
ಆದರೆ ನಿನ್ನನ್ನು ನೋಡದೆ ಬಣ್ಣಿಸಿ ನಾನು ಹಳಹಳಿಸಿಲ್ಲ, ತಂದೆ!
ನಿನ್ನ ಸಾವಿರ ಭಂಗಿಗಳನ್ನು ಕೀರ್ತಿಸಲು ಸ್ವರವಿಲ್ಲ, ನನ್ನ ಪುಂಗಿಗೆ.
ನಿನ್ನ ಬಣ್ಣ-ಬಣ್ಣಗಳ ಬಣ್ಣಿಸುವ ಕುಸುರಿಲ್ಲ ನನ್ನ ಕಲೆಗೆ.
ಒ೦ದೇ ಒಂದು ಮಾತನು ನೂರೊಂದು ಸಲ ಸಾರುವೆನು,-
ನಿನ್ನ ನೋಡಿ ನನ್ನ ಜೀವನಕೆ ಮ೦ಗಳವಾಯ್ತು, ಮ೦ಗಳವಾಯ್ತು,
ಮಹಾಮಂಗಳವಾಯ್ತು!
ಓಂ! ನಮೋ! ಸಮುದ್ರಪುರುಷಾಯ!
*****