ಚಿತ್ರ: ಪಾಲ್ ಕ್ಲೀನ್
ಚಿತ್ರ: ಪಾಲ್ ಕ್ಲೀನ್

ಇದ್ದಕ್ಕಿದ್ದಂತೆ ಆ ದಿನ ಭೂಮಿ,

“ಕಡಲೆ… ಓ ಕಡಲೆ…” ಎಂದು ಕೂಗಿತು.

ಮೊರೆತ ನಿಲ್ಲಿಸಿದ ಕಡಲು “ಏನು?” ಎಂದಿತು.

“ಜನರು ಮಾತಾಡಿಕೊಳ್ಳುತ್ತಿರುವುದು ನಿಜವೆ?”

“ಅದೇನು ಮಾತಾಡಿಕೊಳ್ಳುತ್ತಿದ್ದಾರೆ?”

“ಆ ದೊಡ್ಡ ತಿಮಿಂಗಿಲು ನಿನ್ನೆ ಒಂದು ಹಡಗನ್ನೇ ನುಂಗಿತೆಂದು ಹೇಳುತ್ತಿದ್ದಾರೆ!”

“ನುಂಗಿರಬಹುದು ಅದರಲ್ಲಿ ಅಚ್ಚರಿಯೇನು?”

“ಹಡಗಿನಲ್ಲಿದ್ದ ವಸ್ತು, ಆಹಾರ ಪದಾರ್ಥಗಳು ತಿಮಿಂಗಿಲಿನ ಉದರ ಸೇರಿತಂತೆ”

“ಅದರ ಹೊಟ್ಟೆಯ ಆಕಾರವೇ ಅಂತಹದ್ದು”

“ಜೊತೆಗೆ ಹತ್ತಾರು ಮನುಷ್ಯರನ್ನೂ ಕಬಳಿಸಿಬಿಟ್ಟಿದೆ” ಪಾಪ ಎನ್ನುವಂತೆ ಮಿಡುಕಾಡಿತು ಭೂಮಿ.

“ಎಲ್ಲ ನುಂಗುವುದು ತಿಮಿಂಗಿಲಿನ ಸಹಜ ಸ್ವಭಾವ.  ಆ ಬಗ್ಗೆ ಇಷ್ಟೇಕೆ ಮಿಡುಕಾಡುವುದು?”

“ಇದರಿಂದ ನಿನಗೆ ಏನೂ ಅನ್ನಿಸುವುದಿಲ್ಲವೆ?”

“ಈ ಹಿಂದೆ ತಿಮಿಂಗಿಲ ಹಡಗಿನಲ್ಲಿರುವ ವಸ್ತು ಮತ್ತು ಮನುಷ್ಯರನ್ನು ನುಂಗುತ್ತಲೇ ಬಂದಿರುವುದನ್ನು ನಾನು ನೋಡುತ್ತಲೇ ಇದ್ದೇನೆ.  ಆದರೆ ಈಗ ಅದಕ್ಕೆ ಹಡಗು ಆಹುತಿಯಾಗಿದೆ ಅಷ್ಟ.”

“ಇದನ್ನು ನೀನು ಹೆಮ್ಮೆಯಿಂದ ಹೇಳುತ್ತಿರುವೆ”

“ನನಗೇನು ಹಾಗೆ ಅನಿಸುವುದಿಲ್ಲ”

“ನಾಚಿಕೆ ಬರಬೇಕು ನಿನಗೆ”

“ಏಕೆ?”

“ಇಂಥ ಭ್ರಷ್ಟ ತಿಮಿಂಗಲವನ್ನು ನಿನ್ನ ಒಡಲೊಳಗೆ ಇಟ್ಟಕೊಂಡು ಪೋಷಿಸುತ್ತಿರವುದಕ್ಕೆ.”

ಭೂಮಿಯ ಈ ಅಸಹನೆಯ ಮಾತು ಕೇಳಿ ಕಡಲು ನಕ್ಕಿತು.  ಅ ನಗೆಯ ನಿನಾದ ಅಲೆಅಲೆಯಾಗಿ ಬೆರೆತು ಗಾಳಿಯೊಂದಿಗೆ ಬಲಿತು ದಡಕ್ಕೆ ಬಂದು ಅಪ್ಪಳಿಸಿತು.  ಮತ್ತು ಅದು ಎಲ್ಲೆಲ್ಲೂ ಪ್ರತಿಧ್ವನಿಸಿತು.  ಕಡಲ ನಗೆ ಕಂಡು ಭೂಮಿಯ ಸಿಟ್ಟು ಸ್ಪೋಟಿಸಿ.

“ನಿನಗೇನು ಹುಚ್ಚು ಹಿಡಿಯಿತೆ?” ಎಂದು ಪ್ರಶ್ನಿಸಿತು.

“ಹುಚ್ಚಲ್ಲ, ನಿನ್ನ ಪೆದ್ದುತನ ಕಂಡು ನನಗೆ ಈ ಪರಿ ನಗು ಬಂತು” ನಗೆ ನಿಲ್ಲಿಸಿ ಹೇಳಿತು ಕಡಲು.

“ನನ್ನದೇನು ಪೆದ್ದತನ?”

“ಅದಕ್ಕೆ ನಿನ್ನ ಮಾತೆ ಸಾಕ್ಷಿ ಇದೆಯಲ್ಲ”

“ನಾನೇನು ಸುಳ್ಳು ಹೇಳಿರುವೆನೆ?”

“ಇದ್ದಲಿ ಮಸಿಗೆ ಬುದ್ಧಿ ಹೇಳಿದಂತಾಯಿತು ನಿನ್ನ ವರ್ತನೆ” ಮತ್ತೆ ನಕ್ಕು ಹೇಳಿತು ಕಡಲು.

“ನೀನು ಹೀಗೆ ಒಗಟಾಗಿ ಮಾತಾಡಬೇಡ.  ಏನಿದ್ದರೂ ನನ್ನಂತೆ ನೇರವಾಗಿ ಹೇಳು” ವ್ಯಗ್ರಗೊಂಡು ನುಡಿಯಿತು ಭೂಮಿ.

“ಹೇಳುತ್ತೇನೆ, ತಾಳ್ಮೆಯಿಂದ ಕೇಳು.  ನಾನು ತಿಮಿಂಗಿಲವನ್ನು ಪೋಷಿಸುತ್ತೇನೆ ನಿಜ.  ಆ ತಿಮಿಂಗಿಲ ಹಡಗು ನುಂಗಿರುವುದು, ಮನುಷ್ಯರನ್ನು ಕಬಳಿಸಿರುವುದು ನಿಜವೇ.  ಆದರೆ… ಮನುಷ್ಯರು…!

“ಮನುಷ್ಯರೇನು?…  ಹೇಳು… ಮತ್ತೇಕೆ ಈ ಕೌತುಕ?”

“ಮನುಷ್ಯರು ದೇಶದ ಸಂಪತ್ತನ್ನು ಮುಕ್ಕುತ್ತಿದ್ದಾರೆ.  ಕೋಟಿಗಟ್ಟಲೆ ಹಣ ನುಂಗುತ್ತಿದ್ದಾರೆ.  ಅವರ ಭ್ರಷ್ಟತನ ತಿಮಿಂಗಿಲಿನ ದಾಹವನ್ನು ಮೀರಿಸುವುದು.  ಅಂಥ ಭ್ರಷ್ಟರನ್ನು ನೀನು ಮಡಿಲಲ್ಲಿ ಹಾಯಾಗಿಟ್ಟುಕೊಂಡಿರುವೆಯಲ್ಲ.  ಇದಕ್ಕೇನು ಹೇಳುತ್ತಿ?”

ಕಡಲಿನ ಪ್ರಶ್ನೆ ಅಲಗಿನ ಮೊನೆಯಂತೆ ಇತ್ತು.  ಅದು ನೇರವಾಗಿ ಭೂಮಿಯ ಒಳಮನಸ್ಸಿಗೆ ನೆಟ್ಟು, ತೀವ್ರ ಆಘಾತವನ್ನುಂಟು ಮಾಡಿತು.

ಭೂಮಿಯ ಕಣ್ಣೆದುರು ಮನುಷ್ಯ ದಾಹದ ನೂರಾರು ಚಿತ್ರಗಳು ದಟ್ಟವಾಗಿ ವಿಜೃಂಭಿಸಿದವು.  ಈಗ ಮನುಷ್ಯರ ಪರ ವಹಿಸಿ ಮಾತಾಡುವ ಸ್ಥೈರ್ಯ ಭೂಮಿಗೆ ಇಲ್ಲದಾಗಿ ನಾಚಿ ತಲೆ ತಗ್ಗಿಸಿತು.

ಗೆಲುವಾದ ಕಡಲು.

“ತಲೆ ಏಕೆ ತಗ್ಗಿಸುತ್ತಿ?  ನಿನ್ನ ಮಡಿಲ ನೀಚ ಮನುಷ್ಯರ ಕಥೆಯನ್ನು ಇನ್ನಷ್ಟು ಹೇಳುತ್ತೇನೆ ಕೇಳು.  ಅವರು ಮರ್ಯಾದೆ ಪೋಷಾಕಿನಲ್ಲಿ ಎಲ್ಲವನ್ನೂ ಕಬಳಿಸುವ ಹೆಗ್ಗಣ… ಕುಕ್ಕಿ ಕುಕ್ಕಿ ತಿನ್ನುವ ರಣಹದ್ದುಗಳನ್ನು ಮೀರಿಸಿದ್ದಾರೆಂದು ನಿನಗೆ ಗೊತ್ತಿಲ್ಲವೆ?  ಅಲ್ಲಿ ನೋಡು, ನಿನ್ನೆ ಹಡಗು ನುಂಗಿದ ತಿಮಿಂಗಿಲ ದಂಡೆಯ ಬದಿಗೆ ಸತ್ತು ಬಿದ್ದಿದೆ.  ಅದರ ಸುತ್ತ ಎಷ್ಟು ಜನರು ನೆರೆದಿದ್ದಾರೆ.  ಕೆಲವರು ಅದರ ಮಾಂಸಾಪೇಕ್ಷೆಯಿಂದ ಜೊಲ್ಲು ಸುರಿಸುತ್ತಿದ್ದಾರೆ.  ಮತ್ತೆ ಕೆಲವರು ತಿಮಿಂಗಿಲಿನ ಒಡಲಿನಲ್ಲಿ ಸಿಕ್ಕಬಹುದಾದ ಬೆಲೆಬಾಳುವ ವಸ್ತುಗಳಿಗಾಗಿ ಕಣ್ಣುರೆಪ್ಪೆ ಪಿಳುಕಿಸದೆ ನಿಂತಿದ್ದಾರೆ.”

ಭೂಮಿ ತುಸು ಮುಖವೆತ್ತಿ ಅತ್ತ ನೋಡಿತು.  ನೋಡಲಾಗದೆ ಕಣ್ಣುಮುಚ್ಚಿತು.

ಈಗ ಕಡಲು “ನನ್ನೊಡಲ ಮೀನು, ತಿಮಿಂಗಿಲ ಸತ್ತರೂ ಮನುಷ್ಯರ ದಾಹ ಹಿಂಗಿಸಿ ಸಾರ್ಥಕಗೊಳ್ಳುತ್ತವೆ.  ಆದರೆ ನಿನ್ನ ಮಡಿಲ ಮನುಷ್ಯರ ದಾಹದ ಬಗ್ಗೆ ಮಾತಾಡಲು ನನಗೆ ಹೇಸಿಗೆ ಅನಿಸುವುದು.”  ವಿಷಾದದಲ್ಲಿ ಉಲಿಯಿತು ಕಡಲು,  ಆ ಉಲಿತ ಕಡಲ ಮೊರೆತದಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸಿತು.  ಭೂಮಿ ಈಗ ಕಿವಿ ಮುಚ್ಚಿಕೊಂಡಿತು.

*****

Latest posts by ಅಬ್ಬಾಸ್ ಮೇಲಿನಮನಿ (see all)