ಲಾಲ್ ಬಹದ್ದೂರ್ ಎನ್ನುವ ಜನಸಾಮಾನ್ಯ!

ಲಾಲ್ ಬಹದ್ದೂರ್ ಎನ್ನುವ ಜನಸಾಮಾನ್ಯ!

ಲಾಲ್ ಬಹದ್ದೂರ್ ಶಾಸ್ತ್ರಿ ಎನ್ನುವ ವಾಮನ ದೈತ್ಯನ ನೆನಪಿಸಿ ಕೊಂಡಾಗಲೆಲ್ಲ ‘ಒಪ್ಪತ್ತು ಉಪವಾಸವಿದ್ರೂ ಚಿಂತಿಲ್ಲ ಸಾಲದ ಗೊಡವಿ ಬೇಡ’ ಎಂದು ಬದುಕುವ ಸ್ವಾಭಿಮಾನಿ ಜನ ಕಣ್ಣಲ್ಲಿ ಬಂದು ಕೂರುತ್ತಾರೆ. ನಾಳಿನ ಊಟದ ಖಾತರಿಯಿಲ್ಲದಿದ್ದರೂ ಸಾಲ ಮಾಡಲು ಅಂಜುವ, ಇರುವುದರಲ್ಲೇ ಬದುಕಿನ ರಥ ಎಳೆಯುವ ಈ ಮಂದಿ ಅಲ್ಪತೃಪ್ತರಲ್ಲ; ಸ್ವಾಭಿಮಾನಿಗಳು, ಮಿತಿಗಳನ್ನು ಆರಿತವರು. ಈ ಜನಸಾಮಾನ್ಯರೊಂದಿಗೆ ಶಾಸ್ತ್ರಿಯವರನ್ನು ನೆನೆಯಲಿಕ್ಕೆ ಕಾರಣವಿದೆ: ಉಳಿದೆಲ್ಲ ಪ್ರಧಾನಿಗಳು ಬೃಹತ್ ಕೈಗಾರಿಕೆ- ಎಂದು ಕೋಟಿಕೋಟಿ ರೂಪಾಯಿಗಳ ಕಾಡಿಬೇಡಿ ತಂದು ಸುರಿದರೆ, ಶಾಸ್ತ್ರಿಗಳು ತುಳಿದ ದಾರಿಯೇ ಬೇರೆ. ‘ಪ್ರತಿ ಸೋಮವಾರ ರಾತ್ರಿಯ ಊಟ ಬಿಡಿ, ಕೊರತೆಗಳನ್ನು ತುಂಬಿಕೊಳ್ಳಿರಿ’ ಎಂದರು ಶಾಸ್ತ್ರಿ ಪ್ರಾಯಶ್ಚಿತ್ತಕ್ಕಾಗಿ ಊಟ ಬಿಡುವುದನ್ನು ರೂಢಿಸಿಕೊಂಡಿದ್ದ ಮಹಾತ್ಮ ಗಾಂಧೀಜಿಯ ಮೂಲಕ ‘ಉಪವಾಸ’ಕ್ಕೊಂದು ಘನತೆ ಪ್ರಾಪ್ತವಾಗಿತ್ತು. ಉಳಿವಿಗಾಗಿ ಊಟ ಬಿಡುವ ಶಾಸ್ತ್ರಿಯವರ ಮೂಲಕ ‘ಉಪವಾಸ’ದ ಅರ್ಥಸಾಧನೆಗಳು ಮತ್ತಷ್ಟು ಹೆಚ್ಚಿದವು. ದೇಶದ ಜನತೆ ಕೂಡ ಶಾಸ್ತ್ರಿಯವರ ಕರೆಗೆ ಪ್ರಾಮಾಣಿಕವಾಗಿ ಸ್ಪಂದಿಸಿತು. ಪ್ರತಿ ಸೋಮವಾರ ರಾತ್ರಿ ಉಪವಾಸವಿರುವ ಕೆಲವು ಹಿರೀಕರು ಇಂದಿಗೂ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ. ಇತಿಹಾಸದಲ್ಲಿ ಇಂತಹ ಉದಾಹರಣೆ ಸಾಕಷ್ಟಿಲ್ಲ.

