ಸಾಹಿತ್ಯದ ಒಳನೋಟ

ಸಾಹಿತ್ಯದ ಒಳನೋಟ

ರಾಜಕೀಯ ಸಾಹಿತ್ಯದ ಮೇಲೆ ಅಳಿಕೆ ನಡೆಸಲು ಸುರುಮಾಡಿದಾಗ ವಿಷಣ್ಣರಾಗುವವರಲ್ಲಿ ನಾನೂ ಒಬ್ಬ. ಈ ಮಾತನ್ನೀಗ ತಪ್ಪರ್ಥ ಬರದಂತೆ ಹೇಳುವುದೇ ಕಷ್ಟವಾಗಿದೆ. ಎನ್ನುವುದು ಕೂಡಾ ಸಮಕಾಲೀನ ಯುಗದಲ್ಲಿ ಸಾಹಿತ್ಯಕ್ಷೇತ್ರವನ್ನು ರಾಜಕೀಯ ಎಷ್ಪರಮಟ್ಟಿಗೆ ತನ್ನ ಕಬಂಧದಲ್ಲಿ ಹಿಡಿದಿಟ್ಟಿದೆ ಎನ್ನುವುದಕ್ಕೆ ಒಂದು ನಿದರ್ಶನ. ತಪ್ಪರ್ಥ ಎಂದರೆ ಈ ಮಾತು ‘ಶುದ್ಧ ಸಾಹಿತ್ಯ’ ಎಂಬ ಕಲ್ಪನೆಯನ್ನು ಮುಂದೊತ್ತುವಂಥದು ಎಂಬುದು. ಆ ಕೂಡಲೇ ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಮುಂತಾದ ಘೋಷಣೆಗಳ ದೆವ್ವ ನಮ್ಮನ್ನು ಕಾಡಲು ಸುರುಮಾಡುತ್ತದೆ. ಮಾತಾಡಲು ಹೊರಟ ಬಾಯಿ ತಕ್ಷಣವೇ ಕಟ್ಟದಂತಾಗುತ್ತದೆ. ರಾಜಕೀಯವೆನ್ನುವುದು ಎಷ್ಟೊಂದು ಸರ್ವಾಂತರ್ಯಾಮಿಯೆಂದರೆ ಅದು ಕಠೋರವಾಗಿರುವಲ್ಲಿ ಇನ್ನು ಯಾವ ಮಾತನ್ನೂ ಆಡಲು ಬಿಡುವುದಿಲ್ಲ.

ಸಾಹಿತ್ಯಕ್ಕಾಗಿ ಸಾಹಿತ್ಯ ಎನ್ನುವವರು ಕೂಡಾ ಬೇರೆ ಇನ್ನು ಯಾವುದೋ ಕಾರಣಕ್ಕಾಗಿ ಸಾಹಿತ್ಯ ಎನ್ನುವವರಷ್ಟೇ ತಪ್ಪು ಮಾಡುತ್ತಾರೆ. ಕೇಳಬೇಕಾದ ಪ್ರಶ್ನೆಯೆಂದರೆ: ಸಾಹಿತ್ಯಕ್ಕೊಂದು ಕಾರಣ ಬೇಕೇ? ಸಾಹಿತ್ಯವನ್ನು ಕಟಕಟೆಯಲ್ಲಿ ನಿಲ್ಲಿಸಿ ಕಾರಣ ಕೊಡಲು ಅದನ್ನು ಒತ್ತಾಯಿಸಿದಾಗ ಅದು ಸತ್ತಿತೆಂದೇ ಲೆಕ್ಕ. ಸಮಾನತೆ, ಪ್ರಜಾಪಭುತ್ವ, ಜೀವನ ದರ್ಶನ, ಸಾಮಾಜಿಕ ವಿಮರ್ಶೆ ಮುಂತಾದ ಸಾಮಾಜಿಕ ಮೌಲ್ಯಗಳನ್ನು ಕಾರಣಗಳಾಗಿಯೋ ಹೊಣೆಗಾರಿಕೆಗಳಾಗಿಯೋ ಸಾಹಿತ್ಯದ ಮೇಲೆ ಹೇರಿದಾಗ ನಾವು ನಿಜಕ್ಕೂ ಏನನ್ನು ಸಾಧಿಸಿದಹಾಗಾಯಿತು? ಸಾಹಿತ್ಯಕೃತಿಗಳಲ್ಲಿ ನಾವು ಇವೆಲ್ಲವನ್ನೂ, ಇವೆಲ್ಲಕ್ಕಿಂತ ಮಿಕ್ಕುದನ್ನೂ ಓದಬಹುದು. ಆದರೆ ಅಷ್ಟಕ್ಕೆ ಇವು ಸಾಹಿತ್ಯದ ಕಾರಣಗಳೋ ಉದ್ದೇಶಗಳೋ ಆಗುತ್ತವೆಯೇ? ಜನ ಬದುಕಲೆಂದು ಬರೆದೆ ಎನ್ನುತ್ತಾನೆ ಹಳೆಗನ್ನಡದ ಒಬ್ಬ ಕವಿ. ಜನ ಮೆಚ್ಚಲಿ ಎಂದು ಬರೆದವರೂ ಇದ್ದಾರೆ. ಸಾಹಿತ್ಯಕೃತಿಗಳಿಂದ ವೈಚಾರಿಕ ಕ್ರಾಂತಿಗಳಾದ ಉದಾಹರಣೆಗಳಿವೆ; ವಿಜ್ಞಾನ, ರಾಜಕೀಯ ಮುಂತಾದ ಇತರ ಕಾರ್ಯಕ್ಷೇತ್ರಗಳಲ್ಲಿ ಕೆಲಸಮಾಡುವ ಹಲವರು ಯಾವ ಯಾವುದೋ ಕಾರಣಗಳಿಗೋಸ್ಕರ ಕಲೆ, ಸಾಹಿತ್ಯ ಮುಂತಾದವುಗಳಲ್ಲಿ ಆಸಕ್ತಿ ವಹಿಸಿದ್ದಿದೆ. ಕ್ರಾಂತಿಕಾರಿ ಚೆ ಗವೇರಾನ ಜೇಬಿನಲ್ಲಿ ಕವಿತೆಯ ಪುಸ್ತಕಗಳಿರುತ್ತಿದ್ದುವು; ಚೇರ್ಮೇನ್ ಮಾವೋ ಸ್ವತಃ ಕವಿತೆ ಬರೆಯುತ್ತಿದ್ದ; ಲೆನಿನ್ ಟಾಲ್ಸ್‌ಟಾಯ್‌ಯ ಕೃತಿಗಳನ್ನೋದಿ ಪ್ರಭಾವಿತನಾದ; ಪಿಟೀಲು ನುಡಿಸುವುದು ಐನ್‌ಸ್ಟೈನ್ನ ಹವ್ಯಾಸವಾಗಿತ್ತು. ಇಂಥ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದೇ ರೀತಿ ಕಲೆ ಮತ್ತು ಸಾಹಿತ್ಯವನ್ನು ಇತರ ಕ್ಷೇತ್ರಗಳೂ ಪ್ರಭಾವಿಸಿದ್ದಿದೆ. ಪಿಕಾಸೋವಿನ ಪ್ರಸಿದ್ಧ ಕಲಾಕೃತಿ ‘ಗೆರ್ನಿಕಾ’ದ ಮೂಲ ಪ್ರೇರಣೆ ಜರ್ಮನ್ ಲುಫ್ಟ್‌ವಾಪೆ (ವಾಯುಪಡೆ) ಕೇವಲ ಪರೀಕ್ಷೆಗೆಂದು ಇದೇ ಹೆಸರಿನ ಹಳ್ಳಿಯೊಂದರ ಮೇಲೆ ಅಮಾನುಷವಾಗಿ ನಡೆಸಿದ ಬಾಂಬುದಾಳಿ. ಹಾಗೂ ಪಿಕಾಸೋನ ಈ ಕೃತಿ ಹಲವಾರು ಸಾಹಿತಿಗಳ ಮೇಲೂ ಪಭಾವ ಉಂಟುಮಾಡಿತು. ಪಿಕಾಸೋಗೆ ಯಾವ ರಾಜಕೀಯವೂ ಇರಲಿಲ್ಲ; ಆದರೆ ಆತ ತನ್ನ ದೇಶವಾದ ಸ್ಪೇನಿನ ಫ್ರಾಂಕೋನ ಸರ್ವಾಧಿಕಾರವನ್ನು ವಿರೋಧಿಸುತ್ತಿದ್ದ. ಬಹುಶಃ ಸರ್ವಾಧಿಕಾರ ಎಲ್ಲೇ ಇದ್ದರೂ ಆತ ಅದನ್ನು ವಿರೋಧಿಸುತ್ತಿದ್ದನೆಂದು ಕಾಣುತ್ತದೆ. ಸ್ಪ್ಯಾನಿಶ್ ಅಂತರ್ಯುದ್ಧದಲ್ಲಿ ಆ ಕಾಲದ ಹಲವಾರು ಸಾಹಿತಿಗಳು ಜನಪರವಾಗಿ ಪಾಲ್ಗೊಂಡಿದ್ದರು. ಆದರೆ ಅಷ್ಟಕ್ಕೆ ಅವರು ಸಾಹಿತ್ಯವನ್ನು ರಾಜಕೀಯದ ಅಡಿಯಾಳಾಗಿ ಮಾಡಿದರು ಎನ್ನುವಂತಿಲ್ಲ; ಸಾಹಿತ್ಯ ರಾಜಕೀಯದ ಅಡಿಯಾಳಾಗುವುದು ಯಾವ ರೀತಿಯಲ್ಲಿ ಬರೆದರೆ ಅದು ಯೋಗ್ಯ ಸಾಹಿತ್ಯವಾಗುತ್ತದೆ ಎಂಬುದನ್ನು ರಾಜಕೀಯ ಪಣಾಳಿಕೆಗಳು ವ್ಯಕ್ತವಾಗಿಯೋ ಅವ್ಯಕ್ತವಾಗಿಯೋ ನಿರ್ಧರಿಸಲು