ಸುಳಿದೊಂದು ಮೀನ್ನುಂಗಿತಾ ಮೀನ…

ಸುಳಿದೊಂದು ಮೀನ್ನುಂಗಿತಾ ಮೀನ…

‘ಸುಳಿದೊಂದು ಮೀನ್ನುಂಗಿತಾ ಮೀನನಾಗಲೆ ನುಂಗಿತೊಂದು ಮೀನಾ ಮೀನ ನಂಗಿದುದು ಬಳಿಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನಂಗಿತೊಂದು… ’ ಎಂಬ ಷಟ್ಪದಿಯೊಂದು ಲಕ್ಷೀಶನ ಜೈಮಿನಿ ಭಾರತದ ಆರನೆ ಸಂಧಿಯಲ್ಲಿ ಬರುತ್ತದೆ. ಭೀಮಸೇನನು ದ್ವಾರಕೆಗೆ ಬರುವ ಸಂದರ್ಭ ಇದು. ಕವಿ ದ್ವಾರಕಾಪುರವನ್ನು ಆಲಂಕಾರಿಕವಾಗಿ ವರ್ಣಿಸುತ್ತಾನೆ. ಈ ಪದ್ಯದಲ್ಲಿ ಬರುವುದು ಸಮುದ್ರವರ್ಣನೆ. ಸಣ್ಣ ಮೀನನ್ನು ದೊಡ್ಡ ಮೀನು ನುಂಗುವುದು, ಆ ದೊಡ್ಡ ಮೀನನ್ನು ಅದಕ್ಕಿಂತಲೂ ದೊಡ್ಡ ಮೀನು ನುಂಗುವುದು ಸಮುದ್ರದಲ್ಲಿ ನಡೆಯುವ ನಿತ್ಯದ ವ್ಯಾಪಾರ. ಹೀಗೆ ಮೀನುಗಳನ್ನು ನುಂಗಿದ ಮೀನುಗಳನ್ನು ಅಂತಿಮವಾಗಿ ನುಂಗುವುದು ಸಮುದ್ರದ ಅತ್ಯಂತ ಬೃಹತ್ತಾದ ತಿಮಿಂಗಿಲ. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಉಳಿದ ಮೀನುಗಳು ರೆಕ್ಕೆಬಂದ ಗಿರಿಗಳು ಅಲ್ಲಾಡುವಂತೆ ಬೆದರಿ ತಿರುಗುತ್ತಿದ್ದುವು ಎನ್ನುತ್ತಾನೆ ಲಕ್ಷೀಶ.

ನಾನು ಆಯೋವಾದಲ್ಲಿದ್ದಾಗ ತಲೆಗೂದಲು ತೆಗೆಸುವುದಕ್ಕೆ ನನ್ನ ಆಫೀಸಿನ ಸಮೀಪವೇ ಇದ್ದ ಒಂದು ಕೇಶಾಲಂಕಾರದ ‘ಕಾಲೇಜಿಗೆ’ ಹೋಗುತ್ತಿದ್ದೆ. ತಲೆಗೂದಲು ಕತ್ತರಿಸುವುದನ್ನು, ಅರ್ಥಾತ್ ಕ್ಷೌರ ಮಾಡುವುದನ್ನು, ಕೇಶಾಲಂಕಾರದ ಒಂದು ಪ್ರಧಾನ ಭಾಗವಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಇದು ಹೆಣ್ಣುಮಕ್ಕಳ ಕಾಲೇಜು.

