ವಸುಧೇಂದ್ರ ಸಾಹಿತ್ಯ

ಇಂದು ಬರೆಯುತ್ತಿರುವ ಹಲವಾರು ಕ್ರಿಯಾಶೀಲ ಲೇಖಕರ ಪಟ್ಟಿಯಲ್ಲಿ ವಸುದೇಂದ್ರರ ಹೆಸರೂ ಸೇರಿಕೊಳ್ಳುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ವಸುಧೇಂದ್ರರ ಸಾಹಿತ್ಯ ಬದಲಾವಣೆಯ ಸೂಚನೆಗಳನ್ನು ಹೊಂದಿದಂತಹದು. ಈ ಬದಲಾವಣೆಯೆಂಬುದು ಕಥನದ ಮಾದರಿಯಲ್ಲೇ ಆಗಿರಬಹುದು. ಸಾಮಾಜಿಕ ಪಲ್ಲಟಗಳ ಸಂಕೇತವೇ ಆಗಿರಬಹುದು. ಅವರಷ್ಟೇ ಅಲ್ಲದೆ, ಅವರ ಜೊತೆಗಾರ ಲೇಖಕರಲ್ಲಿಯೂ ಕಾಣುವ ಸಂದಿಗ್ದತೆಯ ನೆರಳು, ಅಂದರೆ – ಕಥನದ ಮಾದರಿಗಳನ್ನು ಅನುಸರಿಸಬೇಕೇ ಬೇಡವೇ ಎಂಬುದು- ಹಾಗೆಯೇ ಅನುಭವಗಳನ್ನು ನಿರೂಪಿಸುವ ಧಾಟಿಯು ಯಾವುದಾಗಿರಬೇಕು ಇತ್ಯಾದಿ. ಇಲ್ಲಿ ಸ೦ದಿಗ್ದತೆಯ ಕಾರಣದಿಂದಲೇ ಉಂಟಾಗುವ ಬಿರುಕುಗಳು ಅವರ ಸಾಹಿತ್ಯವನ್ನು ವಿಘಟಿತ ತುಣುಕುಗಳ ಆನುಭವ ಕಥನವೆಂಬುದನ್ನು ನಿರೂಪಿಸುತ್ತಿದೆ ಎಂಬುದು ನನ್ನ ಅನಿಸಿಕೆ.

ವಸುಧೇಂದ್ರರ ಕಥೆ/ಪ್ರಬಂಧಗಳು ಬೆರಳು ಮಾಡಿ ತೋರಿಸುವಂತೆ ಹೊಸ ನಿರೂಪಣೆಯ ಸಾಧ್ಯತೆಗಳು ಮತ್ತು ಬದಲಾವಣೆಯ ನಿರ್ದಿಷ್ಟ ಕಾಲಘಟ್ಟದಲ್ಲಿ ನಿಂತು ನೋಡುವಾಗ ಉಂಟಾಗುವ ಸಾಂಸ್ಕೃತಿಕ ಕಂದರಗಳು ಮುಖ್ಯವಾಗುತ್ತವೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ವಸುದೇಂದ್ರರ ಸಾಹಿತ್ಯವನ್ನು ನೋಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

(೧)
ವಸುದೇಂದ್ರ ಸಾಹಿತಿಯಾಗಿ ಕತೆಗಳನ್ನು ಪ್ರಬಂಧಗಳನ್ನೂ ಬರೆದಿದ್ದಾರಾದರೂ ಅವರ ಹೆಸರೇಕೋ ಪ್ರಬಂಧಗಳ ಜೊತೆಯೇ ತಳಕು ಹಾಕಿಕೊಳ್ಳುವಂತೆ ಕಾಣುತ್ತದೆ. ಪ್ರಬಂಧ ಮತ್ತು ಹರಟೆಗಳಲ್ಲಿದ್ದ ಅಂತರ ಎಂದರೆ ಗಂಭೀರ ಮತ್ತು ಲಘುಧಾಟಿಯದು. ಅವೆರಡನ್ನೂ ತಿರಸ್ಕರಿಸಿ ತಮ್ಮ ಪ್ರಬಂಧಗಳನ್ನು ಸುಲಲಿತ, ಸರಾಗ ಓದಿಗೆ ತೆರೆದುಕೊಳ್ಳುವ ಸೂಚನೆಯನ್ನು ವಸುಧೇಂದ್ರ ನೀಡುತ್ತಾರೆ. ಕತೆ ಪ್ರಬಂಧಗಳಲ್ಲಿ ಅಂತಹ ಭೇದವನ್ನೇನೂ ವಸುಧೇಂದ್ರ ಮಾಡಿಕೊಂಡಂತೆ ಕಾಣುವುದಿಲ್ಲ (ಅವರ ಒಂದು ಸಂಕಲನದಲ್ಲಿ ಪ್ರಬಂಧ-ಕತೆಗಳೆರಡೂ ಒಟ್ಟಿಗೇ ಇರುವುದು ಇದಕ್ಕೆ ಸಾಕ್ಷಿ). ಕತೆಯಾಗಲಿ, ಪ್ರಬಂಧವಾಗಲಿ ತಮ್ಮ ಅನುಭವಗಳನ್ನು ನಿರೂಪಿಸುವ ಕಥಾನಕಗಳೆಂಬಂತೆ ಭಾವಿಸಿ ಬರೆಯುವ ಲೇಖಕ ಅವರು. ಅಂದರೆ ಒಂದೇ ದ್ರವ್ಯವನ್ನು `ಅದಕು ಇದಕು ಎದಕು’ ಎಂದು ಬಳಸಿರುವುದನ್ನು ಗಮನಿಸಬಹುದು.