ಹೊರಟಾಗ. ಅರ್ಥಾತ್ ತಾನು ಮೆಚ್ಚುವ ಅಥವಾ ಮೆಚ್ಚದ ಯಾರನ್ನೋ ತೃಪ್ತಿಪಡಿಸಲು ಸಾಹಿತಿ ಬರೆಯಲು ಹೊರಟಾಗ, ತನ್ನ ಬರೆಯುವ ಕ್ರಿಯೆಯನ್ನು ಬೆನ್ನ ಹಿಂದಿನಿಂದ ಯಾರೋ ಗಮನಿಸುತ್ತಿದ್ದಾರೆ ಎಂದು ಆತನಿಗೆ ಅನಿಸಿದಾಗ ಉಂಟಾಗುವ ಭಯದ ವಾತಾವರಣವೇ ಈ ರಾಜಕೀಯ. ಸಾಹಿತ್ಯ ಅಥವಾ ಇನ್ನು ಯಾವುದೇ ಸೃಜನಕ್ರಿಯೆಗೆ ಅಗತ್ಯವಾದ ಸ್ವಾತಂತ್ರ್ಯ ಇದರಿಂದ ಇಲ್ಲದಾಗುತ್ತದೆ. ಇದರಲ್ಲಿ ಎಡ ಬಲವೆನ್ನುವ ಭೇದವೇ ಇಲ್ಲ: ಇದೊಂದು ರೀತಿಯ ಮೆಕಾರ್ಥಿಸಂ; ಸೆನೆಟರ್ ಮೆಕಾರ್ಥಿ ‘ಕೋಮಿ’ಗಳನ್ನು (ಕಮ್ಯೂನಿಸ್ಟ್ ಒಲವು ಉಳ್ಳವರನ್ನು) ಸರಕಾರದಿಂದಲೂ ಸಾರ್ವಜನಿಕ ಸ್ಥಳಗಳಿಂದಲೂ ಇಲ್ಲದೆ ಮಾಡುವುದಕ್ಕೆ ಅಮೇರಿಕದಲ್ಲಿ ಜಾರಿಗೆ ತಂದ ಕುಖ್ಯಾತ ಕ್ರಮ. ಕಮ್ಯೂನಿಸ್ಟ್ ರಾಜ್ಯಗಳಲ್ಲಿ ಕಮ್ಮೂನಿಸಮಿಗೆ ಅನುಗುಣವಾಗಿ ಬರೆಯದ ಲೇಖಕರನ್ನು ನಿರ್ನಾಮ ಮಾಡುವುದಕ್ಕೆ ಇಂಥದೇ ಕಾರ್ಯಕ್ರಮ ಯಾವ ಎಗ್ಗಿಲ್ಲದೆ ನಡೆಯುತ್ತ ಬಂದುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಮೆಂಡೆಲ್‌ಸ್ಟಾಮ್‌ನಿಂದ ಮೊದಲಾಗಿ ಪಾಸ್ಟರ್ನಾಕ್, ಸೋಲ್ಜೆನಿತ್ಸಿನ್ ಮೊದಲಾದ ವಿಶ್ವದ ಸುಪ್ರಸಿದ್ಧ ರಶಿಯನ್ ಲೇಖಕರು ಈ ಪಟ್ಟಿಯಲ್ಲಿದ್ದಾರೆ. ಅದೇ ರೀತಿ ನಾಝಿ ಜರ್ಮನಿಯಲ್ಲಿ ಯೆಹೂದಿ ಸಾಹಿತಿ ಕಲಾವಿದರನ್ನು ಒಂದೋ ನಾಶಮಾಡಲಾಯಿತು, ಇಲ್ಲವೇ ದೇಶಭ್ರಷ್ಟರನ್ನಾಗಿ ಮಾಡಲಾಯಿತು. ಕಮ್ಯೂನಿಸಂ ಮತ್ತು ನಾಝಿಸಮಿನಂಥ ಏಕಪಕ್ಷೀಯ ಕಠೋರ ವ್ಯವಸ್ಥೆಯಲ್ಲಿ ಇದು ಆಶ್ಚರ್ಯವೆನಿಸುವುದಿಲ್ಲ; ಆದರೆ ಅಮೇರಿಕದಂಥ ಪಜಾಸತ್ತೆಯಲ್ಲಿ ಇದು ನಡೆದದ್ದು ಮಾತ್ರ ಆಶ್ಚರ್ಯವೇ ಸರಿ. ಆದ್ದರಿಂದಲೇ ಸಕಾಲದಲ್ಲಿ ಎಚಜ್ಜೆತ್ತುಕೊಂಡ ಆ ರಾಜ್ಯ ಮೆಕಾರ್ಥಿಸಮನ್ನು ಕಾನೂನುಬಾಹಿರ ಮಾಡಿದ್ದು, ಇಂದು ಮೆಕಾರ್ಥಿಸಂ ಎಂದರೆ ಜನರ ಭಿನ್ನಾಭಿಪ್ರಾಯಗಳಿಗಾಗಿ ಅವರನ್ನು ಬಹಿಷ್ಕರಿಸುವುದಕ್ಕೆ ಪರ್ಯಾಯ ಪದವಾಗಿದೆ.

ಹಿಂದಿನಿಂದಲೂ ಸಾಹಿತ್ಯ ಒಂದಲ್ಲ ಒಂದು ಐಡಿಯಾಲಜಿಗೆ ಅಡಿಯಾಳಾಗಿ ಇರಲಿಲ್ಲವೇ ಎಂದು ಕೇಳಬಹುದು. ನಿಜ, ಒಂದು ಕಾಲದಲ್ಲಿ ಸಾಹಿತ್ಯ ಮತಧರ್ಮದ ಪ್ರಚಾರಕ್ಕೆ ಒ೦ದು ಮಾಧ್ಯಮದಂತೆ ಕೆಲಸ ಮಾಡಿತ್ತು. ಬೈಬಲ್, ಭಗವದ್ಗೀತೆ ಮುಂತಾದ ಆರ್ಷೇಯ ಕೃತಿಗಳು ಮಾತ್ರವೇ ಅಲ್ಲ, ಮಿಲ್ಟನನ ‘ಸ್ವರ್ಗ ಚ್ಯುತಿ’ (Paradise Lost), ಡಾಂಟೆಯ ‘ದೈವ ಲೀಲೆ’ (La Divina Commedia), ಕನ್ನಡದ ಕುಮಾರವ್ಯಾಸ ಭಾರತ ಇತ್ಯಾದಿ ಕಾವ್ಯಗಳೂ ಧಾರ್ಮಿಕ ಉದ್ದೇಶಗಳನ್ನೇ ಹೊಂದಿವೆ. ‘ದೇವರ ದಾರಿಗಳನ್ನು ಮನುಷ್ಯರಿಗೆ ಸಮರ್ಥಿಸುವುದಕ್ಕೆ’ ಈ ಕಾವ್ಯವನ್ನು ಬರೆದೆ ಎನ್ನುತ್ತಾನೆ ಮಿಲ್ಟನ್ ತನ್ನ ಕೃತಿಯ ಆರಂಭದಲ್ಲೇ. ಈ ಮಾತಿನ ಮೂಲಕ ಅವನು ಉದ್ದೇಶಿಸುವುದು ಬೈಬಲಿನ ಕತೆಯ ಪ್ರಕಾರದ ಆದಮ್ ಮತ್ತು ಈವರ ಸ್ವರ್ಗಚ್ಯುತಿ ಹಾಗೂ ತದನಂತರ ಯೇಸು ಕ್ರಿಸ್ತ ಬಂದು ಕಳೆದುಹೋದ ಸ್ವರ್ಗವನ್ನು ಅರ್ಥಾತ್ ದೈವಕೃಪೆಯನ್ನು ಮನುಷ್ಯರು ಹೇಗೆ ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತದ ಮೂಲಕ ಮತ್ತೆ ಗಳಿಸಿಕೊಳ್ಳಬಹುದು ಎನ್ನುವುದನ್ನು ಕಲಿಸಿದ ಎನ್ನುವುದು. ಎಂದರೆ ಇದೊಂದು ಕ್ರಿಶ್ಚಿಯನ್ ಧಾರ್ಮಿಕ ಕಾವ್ಯ ಎನ್ನುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಕನ್ನಡದಲ್ಲೂ ವೈಷ್ಣವ, ಜೈನ, ಶೈವ ಧರ್ಮಪ್ರಚಾರದ ಕಾವ್ಯಗಳೇ ಸಾಹಿತ್ಯ ಪರಂಪರೆಯನ್ನು ರೂಪಿಸಿದಂಥ ಕೃತಿಗಳು.

ಆದರೆ ಇಂದು ನಾವು ಈ ಕೃತಿಗಳನ್ನು ಧರ್ಮಕಾರಣಕ್ಕಾಗಿ ಓದುತ್ತೇವೆಯೇ? ಇಲ್ಲ, ಕಾವ್ಯಕಾರಣಕ್ಕಾಗಿ ಓದುತ್ತೇವೆ. ಬೈಬಲಿನಷ್ಟು, ಭಗವದ್ಗೀತೆಯಷ್ಟು ಅದ್ಬುತವಾದ ಕಾವ್ಯ ಇನ್ನೆಲ್ಲಿ ದೊರಕುವುದು ಸಾಧ್ಯ? ಅದೇ ರೀತಿ ಕನ್ನಡದ್ದೇ ಅದ ಅಲ್ಲಮ, ಬಸವ, ಅಕ್ಕ ಮೊದಲಾದವರ ವಚನಗಳೂ, ಪಂಪ, ಪೊನ್ನ, ರನ್ನ, ಜನ್ನರ ಕಾವ್ಯಗಳೂ. ಈ ಎಲ್ಲ ಕೃತಿಗಳೂ ಧರ್ಮವನ್ನು ಮೀರಿ ನಿಂತು ಲೋಕದ ಎಲ್ಲೆಡೆಯ ಕಾವ್ಯಾಸ್ವಾದಕರ ಸ್ವತ್ತಾಗಿವೆ. ಅದ್ದರಿಂದ ಇಂದಿನ ದೃಷ್ಪಿಯಲ್ಲಿ ಧರ್ಮವೆನ್ನುವುದು ಇವಕ್ಕೆ ಕೇವಲ ‘ಕಾರಣ’ ಮಾತ್ರವಲ್ಲದೆ ಉದ್ದೇಶವಲ್ಲ. ಇಲ್ಲಿ ಮ್ಯಾಥ್ಯೂ ಅರ್ನಾಲ್ಡ್ ಹತ್ತೊಂಬತ್ತನೇ ಶತಮಾನದಲ್ಲೇ ಕವಿತೆಯ ಬಗ್ಗೆ ಬರೆಯುತ್ತ ಹೇಳಿದ ಮಾತೊಂದು ಅತ್ಯಂತ ಸಮಂಜಸವೆನಿಸುತ್ತದೆ. ‘ಕವಿತೆಯ ಅಧ್ಯಯನ’ (The Study of Poetry) ಎಂಬ ಅವನ ಲೇಖನ ಹೀಗೆ ಆರಂಭವಾಗುತ್ತದೆ: ‘ಕವಿತೆಯ ಭವಿಷ್ಯ ಉಜ್ವಲವಾದುದು, ಯಾಕೆಂದರೆ ಕವಿತೆಯಲ್ಲಿ, ಅದು ಉನ್ನತ ಭವಿಷ್ಯಗಳಿಗೆ ಅರ್ಹವಾಗಿರುವಲ್ಲಿ, ಸಮಯ ಸರಿದಂತೆ, ನಮ್ಮ ಕುಲ ಹೆಚ್ಚೆಚ್ಚು ದೃಢವಾದ ನೆಲೆಯನ್ನು ಪಡೆದುಕೊಂಡೀತು. ನಲುಗದ ಒಂದೇ ಒಂದು ನಂಬಿಕೆಯಿಲ್ಲ, ಪಶ್ನಾತೀತವಾದ ಒಂದೇ ಒಂದು ಸನಾತನ ವಿಶ್ವಾಸವಿಲ್ಲ, ಕರಗಲು ತಯಾರಾಗದ ಒಂದೇ ಒಂದು ಪರಂಪರೆಯಿಲ್ಲ. ನಮ್ಮ ಧರ್ಮವಾದರೋ ವಾಸ್ತವತೆಯ (fact) ಮೇಲೆ ರೂಪುಗೊಂಡುದು, ತಥಾಕಥಿತ ವಾಸ್ತವತೆಯ ಮೇಲೆ; ಅದು ತನ್ನ ಭಾವವನ್ನು (emotion) ವಾಸ್ತವತೆಗೆ ಅಂಟಿಸಿಕೊಂಡುದು, ಹಾಗೂ ಈ ವಾಸ್ತವತೆ ಅದಕ್ಕೀಗ ಕೈಕೊಡುತ್ತಿದೆ. ಆದರೆ ಕವಿತೆಗೆ ಕಲ್ಪನೆಯೇ (idea) ಸರ್ವಸ್ವ, ಉಳಿದದ್ದೆಲ್ಲ ದೈವಿಕ ಭ್ರಮಾಲೋಕ. ಕವಿತೆ ತನ್ನ ಭಾವವನ್ನು ಕಲ್ಪನೆಗೆ ಅಂಟಿಸುತ್ತದೆ, ಕಲ್ಪನೆಯೇ ಅದರ ವಾಸ್ತವತೆ. ಇಂದು ನಮ್ಮ ಧರ್ಮದ ಪ್ರಬಲವಾದ ಅಂಶವೆಂದರೆ ಅದರ ಪ್ರಜ್ಞಾತೀತ ಕವಿತೆ.’ ಆಧುನಿಕ ಕಾಲದಲ್ಲಿ ಕವಿತೆಗೆ ಇದಕ್ಕಿಂತ ಹೆಚ್ಚಿನ ಒಂದು ಸಮರ್ಥನೆ ಹಾಗೂ ಪ್ರವೇಶಿಕೆ ಇನ್ನೊಂದು ಇರಲಾರದು.

