ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ

ಯಾವುದೇ ಪ್ರಾಚೀನ ಕೃತಿಯ ಓದು ನಮ್ಮ ಪ್ರಜ್ಞೆಯ ವಿಚಾರವೇ ಹೊರತು ಆರಾಧನೆಯ ವಿಚಾರವಲ್ಲ. ಈ ಪಾತಳಿಯಲ್ಲಿ ಸಮಕಾಲೀನ ಜಗತ್ತಿನ ಕಣ್ಣುಗಳ ಮೂಲಕ ಅವುಗಳನ್ನು ಅಧ್ಯಯನ ಮಾಡಬೇಕು. ಹಾಗೆ ಮಾಡುವಾಗ ಕೃತಿಯ ಬಗೆಗೆ ಸಹಾನುಭೂತಿಯನ್ನು ಬಿಟ್ಟು ಕೊಡದೆ ಅದರ ತಾತ್ವಿಕ ಮತ್ತು ಭೌತಿಕ ವಿನ್ಯಾಸವನ್ನು ರೂಪುಗೊಳಿಸಿದ ಅದರ ಚಾರಿತ್ರಿಕ ಘಟ್ಟ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅದಕ್ಕೆ ಹಿನ್ನೆಲೆಯಾಗಿ ಲಕ್ಷಿಸಬೇಕು. ಅದು ಸಾಧ್ಯವಾದಲ್ಲಿ ನಮ್ಮ ಪರಂಪರೆಯ ಪ್ರಜ್ಞೆ; ಮೂಡುತ್ತದೆ. ಆ ಪ್ರಜ್ಞೆ; ಸಮಕಾಲೀನ ಜಗತ್ತನ್ನು ಅತ್ಯಂತ ವಾಸ್ತವವಾದಿ ನೆಲೆಗಟ್ಟಿನಲ್ಲಿ ಗ್ರಹಿಸಿಕೊಳ್ಳಲು ಅನುವು ಮಾಡುತ್ತದೆ. ಈ ಬಗೆಯ ಭೂತ ಮತ್ತು ವರ್ತಮಾನಗಳ ಮುಖಾಮುಖಿಯಲ್ಲಿ ನೆಲೆಗೊಳ್ಳುವ ಗಟ್ಟಿ ನೆಲದಲ್ಲಿ ಭವಿಷ್ಯತ್ತಿನ ಕಟ್ಟಡವೂ ಸಮರ್ಪಕವಾಗಿ ಬೆಳೆದು ನಿಲ್ಲುತ್ತದೆ. ಅಂತಹ ವಿವಕ್ಷೆ ನಮ್ಮನ್ನು ಚರಿತ್ರೆಗೆ ಮತ್ತು ಅದರ ಕನ್ನಡಿಗಳಾದ ಕೃತಿಗಳಿಗೆ ಸೆಳೆಯುತ್ತಿರಬೇಕು. ಈ ತಾತ್ವಿಕ ನೆಲೆಯಲ್ಲಿ ಹರಿಹರನ ರಗಳೆಗಳನ್ನು ಗುರುತಿಸಿಕೊಳ್ಳಲು ಯತ್ನಿಸುತ್ತೇನೆ.

ವಾಸ್ತವವಾಗಿ ಹರಿಹರನು ತನ್ನ ಭೌತಿಕ ರೂಪದಲ್ಲಿ ಹನ್ನೆರಡನೆಯ ಕೊನೆ ಮತ್ತು ಹದಿಮೂರನೆಯ ಶತಮಾನದ ಆದಿ ಭಾಗದವನು. ಆದರೆ ಆ ಕಾಲದ ಚೌಕಟ್ಟಿನಲ್ಲಿ ಮೂಡಿದ ಅವನ ಚಿಂತನೆ ಮತ್ತು ಅದರ ಅಭಿವ್ಯಕ್ತಿ ರೂಪವಾದ ಕಾವ್ಯವು ಸಾರ್ವಕಾಲಿಕತೆಯ ಉಸಿರನ್ನು ಪಡೆದಿರುವುದರಿಂದ ಭೌತಿಕವಾಗಿ ಮಣ್ಣು ಸೇರಿರುವ ಹರಿಹರ ನಮ್ಮ ನಡುವೆ ಜೀವಂತವಾಗಿ ಉಳಿಯುತ್ತಾನೆ. ಆ ಮೂಲಕ ನಮ್ಮ ಮತ್ತು ಅವನ ನಡುವಿನ ಅನುಸಂಧಾನ ಸಾಧ್ಯವಾಗುತ್ತದೆ. ಈ ಬಗೆಯ ಅನನ್ಯತೆ ಹರಿಹರ ಮತ್ತು ಆತನಂತಹ ಅನೇಕ ಕವಿಗಳಿಗೆ ಸಾಧ್ಯವಾಗಿದೆ. ಇದು ಮೂಲಭೂತವಾಗಿ ಕಾವ್ಯದ ಅನನ್ಯತೆಯೇ ಹೌದು.

ಈ ನಿಟ್ಟಿನಲ್ಲಿ ನಾವು ಹರಿಹರನನ್ನು ಕುರಿತು ‘ನಮ್ಮ ಹರಿಹರ’ ಎಂಬುದಕ್ಕಿಂತ ಮಿಗಿಲಾಗಿ ‘ನಮ್ಮ ಹರಿಹರ ಎಂಥವ?’ಎಂಬ ಬೌದ್ಧಿಕ ಚಟುವಟಿಕೆಗೆ ತೊಡಗಬೇಕಾಗಿದೆ. ವಸಾಹತು ಕಾಲ ಕಲಿಸಿದ ಅನೇಕ ಪಾಠಗಳಲ್ಲಿ ಚರಿತ್ರೆ, ಅದರ ಕಾಲದ ಸಾಹಿತ್ಯ, ಜಾನಪದ, ಪುರಾಣ ಮೊದಲಾದವನ್ನು ಕುರಿತ ‘ವೈಭವೀಕೃತ ನೋಟ’ ಇಂದಿನ ಅಗತ್ಯವಲ್ಲಾಗಿದೆ. ಆದರೂ ಅಂದಿನ ರಾಷ್ಟ್ರೀಯವಾದಿ ಚಿಂತಕರು-ಚರಿತ್ರೆಕಾರರು ಚಾರಿತ್ರಿಕತೆಯ ಒತ್ತಡದಲ್ಲಿ ಅನಿವಾರ್ಯವಾಗಿ ಸೃಷ್ಟಿಸಿದ ಆ ಬಗೆಯ ಪಾಠಗಳಿಂದೀಚೆಗೆ ಬಾರದ ಅನೇಕ ಚಿಂತಕರು-ಬರಹಗಾರರು ಸಾಹಿತ್ಯ, ಚರಿತ್ರೆ, ಜಾನಪದ ಮೊದಲಾದ ನೆಲೆಗಳಲ್ಲಿ ಇನ್ನೂ ಕ್ರಿಯಾಶೀಲಗೊಂಡಿರುವ ಇವತ್ತಿನ ದಿನಗಳಲ್ಲಿ ನಾವು ಹರಿಹರನನ್ನು ಕುರಿತು ಈಗಾಗಲೇ ಪ್ರಸ್ತಾಪಿಸಿರುವಂತೆ ‘ಕೇವಲ ಅಭಿಮಾನ’ಕ್ಕೆ ಹೊರತಾದ ಪ್ರಜ್ಞೆಯ ನೆಲೆಯಲ್ಲಿ ನಿಂತು ಮಾತನಾಡಲು ಯತ್ನಿಸಬೇಕಿದೆ. ಇದೇ ನಿಜದ ಅಭಿಮಾನದ ವಿನ್ಯಾಸವಾಗಿ ಪುಟಗೊಳ್ಳಬೇಕಾದ ಅಗತ್ಯ ಇವತ್ತಿನದಾಗಿದೆ.

ಪ್ರಯೋಗ ಶೀಲತೆ ಮತ್ತು ಅರ್ಥಪೂರ್ಣತೆ

ಹರಿಹರ ಅನೇಕ ದೃಷ್ಟಿಗಳಿಂದ ನನ್ನ ಗಮನವನ್ನು ಸೆಳೆದವನು. ಅಂದಿನ ಕಾಲಕ್ಕೆ ಚಂಪೂ ಎಂಬುದು ಪ್ರತಿಷ್ಟಿತ ಸಾಹಿತ್ಯ ಪ್ರಕಾರ ಮತ್ತು ಪಂಥ ಆಗಿತ್ತು. ಅಂತಹ ಸವಾಲಿನೆದುರಿನಲ್ಲಿ ‘ಗಿರಿಜಾ ಕಲ್ಯಾಣ’ವನ್ನು ಬರೆದು ಉಬ್ಬಿದ ಈತ ರಗಳೆಗಳ ರಚನೆಯ ಮೂಲಕವಾಗಿ ಮಾತ್ರ ಯಶಸ್ಸಿನ ಕವಿಯಾಗುತ್ತಾನೆ. ಈ ನೆಲೆಯಲ್ಲಿ ಜೀವಂತ ಕಾವ್ಯ ಪರಂಪರೆಯ ವಿಸ್ತರಣೆಯಾಗಿ ನಿಲ್ಲುತ್ತಾನೆ. ಇಲ್ಲಿ ತನ್ನೆಲ್ಲಾ ವ್ಯಕ್ತಿತ್ವವನ್ನು ಕವಿತ್ವವನ್ನಾಗಿ ಮೂಡಿಸಿ,ಕನ್ನಡ ಕಾವ್ಯ ಪರಂಪರೆಗೆ ಹೊಸ ಆಯಾಮವನ್ನು ಕಲ್ಪಿಸುತ್ತಾನೆ. ಈ ಮೂಲಕ ಪಂಪ, ರನ್ನ, ಪೊನ್ನರ ಸಾಲಿನಲ್ಲಿ ಹತ್ತರಲ್ಲಿ ಹನ್ನೊಂದನೆಯವನಾಗದೆ ಹಿಮಾಲಯದ ಶಿಖರಗಳಲ್ಲಿ ಮತ್ತೊಂದು ಮೇರು ಶಿಖರವಾಗಿ ನಿಲ್ಲುತ್ತಾ, ಪರಂಪರೆಯ ನಿರ್ಮಾಪಕನಾಗುತ್ತಾನೆ. ಇದು ಈತನಿಗಿರುವ ಸಾಂಸ್ಕೃತಿಕ ಆಯಾಮ ಮತ್ತು ಚಾರಿತ್ರಿಕ ಮಹತ್ವ.

ಹರಿಹರ ಜಡ ಶಾಸ್ತ್ರಗಳಿಗೆ ಮೈಸೋತವನಲ್ಲ. ಅದರಿಂದ ಮೈಮುರಿದು ಎದ್ದವನು. ಆದ್ದರಿಂದಲೇ ಜಗಣ(U-U) ಎಂಬುದು ಕಾವ್ಯದಲ್ಲಿ ದೋಷ ಎಂದಿದ್ದಾಗಲೂ ಅದನ್ನು ಗುಣವನ್ನಾಗಿ ಮಾರ್ಪಡಿಸುವ ಯಶಸ್ಸಿನ ಪ್ರಯೋಗಶೀಲತೆಯನ್ನು ಮೆರೆಯುತ್ತಾನೆ. ರಳ, ಕುಳ, ಕ್ಷಳಗಳ ಬಗೆಗೆ ಶಾಸ್ತ್ರಕಾರರು ಏನೇ ಹೇಳಿದರೂ ತಾನು ಜನಪದರ ನೆಲೆಯಲ್ಲಿ ನಿಂತು, ಮುಜುಗರವಿಲ್ಲದೇ ಅವನ್ನು ಲಿಬರಲ್ಲಾಗಿ ಬಳಸುತ್ತಾ ಬರುತ್ತಾನೆ. ಈ ಮೂಲಕ ಜನಪದರಾಡುವ ಭಾಷೆಯ ಕ್ರಮವೇ ಅಂತಿಮ ಎಂಬ ಭಾಷಾ ವಿಜ್ಞೆ;ನಿಗಳ ತಾತ್ವಿಕತೆಯನ್ನು ಮೆರೆಯುತ್ತಾನೆ. ಈ ನಿಟ್ಟಿನಲ್ಲಿ ಜೀವಂತ ಭಾಷೆಯ ವಕ್ತಾರನಾಗಿ ಅಥವಾ ಪ್ರತಿಪಾದಕನಾಗಿ ನಿಂತು, ಪರೋಕ್ಷವಾಗಿ ತಾನು ಭಾಷಾ ಮಾಧ್ಯಮದ ವಿಚಾರದಲ್ಲಿ ಆರೋಗ್ಯಪೂರ್ಣ ಚಿಂತಕನಾಗಿ ಗಮನವನ್ನು ಸೆಳೆಯುತ್ತಾನೆ. ಈ ನೆಲೆಯಲ್ಲಿ ಇವತ್ತಿನ ಕನ್ನಡ ಚಿಂತನೆಗೆ ಮಾರ್ಗದರ್ಶಕನೂ ಆಗುತ್ತಾನೆ.

ಹೀಗೆ ಪ್ರಯೋಗಶೀಲತೆ ಮತ್ತು ಅರ್ಥಪೂರ್ಣತೆಗಳನ್ನು ಏಕತ್ರವಾಗಿ ಸಾಧಿಸುವ ಈತ ಚಲನಶೀಲ ಗುಣವನ್ನುಳ್ಳ ‘ಪರಂಪರೆ’ ಎಂಬ ಕಲ್ಪನೆಗೆ ಅರ್ಥಪೂರ್ಣ ವಿಸ್ತರಣೆಯನ್ನು ಕಲ್ಪಿಸುವ ಅಥವ ಅದರ ಪೂರ್ಣಪಾಠದ ರೂಪಕ ಪ್ರತಿಭೆಯಾಗಿ ನಮ್ಮ ಸಾಹಿತ್ಯ ಪರಂಪರೆಯಲ್ಲಿ ಅಷ್ಟೇ ಅಲ್ಲದೆ ಸಂಸ್ಕೃತಿ ಪರಂಪರೆಯಲ್ಲಿಯೂ ಒಂದು ಮೈಲಿಗಲ್ಲಾಗಿ ಯಶಸ್ಸನ್ನು ಪ್ರಕಟಿಸುತ್ತಾನೆ. ಇದು ಅವನ ಭದ್ರ ಸ್ಥಾನ. ಇಲ್ಲಿ ಬೇಂದ್ರೆ-ಕುವೆಂಪು, ಅಡಿಗ, ಸಿದ್ಧಲಿಂಗಯ್ಯ ಮೊದಲಾದ ಪ್ರವರ್ತಕರು ನೆನಪಾಗುತ್ತಾರೆ.

ಹೀಗೆ ಶಾಸ್ತ್ರ ಅಥವಾ ಮೀಮಾಂಸೆ ನಿರ್ದೇಶಿಸುವ ಕಾವ್ಯಕ್ಕಿಂತ ಪ್ರತಿಭೆಯೇ ಮುಖ್ಯವಾಗಿ ನಿರ್ದೇಶಿಸುವ ಜೀವಂತ ಕಾವ್ಯ ಪರಂಪರೆಯ ವಕ್ತಾರನಾಗಿ ನಿಲ್ಲುವ ಈತ ಕನ್ನಡ ಕಾವ್ಯ ಮೀಮಾಂಸೆಗೆ ಹೊಸ ತತ್ವ ಅಥವ ಪಾಠವೊಂದನ್ನು ಸೇರಿಸುತ್ತಾನೆ. ಇಲ್ಲಿ ಬಸವಣ್ಣನ ‘ಆನು ಒಲಿದಂತೆ ಹಾಡುವೆ’ ಎಂಬ ಮಾತನ್ನು ಅನ್ವಯಿಕ ನೆಲೆಯಲ್ಲಿ ಇರಿಸಿಕೊಳ್ಳಬಹುದೆಂದು ಭಾವಿಸುತ್ತೇನೆ.

ಕವಿ ಚರಿತೆಗೆ ಕವಿತೆಯೇ ದಾರಿ

ಕವಿಯ ವ್ಯಕ್ತಿತ್ವ ಮತ್ತು ಕವಿತ್ವಗಳ ಮೂಲ ಸ್ತರದಲ್ಲಿ ಭಿನ್ನತೆಯಿಲ್ಲ ಎಂದು ತಿಳಿದವನು ನಾನು. ಈ ನೆಲೆಯಲ್ಲಿ ಹರಿಹರನ ರಗಳೆಗಳ ಒಳಗೆ ಕಾಣಿಸಿಕೊಳ್ಳುವ ಬಹುತೇಕ ಪಾತ್ರಗಳ ಹೆಸರುಗಳು ಬೇರೆ ಬೇರೆಯಾಗಿದ್ದರೂ ಅವುಗಳ ಮೂಲಭೂತ ವ್ಯಕ್ತಿತ್ವವು ಹರಿಹರನದೇ ಆಗಿದೆ. ಅಂತಹ ಸೋಪಜ್ಞತೆ ಈ ರಗಳೆಗಳಿಗಿದೆ. ಆದ್ದರಿಂದ ಸಾಂಪ್ರದಾಯಿಕ ನೆಲೆಯಲ್ಲಿ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ವಿಧಾನಕ್ಕಿಂತ ಅಂದರೆ, ಕವಿಯ ಕೃತಿ ಮತ್ತು ಇತರೆ ಕಾವ್ಯ, ಶಾಸನಗಳು ಕವಿಯ ಬಗೆಗೆ ನೇರವಾಗಿ ಏನನ್ನು ಹೇಳುತ್ತವೆ ಎಂಬುದನ್ನು ಆಧರಿಸಿ ಕಟ್ಟುವ ಕ್ರಮಕ್ಕಿಂತ ಇಡೀ ಕಾವ್ಯವನ್ನು ಸೂಕ್ಷ್ಮ ಸಂವೇದಿ ನೆಲೆಯಲ್ಲಿ ಗ್ರಹಿಸಿ, ಆ ಮೂಲಕ ಕವಿಯ ಒಟ್ಟು ವ್ಯಕ್ತಿತ್ವವನ್ನು ಮತ್ತು ಅವನ ಚರಿತ್ರೆಯ ಸಾಂಸ್ಕೃತಿಕ ಎಳೆಗಳನ್ನು ಬಿಡಿಸುವ ಬಗೆ ಅತ್ಯಂತ ಸೂಕ್ತ ಮತ್ತು ಸಾರ್ಥಕ ಎಂದು ಭಾವಿಸುತ್ತೇನೆ. ಈ ನೆಲೆಯಲ್ಲಿ ನಿಂತು ನೋಡಿದಾಗ ಪಂಪ, ಅಲ್ಲಮ, ಬಸವ, ಹರಿಹರ, ಕನಕ ಮೊದಲಾದ ಎಲ್ಲಾ ಬರಹಗಾರರು ತಮ್ಮೆಲ್ಲಾ ಬಣ್ಣಗಳೊಂದಿಗೆ ಸಾಕ್ಷಾತ್ಕಾರಗೊಳ್ಳುತ್ತಾರೆ. ಹಾಗಾದಾಗ ನಿಜದ ಸಾಹಿತ್ಯ ಚರಿತ್ರೆ ಮೂಡುತ್ತದೆ. ಅದು ಅಂತಿಮವಾಗಿ ಸಂಸ್ಕೃತಿ ಚರಿತ್ರೆಯೂ ಆಗಿ ನಿಲ್ಲುತ್ತದೆ. ಅಂತಹ ಬರವಣಿಗೆ ನಮಗೆ ಚರಿತ್ರೆಯ ಹೊಸ ಪಾಠಗಳನ್ನು ಕಲಿಸಬೇಕಿದೆ. ಈ ದಾರಿಯಲ್ಲಿ ನಾವು ನಡೆದಿದ್ದೇವಾದರೂ ನಡೆಯಬೇಕಾದಷ್ಟು ನಡೆದಿಲ್ಲ. ಇಂತಹ ಸಾಂಸ್ಕೃತಿಕ ತಿಳುವಳಿಕೆಯ ಹಿನ್ನೆಲೆಯಲ್ಲಿ ಈಗ ಹರಿಹರ ನಮಗೆ ಕಾಣಬೇಕಾಗಿದೆ.

ಸಾಂಸ್ಕೃತಿಕ ದೂರ

ಕಾವ್ಯದ ಬಗೆಗೆ ‘ಮಾನಸಿಕ ದೂರ’ ಸಾಧ್ಯ. ಆದರೆ ಇಲ್ಲಿ ಹರಿಹರನ ಕಾವ್ಯ ಮತ್ತು ಚಿಂತನೆಗಳಿಂದ ‘ಮಾನಸಿಕ ದೂರ’ ಅಷ್ಟೇ ಅಲ್ಲ, ಸಾಂಸ್ಕೃತಿಕ ದೂರವನ್ನು ಸಹ ಕಾಯ್ದುಕೊಳ್ಳುವುದು ಹೆಚ್ಚು ಆರೋಗ್ಯಕರ ವಿಚಾರವಾಗುತ್ತದೆ. ಕಾರಣ, ಇಲ್ಲಿ ಪ್ರತಿಪಾದಿತವಾಗುವುದು ಏಕರೂಪಿ ಸಂಸ್ಕೃತಿ ಮತ್ತು ಅದರ ಭಾಗವಾದ ಏಕದೇವೋಪಾಸನೆ. ಇದು ಶಿವ ಮತ್ತು ಶಿವ ಸಂಸ್ಕೃತಿಗೆ ಹೊಂದಿಕೊಂಡದ್ದು. ಇಲ್ಲಿಯ ದೈವ ಮತ್ತು ಸಂಸ್ಕೃತಿ ಯಾವುದೇ ಇರಲಿ, ಒಟ್ಟಾರೆಯಾಗಿ ಕಾಣುವ ‘ಏಕ’ದ ಮೂಲಕವಾಗಿ ಪ್ರತಿಪಾದಿತವಾಗುವ ವಿಚಾರವೇ ಮೂಲಭೂತವಾಗಿ ಅಪಾಯಕಾರಿಯಾದದ್ದು. ಇಂತಹ ಅನೇಕ ‘ಏಕ’ಗಳ ಸೃಷ್ಟಿಯೇ ಸಂಘರ್ಷದ ದಾರಿ. ಅಂತಹ ಅನೇಕ ಧರ್ಮಗಳು ಜಗತ್ತಿನ ಇತಿಹಾಸದಲ್ಲಿ ನಕ್ಷೆಯ ತುಂಬಾ ಹರಿಸಿರುವ ನೆತ್ತರನ್ನು ನಾವು ಸ್ಮರಿಸಿಕೊಳ್ಳಬೇಕಿದೆ. ಆ ಧರ್ಮಗಳು ತಾತ್ವಿಕತೆಯ ಅಥವ ತತ್ವಶಾಸ್ತ್ರದ ನೆಲೆಯಲ್ಲಿ ಏನೇ ಹೇಳಲಿ, ಅವು ವಾಸ್ತವದ ನೆಲೆಯಲ್ಲಿ ಅದಕ್ಕಿಂತ ಭಿನ್ನವಾದ ರೂಪದಲ್ಲಿ ಕಾಣಿಸಿಕೊಂಡು ಪುರುಷರಲ್ಲಿ ಮನುಷ್ಯತ್ವವನ್ನು ಕಾಣೆಯಾಗಿಸಿ, ‘ಗೋಡೆ’ಗಳನ್ನು ನಿರ್ಮಿಸಿವೆ; ರಕ್ತವನ್ನು ಹರಿಸಿವೆ. ಆ ರಕ್ತ ಇನ್ನೂ ಹರಿಯುತ್ತಿದೆ ಮತ್ತು ಗೋಡೆಗಳು ದಿನೇ ದಿನೇ ಮುಗಿಲನ್ನು ಮುಟ್ಟುವತ್ತ ಬೆಳೆಯುತ್ತಿವೆ. ಹೀಗಾಗಿ ಧಾರ್ಮಿಕತೆಯನ್ನು ಪ್ರತಿಪಾದಿಸುವ ಹರಿಹರ ನಮ್ಮ ಇವತ್ತಿನ ಆದರ್ಶವಲ್ಲ. ಆದರೆ ಈತನನ್ನು ಅರಿಯುವ ಮೂಲಕವೇ ಅಂದಿನ ಧಾರ್ಮಿಕ ಸಂಸ್ಕೃತಿಯನ್ನು ಮತ್ತು ಅದರ ಮೂಲದಲ್ಲಿ ನಿರ್ಮಾಣಗೊಂಡ ಇವತ್ತಿನ ವರ್ತಮಾನವನ್ನು ತಿಳಿಯಬೇಕಿದೆ. ಈ ಬಗೆಯ ಚಾರಿತ್ರಿಕ ನೋಟಕ್ಕಾಗಿ ಹಾಗೂ ಇವತ್ತನ್ನು ಕಾಳಜಿಯ ನೆಲೆಯಲ್ಲಿ ಕೇಂದ್ರವಾಗಿಸಿಕೊಳ್ಳುವ ಪ್ರಯತ್ನಕ್ಕೆ ಪೋಷಕಾಗುವ ಪರಂಪರೆಯ ಪ್ರಜ್ಞೆಯನ್ನು ಪಡೆಯಲಿಕ್ಕಾಗಿ ಹರಿಹರನನ್ನು ಕುರಿತ ಓದು ಅತ್ಯಾವಶ್ಯಕವಾಗಿದೆ. ಈ ನೆಲೆಯಲ್ಲಿ ಅವನು, ಅವನ ಧರ್ಮ, ಅವನ ಬದುಕಿನ ವಿನ್ಯಾಸ ಮತ್ತು ಚಿಂತನೆ ಇತ್ಯಾದಿಗಳ ಅರಿವು ನಮಗೆ ಹಲವು ಒಳನೋಟಗಳನ್ನು ನೀಡುತ್ತದೆ.

ಧರ್ಮ ಮತ್ತು ಭಯೋತ್ಪಾದಕತೆ

ಧರ್ಮ ಮತ್ತು ಭಯೋತ್ಪಾದಕತೆಗೆ ನಿಕಟ ನಂಟು. ಇದು ಈ ಹೊತ್ತಿನ ಮಾತಲ್ಲ. ಸಾವಿರಾರು ವರ್ಷದ್ದು ಮತ್ತು ಪ್ರಪಂಚದ ಅನೇಕ ದೇಶಗಳದ್ದು. ಈ ನಿಟ್ಟಿನಲ್ಲಿ ಶೈವ ಧರ್ಮದ ಭಯೋತ್ಪಾದಕತೆಗೆ ಅನೇಕ ಕಾವ್ಯಗಳು, ಶಾಸನಗಳು ನಮ್ಮ ಮುಂದಿವೆ. ಈ ನಿಟ್ಟಿನಲ್ಲಿ ಇಱಭಕ್ತನನ್ನು ಕಥಾನಾಯಕನನ್ನಾಗಿ ಹೊಂದಿರುವ ರಗಳೆಯೂ ಒಂದು.

ಇಂತಭಕ್ತನ ಧಾರ್ಮಿಕ ನಿಷ್ಠೆ ವೀರ ಎಂಬುದಕ್ಕಿಂತ ಕ್ರೌರ್ಯದ್ದು. ತನ್ನದಲ್ಲದ ಧರ್ಮ ಮತ್ತು ಧಾರ್ಮಿಕರನ್ನು ಕುರಿತ ಸಹಿಷ್ಣುತೆ ಇವನಲ್ಲಿ ಇಲ್ಲವಾದ್ದರಿಂದ ಅಂಥವರನ್ನು ಪರಶು(ಕೊಡಲಿ)ವಿನಿಂದ ಕಡಿಯುತ್ತಾ ಹೋಗುತ್ತಾನೆ. ಇದನ್ನು ತನ್ನ ದೇಶದ ರಾಜನೂ ಸಹಮತಿಸುತ್ತಾನೆ. ಇಂಥವನಿಗೆ ಶಿವನಿಂದ ಶಿಕ್ಷೆಯಿಲ್ಲ; ಬದಲಿಗೆ ಕೈಲಾಸದಲ್ಲಿ ಗಣ ಪದವಿ ಪ್ರಾಪ್ತವಾಗುತ್ತದೆ!

ಆದ್ದರಿಂದಲೇ ‘ನಮ್ಮ ಹರಿಹರ’ ಎಂಬುದಕ್ಕಿಂತ ‘ನಮ್ಮ ಹರಿಹರ ಎಂಥವ?’ ಎಂಬ ಪ್ರಜ್ಞೆ; ಕೇಂದ್ರಿತವಾದ ಪ್ರಶ್ನೆ ಅವಶ್ಯಕ ಎಂದದ್ದು. ಈ ಮೂಲಕ ಹರಿಹರನ ಕಾಲದ ಸಂಸ್ಕೃತಿ ಮತ್ತು ಅದರ ಭಾಗವಾದ ಧರ್ಮ ಸಂಘರ್ಷ ಹಾಗೂ ಅವುಗಳ ಅಮಾನವೀಯ ನೆಲೆಗಳನ್ನು ಗುರುತಿಸಿಕೊಳ್ಳಬೇಕಿದೆ.

ಇದೇ ನೆಲೆಯಲ್ಲಿ ಏಣಾಧಿನಾಥನ ಕತೆಯೂ ಬರುತ್ತದೆ. ಈತನೂ ಶಿವಭಕ್ತ. ಭಕ್ತರ ಆರಾಧನೆಗಾಗಿ ವ್ಯವಸಾಯ, ದಾನ, ವಾಣಿಜ್ಯ ಮೊದಲಾದ ಯಾವುದೇ ವೃತ್ತಿಯನ್ನು ಅವಲಂಬಿಸುವ ಇಚ್ಫೆ ಈತನಿಗಿಲ್ಲ. ಹಾಗಾಗಿ ವೀರಭದ್ರನು ಈತನ ಕನಸಿನಲ್ಲಿ ಬಂದು ಇಕೋ, ಕತ್ತಿ ಗುರಾಣಿ ಇಲ್ಲಿವೆ. ಇವನ್ನು ಹಿಡಿದು ಕಾದು, ಬಂದ ದ್ರವ್ಯದಿಂದ ಭಕ್ತರ ಸೇವೆಯನ್ನು ಮಾಡು’ ಎನ್ನುತ್ತಾನೆ. ಈತ ಅದೇ ದಾರಿಯಲ್ಲಿ ನಡೆದೂ ಬಿಡುತ್ತಾನೆ. ಇದು ಅವನ ಭಕ್ತಿಯ ಕ್ರಮ! ಅಂತಿಮವಾಗಿ ಈತನಿಗೂ ಗಣಪದವಿ!!

ಒಟ್ಟಾರೆ ಈ ಬಗೆಯ ವಿಕೃತಿಗಳು ಹರಿಹರನ ಕಾಲದ್ದೂ ಹೌದು. ಆದರೆ ಅವುಗಳ ಬಗೆಗೆ ಹರಿಹರ ತಳೆದಿದ್ದ ನಿಲುವು ಎಂಥಾದ್ದು? ಎಂಬುದು ಇಲ್ಲಿಯ ಗಂಭೀರ ಪ್ರಶ್ನೆ. ಇದಕ್ಕೆ ಉತ್ತರವಾಗಿ, ಈ ಮೂಲಭೂತವಾದಿ ಉಗ್ರ ಧಾರ್ಮಿಕ ನಿಷ್ಟರು ಕವಿಯಿಂದಾಗಲೀ ಶಿವನಿಂದಾಗಲೀ ಕನಿಷ್ಠ ನೇತ್ಯಾತ್ಮಕ ದೃಷ್ಟಿಗೆ ಒಳಗಾಗಿಲ್ಲ ಎಂಬುದು ಇಲ್ಲಿಯ ಆತಂಕದ ನೋಟ. ಆದ್ದರಿಂದಲೇ ಒಟ್ಟು ಹರಿಹರನ ಸಂದರ್ಭದಲ್ಲಿ ನಾವು ಸಾಂಸ್ಕೃತಿಕ ದೂರವನ್ನು ಉಳಿಸಿಕೊಳ್ಳುವುದು ಇವತ್ತಿನ ಅನೇಕ ಜರೂರುಗಳಲ್ಲಿ ಒಂದು ಎನ್ನಿಸುವುದು.

ಕೋಮುವಾದ ಮತ್ತು ಅದರ ಆಯಾಮವನ್ನು ಪಡೆದಿರುವ ಭಯೋತ್ಪಾದಕತೆಯು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಇಂತಹ ಸಾಹಿತ್ಯವನ್ನು ಹೆಚ್ಚು ಜಾಗರೂಕತೆಯಿಂದ ತಿಳಿಯುವ ಅಗತ್ಯವಿದೆ. ಇಂತಹ ‘ಇತಿಹಾಸವೇ’ಇವತ್ತಿನ ದಿನಗಳ ತಾಯಿ ಎಂಬುದನ್ನು ಅರಿತು ಮುನ್ನಡೆಯ ಬೇಕಾಗಿದೆ.

ಹರಿಹರನ ಭಕ್ತಿ ಸಾಂಸ್ಥಿಕವೇ? ಖಾಸಗಿಯೇ? ಅಥವಾ ಮನುಷ್ಯಪರವೇ?

ಹರಿಹರನ ರಗಳೆಗಳ ಪ್ರಧಾನ ನೆಲೆ-ಭಕ್ತಿ. ಅಲ್ಲಿ ಅನೇಕ ಮಾದರಿಗಳಿವೆ. ಗುಪ್ತ ಭಕ್ತಿ, ವೀರಭಕ್ತಿ, ಸಾಂಸ್ಥಿಕೇತರ ನೆಲೆಯಲ್ಲಿ ಕಾಣುವ ಉಪಸಂಸ್ಕೃತಿ ಮೂಲದ ಭಕ್ತಿ (ಉದಾ:ಕಣ್ಣಪ್ಪನ ಭಕ್ತಿ) ಇತ್ಯಾದಿ. ಒಟ್ಟಾರೆ ಈ ಎಲ್ಲಾ ಮಾದರಿಗಳ ಕೇಂದ್ರ ಶಿವನೇ ಆಗಿದ್ದಾನೆ. ಅವನನ್ನು ಕುರಿತ ನಿಷ್ಠೆಯನ್ನು ಪ್ರಕಟಿಸುವರು ಮಾತ್ರ ಭಕ್ತರೆನಿಸಿ, ಉಳಿದವರು ಭವಿಗಳೆನಿಸಿಬಿಡುತ್ತಾರೆ. ಉದಾಹರಣೆಗೆ, ವೈಷ್ಣವರು, ಜೈನರು ಮತ್ತು ಅವತ್ತು ಅಷ್ಟಾಗಿ ಇಲ್ಲದ ಬೌದ್ಧರು ಇತ್ಯಾದಿ.

ಹೀಗೆ ಶಿವನ ಹೆಸರಿನಲ್ಲಿ ಸಾಂಸ್ಥೀಕರಣಕ್ಕೊಳಗಾಗುವ ಭಕ್ತಿಯು ಅನ್ಯಧರ್ಮೀಯರ ಮೇಲೆ ನಡೆಸುವ ಬಲತ್ಕಾರ, ಅತ್ಯಾಚಾರ ಮತ್ತು ಹಿಂಸಾಚಾರಗಳ ಮೂಲಕವಾಗಿ ಮಿಲಿಟೆನ್ಸಿಯ ಆಯಾಮವನ್ನು ಪಡೆಯುತ್ತದೆ. ಇಲ್ಲಿ ಆದಾಯ ಹಾಗೂ ಈಗಾಗಲೇ ಪ್ರಸ್ತಾಪಿಸಲ್ಪಟ್ಟಿರುವ ಇಱಭಕ್ತ, ಏಣಾಧಿನಾಥ ಮೊದಲಾದ ಶಿವಭಕ್ತರು ಪ್ರಾತಿನಿಧಿಕವಾಗಿ ನಿಲ್ಲುತ್ತಾರೆ.
ಹೀಗೆ ಹಿಂಸೆಗೆ ಪ್ರೇರಕವಾಗುವ ಸಾಂಸ್ಥೀಕೃತ ಭಕ್ತಿ ತನ್ನ ಮೂಲ ಆಶಯವನ್ನು ಮರೆತು ನಿಲ್ಲುತ್ತದೆ. ಅದೇ ಸಂದರ್ಭದಲ್ಲಿ ತನ್ನ ಅಸ್ತಿತ್ವದ ವಿಸ್ತರಣೆಗಾಗಿ ಅನ್ಯ ಧರ್ಮೀಯರ ಮೇಲೆ ಹಿಂಸೆಯನ್ನು ಮೆರೆಯಲು ಸಿದ್ದವಾಗುತ್ತದೆ; ತನ್ನ ವಿವೇಕವನ್ನೂ ಕಳೆದುಕೊಳ್ಳುತ್ತದೆ. ಅಂತಹ ಪ್ರಕ್ರಿಯೆಯ ವಕ್ತಾರರಾಗಿ ಕಾಣಿಸಿಕೊಳ್ಳುವ ಉಗ್ರರ ಬಗೆಗೆ ಮೃದುತ್ವವನ್ನು ತಾಳುವ ಹರಿಹರ ತಾನೂ ಒಬ್ಬ ಮಿಲಿಟೆಂಟ್ ಆಗಿ ಕಾಣಬರುತ್ತಾನೆ. ಅಂತಹ ಇತಿಹಾಸದ ಮೂಲದಲ್ಲಿ ಹುಟ್ಟುವ ವರ್ತಮಾನದ ‘ಭುಜ’ ರಂಗದಳಗಳು ನನಗೆ ಆಶ್ಚರ್ಯವನ್ನು ತರುವುದಿಲ್ಲ. ಆದ್ದರಿಂದಲೇ ಸಾಂಸ್ಥೀಕರಣಕ್ಕೊಳಗಾಗುವ ಯಾವುದೇ ಭಕ್ತಿ ಎಷ್ಟರ ಮಟ್ಟಿಗೆ ಮನುಷ್ಯತ್ವದ ಆಯಾಮವನ್ನು ಪಡೆದಿರುತ್ತದೆ ಎಂಬ ಪ್ರಶ್ನೆಯನ್ನು ಜೀವಂತಗೊಳಿಸುವುದು.

ಹರಿಹರನ ಭಕ್ತಿಗೆ ಇನ್ನೂ ಕೆಲವು ಆಯಾಮಗಳಿವೆಯೇ?

ಮೂಲಭೂತವಾಗಿ ಯಾವುದೇ ಭಕ್ತಿಯ ವಿನ್ಯಾಸಕ್ಕೆ ವೈಚಾರಿಕ ತಳಹದಿಯಿರುವುದಿಲ್ಲ. ಇದು ಪ್ರಾಥಮಿಕ ಸತ್ಯ. ಸೃಷ್ಟಿ ಮತ್ತು ಅದರೊಳಗಿನ ವ್ಯಾಪಾರವು ಪ್ರಾಚೀನ ಮನುಷ್ಯನಲ್ಲಿ ಭಯದ ಹುಟ್ಟಿಗೆ ಕಾರಣವಾದರೆ, ಆ ಭಯವು ದೈವದ ಹುಟ್ಟಿಗೆ ಕಾರಣವಾಗುತ್ತದೆ. ಇದು ಮಾನವ ಶಾಸ್ತ್ರೀಯ ಸತ್ಯ. ಈ ಹಿನ್ನೆಲೆಯಲ್ಲಿ ಸೃಷ್ಟಿಯನ್ನು ತಿಳಿಯಲಾಗಿದೆ ಎಂದು ಭಾವಿಸಲ್ಪಡುವ ಈ ಕಾಲದಲ್ಲಿಯೂ ದೈವ ಮತ್ತು ಅದನ್ನು ಕುರಿತ ಭಕ್ತಿಯ ಪ್ರಸ್ತಾಪ ಬಂದಾಗ, ಅದು ಅತ್ಯಂತ ಸಹಜವಾಗಿ ಅವೈಚಾರಿಕ ಎನ್ನಿಸಿಬಿಡುತ್ತದೆ. ಇಂತಹ ಭಕ್ತಿಯು ಮೌಢ್ಯವನ್ನು ಪೋಷಿಸುವುದಲ್ಲದೆ, ಪ್ರಶ್ನೆಗಳನ್ನೆತ್ತುವ ಮನೋಧರ್ಮವನ್ನು ಸಹ ಕುಂಠಿತಗೊಳಿಸುತ್ತದೆ. ಅದರಿಂದಾಗಿ ಸಹಜವಾಗಿಯೇ ಮನುಷ್ಯ ಬದುಕಿನ ಭೌತಿಕ ಮತ್ತು ಬೌದ್ಧಿಕ ಹಿನ್ನಡೆ ಮೊದಲಾಗುತ್ತದೆ. ಆದ್ದರಿಂದ ಮೌಢ್ಯವನ್ನು ಬಿತ್ತುವ ಭಕ್ತಿಯ ಪರಿಕಲ್ಪನೆ ಮತ್ತು ಅದರ ಅಸ್ತಿತ್ವಕ್ಕಾಗಿ ಹೋರಾಡುವ ಹರಿಹರನ ರಗಳೆಗಳು ನಮಗೆ ಸಾಂಸ್ಕೃತಿಕವಾಗಿ ಎಷ್ಟು ದೂರ ಎಂಬ ವಿವೇಕಯುತವಾದ ಪ್ರಶ್ನೆ ನಮ್ಮಲ್ಲಿ ಮೂಡಬೇಕು; ಅಂತಹ ‘ದೂರ’ದಲ್ಲಿ ನಮ್ಮ ಮತ್ತು ಹರಿಹರನ ಕ್ಷೇಮವಿದೆ. ಇದು ಹರಿಹರನ ಮಿತಿಯಿಲ್ಲ; ಮೂಲಭೂತವಾಗಿ ಆ ಕಾಲದ ಮಿತಿ. ಅಷ್ಟೇ ಏಕೆ? ಅದು ಈ ಕಾಲದ ವಿರೋಧಾಭಾಸವೂ ಹೌದು!

ಏನೇ ಇರಲಿ ಹರಿಹರನೊಂದಿಗೆ ಮತ್ತು ಅವನು ಪ್ರತಿನಿಧಿಸುವ ಮಿಲಿಟೆಂಟ್ಸ್ ಹಾಗೂ ಧರ್ಮ ಹಾಗೂ ಅಂತಹ ಎಲ್ಲಾ ಧರ್ಮಗಳೊಂದಿಗೆ ಅಂತರವನ್ನಿಟ್ಟುಕೊಳ್ಳುವುದು ನಮ್ಮ ಇವತ್ತಿನ ಅರಿವಿನ ಭಾಗವಾಗಬೇಕು.

ಮೂಲಭೂತವಾಗಿ ಶರಣತ್ವ ಎಂಬುದು ಜಂಗಮ ರೂಪಿಯಾದುದು. ಆದರೆ ಅದು ಹರಿಹರನ ಕಾಲಕ್ಕಾಗಲೇ ಸ್ಥಾವರಗೊಂಡದ್ದು ವಿಪರ್ಯಾಸ. ಸಾಧನೆಯಿಂದ ಸಾಧಿಸಿಕೊಳ್ಳಬೇಕಾದ ಅದನ್ನು ಹುಟ್ಟಿನಿಂದ ಅಥವಾ ಮತಾಂತರದಿಂದ ಸಿದ್ಧಿಗೊಳಿಸಿಕೊಂಡದ್ದು ದುರಂತ. ಅಂತಹ ಅನೇಕ ‘ಸಿದ್ಧ’ಶೈವರು ಹರಿಹರನ ರಗಳೆಗಳ ನಾಯಕರಾಗಿದ್ದಾರೆ. ಅಂಥವರಲ್ಲಿ ಒಬ್ಬ ಕತ್ತಿಯನ್ನು ಹಿಡಿದು ಹೊರಟರೆ, ಮತ್ತೊಬ್ಬ ಕತ್ತಿ ಗುರಾಣಿ; ಎರಡನ್ನೂ ಹಿಡಿದು ಹೊರಡುತ್ತಾನೆ. ಆದ್ದರಿಂದಲೇ ‘ಮಾರ್ಕ್ಸ್’ ಅವರು ಧರ್ಮವೆಂಬುದು ಮನುಷ್ಯನ ಅಫೀಮು ಎಂದು ಸ್ವಲ್ಪ ದೂರ ಸರಿದು ಹೇಳಿದ್ದು!

ಹೀಗೆ ಮೌಢ್ಯ, ಅವೈಚಾರಿಕತೆ, ಹಿಂಸೆ, ಸಾಂಸ್ಥಿಕತೆ ಮೊದಲಾದ ಅನೇಕ ಆಯಾಮಗಳನ್ನು ಪಡೆದಿರುವ ರಗಳೆಗಳಲ್ಲಿನ ಭಕ್ತಿಯ ಪರಿಕಲ್ಪನೆ ನಮ್ಮ ಸಮಕಾಲೀನ ಸಂದರ್ಭವನ್ನು ವಿವರಿಸಿಕೊಳ್ಳಲು ಬೇಕಾದ ಮಹತ್ತರ ಒಳನೋಟಗಳನ್ನು ನೀಡುತ್ತದೆ ಎಂದು ಭಾವಿಸುತ್ತಾ, ಹೊಸ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತೇನೆ.

ಹೊಸತು, ಡಿಸೆಂಬರ್ ೨೦೦೨

ಒತ್ತಾಸೆ : ಕನ್ನಡ ವಿಶ್ವವಿದ್ಯಾಲಯ ಮತ್ತು ಎಲ್. ಬಸವರಾಜು ಟ್ರಸ್ಟ್ ಸಂಯುಕ್ತವಾಗಿ ಕೋಲಾರದಲ್ಲಿ ಇದೇ ವರ್ಷ ಆಗಸ್ಟ್‌ನಲ್ಲಿ ವ್ಯವಸ್ಥೆ ಮಾಡಿದ್ದ ‘ಹರಿಹರನ ರಗಳೆಗಳು: ಸಾಂಸ್ಕೃತಿಕ ಮುಖಾಮುಖಿ’ ಎಂಬ ಎರಡು ದಿನಗಳ ವಿಚಾರ ಸಂಕಿರಣದ ಸಂವಾದದಲ್ಲಿ ಮಂಡಿಸಿದ ವಿಚಾರಗಳ ಲೇಖನ ರೂಪವಿದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಯಾಸ
Next post ಕಲಾವಿದರ ಹಾಡು

ಸಣ್ಣ ಕತೆ

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…