ಪ್ರಥಮ ದರ್ಶನದ ಪ್ರೇಮ

ಪ್ರಥಮ ದರ್ಶನದ ಪ್ರೇಮ

ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ ಸಕಲ ಪುಷ್ಟ ಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ ಆ ನಗರಕ್ಕೆ ಕುಸುಮಪುರವೆಂಬ ಹೆಸರು. ಈ ವಿಶೇಷವಾದ ಗುಣಕ್ಕಾಗಿಯೇ ಚಿತ್ರರಥಾದಿ ಗಂಧರ್ವರು ಮೆಚ್ಚಿ ಆ ಸ್ಥಳದಲ್ಲಿ ಮನಸೋತು ವಿಹಾರ ಮಾಡುತ್ತಿದ್ದರೆಂದು ಗ್ರಾಮ ಪುರೋಹಿತರು ಹೇಳುವದುಂಟು. ಆ ಕುಸುಮಪುರದ ಪೂರ್ವದಿಕ್ಕಿಗೆ ಗೋಪುರಾಕಾರದ ದಿನ್ನೆಯು ವಿವಿಧವಾದ ವೃಕ್ಷಲತೆಗಳಿಂದ ಆಚ್ಛಾದಿತವಾಗಿ ಅದೊಂದು ಪಚ್ಚಮಣಿಗಳ ಅಗಾಧವಾದ ರಾಶಿಯೇ ಆಗಿ ತೋರುತ್ತಿತ್ತು. ಆ ಮರಕತಗಿರಿಯ ತುದಿಯ ಮೇಲಿನ ವಿಸ್ತಾರವಾದ ತಪ್ಪಲಿನ ಮೇಲೆ ಶಾರದಾಪ್ರಸಾದ ಕಾಲೇಜದ ಶೋಭಾಮಯವಾದ ಮುಂದಿರಗಳು ತಳಿರು ತೋರಣ ಬಾಳೆಗಂಬಗಳಿಂದ ಅಲಂಕೃತವಾದ ಹೆದ್ದೇರಿನ ತುದಿಗಿರುವ ಪ್ರೇಕ್ಷಣೀಯವಾದ ಕಳಸಗಳಂತೆ ಮೆರೆಯುತ್ತಿದ್ದವು. ಕಾಲೇಜದ ಮಂದಿರಗಳಿಂದ ದಿನ್ನೆಯನ್ನಿಳಿದು ಕೆಳಗೆ ಬರಬೇಕಾಗಿ ಮಲಸೂತ್ರದಾಕಾರವುಳ್ಳ ವಿಸ್ತಾರವಾದ ಬೀದಿಯಿದ್ದು, ಆ ಬೀದಿಗೆ ಕೆಂಪುಗರಸಿನ ನೆಲಗಟ್ಟು ಮಾಡಿರುವದರಿಂದ ಆ ಪ್ರದೇಶಕ್ಕೆ ಅದೊಂದು ವಿಲಕ್ಷಣವಾದ ಅಲಂಕಾರವೇ ಆಗಿ ತೋರುತ್ತಿತ್ತು. ಕಾಲೇಜದ ಉನ್ನತವಾದ ಮಂದಿರಗಳಲ್ಲಿ ನಿಂತು ನೋಡಿದರೆ ಅನೇಕ ಯೋಜನೆಗಳ ವರೆಗೆ ಹಬ್ಬಿಕೊಂಡಿರುವ ಭೂಶೋಭೆಯು ಜಗ್ಗನೆ ಹೊಳೆದು ತೋರಿ ಪ್ರೇಕ್ಷಕರ ಚಿತ್ತಗಳನ್ನು ಬಲವತ್ತರವಾಗಿ ಆಕರ್ಷಿಸಿ ಕೊಳ್ಳುತ್ತಿತ್ತು. ಎತ್ತ ನೋಡಿದತ್ತ ನೆಲ್ಲು ಹುಲ್ಲುಗಳ ಗದ್ದೆಗಳೂ ಹೂದೋಟಗಳೂ ಹಣ್ಣು ಗಿಡಗಳ ತೋಪುಗಳೂ ಅವಿಚ್ಛಿನ್ನವಾಗಿ ಕಂಗೊಳಿಸುವವು. ಭೂವನಿತೆಯು ಉಟ್ಟಿರುವ ಮರಕತಮಯವಾದ ಮಹಾವಸ್ತ್ರದ ಮೇಲೆ ಚಿತ್ರ ವಿಚಿತ್ರವಾಗಿ ತೆಗೆದಿರುವ ಕಶೀದೆಗಳಂತೆ ಅಲ್ಲಲ್ಲಿ ಮೆರೆಯುವ ಹಳ್ಳಿಪಳ್ಳಿಗಳೂ ಪುರಪತ್ತನಗಳೂ ಬಹು ಚಮತ್ಕಾರವಾಗಿ ತೋರುತ್ತಿದ್ದವು. ಧರ್ಮದ ಮಾರ್ಗವು ಪ್ರಶಸ್ತವಾಗಿಯೂ ನಿಷಂಟಕವಾಗಿಯೂ ಸಮವಾಗಿಯೂ ಇರುವದಾಗಿ ಭಕ್ತಜನರಿಗೆ ತೋರಿಸಬೇಕೆಂದು ಗಂಗಾದೇವಿಯು ತಾನು ಪೂರ್ವಗಾಮಿಯಾಗಿ ನಡೆದಿರುವ ಶೋಭೆಯಾದರೂ ಬಹು ಪ್ರೇಕ್ಷಣೀಯವಾಗಿತ್ತು. ಕಾಲೇಜದ ಉನ್ನತವಾದ ಪ್ರದೇಶದಲ್ಲಿರುವ ಹವೆಯು ನಿರ್ಮಲವಾಗಿಯೂ ಆರೋಗ್ಯಕರವಾಗಿಯೂ ಮಕರಂದಮಯವಾಗಿಯೂ ಇರುವದರಿಂದ ಅಲ್ಲಿಯ ವಿದ್ಯಾರ್ಥಿಗಳಿಗೆ ವಿದ್ಯಾಲಾಭದಿಂದ ಮನಸ್ತುಷ್ಟಿಯಾಗುವಂತೆಯೇ ದೇಹಪುಷ್ಟಿಯು ಕೂಡಾ ಆಗುತ್ತಿತ್ತು.

ಬ್ರಿಟಿಶ್ ಸಾಮ್ರಾಜ್ಯವು ನಮ್ಮಲ್ಲಿ ನೆಲೆಗೊಂಡಾಗಿನಿಂದ ಪಾಶ್ಚಾತ್ಯ ಪದ್ಧತಿಯ ವಿದ್ಯಾಭಿರುಚಿಯು ನಮ್ಮಲ್ಲಿ ಹಬ್ಬಿ ಅಲ್ಲಲ್ಲಿ ಹಾಯಸ್ಕೂಲುಗಳೂ ಕಾಲೇಜಗಳೂ ಸ್ಥಾಪಿತವಾದವು. ಸಹಸ್ರಾವಧಿ ಜನ ತರುಣರು ವಿಶ್ವವಿದ್ಯಾಲಯದ ಪದವೀಧರರಾದರು. ಯುರೋಪಿಯನ್ ಗುರುಗಳಿಗೆ ಬುದ್ಧಿಗಲಿಸುವಂಥ ಪಂಡಿತರೂ, ಮೆಕಾಲೇನಂಥ ದುರಭಿಮಾನ ದೃಪ್ತನ ಹೊಟ್ಟೆಯಲ್ಲಿ ಬೆಂಕಿಬೀಳುವಂತೆ ವಾಗ್ಚಾತುರ್ಯದಿಂದಲೂ ಪ್ರಮಾಣಶಾಸ್ತ್ರಕ್ಕನುಸರಿಸಿಯು ಪ್ರೌಢರಾದ ಬ್ಯಾರಿಷ್ಟರರು ನ್ಯಾಯಸಭೆಗಳಲ್ಲಿ ವಾದವಿವಾದಗಳನ್ನು ನಡಿಸಿದರು. ನ್ಯಾಯಾಧೀಶ, ಕೌನ್ಸಿಲರ, ಕಮಿಶನರ, ಕಲೆಕ್ಟರ ಮುಂತಾದ ಅಧಿಕಾರಗಳನ್ನು ನಮ್ಮವರು ಒಳ್ಳೆ ಚಾತುರ್ಯದಿಂದ ನಡಿಸಿದರು. ಕೌನ್ಸಿಲಿನಲ್ಲಿ ಹೊಕ್ಕರೆ ನಾವೇ ಪ್ರಬಲರು. ಯುನಿವರ್ಸಿಟಿಗಳಲ್ಲಿ ಹೊಕ್ಕರೆ ನಾವೇ ಸೀನಿಯರ್ ರ್‍ಯಾಂಗ್ಲರರು. ಹೀಗೆ ವಿದ್ಯಾಪ್ರಸಾರಣವು ಪುರುಷರಲ್ಲಿ ಹಬ್ಬುತ್ತಲಿರಲು ನಮ್ಮ ಅರ್ಧಾಂಗಿಯರೂ ಅಕ್ಕ ತಂಗೆಂದಿರೂ ವಿದ್ಯೆಯಲ್ಲಿ ಹಿಂದುಳಿಯಲಾಗದೆಂದು ನೆನಿಸಿ ನಾವು ಶಿಕ್ಷಣವನ್ನು ಕೂಡ ಕೈಕೊಂಡೆವು. ಹೆಣ್ಣು ಮಕ್ಕಳಿಗಾಗಿ ತಕ್ಕ ಮಟ್ಟಿಗೆ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳಾದವು. ಆದರೆ ಉಚ್ಚ ಪ್ರತಿಯ ಶಿಕ್ಷಣದ ಸ್ವತಂತ್ರವಾದ ಶಾಲೆಗಳ ಸಂಖ್ಯೆಯು ಕಡಿಮೆ; ಕಾಲೇಜಗಳಂತೂ ಇಲ್ಲವೇ ಇಲ್ಲ. ಅಲ್ಪ ವಯಸ್ಸಿನಲ್ಲಿ ಹೆಣ್ಣು ಗಂಡುಮಕ್ಕಳು ಒಟ್ಟಿಗೆ ಕಲೆತು ಶಿಕ್ಷಣವನ್ನು ಹೊಂದಬಹುದು; ಆದರೆ ತರುಣ ತರುಣಿಯರು ಒಂದೇ ಸಂಸ್ಥೆಯಲ್ಲಿರುವದು ವಿಹಿತವೋ ಅಲ್ಲವೋ ಎಂಬ ಮಾತಿನ ಬಗ್ಗೆ ಮತ ಭೇದವು. ಆದರೆ ಸ್ತ್ರೀ ಪುರುಷರ ಮಿಶ್ರ ಶಾಲೆಗಳು ಪ್ರಶಸ್ತವಾದದ್ದವೆಂಬ ಅಭಿಪ್ರಾಯವನ್ನು ತಳೆದ ಸುಧಾರಕರು ತೀರ ಕಡಿಮೆ. ಸ್ತ್ರೀಯರಿಗೆ ಸ್ವತಂತ್ರವಾದ ಕಾಲೇಜಗಳಿರಬೇಕೆಂಬ ಜನರೇ ಬಹಳ. ಹೀಗಿರಲು ಹೆಣ್ಣು ಮಕ್ಕಳಿಗಾಗಿ ಕಾಲೇಜುಗಳನ್ನು ಸ್ಥಾಪಿಸುವ ಸುಬುದ್ಧಿಯು ಇನ್ನೂ ನಮ್ಮ ಪುರಸ್ಕರ್ತರಲ್ಲಿ ಉಂಟಾಗಿಲ್ಲ. ಶಿಕ್ಷಣಾಭಿರುಚಿಯುಳ್ಳ ನವಯೌವನೆಯರು ಅನಿರ್ವಾಹಕ್ಕಾಗಿ ಗಂಡು ಮಕ್ಕಳ ಕಾಲೇಜಗಳಿಗೆ ಹೋಗುತ್ತಿರುವರು.

ಗಂಡುಮಕ್ಕಳ ಕಾಲೇಜಗಳಲ್ಲಿ ಅನೇಕವಾದ ವಿದ್ಯಾ ಕಲೆಗಳ ಶಿಕ್ಷಣವು ಯಥೇಷ್ಟವಾಗಿ ದೊರಕುತ್ತಿದ್ದರೂ ಅಲ್ಲಿ ಧಾರ್ಮಿಕ ಹಾಗೂ ನೈತಿಕ ಶಿಕ್ಷಣಗಳ ಅಭಾವವೇ ಆಗಿರುವದರಿಂದ ಅನೇಕ ಜನ ತರುಣರು ಅಮಾರ್‍ಗಿಗಳಾಗುತ್ತಿರುವದನ್ನು ಕಂಡು, ಅತ್ಯಂತವಾಗಿ ಉದರರಾಗಿರುವ ರಾಜಾ ದೀನ ದಯಾಲರೆಂಬ ಘನವಂತರಾದ ಶ್ರೀಮಂತರು ಪರ್ವತಪ್ರಾಯವಾದ ಹಣ ವೆಚ್ಚ ಮಾಡಿ ಶಾರದಾಪ್ರಸಾದವೆಂಬ ಕಾಲೇಜವನ್ನು ಕುಸುಮಪುರದ ಸಮೀಪದಲ್ಲಿ ಸ್ಥಾಪಿಸಿದರು. ರಾಮಕಿಶೋರ ಆಚಾರ್ಯ ಚೌದ್ಧರಿ ಎಮ್. ಏ. ಎಲ್‍ಎಲ್. ಡೀ. ಎಂಬ ಅನೇಕ ಶಾಸ್ತ್ರ ಪಾರಂಗತರಾದ ಮಹಾಪಂಡಿತರ ಸೌಜನ್ಯ ಸದಾಚರಣಗಳನ್ನೂ ಅವರಲ್ಲಿರುವ ವಿದ್ಯಾಪ್ರದಾನ ಮಾಡುವ ಉತ್ಕಟವಾದ ಅಭಿಲಾಷೆಯನ್ನೂ ಕಂಡು ರಾಜಾ ದೀನದಯಾಲ ರವರು ಅವರನ್ನು ಬಹು ಸನ್ಮಾನದೊಂದಿಗೆ ಕರೆತಂದು ನಮ್ಮ ಕಾಲೇಜ್ ದ ಮುಖ್ಯ ನಿಯಾಮಕರನ್ನಾಗಿ ಮಾಡಿದರು. ಉಳಿದ ಶಿಕ್ಷಕವರ್‍ಗವಾದರೂ ಸಾಮಾನ್ಯ ವಾದದ್ದಲ್ಲ. ಈ ಅಲಭ್ಯ ಲಾಭಕ್ಕಾಗಿ ಶಾರದಾಪ್ರಸಾದ ಕಾಲೇಜದಲ್ಲಿ ಕಲಿಯುವದಕ್ಕಾಗಿ ಅನೇಕ ಪ್ರಾಂತಗಳಿಂದ ಬುದ್ದಿವಂತರಾದ ವಿದ್ಯಾರ್‍ಥಿಗಳು ಬರುತ್ತಲಿದ್ದರು.

ಡಾಕ್ಟರ ಚೌಧರಿಯವರ ಧರ್ಮಪತ್ನಿಯರಾದ ಜಾನಕೀದೇವಿಯರಾದರೂ ಕಲಕತ್ತಾ ವಿಶ್ವವಿದ್ಯಾಲಯದ ಪದವಿಡರೆಯರಾದ ವಿದುಷಿಯರು. ಪ್ರಚಲಿತವಾದ ಸ್ತ್ರೀ ಶಿಕ್ಷಣದ ಪದ್ಧತಿಯಲ್ಲಿರುವ ದೋಷಗಳನ್ನು ತೆಗೆದುಹಾಕಿ ಭರತಭೂಮಿಗೆ ಭೂಷಣರಾಗತಕ್ಕೆ ಮಹಿಳೆಯರಿಗೆ ಉಚ್ಚಪ್ರತಿಯ ಶಿಕ್ಷಣವು ದೊರಕುವದಲ್ಲದೆ ಸ್ತ್ರೀ ಧರ್ಮ ನೀತಿಗಳು ಕೂಡಾ ಅವರಿಗೆ ಸಂಪೂರ್ಣವಾಗಿ ಪ್ರಾಪ್ತವಾಗಬೇಕೆಂಬ ಪ್ರಯತ್ನದಲ್ಲಿ ಜಾನಕೀದೇವಿಯರಿದ್ದರು. ಶಾರದಾಪ್ರಸಾದ ಕಾಲೇಜದಲ್ಲಿ ಕಲಿಯಲಿಕ್ಕೆ ಬಂದ ಹೆಣ್ಣು ಮಕ್ಕಳ ಶಿಕ್ಷಣಕ್ರಮದ ಮೇಲ್ವಿಚಾರಣೆಯನ್ನು ಆ ಸಾಧ್ವಿಯರು ಮನಃಪೂರ್ವಕವಾಗಿ ಅಂಗೀಕರಿಸಿದ್ದಲ್ಲದೆ, ಆ ವಿದ್ಯಾರ್ಥಿನಿಯರ ವ್ಯಾಯಾಮ ಮನೋರಂಜನ ಸ್ನಾನ ಭೋಜನಾದಿಗಳಲ್ಲಿಯಾದರೂ ಅವರು ದಕ್ಷತೆಯಿಂದ ಲಕ್ಷವನ್ನಿಟ್ಟಿದ್ದರು. ಗೃಹಿಣೀ ಜನೋಚಿತವಾದ ಕರ್‍ತವ್ಯ ಜಾಗ್ರತಿಯು ಅಲ್ಲಿಯ ವಿದ್ಯಾರ್ಥಿನಿಯರಲ್ಲಿ ಅಂಗ ಭೂತವಾಗಿರಬೇಕೆಂದು ನೆನಿಸಿ ಪ್ರತಿ ರವಿವಾರ ಇಬ್ಬರು ವಿದ್ಯಾರ್ಥಿನಿಯರನ್ನು ಜಾನಕೀದೇವಿಯರು ತಮ್ಮ ಮನೆಗೆ ಕರಿಸಿಕೊಂಡು ತಾವು ಮಾಡುತ್ತಿರುವ ಮನೆಕೆಲಸಗಳ ವ್ಯವಸ್ಥೆಯನ್ನೂ ಅತಿಥಿಗಳ ಆದರಾತಿಥ್ಯವನ್ನೂ, ಪತಿ ಶುಶ್ರೂಷೆಯ ಕ್ರಮವನ್ನೂ ನಿತ್ಯ ನಿಯಮ ದೇವತಾರಾಧನಗಳನ್ನೂ ಅವರಿಗೆ ತೋರಿಸಿಕೊಡುತ್ತಿದ್ದರು.

ಶಾರದಾ ಕಾಲೇಜದಲ್ಲಿ ಇಪ್ಪತ್ತು ಇಪ್ಪತ್ತೈದು ಜನ ಹೆಣ್ಣು ಮಕ್ಕಳಿದ್ದರು, ಅವರಲ್ಲಿ ರಮಾಸುಂದರಿಯೂ ಓರ್ವಳಾಗಿದ್ದಳು. ರಮಾಸುಂದರಿಯು ದಕ್ಷಿಣ ದೇಶದಲ್ಲಿರುವ ಕನಕಗಿರಿಯೆಂಬ ಊರಿನ ಜಾಗೀರದಾರ ಮಗಳು. ಅವಳ ತಂದೆಯು ಸುಸಂಸ್ಕೃತವಾದ ಆಚಾರ ವಿಚಾರಗಳುಳ್ಳವನೂ ವಿದ್ಯಾಪಕ್ಷಪಾತಿಯೂ ದೇಶ ಸಂಚಾರ ಮಾಡಿದವನೂ ಆಗಿರುವದರಿಂದ ಅವನು ರಮಾಸುಂದರಿಗೆ ಉಚ್ಚ ಪ್ರತಿಯ ಶಿಕ್ಷಣವನ್ನು ಕೊಡಿಸುತ್ತಿರುವದು ಆಶ್ಚರ್ಯವಲ್ಲ. ಉತ್ತರ ದೇಶದಲ್ಲಿ ಸಂಚಾರ ಮಾಡುತ್ತಿರುವಾಗ ಅವನು ಶಾರದಾ ಕಾಲೇಜದ ಖ್ಯಾತಿಯನ್ನು ಕೇಳಿ ಅದನ್ನು ನೋಡಹೋಗಿ, ಅಲ್ಲಿ ರಾಮಕಿಶೋರ ಜಾನಕೀದೇವಿಯರ ಪರಿಚಯವನ್ನು ಮಾಡಿಕೊಂಡು, ತನ್ನ ಪ್ರೀತಿಯ ಮಗಳಾದ ರಮಾಸುಂದರಿಯನ್ನು ಜಾನಕೀದೇವಿಯರ ಉಡಿಯಲ್ಲಿ ಹಾಕಿದಂತೆ ಮಾಡಿ ಅವಳನ್ನು ಶಾರದಾ ಕಾಲೇಜದಲ್ಲಿ ಕಲಿಯಲಿಕ್ಕೆ ಇಟ್ಟಿದ್ದನು.

ರಮಾಸುಂದರಿಯು ನಿರುಪಮವಾದ ರೂಪವತಿಯೂ, ವಿನಯ ಶೀಲೆಯ, ಪಾಪಭೀರುವೂ, ಬುದ್ಧಿ ಮತಿಯೂ ಆಗಿರುವದರಿಂದ ಅವಳು ಜಾನಕೀದೇವಿಯರ ಪ್ರೀತಿ ಪಾತ್ರಳಾಗಿದ್ದಳು, ಇಂದುಮತಿ ಭಾನರ್ಜಿ, ಚಂದ್ರಾವಲೀ ತ್ರಿವೇದಿ ಹಾಗೂ ರಮಾಸುಂದರಿಯರು ಎಫ್. ಏ. ತರಗತಿಯಲ್ಲಿ ಕಲಿಯುತ್ತಿರುವದರಿಂದ ಅವರೆಲ್ಲರೂ ಒಟ್ಟಿಗೆ ಒಂದೇ ಕೋಣೆಯಲ್ಲಿ ಇದ್ದು ಕೊಂಡು ಅಭ್ಯಾಸ ಮಾಡುತ್ತಿದ್ದರು. ಮೂವರೂ ತೀಕ್ಷ್ಣವಾದ ಬುದ್ದಿ ಯುಳ್ಳವರೂ ನಿರ್ಮಲಾಂತಃಕರಣದವರೂ ವಿಶುದ್ಧವಾದ ಆಚರಣವುಳ್ಳವರೂ ಆಗಿದ್ದರು. ಇಂದುಮತಿಯ ವಿನೋದದ ನುಡಿಗಳೂ, ಚಂದ್ರಾವಲಿಯ ತಿದ್ದಿ ತೀಡಿದ ಉಡಿಗೆ ತೊಡಿಗೆಗಳೂ, ರಮಾ ಸುಂದರಿಯ ಸ್ವಚ್ಛತೆ ಸುವ್ಯವಸ್ಥೆಗಳೂ ಆ ಮೂವರಲ್ಲಿ ಸರಿಯಾಗಿ ಕಲೆತು ಹೋಗಿ ಅವರು ನಾರೀ ಕುಲಕ್ಕೆ ಅಲಂಕಾರವಾಗಿ ಮೆರೆಯುತ್ತಿದ್ದರು.

ಪಾಠಶಾಲೆಯಲ್ಲಿ ನಡೆದ ವಿಷಯದ ಊಹಾಪೋಹವನ್ನು ಗಂಡು ಮಕ್ಕಳು ಮಾಡುತ್ತಿರುವವನ್ನೂ, ಅವರು ತೆಗೆದ ಕುಶಲವಾದ ಶಂಕೆಗಳಿಗೆ ಗುರುಗಳು ಹೇಳುತ್ತಿರುವ ಸಮರ್ಪಕವಾದ ಸಮಾಧಾನಗಳನ್ನೂ ಆ ಚತುರೆಯರು ಮನಸ್ಸು ಕೊಟ್ಟು ಕೇಳುತ್ತಿದ್ದರು. ಆ ಮೂವರಿಗೂ ಭಾಷಾವಿಷಯಗಳಲ್ಲಿ ವಿಶೇಷವಾದ ಅಭಿರುಚಿಯಾಗಿರುವದರಿಂದ ಬಿ. ಏ., ಎಂ. ಏ. ವರ್ಗ ಗಳಲ್ಲಿ ಇಂಗ್ಲಿಶ್ ಸಂಸ್ಕೃತ ವಿಷಯಗಳು ನಡೆದಿರುವಾಗ ಒಮ್ಮೊಮ್ಮೆ ಹೋಗಿ ಅವರು ಕೇಳುತ್ತೆ ಕೂಡುವರು. ಪುರುಷ ವಿದ್ಯಾರ್ಥಿಗಳ ಪರಿಚಯವನ್ನು ಅವರು ಮಾಡಿಕೊಳ್ಳುತ್ತಿದ್ದಿಲ್ಲವಾದರೂ ಆ ಕಾಲೇಜದಲ್ಲಿ ಒಳ್ಳೆ ಬುದ್ದಿಶಾಲಿಗಳಾದ ವಿದ್ಯಾರ್ಥಿಗಳಾರೆಂಬದು ಅವರಿಗೆ ಗೊತ್ತಾಗಿತ್ತು.

ವಿಜಯಪುರದ ಧುವರಾಯನೆಂಬ ಅದ್ವಿತೀಯನಾದ ಬುದ್ಧಿಶಾಲಿಯು ಬಿ. ಏ. ತರಗತಿಯಲ್ಲಿ ಉತ್ತಮ ಪರೀಕ್ಷೆಯನ್ನು ಕೊಟ್ಟಿದ್ದನಾದ್ದರಿಂದ ಆ ತರುಣನನ್ನು ಡಾಕ್ಟರ ಚೌಧರಿಯವರು ತಮ್ಮ ಕಾಲೇಜದ ಫೆಲೋ – (ವಿದ್ಯಾರ್ಥಿಯಾಗಿದ್ದರೂ ಶಿಕ್ಷಕರ ಕೆಲಸವನ್ನು ಮಾಡುವವ) ನನ್ನಾಗಿ ಮಾಡಿ ಎಂ. ಎ. ತರಗತಿಯಲ್ಲಿ ಅಭ್ಯಾಸ ಮಾಡಲು ಆಸ್ಥೆಯಿಂದ ಇಟ್ಟು ಕೊಂಡರು. ಧ್ರುವರಾಯನು ಸಂಸ್ಕೃತದಲ್ಲಿ ಅಸದೃಶನೂ ಇಂಗ್ಲಿಶದಲ್ಲಿಯೂ ಅತಿ ಪ್ರವೀಣನೂ ಆಗಿರುವದರಿಂದ ಎಫ್. ಏ. ತರಗತಿಯವರಿಗೆ ಆ ಎರಡು ವಿಷಯಗಳನ್ನು ಕಲಿಸಲು ಅವನನ್ನು ಆಯಾ ವಿಷಯಗಳ ಪಂಡಿತರ ಸಹಾಯಕಾರಿಯಾಗಿ ನಿಯಮಿಸಿದ್ದರು.

ಒಂದು ದಿನ ಡಾಕ್ಟರ ರಾಮಕಿಶೋರ ಆಚಾರ್ಯರವರು ಮೇಜಿನ ಮೇಲಿರುವ ಲೇಖಗಳಲ್ಲಿ ಒಂದನ್ನೆತ್ತಿಕೊಂಡು ನೆರೆದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಕುರಿತು “ಇದು ನಮ್ಮ ಧುವರಾಯನು ಬರೆದಿರುವ ‘ಶೇಕ್ಸ್‍ಪೀಯರ್ ಕಾಲಿದಾಸರ ಕವಿತಾ ಚಾತುರ್ಯದ ತುಲನೆ’ ಎಂಬ ಸರಸವಾದ ಲೇಖವು. ಇದರಲ್ಲಿಯ ಭಾಷಾ ಸರಣಿಯೂ, ವಿಷಯನಿರೂಪಣಶಕ್ತಿಯೂ, ಮಾರ್ಮಿಕವಾದ ಪರೀಕ್ಷಣವೂ ಪಂಡಿತರಿಂದ ಕೂಡ ಅನುಕರಣೀಯವಾಗಿವೆ. ನೀವೆಲ್ಲರೂ ಈ ಲೇಖವನ್ನು ಮತ್ಸರವಿಲ್ಲದೆ ಓದಿಕೊಳ್ಳಬೇಕೆಂದು ನಾವು ಸೂಚಿಸುತ್ತೇವೆ. ಧುವರಾಯ, ನಿನ್ನನ್ನು ನಾವು ಮನಃಪೂರ್ವಕವಾಗಿ ಅಭಿನಂದಿಸುತ್ತೇವೆ. ಈ ಸುವರ್ಣ ಪದಕವನ್ನು ರಾಜಾ ದೀನದಯಾಲ ರವರು ಪರಮ ಸಂತುಷ್ಟರಾಗಿ ನಿನಗೆ ಕಾಣಿಯಾಗಿ ಕೊಟ್ಟಿರುವರು.” ಎಂದು ಹೇಳಿ ಪದಕವನ್ನು ಧ್ರುವರಾಯನ ಅಂಗಿಗೆ ಕಟ್ಟಿದರು.

ಧ್ರುವರಾಯನು ಬರೆದ ಸ್ತುತ್ಯವಾದ ಲೇಖನನ್ನೋದಬೇಕೆಂಬ ಕುತೂಹಲವುಳ್ಳವಳಾಗಿ ರಮಾಸುಂದರಿಯು ಲಗುಬಗೆಯಿಂದ ಒಂದು ಪತ್ರವನ್ನು ಬರೆದು ಕಾಲೇಜದ ಜವಾನನ ಕೈಯಲ್ಲಿ ಕೊಟ್ಟು, ದ್ರುವರಾಯರು ತಮ್ಮ ಲೇಖನವನ್ನು ಕೊಟ್ಟರೆ ತಂದುಕೊಡೆಂದು ಹೇಳಿದಳು. ದ್ರುವರಾಯನು ಸಾಯಂಕಾಲದಲ್ಲಿ ತಿರುಗಾಡಿ ವಸತಿಗೃಹಕ್ಕೆ ಬರುವಷ್ಟರಲ್ಲಿ ಜವಾನನು ರಮಾಸುಂದರಿಯ ಪತ್ರವನ್ನು ತಂದುಕೊಟ್ಟನು. ಮುಕ್ತವಲಿಗಳಂತೆ ಮನೋಹರವಾಗಿರುವ ಹಸ್ತಾಕ್ಷರದಿಂದ ಬರೆದ ಮೇಲ್ವಿಳಾಸವನ್ನು ನೋಡಿ ಚಕಿತನಾಗಿ ಅವನು ಔತ್ಸುಕ್ಯದಿಂದ ಪತ್ರವನ್ನೊಡೆದು ಓದಿದನು. ಓದೋದುವಾಗ ಅವನ ಹೃದಯದಲ್ಲಿ ಅಭಿಮಾನ ಧನ್ಯತೆ ಸಂತೋಷ ಮುಂತಾದ ಮನೋವಿಕಾರಗಳು ಉಕ್ಕೇರಿಬಂದವು. ರಮಾಸುಂದರಿಯು ತನ್ನ ಲೇಖದ ಸ್ತುತಿಮಾಡಿರುವದು ಅವನಿಗೆ ರಾಜಾ ದೀನದಯಾಲರ ಸುವರ್ಣ ಪದಕಕ್ಕಿಂತಲೂ ಹೆಚ್ಚಿನ ಬೆಲೆಯುಳ್ಳದ್ದಾಗಿ ತೋರಿತು. “ರಮಾಸುಂದರಿಯಂತೆ ಆಸ್ಥೆಯಿಂದ ವಿದ್ಯಾ ಸಂಪಾದನೆ ಮಾಡಿಕೊಳ್ಳಲಿಚ್ಛಿಸುವಂಥ ಸ್ತ್ರೀಯರು ನಮ್ಮ ಸಮಾಜದಲ್ಲಿ ಹತ್ತೇ ಜನರು ಹುಟ್ಟಿದ ನಮ್ಮ ಸಮಾಜವು ಉಚಿತವಾಯಿತೆಂದು ನಮ್ಮ ಜಾನಕಿದೇವಿಯವರು ಕೃತಾರ್ಥರಾದರೆಂದೂ ನಾನು ನಂಬುತ್ತೇನೆ. ನನ್ನ ಲೇಖವನ್ನು ಅನೇಕ ಜನರು ಬೇಡಿದ್ದಾರೆ. ಆದರೆ ನಾನದನ್ನು ಈ ಜಿಜ್ಞಾಸುವಾದ ವಧುವಿಗೆ ಮೊದಲು ಕೊಡುವೆನು” ಎಂದು ತನ್ನೊಳಗೆಯೇ ಚಿಂತಿಸಿ ಧ್ರುವರಾಯನು ಆ ಲೇಖವನ್ನು ತೆಗೆದು ಜವಾನನ ಕೈಯಲ್ಲಿ ಕೊಟ್ಟು ರಮಾ ಸುಂದರಿಗೆ ಕೊಡಹೇಳಿದನು.

ಮಧ್ಯರಾತ್ರಿಯಾಗುತ್ತ ಬಂದಿದ್ದರೂ ಕಾಲೇಜದ ಸ್ತ್ರೀಶಾಖೆಯ ವಸತಿ ಗೃಹಗಳಲ್ಲಿಯ ಒಂದು ಕೋಣೆಯಲ್ಲಿ ಇನ್ನೂ ದೀಪವು ಜಗಜಗನೆ ಪ್ರಕಾಶಿಸುತ್ತಿತ್ತು. ರಮಾಸುಂದರಿಯು ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ಬೆನ್ನು ಹಿಂದೆಯೇ ಮೇಜಿನ ಮೇಲಿಟ್ಟಿರುವ ಬೆಳ್ಳಿ ದೀಪವೃಕ್ಷದಲ್ಲಿ ಉರಿಯುತ್ತಿರುವ ಮೇಣ ಬತ್ತಿಯ ಬೆಳಕಿನಲ್ಲಿ ದ್ರುವರಯನ ಲೇಖವನ್ನು ಓದುತ್ತಿದ್ದಳು. “ಏನು ಮಾರ್ಮಿಕತೆಯಿದು! ಈ ತಾರ್ಕಿಕ ಭಾಷಾ ಸರಣಿಯು ಪ್ರತ್ಯಕ್ಷ ಮೆಕಾಲೇನದೇ. ಸ್ಟೀಲನ ತದ್ರೂಪವಾದ ವಿನೋದಲಹರಿಯಿದು. ಇದು ಹೆನ್ರಿ ಮೋರ್ಲೆನ ಅರ್ಥಪ್ರಕಾಶವು. ಇವುಗಳು ಬೇಕನ್ನನ ವಿಚಾರ ತರಂಗಗಳು. ಸಾಧು ! ಸಾಧು ! ಈ ಹೊಸ ಪಂಡಿತರು ಬರೆದಿರುವ ಬೇರೆ ಲೇಖವನ್ನು ಓದಲನುಕೂಲವಾದರೆ ಎಷ್ಟು ಉಪಯೋಗವಾಗಬಹುದು!” ಎಂದು ಅವಳು ಆಗಾಗ್ಗೆ ಉದ್ಗಾರ ತೆಗೆಯುತ್ತಿದ್ದಳು. ವಾಚನದಲ್ಲಿ ನಿಮಗ್ನಳಾದ ಆ ತರುಣಿಯು ಹೊದ್ದುಕೊಂಡಿರುವ ಶಾಲು ಅಸ್ತವ್ಯಸ್ತವಾಗಿ ಜರಿದು ಬಿದ್ದಿತ್ತು. ಬಾಯಿಯಲ್ಲಿ ಹಿಡಿದಿರುವ ಪೆನ್ಸೀಲು ಅಲ್ಲಿಯೇ ಉಳಿದಿತ್ತು. ‘ನನ್ನನ್ನು ಬಳಿಯಲ್ಲಿ ಇರಿಸಿಕೊಂಡಿದ್ದೇಕೆ? ಒಮ್ಮೆಯಾದರೂ ನನ್ನ ಮುಖವನ್ನು ನೋಡಬಾರದೆ?’ ಎಂದು ಗಡಿಯಾರವು ಸತತವಾಗಿ ಕಿಟಿಕಿಟ ಹಚ್ಚಿದ್ದರೂ ರಮಾಸುಂದರಿಯು ಅದನ್ನು ಕಣ್ಣೆತ್ತಿ ನೋಡಿದ್ದಿಲ್ಲ.

ಅಷ್ಟರಲ್ಲಿ ಬಾಗಿಲವನ್ನು ನೂಕಿ ಒಳಗೆ ಯಾರೋ ಬಂದರು. ಆದರದೂ ಅವಳಿಗೆ ಲಕ್ಷ್ಯವಿಲ್ಲ. “ರವಾಸುಂದರಿ!” ಎಂದು ಬಂದವರು ಎಚ್ಚರಗೊಳಿಸಿದರು.

ರಮಾಸುಂದರಿಯು ಆ ಧ್ವನಿಯಾದ ಕಡೆಗೆ ಮುಖ ತಿರಿವಿ ನೋಡಿದವಳೇ ಆಶ್ಚರ್ಯಚಕಿತಳಾಗಿ ಎದ್ದು ನಿಂತು “ಅವ್ವಯ್ಯಾ! ಅಮ್ಮನವರೇಕೆ ಬಂದರು!” ಎಂದು ಉದ್ಗಾರ ತೆಗೆದಳು.

“ರಮಾಸುಂದರಿ, ಏನು ಮಾಡುತ್ತಲಿದ್ದಿ ನೀನು?” ಎಂದು ಜಾನಕೀ ದೇವಿಯರು ತುಸು ಕ್ರುದ್ಧರಾಗಿ ಕೇಳಿದರು.

“ಏನೂ ಇಲ್ಲ. ತಮ್ಮದೇಕೆ ಬರೋಣ?”

“ಇದಕ್ಕೂ ಹೆಚ್ಚಿನ ಕಾರಣವಿನ್ನಂತಿರಬೇಕು? ಸರಿರಾತ್ರಿಯಾಗಿ ಹೋದರೂ ಮಲಗಿಕೊಳ್ಳುವ ವಿಚಾರವಿಲ್ಲವೆ? ಏನು ಓದುತ್ತಲಿದ್ದಿ ರಮಾ? ಕಾದಂಬರಿಯೇ?”

“ಇಲ್ಲಾ. ತಮ್ಮ ಅನುಜ್ಞೆಯಿಲ್ಲದೆ ಕಾದಂಬರಿಯನ್ನು ಹೇಗೆ ಓದಲಿ? ಧ್ರುವರಾಯರು ಬರೆದಿರುವ ಲೇಖವನ್ನು ಪಂಡಿತವರ್ಯರು (ಡಾಕ್ಟರ ಚೌಧರಿ) ಬಹುಪರಿಯಾಗಿ ಕೊಂಡಾಡಿದ್ದರಿಂದ ಅದನ್ನು ತರಿಸಿಕೊಂಡು ನಾನು ಓದುತ್ತಲಿದ್ದೆನು.”

“ಇದಕ್ಕೆ ನಮ್ಮ ಅಪ್ಪಣೆ ಬೇಡವೇನು?” ಎಂದು ಜಾನಕೀದೇವಿಯರು ಮಂದಸ್ಮಿತೆಯರಾಗಿ ಕೇಳಿದರು.

“ನಿಯಾಮಕರೇ ಈ ಲೇಖದ ಪ್ರಶಂಸೆಯನ್ನು ಮಾಡಿರುವದರಿಂದ ಇದನ್ನು ಓದಲು ಪ್ರತ್ಯವಾಯ ತೋರಲಿಲ್ಲಾದ್ದರಿಂದ ಅಪ್ಪಣೆ ಕೇಳುವದನ್ನು ಬಿಟ್ಟೆನು.”

“ಆ ಲೇಖವನ್ನು ಓದಿದ್ದರಲ್ಲಿ ದೋಷವಿಲ್ಲ ರಮಾ. ಆದರೆ ಅದನ್ನು ನೀನು ಸಂಪಾದಿಸಿದ್ದು ಹೇಗೆ?”

“ಯಾಕೆ? ಧ್ರುವರಾಯರಿಗೆ ಪತ್ರ ಬರೆದು ಈ ಲೇಖವನ್ನು ತರಿಸಿ ಕೊಂಡೆನು.”

“ಆಯಿತು, ಪುರುಷರೊಡನೆ ಪತ್ರವ್ಯವಹಾರ ಮಾಡಬೇಕಾದರೆ ನಮ್ಮ ಅಪ್ಪಣೆ ಆವಶ್ಯವಾಗಿ ಬೇಕಾಗಿತ್ತಷ್ಟೆ?”

ಈ ಮಾತು ಕೇಳಿ ರಮಾಸುಂದರಿಯು ಕಚ್ಚನೆ ನಾಲಿಗೆಯನ್ನು ಕಚ್ಚಿ “ತಪ್ಪಾಯಿತು ಸರಿ! ಆದರೆ ಅಮ್ಮನವರೆ, ನಾನು ಪತ್ರ ಬರೆದದ್ದು ಅನುಚಿತವಾಯಿತೇನು?” ಎಂದು ಅಂಜಂಜುತ್ತ ಕೇಳಿದಳು.

ಈ ಮಾತಿನ ಚರ್ಚೆಯನ್ನು ವಿಶೇಷವಾಗಿ ಮಾಡಿದರೆ ಪುರುಷರ ವಿಷಯವಾಗಿ ನಾರಿಯರಲ್ಲಿ ಹೆಚ್ಚಾದ ಕುತೂಹಲವನ್ನು ಬೆಳಿಸಿದಂತಾಗುವದೆಂದು ತಿಳಿದು ನೋಡಿ ಜಾನಕೀದೇವಿಯರು ಆ ವಿಷಯವನ್ನು ಅಲ್ಲಿಯೇ ಮುರಿಯಬೇಕಾಗಿ-

“ಹೋಗಲಿ ಬಿಡು, ಅನುಚಿತವೇನೂ ಆಗಿಲ್ಲ. ಸಂಸ್ಥೆಯ ನಿಯಮದ ನೆನಪು ಕೊಟ್ಟೆನು ಹೊರತಾಗಿ ಇದರಲ್ಲಿ ಮತ್ತೆನಿಲ್ಲ.”

ಇನ್ನೊಮ್ಮೆ ಇಂಥ ಆವಿಚಾರದ ಕೆಲಸವನ್ನು ಮಾಡುವದಿಲ್ಲೆಂದು ರಮಾಸುಂದರಿಯು ತನ್ನ ಧರ್ಮ ಮಾತೆಗೆ ಅಭಿವಚನವನ್ನಿತ್ತಳು.

“ಆಗಲಿ, ಓದು ಬರಹಕ್ಕಾದರೂ ಸಮಯಾಸಮಯದ ವಿಚಾರವಿರಬೇಕು. ಮಗುವೆ, ಗಡಿಯಾರವನ್ನು ನೋಡಬಾರದೆ? ಸರಿರಾತ್ರಿ ಮೀರಿ ಹೋಗಿದೆ. ನೋಡು, ಹಾಸಿಗೆಯನ್ನು ಕೂಡ ಬಿಚ್ಚಿಲ್ಲ” ಎಂದು ಜಾನಕೀದೇವಿಯರು ರಮಾಸುಂದರಿಯ ಮಂಚದ ಮೇಲಿದ್ದ ಹಾಸಿಗೆಯನ್ನು ಉರುಳಿಸಿದರು.

“ಅಯ್ಯೋ ಪಾಪವೆ! ನನ್ನ ಕೈಗಳೇನು ಮುರಿದಿವೆಯೇನು? ತಾವೇಕೆ ಹಾಸಿಗೆಯನ್ನು ಉರುಳಿಸಿದಿರಿ?” ಎಂದು ರಮಾಸುಂದರಿಯು ಖಿನ್ನಳಾಗಿ ನುಡಿದಳು.

“ಮತ್ತೊಂದು ಮಾತಾಡದೆ ಮಲಗಿಬಿಡು ಇನ್ನು ಇಂದಿನಿಂದ ರಾತ್ರಿಯ ಹತ್ತು ಗಂಟೆಯ ತರುವಾಯದಲ್ಲಿ ನಿನ್ನ ಕೋಣೆಯಲ್ಲಿ ದೀಪವು ಉರಿದದ್ದಾದರೆ ನಾನು ನಿನ್ನನ್ನು ಕ್ಷಮಿಸಿದವಳಲ್ಲ!” ಎಂದು ಹೇಳಿ ಜಾನಕೀದೇವಿಯರು ಹೊರಟು ಹೋದರು. ರಮಾಸುಂದರಿಯಾದರೂ ದೀಪಕ್ಕೆ ಅಪ್ಪಣೆಕೊಟ್ಟು ಮಲಗಿಕೊಂಡಳು.

ಮರುದಿವಸ ರಮಾಸುಂದರಿಯು ನಿನ್ನೆ ರಾತ್ರಿ ನಡೆದ ಸಂಗತಿಯನ್ನೆಲ್ಲ ಇಂದುಮತಿ ಚಂದ್ರಾವಲಿಯರಿಗೆ ತಿಳಿಸಿ ಜಾನಕೀದೇವಿಯರ ಶಿಷ್ಯ ವಾತ್ಸಲ್ಯವನ್ನು ಕೊಂಡಾಡಿದಳು.

“ಸರಿ ಸರಿ, ರಮಾಸುಂದರೀ, ನೀನು ಧ್ರುವರಾಯನಿಗೆ ಬರೆದ ಪತ್ರದಲ್ಲಿ ಲೇಖವನ್ನು ಕಳಿಸಿಕೊಡೆಂದು ಇಷ್ಟೆಯೇ ಬರೆದಿದ್ದೆಯೋ ಮತ್ತೇನಾದರೂ ಬರೆದಿದ್ದೆಯೋ?”

“ತಲೆ ನಿನ್ನದು! ಮತ್ತೇನು ಬರೆಯುತ್ತಾರೆ?” ಎಂದು ರಮಾಸುಂದರಿಯು ಕ್ರುದ್ಧಳಾಗಿ ಕೇಳಿದಳು.

“ಇಲ್ಲವಾದರೆ ಇಲ್ಲವೆನ್ನು, ಕೋಪವೇಕೆ?” ಎಂದು ಚಂದ್ರಾವಲಿಯು ನಕ್ಕು ನುಡಿದಳು.

“ಸುಸ್ವಭಾವದವರಾದ ಸ್ತ್ರೀ ಪುರುಷರೀರ್ವರನ್ನು ಒತ್ತಟ್ಟಿಗೆ ಇಡಬಹುದಂತೆ, ಆದರೆ ಸಮಾನವಯಸ್ಕರಾದ ಮಿಂಡೆಯರೀರ್ವರನ್ನು ಒತ್ತಟ್ಟಿಗೆ ಇಡಕೂಡದೆಂದು ಹಿರಿಯರಾಡುವದು ಅನುಭವಸಿದ್ಧವಾದ ಮಾತು” ಎಂದು ರಮಾಸುಂದರಿಯು ಜಿಗುಪ್ಸೆಯಿಂದ ತನ್ನ ಸಖಿಯರನ್ನು ನೋಡುತ್ತೆ ನುಡಿದಳು.

“ಅನುಭವಸಿದ್ದವಾದ ಮಾತುಗಳನ್ನೇ ಹಿರಿಯರು ಹೇಳುತ್ತಿರುವದುಂಟು. ಇಬ್ಬರು ಮಿಂಡೆಯರು ನಿರಂತರವಾಗಿ ಒತ್ತಟ್ಟಿಗೆ ಇರಬಹುದಾದರೆ ಗಂಡಂದಿರಿಗೆ ನಮೋ ನಮೋ ಎಂದು ನಡಕೊಳ್ಳುವ ಹಣೇಬರಹವು ಹೆಣ್ಣು ಮಕ್ಕಳ ಪಾಲಿಗೆಲ್ಲಿ ಬರುತ್ತಿತ್ತು?” ಎಂದು ಇಂದುಮತಿಯು ವಿನೋದ ಗೈಯುತ್ತೆ ನುಡಿದಳು.

ಈ ಮಾತಿಗೆ ಚಂದ್ರಾವಲಿಯು ತಾನು ಒಳಿತಾಗಿ ನಕ್ಕರೂ “ಇಂದುಮತೀ, ಅತಿಕ್ರಮಣವಾಯಿತು, ಈ ವಿಷಯವು ಸಾಕಿನ್ನು,” ಎಂದು ನಿಷೇಧಿಸಿ ರಮಾಸುಂದರಿಯನ್ನು ಕುರಿತು, “ರಮಾಸುಂದರಿ, ಧ್ರುವರಾಯರ ಲೇಖವನ್ನು ಮರಳಿ ಅವರಿಗೆ ಕಳಿಸಿದಿಯೋ?” ಎಂದು ಕೇಳಿದಳು.

ರಮಾಸುಂದರಿಗಾದರೂ ಇಂದುಮತಿಯ ಚೇಷ್ಟೆಯ ಹರಟೆಯನ್ನು ನಿಲ್ಲಿಸಬೇಕಾದ್ದರಿಂದ ಅಂದದ್ದು : “ಇನ್ನೂ ಕಳಿಸಿಲ್ಲ ಚಂದ್ರಕ್ಕಾ ಅದನ್ನು ನಮ್ಮ ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಇಟ್ಟು ಕೊಂಡಿದ್ದೇನೆ.”

ಕೆಲವು ದಿವಸಗಳಾದ ಮೇಲೆ ಒಂದು ದಿನ ಸಂಸ್ಕೃತಾಧ್ಯಾಪಕರು ಎಫ. ಏ. ತರಗತಿಯ ವಿದ್ಯಾರ್ಥಿಗಳ ವರ್ಗಕ್ಕೆ ಕಲಿಸಲು ಬರಲಿಲ್ಲ. ನಿಯಾಮಕರಾದ ಡಾಕ್ಟರ ಚೌಧರಿಯವರು ಧ್ರುವರಾಯನಿಗೆ ಅಂದು ಆ ಕೆಲಸ ಮಾಡೆಂದು ಆಜ್ಞಾಪಿಸಿದರು. ಧ್ರುವರಾಯನು ಬಂದಿರುವದನ್ನು ಕಂಡು ವಿದ್ಯಾರ್ಥಿಗಳು ಹೆದರಿಕೆಯಿಲ್ಲದೆ ತಲೆಗೊಂದೊಂದು ಪ್ರಶ್ನವನ್ನು ಮಾಡಿ ಆವನನ್ನು ಪೀಡಿಸಹೋದರು. ಆದರೆ ಆ ಚಿಕ್ಕ ಪಂಡಿತನು ನಿರಾಯಾಸವಾಗಿ ಆವರೆಲ್ಲರಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟು ಮತ್ತೇನಾದರೂ ಪ್ರಶ್ನೆಗಳಿದ್ದರೆ ಕೇಳಿಕೊಳ್ಳಿರೆಂದು ಮುಂಡಿಗೆಯೊಗೆದನು, ಬಳಿಕ ಕ್ಷುದ್ರವಾದ ಪ್ರಶ್ನೆಗಳೆಲ್ಲ ನಿಂತುಹೋದವು. ಒಂದೆರಡು ವ್ಯಾಕರಣ ಆಲಂಕಾರಗಳ ಮೇಲಿನ ಪ್ರಶ್ನೆಗಳ ಸಮಾಧಾನವಾದ ಮೇಲೆ ಆ ದಿವಸದ ವಿಷಯವು ನಡೆಯಿತು. ಔತ್ಸುಕ್ಯಮಾತ್ರಮವಸಾದಯತಿ ಪ್ರತಿಷ್ಟಃ ಎಂಬ ಶಾಕುಂತಲದಲ್ಲಿಯ ಶ್ಲೋಕದ ಅರ್ಥವು ನಡೆಯಿತು. ಅನೇಕವಾದ ಪಾಠಾಂತರಗಳ ವಿಚಾರವಾಯಿತು. ಸ್ವಹಸ್ತಕೃತವಾದ ದಂಡವುಳ್ಳ ಆತಪತ್ರಕ್ಕೂ ರಾಜ್ಯಕ್ಕೂ ಇರುವ ಸಾಮ್ಯವನ್ನು ಕುರಿತು ವಿಶದವಾದ ಊಹಾಪೋಹವಾಯಿತು. ನಮ್ಮ ವಿದ್ಯಾರ್ಥಿನಿತ್ರಯರಿಗೆ ಸಂಶಯ ನಿವಾರಣವೇ ಬೇಕಾಗಿತ್ತು ಹೊರತಾಗಿ ಸ್ವಪಾಂಡಿತ್ಯದ ಪ್ರದರ್ಶನವು ಅವರಿಗೆ ಬೇಕಾಗಿದ್ದಿಲ್ಲ. ಶ್ಲೋಕಾರ್ಥವು ಮುಗಿದ ಬಳಿಕ ಮತ್ತೆ ಪ್ರಶ್ನೆಗಳ ಸುಗ್ಗಿಯೆದ್ದಿತು. ಆಗ ಚಂದ್ರಾವಲಿಯು ತನ್ನ ಸ್ತ್ರೀ ಸ್ವಭಾವಕ್ಕನುಸರಿಸಿ ಮೆಲ್ಲನೆ ಇಂದುಮತಿಯನ್ನು ಕುರಿತು “ಧ್ರುವರಾಯನ್ನು ವಿವಾಹಿತನೋ ಅವಿವಾಹಿತನೋ?” ಎಂದು ಕೇಳಿದಳು.

“ಇದಕ್ಕಿಷ್ಟೊಂದು ವಿಚಾರವೇಕೆ? ಕಾಲೇಜದ ವಿದ್ಯಾರ್ಥಿಗಳಲ್ಲಿ ವಿವಾಹಿತರಾದವರ ನಾಮಾವಲಿಯ ಪುಸ್ತಕವು ಒಂದು ಬೇರೆಯಾಗಿಯೂ, ಅವಿವಾಹಿತರ ನಾಮಾನವಲಿಯ ಪುಸ್ತಕವು ಬೇರೆಯಾಗಿಯೂ ಸಿದ್ದವಾಗಿಯೇ ಇವೆ. ಅವುಗಳನ್ನು ಬೇಕಾದವರು ಬೇಕಾದಾಗ ನೋಡಿಕೊಳ್ಳಬಹುದಷ್ಟೆ? ಧುವರಾಯನ ಹೆಸರು ಅವಿವಾಹಿತರ ಪುಸ್ತಕದಲ್ಲಿ ಕಂಡುಬರುತ್ತದೆ” ಎಂದು ಇಂದುಮತಿ ಹೇಳಿದಳು.

“ಅಭ್ಯಾಸ ನಡೆದಿರುವ ಸಮಯದಲ್ಲಿ ಈ ಕುಚೋದ್ಯವೇಕೆ ಗೆಳತಿಯರೆ? ಅಧ್ಯಪಕರು ಹೇಳುವದನ್ನು ಕೇಳಿಕೊಂಡರೆ ಹಿತವಾದೀತು.” ಎಂದು ರಮಾಸುಂದರಿಯು ಬಾದ್ಧಿವಾದ ಮಾಡಿದಳು.

ಹೀಗೆ ಆ ಕಲಭಾಷಿಣಿಯು ನಡಿಸಿರುವ ಕಲಕಲಾಟವನ್ನು ಕೇಳಿ ಧ್ರುವರಾಯನು ಅವರ ಕಡೆಗೆ ನೋಡಿ “ನಿಮ್ಮೊಳಗೆಯೇ ಗುಜುಗುಜು ನಡೆಸಿರುವದೇಕೆ? ನಿಮಗೇನಾದರೂ ಕೇಳುವದಿದ್ದರೆ ಸಂಕೋಚವಿಲ್ಲದೆ ನನ್ನನ್ನೇ ಕೇಳಿದರಾಯಿತು” ಎಂದು ಸುಮುಖವನ್ನು ತಾಳಿ ನುಡಿದರೂ ಕಲಕಲಾಟವನ್ನು ಮಾಡಬೇಡಿರೆಂದು ಅವನು ಪರ್ಯಾಯದಿಂದ ಸೂಚಿಸಿದನು. ಆದರೆ ಆ ಲಲನೆಯರು ಧ್ರುವರಾಯನ ವಿವಾಹ ಆವಿವಾಹವನ್ನು ಕುರಿತು ನಡಿಸಿದ ಹರಟೆಗೆ, ಅವನಾಡಿದ ಮಾತು ಕಾಕತಾಳೀಯವಾಗಿ ಸಮರ್ಪಕವಾದದ್ದು ಕಂಡು ಆ ಮಾನಿನಿಯರೆಲ್ಲರಿಗೆ ನಗೆ ಬಂದಿತು. ಅತಿ ಮರ್ಯಾದ ಶೀಲೆಯಾದ ರಮಾಸುಂದರಿಯು ಕೂಡ ನಕ್ಕದ್ದನ್ನು ಕಂಡು ಧ್ರುವರಾಯನು ತಾನು ಅಪಹಾಸಕ್ಕೆ ಪಾತ್ರನಾಗಿರುವೆನೇನೆಂದು ಶಂಕಿಸಿ “ಏನು ಸಮಾಚಾರವದು ರಮಸುಂದರೀಬಾಯೀ?” ಎಂದು ಮಂದಸ್ಮಿತನಾಗಿ ಕೇಳಿದನು. ಅವನ ಮಂದಹಾಸವು ಆ ಸುಂದರಿಯರ ವಿನೋದವನ್ನು ಕೊಂದಿತು. ಧ್ರುವರಾಯನ ಪ್ರಶ್ನೆಗೆ ಏನು ಉತ್ತರವೆಂದು ಇಂದುಮತಿ ಚಂದ್ರಾವಣಿಯರು ಬೆದರಿ ನಿರುತ್ತರರಾಗಿ ಕುಳಿತರು. ರಮಾಸುಂದರಿಯೇ ಆನಿರ್ವಾಹಕ್ಕಾಗಿ ಲಜ್ಜೆಯಿಂದ ಆರಕ್ತವಾಗಿರುವ ತನ್ನ ಮುಖವನ್ನು ಬಾಗಿಸಿ “ಏನೂ ಇಲ್ಲ. ನಮಗೆಯೇ ಸ್ಪಷ್ಟವಾಗಿ ತಿಳಿಯುತ್ತಿರುವ ವಿಷಯದ ಮೇಲೆ ವ್ಯರ್ಥವಾಗಿ ಪ್ರಶ್ನೆ ಕೇಳುವದೇಕೆಂದು ನಾವು ಮಾತಾಡುತ್ತಿದ್ದೆವು. ಗಲಾಟವಾದದ್ದಕ್ಕೆ ಕ್ಷಮೆ ಇರಬೇಕು” ಎಂದು ಬಿನ್ನಯಿಸಿದಳು.

ರವಾಸುಂದರಿಯ ಧುವರಾಯನೂ ಶಾರದಾ ಪ್ರಸಾದ ಕಾಲೇಜ ದಲ್ಲಿರಹತ್ತಿ ಏಳೆಂಟು ತಿಂಗಳು ಆಗಿ ಹೋಗಿದ್ದರೂ ಅವರವರಲ್ಲಿ ಪರಿಚಯ ವುಂಟಾಗಿದ್ದಿಲ್ಲ. ಮೊನ್ನೆಯೇ ಅವಳು ಅವನಿಗೆ ಪತ್ರ ಬರೆದ ಲೇಖವನ್ನು ತರಿಸಿಕೊಂಡಿದ್ದಳು. ಇಂದು ಅವರವರ ನಡುವೆ ಮೇಲೆ ವಿವರಿಸಿದ ಒಂದೇ ಒಂದಾದ ಪ್ರಶ್ನೊತ್ತರವು ನಡೆಯಿತು. ಚಕಮಕ ಕಲ್ಲಿನ ಒಂದೇ ಹೊಡೆತದಿಂದ ಒಮ್ಮೊಮ್ಮೆ ಬೆಂಕಿಯ ಕಿಡಿಯು ಹೊರಡುವುದುಂಟು. ಒಂದೇ ಬೆಂಕಿಯ ಕಿಡಿಯಿಂದ ಏನೇನು ಚಮತ್ಕಾರಗಳುಂಟಾಗಬಲ್ಲವೆಂಬುದನ್ನು ಯಾರು ಹೇಳ ಬಲ್ಲರು? ಕುಚೋದ್ಯ ಮಾಡಿದವರಾದ ಇಂದುಮತಿ ಚಂದ್ರಾವಲಿಯರೊತ್ತಟ್ಟಿಗೆ ಉಳಿದರು. ಧ್ರುವರಾಯನ ಪ್ರಶ್ನವು ರಮಾಸುಂದರಿಯ ಮೇಲೆ ಬಿದ್ದಿತು. ಆ ಚಮತ್ಕಾರವಾದ ಪ್ರಶ್ನಕ್ಕೆ ನಿರ್ವಾಹವಿಲ್ಲದೆ ಉತ್ತರವನ್ನು ಕೊಡುವಾಗ ರಮಾಸುಂದರಿಯು ಒಳಿತಾಗಿ ನಾಚಿಕೊಂಡಳು, ಆ ನಾಚಿಕೆಯ ಹಿಡಿತಕ್ಕಾಗಿ ಸಖಿಯರ ಮುಖವನ್ನು ನೋಡಲು ಅವಳಿಗೆ ಧೈರ್ಯ ಸಾಲಲಿಲ್ಲ. ಇತ್ತ ನೋಟಕ್ಕೆ ಹಾದಿ ಕಟ್ಟಾಗಿರಲು ಆ ನೋಟವು ಫಕ್ಕನೆ ಧುವರಾಯನ ಸುಂದರವಾದ ಮುಖದ ಕಡೆಗೆ ಧಾವಿಸಿತು. ಹಗಲು ಪಂಜಿನ ಚಮತ್ಕಾರವಾದ ಪ್ರಕಾಶದಲ್ಲಿ ವಸ್ತುಗಳ ಸೌಂದರ್ಯವು ಎದ್ದು ಕಾಣುವಂತೆ ರಮಾಸುಂದರಿಯ ಹೃದಯದಲ್ಲಿ ಉದ್ಭವಿಸಿದ ಕೆಲವೊಂದು ವಿನೂತನವಾದ ಜ್ಯೋತಿಯ ಮೂಲಕ ಧುವರಾಯನ ಮುಖದ ಸೌಂದರ್ಯ ಆ ಕ್ಷಣದಲ್ಲಿ ಮನ್ಮಥನ ಸೌಂದರ್ಯವನ್ನು ಲಜ್ಜಿಸುವಂತೆ ಕಂಡಿತು. ಒಂದು ಪಳದ ಎಷ್ಟನೆಯ ಅಂಶವೋ, ಅಷ್ಟು ಅಲ್ಪ ಕಾಲ ಮಾತ್ರ ರಮಾಸುಂದರಿಯ ದೃಷ್ಟಿಯು ಸಾಭಿಲಾಷವಾಗಿ ಧ್ರುವರಾಯನ ಮುಖಚಂದ್ರಮದಲ್ಲಿ ನೆಲ್ಲಿಸಿದ್ದರೂ ಅಲ್ಪಾವಧಿಯಲ್ಲಿ ಅನುರಾಗಯುಕ್ತವಾದವುಗಳಾದ ಪರಸ್ಪರರ ಮೂರ್ತಿಗಳು ಪರಸ್ಪರರ ಹೃದಯಪಟಗಳ ಮೇಲೆ ಬಿಂಬಿತವಾದವು (ಫೋಟೋ ಹೊರಟವು). ತತ್‌ಕ್ಷಣವೇ ರಮಾಸುಂದರಿಯು ಪ್ರಜ್ಞೆಯನ್ನು ತಾಳಿ ತನ್ನ ದೃಷ್ಟಿಯನ್ನು ಮರಳಿ ಎಳಕೊಂಡು ಇನ್ನು ಮೇಲೆ ಇಂಥ ಪ್ರಮಾದವಾಗಕೂಡದೆಂದು ನಿಶ್ಚಯಿಸಿಕೊಂಡಳು. ಪಾಪ, ಬಿಂಬನಿರ್ದೇಶದ ವಾರ್ತೆಯೇ ಆ ಸಮಯದಲ್ಲಿ ಅವಳಿಗಿರಲಿಲ್ಲ. ತಲೆನೋವಿನ ನೆವಮಾಡಿ ಕೊಂಡು ರಮಾಸುಂದರಿಯು ಅಲ್ಲಿಂದೆದ್ದವಳೇ ಮನೆಗೆ ಬಂದುಬಿಟ್ಟಳು.

ಈ ಸಂಗತಿಗಳೆಲ್ಲ ಮರೆಮಾತಿಗೆ ಬಿದ್ದು ಹೋದವು. ಮತ್ತೆ ಆ ಸತಿಯರೆಲ್ಲರೂ ಯಾವ ಪ್ರಕಾರದ ವ್ಯವಧಾನವಿಲ್ಲದೆ ತಮ್ಮ ಅಭ್ಯಾಸಕ್ರಮವನ್ನು ನಡೆಸಿದರು. ಗಾನವಾದನ ಕಲೆಗಳ ಅಭಿವೃದ್ಧಿಯಾಯಿತು. ಸೂಪಶಾಸ್ತ್ರ ಪ್ರಾವೀಣ್ಯದ ಪ್ರಯೋಗಗಳಾದವು. ರಂಗವಲ್ಲಿ ಚಿತ್ರ ಕಲೆಗಳ ಪ್ರದರ್ಶನಗಳಾದವು. ಹೀಗೆ ವಿಲಾಸದಿಂದಲೂ ಉಲ್ಲಾಸದಿಂದಲೂ ಆಸ್ಥೆಯಿಂದಲೂ ಸ್ತ್ರೀ ಶಿಕ್ಷಣದ ಮಹತ್ಕಾರ್ಯವು ಯಶಸ್ಕರವಾಗಿ ನಡೆಯಿತು. ಹೀಗೆ ಕೆಲವು ದಿವಸಗಳು ಕಳೆದ ಬಳಿಕ ಒಂದು ರವಿವಾರ ದಿನ ರಮಾಸುಂದರಿಯು ಸಹಾಧ್ಯಾಯಿನಿಯರಾದ ಇಂದುಮತಿ ಚಂದ್ರಾವಲಿಯರು ಗೃಹವ್ಯವಸ್ಥೆಯ ಶಿಕ್ಷಣಕ್ಕಾಗಿ ಜಾನಕೀದೇವಿಯರ ಮನೆಯಲ್ಲಿ ಇರಹೋದರು. ರಮಾಸುಂದರಿಯು ಓರ್ವಳೇ ಬೇಸತ್ತು ಪೀಯಾನೋಪೇಟಿಯನ್ನು ತೆಗೆದು, ನಲದಮಯಂತೀನಾಟಕ ದೊಳಗಿನ “ಬಾಳಿದಿಯಾ ಮದನಾ, ನಮಗಾಗಿ” ಎಂಬ ಪದವನ್ನು ಬಾರಿಸುತ್ತಿದ್ದಳು. ಕರುಣಾರಸವ್ಯಂಜಕವಾದ ಸ್ವರಗಳು ಪಿಯಾನೋದಲ್ಲಿ ಬಹು ಮನೋವೇಧಕವಾಗಿ ಪರಿವರ್ತಿಸುತ್ತಿರಲು ಆ ನವ ಸುಂದರಿಯು ತಲ್ಲೀನಳಾಗಿ ಹೊರಗಿನ ಜಗತ್ತನ್ನು ಮರೆತು ಕುಳಿತಿದ್ದಳು. “ಬಾಳಿದಿಯಾ ಮದನಾ” ಎಂದು ಪುನರಾವರ್ತನವನ್ನು ಅವಳು ಮಾಡುವಷ್ಟರಲ್ಲಿ ಯಾವನೋ ಆವಳೆದುರಿನಲ್ಲಿ ಬಂದು ನಿಂತನು. ಮದನನೇ ಏನು? ಅಲ್ಲ, ಅವಳು ಅವನ ಪರಿಚಯದವನಾದ ಧ್ರುವರಾಯನೇ. ನೋಡನೋಡುವಷ್ಟರಲ್ಲಿ ಕಾಚ ಪಾತ್ರೆಯು ಒಡೆದು ಪುಡಿಪುಡಿಯಾಗುವಂತೆ ಧ್ರುವರಾಯನ ಪಾದಾಘಾತದಿಂದ ರಮಾಸುಂದರಿಯ ಉತ್ಸಾಹಭಂಗವಾದಂತಾಗಿ ಅವಳು ತಟಸ್ಥಳಾಗಿ ನಿಂತುಕೊಂಡಳು. “ಯಾಕೆ ಬಂದಿರುವನಾದೀತು” ಎಂದು ಅವಳು ಮನಸ್ಸಿನಲ್ಲಿಯೇ ಚಿಂತಿಸಿದರೂ ಹಾಗೆ ಕೇಳಲು ಅವಳಿಗೆ ಬಾಯಿ ಬರಲೊಲ್ಲದು. ಎದೆ ಡವಡವನೆ ಹಾರುತ್ತಿತ್ತು.

ಧ್ರುವರಾಯನ ಮನಸ್ಸಿನ ಸ್ಥಿತಿಯಾದರೂ ಹಾಗೆಯೇ ಆಗಿತ್ತು. ಆ ಸಮಯದಲ್ಲಿ ರಮಾಸುಂದರಿಯು ತನ್ನ ಮಂದಿರದಲ್ಲಿ ಓರ್ವಳೇ ಆಗಿರಬಹುದೆಂದು ನೆನಿಸಿ ಅವನು ಸಮಯವನ್ನು ಸಾಧಿಸಿ ಅಲ್ಲಿಗೆ ಬಂದಿದ್ದನಾದರೂ ಅಲ್ಲಿ ಅವಳನ್ನೇಕಾಕಿನಿಯನ್ನು ಕಂಡಾಕ್ಷಣವೇ ಅವನೆದೆಯಲ್ಲಿ ವಿದ್ಯುದಾಘಾತವಾದಂತಾಯಿತು. ಉದ್ವೇಗದಿಂದ ಒಮ್ಮೆಲೆ ಎದೆಯುಬ್ಬಿ ಅವನ ಅಂಗಾಂಗಗಳಲ್ಲೆಲ್ಲ ಒಳಗಿಂದೊಳಗೆ ರಕ್ತವು ಚಿಮ್ಮಾಡಿ ಹರಿದಾಡಲಾರಂಭಿಸಿದ್ದರಿಂದ ಪಂಚೇಂದ್ರಿಯ ವ್ಯಾಪಾರಗಳೆಲ್ಲ ಕಟ್ಟಾಗಿ ನಿಂತವು. ಕೆಲವೊಂದು ಮನೋಗತವನ್ನು ಅವನು ರಮಾಸುಂದರಿಗೆ ಅರುಹಬೇಕೆಂದು ಬಂದದ್ದು ನಿಜ; ಆದರೆ ಒಡೆದು ಹೋದ ಅವನ ಹೃದಯದೊಳಗಿನ ವಿಚಾರಗಳೆಲ್ಲ ಸೇರಿ ಹೋಗಿದ್ದವು. ಮೂಢನಂತೆ ನಿಂತುಕೊಂಡನು. ಮರ್ಯಾದಿಶೀಲೆಯಾದ ಆ ತರುಣಿಯೇ ಸಮಯವನ್ನರಿತು “ಬನ್ನಿರಿ, ಏನು ಸಮಾಚಾರ?” ಎಂದು ಹಾಗೂ ಹೀಗೂ ಮಾಡಿ ಶಿಷ್ಟಾಚಾರದ ಋಣದಿಂದ ಮುಕ್ತಳಾದಳು.

“ವಿಶೇಷವೇನೂ ಇಲ್ಲ. ಆ ನನ್ನ ಲೇಖವನ್ನು ಓದಿದ್ದಾಯಿತೇನು?” ಎಂದು ಧ್ರುವರಾಯನು ಆಸ್ವಾಧೀನಚಿತ್ತನಂತೆ ವಿಚಾರ ವಾಕ್ಯ ರಚನೆಗಳನ್ನು ಏಕೀಕರಿಸಲು ಪ್ರಯತ್ನ ಮಾಡುತ್ತೆ ಕೇಳಿದನು.

“ತಂದ ದಿವಸವೇ ಓದಿದೆನು. ಈಗಲೇ ಬೇಕಾಗಿರುವದೇನು? ಈ ಸುಲಲಿತವಾದ ಲೇಖವನ್ನು ಕನ್ನಡದಲ್ಲಿ ಭಾಷಾಂತರಿಸಬೇಕೆಂದು ಮಾಡಿದ್ದೇನೆ” ಎಂದು ಆ ಚಾರುಹಾಸೆಯು ಬಹು ವಿನಯದಿಂದ ನುಡಿದಳು.

“ಅವಶ್ಯ ಅವಶ್ಯ. ಬೇಕಾದಷ್ಟು ದಿವಸ ಇಟ್ಟು ಕೊಳ್ಳಿರಿ. ಲೇಖವು ನಿಮ್ಮ ಮನಸ್ಸಿಗೆ ಬಂದಿರುವದೇನು?”

ರಮಾಸುಂದರಿಯು ಈಗ ಪ್ರಶಸ್ತವಾಗಿ ನಕ್ಕಳು. “ಧ್ರುವರಾವ್, ಪ್ರತ್ಯಕ್ಷ ಪಂಡಿತಜೀಯವರು (ಡಾಕ್ಟರ ಚೌಧರಿ) ತಲೆದೂಗಿದ ಲೇಖದ ವಿಷಯವಾಗಿ ನಾನು ಅಭಿಪ್ರಾಯವನ್ನು ಕೆಡಿಸಲು ಯೋಗ್ಯಳೆ ? ಇದಕ್ಕೂ ದೊಡ್ಡ ದೊಡ್ಡವಾದ ಲೇಖಗಳನ್ನು ನೀವು ಬರೆದದ್ದು ನೋಡುವ ಭಾಗ್ಯವು ನನ್ನದಿರಲಿ!”

“ರಮಾಸುಂದರೀಬಾಯಿ, ನಿಮ್ಮ ಅಭಿಪ್ರಾಯವನ್ನು ಕೇಳಿ ನಾನು ಕೃತಾರ್ಥನಾದೆನು. ನೀವು ಹೇಳಿದಂತೆ ಅನೇಕ ಲೇಖಗಳನ್ನು ಬರೆಯಬಹುದಾದರೂ ಮನಸ್ಸಿಗೇಕೋ ಉತ್ಸಾಹವಿಲ್ಲದಂತಾಗಿದೆ.” ಎಂದು ಧ್ರುವರಾಯನು ದೀನಮುಖನಾಗಿ ನುಡಿದನು.

“ಹಾಗೆ ಕಾಣುತ್ತದೆ. ನಿಮ್ಮ ಮುಖದ ತೇಜಸ್ಸು ಕಡಿಮೆಯಾಗಿದೆ. ಸೊರಗಿಯೂ ಇರುವಿರಿ, ಏನು ಚಿಂತೆಯಾಗಿದೆ? ಮನೆಯಲ್ಲಿ ಎಲ್ಲರೂ ಕ್ಷೇಮದಿಂದಿರುವರಷ್ಟೆ?”

ಧ್ರುವರಾಯನು ವಿಷಾದದಿಂದ ನಕ್ಕು “ದೇವರ ಕೃಪೆಯಿಂದ ಮನೆಯಲ್ಲಿ ಎಲ್ಲರೂ ಕೇಮದಿಂದಿರುವರು” ಎಂದು ಹೇಳಿದನು.

“ಹಾಗಾದರೆ ಚಿಂತೆಗೆ ಮತ್ತಿನ್ನೇನು ಕಾರಣ?”

“ಚಿಂತೆಗೆ ಸಾವಿರ ಕಾರಣಗಳು, ಸೌಖ್ಯದ ಕಲ್ಪನೆಯನ್ನು ಏರಿಸಿ ಕಟ್ಟುತ್ತೆ ನಡೆದರೆ ಅಲ್ಲಿಯೇ ಚಿಂತೆಯು. ಮರದ ತುದಿಯಲ್ಲಿರುವ ಹಣ್ಣನು ಬಯಸಿದರೆ ಅದು ಹೇಗೆ ತಾನೆ ಸುಲಭವಾಗಿ ಸಾಧ್ಯವಾದೀತು?” ಎಂದು ಆ ತರುಣನು ರಮಾಸುಂದರಿಯ ಮುಖಾರವಿಂದವನ್ನು ಔತ್ಸುಕ್ಯದಿಂದ ನೋಡುತ್ತೆ ನುಡಿದನು.

ಚಿಂತೆಯ ಕಾರಣದ ಭಾಸವು ರಮಾಸುಂದರಿಯ ಮನಸ್ಸಿಗೆ ಆಕಸ್ಮಾತ್ತಾಗಿ ಜಗ್ಗನೆ ಹೊಳೆದಂತಾಯಿತು. ಧುವರಾಯನಿನ್ನು ಏನು ಹೇಳುವನೋ ಏನು ಬಿಡುವನೋ ಹೇಗೆ ಮಾಡಲೆಂದು ಅವಳು ಕಾತರಳಾದಳು.

“ರಮಾಸುಂದರಿ, ಕಾತರಳಾಗದೇಡ, ಅವಿಚಾರದ ಮಾತುಗಳನ್ನೇ ನಾನು ಆಡತಕ್ಕವನಲ್ಲ. ನನ್ನ ಚಿಂತೆಯ ಕಾರಣವನ್ನು ನಿನ್ನ ಮುಂದೆ ಹೇಳಿದರೆ ಪ್ರಯೋಜನವಾಗುವದೋ ಇಲ್ಲವೋ ಎಂಬ ಮಾತಿನ ಪೂರ್ವಾಪರವನ್ನು ಚನ್ನಾಗಿ ತೂಗಿ ನೋಡಿದ ಬಳಿಕ ನಿನಗೆ ತಿಳಿಸಬಹುದಾದರೆ, ತಿಳಿಸುವೆನು.” ಎಂದು ಮುಗಿಸಿದವನೇ ಆ ಪಂಡಿತನು ಮೂಢನಂತೆ ಓಡಿ ಹೋದನು.

ದೇವರು ಹೇಳುವ ಪೂಜಾರಿಯ ಸಂದಿಗ್ಧವಾದ ನುಡಿಗಳಂತೆ ಧ್ರುವರಾಯನೇನೋ ಮಾತನಾಡಿ ಹೋದಬಳಿಕ ರಮಾಸುಂದರಿಗೆ ಒಳ್ಳೆ ವಿಚಾರ ಉಂಟಾಯಿತು. ಅವನ ಮನಸ್ಸಿನೊಳಗಿನ ಭಾವವೇನಿರುವದೋ ಇರಲಿ. ಅವನ ಚಿಂತೆಯ ಚಿಂತೆ ನನಗೇಕೆ? ಮನೋಜ್ಞನಾದ ತರುಣನ ನಡೆ ನುಡಿಗಳನ್ನು ನಿರೀಕ್ಷಿಸುವದೂ, ಅವನ ಹಿತಾಹಿತಗಳ ವಿಷಯವಾಗಿ ವಿಚಾರ ಮಾಡುವದೂ ಸ್ತ್ರೀಯರಲ್ಲಿ ಪ್ರೇಮದ ಪ್ರಥಮ ಲಕ್ಷಣವೆಂದು ಅನುಭವಿಕರ ಅಭಿಪ್ರಾಯವು. ಇದೊಂದೇಕೆ, ಮೊನ್ನೆದಿನ ಆ ಹೋಯ್ನಾಲೆಯಾದ ಇಂದುಮತಿ ಪ್ರೇಮದ ಮೀಮಾಂಸೆಯನ್ನು ಕುರಿತು ಹರಟೆ ಕೊಚ್ಚುತ್ತಿರುವಾಗ ಅಂದದ್ದು: “ರಮಾಸುಂದರಿ, ಪ್ರಿಯನಲ್ಲಿ ನಿನ್ನ ಪ್ರೇಮವಿನ್ನೂ ನೆಲೆಸಿಲ್ಲವೆಂದು ತಿಳಿ; ಆದರೆ ನಿನ್ನ ತಂದೆಯವರು ನಿನ್ನನ್ನು ವಿಜಯಪುರದ ಧ್ರುವರಾಯನಿಗೆ ಕೊಡುವೆವೆಂದು ಸಂಕಲ್ಪ ಮಾಡಿದರೆ ಒಲ್ಲೆನೆನ್ನಲು ನೀನು ಸಿದ್ಧಳಾಗಿರುವೆಯೇನು? ಒಲ್ಲೆನೆಂದು ಸಹಸಾ ಹೇಳುವದಾಗದಿದ್ದರೆ ಅಲ್ಲಿಯೇ ಪ್ರೇಮದ ಉತ್ಪತ್ತಿಯು.” ಆ ಗೈಯಾಳಿಯ ವಾದವು ಇನ್ನೂ ನನ್ನ ಎದೆಯಲ್ಲಿ ಕಟೆಯುತ್ತಲಿದೆ. ವಿಚಾರ ಮಾಡಿಮಾಡಿದ ಹಾಗೆ ಪ್ರೇಮದ ಬೇರು ಹೆಚ್ಚು ಹೆಚ್ಚಾಗಿ ತಳವೂರಿಕೊಂಡಂತೆ ಕಾಣುತ್ತದೆ.”

“ಸಾಕು ಸಾಕು! ಈ ವಿಚಾರವೇ ಬೇಡ” ಹೀಗೆ ಪ್ರತಿಜ್ಞೆ ಮಾಡಿಕೊಂಡು ರಮಾಸುಂದರಿಯು ಒಳ್ಳೇ ಆಢ್ಯತೆಯಿಂದ ತಲೆ ಎತ್ತಿ ಎಡೆಯಾಡಲಾರಂಭಿಸಿದಳು. ಒಳ್ಳೇ ವೇಗದಿಂದ ಭ್ರಮಿಸುತ್ತಿರುವ ವಿಚಾರಚಕ್ರವನ್ನು ತಟ್ಟನೆ ತಡೆದು ನಿಲ್ಲಿಸುವನೆಂದರೆ ಯೋಗಿಯಾದವನಿಗೂ ಅಸಾಧ್ಯವು. ರಮಾಸುಂದರಿಯ ಮನಸ್ಸು ಮತ್ತೆ ಆ ವಿಚಾರಚಕ್ರದ ಗಿರಕಿಗೆ ಸಿಕ್ಕಿ ಸುತ್ತಿಕೊಂಡು ನಡೆಯಿತು.

“ಇಲ್ಲಿಗೆ ಧ್ರುವರಾಯನು ಬಂದ ಉದ್ದೇಶವೇನು? ಲೇಖವನ್ನು ಮರಳಿ ತೆಗೆದುಕೊಳ್ಳಲಿಕ್ಕೆಯ? ಹಾಗೆ ತೋರುವದಿಲ್ಲ. ಕಾಲೇಜದಲ್ಲಿ ನನಗೆ ಸಮಕ್ಷಮವಾಗಿ ಹಾಗೆ ಹೇಳಿದ್ದರೆ ನಾನು ಅದನ್ನು ಕಳಿಸಿಕೊಡುತ್ತಿದ್ದೆನು; ಇಲ್ಲವೆ, ಜವಾನನೊಡನೆ ಹೇಳಿ ಕಳಿಸಿದ್ದರೂ ಆಗುವಂತಿತ್ತು. ಈ ಸಂಸ್ಥೆಯ ಕಾರ್ಯಕ್ರಮವನ್ನು ಓದಿದವರಿಗೆ ಇಂದು ಈ ಕೋಣೆಯಲ್ಲಿ ನಾನೋರ್ವಳೇ ಇರುವೆನೆಂಬ ಮಾತು ತಿಳಿಯದೆ ಇರದು. ಈ ಸಂಗತಿಯನ್ನರಿತು ಧ್ರುವರಾಯನು ಹೊತ್ತು ಸಾಧಿಸಿಕೊಂಡು ಬಂದಿದ್ದನೇನು? ಇರಬಹುದು, ಆದರೆ ಆ ಸುಶೀಲನು ದುರ್ವಿಚಾರಪ್ರೇರಿತನಾಗಿ ಬರಲಿಲ್ಲ. ಅವನ ಆಚರಣವೇ ತಾನಾಗಿ ಹೇಳುತ್ತದಲ್ಲ! ಹಾಗಾದರೆ ಆ ಅವಿವಾಹಿತನಾದ ತರುಣನು ಪ್ರೇಮಪರವಶನಾಗಿ ತನ್ನ ಮನೋಗತವನ್ನು ನನಗೆ ತಿಳಿಸಲು ಬಂದಿದ್ದನೇನು? ಆಗಿದ್ದಿತು. ನಾನೋರ್ವಳೇ ಸರ್ವಗುಣ ಸಂಪನ್ನೆ ಯಾದ ಚದುರೆಯೇನು?” ಈ ಪ್ರಶ್ನಕ್ಕೆ ಅವಳ ಆತ್ಮವಿಶ್ವಾಸದ ನಗೆಯೇ ಸಮರ್ಪಕವಾದ ಉತ್ತರವಾಗಿತ್ತು.

ಪ್ರಾತಃಸ್ನಾನ, ಅಭ್ಯಾಸ, ಭೋಜನ, ಕಾಲೇಜದಲ್ಲಿಯ ಶಿಕ್ಷಣ, ಸಖೀ ಜನರ ಸಹವಾಸಗಳು ಚಕ್ರನೇಮಿಕ್ರಮದಿಂದ ನಡೆಯುತ್ತಿದ್ದರೂ ಧ್ರುವನ ನಿಶ್ಚಲವಾದ ಮೂರ್ತಿಯು ರಮಾಸುಂದರಿಯ ಕಣ್ಣು ಮುಂದೆ ಕಟ್ಟಿಯೇ ಇರುತ್ತಿತ್ತು. ಏಕಾಂತವಾಸದಲ್ಲಿದ್ದರಂತೂ ಆ ವಿಚಾರದಲ್ಲಿ ಅವಳು ಸಮಗ್ರವಾಗಿ ಮುಳುಗಿಹೋಗುತ್ತಿದ್ದಳು. ಅದಕ್ಕಾಗಿ ಅವಳು ಸಹಸಾ ಏಕಾಕಿನಿ ಯಾಗಿರುತ್ತಲೇ ಇದ್ದಿಲ್ಲ. ಒಂದು ದಿನ ಅವಳ ಈ ಸ್ಥಿತಿಯಲ್ಲಿ ಅಂಚೆಯವನು ಅವಳ ಕೈಯಲ್ಲಿ ಒಂದು ಪತ್ರವನ್ನು ತಂದುಕೊಟ್ಟನು, ಮೇಲ್ವಿಳಾಸವು ಧ್ರುವರಾಯನ ಹಸ್ತಾಕ್ಷರದ್ದು. ಪತ್ರದ ಅಭಿಪ್ರಾಯವು ಆಗಲೆ ಅವಳಿಗೆ ವಿದಿತವಾಯಿತು. ಹುಟ್ಟಿನಲ್ಲಿ ಜೇನಿರುವದೆಂಬದನ್ನು ಹಿಂಡಿ ತೋರಿಸಿ ಬೇಕೆ? ರಮಾಸುಂದರಿಯು ಆ ಪತ್ರವನ್ನು ಮೇಜಿನ ಮೇಲಿಟ್ಟು ಓದುವಷ್ಟು ಮನಃಸ್ವಾಸ್ಥವಾಗಲೆಂದು ಎರಡೂ ಕೈಗಳಿಂದ ಕಣ್ಣು ಮುಚ್ಚಿಕೊಂಡು ಒಳಿತಾಗಿ ಉಸುರಾಡಿಸುತ್ತೆ ಕುಳಿತುಕೊಂಡಳು.

ಅಂಥ ಪತ್ರವನ್ನು ಹಾಗೆ ಇಟ್ಟು ಕೊಂಡರೆ ಅದು ಸುಮ್ಮನೆ ಕುಳ್ಳಿರಗೊಡಿಸುವದೆ? ಎರಡು ಮೂರು ನಿಮಿಷಗಳಲ್ಲಿಯೇ ಅವಳು ಅದನ್ನು ಒಡೆದು ಓದಿದಳು. ಓದುವಾಗಲೆ ಅವಳ ಸರ್ವಾಂಗವೆಲ್ಲ ಬೆವತಿತು. ಅವಳ ಮುಖದಲ್ಲಿ ಒಮ್ಮೆ ದರ್ಪವೂ ಒಮ್ಮೆ ಮಂದಹಾಸವೂ ಒಮ್ಮೆ ಲಜ್ಜೆಯ ರಕ್ತತೆಯೂ ಒಮ್ಮೆ ವಿಚಾರದ ಗಾಂಭೀರ್ಯವೂ ಕ್ರಮಕ್ರಮವಾಗಿಯೂ ಸಂಕುಲಿತವಾಗಿಯೂ ತೋರಿದವು. ಓದುವದಾದ ಕೂಡಲೆ ಅವಳು ಆ ಪತ್ರವನ್ನು ತನ್ನ ಉಡಿಯಲ್ಲಿಟ್ಟು ಕೊಂಡು, ಉಪವನದಲ್ಲಿ ಅಡ್ಡಾಡ ಹೋದಳು. ಆಕೆ, ಅವಸರದಲ್ಲಿ ಆ ಪತ್ರವು ಇಲ್ಲಿ ಜಾರಿ ಬಿದ್ದಿದೆ. ಇದೇ ಸಮಯ ಓದಿ ಕೊಳ್ಳಿರಿ.

ಪ್ರಿಯ ರಮಾಸುಂದರಿ,

ನನ್ನಲ್ಲಿ ಜನಿಸಿದ ಕೆಲವೊಂದು ಅಭಿಪ್ರಾಯವನ್ನು ನಿನಗೆ ನಿವೇದಿಸಲೆಂದು ಮೊನ್ನೆದಿನ ಬಂದಿದ್ದೆನು. ಆದರೆ ಆಗ ನನ್ನ ಮನಸ್ಸು ಯಾಕೋ ಸಂಕೋಚಗೊಂಡಿದ್ದರಿಂದ ಹಾಗೆಯೇ ಹೊರಟುಹೋದೆನು. ನನ್ನ ಅಭಿಪ್ರಾಯವು ಚತುರೆಯಾದ ನಿನಗೆ ಅವಶ್ಯವಾಗಿ ವಿದಿತವಾಗಿರಲಿಕ್ಕೆ ಬೇಕು. ಸಂದೇಹಚ್ಛೇದವಾಗದಿದ್ದಲ್ಲಿ ಈ ಪತ್ರದ ಮೊದಲನೆಯ ವಳಿಯಲ್ಲಿಯ ಸಂಬೋಧನವು ಸೂಚಕವಾಗಿರುವದು. ನಾಳಿಗೆ ನಾನು ಮತ್ತೆ ನಿನ್ನ ಸನ್ನಿಧಾನಕ್ಕೆ ಬಂದು ನನ್ನ ಮನಸ್ಸನ್ನು ನಿನ್ನ ಮುಂದೆ ತೋಡಿಕೊಳ್ಳುವೆನು. ಇದು ನಾಳಿನ ಸಂದರ್ಶನದ ಪೂರ್ವ ಪೀಠಿಕೆಯು.

ನಿನ್ನ….. (ಯಾರೆಂದು ಹೇಳಲಿ?)
ಧ್ರುವರಾಯ

ಭ್ರಮಿಷ್ಟಳಂತೆ ರಮಾಸುಂದರಿಯು ಉಪವನದಲ್ಲಿ ಆತ್ತಿತ್ತ ಅಡ್ಡಾಡಿದಳು. ಸ್ನಿಗ್ಧವಾದ ತರಚ್ಛಾಯೆಯಲ್ಲಿರುವ ಶಿಲಾತಲದಲ್ಲಿ ವಿಶ್ರಮಿಸಿ ಕೊಳ್ಳಬೇಕೆಂದು ಹೊರಟವಳು ಅದನ್ನು ಮರೆತು ಕಾರಂಜಿಯು ಪುಟಿಯುತ್ತಿರುವ ಸ್ಥಳಕ್ಕೆ ಬಂದಳು, “ಈ ಸ್ಥಳಕ್ಕಾದರೂ ಏನಾಗಿದೆ?” ಎಂದು ಸಮಾಧಾನ ಹೊಂದಿ ಆ ಸುಂದರಿಯು ಅಲ್ಲಿರುವ ಅಂದವಾದ ಚಿಕ್ಕ ಹೊಂಡದಲ್ಲಿ ಕೈಕಾಲು ಮೋರೆಗಳನ್ನು ತೊಳೆದು ಬಳೆಯಲ್ಲಿಯೇ ಇರುವ ಕಟ್ಟಿಯ ಮೇಲೆ ಕುಳಿತು ವಿಚಾರ ನಡಿಸಿದಳು.

“ಇದಕ್ಕೂ ವ್ಯಕ್ತವಾಗಿ ಅವರು ಇನೆಂತು ಬರೆಯಬೇಕು? ನಾಳಿಗೆ ಬಂದು ಎರಡರಲ್ಲಿ ಒಂದು ಹೇಳೆಂದರೆ ಏನು ಹೇಳಲಿ? ಅನುಮತಿಸಲೆ? ಅನುಮತಿಸಲು ನಾನು ಸ್ವತಂತ್ರಳಲ್ಲ; ತಂದೆ ತಾಯಿಗಳು ಕೊಟ್ಟ ಮನೆಗೆ ಹೋಗತಕ್ಕವಳು, ಒಲ್ಲೆನೆಂದು ಹೇಳಲಿಕ್ಕಾದರೂ ನಾನೆಲ್ಲಿ ಸ್ವತಂತ್ರಳು? ಮನಸ್ಸು ಮೊದಲೇ ಅವರ ಸ್ವಾಧೀನವಾಗಿ ಹೋಗಿದೆ,” ಎಂದು ವಿಚಾರಿಸುತ್ತೆ ರಮಾಸುಂದರಿಯು ಫಕ್ಕನೆ ಎದ್ದು ಪ್ರಫುಲ್ಲಿತವಾದ ದವನದ ದಳವನ್ನು ಚಿವುಟಿ ಮೂಸಿನೋಡಿ “ದವನದ ಸುಗಂಧವೇ ಇದು, ನನಗೆ ಮತಿಭ್ರಮವಿನ್ನೂ ಆಗಿಲ್ಲ” ಎಂದು ಒಳಿತಾಗಿ ನಕ್ಕು, ಮತ್ತೇನೋ ವಿಚಾರಸುತ್ತೆ ಅಡ್ಡಾಡಿ ಮತ್ತೆ ಮೊದಲಿನ ಸ್ಥಳದಲ್ಲಿ ಬಂದು ಕುಳಿತಳು. “ಬ್ರಹ್ಮಾನುಕೂಲವಿದ್ದಂತೆ ಆದೀತು. ಆದರೆ ಇಂದಿಗೆ ನನ್ನ ವಿದ್ಯಾಭ್ಯಾಸಕ್ಕೆ ಕೃಷ್ಣಾರ್ಪಣ ವೆಂದಂತಾಯಿತು. ಗಡಿಯಾರದ ಅಂದೋಲನದಂತೆ ವಿಚಾರಗಳು ಸಂತತವಾಗಿ ನನ್ನ ತಲೆಯಲ್ಲಿ ಹೊಯ್ದಾಡುತ್ತಿರುವಾಗ ನಾನು ಓದುವದೇನು ಬರೆಯುವದೇನು?

ನನ್ನದೇನಾದರೂ ಆಗಲಿ, ಈ ಕಥಾನಾಯಕನ ಅವಸ್ಥೆಯೇನು? ದೃಢಾಂಗರೂ ತೇಜಸ್ಸುಳ್ಳ ರಕ್ತದವರೂ ಆದವರ ವಿಕಾರವಶತೆಯು ಅಧಿಕವಾಗಿರಲೇ ಬೇಕು. ಅವರು ಅಂಥ ವಿಕಾರವಶತೆಯನ್ನು ವಿವೇಕದಿಂದ ದಬ್ಬಿಡಬಹುದು. ಆದರೆ ಆ ವಿವೇಕದ ಸಾಮರ್ಥ್ಯವೆಷ್ಟಿರಬೇಕು ಬಲ್ಲಿರಾ? “ಧ್ರುವರಾಯನ ಬಲವು ಕುಂದಿಹೋಗಿದೆ. ಅವರ ಮುಖವು ಕಳೆಗುಂದಿ ಹೋಗಿದೆ. ಅವರ ಅಭ್ಯಾಸಕ್ರಮವು ನಿಂತು ಹೋಗಿದೆ” ಎಂದು ಪ್ರಕ್ಷ್ಯಕ್ಷ ಪಂಡಿತಜಿಯವರು ಚಿಂತಾಕುಲರಾಗಿದ್ದಾರೆ. ಪಂಡಿತಜಿಯವರ ತರುವಾಯ ಈ ಕಾಲೇಜದ ಚಾಲಕರು ಧ್ರುವರಾಯರೇ ಎಂದು ರಾಜಾ ದೀನದಯಾಲರೇ ಮುಂತಾದ ಮಹಾತ್ಮರು ಆಶೆಯನ್ನು ತಳೆದಿರಲು ನನಗೋಸ್ಕರವಾಗಿ ಅಂಥ ಮಹತ್ಕಾರ್ಯದ ಹಾನಿಯಾಗುವ ಹೊತ್ತು ಬಂದೊದಗಿದಂತಾಗಿದೆ, ಏನು ಮಾಡಲಿ? ಬಹಳೊತ್ತು ಅವಳು ಆಲೋಚಿಸಿದಳು, ಬಹಳೊತ್ತು ಅಡ್ಡಾಡಿದಳು, ಬಗೆ ಹರಿಯಲಿಲ್ಲ. “ಆಗಲಿ, ನಾಳಿನತನಕ ಅವಕಾಶವಿರುವದಲ್ಲ; ಅಷ್ಟರಲ್ಲಿ ದೇವರು ಬುದ್ಧಿ ಕೊಟ್ಟಂತೆ ಮಾಡಬಹುದು.”

ಬೆಳಗಾಗುವದರೊಳಗಾಗಿ ಧ್ರುವರಾಯನ ಕೈಯಲ್ಲಿ ರಮಾ ಸುಂದರಿಯು ಬರೆದ ಕಾರ್ಡು:

ಶಾರದಾಪ್ರಸಾದ ಕಾಲೇಜದ “ಫೆಲೋ” ಇವರಿಗೆ ರಮಾಸುಂದರಿಯ ವಿನಂತಿ :

ಏನು ನಿಮಿತ್ತವೊ ತಲೆನೋವು ಹೆಚ್ಚಾಗಿದೆ. ಅದಕ್ಕಗಿ ಇಂದು ವಿದ್ಯಾ ಮಂದಿರಕ್ಕೆ ಬರುವದಾಗುವದಿಲ್ಲ. ಶ್ರುತವಿರಬೇಕು.

ತಮ್ಮ ವಿಧೇಯಳಾದ,
ರಮಾಸುಂದರಿ.

ಧ್ರುವರಾಯನು ಆ ಕಾರ್ಡನ್ನು ಮೇಜಿನಮೇಲಿಟ್ಟು ಅದರ ಮೇಲೆ ತನ್ನ ಹಸ್ತವನ್ನು ಒಳಿತಾಗಿ ಅಪ್ಪಳಿಸಿದನು. ಆ ರಭಸದ ಹೊಡೆತಕ್ಕೆ ಮೇಜು ಒಳಿತಾಗಿ ಆದರಿತು, ಆಫೀಸದ ಕೋಣೆಯಲ್ಲೆಲ್ಲ “ಧಮ್ಮೆಂದು” ದರವು ಹಿಡಿಯಿತು. “ಏನು ಮಾಡಿದಳೀಕೆ! ಇಂದು ನಾನು ಅವಳ ಸನ್ನಿಧಾನಕ್ಕೆ ಬರುವೆನೆಂದು ಬೇಡಿಕೊಂಡಿದ್ದೆನು. ನಾನು ಬರಬಾರದೆಂಬವೇ ಈ ಕಾರ್‍ಡಿನ ಅರ್ಥವಿರಬಹುದೇನು?” ಮತ್ತೆ ಅಡ್ದಾಡಿ ವಿಚಾರಿಸಿ “ಹೀಗೂ ಇರಬಹುದು: ಪ್ರಾತಃ ಕಾಲದಲ್ಲಿ ಹೋದರೆ ಆ ಚತುರೆಯ ಸಖಿಯರಾದ ಇಂದುಮತಿ ಮುಂತಾದವರು ಬಳಿಯಲ್ಲಿಯೇ ಇರುವರು, ಮಧ್ಯಾಹ್ನದಲ್ಲಿಯಂತೂ ಕಾಲೇಜಕ್ಕೆ ಬರತಕ್ಕದ್ದು. ‘ಮಧ್ಯಾಹ್ನದಲ್ಲಿ ಮನೆಯಲ್ಲಿ ನಾನೋರ್ವಳೇ ಇರುತ್ತೇನೆ. ಆಗ ನೀವು ಬನ್ನಿರಿ’ ಎಂಬದೇ ಈ ಕಾರ್ಡಿನ ನಿಜವಾದ ಅಭಿಪ್ರಾಯವು.” ಎಂದವನೇ ಸ್ತ್ರೀಣಾಮಶಿಕ್ಷಿತಪಟ್ಟುತ್ವ ಕಾಮ್ಮನುಪೋಷು ಸಂಘಶ್ಯತೇ ಕಿಮುತಃ ಯಾ ಪ್ರತಿಬೋಧವತ್ಯಃ ಎಂದು ಕೂಗಿ ಹಾಡಿದನು.

ಆಮೇಲೆ ಅವನು ಆ ಕಾರ್ಡನ್ನು ಜೋಡಿಸಿ ಕಾಲೇಜದ ವೈದ್ಯರಾದ ಕವಿರಾಜ ನರೇಂದ್ರನಾಥ ಚತರ್ಜಿಯವರಿಗೆ ಒಂದು ಪತ್ರ ಬರೆದು “ಈ ವಿದ್ಯಾರ್ಥಿನಿಗೆ ಬೇಗನೆ ಆರೋಗ್ಯವಾಗುವಂತೆ ಮಾಡ ಬೇಕು.” ಎಂದು ವಿಶೇಷ ಸೂಚನೆಯನ್ನು ಕೂಡಾ ಬರೆದನು. ಮಧ್ಯಾಹ್ನ ಮೀರುವದರೊಳಗಾಗಿ ಕವಿರಾಜರ ಉತ್ತರ ಬಂದಿತು. “ರಮಾಸುಂದರೀ ದೇವಿಯ ತಲೆನೋವಿಗೆ ಮನಸ್ತಾಪವೇ ಕಾರಣವು. ಮೇಲುಪಚಾರದಿಂದ ವಿಶೇಷವಾದ ಪ್ರಯೋಜನವಾಗದು. ಆದರೂ ನೋವು ಕಡಿಮೆಯಾಗುವಂತೆ ವ್ಯವಸ್ಥೆ ಮಾಡಿದೆ.”

ಆಯತ್ತವಾಗಿ ನೆಟ್ಟಗಾಯಿತು. ರಮಾಸುಂದರಿಯ ಮನೆಗೇಕೆ ಹೋಗಿದ್ದೆಯೆಂದು ಯಾರಾದರೂ ಕೇಳಿದರೆ ರೋಗಿಯಾದ ವಿದ್ಯಾರ್ಥಿನಿಯ ಸಮಾಚಾರಕ್ಕೆ ವ್ಯವಸ್ಥಾಪಕನಾದ ನಾನು ಹೋಗಬೇಡವೆ? ಲಗಬಗೆಯಿಂದ ಪೋಷಾಕು ಮಾಡಿಕೊಂಡು ಅವನು ರಮಾಸುಂದರಿಯು ಇರುವ ಸ್ಥಳದ ಕಡೆಗೆ ಎಡವುತೆ ಮುಗುತ್ತೆ ಓಡಿದನು. ಇವನು ಬರುವನೆಂದು ನಿಶ್ಚಯವಾಗಿ ತಿಳುಕೊಂಡು ಆ ರಮಣಿಯು ತನ್ನ ವ್ಯವಸ್ಥೆಯಲ್ಲಿಯೇ ಇದ್ದಳು. “ಕಲೋನ ವಾಟರ”ದಲ್ಲಿ ( ಒಂದು ಪ್ರಕಾರದ ಓಷಧಿಯ ನೀರು ) ತೋಯಿಸಿದ ವಸ್ತ್ರವನ್ನು ತಲೆಗೆ ಕಟ್ಟಿಕೊಂಡು ಅವಳು ಹಾಸಿಗೆಯಲ್ಲಿ ಮಲಗಿದ್ದಳು. ಸಮೀಪದಲ್ಲಿಯೇ ಧ್ರುವರಾಯನಿಗಾಗಿ ಒಂದು ಕುರ್ಚಿಯನ್ನೂ ಮೇಜಿನ ಮೇಲೆ ಚಿನೀ ಚಂಬುವಿನಲ್ಲಿ ತುಂಬಿಟ್ಟ ಹಾಲನ್ನೂ ಇರಿಸಿದ್ದಳು. ಬಾಗಿಲನು ತೆರೆದೇ ಇಟ್ಟಿತ್ತು.

ಧುವರಾಯನು ಬಂದವನೇ ಸಂತೋಷವ್ಯಂಜಕವಾಗಿ ಮಂದಹಾಸವನ್ನು ತಳೆದು “ಪ್ರಕೃತಿ ಹೇಗಿದೆ?” ಎಂದು ಕೇಳಿದನು.

“ಹೇಗೇನು? ನೆಗಡಿ ಕೆಮ್ಮುಗಳು ಬೇನೆಯಲ್ಲ, ನತ್ತು ಬುಗುಡಿ ಆಭರಣಗಳಲ್ಲವೆಂಬ ನಾಣ್ನುಡಿ ಇರುವದಿಲ್ಲವೆ?” ಎಂದು ರಮಾಸುಂದರಿಯಾದರೂ ಅಹುದೋ ಅಲ್ಲವೋ ಎಂಬಷ್ಟು ನಗೆ ತಳೆದು ನುಡಿದಳು.

ಧ್ರುವರಾಯನು ನಾಲ್ಕಾರು ನಿಮಿಷದವರೆಗೆ ಕೆಳಗೆ ಮೋರೆಯನ್ನು ಮಾಡಿಕೊಂಡು ತನ್ನ ಕೈಯಲ್ಲಿರುವ “ಮಲಕ್ಕಾ” ಬೆತ್ತದಿಂದ ನೆಲವನ್ನು ಗೀಚುತ್ತೆ ವಿಚಾರಗೈದು ಮನಸ್ಸಿನ ನಿಶ್ಚಯವಾದ ಬಳಿಕ ರಂಆಸುಂದರಿಯ ಮುಖವನ್ನು ದಿಟ್ಟಿಸಿ ನೋಡಿ “ನಿನ್ನೆ ನಾನು ಬರೆದ ಪತ್ರವು ನಿಮಗೆ ತಿರಬಹುದು?” ಎಂದು ಕೇಳಿದನು.

“ಆಹುದು ಧೃವರಾವ್, ನಿಮ್ಮಂಥ ಸದಸದ್ವಿವೇಕವುಳ್ಳ ಪಂಡಿತರು ಅಂಥ ಅಪ್ರಯೋಜಕವಾದ ಪತ್ರವನ್ನು ಹೇಗೆ ಬರೆದಿರೋ ಏನೋ!” ಎಂದು ಆ ಧೀರೆಯು ಗಂಭೀರವಾದ ಮುಖಮುದ್ರೆಯನ್ನು ತಳೆದು ಕೇಳಿದಳು.

ಆ ಮಾತು ಕೇಳಿ ದ್ರುವರಾಯನು ಸಿಡಿಲುಬಡಿದವನಂತೆ ಬೆರಗಾಗಿ ಬಾಯ್ದೆರೆದು ಕಲ್ಲುಮೂರ್ತಿಯಂತೆ ಕುಳಿತನು.

“ಏನೆಂದಿ ರಂಆಸುಂದರಿ?” ಎಂದಿಷ್ಟು ಕೇಳಬೇಕಾದರೆ ಆರ್ಧಾಂಗ ವಾಯುಗ್ರಸ್ತನಿಗಾಗುವಷ್ಟು ಶ್ರಮವು ಆ ಮದುನಪೀಡಿತನಿಗಾಯಿತು.

“ನೀವು ನನ್ನನ್ನು ಏಕವಚನದಿಂದ ಸಂಭೋದಿಸಿದರೂ ನನಗೆ ಕೋಪವಿಲ್ಲ. ಆದರೆ ನೀವು ಆ ಪತ್ರವನ್ನು ಬರೆಯಲೇಬಾರದಾಗಿತ್ತು.”

“ಕ್ಷಮಿಸಿರಿ! ಪ್ರೇಮಪರವಶನಾದ ನನಗೆ ಜೀವಿತಾಧಾರದ ಬೇರೆ ಉಪಾಯವು ತೋಚಲಿಲ್ಲಾದ್ದರಿಂದ ಹಾಗೆ ಬರೆದೆನು.” ಎಂದು ಅವನು ಬಹು ದೀನನಾಗಿ ನುಡಿದನು.

“ಧ್ರುವರಾವ್, ನಾನು ಕಾಲೇಜವನ್ನು ಬಿಟ್ಟು ಹೋದ ಬಳಿಕ ನೀವು ಇಂಥ ವಿಚಾರಗಳನ್ನು ಪ್ರಕಟಗೊಳಿಸಿದ್ದರೆ ವಿಶೇಷವಾದ ಬಾಧಕವಿದ್ದಿಲ್ಲ. ನೀವಿಲ್ಲಿ ನಮ್ಮ ಅಭ್ಯಾಸದ ನಿಯಾಮಾಕರು. ನೀವೇ ಕರ್ತವ್ಯಪರಾಙ್ಮುಖರಾಗಿ ನಿಮ್ಮ ಅಭ್ಯಾಸಕ್ಕೆ ವ್ಯತ್ಯಯವನ್ನು ತಂದುಕೊಳ್ಳುವದಲ್ಲದೆ ನಮ್ಮಂಥ ಅಬಲೆಯರ ಮನಸ್ಸಿನಲ್ಲಿ ಚಂಚಲತೆಯನ್ನು ಉಂಟುಮಾಡಬಂದಿರುವಿರಿ. ವಿಹಿತವೇ ಇದು?”

“ಪ್ರಿಯೆ, ಇಂದು ಬೇಡ, ಇನ್ನು ಹತ್ತು ವರ್ಷಕ್ಕಾದರೂ ನನ್ನ ಪ್ರಣಯವನ್ನು ನೀನು ಸ್ವೀಕರಿಸುವಿಯಾ?” ಎಂದು ಭಕ್ತನು ಗುಡಿ ಯಲ್ಲಿಯ ಮೂರ್ತಿಯ ಮುಂದೆ ಕೈಜೋಡಿಸಿಕೊಂಡು ನಿಂತಂತೆ ನಿಂತು ಧ್ರುವರಾಯನು ಬೆಸಗೊಂಡನು.

ರಮಾಸುಂದರಿಗೆ ನಗೆ ತುಂಬಿ ಬಂದಿತು. ಅವಳು ತನ್ನ ಎರಡೂ ಕೈ ಗಳಿಂದ ಮೊರೆಯನ್ನು ಮುಚ್ಚಿಕೊಂಡು ನಗೆಯನ್ನು ಅಡಗಿಸಿಕೊಂಡಳು. ಧ್ರುವರಾಯನ ಪ್ರಾರ್ಥನೆಗೆ ಉತ್ತರವನ್ನು ಕೊಡುವ ಗೋಜಿಗೆ ಅವಳು ಹೋಗಲಿಲ್ಲ. ಮತ್ತೆ ಅವಳು ಗಾಂಭೀರ್ಯವನ್ನು ತಳೆದು, “ಶಿಕ್ಷಕರೆ, ನೀವು ಸಂಬೋಧನಗಳನ್ನು ಉಪಯೋಗಿಸುವಾಗ ವಿಚಾರ ತಿಳಿದು ಉಪಯೋಗಿಸಿರಿ. ನಿಮ್ಮಂಥವರಿಗೆ ಅಬಲೆಯಾದ ನಾನು ಬುದ್ಧಿಯ ಮಾತು ಹೇಳಲು ವಿಷಾದಪಡುತ್ತೇನೆ.”

ಧ್ರುವರಾಯನು ಚಟ್ಟನೆ ತನ್ನ ಆಸನವನ್ನು ಬಿಟ್ಟೆದ್ದು “ರಮಾಸುಂದರೀಬಾಯಿ, ನಿಮಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿರಿ. ಆದರೂ ಪ್ರೇಮನಿರ್ಜಿತನಾದ ನಾನು ಮರ್ಯಾದೆಯನ್ನು ಉಲ್ಲಂಘಿಸಲಿಲ್ಲವೆಂದು ನಂಬುತ್ತೇನೆ. ಇರಲಿ. ನಾಳಿನಿಂದ ನಾನು ಕಾಲೇಜ ದಲ್ಲಿರುವದರಿಂದ ನಿಮಗೆ ಸಂಕೋಚವಾಗುತ್ತಿದ್ದರೆ ಹಾಗೆ ಕೇಳಿರಿ; ನಾನು ಹೊರಟು ಹೋಗುತ್ತೇನೆ” ಎಂದು ಸಂಕ್ಷುಬ್ಧನಾಗಿ ಕೇಳಿದನು.

“ಹಾಗೆ ಮಾತ್ರ ಮಾಡಬೇಡಿರಿ. ಹೀನಸತ್ವರ ವಿಚಾರವಿದು. ನೀವು ಇಲ್ಲಿ ಇರುವದರಿಂದ ನನ್ನ ಸಮಭಾವವು ಕೆಡಲಾರದು, ಆಷ್ಟು ಮಾನಸಿಕ ಧೈರ್ಯವು ನನ್ನಲ್ಲಿದೆ” ಎಂದು ಆ ಪ್ರೌಢೆಯು ತಾಳ್ಮೆಯಿಂದ ನಗುತ್ತೆ ನುಡಿದಳು.

ಮತ್ತೊಂದು ಮಾತಾಡದೆ ಧ್ರುವರಾಯನು ಆ ಸ್ಥಳವನ್ನು ಬಿಟ್ಟು ರಭಸದಿಂದ ಹೊರಗೆ ನಡೆದನು, ಆ ಸುಂದರಾಂಗನ ಮೂರ್ತಿಯು ಕಣ್ಮರೆಯಾದ ಕೂಡಲೆ ರಮಾಸುಂದರಿಯ ಕಣ್ಣುಗಳೊಳಗಿಂದ ಅಶ್ರುಧಾರೆಗಳ ಜೀಕಳಿಗಳು ಪುಟಿದವು. ಚಟ್ಟನೆ ಮಂಚದಿಂದಿಳಿದು ಅವಳು ಕಿಟಕಿಯಲ್ಲಿ ಬಂದು ನಿಂತು ತನ್ನ ಮನೋರಮಣನ ವ್ಯಾಪಾರಗಳನ್ನು ನೋಡುವ ಕುತೂಹಲವುಳ್ಳವಳಾಗಿ ನಿಂತುಕೊಂಡಳು. ಅಶ್ವಥಾಮನ ಸೆಟೆಯಿಂದ ಎದೆಯುಬಿಸಿಕೊಂಡು ಅಡ್ಡಾಡುವ ಆ ತರುಣನು, ಈ ಸಮಯದಲ್ಲಿ ಮುಪ್ಪಿನಿಂದ ಮುಟ್ಟಿಗೆಯಾದವನಂತೆ ಅಧೋಮುಖನಾಗಿ ಹೆಜ್ಜೆಗಳನ್ನೆಣಿಸುತ್ತೆ ನಡೆದಿದ್ದನು. ಅವನನ್ನು ಕಂಡು ರಮಾಸುಂದರಿಯು ಒಳಿತಾಗಿ ಬಿಸಿಸುಯ್ದು “ಅವರ ಹಿತಕ್ಕಾಗಿ ನನ್ನ ಕಾಲ ಮೇಲೆ ನಾನು ಕಲ್ಲು ಹಾಕಿಕೊಂಡೆನು. ಆಗಲಿ, ಅವರದಾದರೂ ಕಲ್ಯಾಣವಾಗಲಿ, ನನ್ನ ಕಡೆಯಂತೂ ಮುಗಿಯಿತು. ಮುಂದೆ ಈ ಕಾಲೇಜದಲ್ಲಿ ಜಾನಕೀದೇವಿಯರ ಸ್ಥಾನಾಪನ್ನಳಾಗಕ್ಕವಳು ನಾನೇ ಎಂದು ತಿಳುಕೊಂಡಿದ್ದೆನು.” ಎಂದು ನುಡಿದು ಅವಳು ಮತ್ತೆ ಕಣ್ಣಿಗೆ ನೀರು ತಂದಳು.

“ನಡೆ ಧ್ರುವರಾವ್, ನಿನಗಿನ್ನು ಸನ್ಯಾಸವು ಬಂದಡರಿತು. ಕರ್ಮ ಯೋಗಿಯಂತೆ ನೀನಿನ್ನು ನಿಷ್ಕಾಮವಾದ ಕರ್ಮವನ್ನು ಮಾಡು, ಅನೇಕ ಜನ ಮಹಾತ್ಮರು ಕೂಡಿ ಈ ಕಾಲೇಜ ಸಂಸ್ಥೆಯ ಭಾರವನ್ನು ನಿನ್ನ ತಲೆಯ ಮೇಲೆ ಹೊರಿಸಬೇಕೆಂದು ಮಾಡಿದ್ದಾರೆ, ಹೊರ ನಡೆ, ಆಯತ್ತವಾಗಿ ಸಂಸಾರದ ಭಾರವು ನಿನ್ನ ತಲೆಯ ಮೇಲಿಂದ ಇಳಿದಿದೆ” ಎಂದು ಉದ್ಗಾರ ತೆಗೆದು ಧ್ರುವರಾಯನು ಮನೆಗೆ ಬಂದವನೇ ಮನೋನಿಗ್ರಹದಿಂದ ಸಕಲ ವ್ಯಾಮೋಹಗಳನ್ನು ಮೆಟ್ಟಿ ಎಮ್. ಎ. ಪರೀಕ್ಷೆಯ ಸಿದ್ಧತೆ ಮಾಡಲುದ್ಯುಕ್ತನಾದನು.

ಧೂವರಾಯನು ಹೋದನೋ ಇಲ್ಲವೋ ಅಷ್ಟರಲ್ಲಿ ಇಂದುಮತಿಯು ರಮಾಸುಂದರಿಯ ಎದುರಿನಲ್ಲಿ ಬಂದು ನಿಂತಳು.

“ಇಂದುಮತಿ, ಅಡ್ನಾಡಿ ಹೊತ್ತಿನಲ್ಲಿ ನೀನು ಕಾಲೇಜವನ್ನು ಬಿಟ್ಟು, ಹೇಗೆ ಬಂದಿ?”

“ಇದೊಂದು ವಿನೋದಾಸ್ಪದವಾದ “ಟ್ರ್ಯಾಜೆಡಿ” (ದುಃಖಪರ್‍ಯ ವಸಾಯಿ ನಾಟಕ) ಪ್ರಯೋಗವು, ಅದರಲ್ಲಿ ನನಗೂ ಒಂದು ಚಿಕ್ಕದಾದ ಭೂಮಿಕೆಯನ್ನು ಕೊಟ್ಟಿದ್ದಾರೆ. ಪಾಠ ಮಾಡುವದಕ್ಕಾಗಿ ಬಂದೆನು.”

“ಏನೇನು?” ಎಂದು ರಮಾಸುಂದರಿಯು ಚಕಿತಳಾಗಿ ಕೇಳಿದಳು.

“ಏನೇನೆಂದರೆ, ಧುವರಾಯರು ನಿನ್ನಲ್ಲಿಗೆ ಬಂದಿದ್ದರಲ್ಲ, ಅವರಿಗೆ ನೀನು ನಿಷ್ಟುರವಾದ ಉತ್ತರವನ್ನು ಕೊಟ್ಟಂತೆ ಕಾಣುತ್ತವೆ.” ಎಂದು ಇಂದುಮತಿಯು ನಟಿಯಂತೆ ಹಾವಭಾವ ಮಾಡುತ್ತೆ ಕೇಳಿದಳು.

“ಅಂದರೆ ! ಧ್ರುವರಾಯರು ಇಲ್ಲಿಗೆ ಬಂದಿದ್ದರೆಂದು ಯಾರು ಹೇಳಿದರು? ನಾನು ನಿಷ್ಟುರವಾದ ಉತ್ತರವನ್ನಾದರೂ ಕೊಟ್ಟಿದ್ದು ಯಾರು ಹೇಳಿದರು?” ಎಂದು ರಮಾಸುಂದರಿಯು ಕ್ರುದ್ಧಳಾಗಿ ಪ್ರಶ್ನೆ ಮಾಡಿದಳು.

“ಧುವರಾಯರಿಗೆ ನೀನು ಅನುಕೂಲವಾದ ಉತ್ತರವನ್ನು ಕೊಟ್ಟಿದ್ದರೆ ಅವರು ಉತ್ಸಾಹದಿಂದ ಹುಲಿಯಂತೆ ಹಾರುತ್ತೆ ಹೋಗುತ್ತಿದ್ದರು. ಈಗ ಹೋದಂತೆ ಅಳುಮೋರೆ ಮಾಡಿಕೊಂಡು ಹೆಜ್ಜೆಗಳನ್ನೆಣಿಸುತ್ತೆ ಉಶ್ ಉಶ್ ಎಂದು ಯಾಕೆ ಹೋಗುತ್ತಿದ್ದರು?”

“ನಾನೇಕೆ ನಿಷ್ಠುರವಾಡಲಿ ಅವರಿಗೆ? ಯಾವ ಸಂದರ್ಭದಿಂದ ನೀನು ಕೇಳುವಿ ಪ್ರಿಯ ಸಖಿ?”

“ಸಂದಿರ್ಭವು ಈ ಪತ್ರದಲ್ಲಿ ಇದೆ ನೋಡಿದಿಯಾ?” ಎಂದು ಇಂದುಮತಿಯು ಧ್ರುವರಾಯನು ರಮಾಸುಂದರಿಗೆ ಬರೆದಿರುವ ಪತ್ರವನ್ನು ಅವಳ ಮುಖಕ್ಕೆ ಹಿಡಿದು ನುಡಿದಳು.

“ರಮಾಸುಂದರಿಯು ಕಳ್ಳೆಯಂತಾಗಿ “ಸಖಿ, ಇಂಥ ಪತ್ರಕ್ಕೆ ನಿಷ್ಟುರವಾದ ಉತ್ತರವೇ ತಕ್ಕದ್ದಲ್ಲವೆ?” ಎಂದು ನಾಚಿ ಸತ್ತವಳಾಗಿ ನುಡಿದಳು.

“ವಾಸ್ತವ, ವಾಸ್ತವ! ಆದರೆ ನನ್ನ ಜೀವದ ಗೆಳತಿಯೋ, ಈ ಪತ್ರದ ಬೆನ್ನು ಮೇಲೆ ನೀನು ನಿನ್ನ ಸ್ವಹಸ್ತಾಕ್ಷರದಿಂದ ಏನು ಬರೆದಿರುವೆ?” ಎಂದು ಇಂದುಮತಿಯು ಆ ಪತ್ರವನ್ನು ರಮಾಸುಂದರಿಯ ಮುಂದೆ ತಿರಿವಿ ಹಿಡಿದು ಗೊಳ್ಳನೆ ನಕ್ಕಳು.

“ಏನು ಬರೆದಿದ್ದೇನೆ?” ಎಂದು ರಮಾಸುಂದರಿಯು ಆ ಪತ್ರವನ್ನು ಸೆಳಕೊಳ್ಳಹೋದಳು. ಇಂದುಮತಿಯು ಅದನ್ನು ಗಟ್ಟಿಯಾಗಿ ಹಿಡಿದು ಕೊಂಡು “ನೀನು ಬರೆದದ್ದು ಓದಿ ಹೇಳಲಿಯಾ?”

ವಿನತಿಯನಾಲಿಸೊ ಮನಮೋಹನಾ ||ಪಲ್ಲಾ||
ನಲಿನೀಯ ಸೀಳುತೆ ಬಸವ ಸಾರಸನು |
ಸೆಳೆವ ತೆರದಲೆನ್ನ ಮನವ ಸೆಳೆದಿ ರಾಜೇಂದ್ರ || ೧ ||

ಎಂಬ ಪದವನ್ನು ಒಳ್ಳೆ ಸುಸ್ವರವಾಗಿ ಹಾಡಿ ತೋರಿಸಿದಳು.

“ಇಂದುಮತೀ, ನೀನು ಹೀಗೆ ಅನ್ಯರ ಪತ್ರಗಳನ್ನು ಕದ್ದು ಓದಬಹುದೆ? ನಿನಗೆ ಕನ್ನಡವನ್ನು ಕಲಿಸಿದಾಕೆ ನಾನೇ ಮೂರ್ಖಳು.”

“ಮೂರ್ಖಳೋ ಆವಳೋ ನನಗೆ ಗೊತ್ತಿಲ್ಲ. ನೀನು ನನಗೆ ಕನ್ನಡವನ್ನು ಕಲಿಸದಿದ್ದರೆ ನಾನು ಈ ಸಚಿತ್ರ ಭಾರತದ ಸಂಚಿಕೆಯನ್ನಾಗಲಿ, ಅದರಲ್ಲಿ ನೀನಿಟ್ಟಿರುವ ಈ ಪತ್ರವನ್ನಾಗಲಿ ಎತ್ತಿ ಕೊಂಡು ಹೋಗುತ್ತಿದ್ದಿಲ್ಲ ಸರಿ.”

ಮುಂದೆ ಯಥಾಕಾಲವಾಗಿ ಯುನಿವರ್ಸಿಟಿಯ (ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗಳಾದವು. ಒಟ್ಟಿನಲ್ಲಿ ಶಾರದಾ ಪ್ರಸಾದ ಕಾಲೇಜದ ಬೆಳಕು ಬಹಳಾಯಿತು. ಎಮ್. ಏ. ಪರೀಕ್ಷೆ ಪಾಸಾದವರಲ್ಲಿ ಧ್ರುವರಾಯನಿಗೆ ಪ್ರಥಮ ಸ್ಥಾನವು. ಸ್ತ್ರೀ ವಿದ್ಯಾರ್ಥಿಗಳಲ್ಲಿ ನಾಲ್ವರು ಜೀ. ಪಿ. ಪಾಸಾಗಿದ್ದರು, ಇಂದುಮತಿ, ಚಂದ್ರಾವಲಿ, ರಮಾಸುಂದರಿಯರು ಎಫ್. ಎ. ದಲ್ಲಿ ಪಾಸಾದವರು. ಅಂದು ಡಾಕ್ಟರ ಚೌಧರಿಯವರಿಗೆ ಪರಮಾನಂದವು. ಜಾನಕಿದೇವಿಯರಾದರೂ ಪಾಸಾಗಿರುವ ತಮ್ಮ ಶಿಷ್ಯರನ್ನು ಕೂಡಿಸಿಕೊಂಡು ಸಂತೋಷ ಪ್ರದರ್ಶನವನ್ನು ಮಾಡಿದರು. ಧ್ರುವರಾಯನು ಸೊರಗಿದಂತೆ ತೋರಿದರೂ ಒಣಗಿದ ದ್ರಾಕ್ಷದಂತಿರುವ ಅವನ ಮುಖವು ಸ್ವಾದಿಷ್ಟವಾಗಿ ತೋರಿತು, ರಮಾಸುಂದರಿಯು ಮಾತ್ರ ಬಾಡಿದ ಕಲಿಕೆಯಂತೆ ವಿಷಾದಾಸ್ಪದಳಾಗಿ ಕಂಡಳು.

“ಹೀಗೇನು? ಈ ಮಾತು ನನಗೆ ನೀನು ಮೊದಲೆ ಯಾಕೆ ತಿಳಿಸಲಿಲ್ಲ?” ಎಂದು ಜಾನಕೀದೇವಿಯರು ಇಂದುಮತಿಯನ್ನು ಕುರಿತು ಮಾತಾಡಿದರು.

“ಆ ಮಾತಿಗೆ ನೀವು ಒಪ್ಪುವಿರೋ ಕೋಪಿಸಿಕೊಳ್ಳುವಿರೋ ನನಗೆಂತು ತಿಳಿಯಬೇಕು? ಕೋಪಿಸಿಕೊಂಡರೆ ಅನರ್ಥವಾಗುವದೆಂದು ತಿಳಿದು ನಾನು ಹಲ್ಲಲ್ಲಿ ನಾಲಿಗೆಯನ್ನಿಟ್ಟು ಕೊಂಡು ಸುಮ್ಮನಿದ್ದೆನು.”

“ಹಾಃ! ಹಾಃ! ಹಾಃ! ರಮಾಸುಂದರಿಯು ಧ್ರುವರಾಯನ ಪ್ರಾಯಶ್ಚಿತ್ತವನ್ನು ಚನ್ನಾಗಿ ಮಾಡಿದಳು.” ಎಂದು ದೇವಿಯವರು ನಕ್ಕು ನುಡಿದರು.

“ಅಮ್ಮನವರೆ, ವಿನೋದವು ಹಾಗಿರಲಿ, ಇನ್ನು ಮೇಲೆ ಮಾಡುವ ಬಗೆಯೇನು? ರಮಾಸುಂದರಿಯು ಎರಡು ಬಗೆಯ ಚಿಂತೆಯಿಂದ ಸೊರಗುತ್ತಿರುವಳು ಕಾಣಿರಾ?”

“ಓಹೋ, ವೆಂಕಟೇಶ್ವರನಿಗೆ ಕಲ್ಲಿಲೊಗೆದ ಪದ್ಮಾವತಿಯು ಈಗ ಆತನ ಪಾದಗಳನ್ನು ನಂಬಲು ಒಪ್ಪಿರುವಳೆ?”

“ಒಪ್ಪದೆ ಪದ ಹಾಡುವಳು.”

ಜಾನಕೀದೇವಿಯರು ಗಂಟೆಯನ್ನು ಬಾರಿಸಿ ಜವಾನನನ್ನು ಕರೆದು “ಅಖಾಯ್, ಪ್ರೊಫೆಸರ್ ಧ್ರುವರಾಯರನ್ನು ನಾನೀಗಲೆ ಕರೆದಿರುವೆನೆಂದು ಹೇಳಿ ಬೇಗನೆ ಕರಕೊಂಡು ಬಾ” ಎಂದು ಆಜ್ಞಾಪಿಸಿದರು.

ಧ್ರುವರಾಯನು ಬಂದು ಆ ಮಾತೆಯ ಬಳಿಯಲ್ಲಿ ವಿನಯದಿಂದ ನಿಂತ ಬಳಿಕ,

“ಪಂಡಿತ ಮಹಾಶಯ, ನಿನ್ನ ಹಿತಕ್ಕಾಗಿ ನಿಮ್ಮ ಪತ್ನಿಯು ನಿನಗೊಂದು ಬಿರಿನುಡಿಯಾಡಿದರೆ ನೀನು ಅವಳನ್ನು ಕ್ಷಮಿಸುವಿಯಲ್ಲವೆ?” ಎಂದು ಜಾನಕೀದೇವಿಯರು ಕೇಳಿದರು.

“ಸಹಜವಾದ ಮಾತಿದು. ಆದರೆ ನನಗೆಲ್ಲಿಯ ಪತ್ನಿಯು?”
“ರಮಾಸುಂದರಿ, ಕೇಳಿದಿಯಾ ಈ ಪ್ರೊಫೆಸರರು ನಿನ್ನ ಅನುನಯವನ್ನು ಮನ್ನಿಸುವುದಿಲ್ಲ. ನಿನಗಾದರೂ ಏನು ಅಡಗಾಣಿಸಿದೆ, ಅಷ್ಟೇಕೆ ಆತುರಳಾಗಿರುವಿ?” ಎಂದು ಜಾನಕೀದೇವಿಯರು ವಿನೋದ ಮಾಡಿ ನುಡಿದರು. ಧ್ರುವರಾಯನ ಮುಖವು ಸಂತೋಷದಿಂದ ಹಿಗ್ಗಿ ಇಮ್ಮಡಿಯಾಯಿತು. ಇಂದ್ರಜಾಲದ ಮಂತ್ರದಿಂದಲೋ ಎಂಬಂತೆ ರಮಾಸುಂದರಿಯ ಬಾಡಿದ ಮುಖವು ಪ್ರಫುಲ್ಲಿತವಾದ ಕಮಲದಂತೆ ಕಂಗೊಳಿಸಿತು.

“ಮಾತಾಜೀ, ರಮಾಸುಂದರೀಬಾಯಿಯವರು ಪದವೀಧರೆಯರಾಗಿ ಈ ಕಾಲೇಜವನ್ನು ಬಿಟ್ಟ ಬಳಿಕ ನನ್ನ ಪ್ರಾರ್ಥನೆಯ ವಿಚಾರ ಮಾಡುವರಂತೆ!” ಎಂದು ನುಡಿದು ಧುವರಾಯನು ಲಜ್ಜಾವನತಮುಖಿಯಾಗಿ ನಿಂತಿರುವ ತನ್ನ ರನುಣಿಯ ಮುಖವನ್ನು ನೋಡಿ ನಕ್ಕನು.

“ಅಹುದೇನು ರಮಾಸುಂದರೀ? ವಿವಾಹಿತರಾಗಿ ಕಾಲೇಜಗಳಲ್ಲಿ ಕಲಿಯುತ್ತಿರುವ ಪುರುಷರೆಷ್ಟಿರುವರು ನಿನಗೆ ಗೊತ್ತುಂಟೇನು? ಹೆಂಗಸರೇಕೆ ವಿವಾಹಿತರಾಗಿ ಕಾಲೇಜದಲ್ಲಿರಕೂಡದು?” ಎಂದು ಜಾನಕಿ ದೇವಿಯರು ಕೇಳಿದರು.

ಧ್ರುವ ರಮಾಸುಂದರಿಯರ ವಿವಾಹವು ಸಾರ್ವಜನಿಕ ಮಹೋತ್ಸವ ದಂತೆ ನ ಭೂತೋ ನ ಭವಿಷ್ಯತಿಯಾಗಿ ವಿಜೃಂಭಣಗೊಂಡಿತು. ಆ ಕಾಲೇಜದ ವ್ಹಾಯಿಸ್ ಪ್ರಿನ್ಸಿಪಲ್ಲರಾದ ಧ್ರುವರಾಯರ ಹೆಂಡತಿಯ ವಿದ್ಯಾಭ್ಯಾಸಕ್ಕೆ ಆತಂಕವೆ?ಜೋಯಿಸನ ಮಗನ ಮದುವೆಗೆ ಮುಹೂರ್ತ ತೆಗೆದು ಕೊಡುವವರನ್ನು ಹುಡುಕಿದ್ದುಂಟೆ?

ಶಾರದಾಪ್ರಸಾದ ಕಾಲೇಜದ ಭಾವೀ ನಿಯಾಮಕರಾದ ಪ್ರೊಫೆಸರ್ ಧ್ರುವರಾವ್ ಹಾಗೂ ರಮಾಸುಂದರೀದೇವಿಯರು ಡಾಕ್ಟರ್ ಚೌಧರಿ ಹಾಗೂ ಜಾನಕೀದೇವಿಯರಿಗೆ ಸಮಾನಾಧಿಕಾರಿಗಳಾಗಿದ್ದುಕೊಂಡು ಆ ವೃದ್ಧ ದಂಪತಿಗಳ ಮೇಲಿನ ಭಾರವನ್ನು ಸಾವಕಾಶವಾಗಿ ಇಳಿಸುತ್ತಲೂ ಉಚ್ಚ ಪ್ರತಿಯ ಶಿಕ್ಷಣದೊಂದಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚ್ಚ ಪ್ರತಿಯ ಧಾರ್ಮಿಕ ಹಾಗೂ ನೈತಿಕ ಬೋಧಾಮೃತವನ್ನು ನೀಡುತ್ತಲೂ ದೇಶದ ರಾಜಕೀಯ ಸಾಮಾಜಿಕ ಉನ್ನತಿಗಾಗಿ ಶ್ರಮಪಡುತ್ತಲೂ ಶಾರದಾ ಪ್ರಸಾದ ಕಾಲೇಜದ ಹೆಸರನ್ನು ಅಜರಾಮರವಾಗಿ ಮಾಡಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರ್‍ಮ
Next post ಪ್ರಸವ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys