ಇಂದಿನ ಮಕ್ಕಳೇ ಮುಂದಿನ ಜನಾಂಗ

ಇಂದಿನ ಮಕ್ಕಳೇ ಮುಂದಿನ ಜನಾಂಗ

ಇವತ್ತು ನವೆಂಬರ್ ೧೪ ಮಕ್ಕಳ ದಿನ. ಸುಮಾರು ಐದು ದಶಕಗಳಿಂದ ಮಕ್ಕಳ ನೆಚ್ಚಿನ ಚಾಚಾ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಾ ಬರುತ್ತಿದ್ದೇವೆ.

ನಾವು ಚಿಕ್ಕವರಿರುವಾಗ ಮಕ್ಕಳ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೆವು. ಶಾಲೆಯಲ್ಲಿ ಹಬ್ಬದ ವಾತಾವರಣ. ಚಾಚಾ ನೆಹರೂ ಅವರ ಬಗ್ಗೆ ಭಾಷಣಗಳು; ವಿವಿಧ ಸ್ಪರ್ಧೆಗಳು; ಮನರಂಜನೆಗಳು; ಬಹುಮಾನಗಳು ಎಲ್ಲವೂ ಇರುತ್ತಿದ್ದುವು. ಇವತ್ತು ಮಕ್ಕಳ ದಿನ ಅಂದರೆ, ಪಾಶ್ಚಾತ್ತೀಕರಣದ ಮೆರುಗಿನಿಂದ ಆಚರಿಸುತ್ತಿರುವ ಪ್ರೇಮಿಗಳ ದಿನ, ಅಮ್ಮನ ದಿನ, ಅಪ್ಪನ ದಿನ, ವೃದ್ಧರ ದಿನ, ಮಹಿಳೆಯರ ದಿನ, ಕಾರ್ಮಿಕರ ದಿನ ಎನ್ನುವ ದಿನಗಳಷ್ಟೇ ನೀರಸವಾಗಿ ಕಳೆದು ಹೋಗುತ್ತಿರುವುದು ನೋವಿನ ಸಂಗತಿ. ಯಾವ ಶಾಲೆಯಲ್ಲೂ ಆಚರಣೆ ಇದ್ದಹಾಗಿಲ್ಲ.

ಈಗಿನ ಮಕ್ಕಳಿಗೆ ‘ಚಾಚಾ ನೆಹರೂ’ ಅನ್ನುವುದೇ ಗೊತ್ತಾಗದ ಸಂಗತಿ, ಜವಾಹರಲಾಲ ನೆಹರೂ ಅಂದರೆ ಮೊದಲ ಪ್ರಧಾನಿ ಎನ್ನುವುದಷ್ಟೇ ಗೊತ್ತು. ಅದೂ ಜನರಲ್ ನಾಲೆಡ್ಜ್ ಪಶ್ನೆಗೆ ಉತ್ತರ ಕೊಡಬೇಕಾಗುವುದರಿಂದ ಇದು ಹೀಗೇ ಮುಂದುವರೆದರೆ ಮುಂದೊಂದು ದಿನ ಚಾಚಾ ನೆಹರೂ ಅಂದರೆ ಯಾರು? ಎಂದು ಮಕ್ಕಳು ಹಾಕುವ ಪ್ರಶ್ನೆಯನ್ನು ಎದುರಿಸಬೇಕಾದೀತು. ಅದಕ್ಕೆ ಉತ್ತರ ಹೇಳಲು ತಡಕಾಡುವ ಪರಿಸ್ಥಿತಿ ಇದ್ದರೂ ಅಚ್ಚರಿಯಿಲ್ಲ. ಮಕ್ಕಳಿಗೆ ಚರಿತ್ರೆ ಏನನ್ನೂ ಕಲಿಸುವುದಿಲ್ಲ. ಕಲಿಸುವ ವಾತಾವರಣವನ್ನು ನಾವು ನಿರ್ಮಿಸಿಯೂ ಇಲ್ಲ.

ಇಂದಿನ ಮಕ್ಕಳೇ ಮುಂದಿನ ಜನಾಂಗ ಎನ್ನುವ ಮಾತನ್ನು ಸದಾ ಉಚ್ಚರಿಸುತ್ತಿರುತ್ತೇವೆ. ಕಳೆದ ಅರ್ಧ ಶತಮಾನದಲ್ಲಿ ನಮ್ಮ ಮುಂದಿನ ಜನಾಂಗ ಮೂವತ್ತಮೂರು ಕೋಟಿಯಿಂದ ಮೂರು ನಾಲ್ಕು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿ ನಿಮಿಷದಲ್ಲೂ ಮೂರು ಮಕ್ಕಳು ಹುಟ್ಟುತ್ತಿದ್ದಾರೆ. ಅವರನ್ನು ಮುಂದಿನ ಜನಾಂಗವನ್ನಾಗಿ ರೂಪಿಸುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಲೇ ಇದೆ. ಆದರೆ ಎಷ್ಟು ಸಮರ್ಪಕವಾಗಿ ಈ ಕಾರ್ಯ ನಡೆಯುತ್ತಿದೆ? ಎಲ್ಲರಿಗೂ ವಿದ್ಯೆ ಎನ್ನುತ್ತಿರುವ ಯೋಜನೆಗಳು ಇರುವುದಾದರೂ ಅಕ್ಷರಸ್ತರ ಸಂಖ್ಯೆ ಶೇಕಡಾ ಮೂವತ್ತರ ಗಡಿಯನ್ನೂ ದಾಟುತ್ತಿಲ್ಲ. ಹೆಣ್ಣುಮಕ್ಕಳಿಗೆ ಸಮಾನ ಸ್ಥಾನಮಾನ, ಸ್ತ್ರೀ ಸಬಲೀಕರಣ ಎನ್ನುತ್ತಲೇ ಅವರ ಮೇಲಿನ ಶೋಷಣೆಗಳು ನಿರಂತರವಾಗಿ ಹೆಚ್ಚುತ್ತಿವೆ. ಯಾಕೆ ಹೀಗೆ? ಪ್ರಸ್ತುತದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ಮಕ್ಕಳನ್ನು ಯಾವ ದಿಕ್ಕಿಗೆ ಕರೆದೊಯ್ಯುತ್ತಿವೆ?

ಇವತ್ತಿನ ಜೀವನಶೈಲಿ, ಜೀವನದ ಮೌಲ್ಯಗಳೂ ಬದಲಾಗಿವೆ. ಶೋಷಣೆ ಗಂಡಸರ ಮೇಲೂ ನಡೆಯುತ್ತಿದೆ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ದೇಶ ಎಂದು ಹೇಳುತ್ತಲೇ ಮಕ್ಕಳನ್ನು ಸಂಪೂರ್ಣ ಪಾಶ್ಚಾತೀಕರಣದ ಪ್ರಭಾವದಲ್ಲಿ ಬೆಳೆಸುತ್ತಾ ನಮ್ಮೊಳಗೇ ಇರುವ ದ್ವಂದ್ವದಲ್ಲಿ ನಾವಿಂದು ಮಕ್ಕಳನ್ನು ಬೆಳೆಸಿ ಗೊಂದಲದಲ್ಲಿ ಕೆಡವುತ್ತಿದ್ದೇವೆ. ಬಾಲ್ಯದಲ್ಲಿ ನಮಗಿದ್ದಂತಹ ಆದರ್ಶ ವ್ಯಕ್ತಿಗಳು ಇವತ್ತಿನ ಮಕ್ಕಳಿಗೆ ಇಲ್ಲ. ಇವತ್ತಿನ ಆದರ್ಶ ಹಣ ಗಳಿಕೆ, ಹೇಗಾದರೂ ಸರಿ ಹಣ ಮಾಡಬೇಕು ಎನ್ನುವ ಹಪಹಪಿಕೆ. ಹೀಗಾಗಿ ತ್ರಿಶಂಕು ಸ್ವರ್ಗವೆನ್ನುವ ಭ್ರಮಾಲೋಕದಲ್ಲಿ ಇಂದಿನ ಮಕ್ಕಳು ಸಿಕ್ಕಿಬಿದ್ದಿದ್ದಾರೆ. ಹಣ ಅನುಕೂಲತೆಗಳನ್ನು ಒದಗಿಸಬಹುದು ಮಾನಸಿಕ ನೆಮ್ಮದಿ ಒದಗಿಸಬಲ್ಲುದೇ? ಪ್ರೀತಿಯನ್ನು ಕೊಡಬಲ್ಲುದೇ? ಶಾಂತಿಯನ್ನು ಕೊಡಬಲ್ಲುದೇ? ಈ ತ್ರಿಶಂಕು ಸ್ವರ್ಗದಿಂದ ಅವರನ್ನು ಹೊರಗೆಳೆಯುವ ಹೊಣೆ ಹೆತ್ತವರಲ್ಲದೆ ಮತ್ತೆ ಯಾರದ್ದು?

ಮಕ್ಕಳು ನಮ್ಮವು. ಅವರನ್ನು ಬೆಳೆಸುವ ರೀತಿ, ಜವಾಬ್ದಾರಿ ನಮ್ಮವು. ಇವತ್ತು ನಾವೇನು ಮಾಡುತ್ತೇವೆಯೋ ಅದು ಮುಂದಿನ ಜನಾಂಗದ ಭವಿಷ್ಯವನ್ನೇ ಬರೆಯುತ್ತದೆ. ಈಗಿರುವಾಗ ಯಾಕೆ ಈ ಗೊಂದಲ? ಮಕ್ಕಳ ತಲೆಯಲ್ಲಿ ನೀನೇ ಕ್ಲಾಸಿಗೆ ಮೊದಲಿಗನಾಗಬೇಕು ಎನ್ನುವ ನಮ್ಮ ತೀರ್ಮಾನವನ್ನು ತುಂಬಿಸಿ ಹೆಜ್ಜೆ ಹೆಜ್ಜೆಗೆ ಅನಾರೋಗ್ಯಕರ ಸ್ಪರ್ಧೆ, ಸ್ವಾರ್ಥ, ಅಸೂಯೆಯ ಪಾಠವನ್ನು ಚಿಕ್ಕಂದಿನಿಂದಲೂ ಕಲಿಸುತ್ತೇವೆ. ಮಕ್ಕಳು ಬುದ್ಧಿವಂತರಾಗಬೇಕು ಎನ್ನುವುದರಲ್ಲಿ ತಪ್ಪಿಲ್ಲ. ಆದರೆ ಮಕ್ಕಳ ಬುದ್ಧಿವಂತಿಕೆ ಬರೇ ಮಾರ್ಕುಗಳಲ್ಲಿ ಇಲ್ಲ. ಅವರ ಮುಂದೆ ಒಂದು ಸಂಕೀರ್ಣ ಬದುಕಿದೆ. ಅದನ್ನವರು ಎದುರಿಸಲು ಸಾಧ್ಯವಾಗುವಂತಹ ಮಾರ್ಗದರ್ಶನ ಅವರಿಗೆ ಬೇಕು. ಸರಿತಪ್ಪುಗಳನ್ನು ವಿವೇಚಿಸುವ ಬುದ್ಧಿವಂತಿಕೆ, ಜೀವನವನ್ನು ಎದುರಿಸುವ ಛಲ, ಸೋಲನ್ನು ಎದುರಿಸುವ ಮನಸ್ಥೈರ್‍ಯ, ಸೋತಾಗ ಕುಸಿಯದೆ ಎದ್ದುನಿಂತು ಮುನ್ನಡೆಯುವ ಆತ್ಮವಿಶ್ವಾಸ, ಸೋಲುಗೆಲುವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ದಿಟ್ಟತನ, ಹೊರ ಜಗತ್ತಿನ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯವಂತಿಕೆ, ಇವೆಲ್ಲವನ್ನೂ ಮಕ್ಕಳಲ್ಲಿ ತುಂಬಿ ಸರ್ವತೋಮುಖವಾಗಿ ಬೆಳೆಸಿದರೆ ಮಾತ್ರ ನಮ್ಮ ಮುಂದಿನ ಜನಾಂಗ ಸುದೃಢವಾಗಬಲ್ಲುದು.

ಜೀವನದಲ್ಲಿ ಬದುಕಲು ಕಲಿಯುವ ವಿದ್ಯೆ, ಜಾಣತನ ಬಹಳ ಮುಖ್ಯ ಎನ್ನುವುದನ್ನು ಮರೆತು ಅವರನ್ನು ಮಾರ್ಕು ತೆಗೆಯುವ ಯಂತ್ರಗಳನ್ನಾಗಿ ಮಾತ್ರ ರೂಪಿಸುತ್ತಾ ಸಾಗಿದರೆ ಮುಂದಿನ ಇಂದಿನ ಮಕ್ಕಳು ಜನಾಂಗ ಆಗುವುದು ಹೇಗೆ? ನಮ್ಮ ಮನೆ ನಮ್ಮ ಸಮಾಜ ಇಂತಹ ಯಂತ್ರಗಳಿಂದ ತುಂಬಬೇಕೇ? ಸ್ಪಂದನಗಳಿಲ್ಲದ ಜನರಿಂದ ಸಮಾಜ ಅಥವಾ ಜೀವನ ಮುಂದುವರೆಯುವುದು ಸಾಧ್ಯವೆ? ಮುಂದೊಂದು ಇಂದಿನ ಮಕ್ಕಳು ಮುಂದಿನ ಯಂತ್ರಗಳು ದಿನ ಎಂದು ಹೇಳಿಕೆಯನ್ನು ಬದಲಾಯಿಸಬೇಕಾದೀತು.

ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಸಮಾಜ, ನಮ್ಮ ದೇಶವೆನ್ನುವ ಅಭಿಮಾನವಿರುವ ಮಕ್ಕಳು ನಮ್ಮ ಮುಂದಿನ ಜನಾಂಗವಾಗಬೇಕೆನ್ನುವ ಹೊಣೆಗಾರಿಕೆ ಎಲ್ಲರಿಗಿರಲಿ.
*****
(ಚಿಂತನ- ಆಕಾಶವಾಣಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೆಲ್ಲ ಒಂದೇ
Next post ಬೆತ್ತಲೆ ಕಿರೀಟ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…