ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಮಧುರಾ ಯೋಚಿಸುತ್ತಾ ಕೂತರೆ ಸ್ಟವ್ ನಲ್ಲಿಟ್ಟ ಹಾಲು ಉಕ್ಕಿ ಹೋದರೂ ಅವಳ ಗಮನಕ್ಕದು ಬರುತ್ತಲೇ ಇರಲಿಲ್ಲ. ಸಾರು ಅಡಿಹಿಡಿದು ಕಮಟು ವಾಸನೆ  ಇಡುಗಿದರೂ ಮೂಗಿಗದು ಬಡಿಯುತ್ತಿರಲಿಲ್ಲ. ದಿನವಿಡೀ ಯೋಚಿಸಿ ಅತ್ತೆಯಿಂದ ಬೈಗಳು ತಿಂದದ್ದು ಅದೆಷ್ಟು ಬಾರಿಯೋ. ಪಂಚಾಯತ್ ವ್ಯವಹಾರ, ಪಾರ್ಟಿ ಪಂಡು ಎಂದು ರಾಜಕೀಯದಲ್ಲೇ ಮುಳುಗಿರುವ ಮಾವನಿಗೆ ಮನೆಯ ಬಗ್ಗೆ ಗೊಡವೆಯೇ ಇರಲಿಲ್ಲ. ಗಂಡನಿಂದ ಸಿಗುವುದು ಒಂದೇ. ಬೈಗಳು.

ಇದೇ ಗಂಡ ಮದುವೆಗೆ ಮೊದಲು ಹೇಳುತ್ತಿದ್ದ ಆ ಮಧುರ ಮಾತುಗಳೋ ಮೈ ಇಡೀ ರೋಮಾಂಚನ ಉಂಟುಮಾಡಿ ಕನಸಲ್ಲಿ ತೇಲುವಂತೆ ಮಾಡುತ್ತಿದ್ದವು. “ನೋಡು ನನ್ನ ಮನೆಯ ಹೆಸರು ನೂಪುರ. ಇದು ನಿನ್ನ ಕಾಲಿನ ಗೆಜ್ಜೆ ನೋಡಿ ಇಟ್ಟ ಹೆಸರು. ನೂಪುರಕ್ಕೆ ಒಡತಿ ಮಧುರಾ. ನನ್ನ ಹೃದಯದಲ್ಲಿ ನಿನ್ನ ಹೆಜ್ಜೆ ಮಧುರ ನಿನಾದ ಹೊರಡಿಸಬೇಕು. ಆಗ ಬಾಳು ಆನಂದದಾಯಕವಾಗಿರುತ್ತದೆ.”

ಅವಳಾಗ ನಕ್ಕು ಕೇಳಿದ್ದುಂಟು “ಕತೆ ಕಾದಂಬರಿಗಳಿಂದ ನೀನು ಮಾರು ದೂರ. ಈ ಡೈಲಾಗು ಯಾವ ಸಿನಿಮಾದ್ದು ಹೇಳು.” ಅವನದಕ್ಕೆ ನಕ್ಕು, “ನೀನೆ ಒಂದು ಕಾವ್ಯ. ನಿನ್ನನ್ನು ನೋಡುವಾಗ ಪದಪುಂಜ ಪುಂಖಾನುಪುಂಖವಾಗಿ ಬರುತ್ತದೆ. ನಾನೂ ನಿನ್ನ ಹಾಗೆ ನರ್ತಿಸುವ ಛಾನ್ಸು ಇದೆ.” ಅವಳಾಗ ಕನಸು ಕಟ್ಟಿದ್ದಳು ಇವನಿಗೂ ಕುಣಿತ ಕಲಿಸಬೇಕು. ಇವನನ್ನು ವಿಶ್ವಾಮಿತ್ರ ಮಾಡಿ ತಾನು ಮೇನಕೆ ಯಾಗಬೇಕು. ಇವನನ್ನು ಮನ್ಮಥ ಮಾಡಿ ತಾನು ರತಿಯಾಗಬೇಕು. ಅವನೊಡನೆ ಹೇಳಿದಾಗ ಅವನು ಹೇಳಿದ್ದ. “ನೀನು ಶಕುಂತಲೆ ಯಾಗು. ನಾನು ದುಷ್ಯಂತನಾಗುತ್ತೇನೆ.”

ಆಗವಳು ಅದೊಂದು ಜೋಕು ಎಂಬಂತೆ ನಕ್ಕಿದ್ದಳು. “ನೀನು ತಾಳೆ ಮರದಷ್ಟು ಎತ್ತರ ಇದ್ದೀಯಾ. ಕಿರೀಟ ಇಟ್ರೆ ಮತ್ತೂ ಒಂದು ಅಡಿ. ನಿನ್ನ ಅರ್ಧಕ್ಕೂ ನಾನು ಬರಲಿಕ್ಕಿಲ್ಲ.” ಅವನಾಗ ಅವಳ ಮೂಗು ಹಿಂಡಿ “ದುಷ್ಯಂತ ನನಗೆ ಇಷ್ಟದ ಪಾತ್ರ. ಅವ ನರ್ತಿಸದಿದ್ದರೂ ನಡೆಯುತ್ತದೆ. ಅವನಿಗೆ ಅದೆಷ್ಟು ಮಂದಿ ಪ್ರೇಯಸಿಯರು! ಅವನ ಭಾಗ್ಯವೇ ಭಾಗ್ಯ” ಅವಳಿಗೆ ಸಿಟ್ಟು ಬಂದು ಮುಖ ಊದಿಸಿದಿದ್ದಳು. ಮತ್ತೆ ರಾಜಿಯಾಗಲು ಗಂಟೆಗಳೇ ಬೇಕಾಗಿದ್ದವು.

ಅಂದಿನ ಅವನ ಮಾತಿಗೆ ಈಗ ಅವಳಿಗೆ ಅರ್ಥ ಗೊತ್ತಾಗಿತ್ತು. ಅವನು ನಿಜಕ್ಕೂ ದುಷ್ಯಂತನೇ ಆಗಿದ್ದ. ಮದುವೆಗೆ ಮೊದಲಿದ್ದ ಮೃದು ಮಧುರ ಮಾತುಗಳೆಲ್ಲಾ ಈಗವನಿಗೆ ಮರೆತೇ ಹೋಗಿದ್ದವು. ಅಷ್ಟೇ ಅಲ್ಲ.”ನೀನು ಗೆಜ್ಜೆ ಕಟ್ಟಿ ಮನೆಯಲ್ಲಿ ಬೇಕಾದರೆ ಕುಣಿ. ಹೊರಗೆಲ್ಲೂ ಕುಣಿಯಬಾರದು. ನೀನು ಕುಣಿಯುವಾಗ ಎಲ್ಲರೂ ನಿನ್ನನ್ನು ಆಸೆಗಣ್ಣು ಗಳಿಂದ ನೋಡುವುದು ನನಗಿಷ್ಟವಿಲ್ಲ. ನಮ್ಮದು ಅತಿ ಪ್ರತಿಷ್ಟಿತ ಕುಟುಂಬ. ಎಲ್ಲರೆದುರು ಕುಣಿಯುವ ಹೆಣ್ಣನ್ನು ನಮ್ಮಲ್ಲಿ ಯಾರೂ ಸಹಿಸುವುದಿಲ್ಲ.” ಆಗವಳು ನೊಂದು ಕೇಳಿದ್ದಳು. “ಮದುವೆಗೆ ಮೊದಲು ನೀನು ಹೇಳಿದ್ದೇನು? ಈಗ  ಆಡುತ್ತಿರೋದೇನು?” ಅವನದಕ್ಕೆ ಗಹಗಹಿಸಿದ್ದ, ” ನಾನು ನಿಜಕ್ಕೂ ದುಷ್ಯಂತನೇ. ನಾನು ಮೆಚ್ಚಿದ್ದು ನಿನ್ನನ್ನು. ನಿನ್ನ ನಾಟ್ಯವನ್ನಲ್ಲ. ಈಗ ನೀನು ಮರ್ಯಾದಸ್ಥರ ಸೊಸೆ. ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರಬೇಕು. ತಿಳಿಯುತಾ?” ಅವಳ ಕಣ್ಣೀರು ಅವನನ್ನು ಕರಗಿಸಲಿಲ್ಲ.

ಕುಣಿಯದೆ ಅದೆಷ್ಟು ದಿನಗಳಾಗಿದ್ದವೋ? ತನಗಿಬ್ಬರು ಅವಳಿ ಹೆಣ್ಣು ಮಕ್ಕಳಾದಾಗ ಅವಳಲ್ಲಿ ಆಸೆಯ ಕಿಡಿಯೊಂದು ಮೂಡಿತ್ತು. ಮಕ್ಕಳಾದರೂ ನೃತ್ಯ ಕಲಿತಾರು. ಗಂಡನಿಲ್ಲದಾಗ ಅವಳು ಮಕ್ಕಳಿಗೆ ಹೇಳಿ ಕೊಡಲು ಹೋದರೆ ಮೂರನೇ ಕ್ಲಾಸಲ್ಲಿ ಕಲಿಯುವ ಅವರು “ಹೋಗಮ್ಮಾ, ಈ ಹಳೇ ಡ್ಯಾನ್ಸು ಯಾರಿಗೆ ಬೇಕು?” ಎಂದು ಅವಳ ಆಸೆಗೆ ನೀರೆರಚಿ ಅದ್ಯಾವುದೋ ಹಾಡಿಗೆ ಸೊಂಟ ಕುಣಿಸುತ್ತಿದ್ದರು. ಅವಳಿಗೆ ಗಂಡನಮೇಲೆ ಮಾತ್ರವಲ್ಲದೆ ಮಕ್ಕಳ ಮೇಲೂ ಅಸಹ್ಯ ಮೂಡಿತ್ತು.

ವರ್ಷಗಳು ಉರುಳಿದವು. ಮಕ್ಕಳೀಗ ಐದರಲ್ಲಿದ್ದಾರೆ. ಕಾಲೇಜು ವಾರ್ಷಿಕೋತ್ಸವಕ್ಕೆ ದುಷ್ಯಂತ-ಶಕುಂತಲಾ ರೂಪಕ ಇರಿಸಿದ್ದನ್ನು ಮಕ್ಕಳು ಬಂದು ಅವಳಲ್ಲಿ ಉತ್ಸಾಹದಿಂದ ಹೇಳಿದ್ದರು. ಹಿರಿಯವಳು ದುಷ್ಯಂತ-ಕಿರಿಯವಳು ಶಕುಂತಲಾ. ಅದು ಭರತನಾಟ್ಯ ರೂಪಕ. ಶಾಲೆಯಲ್ಲಿ ಎಷ್ಟು ಕಲಿಸಿದರೂ ಅವರಿಗದು ಬರುತ್ತಲೇ ಇರಲಿಲ್ಲ. ಒಂದು ದಿನ ಇಬ್ಬರು ಅಳುತ್ತಾ ಬಂದರು. ಮಧುರಾ ಕಾರಣ ಹೇಳಿದಳು. “ನಾವು ಸರಿ ಹೆಜ್ಜೆ ಹಾಕದಿದ್ದರೆ ರೂಪಕದಿಂದ ನಮ್ಮನ್ನು ಬಿಟ್ಟೇ ಬಿಡುತ್ತಾರಂತೆ.” ಮಕ್ಕಳು ಸೂರ್-ಸೂರ್ ಎಂದು ಗೊಣ್ಣೆಯನ್ನು ಮೇಲಕ್ಕೆಳೆದುಕೊಂಡರು. ಮತ್ತೂ ಕೆಳಗಿಳಿದುದನ್ನು ನಾಲಿಗೆಯಿಂದ ನಿವಾರಿಸಿಕೊಂಡರು.

ಮಧುರಾ ಗಂಡನನ್ನು ನೋಡಿದಳು. ಅವನ ಮುಖದಲ್ಲಿ ಅಸಹ್ಯವಿತ್ತು. ಏನು ಮಾಡಬೇಕೆಂದು ಅವಳಿಗೆ ಗೊತ್ತಾಗಲಿಲ್ಲ. “ನಿಲ್ಲಿ ಮಕ್ಕಳೆ ನಾನೀಗ ಬಂದೆ” ಎಂದು ಒಳಗೆ ಓಡಿದಳು. ಟೇಪ್ ರಿಕಾರ್ಡರನ್ನು ಹುಡುಕಿ ಧೂಳು ಒರೆಸಿದಳು. ಅಲರಿಪು ಕ್ಯಾಸೆಟನ್ನು ಹುಡುಕಿದಳು. ಅದನ್ನು ಟೇಪ್ ರಿಕಾರ್ಡರ್ ಗೆ ಹಾಕಿ ಸ್ವಿಚ್ ಹಾಕಿದಳು. ಹಳೆಯ ಟೇಪ್ ಮೇಲಕ್ಕೆ ಬಂದು ಸ್ವರ ನಿಂತು ಹೋಯಿತು. ಅವಳು ಟೇಪನ್ನು ಹೊರತೆಗೆದು ನಯವಾಗಿ ಬ್ರಷ್ ಮಾಡಿ ಅದರ ತೂತಿಗೆ ಕೈ ಬೆರಳು ಹಾಕಿ ಅದನ್ನು ಸರಿಪಡಿಸಿದಳು. ಮತ್ತೆ ಟೇಪ್ ರೆಕಾರ್ಡರಿಗೆ ಹಾಕಿ ಸ್ವಿಚ್ ಒತ್ತಿದಳು. ಆಗ ಅಲರಿಪು ಸ್ಪಷ್ಟವಾಗಿ ಕೇಳಿಸತೊಡಗಿತು.

ತದ್ಧಿ ತಕ್ಕಿಟ ತಕ ತೋಂ
ತಕಧಿತ್ ತಕ್ಕಿಟ ತಕ ತೋಂ
ಕಿಟತಕ ತೋಂ ಕಿಟತಕ ತೋಂ
ತಾ….ತೈ ತೈ ದಿತ್ತಾಂ.

ಅವಳ ಕಾಲುಗಳು ತಾಳಕ್ಕೆ ತಕ್ಕಂತ ಕುಣಿಯ ತೊಡಗಿದವು. ಎಷ್ಟು ಹೊತ್ತೋ? ಟೇಪ್ ರಿಕಾರ್ಡರ್ ನಿಂತಾಗ ಅವಳ ನೃತ್ಯ ನಿಂತಿತು. ಅವಳು ಸುತ್ತಲೂ ಕಣ್ಣಾಡಿಸಿದಳು. ಅವಳನ್ನೇ ಎವೆಯಿಕ್ಕದೆ ಗಂಡ ನೋಡುತ್ತಿದ್ದ. ಮಕ್ಕಳು ಕಣ್ಣನ್ನು ಪಿಳಿಪಿಳಿ ಮಾಡಿ ಅವಳನ್ನೇ ನೋಡುತ್ತಿದ್ದವು. ಅವಳೆಂದಳು. “ಮಕ್ಕಳೇ ನನ್ನ ಮಕ್ಕಳಾಗಿ ನಿಮಗೆ ನೃತ್ಯ ಯಾಕೆ ಬರುವುದಿಲ್ಲವೆಂದು ನೋಡುತ್ತೇನೆ.”

ಅವಳು ಒಳಗಿನಿಂದ ಮಣೆಯೊಂದನ್ನು ತಂದಳು. ಕೈ ಯಲ್ಲೊಂದು ಕೋಲು. ಪದ್ಮಸನ ಹಾಕಿ ಕೂತಳು. ಮಕ್ಕಳನ್ನು ಬಳಿಗೆ ಕರೆದು ಭೂಮಿಗೆ ನಮಸ್ಕಾರ ಮಾಡಿಸಿದಳು. ಆಮೇಲೆ ಮಣೆಗೆ ಮತ್ತು ತನಗೆ ನಮಸ್ಕಾರ ಮಾಡಲು ಹೇಳಿದಳು. ಮಕ್ಕಳು ಅವಳು ಹೇಳಿದ್ದನ್ನೆಲ್ಲ ಕೇಳಿದರು. ಗಂಡ ಆಶ್ಚರ್ಯದಿಂದ ನೋಡುತ್ತಿರುವಂತೆ ಕೋಲಿನಿಂದ ಮಣೆಗೆ ತಾಳ ಹಾಕ ತೊಡಗಿದಳು.

ತೈಯ ತೈಯಿ ತೈಯ ತೈಯಿ

ತಕತದಿಗಿಣತೋಂ.

ಮಕ್ಕಳಿಗೆ ಏನು ಮಾಡಬೇಕೆಂದು ತೋಚಲೇ ಇಲ್ಲ. ಅವಳು ಎದ್ದು ನಿಂತಳು. ಬಾಯಲ್ಲಿ ತಾಳವನ್ನು ಹೇಳುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕತೊಡಗಿದಳು. ಈಗ ಮಕ್ಕಳು ನಿಧಾನವಾಗಿ ಅಮ್ಮನನ್ನು ಅನುಸರಿಸತೊಡಗಿದರು. ಅವಳು ತಾಳಗಳನ್ನು ಮುಂದುವರಿಸಿದಳು.

ತೈಯುಂದತ್ತಾ ತೈಯಿಂ ತಾಹಾ
ತೈಯುಂದತ್ತಾ ತಕತದಿಗಿಣ ತೋಂ.

ಮಕ್ಕಳ ಹೆಜ್ಜೆ ಸರಿಯಾದುದನ್ನು ಕಂಡು ಸಂತೃಪ್ತಿ ಯಿಂದ ಆದಿತಾಳದಿಂದ ರೂಪಕಕ್ಕೆ ಹೋದಳು.

ಧಿಧಿತೈ ಧಿಧಿತೈ ಧಿದಿತೈ  ಧಿಧಿತೈ.

ತಕ್ಕಿಟ ತಕ್ಕಿಟ ತಕ್ಕಿಟ ತಕ್ಕಿಟ

ತಕ್ಕಿಟ ತಕ್ಕಿಟ ತಕ್ಕಿಟ ತದಗಿಣತೋಂ.

ಮಕ್ಕಳ ಕಾಲುಗಳು ವೇಗವಾಗಿ ನರ್ತಿಸತೊಡಗಿದವು. ಅವಳಿಗೆ ಇನ್ನಿಲ್ಲದ ಹುರುಪು ಬಂದು ತಾಳಗಳನ್ನು ಹೇಳುತ್ತಲೇ ಹೋದಳು. ಮಕ್ಕಳು ಕುಣಿತ ನಿಲ್ಲಿಸಲಿಲ್ಲ. ಕೊನೆ ಗುಮ್ಮೆ ಅವಳು ತಾಳ ನಿಲ್ಲಿಸಿದಳು. “ಈಗ ನೀವು ನನ್ನ ಮಕ್ಕಳು ಹೌದು.”ಎಂದಳು. ಗಂಡನತ್ತ ತಿರಿಗಿ “ಏನು ಹೇಳುತ್ತೀರಿ ? ಮಕ್ಕಳು ನೃತ್ಯ ರೂಪಕದಿಂದ ವಂಚಿತರಾಗುವುದು ನಿಮಗೆ ಇಷ್ಟ ಎಂದಾದರೆ ನಾನೇನೂ ಹೇಳುವುದಿಲ್ಲ. ” ಎಂದಳು. ಅವನು ಮಾತಾಡಲಿಲ್ಲ.

ಮತ್ತೆ ಮನೆಯಲ್ಲಿ ಹೆಜ್ಜೆಗಳು ಕುಣಿಯ ತೊಡಗಿದವು. ಗೆಜ್ಜೆಯ ಸ್ವರಗಳು ಕೇಳಿ ಬರತೊಡಗಿದವು. ಶಕುಂತಲೆ-ದುಷ್ಯಂತರ ಹಾಡುಗಳು ಅವಳ ಮಧುರ ಕಂಠದಿಂದ ಹೊರಬರತೊಡಗಿದವು. ತಾನೇ ಶಕುಂತಲೆ ಯಾದಂತೆ ತನ್ನ ಗಂಡನೇ ದುಷ್ಯಂತನಾದಂತೆ ಅನುಭವಿಸಿಕೊಂದು ಅವಳು ಕುಣಿದಳು. ವಿವಾಹ ಪೂರ್ವದ ಅವಳ ದಿನಗಳೆಲ್ಲ ಮತ್ತೆ ಮರುಕಳಿಸಿದಂತಾಯಿತು. ಬತ್ತಿದ ಜೀವನದಿಯಲ್ಲಿ ಹೊಸನೀರು ಹರಿಯ ತೊಡಗಿತು. ಜೀವನವೆಂದರೆ ಅಡುಗೆ ಮಾಡುವುದು, ಮಕ್ಕಳನ್ನು ಹೆರುವುದು ಮತ್ತು ಯಾರ್ಯಾರ ಮದುವೆ, ಮುಂಜಿ, ಮನೆ ಒಕ್ಕಲುಗಳಿಗೆ ಹೋಗುವುದು ಎಂದು ಭಾವಿಸಿಕೊಂಡಿರಬೇಕಾಗಿದ್ದ ಅನಿವಾರ್ಯತೆಯಿಂದ ಅವಳೀಗ ಹೊರಬಂದಳು.

ಶಾಲಾ ವಾರ್ಷಿಕೋತ್ಸವಕ್ಕೆ ಅವಳ ಗಂಡನೂ ಬಂದಿದ್ದ. ಎದುರು ಸಾಲಲ್ಲೇ ಪತಿಯೊಡನೆ ಕೂತು ಅವಳು ಕಾರ್ಯಕ್ರಮದಲ್ಲಿ ತಲ್ಲೀನಳಾದಳು. ಎಲ್ಲದಕ್ಕಿಂತ ಚೆನ್ನಾಗಿ ಮೂಡಿ ಬಂದದ್ದು ಅವಳ ಮಕ್ಕಳ ರೂಪಕ. ಕೊನೆಯಲ್ಲಿ ಅವಳ ಇಬ್ಬರು ಮಕ್ಕಳಿಗೂ ವಿಶೇಷ ಬಹುಮಾನ ನೀಡುವಾಗ ಅವಳ ಕಣ್ಣುಗಳಲ್ಲಿ ಧಾರಾಕಾರ ನೀರು.

ಅವಳನ್ನು ಮಕ್ಕಳೊಡನೆ ಮನೆಯಲ್ಲಿ ಬಿಟ್ಟು ಗಂಡ “ನಾನೀಗ ಬಂದೆ” ಎಂದು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ನಗರದತ್ತ ಹೋದ. ಅವಳು ಮನೆಯ ಬಾಗಿಲು ತೆಗೆದು ಡ್ರೆಸ್ಸು ಬದಲಾಯಿಸಿ ಮಕ್ಕಳಿಗೆ ಸ್ನಾನ ಮಾಡಿಸಿ ಊಟಕ್ಕೆ ಬಟ್ಟಲಿಡುವಾಗ ಕಾಲಿಂಗೆ ಬೆಲ್ಲು ಸ್ವರ ಹೊರಡಿಸಿತು. ಬಾಗಿಲು ತೆರೆದಾಗ ಗಂಡ ನಿಂತಿದ್ದ. ಪೊಟ್ಟಣವೊಂದನ್ನು ಅವಳ ಕೈಗಿಡುತ್ತಾ ಹೇಳಿದ. “ಇನ್ನು ಆ ಹಳೆಯ ಗೆಜ್ಜೆ ಕಟ್ಟಿ ಕುಣಿಯಬೇಡ. ನಿನಗಾಗಿ ಬೆಳ್ಳಿಯ ಗೆಜ್ಜೆಗಳನ್ನು ತಂದಿದ್ದೇನೆ.”
*****

Latest posts by ವೀಣಾ ಮಡಪ್ಪಾಡಿ (see all)