ಜ್ಞಾನಜಾಲ

ಜ್ಞಾನಜಾಲ

ಬೃಹತ್ತಾದ ಗಂಥಾಲಯಗಳನ್ನು ನೋಡಿದಾಗೆಲ್ಲ ನನ್ನಲ್ಲಿ ಪರಸ್ಪರ ವಿರುದ್ಧವಾದ ಉತ್ಸಾಹ ಮತ್ತು ಖಿನ್ನತೆ ಎಂಬ ಎರಡು ಭಾವಗಳು ಒಟ್ಟಿಗೇ ಮೂಡುತ್ತವೆ. ಉತ್ಸಾಹ ಯಾಕೆಂದರೆ ಇಷ್ಟೊಂದು ಪುಸ್ತಕಗಳಿವೆಯಲ್ಲ ಓದುವುದಕ್ಕೆ ಎಂದು; ಖಿನ್ನತೆ ಯಾಕೆಂದರೆ ಅಲ್ಪ ಜೀವಿತಾವಧಿಯಲ್ಲಿ ಈ ಪುಸ್ತಕಗಳ ಒಂದು ಸಣ್ಣ ಭಾಗವನ್ನಾದರೂ ಓದಿ ಮನನ ಮಾಡುವುದಕ್ಕೆ ಸಾಧ್ಯವೇ ಎಂದು. ನಿಜ, ಯಾರೂ ಗ್ರಂಥಾಲಯದ ಎಲ್ಲ ಪುಸ್ತಕಗಳನ್ನೂ ಓದುವುದಿಲ್ಲ. ಮಾತ್ರವಲ್ಲ, ಕೆಲವು ಪುಸ್ತಕಗಳನ್ನು ಮಾಹಿತಿಗೋಸ್ಥರ ತಿರುವಿಹಾಕುತ್ತೇವೆ ಅಷ್ಟೆ. ‘ತಟ್ಟಿಯಿಂದ ತಟ್ಟಿಗೆ’ ಓದುವುದು ಅಪರೂಪ. ಅದೇ ರೀತಿ ನಾವು ಗ್ರಂಥಾಲಯದ ಸದಸ್ಯರಾಗಿದ್ದಾಗಲೂ ಮನೆಗೆ ಒಯ್ಯಬಹುದಾದ ಪುಸ್ತಕಗಳ ಸಂಖ್ಯೆಯ ಮೇಲೆ ಮಿತಿಯಿರುತ್ತದೆ. ಕೆಲವು ಗ್ರಂಥಾಲಯಗಳಲ್ಲಿ ಅಲ್ಲೇ ಕೂತು ಓದುವ ವ್ಯವಸ್ಥೆಯಿರುತ್ತದೆ. ಇವೆಲ್ಲವೂ ನಮ್ಮ ಓದಿನ ರೀತಿಯನ್ನು ನಿರ್ಧರಿಸುವ ಸಂಗತಿಗಳೇ.

ಕತೆ, ಕಾದಂಬರಿಗಳನ್ನು ಮಾತ್ರವೇ ಜನ ಹೆಚ್ಚಾಗಿ ಇಡಿಯಾಗಿ ಓದುವುದು. ಇತಿಹಾಸ, ಸಮಾಜವಿಜ್ಞಾನ, ಜೀವನಚರಿತ್ರೆ ಇತ್ಯಾದಿ ಇತರ ಗದ್ಯ ಪುಸ್ತಕಗಳನ್ನು ಭಾಗಶಃ ಓದುತ್ತಾರೆ. ಕವಿತೆ ಕಾವ್ಯ ನಾಟಕ ಇತ್ಯಾದಿಗಳನ್ನು ಸಾಮಾನ್ಯ ಜನರು ಓದುವುದೇ ಕಡಿಮೆ. ಪಾಠ ಪಠ್ಯಗಳಿಗೆ ಸಂಬಂಧಿಸಿದ್ದರೆ ಮಾತ್ರವೇ ಅವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಓದುತ್ತಾರೆ. ಇಂಥ ಓದು ಕೇವಲ ಓದಲ್ಲ, ಅದೊಂದು ಆಳವಾದ ಅಭ್ಯಾಸ. ಹೀಗೆ ನಾವು ಯಾವ ಕಾರಣಕ್ಕೆ ಓದುತ್ತೇವೆ ಎನ್ನುವುದೂ ನಮ್ಮ ಓದಿನ ವಿಧಾನವನ್ನು ನಿರ್ಧರಿಸುತ್ತದೆ. ಈ ಕಾರಣಗಳೂ ಇಲ್ಲಿಗೆ ಸೀಮಿತವಾಗಿರುವುದಿಲ್ಲ. ಕೆಲವೊಮ್ಮೆ ಯಾರೋ ಒಂದು ಪುಸ್ತಕದ ಪ್ರಶಂಸೆ ಮಾಡಿದರೆಂದು ನಾವು ಅದನ್ನು ಹುಡುಕಿ ಹಿಡಿದು ಓದಬಹುದು, ಪತ್ರಿಕೆಯೊಂದರಲ್ಲಿ ಪುಸ್ತಕ ವಿಮರ್ಶೆ ಬಂತೆಂದು ಪುಸ್ತಕ ತರಿಸಿ ಓದಬಹುದು, ನಾವು ಮೆಚ್ಚುವ ಲೇಖಕನ ಕೃತಿ ಎಂದು ಓದಬಹುದು. ಇನ್ನೂ ಒಂದು ವಿಧಾನವೆಂದರೆ, ಸುಮ್ಮನೆ ಓದುವುದು-ಅರ್ಥಾತ್ ಮೇಲ್ನೋಟಕ್ಕೆ ನಮಗೆ ಯಾವ ರೀತಿಯಿಂದಲೂ ಸಂಬಂಧಿಸಿರದೆ ಇದ್ದರೂ ಎತ್ತಿಕೊಂಡು ತಿರುವಿಹಾಕುವುದು, ಆಸಕ್ತಿ ತೋರಿದರೆ ಕೂತು ಓದುವುದು. ಇಂಥ ಓದಿನಲ್ಲಿ ವಿಚಿತ್ರವಾದ ಲಾಭವಿದೆ. ಯಾಕೆಂದರೆ, ಇದು ನಿಮ್ಮದೇ ವಿಶಿಷ್ಟ ಶೋಧವಾಗಿರುತ್ತದೆ. ಹಾಗೂ ಈ ರೀತಿ ಓದಿದ ಕೃತಿಗಳು ಜ್ಞಾನವರ್ಧನೆಗೆ ಸಹಾಯಕವಾಗುವುದು ಮಾತ್ರವೇ ಅಲ್ಲ, ಅನಿರೀಕ್ಷಿತವಾದ ರೀತಿಯಲ್ಲಿ ನಿಮ್ಮ ಮುಂದಿನ ಓದಿಗೆ ಸಹಕಾರಿಯಾಗುತ್ತದೆ ಕೂಡಾ.

ಹೆಚ್ಚಾಗಿ ಅಧ್ಯಾಪಕರಾಗಲಿ ವಿದ್ಯಾರ್ಥಿಗಳಾಗಲಿ ತಮ್ಮ ವಿಷಯಕ್ಕೆ ಸಂಬಂಧಿಸಿದ ಪಠ್ಯಗಳನ್ನು ಮಾತ್ರವೇ ಓದಿರುತ್ತಾರೆ. ಅದೂ ಪರೀಕ್ಷೆ ತೇರ್ಗಡೆಯಾದ ಮೇಲೆ ಮುಂದೆ ಓದುವುದಕ್ಕೇನೂ ಇಲ್ಲ ಎಂಬೊಂದು ಅಭಿಪ್ರಾಯ ನಮ್ಮ ವಿದ್ಯಾರ್ಥಿಗಳಲ್ಲಿ ಮನೆಮಾಡಿರುತ್ತದೆ. ಇದರರ್ಥ ಅವರು ನಿಜವಾದ ಓದಿನ ರುಚಿಯನ್ನು ಸವಿದಿಲ್ಲ ಅಂತಲೇ. ಆದರೆ ಒಬ್ಬ ಬಿ. ಎ. ಕಲಿಯುವ ವಿದ್ಯಾರ್ಥಿ ಕೇವಲ ಪರೀಕ್ಷೆ ಪಾಸು ಮಾಡಿ ಡಿಗ್ರಿ ತೆಗೆದುಕೊಳ್ಳಲಿಕ್ಕೆ ಮಾತ್ರವೇ ಓದುತ್ತಾನೆಯೇ? ಬಿ. ಎ. ಡಿಗ್ರಿ ಗಳಿಸಲು ಪರೀಕ್ಷೆ ಪಾಸು ಮಾಡಬೇಕೆನ್ನುವುದು ನಿಜ; ಆದರೆ ಕೋರ್ಸ್ ಎಂಬ ಪರಿಕಲ್ಪನೆಯೊಂದು ಇದೆಯಲ್ಲ? ಈ ಕೋರ್ಸ್ ಎಂಬ ಪದ ಮೂಲದಲ್ಲಿ ಲ್ಯಾಟಿನ್ ಭಾಷೆಗೆ ಸೇರಿದ್ದು, ಪ್ರವಹಿಸುವಿಕೆ ಎಂಬುದು ಇದರ ಅರ್ಥ-ಒಂದು ನದಿಯ ಹಾಗೆ. ಅದು ಮುಂದುವರಿದಂತೆ ಇತರ ಸಣ್ಣ ಸಣ್ಣ ತೊರೆಗಳನ್ನು ಜತೆಗೆ ಸೇರಿಸಿಕೊಂಡು ಬೆಳೆಯುತ್ತ ಹೋಗುತ್ತದೆ. ಯಾವುದೇ ಕೋರ್ಸ್‌ಗೆ ಸೇರಿದ ವಿದ್ಯಾರ್ಥಿಯ ಶಿಕ್ಷಣಾವಧಿಯಲ್ಲಿ ಈ ತರದ ವಿದ್ಯಾಪ್ರವಾಹದ ಅನುಭವ ಇರಬೇಕು. ಈ ತೊರೆಗಳಾದರೂ ಎಲ್ಲಿಂದ ಬರುತ್ತವೆ? ಗಂಥಾಲಯಗಲ್ಲಿರುವ ಪತ್ರಿಕೆಗಳು, ಪುಸ್ತಕಗಳು ಈ ತೊರೆಗಳ ಒಂದು ಪ್ರಬಲವಾದ ಮೂಲ. ಇವುಗಳ ಸದುಪಯೋಗ ಪಡೆದುಕೊಂಡವರು ಮಾತ್ರವೇ ನಿಜವಾಗಿಯೂ ವಿದ್ಯಾವಂತರಾಗುತ್ತಾರೆ. ಉಳಿದವರ ಕೈಯಲ್ಲಿ ಡಿಗ್ರಿ ಇರಬಹುದು, ಆದರೆ ತಲೆಯಲ್ಲಿ ಏನೂ ಇರುವುದಿಲ್ಲ. ವಿದ್ಯಾರ್ಥಿಗಳು ಅಭ್ಯಸಿಸುವ ತಂತಮ್ಮ ಶಿಸ್ತಿನೊಳಗೇ ಸಾವಿರಾರು ಪುಸ್ತಕಗಳಿರುತ್ತವೆ. ಆದರೆ ಈ ಶಿಸ್ತಿನ ಗಡಿಯನ್ನೂ ದಾಟಿ ಓದುವುದು ಅಗತ್ಯ. ಇದಕ್ಕೆ ಗ್ರಂಥಾಲಯದಲ್ಲಿ ಸುಮ್ಮನೆ ಏನಾದರೂ ಪುಸ್ತಕ ತಿರುವಿ ಹಾಕಿ ನೋಡುವುದು ಬೇಕಾಗುತ್ತದೆ. ಉದಾಹರಣೆಗೆ ಅರ್ಥಶಾಸ್ತ್ರದ ವಿದ್ಯಾರ್ಥಿ ಸಮಾಜವಿಜ್ಞಾನದ ಯಾವುದಾದರೊಂದು ಪುಸ್ತಕವನ್ನು ತಿರುವಿಹಾಕುವುದು, ಉಪಯೋಗವೆಂದು ಕಂಡರೆ ಪೂರ್ತಿ ಓದುವುದು ಒಳ್ಳೆಯ ಅಭ್ಯಾಸ. ಅದೇ ರೀತಿ ಸಮಾಜವಿಜ್ಞಾನದ ವಿದ್ಯಾರ್ಥಿ ಇನ್ನಿತರ ಶಿಸ್ತುಗಳಿಗೆ ಸಂಬಂಧಿಸಿದ ಪುಸ್ತಕಗಳ ಶೋಧನೆ ನಡೆಸಬಹುದು. ವಿಕಾಸವಾದದ ಪಿತನಾದ ಡಾರ್ವಿನ್ ತಾನಿನ್ನೂ ಸಂಶೋಧನೆಯಲ್ಲಿ ತೊಡಗಿದ್ದು ಸಮಸ್ಯೆಯ ಸುಳಿಯಲ್ಲಿ ಸಿಗಹಾಕಿಕೊಂಡಿರುವಾಗ ಯಃಕಶ್ಚಿತ್ ಆಗಿ ಓದಿದ ಒಂದು ಪುಸ್ತಕ ಮಾಲ್ತೂಸ್‌ನ ಜನಸಂಖ್ಯಾ ಸಿದ್ಧಾಂತ. ಮೇಲ್ಮೈಗೆ ಸಂಬಂಧಿಸಿ ಹೇಳುವುದಾದರೆ, ಡಾರ್ವಿನ್ನ ಜೀವವಿಜ್ಞಾನ ಕ್ಷೇತ್ರಕ್ಕೂ ಮಾಲ್ತೂಸ್‌ನ ಜನಸಂಖ್ಯಾಕ್ಷೇತ್ರಕ್ಕೂ ಯಾವ ಸಂಬಂಧವೂ ಇಲ್ಲ. ಆದರೂ ಈ ಪುಸ್ತಕ ಓದಿದ್ದೇ ಡಾರ್ವಿನ್‌ಗೆ ತನ್ನ ಸಮಸ್ಯೆ ಮೇಲೆ ಬೆಳಕು ಚೆಲ್ಲಿದಂತಾಯಿತು! ಮುಂದೆ ಡಾರ್ವಿನ್ ಜೀವವರ್ಗಗಳ ಮೂಲ ಎಂಬ ತನ್ನ ಪ್ರಸಿದ್ಧ ಕೃತಿಯನ್ನು ನಿರ್ಮಿಸುವುದಕ್ಕೆ ಇದರಿಂದ ಅನುಕೂಲವಾಯಿತು. ೧೯೫೦ರ ದಶಕದಲ್ಲಿ ಭಾಷಾವಿಜ್ಞಾನದಲ್ಲಿ ದೊಡ್ಡ ಮಟ್ಟದ ಕ್ರಾಂತಿಯೊಂದು ಉಂಟಾಯಿತು. ಇದು ಅಮೇರಿಕದ ಪ್ರತಿಭಾವಂತ ನೋಮ್ ಚಾಮ್‌ಸ್ಕಿಯ ರೂಪಾಂತರ ವ್ಯಾಕರಣದ ಮೂಲಕ ನಡೆದದ್ದು, ಸರಿಸುಮಾರು ಅದೇ ಕಾಲಕ್ಕೆ ಥಾಮಸ್ ಕುನ್ ಎಂಬ ಇನ್ನೊಬ್ಬ ಅಮೇರಿಕನ್ ವಿದ್ವಾಂಸ ಬರೆದ ವೈಜ್ಞಾನಿಕ ಕ್ರಾಂತಿಗಳ ಸಿದ್ಧಾಂತ ಎಂಬ ಪುಸ್ತಕವೊಂದರ ಹೆಸರು ಅಲ್ಲಲ್ಲಿ ಕೇಳಿಸಲಿಕ್ಕೆ ಸುರುವಾಯಿತು. ಎಪ್ಪತ್ತರ ದಶಕದಲ್ಲಿ ಭಾಷಾವಿಜ್ಞಾನಕ್ಕೆ ಕಾಲಿರಿಸಿದ್ದ ನಾನು ಈ ಪುಸ್ತಕವನ್ನು ಓದಿಕೊಂಡೆ. ಥಾಮಸ್ ಕುನ್ ಈ ಪುಸ್ತಕದಲ್ಲಿ ಭಾಷಾವಿಜ್ಞಾನವನ್ನು ಪ್ರಸ್ತಾಪಿಸುವುದಿಲ್ಲವಾದರೂ ಬಾಷಾವಿಜ್ಞಾನ ಕ್ಷೇತ್ರದಲ್ಲಿ ನಡೆದ ಚಾಮ್‌ಸ್ಕಿ ಕ್ರಾಂತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಕುನ್ನ ಸಿದ್ಧಾಂತ ಸಹಾಯಮಾಡುತ್ತದೆ.

ಕೆಲವರೆನ್ನುವುದಿದೆ ತಮಗೆ ಇತಿಹಾಸದಲ್ಲಿ ಆಸಕ್ತಿಯಿಲ್ಲ, ತತ್ವಶಾಸ್ತ್ರ ಸೇರುವುದಿಲ್ಲ, ರಾಜ್ಯಶಾಸ್ತ್ರ ಓದಿ ತಮಗೇನು ಪ್ರಯೋಜನ ಮುಂತಾಗಿ. ಇದೆಲ್ಲ ತಾವು ತಮಗೇ ಅವಕಾಶ ಕೊಡದೆ ಮಾಡಿಕೊಂಡಂಥ ಪೂರ್ವಾಗಹ ಕಲ್ಪನೆಗಳು. ಅಥವಾ ಅವರಿಗೆ ಶಾಲೆ ಕಾಲೇಜುಗಳಲ್ಲಿ ಕೆಟ್ಟ ಅಧ್ಯಾಪಕರು ಸಿಕ್ಕಿರಲೂಬಹುದು. ಯಾಕೆಂದರೆ ಆಸಕ್ತಿ ಬೆಳೆಸಿಕೊಳ್ಳುವುದಕ್ಕೂ ಮುಕ್ತಮನಸ್ಸು ಬೇಕು, ಪರಿಶ್ರಮವೂ ಬೇಕು. ಶಾಲೆ ಕಾಲೇಜುಗಳಿಗೆ ಸರಿಯಾಗಿ ಹೋಗದೇ ಗಣಿತದಂಥ ಕಠಿಣ ವಿಷಯದಲ್ಲಿ ಹಿಡಿತ ಸಾಧಿಸಿಕೊಂಡ ವ್ಯಕ್ತಿಗಳಿದ್ದಾರೆ. ಯಾವ ಶಿಸ್ತಿನಲ್ಲಿ ಏನಿದೆಯೆಂದು ಸರಿಯಾಗಿ ತಿಳಿಯದೆ ಋಣಾತ್ಮಕ ಧೋರಣೆಗಳನ್ನು ಬೆಳೆಸಿಕೊಂಡರೆ ಆ ಮಟ್ಟಿಗೆ ನಮ್ಮ ಅರಿವು ಸೀಮಿತವಾಗುತ್ತದೆ. ಯಾವುದರಲ್ಲಿ ಆಸಕ್ತಿಯಿಲ್ಲವೆಂದು ಅನಿಸುತ್ತದೋ ಆ ಶಿಸ್ತಿಗೆ ಸಂಬಂಧಪಟ್ಟ ಒಂದು ಲೇಖನವನ್ನೋ ಪುಸ್ತಕವನ್ನೋ ಓದಿ. ಹಾಗನ್ನುವುದಿದ್ದರೆ ನಮಗೆ ಆಸಕ್ತಿಯಿಲ್ಲ ಎಂದು ಯಾವುದೂ ಅನಿಸಬಾರದು. ನಾವು ಓದಿದ್ದು, ತಿಳಿದದ್ದು ಸದ್ಯೋಪಯೋಗಿಯಾಗುತ್ತದೆ ಎಂದೇನೂ ನಾನು ಹೇಳಲಾರೆ. ಎಂದಿಗೂ ಉಪಯೋಗಕ್ಕೇ ಬರದೆಯೂ ಹೋಗಬಹುದು. ಆದರೆ ಎಂದಾದರೊಂದು ದಿನ ಅದು ಉಪಯೋಗಕ್ಕೆ ಬರುವುದೇ ಹೆಚ್ಚು. ಅಥವಾ ಹಾಗೆ ಬಂದಿದೆಯೆಂದು ತಿಳಿಯದೆಯೇ ಅದು ಅಪ್ರತ್ಯಕ್ಷವಾಗಿ ಸಹಾಯಕ್ಕೆ ಬರುತ್ತಲೇ ಇರುತ್ತದೆ. ಒಮ್ಮೆ ನಾನು ಹೈದರಾಬಾದಿನ ವಾರ್ಷಿಕ ವಸ್ತುಪ್ರದರ್ಶನದಿಂದ ಹೌದಿನಿಯ ಬದುಕಿನ ಕುರಿತಾದ ಜೆಕ್ಕದೊಂದು ಪುಸ್ತಕ ಕೊಂಡುಕೊಂಡೆ. ಹೌದಿನಿ ಹತ್ತೊಂಬತ್ತನೇ ಶತಮಾನದ ಇರಾಣದ ಜಾದೂಗಾರ. ಅತ್ಯಂತ ಕಠಿಣವಾದ ಆಟಗಳನ್ನೂ ಆತ ಆಡಿ ತೋರಿಸುತ್ತಿದ್ದ. ಅದರಲ್ಲೊಂದು ಕೈಕಾಲುಗಳಿಗೆ ಸರಪಣಿ ಕಟ್ಟಿ ಬೀಗ ಜಡಿದು ಪೆಟ್ಟಿಗೆಯೊಳಗೆ ಬಂಧಿಸಿ ನೀರಿಗೆ ಹಾಕಿದರೂ ಅಲ್ಲಿಂದ ಬಿಡಿಸಿಕೊಂಡುಬಂದು ವೇದಿಕೆಯಲ್ಲಿ ಪ್ರತ್ಯಕ್ಷನಾಗುವುದು. ಇದರಲ್ಲಿ ನಿಜಕ್ಕೂ ಜಾದೂ ಎನ್ನುವುದೇನೂ ಇರಲಿಲ್ಲವೆಂದು ಆತನೇ ಹೇಳುತ್ತಾನೆ. ಇದಕ್ಕೆ ಬೇಕಾದ್ದು ಕಠಿಣವೂ ಸತತವೂ ಆದ ಅಭ್ಯಾಸ. ಆದರೆ ನೋಡುವವರಿಗೆ ಜಾದೂ ಎಂದೇ ತೋರುತ್ತಿತ್ತು. ಈ ಪುಸ್ತಕದಲ್ಲಿ ನನ್ನ ಮನಸ್ಸಿಗೆ ನಾಟಿದ ವಿಷಯವೆಂದರೆ ಹೌದಿನಿಯ ಅಭ್ಯಾಸ ಸಿದ್ಧಾಂತ: ತಾನು ಎಲ್ಲವನ್ನೂ ಕೊನೆಯಿಂದ ಹಿಂದಕ್ಕೆ ಕಲ್ಪಿಸಿಕೊಂಡು ಅಭ್ಯಾಸಮಾಡುತ್ತೇನೆ ಎನ್ನುತ್ತಾನೆ ಆತ. ಎಂದರೆ ಧ್ಯೇಯ ಸಾಧನೆ ಇದಾಗಬೇಕಾದರೆ ಏನು ಮಾಡಬೇಕು ಎಂಬ ಚಿಂತನೆ. ನಾವು ಹೆಚ್ಚಿನವರೂ ಆರಂಭದಿಂದ ಕೊನೆ ತಲುಪುವ ರೀತಿಯಲ್ಲಿ ಕ್ರಮಾಗತವಾಗಿ ಚಿಂತಿಸುತ್ತೇವೆ. ಆದರೆ ಕೊನೆಯಿಂದ ಹಿಂದು ಹಿಂದಕ್ಕೆ ಚಿಂತಿಸುವುದೇ ಹೌದಿನಿಯ ಹೆಚ್ಚಳ. ಹೌದಿನಿಯ ಕ್ರಮವನ್ನು ಎಲ್ಲ ವಿಷಯಗಳಲ್ಲೂ ಅಳವಡಿಸಿಕೊಳ್ಳುವುದು ಸಾಧ್ಯ. ಉದಾಹರಣೆಗೆ, ಆರೋಗ್ಯವಂತರಾಗಿರಬೇಕು ಎನ್ನುವುದೇ ನಮ್ಮ ಧ್ಯೇಯವಾಗಿದ್ದರೆ ಆರೋಗ್ಯ ಎಂದರೆ ಏನು ಎಂಬ ಪ್ರಶ್ನೆ ಬರುತ್ತದೆ. ದೇಹಕ್ಕೂ ಮನಸ್ಸಿಗೂ ನೆಮ್ಮದಿ ಎಂದುಕೊಳ್ಳೋಣ. ಈ ನೆಮ್ಮದಿಯನ್ನು ಹಾಳುಗೆಡಹುವುದು ಯಾವುದು? ಹೌದಿನಿಯ ಚಿಂತನಾಕ್ರಮ ಈ ರೀತಿ ಹಿಂದು ಹಿಂದಕ್ಕೆ ಹೋಗುತ್ತದೆ.

ಹೀಗೆ ಒಂದರಿಂದ ಹತ್ತು ಹಲವು ಕಡೆಗೆ ನಮ್ಮ ಓದನ್ನು ಬೆಳೆಸಿಕೊಂಡು ಹೋಗುವುದು ಒಂದು ಜಾಲವನ್ನು ಹರಡಿದಂತೆ. ಈ ಜಾಲ ಹರಡುವಿಕೆಗೆ ಇವತ್ತು ಓದಿಗಷ್ಟೇ ಸೀಮಿತವಾಗಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವವರು ಇದನ್ನೇ “ನೆಟ್‌ವರ್ಕಿಂಗ್” ಎಂದು ಕರೆಯುತ್ತಾರೆ. ಇದೊಂದು ರೀತಿಯಲ್ಲಿ ಬಲೆ ಬೀಸುವಿಕೆ, ಸಂಬಂಧ ಬೆಳೆಸಿಕೊಳ್ಳುವಿಕೆ, ಜಾಲ ವಿಸ್ತರಣ. ಹಾಗೂ ಎಲ್ಲಾ ಉದ್ಯಮಗಳಿಗೂ ಇದು ಅಗತ್ಯ. ಯಾಕೆಂದರೆ ಯಾವ ಸಂಸ್ಥೆಯೂ, ಬಿಲ್ ಗೇಟ್ಸ್‌ನ ಮೈಕ್ರೋಸಾಫ್ಟ್ ಸಮೇತ, ಸ್ವಯಂಪೂರ್ಣ ಆಗಿರುವುದಿಲ್ಲ. ಬೇರೆ ಬೇರೆ ಕಾರಣಗಳಿಗೋಸ್ಕರ ಅವು ಇತರ ಸಂಸ್ಥೆಗಳನ್ನು ಅವಲಂಬಿಸಬೇಕಾಗುತ್ತದೆ. ಪ್ರೊಜೆಕ್ಟ್‌ಗಳು (ಗುತ್ತಿಗೆ ಕೆಲಸಗಳು) ಸಿಗುತ್ತಿರಬೇಕಾದರೆ ನೀವು ಯಾವಾಗಲೂ ಹೊಸ ಹೊಸ ಸಂಬಂಧಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಅದಕ್ಕೇ ಆಗಾಗ್ಗೆ ಸಂಚಾರಗಳು, ಭೇಟಿಗಳು, ಮಾತುಕತೆಗಳು, ಸಂತೋಷಕೂಟಗಳು ಇರುವುದು. ಈ ಮಾತು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಜ್ಞಾನಜಾಲವೂ ಇದೇ ರೀತಿ ಹರಡುವುದು! ಒಂದು ವಿಷಯವನ್ನು ಓದುವ ನೀವು ನಿಮ್ಮ ವಿಷಯಕ್ಕೆ ಸಂಬಂಧಿಸಿದ ಸಂಗತಿಗಳನ್ನು ಮಾತ್ರವೇ ಅಲ್ಲ, ಇತರ ವಿಷಯಗಳನ್ನೂ ಓದಬೇಕಾಗುತ್ತದೆ. ಹಿಂದಿಗಿಂತಲೂ ಈಗ ಇದು ಮಹತ್ವವನ್ನು ಪಡೆದಿರುವ ಸಂಗತಿ. ಯಾಕೆಂದರೆ ಉನ್ನತ ಮಟ್ಟದಲ್ಲಿ ಎಲ್ಲಾ ಜ್ಞಾನಶಾಖೆಗಳಲ್ಲೂ ಉಪಶಾಖೆಗಳೆದ್ದಿವೆ, ಗಡಿಗಳೇ ಇಲ್ಲವಾಗುತ್ತಿವೆ.

ಹಿಂದಿನ ಕಾಲದಲ್ಲಿ ಮನುಷ್ಯ ತಾನು ಏನನ್ನು ತಿನ್ನುತ್ತಾನೋ ಅದೇ ಆಗುತ್ತಾನೆ ಎಂಬ ನಂಬಿಕೆಯಿತ್ತು. ಆದ್ದರಿಂದ ಜನರು ತಾವು ಕೊಂದ ವೈರಿಗಳ ಮಾಂಸವನ್ನು ಅವರ ಶಕ್ತಿ ತಮಗೆ ಸೇರಲಿ ಎಂದು ತಿಂದುಬಿಡುತ್ತಿದ್ದರು. ಈಗ ಮನುಷ್ಯ ಏನನ್ನು ಓದುತ್ತಾನೋ ಅದೇ ಆಗುತ್ತಾನೆ ಎಂಬ ನಂಬಿಕೆಯಿದೆ. ಇದು ದೈಹಿಕತೆಯಿಂದ ಬೌದ್ಧಿಕತಗೆ ಮನುಷ್ಯ ಸಾಗಿದ ಬಗೆಯನ್ನು ಸೂಚಿಸುತ್ತದೆ. ಇನ್ನು ಈ ಬೃಹತ್ತಾದ ಗ್ರಂಥಾಲಯಗಳಿಗೆ ಮರಳಿದರೆ, ಯಾವೊಬ್ಬ ಪುಸ್ತಕಾಭ್ಯಾಸಿಯೂ ಎಲ್ಲ ಪುಸ್ತಕಗಳನ್ನೂ ಓದುವುದು ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ನಾವು ಏನು ಓದಿದ್ದೇವೆಯೋ ಅಷ್ಟನ್ನು ಸರಿಯಾಗಿ ಅರಗಿಸಿಕೊಳ್ಳುವುದು ಮುಖ್ಯ. ಹಾಗೂ ಎಲ್ಲವನ್ನೂ ಎಲ್ಲರೂ ಓದದಿರುವಂತೆಯೇ ಪ್ರತಿಯೊಬ್ಬ ಓದುಗನೂ ಇತರರು ಓದಿದ ಕೆಲವು ಪುಸ್ತಕಗಳನ್ನು ಖಂಡಿತಾ ಓದಿರುತ್ತಾನೆ; ಮಾತ್ರವಲ್ಲ ಇತರರು ಓದಿರದ ಕೆಲವನ್ನೂ ಓದಿರುತ್ತಾವೆ. ಈ ಭೌತಿಕ ಮಿತಿಯೂ ಒಳ್ಳೆಯದೇ. ಯಾಕೆಂದರೆ ಇದರಿಂದ ನಾವೆಲ್ಲರೂ ಪರಸ್ಪರ ಸಂಬಂಧಿಸಿರುವುದು ಹೇಗೆ ಸಾಧ್ಯವೋ ಹಾಗೆಯೇ ಪ್ರತ್ಯೇಕವಾಗಿರುವುದಕ್ಕೊ ಆಗುತ್ತದೆ. ಈ ಸಮಾನತೆ ಮತ್ತು ಭಿನ್ನತೆ ಎರಡೂ ವ್ಯಕ್ತಿ ಮತ್ತು ಸಮಾಜದ ದೃಷ್ಟಿಯಿಂದ ಒಳ್ಳೆಯದೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಕ್ಕಂದಿನಲ್ಲಿ ಒಮ್ಮೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…