ಅಮೇರಿಕದ ಇಂಥ ಔದ್ಯಮಿಕ ವಿದ್ಯಾಸಂಸ್ಥೆಗಳನ್ನು ನಾವು ನಿಜಕ್ಕೂ ನೋಡಬೇಕು: ಅಲ್ಲಿನ ಅಚ್ಚುಕಟ್ಟು, ಶುಚಿತ್ವ, ಲವಲವಿಕೆ, ಉದ್ಯಮಶೀಲತೆ ಎಷ್ಟು ಚೆನ್ನಾಗಿರುತ್ತದೆ ಎಂದರೆ ಆಗಾಗ ಕ್ಷೌರ ಮಾಡಿಸಿಕೊಳ್ಳಬೇಕು ಎನಿಸುತ್ತದೆ! ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ದೊರಕುತ್ತದೆ. ಆದ್ದರಿಂದ ಈ ಕೆಲಸಕ್ಕೊಂದು ವಿದ್ಯಾಮಾನ್ಯತೆ ಕೂಡ ಬರುತ್ತದೆ. ಇಲ್ಲಿ ಓಮ್ಮೆ ನನ್ನ ಕೂದಲು ಕತ್ತರಿಸುತ್ತಿದ್ದ ಯುವತಿಯೊಂದಿಗೆ ಲೋಕಾಭಿರಾಮ ಮಾತಾಡುತ್ತ ನಾನವಳನ್ನು ಕೇಳಿದೆ: ‘ಡಿಪ್ಲೊಮಾ ಮುಗಿದ ನಂತರ ಏನು ಮಾಡಬೇಕೆಂದಿರುವಿ?’ ಎಂದು. ಅದಕ್ಕವಳು ‘ಎಲ್ಲಾದರೂ ಕೆಲಸಕ್ಕೆ ಸೇರಬೇಕು, ಇಲ್ಲಿ ಅಥವಾ ಇಂಥದೇ ಇನ್ನೊಂದು ಕಡೆ,’ ಎಂದಳು. ‘ನೀನೊಬ್ಬಳೇ ಒಂದು ಅಂಗಡಿ ತೆರೆಯುವುದು ಸಾಧ್ಯವಿಲ್ಲವೇ? ಅಥವಾ ಏಕವ್ಯಕ್ತಿ ನಡೆಸುವಂಥ ಕೇಶಾಲಂಕರಣ ಸ್ಥಾಪನೆಗಳೇ ಇಲ್ಲವೇ? ಎಂದು ವಿಚಾರಿಸಿದೆ. ‘ಏಕವ್ಯಕ್ತಿ ನಡೆಸುವಂಥ ಸ್ಥಾಪನೆಗಳು ಹಿಂದೆ ಇದ್ದುವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಅಂಥ ಕಡೆಗೆ ಜನ ಬರುವುದಿಲ್ಲ’ ಎಂದಳು.

ಇದು ಕೇವಲ ಕೇಶಾಲಂಕಾರ ವಿಭಾಗದಲ್ಲಿ ಆಗಿರುವ ಬದಲಾವಣೆಯೂ ಅಲ್ಲ. ಅಮೇರಿಕದಲ್ಲಿ, ಹಾಗೂ ಬಹುಶಃ ಇಡೀ ಪಶ್ಚಿಮದ ರಾಷ್ಟ್ರಗಳಲ್ಲಿ, ಸಣ್ಣ ಸಣ್ಣ ಅಂಗಡಿಗಳು, ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಮಾತ್ರವಲ್ಲ, ಈ ವಿದ್ಯಮಾನ ಪಾಶ್ಚಾತ್ಯೀಕರಣಗೊಳ್ಳುತ್ತಿರುವ ಭಾರತದಂಥ ಇತರ ಭೂಪದೇಶಗಳಲ್ಲೂ ವಿವಿಧ ರೀತಿಗಳಲ್ಲಿ ಹರಡುತ್ತಿರುವುದರಿಂದ ಇದನ್ನು ಯಾರೂ ಕಡೆಗಣಿಸುವಂತಿಲ್ಲ. ಅಮೇರಿಕದಲ್ಲಂತೂ ಸಣ್ಣ ಸಣ್ಣ ಉದ್ಯಮಗಳು ತೀರಾ ಮಾಯವಾಗಿಬಿಟ್ಟವೆ. ನಾನಿದ್ದ ಅಯೋವಾ ಪ್ರಾಂತ ಜೋಳ, ಗೋಧಿ ಮುಂತಾದ ಬೆಳೆಗಳಿಗೆ ಪ್ರಸಿದ್ಧವಾದ್ದು. ಇಲ್ಲಿ ಇಂಗ್ಲಿಷ್ನಲ್ಲಿ ಪ್ರಯರಿ ಎಂದು ಕರೆಯುವ ಹರವಾದ ಬಯಲು ಭೂಮಿಯಿದೆ. ಚಿಕ್ಕಂದಿನಲ್ಲಿ ನಾನು ಭೂಗೋಳ ಪಾಠದಲ್ಲಿ ಆಕರ್ಷಿತನಾಗಿದ್ದ ಒಂದು ಪದವೆಂದರೆ ಪ್ರಯರಿ. ಪ್ರಯರಿ ಎಂದರೆ ದೊಡ್ಡ ದೊಡ್ಡ ಹುಲ್ಲು ಬೆಳೆಯುವ ವಿಶಾಲವಾದ ಬಯಲುಭೂಮಿ. ಮಧ್ಯ ಮತ್ತು ಉತ್ತರ ಅಮೇರಿಕ ಭೂಖಂಡ ಇದಕ್ಕೆ ಪ್ರಸಿದ್ಧ. ಇಲ್ಲಿ ಕೆಲವೆಡೆ ಧಾನ್ಯ ಕೂಡಾ ಬೆಳೆಯುತ್ತಾರೆ. ಅಯೋವಾ ಒಂದು ಪ್ರಯರಿ ಪ್ರದೇಶ ಮತ್ತು ಇಲ್ಲಿನ ಹೊಲಗಳಲ್ಲಿ ಸಾಕಷ್ಟು ಜೋಳ ಬೆಳೆಯುತ್ತಾರೆ. ಇಲ್ಲಿಯೂ ನಾನು ತಿಳಿದ ಪ್ರಕಾರ ಸಣ್ಣ ಪಮಾಣದ ಕೃಷಿಕರು ಈಗ ಇಲ್ಲವಾಗಿದ್ದಾರೆ. ಯಾಕೆಂದರೆ ಸಣ್ಣ ಕೃಷಿಕರಾಗಿರುವುದು ಅಮೇರಿಕದ ಇಂದಿನ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಕೈಗೂಡುವ ಸಂಗತಿಯಲ್ಲ. ಆದ್ದರಿಂದ ಸಣ್ಣ ಕೃಷಿಕರೆಲ್ಲ ತಮ್ಮ ಆಸ್ತಿಯನ್ನು ದೊಡ್ಡ ಆಸ್ತಿವ೦ತರಿಗೆ ಮಾರಿಬಿಟ್ಟು ಬೇರೆ ಉದ್ಯೋಗವನ್ನು ಆರಿಸಿಕೊಂಡಿದ್ದಾರೆ. ಈ ದೊಡ್ಡ ಹಿಡುವಳಿದಾರರು ಕೃಷಿಯನ್ನು ಒಂದು ಬೃಹತ್ ಪ್ರಮಾಣದಲ್ಲಿ ನಡೆಸುತ್ತಿರುವುದರಿಂದ ಅವರಿಗೆ ಸಾಕಷ್ಟು ಲಾಭ ಬರುತ್ತದೆ.

ಮಾರಾಟದ ಅಂಗಡಿಗಳದ್ದೂ ಇದೇ ಸ್ಥಿತಿ. ಸಣ್ಣ ಸಣ್ಣ ಅಂಗಡಿಗಳೇ ಮಾಯವಾಗಿ, ಅವಕ್ಕೆ ಬದಲು ರಾಕ್ಷಸಾಕಾರದ ಮಾಲ್ಲ್‌ಗಳು ಬಂದುಬಿಟ್ಟಿವೆ. ಮಾಲ್ಲ್ ಎಂದರೆ ಅದೊಂದು ಬೃಹತ್ ವ್ಯಾಪಾರ ಮಳಿಗೆಗಳ ಸಮುಚ್ಚಯ. ಈ ಸಮುಚ್ಚಯ ಎಕರೆಗಟ್ಟಳೆ ಪ್ರದೇಶವನ್ನು ವ್ಯಾಪಿಸಿರಬಹುದು. ಹೆಚ್ಚಾಗಿ ಎಲ್ಲವೂ ಒಂದೇ ಮಾಡಿನ ಕೆಳಗೆ ಇರುತ್ತವೆ. ಇಲ್ಲಿ ಹಲವಾರು ರಾಷ್ಟ್ರೀಯ, ಜಾಗತಿಕ ಹೆಸರಿನ ಮಳಿಗೆಗಳನ್ನು ಕಾಣಬಹುದು. ಹಾಗೂ ಹೆಚ್ಚಿನ ಮಳಿಗೆಗಳಲ್ಲೂ ಹಲವು ರೀತಿಯ ವಸ್ತುಗಳು ದೊರಕುತ್ತವೆ-ಕೆಲವು ಮಾತ್ರ ಕೆಲವೊಂದು ವಸ್ತುಗಳನ್ನಷ್ಟೆ ಪ್ರಧಾನವಾಗಿ ಇರಿಸಿಕೊಂಡಿರಬಹುದು. ಗಿರಾಕಿಗಳು ಅನೇಕ ಕಾರಣಗಳಿಗೋಸ್ಕರ ಈ ಮಾಲ್‌ಗಳಲ್ಲಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ನಗರ ಪ್ರದೇಶದಿಂದ ತುಸು ದೂರದಲ್ಲಿ ಇವು ಇರುವ ಕಾರಣ ಇಲ್ಲಿ ವಾಹನಗಳನ್ನು ದುಡ್ಡು ಕೊಡದೆ ಎಷ್ಟು ಹೊತ್ತು ಬೇಕಾದರೂ ಪಾರ್ಕ್ ಮಾಡಬಹುದು. ಅಮೇರಿಕದಂಥ ಕಡೆ ಈ ಪಾರ್ಕಿಂಗ್ ಸಮಸ್ಯೆ ಬಹಳ ನಿರ್ಣಾಯಕ ಪಾತ್ರ ವಹಿಸುತ್ತದೆ. ಚಿಕ್ಕ ಪುಟ್ಟ ಅಂಗಡಿಗಳ ಮುಂದೆ ಈ ತರ ಪಾರ್ಕ್ ಮಾಡುವಂತಿಲ್ಲ; ಅಥವಾ ಮಾಡುವುದಿದ್ದರೂ ದುಡ್ಡು ತೆತ್ತು ಸ್ವಲ್ಪ ಸಮಯ ಅಷ್ಟೆ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಆಯ್ಕೆಗೆ ಬಹಳಷ್ಟು ಅವಕಾಶಗಳಿರುತ್ತವೆ. ಮಳಿಗೆಯಿಂದ ಮಳಿಗೆಗೆ ಸುತ್ತಾಡಿ ನಿಮಗೆ ಬೇಕಾದ್ದನ್ನು ಆರಿಸಿಕೊಳ್ಳಬಹುದಾಗಿದೆ. ಹಾಗೂ ಒಂದು ಮನೆಗೆ ಏನೇನು ಸಾಮಾನುಗಳು ಬೇಕೋ ಅದೆಲ್ಲವೂ ಇಂಥ ಮಾಲ್‌ಗಳಲ್ಲಿ ಒಂದಲ್ಲ ಒಂದು ಕಡೆ ದೊರಕುತ್ತದೆ. ಆದ್ದರಿಂದ ಯಾವುದಕ್ಕೂ ನಿರಾಶರಾಗುವ ಅಗತ್ಯವಿಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ, ಈ ಮಾಲ್‌ಗಳು ಗಿರಾಕಿಗಳ ವಿಶ್ರಾಂತಿ, ಮನರಂಜನೆ, ಆಹಾರ ಪಾನೀಯ ಮುಂತಾದವುಗಳ ಕುರಿತೂ ನಿಗಾ ವಹಿಸುತ್ತವೆ. ಸುತ್ತಿ ಬಳಲಿದರೆ ಕೂತುಕೊಳ್ಳುವುದಕ್ಕೆ, ಅಡ್ಡಾಗುವುದಕ್ಕೆ ಮೆತ್ತನೆಯ ಸೋಫಾಗಳು ಇರುತ್ತವೆ. ಊಟಕ್ಕೆ, ಕಾಫಿಗೆ, ತಂಪುಪಾನೀಯಗಳಿಗೆ ತಾಣಗಳಿರುತ್ತವೆ. ಈ ಮಾಲ್ಲ್‌ ಸಂಸ್ಕೃತಿ ಅಮೇರಿಕದಲ್ಲಿ ಈಗ ಎಷ್ಟು ಜನಪ್ರಿಯವಾಗಿದೆಯೆಂದರೆ, ಇಲ್ಲಿಗೆ ಜನ ದುಮುಗುಟ್ಟಿ ಬರುತ್ತಾರೆ. ಏನು ಕೊಳ್ಳದಿದ್ದರೂ ಸುಮ್ಮನೆ ಅಡ್ಡಾಡುವುದಕ್ಕೆ, ನೋಡಿ ಮನ ತಣಿಯುವುದಕ್ಕೆ, ಜನರನ್ನು ವೀಕ್ಷಿಸುವುದಕ್ಕೆ ಬರುತ್ತಾರೆ. ಆದ್ದರಿಂದ ಜನರು ಮನರಂಜನೆಗೆ ಇನ್ನೆಲ್ಲೂ ಹೋಗಬೇಕಾಗಿಲ್ಲ. ಮಾಲ್‌ಗಳಿಗೆ ಹೋದರಾಯಿತು. ಅಲ್ಲಿ ಸಿನೆಮಾ, ಆಟಗಳು, ಗ್ಯಾಂಬ್ಲಿಂಗ್, ಇನ್ನಿತರ ಸರ್ಧೆಗಳು, ಈಜುಕೊಳಗಳು, ಮಸಾಜ್ ಪಾರ್ಲರುಗಳು, ಪುಸ್ತಕದಂಗಡಿಗಳು, ಏನು ಬೇಕು ಹೇಳಿ ಅವೆಲ್ಲವೂ ದೊರಕಬಹುದು. ಈ ಮಾಲ್‌ಗಳನ್ನು ಆಶ್ರಯಿಸಿದ ಕೆಲವು ಸಣ್ಣ ಸಣ್ಣ ಉದ್ಯಮಸಾಹಸಿಗಳು ಇಲ್ಲವೆಂದಿಲ್ಲ. ಕನ್ನಡಕ ವ್ಯಾಪಾರಿಗಳು, ಐಸ್ಕ್ರೀಮ್ ವೆಂಡರುಗಳು, ಮಸಾಜ್ ಕುಶಲರು ಕಾಣಸಿಗುತ್ತಾರೆ. ಆದರೆ ಅವರು ಯಾರೂ ಸ್ಪರ್ಧಾತ್ಮಕವಾಗಿ ಈ ಕೆಲಸ ಮಾಡುವುದಿಲ್ಲ.

ಹೈದರಾಬಾದು, ಬೆಂಗಳೂರಿನಂಥ ಪಟ್ಟಣಗಳಲ್ಲಿ ಈ ಮಾಲ್ಲ್ ಸಂಸ್ಕೃತಿ ಈಗ ಅಡಿಯಿಟ್ಟಿದೆ. ಭಾರತದಂಥ ದೇಶಗಳಲ್ಲಿ ಸಣ್ಣ ಸಣ್ಣ ಅಂಗಡಿಗಳು ಅಷ್ಟು ಬೇಗನೆ ಕಣ್ಮರೆ ಆಗಲಾರವಾದರೂ, ಇನ್ನಿತರ ಕ್ಷೇತ್ರಗಳಲ್ಲಿ ಸಣ್ಣ ಉದ್ಯಮಗಳು ಮಾಯವಾದರೆ ಆಶ್ಚರ್ಯವಿಲ್ಲ. ನಾನೇನೂ ಕಾಲಜ್ಞಾನಿಯಲ್ಲ; ಆದರೂ ನಮ್ಮ ಕೃಷಿ ಕ್ಷೇತ್ರದಲ್ಲಿ ಕ್ರಮೇಣ ಅಂಥದೊಂದು ಬದಲಾವಣೆಯಾಗುವ ಸಾಧ್ಯತೆ ನನಗೆ ಕಂಡುಬರುತ್ತದೆ. ಸಣ್ಣ ಹಿಡುವಳಿದಾರರಿಗೆ ಕೃಷಿ ಲಾಭದಾಯಕ ಉದ್ಯಮವಾಗಿ ಉಳಿದಿಲ್ಲ. ಯಾವುದೇ ಕಾರಣಕ್ಕೆ ಒಂದು ವರ್ಷ ಬೆಳೆ ನಾಶವಾದರೆ (ಹಾಗೂ ಕೃಷಿಯಲ್ಲಿ ಇದು ಆಗಿಂದಾಗ್ಗೆ ಆಗುವಂಥದೇ) ಅದನ್ನು ತಾಳಿಕೊಳ್ಳುವ ತಾಕತ್ತು ಈ ಸಣ್ಣ ಹಿಡುವಳಿದಾರರಿಗೆ ಇರುವುದಿಲ್ಲ. ಅದೇ ರೀತಿ, ಸಣ್ಣ ಸಣ್ಣ ಹಿಡುವಳಿದಾರರು ಮಾರುಕಟ್ಟೆಯನ್ನೂ ನಿಯಂತ್ರಿಸಲಾರರು. ಯಾಕೆಂದರೆ ಅಂಥ ಒಗ್ಗಟ್ಟಾಗಲಿ, ಒಕ್ಕೂಟವಾಗಲಿ, ತಿಳುವಳಿಕೆಯಾಗಲಿ ಅವರಲ್ಲಿ ಸಾಮಾನ್ಯವಾಗಿ ಇರುವುದಿಲ್ಲ. ಕಡಿಮೆ ಫಸಲು ಬಂದರೆ ನಷ್ಟ ಹೆಚ್ಚು ಬಂದರೂ ನಷ್ಟವೇ; ಯಾಕೆಂದರೆ ಇವರಲ್ಲಿ ಗೋದಾಮಿನ ಅನುಕೂಲತೆ ಇರುವುದಿಲ್ಲ, ಕೆಲವು ಉತ್ಪತ್ತಿಗಳನ್ನು ಹೀಗೆ ಉಳಿಸಲಿಕ್ಕೂ ಬರುವುದಿಲ್ಲ. ಆದ್ದರಿಂದ ತಮ್ಮ ಬೆಳೆಗೆ ಸಿಗಬೇಕಾದ ಬೆಲೆ ಸಿಗದೆ ಅವರು ಯಾವಾಗಲೂ ನಷ್ಪದಲ್ಲೇ ಇರುತ್ತಾರೆ. ಬೃಹತ್ ಪ್ರಮಾಣದಲ್ಲಿ ಕೃಷಿ ಮಾಡುವವರಿಗಾದರೆ, ಬಂಡವಾಳದ ಬಲದಿಂದಾಗಿ ಪ್ರಕೃತಿಯ ವಿಕೋಪಗಳನ್ನು ತಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಹಾಗೂ ಮಾಲಿನ ಬಹುಪಾಲು ಅವರ ಕೈಯಲ್ಲಿರುವುದರಿಂದ ಮಾರುಕಟ್ಟೆಯ ಮೇಲೂ ಅವರು ನಿಯಂತ್ರಣ ಹೊಂದಿರುತ್ತಾರೆ. ಕೃಷಿ ಒಂದು ಲಾಭದಾಯಕ ಅಥವಾ ಕನಿಷ್ಠ ನಿರ್ವಹಣಕಾರಿ ಉದ್ಯಮವಾಗಬೇಕಾದರೆ ದೊಡ್ಡಮಟ್ಟದಲ್ಲಿ ಕೈಗೊಳ್ಳುವುದು ಸಾಧ್ಯವೆನಿಸುತ್ತದೆ. ಕಬ್ಬು ಬೆಳೆಯುವವರೇ ಕಬ್ಬು ನರಿಯುವವರೂ ಆದರೆ ಅವರು ಯಾರ ಮರ್ಜಿಯನ್ನೂ ಕಾಯಬೇಕಾಗಿಲ್ಲ. ದುರದೃಷ್ಟವಶಾತ್, ಇದು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಭರ್ಜರಿ ಮುನ್ನಡೆ ಎನ್ನುವುದರಲ್ಲಿ ಸಂದೇಹವಿಲ್ಲ.

ಕೃಷಿ ರಂಗದಲ್ಲಿ ಇಂಥ ಬದಲಾವಣೆಯನ್ನು ಸೂಚಿಸುವ ಇನ್ನೊಂದು ಮುಖ್ಯ ಕಾರಣವೂ ಇದೆ; ಇದು ಆರ್ಥಿಕ ಕಾರಣವಲ್ಲ, ಸಾಮಾಜಿಕವಾದ್ದು, ಮುಂದಿನ ತಲೆಮಾರಿನ ಮಕ್ಕಳು ಹೆಚ್ಚೆಚ್ಚು ವಿದ್ಯಾಭ್ಯಾಸವನ್ನು ಹೊಂದಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನೆಲಸಲು ಇಷ್ಟಪಡುವುದಿಲ್ಲ. ಆದ್ದರಿಂದ ಕೃಷಿ ಜಮೀನಿದ್ದು, ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳು ತಮ್ಮ ಮಕ್ಕಳು ಪಟ್ಟಣಗಳಲ್ಲಿ ನೌಕರಿ ಹಿಡಿದ ಮೇಲೆ ಈ ಜಮೀನನ್ನು ಸಿಕ್ಕಿದ ಬೆಲೆಗೆ ವಿಕ್ರಯಿಸಿ ಪಟ್ಟಣದತ್ತ ವಲಸೆ ಬರುವ ವಿದ್ಯಮಾನ ಈಗಾಗಲೇ ಸುರುವಾಗಿರುವುದನ್ನು ನಮ್ಮ ಆರ್ಥಿಕ ಮತ್ತು ಕೃಷಿ ತಜ್ಞರು ಗಮನಿಸದೆ ಇರುವುದು ಸಾಧ್ಯವಿಲ್ಲ.

ಸಣ್ಣ ಸಣ್ಣ ಉದ್ಯಮಿಗಳನ್ನು, ಕುಶಲಕರ್ಮಿಗಳನ್ನು ರಕ್ಕಸ ಉದ್ಯಮಿಗಳು ನಂಗಿ ನೀರು ಕುಡಿದ ಅನೇಕ ಉದಾಹರಣೆಗಳು ಎಷ್ಟೋ ಇವೆ. ಸಿದ್ಧ ಉಡುಪುಗಳ ಶೋಕಿ ಬಂದು ದರ್ಜಿಗಳಿಗೆ ಪೆಟ್ಟು ಬಿತ್ತು. ದರ್ಜಿಗಳೇ ಇಲ್ಲವಾದರು ಎಂದಲ್ಲ; ಬಟ್ಟೆ ಹೊಲಿಯುವುದಕ್ಕೆ ಒಂದು ಕಾರ್ಖಾನೆಯ ಸ್ವರೂಪ ಬಂದು, ದರ್ಜಿಗಳು ತಮ್ಮ ಉದ್ಯಮದ ಮಾಲೀಕರಾಗದೆ, ಕೇವಲ ನೌಕರರಾದರು ಎಂದು ಅರ್ಥ. ಬಹುಶಃ ಔದ್ಯಮೀಕರಣದ ಈ ಪರಿಣಾಮ ಅತ್ಯಂತ ಘೋರವಾಗಿ ಕಾಣಿಸಿಕೊಂಡಂಥ ಒಂದು ವರ್ಗ ನೇಕಾರರದು. ಕೈಮಗ್ಗದ ಗುಡಿಕೈಗಾರಿಕೆಯಾಗಿದ್ದ ಬಟ್ಟೆ ನೇಯುವಿಕೆ ಔದ್ಯಮೀಕರಣದಿಂದಾಗಿ ಬಂಡವಾಳಶಾಹಿಗಳ ಪಾಲಾಯಿತು; ಕೈಮಗ್ಗದ ಬದಲು ವಿದ್ಯುಚ್ಚಾಲಿತ ಮಗ್ಗಗಳು ಬಂದುವು. ನಾವಿಂದು ಪತ್ರಿಕೆಗಳಲ್ಲಿ ಜಾಹೀರಾತು ನೋಡುವ ವಸ್ತ್ರದ ಉದ್ಯಮಿಗಳ ಮಾಲುಗಳು ಈಗಲೂ ಹೆಚ್ಚಿನ ಪ್ರಮಾಣದಲ್ಲಿ ಸಿದ್ಧವಾಗುವುದು ಹೊರಗುತ್ತಿಗೆಯ ಮೂಲಕವೇ. ಎಂದರೆ ಹಿಂದೆ ಯಾವ ನೇಕಾರರ ಮನೆಗಳಲ್ಲಿ ಕೈಮಗ್ಗಗಳಿದ್ದುವೋ ಅಲ್ಲಿ ಈಗ ವಿದ್ಯುಚ್ಚಾಲಿತ ಯಂತ್ರಗಳು ಬಂದಿವೆ. ಹಾಗೂ ಗುತ್ತಿಗೆಯ ಮೇಲೆ ನೇಕಾರರು ದೊಡ್ಡ ಕಂಪೆನಿಗಳ ನಿರ್ದಿಷ್ಟತೆಗಳಿಗೆ ಅನಗುಣವಾಗಿ ಬಟ್ಟೆ ನೇಯ್ದು ಕೊಡುತ್ತಾರೆ. ಸೂರತ್‌ನಂಥ ಶಹರಗಳ ಒಳಪ್ರದೇಶಗಳಲ್ಲಿ ನೀವು ಓಡಾಡಿದರೆ ಮನೆಮನೆಗಳಿಂದ ಈ ಯಂತ್ರಗಳ ರಟರಟ ಸದ್ದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ನಿಮ್ಮ ಕಿವಿಗೆ ಬೀಳುತ್ತದೆ. ಮನೆಗಳ ಹೆಚ್ಚಿನ ಜಾಗವನ್ನೂ ಈ ಯುಂತ್ರಗಳು ಆಕ್ರಮಿಸಿಕೊಂಡಿವೆ. ಇಲ್ಲಿ ಜನ ಹೇಗೆ ಜೀವಿಸುತ್ತಾರೆ, ಮಕ್ಕಳು ಹೇಗೆ ಬೆಳೆಯುತ್ತವೆ ಎಂದು ಅಚ್ಚರಿಯಾಗುತ್ತದೆ.

ಇಂಥ ಹೊರಗುತ್ತಿಗೆ ಇತರ ಕ್ಷೇತ್ರಗಳಲ್ಲೂ ಇದೆ. ಉದಾಹರಣೆಗೆ, ಬೀಡಿ ಕಂಪೆನಿಗಳು ನೇರವಾಗಿ ಕಾರ್ಮಿಕರನ್ನು ನೇಮಿಸುವುದು ಕಡಿಮೆ. ಕಂಪೆನಿಗಳು ಎಲೆಗಳನ್ನೂ, ತಂಬಾಕನ್ನೂ ಹಂಚುತ್ತವೆ; ಮತ್ತು ತಮ್ಮ ನಿರ್ದಿಷ್ಠತೆಗಳಿಗೆ ಅನಗುಣವಾಗಿ ಕಟ್ಟಿದ ಬೀಡಿಗಳನ್ನು ಸಾವಿರಕ್ಕೆ ಇಂತಿಷ್ಟು ಎಂಬ ಲೆಕ್ಕದ ಮೇಲೆ ಕೂಲಿ ಕೊಟ್ಟು ಈ ಕಾರ್ಮಿಕರಿಂದ ಸಂಗ್ರಹಿಸಿಕೊಳ್ಳುತ್ತವೆ. ನಿಜ, ಬೀಡಿ ಕಂಪೆನಿಗಳು ಯಾವ ಸಣ್ಣ ಉದ್ಯಮಗಳನ್ನೂ ನೇರವಾಗಿ ನುಂಗಿಲ್ಲ; ಆದರೂ ಹೆಚ್ಚು ಹಣ ತೋರಿಸಿ ಇತರ ಗೃಹಕೈಗಾರಿಕೆಗಳ ನಾಶಕ್ಕೆ ಅಪ್ರತ್ಯಕ್ಷವಾಗಿ ಕಾರಣವಾಗಿವೆ.

ಹೊರ ಗುತ್ತಿಗೆಗಳಿಂದ ಬಂಡವಾಳದಾರರಿಗೆ ಅನುಕೂಲತೆಯೆಂದರೆ, ಅವರಿಗೆ ಕಾರ್ಮಿಕರ ಜವಾಬ್ದಾರಿಯಾಗಲಿ ಸಮಸ್ಯೆಗಳಾಗಲಿ ಇರುವುದಿಲ್ಲ. ಹೊರಗುತ್ತಿಗೆಯ ಕಾರ್ಮಿಕರು ಹೆಚ್ಚಾಗಿ ಮನೆಗಳಲ್ಲೇ ದುಡಿಯುವುದರಿಂದ ಅವರು ಮುಷ್ಕರ ಹೂಡುವ ಪ್ರಮೇಯವೂ ಬಹಳ ಕಡಿಮೆ. ಇನ್ನು ಈ ಕಾರ್ಮಿಕರಿಗಾದರೆ, ತಂತಮ್ಮ ಮನೆಯಲ್ಲೇ, ತಂತಮ್ಮ ಅನುಕೂಲತೆಗೆ ಮತ್ತು ತಾಕತ್ತಿಗೆ ತಕ್ಕಂತೆ ಗಳಿಸುವುದಕ್ಕೆ ಆಗುತ್ತದೆ. ತಾವು ಯಾವ ಮೇಲ್ವಿಚಾರಕರ ಕೈಕೆಳಗೂ ದುಡಿಯುವುದಿಲ್ಲ, ಬೇಕಾದರೆ ದುಡಿತ, ಇಲ್ಲದಿದ್ದರೆ ವಿರಾಮ ಎನ್ನುವುದು ಸ್ವಾತಂತ್ರ್ಯದ ಭ್ರಮೆಯನ್ನೂ ಒದಗಿಸುತ್ತದೆ. ಆದರೆ ವಾಸ್ತವದಲ್ಲಿ ಇದರಿಂದ ಸಹಸ್ರಾರು ಜನರು ಅಸಂಘಟಿತ ಕಾರ್ಮಿಕರಾಗಿ ಮಾರ್ಪಡುತ್ತಾರೆ ಎನ್ನುವುದು ಗಮನಿಸಬೇಕಾದ ಸಂಗತಿ. ಮಾತ್ರವಲ್ಲ, ಇಂಥ ಯಾವುದೇ ಕಾರ್ಮಿಕರಿಗೂ ಸೃಜನಶೀಲತೆಯ ಪ್ರಕಟಣೆಗಾಗಲಿ ಆ ಮೂಲಕ ದೊರಕಬಹುದಾದ ಮನ್ನಣೆಗಾಗಲಿ ಯಾವ ಅವಕಾಶವೂ ಇರುವುದಿಲ್ಲ ಎನ್ನುವುದು ಇದಕ್ಕಿಂತಲೂ ಘೋರವಾದ ಸಂಗತಿ. ಆದ್ದರಿಂದ ಹೊರಗುತ್ತಿಗೆಯ ಸ್ವಾತಂತ್ರ್ಯ ನಿಜವಾದ ಸ್ವಾತಂತ್ರ್ಯವಾಗಿರದೆ ಅದರ ಭ್ರಮೆಯಾಗಿಬಿಡುತ್ತದೆ. ಹೆಚ್ಚು ದುಡಿದವನಿಗೆ ಹೆಚ್ಚು ಹಣ ಎನ್ನುವುದೊಂದೇ ಇಲ್ಲಿ ಪರಮಸತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಠ
Next post ಅವ್ವನ ಹಸಿರ ರೇಶಿಮೆ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…