ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಬೇಂದ್ರೆ ವಿಮರ್ಶೆಗೆ ನಾಲ್ಕು ಮಾತು

ಕನ್ನಡ ವಿಮರ್ಶೆಯಲ್ಲಿ ಬೇಂದ್ರೆಯವರದು ಸೋಜಿಗದ ಹೆಸರು. ಇವರ ವಿಮರ್ಶಾ ಕ್ಷೇತ್ರ ಯಾವುದೇ ನಿರ್ದಿಷ್ಟ ಸೈದ್ಧಾಂತಿಕತೆಗಳಿಂದ ಮುಕ್ತವಾದ ‘ದೇಸೀ ವನ’. ಇಲ್ಲಿಯ ಮಾತುಗಳಲ್ಲಿ ಗಾಂಭಿರ್ಯವಿಲ್ಲ; ಆಪ್ತತೆ ಇದೆ. ಸರಳತೆಯಲ್ಲಿ ಮಾಂತ್ರಿಕತೆ ಇದೆ. ಇಂತಹ ಗದ್ಯವೂ ಕಾವ್ಯಮಯವಾಗಿ ಮಾರ್ಪಟ್ಟು ಗದ್ಯಕಾವ್ಯ ಎನಿಸುತ್ತದೆ. ಇಲ್ಲಿ ಯಾರೊಬ್ಬರೂ ಪ್ರವೇಶಿಸಬಹುದಾಗಿದೆ. ಅದಕ್ಕೆ ಯಾವುದೇ ಬಗೆಯ ಡಿಗ್ರಿಗಳು ಬೇಕಾಗಿಲ್ಲ. ಹಾಗೆ ಮಾತನಾಡುವ ಬೇಂದ್ರೆಯವರು ಸಾಮಾನ್ಯ ಸಹೃದಯರೊಂದಿಗೂ ಸಂವಾದಿಸಬಲ್ಲರು. ಈ ಮೂಲಕ ಅವರನ್ನು ತಮ್ಮೊಳಕ್ಕೆ ಕರೆದೊಯ್ಯಬಲ್ಲರು. ಇಂತಹ ವಿಶಿಷ್ಟತೆಯನ್ನು ಒಳಗೊಂಡದ್ದು ಇವರ ವಿಮರ್ಶೆ. ಆದ್ದರಿಂದಲೇ ನವೋದಯದ ಭಿನ್ನ ಧ್ವನಿಗಳಲ್ಲಿ ಇವರದೂ ಒಂದು ವಿಶಿಷ್ಟವೆನಿಸುವುದು.

ಬೇಂದ್ರೆಯವರ ಸಂಶೋಧನ ಬರಹಗಳನ್ನು ಹೊರತುಪಡಿಸಿದ ವಿಮರ್ಶೆಯನ್ನು ಒಟ್ಟಂದದಲ್ಲಿ ಗ್ರಹಿಸಿದಾಗ ಅವರ ಆಸಕ್ತಿ ಪ್ರಮುಖವಾಗಿ ಎರಡು ನೆಲೆಗಳಲ್ಲಿ ಬೇರು ಬಿಟ್ಟಿರುವುದು ತಿಳಿಯುತ್ತದೆ. ಮೊದಲನೆಯದು ದೇಸೀ ಪ್ರಧಾನ ಶಿಷ್ಟ ಸಾಹಿತ್ಯ; ಎರಡನೆಯದು ಜನಪದ ಸಾಹಿತ್ಯ.

ಸಾಧನಕೇರಿಯ ಬೇಂದ್ರೆಯವರು ಕನ್ನಡ ಸಾಹಿತ್ಯದ ವಿವಿಧ ಕೇರಿಗಳಲ್ಲಿ ಬಹಳ ಖಾಸಗಿಯಾಗಿ ಸಿಗುವ ಕೀರ್ತನೆಕಾರರು, ತತ್ವಪದಕಾರರು, ವಚನಕಾರರು, ದೇಸೀ ಸಾಹಿತ್ಯದ ಕರ್ತೃಗಳು-ಇವರನ್ನು ವಿಶೇಷವಾಗಿ ಪ್ರೀತಿಸುತ್ತಾರೆ. ಇವರೊಂದಿಗೆ ಸಂವಾದಿಸುತ್ತಾರೆ. ಅದನ್ನು ಗದ್ಯದಲ್ಲಿ ಇಳಿಬಿಡುತ್ತಾರೆ. ಇದಕ್ಕೆ ಪ್ರಾತಿನಿಧಿಕವಾಗಿ ಅಲ್ಲಮ, ಬಸವಣ್ಣ, ಲಕ್ಷ್ಮೀಶ, ಚಾಮರಸ ಮೊದಲಾದವರ ಬಗೆಗೆ ಮಾಡಿರುವ ವಿಮರ್ಶೆಗಳನ್ನು ಗುರುತಿಸಬಹುದು. ಅದರಲ್ಲೊಂದು-‘ಅಲ್ಲಮಪ್ರಭು-ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಲೇಖನವನ್ನು ಸ್ವಲ್ಪಮಟ್ಟಿಗೆ ಉದಾಹರಿಸಬಹುದು.

ಈ ವಿಮರ್ಶೆ ಅಲ್ಲಮನ ವಚನಗಳಿಂದ ಮೂಲಭೂತವಾಗಿ ಆಕರ್ಷಿತರಾದ ಬೇಂದ್ರೆಯವರು ಅಂತಿಮವಾಗಿ ಚಾಮರಸನ ‘ಪ್ರಭುಲಿಂಗಲೀಲೆ’ ಮತ್ತು ‘ಶೂನ್ಯ ಸಂಪಾದನೆ’ಯನ್ನು ಆಧರಿಸಿ ಬರೆದದ್ದಾಗಿದೆ.

ಅಲ್ಲಮಪ್ರಭು ಈ ಎರಡು ಕಾವ್ಯಗಳಲ್ಲಿ ಅಲೌಕಿಕವಾದ ದಿಗ್ವಿಜಯವನ್ನು ಕೈಗೊಳ್ಳುತ್ತಾನೆ. ಅದಕ್ಕೆ ಅಸ್ತ್ರ ತನ್ನ ಮಾತೆಂಬ ಜ್ಯೋತಿರ್ಲಿಂಗ. ಇದಕ್ಕೆ ಗೊಗ್ಗಯ್ಯ, ಸಿದ್ಧರಾಮ, ಮರುಳ ಶಂಕರದೇವ, ಗೋರಕ್ಷ ಮೊದಲಾದವರು ಸೋಲುತ್ತಾರೆ. ಇಂತಹ ಸಾತ್ವಿಕ ದಿಗ್ವಿಜಯದ ಬಹುತೇಕ ಕೊನೆಯ ಭಾಗದಲ್ಲಿ ಬಸವಣ್ಣನು ರಚಿಸುವ ಶೂನ್ಯ ಸಿಂಹಾಸವನ್ನು ಏರುತ್ತಾನೆ.

ಹೀಗೆ ಅಲ್ಲಮನ ಸಾತ್ವಿಕ ದಿಗ್ವಿಜಯವನ್ನು ಪ್ರಸ್ತಾಪಿಸುತ್ತಾ ಅದರೊಂದಿಗೆ ಭರತನ ಲೌಕಿಕ ದಿಗ್ವಿಜಯವನ್ನೂ ತೌಲನಿಕವಾಗಿ ತರುತ್ತಾರೆ. ಆದರೆ ಈ ಎರಡರಲ್ಲಿ ತಮ್ಮ ಒಲವು ಅಲ್ಲಮನ ಅಲೌಕಿಕ ದಿಗ್ವಿಜಯದ ಪರವಾಗಿಯೇ ಇದೆ. ಅದಕ್ಕೆ ಕಾರಣ-ಚಾಮರಸನ ಅಲ್ಲಮನ ವ್ಯಕ್ತಿತ್ವದಲ್ಲಿ ಶೃಂಗಾರವಿಲ್ಲ; ಈತ ಮಾಯೆಗೆ ಸೋಲುವುದಿಲ್ಲ; ಗೆಲ್ಲುತ್ತಾನೆ. ಹೀಗಾಗಿ ಇವನ ಪಾತ್ರಕ್ಕೆ ಒಂದು ಬಗೆಯ ಗಾಂಭಿರ್ಯವಿದೆ, ಉದಾತ್ತತೆ ಇದೆ. ಈತ ಪ್ರಕಾಶಧಾರಿ. ಆದ್ದರಿಂದ ಇವನ ಮಾತುಗಳು ಜ್ಯೋತಿ ಸದೃಶವಾದವು. ಈ ಹಿನ್ನೆಲೆಯಲ್ಲಿ ಈತ ಅವತಾರ ಪುರುಷನೇ ಸರಿ.

ಹೀಗೆ ಬೇಂದ್ರೆಯವರ ದೃಷ್ಟಿಯಲ್ಲಿ ಅಲ್ಲಮನು ‘ಹೀರೋ’ ಆಗಿ ಕಾಣುತ್ತಾನೆ. ಆದ್ದರಿಂದ ಅವನನ್ನು ಕುರಿತು ಮಾತನಾಡುವಾಗ ಉತ್ಸಾಹವನ್ನು ತೋರುತ್ತಾರೆ. ಅದಕ್ಕೆ ಕಾವ್ಯಾತ್ಮಕವಾದ ಭಾಷೆಯನ್ನು ಬಳಸಿ ಸೋಪಜ್ಞತೆಯನ್ನು ಮೆರೆದು ಕರಗುವ ಮೇಣವಾಗುತ್ತಾರೆ.

ಹೀಗೆ ದೇಸೀ ಸಾಹಿತ್ಯದ ವಕ್ತಾರನಾದ ಅಲ್ಲಮನ ಬಗೆಗೆ ತೋರಿದ ಆಪ್ತತೆಯನ್ನು ಬಸವಣ್ಣ, ಲಕ್ಷ್ಮೀಶ ಮೊದಲಾದವರ ವಿಚಾರದಲ್ಲಿ ತೋರುತ್ತಾರೆ.

ಇದು ಬೇಂದ್ರೆ ವಿಮರ್ಶೆಯ ಒಂದು ನೆಲೆ. ಮತ್ತೊಂದು ನೆಲೆಯಲ್ಲಿ ಇವರ ಆಪ್ತತೆ ಜನಪದ ಸಾಹಿತ್ಯದ ಬಗೆಗೆ ಮೂಡಿರುವುದು ವ್ಯಕ್ತವಾಗುತ್ತದೆ. ಇದಕ್ಕೆ ಪ್ರಾತಿನಿಧಿಕವಾಗಿ ‘ಗರತಿಯ ಹಾಡು-ಕಾಂತಾ ಸಂಮಿತಿ’ ಎಂಬ ಲೇಖನವನ್ನು ಪರಿಶೀಲಿಸಬಹುದು.

ವಾಸ್ತವವಾಗಿ ಮೇಲ್ಕಂಡ ಲೇಖನವು ‘ಗರತಿಯ ಹಾಡು’ ಎಂಬ ಜನಪದ ತ್ರಿಪದಿಗಳ ಸಂಕಲನಕ್ಕೆ ಬರೆದ ಮುನ್ನುಡಿಯಾಗಿದೆ. ಇದರ ಸಂಪಾದಕರು ಹಲಸಂಗಿ ಸಹೋದರರು. ಅವರು ೧೯೩೧ರಲ್ಲಿ ಇದನ್ನು ಹೊರತಂದರು.

ಬೇಂದ್ರೆಯವರಿಗೆ ಜನಪದ ಗೀತ ಸಾಹಿತ್ಯದ ಬಗೆಗೆ ತೀವ್ರವಾದ ಅಕ್ಕರೆ. ಅದು ಇಲ್ಲಿ ಅನುರಣಿತವಾಗುತ್ತದೆ. ಇದರ ಪ್ರಭಾವದಿಂದ ತಮ್ಮ ಕಾವ್ಯವೂ ಜೀವಸೆಲೆಯನ್ನು ಪಡೆದಿರುವುದು ನಿಜ.

ಹೀಗೆ ೩೦ರ ದಶಕದಲ್ಲಿ ಕನ್ನಡ ವಿಮರ್ಶೆಯನ್ನು ಕಟ್ಟುವಾಗ ಜನಪದ ಗೀತಸಾಹಿತ್ಯದ ಸಂಗ್ರಹ ಮತ್ತು ಅದರ ಬಗೆಗೆ ಮಾತನಾಡುವುದು ಒಂದು ನೂತನ ರೂಢಿಯಾಗಿ ಕಾಣಿಸಿಕೊಳ್ಳುತ್ತದೆ. ದೇಶದಾದ್ಯಂತ ಶಾಸನ, ಹಸ್ತಪ್ರತಿಗಳ ಶೋಧ ನಡೆದಂತೆ ಜನಪದ ಸಾಹಿತ್ಯದ ಶೋಧವೂ ಆಯಿತು. ಇದರ ಸಂಗ್ರಹ ಮತ್ತು ಮುದ್ರಣ ಕಾರ್ಯದಲ್ಲಿ ಇದಕ್ಕೆ ಬೇಕಾದ ಮುನ್ನುಡಿ, ಪ್ರಸ್ತಾವನೆಗಳ ಮತ್ತು ಇವುಗಳ ನೆಪದಲ್ಲಿ ಇವರ ಸಾಹಿತ್ಯಕ ಗುಣ, ವ್ಯಾಪ್ತಿ ಇತ್ಯಾದಿ ಚರ್ಚೆಗಳನ್ನು ಸಹ ಮಾಡುತ್ತಿದ್ದರು. ಇಂತಹ ಚರ್ಚೆ ಸಾಮಾನ್ಯವಾಗಿ ವಿವರಣಾತ್ಮಕವಾದುದೂ ರಸ ನಿಷ್ಠವಾದುದೂ ಆಗಿರುತ್ತಿತ್ತು. ಇಲ್ಲಿ ಭಾವುಕತೆ ಬೆರೆತ ಗದ್ಯವು ‘ಕಾವ್ಯ’ವಾಗಿ ಮಾರ್ಪಡುತ್ತಿತ್ತು.

ಹೀಗೆ ಜನಪದ ಸಾಹಿತ್ಯದಲ್ಲಿ ಕಾವ್ಯಾತ್ಮಕತೆಯನ್ನು ಗುರುತಿಸುತ್ತಾ ಅದನ್ನು ವಿವರಿಸುತ್ತಾ, ವೈಭವೀಕರಿಸುತ್ತಾ, ಅದರ ಬಹುಮುಖಿ ನೆಲೆಗಳನ್ನು ಪರ್ಯಾಲೋಚಿಸುವ ಕ್ರಮವನ್ನು ಇಂತಹ ವಿಮರ್ಶಾ ಲೇಖನಗಳಲ್ಲಿ ಕಾಣಬಹುದು.

ಇಂತಹ ಪ್ರಯತ್ನವನ್ನು ಈಗಾಗಲೇ ಮಾಸ್ತಿಯವರು ಮಾಡಿದ್ದಾರೆ. ಆದರೆ ಅವರಿಗಿಂತ ಭಿನ್ನವಾಗಿ ಬೇಂದ್ರೆಯವರು ಬಹಳ Relax ಆದ ಭಾಷೆಯನ್ನು ಬಳಸುತ್ತಾ, ಅಂತಹ ಕೆಲಸವನ್ನು ಮಾಡುತ್ತಾರೆ. ಆದ್ದರಿಂದ ಬೇಂದ್ರೆಯವರ ಮಾತೇ ಇಲ್ಲಿ ಕಾವ್ಯವಾಗಿ ಮಾರ್ಪಡುತ್ತದೆ. ಇಂತಹ ಮಾಂತ್ರಿಕ ಶಕ್ತಿಯನ್ನು ಮೈಗೂಡಿಸಿಕೊಂಡ ಬೇಂದ್ರೆ ಭಾಷೆ ಜನಪದ, ತ್ರಿಪದಿ, ಸಾಹಿತ್ಯದ ಬಗೆಗೆ ಪಂಡಿತ-ಪಾಮರರ ಆಸಕ್ತಿಯನ್ನು ಕೆರಳಿಸುವಂತೆ ಮಾಡುತ್ತದೆ.

ಬೇಂದ್ರೆಯವರು ಇಲ್ಲಿ ಇನ್ನೂ ಒಂದು ವಿಷಯವನ್ನು ಗುರುತಿಸುತ್ತಾರೆ. ಅದೆಂದರೆ, ಯಾವುದೇ ಸಂಸ್ಕೃತಿಯಲ್ಲಿ ಜನಪದ ಆಶಯಗಳು ವಿಶೇಷವಾಗಿ ಪ್ರಕಟವಾಗುವಾಗ ಅಲ್ಲಿ ವರ್ಣಕ ಸಾಹಿತ್ಯಕ್ಕೆ ಉಕ್ಕು ಹೆಚ್ಚು ಎಂಬುದು. ಇದು ನಿಜ. ಆದ್ದರಿಂದಲೇ ಮಧ್ಯಕಾಲದ ಕನ್ನಡ ಸಂಸ್ಕೃತಿಯಲ್ಲಿ ವಸ್ತುಕಗಳು ಮತ್ತು ಲಕ್ಷಣ ಕೃತಿಗಳಿಗೆ ಹೊರತಾದ ವಚನ, ತ್ರಿಪದಿ, ತತ್ವಪದ, ಕೀರ್ತನೆ, ಮೊದಲಾದ ವರ್ಣಕ ಪ್ರಕಾರಗಳು ಕಂಡಾಗ ದೇಶೀ-ದೇಸಿ-ಜನ ಸಂಸ್ಕೃತಿಯಲ್ಲಿ ಮಹತ್ತರ ಮಾರ್ಪಾಟುಗಳು ಆಗಿರುವುದು. ಈ ಹಿನ್ನೆಲೆಯಲ್ಲಿ ವಸಾಹತುಶಾಹಿಯ ಪ್ರಭಾವದಲ್ಲಿ ಕನ್ನಡ ಸಂಸ್ಕೃತಿಯ ಅನನ್ಯತೆಯನ್ನು ಕಾಯ್ದುಕೊಳ್ಳುತ್ತಾ, ಬದುಕನ್ನು ಸಹ್ಯಗೊಳಿಸಿಕೊಳ್ಳಲು ಇಂತಹ ಗೀತಸಾಹಿತ್ಯದ ಅಗತ್ಯವಿದೆ ಎಂದು ಆಶಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಜಾನಪದದ ಒಂದು ಎಳೆಯಾದ ತ್ರಿಪದಿಗಳನ್ನು ಕುರಿತ ಕ್ರಿಯಾತ್ಮಕವಾದ ಆದರವು ಸಮಕಾಲೀನ ಸಂದರ್ಭಕ್ಕೆ ಅಗತ್ಯ ಎಂಬುದು ಇಲ್ಲಿಯ ಒಂದು ನೆಲೆ. ಜಾಗತೀಕರಣಕ್ಕೆ ಒಳಪಡುತ್ತಿರುವ ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿಯೂ ಇಂತಹ ಲೇಖನಗಳು ಪ್ರಸ್ತುತವೆನ್ನಿಸುವುದು ಇದರ ಸಾರ್ವಕಾಲಿಕ ಸಾಂಸ್ಕೃತಿಕ ಮೌಲ್ಯಕ್ಕೆ ದ್ಯೋತಕ ಎನ್ನಿಸುತ್ತದೆ.

ಜನಪದ ಸಾಹಿತ್ಯ ಅನಾದಿಯಾದುದು. ಇದಕ್ಕೆ ಆದಿ ಎಂಬುದು ಇದ್ದರೂ ಅದನ್ನು ಖಚಿತವಾಗಿ ಅಳೆಯಲು ಬಾರದು. ಇಂತಹ ಸಾಹಿತ್ಯ ವಸಾಹತು ಪೂರ್ವ ಸಂದರ್ಭದಲ್ಲಿ ಸಾಹಿತ್ಯ ಎಂದು ಪರಿಭಾವಿಸಲ್ಪಟ್ಟಿರಲಿಲ್ಲ. ಇದರ ಸಾಲಿಗೆ ವಚನ, ಕೀರ್ತನೆ, ತತ್ವಪದಗಳೂ ಸೇರುತ್ತವೆ. ಇಂತಹ ಪ್ರಕಾರಗಳಲ್ಲಿ ಸಾಹಿತ್ಯಕ ಗುಣವನ್ನು ಗುರುತಿಸಿ ಅವುಗಳಿಗೆ ಮೊಟ್ಟ ಮೊದಲಿಗೆ ಸಾಹಿತ್ಯದ ಪಟ್ಟವನ್ನು ದೊರಕಿಸಿಕೊಟ್ಟವರು ನವೋದಯದ ಕೆಲವು ಚಿಂತಕರು. ಈ ನಿಟ್ಟಿನಲ್ಲಿ ‘ಗರತಿಯ ಹಾಡು’ ಸಂಕಲನಕ್ಕೂ ಸಾಹಿತ್ಯ ಕಕ್ಷೆಯ ಒಳಕ್ಕೆ ಬೇಂದ್ರೆಯವರು ಪ್ರವೇಶಿಕೆಯನ್ನು ಒದಗಿಸಿ ಕೊಡುತ್ತಾರೆ. ಇಂತಹ ಚಾರಿತ್ರಿಕ ಮಹತ್ವಕ್ಕೆ ಈ ಲೇಖನವೂ ಈಡಾಗುತ್ತದೆ.

ಇಂತಹ ಲೇಖನಗಳಲ್ಲಿ ಬೇಂದ್ರೆಯವರು ಹೆಣ್ಣನ್ನು ಉನ್ನತ ಆದರ್ಶದ ನೆಲೆಯಲ್ಲಿ ಪರಿಭಾವಿಸುತ್ತಾರೆ. ತ್ರಿಪದಿ ಹಾಡುಗಳೇ ಆದರ್ಶಮಯ. ಇಂತಹ ಹಾಡುಗಳ ಜನನಿ? ಅವಳು ಆದರ್ಶದ ತಾಯಿಯೇ ಆದ ಮಹಾ ಆದರ್ಶವಾಗಿ ಕಾಣಿಸುತ್ತದೆ. ಇಂತಹ ಹಾಡುಗಳ ಹರಹು ಇರುವ ಜೀವನವೇ ಕಾವ್ಯವಾಗಿ ಬಿಡುತ್ತದೆ. ಈ ಥರದ ಮಾತುಗಳನ್ನು ಬೇಂದ್ರೆಯವರು ಆಡುತ್ತಾರೆ.

ಒಟ್ಟಾರೆ ಜನಪದ ಸಾಹಿತ್ಯದ ಬಗೆಗೆ ಆದರ, ಸಂರಕ್ಷಣೆ ಮತ್ತು ಪೋಷಣೆಗಳ ಒತ್ತಾಸೆ ಹಾಗೂ ದೇಸೀ ಸಾಹಿತ್ಯದ ಬಗೆಗಿನ ಅಪಾರ ಒಲವು ಇವರ ಒಟ್ಟು ವಿಮರ್ಶಾ ಸಾಹಿತ್ಯದ ಕೇಂದ್ರ ಗುಣವಾಗುತ್ತದೆ. ಈ ನಿಟ್ಟಿನಲ್ಲಿ ಚಲಿಸುವ ಇವರ ಭಾಷೆಯಲ್ಲಿ ತುಂಬು ಭಾವುಕತೆ, ರಸನಿಷ್ಠತೆ, ಮಾಂತ್ರಿಕತೆ, ವಿವರಣಾತ್ಮಕತೆ ಮೊದಲಾದವು ಸ್ಥಾಯಿ ಗುಣಗಳಾಗುತ್ತವೆ. ಯಾವುದೇ ಖಚಿತ ಸೈದ್ಧಾಂತಿಕತೆ ಇಲ್ಲಿಗೆ ಚೌಕಟ್ಟನ್ನು ಹಾಕಿಲ್ಲ.

ಹೀಗೆ ಹಲವು ಸ್ವತಂತ್ರ ವಿಚಾರಗಳಿಂದ ಮೈವೆತ್ತಿರುವ ಬೇಂದ್ರೆ ವಿಮರ್ಶೆ ನವೋದಯದ ಸಂದರ್ಭದಲ್ಲಿ ‘ಆಂಡಯ್ಯ’ನಾಗಿ ನಿಲ್ಲುತ್ತದೆ.
*****
ಅನ್ವೇಷಣೆ, ಜನವರಿ-ಫೆಬ್ರವರಿ ೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಗ್ಗದ ಬೆಳಕೇ
Next post ಮರೀಚಿಕೆ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…