ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ

ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ

ನಾಡು, ನುಡಿಗೆ ಕನ್ನಡ ಚಿತ್ರಗಳ ಕೊಡುಗೆಯನ್ನು ಕುರಿತು ಅವಲೋಕಿಸುವಾಗ ನನ್ನೆದುರು ಇರುವುದು ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಯ ಸ್ವರೂಪ. ಕನ್ನಡ ನಾಡು ಮತ್ತು ನುಡಿಗಳನ್ನು ಸ್ತುತಿಸುವುದಷ್ಟೇ ದೊಡ್ಡ ಕೊಡುಗೆಯಾಗುವುದಿಲ್ಲ. ಕನ್ನಡ ಚಿತ್ರಗಳು ಉಂಟು ಮಾಡಿದ ಅಥವಾ ಮಾಡಬಯಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮದ ನೆಲೆಗಳು ಬಹುಮುಖ್ಯವೆಂದು ನಾನು ಭಾವಿಸಿದ್ದೇನೆ.

ನನಗೆ ತುಂಬಾ ಆಸಕ್ತಿದಾಯಕ ವಿಷಯವೆಂದರೆ ಕನ್ನಡದ ಮೊದಲ ಚಿತ್ರದಿಂದ ಆರಂಭಿಸಿ ಅನೇಕ ವರ್ಷಗಳವರೆಗೆ ಹರಿದ ಸಾಂಸ್ಕೃತಿಕ ಉಪಧಾರೆ. ‘ಉಪ’ ಎಂದಕೂಡಲೇ ಮಹತ್ವದ್ದಲ್ಲವೆಂದು ಭಾವಿಸಬೇಕಾಗಿಲ್ಲ. ಸ್ಥಾಪಿತ ಮೌಲ್ಯಗಳ ಸಮಾಜ ಯಾವುದನ್ನು ಪ್ರಧಾನ ಎಂದು ಕೊಂಡಿತ್ತೊ ಅದನ್ನು ಬಿಟ್ಟು ಬೇರೆ ದಾರಿ ಹಿಡಿದದ್ದನ್ನು ಉಪಧಾರೆಯೆಂದು ಗುರುತಿಸಿ, ಅದು ತುಂಬಾ ಮಹತ್ವದ್ದೆಂದು ಭಾವಿಸಿದ್ದೇನೆ. ಈಗ ನೋಡಿ : ಕನ್ನಡದ ಮೊದಲನೇ ಚಿತ್ರ ‘ಸತಿ ಸುಲೋಚನ’. ಸುಲೋಚನೆಯು ರಾವಣನ ಪುತ್ರ ಇಂದ್ರಜಿತುವಿನ ಪತ್ನಿ. ನಮ್ಮ ಸ್ಥಾಪಿತ ಅಥವಾ ಪ್ರತಿಷ್ಠಿತ ಮೌಲ್ಯ ಪ್ರತಿಪಾದನೆಯ ಸಮಾಜಕ್ಕೆ ಸ್ತ್ರೀಯರಲ್ಲಿ ಸೀತೆಗೆ ಮೊದಲ ಸ್ಥಾನ; ಶ್ರೀರಾಮನಿಗೆ ಅಗ್ರಸ್ಥಾನ. ‘ಆರ್ಯ ಸಂಸ್ಕೃತಿ ವಲಯ’ದವರೆಂದು ಗುರುತಿಸಲ್ಪಡುವ ಸೀತೆ ಮತ್ತು ರಾಮನ ಬದಲಾಗಿ ‘ರಾಕ್ಷಸ ಸಂಸ್ಕೃತಿ ವಲಯ’ದವರೆಂದು ಕರೆಸಿಕೊಂಡ ಸುಲೋಚನ, ಇಂದ್ರಜಿತು, ರಾವಣಾದಿಗಳು ಪ್ರಧಾನ ಪಾತ್ರವಾಗುವ ವಸ್ತುವನ್ನು ಆಯ್ಕೆ ಮಾಡಿಕೊಂಡದ್ದೇ ಆಸಕ್ತಿದಾಯಕವಾದ ಸಂಗತಿಯಾಗಿದೆ. ನಿಜ, ಸುಲೋಚನೆಯು ಸೀತಾರಾಮರ ಮೌಲ್ಯಗಳನ್ನು ಮೆಚ್ಚಬಹುದು. ಆದರೆ, ‘ರಾಕ್ಷಸ ಪತ್ನಿಯೂ ಸತೀಮಣಿಯೆಂದು ಸಾರುವ ಮೂಲಕ ಸಂಸ್ಕೃತಿಯ ಕಂದಕಗಳನ್ನು ಮುಚ್ಚುವ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಕ್ಷಸರೆಂದ ಕೂಡಲೇ ಮೌಲ್ಯರಹಿತರಲ್ಲವೆಂಬ ಅಂಶ ಅಂತರ್ಗತವಾಗಿದೆ. ಹಾಗೆ ನೋಡಿದರೆ, ರಾಮಾಯಣವು ಮೂರು ಸಂಸ್ಕೃತಿಗಳ ಪುರಾಣ ಕಾವ್ಯ. ಆರ್ಯ, ವಾನರ, ರಾಕ್ಷಸ ಎಂಬ ಮೂರು ಸಂಸ್ಕೃತಿ ವಲಯಗಳ ಮುಖಾಮುಖಿಯನ್ನು ಪ್ರಧಾನವಾಗಿಟ್ಟುಕೊಂಡು, ಅನುಸಂಧಾನವನ್ನು ಅಂತರ್ಗತ ಮಾಡಿಕೊಂಡ ವಸ್ತುವುಳ್ಳ ಕಾವ್ಯವಿದು. ಈಗ ಶ್ರೀರಾಮನನ್ನು ‘ಅಪಹರಣ ಮಾಡಿ ಸಲ್ಲದ ಸಂಸ್ಕೃತಿ ಪ್ರತಿರೂಪಕ್ಕೆ ಬಳಸಿಕೊಂಡು ರಾಮಾಯಣದ ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಅದೇನೇ ಇರಲಿ, ‘ಸತಿ ಸುಲೋಚನ’ ಚಿತ್ರವು ಒಂದು ಉತ್ತಮ ಸಾಂಸ್ಕೃತಿಕ ಕೊಡುಗೆ.

ಇನ್ನೊಂದು ಅಂಶವನ್ನಿಲ್ಲಿ ಹೇಳಬೇಕು : ನಾವು ಸಾಮಾನ್ಯವಾಗಿ ‘ಸಂಸ್ಕಾರ’ ಚಿತ್ರದಿಂದ ಕನ್ನಡದ ಪರ್ಯಾಯ ಅಥವಾ ಹೊಸ ಅಲೆ ಚಿತ್ರಗಳ ಪರಂಪರೆಯನ್ನು ಗುರುತಿಸುತ್ತೇವೆ. ನಿರೂಪಣಾ ಶೈಲಿಯ ದೃಷ್ಟಿಯಿಂದ ಇದು ಸರಿಯೂ ಹೌದು. ಆದರೆ ‘ವಸ್ತು’ವಿನ ವಿಷಯಕ್ಕೆ ಬಂದರೆ ಕನ್ನಡದ ಮೊದಲನೇ ಚಿತ್ರವೇ ‘ಪರ್ಯಾಯ ವಸ್ತು’ವನ್ನು ಸ್ವೀಕರಿಸಿದೆ ಎಂಬುದನ್ನು ಮರೆಯಬಾರದು. ಸಂಸ್ಕೃತಿಯ ‘ಉಪಧಾರೆ’ಯ ವಸ್ತುವೇ ಪರ್ಯಾಯ ವಸ್ತು. ಚಾರಿತ್ರಿಕವಾಗಿ ಇದು ಗಮನಿಸಬೇಕಾದ ಅಂಶ.

ಮತ್ತೊಂದು ಅಂಶವನ್ನೂ ಗಮನಿಸಬೇಕು : ಕನ್ನಡದ ಮೊದಲ ಚಿತ್ರ ನಾಯಕ ಪ್ರಧಾನ ವಲ್ಲ; ನಾಯಕಿ ಪ್ರಧಾನ ನಿಜ; ಮೊದಲು ಚಿತ್ರೀಕರಣ ಆರಂಭಿಸಿದ ಚಿತ್ರ ‘ಭಕ್ತಧ್ರುವ’. ಆದರೆ ಮೊದಲು ಬಿಡುಗಡೆಯಾಗಿದ್ದು (೩-೩-೧೯೩೪) ‘ಸತಿಸುಲೋಚನ’, ‘ಭಕ್ತಧ್ರುವ’ ಚಿತ್ರವು ನಾಯಕ ಪ್ರಧಾನವಾದರೂ ಸಿದ್ಧಮಾದರಿಯ ನಾಯಕ ಅದರಲಿಲ್ಲ. ಅದು ಭಕ್ತನ ಕತೆ. ಈ ಭಕ್ತಿ ಪರಂಪರೆಯು ಮುಂದೆ ಕನ್ನಡ ಚಿತ್ರರಂಗದ ಒಂದು ಮುಖ್ಯ ಭಾಗವಾಯಿತು. ಒಟ್ಟಿನಲ್ಲಿ ಸ್ತ್ರೀಪ್ರಧಾನತೆ ಮತ್ತು ಭಕ್ತಿ ಪ್ರಧಾನತೆಗಳೇ ಕನ್ನಡ ಚಿತ್ರರಂಗದ ಆರಂಭದ ದಶಕಗಳನ್ನು ವ್ಯಾಪಿಸಿದ್ದು ಒಂದು ವಿಶೇಷವೂ ಅಧ್ಯಯನಾರ್ಹವೂ ಆದ ಚಾರಿತ್ರಿಕ ಸತ್ಯವಾಗಿದೆ. ಈ ನನ್ನ ಮಾತಿಗೆ ಪೂರಕವಾಗಿ ಕೆಲವು ಚಿತ್ರಗಳನ್ನು ಉದಾಹರಿಸಬಹುದು : ಸತಿಸುಲೋಚನ (೧೯೩೪) ಭಕ್ತಧ್ರುವ (೧೯೩೪) ಸದಾರಮೆ (೧೯೩೫) ಚಿರಂಜೀವಿ (೧೯೩೬) ಪುರಂದರದಾಸ (೧೯೩೭) ಸುಭದ್ರ (೧೯೪೧) ವಸಂತಸೇನಾ (೧೯೪೧) ಭಕ್ತಪ್ರಹ್ಲಾದ (೧೯೪೨) ಸತ್ಯಹರಿಶ್ಚಂದ್ರ (೧೯೪೩) ಕೃಷ್ಣಸುಧಾಮ (೧೯೪೩) ಹೇಮರೆಡ್ಡಿ ಮಲ್ಲಮ್ಮ (೧೯೪೫) ಮಹಾತ್ಮ ಕಬೀರ್ (೧೯೪೭) ಭಕ್ತರಾಮದಾಸ (೧೯೪೮) ಭಕ್ತ ಕುಂಬಾರ (೧೯೪೯) ಭಾರತಿ (೧೯೪೯) ನಾಗಕನ್ನಿಕ (೧೯೪೯) ಸತಿ ತುಳಸಿ (೧೯೪೯) ಜಗನ್ಮೊಹಿನಿ (೧೯೫೧) ತಿಲೋತ್ತಮ್ಮೆ (೧೯೫೧) ಚಂಚಲಕುಮಾರಿ (೧೯೫೩) ಗುಣಸಾಗರಿ (೧೯೫೩) ಮಂಗಳಗೌರಿ (೧೯೫೩) ಸೌಭಾಗ್ಯ ಲಕ್ಷ್ಮಿ (೧೯೫೩) ಬೇಡರ ಕಣ್ಣಪ್ಪ (೧೯೫೪) ಕನ್ಯದಾನ (೧೯೫೪) ದೇವಕನ್ನಿಕಾ (೧೯೫೪) ಸಂತಸಕ್ಕು (೧೯೫೫) ಶಿವಶರಣೆ ನಂಬೆಕ್ಕ (೧೯೫೫) ಸೋದರಿ (೧೯೫೫) ಸ್ತ್ರೀರತ್ನ (೧೯೫೫) ಹರಿಭಕ್ತ (೧೯೫೬) ಮುತ್ತೈದೆ ಭಾಗ್ಯ (೧೯೫೬) ಭಕ್ತ ಮಾರ್ಕಂಡೇಯ (೧೯೫೬) ನಳದಮಯಂತಿ (೧೯೫೭) ಪ್ರೇಮದ ಪುತ್ರಿ (೧೯೫೭) ರಾಯರ ಸೊಸೆ (೧೯೫೭) ಆಶಾಸುಂದರಿ (೧೯೬೦) ಭಕ್ತ ಕನಕದಾಸ (೧೯೬೦) – ಇತ್ಯಾದಿ.

ಈ ಪಟ್ಟಿಯನ್ನು ಕೊಡಲು ಒಂದು ಮುಖ್ಯ ಕಾರಣವೂ ಇದೆ. ಬ್ರಿಟಿಷ್ ವಸಾಹತು ಶಾಹಿಯ ಆಡಳಿತ ಇದ್ದಾಗ ಕನ್ನಡ ಚಿತ್ರರಂಗವು ಯಾವುದೇ ರಾಜರ ಕತೆಯನ್ನು ಚಲನಚಿತ್ರ ವಾಗಿಸಲಿಲ್ಲ. ಪುರಾಣಕತೆಗಳ ರಾಜರು ಬಂದರೂ ಅವರು ಕಥಾನಾಯಕರಲ್ಲ. ಬಹುಶಃ ಬ್ರಿಟಿಷ್ ವಸಾಹತುಶಾಹಿಗೆ ಕನ್ನಡ ಚಿತ್ರರಂಗವು ಪ್ರತಿಕ್ರಿಯಿಸಿದ ರೀತಿಯಿದು. ರಾಜರನ್ನು ನಾಯಕರನ್ನಾಗಿ ಮಾಡಿ ಹೊಗಳದೆ, ಸಮಕಾಲೀನ ರಾಜಕೀಯ ಸಂಗತಿಗಳುಳ್ಳ ಯಾವ ವಸ್ತುವನ್ನೂ ಒಳಗೊಳ್ಳದೆ ಬಹುಪಾಲು ಭಕ್ತಿಪ್ರಧಾನ ಚಿತ್ರಗಳನ್ನೇ ಮಾಡುವ ಮೂಲಕ ಕನ್ನಡ ಚಿತ್ರರಂಗವು ಬ್ರಿಟಿಷ್ ವಸಾಹತುಶಾಹಿಗೆ ಮೌನ ಪ್ರತಿಕ್ರಿಯೆ ನೀಡಿದ ಅಥವಾ ಸಂದಿಗ್ಗ ಸನ್ನಿವೇಶವನ್ನು ಜಾಣತನದಿಂದ ನಿರ್ವಹಿಸಿದೆ. ಭಕ್ತಿ ಪರಂಪರೆಯ ರಾಜಭಕ್ತಿಗೆ ಪರ್ಯಾಯವಾಗಿ ದೈವ ಭಕ್ತಿಯನ್ನು ಸ್ವೀಕರಿಸಿದ್ದನ್ನು ಗಮನಿಸಿದಾಗ ಭಕ್ತಿಪ್ರಧಾನ ಹಾಗೂ ಸ್ತ್ರೀಪ್ರಧಾನ ವಸ್ತುಗಳನ್ನು ನಿರ್ವಹಿಸಿದ ಕನ್ನಡ ಚಿತ್ರಗಳು ರಾಜಸ್ತುತಿ ಮತ್ತು ಪುರುಷ ಸ್ತುತಿಯನ್ನು ಗೌಣಗೊಳಿಸಿವೆಯೆಂದು ಹೇಳಬಹುದು. ಸ್ವಾತಂತ್ರ್ಯೋತ್ತರ ನಾಡಿನಲ್ಲೂ ಸುಮಾರು ಒಂದು ದಶಕದ ಕಾಲ ಇದೇ ವಸ್ತುಪರಂಪರೆಯು ಕನ್ನಡ ಚಿತ್ರಗಳಲ್ಲಿ ಪ್ರಧಾನವಾಗಿತ್ತು.

ಇಲ್ಲಿ ಚಾರಿತ್ರಿಕ ವಸ್ತುವಿನ ವಿಷಯವೂ ಕುತೂಹಲಕರವಾಗಿದೆ. ಬ್ರಿಟಿಷ್ ವಸಾಹತು ಶಾಹಿ ಆಡಳಿತದ ಸಂದರ್ಭದಲ್ಲಿ ನಮ್ಮ ನಾಡಿನ ರಾಜರು ಕಥಾ ನಾಯಕರಾಗುವಂತಿಲ್ಲ; ಬ್ರಿಟಿಷರನ್ನು ನಾಯಕರನ್ನಾಗಿ ಮಾಡುವ ಮನಸ್ಸಿಲ್ಲ; ಅಂತಹ ನಿಲುವೂ ಇಲ್ಲ. ಇದೇ ಸನ್ನಿವೇಶ ಸ್ವಾತಂತ್ರ್ಯ ಬಂದ ಮೇಲೂ ಮುಂದುವರೆಯಿತು. ಕಡೆಗೆ ೧೯೬೦ರಲ್ಲಿ ನಿರ್ಮಾಣಗೊಂಡ ‘ರಣಧೀರ ಕಂಠೀರವ’ ರಾಜರ ವಸ್ತುವನ್ನಾಧರಿಸಿದ ಕನ್ನಡದ ಮೊದಲ ಚಾರಿತ್ರಿಕ ಚಿತ್ರವಾಗಿ ಮೂಡಿಬಂತು. ಅರಸು ಮನೆತನ ಮತ್ತು ಸಾಮ್ರಾಜ್ಯದ ಒಳಸುಳಿಗಳನ್ನು ಒಳಗೊಂಡ ಅಪರೂಪದ ಚಿತ್ರವಾಯಿತು. ವರನಟ ರಾಜಕುಮಾರ್, ಜಿ.ವಿ. ಅಯ್ಯರ್, ಟಿ.ಎನ್. ಬಾಲಕೃಷ್ಣ ಮತ್ತು ಟಿ.ಆರ್. ನರಸಿಂಹರಾಜು ಅವರು ಸೇರಿ ಸ್ಥಾಪಿಸಿದ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ವು ಈ ಚಾರಿತ್ರಿಕ ಚಿತ್ರವನ್ನು ನಿರ್ಮಿಸಿತು. ಈ ನಾಲ್ವರು ಆ ಚಿತ್ರದ ನಿರ್ಮಾಪಕರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಸಾಮಾನ್ಯವಾಗಿ ರಾಜರಿಗೆ ಮಾರುಹೋಗಿ ಮೈ ಬಾಗಿ ಗೌರವಿಸುವ ನಮ್ಮವರು ಬ್ರಿಟಿಷ್ ವಸಾಹತುಶಾಹಿ ಸಂದರ್ಭದ ಸೂಕ್ಷ್ಮತೆಯಲ್ಲಿ ಭಕ್ತಿಪರಂಪರೆಯ ಮೊರೆ ಹೋಗಿರಬಹುದು. ಇದು ಜನಮಾನಸಕ್ಕೆ ಸಮೀಪವೆಂಬ ಭಾವನೆಯೂ ಕೆಲಸ ಮಾಡಿರಬಹುದು. ಅದೇನೇ ಇರಲಿ ಆಳುವವರಿಗೆ ಪರಾಕು ಹಾಕಲಿಲ್ಲವೆಂಬ ಸಂಗತಿ ಮುಖ್ಯವಾಗುತ್ತದೆ.

೧೯೪೭ರಲ್ಲಿ ಕಬೀರರನ್ನು ‘ಮಹಾತ್ಮ’ ಎಂದು ಸಂಬೋಧಿಸಿ ‘ಮಹಾತ್ಮ ಕಬೀರ್’ ಚಿತ್ರ ನಿರ್ಮಾಣ ಮಾಡಿದ್ದು ಸಹ ಉಲ್ಲೇಖಾರ್ಹ ಘಟನೆಯಾಗಿದೆ. (ಗಣೇಶ್ ಪಿಕ್ಚರ್ ನಿರ್ಮಾಣ; ಆರ್. ನಾಗೇಂದ್ರರಾವ್ ನಿರ್ದೆಶನ; ಸುಬ್ಬಯ್ಯ ನಾಯ್ಡು, ಲಕ್ಷ್ಮೀಬಾಯಿ, ಕಮಲಾಬಾಯಿ ಮುಂತಾದವರ ಅಭಿನಯ) ಮುಸ್ಲಿಂ ಮೂಲದ ಭಕ್ತರನ್ನು ಮಹಾತ್ಮ ಎಂದು ಕರೆಯುವ ಮತ್ತು ‘ಮಹಾತ್ಮ’ ಎಂಬ ವಿಶೇಷಣವನ್ನು ಶೀರ್ಷಿಕೆಯಲ್ಲೇ ನಮೂದಿಸಿ ಚಿತ್ರ ತಯಾರಿಸುವ ವಾತಾವರಣ ಇಂದು ಇಲ್ಲ. ಧಾರ್ಮಿಕ ಮೂಲಭೂತವಾದವು ಅಬ್ಬರಿಸುತ್ತಿರುವ ಸಂದರ್ಭವಿದು. ಅಂದು ೧೯೪೭ರಲ್ಲಿ ಕನ್ನಡ ಮನಸ್ಸು ‘ಮಹಾತ್ಮ ಕಬೀರ್’ ಚಿತ್ರವನ್ನು ರೂಪಿಸಿದ್ದು ಮುದ ನೀಡುವ ಘಟನೆಯೆಂದು ನಾನು ಭಾವಿಸುತ್ತೇನೆ. ಈ ಮಧ್ಯೆ ೮೦ರ ದಶಕದಲ್ಲಿ ‘ಸಂತ ಶಿಶುನಾಳ ಶರೀಫ’ ಚಿತ್ರ ಬಂದದ್ದನ್ನು (ನಿರ್ದೇಶನ : ನಾಗಾಭರಣ) ಪ್ರಾಸಂಗಿಕವಾಗಿ ನೆನೆಯಬಹುದು. ಆದರೆ ಇಲ್ಲಿ ‘ಸಂತ’. ಅಲ್ಲಿ ‘ಮಹಾತ್ಮ’. ಈ ವ್ಯತ್ಯಾಸವೂ ಮುಖ್ಯ. ಭಕ್ತಿ ಪರಂಪರೆಯ ವಿಸ್ತರಣೆಯಾಗಿ ಬಂದ ಹುಟ್ಟನ್ನು ಮೆಟ್ಟಿನಿಂತ ಕನ್ನಡ ಮನಸ್ಸು ಕಬೀರರನ್ನು ‘ಮಹಾತ್ಮ’ನಾಗಿಸಿದ್ದು ಒಂದು ವಿಶೇಷವೇ ಸರಿ.
ಈ ಎಲ್ಲ ಅಂಶಗಳೂ ನಾಡುನುಡಿಗೆ ಕನ್ನಡ ಚಿತ್ರಗಳು ಕೊಟ್ಟ ಮೊದಲ ಹಂತದ ಕೊಡುಗೆಗಳಾಗಿವೆ. ಇದೇ ಸಂದರ್ಭದಲ್ಲಿ ಮತ್ತೊಂದು ವ್ಯಾಖ್ಯಾನವನ್ನು ಮಾಡಬಹುದಾಗಿದೆ. ಮೊದಲೆರಡು ದಶಕಗಳ ಕನ್ನಡ ಚಿತ್ರಗಳಲ್ಲಿ ರಾಜರು ನಾಯಕರಲ್ಲ; ಅಂತೆಯೇ ದೇವರು ನಾಯಕನಲ್ಲ, ನಾಯಕ-ನಾಯಕಿಯರಾದವರು ಭಕ್ತರು ಮತ್ತು ಮಹಿಳೆಯರು. ಇಲ್ಲಿ, ಭಕ್ತರ ಮೂಲಕ ದೇವರನ್ನು ನೋಡಲಾಗಿದೆ; ದೇವರ ಮೂಲಕ ಭಕ್ತರನ್ನು ನೋಡಿಲ್ಲ: ಭಕ್ತನ ಬದುಕು ಮುಖ್ಯ; ದೇವರು ನಿಮಿತ್ತ ಮಾತ್ರ. ಅಲ್ಲದೆ, ಬಹುಪಾಲು ಭಕ್ತರು ಪ್ರತಿಷ್ಠಿತ ಸಾಮಾಜಿಕ ವಲಯಕ್ಕೆ ಸೇರಿದವರಲ್ಲ. ನನ್ನ ವ್ಯಾಖ್ಯಾನಕ್ಕೆ ಸಣ್ಣಪುಟ್ಟ ಅಪವಾದಗಳಿರಬಹುದಾದರೂ ಬಹುಪಾಲು ಚಿತ್ರಗಳ ಅಂತರಂಗವು ಪ್ರಭುದೂರವಾದ, ಭಕ್ತಿಬದ್ದವಾದ, ಜನಸಾಮಾನ್ಯರ ಸಂವೇದನೆಗೆ ಸಮೀಪವಾದ ಹಾಗೂ ಸ್ತ್ರೀ ಪ್ರಧಾನವಾದ ಮನಸ್ಸಿನಿಂದ ತುಂಬಿದೆ.

ನಾಡು-ನುಡಿಗೆ ಸಂಬಂಧಿಸಿದಂತೆ ಒಡೆದು ಕಾಣುವ ಕೊಡುಗೆಯೆಂದು ಕನ್ನಡಪರ ಗೀತರಚನೆ ಮತ್ತು ಬಳಕೆಯನ್ನು ಉದಾಹರಿಸಬಹುದು. ‘ಕಣ್ತೆರೆದು ನೋಡು’ ಚಿತ್ರದ ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಎಂಬ ಹಾಡಿನಿಂದ ಹಿಡಿದು ‘ನಾಗರಹಾವು’ ಚಿತ್ರದ ‘ಕನ್ನಡ ನಾಡಿನ ವೀರ ರಮಣಿಯ’ ಹಾಡನ್ನು ಹಾದು ‘ಶಬ್ದವೇಧಿ’ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಎಂಬ ಗೀತೆಯವರೆಗೆ ಕನ್ನಡ ನಾಡು-ನುಡಿಯ ಪ್ರೀತಿ ಹರಿದುಬಂದಿದೆ; ಹರಿಯುತ್ತಲೇ ಇದೆ. ಡಾ. ರಾಜಕುಮಾರ್ ಅವರ ಬಾಯಲ್ಲಿ ಬಂದ ಕನ್ನಡ ಪರ ಹಾಡುಗಳನ್ನು ಕೇಳಿದ ಪ್ರೇಕ್ಷಕರು ಸಂಭ್ರಮಿಸಿದ್ದಾರೆ; ಪಿ.ಬಿ. ಶ್ರೀನಿವಾಸ್ ಹಾಡಿರಲಿ, ಡಾ. ರಾಜಕುಮಾರ್ ಹಾಡಿರಲಿ ‘ನಾವಾಡುವ ನುಡಿಯು ಕನ್ನಡ ನುಡಿ…. ಗಂಧದ ಗುಡಿ’ ಎಂದರೆ ಸಾಕು ಸುಖಿಸಿದ್ದಾರೆ. ಡಾ. ರಾಜಕುಮಾರ್ ಅವರ ಬಾಯಲ್ಲಿ ಕನ್ನಡಪರ ಹಾಡುಗಳು ಬಂದ ಮೇಲೆ ವಿಷ್ಣುವರ್ಧನ್ ಅವರನ್ನು ಒಳಗೊಂಡಂತೆ ಹೆಚ್ಚು ಕಡಿಮೆ ಕನ್ನಡದ ಪ್ರಸಿದ್ದ ನಾಯಕ ನಟರೆಲ್ಲ ಒಂದಲ್ಲ ಒಂದು ಕನ್ನಡಪರ ಗೀತೆಗೆ ತುಟಿಯಾಡಿಸಿ ಅಭಿನಯಿಸಿದ್ದಾರೆ. ಕೆಲವರು ತಾವೇ ಹಾಡಿದ್ದಾರೆ. ಈ ಮೂಲಕ ನಾಯಕ ನಟರು ತಮ್ಮ ಅಭಿಮಾನಿಗಳ ಕನ್ನಡ ಪ್ರೀತಿಗೆ ಪ್ರೇರಣೆ ನೀಡಿದ್ದಾರೆ. ಟಿ.ವಿ., ರೇಡಿಯೊ; ಧ್ವನಿಸುರಳಿ, ಸಿ.ಡಿ.ಗಳ ಮೂಲಕ ಈ ಹಾಡುಗಳನ್ನು ಮತ್ತೆ ಮತ್ತೆ ಕೇಳುವ ಕನ್ನಡಿಗರಲ್ಲಿ ಕನ್ನಡದ ನೆನಪನ್ನು ಜಾಗೃತಗೊಳಿಸಲು ಈ ಗೀತೆಗಳು ಸಹಕಾರಿಯಾಗಿವೆ. ಇಂತಹ ಗೀತರಚನೆ ಮಾಡಿದ ಚಿತ್ರ ಸಾಹಿತಿಗಳ ಮತ್ತು ಬಳಸಿಕೊಂಡ ನಿರ್ಮಾಪಕ – ನಿರ್ದೆಶಕರ ಅಭಿರುಚಿಯನ್ನು ಮೆಚ್ಚಲೇಬೇಕು.

ಚಲನಚಿತ್ರಕ್ಕಾಗಿ ಬರೆಸಿದ ಗೀತೆಗಳದು ಒಂದು ಮಾದರಿ. ಈಗಾಗಲೇ ಪ್ರಕಟಗೊಂಡ ಕವಿತೆಗಳನ್ನು ಬಳಸುವುದು ಇನ್ನೊಂದು ಮಾದರಿ. ಕನ್ನಡ ಚಿತ್ರಗಳಲ್ಲಿ ಪ್ರಸಿದ್ಧ ಕವಿಗಳ ಕವಿತೆಗಳನ್ನು ಅಳವಡಿಸಿಕೊಂಡ ಒಂದು ಪರಂಪರೆಯೇ ಇದೆ. ಕುವೆಂಪು, ಬೇಂದ್ರೆ; ಕೆ.ಎಸ್. ನರಸಿಂಹಸ್ವಾಮಿ, ವಿ. ಸೀತಾರಾಮಯ್ಯ, ಗೋವಿಂದ ಪೈ, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ, ಶಿಶುನಾಳ ಶರೀಫ – ಮುಂತಾದವರ ರಚನೆಗಳನ್ನು ಕೆಲವು ಕನ್ನಡ ಚಿತ್ರಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯಕ್ಕೆ ಗೌರವ ಸಲ್ಲಿಸಲಾಗಿದೆ… ಇದು ಕನ್ನಡ ಚಿತ್ರಗಳು ಸಲ್ಲಿಸಿದ ಒಂದು ನುಡಿಗೌರವ.

ಪ್ರಸಿದ್ಧ ಕವಿಗಳ ಕವಿತೆಗಳನ್ನು ಬಳಸಿಕೊಂಡಂತೆಯೇ ಕನ್ನಡದ ಪ್ರಕಟಿತ ಕತೆ, ಕಾದಂಬರಿಗಳನ್ನು ಆಧರಿಸಿ ಚಿತ್ರಗಳನ್ನು ಮಾಡುವ ಮೂಲಕ ಸಾಹಿತ್ಯ ಮತ್ತು ಸಿನಿಮಾದ ಸಂಬಂಧವನ್ನು ಅರ್ಥಪೂರ್ಣಗೊಳಿಸಿದ ಕೊಡುಗೆಯನ್ನು ನೆನೆಯುವುದು ಅಗತ್ಯವಾಗಿದೆ. ಯಾಕೆಂದರೆ ಇಂದು ಸಾಹಿತ್ಯ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರದ ಸಂಬಂಧ ಹೇಳಿಕೊಳ್ಳುವಷ್ಟು ಮಹತ್ವದ್ದಾಗಿಲ್ಲ. ಸಿನಿಮಾಗಳು ಸದಾ ಸಾಹಿತ್ಯ ಕೃತಿಗಳನ್ನೇ ಆಧರಿಸಬೇಕೆಂದು ಒತ್ತಾಯಿಸಲಾಗದು. ಆದರೆ ಸಿನಿಮಾ ನಿರ್ದೇಶಕರಿಗೆ, ಚಿತ್ರಕತೆ, ಸಂಭಾಷಣೆ ಮತ್ತು ಗೀತರಚನೆಕಾರರಿಗೆ ಕನ್ನಡ ಸಾಹಿತ್ಯದ ಸ್ವಲ್ಪ ತಿಳುವಳಿಕೆಯಾದರೂ ಇರಬೇಕೆಂದು ಒತ್ತಾಯಿಸಬೇಕಾಗುತ್ತದೆ. ಕನ್ನಡದಲ್ಲೇ ಇರುವ ಚಿತ್ರ ಸಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳದೆ ಇದ್ದರೆ, ಅದನ್ನು ಪ್ರಶ್ನಿಸಬೇಕಾಗುತ್ತದೆ. ಹಿಂದೆ ಇಂತಹ ಒತ್ತಾಯ ಮತ್ತು ಪ್ರಶ್ನೆಗಳ ಅಗತ್ಯ ಬೀಳಲಿಲ್ಲ. ಬಹುಪಾಲು ನಿರ್ಮಾಪಕರು ಮತ್ತು ನಿರ್ದೇಶಕರು ತಾವಾಗಿಯೇ ಸಾಹಿತ್ಯ ಕೃತಿಗಳು, ಸಾಹಿತ್ಯ ಬಲ್ಲವರತ್ತ ಬಂದರು. ಇದರ ಫಲವಾಗಿ ಚಿತ್ರಸಾಹಿತಿಗಳಿಗೂ ಬೆಲೆ ಸಿಕ್ಕಿತು; ಸಾಹಿತ್ಯಕ್ಕೂ ಗೌರವ ಸಿಕ್ಕಿತು.

೧೯೬೨ರಲ್ಲಿ ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ – ‘ಧರ್ಮದೇವತೆ’ಯನ್ನು ಆಧರಿಸಿ ‘ಕರುಣೆಯೇ ಕುಟುಂಬದ ಕಣ್ಣು’ ಚಿತ್ರವನ್ನು ನಿರ್ಮಿಸಲಾಯಿತು. ಇದು ಕಾದಂಬರಿಯಾಧಾರಿತ ಮೊಟ್ಟ ಮೊದಲ ಕನ್ನಡ ಚಿತ್ರ. ಆನಂತರ ಅನೇಕ ಕತೆ, ಕಾದಂಬರಿಗಳನ್ನಾಧರಿಸಿದ ಚಿತ್ರಗಳು ಬಂದವು, ನಾಟಕಗಳನ್ನಾಧರಿಸಿದ ಚಿತ್ರಗಳೂ ತಯಾರಾದವು. ಕಾಕನಕೋಟೆ, ಋಷ್ಯಶೃಂಗ, ಸುಬ್ಬಾಶಾಸ್ತಿ, ಸಂಪತ್ತಿಗೆ ಸವಾಲ್, ಸೊಸೆ ತಂದ ಸೌಭಾಗ್ಯ – ಮುಂತಾದವು ನಾಟಕಾಧಾರಿತ ಚಿತ್ರಗಳು, ಘಟಶ್ರಾದ್ಧ, ಭೂತಯ್ಯನ ಮಗ ಅಯ್ಯು, ಕಥಾ ಸಂಗಮ, ಬರ, ಫೀನಿಕ್ಸ್, ಮುಯ್ಯಿ, ಗೀಜಗನಗೂಡು, ತಬರನ ಕತೆ, ಕೊಟ್ರೇಶಿ ಕನಸು, ಅಬಚೂರಿನ ಪೋಸ್ಟಾಫೀಸು, ಕ್ರೌರ್ಯ, ಮುನ್ನುಡಿ, ಗುಲಾಬಿ ಟಾಕೀಸ್, ನಾನು ಗಾಂಧಿ – ಮುಂತಾದವು ಸಣ್ಣ ಕಥೆಯಾಧಾರಿತ ಚಿತ್ರಗಳು, ಕಾದಂಬರಿಯಾಧಾರಿತ ಚಿತ್ರಗಳ ಸಂಖ್ಯೆ ದೊಡ್ಡದು. ಚಂದವಳ್ಳಿಯ ತೋಟ, ಹಣ್ಣೆಲೆ ಚಿಗುರಿದಾಗ, ಬೆಳ್ಳಿಮೋಡ, ಗೆಜ್ಜೆಪೂಜೆ, ಹೇಮಾವತಿ, ಬಂಗಾರದ ಮನುಷ್ಯ, ಎರಡು ಕನಸು, ಬೆತ್ತಲೆ ಸೇವೆ, ಹೊಂಬಿಸಲು, ಮಿಸ್ ಲೀಲಾವತಿ, ಪರಸಂಗದ ಗೆಂಡೆತಿಮ್ಮ, ವಂಶವೃಕ್ಷ, ಉಯ್ಯಾಲೆ, ಕಾಡು, ಭುಜಂಗಯ್ಯನ ದಶಾವತಾರ, ಸಂಧ್ಯಾರಾಗ, ಸರ್ವಮಂಗಳ, ರಂಜಿತಾ, ಮುದುಡಿದ ತಾವರೆ ಅರಳಿತು, ಬ್ಯಾಂಕರ್ ಮಾರ್ಗಯ್ಯ, ಆಕಸ್ಮಿಕ, ಸಂಸ್ಕಾರ, ಸಂಗೀತ, ಶರಪಂಜರ, ಹಂಸಗೀತೆ, ಮಾಡಿ ಮಡಿದವರು, ಅವಸ್ಥೆ, ಉದ್ಭವ, ಸೂರ್ಯ, ನಾಗರಹಾವು, ದೇವೀರಿ, ಅವ್ವ, – ಹೀಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಸಾಂಕೇತಿಕವಾಗಿ ಇಲ್ಲಿ ಕೆಲವು ಕಾದಂಬರಿಯಾಧಾರಿತ ಚಿತ್ರಗಳನ್ನು ಉದಾಹರಿಸುವ ಮೂಲಕ ಕನ್ನಡ ಚಿತ್ರಗಳಿಗೂ ಸಾಹಿತ್ಯ ಕ್ಷೇತ್ರಕ್ಕೂ ಇರುವ ಸಂಬಂಧವನ್ನು ತಿಳಿಸಿ ಆ ಮೂಲಕ ಸಂದ ಕೊಡುಗೆಯನ್ನು ನೆನೆಯುವುದು ನನ್ನ ಉದ್ದೇಶವಾಗಿದೆ. (ಪ್ರಸ್ತಾಪಿತವಾಗದ ಹೆಸರುಗಳಿಂದ ಯಾರೂ ಅನ್ಯತಾ ಭಾವಿಸಬಾರದು).

ಕನ್ನಡ ಚಿತ್ರಗಳು ಪ್ರತಿಪಾದಿಸಿದ ಕೆಲವು ಮೌಲ್ಯಗಳು ಪರಿಣಾಮಕಾರಿಯಾಗಿದ್ದು ಜನರನ್ನು ಚಿಂತನೆಗೀಡುಮಾಡಿದ್ದು ಒಂದು ವಿಶೇಷ ಕೊಡುಗೆಯೆಂದು ಪರಿಗಣಿಸಬಹುದು. ಕೃಷಿ ಸಂಸ್ಕೃತಿಗೆ ಸಂಬಂಧಿಸಿದಂತೆ ‘ಬಂಗಾರದ ಮನುಷ್ಯ’ ಮತ್ತು ‘ಮಣ್ಣಿನ ಮಗ’ ಚಿತ್ರಗಳು ರೈತ ಹೋರಾಟಕ್ಕೆ ಸಂಬಂಧಿಸಿದಂತೆ ‘ಧ್ರುವತಾರೆ’, ಕೋರ್ಟಿಗೆ ಅಲೆಯುವ ವ್ಯಾಜ್ಯಗಳು ಬೇಡವೆಂಬ ನೀತಿಗಾಗಿ ಮತ್ತು ಸಾಮುದಾಯಿಕ ಪ್ರತಿರೋಧದ ಪ್ರತೀಕವಾಗಿ ‘ಭೂತಯ್ಯನ ಮಗ ಅಯ್ಯು’ ವೇಶ್ಯಾ ಪದ್ಧತಿಯ ದುರಂತವನ್ನು ಮನಮುಟ್ಟಿಸಿದ ‘ಗೆಜ್ಜೆಪೂಜೆ’ – ಹೀಗೆ ಎಷ್ಟೋ ಚಿತ್ರಗಳನ್ನು ಉದಾಹರಿಸಬಹುದು. ಇಲ್ಲಿ ಉದಾಹರಿಸಿದ ಚಿತ್ರಗಳು ಸಾಂಕೇತಿಕ ಮಾತ್ರ. ಅನೇಕ ಕನ್ನಡ ಚಿತ್ರಗಳು ಜನಪರ ಆದರ್ಶದ ಮಾದರಿಗಳನ್ನು ಒಳಗೊಂಡು ಸಾಕಷ್ಟು ಪರಿಣಾಮ ಬೀರಿವೆ. ಕೂಡು ಬಾಳ್ವೆಯ ಆದರ್ಶವನ್ನು ಸಾರಿದ ಯಶಸ್ವಿ ಚಿತ್ರಗಳು ಕನ್ನಡದಲ್ಲಿ ಬಂದಿವೆ.

ಪ್ರೇಕ್ಷಕರಿಗೆ ಪುರಾಣ ಮತ್ತು ಚರಿತ್ರೆಯ ಸಂಗತಿಗಳನ್ನು ಕಥಾನಕವಾಗಿ ಪರಿಚಯಿಸಿದ ಕೀರ್ತಿ ಕನ್ನಡದ ಕೆಲವು ಚಿತ್ರಗಳಿಗೆ ಸಲ್ಲಬೇಕು. ಕನ್ನಡದಲ್ಲಿ ಬಂದ ಪುರಾಣ ವಸ್ತುಗಳ ಚಿತ್ರಗಳು ಸಾಮಾನೀಕೃತ ಮೌಲ್ಯಗಳನ್ನು ಒಳಗೊಂಡದ್ದು ಸಹಜ. ಬಹು ಜನರನ್ನು ತಲುಪ ಬಯಸುವ ಸಮೂಹ ಮಾಧ್ಯಮದ ಮಾದರಿಗಳು ಸಾಮಾನೀಕೃತ ಸ್ವರೂಪವನ್ನು ಅನಿವಾರ್ಯವಾಗಿ ಪಡೆದು ಬಿಡುತ್ತವೆ. ಈ ಮಾತು ಚಲನಚಿತ್ರಗಳಿಗೆ ಹೆಚ್ಚಾಗಿ ಅನ್ವಯಿಸುತ್ತದೆ. ಭಕ್ತ ಮತ್ತು ದೈವ ಸಂಬಂಧಗಳು, ದುಷ್ಟ ರಾಕ್ಷಸರು ಮತ್ತು ದೇವರಂಥ ನಾಯಕರ ಮುಖಾಮುಖಿ ಇವೇ ಮುಂತಾದ ವಸ್ತು ಮಾದರಿಗಳು ಕನ್ನಡದ ಪೌರಾಣಿಕ ಚಿತ್ರಗಳಲ್ಲಿ ಬಂದಿವೆ. ‘ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆ’ಯೆಂಬ ಸರಳರೇಖೆ ಪೌರಾಣಿಕ ಚಿತ್ರಗಳಲ್ಲಿ ಸ್ವಾಭಾವಿಕವಾಗಿ ಕೆಲಸ ಮಾಡಿದೆ. ಚಾರಿತ್ರಿಕ ಚಿತ್ರಗಳಲ್ಲಿ ಸರಳರೇಖೆಯ ನೋಟ ಕಾಣಿಸಿದರೂ ಅದನ್ನು ಮೀರುವ ಪ್ರಯತ್ನಗಳಿಂದ ಕನ್ನಡಿಗರಿಗೆ ಕೆಲವು ಚಾರಿತ್ರಿಕ ಸಂದರ್ಭಗಳನ್ನು ಸಂವೇದನಾರೂಪದಲ್ಲಿ ತಲುಪಿಸಲಾಗಿದೆ. ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಮಯೂರ, ಶ್ರೀಕೃಷ್ಣದೇವರಾಯ – ಮುಂತಾದ ಚಿತ್ರಗಳು ಕನ್ನಡ ನಾಡಿನ ರಾಜಕೀಯ ಚರಿತ್ರೆಯನ್ನು ವಾಸ್ತವ ಮತ್ತು ಕಲ್ಪಕತೆಗಳ ಮೂಲಕ ರೂಪಕಾತ್ಮಕವಾಗಿ ಅಭಿವ್ಯಕ್ತಿಸಿವೆ. ಈ ಮೂಲಕ ನಾಡಿನ ಜನರಲ್ಲಿ, ಒಂದು ಬಗೆಯ ಚರಿತ್ರೆಯ ಹೆಮ್ಮೆಯನ್ನು ಮೂಡಿಸಿವೆ.

ಕರ್ನಾಟಕ ಸರ್ಕಾರವು ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದ ಮೇಲೆ ಕನ್ನಡ ಚಿತ್ರಗಳು ಕರ್ನಾಟಕದ ನೈಸರ್ಗಿಕ ನೆಲೆಗಳನ್ನು ಒಳಗೊಂಡು ಜನಮನಕ್ಕೆ ತಲುಪಿಸಿದ್ದು ಗಮನಾರ್ಹ ಕೊಡುಗೆಯೆಂದು ಭಾವಿಸಬಹುದು.

ಇತ್ತೀಚಿನ ಕೆಲ ವರ್ಷಗಳಲ್ಲಿ ಬಂದ ಕಳಪೆ ಚಿತ್ರಗಳನ್ನು ಹೊರತುಪಡಿಸಿದರೆ ಕನ್ನಡ ಚಿತ್ರಗಳು ಸದಾ ಸದಭಿರುಚಿಗಾಗಿ ತುಡಿಯುತ್ತ, ದುಡಿಯುತ್ತ ಬಂದಿವೆ. ಸದಭಿರುಚಿಯನ್ನು ಸಾರ್ವಕಾಲಿಕ ಮಾದರಿಯೆಂಬಂತೆ ಬೆಳೆಸುತ್ತ ಬಂದ ಕನ್ನಡ ಚಿತ್ರಗಳ ಕೊಡುಗೆ ಮತ್ತೆ ಮಾದರಿಯಾಗಿ ಹೊಸ ರೂಪದಲ್ಲಿ ಹೊರಹೊಮ್ಮಲಿ. ಕನ್ನಡ ಚಿತ್ರಗಳು ಚಲನಶೀಲವಾಗಿರಲಿ ಎಂಬ ಸದಾಶಯ ನನ್ನಂಥವರದು.

ಕನ್ನಡ ಚಿತ್ರಗಳು ವಿವಿಧ ಕಾಲಘಟ್ಟಗಳಲ್ಲಿ ಚಲನಶೀಲತೆಗೆ ಒಳಗಾಗಿವೆ. ಹೊಸ ರೀತಿಗೆ ತೆರೆದುಕೊಳ್ಳಲು ಪ್ರಯತ್ನಿಸಿವೆ. ಒಡೆದು ಕಾಣುವಂಥ ವ್ಯತ್ಯಾಸದ ಚಲನಶೀಲತೆ ಕಾಣಿಸಿದ್ದು ‘ಕಲಾತ್ಮಕ’ ಚಿತ್ರಗಳ ಮೂಲಕ. ‘ಕಲಾತ್ಮಕ’ ಎಂದು ಸಾಮಾನ್ಯವಾಗಿ ಗುರುತಿಸುವ ಚಿತ್ರಗಳನ್ನು ಹೊಸ ಅಲೆ ಚಿತ್ರಗಳು, ಪರ್ಯಾಯ ಚಿತ್ರಗಳು ಎಂದೂ ಕರೆಯಲಾಗುತ್ತದೆ. ಆದರೆ ‘ಕಲಾತ್ಮಕ ಚಿತ್ರಗಳು’ ಎಂಬುದು ಹೆಚ್ಚು ರೂಢಿಯಲ್ಲಿದೆ. ಬೇರೆ ಮಾದರಿಯ ಅಥವಾ ಮುಖ್ಯವಾಹಿನಿಯ ಚಿತ್ರಗಳಲ್ಲಿ ಕಲಾತ್ಮಕ ಅಂಶಗಳು ಇಲ್ಲವೆಂದು ಇದರರ್ಥವಲ್ಲ. ಹಾಗೆ ನೋಡಿದರೆ ಕನ್ನಡದ ಅನೇಕ ಪ್ರಸಿದ್ದ ಚಿತ್ರಗಳಲ್ಲಿ ಕಲಾತ್ಮಕ ಅಂಶಗಳು ಸಾಕಷ್ಟಿವೆ. ಆದರೆ ಮುಖ್ಯವಾಹಿನಿ ಚಿತ್ರಗಳು ತನ್ನೊಳಗೆ ವ್ಯಾಪಾರ ಮೂಲ ಮಾನದಂಡವನ್ನು ಮುಖ್ಯವಾಗಿಸಿಕೊಂಡು ನಿರ್ಮಾಣವಾಗುತ್ತವೆ. ಕಲಾತ್ಮಕ ವಾಸ್ತವಕ್ಕೆ ಮೊದಲ ಸ್ಥಾನ ಇರುವುದಿಲ್ಲ. ‘ಕಲಾತ್ಮಕ’ ಎಂದು ಕರೆಯುವ ಚಿತ್ರಗಳ ನಿರ್ಮಾಣದ ಹಿಂದೆ ವ್ಯಾಪಾರಿ ಅಂಶಗಳು ಹಿಂದೆ ಸರಿದು ಕಲಾತ್ಮಕ ವಾಸ್ತವ ಮುಂಚೂಣಿಯಲ್ಲಿರುತ್ತದೆ. ಜೊತೆಗೆ ‘ಮುಖ್ಯವಾಹಿನಿ’ ಮತ್ತು ‘ಕಲಾತ್ಮಕ’ ಚಿತ್ರಗಳ ನಿರೂಪಣಾ ಶೈಲಿ ಬೇರೆ ಬೇರೆಯಾಗಿರುತ್ತದೆ.

ಅನೇಕ ‘ಕಲಾತ್ಮಕ’ ಚಿತ್ರಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆ ಪಡೆಯುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡ ನಾಡು, ನುಡಿಗೆ ಹೆಸರು ತಂದುಕೊಟ್ಟಿವೆ. ವಿವಿಧ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ. ಕನ್ನಡ ಚಿತ್ರಗಳನ್ನು ಕುರಿತು ರಾಷ್ಟ್ರೀಯ ಮಟ್ಟದ ಚರ್ಚೆಗೆ ಒತ್ತಾಸೆಯಾಗಿವೆ. ತಮ್ಮೆಲ್ಲ ಇತಿಮಿತಿಗಳ ನಡುವೆ ‘ಕಲಾತ್ಮಕ’ ಚಿತ್ರಗಳು ನಾಡುನುಡಿಗೆ ಕೀರ್ತಿ ತರುವ, ಕೆಲಸ ಮಾಡಿವೆ. ‘ಚಿತ್ರಮಂದಿರಗಳ ಮೂಲಕ’ ಹೆಚ್ಚು ಜನಕ್ಕೆ ತಲುಪಲಾಗದ ಬಿಕ್ಕಟ್ಟಿನ ನಡುವೆಯೂ ‘ಕಲಾತ್ಮಕ’ ಚಿತ್ರಗಳ ಕೊಡುಗೆಯನ್ನು ಕಡೆಗಣಿಸುವಂತಿಲ್ಲ.
*****
(ಜೂನ್ ೨೦೦೯)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೮
Next post ಗಾಜಿನ ಮನೆಯವರು

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…