ಇಲ್ಲಿ ಅರ್ನಾಲ್ಡ್ ಸೂಚಿಸುತ್ತಿರುವುದು ಕ್ರಿಶ್ಚಿಯನ್ ಧರ್ಮದ ಸ್ಥಿತಿಯನ್ನಾದರೂ ಅವನ ಮಾತು ವಿಶ್ವದ ಎಲ್ಲಾ ಧರ್ಮಗಳಿಗೆ ಒಟ್ಟಾಗಿ ಅನ್ವಯಿಸುವಂತಿದೆ; ಹಾಗೂ ‘ನಮ್ಮ ಕುಲ’ ಎಂದರೆ ಇಡೀ ಮನುಕುಲವೆಂದು ನಾವು ತಿಳಿಯಬಹುದು. ಅರ್ನಾಲ್ಡ್ ಈ ಲೇಖನವನ್ನು ಬರೆದುದು ೧೮೮೦ರಲ್ಲಿ, ಡಾರ್ವಿನ್ನ ವಿಕಾಸವಾದವೂ ಸೇರಿದಂತೆ ಹಲವಾರು ಘಟನೆಗಳು ಸನಾತನ ಧರ್ಮದ ಅಡಿಗಲ್ಲನ್ನು ಅಲುಗಿಸಿದ ಹಿನ್ನೆಲೆಯಲ್ಲಿ. ಕ್ರಿಶ್ಚಿಯಾನಿಟಿ ಆದಮ್ ಮತ್ತು ಈವರ ನಿರ್ಮಾಣದಿಂದ ಮೊದಲಾಗಿ ಬೈಬಲಿನ ಸಮಸ್ತ ಕತೆಯನ್ನು ವಾಸ್ತವವೆಂದು ಜನರಿಗೆ ಬೋಧಿಸಿತು; ಹಾಗೂ ವಾಸ್ತವತೆಯ ಮೇಲೆಯೇ ತನ್ನೆಲ್ಲಾ ಭಾವವನ್ನೂ ಹೂಡಿತು. ಆದ್ದರಿಂದ ಈ ‘ವಾಸ್ತವತೆ’ಯೇ ಕುಸಿಯುತ್ತ ಧರ್ಮವಾದರೂ ಯಾವುದರ ಮೇಲೆ ನಿ೦ತೀತು? ತಾನೇ ನಿಲ್ಲದಾದಾಗ ಅದು ಮನುಕುಲಕ್ಕೆ ನಿಲ್ಲುವ ನೆಲೆಯನ್ನಾದರೂ ಹೇಗೆ ಕಲ್ಪಿಸೀತು? ಇದಕ್ಕೆ ವಿರುದ್ಧವಾಗಿ ಕವಿತೆ ಎಂದೂ ವಾಸ್ತವದ ಮೇಲೆ ನಿಂತೇ ಇರಲಿಲ್ಲ; ಬದಲು, ಕಲ್ಪನೆಯ ಮೇಲೆ ನಿಂತಿತು. ಮೇಲೆಯೇ ತನ್ನ ಭಾವವನ್ನು ಹೂಡಿತು. ಇಂದು ಧರ್ಮ ನಮಗೆ ಬೇಕಾದುದು ಅದರ ‘ಪ್ರಜ್ಞಾತೀತ ಕವಿತೆ’ಗಾಗಿ. ಉನ್ನತ ಮಟ್ಟದ ಕವಿತೆ ಮನುಕುಲಕ್ಕೆ ಒದಗಿಸುವ ನೆಲೆಯನ್ನು ಯಾರೂ ಅಲ್ಲಾಡಿಸಲಾರರು. ಅರ್ನಾಲ್ಡ್ ಕವಿತೆಯನ್ನು ಹೀಗೆ ಸಮರ್ಥಿಸುತ್ತ ಕ್ರಿಸ್ತಪೂರ್ವದ ಪ್ಲೇಟೋನ ವಿಚಾರಗಳನ್ನು ಉಪಯೋಗಿಸಿಕೊಳ್ಳುತ್ತಿರುವುದು ಕುತೂಹಲದ ಸಂಗತಿ. ಯಾಕೆಂದರೆ, ಪ್ಲೇಟೋ ‘ವಾಸ್ತವ’ ಜಗತ್ತನ್ನು ಭ್ರಾಮಕ ಜಗತ್ತೆಂದೂ, ಕಲ್ಪನೆಯ ವೈಚಾರಿಕ ಜಗತ್ತೇ ವಾಸ್ತವವೆಂದೂ ಪ್ರತಿಪಾದಿಸಿದವನು.

ಧರ್ಮದ ಹಿಡಿತದಿಂದ ಬಿಡುಗಡೆ ಪಡೆದ ಕವಿತೆ ಅರ್ಥಾತ್ ಸಾಹಿತ್ಯ ಈಗ ರಾಜಕೀಯಕ್ಕೆ ಬದ್ಧವಾಗಬೇಕೇ? ಹಿಂದೆ ಧರ್ಮ ಅದನ್ನು ಹಿಡಿದುಕೊಂಡಂತೆ ಇಂದು ರಾಜಕೀಯ ಅದನ್ನು ದುಡಿಸಿಕೊಳ್ಳಬಹುದು; ಬಹುಶಃ ಈ ವಿದ್ಯಮಾನವನ್ನು ಯಾರೂ ತಡೆಯುವಂತಿಲ್ಲ. ಆದರೂ ಸಾಹಿತ್ಯ ತನ್ನ ‘ಭಾವ’ವನ್ನು ಅದರಲ್ಲಿ ಹೂಡುವುದು ಕಷ್ಟವೇ ಸರಿ. ಎಲ್ಲಾ ರಾಜಕೀಯ ಚಳುವಳಿಗಳ ಅಂತಿಮ ಗುರಿಯಾದ ಪ್ರಜಾಪ್ರಭುತ್ವದಲ್ಲಿ ಮಾತ್ರವೇ ಸಾಹಿತ್ಯ ಬಹುಶಃ ರಾಜಕೀಯದಿಂದಲೂ ಬಿಡುಗಡೆಹೊಂದಬಹುದು. ಅಮೇರಿಕನ್ ಪ್ರಜಾಪ್ರಭುತ್ವದ ಬಗ್ಗೆ ಪುಸ್ತಕ ಬರೆದ ಪಜಾಪಭುತ್ವದ ಆರಾಧಕನಾದ ಫ್ರೆಂಚ್ ಚರಿತ್ರಕಾರ ಟೋಕ್‌ವೀಯ್‌ನ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಕವಿತೆಯ ವಸ್ತು ಸ್ವತಃ ಮನುಷ್ಕನ ಆಂತರಿಕ ಪ್ರಪಂಚವೇ ಆಗುತ್ತದೆ. ಆದರೆ ಅಂಥ ಪರಿಪೂರ್ಣ ಪ್ರಜಾಪ್ರಭುತ್ವ ಅಮೇರಿಕದಲ್ಲೇ ಆಗಲಿ ಇನ್ನೆಲ್ಲೇ ಆಗಲಿ ಇನ್ನೂ ಸ್ಧಾಪಿತಗೊಂಡಿಲ್ಲ. ಆದರೆ ಇದು ಸಾಹಿತ್ಯವನ್ನು ರಾಜಕೀಯಕ್ಕೆ ಬದ್ದವಾಗಿರುವುದಕ್ಕೆ ತಕ್ಕ ಕಾರಣವಾಗುವುದೇ?

ಸಾಹಿತ್ಯಕ್ಕೆ ಅದರದ್ದೇ ಆದ ವಿಶಿಷ್ಟ ಸಾಧ್ಯತೆಗಳಿವೆ; ಅದನ್ನು ಯಾವುದೇ ಐಡಿಯಾಲಜಿಗೆ ತಳಕು ಹಾಕಿದಾಗ ಈ ಸಾಧ್ಯತೆಯನ್ನು ನಿರಾಕರಿಸಿದಂತಾಗುತ್ತದೆ. ಇದರಿಂದ ಸಾಹಿತ್ಯಕ್ಕಾಗಲಿ ಆ ಐಡಿಯಾಲಜಿಗಾಗಲಿ ಲಾಭವಿಲ್ಲ. ಧರ್ಮವನ್ನಾಗಲಿ ರಾಜಕೀಯವನ್ನಾಗಲಿ ಸಾಹಿತ್ಯದಿಂದ ದೂರವಿಡಬೇಕೆಂದು ಈ ಮಾತಿನ ಅರ್ಥವಲ್ಲ; ಇವೆರಡನ್ನೂ ವಸ್ತುವಾಗಿ ತೆಗೆದುಕೊಳ್ಳುವುದು ಸಾಹಿತ್ಯಕ್ಕೆ ಸಾಧ್ಯವಾಗಬೇಕು ಎಂದು ಅರ್ಥ; ಹೀಗಾಗಬೇಕಿದ್ದರೆ ಸಾಹಿತ್ಯದ ವಿಶಿಷ್ಟತೆಯನ್ನು ನಾವು ಗೌರವಿಸಬೇಕಾಗುತ್ತದೆ. ಧರ್ಮ ಮತ್ತು ರಾಜಕೀಯ ಎರಡನ್ನೂ ಒಳಗೊಂಡಂಥ ಎಷ್ಟೋ ಅಭಿಜಾತ ಕೃತಿಗಳಿವೆ: ಈಗಾಗಲೇ ಹೆಸರಿಸಿದ ಮಿಲ್ಟನನ ‘ಸ್ವರ್ಗ ಚ್ಯುತಿ’ ಮತ್ತು ಡಾಂಟೆಯ ‘ದೈವ ಲೀಲೆ’ ಅಂಥಾ ಕೃತಿಗಳು. ವ್ಯಾಸ ಮಹಾಭಾರತವೂ ಅಂಥದೇ ಮಹಾಕಾವ್ಯ. ಇವನ್ನು ನಾವಿಂದು ಓದುವುದು ಇವು ಧಾರ್ಮಿಕ ಕೃತಿಗಳೆಂದಲ್ಲ, ರಾಜಕೀಯ ಕೃತಿಗಳೆಂದೂ ಅಲ್ಲ-ಸಾಹಿತ್ಯ ಕೃತಿಗಳೆಂದು. ಎಂದರೆ, ಸಾಹಿತ್ಯದ ಒಳನೋಟದ ಮೂಲಕ ನಾವು ಧರ್ಮ ಮತ್ತು ರಾಜಕೀಯ ಎರಡನ್ನೂ ಇಲ್ಲಿ ನೋಡುವುದು ಸಾಧ್ಯವಾಗುತ್ತದೆ. ಆದ್ದರಿಂದಲೇ ಇವು ನಮಗೆ ಮಹತ್ವದವೆನಿಸುವುದು. ಇವು ಧರ್ಮಪಚಾರದ ಅಥವಾ ರಾಜಕೀಯ ಪ್ರಚಾರದ ಕೃತಿಗಳಾಗಿರುತ್ತಿದ್ದರೆ ಈ ಒಳನೋಟ ಸಾಧ್ಯವಾಗುತ್ತಿರಲಿಲ್ಲ. ಅರ್ನಾಲ್ಡ್ ಹೇಳುವ ‘ಪಜ್ಞಾತೀತ ಕವಿತೆ’ಯ ಕಲ್ಪನೆಯೂ ಬಹಳ ಸೂಕ್ಷ್ಮವಾದುದು: ಇದನ್ನು ಕಾಣುವ ಸಂವೇದನೆಯನ್ನೂ ನಾವು ಬೆಳೆಸಿಕೊಳ್ಳುವುದು ಅಗತ್ಯ; ಇಲ್ಲದಿದ್ದರೆ ಬೈಬಲ್‌ನದಾಗಲಿ ಭಗವದ್ಗೀತೆಯದಾಗಲಿ ಕಾವ್ಯಗುಣವನ್ನು ನಾವು ಅನುಭವಿಸಲಾರೆವು.
*****

One thought on “0

 1. ಸಾಹಿತ್ಯದ ಒಳನೋಟಗಳು ಎಂದು ಹೇಳುತ್ತ ಧರ್ಮ‌ ಮತ್ತು ರಾಜಕೀಯದ ಸೂಕ್ಮ ಒಳನೋಟಗಳ ಒಂದು ಹೊಸದೇ ಆದ ಆಯಾಮ.ವೇದ-ಪುರಾಣಗಳು ಹೋಗಲಿ, ರಾಮಾಣ ಮಹಾಭಾರತ ಭಗವದ್ಗೀತೆ ಗಳು ಗ್ಂಥ ಸಾಹಿಬ್, ಕುರಾನ್, ಬೈಬಲ್ ಗಳಿಗೆ ಧಾರ್ಮಿಕ ಗ್ರಂಥಗಳ ದರ್ಜೆ ನೀಡಿಯಾಗಿದೆ.
  ಅವುಗಳನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ, ನ್ಯಾಯಾಲಯಗಳಲ್ಲಿ ಸತ್ಯ ಹೇಳುತ್ತೇನೆ ಸತ್ಯ ಅಲ್ಲದೆ ಏನೂ ಹೇಳುವ ದಿಲ್ಲ ಎನ್ನುವ ಮಟ್ಟಿಗೆ ಇವುಗಳು ಧಾರ್ಮಿಕ ಗ್ಥಂಥಗಳಾಗಿವೆ.
  ರಾಜಕೀಯ ಸಾಹಿತ್ಯದ ಮೇಲೆ ಆಡಳಿತ‌ನಡೆಸುವ ಪ್ರಕ್ರಿಯೆ ವಾಸ್ತವ ವೂ ಹೌದು.
  ಚಿಂತನೆಗಳಿಂದ ಕೂಡಿದ ಲೇಖನ.🙏🙏

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೫
Next post ರೀತಿ ನೀತಿ

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys