ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ ಮಲಗಿದಳೆಂದರೆ ಹೇಳದ ಕೇಳದ ನಿದ್ದಿ ತೆಕ್ಕಿ ಬಡಿಯುತ್ತಿತ್ತು. ಹತ್ತು ಮಕ್ಕಳ ತಾಯಿ ನಾಗವ್ವ ಆರು ಹೆಣ್ಣು ನಾಲ್ಕು ಗಂಡು. ಐದು ಹೆಣ್ಣಿಗೆ, ಎಲ್ಲಾ ಗಂಡು ಮಕ್ಕಳಿಗೆ ಮದುವೀ ಮುಂಜೀ ಕುಬಸ ಅಂತ ಹತ್ತ ಎಕರೆ ಒಣ ಬೇಸಾಯದಾಗ ಹತ್ತಿ ಮಾಡಿ ಒಂದು ದಂಡೀಗ ಅಂತ ಬಂದು ನಿಂತಿದ್ದಳು. ಒಬ್ಬಾಕೀನ ಉಳಿದಾಳು ಸಾಲಿ ಮಾರಿ ಕಂಡಾಳ ಹ್ಯಾಂಗಾದ್ರು ದಾಟತಾಳ ಅಂತ ಅವಳ ಲೆಕ್ಕ. ನಡುವೆ ಆಲಮಟ್ಟಿ ಡ್ಯಾಮ್ ಎದಿದಾಟಿ ಎದ್ದು ನಿಂತಾಗ ಬಂದ ಪರಿಹಾರ ಎಲ್ಲಾ ಹೆಣ್ಣು ಮಕ್ಕಳ ಲಗ್ನದಾಗಿನ ಕುಬಸದಾಗಿನ ಬಾಕಿ ತೀರಿಸಿ ಸೊಸೆಯಂದಿರ ಮೊಮ್ಮಕ್ಕಳನ್ನು ಕರೆದುಕೊಂಡು ಹತ್ತು ಎಕರಿ ಹೊಲ ನಾಲ್ಕಂಕಣದ ಬಂಕದಮನಿ ನೀರಾಗ ತೇಲಿಸಿ ಸರಕಾರ ಕೊಟ್ಟ ಶೆಡ್‌ನಾಗ ಬಂದಾಗ ನಾಗವ್ವನಿಗೆ ಇಷ್ಟದಿವಸ ಒಳೆದ ಬದುಕು ಬಹಳ ಸಣ್ಣದು, ಇನ್ನ ಮುಂದಿನ ದಾರಿ ಬಹಳ ಉದ್ದುದ್ದ ಅನಿಸತೊಡಗಿತು.
ಹಿರೀ ಮಗಳನ್ನು ತನ್ನ ಖಾಸ ತಮ್ಮನಿಗೆ ಒತ್ತಾಯದಿಂದ ಕಟ್ಟಿದ್ದಳು. ನಾಗವ್ವ ಸ್ಟಾಂಪ್ ಪ್ಯಾಡಿನಂತಿದ್ದ ಗಿರಿಜಿಯನ್ನು ತಮ್ಮ ಮದುವೆಯ ಮೊದಲ ರಾತ್ರಿಯೇ ಇಂತಹ ಹೆಣ್ಣಿನ ಜೊತೆ ಹ್ಯಾಂಗ ಬಾಳೇವು ಮಾಡೋದು ಅಂತಾ ಸೀದಾ ಎದ್ದು ಹೋಗಿ ಲೈಟಿನ ಕಂಬದ ಕರೆಂಟ್ ವಾಯರ್ ಮುಟ್ಟಿ ಬಲಗೈ ಕಳೆದುಕೊಂಡು ಊರು ಬಿಟ್ಟು ದೇಶಾಂತರ ಹೊರಟು ಹೋಗಿದ್ದ. ಇಪ್ಪತ್ತೈದು ವರ್‍ಷಗಳ ಹಿಂದೆ ನಡೆದ ಮದುವೆ ಮುರಿದು ಬಿದ್ದದ್ದು ನಾಗವ್ವಳಿಗೆ ಯಾವ ಮಹತ್ವದ ಸಂಗತಿ ಎನಿಸಲಿಲ್ಲ. ಹಿರೇ ಮಗಳ ಹಿರಿತನದ ಜೋಡಾಗಿ ಮನೇಲಿ ಇರುತ್ತಾಳೆ ಎಂದಾದರೂ ತಮ್ಮನ ಮನಸ್ಸು ಸುದ್ದ ಆದರೆ ಹೊಳ್ಳಿ ಬಂದಾನು, ಬಾಳೇವು ಮತ್ತೆ ಕೂಡತಾವ ಅಂತ ವಿಚಾರ ಮಾಡಿ ತವರು ಮನೆಯವರು ಮಾಡಿದ ಗುನ್ನೆಯನ್ನು ಕ್ಷಮಿಸಿ ಬಿಟ್ಟಿದ್ದಳು. ಗಿರಜಿಯ ನಂತರದ ಹುಡುಗಿಯರೆಲ್ಲಾ ಮಾರಿ ಕೆಂಪಗ ಇದ್ದುದ್ದಕ್ಕೆ ಸರಸರ ಮದುವೆಯಾಗಿ ಗಂಡನ ಮನೆ ಸೇರಿಬಿಟ್ಟವು. ಇಪ್ಪತ್ತು ವರ್ಷ ತುಂಬುವದರೊಳಗೆ ಎರಡೆರಡು ಮಕ್ಕಳ ಬಸರ ಬಾಣಂತನ ಮಾಡಿಸಿಕೊಂಡುಬಿಟ್ಟವು. ಗಿರಜಿ ತಂಗಿಯರು ಗಂಡಂದಿರೊಂದಿಗೆ ತವರು ಮನೆಗೆ ಬಂದರೆ ತಂಗಿಯರು ಹಡೆಯಲು ಬಂದರೆ ಅವರ ಮಕ್ಕಳ ತೊಟ್ಟಿಲ ಕಾರ್‍ಯ ತಮ್ಮಂದಿರಿಗೆ ಹೆಣ್ಣು ನೋಡಲು ಹೋಗುವಾಗ ಎಲ್ಲದರಲ್ಲೂ ತಾನೇ ಹಿರಿಯಳು, ತಾನೇ ಹೇಳಿದ ಮಾತುಗಳು ನಡೆಯಬೇಕೆಂದು ಹಠ ಮಾಡುತ್ತಿದ್ದಳು. ನಾಗವ್ವ ಮಗಳ ಬಾಳೇ ಸುದ್ದ ಇಲ್ಲ. ಮನಸ್ಸಿನೊಳಗೆ ಕಿರಿಕಿರಿ ಇಟ್ಟಕೊಂಡಾಳ ಕಟ್ಟೆ ಕಟ್ಟಿಗೆ ಇಲ್ಲ ಅದಕ ಒಂದು ಕೊರತಿ ಐತಿ ಅಂತ ಕಲ್ಲಹಾಕಿ ತನ್ನ ಉಳಿದ ಹೆಣ್ಣುಮಕ್ಕಳು ಗಂಡು ಮಕ್ಕಳಿಗೆ ತಾಕೀತು ಮಾಡಿದ್ದಳು. ಗಿರಜವ್ವ ಹೇಳಿದ ಹಾಗೆ ಕೇಳಬೇಕೆಂದು ತಂಗೀರು ತಮ್ಮಂದಿರು ಹೀರಿ ಅಕ್ಕನ ಬಾಳೇವು ಸುದ್ದ ಇಲ್ಲ ಅಂತ ಅವಳು ಎಷ್ಟು ದರ್‍ಪ ದುಮ್ಮಾನ ತೋರಿದಳು ರಮಿಸಿ ಅವಳು ಹೇಳಿದಾಂಗ್ಹ ಕೇಳಿ ತಮ್ಮ ಮನಸ್ಸಿಗೆ ಒಗ್ಗದಿದ್ದರೂ ಗಿರಿಜಿಯ ಮಾತುಗಳನ್ನು ಅಕ್ಷರ ಅಕ್ಷರ ಪಾಲಿಸುತ್ತಿದ್ದರು.
ಒಮ್ಮೆ ಮೂರನೇ ತಂಗಿ ಶಂಕರಿ ತನ್ನ ಗೋವಾದಲ್ಲಿ ದುಡಿಯುವ ಗಂಡನೊಂದಿಗೆ ತವರಿಗೆ ಬಂದಿಳಿದಾಗ ಗೋವಾ ಬೀಚಿನ ಬಣ್ಣದ ಬಳೆಗಳು, ಪರ್‍ಸುಗಳು, ಬಣ್ಣದ ಚಪ್ಪಲಿ ಕೈ ಉಗುರಿಗೆ ಹಚ್ಚುವ ನೇಲಪಾಲೀಸ್, ಬಣ್ಣದ ಮಣಿಸರ, ಬಣ್ಣದ ಕನ್ನಡಕ, ಬಣ್ಣದ ಬಟ್ಟೆಗಳೊಂದಿಗೆ ಬಂದಾಗ ಗಿರಿಜಿಗೆ ಒಮ್ಮಿದೊಮ್ಮೆಲೇ ಹೇಳಲಾಗದ ಹೊಟ್ಟೆಕಿಚ್ಚು ಹೊತ್ತಿಕೊಂಡು ಬಿಟ್ಟಿತು. ತಂಗಿ ತಂಗಿಗಂಡ ಇದ್ದ ದಿವಸವೆಲ್ಲಾ ಅವರವ್ವನಿಗೆ ಹೆಚ್ಚಿಗೆ ಅಡಿಗೆ ಮಾಡದಿರಲು ಹೇಳಿದಳು. ನಾಗವ್ವ ಹಡೆದ ಕಳ್ಳ ಕೇಳಬೇಕಲ್ಲ. ಮಗಳು ಗೋವಾದಾಗ ಯಾವ ಹಬ್ಬ ಹುಣ್ಣವಿ ಅಂತ ಆಚರಿಸ್ಯಾಳು ಒಂದು ಸಾರಿ ಬ್ಯಾಳಿಗೆ ಹಾಕಿ ಹೋಳಗಿ ಮಾಡಬೇಕಂತ ನಿರ್‍ಧರಿಸಿ ಬಿಟ್ಟಳು. ಆದರೆ ಗಿರಿಜಿಯ ಹಠದ ಮಾತುಗಳು ಅವಳನ್ನು ಕಟ್ಟಿ ಹಾಕಿದ್ದವು.
ನೀನು ಹೀಂಗ ಅವರ ಬಂದಾಗಲೆಲ್ಲಾ ಬ್ಯಾಳಿ ಹಾಕಿ ನನ್ನ ಹೆಣಾ ಎತ್ತತಿ ನಾನ್ ಎಷ್ಟು ಅಂತ ಸಣ್ಣ ಆಗೋದ ಒಬ್ಬರ ತಪ್ಪಿದ ಮ್ಯಾಲೆ ಒಬ್ಬರ ಸೊಸೆಯಂದಿರಿಗೆ ಹೇಳುವ ತಾಕತ್ತಿಲ್ಲ. ಒಬ್ಬಬ್ಯಾಕಿ ಒಂದೊಂದು ನೆವ ಹೇಳಿ ಸರಿಕೊಳ್ಳುತ್ತಾರೆ. ಎಷ್ಟು ದಿವಸ ಅಂತ ನನ್ನ ದಗದಕ್ಕೆ ರುಬ್ಬತ್ತಿ. ಏನೂ ಹವಣಿಸಿಕೊಳ್ಳಬೇಡ ಅಂದ್ರ ಕೇಳುವುದಿಲ್ಲ. ನನ್ನ ಬಾಳೇನು ತವರಮನಿ ಅಂತ ಮೂಡಾಬಟ್ಟಿ ಮಾಡಿದಿ ಈಗ ಆಟ ಎಬ್ಬಸ್ತಿಯೇನ. ನಾನು ಏನು ಆದ್ರೂ ಹೋಳಗಿ ಮಾಡಕ ಬಿಡುವುದಿಲ್ಲ. ನೀ ಹ್ಯಾಂಗ ಮಾಡತೀ ನೋಡ್ತೀನಿ ಅಂತ “ಬಂದ ತಂಗೀ ಗಂಡರ ಮುಂದ ಒದರಾಡಿದ್ದಳು. ಗಿರಜಿ ನಾಗವ್ವನ ಮನಸ್ಸು ತಡೀಲಿಲ್ಲ. ಇದಕ್ಕೆ ಸಲಿಗೆ ಕೊಟ್ಟಿದ್ದೇ ಹೆಚ್ಚಾಯ್ತು ಅಂತ ಇದರ ಹಠ ಇದ್ದದೇ ಹೀಂಗ ಎಲ್ಲದಕ್ಕೂ ಹೂಂ ಅನಕೂತ ಹೋದ್ರ ಯಾವ ಹೆಣ್ಣುಮಕ್ಕಳು ಹೊಸಲ ತುಳಿದಾಂಗ್ಹ ಮಾಡ್ತಾಳೆ ಮನಿ ಯಜಮಾನಿ ನಾನು ನನಗೆ ನನ್ನ ಮಕ್ಕಳಿಗೆ ತಿಳಿಸಿ ಉಣಿಸೋ ಹಕ್ಕಲ್ಲ ಅಂದ್ರೆ ಹ್ಯಾಂಗ. ಇದು ಮನಿಮೂಲ ಆಗಿ ಎಲ್ಲರ ಜೀವ ತಿನ್ನಾಕ ಹತೈತಿ” ಅಂತ ಸೊಸೆಯರ ಮುಂದ ಮಗಳ ಮೊಂಡತನ ಚಾಲಿ ಅಂತ ಹೇಳಿ ಆ ದಿವಸ ಬ್ಯಾಳಿ ಹಾಕಿ ಬಿಟ್ಟಳು.
ಗಿರಿಜಿಗೆ ಬ್ಯಾಳಿ ಬೆಲ್ಲದ ವಾಸನಿ ಮೂಗಿಗೆ ಹೊಡಿತೋ ದಂದಕ್ಕಿಯಲ್ಲಿ ಕುಳಿತ ಜ್ವಾಳಾ ಹಸನು ಮಾಡುತ್ತಾ ಕೆಲಸ ಅಲ್ಲೇ ಕೈಬಿಟ್ಟು ಸೀದಾ ಅಡುಗೆ ಮನೆಯೊಳಗೆ ಬಂದು ಹಣುಕಿ ಹಾಕಿದಾಗ ಅವ್ವ ತನ್ನ ಮಾತು ಮೀರಿ ಬ್ಯಾಳಿ ಹಾಕಿದಳಲ್ಲ ಅಂತ ಹೇಳಲಾಗದ ಕಿರಿಕಿರಿ, ಅಸಹನೆ ಮನಸ್ಸಿನಲ್ಲಿ ತುಂಬಿಕೊಂಡು ಧುಮು ಧಮು ಹೆಜ್ಜೆ ಹಾಕುತ್ತಾ ದೇವರ ಮನೀ ಒಳಗೆ ಹೊಕ್ಕು ಬಾಗಿಲಾ ಇಕ್ಕಿಕೊಂಡು ಬಿಟ್ಟಳು. ಅಂದಿನಿಂದ ನಾಗವ್ವನ ಪ್ರಾರಬ್ಧ ಕರ್ಮ ಇನ್ನೊಂದು ತೆರನಾಗಿ ದೆವ್ವವಾಗಿ ಮನೀ ಹೊಕ್ಕೊಂಡು ಬಿಟ್ಟಿತು.
ಹೋಳಗಿ ಮುಗಿದು ಸಂಡಗೀ ಕರಿದು ಮೇಲೆಯೂ ಗಿರಿಜಿ ದೇವರ ಮನೆಯಿಂದ ಹೊರ ಬರಲಿಲ್ಲ ಅಂತ ನಾಗವ್ವ ಮನಸ್ಸಿನಲ್ಲಿ ಅಂದುಕೊಂಡು ಒಲೇ ಮುಂದಿನಿಂದ ಏಳುತ್ತ ಸೊಸೆ ಮಲ್ಲವ್ವನಿಗೆ ನಿಮ್ಮಕ್ಕನ ಊಟಕ್ಕೆ ಕರೀ ತಂಗಿ ಅಂತ ಕೈ ತೊಳೆಯಲು ಹೋದಳು. ಮಲ್ಲವ್ವ ದೇವರ ಮನಿ ಬಾಗಲಿಲ್ಲಿ ನಿಂತ ಯಕ್ಕಾ ಅಡಗಿ ಅನೈತಿ ಊಟಕ್ಕೆ ಬಾರೇ ಬೇ ಅಂತ ಕರೆದಾಗ ಗಿರಿಜಿ ಧಡ್ ಅಂತ ಬಾಗಿಲ ತೆಗೆದು ತನ್ನ ಕರೀ ಮಾರಿತುಂಬ ದೇವರ ತುರಬ ಬಿಚ್ಚಿ ಮೈಮ್ಯಾಗಿನ ಸೆರಗ ಖಬರಿಲ್ಲದ್ಹಾಂಗ ಹೊರಗೆ ಬಂದಾಗ ಸೊಸಿ ಮಲ್ಲವ್ವ ಯವಾ ಬೇ ಯವಾ ಬೇ ಅಂ ಜೋರಾಗಿ ಓಣಿ ಮಂದಿಗೆಲ್ಲಾ ಕೇಳುವಂತೆ ಕೂಗಿಕೊಂಡು ಬಿಟ್ಟಳು. ನಾಗವ್ವ ಶಂಕರಿ, ಶಂಕರಿ ಗಂಡ, ಸಣ್ಣ ಸೊಸಿಯಂದಿರು, ಎಲ್ಲರೂ ಒಂದೇ ಓಟಕ್ಕೆ ದೇವರ ಮನೆ ಬಾಗಿಲದಾಗಿ ಸೇರಿದಾಗ ಗಿರಿಜಿಗೆ ಒಳಗೊಳಗೆ ನಾಟಕದ ರಿಹರ್‍ಸಲ್ ಪಕ್ಕ ಎನಿಸಿ ಡೈಲಾಗ ಉದುರಿಸಲು ಪ್ರಾರಂಭಿಸಿಯೇ ಬಿಟ್ಟಳು.
“ನಾಯಾರ. ಗುಡ್ಡಹಾಕಿ ನಿಮ್ಮ ಮನೀ ದೇವರ ಏನ ನಡೆಕೊಂಡ್ರಿ ಮೈಲಿಗಿ ಆಗಿದೆ ಮನೀ ಯಜಮಾನ ಹೋದ ಮ್ಯಾಲ ಎಲ್ಲಾ ನಡೀಸೀ ಕೊಟ್ಟೇನಿ ಮಕ್ಕಳ ಮೆಟ್ಟಿಗೆ ಹಚ್ಚಿಟ್ಟೀನಿ ನನ್ನ ಮರತರೇನ. ಮೈಲಿಗಿ ಆಗೇದ ರಾಡಿ ಎಬ್ಬಿಸಿರೀ ಮೈಲಿಗೆ ಆಗೇದ ಬ್ಯಾಳಿ ಬೆಲ್ಲದಾಗ ಗಟಾರ ನೀರು ಕುಡಿಸಿದ್ದೀರಿ. ಮೈಲಿಗೆ ಆಗದ ನಾ ನನ್ನ ಮುಂದ ಕೇಳಾರ ಅಲ್ಲ ನನ್ನ ಬ್ಯಾಣಿ ನಡೆದುಕೊಳ್ಳಬೇಕು. ನಾ ಕೇಳಾಕಿ ಅಲ್ಲ ಈ ಮನಿ ಜಂತಿ ಕಳೆದು ಹೋಗ್ತಾವ ಮನಿ ಹೆಣ್ಣಮಕ್ಕಳ ಕಂಡೆ ಆಗ್ತಾರ ನನ್ನ ಖಬರ ಇಲ್ಲೇನ ಧೂಪಾ ಆಗಿಲ್ಲ ಮೈಲಿಗಿ ಆಗೇದ” ನೆಲದ ಮೇಲೆ ಬಿದ್ದ ಉಳ್ಳಾಡಿದ ಗಿರಿಜಿ ಕರಿಮುಖದಲ್ಲಿ ನಿಜವಾಗಿ ಗುಡ್ಡದಾಕಿ ಮುಖ ಕಂಡಂತಾಗಿ ನಾಗವ್ವ ಸೊಸೆಯಂದಿರಿಗೆ ಲಗೂನ ನೀರಿನ ಕೊಡ ತರವ್ವ ದೇವಿಗೆ ತಪ್ಪ ಒಪ್ಪಿಕೊಳ್ಳೋಣ ಅಂತ ಮಗಳಿಗೆ ಎರಡು ಕೈ ಮುಗಿದು ನಿಂತ ಬಿಟ್ಟಳು. ಹಾಂ ಹೂಂ ಹೇ ನಾ ಕೇಳಾಕಿ ಅಲ್ಲ ಗಿರಿಜಿಯ ಮೈತುಂಬಿದ ಗುಡ್ಡದಾಕಿ ಸವನ್ನೇ ಹೊಂಕರಿಸುತ್ತಿತು.
ಸೊಸೆಯಂದಿರ ನೀರಿನ ಕೊಡಪಾನ ತಂದು ಅದು ಸಾರಿಸುವ ನೆಲ ಎಂಬುದನ್ನೂ ಮರೆತು ದಬದಬ ಸುರಿದರು. ನೀರು ಸುರಿದ ನೆಲದಲ್ಲಿ ಹಕ್ಕಳೆಗಳು ಎದ್ದು ಬಂದವು. ಸಜ್ಜರೊಟ್ಟಿಯ ತುಣುಕುಗಳಂತೆ ತುಂಬಿದ ಚರಗಿ ಧೂಪಾ ತರವ್ವಾ ಎಂದು ನಾಗವ್ವ ಸೊಸೆಗೆ ಹೇಳುತ್ತಿದ್ದಂತೆ ಇಲ್ಲಾ ಇಲ್ಲಾ ಕರೀ ಕಂಬಳಿ ಹಾಸು ನಾನು ಗುಡ್ಡದಾಕಿ ಕಾಯಿ ಒಡೆ ಬಳಿ ಮಡಗು ನಾನು ಗುಡ್ಡದಾಕಿ ಗಿರಿಜಿ ಒಂದೇ ಸಮನೇ ಆದೇಶ ಹೊರಡಿಸಲು ಪ್ರಾರಂಭಿಸಿದಳು. ಯಾರೋ ಕಾಯಿಕರ್‍ಪೂರ ಬಳಿ ತರಲು ಪೇಟೆಯ ಕಡೆಗೆ ಓಡಿದರು. ಗಿರಿಜಿ ನೆನೆಸಿದ ನೆಲದ ಮೇಲೆ ಉರುಳಾಡಿದಳು. ಸಾರಿಸಿದ ಸಗಣಿ ಮಣ್ಣಿನ ಹಕ್ಕಳಿಗಳು ಮೈಕೈಗೆ ಅಂಟಿಕೊಂಡವು. ಚರ್ಮರೋಗಿಯಂತೆ ಕಂಡು ಬಂದಳು. ನಾಗವ್ವ ಮಗಳ ರೌದ್ರಾವತಾರ ನೋಡಿ ನಿವೇದಿಸಿಕೊಂಡ “ತಾಯಿ ತಪ್ಪಾಗೈತಿ ಉಡ್ಯಾಗ ಹಾಕೋ ಒಂಟಿಗಾಲಿ ಬದುಕು ಮುಡುಪು ಕಟ್ಟಿತ್ತೀನಿ ಗುಡ್ಡಕ ಬರ್‍ತೀನಿ ನಿನ್ನ ವಾಣಿ ಹಾಂಗ ನಡೆಕೊಳ್ಳುತ್ತೀನಿ ಸಮಾಧಾನ ಹೊಂದವ್ವ ನಿನಗ ಬ್ಯಾಡಾದ್ದು ನಮಗೂ ಬ್ಯಾಡ. ನಿನ್ನ ನಂಬಿ ಬಾಳೇವ ಕಟ್ಟಿಹಾಕಿ ನಾನು ಮೈಲಿಗೆ ತೊಳಿತಿನಿ ನಿನ್ನ ಹೆಸರನಾಗ ದಿನಾಲೂ ದೀಪಾ ಹಚ್ಚಾಕ ಹತ್ತೀನಿ ಗಂಡ ಇಲ್ಲದ ರಂಡಿಮುಂಡಿ ನಾನು ತುಂಬಿದ ಸಂಸಾರ ಭಾರ ಒಬ್ಬಾಕೀ ಹೊತ್ತೀನಿ ನಿನೇ ದಾರಿ ತೋರಿಸಬೇಕವ್ವ” ಅಂತ ಬಂದ ದುಃಖ ಹತ್ತಿಕ್ಕಿಲಾರದೇ ಗಿರಿಜಿಯ ಕಾಲು ಹಿಡಿದುಕೊಂಡು ದೊಡ್ಡಧ್ವನಿ ತೆಗೆದು ಅಳತೊಡಗಿದಳು.
ಮಧ್ಯಾನ್ಹ ಗಿರಿಜಿಯ ಮನಸ್ಸಿನಲ್ಲಿದ್ದ ನಾಟಕ ರಾತ್ರಿ ಎಂಟರವರೆಗೂ ಸೆಗಣಿ ಸಾರಿಸಿ ಕರಿ ಕಂಬಳಿ ಹಾಸಿ ಧೂಪ ದೀಪ ಕಾಯಿ ಒಡೆದು ಸಮಾಧಾನ ಮಾಡಲು ಸಾಗಿತು. ಸೊಸೆಯಂದಿರು ಓಡ್ಯಾಡಿ ಹೈರಾಣ ಆಗಿ ದಂಧಕ್ಕಿಯ ಕಂಬ ಹಿಡಿದು ಕುಳಿತಿದ್ದರು. ಗಿರಿಜಿಯ ತಮ್ಮಂದಿರು ಬಂಕಿದಲ್ಲಿ ಕುಳಿತಿದ್ದರು. ನಾಗವ್ವ ಸೆರಗ ತಗೊಂಡು ಗಿರಿಜಿಗೆ ಇನ್ನೂ ಗಾಳಿ ಬೀಸುತ್ತಲೇ ಇದ್ದಳು. ಮಧ್ಯಾನ್ಹ ಮಾಡಿದ ಹೋಳಿಗೆ ಸಂಡಗಿಗಳು ಆರಿ ಅಂಗಾರವಾಗಿ ಬಳಬಳ ಅನ್ನುತ್ತ ತಟ್ಟೆಯಲ್ಲಿ ಬಿದ್ದಿದ್ದವು. ಮೊಮ್ಮಕ್ಕಳು ಹಸಿವು ತಾಳದೇ ಹೋಗಿ ಎಳೆದು ತುಂಡುಮಾಡಿ ತಿಂದಿದ್ದವು. ಅಡಿಗೆ ಮನಿಯಾಗ ನೊಣದ ಹಿಂಡು ಝಂವ್ ಅಂತ ರಾಗ ಎಬ್ಬಿಸಿದ್ದವು. ಎಲ್ಲಾರು ಹೊಟೇಮ್ಯಾಲೆ ಆ ದಿನ ತಣ್ಣೀರ ಬಟ್ಟೆ ಎಳೆದು ಬಿಟ್ಟಿದ್ದಳು ಗಿರಿಜಿ.
ಗಿರಿಜಿ ಒಳಗೊಳಗೆ ಖುಷಿ ಎನಿಸತೊಡಗಿತು. ತನ್ನ ನಾಟಕ ಇಷ್ಟೊಂದು ದೀರ್‍ಘ ಪರಿಣಾಮ ಬೀರಬಹುದು ಎಂದೆನಸಿಕೊಂಡಿರಲಿಲ್ಲ. ಆಕೆ ಮಾಡಿದ ಹೋಳಿಗೆ ಯಾರೂ ಊಟ ಮಾಡಲಿಲ್ಲ ಉಳಿದವರ ಮಾರಿ ಕೆಂಪಗ ಆದ ಅರಿತ ಅವ್ವ ಇಷ್ಟೊಂದು ಹಾರಾಡ್ತಾಳೆ. ಅವರ ಗಂಡಂದಿರೆಲ್ಲ ಎಷ್ಟು ಚೆಂದಾ ತಮ್ಮ ಹೆಂಡಿರನ್ನು ಇಟ್ಟಕೊಂಡಾರ. ಮಾವ ಅದ್ಯಾಕ ಲೈಟಿನ ಕಂಬ ಹತ್ತಿ ಕೈ ಮುರಿದುಕೊಂಡ ಮದುವೆ ಆಗಿ ಈ ಅವಘಡ ಆದಾಗ ಗಿರಿಜಿಗೆ ಅದು ಅಷ್ಟೊಂದು ಮಹತ್ವದ ಅಘಾತ ಅನಿಸಿರಲಿಲ್ಲ. ಆದಾಗ ಅವಳಿಗೆ ಬರೀ ಹದಿನಾರು ವರ್ಷ ಡೊಡ್ಡಾಕಿ ಆಗಿ ಎರಡು ವರ್ಷ ಆಗಿದ್ದಕ್ಕೆ ನಾಗವ್ವ ತುಂಬಿದ ಮಕ್ಕಳ ಬಂಕ ನೋಡಿ ಇದನ್ನು ತವರಿಗೆ ಅಂಟಿಸಿದರೆ ಒಬ್ಬನೇ ತಮ್ಮ ಮುಂದಕ್ಕೆ ಬಲಹಿಡಿದಾನಲ್ಲ ಅವರಸರವಾಗಿ ಅವರವ್ವನೊಂದಿಗೆ ಗುಟ್ಟಾಗಿ ಮದವೀ ಮಾತುಕತಿ ಮುಗಿಸಿದ್ದಳು. ಗಂಡನನ್ನು ಲೆಕ್ಕಕ್ಕೇ ಹಿಡಿದಿರಲಿಲ್ಲ. ಸಹಜ ನಿಸರ್ಗದ ನಿಯಮಗಳಿಗೆ ಗಿರಜಿ ಕನಸುಗಳು ಜೇನುಗೂಡು ಕಟ್ಟಿದ್ದಳು. ಆದರೆ ನಾಗವ್ವನ ತಮ್ಮ ಮಾದೇವ ಅಕ್ಕನಿಗೆ ನೇರವಾಗಿ ಹೇಳಿದ್ದ ನಾನು ಗಿರಿಜಿನ ಮದುವೆ ಮಾಡಿಕೊಳ್ಳುವುದಿಲ್ಲವೆಂದು. ಆದರೆ ನಾಗವ್ವ ಹಿಡಿದ ಹಠ ಬಿಡಲಿಲ್ಲ. ತವರು ಮನಿ ಬಂಕಕ್ಕೆ ಕುಳಿತು ಅತ್ತೂ ಕರೆದು ಊರ ಹಿರೇರು ಕರೆದು ಪಂಚಾಯ್ತಿ ಮಾಡಿಸಿ ಮಾತು ಒಪ್ಪಿಕೊಳ್ಳುವಹಾಂಗ ಬಿದ್ದು ಹಿಡಿದು ಕುಂತಬಿಟ್ಟಳು.
ನಿದ್ರೆಯಲ್ಲಿ ಚಿಕ್ಕಚಂದ್ರಮರ ಕನಸಿನ ಕಟ್ಟಿಕೊಳ್ಳುತ್ತಿದ್ದ ಮಾದೇವನಿಗೆ ಉಗುಳು ನುಂಗದಿದ್ದಾಗಾಯ್ತು. ಹಠಮಾರಿ ಅವ್ವ ಅಕ್ಕರ ಮಾತಿಗೆ ಎರಡು ಮೂರು ತಿಂಗಳು ಉಡುಪಿ ಮಂಗಳೂರು ಕಡೆ ಹೋದಾವ ಅಲ್ಲಿಯ ಜರ್ರೋ ಅಂತ ಸುರಿಯುವ ಜಡಿಮಳೆಗೆ ಮಲೇರಿಯಾ ಹೊತ್ತು ವಾಪಸ್ಸು ಬಂದಾಗ ಅವ್ವ ಅಕ್ಕ ಉಪಚರಿಸಿ ಜ್ವರದ ಬಳಲಿಕೆ ನಿಶ್ಯಕ್ತಿ ದೇಹದಲ್ಲಿ ಇರುವಾಗಲೇ ಗಿರಿಜಿ ಮದುವಿಗೆ ಹೂಂ ಅನಿಸಿ ಕಾರ್‍ತಿಕ ಮಾಸದ ಒಂದು ಕತ್ತಲೆ ದಿನ ಕತ್ತಲೆಯ ಕಪ್ಪು ಮೀರುವ ಗಿರಿಜಿಯನ್ನು ಅವನ ಕೊಳ್ಳಿಗೆ ನೊಗ ಬಿಗಿದು ಬಿಟ್ಟರು. ಅರಸಿಣ ಎಣ್ಣೆ ಹಚ್ಚಿಕೊಂಡ ಸುರಗಿ ನೀರು ಹಾಕಿಕೊಂಡ ಗಿರಿಜೆ ಮೈ ಕೊಬ್ಬಿದ ಹಂದಿಮೈ ಕಂಡಂತಾಗಿ ಮಾದೇವ ಎದೆಯೊಡದ ಬಿಟ್ಟ.
ಚಿಗುರ ಮೀಸೆ ಚೆಲುವ ಕೆಂಪ ಮಾರಿ ಕಿವಿಯೂಕಿಚಿಕಟ್ಟು, ಝರಕಿ ಜಪ್ಪಲ ಹಾಕಿ ನಡೆದರೆ ಅವನ ಊರಿನ ಹುಡುಗಿ ಬೆಳದಿಂಗಳ ಹಾಡು ಹಾಡುತ್ತಿದ್ದರು. ಮಾದೇವನಿಗೆ ಲಿಂಬೆ ಹಣ್ಣಿನಂತಹ ಹಳದಿ ಮೈಯ ಹುಡುಗಿ ಕನಸಾಗಿ ಕಾಡಿದ್ದಳು. ನಮ್ಮಪ್ಪ ಅಕ್ಕ ಸೇರಕೊಂಡ ಬಾಳೇವ ಮೂರಾಬಟ್ಟೆ ಮಾಡಿಬಿಟ್ರ ಅಂತ ನಾನಿನ್ನ ಈ ಪ್ರಪಾತದಿಂದ ಮೇಲೇಳುವುದಿಲ್ಲ ಅಂತ ಅನಿಸಿಕೊಂಡು ಇನ್ನ ಇಂತಹ ಹೆಂಡತಿ ಕಟ್ಟಿಕೊಂಡು ಬದುಕಿರುವಕ್ಕಿಂತ ಸಾಯುವುದೇ ಮೇಲಂತ ಖಾತ್ರಿ ಮಾಡಿಕೊಂಡು ನೀರ ಆದ ಮೊದಲರಾತ್ರಿ ಹನುಮಪ್ಪ ಗುಡೀ ಮುಂದೆ ಇರುವ ಲೈಟಿನ ಕಂಬ ಏರಿ ಒಂದ ವಾಯರ್ ಹಿಡೀದೆಬಿಟ್ಟ. ಆಯುಷ ಗಟ್ಟಿ ಇತ್ತು. ಬಲಗೈ ಮಾತ್ರ ಕಳಕೊಂಡ ಮತ್ತ ಹೊಳ್ಳಿ ತನ್ನೂರಿಗೆ ಮಾದೇವ ಬರಲೇ ಇಲ್ಲ.
ಇಪ್ಪತ್ತೈದು ದಾಟಿದ ನಂತರ ಗಿರಿಜಿ ಅಲ್ಲಲ್ಲಿ ಮಾದೇವ ತಿರುಗಾಡುವ ಸುದ್ದಿ ಕೇಳಿ ಅವರವ್ವನನ್ನು ಉರಿಸಿಕೊಳ್ಳುವುದಕ್ಕೆ ಹತ್ತಿದಳು. ನಾನರ ಮೈ ಮ್ಯಾಗ ಬಿದ್ದ ಲಗ್ನ ಆಗೀನ ಏನ್ ನೀನ ಕುಂತ ಹೀಂಗ ಮಾಡಿದಿ ನನಗ ಹೊಲ ಹಚ್ಚ ಅಂತ ಹೇಳು ನೀ. ನೀ ಸಾಲಾಗಿ ಹಡಿಯುವವರ ನನ್ನ ಬಾಣಂತನ ಮಾಡಾಕ ಹಚ್ಚಿದಿ ಸಾಲಿಮುಂದ ಹಾಯಿಗೊಡಲಿಲ್ಲ. ನಿನ್ನ ರಾಡಿ ತೊಳೆಯುವದೊಳಗೆ ನನ್ನ ಮ್ಯಾರಿಗೆ ಕುಳ್ಳ ಹಚ್ಚಿದಯಲಬೇ. ಎಲ್ಲರನ್ನೂ ಒಟ್ಟಿಗೆ ಹಚ್ಚೇದಿ ನನ್ನ ಪಾಡೇನ. ಹೊಲ ಹೆಚ್ಚು ಇಲ್ಲ ಗಂಡ ಮಕ್ಕಳಿಗೆ ಹೇಳಿ ರೊಕ್ಕಾ ಇಡು. ಬಂಗಾರಾ ಮಾಡುಸು ಉದ್ದುದ್ದ ಬೇಡಿಕೆಯನ್ನು ಪಟ್ಟಿಗಳನ್ನು ಕಿರಾಣಿ ಅಂಗಡಿಲೇ ಸಾಮಾನು ತರುವಂತೆ ದಿನಾಲೂ ಮಂಡಿಸತೊಡಗಿದಳು.
ನಾಗವ್ವ ಗಂಡ ಮೊದಲ ಮಗಳ ಬಾಳೇದ ಬಗ್ಗೆ ಮನಸ್ಸಿನಲ್ಲಿ ಕರಗಿ ಹಡೆಯುವುದನ್ನು ನಿಲ್ಲೆಸಿಬಿಟ್ಟಾಗ ಮಕ್ಕಳ ಸಂಖ್ಯೆ ಹತ್ತಕ್ಕೆ ಏರಿತ್ತು. ಗಿರಿಜಿ ನೊಂದ ಮಾತನಾಡುವುದು ಖರೇ ಆಗಿತ್ತು. ಬಗಲಿಲ್ಲ ಏರಿಸಿಕೊಂಡು ಏರಿಸಿಕೊಂಡು ಓಣಾ ತಿರುಗಾಡಿದಾಗ ತಂಗಿ ತಮ್ಮಂದಿರ ಕೆಂಪ ಮಾರಿಗಳನ್ನು ಜನ ಹೊಗಳಿದಾಗ ಗಿರಿಜಿಗೆ ಇರುಸು ಮುರುಸು ಆಗುತ್ತಿತ್ತು. ಯ್ಯಾಕಾರ ನಾ ಕರಗ ಹುಟ್ಟೆದ್ನೆ ದೇವರೇ ಅಂತ ಅವಳು ಸಾವಿರಸಲ ದೇವರಲ್ಲಿ ಪ್ರಶ್ನಿಸಿದ್ದಳು. ಸಾಲಿಕಲೆಯದ ಗಿರಿಜವ್ವನಿಗೆ ತಮ್ಮಪ್ಪ ಕಪ್ಪ ಅದಾಳ ಆದಕ ತಾನೂ ಕರಗ ಆಗಿ ಹಂಗೆ ಹುಟ್ಟಿದ್ದಿರಬೇಕೆಂಬ ವಂಶ ಪಾರಂಪರೆಯ ವಿಷಯ ತಲೇಗಿ ಹೊಳಿಯಲೇ ಇಲ್ಲ. ಬರೀ ಹ್ಯಾಂವ್ ಮಾಡುತ್ತ ಹರೀತನ ಮಾಡುತ್ತ ಇಡೀ ಮನಿತನ ಸಾಮ್ರಾಜ್ಯ ಎಂದು ಅಳತೊಡಗಿದ ಗಿರಿಜಿಗೆ ಗಂಡ ಮಹಾದೇವ ತನ್ನನ್ನು ತಿರಸ್ಕರಿಸಿದ್ದು, ದೇಶಾಂತರ ಹೊರಟು ಹೋಗಿದ್ದು, ಹೇಳಲಾಗದ ಪೆಟ್ಟು ಕೊಟ್ಟುಬಿಟ್ಟಿತ್ತು. ಅವಳ ಅಹಂಗೆ ಈ ತಿರಸ್ಕಾರದ ವಿರುದ್ಧ ತನ್ನದೇ ರೀತಿಯಲ್ಲಿ ಪ್ರತಿಕಾರದ ನಕ್ಷೆಯನ್ನು ಗಿರಿಜಿ ಮನದಲ್ಲಿ ಹಾಕಿದ್ದಳು. ಅವ್ವ ಹಾಗೂ ಮನೆಯವರು, ತಮ್ಮಂದಿರ ಹೆಂಡಿರು, ತಂಗಿಯ ಗಂಡಂದಿರು ಸ್ವಲ್ಪ ಬೀಗಿ ಅಡ್ಡಾಡಿದರೆ ಸಾಕು ಗಿರಿಜಿ ದೇವರನ್ನು ಮೈ ತುಂಬಿಸಿಕೊಂಡು ಬಿಡುತ್ತಿದ್ದಳು.
ರೂಢಿ ಸಂಪ್ರದಾಯಗಳನ್ನು ನೆಚ್ಚಿ ಜೀವನ ದಾರಿ ಸವಿದಿದ್ದ ನಾಗವ್ವ ಗಿರಿಜಿಯ ಮೈಮೇಲೆ ದೇವರು ಬರುವುದು ತಾನು ಮಾಡಿದ ಪೂಜೆಯ ಪುಣ್ಯ ಅಂತ ಮೊದಮೊದಲು ತಿಳಿದುಕೊಂಡಿದ್ದಳು. ಹೈರಾಣ ಎನಿಸಿಕೊಳ್ಳದೇ ನೆಲಸಾರಿಸಿ ಕರಿಕಂಬಳಿ ಹಾಸಿ, ತುಂಬಿದ ಕೊಡ ಸುರಿದು ಮಗಳನ್ನು ಸಂಬಾಳಿಸುತ್ತಿದ್ದಳು. ಗಂಡ ಸತ್ತ ಮೇಲೆ ದೇವರು ಕಣ್ಣು ತೆರದಾಳ ನಮ್ಮ ಮನೀ ಒಳಗ ಅಂತ ಓಣ್ಯಾಗ ಅಡ್ಡಾಡಿ ಸುದ್ದಿ ಮುಟ್ಟಿಸಿ ಬರುತ್ತಿದ್ದಳು. ಅರೆವರೆ ಮನಸ್ಸಿನ ಹೆಣ್ಣುಮಕ್ಕಳು ತಮ್ಮ ನಸೀಬ ಕೂಡಾ ಹೇಳಕಿಯಿಂದ ತೆರಿತದ ಅಂತ ಸವಾರೂಪಾಯಿ ಹಿಡಕೊಂಡು ಗಿರಿಜಿಗೆ ಮೈಮ್ಯಾಗ ಬಂದಾಗ ಬಂದರೆ ಹತ್ತಿಪ್ಪತ್ತು ರೂಪಾಯಿ ಚಿಲ್ಲರೆ ಕಾಸು ಗಿರಿಜಿಯ ಫಂಡಿಗೆ ಬೀಳುತ್ತಿದ್ದವು. ಬಾಯಿಗೆ ಬರದ ಪರಿಹಾರ ಹೇಳುತ್ತ ಗಿರಿಜಿ ಮೆಲ್ಲಗೆ ತನ್ನ ಆದಾಯ ಹೆಚ್ಚಿಸಿಕೊಂಡಳು. ಬರೀ ಅರಸಿಣದ ಬಂಡಾರ ಕೊಡುತ್ತ ಜನರನ್ನು ಮಳ್ಳಮಾಡಿ ಬಿಟ್ಟಳು. ಭಾರತ ಹುಣ್ಣಿಮೆಗೆ ಗಿರಿಜಿಯ ತಂಡ ಗುಡ್ಡಕ್ಕೆ ಹೋಗಿ ಬರುವ ಖರ್‍ಚು ಉಳಿದು ಸೀರಿ ಕುಬುಸ ಕೂಡಾ ಮೈತುಂಬ ಆಗುತ್ತಿತ್ತು. ಮೊದಮೊದಲು ಯಾವಾಗಲಾದರೂ ಒಮ್ಮೆ ಈ ನಾಟಕ ಎಬ್ಬಿಸುತ್ತಿದ್ದ ಗಿರಿಜಿ ಈಗ ಪ್ರತಿ ತಿಂಗಳೂ ಆಟ ಆಡಾಕ ಶುರು ಮಾಡಿದಳು. ಸ್ವಲ್ಪ ದೂರ ಊರುದಾಟಿ ಹೋದವರು ಹೊಸಗಾಳಿ ಹೊಸ ಒಡನಾಟ ಹೊಂದಿದವರು ತವರಿಗೆ ಬಂದಾಗ ಕಾಗಿ ಗಿರಿಜವ್ವನ ಅವತಾರ ನೋಡಿ ಅವರವ್ವನ ಕಿವಿ ಊದತೊಡಗಿದರು. “ಯವ್ವ ಇದೆಂತಹ ಅಸಹ್ಯ ಮೈಯಾಗ ದೇವ್ರಬಂದ ನೀವ್ಯಾಕ ಹಿಂಗ ಇರತೀರಿ. ನಮ್ಮ ಗಂಡಸ ಮನ್ಯಾಗೆಲ್ಲ ನಮಗ ಹೆಂಗಸ್ತಾರ. ಜಗತ್ತು ಎಷ್ಟು ಮುಂದವರಿದ. ಇವೆಲ್ಲಾ ಮನಸ್ಸಿನ ಆಟಗಳುಬೇ, ಅಕ್ಕ ತನಗ ಸಿಗದಿದ್ದ ಸುಖಕ್ಕೆ ನಿನಗ ಹೀಂಗ ದಣಿಸಲಿಕ್ಕೆ ಹತ್ಯಾಳ ನೀ ಹೀಂಗ ಎಷ್ಟು ದಿವಸ ಅಂತ ಮೂಡನಂಬಿಕೆಯೊಳಗ ಇರತಿ. ಇದಕ್ಕೆ ನೀ ಮೊಣದಾಂಗ್ಹೆಲ್ಲಾ ಅಕೀ ನಿನ್ನ ಹಣಿತಾಳ, ಒಂದೆರಡ ಸರ್ತಿ ಅಲಕ್ಷ ಮಾಡತಾನ ಹಾದಿಗೆ ಬರತಾಳ ಎಷ್ಟು ದಿವಸ ಮನಸ್ಸಿನಲ್ಲಿ ಒಜ್ಜೆ ಹೊರತೀಬೇ ಮಾಮಾನ ಹೊಲನ ಆಕಿ ಹೆಸರಿಗೆ ಮಾಡಿ ಬಿಡು, ನಿನ್ನ ಕೈಬಿಡತಾಳ ಆಕಿ”
ಹೀಂಗ ಹೊಳಗಾಳಿ ಬೀಸಿದ ಮಕ್ಕಳು ಅಳಿಯಂದಿರು ಹೇಳಿದಾಗ ನಾಗವ್ವನಿಗೆ ಮನಸ್ಸಿನೊಳಗೆ ಖರೇ ಖರೇ ಅನಿಸತೊಡಗಿತು. ಇದನ್ನು ಹ್ಯಾಂಗ ಆದ್ರೂ ಹದ್ದು ಬಸ್ತಿನೊಳಗೆ ತರಬೇಕು ಮುಪ್ಪ ಹಗುರಾಗಿ ಕಳಿಬೇಕೆಂದವಳಿಗೆ ಸೊಸಿ ಮಗಳ ಮದುವಿ ಮಾಡಾಕ ಮೂರು ವರ್ಷದ ಬರಗಾಲದ ಬವಣಿಯಲ್ಲಿ ಹಗೀ ಹಾಕಿದ ಜ್ವಾಳಾ ಮಾರಿ ಎರಡೆತ್ತನ್ನೂ ಮಾರಿದರೂ ಹಣ ಹೊಂದಿಸಲು ಆಗಲೇ ಇಲ್ಲ. ಗಂಡ ಮಕ್ಕಳ ಸೊಸೆಯರು ಹೊಲ ಮಾರಾಕ ಅಡ್ಡ ಹಚ್ಚತೊಡಗಿದರು. ಹತ್ತ ಜನರು ಸಂಸಾರ ಸಾಗಿಸುವುದೇನ ಸಣ್ಣ ಮಾತೇನ. ಈಗಿನ ಕಾಲದೊಳಗೆ ಗಿರಿಜಿಯ ಮೈ ಮ್ಯಾಲಿನ ದೇವರು ಕಾಳುಕಡಿ ದಕ್ಷಣೆ ಅಂತ ಸಣ್ಣ ಆದಾಯ ತರುವಾಗ ಗಿರಿಜಿಯ ಆಟ ಪಾಠ ಅನಿಸತೊಡಗಿತು. ನಾಗವ್ವನಿಗೆ ಅವಳ ಮಗಳ ಮನಸ್ಸಿನ ಆಟಕ್ಕೆ ಕಡಿವಾಣ ಹಾಕಲು ಹಿಂದುಮುಂದು ನೋಡತೊಡಗಿದಳು.
ದಿನಗಳು ಉರುಳಿದವು ವಾರ ಕಳೆದವು, ತಿಂಗಳು ಸರಿದವು. ಬಂಕದ ಮನೆಯಲ್ಲಿ ಬೆಳಕು ಮೂಡುತ್ತಿತ್ತು. ಮತ್ತೆ ಬಯಲು ಸೀಮೆಯ ಮಧ್ಯಾನ್ಹದ ಬಿಸಿಲೇರುತ್ತಿತ್ತು. ದಳದಳ ಸುರಿಯುವ ಬೆವರಿನೊಂದಿಗೆ ನಾಗವ್ವ ಈಗ ಬಂಕದಲ್ಲಿ ಒಬ್ಬಂಟಿ ಗೋದಿ ಬೀಸುವ ಕಲ್ಲು ಮಾತ್ರ ಅವಳ ಮಧ್ಯಾನ್ಹದ ಏಕಾಂತಕ್ಕೆ ಜೊತೆಗೂಡುತ್ತಿತ್ತು. ಗಂಡ ಮಕ್ಕಳು ಬರದ ಝಳಕ್ಕೆ ಹೆಂಡಿರ ಕಟ್ಟಗೊಂಡು ಉಡುಪಿ, ಗೋವಾ, ಮಂಗಳೂರು ಅಂತ ಸೇರ್‍ಪಡೆಯಾದರು. ಹೆಣ್ಣುಮಕ್ಕಳು ಹುಡುಗರಿಗೆ ಸಾಲಿ ನೆವಹೇಳಿ ತವರುಮನಿ ಕಡೆ ತಲಿ ಹಾಕೂದ ಕಡಿಮೆ ಮಾಡಿದ್ರು.
ಹಟಮಾರಿ ಗಿರಿಜಿ ಒಂಟಿಗೂಗಿ ಆದಾಗ, ಮೈಮೇಲೆ ದೇವರ ಬರೋ ಆಟ ವರ್ಷಕ್ಕೊಮ್ಮೆ ರೂಢಿಸಿಕೊಂಡಳು. ಬಂದ ದಕ್ಷಿಣೆ ಫಂಡಿನಿಂದ ದೇವರ ಮುಖದ ತಾಳಿಸರ ಮಾಡಕೊಂಡು ಓಣ್ಯಾಗಿನ ಜೋಗತಿಯರ ಸಂಗ ಕಟ್ಟಿದಳು. ತಮಗೆ ಬೇಕಾದವರನ್ನು ಗೆಲ್ಲಲಾಗದವರು ಇನ್ನೊಬ್ಬರ ಮನಸ್ಸನ್ನು ಗೆದ್ದರೂ ಒಂದೇ ಸೋತರು ಒಂದೇ. ನಾಗವ್ವನಿಗೆ, ಒಣಮಾರಿ ಮಾಡಿಕೊಂಡು ಹಾಂಗ ಗೊತ್ತು ಗುರಿ ಇಲ್ಲದ ಗಿರಿಜಿ ಅಡ್ಡಾಡಿದಾಗ, ದೇಶಾಂತರ ಹೋಗಿದ್ದ. ಒಮ್ಮೆ ಆದ್ರೂ ಹೊಳ್ಳಿ ಬಂದ ತನ್ನ ಮನೀ ಆಗಿಲಿಗೆ ಬರಬಾರದಾ ಅನಿಸುತ್ತಿತ್ತು. ಮಗಳ ಕರಗ ಮಾರಿ ಮ್ಯಾಗಿನ ನೋವಿನ ಗೆರೆ ಕಂಡಾಗ ನಾ ಏನ್, ದೊಡ್ಡ ಗುನ್ನೆ ಮಾಡಿನ, ಅಂತ ರಾತ್ರಿ ಮಲಗಿದಾಗಲೆಲ್ಲಾ ಎದೀ ಚುಚ್ಚಿ ನಿದ್ದೀನ ಹತ್ತಿತ್ತಿದ್ದಿಲ್ಲ. ಬದುಕಿನ ಕಾಲ ಘಟ್ಟದಲ್ಲಿ ಜೋರಾಮಗಳನ್ನು ಯಾರ ಉಡಿಗೀ ಹಾಕಲಿ ದೇವ ಅಂತ ಕಣ್ಣೀರು ಹಾಕುತ್ತಿದ್ದಳು. ಚಿಂತಿ ಮಾಡಿ ಮನಸ್ಸ ದಣಿದಿತ್ತು. ಅದರ ಕೂಡಾ ಆಲಮಟ್ಟಿ ಡ್ಯಾಮ್ ಎತ್ತರ ಹೆಚ್ಚಿಸಿ ಚಿಂತಿ ಗೋಡೆ ಎದಿದಾಟಿ ಎದ್ದು ನಿಂತ ಬಿಟ್ಟಿತು. ಇದ್ದ ಮನಿ ಹೊದ್ದ ಹೊಲ ಆಟಮುಗಿಸಿ ಹಿನ್ನೀರರೊಳಗ ಕೊಚ್ಚಿಕೊಂಡು ಹೋದಾಗ ನಾಗವ್ವ ಸಂತ್ರಸ್ತರ ಶೆಡ್ಡಿಗೆ ತನ್ನ ಹಸಿರ ಸೆರಗ ಮರೆತು ಗಂಡು ಮಕ್ಕಳಿಗೆ ಸುದ್ದಿ ರವಾನಿಸಿ ಶೆಡ್ಡಿನೊಳಗೆ ಮಗಳು ಗಿರಿಜಿಯನ್ನು ಕರಕೊಂಡು ಇದ್ದ ಬಿದ್ದ ಸಮಾನನ್ನು ಗುಳೇ ಕಟ್ಟಿಕೊಂಡು ಬಂದುಬಿಟ್ಟಳು.
ಬಂಕದ ಮನೆಯಲ್ಲಿ ಎಷ್ಟು ಹೋರಾಟಗಳಿದ್ದರೂ, ಸುಳ್ಳುಗಳಿದ್ದರೂ, ಹೊರಗೆ ಬಿಸಿಲಿದ್ದರೂ ಒಳಗೆ ತನ್ನದೊಂದು ನೆರಳ ತಂಪು ನಾಗವ್ವನಿಗೂ ಗಿರಿಜಿಗೂ ಇದ್ದಿತ್ತು. ಶೆಡ್ಡಿನಲ್ಲಿ ಝಗಮಗಿಸುವ ರಾತ್ರಿಯ ನವನಗರದ ಲೈಟಿನ ಬೆಳಕಲ್ಲಿ ತಾಯಿ ಮಗಳಿಗಿಬ್ಬರಿಗೂ ತಾವೆಲ್ಲೋ ಕಳೆದುಹೋಗಿದ್ದೇವೆ ಅಂತ ಅನಿಸತೊಡಗಿತು. ಪರಿಹಾರದ ಮೊತ್ತ ಸಾಲಸೂಲವೆಲ್ಲಾ ತೀರಿಸಿ ಸ್ವಲ್ಪ ಉಳಿದಿತ್ತು ಬಂಡೀ ನಡೆಸುವುದು ಹ್ಯಾಂಗಂತ ಎದುಗುದಿ ಪ್ರಾರಂಭವಾಯ್ತು. ಮತ್ತು ಗಿರಿಜಿ ಶೆಡ್ಡಿನಲ್ಲಿ ತನ್ನ ಮನಸ್ಸಿನ ನಾಟಕಕ್ಕೆ ರಂಗ ಪ್ರವೇಶ ಮಾಡಿದಳು. ಚೂರುಪಾರು ಒತ್ತಾಸೆ, ಆಸರೆ ಚಿಗುರಿತು. ಒಂದೇ ಮನಸ್ಸಿನ ಒಂದೇ ತೊಳಲಾಟದ ಒಂದೇ ಗುರಿಯ ಮನಷ್ಯರು ಒಮ್ಮೊಮ್ಮೆ ಕಾಣದ ದೇವರ ಹೆಸರಲ್ಲಿ ಒಂದಾಗುತ್ತಾರೆ. ಹಳೇ ಬಾಗಲಕೋಟೆಯಲ್ಲಿ ನಕಲಿ ವೈದ್ಯನ ಆಟ ಶೇರುಪೇಟೆಯಾದರೆ ಎಲ್ಲೆಲ್ಲಿಂದ ಬಂದವರೂ ದೇವರ ಹೆಸರಿನಲ್ಲಿ ಆಟ ಎಬ್ಬಿಸಿದರು ನವನಗರದಲ್ಲಿ, ನಾಗವ್ವನಿಗೆ ಎಲ್ಲವೂ ಗೊಂದಲವಾಗುತ್ತದೆ. ಅಪರಿಚಿತ ಮುಖಗಳು, ಲೆಕ್ಕದ ಬದುಕು ದೂರವಾದ ಮಕ್ಕಳು ಸೊಸೆಯಂದಿರು ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ತಮ್ಮೂರ ಜನ ಹಬ್ಬ ಹುಣ್ಣಿಮೆಗಳು ತನ್ನ ಮನೆಯ ಅಂಗಳದ ಎಲ್ಲವೂ ಶೂನ್ಯ ಅನಿಸಿ ಸುಮ್ಮ ಸುಮ್ಮಕ ಅಳು ಬಂದು ಬಿಡುತ್ತಿತ್ತು. ಅವ್ವ ಅತ್ತಾಗಲೆಲ್ಲ ಗಿರಿಜಿ ಅಳಬೇಡ ಯವ್ವಾ ಗುಡ್ಡದ ದೇವತಿ ಅದಾಳ ಹ್ಯಾಂಗಾದ್ರೂ ದಾರಿ ತೋರಿಸ್ತಾಳ ಅಂದಾಗ, ಎಲ್ಲಾ ದಾರಿಗಳು ಬಂದಾಗ ಇದೊಂದೇ ನಡೆಯುವ ದಾರಿ ಗೋಚರಿಸಿತು ನಾಗವ್ವನಿಗೆ.
ಒಂಟಿತನದ ನರಕದಲ್ಲೂ ಶೆಡ್ಡಿನಲ್ಲಿ ದೇವರ ಹೂಗಳನ್ನು ಅರಳಿಸಿದಳು ಕರಿಗಿರಿಜಿ. ಹತ್ತೊಂಬತ್ತು ಹಾಗೂ ಇಪ್ಪತ್ತು ಇಪ್ಪತ್ತೊಂದು ವಿಭಾಗದ ನವನಗರದ ಶೆಡ್ಡುಗಳಲ್ಲಿ ಗಿರಿಜಿಯ ತೌರೂರಿಗೆ ಹೊಂದಿಕೊಂಡು ಇರುವ ಹಳ್ಳಿಗಳ ಜನರಿದ್ದರು. ಮಾರಿ ಪರಿಚಯ ಇಲ್ಲದಿದ್ದರೂ ಹಳ್ಳಿಗಳ ಹೆಸರುಗಳು, ಅವರವರ ಮಟ್ಟ ದೇವರು ದಿಂಡಿರು ಸಣ್ಣಪುಟ್ಟ ಉದ್ಯೋಗ, ಕಾರ್‍ಯಗಳು ಎಲ್ಲರನ್ನೂ ಒಂದು ಎಳೆಯಲ್ಲಿ ಬಂಧಿಸಲ್ಪಟ್ಟವು. ಬಣ್ಣ ಬಣ್ಣದ ತುಂಡುಗಳ ಬೆಚ್ಚನೆಯ ಕೌದಿಯಂತೆ ನವನರದ ಶೆಡ್ಡುಗಳಲ್ಲಿ ಅಸ್ತವ್ಯಸ್ತಗಳ ನಡುವೆಯೂ ಬದುಕು ಅರಳತೊಡಗಿತು.
ಗಿರಿಜಿ ದೇವರ ಕೊಡಪಾನ ಹಿಡಿದು ಮಂಗಳವಾರ ಎರಡು ಮೂರು ರೇಸುಗಳಲ್ಲಿ ಯಾಕಯ್ಯಾ ಜೋಗವ್ವ ಅಂತ ತಿರುಗಾಡ ಹತ್ತಿದಳು. ಜೋಳ, ಅಕ್ಕಿ ಚಿಲ್ಲರೆ ಕಾಸುಗಳು ಜೋಳಿಗೆಯೊಳಗೆ ಬಂದು ಬೀಳತೊಡಗಿದವು. ಗಿರಿಜಿ ನಾಟಕದ ರಿಹರ್‍ಸಲ್‌ನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸತೊಡಗಿದಳು. ರುಚಿಗಳು ಬೇರೆ ಆದವು. ಮತ್ತೆ ಇಪ್ಪತ್ತೊಂದನೇ ಲೇನಿನ ಪರಶುರಾಮನ ಕಟವಸ್ತ ಆಳಿಗೆ ಕರಿಮಾರಿಯ ಬಿಳಿ ಹಳ್ಳುಗಳು ಕಿಸಿಯತೊಡಗಿದವು. ಇದು ಒಳಗೊಳಗೆ ಗಿರಿಜಿ ನಾಗವ್ವ ಮಾವ ಮಾದೇವನ ಮೇಲೆ ಇದ್ದ ಸೇಡು ತೀರಿಸಿಕೊಳ್ಳುವ ಹಾದಿ ಮಾಡಿಕೊಂಡಳು.
ಒಂದು ಬೆಳಿಗ್ಗೆ ಶೆಡ್ಡಿಗೆ ಬಂದು ಆರು ತಿಂಗಳ ನಂತರ ಹೊರಗಡೆಗೆ ಹೋದ ಗಿರಿಜಿ ವಾಪಸ್ಸು ಬರಲೇ ಇಲ್ಲ. ಕಾಯ್ದು ನಾಗವ್ವ ಕಣ್ಣುರಿತರಿಸಿಕೊಂಡಳು. ಯಾವುದು ಆಗಬಾರದು ಅಂತ ಅಂದುಕೊಂಡಿದ್ದಳೋ ಅದು ಆಗಿ ಹೋಗಿತ್ತು. ನವನಗರದ ಶೆಡ್ಡಿನಲ್ಲಿದ್ದ ಜೋಗತಿಯವರ ಗುಂಪು ಗಪ್ಪಾಗಿ ಬಿಟ್ಟಿತು. ಹಿನ್ನೀರಿನಲ್ಲಿ ನಿಂತ ಒಂಟಿ ಹುಣಸಿ ಮರದ ಬಡ್ಡಿ ಹಾಗೆ ನಾಗವ್ವ ನವನಗರದಲ್ಲಿ ದ್ವೀಪವಾದಳು.
ಈಗ ಮುಸ್ಸಂಜೆ ತೊಟ್ಟಿಕ್ಕುವ ಪ್ರಲಾಪದಲ್ಲಿ ನಡೆದಷ್ಟೂ ಇರುವ ದಾರಿಕಡೆ ಮುಖ ಮಾಡದೇ ನಾಗವ್ವ ಧಾರವಾಡದ ಆಸ್ಪತ್ರೆಯಲ್ಲಿ ಇಡೀ ರಾತ್ರಿ ಒದರುತ್ತಿದ್ದಾಳೆ. ಉಧೋ ಉಧೋ ಅನ್ನಬೇಡ್ರಪ್ಪೊ ಉಧೋ ಉಧೋ.
*****