ಕಾರಾಗೃಹದ ಮೂಲೆಯಲ್ಲಿ ಕುಳಿತಿದ್ದ ಶಂಕರ್ ಪಾಂಡೆಗೆ ಮನದಲ್ಲಿ ಕತ್ತಲೆ ಆವರಿಸಿತ್ತು. ನೊಂದು ಬೆಂದು ಅವನ ಹೃದಯ ಬೇಸತ್ತಿತ್ತು. ವಿದ್ಯಾರ್‍ಜನೆಯಲ್ಲಿ ತೊಡಗಿ ಸ್ನಾತಕೋತ್ತರ ಪದವಿ ಪಡೆದಿದ್ದ ಪಾಂಡೆ ಇಂದು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಅವನು ಬಾಲ್ಯದಿಂದಲು ಗಣಿತದಲ್ಲಿ ಬಹಳ ಆಸಕ್ತಿ ಹೊಂದಿದ್ದ. ತಂದೆ ಗುಮಾಸ್ತನಾಗಿ ಕೆಲಸ ಮಾಡುತ್ತ ಮಧ್ಯಮವರ್‍ಗದ ಜೀವನವನ್ನು ಸಾಗಿಸುತ್ತಿದ್ದರು. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಅವರಿಗೆ ಎಲ್ಲಾ ವಿಧದಲ್ಲು ಪ್ರೋತ್ಸಾಹ ನೀಡುತ್ತಿದ್ದರು. ಅವರಿಗೆ ಶಂಕರನ ಗಣಿತ ಪ್ರೌಢಿಮೆಯಲ್ಲಿ ಹೆಮ್ಮೆಯಿತ್ತು. ಅವರ ಎರಡನೆಯ ಮಗ ದಿನೇಶನು ಅಷ್ಟು ಗಣಿತದಲ್ಲಿ ಚುರುಕಾಗಿರಲಿಲ್ಲ. ಶಂಕರ ತಮ್ಮನಿಗೆ ಗಣಿತದಲ್ಲಿ ಆಸಕ್ತಿ ತುಂಬಿ ಗಣಿತವನ್ನು ಹೇಳಿಕೊಡುತ್ತಿದ್ದ. ತಂದೆ ತಾಯಿಗೆ ಮಕ್ಕಳ ಬಗ್ಗೆ ಬಹಳ ಅಭಿಮಾನವಿತ್ತು. ಪ್ರತಿ ವರ್‍ಷವು ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಮುಂದಿನ ತರಗತಿಗೆ ಹೋಗುವುದು ನೋಡಿ ಅವರಿಗೆ ಬಹಳ ಸಂತೋಷವಾಗುತ್ತಿತ್ತು. ಕೇಂದ್ರ ಸರ್‍ಕಾರದ ಪ್ರತಿಭಾ ಪರೀಕ್ಷೆಯಲ್ಲಿ ಉನ್ನತ ರೀತಿಯಲ್ಲಿ ಪಾಸಾಗಿ ಶಂಕರನಿಗೆ ಸ್ಕಾಲರ್‍ಶಿಪ್ ಬಂದಾಗ ಅವರಿಗೆ ಅತೀವ ಸಂಭ್ರಮವಾಯಿತು.
ಅವನಿಗೆ ಉಜ್ವಲ ಭವಿಷ್ಯವಿದೆ ಎಂದು ಕನಸು ಕಾಣುತ್ತಿದ್ದರು. ಪ್ರತಿ ವರ್ಷವು ತರಗತಿಗೆ ಮೊದಲನೆಯವನಾಗಿ ಬಹುಮಾನಗಳನ್ನು ತೆಗದುಕೊಳ್ಳುತ್ತಿದ್ದ. ಹತ್ತನೆಯ ತರಗತಿಯಲ್ಲಿ ಉತ್ಕೃಷ್ಟ ದರ್ಜೆಯಲ್ಲಿ ಉತ್ತೀರ್ಣನಾಗಿ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ದೊರೆತಾಗ ತಂದೆ ತಾಯಿಗೆ ಸ್ವರ್ಗ ಮೂರೇ ಗೇಣು ಇತ್ತು. ತಂದೆ ಮಹೇಶ ಪಾಂಡೆ ತಾವು ಕೂಡಿಟ್ಟ ಧನದಲ್ಲಿ ಅವನಿಗೆ ಬೇಕಾಗುವ ಪುಸ್ತಕಗಳನ್ನು ಕೊಡಿಸಿ ಅವನ ವಿದ್ಯಾವೃದ್ಧಿಗೆ ಸಹಾಯ ಮಾಡಿದರು. ದಿನೇಶ ಕಾಲೇಜಿನಲ್ಲಿ ಕಾಮರ್ಸ್ ತೆಗದುಕೊಂಡು ಮುಂದುವರಿಯುತ್ತಿದ್ದ. ಶಂಕರ ತನ್ನ ಸಹಪಾಠಿಗಳಿಗಲ್ಲದೆ ಮನೆಯಲ್ಲಿ ಶಾಲಾ ಮಕ್ಕಳಿಗೆ ಪಾಠ ಹೇಳಿ ದುಡ್ಡು ಸಂಪಾದಿಸಿ ತಂದೆಗೆ ಸಹಾಯ ಮಾಡುತ್ತಿದ್ದ. ಮಹೇಶ ಪಾಂಡೆಯವರು ಇದ್ದುದು ಒರಿಸ್ಸಾದ ಒಂದು ಊರಿನಲ್ಲಿ. ರಾಜ್ಯಮಟ್ಟದ ಕಛೇರಿಯಲ್ಲಿ ಹಿರಿಯ ಗುಮಾಸ್ತನಾಗಿದ್ದರು. ಶಂಕರ ಈಗ ಎಂ.ಎಸ್ಸಿ ಗಣಿತ ಮುಗಿಸಿ ಸ್ನಾತಕೋತ್ತರ ಪದವಿಗಾಗಿ ಭುವನೇಶ್ವರದಲ್ಲಿ ಹಾಸ್ಟೆಲ್ಲಿನಲ್ಲಿ ಇರುತ್ತಿದ್ದ. ರಜೆ ಸಿಕ್ಕಾಗಲೆಲ್ಲಾ ಊರಿಗೆ ಬಂದು ತಂದೆ ತಾಯಿಯನ್ನು, ತಮ್ಮನನ್ನು ನೋಡಿಕೊಂಡು ಹೋಗುತ್ತಿದ್ದ.
ಒಂದು ರಾತ್ರಿ ಇದ್ದಕ್ಕಿದ್ದಂತೆ ಬಂದು ಇಳಿದ ಮಗನನ್ನು ನೋಡಿ ಆಶ್ಚರ್ಯ
ವಾಯಿತು.
“ಏನು ? ಯಾಕೆ ? ಇದ್ದಕ್ಕಿದ್ದಂತೆ ಬಂದಿರುವೆ ?” ಎಂದು ತಂದೆ ತಾಯಿ ಆಶ್ಚರ್ಯದಿಂದ ಕೇಳಿದರು.
“ಅಮ್ಮ! ನಂಗೆ ವಾರದ ರಜೆ ಜೊತೆ ಸೋಮವಾರನು ರಜೆ ಇತ್ತು. ಅದಕ್ಕೆ ನಿಮ್ಮನ್ನೆಲ್ಲಾ ನೋಡಿಕೊಂಡು ಹೋಗಲು ಬಂದೆ” ಎಂದ.
“ಶಂಕರ! ಒಳ್ಳೆಯದೇ ಆಯಿತು. ನಾಳೆ ರಥ ಯಾತ್ರೆ ನೋಡಿ ದೇವರ ದರ್ಶನ ಮಾಡಿ ಹೋಗುವಿಯಂತೆ” ಎಂದು ಹೇಳಿ ಮಗನ ಬರುವಿಗಾಗಿ ಸಂತಸ ಪಟ್ಟರು.
“ಪ್ರಯಾಣದಲ್ಲಿ ಏನು ತಿಂದಿರುವಿಯೋ ಏನೋ, ಚಪಾತಿ ಪಲ್ಯ ಇದೆ. ಕೈಕಾಲು ತೊಳೆದುಕೊಂಡು ತಿನ್ನಲು ಬಾ” ಎಂದು ತಾಯಿ ಮಮತೆಯಿಂದ ಉಪಚರಿಸಿ ಊಟಕ್ಕೆ ಎಬ್ಬಿಸಿದರು.
ಶಂಕರ ಊಟಕ್ಕೆ ಕುಳಿತು ಚಪಾತಿ ಪಲ್ಯ ತುಂಬಾ ಚೆನ್ನಾಗಿದೆ ಎಂದು ಹೇಳಿ, “ಹಾಸ್ಟೆಲಿನಲ್ಲಿ ರೋಟಿ ತುಂಬಾ ದಪ್ಪ ಇರುತ್ತೆ. ನಂಗೆ ಅಲ್ಲಿ ಊಟನೇ ಸೇರೊಲ್ಲ” ಎಂದು ತಾಯಿ ಹತ್ತಿರ ತನ್ನ ಒಂಟಿ ಜೀವನದ ಕಷ್ಟವನ್ನು ತೋಡಿಕೊಂಡ. ತಾಯಿ, ತಂದೆಗೆ ಅಕ್ಕರೆಯ ಮಗನಾದ ಶಂಕರ ಓದಿಗಾಗಿ ದೂರ ಇರುವುದು ಅವರಿಗೂ ನುಂಗಲಾರದ ತುತ್ತಾಗಿತ್ತು.
“ಶಂಕರಾ! ಯಾವಾಗ ನೀನು ನಿನ್ನ ಪಿಹೆಚ್.ಡಿ. ಮುಗಿಸಿ ಈ ಊರಲ್ಲೇ ಕೆಲಸ ಮಾಡುತ್ತೀಯಾ ಅಂತ ನಾವು ಎದುರು ನೋಡುತ್ತಿದ್ದೇವೆ” ಎಂದು ತಮ್ಮ ಅಂತರಾಳದ ದುಃಖವನ್ನು ಮಗನಲ್ಲಿ ತೋಡಿಕೊಂಡರು.
“ಅಮ್ಮಾ! ಯೋಚನೆ ಮಾಡಬೇಡ. ಇನ್ನು ಆರು ಏಳು ತಿಂಗಳಲ್ಲಿ ಪಿಹೆಚ್.ಡಿ. ಮುಗಿಸಿ ಇಲ್ಲೇ ಕೆಲಸ ಹುಡುಕುತ್ತೇನೆ” ಎಂದು ಮಗ ತಾಯಿಗೆ ಭರವಸೆಯನ್ನಿತ್ತ.
ಬೆಳಿಗ್ಗೆಯಾದೊಡನೆ ತಂದೆ ಶಂಕರನನ್ನು ನೋಡಿ ಹಸನ್ಮುಖರಾಗಿ “ರಾತ್ರಿ ನೀನು ಬಂದದ್ದು ಗೊತ್ತಾಯಿತು. ನಿದ್ದೆ, ಎದ್ದು ಬರಲಿಲ್ಲ ಅಷ್ಟೆ. ಹೇಳಪ್ಪಾ! ಏನು ಸ್ಪೆಷಲ್ ತಿಂಡಿ ಬೇಕು. ಅಮ್ಮ ಮಾಡಿ ಕೊಡುತ್ತಾಳೇ” ಎಂದರು ಪ್ರೀತಿ ತುಂಬಿದ ಹೃದಯದಿಂದ.
“ಅಮ್ಮ ಏನು ಮಾಡಿದರೂ ಚೆನ್ನಾಗಿರುತ್ತೆ ಬಿಡಪ್ಪ” ಎಂದ.
“ಅಣ್ಣಾ! ನಿಂಗೆ ಲಡ್ಡು ಇಷ್ಟ ಅಲ್ವಾ?” ಎಂದ ತಮ್ಮ ಮಹೇಶ.
“ಏ ! ಮಹೇಶ ! ತಮಾಷೆ ಮಾಡಬೇಡ. ಬೆಳಿಗ್ಗೆ ಎದ್ದು ಯಾರು ಲಡ್ಡು
ತಿನ್ನೋಲ್ಲ” ಎಂದ.
ಹೋಗಲಿ, ಲಡ್ಡು ಡಬ್ಬದಲ್ಲಿ ಹಾಕಿ ಅಮ್ಮ ಕೊಡುತ್ತಾಳೆ. ಹಾಸ್ಟೆಲ್‌ಗೆ ತೆಗುದುಕೊಂಡು ಹೋಗು” ಎಂದ.
“ಏ ! ಸುಮ್ನೆ ಕೂಳ್ಳೋ, ಚುಡಾಯಿಸಿದ್ದು ಸಾಕು” ಎಂದು ಅಣ್ಣ ತಮ್ಮಂದಿರಲ್ಲಿ ಕೀಟಲೆಯ ಮಾತುಗಳು ಆದವು.
“ಏನೋ ! ಶಂಕರ, ಮೂರು ದಿನಾ ಅನ್ನೋದು ಎಷ್ಟು ಬೇಗ ಕಳೆದು ಹೋಯಿತು. ಇವತ್ತೇ ನೀನು ಊರಿಗೆ ಹೊರಡಬೇಕು. ಯಾಕೋ ಕಳಿಸಿಕೊಡೋಕೆ ಮನಸೇಯಿಲ್ಲ. ಮತ್ತೆ ಯಾವಾಗ ಬರುತ್ತೀಯೊ ಎಂದು ಮನಸಿನಲ್ಲಿ ಕಸಿವಿಸಿಯಾಗುತ್ತಾ ಇದೆ” ಎಂದು ತಾಯಿ ಯಾವುದೋ ಅವ್ಯಕ್ತ ಆತಂಕ, ಸಂಕಟದಿಂದ ಹೇಳಿದರು.
“ಅಮ್ಮಾ! ಯಾಕೋ ನಾನು ಮೊದಲನೆಯ ಸಲ ಊರಿಗೆ ಹೋಗುತ್ತಾ ಇರೋ ಹಾಗೆ ಮಾಡಬೇಡ, ಮತ್ತೆ ಬೇಗ ಬಂದುಬಿಡುತ್ತೇನೆ” ಎಂದು ಅಮ್ಮನನ್ನು ಸಂತೈಯಿಸಿ ಹೊರಟ.
“ಆಟೋದಲ್ಲಿ ಹೋಗೋ” ಎಂದು ತಂದೆ ಹೇಳಿದರು.
“ಅಪ್ಪಾ! ಕೈಯಲ್ಲಿ ಸಾಮಾನು ಏನೂ ಇಲ್ಲ. ನಡೆದು ಬಸ್‌ಸ್ಟಾಂಡಿಗೆ ಹೋಗಿ ಬಿಡುತ್ತೇನೆ” ಎಂದ.
“ಸರಿ, ಹಾಗಿದ್ದರೆ ನಡಿ ಸರಸರನೆ” ಎಂದು ಹೇಳಿ ತಾಯಿ, ತಂದೆ, ತಮ್ಮ ಬೀಳ್ಕೊಟ್ಟು ಕಳಿಸಿಬಿಟ್ಟರು.
* * * *
ಮೂರು ನಾಲ್ಕು ದಿನ ಶಂಕರನಿಂದ ಊರಿಗೆ ಹೋಗಿ ಸೇರಿದ್ದಕ್ಕೆ ಕಾಗದವಾಗಲಿ ಇಲ್ಲ, ಟೆಲಿಫೋನ್ ಆಗಲಿ ಬರಲಿಲ್ಲ. ಶಂಕರನ ತಂದೆ ತಾಯಿಗೆ ಆತಂಕವಾಗತೊಡಗಿತು. ಅವನ ಮೊಬೈಲಿಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಬರುತ್ತಿದೆ. ಅವನ ಗೆಳೆಯರಿಗೆ ಫೋನ್ ಮಾಡಿ ಕೇಳಿದಾಗ ಅವನು ಊರಿಗೆ ಸೇರಿಲ್ಲವೆಂದು ತಿಳಿಯಿತು….. ಅವನಿಗೆ ಹಾದಿಯಲ್ಲಿ ಏನಾಯಿತೋ, ಇಲ್ಲ ಬಸ್ಸಿನಲ್ಲಿ ಏನಾಯಿತೋ ತಿಳಿಯದೆ ಒದ್ದಾಡುತ್ತಿದ್ದರು. ಅವರ ಮನೆಯ ಮುಂದೆ ಪೊಲೀಸಿನವರು ಬಂದು ನಿಂತಾಗ ಅವರ ಎದೆ ಝಗ್ ಎಂದಿತು. ಅವರು ಕನಸಿನಲ್ಲೂ ನೆನೆಯದಂತ ಕಠೋರ ಸುದ್ದಿ ಅವರ ಹೃದಯ ಬಡಿತ ನಿಂತುಹೋಗುವಂತೆ ಮಾಡಿತು. ಮಗ ಕೊಲೆ ಕೇಸಿನಲ್ಲಿ ಬಂಧಿತನಾಗಿರುವುದಾಗಿ ಪೊಲೀಸರು ವಿವರಣೆಯನ್ನು ನೀಡಿದ್ದು ಕೇಳಿ ತಾಯಿ ಪ್ರಜ್ಞಾಹೀನಳಾದಳು. ಪೊಲೀಸಿನವರ ಬಾಯಿಂದ ತಿಳಿದ ವಿಷಯವೆಂದರೆ “ಕೊಲೆಯಾದ ಯುವಕನ ದೇಹವನ್ನು ನೋಡುತ್ತಾ ನಿಂತ ನಿಮ್ಮ ಮಗನ ಮೇಲೆ ದೃಢವಾದ ಗುಮಾನಿಯಾಗಿ ಅವನನ್ನು ಬಂಧಿಸಲಾಗಿದೆ” ಎಂದರು. ಮಹೇಶಪಾಂಡೆಯವರು ಭಗೀರಥ ಪ್ರಯತ್ನ ಮಾಡಿ ತಮ್ಮ ಮಗ ಅಂತಹ ಕೊಲೆ ಮಾಡಲು ಸಾಧ್ಯವೇ ಇಲ್ಲವೆಂದು ವಾದಿಸಿದರು. ಬಂಧಿತನಾದ ಮಗನನ್ನು ನಿರಪರಾಧಿ ಎಂದು ಸಾಬೀತು ಮಾಡಿದರು. ಅದು ಕೋರ್ಟ್ ಕೇಸು ಆಯಿತು. ಶಂಕರ ಜೈಲಿನಲ್ಲಿ ಬಂಧಿತನಾದ. ಅವನ ಪಿಹೆಚ್.ಡಿ. ಕೊನೆಯ ಹಂತದಲ್ಲಿ ಇದ್ದು ಥೀಸೀಸ್ ಸಲ್ಲಿಸಬೇಕಾಗಿದ್ದುದ್ದರಿಂದ ಅವನನ್ನು ಬೇಲ್ ಮೇಲೆ ಮನೆಗೆ ಕಳಿಸಲಾಯಿತು. ಕೆಲವೇ ದಿನಗಳಲ್ಲಿ ಹೈಕೋರ್ಟಿನಿಂದ ಮತ್ತೆ ಆದೇಶ ಬಂದು ಮತ್ತೆ ತೀರ್ಪಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತು. ಮತ್ತೆ ಸುಪ್ರೀಮ್ ಕೋರ್ಟಿಗೆ ಅಪೀಲ್ ಮಾಡಿದರೂ ಅವನ ಶಿಕ್ಷೆಯಲ್ಲಿ ಬದಲಾವಣೆಯಾಗಲಿಲ್ಲ. ತಾಯಿ ಇದೇ ಚಿಂತೆಯಲ್ಲಿ ಚಿತೆ ಏರುವಂತಾದರು. ಮಗನ ವಿಷಯಕ್ಕೆ ವಿಧವಿಧವಾಗಿ ಜಗನ್ನಾಥ ದೇವರಲ್ಲಿ ಪ್ರಾರ್ಥಿಸಿ ಕೊಂಡರು. ಯಾವುದರಿಂದಲೂ ಅವರ ಮನಸ್ಸು ಹಿಡಿತಕ್ಕೆ ಬರುವಂತಾಗಲಿಲ್ಲ. ಈಗಾಗಲೇ ಶಂಕರ ಜೈಲು ವಾಸ ಅನುಭವಿಸುತ್ತ ಎರಡು ವರ್ಷವಾಗಿತ್ತು. ಅವನ ಪಿಹೆಚ್.ಡಿ. ಮುಗಿಸಿಕೊಂಡು ಜೈಲಿನಲ್ಲಿ ಅತಿ ಸಭ್ಯ ವ್ಯಕ್ತಿ ಎನಿಸಿಕೊಂಡಿದ್ದ. ಮಗನ ಚಿಂತೆಯಲ್ಲಿ ಕುಗ್ಗಿಕುಗ್ಗಿ ಸಂಸಾರದ ದೋಣಿ ಮುಳುಗಿಹೋಗಿತ್ತು. ಅವರ ದೈನಂದಿನ ಜೀವನ, ಸಾಮಾಜಿಕ ಜೀವನ ಅಸಹನೀಯವಾಗಿತ್ತು. ಯಾವ ಬಂಧು ಬಳಗವನ್ನು ನೋಡಲು ಹೋಗುತ್ತಿರಲಿಲ್ಲ. ಅವರ ಚುಚ್ಚು ಮಾತುಗಳು ಅವರ ದುಃಖವನ್ನು ಉಮ್ಮಳಿಸಿ ಅವರನ್ನು ದಹಿಸಿಬಿಡುತ್ತಿದ್ದಿತು. ಜೈಲಿನಲ್ಲಿ ಮಗನನ್ನು ಕಾಣಲು ಹೋದಾಗ ಅವರ ಹೃದಯ ಹರಿದು ಹಂಚಿ ಹೋಗುತ್ತಿತ್ತು. ಯಾವುದೋ ಜನ್ಮದ ಪಾಪ ತಮ್ಮನ್ನು ಕಾಡುತ್ತಿದೆ ಎಂದು ಕಂಡ ಕಂಡ ದೈವಕ್ಕೆ ಕೈ ಮುಗಿಯುತ್ತಿದ್ದರು. ಕಾರಾಗೃಹದ ಅಧೀಕ್ಷಕ ಸುಮಂತ್ ಅವರು “ನಿಮ್ಮ ಮಗನಂತಹ ಜ್ಞಾನಜ್ಯೋತಿ ನಮ್ಮ ಕಾರಾಗೃಹದ ಕತ್ತಲನ್ನು ಹೊಡೆದು ತೊಲಗಿಸುತ್ತಿದೆ. ಅವನಂತಹ ಮುಗ್ಧ ಸರಳ ವ್ಯಕ್ತಿಯನ್ನು ನಾವು ನೋಡಿಲ್ಲ. ಗಣಿತ ಮತ್ತು ಭೌತಶಾಸ್ತ್ರದಲ್ಲಿರುವ ಅವನ ಪ್ರತಿಭೆಯನ್ನು ಗುರುತಿಸಿ ಇತರರಿಗೆ ಅದರಿಂದ ಪ್ರಯೋಜನವಾಗುವಂತೆ ಜೈಲು ಆವರಣದಲ್ಲಿ ಕೋಚಿಂಗ್ ಸೆಂಟರನ್ನು ಆರಂಭಿಸಿ ಅವನಿಗೆ ನಾವು ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದೇವೆ. ಅವನ ಕಲಿಕೆಯ ವಿಧಾನ ಕೋಚಿಂಗ್ ಸೆಂಟರ್ ಮಕ್ಕಳಿಗೆ ಅಚ್ಚುಮೆಚ್ಚು ಇದೆ. ಮುಗ್ಧ, ನಿರಪರಾಧಿ ಶಂಕರ ಪ್ರಮಾದವಶಾತ್ ಶಿಕ್ಷೆಗೆ ಗುರಿಯಾಗಿರುವುದು ಈಗಿರುವ ನ್ಯಾಯಾಂಗದ ವ್ಯವಸ್ಥೆಗೆ ಬಲಿಪಶುವಾದಂತಿದೆ. ಇವನಿಗೆ ನಾವು ಇದಕ್ಕಿಂತಲು ಇನ್ನೇನು ಮಾಡಲು ಸಾಧ್ಯವೋ ಅದನ್ನು ದೇವರೇ ತೋರಿಸಬೇಕು” ಎಂದಾಗ ಅವರ ದುಃಖ ಮತ್ತಷ್ಟು ಉಮ್ಮಳಿಸಿ ಬಂತು. ಕಾರಾಗೃಹದ ಅಧಿಕಾರಿಗಳ ಮಾತು ಕೇಳಿ ಶಂಕರನ ತಂದೆ ತಾಯಿಗೆ ಏನೂ ಹೇಳಲು ತಿಳಿಯಲಿಲ್ಲ. ಮಗನ ಕನಸು ಕಮರಿದ ಬಾಳು ಬಾಡಿದ, ನಿಶ್ವೇಷ್ಟಿತ ಮೌನ ಮುಖವನ್ನು ದೈನ್ಯವಾಗಿ ನೋಡುತ್ತ ಮನೆಗೆ ಬಂದರು.
ಮಾರನೆಯ ದಿನ ಅರುಣೋದಯದ ಸೂರ್ಯನ ಕಿರಣಗಳು ಕಿಟಿಕಿಯಿಂದ ತೂರಿ ಬರುತ್ತಿತ್ತು. ಮನೆಯ ಅಂಗಳದಲ್ಲಿ ರಂಗವಲ್ಲಿ ಇಡುತ್ತಿದ್ದ ಶಂಕರನ ತಾಯಿ ವೃತ್ತ ಪತ್ರಿಕೆಯಲ್ಲಿ ತನ್ನ ಮಗನ ಫೋಟೋ ನೋಡಿ ಮತ್ತೆ ಅವರ ಎದೆ ಝಗ್ ಎಂದಿತು. ಗಂಡನನ್ನು ಕೂಗಿ ಕರೆದು ಪೇಪರನ್ನು ಓದಲು ಕೇಳಿದರು.
ಮಹೇಶ್ ಪಾಂಡೆಯವರು ಹೃದಯವನ್ನು ಗಟ್ಟಿಯಾಗಿಸಿಕೊಂಡು ಓದಲು ಶುರು ಮಾಡಿದರು. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗಣಿತ ತಜ್ಞ ಕೈದಿಯೊಬ್ಬ ಕಾರಾಗೃಹದ ಅಧೀಕ್ಷಕರ ಪುತ್ರ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮೆರೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾನೆ. ಕೊಲೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಶಂಕರ್ ಪಾಂಡೆ(೩೯) ಎಂಬಾತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉತ್ತಮ ಶೈಕ್ಷಣಿಕ ಹಿನ್ನೆಲೆ ಇರುವ ಆತ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಂಶ ಕಾರಾಗೃಹದ ಅಧೀಕ್ಷಕರ ಗಮನಕ್ಕೆ ಬಂತು. ಪುತ್ರ ಜಯಂತನಿಗೆ ಜೈಲು ಆವರಣದಲ್ಲಿ ಪಠ್ಯ ಬೋಧನೆಗೆ ಸಹಕಾರ ಪಡೆದರು. ಇತ್ತೀಚೆಗೆ ನಡೆದ ಹತ್ತನೆಯ ತರಗತಿ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಜಯಂತನಿಗೆ ೫ ನೆಯ ಬ್ಯಾಂಕ್ ಪಡೆದಿರುವ ಕುರಿತು ಸುಮಂತ್ ಅವರು ಅತ್ಯಂತ ಸಂತಸವನ್ನು ವ್ಯಕ್ತಪಡಿಸಿದ್ದರು.”
ಇದನ್ನು ಓದುತ್ತಾ ಮಹೇಶಪಾಂಡೆ ಕಣ್ಣಿನಿಂದ ಕಂಬನಿ ಹರಿಯತೊಡಗಿತು. ಶಂಕರನ ತಾಯಿ ಕೈಯಿಂದ ಮುಖ ಮುಚ್ಚಿಕೊಂಡು ರೋಧಿಸತೊಡಗಿದರು. ಸಾವಿರಾರು ಭಾವನೆಗಳು ಅವರ ಹೃದಯವನ್ನು ಕಲಕಿದವು. ಅವನ ಚಿತ್ರವನ್ನು ವೃತ್ತಪತ್ರಿಕೆಯಿಂದ ಕತ್ತರಿಸಿ, ಸೆರೆಮನೆಯಲ್ಲಿ ಇರುವ ತಮ್ಮ ಪ್ರೀತಿಯ ಮಗನ ಚಿತ್ರವನ್ನು ತಮ್ಮ ಹೃದಯದ ಅರಮನೆಯಲ್ಲಿ ರಾಜಕುಮಾರನಂತೆ, ದೇವರಮನೆಯಲ್ಲಿ ದೈವದಂತೆ ಇಟ್ಟು ಆರಾಧಿಸುತ್ತಾ ನುಂಗಲಾರದ ತುತ್ತನ್ನು ನುಂಗಿಕೊಂಡರು.
*****