ಮೆಟಿಲ್ಡಾ

ಮೆಟಿಲ್ಡಾ

scan0066
ಚಿತ್ರ: ಅಪೂರ್ವ ಅಪರಿಮಿತ

ನಾನು ವೃಕ್ಷಶಾಸ್ತ್ರದ ಎಂ.ಏ. ಪರೀಕ್ಷಗೆ ಓದಿತ್ತಿರುವ ದಿನಗಳಲ್ಲಿ ಮೈಲಾಪೂರದ ದೊಡ್ಡ ಬೀದಿಯಲ್ಲಿರುವ ಒಂದು ಮಹಡಿ ಮನೆಯಲ್ಲಿ ವಾಸವಾಗಿದ್ದೆ. ನನ್ನಂತಹ ಹತ್ತಾರು ಜನವಿದ್ಯಾರ್ಥಿಗಳು ನಮ್ಮ ದೇಶದವರು ಆ ಮಹಡಿ ಮನೆಯಲ್ಲೇ ಇರುತ್ತಿದ್ದರು.

ನಾನು ಬಂದ ಮೂರನೇ ದಿನ ರಾಮಾರಾವ್ ನನ್ನನ್ನು ಸನ್ನೆಮಾಡಿ ಕರೆದು ರಹಸ್ಯವಾಗಿ “ಮೆಟಿಲ್ಡಾನನ್ನು ನೋಡಿದೆಯಾ?” ಎಂದು ಕೇಳಿದರು. “ಇಲ್ಲ” ವೆಂದೆ. “ಅಲ್ಲಿ ನೋಡೀ ನೋಡದಂತೆ ನೋಡು” ಎಂದು ತೋರಿಸಿದ.

“ನೋಡಿದೆ”
“ಸಾಕು ಇನ್ನು ಬಾ” ಎಂದ.
ಮೆಟಿಲ್ಡಾ ಕಡೆಗೆ ತಿರುಗಿಸದ ಮುಖವನ್ನು ತಿರುಗಿಸದೆ “ಹೇಗೆ ಬರುವುದು? ಕಣ್ಣನ್ನು ದೇವರು ಕೊಟ್ಟಿರೋದಕ್ಕೆ ಇದೇ ಅಲ್ಲವೇ ಫಲಿತಾಂಶ! ಮನೋಹರವಾದ, ಭಗವಂತನ ಸೃಷ್ಟಿಯಲ್ಲಿಯೇ ಮನೋಹರವಾದದ್ದು ಸೊಗಸಾದ ಸ್ತ್ರೀ! ಮನಸ್ಸಿನಲ್ಲಿ ಕೆಟ್ಟಯೋಚನೆ ಇಲ್ಲದಿದ್ದಲ್ಲಿ ನೋಡಿದರೆ ತಪ್ಪೇನಿದೆ?” ಎಂದೆ.

“ನಿನ್ನಂತೆ ಬೋಧಿಸುವವರನ್ನು ಬಹಳಷ್ಟು ಜನರನ್ನು ನೋಡಿದ್ದೇನೆ. ಹೊಸಬನು-ತಿಳಿದಿದ್ದರೆ ಚೆನ್ನಾಗಿರುತ್ತದೆಂದು ತೋರಿಸಿದ್ದೇನೆ. ಮುಂದೆ ಎಂದೂ ಈ ಕಡೆ ಕಣ್ಣು ತಿರುಗಿಸಬೇಡ.”

ರೆಟ್ಟೆ ಹಿಡಿದು ಎಳೆದುಕೊಂಡು ಹೋದ.
“ಒಳ್ಳೆಯವರಾ, ಕೆಟ್ಟವರಾ?” ಎಂದು ಕೇಳಿದೆ.
“ಒಳ್ಳೆಯವರಾದರೆ ನಮಗೇನು? ಕೆಟ್ಟವರಾದರೆ ನಮಗೇನು?”
“ಇನ್ನೊಬ್ಬರ ಒಳ್ಳೆಯತನವನ್ನು ಅಲ್ಲವೆನ್ನಲು ನಮ್ಮಲ್ಲಿ ಒಳ್ಳೆಯತನವೆನ್ನುವುದು ಎಷ್ಟಿದೆ? ಮೆಟಿಲ್ಡಾಳ ಕಡೆಗೆ ನೋಡಬೇಕೆಂದು ಪುನಃ ಮತ್ತೆ ಎಂದಾದರೂ ನೋಡಿದೆಯಾದರೆ ನಿನಗೂ ನನಗೂ ಗೆಳೆತನ ಮುಗಿಯಿತು” ಎಂದ. ರಾಮಾರಾವ್ ನಮಗೆ ಪ್ರಾಣಸಮಾನನಾದ ಗೆಳೆಯ. ಏನು ಮಾಡಲಿ, ಮನಸ್ಸನ್ನು ನಿರೋಧಿಸಿ ಮೆಟಿಲ್ಡಾಳ ಮನೆಯ ಹಿತ್ತಲಿನಲ್ಲಿ ಇರುವ ಮನೆಯ ಕಡೆಗೆ ಹೋಗಲಿಲ್ಲ ಕೆಲವು ದಿನ.

ಹರಿಶಿನ ಬಳಿದುಕೊಂಡು ಸ್ನಾನ ಮಾಡಿರುವ ಬಂಗಾರ ವರ್ಣದಿಂದ ಹೊಳೆಯುವ ಮೈಯ ಸೊಂಪು ನವಿಲಿನ ಗರಿಯಂತೆ ಒಡಲನ್ನು ಕವಿದು ಕೆದರಿದ ತಲೆ ಕೂದಲು. ಬಾವಿಯಿಂದ ನೀರು ತೋಡುತ್ತಾ ಒಂದೊಂದುಸಲ ತಲೆ ಎತ್ತಿ ಅತ್ತಯಿತ್ತ ನೋಡುವ ಕಣ್ಣಿನ ತಳಕು ಮುಖದ ಸೌಂದರ್ಯ ನನ್ನ ಕಣ್ಣ ಮುಂದೆ ನಿಂತು ಮರೆಯಬೇಕೆಂದರೂ ಮರೆಯಲಾರದವನಾದೆ.

ಎಂಟು ಹತ್ತು ದಿನ ಬಿಗುವಿನಿಂದ ಇದ್ದ ಆಮೇಲೆ ಮನಸ್ಸು ನಿಲ್ಲದೆ ಓಡಾಡುತ್ತಾ ಓದುವ ನೆಪದಿಂದ ಕೈಯಲ್ಲಿ ಪುಸ್ತಕ, ದೃಷ್ಟಿ ಹಿತ್ತಲಿನಲ್ಲಿ ಇಟ್ಟು ಮಹಡಿಯ ಮೇಲೆ ಗಸ್ತು ತಿರುಗುತ್ತಿದ್ದೆ. ರಾಮಾರಾವ್ ಮನೆಯಲ್ಲಿ ಇಲ್ಲದ ಸಮಯದಲ್ಲಿ.

ಆ ದಿನಗಳಲ್ಲಿ ಎರಡುಸಲ ಮಾತ್ರ ಕೆಲಸದ ಮೇಲೆ ಹಿತ್ತಲಿಗೆ ಬಂದು ಕೂಡಲೆ ಮನೆಯೊಳಗೆ ಹೋಗುತ್ತಾ ಬಂದಳು ಮಿಂಚಿನಂತೆ.

ಕಾಲೇಜಿಗೆ ಹೋಗುವಾಗ ಮೆಟಿಲ್ಡಾಳ ಮನೆಯ ಮುಂದೆ ಇರುವೆಯಂತೆ ನಿಧಾನವಾಗಿ ಆ ಮನೆಯ ಕಡೆಗೇ ನೋಡುತ್ತಾ ನಡಿಯುತ್ತಿದ್ದೆ. ಆಗಾಗ್ಗೇ ಚಿತ್ತರುವಿನ ಚೌಕಟ್ಟಿನಲ್ಲಿರುವ ಪ್ರತಿಮೆಯಂತೆ ಕಿಟಿಕಿಯೊಳಗಿನಿಂದ ಮೆಟಿಲ್ಡಾ ಕಾಣುತ್ತಿದ್ದಳು.

– ೨ –
ಮೆಟಿಲ್ಡಾಳ ಇತಿಹಾಸವನ್ನು ಕೇಳಿಕೇಳಿ ಅವರಿಂದ ಇವರಿಂದ, ಕೇಳದೆ ನನ್ನ ಗೆಳೆಯರಿಂದ ತಿಳಿದಿದ್ದೇನೆ. ಮೆಟಿಲ್ಡಾಳ ಗಂಡನಿಗೆ ನಮ್ಮವರು ಹುಲಿ, ಮುದಿಹುಲಿ ಎಂದು ಹೆಸರಿಟ್ಟಿದ್ದರೆ. ಅಷ್ಟು ಮುದಿಯವನಲ್ಲ, ಐವತ್ತೈದು, ಐವತ್ತಾರು ವಯಸ್ಸು ಇರಬಹುದು. ಸ್ವಲ್ಪ ಬೆಳ್ಳಗೆ, ಗಿಡ್ಡದಾಗಿ ಇರುತ್ತಾನೆ. ದೊಡ್ಡ ಕಣ್ಣು, ಕೋರೆ ಮೀಸೆ, ಸ್ಫೋಟಕದ ಕಲೆಗಳ ಮುಖ, ಎರಡು ವರ್ಷವಾಯಿತು ಬಂದು ನಮ್ಮ ಪಕ್ಕದ ಬಂಗಲೆಯಲ್ಲಿ ವಾಸ ಮಾಡಿದ್ದಾನೆ. ಎಲ್ಲಿಂದ ಬಂದಿರುವನೋ? ಏಕೆ ಬಂದಿರುವನೋ? ಯಾರಿಗೂ ತಿಳಿಯದು. ಬೀದಿಯ ಕಡೆಗೆ ಹಿತ್ತಲನ್ನು ಅಂಟಿಕೊಂಡು ದೊಡ್ಡಕೋಣೆ ಒಂದು ಇದೆ. ಅದರಲ್ಲಿ ಮೂರು ಅಲ್ಮಾರಗಳಲ್ಲಿ ಪುಸ್ತಕಗಳಿವೆ. ಹಮೇಷಾ ಬರೆಯುತ್ತಲೋ, ಓದುತ್ತಲೋ ಕಾಣುತ್ತಿದ್ದ. ಬೀದಿಯ ಹಿತ್ತಲಿನಲ್ಲೂ, ಹಿಂದಿನ ಹಿತ್ತಲಿನಲ್ಲೂ ಹೂವುಗಳ ಚಮನ್ ತುಂಬಾ ಸೊಗಸಾಗಿ ಇಟ್ಟಿರುಸುತ್ತಿದ್ದ. ಮುಂಜಾವಿನಲ್ಲೂ, ಸಾಯಂಕಾಲದಲ್ಲೂ ಗಿಡಗಳಿಗೆ ಪಾತಿಗಳನ್ನು ಅಗೆಯುತ್ತಿದ್ದ. ಮೆಟಿಲ್ಡಾ ನೀರು ಎರೆಯುತ್ತಿದ್ದಳು, ಇದು ಆಂಗ್ಲೇಯರ ವಿಧಾನದಲ್ಲಿ ಇಬ್ಬರಿಗೂ ಶರೀರ ವ್ಯಾಯಾಮ.

ಅಷ್ಟೇ. ಮನೆ ಬಿಟ್ಟು ನಾಲ್ಕು ಹೆಜ್ಜೆ ಹಾಕುವುದಂತೂ ಇಲ್ಲ. ಮನೆಗೆ ಬಂಧುಬಳಗದ ಬರುವಿಕೆ, ಮತ್ತು ಹೋಗುವಿಕೆ ಎಂದೂ ಇಲ್ಲ. ಹುಲಿ ಮೆಟಿಲ್ಡಾಳನ್ನು ಹೆಚ್ಚು ಕಟ್ಟಳೆಯಲ್ಲಿ ಇರಿಸಿದ್ದ. ಬಾಗಿಲ ಬಳಿಗೆ ಬರಬಾರದೆಂದು ಶಾಸನ. ಆದರೂ ಆಗಾಗ್ಗೆ ಬರುತ್ತಿದ್ದಳು. ಆ ಹುಡಿಗೆಯ ಮುಖದಲ್ಲಿ ಒಂದು ವಿಧವಾದ ಕಳವಳ ಕಾಣುತ್ತಿತ್ತು. ಸೋಜಿಗವೇನಿದೇ? ಗಂಡ ಕಟ್ಟಳೆ ಮಾಡುವವನು. ಗಂಡನ ಅಕ್ಕ ಒಬ್ಬ ಮುದುಕಿ. ಸಣ್ಣ ಪುಟ್ಟ ಜಗಳವನ್ನಿಡುತ್ತಿದ್ದಳು. ಮನೆಯಲ್ಲಿ ಉಳಿದವನು ಒಬ್ಬ ಮುದಕನಾದ ಅಡಿಗೆ ಮಾಡುವ ಬ್ರಾಹ್ಮಣ.

ಮೆಟಿಲ್ಡಾಳ ಗಂಡನನ್ನು ಹುಲಿ ಹುಲಿ ಎನ್ನುವದನ್ನು ಬಿಟ್ಟು ಆತನ ಹೆಸರೇನೆನ್ನುವುದು ಯಾರಿಗೂ ತಿಳಿಯದು. ಪೋಸ್ಟ್ ಮ್ಯಾನ್ ಅವರ ಹೆಸರಿನಲ್ಲಿ ಬರುವ  ಪತ್ರಗಳ ಮೇಲಿನ ವಿಳಾಸವನ್ನು ಯಾರಿಗೂ ತೋರಿಸಬಾರದೆಂದು ಅಪ್ಪಣೆ. ಒಬ್ಬ ಪೋಸ್ಟ್ ಮಾಸ್ಟರರಿಗೂ, ಹುಲಿಗೂ ಮಾತ್ರ ಪರಿಚಯವಿದೆಯೆಂದು ಭಾವಿಸುತ್ತಿದ್ದರು.
ಅದು ರಹಸ್ಯವನ್ನು ಕಾಪಾಡುವುದಕ್ಕಾಗಿರಬಹುದು.

– ೩ –
ಒಂದುದಿನ ತಲೆ ಸ್ನಾನ ಮಾಡಿ ಕೂದಲು ಬಿಟ್ಟು ಷೋಕಿಗಾಗಿ ಟೋಪಿ ತಲೆಗೆ ಸೇರಿಸಿ ಮಲ್ಲಿಗೆ ಹೂವಿನಂಥಾ ಬಟ್ಟೆ ತೊಟ್ಟು ಶಾಲೆಗೆ ಹೋಗುತ್ತಾ ಮೆಟಿಲ್ಡಾಳ ಮನೆಯ ಮುಂದೆ ವಿಲಾಸವಾಗಿ ನಡೆಯುತ್ತಿದ್ದೆ. ಅಷ್ಟರಲ್ಲಿ ಬಾಗಿಲ ಹತ್ತಿರ ಬಂದು ಅವಳೆಡೆ ನೋಡುತ್ತಾ ನಿಂತುಬಿಟ್ಟೆ. ಕ್ಷಣಾರ್ಧ ಆಗಿರಬಹುದು. ಹುಲಿ ಗುಹೆ ಯಿಂದ ಮೇಲೆಕ್ಕೆ ಧುಮಿಕಿ “ಏನಪ್ಪಾ ಇಲ್ಲಿ ಬಾ” ಎಂದ. ಒದೆಯಿತ್ತಾನೇನೋ ಓಡೋಣ ಎಂದುಕೊಂಡೆ. ಆದರೆ ಅಂಥಾ ಕೆಲಸ ಮಾಡಿದರೆ ನನ್ನ ಅಪರಾಧ ಹೊರುವುದಲ್ಲದೇ ಮೆಟಿಲ್ಡಾನಲ್ಲೂ ಅಪರಾಧ ನಿಲ್ಲುವದೇನೋ? ನನಗೆ ಏನಾದರಾಗಲಿ. ಅವಳನ್ನು ಕಾಪಾಡಲೆಂದು ಹೋದೆ.
ಲೈಬ್ರರೀ ಕೋಣೆಯೊಳಗೆ ಕರೆದುಕೊಂಡು ಹೋದ. ಕುರ್ಚಿಯ ಮೇಲೆ ಕುಸಿದುಬಿದ್ದು ರೌದ್ರ ತುಂಬಿದ ನೋಟದಿಂದ ಆಂಗ್ಲದಲ್ಲಿ ಕೇಳಿದ.

“ನನ್ನ ಹೆಂಡಿತಿಯ ಕಡೆ ನೋಡುತ್ತಿದ್ದಿಯಾ?”
“ಕಿಟಿಕಿ ಯಿಂದ ಕಾಣುತ್ತಿರುವ ನಿಮ್ಮ ಲೈಬ್ರರಿಯನ್ನು ನೋಡುತ್ತಾ ನೀವು ಎಂಥಾ ಮನುಷ್ಯರು? ಏನು ಮಾಡುತ್ತಿದ್ದೀರಿ? ಎಂದು ಯೋಚಿಸ್ತುತ್ತಿದ್ದೇನೆ.”
“ನನ್ನ ಹೆಂಡತಿಯನ್ನು ನೋಡಲಿಲ್ಲವೇ?”
ಗುಡಿಗಿನಂತೆ “ಏನೇ, ಏನೇ” ಎಂದು ಕರೆದ. ಮೆಟಿಲ್ಡಾ ಬರಲಿಲ್ಲ.
“ಬರ್ತಿಯಾ ಇಲ್ಲಾ ಸೂಳೆ.” ಎಂದ. ನಡಗುತ್ತಾ ನಿಧಾನವಾಗಿ ಬಂದು ತಲೆ ಬಾಗಿಸಿ ನಿಂತಳು.
ಆಂಗ್ಲದಲ್ಲಿ ಮತ್ತೆ ನನ್ನೊಂದಿಗೆ ಕೇಳಿದ.
“ಎಲೇ ತಿಳಿಗೇಡಿಯೇ, ನೋಡು. ಎಷ್ಟು ಹೊತ್ತು ನೋಡುತ್ತಿಯೋ ಈ ಮುಂಡೆಯ ಕಡೆ. ಏನು? ನನ್ನ ಕಡೆ ನೋಡುವುದೇಕೆ, ಅದರ ಕಡೆ ನೋಡದಯೇ? ನನ್ನ ಮುಖ ಅದರ ಮುಖಕ್ಕಿಂತಲೂ ಚನ್ನಾಗಿದೆಯೇ?
ನಾನು ಮಾತನಾಡಲಿಲ್ಲ. ಕಥೆ ಚೆನ್ನಾಗಿರುವುದಿಲ್ಲವೆಂದು. ಕಾಲು ಬಾಗಿಲಿನ ಕಡೆ ಹಾಕುತ್ತಿರುವಾಗ, ಕಂಡು ಹಿಡಿದು ಮೆಲ್ಲಗೆ “ಇರು” ಎಂದ.
ನಿಂತೆ.
ನಿಮಿಷದ ಒಳಗೆ ಕಣ್ಣುಗಳಿಂದ ಉದುರಿದ ಬೆಂಕಿ ತಣ್ಣಗಾಯಿತು.
“ಏನಪ್ಪಾ!” ಎಂದ.
“ಸತ್ಯ ಹೇಳುವುದನ್ನು ಎಂದಾದರೂ ಕಲಿತಿರುವೆಯಾ? ತಂದೆ ತಾಯಿಯವರ ಹತ್ತಿರವಾಗಲೀ, ಗುರುಗಳ ಹತ್ತಿರವಾಗಲೀ” ನನ್ನ ತಾಯಿ ತಂದೆ ನನಗೆ ನೆನಪಿಗೆ ಬಂದರು.
“ಕಲಿಯಬೇಕಾದ ಅಗತ್ಯವಿಲ್ಲದಂತೆ, ನನಗೆ ನಿಖರವಾಗಿರುವುದು ಹುಟ್ಟಿನಿಂದಲೇ ಬಂದಿದೆ” ಎಂದೆ.
“ಆದರೆ ಹುಟ್ಟಿನಿಂದಲೇ ಬಂದಿರುವ ಆ ನಿಖರವನ್ನು ನೋಡೋಣ ಹೇಳು. ನನ್ನ ಹೆಂಡತಿ ಚಂದವಾಗಿ ಇದ್ದಾಳೆಯೇ ಇಲ್ಲವೇ?”
“ಅವಳು ಚಂದವಾಗಿಯೇ ಇರುವಳೆಂದುಕೊಳ್ಳುತ್ತಿದ್ದೇನೆ.”
“ಸಂಶಯವೇನಾದರೂ ಇದೆಯೇನು?”
“ಇಲ್ಲ”
“ದಾರಿಯಲ್ಲಿ ಹೋಗುವಾಗ ದಿನವೂ ಅವಳಿಗಾಗಿ ಈ ಕಡೆ ನೋಡುತ್ತಿರುವೆಯೊ ಇಲ್ಲವೋ?”
“ಸತ್ಯ ಹೇಳಬೇಕೆಂದು ಹೇಳಿರುವುದರಿಂದ ಒಪ್ಪಿಕೊಳ್ಳದೆ ದಾರಿ ಇಲ್ಲ. ನೋಡುತ್ತಿದ್ದೇನೆ ಆದರೆ ಕೆಟ್ಟ ಯೋಚನೆ ಮನಸ್ಸಿನಲ್ಲಿ ಸಲ್ಪವೂ ಇಲ್ಲ ದೇವರಾಣೆ!”
“ಅದಕ್ಕೇನುಬಿಡು. ಅವಳು ಕಣ್ಣಿಗೆ ಬಿದ್ದರೆ ನಿನಗೆ ಆನಂದ. ಹೌದೋ ಅಲ್ಲವೋ? ಸತ್ಯವೆನ್ನುವುದು ಏನು?”
“ಹೌದು”
ಆದರೆ ಈ ಮುಂಡೆಯನ್ನು ಕರೆದುಕೊಂಡು ಹೋಗು. ನಿನಗೆ ದಾನ ಮಾಡಿದ್ದೇನೆ. ತೆಗೆದುಕೊಂಡು ಹೋಗು. ನನಗೆ ಶನಿ ಬಿಡುಗಡೆ ಯಾಗುತ್ತದೆ.”
ನಾನು ಮಾತನಾಡದೆ ನಡೆದು ಮೇಲಕ್ಕೆ ಬಂದೆ. ಮನೆಗಳು ಕಾಣಿಸಲಿಲ್ಲ. ಮನಷ್ಯರು ಕಾಣಿಸಲಿಲ್ಲ. ಶೃಂಗಭಂಗವಾಗಿ ನನ್ನನ್ನು ನಾನು ತೆಗಳುತ್ತಾ  ಶಾಲೆಗೆ ಹೋದೆ.
ಅಲ್ಲಿಂದ ಹೊರಡಲು ನಿಶ್ಚಯಿಸಿದ್ದೇನೆ. ಮನೆ ಬಿಟ್ಟು ಮತ್ತೆ ಆ ಬೀದಿಯ ಮುಖ ನೋಡಬಾರದೆಂದು ಕೊಂಡೆ.
ನನ್ನ ಕಣ್ಣ ಮುಂದೆ ಆ ಬಾಗಿದ ತಲೆ, ಹನಿಗಳಾಗಿ ಸ್ರವಿಸುತ್ತಿರುವ ಕಣ್ಣೀರು, ಹಿಡಿದಿಟ್ಟುಕೊಂಡಿರುವ ನಿಟ್ಟುಸಿರುಗಳಿಂದ ನಡುಗುತ್ತಿರುವ ಎದೆ ಯಾವ ಮಹಾಕವಿಯ ಬರಹದಲ್ಲೂ ಇಲ್ಲವೆಂದು ಹೇಳಬಲ್ಲೆ. ಅಗಾಧವಾಗಿ, ಪ್ರೌಢವಾದ ಕರುಣೆಯ ರಸ, ಆ ಸಾಟಿ ಇಲ್ಲದ ಸೊಗಸು ಕೂಡಾ.

– ೪ –
ನಾನು ವಾಸಿಸುತ್ತಿರುವ ಮನೆಯ ಬಾಗಿಲ ಬಳಿ ಬರುವ ಹೊತ್ತಿಗೆ ಹುಲಿಯ ಮನೆಯಲ್ಲಿರುವ ಮುದುಕಬ್ರಾಹ್ಮಣ ನಿಧಾನವಾಗಿ ನನ್ನ ಕೈಯಲ್ಲಿ ಒಂದು ಚೀಟಿಕೊಟ್ಟು ಜಾರಿಕೊಂಡ. ಹಿಂದಿನ ಕಥೆಯೊಂದಿಗೆ ಇದಕ್ಕೇನೋ ಸಂಬಂಧವಿದೆಯೆಂದು ತಿಳಿದು, ನನ್ನ ಕೋಣೆಯೊಳಗೆ ಹೋಗಿ ಒಳಗೆ ಅಗುಳಿ ಹಾಕಿ ಚೀಟಿ ಓದಿಕೊಂಡೆ. ಅದರಲ್ಲಿ ಏನಿದೆ?

ಕುದುರಾದ ಅಕ್ಷರದೊಂದಿಗೆ-
“ನೀವು, ನಿಮ್ಮಗೆಳೆಯರೂ ನನ್ನ ಸಂಸಾರವನ್ನೂ ಬದುಕಿಸುವುದಿಲ್ಲವೇ? ನಿಮಗೆ ನಾನೇನು ಅಪಕಾರ ಮಾಡಿದ್ದೇನೆ? ತಲೆ ಬಾಗಿಸಿ ನಿಮ್ಮ ಪಾಡಿಗೆ ನೀವು ಹೋದರೆ ನಾನು ಬದುಕುತ್ತೇನೆ. ಇಲ್ಲದಿದ್ದರೆ ನನ್ನ ಪ್ರಾರಬ್ಧ.”
ಏನು ಮಾಡಲಿ? ಅಲ್ಲಿರುವ ಮನೆ ಬಿಟ್ಟು ಬೇರೊಂದು ಕಡೆಗೆ ಹೋದರೆ ನನ್ನ ಮಟ್ಟಿಗೆ ಗೊಂದಲ ವಿರುವುದಿಲ್ಲವೆಂದುಕೊಂಡೆನಲ್ಲ? ಈಗ ಮೆಟಿಲ್ಡಾ ಮಾಡಿರುವ ಬಿನ್ನಹದ ನಂತರ ಹೇಗೆ ಹೋಗುವುದು? ನನ್ನ ಗೆಳೆಯರಿಂದ ಹಾನಿ ಉಂಟಾಗದಂತೆ, ಅವಳನ್ನು ಕಾಪಾಡಬೇಡವೇ? ಕಾಪಾಡಬಲ್ಲೆನೇ?”
ಮೆಟಿಲ್ಡಾಳನ್ನು ಕಾಪಾಡದಿದ್ದರೆ ಬದುಕುವುದೆಂದರೇನು? ಪೌರುಷವೇನು?
ಈ ಮನೋಜ್ಞವಾದ ಸ್ತ್ರೀರತ್ನದ ಚಿತ್ರಕಥೆ ಯಲ್ಲಿ, ದುಗುಡತುಂಬಿದ ಕಥೆಯಲ್ಲಿ ನಾನು ಕೂಡಾ ಸೇರಿದ್ದೇನೆಯೇ? ದುಃಖವನ್ನು ತಪ್ಪಿಸಿ, ಈ ಚೆಲುವೆಯ ಮನಸ್ಸಿನಲ್ಲಿ ಮೆಚ್ಚುಗೆಯನ್ನು ಹೊಂದಿದರೆ ಜನ್ಮ ಸಾರ್ಥಕವಾಗುತ್ತದೆ. ಈ ಸೊಗಸಾದ ಲಿಪಿ ಮೆಟಿಲ್ಡಾ ಬರೆದಿರುವುದೆ? ಎಂಥ ಅದೃಷ್ಟವಂತ ನಾನು? ಮೆಟಿಲ್ಡಾ ಬರೆದರೆ ಏನನ್ನೂ ಮಾಡುವುದಿಲ್ಲ? ತ್ರೈಲೋಕ್ಯ ರಾಜ್ಯ ನನಗಿದ್ದು, ‘ಕೊಡು’ ಎಂದರೆ ಪಟ್ಟ ಕಟ್ಟುವುದಿಲ್ಲವೇ?”
ಆದರೆ ಈಗ ಏನು ಮಾಡಲಿ? ನನಗೆ, ಲೋಕಜ್ಞಾನ ಕಡಿಮೆ. ಬೆನಕಪ್ಪನನ್ನು ಮಾಡಲು ಹೋದರೆ ಕೋತಿಯನ್ನು ಮಾಡುತ್ತೇನೆಯೆ? ರಾಮಾರಾವ್ ಅನುಭವಜ್ಞನು, ಗುಣವಂತನು, ಜಾಣನು, ಹೇಳಿದ ಮಾತು ಕೇಳಲಿಲ್ಲವೆಂದು ತಿಳಿಯುತ್ತಾನೇನೋ? ನನ್ನ ಕೆಲಸದಲ್ಲಿ ನೆರವಾಗಲೆಂದು ಕಾಲು ಹಿಡಿದುಕೊಳ್ಳಬೇಕು ಎಂದು ಯೋಚಿಸಿ ರಾಮಾರಾವ್ ಗೆ ಮಣಿ ಪೋಣಿಸಿದಂತೆ ಕಥೆಯನ್ನೆಲ್ಲಾ ಹೇಳಿದೆ. ನನ್ನ ನಿಶ್ಚಯವೇನೆಂದು ತಿಳಿಸಿದೆ. ದಾರಿ ತಪ್ಪಿಸಬೇಡವೆಂದು ಗಲ್ಲ ಹಿಡಿದು ಬೇಡಿಕೊಂಡೆ.
ರಾಮಾರಾವ್ ಎಂದ “ತಪ್ಪಿಸುವೆನೆಂಬ ನಂಬಿಕೆ ಇದ್ದಿದ್ದರೆ ತಪ್ಪಿಸಲು ಯೋಚಿಸುತ್ತಿದ್ದೆ. ತಪ್ಪಲ್ಲವೆಂದು ಗೊತ್ತು. ನೋಡಬೇಡವೆಂದರೆ ನೋಡುವುದನ್ನು ಬಿಟ್ಟಿರುವೆಯಾ?”

ಆದರೆ ನನಗೆ ತೋಚಿದ ಮಾತು, ನನಗೆ ತಿಳಿದಿರುವ ಮಾತು ನಿನಗೆ ಹೇಳದಿದ್ದರೆ ನಾನು ಅಪರಾಧಿಯಾಗುತ್ತೇನೆ. ಸ್ನೇಹವನ್ನು ಮರೆತವನಾಗುತ್ತೇನೆ.

ಗಂಡಹೆಂಡಿರ ಜಗಳದಲ್ಲಿ ಹೋಗಬೇಡವೆಂದು ನಮ್ಮ ಹಿರಿಯರ ಕಟ್ಟಳೆ. ಅವು ಅಭೇದ್ಯ, ಅಗಮ್ಯಗೋಚರ, ಮಧ್ಯಸ್ಥರು ಸಂಸಾರವನ್ನು ಚೆನ್ನಾಗಿ ಮಾಡುವೆವೆಂದು ಮುರಿದುಬಿಟ್ಟು ಬರುತ್ತಾರೆ. ಒಂದು – ಹುಲಿ ಎಂದು ನಾವು ಎಷ್ಟು ಹೆಸರಿಟ್ಟರೂ ಪಾಪ, ಈ ಹುಲಿಗೆ ಆರ್ಭಟವೇ ವಿನಾ ಕಡಿತವಿಲ್ಲ. ಮೆಟಿಲ್ಡಾಳನ್ನು ಎಂದಾದರೂ ಒಂದು ಏಟು ಹಾಕಿರುವುದಾಗಿ ಕೇಳಿದೆಯಾ? ಇಲ್ಲ. ತಿಂಡಿಗೆ ಲೋಪವಿಲ್ಲ. ಬಟ್ಟೆಗೂ ಲೋಪವಿಲ್ಲ. ಆತ ಹೇಳಿದಂತೆ ನಡೆದುಕೊಂಡರೆ ನಿಧಾನವಾಗಿ ಕಾಲಕಳೆಯಲು ಅಭ್ಯಂತರವಿಲ್ಲ. ಇದು ಎರಡನೆಯದು; ಇನ್ನೂ ಮೂರನೆಯದು. ನಿನಗೆ ಮೆಟಿಲ್ಡಾ ಮೇಲೆ ಮನಸ್ಸು ತುಂಬಾ ಲಗ್ನವಾಗಿದೆ. ಅದು ಮಾಡಬಾರದ ಕೆಲಸ. ಕೆಟ್ಟ ಯೋಚನೆ ಇಲ್ಲದಿರುವಾಗ ಏನಾಗುವುದೆಂದು ಕೇಳಬಹುದು. ಕೆಟ್ಟ ಯೋಚನೆ ಹೇಳಿ ಬರುವುದಿಲ್ಲ. ಎಲ್ಲಿಂದಲೋ ಬರಬೇಕಾಗಿಲ್ಲ. ಕಣ್ಣಿಗೆ ಕಾಣದಂತೆ ಮನಸ್ಸಿನಲ್ಲಿ ಹೊಕ್ಕು ನಿಂತಿರುತ್ತದೆ. ನೋಡೀ ನೋಡದಂತೆ ನಾವು ಸುಮ್ಮನಿದ್ದು ಆದು ಮೇಲಕ್ಕೆ ಬರುವಂಥ ಪ್ರಯತ್ನಗಳನ್ನು ಬಹಿರಂಗವಾಗಿ ಮಾಡುತ್ತೇವೆ. ಕೆಟ್ಟ ಯೋಚನೆಗಳಿಗೆ ಕುರುಹಾಗಿ ಯಾರಾದರೂ ಇರಬೇಕಲ್ಲವೇ? ಕಾಡಿನಲ್ಲು ಒಂಟಿಯಾಗಿ ಇರುವವರಿಗೆ ಸ್ತ್ರೀಯರ ವಿಷಯದಲ್ಲಿ ಕೆಟ್ಟು ಯೋಚನೆಗಳು ಇರುವುದಿಲ್ಲ. ಸೊಗಸಾದ ಸ್ತ್ರೀಯರ ಸಂಗವನ್ನು ಬಯಸುವವನಿಗೆ ಅವಕಾಶ ಬಂದರೆ ಕೆಟ್ಟ ಯೋಚನೆ ಬರುವುದೋ ಇಲ್ಲವೋ ಎಂದು ಯೋಚಿಸಿ ಆ ಅವಕಾಶಗಳಿಗೆ ಎಡೆ ಮಾಡಿ ಕೂಡದವನೇ ಪ್ರಾಜ್ಞನಾದವನು.

– ೫ –
“ನನಗೆ ನೀನು, ನಿನ್ನ ಗೇಳಯ ರಾಮಾರಾವ್ ಮತ್ತೊಂದು ದೊಡ್ಡ ಉಪಕಾರ ಮಾಡಿರುವಿರಿ. ನಿಮ್ಮ ಮಾತುಗಳಿಂದಲೂ ಚೇಷ್ಟೆಗಳಿಂದಲೂ ನನ್ನ ಹೆಂಡತಿ ಯೋಗ್ಯಳೆಂದು ತಿಳಿದುಕೊಂಡೆ, ಯೋಚಿಸಿದರೆ ಅಂದಿನಿಂದ ಲಗಾಮನ್ನು ಬಿಟ್ಟುಬಿಟ್ಟೆ. ನನ್ನ ಹೆಂಡತಿ ತುಂಬಾ ಬುದ್ಧಿವಂತಳು. ಕೊಟ್ಟಿರುವ ಸ್ವೇಚ್ಛೆಯನ್ನೂ ತೆಗೆದುಕೊಳ್ಳಲಿಲ್ಲ. ಎಲ್ಲಿಗೆ ಬೇಕಾದರೂ ಹೋಗಲು ಹೇಳಿದೆ. ಯಾರನ್ನು ಬೇಕಾದರೂ ನೋಡಲು ಹೇಳಿದೆ. ಎಲ್ಲಿಗೂ ಹೋಗಲು ಬಯಸಲಿಲ್ಲ. ಯಾರನ್ನು ನೋಡಲೂ ಕೇಳಲಿಲ್ಲ. “ನನಗೆ ನಿನ್ನೊಂದಿಗೇ ಲೋಕವೆಲ್ಲಾ. ಇನ್ನೂ ಬೇರೆಯವರೊಡೆನೆ ಏನು ಕೆಲಸ ವೆಂದಳು. ಹಾಗೆಯೇ ನಡೆದುಕೊಂಡಳು……”
“ಅವಳ ಸೆರೆಯನ್ನು ಬಿಡುಗಡೆ ಮಾಡಿರುವೆ. ಅದು ನನ್ನ ಸೆರೆಯನ್ನು ಕೂಡಾ ಬಿಡುಗಡೆ ಮಾಡಲು ಕಾರಣವಾಯಿತು. ಹಯ್ಯರ್ ಮಾಥೆಮಾಟಿಕ್ಸ್ ಓದಿದೆಯಾ? ಇಲ್ಲವೇ? ಹೋಗಲಿ.

ಕಾಲಿಂಗ್ ಬೆಲ್ ಟ್ರಿಂಗ್ ಎಂದು ಮೊಳಗಿಸಿದ. ಕೀಲು ಗೊಂಬೆಯಂತೆ ಮೆಟಿಲ್ಡಾ ಒಳ ಬಂದು ಬಾಗಿಲ ಬಳಿ ನಿಂತಳು.
“ಕಾಫಿ ಕೊಡು”
ಮೇಜಿನ ಮೇಲೆ ಎರಡು ಬಟ್ಟಲಿನಲ್ಲಿ ಕಾಫ಼ೀ ತಂದಿಟ್ಟಳು.
“ನೀನೂ ತೆಗೆದುಕೋ”
ಗಂಡನ ಕಡೆ “ಸರಿಯೇ ಇಂಥಾ ಕೆಲಸಾ?” ಎನ್ನುವ ಅರ್ಥದಿಂದ ನೋಡಿದಳು.
“ಫರ್ವಾಗಿಲ್ಲ ನೀನು ಕುಡಿ, ನಮ್ಮಗೆಳೆಯ” ಎಂದ. ಆದರೆ ಅವಳು ತನಗೆ ಕಾಫೀ ತೆಗೆದುಕೊಳ್ಳಲಿಲ್ಲ. ಪಕ್ಕದಲ್ಲಿ ನಿಂತಳು.
“ಹೋಗಲೀ!ಕುಳಿತುಕೋ” ಎಂದ. ಕೂಡಲಿಲ್ಲ ನಾನು ಗಂಡಹೆಂಡಿರ ಅನುರಾಗಕ್ಕೆ ಸಂತೋಷಪಟ್ಟಿದ್ದೇನೆ. ನಾನೂ ಅದಕ್ಕೆ ಸ್ವಲ್ಪ ಮಟ್ಟಿಗೆ ಕಾರಣವಲ್ಲವೇ ಎಂದು ಮೆಚ್ಚುಕೊಂಡ.
“ಕಾಫೀ ಕುಡಿಯುವಷ್ಟು ಹೊತ್ತು, ಆತ ಹೇಳಿದ ಮಾತು. ತನ್ನ ಹೆಂಡತಿಗೆ ಓದು ಹೇಳುತ್ತಿರುವುದಾಗಿಯು, ಹಮೇಷಾ ರಾಮಾಯಣ, ಭಾರತ ಓದುತ್ತಿರುವಳೆಂದು, ತಾನು ಇಂಥ ಪ್ರದೇಶಕ್ಕೆ ಕರೆದೊಯ್ದು ವಿಷಯ, ಚೆನ್ನಾಗಿ ತೋರಿಸಿರುವುದಾಗಿಯೂ, ಅಷ್ಟರಲ್ಲೇ ನನ್ನ ಓದನ್ನು ಕುರಿತ ಸ್ವಲ್ಪ, ಬಹಳ ವಿದ್ಯಾವಂತನೆಂದು ಕಂಡುಹಿಡಿದ.
ಓಗುವ ಮುನ್ನ “ಸರಿ, ನೀನು ಹೋಗಿಬಿಡು.” ಎಂದ.
*****
ಕನ್ನಡಕ್ಕೆ: ಶ್ರೀಮತಿ ರಂಗನಾಥ ಲಕ್ಷ್ಮೀಕುಮಾರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಲಾ ಪ್ರಾರ್ಥನೆ
Next post ಕಾಮಧೇನು

ಸಣ್ಣ ಕತೆ