ಹೀಗೆ ವಸುಧೇಂದ್ರ ಬರೆಯುತ್ತಿರುವ ಕಾಲದಲ್ಲಿಯೇ ಸಾಹಿತ್ಯದ ಆಶಯ, ಆರ್ಥಗಳೂ ಬದಲಾಗುತ್ತ ಬಂದಿದ್ದು, ಚೌಕಟ್ಟುಗಳನ್ನು ಮೀರಿ ವಿಭಿನ್ನ ಜಾಡುಗಳನ್ನು ಸಾಹಿತ್ಯವು ಹುಡುಕುತ್ತಿದೆ ಎನ್ನಿಸುತ್ತಿದೆ. ಹಾಗೆ ನೋಡಿದರೆ, ಪ್ರಾಕಾರಗಳೆಂಬುದೇ ಭ್ರಮೆಯಿರಬೇಕು. ಒಳ್ಳೆಯ ಸಾಹಿತ್ಯವೆಂಬುದು ಸಾರವತ್ತಾಗಿರುವುದು ಮುಖ್ಯವೇ ವಿನಾ ಪ್ರಾಕಾರಗಳಲ್ಲಿ ಯಶಸ್ವಿಯಾಗುವುದಲ್ಲ. ಕತೆ, ಕವನ ಇತ್ಯಾದಿಗಳು ಶುದ್ಧಾಂಗವಾಗಿ ಹೀಗೆ ಇರಬೇಕೆಂಬ ನಿಯಮಾವಳಿಗಳು ಪಠ್ಯದ ಆಕೃತಿಯನ್ನು ಕುರಿತಂತದ್ದಾಗಿದೆ. ಇದರಾಚೆಗೆ ಶುದ್ಧಪದ್ಯವೆಂಬುದು ಎಝ್ರೂಪೌಂಡ್‍ನ ಮಾತಿನಲ್ಲಿ ಹೇಳುವುದಾದರೆ, ಗದ್ಯದ ಘಾಟನ್ನು ಹೊಂದಿರಬಹುದು ಅಥವಾ ಒಳ್ಳೆಯ ಗದ್ಯವೆಂಬುದು ಕಾವಾತ್ಮಕವಾಗಿಯೂ ಇರಬಹುದು (ಈ ಸಾಧ್ಯತೆಗಳಲ್ಲೇ ವಿಮರ್ಶಕರು ಒಡಲಾಳ, ಮಲೆಗಳಲ್ಲಿ ಮದುಮಗಳನ್ನು ಗದ್ಯದಲ್ಲಿರುವ ಪದ್ಯ ಎಂದು ಗುರುತಿಸುತ್ತಿದ್ದಾರೆ). ಆಧುನಿಕೋತ್ತರ ಸಾಹಿತ್ಯವು ಅಭಿವ್ಯಕ್ತಿಯ ಸಾಧ್ಯತೆಗಳನ್ನೂ ಬಳಸಿಕೊಳ್ಳುವದರಲ್ಲಿ ಮುಂದಾಗುತ್ತದೆ. ಅಲ್ಲಿ ಆಕೃತಿಯ ಹಂಗನ್ನು ತೊರೆಯುವುದರ ಬಗ್ಗೆಯೇ ಒಲವು ಹೆಚ್ಚು. ಜನರ ಅಭಿರುಚಿಗೆ ಒಗ್ಗುವಂತಹ ಯಾವುದೇ ಮಾದರಿಯಾದರೂ ಕಥಾನಕಗಳಾಗಿ ಬರಬಹುದಾದ ಸಾಧ್ಯತೆಗಳನ್ನು ಆಧುನಿಕೋತ್ತರ ಸಾಹಿತ್ಯ ಹೊಂದಿದೆ. ಮೊದಲಿಗೆ `ಇತರೆ’ ಜಾತಿಗೆ ಸೇರಿಸುತ್ತಿದ್ದ ಬರಹಗಳು ಸಾಹಿತ್ಯದೊಳಗೆ ಪ್ರವೇಶ ಪಡೆಯುತ್ತಿವೆ ಎಂಬುದು ಬದಲಾವಣೆಯ ಗಾಳಿಯನ್ನು ಸೂಚಿಸುತ್ತಿದೆ. ಶ್ರೇಷ್ಠತೆಯ ವ್ಯಸನವುಳ್ಳ ಅನೇಕರಿಗೆ ಸಾಹಿತ್ಯ ತನ್ನ ನಿರ್ದಿಷ್ಟತೆಯನ್ನು ಕಳೆದುಕೊಳ್ಳುತ್ತಿದೆ ಎಂಬುದು ಆತಂಕ ಹುಟ್ಟಿಸುತ್ತಿದೆ. ಆದರೆ ಹೆಚ್ಚು ಜನಪ್ರಿಯ ಧೋರಣೆಗಳನ್ನು ಬಳಸಿಕೊಂಡ ಸಾಹಿತ್ಯವು ಇನ್ನೊಂದು ಹಂತದಲ್ಲಿ ಸಂಸ್ಕೃತಿ ಪಠ್ಯವಾಗಿ ಕಾಣುತ್ತಿರುವುದೂ ಸತ್ಯವಾಗಿದೆ.

ವಸುಧೇಂದ್ರರ ಪ್ರಬಂಧಗಳು/ಕತೆಗಳು ಎಂಬ ಕಥಾನಕಗಳು ಹೆಚ್ಚು ಜನಪ್ರಿಯವಾಗುತ್ತಿರುವುದಕ್ಕೆ ಈ ಕಾಲದ ಮಹಿಮೆಯೂ ಕಾರಣವಿರಬಹುದು! ಎಲ್ಲರನ್ನು ಸೆಳೆದುಕೊಳ್ಳುವ ಗುಣ, ರಂಜನೆ, ಲಘುಧಾಟಿಯ ಶೈಲಿಗಳು ಅದರಲ್ಲಿವೆ. ಅವರೇ ಹೇಳುವಂತೆ ಅವರ ಪ್ರಬಂಧಗಳು ಸುಲಲಿತ ಪ್ರಬಂಧಗಳು. ಸರಾಗವಾಗಿ ಓದಿಸಿಕೊಂಡು ಹೋಗುವುದರ ಜೊತೆ, ಪುನಃ ಮೆಲುಕು ಹಾಕಬೇಕೆನಿಸುವ ಅಂಶಗಳನ್ನು ಸೇರಿಸಿಕೊಳ್ಳುತ್ತವೆ, ಅವು. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಕ್ಕೆ ವಿಮುಖರಾಗುವ ಓದುಗರ ಬಗ್ಗೆ ಚರ್ಚಿಸಲಾಗುತ್ತಿದೆಯಲ್ಲವೇ. ಅದಕ್ಕೆ ಮಾಧ್ಯಮಗಳು, ಅವಸರದ ಬದುಕು- ಇವುಗಳನ್ನೆಲ್ಲ ಹೊಣೆ ಮಾಡಿ ಹಲವರು ಮಾತನಾಡುವುದನ್ನೂ ಕೇಳಿರುತ್ತೇವೆ- ಇದು ಮತ್ತೆ ಸಾಂಪ್ರದಾಯಿಕ ಓದುಗರನ್ನು ಕುರಿತ ಮಾತು. ಜನರನ್ನು ತಲುಪುವ ಸಾಹಿತ್ಯ ಹಿಂದೆ ಮುಜುಗರಕ್ಕೀಡಾದಂತೆ ಇಂದು ಇಲ್ಲ. ಈಗಿನ ಕಥಾನಕಗಳಿಗೆ ಹೆಚ್ಚಿನ ಸಂಖ್ಯೆಯ ಓದುಗರಿದ್ದಾರೆ. ಈ ಎಲ್ಲ ವಿಷಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಹೇಳುವುದಾದರೆ, ವಸುಧೇಂದ್ರ ಗೆದ್ದಿದ್ದಾರೆ. ಅವರ ಮೊದಲೇ ಹೇಳಿದಂತೆ `ಕಗ್ಗ’ದ ಭಾಷೆಯಲ್ಲ. ಕತೆ ಹೇಳಲು ಬೇಕಾದ ರಂಜನೆಯ ಅಂಶವನ್ನು ಅವರು ಮರೆತಿಲ್ಲ. ಅದನ್ನು ಬೇಕಾದರೆ ಅಜ್ಜಿ ಕತೆಗಳ ಮೂಲಕವಾದರೂ ಸಾಧಿಸಬಹುದು ಎಂಬ ನೀತಿ ಅವರದು. ಅದರಲ್ಲಿ ಅವರಿಗೆ ಸಂಕೋಚಗಳಿಲ್ಲ. ಅಡಗೂಲಜ್ಜಿ ಕತೆಗಳು ಹಾರಿಪಾಟರ್ ಕತೆಗಳಲ್ಲಿ ಮರು ಸೃಷ್ಟಿಯಾಗುತ್ತಿರುವಾಗ ಇದು ಅಸಂಗತವೇನೂ ಅಲ್ಲ. `ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನಿದೇವರು’ ಕತೆಯಲ್ಲಿ ದೆವ್ವಗಳೆಲ್ಲ ಮನುಷ್ಯರ ಜೀವನದ ಜೊತೆ ಚೆನ್ನಾಗಿ ಹೊಂದುಕೊಂಡು ಹೋಗುವ ಪ್ರಸಂಗವಿದೆ. ಇಂತಹ ಕತೆಗಳ ರಂಜನೀಯ ಅಂಶಗಳನ್ನು ಬಳಸಿಕೊಂಡು ಕತೆ ಹೆಣೆಯಬಲ್ಲನೆಂಬ ವಿಶ್ವಾಸ ವಸುದೇಂದ್ರರಿಗೆ ಖಂಡಿತಾ ಇದೆ ಎನ್ನಬಹುದು.

ವಸುದೇಂರ್ರರ ಸಾಹಿತ್ಯ ಜನಪ್ರಿಯವಾಗಿರುವುದಕ್ಕೆ ಕಾರಣ, ನಾನು ಊಹಿಸುವಂತೆ, ಮೇಲೆ ಚರ್ಚಿಸಿದ ಆಂಶಗಳಷ್ಟೇ ಅಲ್ಲದೆ, ನಾಸ್ಟಾಲ್ಜಿಯಾದ ಅಂಶಗಳನ್ನು ಸೇರಿಸಿ ಬರೆಯುತ್ತಿರುವುದೂ ಕಾರಣವಿದ್ದೀತು. ಮತ್ತು ಹಳೆಯ ಬದುಕು ಮೆಲುಕು ಹಾಕುವ, ಹೊಸ ಬದುಕಿನ ತಲ್ಲಣಗಳನ್ನು ನೋಡುತ್ತಿರುವ ಪೀಳಿಗೆಯನ್ನು ಕೇಂದ್ರವಾಗಿಟ್ಟುಕೊಂಡು ಬರೆಯುವ ಚಾತುರ್‍ಯ ಅದು ಎಂದು ನನಗನ್ನಿಸುತ್ತದೆ. ಕೆಲವೇ ವಷಗಳಲ್ಲಿ ಕಾಣುವ ಆರ್ಥಿಕ ಸ್ಥಿತ್ಯಂತರಗಳು ಸಾಮಾಜಿಕ ಮೌಲ್ಯಗಳನ್ನೂ, ಸಂರಚನೆಯನ್ನೂ ಅಲ್ಲೋಲಕಲ್ಲೋಲ ಮಾಡಿದುವಲ್ಲವೇ? ಅಂತಹ ಪರಿಣಾಮಗಳು ಸುಶಿಕ್ಷಿತ, ಓದುಬಲ್ಲ ಮಧ್ಯಮವರ್ಗದ ಜನರಿಗೆ ಹಣಗಳಿಕೆಯ ಸಾಧ್ಯತೆಗಳನ್ನೂ, ಪ್ರಪಂಚ ಪರ್ಯಟನೆಯ ಸುಖಗಳನ್ನೂ ಏಕಕಾಲಕ್ಕೆ ತಂದುಕೊಟ್ಟವು. ತೃಪ್ತಿಯ ಗೆರೆಯನ್ನು ದಾಟಿ ಮಹತ್ವಾಕಾಂಕ್ಷೆಯ ಬೆನ್ನುಹತ್ತಿರುವ ವರ್ಗ ಹಾಗೂ ಅವರು ಪೊರೆ ಕಳಚಿಕೊಂಡು ಬಂದ ಹಳ್ಳಿಯ ಅಥವಾ ಅರೆನಗರ ಜೀವನಗಳ ಅನುಭವ ಪ್ರಪಂಚ- ಇವೆರಡರ ನಡುವೆ ಇರುವ ಅಂತರವನ್ನು ಗುರುತಿಸುವುದರಲ್ಲಿ ವಸುಧೇಂದ್ರ ತೊಡಗುವುದರಿಂದ, ಅದು ಸಮಕಾಲೀನ ಚರಿತ್ರೆಯ ಭಾಗವಾಗಿ ಯಶಸ್ವಿಯೆನಿಸಿರಬಹುದು.

ವಸುದೇಂದ್ರ ಅವರ ಪ್ರಬಂಧ/ಕತೆಗಳು (ಆಥವಾ ಕತೆಗಳ ಮುಂಚೆ ಕೊಟ್ಟಿರುವ ಕಿರುಗತೆ, ಪುಟ್ಟಪ್ರಸಂಗಗಳು) ಬಂದು ಸ್ಥಿತ್ಯುತರದ ಸನ್ನಿವೇಶದಲ್ಲಿ ನಿರೂಪಿತಗೊಂಡವು. ಅವರ ಜನಪ್ರಿಯ ಪ್ರಬಂಧ ಸಂಕಲನ `ನಮ್ಮಮ್ಮ ಆಂದ್ರೆ ನಂಗಿಷ್ಟ’ ಪುಸ್ತಕವನ್ನು ಅವರು ಅರ್ಪಿಸಿರುವುದು, `ಬಾಲ್ಯಕೊಟ್ಟ ಸಂಡೂರಿಗೆ, ಬದುಕು ಕೊಟ್ಟ ಬೆಂಗಳೂರು’- ಈ ಎರಡು ಪ್ರದೇಶಗಳೇ ಎರಡು ಭಿನ್ನ ಸ೦ವೇದನೆಗಳನ್ನು ಸೃಷ್ಟಿಸುತ್ತವೆ. ಬಾಲ್ಯದ ಅನುಭವಗಳು ತೋರಿಸುವ ಸಾಮಾಜಿಕ ಸ್ಥಿತಿಗತಿಗಳು ಬೇರೆ; ಬೆಂಗಳೂರಿನ ಬದುಕಿನ ಆನುಭವಗಳು ತೋರಿಸುವ ಸಾಮಾಜಿಕ ಸ್ಥಿತಿಗತಿಗಳು ಬೇರೆ; ಬೆಂಗಳೂರಿನ ಬದುಕಿನ ಅನುಭವಗಳು ತೋರಿಸುವ ಪ್ರಪಂಚ ಬೇರೆ – ಈ ಭಿನ್ನ ಪ್ರಪಂಚಗಳನ್ನು ಕಂಡಹಾಗೇ ಬಣ್ಣಿಸುತ್ತ ಅವುಗಳನ್ನು ಕಥಾನಕಗಳಾಗಿಸುತ್ತಾರೆ ಲೇಖಕ. ಬಳ್ಳಾರಿಯ ಬಯಲು ಸೀಮೆಯ ಲೋಕಕ್ಕು, ಬೆಂಗಳೂರಿನ ಕಾರ್ಪೊರೇಟ್ ಸಂಸ್ಕೃತಿಯ ಲೋಕಕ್ಕು ವ್ಯತ್ಯಾಸಗಳಿವೆ. ಅವು ಒಂದಕ್ಕೊಂದು ಹೊಂದುವುದಿಲ್ಲ. ಸಂಸ್ಕೃತಿ ಇರಲಿ, ಹವಾಮಾನ ಕೂಡ ಹೊಂದುವುದಿಲ್ಲ. ಅದನ್ನು ಲೇಖಕ ವಸುದೇಂದ್ರರು ಬಲ್ಲರು.

ಎರಡು ಭಿನ್ನಲೋಕಗಳ ಬದುಕು, ಸಂಸ್ಕೃತಿಗಳ ಕಂದರ ಕಾಣುವಂತೆಯೇ ಇದೆ. ಕಾರ್ಪೋರೇಟ್ ಜಗತ್ತಿನ ಅರ್ಥಶಾಸ್ಥ್ರೀಯ ವ್ಯವಸ್ಥೆಯಿಂದ ಜೀವಂತವಿರುವ ಲೋಕ ಬೆಂಗಳೂರಿನದು. ಅಲ್ಲಿ ಪ್ರತಿಪಾದಿಸಲ್ಪಡುವ ಮೌಲಗಳೂ! ಭಿನ್ನಸ್ವರೂಪದವು. ಬಯಲು ಸೀಮೆಯ ಬದುಕು ಬಡತನದ್ದು ಅಥವಾ ಬಡತನಕ್ಕಿ೦ತ ಸ್ವಲ್ಪ ಮೇಲೇರಿದ ಮಧ್ಯಮವರ್ಗದ್ದು. ಇವೆರೆಡರ ಮಧ್ಯೆ ನಿಂತಿರುವ ಲೇಖಕ ಭಾವನಾತ್ಮಕ ಚೈತನವನ್ನು ಪೂರೈಸಿಕೊಳ್ಳಲು ತನ್ನ ಬಾಲ್ಯಕಾಲವನ್ನು ನೆಚ್ಚಿಕೊಂಡಿದ್ದಾನೆ. ಹಣಕಾಸಿನ ಸೌಲಭ್ಯ ಮತ್ತಿತರ ಸುಖಗಳನ್ನು ಕೊಡುವ ಜಗತ್ತನ್ನು ಉಪಯೋಗಿಸಿಕೊಳ್ಳುತ್ತಲೇ ಅದರ ಬಗ್ಗೆ ಸಂಶಯಗಳನ್ನಿಟ್ಟುಕೊಂಡಿದ್ದಾನೆ. ಇಲ್ಲಿ ಗಮಸಬೇಕಾದ ಅಂಶವೆಂದರೆ, ಲೇಖಕ ವೈರುಧ್ಯಗಳನ್ನು ಗುರುತಿಸಿಕೊಂಡಿದ್ದಾನೆ. ಇಲ್ಲಿ ಗಮಸಬೇಕಾದ ಅಂಶವೆಂದರೆ, ಲೇಖಕ ವೈರುಧ್ಯಗಳನ್ನು ಗುರುತಿಸಿಕೊಂಡಿದ್ದಾನೆ. ಆದರೆ ಆ ಜಗತ್ತುಗಳ ಮುಖಾಮುಖಿಯನ್ನು ತೀವ್ರವಾಗಿ ಗುರುತಿಸುವುದಿಲ್ಲ ಎನ್ನುವುದು.

ಸ್ವಲ್ಪ ಒಳಹೊಕ್ಕು ನೋಡಿದರೆ ವಸುದೇಂದ್ರರ ಬಯಲು ಸೀಮೆಯ ನೆನಪುಗಳು ಸಿಹಿ ಎನ್ನಿಸುವಂತೆ ಬರೆದಿರುವುದು ಕಾಣುತ್ತದೆ. ಬಾಲ್ಯದ ಬದುಕಿನ ವಿವರಗಳು ಮುದ ನೀಡುತ್ತವೆ ಏಕೆಂದರೆ, ಅದರ ನಿರೂಪಣೆಯ ಧಾಟಿಯು ಬಾಲದ ಗೆಳೆಯರ ಮುಂದೆ ಹರಟುವ, ಹಳೆಯ ನೆನಪುಗಳನ್ನು ಮೆಲುಕು ಹಾಕುವ ರೀತಿಯಲ್ಲಿದೆ. ಅಮ್ಮ, ಅಪ್ಪ, ಅಕ್ಕ ಮತ್ತು ಬಳ್ಳಾರಿ ಸೀಮೆಯ ಪರಿಸರ ಅಪ್ತವಲಯವನ್ನು ಸೃಷ್ಟಿಸುತ್ತದೆ. ಮಧ್ಯಮವರ್ಗದ ಕೌಟುಂಬಿಕ ಪರಿಸರ, ಬ್ರಾಹ್ಮಣ ಸಮಾಜದ ಆಚಾರ ವಿಚಾರಗಳು, ನೀರಿಲ್ಲದ ಬಳ್ಳಾರಿ ಸೀಮೆ, ಹೊಸದಾಗಿ ಬಂದ ಚಲನ ಚಿತ್ರಗಳನ್ನು ನೋಡುವ ಉತ್ಸಾಹ, `ಆಣ್ಣಾವ್ರು’ ತಮ್ಮೂರಿಗೆ ಬಂದಾಗ ಪುಲಕಗೊಳ್ಳುವ ತಾಯಿ-ಮಗ- ಎಲ್ಲವೂ ಸವಿಸವಿ ನೆನಪು, ಸಾವಿರ ನೆನಪುಗಳೇ. ಇಂತಹದೊಂದು ಪ್ರಪಂಚವನ್ನು ಬೆಚ್ಚಗೆ ಕಾಪಾಡಿಕೊಳ್ಳುವ ಮನಸ್ಥಿತಿ ಇರುವುದು ನಾಸ್ಟಾಲ್ಜಿಕ್ ಗುಣದಿ೦ದಲೇ. ಈ ಜಗತ್ತಿನ ಎದುರು ಆರ್ಥಿಕವಾಗಿ ಸಬಲವಾಗಿರುವ ಬೆಂಗಳೂರಿನ ಲೋಕ, ಕಂಪ್ಯೂಟರ್ ತಂತ್ರಜ್ಞಾನದ ಪರಿಣಾಮದಿಂದ ವಿದೇಶಗಳ ಲೋಕಸಂಪರ್ಕ, ಅಲ್ಲಿನ ಆತ್ಯಾಧುನಿಕತೆಯ ಸೌಲಭಗಳು ಇತ್ಯಾದಿಗಳೆಲ್ಲ ಇವೆ. ಇಲ್ಲಿರುವ ಲೋಕ ವರ್ತಮಾನದ್ದು. ಅದಕ್ಕೆ ಇರುವ ಕೊರತೆಗಳನ್ನು ವಸುದೇಂದ್ರರ ಬರಹಗಳು ಗುರುತಿಸುತ್ತವೆ.

ಈ ಸೀಳು ಎರಡು ಊರುಗಳ ನಡುವೆ ಉಂಟಾಗಿರುವುದು ಪ್ರಾಥಮಿಕವಾಗಿ ದುಡ್ಡಿನ ಪರಿಣಾಮದಿಂದ; ನಂತರ ಸಂಸ್ಕೃತಿ ಮತ್ತಿತರ ಪರಿಣಾಮಗಳಿಂದ. ದುಡ್ಡಿನ ಅಸಮಾನತೆ ಒಂದಕ್ಕೊಂದು ತಾಳೆಯಾಗಲಾರದ ದ್ವೀಪಗಳನ್ನು ಸೃಷ್ಟಿಸುತ್ತಿದೆ. ಐ.ಟಿ.ಯಲ್ಲಿ ಭವಿಷ್ಯ ಕಾಣುವ ಕನಸು ಹೊತ್ತ ಜನಾಂಗ ದುಡ್ಡನ್ನು ದೊಡ್ಡ ಪ್ರಮಾಣದಲ್ಲಿ ಬಯಸಿ ಬಂದಿವೆ. ಅವರಿಗೆ ಇತರರಿಗು ಅಂತರ ಇದೆ. `ಹೆಡ್‍ಹಂಟರ್’ ಕತೆಯಲ್ಲಿ ನಾಯಕನ ತಾಕಲಾಟಗಳು ಇನ್ನಷು ಅವಕಾಶಗಳುಳ್ಳ ಕೆಲಸವನ್ನು ಹಿಡಿಯುವುದರ ಬಗ್ಗೆ. ಕತೆಯ ಕೊನೆಯಲ್ಲಿ ಬರುವ ಜವಾನ ತನಗೆ ೮೦೦ ರೂ ಮಾತ್ರ ಸಂಬಳ ಬರುತ್ತಿರುವುದಾಗಿಯೂ, ಇನ್ನೊಂದು ಇನ್ನೂರು ರೂಪಾಯಿ ಜಾಸ್ತಿ ಮಾಡಿದರೆ, ಮದುವೆಯಾಗುತ್ತೇನೆ೦ದು ಹೇಳಿಕೊಂಡಾಗ, ನಾಯಕನ ಪ್ರತಿಕ್ರಿಯೆ ಹೀಗಿದೆ:
ನನಗೆ ಏನು ಮಾಡಬೇಕೋ ತೋಚಲಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗು ಏಕಪ್ರಕಾರವಾಗಿ ದುಡಿಯುವ ಈ ಜವಾನನಿಗೆ ಬರೀ ಎಂಟುನೂರು ರೂಪಾಯಿ ಸಂಬಳವೇ? ನನಗೆ ಗೊತ್ತೇ ಇರಲಿಲ್ಲ

ಇಲ್ಲಿರುವ ಜಾಣ್ಮೆಯ ಮುಗ್ದತೆಯನ್ನು ಗಮನಿಸಬೇಕು (ಹೆಡ್‍ಹಂಟರ್; ಯುಗಾದಿ: ಪು. ೪೪).

ಅತಿಲಾಭದ ಗುಂಪು, ಲಾಭದ ಪರಿಚಯವೇ ಇಲ್ಲದ ಗುಂಪು ಎಂದು ಎರಡು ಗುಂಪುಗಳಾಗಿ ಮಾರ್ಪಡುತ್ತ ಎರಡು ಲೋಕಗಳ ಜನರು ಒಂದು ಪರಸ್ಪರ ಅನ್ಯಗ್ರಹ ಜೀವಿಗಳಂತೆ ಬದುಕುತ್ತಿರುವುದನ್ನು ವಸುದೇಂದ್ರರ ಕತೆಗಳಲ್ಲಿ ಗುರುತಿಸುತ್ತೇವೆ. ಒಂದು ಕಡೆಯಲ್ಲಿ ಸಿವಿಲ್ ಇಂಜಿನಿಯರ್ ಐಟಿಯ ಮರೀಚಿಕೆಯಲ್ಲಿ ತನ್ನ ಸ್ಪಂತದ ಆಸ್ತಿಯನ್ನೆಲ್ಲ ಕಳೆದುಕೊಂಡು, ಬೆಂಗಳೂರಿಗೆ ಬರುತ್ತಾನೆ. ಅವನ ಸ್ನೇಹಿತನ ಮನೆ, ಸ್ನೇಹಿತನ ಹೆಂಡತಿ ಮುಂತಾದ ಸಂಗತಿಗಳು ಅವನಿಗೆ ಕಿರಿಕಿರಿಯುಂಟು ಮಾಡುತ್ತವೆ. ಅಸೂಯೆ ಮತ್ತು ಅಪರಾಧಿ ಪ್ರಜ್ಞೆ ಮೂಡಿಸುವ ಲೋಕವನ್ನು ಬಿಚ್ಚಿಡಲು ಇಷ್ಟೇ ಅಲ್ಲದೆ, ಟಾರ್ಗೇಟ್ ಅನ್ನುಮುಟ್ಟದ, ಪ್ರಾಜೆಕ್ಟ್ ಸರಿಯಾದ ಸಮಯದಲ್ಲಿ ಮುಗಿಸದ ಜನರು ನೆಮ್ಮದಿಯಿಲ್ಲದೆ ಬದುಕಿದ್ದಾರೆ ಎನ್ನುವ ವಾಸ್ತವದತ್ತಲೂ ನಮ್ಮ ಗಮನ ಸೆಳೆಯುತ್ತಾರೆ ಕಥೆಗಾರ.

ಕಾರ್ಪೊರೇಟ್ ಜಗತ್ತಿನ ಮೊದಲ ಆದ್ಯತೆ ಹಣ ಮತ್ತು ಯಶಸ್ಸು. ಅವುಗಳಿಂದ ರೂಪಿತವಾದ ಅವರ ಸಂಸ್ಕೃತಿಯೂ ಹೀಗೆ ಇರುತ್ತದೆ. ಅದರಲ್ಲಿ ಬದುಕುವವರ ಆದ್ಯತೆಗಳು ಹಣ ಮತ್ತು ಯಶಸ್ಸು. ಸ್ಪರ್ಧಾತ್ಮಕ ಲೋಕದಲ್ಲಿ ಅಂಕಿ ಆಂಶಗಳೊಂದಿಗೆ ಸಹಕಾರ ಸಾಧ್ಯವಾದಷ್ಟು ಮನುಷ್ಯರ ಜೊತೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಅತಿಯೆನ್ನುವುದೇ ಗುಣವಾಗಿರುವ ಈ ಜಗತ್ತಿನಲ್ಲಿ ದುಡ್ಡು ಅತಿಯಾದಂತೆ, ಸೆಕ್ಸ್ ಕೂಡ ಅತಿ. ಇಲ್ಲಿ ಸೆಕ್ಸ್ ಪರ್ವರ್ಟೆಡ್ ಆದ ಜನಗಳಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಭ್ರಮೆಯಲ್ಲಿರುವವರಿದ್ದಾರೆ. ಫೋನು ಸೆಕ್ಸ್‍ಗಳಿಂದ ದಂಧೆ ಮಾಡುವವರಿದ್ದಾರೆ. ಏನಾದರೂ ವ್ಯಾವಹಾರಿಕ ಸಫಲತೆಗೆ ಇಲ್ಲಿ ಜಾಗ- ಹೊಸ ಪ್ರಾಜೆಕ್ಟ್‍ಗಳನ್ನು ಕೊಡಿಸುವುದಾದರೆ ಏನನ್ನು ಮಾಡಲು ತಯಾರಿರುವ ಜನ ಇಲ್ಲಿದ್ದಾರೆ.

ವಸುದೇ೦ದ್ರರ ಇನ್ನೊಂದು ಪ್ರಪಂಚದಲ್ಲಿ ಈ ಸಮಸ್ಯೆಗಳಿಲ್ಲ. ಬಡತನದ ಕೊರೆತೆಯಿದ್ದರೂ, ಸಾಮರಸ್ಯವಿದೆ; ಸೋತರೂ ಸ್ವೀಕರಿಸುವ ಗುಣವಿದೆ.

‘ನಮ್ಮಮ್ಮ ಅಂದ್ರೆ ನಂಗಿಷ್ಟ’ ವಸುದೇಂದ್ರರ ಜನಪ್ರಿಯ ಪ್ರಬಂಧ ಅದರಲ್ಲಿ ಚೆಡ್ಡಿರಾಸ್ಕಾಲ್ ಆಗಿರುವ ಮಗ ಎಲ್ಲರೆದುರು ಅವಮಾನ ಆನುಭವಿಸುತ್ತಿದ್ದಾಗ, ತಾಯಿ ಆವನಲ್ಲಿ ಆತ್ಮವಿತ್ಯಾಸ ತುಂಬಿ, ಸ್ವಲ್ಪವೂ ಬೇಸರವಿಲ್ಲದೆ ಅವನನ್ನು ಸಂತೈಸುತ್ತಾಳೆ. ಇನ್ನೊಮ್ಮ ಟಿ.ವಿ. ರಿಪೇರಿ ಮಾಡುತ್ತಾನೆ ಮಗ ಎಂದು ಊರವರನ್ನೆಲ್ಲ ಕರೆದು ಕೂರಿಸಿದ ಅಪ್ಪ ಮತ್ತು ಮನೆಯವರ ಎದುರಲ್ಲಿ ಮಗ ಸೋಲುತ್ತಾನೆ. ಆದರೆ ಸೋತರೂ ಅವಮಾನ ಆಗದೆ ಹಾಗೆ ತಾಯಿ ನೋಡಿಕೊಳ್ಳುತ್ತಾಳೆ. ಇನ್ನು ಅದರ ಕತೆ `ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ’ ಕತೆಯೂ ಸೋತವನನ್ನು ಷರತ್ತಿಲ್ಲದೆ ಸ್ವೀಕರಿಸುವ ಮನೋಭಾವವನ್ನು ಕುರಿತೇ ಬಂದಿದೆ. ಆದರೆ ಆ ಕಂಪೂಟರ್ ಸ್ಪರ್ಧಾತ್ಮಕ ಲೋಕ ನೋಡಿದರೆ ಅಲ್ಲಿ ಟರ್ಮೀನೇಷನ್ ಅಗಲು ಸದಾ ತಯಾರಾಗಿರಬೇಕು. ಷರತ್ತುಗಳಿಲ್ಲದೆ ಅಲ್ಲಿ ಏನೂ
ನಡೆಯುವುದಿಲ್ಲ.

ವಸುಧೇಂದ್ರರ ಬರಹಗಳು ತೋರಿಸುವ ಸಾಂಸ್ಕೃತಿಕ ಕಂದರಗಳಲ್ಲಿ ಭಾಷೆಯದೂ ಒಂದು. ಬಳ್ಳಾರಿ, ಬೆಂಗಳೂರು ಲೋಕಗಳು ಬೇರೆಯಾಗುವಂತೆ ಕನ್ನಡ ಮತ್ತು ಅದರ ಸಂಸ್ಕೃತಿಯು ಇಂಗಿಷ್ ಮತ್ತು ಅದರ ಸಂಸ್ಕೃತಿಯು ಜೊತೆಗೂಡದೇ ಹೋಗುತ್ತದೆ. ಇಂಗ್ಲಿಷ್ ಭಾಷೆಬಲ್ಲ ತಾಂತ್ರಿಕ ಪರಿಣತಿಗಳನ್ನು ಹೊಂದಿದ ವಿದ್ಯಾವಂತ ವರ್ಗ ಕೆನೆಪದರದಲ್ಲಿ ತಮ್ಮನ್ನು ಗುರುತಿಸಿಕೊಂಡು, ಸಮುದಾಯದಿಂದ ಬೇರೆಯಾಗುವುದನ್ನು ತೋರಿಸಿಕೂಳ್ಳುತ್ತಿವೆ. ಕನ್ನಡ ಭಾಷೆಯನ್ನು ಬಳಸುವ ವರ್ಗ ಅಷ್ಟೇನು ಸವಲತ್ತುಗಳನ್ನು ಹೊಂದಿಲ್ಲದೇ ಇರುವಂತದ್ದು. ಬಡತನದ ಆಥವಾ ಮಧ್ಯಮವರ್ಗಗಳಲ್ಲಿ ಬಳಕೆಯಲ್ಲಿರುವಂತದ್ದು. ಆರ್ಥಿಕ ಧೃಡತೆಯು ಇಂಗ್ಲಿಷ್ ಭಾಷೆಯ ಬಳಕೆಗೆ ಹೆಚ್ಚು ಪ್ರೇರಣೆಯಾಗಿದೆ. ಅಲ್ಲದೆ, ಇಂಗ್ಲಿಷ್ ವಿದೇಶಗಳಿಗೂ ಸಂಪರ್ಕ ಕಲ್ಪಿಸುವ ಅವಕಾಶಗಳನ್ನು ಕೊಡುವ ಭಾಷೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ನೆಚ್ಚಿ ಬದುಕಲು ಸಾಧ್ಯವೇ ಎಂಬ ಪ್ರಶ್ನೆಯನ್ನು ವಸುದೇಂದ್ರರ ಸಾಹಿತ್ಯ ನಮ್ಮ ಮುಂದಿಡುತ್ತಿದೆ.

ಇಲ್ಲಿ ಉದಾಹರಿಸಬಹುದಾದ ಕತೆಯೆಂದರೆ `ಯುಗಾದಿ’. ಕನ್ನಡ ಶಾಲೆಯ ಮಾಸ್ತರಾರರಾಗಿರುವ ಗೋಪಣ್ಣ ಅವರಿಗೂ ಅವರ ಸಾಫ್ತ್‍ವೇರ್ ಎಂಜಿನಿಯರ್ ಮಗನಿಗೂ ಉಂಟಾಗುವ ಅಂತರ ಸಂಸ್ಕೃತಿಯದು, ಮುಖ್ಯವಾಗಿ ಭಾಷೆಯಿಂದ ಉಂಟಾದ ಸಂಸ್ಕೃತಿಯದು. ನಿವೃತ್ತದಾಗಿರುವ ಗೋಪಣ್ಣ ಮಾಸ್ತರರು ಬಿಡುವಿನ ವೇಳೆಯಲ್ಲಿ ಪಾಠ ಹೇಳಿಕೊಡೋಣವೆಂದು ಹುಡುಕಾಡಿದರೆ, ಮಗ ಮನೆ ಮಾಡಿರುವ ಲೊಕಾಲಿಟಿಯಲ್ಲಿ ಯಾವ ತಂದೆ ತಾಯಿಗಳೂ ತಮ್ಮ ಮಕ್ಕಳನ್ನು ಕನ್ನಡದಲ್ಲಿ ಕಲಿಸಲು ಬಯಸುವುದಿಲ್ಲ. `ನೀವು ಯಾವುದಾದರೂ ಸ್ಲಂ ಏರಿಯಾ ಹುಡುಕಿಕೊಂಡು ಹೋದರೆ ಅಲ್ಲಿ ಸಾಮಾನ್ಯವಾಗಿ ಕನ್ನಡ ಶಾಲೆಗಳಿವೆ’ ಎಂದು ಮಾಸ್ತರರಿಗೆ ಹೇಳಿಕಳಿಸುತ್ತಾರೆ.
ಏರಿಯಾದ ಮಕ್ಕಳಿಗೆ ಚೈತ್ರ, ವೈಶಾಖ, ಕಲಿಸುವುದಕ್ಕೂ ಆಕ್ಷೇಪಿಸುವ ತಂದೆತಾಯಿಗಳು ಔಟ್‍ಡೇಟ್ ಆದ ವಿಷಯಗಳನ್ನು ಕಲಿಸುತ್ತಾರೆ ಎನ್ನುತ್ತಾರೆ.

“ಮಲ್ಟಿನೇಶನ್ ಕಂಪನಿನಾಗೆ ಕೆಲಸ ಮಾಡೋದು ಅಂದರೆ ಏನಂತ ಅಂದುಕೊಂಡಿ ನೀನು? ಕನ್ನಡ ಸಾಲಿ ಮಾಸ್ತರ್ ಕೆಲಸ ಅಂತ ಮಾಡೀ ಏನು?” ಎಂದು ಮಗ ತಂದೆಯನ್ನು ಹಂಗಿಸುತ್ತಾನೆ. ಆದರೆ ಅವನ ಆಪತ್ಕಾಲದಲ್ಲಿ. ನೆರವಾಗುವುದು ಕನ್ನಡ ಶಾಲೆಯಲ್ಲಿ ಮಾಸ್ತರರ ಕ್ಕೆಕೆಳಗೆ ಕಲಿತ ಒಬ್ಬ ಹುಡುಗಿಯಿಂದ. ಇದು ವಸುದೇಂದ್ರ ಸೃಷ್ಟಿಸುವ ಕಂದರಗಳು. ಇದು ರಮ್ಯ ಗ್ರಹಿಕೆಯೂ ಹೌದು. ಆದರೆ ಕತೆಗಾರನ ಒಟ್ಟು ಮನಃಸ್ಥಿತಿ ದ್ವಂದ್ವಗಳ ನಡುವಿನದ್ದು ಎಂದು ಅದು ತೋರಿಸುತ್ತಿದೆ.

`ಪರಾಧೀನ’ತೆಯ ವೆಂಕಣ್ಣನೂ ಕನ್ನಡದವನಾದುದರಿಂದಲೇ ಸೋಲು ಆನುಭವಿಸಬೇಕಾಗುತ್ತದೆ. ತಂತ್ರಜ್ಞಾನದ ಬಗ್ಗೆ ತನ್ನದೇ ಆದ ಕುತೂಹಲಗಳನ್ನಿಟ್ಟುಕೊಂಡ ವೆಂಕಣ್ಣ, ಮೆಕಾನಿಸಂಗಳನ್ನು ಸ್ವಂತ ತಿಳಿದುಕೊಂಡು ಮಾಡುವ ಆಶೆಯಿಂದ ಬೆಂಗಳೂರಿಗೆ ಪುಸ್ತಕ ಹುಡುಕಿಕೊಂಡು ಬರುತ್ತಾರೆ. ಅಂತೆಯೇ ಪುಸ್ತಕದಂಗಡಿಯಲ್ಲಿ ಹುಡುಕಾಡುತ್ತಿದ್ದಾರೆ. ಅವರ ಸಹಾಯಕ್ಕೆ ಬಂದ ಹುಡುಗ ಮುಖಕ್ಕೆ ಹೊಡೆದಂತೆ ಹೇಳುತ್ತಾನೆ; “ಅಂತಹ ಪುಸ್ತಕ ಕನ್ನಡದಾಗೆ ಸಿಗಲ್ಲ ಬಿಡ್ರಿ… ಬರೀ ಕತೆ, ಕಾವ್ಯ, ನಾಟಕ, ಕಾದಂಬರಿ ಪುಸ್ತಕಗಳು ರಾಶಿ ರಾಶಿ ಇವೆ. ಕನ್ನಡದಾಗೆ ಎಲ್ಲರೂ ಇಂಥ ಪುಸ್ತಕಾನೇ ಬರೆಯೋದು” ಎಂದು. `ಈಗ ಇ೦ಗ್ಲಿಷ್ ಕಲಿಯುವ ವಯಸ್ಸು ವೆಂಕಣ್ಣನದಲ್ಲ’ ಎಂದು ಲೇಖಕ ಹೇಳುವ ದನಿಯಲ್ಲಿ ವಿಷಾದ ಅಡಗಿದೆ ಎನ್ನಿಸುತ್ತದೆ. ಸುಲಲಿತವಾಗಿ ಪ್ರಬಂಧಗಳನ್ನು ಬರೆಯಲು ಕನ್ನಡ ಬಳಸುವ ವಸುದೇಂದ್ರರಿಗೆ, ಭಾಷೆ ಭಾವಾನಿರ್ಮಿತಿಯ ಪರಿಕರವಾಗಿದೆ. ಭಾಷೆಯಲ್ಲಿ ಉಂಟಾದ ಕಂದರಗಳು ಮುಖ್ಯವಾಗಿ ಆರ್ಥಿಕ ಸಬಲತೆಯಿಂದಲೇ ಅದವು ಎನ್ನುವುದನ್ನು ಅವರು ಸೂಚಿಸುವಂತಿದೆ.

`ರೂಡಿಯನ್ನು ಕಟ್ಟುವುದು ಕಷ್ಟ; ಮುರಿಯುವುದೂ ಇನ್ನೂ ಕಷ್ಟ; ಮರೆಯುವುದಂತೂ ಇನ್ನೂ ಕಷ್ಟ!’- ಇದು ವಸುಧೇಂದ್ರ ಬಳಸುವ ಸಾಲು. ಅವರ ಬಹುಪಾಲು ಪ್ರಬಂಧಗಳು ಇದ್ದ ರೂಢಿಯನ್ನು ಬಿಡಲಾರದೆ, ಹೊಸದಕ್ಕೆ ಹೊಂದಿಕೊಳ್ಳಲಾರದೆ ಇರುವ ಇಬ್ಬಂದಿತನದ ಭಾವವನ್ನು ನವಿರಾಗಿ ಸೂಚಿಸುತ್ತದೆ. ಹಳೆಯ ರೂಢಿಗಳಿಂದ ಬಿಡಿಸಿಕೊಂಡು ಹೊಸ ರೂಢಿಗಳ ನಿರ್ಮಾಣ ಹಂತದಲ್ಲಿರುವ ಸಮಾಜವನ್ನು ಕಾಣುವ ಅವರಲ್ಲಿ ಬದಲಾವಣೆಯ ಆಶಯಗಳು ಒತ್ತಾಸೆಯಾಗಿ ಬರುವುದಿಲ್ಲ. ಸಾಮಾಜಿಕ ಕ್ರೌರ್ಯಗಳನ್ನು ವರ್ಣಿಸಬಲ್ಲ ಚತುರತೆ ಇರುವ ಲೇಖಕನಿಗೆ, ಮೂರ್ತಸ್ವರೂಪದಲ್ಲಿರುವ ಮೌಢ್ಯ, ಆಚರಣೆಗಳ ಕ್ರೌರ್ಯ ಮುಂತಾದವುಗಳ ಅಮೂರ್ತನೆಲೆಗಳಿಗೆ ನುಗ್ಗಿ, ವಿಶ್ಲೇಷಿಸುವ ಗುಣದ ಕೊರತೆಯಿದೆ. ವಸುದೇಂಧ್ರರ ಕತೆ/ಪ್ರಬಂಧಗಳು ಬಿಟ್ಟುಕೊಡುವ ಮಡಿಹೆಂಗಸರ ಸಾಮಾಜಿಕ ಆಚರಣೆಗಳ ಕ್ರೌರ್ಯ, ಅನಿಷ್ಟ ಪರಂಪರೆಗಳನ್ನು ಪೋಷಿಸುವ ಪರಂಪರೆಯ ಇರವು ತಮ್ಮ, ಮೂಲಸ್ವರೂಪಗಳ ಭೀಕರತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಹೊರಗೆಳೆಯುವುದಿಲ್ಲ. ಇಂಗ್ಲಿಷ್ ಶಿಕ್ಷಣ ಪಡೆಯುವ ಆರಂಭದ ಕಾಲದಲ್ಲಿದ್ದ `ಹೊರಗಿಡುವ’ ಬಹಿಷ್ಕಾರಗಳು ವಸುದೇಂದ್ರರ ಕತೆಗಳಲ್ಲಿ ಮುಂದುವರೆದಿವೆ. `ನಮ್ ವಾಜೀನೂ ಆಟಕ್ಕೆ ಕರಕೊಳ್ರೇ’ ಕತೆಯನ್ನೇ ತೆಗೆದುಕೊಳ್ಳೋಣ. ವಾಜಿಯೆಂಬ ಹುಡುಗನಿಗೆ ತೊನ್ನು ಹತ್ತಿದ್ದು, ಅವನನ್ನು ಮಡಿ ಕೆಲಸಕ್ಕೆ ಹೊರತುಪಡಿಸಲಾಗಿದೆ. ಅವನ ತಾಯಿಗೆ ಹೇಗಾದರೂ ಮಾಡಿ, ತನ್ನ ಮಗನನ್ನು ಆ ಕೆಲಸಕ್ಕೆ ಕಳಿಸಿ, ಅವನೂ ಗುಂಪಿನಲ್ಲಿ ಭಾಗಿಯಾಗುವಂತೆ ಮಾಡಬೇಕು ಎನ್ನುವ ಆಸೆ, ಹಠ. ಆದರೆ ಆಕೆಯ ಅಣ್ಣ ಆತ್ತಿಗೆಯರೇ ಈ ವಿಷಯದಲ್ಲಿ ಅವಳ ವಿರುದ್ಧ ಇದ್ದಾರೆ. ವಸುದೇಂದ್ರರ ಕತೆಗಳಲ್ಲೇ ಮೆಚ್ಚುಗೆ ಪಡೆದಂತಹ ಕತೆಯೆಂದು ಈ ಕತೆಯನ್ನು ಗುರುತಿಸಲಾಗುತ್ತದೆ. ಆದರೆ ವ್ಯವಸ್ಥೆಯ ಒಳಸುಳಿಗಳನ್ನು ಅರಿಯುವ, ಆದನ್ನು ಬದಲಾಯಿಸುವ ಆಶೆಯಗಳನ್ನು ಹೊಂದಿರದ ಕಥೆಯಾಗಿ ಮಾತ್ರ ನಿಲ್ಲುತ್ತದೆ ಅದು.

ಬದಲಾದ ಸಾಮಾಜಿಕ ಸ್ಥಿತ್ಯಂತರಗಳು ಬ್ರಾಹ್ಮಣ ಸಮಾಜದ ಮಡಿವಂತಿಕೆಯನ್ನು ಬಿಗಿಹಿಡಿದವೆಂದು ನೋಡುತ್ತಿಲ್ಲ. ಜಾತಿಯತೆಯ ಸ್ವರೂಪಗಳು ಹಳೆಯ ಸುಧಾರಣಾ ಮಾದರಿಗಳಿಗೆ ಒಗ್ಗುವ ಹಂತದಲ್ಲಿ ಉಳಿದಿಲ್ಲ. ವಸುದೇಂದ್ರ ಕಾಣುವ ಹತ್ತಿಪ್ಪತ್ತು ವರ್ಷಗಳ ಹಳೆಯ ಕಾಲದ ಸಮಾಜಕ್ಕು ಇಂದಿನ ವರ್ತಮಾನದಲ್ಲಿ ಬದುಕುತ್ತಿರುವ ಸಮಾಜಕ್ಕು ವ್ಯತ್ಯಾಸಗಳಿವೆ. ಅವುಗಳಿಗೆ ತಮ್ಮದೇ ಆದ ಕಾಲದ ಸಮಸ್ಯೆಗಳಿವೆ. ಗೋಪಣ್ಣ ಮಾಸ್ತರರು ಸೊಸೆ ಚಿಕನ್ ಮಾಡಿಕೊಳ್ಳುವೆ ಎಂದಾಗ ಬೇರೆ ಪಾತ್ರೆಯಿಡು ಎಂದು ಹೇಳಬಲ್ಲರು. ಮಡಿಹೆಂಗಸು `ಮಡಿ’ಯಾಗದೇ ಉಳಿಯಬಹುದೆಂಬ ನೀತಿಯನ್ನು ಸ್ವೀಕರಿಸಿದಂತಿದ್ದಾರೆ. ಆಚರಣೆಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ವರ್ಗಸೃಷ್ಟಿ ಯಾಗುತ್ತಿದೆ. ಇವು ಸಾಮಾಜಿಕ ಬದಲಾವಣೆಗಳೆಂದು ಗುರುತಿಸಬಹುದಾದರೂ, ಜಾತೀಯತೆ ಬೇರೆ ಬೇರೆ ಸ್ವರೂಪದಲ್ಲಿ ಆಚರಣೆಗೆ ಬರುತ್ತಿರುವುದನ್ನು ಲೇಖಕ ಗಮನಿಸಿದಂತೆ ಕಾಣುವುದಿಲ್ಲ. ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿಯ ವಿನಾಶಗಳಲ್ಲಿರುವ ಜಾತೀಯತೆಯನ್ನು ಕಾಣುವುದು ವಸುದೇಂದ್ರರಿಗೆ ಸಾಧ್ಯವಾಗಿಲ್ಲ. ಇದನ್ನೇ ನಾನು ಆರಂಭದಲ್ಲಿ ಬಿರುಕು ಎಂದು ಗುರುತಿಸಿದ್ದು.

ಅನಂತಮೂರ್ತಿಯವರ `ಕ್ಲಿಪ್ ಜಾಯಿಂಟ್’ ಕತೆಯು ಸಂಸ್ಕೃತಿಯ ಮುಖಾಮುಖಿಯ ಧೋರಣೆಗಳನ್ನು ತೆರೆದಿಡುತ್ತದೆ. ಈ ರೀತಿ ಎರಡು ಭಿನ್ನ ಸಂಸ್ಕೃತಿಗಳ ಪರಾಮರ್ಶೆಗಳನ್ನು ಮಾಡುವ ಅನೇಕ ಕತೆಗಳನ್ನು ವಸುಧೇಂದ್ರರಲ್ಲಿಯೂ ಕಾಣಬಹದು. ಅನಂತಮೂರ್ತಿಯವರು ಎತ್ತುವ ಪ್ರಶ್ನೆ ತಾತ್ವಿಕ ಸ್ವರೂಪದಲ್ಲಿದ್ದರೆ, ವಸುದೇಂದ್ರರಲ್ಲಿ ಆವು ಸಾಫ್ಟ್‍ವೇರ್‌ನ ಲೋಕದ ಹುಳುಕುಗಳನ್ನು ಹೋಲಿಸಿ ನೋಡುವುದರ ಹಂತದಲ್ಲಿ ನಿಲ್ಲುತ್ತವೆ. ನವವಸಾಹತುಶಾಹಿ ಧೋರಣೆಗಳನ್ನು ಕುರಿತು ಒಂದು ತಾತ್ವಿಕ ನಿಲುವು ಇಲ್ಲದಿರುವುದು ಅನ್ವೇಷಣೆಯ ಕೊರತೆಯಂತೆ ಕಾಣುತ್ತದೆ. ವ್ಯವಸ್ಥೆಯ ಭಾಗವಾಗಿದ್ದುಕೊಂಡು ಇಬ್ಬಂದಿತನದ ಭಾವ ಅನುಭವಿಸುವುದು ಒಳತೋಟಿಗಳಾಗುವುದಿಲ್ಲ. ನಾಜೂಕಿನ ಕ್ರೌರ್ಯ, ಉಪಭೋಗ ಸಂಸ್ಕೃತಿಗಳು ಸೃಷ್ಟಿಸುವ ನಿರ್ಮಾನುಷತ್ವದ ಅರಿವು ಇಲ್ಲಿ ತೀವ್ರತೆಯಿಂದ ಪ್ರತಿಪಾದಿಸಲ್ಪಡುವುದೇ ಇಲ್ಲ. ಕಥೆಗಾರನಾಗಿ ಭಾವಿಸಿ ಬರೆದಾಗ ಉಂಟಾಗುವ ತೀವ್ರತೆಯ ಕೊರತೆ ಇಲ್ಲಿ ಸ್ವಲ್ಪಮಟ್ಟಿಗೆ ಕಾಡುತ್ತದೆ. ಈ ಕಾರಣದಿಂದಲೇನೋ ಅವರ ಕತೆಗಳು ರಂಜಿಸುತ್ತವೆ; ಹಳೆನೆನಪುಗಳಿಗೆ ತೆರಳಿ ನಮ್ಮನ್ನು ಮುದಗೊಳಿಸುತ್ತವೆ, ಈ ಲೋಕದ ಎದುರಿಗಿರುವ ಅರ್ಥಸಾಫಲ್ಯದ ಜಗತ್ತಿನ ಕ್ರೌರ್ಯಗಳನ್ನು ಖಂಡಿಸುತ್ತವೆ, ಆದರು ಅವುಗಳಲ್ಲಿರುವ ಒಂದು ಧ್ವಂದ್ವವಿನಾಸ, ಸಮಾಜಗಳಲ್ಲಿಯೇ ಉಂಟಾದ ಕಂದರಗಳು. ಭಾಷೆಯ ಕಾರಣದಿಂದಲೂ ಉಂಟಾದ ಕಂದರಗಳು. ಅವುಗಳ ಮೇಲೆ ಬರೆಯುವ ಬರಹಗಾರ ಯಾವ ಸಮಾಜಕ್ಕೆ ನಿಷ್ಠನಾಗಿ, ಯಾವ ಮೌಲ್ಯಕ್ಕೆ ತಲೆಬಾಗಬೇಕು ಎಂಬ ದ್ವಂದ್ವವನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಹೇಳುವಂತಿವೆ.

ಆಧುನಿಕೋತ್ತರದ ಸಾಹಿತ್ಕದ ಕಲ್ಪನೆಗಳಲ್ಲಿ `ಸಾಹಿತ್ಮಿಕ’ (literaryness) ಎನ್ನುವುದೇನೊ ಇಲ್ಲ. ಅದರಂತೆ ಬರೆದುದೆಲ್ಲವನ್ನು ಕಥಾನಕಗಳಾಗಿ ಮಾಡುವ ಕೌಶಲವನ್ನು ವಸುಧೇಂದ್ರ ಸಾಧಿಸುತ್ತಾರೆ. ಆದರೆ ಸಾಹಿತ್ಯವನ್ನು ಎಲ್ಲರಿಗು ಮುಟ್ಟಿಸುವಂತೆ ಬರೆಯುವ ಅವರಿಗೆ ತಾತ್ವಿಕ ಖಚಿತ ಸ್ವರೂಪಗಳಿಲ್ಲದಿರುವುದು, ಅವರ ಕತೆಗಳನ್ನು ರಂಜನೆಗೆ, ನೆನಪುಗಳನ್ನು ಮೆಲುಕು ಹಾಕುವ ಸಾಹಿತ್ಯಕ್ಕೆ ಸೀಮಿತಗೊಳಿಸಿಬಿಟ್ಟಿರುಂತೆ ನನಗೆ ಕಾಣುತ್ತದೆ. `ಸ್ಟೇನ್‍ಲೆಸ್ ಸ್ಟೀಲ್‍ಪಾತ್ರೆಗಳು’ ಎಂಬ ಪ್ರಬಂಧದಲ್ಲಿ ಸೂಚಿಸುವ ಸಾಮಾಜಿಕ ಬದಲಾವಣೆಯ ಕಾಲವನ್ನು ಮುಖ್ಯವಾಗಿ ಅನುಭವಿಸಿದ್ದು ಯಾವ ಮಧ್ಯಮವರ್ಗ ಎಂಬ ಅವರನ್ನು ಕಾಡುವಂತಾಗಬೇಕಲ್ಲವೆ? ಭಿನ್ನತೆಯನ್ನು ಗುರುತಿಸುವ ಅವರ ಬರಹಗಾರನ ಮನಸ್ಸು ಸೂಕ್ಷ್ಮ ಸಂಗತಿಗಳನ್ನು ಹೊಳೆಯಿಸುವಂತಾದರೆ ಅವರ ಬರಹದ ವ್ಯಾಪ್ತಿ ಹೆಚ್ಚು ವಿಸ್ತೃತತೆಯನ್ನು ಪಡೆಯುತ್ತದೆ ಎಂಬ ಆಶಯ ನನ್ನದು.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂಥಾ ಮೋಜಿನ ಕುದರಿ
Next post ಸದ್ಗುರು ಸಾಕಿದ ಮದ್ದಾನಿ ಬರುತಲಿದೆ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…