ಒಂದುಹೊತ್ತಿನ ಉಪವಾಸಕ್ಕೆ ಶಾಸ್ತ್ರಿಯವರು ಕರೆ ನೀಡಿದ್ದು ೧೯೬೫ರ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಾದರೂ, ಆ ಕರೆಯ ಹಿಂದೆ ಶಾಸ್ತ್ರಿಯವರು ಸ್ವತಃ ಅನುಭವಿಸಿದ ಬಡತನ, ಆರ್ಥಿಕ ತಲ್ಲಣಗಳು ಕಟ್ಟಿಕೊಟ್ಟ ಅನುಭವದ ಬುತ್ತಿಯಿತ್ತು. ಜೀವಿತ ಕಾಲದ ಕೊನೆಯವರೆಗೂ ಶಾಸ್ತ್ರಿ ಸರಳ ಜೀವನವನ್ನೇ ನಡೆಸಿದರು; ಪ್ರತಿ ರೂಪಾಯಿ ಖರ್ಚು ಮಾಡುವಾಗಲೂ ಯೋಚಿಸುತ್ತಿದ್ದರು. ಪ್ರಧಾನಿಯಾಗಿದ್ದಾಗಲೂ ಅವರ ಕೋಣೆಗೆ ಕಾರ್ಪೆಟ್ ಇರಲಿಲ್ಲ. ಶಾಸ್ತ್ರಿ ನಿಧನರಾದಾಗ, ಅವರ ಹೆಸರಿನಲ್ಲಿ ಸಾಲವಿತ್ತು, ಪಿಂಚಣಿಯಿಂದ ಆ ಸಾಲ ತೀರಿಸಲಿಕ್ಕೆ ನಾಲ್ಕು ವರ್ಷ ಬೇಕಾಯಿತು. ಕುಟುಂಬದ ಪರಿಸ್ಥಿತಿ ತೃಪ್ತಿಕರವಾಗಿಲ್ಲದಿದ್ದರೂ ತಮ್ಮ ಆದಾಯದ ಒಂದು ಭಾಗವನ್ನು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ಗೆ ಶಾಸ್ತ್ರಿ ದೇಣಿಗೆ ನೀಡುತ್ತಿದ್ದರು. ‘ಗೃಹ ವಿಹೀನ’ ಗೃಹಮಂತ್ರಿ ಎನ್ನುವ ಅಡ್ಡಹೆಸರು ಅವರಿಗಿತ್ತು. ಇಂಥ ವ್ಯಕ್ತಿತ್ವದ ಕಾರಣದಿಂದಲೇ ‘ಉಪವಾಸ’ದ ಕರೆ ನೀಡುವ ನೈತಿಕ ಶಕ್ತಿ ಅವರದಾಯಿತು.

ಈ ನೆಲದ ಸಮಸ್ಯೆಗಳಿಗೆ ವಾಸ್ತವದ ನೆಲೆಗಟ್ಟಿನಲ್ಲಿ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಶಾಸ್ತ್ರಿಯವರ ಮೂಲಕ ದೇಶದಲ್ಲಿ ಮೊದಲ ಬಾರಿಗೆ ನಡೆಯಿತು. ಆ ಪ್ರಯತ್ನದಲ್ಲಿ ಶಾಸ್ತ್ರಿ ಕೊಂಚ ಯಶಸ್ವಿಯೂ ಆದರು. ಮೂಲತಃ ಸಸ್ಯಾಹಾರಿಯಾಗಿದ್ದ ಲಾಲ್‍ಬಹದ್ದೂರ್ ಮಾಂಸಾಹಾರವನ್ನು ಬೆಂಬಲಿಸಿ ಮಾತನಾಡಿದರು. ಈ ನಡವಳಿಕೆಯ ಹಿಂದೆ, ಆಹಾರಧಾನ್ಯಗಳ ಕೊರತೆ ಹಾಗೂ ಮಾಂಸಾಹಾರದ ಅನಿವಾರ್ಯತೆಯ ಕುರಿತ ವಾಸ್ತವಪ್ರಜ್ಞೆಯಿತ್ತು. ಲಾಲ್‍ಬಹದ್ದೂರರಿಗೆ ಭಾರೀ ವೆಚ್ಚದ ಬೃಹತ್ ಯೋಜನೆಗಳಲ್ಲಿ ನಂಬಿಕೆಯಿರಲಿಲ್ಲ ‘ಖರ್ಚು ಹೆಚ್ಚು, ಉದ್ಯೋಗಾವಕಾಶ ಕಡಿಮೆ ಎನ್ನುವ ಯೋಜನೆಗಳು ನಮಗೆ ಬೇಡ. ಹೆಚ್ಚು ಕೈಗಳಿಗೆ ದುಡಿಮೆಯ ಅವಕಾಶ ಕಲ್ಪಿಸುವ ಸಣ್ಣ ಸಣ್ಣ ಕೈಗಾರಿಕೆಗಳು ಆವಶ್ಯಕ. ಈ ಮೂಲಕವೇ ದೇಶದ ಯಶಸ್ಸು ಸಾಧ್ಯವಾಗಬೇಕು’ ಎಂದು ಶಾಸ್ತ್ರಿ ಹೇಳುತ್ತಿದ್ದರು. ಕೃಷಿ ಚಟುವಟಿಕೆಗಳನ್ನು ಹೆಚ್ಚಿಸಿ, ಪಶು ಸಂಗೋಪನೆಗೆ ಒತ್ತು ನೀಡಿ, ಸಹಕಾರಿ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಿಸಿ ಎಂದು ಶಾಸ್ತ್ರಿ ಹೇಳಿದರು. ಒಳ್ಳೆಯ ಬಿತ್ತನೆ ಬೀಜ ನೀಡಿದರೆ ಸಾಮಾನ್ಯ ರೈತನೂ ಉತ್ತಮ ಬೆಳೆ ಬೆಳೆಯಬಲ್ಲ ಎಂದು ನಂಬಿದ್ದರು. ಗಾಂಧೀಜಿಯ ಅರ್ಥಶಾಸ್ತ್ರ ಆದರ್ಶಗಳಲ್ಲಿ ಅವರಿಗೆ ಅಪರಿಮಿತ ವಿಶ್ವಾಸ.

ಒಂದುಹೊತ್ತಿನ ಉಪವಾಸದ ಪರಿಕಲ್ಪನೆಯಂತೆಯೇ ಶಾಸ್ತ್ರಿಗಳ ವ್ಯಕ್ತಿತ್ವದಿಂದ ರೂಪುಗೊಂಡದ್ದು- ‘ಜೈ ಜವಾನ್ ಜೈ ಕಿಸಾನ್’ ಘೋಷಣೆ. ಸೈನಿಕ ಹಾಗೂ ರೈತ ದೇಶದ ಎರಡು ಕಣ್ಣುಗಳೆನ್ನುವುದನ್ನು ಶಾಸ್ತ್ರಿ ಅರಿತಿದ್ದರು. ಆ ಕಾರಣಕ್ಕಾಗಿಯೇ ಮತ್ತೊಂದು ಹಸಿರುಕ್ರಾಂತಿಯ ಪ್ರಯತ್ನವನ್ನು ಅವರು ನಡೆಸಿದರು. ಅದೇವೇಳೆಯಲ್ಲಿ ಭಾರತೀಯ ಸೇನಾಪಡೆ ಎದೆಸೆಟೆಸಿ ನಿಂತಿತು. ೧೯೬೫ ರ ಯುದ್ಧದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಶಾಸ್ತ್ರಿ ಸೇನಾನಿಗಳಿಗೆ ನೀಡಿದ್ದರು. ಆದರೆ ಪಾಕಿಸ್ತಾನದೊಂದಿಗಿನ ಮೊದಲ ಯುದ್ಧದಲ್ಲಿ(೧೯೪೭-೪೮) ಅಂದಿನ ಪ್ರಧಾನಿ ನೆಹರೂ ಸೇನಾನಿಗಳ ಕೈಕಟ್ಟಿ ಹಾಕಿದ್ದರು. ಪಾಕ್ ಆಕ್ರಮಿತ ಕಾಶ್ಮೀರದತ್ತ ದಿಟ್ಟ ಹೆಜ್ಜೆ ಹಾಕಿದ್ದ ಭಾರತೀಯ ಸೇನಾಪಡೆಯನ್ನು ಬಲವಂತವಾಗಿ ತಡೆದು, ಕದನ ವಿರಾಮ ಘೋಷಿಸುವಂತೆ ನೆಹರೂ ಒತ್ತಾಯಿಸಿದರು. ಇಂದಿನ ಕಾಶ್ಮೀರ ಸಮಸ್ಯೆಗೆ ಬಲವಾದ ಬುನಾದಿ ಬಿದ್ದದ್ದೇ ಆಗ.

ಶಾಸ್ತ್ರಿ ಪ್ರಧಾನಿಯಾಗಿದ್ದುದು ಸುಮಾರು ೧೮ ತಿಂಗಳುಗಳ ಕಾಲವಾದರೂ ಸಾಧನೆ ದೊಡ್ಡದು. ಲಾಲ್‍ಬಹದ್ದೂರರ ೧೮ ತಿಂಗಳುಗಳ ಸಾಧನೆ ನೆಹರೂ ಆಡಳಿತದ ೧೮ ವರ್ಷಗಳ ಆಳ್ವಿಕೆಯ ಸಾಧನೆಗಿಂತಲೂ ಮಿಗಿಲಾದುದು ಎಂದು ಕೆಲವು ರಾಜನೀತಿಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೆಹರೂ ದೇಶಕ್ಕೆ ಕನಸುಗಳನ್ನು ಕೊಟ್ಟರು; ಶಾಸ್ತ್ರಿ ಕನಸುಗಳನ್ನು ಸಾಕಾರಗೊಳಿಸುವ ಮಾರ್‍ಗ ತೋರಿಸಿದರು.

ಶಾಸ್ತ್ರಿ ಎಂದಕೂಡಲೇ ನೆನಪಿಗೆ ಬರುವ ಮತ್ತೊಂದು ಘಟನೆ ೧೯೫೬ ರಲ್ಲಿ ತಮಿಳುನಾಡಿನ ಅರಿಯಲೂರಿನಲ್ಲಿ ನಡೆದ ರೈಲ್ವೆ ದುರಂತ. ೧೪೪ ಜನರನ್ನು ಬಲಿ ತೆಗೆದುಕೊಂಡ ಈ ರೈಲ್ವೇ ದುರುತದ ನೈತಿಕ ಹೊಣೆ ಹೊತ್ತು, ರೈಲ್ವೇ ಸಚಿವರಾಗಿದ್ದ ಶಾಸ್ತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮುನ್ನ ಇಂಥದೊಂದು ಘಟನೆಯನ್ನು ಭಾರತೀಯ ಚರಿತ್ರೆ ಕಂಡಿರಲಿಲ್ಲ ಇಂದು ಕಾಣುವ ಪರಿಸ್ಥಿಯೂ ಇಲ್ಲ.
* * *

ಲಾಲ್‍ಬಹದ್ದೂರರು ಹುಟ್ಟಿದ್ದು ಅಕ್ಟೋಬರ್ ೦೨, ೧೯೦೪ ರಂದು, ಕಾಶಿಗೆ ೧೨ ಕಿ.ಮೀ. ದೂರದ ಮೊಗಲ್‍ಸರಾಯಿಯಲ್ಲಿ. ತಾಯಿ ರಾಮದುಲಾರಿ ದೇವಿ. ತಂದೆ ಶಾರದಾಪ್ರಸಾದ್. ಲಾಲ್‍ಗೆ ಒಂದೂವರೆ ವರ್ಷ ತುಂಬುವ ಮೊದಲೇ ಶಾರದಾಪ್ರಸಾದ್ ನಿಧನರಾದರು. ಲೋಕವ್ಯವಹಾರ ತಿಳಿಯದ ಹೆಣ್ಣುಮಗಳು ರಾಮದುಲಾರಿ ದೇವಿ ತಂದೆಯ ಮನೆ ಸೇರಿದಳು. ಆಕೆಯ ತಂದೆ ಹಜಾರಿಲಾಲ್‍ರದು ದೊಡ್ಡ ಕುಟುಂಬ. ಆ ಕುಟುಂಬದಲ್ಲೇ ಬಾಲಕ ಲಾಲ್‍ಬಹದ್ದೂರರ ಬಾಲ್ಯ ವಿಕಸಿಸಿತು.

ಶಿಕ್ಷಣದ ದಿನಗಳಲ್ಲೇ ಲಾಲ್ ಬಹದ್ದೂರರು ಸಾತಂತ್ರ್ಯ ಚಳವಳಿಯ ಸೆಳೆತಕ್ಕೊಳಗಾದರು. ೧೯೧೫, ವಾರಣಾಸಿಯಲ್ಲಿ ಗಾಂಧೀಜಿಯ ಭಾಷಣ ಕೇಳಿದ ಬಾಲಕ ಲಾಲ್ ಎದೆಯಲ್ಲಿ ಸಿಡಿಲುಮಿಂಚು. ದೇಶಕ್ಕಾಗಿ ಬದುಕನ್ನು ಮೀಸಲಿಡುವ ನಿರ್‍ಧಾರದ ಬೀಜ ಬಿತ್ತನೆಯಾದದ್ದು ಆಗಲೇ. ೧೯೨೧ ರಲ್ಲಿ ಬ್ರಿಟೀಷ್ ಪ್ರಭುತ್ವದ ವಿರುದ್ಧ ‘ಅಸಹಕಾರ ಚಳವಳಿ’ಯನ್ನು ಗಾಂಧೀಜಿ ಶುರು ಮಾಡಿದರು. ಶಾಲಾಕಾಲೇಜುಗಳನ್ನು ಬಿಟ್ಟು ಬರುವಂತೆ ಯುವಜನತೆಗೆ ಕರೆ ನೀಡಿದರು. ಈ ಕರೆಯ ಮೇರೆಗೆ ಲಾಲ್ ಕಾಲೇಜಿಗೆ ವಿದಾಯ ಹೇಳಿದರು; ಆಗವರಿಗಿನ್ನೂ ಹದಿನೇಳು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಕಾರಣ ಬಂಧನಕ್ಕೊಳಗಾದ ಲಾಲ್, ಎಳಸು ಎನ್ನುವ ಕಾರಣದಿಂದಲೇ ಖುಲಾಸೆಯಾದರು. ಆನಂತರ ಸಾಂಪ್ರದಾಯಿಕ ಶಿಕ್ಷಣ ನೀಡುವ ಕಾಶಿಯ ವಿದ್ಯಾಪೀಠದಲ್ಲಿ ಸೇರಿದ ಲಾಲ್ ‘ಶಾಸ್ತ್ರಿ’ ಪದವಿ (೧೯೨೬) ಪಡೆದರು. ಲಾಲ್ ಬಹದ್ದೂರ್ ಹೆಸರಿನೊಂದಿಗೆ ‘ಶಾಸ್ತ್ರಿ’ ಆಂಟಿಕೊಂಡಿದ್ದು ಹೀಗೆ. ಆದಾದ ಒಂದು ವರ್‍ಷಕ್ಕೇ ಲಲಿತಾದೇವಿ ಅವರೊಂದಿಗೆ ಲಾಲ್ಬಹದ್ದೂರರ ಮದುವೆ ನಡೆಯಿತು.

ಶಾಸ್ಥಿಯವರ ಸೇವಾಬದುಕಿನ ಧ್ಯೇಯವನ್ನು ಹುರಿಗೊಳಿಸಿದ್ದು ‘ಸರ್‍ವೆಂಟ್ಸ್ ಅಫ್ ಪೀಪಲ್ಸ್ ಸೊಸೈಟಿ’. ಲಾಲಾ ಲಜಪತರಾಯ್ ಪ್ರೇರಣೆಯ ಮೂಲಕ ಸಂಘದ ಆಜೀವ ಸದಸ್ಯರಾದ ಲಾಲ್ ಬಹದ್ದೂರರು ತಮ್ಮ ಬದುಕನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟರು. ಪ್ರಧಾನಿಯಾದ ನಂತರವೂ ಶಾಸ್ತ್ರಿ ಈ ಸಂಘದೊಂದಿಗೆ ನಂಟು ಉಳಿಸಿಕೊಂಡಿದ್ದರು.

೧೯೩೭ ರಲ್ಲಿ ಉತ್ತರಪ್ರದೇಶದ ವಿಧಾನಸಭೆ ಪ್ರವೇಶಿಸಿದ ಶಾಸ್ತ್ರಿ ಅದಕ್ಕೂ ಮುನ್ನ ಆಲಹಾಬಾದ್ ಜಿಲ್ಲಾ ಕಾಂಗ್ರಸ್ ಸಮಿತಿ ಕಾರ್‍ಯದರ್‍ಶಿಯಾಗಿ, ಉತ್ರರಪ್ರದೇಶದ ಪ್ರಾಂತೀಯ ಕಾಂಗ್ರಸ್ ಕಾರ್‍ಯದರ್‍ಶಿಯಾಗಿ, ಉತ್ತರಪ್ರದೇಶದ ಭೂಸುಧಾರಣೆ ಸಮಿತಿ ಆಧ್ಯಕ್ಷರಾಗಿ ಆನುಭವ ಹೊಂದಿದ್ದರು. ೧೯೪೭ರಲ್ಲಿ ಗೋವಿಂದ ವಲ್ಲಭ ಪಂತರ ಸಂಪುಟದಲ್ಲಿ ಸಾರಿಗೆ ಸಚಿವರಾದ ಲಾಲ್ ಬಹದ್ದೂರ್ ಜಡ್ಡುಗಟ್ಟಿದ್ದ ಸಾರಿಗೆ ಇಲಾಖೆಯಲ್ಲಿ ಸಂಚಲನೆ ಮೂಡಿಸಿದರು. ಬಸ್ಸುಗಳಲ್ಲಿ ಮಹಿಳಾ ನಿರ್‍ವಾಹಕರನ್ನು ಮೊದಲ ಬಾರಿಗೆ ನೇಮಿಸಿದರು.

೧೯೩೦ ರಲ್ಲಿ ಗಾಂಧೀಜಿಯವರ ‘ಉಪ್ಪಿನ ಸತ್ಯಾಗ್ರಹ’ ದಲ್ಲಿ ಸಕ್ರಿಯ ಪಾತ್ರ ವಹಿಸಿದ ಲಾಲ್ ಬಹದ್ದೂರ್ ಜೈಲು ಸೇರಿದರು. ನಂತರದ ದಿನಗಳಲ್ಲಿ ಜೈಲು ಎರಡನೇ ಮನೆಯಂತಾಗಿ, ಸುಮಾರು ೯ ವರ್‍ಷ ಲಾಲ್ ಬಹದ್ದೂರ್ ಸೆರೆಮನೆ ವಾಸ ಅನುಭವಿಸಿದರು. ಜೈಲುಶಿಕ್ಷೆಯ ದಿನಗಳಲ್ಲೇ ಲಾಲ್‍ಬಹದ್ದೂರ್ ಮೇಡಂ ಕ್ಯೂರಿಯವರ ಆತ್ಮಚರಿತ್ರೆಯನ್ನು ಹಿಂದಿಯಲ್ಲಿ ಬರೆದರು. ಶ್ರಮ, ಬಡತನ, ಸಾಧನೆ, ಯಶಸ್ಸು, ಸಾಹಸೀ ಮನೋಭಾವ ಹಾಗೂ ದೇಶಪ್ರೇಮಗಳಲ್ಲಿ ಮೇಡಂಕ್ಯೂರಿ ಹಾಗೂ ಶಾಸ್ತ್ರಿಯವರ ಬದುಕುಗಳಿಗೆ ಹೆಚ್ಚಿನ ವ್ಯತ್ಯಾಸವಿಲ್ಲ.

ಶಾಸ್ತ್ರಿಯವರು ಕೇಂದ್ರ ಸಂಪುಟ ಪ್ರವೇಶಿಸಿದ್ದು ೧೯೫೨ರಲ್ಲಿ. ಕೇಂದ್ರ ರೈಲ್ವೆ ಹಾಗೂ ಸಾರಿಗೆ ಸಚಿವರಾದ ಶಾಸ್ತ್ರಿ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರಕ ಎನ್ನಿಸುವಂಥ ಹಲವು ಬದಲಾವಣೆಗಳಿಗೆ ಕಾರಣರಾದರು. ಅವುಗಳಲ್ಲಿ ಮುಖ್ಯವಾದದ್ದು ಮೊದಲ ಹಾಗೂ ತೃತೀಯ ದರ್‍ಜೆಯ ನಡುವಿನ ಅಂತರಗಳನ್ನು ಕನಿಷ್ಠಗೊಳಿಸಿದ್ದು. ೧೯೫೭ ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಲಾಲ್‍ಬಹದ್ದೂರ್, ಆಗಿನ ಗೃಹಸಚಿವ ಗೋವಿಂದ ವಲ್ಲಭಪಂತ’ರ ನಿಧನದ ನಂತರೆ ಗೃಹಸಚಿವರಾದರು.

ನೆಹರೂ ನಿಧನದ ನಂತರ ೧೯೬೪ರಲ್ಲಿ ಶಾಸ್ತ್ರಿ ಪ್ರಧಾನಿಯಾದರು. ನೆಹರೂ ನಂತರ ಯಾರು? ಎಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದ್ದಾಗ, ಪ್ರಧಾನಿ ಪದಕ್ಕೇರಿದ ವಾಮನ ಮೂರ್‍ತಿಯನ್ನು ನೊ೦ಡಿ ಹುಬ್ಬೇರಿಸಿದವರೇ ಹೆಚ್ಚು. ಶಾಸ್ತ್ರಿ ಪ್ರಧಾನಿಪದಕ್ಕೇರಿದ ಸಂದರ್ಭದಲ್ಲಿ ದೇಶ ಬರದ ದವಡೆಗೆ ಸಿಲುಕಿತ್ತು. ಇನ್ನೊಂದೆಡೆ ಪಾಕಿಸ್ತಾನ ಹಾಗೂ ಚೀನಾ ಕಾಲುಕೆರೆಯುತ್ತಿದ್ದವು. ಆಂತರಿಕ ಬಿಕ್ಕಟ್ಟುಗಳು ಎದ್ದುಕಾಣುತ್ತಿದ್ದವು. ಇಂತಹ ಬಿಗುಹೊತ್ತಿನಲ್ಲಿ ಆಡಳಿತ ಸೂತ್ರಗಳ ಹಿಡಿದ ಅತಿ ಸರಳ, ವಿನಯವಂತ ವ್ಯಕ್ತಿಯ ಸಾಮರ್‍ಥ್ಯವನ್ನು ಜಗತ್ತು ಶಂಕಿಸಿದುದು ಸಹಜವೇ ಆಗಿತ್ತು. ಆದರೆ ಮುಂದಿನ ದಿನಗಳಲ್ಲಿ ಶಾಸ್ತ್ರಿ ತಮ್ಮ ಕಾರ್ಯವೈಖರಿಯ ಮೂಲಕ ಜಾಗತಿಕ ನಾಯಕರಾಗಿ ಗುರ್‍ತೀಸಿಕೊಂಡಿದ್ದು ಈಗ ಇತಿಹಾಸ.

ಪ್ರಧಾನಿಯಾಗಿದ್ದ ದಿನಗಳಲ್ಲಿ ಲಾಲ್‍ಬಹದ್ದೂರರು ಎದುರಿಸಿದ ಭಾರೀ ಸವಾಲು ಪಾಕಿಸ್ತಾನದೊಂದಿಗಿನ ಯುದ್ಧ. ೧೯೬೫ ಪಾಕ್ ವಿರುದ್ಧದ ಯುದ್ಧ ದೇಶಕ್ಕೆ ಭರಿಸಲಾಗದ ಆಗ್ನಿಪರೀಕ್ಷೆಯಂದೇ ಭಾವಿಸಲಾಗಿತ್ತು. ಆದರೆ ಶಾಸ್ತ್ರಿ ಒಂದೆಡೆ ಸೇನೆಯನ್ನು ಇನೊಂದೆಡೆ ರೈತರನ್ನು ಹುರಿದುಂಬಿಸಿದರು. ಉಪವಾಸವಿದ್ದಾದರೂ ಸರಿ, ದೇಶದ ಆತ್ಮಗೌರವವನ್ನು ಉಳಿಸಿಕೊಳ್ಳೋಣ ಎಂದು ಜನತೆಗೆ ಕರೆ ನೀಡಿದರು. ಇಡೀ ದೇಶ ಒಗ್ಗಟ್ಟಿನಿಂದ ಎದ್ದೂನಿಂತಿತು.

ರಷ್ಯಾದ ಅಧ್ಯಕ್ಷ ಕೊಸಿಗಿನ್‍ರ ಆಹ್ವಾನವನ್ನು ಮನ್ನಿಸಿ ಲಾಲ್‍ಬಹದ್ದೂರರು ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್‍ರನ್ನು ಭೇಟಿಯಾದರು. ೧೯೬೬ ರ ಜನವರಿ ೧೧ ರಂದು ಚಾರಿತ್ರಿಕ ‘ತಾಷ್ಕೆಂಟ್ ಒಪ್ಪಂದ’ಕ್ಕೆ ಶಾಸ್ತ್ರಿ ಹಾಗು ಅಯೂಬ್ ಸಹಿ ಹಾಕಿದರು. ಯುದ್ಧಕ್ಕೆ ಮುಂಚಿನ ಗಡಿರೇಖೆಯನ್ನು ಗೌರವಿಸಲು, ಪರಸ್ಪರ ಸ್ನೇಹದಿಂದ ವರ್‍ತಿಸಲು ನಿರ್‍ಧರಿಸಲಾಯಿತು. ಸ್ನೇಹ ಹಸ್ತ ಚಾಚಿದ ಅದೇ ದಿನ ರಾತ್ರಿ ಶಾಸ್ತ್ರಿ ಹೃದಯಾಘಾತದಿಂದ ನಿಧನರಾದರು. ಗೆಲುವಿನ ಸಂಭ್ರಮದಲ್ಲಿದ್ದ ಭಾರತ ಸೂತಕದ ಮೌನದಲ್ಲಿ ಮುಳುಗಿತು. ಶಾಸ್ತ್ರಿಯವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಇಡೀ ವಿಶ್ವ ಶೋಕದಲ್ಲಿ ಭಾಗಿಯಾಯಿತು.
* * *

ಪಕ್ಷದ ಓಲೈಸುವಿಕೆ ಹಾಗೂ ಜನಪ್ರಿಯತೆಯ ಸ್ಕೇಲುಕೈವಾರದ ಅಳತೆಯಲ್ಲಿ ನೆಹರೂ, ಇಂದಿರಾ ಮುಂತಾದವರು ಪ್ರಧಾನಿಗಳಾಗಿ ಶಾಸ್ತ್ರಿಗಳಿಗಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿರಬಹುದು; ಸಾಧನೆಯ ಹಾದಿಯಲ್ಲಿ ಮಾತ್ರ ಲಾಲ್‌ಬಹದ್ದೂರ್‍ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಶಾಸ್ತ್ರಿಯವರಿಗೆ ಕೌಟುಂಬಿಕ ಪ್ರಭಾವಳಿಯಿರಲಿಲ್ಲ; ಭಟ್ಟಂಗಿಗಳನ್ನು ಅವರು ದೂರವಿಟ್ಟಿದ್ದರು. ಪ್ರಾಮಾಣಿಕತೆ, ಸತ್ಯದ ದಾರಿ, ವಿಚಾರಧಾರೆಗಳಲ್ಲಿ ಶಾಸ್ತ್ರಿಯವರದು ಗಾಂಧೀಮಾರ್‍ಗ. ಶಾಂತಿಪ್ರಿಯರು ಕೂಡಾ; ಆದರೆ ದೇಶದ ಗೌರವಕ್ಕೆ ಧಕ್ಕೆ ಒದಗುವ ಸಂದರ್‍ಭದಲ್ಲಿ ದಂಡಪ್ರಯೋಗಕ್ಕೆ ಶಾಸ್ತ್ರಿ ಹಿಂಜರಿಯಲಿಲ್ಲ. ಅಂತೆಯೇ ಅಧಿಕಾರದ ಅವಕಾಶಗಳು ಬಂದಾಗ ಅವುಗಳನ್ನು ಜನಸೇವೆಗೆ ಉಪಯೋಗಿಸಿಕೊಳ್ಳಲು ಮುಜುಗರಪಡಲಿಲ್ಲ. ಆದರೆ ಅಧಿಕಾರಕ್ಕಾಗಿ ಶಾಸ್ತ್ರಿಯವರೆಂದೂ ಅಡ್ಡದಾರಿ ಹಿಡಿಯಲಿಲ್ಲ.

ಶಾಸ್ತ್ರಿ ಜನಸಾಮಾನ್ಯರ ಪ್ರತಿನಿಧಿ. ಒಂದರ್‍ಥದಲ್ಲಿ ನೆಹರೂ ನಮ್ಮನೊಡನಿದ್ದೂ ಪರಕೀಯರು; ಗಾಂಧೀಜಿ ಕೈಗೆಟುಕದ ಮಹಾತ್ಮರು; ತಿಲಕ್-ಸುಭಾಷ್-ಜೇಪಿ-ಲೋಹಿಯಾ ನಮ್ಮ ಬೆರಗುಗಣ್ಣಿನ ನಾಯಕರು! ಆದರೆ ಶಾಸ್ತ್ರಿ ಹಾಗಲ್ಲ; ಆತ ಗಾಂಧೀಜಿಯಂತೆ ಸರಳ-ಸತ್ಯಸಂಧ, ಆದರೆ ಮಹಾತ್ಮನಲ್ಲ. ನೆಹರೂ ಅವರಂತೆ ಪ್ರಧಾನಿಯಾಗಿದ್ದರು, ಆದರೆ ಪ್ರಭಾವಳಿಗಳ ಹಂಗಿಲ್ಲದೆ ಬದುಕುತ್ತಿದ್ದರು. ಇತರ ದೇಶಪ್ರೇಮಿಗಳಂತೆ ದೇಶಪ್ರೇಮಿಯೂ ವಿಚಾರವಾದಿಯೂ ಆಗಿದ್ದರು, ಆದರೆ ದಂತಕಥೆಯಾಗಲಿಲ್ಲ. ಹಾಗಾಗಿ ಶಾಸ್ತ್ರಿ ಜನಸಾಮಾನ್ಯರ ಪ್ರತಿನಿಧಿ. ಹೀಗಿದ್ದೂ ಶಾಸ್ತ್ರಿ ಇಂದು ಜೀವಂತವಾಗಿರುವುದು ಇತಿಹಾಸದ ಪುಟಗಳಲ್ಲಿ ಹಾಗೂ ಕೆಲವೇ ಕೆಲವು ಹಿರೀಕರ ಮನಸ್ಸುಗಳಲ್ಲಿ ಮಾತ್ರ. ರಾಜಕಾರಣದ ನಿಷ್ಠರತೆಯೆಂದರೆ ಇದು. ಈ ರಾಜಕಾರಣಕ್ಕೆ ಇತಿಹಾಸವನ್ನೂ ತಿದ್ದಬಲ್ಲ ದುಷ್ಟತನವಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಯ್ಯಾಲೆ
Next post ನನ್ನದಲ್ಲ ಈ ಕವಿತೆ

ಸಣ್ಣ ಕತೆ

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys