ಎಲ್ಲಿದ್ದರೇನು ಹೇಗಿದ್ದರೂ
ಏಕಾಂಗಿ ನಾನು
ಮುಚ್ಚಿಡಲಾರೆನು, ಬಿಚ್ಚಿಡಲಾರೆನು
ಭಾವನೆಗಳ ಮಹಾಪೂರ
ಕುಳಿತಿರಲಿ ಮಲಗಿರಲಿ ಬಂದು
ಮುತ್ತುವಿರಿ ಒಗಟಾಗಿ ನಿಂದು
ಬರುವಿರೇಕೆ ಮನದ ಗೂಡಿನೊಳಗೆ
ಕುಣಿಯುವಿರೇಕೆ ಪರದೆಯೊಳಗೆ
ಕಾಡುವಿರೇಕೆ ಕನಸುಗಳ
ಕತ್ತರಿಸುವಿರೇಕೆ.
ಜಡವಾಗಿ ಶಿಲೆಯಾಗಬಾರದೆ ನಾನು
ಬರುವಿರೇನು? ಬಂದು ಮಾಡುವಿರೇನು?
ಬರಡು ಹೃದಯಕೆ ಹೊಂಗೆ ನೆರಳಂತೆ
ತಂಪನೆರೆಯುವಿರೇನು?
ಕೊರಡಾದ ಬದುಕಿಗೆ ಚೈತನ್ಯದ
ಚಿಲುಮೆಯಾಗುವಿರೇನು?
ಕತ್ತಲಾದ ಮನಕೆ ಹೊಂಬೆಳಕ
ಪಸರಿಸುವಿರೇನು?
ಬತ್ತಿದ ಭಾವನೆಗಳ ಬಡಿದು
ಎಬ್ಬಿಸುವಿರೇನು?
ಬರಲಾರಿರಿ ಮನದ ಗೂಡಿನೊಳಗೆ
ಬಿತ್ತಲಾರಿರಿ ಸ್ನೇಹವಿಶ್ವಾಸದ
ಹರುಷ ಉತ್ಸಾಹದ ಬೀಜಗಳನು
ಎಲ್ಲಿದ್ದರೂ ಹೇಗಿದ್ದರೂ ಏಕಾಂಗಿ ನಾನು.
*****