Home / ಲೇಖನ / ಇತರೆ / ಹೆಸರಿಸಲಾರದ ಸಂಬಂಧಗಳು !

ಹೆಸರಿಸಲಾರದ ಸಂಬಂಧಗಳು !

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ನಮಗೆ ಎಲ್ಲ ಸಂಬಧಗಳಿಗೂ ಹೆಸರಿಟ್ಟು ಕರೆಯುವ ಹುಚ್ಚು. ಅಪ್ಪ, ಅಮ್ಮ, ಅಣ್ಣ, ಅಕ್ಕ, ಚಿಕ್ಕಮ್ಮ, ದೊಡ್ಡಪ್ಪ, ಅಂಕಲ್, ಆಂಟಿ, ಗಂಡ, ಹೆಂಡತಿ, ಫ್ರೆಂಡ್…. ಇತ್ಯಾದಿ ಹೆಸರುಗಳನ್ನಿಟ್ಟು ಸಂಬಂಧಗಳ ವ್ಯಾಪ್ತಿ ಮಿತಿಗೊಳಿಸಿಬಿಡುತ್ತೇವೆ. ಆದರೆ ಈ ಹೆಸರಿಟ್ಟ ಸಂಬಂಧಗಳು ಕೆಲವೊಮ್ಮೆ ಹೆಸರಿನ ಮಿತಿಯಷ್ಟೇ ಪರಿಮಿತಿಯನ್ನು ಹೊಂದಿರುವುದಿಲ್ಲ. ಇನ್ನೂ ವಿಸ್ತಾರವಾಗಿ ಬೆಳೆದಿರುತ್ತದೆ. ಹಾಗೇ ಇನ್ನೂ ಕೆಲವೊಮ್ಮೆ ಆ ಸಂಬಂಧಗಳು ಆಳಕ್ಕಿಳಿಯದೆ ಬರಿಯ ‘ನಾಮಕಾವಾಸ್ತೆ’ ಸಂಬಂಧಗಳಾಗಿ ಹೆಸರಿನ ಮಿತಿಯಲ್ಲೇ ನಿಂತುಬಿಡುತ್ತವೆ.

ಆದರೆ ಇಂತಹಾ ಹೆಸರಿರುವ ಸಂಬಂಧಗಳನ್ನೂ ಮೀರಿ ಹೆಸರೇ ಇಲ್ಲದ ಅನೇಕ ಸಂಬಂಧಗಳು ಕೆಲ ಗಂಟೆಗಳು, ಕೆಲ ದಿನಗಳು ವರ್ಷಗಳು ಕೆಲವೊಮ್ಮೆ ಜೀವನ ಪರ್ಯಂತ ಕಾಡುತ್ತವೆ. ಬದುಕು ನಡೆಸುತ್ತವೆ, ಹೆಸರಿರುವ ಎಷ್ಟೆಷ್ಟೋ ಸಂಬಂಧಗಳಿಗಿಂತಾ ಆತ್ಮೀಯವಾಗಿ ಹೃದಯ ತಟ್ಟುತ್ತವೆ. ಮುಟ್ಟುತ್ತವೆ.  ಅದೇ ಸೋಜಿಗದ ವಿಷಯ. ಬಸ್ಸಿನಲ್ಲಿ ಕೆಲವೇ ಗಂಟೆ ಸಹಪ್ರಯಾಣಿಕನಾಗಿದ್ದ ವ್ಯಕ್ತಿಯೊಂದಿಗಿನ ಸಂಬಂಧ, ಕಳೆದುಹೋದ ಅತ್ಯಮೂಲ್ಯ ವಸ್ತುವನ್ನು ಜೋಪಾನವಾಗಿ ಹಿಂದಿರುಗಿಸಿದ ಪ್ರಾಮಾಣಿಕ ವ್ಯಕ್ತಿಯೊಂದಿಗಿನ ಸಂಬಂಧ, ಬದುಕಿನಲ್ಲಿ ಇನ್ನುಳಿದಿರುವುದು ಸಾವು ಮಾತ್ರ ಎಂದು ನಿರ್ಧರಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವನಿಗೆ ಇನ್ನುಳಿದ ಬದುಕು ಪೂರ್ತಿ ಆಶಾವಾದಿಯಾಗಿ ಬದುಕಲು ಸ್ಪೂರ್ತಿ ನೀಡಿದ ಅಪರಿಚಿತ ವ್ಯಕ್ತಿಯೊಂದಿಗಿನ ಸಂಬಂಧ, ಮಧ್ಯದಲ್ಲೆಲ್ಲೋ ಕೆಲವೇ ನಿಮಿಷಗಳು ಪ್ರತ್ಯಕ್ಷವಾಗಿ ಒಂದು ಪೋಷಕ ಪಾತ್ರ ದಿನಗಟ್ಟಲೇ ಕಾಡುವಾಗಿನ ಸಂಬಂಧ, ಜೀವನವಿಡೀ  ಕಷ್ಟಗಳನ್ನೆದುರಿಸಿಯೇ ಬದುಕುವ ದುರಂತ ಕಥೆಯೊಂದರ ಪಾತ್ರದೊಳಗಿನ ಸಂಬಂಧ, ಬದುಕಿನಲ್ಲಿ ಸೋತು ಕುಸಿವ ಗಳಿಗೆಯಲ್ಲೆಲ್ಲಾ ‘ಏಳು ಎದ್ದೇಳು ಗುರಿ ಸೇರುವವರೆಗೂ ನಿಲ್ಲಬೇಡ’ ಎಂದು ಸಂತೈಸುವ ವಿವೇಕಾನಂದರೊಂದಿಗಿನ ಮಾನಸಿಕ ಸಂಬಂಧ….. ಇಂತಹ ಹತ್ತು ಹಲವು ಸಂಬಂಧಗಳಿಗೆ ಯಾವ ಹೆಸರು?

ಕೆಲವೊಂದು ಸಂಬಂಧಗಳಿಗೆ ಹೆಸರಿರುವುದಿಲ್ಲ. ಮತ್ತೆ ಕೆಲವಕ್ಕೆ ಹೆಸರೇ ಬೇಕಿಲ್ಲ. ಆದರೂ ನಮ್ಮ ಸಮಾಜ ಹೆಸರಿರುವ ಸಂಬಂಧಗಳನ್ನು ಪುರಸ್ಕರಿಸುವಂತೆ ಹೆಸರಿಲ್ಲದ ಸಂಬಂಧಗಳನ್ನು ಪುರಸ್ಕರಿಸುವುದಿಲ್ಲ. ಸಂಬಂಧಗಳಿಗೆಲ್ಲಾ ಬಲವಂತವಾಗಿಯಾದರೂ ಯಾವುದೇ ಒಂದು ಹೆಸರಿಟ್ಟರೆ  ನಂತರ ಜೀವಮಾನವಿಡೀ ಆ ಹೆಸರಿಟ್ಟ ಸಂಬಂಧಗಳ ಚೌಕಟ್ಟಿನೊಳಗೇ ಸಂಬಂಧ ಕಲ್ಪಿಸಿಕೊಳ್ಳುತ್ತಾ ಹೋಗುವ ಸರ್ಕಸ್ಸು!

ಸಖಿ, ಒಮ್ಮೆಯೂ ನಾವು ಕಣ್ಣಾರೆ ಕಂಡಿರದ ವ್ಯಕ್ತಿ ಕೂಡ ಎಷ್ಟೋ ಬಾರಿ ನಮ್ಮ ಆತ್ಮೀಯನಾಗಿ, ಹೃದಯ ಭಾಂಧವನಾಗಿ ಮನಸ್ಸಿನಾಳದಲ್ಲಿ  ಸೇರಿಹೋಗುವುದಿಲ್ಲವೇ? ಹೆಸರಿಲ್ಲಿದ ಎಷ್ಟೋ ಸಂಬಂಧಗಳು, ನಾವು ಹೆಸರಿಟ್ಟು ಚೌಕಟ್ಟು ನಿರ್ಮಿಸಿದ ಸಂಬಂಧಗಳಿಗಿಂತಾ ಹೆಚ್ಚು ಅಮೂಲ್ಯವಾಗಿರುತ್ತವೆ ಕಾಡುತ್ತವೆ, ಬದುಕು ಮುನ್ನಡೆಸುತ್ತವೆ. ವೃಥಾ ಅವುಗಳಿಗೆ ಹೆಸರಿಡುವ ತೆವಲು ನಮಗೇಕೆ “?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...