ಕೋಣೆಯಲ್ಲಿ ಸಮೃದ್ಧ ಕತ್ತಲೆ ನದಿಯಂತೆ ತುಂಬಿತ್ತು.
ಹುಡುಗ ತನ್ನೊಳಗೆ ತಾನು ಅಡಗಿದಂತೆ ಕುಳಿತಿದ್ದ.
ಅಮ್ಮ ಬಂದಳು, ಕನಸಿನೊಳಗೆ ಬಂದ ಇನ್ನೊಂದು ಕನಸಿನಂತೆ.
ನಿಶ್ಶಬ್ದವಾಗಿದ್ದ ಕಪಾಟಿನಲ್ಲಿ ಗಾಜಿನ ಲೋಟ ಇಷ್ಟೆ ಕಂಪಿಸಿತು.
ಗುಟ್ಟು ಬಿಟ್ಟುಕೊಟ್ಟಿತು ಕೋಣೆ ಅನ್ನಿಸಿತು ಅವಳಿಗೆ.
ಮುತ್ತಿಟ್ಬು ‘ನೀನೇನೋ ಪುಟ್ಟಾ’ ಅಂದಳು, ಮೆಲ್ಲಗೆ.
ಹುಡುಗ ನಾಚುತ್ತ, ಕಡೆಗಣ್ಣಲ್ಲಿ ಕತ್ತಲಲ್ಲಿದ್ದ ಪಿಯಾನೋ ನೋಡಿದ.
ಸಂಜೆ ಹೊತ್ತು ನುಡಿಸುತ್ತಿದ್ದಳು.
ರಾಗ ಬಲೆ ಬೀಸಿ ಹುಡುಗನ ತಬ್ಬಿ ಆಳಕ್ಕೆಳೆಯುತ್ತಿತ್ತು.
ಇಬ್ಬರೂ ಸುಮ್ಮನೆ ಕೂತರು. ಹುಡುಗನ ನೋಟ ತಗ್ಗಿ
ಅವಳ ಬೆರಳ ಮೇಲೆ ನಿಂತಿತು. ಉಂಗುರಗಳ ಭಾರಕ್ಕೆ
ಕುಗ್ಗಿದ ಬೆರಳು, ಹಿಮ ಬಿದ್ದ ನೆಲದಲ್ಲಿ ಕಷ್ಟಪಡುವ ನೇಗಿಲಂತೆ
ಪಿಯಾನೋದ ಬಿಳಿಯ ಮನೆಗಳ ಮೇಲೆ ಭಾರವಾಗಿ ಆಡಿದವು.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke