“ಹಾಗಿದ್ದರೆ, ಪಾಪವೆಂದರೇನು ಗುರುಗಳೇ?”

ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!

“ಹಾಗಿದ್ದರೆ, ಪಾಪವೆಂದರೇನು ಗುರುಗಳೇ ?”

ಅದೇ ಉತ್ಸುಕ ಕಂಠದಿಂದ ಮತ್ತೊಮ್ಮೆ ಅದೇ ಪ್ರಶ್ನೆ, ವಿದ್ಯಾರಣ್ಯರು ಕಣ್ಣು ತೆರೆದು, ಎದುರಿಗೆ ಕೈಮುಗಿದು, ತಲೆಬಾಗಿಸಿ ಕುಳಿತ ಶಿಷ್ಯನ ಕಡೆಗೆ ನೋಡಿದರು. ಹಠಯೋಗಿ, ಯುವಕಸನ್ಯಾಸಿ-ಬ್ರಹ್ಮಚಾರಿ ಸದಾನಂದ, ಆಶ್ರಮಕ್ಕಿನ್ನೂ ಹೊಸದಾಗಿ ಬಂದವನು. ಆದರೂ ಚಿಕ್ಕ ವಯಸ್ಸಿನಲ್ಲೇ ಹಲವಾರು ಕಠಿಣಯೋಗಗಳನ್ನು ಸಾಧಿಸಿದವನು. ಯೌವನದಲ್ಲಿಯೇ ಜೀವನದ ಮಾಯೆಗಳನ್ನೆಲ್ಲಾ ಬಿಟ್ಟು ಬಂದವನು. ಮೋಹಗಳನ್ನು ಕಡೆಗಾಣಿಸಿದವನು. ಎಂತೆಂತಹ ತಪಸ್ಯೆಗಳನ್ನೆಲ್ಲಾ ಕೈಗೊಂಡು ಜಯಿಸಿದ ಮಹಾಸನ್ಯಾಸಿ. ದೇವತಾಧ್ಯಾನ ಮಾತ್ರವೇ ತನ್ನ ಗುರಿಯನ್ನಾಗಿಟ್ಟುಕೊಂಡು, ವಾಸನೆಗಳೆಲ್ಲವನ್ನೂ ಮಣ್ಣು ಮಾಡಿದ ಅಖಂಡ ಬ್ರಹ್ಮಚಾರಿ ಸದಾನಂದ. ಇಂದು ಪಾಪವೆಂದರೇನೆಂದು ಪ್ರಶ್ನೆ ಕೇಳುತ್ತಿದಾನೆ. ಆಶ್ರಮದ ಸನ್ಯಾಸಿಗೆ ಪಾಪದ ಸಂಪರ್ಕವೆಲ್ಲಿ ಬರಬೇಕು. ಅಷ್ಟೇ ಅಲ್ಲ, ಪಾಪದ ರೂಪವಾದರೂ ಹೇಗೆ ತಿಳಿಯಬೇಕು. ವಿದ್ಯಾರಣ್ಯರು ತಮ್ಮ ಶಿಷ್ಯನ ಈ ನಿಷ್ಕಳಂಕಜ್ಞಾನ ಕಂಡು ತುಸು ನಕ್ಕರು. ಗುರುಗಳು ಏನುತ್ತರ ಕೊಡುವರೋ ಎಂದು ಅತ್ಯಾಸಕ್ತಿಯಿಂದ ಸದಾನಂದನ ಮುಖದ ಮೇಲೆ ಉತ್ಸುಕತೆ ಮೂಡಿತ್ತು. ನಿಷ್ಕಳಂಕ ಮನಸ್ಸಿನ ಜ್ಞಾನೋಪಾಸನೆಯ ಬಗೆ ಅದರಲ್ಲಿ ಬೆರೆತಿತ್ತು. ಜತೆಗೆ ಎಳೆಯ ಮಗು ಹೊಸದನ್ನು ಕಾಣುವಾಗಿನ ಕುತೂಹಲವೂ ಕೂಡಿ ಕೊಂಡಿತ್ತು.

“ಮಗು, ಪಾಪ ಪುಣ್ಯಗಳನ್ನು ಹೀಗೆಯೇ ಎಂದು ನಿಯತವಾಗಿ ಹೇಳಲು ಸಾಗದು, ಮಗು” ಎಂದರು ವಿದ್ಯಾರಣ್ಯರು ಗಂಭೀರವಾದ ದನಿಯಲ್ಲಿ.

“ಹಾಗಿದ್ದರೆ, ಪಾಪ, ಪುಣ್ಯದಿಂದ ಬೇರೆಯಲ್ಲವೇ, ತಂದೆ ?”

“ನಿಜ, ಮಗು, ಪಾಪ ಪುಣ್ಯದಿಂದ ಹೊರತಾದುದು. ಎರಡೂ ಬೇರೆ ಬೇರೆ. ಆದರೆ ಇದು ಪಾಪ, ಇದು ಪುಣ್ಯವೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.”

ಶಿಷ್ಯನ ಮನಸ್ಸಿಗೆ ಇದರಿಂದ ಸಮಾಧಾನವಾಗಲಿಲ್ಲ. ಅವನ ಮುಖದಲ್ಲಿನ್ನೂ ಸಂದೇಹ ಕಾಣಿಸಿತು. ಒಂದು ಕ್ಷಣ ಮೌನದ ನಂತರ ಮತ್ತೆ ಪ್ರಶ್ನೆ.

“ಪಾಪದಿಂದ ಪುಣ್ಯವನ್ನು ಬೇರೆ ಮಾಡಲಾಗುವುದಿಲ್ಲವೇ, ತಂದೆ ?”

“ಮಗು ಜೇನುಗೂಡಿನಲ್ಲಿ ಜೇನುತುಪ್ಪವೂ ಇದೆ, ಜೇನಿನ ವಿಷ ಪೂರಿತ ಕಡಿತವೂ ಇದೆ. ಜೀವನದಲ್ಲಿ ಯಾರೂ ಪೂರ್ತಿ ಒಳ್ಳೆಯವರಲ್ಲ, ಯಾರೂ ಪೂರ್ಣವಾಗಿ ಕೆಟ್ಟವರೂ ಅಲ್ಲ. ಒಳಿತುಕೆಡಕುಗಳ ಮಿಶ್ರಣ ಜೀವನ ಹಾಗೆಯೇ ಮನುಷ್ಯನ ಎಲ್ಲ ಕಾರ್ಯವೂ ಪಾಪಪುಣ್ಯಗಳ ಮಿಶ್ರಣ.”

“ಎಂದರೆ ಪಾಪಕ್ಕೆ ಬೇರೆ ಅಸ್ತಿತ್ವವಿಲ್ಲವೇ, ತಂದೆ ?”

“ಇಲ್ಲ, ಮಗು. ಪಾಪ ಪುಣ್ಯಗಳು ಮಾಡುವ ಕೆಲಸದಲ್ಲಿಲ್ಲ, ನೋಡುವ ನೋಟದಲ್ಲಿದೆ. ನಮ್ಮ ಕಣ್ಣಿಗೆ ಪಾಪವಾಗಿ ತೋರಿದುದು ಮತ್ತೊಬ್ಬರ ಕಣ್ಣಿಗೆ ಪುಣ್ಯವಾಗಿ ತೋರಬಹುದು.”

“ಆದರೆ ಸಂಪೂರ್ಣವಾಗಿ ಪಾಪಪೂರಿತವಾದುವು, ಸಂಪೂರ್ಣವಾಗಿ ಪುಣ್ಯವುಳ್ಳವು ಕೆಲವಿರಲೇ ಬೇಕಲ್ಲವೇ, ತಂದೆ?”

“ಇಲ್ಲ, ಮಗು, ಅದು ಸಾಧ್ಯವಿಲ್ಲ. ಚಂದ್ರನು ಹುಣ್ಣಿಮೆಯ ದಿನ ಕೂಡ ಕಳಂಕವನ್ನು ಹೊತ್ತಿರುತ್ತಾನೆ. ಮಹಾ ಆಕಾಶದಲ್ಲಿ ಎಲ್ಲಾದರೂ ಸರಿ, ಒಂದಲ್ಲ ಒಂದು ಕಡೆ, ಒಂದು ಚೂರಾದರೂ ಮೋಡ ಮುಸುಕಿಯೇ ಇರುತ್ತದೆ. ಆ ಪರಮಾತ್ಮನಿಗೆ ಕೂಡ ಪಾಪದಿಂದ ಮುಕ್ತಿಯಿಲ್ಲ.”

“ನನಗೆ ಇದು ಅರ್ಥವಾಗುವಂತಿಲ್ಲ, ತಂದೆ, ಮನಸ್ಸು ನಿಮ್ಮ ವಾದವನ್ನೊಪ್ಪಲು ಹಿಂಜರಿಯುತ್ತಿದೆ. ಪಾಪ ಮಾಡುವ ಕೆಲಸದಲ್ಲೇ ಹೊಂದಿ ಕೊಂಡಿರುತ್ತದೆ. ನೋಡುವ ದೃಷ್ಟಿಗೂ ಅದಕ್ಕೂ ಸಂಬಂಧವಿಲ್ಲ.”

“ಹುಂ! ಮಗು. ನಿನ್ನ ವ್ಯಾಸಂಗ, ತರ್ಕದ ತೊಡಕಿಗೆ ನಿಲುಕದ ಹಲವಾರು ವಸ್ತುಗಳಲ್ಲಿ ಇದೂ ಒಂದು. ತರ್ಕ ಯಾರನ್ನೂ ಎಲ್ಲಿಗೂ ಗುರಿ ಮುಟ್ಟಿಸಲಾರದು. ಅದರ ಜೊತೆಗೆ ನಂಬುಗೆಯೂ ಬೇಕು. ಎಲ್ಲಕ್ಕೂ ಹೆಚ್ಚಾಗಿ ಅನುಭವ ಬೇಕು, ಅದನ್ನರಗಿಸಿಕೊಳ್ಳಲು ಕಲ್ಪನೆ ಬೇಕು. ಅನುಭವವಿಲ್ಲದ ಜ್ಞಾನ ಬರಿಯ ತರಗು ವೇದಾಂತ, ಕೆಲಸಕ್ಕೆ ಬಾರದ ಕಸ. ಕಲ್ಪನೆಯ ಮೂಸೆಯಲ್ಲಿ ಹಾದು ಆ ಕಸ ರಸವಾಗಬೇಕು.”

“ಆದರೆ…”

“ನಿನ್ನ ಸಂದೇಹ ಸರಿ, ಮಗು. ಸನ್ಯಾಸಿ, ಅಖಂಡಬ್ರಹ್ಮಚಾರಿಗೆ ಪಾಪದ ಅನುಭವವಾದರೂ ಎಲ್ಲಿ ಬರಬೇಕು? ಆದರೆ ಅನುಭವವಿಲ್ಲದ ಜ್ಞಾನ ಅಪೂರ್ಣವಾಗಿಯೇ ಉಳಿದುಹೋಗುವುದು, ತರ್ಕದಿಂದ ತಿಳಿಯಲಾಗದ, ಅರಿಯಲಾರದ ಹಲವಾರು ಸಮಸ್ಯೆಗಳೂ ಇವೆ. ಮಗು, ಈಗ ಒಂದು ಸಾಮಾನ್ಯ ವಿಷಯ ತೆಗೆದುಕೊ. ಒಂದು ಸಂಸಾರದಲ್ಲಿ ಗಂಡ, ಹೆಂಡತಿ, ಅವರ ಒಂದೇ ಮಗು, ಒಂದು ರಾತ್ರಿ ಅವರ ಸುಖಸಂಸಾರದ ಮನೆಗೆ ಒಂದು ನಾಗರಹಾವು ಬಂದು ಅವರ ಮುದ್ದು ಮಗುವನ್ನು ಕಚ್ಚಿ ಬಿಡುತ್ತದೆ. ಅವರಿಗಿದ್ದುದು ಅದೊಂದೇ ಕೂಸು, ಆ ಮಗುವಿನ ಕೂಗು ಕೇಳಿ ಗಂಡ ಹೆಂಡತಿ ಎಚ್ಚರಗೊಳ್ಳುತ್ತಾರೆ. ಹಾವಿನ್ನೂ ಹೆಡೆಯಾಡಿಸುತ್ತಾ ಅಲ್ಲಿಯೇ ನಿಂತಿದೆ. ಗಂಡ ಆ ನಿಮಿಷದ ಆವೇಶದಲ್ಲಿ ಪಕ್ಕದಲ್ಲಿದ್ದ ದೊಣ್ಣೆ ಯಿಂದ ಆ ಹಾವನ್ನು ಹೊಡೆದುಬಿಡುತ್ತಾನೆ.”

“ಶಾಂತಂ ಪಾಪಂ, ಶಾಂತಂ ಪಾಪಂ”

“ನೋಡು, ಮಗು, ನಾಗರಹಾವನ್ನು ಅವನು ಕೊಂದನೆಂದೊಡನೆಯೇ ನೀನು ಶಾಂತಂ ಪಾಪಂ ಎಂದು ಕಿವಿ ಮುಚ್ಚಿಕೊಂಡೆ. ಆದರೆ ಅದೇ ಮಗುವನ್ನು ಹಾವು ಕಚ್ಚಿತೆಂದಾಗ ಆ ಮಾತಾಡಲಿಲ್ಲ. ನಿನ್ನ ದೃಷ್ಟಿಯಲ್ಲಿ ಹಾವಿನ ಕೊಲೆ ಮಹಾಪಾಪ. ಆದರೆ ಮಗುವಿನ ಕೊಲೆ! ಆ ತಂದೆಯ ದೃಷ್ಟಿಯಲ್ಲಿ ಅದು ಮಹಾಪಾಪ. ಇದರಲ್ಲಿ ಯಾರದು ತಪ್ಪು, ಯಾರದು ಸರಿ?”

“ಆದರೆ, ಹಾವಿನ ಕೊಲೆಯಿಂದ ಏನು ಸಾಧಿಸಿದಂತಾಯಿತು, ಗುರುಗಳೇ?”

“ಏನು ಸಾಧಿಸಿದಂತಾಯಿತೆನ್ನುವುದು ಮುಖ್ಯವಲ್ಲ, ಮಗು. ಯಾಕೆ ಅವನು ಹಾಗೆ ಮಾಡಿದನೆಂಬುದೇ ಮುಖ್ಯ. ನಿನ್ನ ದೃಷ್ಟಿಯಲ್ಲಿ ಪಾಪವೆಂದು ತೋರಿದುದು ಅವನ ದೃಷ್ಟಿಯಲ್ಲಿ ಅಲ್ಲ. ಅದಕ್ಕೇ ನಾನು ಹೇಳಿದುದು, ಪಾಪ, ಮಾಡುವ ಕೆಲಸದಲ್ಲಿಲ್ಲ. ನೋಡುವ ನೋಟದಲ್ಲಿದೆ.”

“ಸರಿ, ತಂದೆ.”

ಸದಾನಂದ ಮಾತಿನಲ್ಲಿ ಸರಿಯೆಂದರೂ ಮನಸ್ಸಿನಲ್ಲಿನ್ನೂ ಅಸಮಾಧಾನ ತುಂಬಿತ್ತು. ಗುರುಗಳ ಉತ್ತರದಿಂದ ಅವನಿಗೆ ಕೊಂಚವಾದರೂ ತೃಪ್ತಿಯಿರಲಿಲ್ಲ. ಗುರುಗಳು ಹೇಳಿದ ಮಾತು ಕೇಳಲು ಬಹಳ ಚೆನ್ನಾಗಿದ್ದರೂ ಅದರಲ್ಲೇನೋ ಕೊರತೆಯಿದ್ದಂತೆ ತೋರಿತು. ಅವರ ಮಾತಿನಲ್ಲಿ ತರ್‍ಕ ಕಾಣಲಿಲ್ಲ. ಒಂದಕ್ಕೊಂದಕ್ಕೆ ಸರಿಹೊಂದಿದಂತಿರಲಿಲ್ಲ. ಪಾಪ ಬೇರೆ, ಪುಣ್ಯ ಬೇರೆ ಎಂದು ಇದು ತನಕ ತಾನು ತಿಳಿದಿದ್ದ. ಆದರೆ ಅವುಗಳೆರಡಕ್ಕೂ ವ್ಯತ್ಯಾಸವೇ ಇಲ್ಲ. ಅದು ನೋಡುವ ನೋಟದಲ್ಲಿದೆ ಎಂದು ಗುರುಗಳು ಹೇಳಿಬಿಟ್ಟರಲ್ಲಾ, ಅದು ಹೇಗೆ ತಾನೇ ಸಾಧ್ಯ ಎಂದು ಮನಸ್ಸಿನಲ್ಲಿ ಅನುಮಾನ, ಸಂದೇಹ ಬಂದು ಅವನ ಹೃದಯದಲ್ಲಿ ಲಂಗರು ಹಾಕಿತ್ತು. ಗುರುಗಳ ಮಾತಿನಿಂದೇನೂ ಆ ಲಂಗರು ಕೀಳುವಂತಿರಲಿಲ್ಲ. ಬಾಯಿಗೆ ಮತ್ತೇನೋ ಮಾತು ಬಂತು. ಕೇಳಬೇಕೆಂದು ತಲೆಯೆತ್ತಿದ. ಗುರುಗಳು ಮತ್ತೊಮ್ಮೆ ಕಣ್ಣು ಮುಚ್ಚಿ ಧ್ಯಾನಾಸಕ್ತರಾದುದನ್ನು ಕಂಡು ಬಾಯಿಂದ ಮಾತೇ ಹೊರಡಲಿಲ್ಲ. ಮಾತೆಲ್ಲಾ ತುದಿನಾಲಿಗೆಯಲ್ಲೇ ಹೂತು ಹೋದುವು. ಮೆಲ್ಲನೆ ಗುರುಗಳ ಪಾದಗಳಿಗೆ ನಮಸ್ಕಾರಮಾಡಿ ಅಲ್ಲಿಂದೆದ್ದು ನಿಂತ ಕೈಯಲ್ಲಿ ಕಮಂಡಲು ಹಿಡಿದು, ಸಂಧ್ಯೆಯ ಕರ್ಮಗಳಿಗಾಗಿ
ನೀರು ತರಲು ನದಿಯ ಕಡೆಗೆ ಹೊರಟ, ಮನಸ್ಸಿನ ಅನುಮಾನದ ನೆರಳು ಅವನನ್ನು ಹಿಂಬಾಲಿಸಿತು. ಮೂಳುಗುವ ಸೂರ್ಯನ ಕೂನೆಯ ಬೆಳಕಿನಲ್ಲಿ ಅವನ ದೀರ್ಘಕಾಯದ ನೆರಳು ದಡದಮೇಲೆ ನಿಮಿಷನಿಮಿಷಕ್ಕೂ ಬೆಳೆಯುತಿತ್ತು. ಅಂತೆಯೇ ಜತೆಗೇ ಮನಸ್ಸಿನ ಚಿಂತೆ, ಸಂದೇಹಗಳ ನೆರಳೂ ಬೆಳೆಯುತ್ತಿತ್ತು.

ವಿಶಾಲವಾಗಿ ಹರಹಿದ್ದ ಪ್ರವಾಹದ ಶಯ್ಯೆ. ನಡುವೆ ಅಲ್ಲಲ್ಲಿ ಚೆಲ್ಲಿದ್ದ ಹಸುರಿನ ನೆರಳು, ಪ್ರವಾಹವನ್ನೇ ಸೀಳಿಕೊಂಡು, ಎರಡು ಪಕ್ಕಕ್ಕೆ ಬೆಳಕನ್ನೂ ಸರುವ ಸಂಜೆಗೆಂಪಗಿರಣ, ಸದಾನಂದ ದಡದ ಮರಳಿನ ಮೇಲೆ ನಿಂತು ಒಂದು ಕ್ಷಣಕಾಲ ನೀರನ್ನೇ ದಿಟ್ಟಿಸುತ್ತಿದ್ದ. ನದಿಯ ಅಲೆಗಳು ಮುಂದೆ ಸರಿದರೂ ಮತ್ತೆ ಹಿಂದಿರುಗಿ ಅಲ್ಲಿಯೇ ನಿಂತುಹೋದಂತೆ ಕಾಣುತಿತ್ತು. ಅಂತೆಯೇ ಅವನ ಮನಸ್ಸಿನ ಚಿಂತೆ ಕೂಡ. ಯಾವುದೋ ಒಂದು ಕಾಣಲಾರದ ಚಿಂತೆ ಒಂದಂತಾಗಿ ಮೆಲ್ಲನೆ ಮುಂದೆ ಸರಿಯುತ್ತಿತ್ತು. ಮತ್ತೆ ಅದೇ ಸ್ಥಾನದಲ್ಲಿ ಹಳೆಯ ಚಿಂತೆ, ಗುರುಗಳ ಮಾತು, ಪಾಪವೆಂದರೇನು ಎಂದು ತಾನು ಕೇಳಿದ ಪ್ರಶ್ನೆಗೆ ಗುರುಗಳು ಎಂತೆಂತಹುದೋ ಉತ್ತರ ಹೇಳಿಬಿಟ್ಟರಲ್ಲ, ತಾನು ಕೇಳಿದುದೊಂದು ಸಾಮಾನ್ಯ ಪ್ರಶ್ನೆ. ನೆಲದಲ್ಲಿ ಗೆಜ್ಜಲು ಕೆದಕಲು ಹೋಗಿ ಹಾವಿನ ಹುತ್ತ ಕಂಡಂತಾಗಿತ್ತು. ಪಾಪವೆಂದರೇನೆಂದು ತಿಳಿಯುವ ಬದಲಿಗೆ ಈಗ ಇನ್ನೂ ಕಠಿನವಾದ, ಜಟಿಲವಾದ ಸಮಸ್ಯೆಗಳನ್ನು ಮನೆಗೆ ಕರೆಸಿಕೊಂಡಂತಾಗಿತ್ತು. ಪಾಪವೂ ಇಲ್ಲ ಪುಣ್ಯವೂ ಇಲ್ಲ ಎನ್ನುವಂತಿದ್ದರೆ ಮನುಷ್ಯನೇಕೆ ಒದ್ದಾಡಬೇಕೆಂಬುದೇ ಅವನಿಗೆ ಅರ್ಥವಾಗದು. ಪಾಪ, ನರಕದ ಹೆಬ್ಬಾಗಿಲು; ಪುಣ್ಯ ಸ್ವರ್ಗದ ಬೀಗದಕೈ ಎಂದು ಅವನು ಚಿಕ್ಕಂದಿನಿಂದ ಕೇಳಿದ್ದ, ನಂಬಿದ್ದ. ಈಗ ಗುರುಗಳು ಅವೆರಡೂ ನೋಡುವವನ ದೃಷ್ಟಿಯಲ್ಲಿದೆ ಎಂದುಬಿಟ್ಟರಲ್ಲ, ಎಂಬ ಕಳವಳ. ಗುರುಗಳ ಮಾತು ತಪ್ಪಾಗಿರಲಾರದು. ಆದರೆ ಅವನಿಗೇಕೋ ಅದರಲ್ಲಿ ಸಂಪೂರ್ಣ ನಂಬಿಕೆ ಬರಲೊಲ್ಲದು. ಅವರ ಮಾತಿನಲ್ಲಿ ಮನಸ್ಸು ಕೂಡಲು ಒಪ್ಪದೆ ಕಿತ್ತಾಡುತ್ತಿತ್ತು. ಅದಕ್ಕೆ ಹಗ್ಗ ಹಾಕಿ ಹಿಡಿದಷ್ಟೂ ಹೋರಾಟ ಹೆಚ್ಚಾಯಿತು.

ಸಂಧ್ಯಾಕರ್ಮ ಮಾಡಲು ಕುಳಿತಾಗಲೂ ಮನಸ್ಸು ಈ ಚಿಂತೆಯ ಒಲೆಯಲ್ಲಿಯೇ. ನದಿಯ ಸುಳಿಯಲ್ಲಿ ಸಿಕ್ಕಿದ ಬೆಂಡಿನ ಚೂರೊಂದು ಒಳಗೆ ಮುಳುಗಿ ಮತ್ತೆ ಮೇಲೆ ಒಂದು ಸುರುಳಿಯಲ್ಲಿ ಗಿರಗಿರನೆ ಸುತ್ತುವಂತೆ ಅವನ ಮನಸ್ಸು ಚಿಂತೆಯ ವಿಷಚಕ್ರದಲ್ಲಿ ಸಿಕ್ಕಿಕೊಂಡಿತ್ತು. ಕರ್ಮವನ್ನು ಮಾಡುತ್ತ ಮಂತ್ರ ಹೇಳುತ್ತಿದ್ದವನು ಇದ್ದಕ್ಕಿದ್ದಂತೆ ನಿಲ್ಲಿಸಿದ.

“ಪಾಪೋಹಂ, ಪಾಪಕರ್ಮಾಹಂ ಪಾಪಾತ್ಮಾ,
ಪಾಪಸಂಭವ; ತ್ರಾಹಿಮಾಂ ಕೃಪಯಾದೇವ” –

ಮಂತ್ರ ಬಾಯಲ್ಲಿ ಹಾಗೆಯೇ ನಿಂತಿತು. ಮನುಷ್ಯ ತನ್ನನ್ನು ತಾನೇ ಪಾಪಿಯೆಂದುಕೊಳ್ಳುವುದಿರಲಿ, ಅದಕ್ಕೂ ಒಂದು ಹೆಜ್ಜೆ ಮುಂದು ಹೋಗಿ ತಾನೇ ಪಾಪದ ಮೂರ್ತಿ, ತನ್ನ ಕರ್ಮವೆಲ್ಲ ಪಾಪವೆಂದು ಹೇಳಿ ಕೊಳ್ಳುವನಲ್ಲ. ತಾನು ಹುಟ್ಟಿದುದು ಪಾಪದಿಂದ, ತಾನು ಮಾಡುವುದೆಲ್ಲ ಪಾಪ, ತಾನೆಂದರೆ ಮೈವೆತ್ತ ಪಾಪವೆಂದು ಮಾನವ ಹೇಳಿಕೊಂಡು, ತನ್ನನ್ನೇ ತುಚ್ಛವಾಗಿ ಕಾಣುತ್ತಿಲ್ಲವೇ? ಎಲ್ಲಕ್ಕೂ ಹೆಚ್ಚಾಗಿ ಆತ್ಮವನ್ನು ಕೂಡ ‘ಪಾಪಾತ್ಮಾ’ ಎನ್ನುವುದುಂಟೇ ? ಆತ್ಮ ಎಂದಿದ್ದರೂ ನಿರ್ಮಲವಲ್ಲವೇ ? ಗುರುಗಳೇ ಹೇಳಿದ್ದರು, ಕಮಲದ ಪತ್ರದಂತೆ ಆತ್ಮ, ನೀರು ಬಿದ್ದರೂ ಕೊಂಚವಾದರೂ ಉರುವೂ ಅದರ ಮೇಲೆ ಉಳಿಯುವುದಿಲ್ಲ. ಹಾಗೆಯೇ ಆತ್ಮವನ್ನು ಯಾವ ಕಿಸುರೂ ಮುಸುಕಲಾರದು.- ಹಾಗಿದ್ದ ಮೇಲೆ ಪಾಪಾತ್ಮಾ ಎನ್ನುವುದೇ ತಪ್ಪಲ್ಲವೇ ? ಜತೆಗೆ ಪಾಪವೆಂಬುದು ಕಾಣುವ ಕಣ್ಣಿನದಾದಮೇಲೆ ಮನುಷ್ಯನಿಗೆ ಆ ಚಿಂತೆಯಾದರೂ ಯಾತಕ್ಕೆ ? ದೇವರನ್ನಾದರೂ ಯಾತಕ್ಕೆ ಬೇಡಬೇಕು?

ಇದೇ ಚಿಂತೆಯಲ್ಲೇ ಸದಾನಂದ ನದಿಯ ತೀರದಲ್ಲಿ ಬಹುಕಾಲ, ತನಗರಿವಿಲ್ಲದೆಯೇ ನಿಂತಿದ್ದ. ಸೂರ್ಯನಾಗಲೇ ಮುಳುಗಿ ಬಹು ಹೊತ್ತಾಗಿತ್ತು. ನೆರಳುಗಳು ಒಂದರೊಡನೊಂದು ಸ್ಪರ್ಧೆ ಹೂಡಿ ಬೆಳೆದು ಪ್ರಪಂಚವನ್ನೇ ಮುಚ್ಚಿಬಿಟ್ಟಿದ್ದುವು. ಗಾಳಿ ಕೂಡ ಇನ್ನು ಬೀಸಲು ಹೆದರಿಕೆ ಯೆನ್ನುವಂತೆ, ನಾನೂ ನೀನೂ ರಾತ್ರಿಯನ್ನು ಜತೆಯಾಗಿ ಕಳೆಯೋಣವೆಂದು ನದಿಯಲೆಗೆ ಪಿಸುಮಾತಾಡಿ ಒಲಿಸಿಕೊಳ್ಳಲು ಯತ್ನಿಸುತ್ತಿತ್ತು. ನದಿ ತನ್ನಂತೆ ತಾನು ಹರಿಯುತ್ತಿತ್ತು. ಸದಾನಂದನ ಮನಸ್ಸಿನ ಚಿಂತೆಯ ಪ್ರವಾಹವೂ ಹರಿದಿತ್ತು.

ಮರುದಿನ ಬೆಳಗಾಗ ವಿದ್ಯಾರಣ್ಯರು ಸದಾನಂದನ ಮುಖ ನೋಡಿದರು. ಮತ್ತೆ ಅವರ ತುಟಿಗಳ ಮೇಲೆ ಸುಳಿದೂ ಸುಳಿಯದಂತೆ ಹೂ ನಗೆಯೊಂದು ಹಾದುಹೋಯಿತು. ಶಿಷ್ಯನಿಗಿನ್ನೂ ಪಾಪ-ಪುಣ್ಯಗಳ ಮೋಹ ಹೋಗಿಲ್ಲವೆನಿಸಿತು. ನಿಷ್ಕಾಮಕರ್ಮಿ ಯಾವುದನ್ನೂ ಪಾಪ ವೆಂದೆಣಿಸಿಯೂ ಮಾಡುವುದಿಲ್ಲ. ಪುಣ್ಯವೆಂದೆಣಿಸಿಯೂ ಮಾಡುವುದಿಲ್ಲ. ಮಾಡುವದಷ್ಟೇ ತನ್ನ ಕೆಲಸ ಮಾಡಿಸುವವ ಬೇರೊಬ್ಬನಿದಾನೆ, ಹೊಣೆಯೆಲ್ಲ ಅವನ ಹೆಗಲಿಗೇ ಎಂದು ಸ್ಥಿರವಾಗಿರುತ್ತಾನೆ. ಅವನೇ ನಿಜವಾದ ಯೋಗಿಯೊಂಬುದು ಸದಾನಂದನಿಗೆ ಇನ್ನೂ ತಿಳಿಯದು. ಇನ್ನೂ ಚಿಕ್ಕ ಮಗು, ಅವನು, ಅನುಭವವಿಲ್ಲ, ಕಲ್ಪನೆಯಿಲ್ಲ. ಹೇಗೆ ತಾನೆ ಅದು ತಿಳಿಯ ಬೇಕು ಎಂದುಕೊಂಡು ಮತ್ತೆ ಅವನ ಕಡೆಗೊಮ್ಮೆ ನೋಡಿ ನಸುನಕ್ಕರು.

“ಮಗು” ವಾತ್ಸಲ್ಯದ ದನಿಯಲ್ಲಿ ಗುರುಗಳು ಕೂಗಿದರು, ಶಿಷ್ಯ ಪಾಪ ಪ್ರಣ್ಯಗಳ ಚಕ್ರತೀರ್ಥದಲ್ಲಿ ಸಿಕ್ಕಿದವನು ಅವರ ಮಾತು ಕೇಳಲಿಲ್ಲ. ಮತ್ತೊಮ್ಮೆ ಗುರುಗಳು ಅದೇ ವಾತ್ಸಲ್ಯದಿಂದ ಕೂಗಿದರು.

“ಮಗು”

“ಗುರುಗಳೇ?” ತಕ್ಷಣ ಬೆಚ್ಚಿ ಎಚ್ಚೆತ್ತ ಸದಾನಂದ.

“ಮಗು-ಯಾಕೆ ಸಪ್ಪಗಿರುವೆಯಲ್ಲಾ?-”

ಗುರುಗಳಿಗೆ ಹೇಳಲೋ ಬೇಡವೋ ಎಂದು ಸದಾನಂದನ ಮನಸ್ಸಿನಲ್ಲಿ ಶಂಕೆ. ಹೇಳಿದರೆ ಹೇಗೋ, ಬಿಟ್ಟರೆ ಹೇಗೋ-ಈ ತುಮುಲದಲ್ಲಿ ಮೌನವಾಗಿಯೇ ತಲೆ ತಗ್ಗಿಸಿ ನಿಂತಿದ್ದ.

“ಮಗು, ಇಂದು ಶುಕ್ರವಾರ, ಶಾರದೆಯ ಪೂಜೆಯಾದ ಒಡನೆಯೇ ಪ್ರಸಾದವನ್ನು ರಾಯನಿಗೆ ಕೊಡಬೇಕು, ನೆನಪಿದೆಯೇ?” ಎಂದರು.

“ಸರಿ, ಗುರುಗಳೇ”

“ಹಾಗೆಯೇ, ನಗರಕ್ಕೆ ಹೋದಾಗ-”

ಗುರುಗಳು ಅರೆನಿಮಿಷ ತಡೆದರು. ಸದಾನಂದ ತಲೆಯೆತ್ತಿದ.

“ನಗರಕ್ಕೆ ಹೋದಾಗ ಶಿವದೇವಾಲಯದ ದಕ್ಷಿಣದ ಬೀದಿಯಲ್ಲಿರುವ ನರ್ತಕಿ, ಮೈಥಿಲಿಗೂ ಪ್ರಸಾದ ಕೊಟ್ಟ ಬಾ, ನಮ್ಮ ಆಶೀರ್ವಾದ ತಿಳಿಸಿ ಬಾ.”

ಗುರುಗಳ ಮತಿನಿಂದ ಶಿಷ್ಯ ಬೆಕ್ಕಸಬೆರಗಾದ. ಎಂತಹ ಆಶ್ಚರ್ಯ! ವಿದ್ಯಾರಣ್ಯರು-ನರ್ತಕಿ ಮೈಥಿಲೀ! ಇದೇನೀ ವಿಲಕ್ಷಣ ಸಂಬಂಧ! ಯಾವುದೂ ಅರ್ಥವೇ ಆಗುವದಿಲ್ಲ! ಮುಖದಲ್ಲಿ ಆಶ್ಚರ್ಯ ಹೊತ್ತ ಸದಾನಂದನ ದೃಷ್ಟಿ ಗುರುಗಳಲ್ಲೇ ನೆಟ್ಟಿತ್ತು.

“ಮೈಥಿಲಿಯ ಆತಿಥ್ಯ ಸ್ವೀಕರಿಸಲು ನಮ್ಮದೇನೂ ಅಡ್ಡಿಯಿಲ್ಲವೆಂದೂ ತಿಳಿಸು. ಎಂದು ನಾವು ಬರುವೆವೆಂಬುದನ್ನು ಮುಂದೆ ತಿಳಿಸುವೆವೆಂದೂ ಹೇಳು.”

ಈಗಂತೂ ಸದಾನಂದ ನಂಬದಾದ, ನರ್ತಕಿ ಮೈಥಿಲಿಯ ಆತಿಥ್ಯ! ವಿದ್ಯಾರಣ್ಯರೇ ? ಸ್ವೀಕರಿಸುವರೇ? ಇದು ಹಿಮಾಲಯ ಕರಗಿ ಬೆಟ್ಟವಾಗಿ ಹೋದಂತಲ್ಲವೇ? ನರ್ತಕಿ ಮೈಥಿಲೀ-ಪಾಪದ ನೆಲಗಟ್ಟು! ವಿದ್ಯಾರಣ್ಯರು ಪುಣ್ಯಮೂರ್ತಿ! ಎರಡು ಬೇರೆ ಬೇರೆ ಪ್ರಪಂಚಗಳೇ ಆದುವು! ಅಂತಹುದು ಒಂದಿಗೆ ಬರಲು ಸಾಧ್ಯವೇ?- ಈ ಚಿಂತೆ ಸದಾನಂದನ ಮನಸಿನ ಬೆಂಕಿಗೆ ಆಜ್ಯ ಹೊಯ್ದಂತಾಯಿತು.

ಸದಾನಂದ ಗುರುಗಳ ಆಶೀರ್ವಾದವನ್ನೂ, ಅವರು ಕಳುಹಿಸಿದ ಪ್ರಸಾದವನ್ನೂ ತೆಗೆದುಕೊಂಡು ವಿಜಯನಗರಕ್ಕೆ ನಡೆಯುತ್ತಾ, ಮೈಥಿಲಿಯ ವಿಷಯವಾಗಿ ಒಂದೇ ಸಮನಾಗಿ ಯೋಚನೆ ಮಾಡುತ್ತಿದ್ದ. ಹಿಂದಿನದಿನ ಪಾಪದ ವಿಷಯವಾಗಿ ನಡೆದ ಚರ್ಚೆ ಮೈಥಿಲಿಯಲ್ಲಿ ಕೊನೆಗಂಡಂತಿತ್ತು, ಪಾಪಕ್ಕೆ ಬದಲು ಈಗ ಮೈಥಿಲಿ! ಮೈಥಿಲಿಯೆಂದರೆ ಪಾಪದ ಕಂತೆಯೆಂದು ಸದಾನಂದನ ಹೃದಯದ ಒಳನಂಬಿಕೆ. ಅವನು ಇದು ತನಕ ಆಕೆಯನ್ನು ನೋಡಿರಲಿಲ್ಲ. ಆಕೆಯನ್ನು ನೋಡಲು ಅವನಿಗೆ ಇಷ್ಟವೂ ಇರಲಿಲ್ಲ. ಅಷ್ಟೇಕೆ ಈ ದಿನ ಗುರುಗಳು ಅವಳಲ್ಲಿಗೆ ಅವನನ್ನು ಕಳುಹದಿದ್ದರೆ ಆಕೆಯ ವಿಚಾರ ಯೋಚಿಸುತ್ತಲೂ ಇರಲಿಲ್ಲ. ಆದರೆ ಬೇಕಾದಷ್ಟು ಆಕೆಯ ವಿಷಯ ಮಾತು ಕೇಳಿದ್ದ. ಮೈಥಿಲೀ ವಿಜಯನಗರದ ಆಸ್ಥಾನ ನರ್ತಕಿ. ಬಹಳ ಹೆಸರಾದ ಕುಣಿಯುವ ಹೆಣ್ಣು. ಅವಳಂತಹ ರೂಪವಂತ ಹೆಂಗಸು ವಿಜಯನಗರದಲ್ಲಿ ಮಾತ್ರವೇ ಏಕೆ, ಸಾಮ್ರಾಜ್ಯದಲ್ಲೇ ಇಲ್ಲವೆಂದು ಕೇಳಿಬಲ್ಲ. ಆದರೆ ಹೆಂಗಸಿನ ಸೌಂದರ್ಯ ತನಗೇನು ಗೊತ್ತು? ಸದಾನಂದ ಕಂಡಿದ್ದುದು ತನ್ನ ತಾಯಿಯೊಬ್ಬಳನ್ನು. ಉಳಿದವರನ್ನು ಕಣ್ಣೆತ್ತಿಯೂ ನೋಡದವನು, ದೇವನಲ್ಲದೆ ಮತ್ತಾರ ವಿಷಯವೂ ಆಸಕ್ತಿ, ಅಭಿರುಚಿ ತೋರೆದವನಿಗೆ ಹೆಣ್ಣಿನ ಸೌಂದರ್ಯ, ರೂಪದ ಆಕರ್ಷಣೆ ಹೇಗೆ ಗೊತ್ತಾಗಬೇಕು? ಆದರೂ ಹೇಳಿ ಕೇಳಿ ಆಕೆ ಅತ್ಯಂತ ರೂಪವತಿಯೆಂದು ಕೇಳಿದ್ದ. ಇನ್ನು ನರ್ತಕಿಯೆಂದ ಮೇಲೆ ಕೇಳಬೇಕಾಗಿಲ್ಲ. ವಿಲಾಸಕ್ಕೆ ಆಕೆಯ ನರ್ತನವೊಂದು ಸಾಮಗ್ರಿ, ಆಕೆ ಮತ್ತೊಂದು ಸಾಮಗ್ರಿ, ಪಾಪಕೂಪ ಆಕೆ! ಅಂತಹ ಮೈಥಿಲಿಗೆ ಗುರುಗಳು ಪ್ರಸಾದ, ಆಶೀರ್ವಾದ ಕೊಟ್ಟು ಕಳುಹಿಸಿರುವರಲ್ಲಾ, ಇದು ಸರಿಯೇ? ಎಂದು ಸದಾನಂದ ಒಂದೇ ಸಮನಾಗಿ ಬಗೆಹರಿಯದ ಸಮಸ್ಯೆಯ ಗಂಟುಗಳನ್ನು ಬಿಚ್ಚುತ್ತಾ ನಡೆದ. ಗುರುಗಳ ವಿಷಯದಲ್ಲಿ ಸಂದೇಹ ಪಡುವಂತಿಲ್ಲ. ಮತ್ತೆ? ಗುರುಗಳು ಹೀಗೆ ಪ್ರಸಾದ ಕಳುಹಿಸಿದುದರಲ್ಲಿ ಏನೋ ಗೂಢವಿರ ಬೇಕೆಂದೆನಿಸಿತು. ಅದೂ ತನನ್ನೇ ಕಳುಹಿಸಿದುದಕ್ಕೆ ಏನೋ ಒಳ ಅರ್ಥವಿರಲೇಬೇಕು ಎಂದು ಮನಸ್ಸಿನಲ್ಲಿ ಕೊಂಚ ಎಣಿಕೆ ಹಾಕಿದಂತೆ ತೊಡಕು ಬಿಡಿಸಿದಂತಾಯಿತು. ಪಾಪದ ಹಾದಿಯಲ್ಲಿರುವ ಮೈಥಿಲಿಯನ್ನು ಪುಣ್ಯಕ್ಕೆ ಕರೆದೊಯ್ಯುವ ಕಾರ್ಯವನ್ನು ಗುರುಗಳು ತನಗೆ ವಹಿಸಿರುವರು. ಅದಕ್ಕಾಗಿಯೇ ಈ ನೆವ. ಇದೊಂದು ನಿಮಿತ್ತ ಮಾತ್ರ, ನಿಮಿತ್ತ ಮಾತ್ರ! ನಿಜವಾಗಿಯೂ ಆಕೆಯನ್ನು ಪುಣ್ಯದ ದಾರಿಗೆ ತಂದೇಬಿಡುತ್ತೇನೆ, ಪಾಪದಿಂದ ಆಕೆಗೆ ಮುಕ್ತಿ ಕೊಡಿಸುತ್ತೇನೆಂದು ಸದಾನಂದ ತೀರ್ಮಾನಿಸಿಕೊಂಡ. ಮನಸ್ಸು ಕೊಂಚ ಹಗುರವಾಯಿತು. ಹೆಜ್ಜೆ ಹೆಚ್ಚಾಯಿತು.

ಒಂದು ಗಳಿಗೆ ಮಾತ್ರ! ಎವೆಯಿಕ್ಕುವಷ್ಟು ಕಾಲ ಮಾತ್ರ ಒಬ್ಬರನೊಬ್ಬರು ದಿಟ್ಟಿಸಿದರು. ಮರುನಿಮಿಷವೇ ಸದಾನಂದನ ಕಾಲುಗಳಿಗೆ ಆಕೆಯ ತಲೆ ಸೋಕಿತು. ದಾರಿಯಲ್ಲಿ ಅವನು ಏನೇನೋ ಎಣಿಕೆ ಹಾಕಿ ಕೊಂಡ. ಆಕೆಯನ್ನು ಹೀಗೆ ಮಾತನಾಡಿಸಬೇಕು. ಈ ರೀತಿಯಲ್ಲಿ ಬುದ್ದಿ ಹೇಳಬೇಕು. ಆ ರೀತಿಯಲ್ಲಿ ಬಯ್ಯಬೇಕು ಎಂದು ತೂಕವಿಟ್ಟು ಮಾತುಗಳನ್ನೆಲ್ಲಾ ಪೋಣಿಸಿ ಸಿದ್ಧವಾಗಿಟ್ಟುಕೊಂಡಿದ್ದ. ಆದರೆ ಅವಳನ್ನು ನೋಡಿದ ಗಳಿಗೆಯೋ ಆ ಮಾತೆಲ್ಲಾ ಎಲ್ಲಿಯೋ ಹಾರಿಹೋದುವು. ಬಿರುಗಾಳಿಗೆ ಸಿಕ್ಕಿದ ತರಗೆಲೆಗಳಂತೆ ಎಲ್ಲಿಯೋ ಮಾಯವಾಗಿದ್ದುವು. ಅವಳನ್ನು ನೋಡಿದ ಅರ್ಧಕ್ಷಣ ಎದೆಯನ್ನು ನಡುಗಿಸಿದಂತಾಯಿತು, ಎಲ್ಲವೂ ಮರೆತುಹೋಯಿತು. ಎದುರಿಗೇ ನಿಂತಿದ್ದ ಮೈಥಿಲಿಯೂ ಕಾಣಲಿಲ್ಲ. ತಾನಿದುವರೆಗೂ ಕಾಣದ, ತಿಳಿಯದ ಏನೋ ಒಂದು ಹೇಳಲಾರದ ಬೆಳಕಿನಲ್ಲಿ ಅರೆಕ್ಷಣ ಮಿಂದು ಮುಳುಗಿದ. ಆಗ ಹೊರ ಜಗತ್ತೆಲ್ಲ ಮರೆಯಾಗಿ ಮನಸ್ಸು ಸಚ್ಚಿದಾನಂದವಾಗಿತ್ತು. ಆದರೆ ತಕ್ಷಣವೇ ಮತ್ತೆ ಮೈಯರಿವು. ತಾನು ಸಾಧು ಸದಾನಂದ, ವಿದ್ಯಾರಣ್ಯರ ಶಿಷ್ಯ. ಬಂದಿರುವುದು ನರ್ತಕಿ ಮೈಥಿಲಿ ಮನೆಗೆ, ಪ್ರಸಾದ ಕೊಟ್ಟು ಆಶೀರ್ವಾದ ಮಾಡಿ ಹೋಗಲು, ಎಂದು ನೆನಪಾಯಿತು. ತನ್ನ ಪಾದಗಳಿಗೆ ನಮಸ್ಕರಿಸಿದ ಆಕೆಯ ಕಡೆಗೆ ಕೈ ನೀಡಿದ. ಆದರೆ ಏನು ಆಶೀರ್ವಾದ ಮಾಡಬೇಕೆಂಬುದು ಒಡನೆಯೇ ತೋಚದೆ ಕೊಂಚ ಬಾಯಿ ತೊಡರಿತು. ಸುಮಂಗಲಿಯಾಗಿ ಬಾಳೆನ್ನುವುದು ಸಾಗದುದು. ಆಕೆ ಎಷ್ಟಿದ್ದರೂ ಭೋಗ ವಿಲಾಸದ ಒಂದು ಸಾಮಗ್ರಿ, ನರ್ತಕಿ. ಮತ್ತಿನ್ನೇನು ಹೇಳಲು ಸಾಧ್ಯ! ಅವನಿಗರಿವಿಲ್ಲದೆಯೇ ಅವನ ಮನಸ್ಸಿನ ಮಾತು ಹೊರಬಿತ್ತು. “ಪಾಪದ ಹಾದಿ ಬಿಟ್ಟು ಪುಣ್ಯದ ಹಾದಿಗೆ ಬಂದು ಸುಖವಾಗಿ ಬಾಳು!” ಎಂದು ಹರಸಿದ. ಆ ಮಾತಿನಲ್ಲಿ ಗಾಂಭೀರ್ಯವಿತ್ತು, ಗಡುಸಿತ್ತು. ಪುಣ್ಯದ ಆವೇಶದ ಜತೆಗೆ ಪಾಪವನ್ನೆದುರಿಸುವ ದಿಟ್ಟತನವೂ ಇತ್ತು.

ಮೈಥಿಲೀ ಎದ್ದು ನಿಂತು ಕೈಮುಗಿದಳು. ಸದಾನಂದ ಅವಳ ಕಡೆಗೆ ನೋಡದೆಯೇ ಕೈಯನ್ನು ಅವಳ ಕಡೆಗೆ ನೀಡಿದ. ಮೈಥಿಲೀ ಭಕ್ತಿಯಿಂದ ಕೈ ನೀಡಿದಳು. ನಾಲ್ಕು ಹೂವು, ಬಿಳಿ ಮಲ್ಲಿಗೆ ಹೂವು ಅವಳ ಕೈಗಳಿಗೆ ಬಿದ್ದುವು.

“ಗುರುಗಳು ಕಳುಹಿಸಿದ ಪ್ರಸಾದ. ಗುರುಗಳು ಆಶೀರ್ವಾದ ಕಳುಹಿಸಿದ್ದಾರೆ” ಎಂದ ಸದಾನಂದ ನಿರಾಸಕ್ತ ದನಿಯಲ್ಲಿ.

“ಪಾಪಿಯ ಮೇಲೆ ಗುರುಗಳ ಕರುಣೆ ಬಹಳ” ಎಂದಳು ನಮ್ರತೆಯಿಂದ ಮೈಥಿಲೀ.

ಸದಾನಂದನಿಗೆ ಆಕೆಯ ಮಾತಿನಿಂದೇನೋ ಒಂದು ಬಗೆಯ ಸಂತೋಷ. ‘ಪಾಪಿ’ ಯೆಂದು ತನ್ನನ್ನು ತಾನೇ ಕರೆದುಕೊಂಡಳಲ್ಲ. ಪಾಪವೆಂದು ಅವಳಿಗೆ ಗೊತ್ತಿರಬೇಕಾದರೆ ಅವಳನ್ನು ಅಲ್ಲಿಂದ ಬಿಡುಗಡೆ ಮಾಡಿಸುವುದು ಕರಿನವಲ್ಲವೆನಿಸಿತು.

“ಗುರುಗಳು ಕರುಣಾಮೂರ್ತಿ, ಅವರ ಕರುಣೆಗೆ ಎಲ್ಲರೂ ಪಾತ್ರರೇ, ಆದರೆ ಪಾಪದಿಂದ ದೂರವಾಗಲು ಯತ್ನಿಸಿದರೆ ಅವರ ಕರಣೆ ಸಾರ್ಥಕ.”

ಸದಾನಂದನ ಮಾತು ಕೇಳಿ ಮೈಥಿಲೀ ಚಕಿತಳಾದಳು. ಮೆಲ್ಲನೆ ಕಣ್ಣರಳಿಸಿ ಅವನ ಕಡೆ ನೋಡಿದಳು. ಸನ್ಯಾಸಿ-ಎಂತಹ ಸನ್ಯಾಸಿ! ಮೊದಲು ಅವನನ್ನು ನೋಡಿದಾಗಲೇ ಅವನ ದೀರ್ಘಕಾಯವನ್ನು ಕಂಡು ಬೆರಗಾಗಿದ್ದಳು. ಆಜಾನುಬಾಹು, ಸುಂದರರೂಪಿ, ಸಂಯಮ, ಯೋಗಗಳ ಅಭ್ಯಾಸದಿಂದ ಮುಖದಲ್ಲೊಂದು ಅನಿರ್ವಚನೀಯ ವರ್ಚಸ್ಸು. ಕಣ್ಣುಗಳಲ್ಲಿ ಒಂದು ಅಪೂರ್ವ ನಿರ್ಮಲ ಕಾಂತಿ, ಹೊಳಪು. ಆಗಲೇ ಮೈಥಿಲೀ ಸನ್ಯಾಸಿಗೆ ಮನಸೋತಿದ್ದಳು. ಈಗಂತೂ ಅವಳ ಆಶ್ಚರ್ಯಕ್ಕೆ ಮಿತಿಯೇ ಇಲ್ಲ. ಇನ್ನೂ ಇದೇತಾನೆ ಬಂದ ಸನ್ಯಾಸಿ, ತನ್ನನ್ನಾಗಲೇ ಪಾಪದ ಹಾದಿ ತುಳಿಯದಂತೆ ಬೋಧಿಸಲು ಹೊರಟಿದ್ದಾನೆ. ಎಂದ ಮೇಲೆ ಆತನ ಶ್ರದ್ಧೆ, ಪುಣ್ಯದಲ್ಲಿ ಆತನ ಆಸಕ್ತಿ ಎಷ್ಟಿರಬೇಕು! ಮೈಥಿಲಿಗೆ ಸದಾನಂದನಲ್ಲಿದ್ದ ಗೌರವ ಒಮ್ಮೆಗೇ ಏರಿತು. ಆತನ ಮಾತಿಗೆ ಏನೂ ಉತ್ತರ ಕೊಡದೆ ಮತ್ತೆ ತಲೆ ಬಾಗಿಸಿ ನಿಂತಳು.

ತಲೆ ಬಾಗಿಸಿದಂತೆ ಅವನ ಪಾದಗಳ ಮೇಲೆ ಅವಳ ದೃಷ್ಟಿ ಬಿತ್ತು. ಎಂತಹ ಸುಂದರವಾದ ಕಾಲುಗಳು. ಎಷ್ಟೊಂದು ಅಚ್ಚುಕಟ್ಟಾಗಿ, ಪರಿಪೂರ್ಣವಾಗಿವೆ. ನೃತ್ಯಕ್ಕೆ ಸರಿಯಾದ ಕಾಲುಗಳು, ಆ ಕಾಲುಗಳಿಗೆ ಗೆಜ್ಜೆ ಕಟ್ಟಿದರೆ, ಬರಿಯ ಝಣಕಾರದಲ್ಲಿಯೇ ಸ್ವರ್ಗವನ್ನು ಭೂಮಿಗಿಳಿಸ ಬಲ್ಲವು ಎನಿಸಿತು. ಆ ಪಾದಗಳನ್ನು ಸೇವೆ ಮಾಡುವ ಭಾಗ್ಯ ಯಾವ ಹೆಂಗಸಿನದೋ ಎಂದುಕೊಂಡಳು. ತಕ್ಷಣ ಒಂದು ಬಗೆಯಾದ ಅಸೂಯೆ ಹೃದಯವನ್ನು ಈಟಿತು. ಎಷ್ಟಿದ್ದರೂ ಮೈಥಿಲೀ ಹೆಂಗಸು. ಸುಂದರ ವಸ್ತು ಯಾವುದಾದರೂ ಇದ್ದರೆ ಅದು ಇನ್ನೊಬ್ಬರಿಗಿದೆಯಲ್ಲಾ, ನನಗಿಲ್ಲವಲ್ಲಾ ಎನ್ನುವ ಅಸೂಯೆ ಹೆಣ್ಣಿನ ಮೂಲಭಾವ. ಅಂದ ಮೇಲೆ ಮೈಥಿಲೀ ಆ ಪಾದಗಳನ್ನು ಸೇವಿಸಲು ಬಯಸಿದುದು ಸಹಜವೇ.

“ತಮ್ಮ ಪಾದಧೂಳಿ ಧರಿಸಲು-” ಎಂದಳು ಮೆಲ್ಲನೆ.

“ಛೇ! ಛೇ! ನಾನೂ ನಿನ್ನಂತೆಯೇ ಒಬ್ಬ ಜೀವಿ. ನನ್ನ ಪಾದ ಧೂಳಿಯನ್ನೇಕೆ_”

“ಇಲ್ಲ. ತಾವು ಕೃಪೆಮಾಡಬೇಕು. ಪಾದಪೂಜೆ ಮಾಡುವುದು ಹಿರಿಯರಿಗಲ್ಲದೆ ಮತ್ತಾರಿಗೆ?” ಎಂದು ಮೈಥಿಲೀ ಮುಂದೆ ಬಂದಳು. ದಾಸಿ ಅಗಲವಾದ ಭಂಗಾರದ ತಟ್ಟೆಯನ್ನು ತಂದಿಟ್ಟಳು. ಸದಾನಂದ ಮನಸ್ಸಿಲ್ಲದ ಮನಸ್ಸಿನಿಂದ ಅದರಲ್ಲಿ ನಿಂತ. ಹುಂ! ಗುರುಗಳೇ ಅವಳ ಆತಿಥ್ಯ ಸ್ವೀಕರಿಸಬಹುದಂತೆ, ನಾನು ಕಾಲು ತೊಳೆಸಿಕೊಂಡರೆ ತಪ್ಪಾಗಲಾರದು ಎಂದು ಒಂದು ಮನಸ್ಸು, ಪಾಪಿಯ ಸ್ಪರ್ಶದಿಂದ ಪಾಪದ ಸೋಂಕಾದೀತು ಎಂದು ಎಚ್ಚರಿಸಿತು ಮತ್ತೊಂದು ಮನಸ್ಸು. ಆ ಪಾಪಿಯ ಪಾಪ ತೊಡೆದು ಹಾಕಲು ತಾನು ತನ್ನ ಸರ್ವ ಶಕ್ತಿಯನ್ನೂ ವಿನಿಯೋಗಿಸಬೇಕೆಂದು ತೀರ್ಮಾನಿಸಿಲ್ಲವೇ? ಮತ್ತೆ ಇದರಿಂದ ತನಗಾವ ಕೆಡುಕೂ ಇಲ್ಲವೆಂದು ಒಂದು ಮನಸ್ಸು. ಅವನ ಈ ಇಬ್ಬಗೆಯ ಚಿಂತನೆಯನ್ನರಿಯದ ಮೈಥಿಲೀ ಮೃದುವಾಗಿ ಮಗುವಿಗೆ ನೀರೆರೆಯುವಂತೆ ಅವನ ಕಾಲುಗಳನ್ನು ತೊಳೆಯುತ್ತಿದ್ದಳು.

“ದೊಡ್ಡ ಮನಸ್ಸು ಮಾಡಿ, ಈ ದೀನೆಯ ಆತಿಥ್ಯ ಸ್ವೀಕರಿಸಬೇಕು” ಎಂದಳು ಮೈಥಿಲೀ. ಮತ್ತೆ ಸದಾನಂದನ ಮನಸ್ಸಿನಲ್ಲಿ ತುಮುಲ ಕೋಲಾಹಲ. ಒಪ್ಪಿದರೆ ಹೇಗೋ, ಬಿಟ್ಟರೆ ಹೇಗೋ! ಆದರೆ ಗುರುಗಳೇ ಅವಳ ಆತಿಥ್ಯ ಸ್ವೀಕರಿಸಿದಮೇಲೆ ಮತ್ತೇನು? ಜತೆಗೆ ಆಕೆಯನ್ನು ಪುಣ್ಯದ ಹಾದಿಯಲ್ಲಿ ತರಲು ಇದೂ ಸಹಕಾರಿಯಾಗುವಂತಿದ್ದರೆ ಯಾಕಾಗಬಾರದು. ತನ್ನ ಮನಸ್ಸಿನ ಕೋಟೆ ಭದ್ರವಾಗಿರುವಾಗ ಯಾವ ಪಾಪ ತಾನೇ ಅಲ್ಲಿ ಮುತ್ತಿಗೆ ಹಾಕಿ ಏನು ಗಳಿಸೀತು?

ಸದಾನಂದ ಒಂದು ಲೋಟ ಹಾಲು ಕುಡಿದ. ಹಾಗೆಯೇ ಕುಳಿತು, ಆ ಕಡೆ ಕುಳಿತ ಮೈಥಿಲಿಯನ್ನು ನೋಡದೆಯೇ ಮಾತನಾಡುತ್ತಿದ್ದ.

“ಪ್ರಪಂಚದಲ್ಲಿ ಯಾರ ಕೃಪೆಯೇ ಆಗಲಿ, ಕರುಣೆಯೇ ಆಗಲಿ, ಆಶೀರ್ವಾದವೇ ಆಗಲಿ ಫಲಿಸಬೇಕಾದರೆ ನಾವು ಅದಕ್ಕೆ ಯೋಗ್ಯರಾಗಿರಬೇಕು. ಅಷ್ಟೇ ಅಲ್ಲದೆ ನಾವೂ ಪ್ರಯತ್ನ ಪಡಬೇಕು, ಪಾಪದ ಹಾದಿ ತುಳಿಯುತ್ತಲೇ ಇರುವವರಿಗೆ ಆಶೀರ್ವಾದದಿಂದ ಏನೂ ಉಪಯೋಗವಿಲ್ಲ.”

“ಪಾಪದ ಹಾದಿಯೆಂದರೇನು, ಸ್ವಾಮಿ?” ಎಂದಳು ಮೈಥಿಲೀ.

“ಪಾಪದ ಹಾದಿಯೆಂದರೆ ನರಕದ ಹೆದ್ದಾರಿ, ಯಾವುದು ದೇವರಿಗೆ ಸಮರ್ಪಿತವಲ್ಲವೋ, ಯಾವುದು ಮಾನವನ ವಿಲಾಸಕ್ಕಾಗಿರುವುದೋ, ಯಾವುದು ಮನುಷ್ಯನನ್ನು ಭೋಗಕ್ಕೊಯ್ದು ನೂಕುವುದೋ ಅದು ಪಾಪ.”

ಮೈಥಿಲೀ ಅವನ ಮಾತಿಗೆ ಚಳಿ ಬಂದವಳಂತೆ ನಡುಗಿದಳು. ತನ್ನನ್ನು ನೇರವಾಗಿ ಸನ್ಯಾಸಿ ಮಾತುಗಳಿಂದ ಕತ್ತರಿಸುತ್ತಿರುವನು. ಇನ್ನೇನು ಗತಿಯೆಂದು ತತ್ತರಿಸಿದಳು.

ಬಹು ಕಷ್ಟದಿಂದ ತಾನೂ ಬಾಯಿಹಾಕಲು ಯತ್ನಿಸಿದಳು.

“ಆದರೆ-”

ಸದಾನಂದ ಅವಳ ಮಾತಿಗೆ ಅನುವೇ ಕೊಡಲಿಲ್ಲ. ತನ್ನ ಸುತ್ತಿಗೆಯ ಪೆಟ್ಟುಗಳನ್ನು ನಿಲ್ಲಿಸಲಿಲ್ಲ.

“ದೇವರು ಕೊಟ್ಟ ಸೌಂದರ್ಯ ದೇವರ ಸೇವೆಗೆ ಸಲ್ಲಬೇಕು. ಕೆರೆಯ ನೀರು ಮತ್ತೆ ಕರೆಗೇ! ದೇವರು ತನ್ನ ಸೇವೆಗಾಗಿ ಕೊಟ್ಟ ಸೌಂದರ್ಯವನ್ನು ವಿಲಾಸದ ಉಪಶಮನಕ್ಕಾಗಿ, ಮಾನವನ ಭೋಗಕ್ಕಾಗಿ ಉಪಯೋಗಿಸುವುದು ಪಾಪಕಾರ್ಯ, ಹೂವನ್ನು ಕಿತ್ತು ದೇವರಿಗೆ ಪೂಜೆಮಾಡುವ ಬದಲು ಧೂಳಿನಲ್ಲಿ ಎಸೆದಂತೆ. ಅದು ಮಹಾ ಪಾಪ!”

“ಆದರೆ-ಮನುಷ್ಯ-ವಾತ್ಸಲ್ಯ”

“ಅವೆಲ್ಲವೂ ಮಾಯೆ, ಮೋಹಗಳನ್ನೆಲ್ಲಾ ಬಿಟ್ಟು ಬಿಡಬೇಕು. ದೇವರು ನಮ್ಮನ್ನು ಪರೀಕ್ಷಿಸಬೇಕೆಂದು ದಾರಿಯಲ್ಲಿ ನೂರು ಬಗೆಯ ತೊಡಕು ಸೃಷ್ಟಿಸುತ್ತಾನೆ. ನೂರು ಬಗೆಯ ಆಸೆಗಳನ್ನು ಒಡ್ಡುತ್ತಾನೆ. ಸಾವಿರ ರೀತಿಯ ಅಭಿಲಾಷೆಯ ಒಲೆಗಳನ್ನು ಬೀಸುತ್ತಾನೆ. ಪಾಪ ಯಾವಾಗಲೂ ಆಕರ್ಷಕ. ಅದೂ ದೇವರ ಒಂದು ಸೃಷ್ಟಿಯ ಮಾಯೆ. ಅವುಗಳನ್ನೆಲ್ಲಾ ದಾಟಿ, ಮಾಯೆಯನ್ನು ಹರಿದು, ಆಸೆ, ಅಭಿಲಾಷೆಗಳನ್ನೆಲ್ಲಾ ಹಿಂದೆಸೆದು, ಪಾಪವನ್ನು ಕಿತ್ತೆಸೆದು, ಅಚಲಭಕ್ತಿಯಿಂದ, ಅಚಲ ಶ್ರದ್ದೆಯಿಂದ ಪುಣ್ಯದ ಹಾದಿ ತುಳಿಯಬೇಕು. ಆಗಲೇ ಜೀವನ ಸಾರ್ಥಕ.”

ಮೈಥಿಲೀ ಮಂತ್ರಮುಗ್ಧಳಂತೆ ಅವನನ್ನೇ ಎವೆಯಿಕ್ಕದೆ ನೋಡುತಿದ್ದಳು. ಸುಂದರರೂಪಿ ಸನ್ಯಾಸಿಯಲ್ಲಿ ಎಂತಹ ಸುಂದರವಾದ ಮಾತುಗಳು. ಅವನ ಮೈಸೊಗಸಿನ ಜತೆಗೆ ವಿಚಾರದ ಸೊಗಸೂ ಸೇರಿಕೊಂಡು ಅವಳಿಗೆ ಮೋಡಿ ಹಾಕಿತ್ತು. ಒಂದೇ ಸಮನಾಗಿ, ಕಣ್ಣು ಕೀಳದೆ ಅವನನ್ನೇ ದೃಷ್ಟಿಸುತ್ತಿದ್ದಳು. ಸದಾನಂದ ಮಾತಾಡುತ್ತಾ ಆಡುತ್ತಾ ಅವಳ ಕಡೆಗೊಮ್ಮೆ ತಿರುಗಿದ. ತಕ್ಷಣವೇ ಮುಳ್ಳು ಚುಚ್ಚಿದ ಕೈ ಹಿಂದೆಳೆದು ಕೊಳ್ಳುವಂತೆ ಬೇರೆ ಕಡೆಗೆ ದೃಷ್ಟಿ ತಿರುಗಿಸಿದ. ಎದೆ ಯಾಕೋ ಜಿಲ್ಲೆಂದಿತು. ಅಚಲನಂಬಿಕೆಯ ಅಡಿ ಸಡಿಲವಾದಂತಾಯಿತು. ಹೃದಯದಲ್ಲಿದ್ದ ಶ್ರದ್ದೆಯ ಬುಡ ನಡುಗಿತು, ಒಂದು ಗಳಿಗೆ ಮಾತ್ರ! ಮತ್ತೆ ಮೊದಲಿನಂತೆಯೇ ಮಾತು.

“ಈ ಪ್ರಪಂಚದ ಮಾಯೆ ಕಳಚಬೇಕು, ಅವಿಚಲವಾದ, ಅನಂತವಾದ ಸುಖ ಸಿಗಲು ಅದೊಂದೇ ಮಾರ್ಗ, ಹೊರರೂಪದ ಮೋಹ, ಹೊಗಳಿಕೆಯ ಪೂಜೆ, ಹಣದ ಆಕರ್ಷಣೆ ಇವುಗಳೆಲ್ಲ ಪಾಪದ ಕೂಪಕ್ಕೆ ಮೆಟ್ಟಲುಗಳು ಅವುಗಳನ್ನಷ್ಟನ್ನೂ ಕಳಚಬೇಕು, ಅವುಗಳನ್ನು ಇಲ್ಲವಾಗಿಸ ಬೇಕು, ಮನಸ್ಸು ಶುದ್ಧವಾಗಬೇಕು, ಮಾಡುವ ಕೆಲಸ ಶುದ್ಧವಾಗಬೇಕು. ಅದು ಪುಣ್ಯದ ಹಾದಿ.”

ಮೈಥಿಲೀ ಕೇಳುತ್ತ ಕುಳಿತಿದ್ದಳು. ಈ ಯುವಕ ಸನ್ಯಾಸಿಯ ಬಾಹುಗಳು ಎಷ್ಟು ಸುಂದರವಾಗಿವೆ, ಈತನ ವಿಶಾಲವಾದ ಎದೆಯಮೇಲೆ ತಲೆಯನ್ನಿಟ್ಟುಕೊಂಡರೆ ಎಷ್ಟೊಂದು ಸುಖವಿರಬೇಕು, ಎಷ್ಟೊಂದು ಆನಂದ! ಈತನ ಕೈಹಿಡಿಯಲು ಎಷ್ಟು ಪುಣ್ಯಬೇಕೋ-ಈತನ ಸಾನ್ನಿಧ್ಯ ಎಷ್ಟು ಸೊಗಸೋ! ಅದಕ್ಕಾಗಿ ಏನು ಬೇಕಾದರೂ ಮಾಡಬಹುದಲ್ಲವೇ! ಇದುವರೆಗೂ ತಾನು ಪಟ್ಟ ಸುಖ ನಿಜವಾದ ಸುಖವಲ್ಲ. ಈತನೊಂದಿಗೆ ಮಾತ್ರ ನಿಜವಾದ ಸುಖ ಸಿಗಬಹುದು, ಸಿಗುವುದು. ಅದಕ್ಕಾಗಿ ಏನು ಬೇಕಾದರೂ ಕೊಡಬಹುದು, ಏನಾದರೂ ತ್ಯಾಗಮಾಡಬಹುದು ಎಂದು ಯೋಚಿಸುತ್ತಿದ್ದಳು. ದೃಷ್ಟಿ ಮಾತ್ರ ಅವನ ಮುಖದಲ್ಲಿ ನೆಟ್ಟಿತ್ತು.

“ಈ ಪುಣ್ಯದ ಹಾದಿಯನ್ನು ನೀನೇಕೆ ಹಿಡಿಯಕೂಡದು? ಪಾಪದ ಹಾದಿ ಬಿಟ್ಟು ಬಿಡು, ನರ್ತಕಿ, ಪಾಪದ ಹಾದಿ ಬಿಡು. ಇನ್ನಾದರೂ ನಿನ್ನ ಜೀವವನ್ನು, ನಿನ್ನ ಆತ್ಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡು. ಈಗ ನೀನಿರುವ ಬಚ್ಚಲಿಂದ ಎದ್ದು ನಿಲ್ಲುವ ಪ್ರಯತ್ನ ಮಾಡು, ಪುಣ್ಯದ ಗಂಗಾಸ್ನಾನಮಾಡಿ ಪವಿತ್ರಳಾಗು, ನಿನ್ನ ಬಾಳನ್ನು ಸಾರ್ಥಕಗೊಳಿಸು.”

ಮೈಥಿಲೀ ಹಾಗೆಯೇ ಕುಳಿತಿದ್ದಳು. ಈತನನ್ನು ಪಡೆದಂದೇ ತನ್ನ ಬಾಳು ಸಾರ್ಥಕ. ಇದುವರೆಗೆ ತಾನು ಹೃದಯವಿಟ್ಟು, ಪ್ರೇಮನೀಡಿ ಸುಖ ಪಡೆದ ವ್ಯಕ್ತಿಯೊಬ್ಬನೂ ಇಲ್ಲ. ತನ್ನ ವಿಲಾಸಿಗಳೆಲ್ಲ ತನ್ನ ನರ್ತನಕ್ಕೆ, ಹೊರರೂಪಕ್ಕೆ ಮರುಳಾಗಿದ್ದರೇ ಹೊರತು, ಯಾರೂ ತನ್ನ ಪ್ರೇಮಕ್ಕಾಗಿ ಹಾತೊರೆದಿರಲಿಲ್ಲ. ತನ್ನ ಸುಖದ ವಿಚಾರ ಯಾರಿಗೂ ಆಸಕ್ತಿಯಿರಲಿಲ್ಲ. ಅವರೆಲ್ಲ ತಮ್ಮ ಸುಖ, ಭೋಗ, ವಿಲಾಸಗಳಿಗಾಗಿ ಅವಳ ಬಳಿ ಬರುತ್ತಿದ್ದವರು, ಒಬ್ಬರಾದರೂ ಅವಳ ಸುಖದ ವಿಚಾರಕ್ಕೆ ಗಮನವನ್ನೇ ಕೊಟ್ಟಿರಲಿಲ್ಲ. ಆದರೆ ಈ ಸನ್ಯಾಸಿ ಅವರಂತಲ್ಲ; ತನ್ನ ಮೇಲ್ಮೆಗಾಗಿ, ತನ್ನ ಸುಖಕ್ಕಾಗಿ ಬೋಧನೆ ಮಾಡುತ್ತಿದ್ದಾನೆ. ತಾನಿದುವರೆಗೂ ಹಿಡಿದ ಹಾದಿಯಲ್ಲಿ ಸುಖವಿಲ್ಲ, ಅದು ತಪ್ಪುಹಾದಿಯೆಂದು ಧೈರ್ಯವಾಗಿ ತನಗೆ ಹೇಳುತ್ತಿದಾನೆ. ಇಷ್ಟಾಗಿ ತನ್ನಲ್ಲಿ ಅವನಿಗೆ ಯಾವ ಆಸಕ್ತಿಯೂ ಇಲ್ಲ, ತನ್ನಿಂದ ಅವನಿಗೆ ಯಾವ ವಿಧವಾದ ಉಪಯೋಗವೂ ಇಲ್ಲ; ಇಂತಹವನೊಂದಿಗೆ ಬಾಳು ಕಳೆದರೇ ಸಾರ್ಥಕ ಎನಿಸಿತು. ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಳು.

ಸದಾನಂದ ಮಾತನ್ನೇನೋ ಆಡುತ್ತಿದ್ದ. ಆದರೆ ಅದೇಕೋ ಏನೋ ಆರಂಭಿಸುವಾಗಿನ ಧೈರ್ಯ ಆಮೇಲಿರಲಿಲ್ಲ. ಏನೋ ಒಂದು ಬಗೆಯ ಒಡಕು ದನಿ ಹೃದಯದಲ್ಲೆದ್ದಂತಾಗಿತ್ತು. ತಾನು ಹೇಳುವ ಮಾತುಗಳೆಲ್ಲ ನಿಜವೇ ಇರಬೇಕು ಎನ್ನುವ ಅಚಲನಂಬಿಕೆ ಮಾಯವಾಗಿತ್ತು, ನಿಶ್ಚಯ ಕೊಂಚ ಸಡಿಲವಾಗಿತ್ತು. ಎಲ್ಲವೂ ಮಾಯೆಯೆಂದ ಮೇಲೆ ಪಾಪ-ಪುಣ್ಯಗಳೂ ಮಾಯೆಯೇ ಅಲ್ಲವೇ, ಅದಕ್ಕೇಕೆ ಚಿಂತೆಯೆಂದು ಒಂದು ದನಿ ನಡುವೆ ಎದ್ದಿತು. ಅದನ್ನಲ್ಲಿಯೇ ಕತ್ತು ಹಿಸುಕಿದ. ಮುಂದಿನ ಮಾತುಗಳೇನೋ ಜೋರಾಗಿಯೇ ಆಡಿದರೂ ಒಳಗೆ ಅಷ್ಟಾಗಿ ಕಾವು ಕಾಣಲಿಲ್ಲ. ತನ್ನ ಮಾತನ್ನು ತಾನೇ ಅರ್ಥಮಾಡಿಕೊಳ್ಳದವನಂತೆ ಮಾತಾಡಿದ. ಪಾಪ ಪುಣ್ಯಗಳನ್ನು ಅವಳಿಗೆ ವಿವರಿಸಿದ. ಅವಳು ಮಾಡುತ್ತಿರುವುದು ಪಾಪ. ಅದು ತಪ್ಪು, ಪುಣ್ಯದ ಹಾದಿ ಹಿಡಿಯಬೇಕು, ಆಗಲೇ ಅವಳು ಇರುವುದು ಸಾರ್ಥಕ, ಇದ್ದಂತೆ ಲೆಕ್ಕ. ಅದಕ್ಕಾಗಿ ಅವಳು ಎಲ್ಲ ಬಗೆಯ ಮೋಹಗಳಿಂದಲೂ ಬಿಡುಗಡೆ ಹೊಂದಬೇಕು. ಆಗ ಅವಳಿಗೆ ಮುಕ್ತಿ!

ಸದಾನಂದ ಹೊರಟುಹೋದ ಬಹು ಹೊತ್ತಿನವರೆಗೂ ಮೈಥಿಲೀ ಅಲ್ಲಿಯೇ ಕುಳಿತಿದ್ದಳು. ಅವನು ಹೋಗುವಾಗ ಅವನನ್ನು ಬೀಳ್ಕೊಡಲು ಕೂಡ ಅವಳು ಏಳಲಿಲ್ಲ. ಯಾವುದೋ ಗಾರುಡಿಯ ಮಾಯದ ಮೋಡಿಗೆ ಸಿಕ್ಕಿಕೊಂಡವಳಂತೆ ಅವಳು ಅಲುಗಾಡದೆ ಕುಳಿತಿದ್ದಳು. ಅವಳ ಕಣ್ಣಿನಲ್ಲಿನ್ನೂ ಆತನ ತುಂಬುರೂಪ ಕುಣಿಯುತ್ತಿತ್ತು. ಎಂತಹ ಸುಂದರಾಕೃತಿ ಆತನದು. ಅದೇನು ಆ ಮುಖದ ವರ್ಚಸ್ಸು, ತೇಜಸ್ಸನ್ನು ಸುತ್ತಲೂ ಚೆಲ್ಲುವನೋ ಎನ್ನುವಂತೆ ಕಾಂತಿಗೊಂಡ ಆ ಮುಖದ ಮಾಟ ಎಷ್ಟು ಮುದ್ದಾಗಿತ್ತು. ಆ ಕಣ್ಣುಗಳ ಹೊಳಪು ಎಷ್ಟು ತೀವ್ರವಾದರೂ ಎಷ್ಟು ಶೀತಲ, ತಂಪು. ಅವನ ಮೈಕಟ್ಟು ಏನು ಮನೋಹರ! ಮೈಥಿಲೀ ಕಣ್ಣಿನಲ್ಲಿ ಸದಾನಂದನ ಆಕರ್ಷಕರೂಪ ಕಟ್ಟಿತ್ತು. ಕಣ್ಣು ಮುಚ್ಚಿ ಮೆಲ್ಲನೆ ಅವನೊಂದಿಗೆ ನೂರಾರು ದೃಶ್ಯಗಳಲ್ಲಿ ತಾನೂ ಬೆರೆತುಹೋದಳು, ಮುಚ್ಚಿದ ಕಣ್ಣಿನ ಕಪ್ಪಿರುಳಿನಲ್ಲಿ ಕೋಟಿ ಬಣ್ಣದ ಕಾಮಧನು ಮೂಡಿತ್ತು. ಆದರೆ ಅಷ್ಟೇ ಅಲ್ಲ. ಅವಳ ಮನಸ್ಸು ಮಾರುಹೋಗಿದ್ದುದು ಬರಿಯ ರೂಪಕ್ಕೆ ಮಾತ್ರವೇ ಅಲ್ಲ, ಅವನ ಮಾತಿನಲ್ಲಿ ಮೈಥಿಲಿಗೆ ಸತ್ಯ ಕಂಡಿತ್ತು, ಸೌಂದರ್ಯ ಕಂಡಿತ್ತು. ಕಿವಿಗಳಲ್ಲಿ ಅವನ ಮಾತಿನ್ನೂ ಮರುದನಿಗೊಳ್ಳುತ್ತಿತ್ತು. ಗಡುಸಾದರೂ ಗಂಭೀರವಾದ ಅವನ ಮಾತುಗಳಲ್ಲಿ ಎಷ್ಟು ನಿಜ ಹುದುಗಿದೆಯೆಂದು ಅವಳಿಗನಿಸಿತ್ತು. ತಾನು ನಡೆಸುತ್ತಿರುವ ಜೀವನದಲ್ಲಿ ತನಗೆ ಸುಖವೇನಾದರೂ ಇದೆಯೇ? ಇದುವರೆಗೂ ತನಗೇನಾದರೂ ಸುಖವಿತ್ತೇ ? ಎಂದು ತನ್ನನ್ನು ತಾನೇ ಕೇಳಿಕೊಂಡಳು. ತನಗೆ ಬೇಕಾದ ಸುಖ ಇದುವರೆಗೂ ಸಿಕ್ಕಿರಲಿಲ್ಲ. ಆ ಸುಖವೇನೆಂದು ಕೇಳಿದ್ದರೆ ಅವಳಿಗೆ ಇದುವರೆಗೂ ಗೊತ್ತಿರಲಿಲ್ಲ. ಈಗಲೂ ಸರಿಯಾಗಿ ಹೇಳಲು ಸಾಗುತ್ತಿರಲಿಲ್ಲ. ಆದರೆ ಈಗ ಮಾತ್ರ ಆ ಸುಖದ ಹಾದಿ ತಿಳಿದಂತಾಯಿತು. ಯುವಕ ಸನ್ಯಾಸಿಯ ಮಾತಿನಲ್ಲಿ ನಿಜವಿದೆ. ತಾನು ಇದುವರೆಗೂ ಅನುಸರಿಸಿದ ರೀತಿ ತನಗೆ ಸುಖ ಕೊಡಲಿಲ್ಲ. ಸನ್ಯಾಸಿಯ ಮಾತು ತೋರಿದ ಹಾದಿಯಲ್ಲಿ, ದೇವರ ಸೇವೆಯಲ್ಲಿ ನಡೆದರೆ ಸುಖ ಸಿಗಬಹುದು ಎಂದುಕೊಂಡಳು. ಆದರೆ ಮತ್ತೆ ಮತ್ತೆ ಆ ಮಾತಿನ ಮಧ್ಯೆ ಸನ್ಯಾಸಿಯ ಭವ್ಯ ಆಕೃತಿ ಬಂದು ಕಣ್ಣಿನ ಮುಂದೆ ನಿಲ್ಲುತ್ತಿತ್ತು. ಅವನ ಆ ಸುಂದರ ಆಕೃತಿಯ ಪ್ರಭಾವದಿಂದ ಅವನ ಮಾತುಗಳಿಗೂ ಒಂದು ಅಪೂರ್ವ ಬೆಲೆ ಬಂದು ಮೈಥಿಲೀ ಅವುಗಳಿಗೆ ಸೋತಿದ್ದಳು. ತಾನೂ ಈ ಹಾಳು ಬಾಳನ್ನು ಬಿಟ್ಟರೆ, ಅವನಂತೆಯೇ ಸನ್ಯಾಸಿಯಾಗಿ ಬಿಟ್ಟರೆ, ಅವನ ಸಾನ್ನಿಧ್ಯ ಸಿಗುವುದೆಂದು ಅವಳ ಹೃದಯದಲ್ಲಿ ಆಸೆ ಮಿಣುಕುತ್ತಿತ್ತು. ಹೊತ್ತು ಕಳೆದಂತೆ ಈ ಮಿಣುಕು ಆಸೆ ಮಹಾಜ್ಯೋತಿಯಾಗಿ ಬೆಳೆಯಿತು. ಅದರ ಬೆಳಕಿನಲ್ಲಿದ್ದ ಮೈಥಿಲಿಗೆ ಕತ್ತಲಾದುದೇ ತಿಳಿಯಲಿಲ್ಲ.

ಚೇಟಿ ಬಂದು ಮೈಥಿಲಿಗೆ ನೆನಪು ಮಾಡಿಕೊಟ್ಟಳು. ಆದರೆ ಮೈಥಿಲಿಯ ಮನಸ್ಸಿಗೆ ಈಗ ಅದೊಂದೂ ಬೇಕಾಗಿರಲಿಲ್ಲ. ನಗರದ ಪ್ರಧಾನ ವ್ಯಾಪಾರಿ ರತ್ನ ಪಡಿಯ ಬೀಜಸೇನನ ಮಗನಿಗೆ ಇಂದು ಹುಟ್ಟು ಹಬ್ಬ. ಅಲ್ಲಿಗೆ ಅರಮನೆಯವರೇ ಮೊದಲಾಗಿ ಎಲ್ಲರೂ ಆಹ್ವಾನಿತರು
ಅಂದಿನ ಉತ್ಸವದ ಭಾಗವಾಗಿ ಮೈಥಿಲಿಯ ನರ್ತನ. ಬೆಳಿಗ್ಗೆ ಸದಾನಂದ ಬರುವ ಮುನ್ನ ಮೈಥಿಲೀ ತಾನು ಯಾವ ಯಾವ ಒಗೆಯಲ್ಲಿ, ಯಾವ ಯಾವ ನಿಲುವಿನಲ್ಲಿ ಕಾಣಿಸಿಕೊಳ್ಳಬೇಕು. ಯಾವ ಅಲಂಕಾರಮಾಡಿ ಕೊಳ್ಳಬೇಕೆಂದೆಲ್ಲಾ ಯೋಚಿಸಿ ತೀರ್ಮಾನಿಸಿಕೊಂಡಿದ್ದಳು. ತನಗೆ ಅತ್ಯಂತ ಪ್ರಿಯವಾದ ಮಯೂರ ನೃತ್ಯವನ್ನು ಅಂದು ಅದು ಎಲ್ಲ ವೈಯಾರದಲ್ಲಿಯೂ ತೋರಿಬಿಡಬೇಳಂದಿದ್ದಳು. ಜತೆಗೆ ಸೀತಾಪರಿತ್ಯಾಗದ ಸಂದರ್ಭದ ಅಭಿನಯವನ್ನೂ ಪ್ರದರ್ಶಿಸಬೇಕು, ಎಲ್ಲರನ್ನೂ ಬೆರಗು ಗೊಳಿಸಿಬಿಡಬೇಕು, ಎಲ್ಲರಿಂದಲೂ ಮೆಚ್ಚುಗೆ ಪಡೆಯಬೇಕೆಂದು ಮನಸ್ಸಿನಲ್ಲೇ ತಾಳ ಹಾಕುತ್ತಿದ್ದಳು. ಎಷ್ಟಿದ್ದರೂ ಮೈಥಿಲೀ ಹೆಂಗಸು, ತನ್ನ ರೂಪದಿಂದ, ತನ್ನ ಒನಪಿನಿಂದ, ತನ್ನ ವೈಯಾರದಿಂದ, ತನ್ನ ನಿಲುವು, ಬೆಡಗುಗಳಿಂದ ಮನುಷ್ಯರನ್ನೊಲಿಸಿಕೊಂಡು, ಆಯಸ್ಕಾಂತದಂತೆ ಅವರನ್ನು ಆಕರ್ಷಿಸಿ, ಮೋಹದ ಜಾಲ ಬೀಸಿ, ಮೋಡಿ ಹಾಕಿ ಮೆಚ್ಚಿಗೆ ಹೊಂದುವ ಆಸೆ. ಮೆಚ್ಚುಗೆ, ಹೊಗಳಿಕೆ ಬಂದಷ್ಟೂ ಮತ್ತೂ ಬರಲೆನ್ನುವುದು ಹೆಂಗಸಿನ ಸ್ವಭಾವ. ಅಂತೆಯೇ ಮೈಥಿಲೀ ಇಂದು ವಿಜಯನಗರವನ್ನೇ ತನ್ನ ಕಾಲ್ಕುಣಿತಕ್ಕೆ ಗೆಜ್ಜೆಯಾಗಿಸಿಕೊಳ್ಳುವ ತೀರ್ಮಾನ ಮಾಡಿಕೊಂಡಿದ್ದಳು. ಆದರೆ ಈಗ ಮನಸ್ಸಿಗೇಕೋ ಅದು ಬೇಡವಾಗಿತ್ತು. ಏನೋ ಒಂದು ಬಗೆಯ ಕೊರತೆ, ಅಸಮಾಧಾನ. ಅದರಿಂದ ಬಂದ ಒಂದು ರೀತಿಯ ಅಸಡ್ಡೆ, ತನಗೇನೋ ಬೇಕಾಗಿದೆ, ಅದು ಸಿಗಲಾರದೆನ್ನುವ ಹಲುಬು. ತನಗಿದುವರೆಗೂ ಸಿಕ್ಕಿದುದೆಲ್ಲವೂ ಏನೂ ಉಪಯೋಗವಿಲ್ಲವೆನ್ನುವ ತಿಳಿವು. ಈಗ ಅಲ್ಲಿ ಹೋಗಿ ನೂರು ಮಂದಿಯ ಕಣ್ಣಮಣಿಯಾಗಿ, ರಾತ್ರಿ ಒಬ್ಬನ ತೋಳಬಂದಿಯಾಗಿ ಇರುವುದೆಂದರೇನು?-ಈ ಪ್ರಶ್ನೆ ಮೈಥಿಲಿಯ ಮನಸ್ಸಿನಲ್ಲಿ ಇಂದಿನವರೆಗೂ ಬಂದಿರಲಿಲ್ಲ. ಬಂದಿರಲಿಲ್ಲವೆಂದರೆ ಇಣುಕಿಯೂ ಇರಲಿಲ್ಲವೆಂದಲ್ಲ. ಆಗಾಗ ಒಂದೊಂದು ಬಾರಿ ಎಲ್ಲ ಚೆಲ್ಲಾಟ, ನಗೆಯಾಟ ಮುಗಿದ ಮೇಲೆ ಹಾಸಿಗೆಯ ಮೇಲೆ ಮಲಗಿಕೊಂಡು ಅರೆ ನಿದ್ರಾವಸ್ಥೆಗಿಳಿಯುತ್ತಿರುವಾಗ ಇದರಿಂದೆಲ್ಲ ಏನು? ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈ ಪ್ರಶ್ನೆ ಮನಸ್ಸಿನ ಒಳ ಪದರದಲ್ಲೇ ಹುದುಗಿಹೋಗಿತ್ತು. ಇದುವರೆಗೂ ತಾನೇತಾನಾಗಿ ಪ್ರಬಲವಾಗಿ ಮೇಲೆದ್ದಿರಲಿಲ್ಲ. ಇಂದು ಅದು ಮೆಲ್ಲನೆ ರೂಪ ತಾಳಿ ಮೇಲೆದ್ದಿತ್ತು. ತಿಳಿ ನೀರಿನ ಕೊಳದಲ್ಲಿ ನೆರಳನ್ನು ನೋಡುತ್ತಿರುವಾಗ ನೆರಳಿನೊಳಗಿಂದ ಮಹಾಸರ್ಪವೆದ್ದಂತೆ ಎದ್ದಿತ್ತು. ಅವಳ ಮನಸ್ಸನ್ನೆಲ್ಲಾ ಆವರಿಸಿಕೊಂಡು ಬಿಟ್ಟಿತ್ತು. ಈಗ ಅದರಿಂದ ಬಿಡುಗಡೆ ಹೊಂದುವುದು ಸುಲಭವಾಗಿರಲಿಲ್ಲ. ಆ ಪ್ರಶ್ನೆಗೆ ಉತ್ತರ ಅವಳಿಗೆ ಸಿಗಲಿಲ್ಲ. ಇದುವರೆಗೂ ಉತ್ತರಕೊಡುವ ಗೋಜಿಗೆ ಹೋಗಿರಲಿಲ್ಲ. ಈಗ ಉತ್ತರ ಕೊಡಲು ಸಾಗುವಂತಿಲ್ಲ. ಉತ್ತರವೇನೋ ಇದೆ-ಇರಲೇಬೇಕು ಎನಿಸಿತು. ಈ ತೊಳಲಾಟದ ನಡುವೆ ಇದ್ದಕ್ಕಿದ್ದಂತೆ ಸಂಗೀತದನಾದ ಅಲೆಯಲೆಯಾಗಿ, ಸುರುಳಿಸುರುಳಿಯಾಗಿ ಬಳಿ ಸಾರುವಂತೆ, ಒಂದು ಮಸಕು ಆಕೃತಿ ಮನಸ್ಸಿನ ಸುಳಿಯೊಳಗಿಂದ ಹಂತಹಂತವಾಗಿ ಮೇಲೇರಿ ಬರುತ್ತಿತ್ತು. ಯುವಕ ಸನ್ಯಾಸಿಯ ಮುಖ! ಅಂದೆಂತಹ ಸುಂದರ ಆಕೃತಿ. ಅವನಾದರೂ ಇಂದು ಆ ಸಭೆಗೆ ಬರುವಂತಿದ್ದರೆ, ಅವನ ಸಂತೋಷಕ್ಕಾಗಿಯಾದರೂ ತಾನು ನರ್ತಿಸಬಹುದು. ಅವನಿಗಾಗಿ, ಅವನನ್ನು ಸಂತೋಷಗೊಳಿಸುವುದಕ್ಕಾಗಿ, ತಾನೇನುಬೇಕಾದರೂ ಮಾಡ ಬಲ್ಲೆನೆಂದು ಆ ಕ್ಷಣದಲ್ಲಿ ಅವಳಿಗನ್ನಿಸಿತು. ಆದರೆ ಯುವಕ ಸನ್ಯಾಸಿಯೆಲ್ಲಿ-ಆ ಸಭೆಯಲ್ಲಿ! ಅಂದಮೇಲೆ ಯಾತಕ್ಕಾಗಿ ಸಭೆಗೆ ಹೋಗಬೇಕು? ಅಸಡ್ಡೆ ಅನಾಸಕ್ತಿಯಾಯಿತು. ಅನಾಸಕ್ತಿ ಅನಿಷ್ಟವಾಯಿತು. ಸಭೆಗೆ ಬರಲು ಸಾಧ್ಯವಿಲ್ಲವೆಂದು ಹೇಳಿ ಕಳಿಸಿಬಿಟ್ಟಳು.

ಯುವಕ ಸನ್ಯಾಸಿ ಸದಾನಂದನ ಮೂರ್ತಿ ಒಂದೇ ಸಮನೆ ಅವಳ ಮನಸ್ಸನ್ನು ಆಕ್ರಮಿಸಿ ಬಿಟ್ಟಿತು. ಸಾಗರದಲೆಗಳು ಒಂದಾದಮೇಲೊಂದು ಬಂದು ಬಂದು ದಡದಲ್ಲಿ ಸೇರಿಹೋಗುವಂತೆ ನೂರು ಬಗೆಯ ಯೋಚನೆಗಳೂ ಅವನ ಯೋಚನೆಯ ದಡ ಸೇರುತ್ತಿದ್ದುವು. ಯಾವ ಕೆಲಸದಲ್ಲಿಯೂ ಆಸಕ್ತಿಯಿಲ್ಲ. ಯಾವ ವಿಷಯಕ್ಕೂ ಇಚ್ಛೆಯಿಲ್ಲ. ಯಾವುದೇ ಆನಂದದಲ್ಲಿಯೂ ಆಸೆಯಿಲ್ಲ. ಎಲ್ಲ ನದಿಗಳ ನೀರೂ ಸಾಗರಕ್ಕೆ ಸೇರುವಂತೆ ಅವಳ ವ್ಯಕ್ತಿತ್ವದ ಎಲ್ಲ ಸೊಗಸುನೆರಳುಗಳೂ ಸದಾನಂದನ ವ್ಯಕ್ತಿತ್ವದ ನೆರಳಿನಲ್ಲಿ ಬೆರೆತುಹೋಗುತ್ತಿದ್ದುವು. ಆತನಿಗಿದು ಒಪ್ಪಿತವೇ ? ಆತ ಇದನ್ನು ಸರಿಯನ್ನುವನೇ ? ಆತನ ನೋಟಕ್ಕೆ ಇದು ತಪ್ಪಿತವಾಗದೇ ? ಇದೇ ಯೋಚನೆ ಪ್ರತಿ ಕೆಲಸದಲ್ಲಿ ತೋರುತ್ತಿತ್ತು. ಹೀಗಾಗಿ ಮೂರು ನಾಲ್ಕು ದಿನ ಕಳೆಯುವುದರಲ್ಲಿ ಮೈಥಿಲೀ ತನ್ನನ್ನು ತಾನು ಮರೆತು ಸದಾನಂದನ ನೆರಳಾಗಿ ಹೋಗಿದ್ದಳು. ಮನೆ ಬಿಟ್ಟು ಕದಲುತ್ತಿರಲಿಲ್ಲ. ಮನೆಗೆ ಯಾರಿಗೂ ಪ್ರವೇಶವೂ ಇಲ್ಲ. ಸನ್ಯಾಸಿ ಸದಾನಂದ ಬಂದರೆ ಮಾತ್ರ ಒಳಗೆ ಬಿಡಲು ಅನುಮತಿಯಿತ್ತು. ಆದರೆ ಅವನು ಬರಬೇಕಲ್ಲ! ಬರುವವರು ಬೇಕಾದವರಲ್ಲ. ಬೇಕಾದವರು ಬರುವುದೇ ಇಲ್ಲ! ಆದರೆ ಮನುಷ್ಯನ ಹೃದಯದ ಆಸೆಗೆ ಕೊನೆಯೇ ಇಲ್ಲ. ಎಂತಹ ನಿರಾಸೆಯಲ್ಲೂ ಆಸೆ ಮೊಳೆಯುತ್ತದೆ. ದಿನದಿನವೂ, ಇಂದು ಬರಬಹುದು, ನಾಳೆ ಬರಬಹುದು, ಈಗ ಬರ ಬಹುದು, ಆಗ ಬರಬಹುದು ಎನ್ನುವ ಕಾತರದಲ್ಲಿ, ಅರೆ ಭರವಸೆಯ ಭ್ರಮೆಯಲ್ಲಿ ಕಾದು ನಿರಾಸೆಗೊಳ್ಳುತ್ತಿದ್ದಳು. ಆದರೆ ಕಾಯುವುದು ಮಾತ್ರ ಬಿಡಲಿಲ್ಲ. ಮರುಶುಕ್ರವಾರವಾದರೂ ಮತ್ತೆ ಪ್ರಸಾದ ತರುವಾಗ ಇಲ್ಲಿಗೂ ಬರಬಹುದೆಂದುಕೊಂಡಳು. ಕಾದು ನೋಡಿದಳು. ಆದರೆ ಶುಕ್ರವಾರದ ಸಂಜೆಯಾದರೂ ಆತನ ಸುಳಿವು ಕಾಣಲಿಲ್ಲ. ಪೂಜ್ಯ ವಿದ್ಯಾರಣ್ಯರ ಶಿಷ್ಯ ಆತ, ವಿದ್ಯಾರಣ್ಯರ ಆಶ್ರಮದಲ್ಲಿಯೇ ಇರುತ್ತಾನೆ. ಅಲ್ಲಿಗಾದರೂ ಹೋಗಿ ಬರಲೇ ಎಂದುಕೊಂಡಳು. ಒಮ್ಮೆಯಾದರೂ ಆತನನ್ನು ನೋಡಿದರೆ ಸಾಕು, ನನ್ನ ಜನ್ಮ ಸಾರ್ಥಕವಾಯಿತು. ಆತನಂದಂತೆ, ಆತನ ಮಾತಿನಂತೆ ಎಲ್ಲವನ್ನೂ ಬಿಟ್ಟು, ಮಾಯೆ ಕಳಚಿ, ತ್ಯಾಗದ ಹಾದಿ ಹಿಡಿಯುವುದು ಎಂದುಕೊಂಡಳು. ಅವನನ್ನು ತನ್ನ ಗುರುವಾಗಿ ತಾನೊಪ್ಪಿದುದನ್ನು, ಅವನ ಮಾತನ್ನು ತಲೆಯಲ್ಲಿ ಧರಿಸಿ ಅನುಸರಿಸುವುದನ್ನು, ಅವನಿಗೆ ತಾನೇ ತಿಳಿಸಬೇಕು. ಅವನ ಆಶೀರ್ವಾದ ಹೊಂದಬೇಕೆನ್ನುವ ಉತ್ಕಟ ಇಚ್ಛೆ ಬೆಳೆಯಿತು. ಬೆಳೆದು ಬೇರು ಬಿಟ್ಟು ಅಚಲವಾಗಿ ನಿಂತಿತು. ಅಂದೇ ರಾತ್ರಿಗೆ ಆಶ್ರಮಕ್ಕೆ ಹೋಗಿ ತಿಳಿಸಿ ತನ್ನ ಗುರುವಿನಿಂದ, ಪೂಜ್ಯ ವಿದ್ಯಾರಣ್ಯರಿಂದ, ಅನುಗ್ರಹ ಪಡೆಯುವ ಮನಸ್ಸು ಮಾಡಿದಳು, ಸನ್ಯಾಸಿಗೆ ಸೋತ ಮನಸ್ಸು ಮಲ್ಲಮೆಲ್ಲನೆ ಸನ್ಯಾಸಕ್ಕೆ ಸೋತುಹೋಗಿತ್ತು!

ವಿಶಾಲವಾಗಿ ಹರಹಿದ ಪ್ರವಾಹದ ಶಯ್ಯೆ. ಅದರ ಮೇಲೆ ಕೋಮಲವಾದ ಬೆಳುದಿಂಗಳು ತೂಗುತೊಟ್ಟಿಲಾಡುತ್ತಿದೆ. ಸುತ್ತೆಲ್ಲ ಶಾಂತಿ, ಮೌನ ಆ ಮೌನದಲ್ಲೊಂದು ಮಾಧುರ್ಯ, ಹತ್ತಾರು ವರ್ಷ ಮುಚ್ಚಟಿಯಾಗಿ ಸಂಸಾರ ನಡೆಸಿದ ಗೃಹಿಣಿಯ ಗಾಂಭೀರ್ಯ, ಎಳಹರಯದ ಚೆಲುವೆಯರ ಮುಸಿಮುಸಿ ನಗುವಿನ ಮಾಧುರ್ಯ, ತಾಯ ಮಡಿಲಲ್ಲಿ ಹಾಲೂಡಿ ನಿದ್ರಿಸುತ್ತಿರುವ ಹಸುಗುಸಿನ ಸೌಂದರ್ಯ, ಮೂರೂ ಕೂಡಿ ಕೊಂಡಂತಹ ವಾತಾವರಣ, ಸುತ್ತೆಲ್ಲ ನೀರವತೆ. ಆದರೆ ದಡದ ಬಳಿ ನಿಂತು ಕಣ್ಣೆವೆಯಿಕ್ಕದೆ ಪ್ರವಾಹವನ್ನೇ ದಿಟ್ಟಿಸುತ್ತಿರುವ ಸಾಧು, ಯುವಕ ಸನ್ಯಾಸಿ ಸದಾನಂದನ ಮನಸ್ಸಿಗೆ ಮಾತ್ರ ಶಾಂತಿಯಿಲ್ಲ. ಸಮಾಧಾನವಿಲ್ಲ. ಒಂದು ವಾರದಿಂದ ಮನಸ್ಸು ಚಂಚಲವಾಗಿತ್ತು, ಗಾಳಿಯ ಬಡಿ ತಕ್ಕೆ ಸಿಕ್ಕ ದೀಪದ ಉರಿಯಂತೆ ಮನಸ್ಸು ಚಪಲವಾಗಿತ್ತು, ಅಂದು ಮೈಥಿಲಿಯನ್ನು ಕಂಡಾಗಲೇ ಎದೆ ಜಿಲ್ಲೆಂದಿತ್ತು. ಬುಡದ ಕಲ್ಲಿಗೇ ಹಾರೆ ಹಾಕಿ ಸಡಿಲಿಸಿದಂತಾಗಿತ್ತು. ಆ ಕ್ಷಣದಲ್ಲಿ ಏನೂ ತಿಳಿಯಲಿಲ್ಲ. ಪಾಪಿಯನ್ನು ಕಂಡುದರಿಂದ ಕ್ಷಣಕಾಲ ಹಾಗಾಗಿರಬೇಕೆಂದುಕೊಂಡಿದ್ದ. ಆದರೆ ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ ಹಾಗೆಲ್ಲ ಬಾಯಿಗೆ ಮಾತು ಬರಲು ಕಠಿಣವಾಗಿತ್ತು, ಹೃದಯದಲ್ಲೇ ಏನೋ ತಡೆ ಹಾಕಿದಂತಾಗಿತ್ತು. ಆದರೆ ಆಗಿನ ಉದ್ವೇಗದಲ್ಲಿ ಮಾತು ನಿಂತಿರಲಿಲ್ಲ. ಆದರೆ ಮೈಥಿಲಿಯ ದೃಷ್ಟಿಯಲ್ಲಿ ದೃಷ್ಟಿಯಿಟ್ಟು ನೋಡುವುದು ಅಸಾಧ್ಯವಾಗಿತ್ತು. ಅದೇಕೋ ಏನೋ ಹೃದಯದಲ್ಲೊಂದು ಹೇಳಲಾರದ ನೋವು ಕಾಣಲಾರದ ವೇದನೆಯನ್ನು ಹೃದಯದ ಬಾಗಿಲು ತೆರೆದು ಬರಮಾಡಿಕೊಂಡಿದ್ದ. ಆ ವೇದನೆಗೆ ರೂಪುಗೊಡಲು ಆಗಲಿಲ್ಲ. ಆದರೆ ಅದು ಮಾತ್ರ ಒಂದೇ ಸಮನಾಗಿ ಬೆಳೆಯುತ್ತಿತ್ತು, ಮಳೆಗಾಲದಲ್ಲಿ ಕಂಡೂ ಕಾಣದಂತೆ ನದಿಯ ನೀರು ಹೆಚ್ಚುವಂತೆ ಹೆಚ್ಚಿತು. ಆಶ್ರಮದ ಕಾರ್ಯಗಳಲ್ಲಿ ಎಂದಿನ ಆಸಕ್ತಿಯಿರಲಿಲ್ಲ. ಎಲ್ಲದರಲ್ಲಿಯೂ ಒಂದು ಬಗೆಯ ಬೇಸರ ಬಂದುಬಿಟ್ಟಿತ್ತು. ಅಂದು ಸಂಜೆ ನದಿಯ ತೀರದಲ್ಲಿ ಕುಳಿತು ಕರ್ಮ ನಡೆಸಲು ಕುಳಿತಂತೆ ಸಂಧ್ಯಾಕರ್ಮ ಬಹಳ ಹೊತ್ತು ಹಿಡಿಯುವಂತೆ ಮನಸ್ಸಿಗೆ ತೋರಿತು. ಇದುವರೆಗೂ ಒಂದು ದಿನವಾದರೂ ಬೇಸರಗೊಳ್ಳದಿದ್ದವನಿಗೆ ಅಂದು ಆ ಕ್ರಿಯೆ ಬೇಸರಗೊಳಿಸಿತು. ನದಿಯ ತೀರದಲ್ಲಿಯೇ ಕುಳಿತು ಹಲವಾರು ಗಳಿಗೆಗಳನ್ನು ಕಳೆಯಬೇಕೆಂದು ಮನಸ್ಸಿಗೆ ಅನ್ನಿಸಿತು. ಎಂದಿನಂತೆ ಕ್ರಿಯೆ ಮುಗಿದೊಡನೆಯೇ ಆಶ್ರಮಕ್ಕೆ ಹೋಗುವ ಮನಸ್ಸಾಗಲಿಲ್ಲ. ಮನಸ್ಸು ಯಾವದೋ ಕಲ್ಪನೆಯ ಕನಸು ಕಟ್ಟುತ್ತಿದ್ದಿತು. ಆದರೆ ಕನಸು ಸ್ಪಷ್ಟವಾಗಿರಲಿಲ್ಲ. ಮಂಜಿನ ಮಳೆ ಮನಸ್ಸಿನಲ್ಲಾಗುತ್ತಿರುವಂತೆ ಎಲ್ಲ ಮಸಕು ಮಸಕು. ಅಲ್ಲಲ್ಲಿ ಒಂದೊಂದು ರೇಕು ಹೊಳೆಯುವಂತೆ ಒಂದೊಂದು ಚಿಂತೆ ಹೊರಗೆ ಕಾಣಿಸಿಕೊಳ್ಳುತ್ತಿತ್ತು, ಆದರೆ ಅದು ಬಹಳ ಅಪರೂಪವಾಗಿ, ತಾನೇನು ಚಿಂತಿಸುತ್ತಿರುವೆನೆನ್ನುವ ಅರಿವೇ ಇಲ್ಲ. ತಾನೇಕೆ ಚಿಂತಿಸುತ್ತಿರುವೆನೆನ್ನುವುದೂ ತಿಳಿಯದು. ಆದರೆ ಸುಮ್ಮನೆ ಅಲ್ಲಿ ಕುಳಿತಿರುವುದರಲ್ಲೇ ಒಂದು ಸಮಾಧಾನ, ಅದು ತುಂಬುಸಮಾಧಾನವಲ್ಲ. ಅಸಮಾಧಾನದ ಕೈ ಹಿಡಿದು ಜತೆಗೂಡಿ ಬಂದ ಸಮಾಧಾನ. ಒಂದು ಬಗೆಯ ಕಲಕಾಟ ಒಳಗಿದ್ದು, ಹೊರಗೆ ಶಾಂತವಾದ ಕೊಳದ ನೀರಿನಂತೆ ಹರಿದೂ ಹರಿಯದಂತಿರುವ ನದಿಯಲೆಗಳಂತೆ ಒಂದು ಮಾದರಿಯ ತುಂಬುಕೊರತೆ. ಈ ತುಂಬುಕೊರತೆಯೇ ಅವನಿಗೆ ಬೇಕಾಗಿತ್ತೇನೋ! ಬಹುಕಾಲ ಹಾಗೆಯೇ ಕುಳಿತಿದ್ದ. ಮೆಲ್ಲನೆ ನದಿಯ ನೀರಿನ ಬಳಿ ಬಂದು ಸೋಪಾನದ ಮೇಲೆ ಕುಳಿತು ಕಾಲುಗಳೆರಡನ್ನೂ ನೀರಿನಲ್ಲಿಳಿಬಿಟ್ಟು ಕುಳಿತ. ಹಲವಾರು ದಿನಗಳು, ಹಲವಾರು ಕ್ಷಣಗಳು, ಮನಸ್ಸಿನ ಹಿನ್ನೆಲೆಯಲ್ಲಿಯೇ ಅಡಗಿದ್ದು ಇದ್ದಕ್ಕಿದ್ದಂತೆ ಯಾವುದೋ ಒಂದು ರಸ ನಿಮಿಷದಲ್ಲಿ ರೂಪುಗೊಳ್ಳುವ ಕವಿತೆಯಂತೆ, ಹಲವಾರು ಬಾರಿ ನೆನೆಸಿಕೊಂಡರೂ ನೆನಪಿಗೆ ಬಾರದೆ ಹೃದಯದ ಯಾವುದೋ ಪದರದಲ್ಲಿ ಗುಂಯ್ತುಟ್ಟುತ್ತಾ, ಯಾವುದೋ ಒಂದು ಅನಿರೀಕ್ಷಿತ ಗಳಿಗೆಯಲ್ಲಿ ಹೊರಹೊಮ್ಮುವ ಹಾಡಿನಂತೆ, ಇದುವರೆಗೂ ತಾಕಲಾರದಾಗಿದ್ದ ವೇದನೆ ಮೂರ್ತಿಗೊಂಡಿತು. ಕಾಲು ತೊಳೆಯುತ್ತಿದ್ದ ನದಿಯನ್ನು ನೋಡಿದಂತೆ, ಕಾಲಿನಮೇಲೆ ನದಿಯಲೆಗಳ ಕೈಗಳು ವಾತ್ಸಲ್ಯದಿಂದ, ಮಗುವಿಗೆ ನೀರೆರೆಯುವ ತಾಯಿಯ ಮಮತೆಯಿಂದ, ಓಡುವಾಗ ಇದ್ದಕ್ಕಿದಂತೆ ಬೆಳಿಗ್ಗೆ ಮೈಥಿಲಿಯ ಮನೆಯಲ್ಲಿ ಪಾದಪೂಜೆಯಾದುದು ನೆನಪಾಯಿತು. ಮೈಥಿಲಿಯ ನೆನಪಾದೊಡನೆಯೇ ಮನಸ್ಸೇಕೋ ಜುಮ್ಮೆಂದಿತು. ಹೃದಯ ಯಾವುದೋ ದುಗುಡದ ಮುಸುಕು ಹೊದ್ದು ಗೊಂಡಿತು. ಕಣ್ಣುಗಳಲ್ಲಿ ಕೊಂಚ ತೇವ ನಿಂತಿತು.

ಅಂದು ರಾತ್ರಿ ಸದಾನಂದ ಎಂದಿನಂತೆಯೇ ಧ್ಯಾನಮಾಡಲು ಕುಳಿತ ಧ್ಯಾನದಲ್ಲಿ ಮನಸ್ಸು ಕೂತರೆ ಗಂಟೆಗಳಾದರೂ ಸಮಾಧಿ ಭಂಗವಾಗದ ಕಠಿನಯೋಗಿ ಸದಾನಂದ ಇಂದು ಅರೆಗಳಿಗೆಯಾದರೂ ಧ್ಯಾನ ಮಗ್ನನಾಗಲಾರದಾದ. ಮನಸ್ಸು ಧ್ಯಾನದಲ್ಲಿ ಕೂರದು. ಕೇಂದ್ರೀಕೃತವಾಗದು. ಕಮಂಡಲುವಿನಿಂದ ಚೆಲ್ಲಿದ ನೀರು ಸಿಡಿದು ನೂರು ದಿಕ್ಕು ಪಡೆಯುವಂತೆ ಮನಸ್ಸಿನ ಲಹರಿ ಹೋಳುಹೋಳಾಗುತ್ತಿತ್ತು. ಒಂದೆರಡು ನಿಮಿಷ ಮೈ ಮರೆತು, ಮತ್ತೆ ಮೈಯರಿವಾದಾಗ-ಛೆ! ಎಂತಹ ಅಧೀರ ಮನಸ್ಸಿದು! ಎಂದು ಬಿಗಿಹಿಡಿಯಲು ಯತ್ನಿಸುತ್ತಿದ್ದ. ಮತ್ತೆ ಅದೇ ಪ್ರಯತ್ನ, ಅದೇ ಪಾಡು. ಅದೇ ಕತೆ. ಎಷ್ಟೇ ಸಾಧನೆಯನ್ನುಪಯೋಗಿಸಿದರೂ ಮನಸ್ಸು ಬಿಗಿಯಾಗದು. ಆಸೆ ಆಕಾಶದಷ್ಟು, ಸಾಧನೆ ಮಾತ್ರ ಸಾಸಿವೆಯಷ್ಟು, ಏನೋ ಒಂದು ಬಗೆಯ ಪರಾಸಕ್ತತೆ. ಬೇರೆಲ್ಲಿಯೋ ಭ್ರಮೆಯಲ್ಲಿ ಹಾರಾಡುವ ಮನಸ್ಸು ಕರೆದೊಡನೆಯೇ ಹಿಂದಕ್ಕೆ ಬಾರದು. ಗುರುಗಳು ಅವನ ಈ ಸ್ಥಿತಿಯನ್ನು ಅರಿತುಕೊಂಡಿದ್ದರೋ ಇಲ್ಲವೋ ಅವನನ್ನಂತೂ ಮಾತನಾಡಿಸಿರಲಿಲ್ಲ.
ರಾತ್ರಿ ಕೃಷ್ಣಾಜಿನದಮೇಲೆ ಮಲಗಿದ. ನಿದ್ರೆ ಬರಲಿಲ್ಲ. ಇದುವರೆಗೂ ಆ ಶಯ್ಯೆಯಲ್ಲಿದ್ದ ಶಾಂತಿ, ಸುಖ ಇಂದಿರಲಿಲ್ಲ. ಮೈಯನ್ನೆಲ್ಲಾ ಒತ್ತುತ್ತಿತ್ತು. ಇದುವರೆಗೂ ನಾನು ಹೇಗೆ ತಾನೆ ಇದರ ಮೇಲೆ ಮಲಗುತಿದ್ದೆನೋ ಎನ್ನುವಷ್ಟು ಚುಚ್ಚುತ್ತಿತ್ತು. ಕಣ್ಣು ಮುಚ್ಚಿದರೆ ಕನಸಿನ ಬೆಳಕು, ನೂರಾರು ಮಸಕು ಆಕೃತಿಗಳು ಬಂದು ಕುಣಿದು ಹೋಗುತಿದ್ದುವು. ಅವನಿಗೆ ಆಹ್ವಾನಕೊಡುತ್ತಿದ್ದುವು. ಛೇ! ಇಂತಹ ಕನಸುಗಳು ಬರಬಾರದೆಂದುಕೊಂಡು, ತಲೆ ಕೊಡವಿಕೊಂಡು ಮತ್ತೊಂದು ಪಕ್ಕಕ್ಕೆ ತಿರುಗಿ ಮಲಗಿದರೆ, ಕನಸು ಕೈಬಿಡುವುದೇ? ಕಣ್ಣು ತೆರೆದಾಗ ಮುರಿದ ಕನಸು ಕಣ್ಣು ಮುಚ್ಚಿದ ಕೂಡಲೇ ಮುಂದುವರಿಯುತ್ತಿತ್ತು, ರಾತ್ರಿಯೆಲ್ಲಾ ಈ ಕಿರುಕುಳದಲ್ಲಿ ನಿದ್ರೆಯೇ ಬರಲಿಲ್ಲ.
ಅದಾದಮೇಲೂ ಅವನ ಮನಸ್ಸಿಗೆ ಶಾಂತಿಯಿಲ್ಲ. ಎಂದಿನಂತೆ ಕ್ರಿಯೆ ನಡೆಸಿದರೂ ಎಲ್ಲ ಯಾಂತ್ರಿಕ, ಯಾವುದೋ ಮೋಹದ ಬಂಧನದಲ್ಲಿ ಸಿಕ್ಕು ವಿಧಿಯಿಲ್ಲದೆ ಕಣ್ಮರೆಸಲು ಮಾಡುವ ಕೆಲಸ ಅದು. ಅದರಲ್ಲಿ ಕೊಂಚವಾಗಲಿ ಮನಸ್ಸೇ ಒಗ್ಗದು. ಇಷ್ಟಾಗಿ ತಾನು ಏನು ಮಾಡುತಿರುವೆನೆಂಬುದೇ ತಿಳಿಯುತ್ತಿರಲಿಲ್ಲ. ಗುರುಗಳು ಏನಾದರೂ ಹೇಳಿದರೆ ಏನೋ ಮಾಡಲು ಹೊರಡುವನು. ಸರಿಯಾದರೆ ಸರಿಯಾಯಿತು. ಇಲ್ಲದಿದ್ದರೆ ಮತ್ತೆ ಮಾಡುವನು. ಈ ಅನ್ಯಮನಸ್ಕತೆ ಈ ಒಂದು ವಾರದಲ್ಲಿ ಅತಿಯಾಗಿ ಬೆಳೆದುಹೋಗಿತ್ತು. ಯಾವ ಕ್ಷಣದಲ್ಲಿ ನೋಡಿದರೂ ಮುಖದಲ್ಲಿ ಚಿಂತೆ, ಮನಸ್ಸು ಆಳವಾದ ಕಡಲಿನಲ್ಲಿ ಕಳೆದುಹೋದ ಯಾವುದನ್ನೋ ಹುಡುಕುವಂತಿತ್ತು, ನಿಮಿಷ ನಿಮಿಷ ಕಳೆದಂತೆ ಹೊಸಹೊಸ ವ್ಯೂಹಗಳನ್ನು ರಚಿಸಿಕೊಂಡು ವಿಷಮ ಭಾವಗಳು ಬಂದು ಧಾಳಿಯಿಡುತಿದ್ದುವು. ಅವುಗಳೆಲ್ಲದರ ಹಿಂದೆ ಒಂದು ಅವ್ಯಕ್ತಚಿಂತೆ-ಮಸಕು ಆಕೃತಿ. ಮೈಥಿಲಿಯ ನೆನಪು!

ಮೈಥಿಲಿಯನ್ನು ಸದಾನಂದ ದಿಟ್ಟಿಸಿದ್ದುದು ಎರಡೇ ಬಾರಿ. ಅವನ ಮನಸ್ಸಿನ ಮೇಲೆ ಅವಳ ಮುಖ ಅಚ್ಚಳಿಯದಂತೆ ಮೂಡಿರಲಿಲ್ಲ. ಅವಳ ಮೂರ್ತಿ ಹೇಗೋ ಹಾಗೆ ತೋರಿಬರುತ್ತಿತ್ತು. ಅವಳ ಮುಖ ಮಾತ್ರ ಸ್ಪಷ್ಟವಾಗಿ ತೋರುತ್ತಲೇ ಇರಲಿಲ್ಲ. ನೂರುಬಾರಿ ಯತ್ನಿಸಿದರೂ ಅವಳ ಆಕೃತಿಯನ್ನು, ಅವಳ ರೂಪವನ್ನು, ಅವಳ ಮುಖದ ಮಾಟವನ್ನು ಚಿತ್ರಿಸಿಕೊಳ್ಳಲು ಅವನಿಂದ ಆಗಲೇ ಇಲ್ಲ. ಆದರೆ ಅವಳ ನೆನಪು ಮಾತ್ರ ಹಿಂಸೆ ಕೊಡುವುದನ್ನು ಬಿಡಲಿಲ್ಲ. ಅವಳನ್ನು ಮನಸ್ಸಿನಲ್ಲಿ ನೂರು ರೀತಿಯಲ್ಲಿ ಚಿತ್ರಿಸಿಕೊಂಡರೂ ಮನಸ್ಸಿಗೆ ಒಪ್ಪದು. ಸಮಾಧಾನವಿಲ್ಲ. ಹೀಗಿಲ್ಲವೆಂದು ಅನ್ನಿಸುತ್ತಿತ್ತು. ಹೀಗಾಗಿ ಮೈಥಿಲಿಯೊಬ್ಬ ಅಸ್ಫುಟ ಕನಸಾಗಿದ್ದಳೇ ಹೊರತು, ಸ್ಪಷ್ಟವಾದ ಚಿತ್ರವಾಗಿರಲಿಲ್ಲ. ಈ ಏಳು ದಿನವೂ ಈ ಅಸ್ಫುಟಸ್ವಪ್ನದೊಂದಿಗೆ ಹೋರಾಡಿ ಸದಾನಂದನ ಹೃದಯ ಸೋತಿತ್ತು, ಹಣ್ಣಾಗಿತ್ತು, ತಲೆಗೆ ಚಿಟ್ಟು ಹಿಡಿದಂತಾಗಿತ್ತು. ಎಲ್ಲೆಲ್ಲಿ ನೋಡಿದರೂ ಅದೇ ಆಕೃತಿ-ಮಸಕು ಆಕೃತಿ, ಮಂಜಿನ ತೆರೆಯಿಂದಲೋ ಸುಳೆಯ ಅಂತಃಪಟದಿಂದ ಮುಚ್ಚಿದ ಬೆಟ್ಟದಂತೆ ಆದರೆ ಆ ಆಕೃತಿಗೆ ಗುರುತಿಸುವಂತಹ ಗುಣಗಳಿದ್ದುವು. ನಾನಿಲ್ಲದ ಜಾಗವೇ ಇಲ್ಲ. ನಾನಿಲ್ಲದ ರೂಪವೇ ಇಲ್ಲ. ನನ್ನ ಶಕ್ತಿಗೆ ಹೊರತಾದುದು ಯಾವುದೂ ಇಲ್ಲ. ನನ್ನ ಮಾಯೆಗೆ ಸಿಕ್ಕದುದಿಲ್ಲ. ಎಲ್ಲವೂ ನನ್ನ ಆಕರ್ಷಣೆಯೇ ಎಂದು ಹೆಣ್ಣುತನವೇ ಬಂದು ಹೇಳುವಂತಿತ್ತು. ನೀನೆಲ್ಲಿ ನೋಡಿದರೂ ನಾನೇ ಎಂದು ಎಲ್ಲೆಡೆಯಲ್ಲಿಯೂ ಆ ಸ್ವಪ್ನ ಕಾಣಿಸಿಕೊಳ್ಳುತ್ತಿತ್ತು. ನಿನ್ನ ಸಾಧನೆ ಕೂಡ ನನ್ನ ಶಕ್ತಿಗೆ ಹೊರತಾದುದಲ್ಲ. ಇಗೋ, ನಿನ್ನ ಇಷ್ಟು ವರ್ಷದ ಯೋಗವನ್ನು ಪುಡಿ ಪುಡಿಮಾಡಿ ಹೊಸಕಿ ಹಾಕಿದ್ದೇನೆ ಎಂದು ಅವನನ್ನು ಹಂಗಿಸುತ್ತಿತ್ತು. ನಿನ್ನಂತಹ ಸನ್ಯಾಸಿಯೂ ನನ್ನ ಮೋಹದ ಬಲೆಗೆ ಬೀಳಲೇಬೇಕೆಂದು ಅಧಿಕಾರ ತೋರಿ ಠೀವಿ ಬೀರುತ್ತಿತ್ತು. ಇದುವರೆಗೂ ತನ್ನ ಸುತ್ತಲಿದ್ದ ನಿಸರ್ಗದ ಸೌಂದರ್ಯದಲ್ಲೆಲ್ಲಾ ತಾನೇ ತಾನಾಗಿ ಉಕ್ಕಿ ಬರುತ್ತಿತ್ತು. ಹೀಗಾಗಿ ಸದಾನಂದನ ತಲೆಯ ತುಂಬ ಬರಿಯ ಸ್ವಪ್ನ. ಮೈಥಿಲಿಯ ಅಸ್ಪಷ್ಟ ರೂಪ. ಹೆಣ್ತನದ ಅಸ್ಪುಟ ಆಕರ್ಷಕ ಮೂರ್ತಿ!

ಅಂದು ಶುಕ್ರವಾರ. ಮೈಥಿಲಿಯ ಮನೆಗೆ ಹೋಗಿ ಬಂದು ಒಂದು ವಾರವಾಗಿತ್ತು. ಅವಳನ್ನು ಹೇಗಾದರೂ ಸರಿ ಮತ್ತೊಮ್ಮೆ ನೋಡಿ ಬಿಡಬೇಕೆನ್ನುವ ಆಸೆ ಹೃದಯ ಹೊಕ್ಕಿತ್ತು. ಗುರುಗಳು ಇಂದು ಕೂಡ ನನ್ನೊಂದಿಗೇ ನಗರಕ್ಕೆ ಪ್ರಸಾದ ಕಳುಹಿಸುವರೆಂದು ಎಣಿಸಿದ್ದ. ತನ್ನ ಆಸೆ ತಾನಾಗಿಯೇ ಈಡೇರುವುದೆಂದು ಭರವಸೆ. ಗುರುಗಳಲ್ಲಿ ಹೇಳಲು ನಾಚಿಕೆ. ಅವಮಾನ. ಇದು ಸಣ್ಣ ಮಾತು. ಈ ಸಣ್ಣತನವನ್ನು ಗುರುಗಳಿಂದ ಮರೆಮಾಡುವುದೇ ವಾಸಿಯೆಂದುಕೊಂಡ. ಹಾಗೂ, ಗುರುಗಳೇ ಏನು ಯೋಚನೆಯೆಂದಾಗ ಏನೂ ಇಲ್ಲವೆಂದು ಹೇಳಿ ಸುಳ್ಳು ನುಡಿದ. ಎಂದೂ ಗುರುವಿನ ಬಳಿ ಮುಚ್ಚು ಮರೆಯಿರದವನು ಇಂದು ಕಪಟಿಯಾದ. ಮನಸ್ಸಿನಲ್ಲಿದ್ದುದನ್ನು ಹೇಳದಾದ. ಆದರೆ ಅದರ ವಿಷಯವಾಗಿ ಅವನಿಗೆ ಅಷ್ಟಾಗಿ ಯೋಚನೆಯೇ ಬರಲಿಲ್ಲ. ಹೇಳುವಾಗ ಕೊಂಚ ಅಳುಕಿದ್ದರೂ ಕೇಳಿಯಾದಮೇಲೆ ಅದು ಉಳಿಯಲಿಲ್ಲ. ಅಂತೂ ಒಳ‌ಆಸೆಯಿತ್ತು-ಗುರುಗಳು ಪ್ರಸಾದ ಕೊಟ್ಟು ಕಳುಹುವರೆಂದು. ಆದರೆ ಗುರುಗಳು ಸಮಾಧಿಯಲ್ಲಿ ಮಗ್ನರಾದವರು ಎಚ್ಚರಗೊಳ್ಳಲೇ ಇಲ್ಲ. ಮಧಾಹ್ನವೆಲ್ಲ ಈಗ ಕರೆದಾರು, ಆಗ ಕರೆದಾರೆಂದು ಕಾದು ಕುಳಿತ. ಆದರೆ ಗುರುಗಳು ಮಾತ್ರ ಕರೆಯಲೇ ಇಲ್ಲ. ನಾನೇ, ಹಾಗೆಯೇ ಹೋಗಿ ಕೊಟ್ಟು ಬಂದು ಆಮೇಲೆ ಹೇಳಿ ಬಿಡಲೇ ಎಂದೂ ಒಂದು ಯೋಚನೆ ಬಂತು. ಆದರೆ ಆ ಯೋಚನೆ ಮರು ಕ್ಷಣವೇ ಮಾಯವಾಯಿತು. ತಾನಿಲ್ಲದಿರುವಾಗ ಗುರುಗಳು ಕಣ್ಣು ಬಿಟ್ಟರೆ! ಅದು ಸರಿಹೋಗದೆಂದುಕೊಂಡ. ಕೊನೆಗೂ ಅವನಿಗೆ ಸಿಕ್ಕಿದುದು ನಿರಾಸೆಯೇ!

ವಿದ್ಯಾರಣ್ಯರು ಒಳಗೆ ಸಮಾಧಿಮಗ್ನರಾದ ಹಾಗೆಯೇ ಸದಾನಂದ ಮೈಥಿಲೆಯ ಚಿಂತೆಯಲ್ಲಿ ಮಗ್ನನಾಗಿದ್ದ. ಮೈಥಿಲೀ ಈಗೇನು ಮಾಡುತಿರಬಹುದು? ಈಗೆಲ್ಲಿರಬಹುದು? ಸುಖವಾಗಿ ಹೂವಿನ ಹಾಸಿಗೆಯ ಮೇಲೆ ನಿದ್ರಿಸುತ್ತಿರಬಹುದು. ತನ್ನ ಕಾಲಿನ ಗೆಜ್ಜೆಯನ್ನು ಕೈಯಲ್ಲಿಟ್ಟು ಕೊಂಡು ಅದರ ರವದಲ್ಲಿ ಮೈಮರೆತಿರಬಹುದು, ಶೃಂಗಾರದಲ್ಲಿ ತೊಡಗಿರಬಹುದು. ಹೀಗೆಯೇ ನೂರು ಬಗೆಯ ಕಲ್ಪನೆಗಳನ್ನು ಮಾಡಿಕೊಳ್ಳುತ್ತಲೇ ಸದಾನಂದ ಅಂದನ್ನೆಲ್ಲಾ ಕಳೆದ.

ರಾತ್ರಿಯಾದರೂ ವಿದ್ಯಾರಣ್ಯರು ಸಮಾಧಿಯಿಂದ ಏಳಲಿಲ್ಲ. ಸದಾನಂದನಿಗೆ ತಡೆಯಲಾಗಲಿಲ್ಲ. ಆಶ್ರಮದಿಂದ ಎದ್ದು ಹೊರಗೆ ನಡೆದ. ಪಕ್ಕದಲ್ಲೇ ಹರಿಯುತ್ತಿದ್ದ ನದಿಯ ಸಪ್ಪುಳ ಕಾಲಂದುಗೆಯ ದನಿಯಂತೆ, ಕಾಲ್ಕಡಗ, ಗೆಜ್ಜೆಗಳ ಘಲಿರುಘಲಿರಿನ ಮಧುರ ರವದಂತೆ ಕೇಳಿತು. ನದಿಯ ಬಳಿ ಬೆಳೆದ ಕಾಡು ಹೂವುಗಳ ವಾಸನೆ ಬಹಳ ಮೃದುವಾಗಿ ಸೆಳೆಯುತಿತ್ತು. ಎಲ್ಲಕ್ಕೂ ಮಿಗಿಲಾಗಿ ಆಷಾಢದ ಆಕಾಶದಲ್ಲಿ ತುಂಬಿದ ಬೆಳುದಿಂಗಳು ಹಾಲಿನ ಮಳೆ ಕರೆಯುತ್ತಿತ್ತು. ಸದಾನಂದನ ಮನಸ್ಸು ಅವನ ಬಳಿ ಉಳಿಯಲಿಲ್ಲ. ಬೆಳುದಿಂಗಳಿನಲ್ಲಿ ಕಲ್ಪನೆಯ ನಾವೆಯಲ್ಲಿ ವಿಹಾರ ಹೊರಟುಬಿಟ್ಟಿತು. ತನಗರಿವಿಲ್ಲದೆಯೇ ಸದಾನಂದ ನದಿಯ ತೀರಕ್ಕೆ ಬಂದು ನಿಂತಿದ್ದ. ಒಂದೇ ಸಮನಾಗಿ ನೀರಿನೊಳಗೆ ದಿಟ್ಟಿಸುತ್ತಿದ್ದ.

ನೀರಲೆಗಳ ಮೇಲೆ ಕುಣಿಕುಣಿಯುವ ಬೆಳ್ಳಿಯ ರೇಕುಗಳೆಲ್ಲ ಮೆಲ್ಲನೆ ಒಂದಾಗಿ ಮತ್ತೆ ಮೈಥಿಲಿಯ ರೂಪ ತಾಳಿದುವು. ಹಲವಾರು ಬಗೆಗಳಲ್ಲಿ ಕುಣಿದುವು. ಕರೆದುವು. ಸದಾನಂದ ಮೈಮರೆತ, ಹೃದಯಾಂತರಾಳದಿಂದ ಒಂದೇ ಸಮನಾಗಿ “ಮೈಥಿಲೀ, ಮೈಥಿಲೀ” ಯೆನ್ನುವ ಕೂಗು ಬರುತ್ತಿತ್ತು. ಒಂದು ವಾರದ ಹಿಂದೆ “ಓಂ”ಕಾರದಲ್ಲಿದ್ದ ಸಚ್ಚಿದಾನಂದತೆ ಇಂದು “ಮೈಥಿಲೀ” ಪದಕ್ಕೆ ಬಂದುಹೋಗಿತ್ತು!

ಮೋಡದ ತೆಳುಸರೆಯೊಂದು ಬಂದು ಚಂದ್ರನನ್ನು ಮುಚ್ಚಲು ಬೆಳಕು ತುಸು ಕಂದಿತು. ಕೂಡಲೇ ಸದಾನಂದ ಆಕಾಶದ ಕಡೆ ನೋಡಿದ ಕಪ್ಪು ಮೋಡದ ಒಂದು ಬದಿಯಿಂದ ಚಂದ್ರ ಹೊರಗಿಣಕುತ್ತಿದ್ದ. ಇದ್ದಕ್ಕಿದ್ದಂತೆ ಸದಾನಂದನ ಕಣ್ಣು ಕೋರೈಸಿದಂತಾಯಿತು. ಮೈಥಿಲಿಯ ಆಕೃತಿ ಸ್ಪಷ್ಟವಾಗಿ ಕಣ್ಣ ಮುಂದೆ ಬಂದು ನಿಂತಿತು. ಸೌಂದರ್ಯದ ಖನಿ ಆಕೆಯ ಆಕೃತಿ, ತಾನು ಮೊತ್ತಮೊದಲು ಕಂಡಾಗಿನ ನಿಲುವು! ಅಬ್ಬಾ! ಅದೆಷ್ಟು ಆಕರ್ಷಕ! ಹಾಲುಗೆನ್ನೆಯಮೇಲೆ ಕೊಂಚ ಕೆಂಪು- ಸೆಕೆಗಿರಬೇಕು. ತುಸು ತೆರೆದ ಗುಲಾಬಿಯಂತಹ ಬಾಯಿ, ನುಣುಪು ಗಲ್ಲ. ದಂತದ ಮೇಲಿನಿತು ಭಂಗಾರದ ನೀರು ಚೆಲ್ಲಿದ ಬಣ್ಣದ ಮೂಗು, ಎರಡು ಕಡೆಗೂ ಕಮಲದ ಕಣ್ಣುಗಳು, ವಿಶಾಲವಾದರೂ ಮಾಟವಾದ ಹಣೆ. ರಾತ್ರಿಗೂ ಕೊಂಚ ಕಪ್ಪನ್ನು ಸಾಲ ಕೊಡುವಂತಹ ಕಪ್ಪು ತಲೆಗೂದಲು. ಆದರೆ ಎಲ್ಲಕ್ಕೂ ಹೆಚ್ಚಾಗಿ ಆ ನಿಲುವು, ನಾಟ್ಯದ ಅಭ್ಯಾಸ ಮಾಡುತಿದ್ದಳೋ ಏನೋ ! ಬಿಗಿಯಾಗಿ, ತೋಳಿಗೆ ಬಿಗಿಯಾದ ಬೆಳ್ಳಿಯ ಮೆರುಗಿನ ಕಂಚುಕ ತೊಟ್ಟಿದ್ದಳು. ಉಟ್ಟಿದ್ದುದು ಕರಿಯ ರೇಶಿಮೆಯ ಸೀರೆ. ಸೆರಗನ್ನು ಭುಜದಮೇಲೆ ಕೊಂಚ ಸರಿಸಿ, ಸೊಂಟವನ್ನು ಸುತ್ತಿ ಆಲಂಗಿಸಿದ್ದ ಭಂಗಾರದ ಡಾಬಿಗೆ ಸಿಕ್ಕಿಸಿದ್ದಳು. ಆಗ ಮೋಡದ ಮರೆಯಿಂದ ಚಂದ್ರ ನಿಣುಕುವಂತೆ, ಸೀರೆಯ ಸರಿದ ಸೆರಗಿನ ಕರಿಯಂಚಿನಿಂದ ತುಂಬಿದ ಕಂಚುಕ ಹೊರಗಿಣುಕುತ್ತಿತ್ತು, ಉಸಿರಾಟದಲ್ಲಿ ಏರಿಳಿಯುತ್ತಿತ್ತು, ಚಂದ್ರನನ್ನು ನೋಡುತ್ತಾ ನೋಡುತ್ತಾ ಸದಾನಂದ ನಿಟ್ಟುಸಿರಿಟ್ಟ, ಕಣ್ಣಿನಲ್ಲಿ ನೀರು ಹನಿಯಿಟ್ಟಿತು. ಕಂಠದಲ್ಲೇ ದುಃಖ ಸಿಕ್ಕಿಕೊಂಡಿತು. ತುಟಿ ಮಾತ್ರ ಮೈಥಿಲೀಯೆನ್ನುವಂತೆ ಅಲುಗಾಡಿತು. ವಿರಹದ ಕಾವಿನಲ್ಲಿ ಮೈ ಹುಚ್ಚು
ಹುಚ್ಚಾಗಿ ಬೆಚ್ಚಗಾಗಿತ್ತು.

ತಾನೇ ಮೈಥಿಲಿಯನ್ನು ಪಾಪದಿಂದ ಪುಣ್ಯದ ಹಾದಿಗೆ ತರಲು ಯತ್ನಿಸಿದುದು ಸದಾನಂದನಿಗೆ ಮರೆತುಹೋಗಿತ್ತು. ಪಾಪ ಪುಣ್ಯಗಳೊಂದೂ ಈಗೆ ಅವನಿಗೆ ಗೊತ್ತಿರಲಿಲ್ಲ. ಬೇಕಾಗಿಯೂ ಇರಲಿಲ್ಲ. ಈಗ ಅವನಿಗೆ ಗೊತ್ತಿದ್ದುದು ಒಂದೇ-ಬೇಕಾಗಿದ್ದುದೂ ಒಂದೇ. ಅದು ಮೈಥಿಲೀ. ಮನಸ್ಸಿನ ಒಂದೊಂದು ಹನಿ ಕೂಡ ಮೈಥಿಲಿಗಾಗಿ ಕಾತರಿಸುತ್ತಿತ್ತು. ಈ ಅಸಾಧಾರಣ ಆಸೆ. ಹಿಂದೆಂದೂ ಕಾಣದ ಈ ಕಾಮದ ಹುಚ್ಚು ಹೊಳೆಯಲ್ಲಿ ಸದಾನಂದನ ವಿಚಾರಶಕ್ತಿ ಕೊಚ್ಚಿಕೊಂಡು ಹೋಗಿತ್ತು. ಬಯಕೆಯ ಮಹಾಪ್ರವಾಹದಲ್ಲಿ ಅವನೊಂದು ಕಿರಿಯ ನಾವೆ. ಅದು ಒದ್ದಲ್ಲಿಗೆ ಅವನ ಪ್ರಯಾಣ! ಗುರುಗಳು, ಆಶ್ರಮ, ಪಾಪ-ಪುಣ್ಯ ಯಾವುದೂ ಈಗ ಅವನಿಗೆ ನಿಜವಲ್ಲ. ಅವನ ಕಣ್ಣಿನ ಧ್ರುವತಾರೆ, ದಾರಿ ತೋರುತಿದ್ದುದು ಮೈಥಿಲಿಯ ರೂಪ, ದಾರಿಗೆಳೆಯುತ್ತಿದ್ದುದು ಮೈಥಿಲಿಯ ಬಯಕೆ ಒಂದೆರಡು ಕ್ಷಣ ಮನಸ್ಸಿನಲ್ಲಿ ಮೋಡ ಮುಸುಕಿತ್ತು. ತಾನು ಆಶ್ರಮ ಬಿಟ್ಟು ಹೋಗುವುದು ಸರಿಯೇ? ಆಮೇಲೆ ಗುರುಗಳಾದರೂ ಏನೆಂದುಕೊಂಡಾರು! ಎನ್ನುವ ಯೋಚನೆ ಬಂತು. ಕೊಂಚ ಹೊತ್ತು ಉತ್ತರ ಕಾಣದೆ ಮನಸ್ಸು ತಬ್ಬಿಬ್ಬಾಯಿತು. ಆದರೆ ಮರುಗಳಿಗೆಯೇ ಹೊಸ ಯೋಚನೆ. ಗುರುಗಳಿಗೆ ತಿಳಿಯದಂತೆಯೇ ಮೈಥಿಲಿಯ ಮನೆಗೆ ಹೋಗಿ ಗೋಪ್ಯವಾಗಿ ಬಂದು ಬಿಟ್ಟರೆ! ಇಷ್ಟಾಗಿ ಮೈಥಿಲಿಯೊಬ್ಬ ನರ್ತಕಿ, ವಿಲಾಸದ ವಸ್ತು, ಭೋಗಸಾಮಗ್ರಿ. ಅಂದಮೇಲೆ ಅದರಲ್ಲೇನು ತಪ್ಪು? ಹಾಗೆ ಮಾಡಿದರೂ ಪರವಾಗಿಲ್ಲ ಎನಿಸಿತು. ಆದರೆ ಈ ರೂಪದಲ್ಲಿ ಮೈಥಿಲಿಯ ಬಳಿಗೆ ಹೋಗುವುದೇ? ರಾಜಧಾನಿಯ ಪ್ರಸಿದ್ಧ ನರ್ತಕಿ. ಯಾವಳೊಬ್ಬಳ ಕಡೆಗಣ್ಣಿನ ಕುಡಿನೋಟಕ್ಕೊಂದಕ್ಕಾಗಿ ಕೋಟ್ಯಾಧೀಶ್ವರರೇ ಕಾದು ನಿಂತಿರುವರೋ, ಅಂತಹವಳ ಬಳಿಗೆ ಭಿಕಾರಿಯಂತೆ ಹೋಗುವುದೇ! ಛೇ! ಅದು ಸಾಗದು! ಈ ಸನ್ಯಾಸವನ್ನು ನಾನೇಕೆ ಕೈ ಗೊಂಡೆನೋ ಎಂದು ತನ್ನ ಮೇಲೆಯೇ ಸದಾನಂದನಿಗೆ ಕೋಪ ಬಂದಿತು. ತನ್ನನ್ನು ತನ್ನ ಮೂರ್ಖತನಕ್ಕಾಗಿ ಹಳಿದುಕೊಂಡ. ಸನ್ಯಾಸವನ್ನು ಮನಸಾರ ಶಪಿಸಿದ. ಸನ್ಯಾಸ ಮನುಷ್ಯನಿಗೆ ಮಗ್ಗುಲಮುಳ್ಳು. ಅದನ್ನು ತೊಡೆದುಹಾಕಿದರೇ ಮನುಷ್ಯನಿಗೆ ಕಲ್ಯಾಣ ಎನ್ನುವ ತುತ್ತ ತುದಿವರೆಗೂ ಅವನ ಈ ವಿಚಾರ ಏರಿತು. ವಿದ್ಯಾರಣ್ಯರ ಶಿಷ್ಯ, ಯುವಕ ಸನ್ಯಾಸಿ, ಅಖಂಡಬ್ರಹ್ಮಚಾರಿ ಸದಾನಂದ, ಆ ಕ್ಷಣದಲ್ಲಿ, ಬೆಳುದಿಂಗಳ ರಾತ್ರಿಯಲ್ಲಿ, ನದಿಯ ದಡದಲ್ಲಿ ನಿಂತು, ಮೈಥಿಲಿಯ ವಿರಹದಲ್ಲಿ ಒದ್ದಾಡುತ್ತಾ, ತನಗೆ ಸಹಜವಲ್ಲದ ಹೊಸ ವಿಚಾರದ ವಿಷಚಕ್ರವ್ಯೂಹಾಂತರದಲ್ಲಿ ಸಿಕ್ಕು ಸುರುಳಿ ಸುತ್ತುತ್ತಿದ್ದ. ತನ್ನನ್ನು ತಾನು ಮರೆತಿದ್ದ. ತಾನೆಲ್ಲಿರುವೆನೆಂಬುದನ್ನು ಯಾವಾಗಲೋ ನೆನಪಿನಿಂದ ಅಳಿಸಿಬಿಟ್ಟಿದ್ದ.

ಇದ್ದಕ್ಕಿದ್ದಂತೆ ಆಶ್ರಮದಿಂದ ಪೂಜ್ಯ ವಿದ್ಯಾರಣ್ಯರ ಧ್ವನಿ ಗಂಭೀರವಾದ ಧ್ವನಿ. ಶಂಖನಿನಾದ ಗಾಳಿಯಲ್ಲಿ ತೂರಿ ಬಂದು ಕಿವಿಗಳಲ್ಲಿ ತಂಬಿ ಒಂದು ಬಗೆಯ ಕಟುಮಾಧುರ್ಯದಿಂದ ಮೈ ಜುಮ್ಮೆನಿಸುವಂತೆ ಅವರ ಧ್ವನಿ. “ಸದಾನಂದ, ಮಗು, ಸದಾನಂದ” ಎಂದು ಕೂಗಿದರು. ತಾಯಿ ತನ್ನ ಮಗು ದಾರಿ ತಪ್ಪಿಸಿಕೊಂಡೆಲ್ಲಿಯೋ ಹೋಗಿಬಿಟ್ಟಿದೆಯೆನ್ನುವ ಕಳವಳದಲ್ಲಿ ಕೂಗುವಂತಿತ್ತು ಅವರ ಮಾತಿನ ಬಗೆ, ಅದರಲ್ಲಿನ ಮಮತೆ, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿರುವ ಹಸು, ತನ್ನ ಎಳಗರು ಹುಚ್ಚು ಹುಚ್ಚಾಗಿ ಕುಣಿದು ಭಾವಿಯ ಬಳಿ ಬಂದಾಗ ಕೂಗುವಾಗಿನ ಕಾತರ ಭರಿತ ವಾತ್ಸಲ್ಯದ ಪ್ರತೀಕವಾಗಿತ್ತು, ಕೂಗಿದುದು ಮೊದಲೊಮ್ಮೆ ಸದಾನಂದನಿಗೆ ಕೇಳಲಿಲ್ಲ. ಎರಡನೆಯ ಬಾರಿಯ ಕೂಗು ಕೇಳಿ ಸದಾನಂದ ಎದ್ದು ನಿಂತ. ಹೋಗಲೇ ಬೇಡವೇ ಎಂದು ಅರೆಗಳಿಗೆ ಚಿಂತಿಸಿ ಒಲ್ಲದ ಹೆಜ್ಜೆಗಳನ್ನು ಆಶ್ರಮದ ಕಡೆಗೆ ಸರಿಸಿದ.

ವಿದ್ಯಾರಣ್ಯರ ಆಶ್ರಮದ ಬಳಿಗೆ ಬಂದು ಒಳಗೆ ಕಾಲಿಡುತ್ತಿದ್ದಂತೆಯೇ ಅವನ ಕಣ್ಣಿಗೆ ಮೊದಲು ಬಿದ್ದುದು ಮೈಥಿಲೀ. ಈ ಮೈಥಿಲೀ ನಗರದಲ್ಲಿ ಕಂಡ ನರ್ತಕಿ ಮೈಥಿಲಿಯಲ್ಲ. ನಗರದ ಶೃಂಗಾರ, ಅಲಂಕಾರಗಳಾವುವೂ ಇಲ್ಲದ ನಿರಾಭರಣ ಸುಂದರಿ, ನಿಸರ್ಗದ ಸಹಜ ಸೌಂದರ್ಯ ಅವಳಲ್ಲಿ ಪರಿಪೂರ್ಣವಾಗಿತ್ತು. ಸಾಮಾನ್ಯವಾದ ಒಂದು ವಸ್ತ್ರ ತೊಟ್ಟ ಅವಳ ದೇಹದ ಆಕರ್ಷಣೆ ಮೊದಲಿಗೆ ನೂರುಮಡಿಯಾಗಿತ್ತು. ಮುಖದಲ್ಲಿ ಧರಿಸಿದ್ದ ಕುಂಕುಮದ ಬೊಟ್ಟು ಆಹ್ವಾನಕೊಡುತ್ತಿತ್ತು. ಸದಾನಂದ ತನ್ನ
ವಾತಾವರಣ, ತಾನಿರುವ ಸ್ಥಳ ಮರೆತು, ಉದ್ರೇಕದಿಂದ “ಮೈಥಿಲೀ” ಎನ್ನುತ್ತಾ ಮುನ್ನುಗ್ಗಿದ. ಮೈಥಿಲೀ ಕಾಲಿಗೆರಗಿದಳು.

“ಪಾಪಿಯ ಪಾಪ ತೊಳೆಯಲು ಬಂದ ಪುಣ್ಯಮೂರ್ತಿ, ಪುಣ್ಯದ ಹಾದಿ ತೋರಿ ಕಾಪಾಡಬೇಕು” ಎಂದು ದೈನ್ಯವಾಗಿ ಬೇಡಿಕೊಂಡು ಮೈಥಿಲೀ ಕಾಲಿಗೆ ತಲೆ ಮುಟ್ಟಿಸಿದಳು.

ಸದಾನಂದನಿಗೆ ನದಿಯ ಪ್ರವಾಹವೆಲ್ಲ ತನ್ನ ಮೇಲೊಮ್ಮೆಗೇ ನುಗ್ಗಿದಂತಾಯಿತು ಏನೂ ಕಾಣಿಸದು. ಎಲ್ಲ ಕಗ್ಗತ್ತಲು. ಮನಸ್ಸು ದಾರಿಗಾಣದೆ, ಕಣ್ಣು ಕಾಣದೆ ಧಿಟ್ಟನೆ ನಿಂತಂತಾಯಿತು!

“ಮಾಯೆ ಕಳಚಿ ಬಂದಿದ್ದೇನೆ. ನನ್ನ ಎಲ್ಲವೂ ಬೇರೆಯವರದು. ನನ್ನ ಆತ್ಮ ಮಾತ್ರ ನನ್ನದು. ಅದನ್ನುಳಿಸಿಕೊಳ್ಳಲು ಬಂದಿದ್ದೇನೆ. ಅನುಗ್ರಹಿಸಿ ಪಾಪಿಯನ್ನು ಉದ್ಧಾರಮಾಡಬೇಕು.” ಎಂದು ಅಂಗಲಾಚಿ ಕೊಂಡಳು ಮೈಥಿಲೀ.

ಸದಾನಂದ ಕಲ್ಲಿನ ಮೂರ್ತಿಯಂತೆ ನಿಂತಿದ್ದ. ತನ್ನನ್ನು ತಾನೇ “ಪಾಪಿ”ಯೆಂದು ಅವಳು ಕರೆದುಕೊಂಡುದರಿಂದ ಅವನಿಗೆ ಈಗ ಯಾವ ಒಳ ಆನಂದವೂ ಆಗಲಿಲ್ಲ. ಅದಕ್ಕೆ ಬದಲಿಗೆ ಚೇಳು ಕುಟುಕಿದಂತೆ ಹೃದಯದಲ್ಲೊಂದು ವೇದನೆ. ಅವಳನ್ನು ಆಶೀರ್ವದಿಸಲು ಕೈ ಮುಂದೆ ಬರಲಿಲ್ಲ. ಮನಸ್ಸಿನಲ್ಲಿ ಯಾವ ವಿಚಾರವೂ ಹೊಳೆಯಲಿಲ್ಲ. ಬಾಯಲ್ಲಿ ಮಾತು ಹೊರಡಲಿಲ್ಲ. ಉಸಿರು ಕೂಡ ನಿಂತುಹೋದಂತೆ, ಕಲ್ಲಿನಲ್ಲಿ ಕಡೆದ ಮಾನುಷ ವಿಗ್ರಹದಂತೆ ಸದಾನಂದ ನಿಂತಿದ್ದ.

“ಮಗು, ಯಾಕೆ ಹಾಗೆಯೇ ನಿಂತೆ. ಪಾಪಿಯನ್ನು ಅನುಗ್ರಹಿಸ ಬಾರದೇ?” ಎಂದರು ವಿದ್ಯಾರಣ್ಯರು. ಅಂಬಿನೇಟು ಬಂದೆದೆ ಹೊಕ್ಕಂತೆ ಸದಾನಂದನ ಹೃದಯ ತಲ್ಲಣಿಸಿತು. ಸಾಗರದ ಘರ್ಜನೆಯಂತೆ ರಕ್ತ ಮೊರೆಯುತ್ತಿತ್ತು. ದುಃಖದ ಮಹದಾಕಾಶ ಮೇಲ್ಮುಸುಕಿದಾಗ, ಸುತ್ತೆಲ್ಲ ಬರಿಯ ಕಡಲೋ ಕಡಲಾದಾಗ ಹುಲ್ಲುಕಡ್ಡಿಯೊಂದರ ಮೇಲೆ ನಿಂತ ಒಂದು ಇರುವೆಯಂತಾಗಿತ್ತು ಅವನ ಹೃದಯ. ತನಗಿನ್ನುಳಿವಿಲ್ಲ. ಪ್ರಪಾತವೊಂದೇ ಎಂದು ನಿರಾಸೆಯಲ್ಲಿ ಮುಳುಗಿತು. ಇದುವರೆಗೂ ಅಚೇತನವಾಗಿದ್ದ ಮೈ ಸಡಿಲವಾದಂತಾಗಿ ಗುರುಗಳ ಕಡೆಗೆ ತಿರುಗಿದ. ಆಶ್ರಮದೊಳಕ್ಕೆ ಕಾಲಿಟ್ಟಾಗಿನಿಂದಲೂ ಅವರು ಅಲ್ಲಿಯೇ ಕುಳಿತುದನ್ನು ಅವನು ನೋಡಿಯೇ ಇರಲಿಲ್ಲ. ಅದೇ ನಗು, ತೇಜಪುಂಜ ಮುಖ. ಸದಾನಂದನ ಹೃದಯ ಬಿಚ್ಚಿತು. ಕಚ್ಚಿಕೊಂಡಿದ್ದ ಕಂಠ ದಾರಿ ಕೊಟ್ಟಿತು. ಕಣ್ಣಿನಲ್ಲಿ ಒಮ್ಮೆಗೇ ನೀರಾಡಿತು. ಉಮ್ಮಳದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಾ ಗುರುಗಳ ಕಾಲಿಗೆ ಬಿದ್ದ.

“ನಾನು ಮಹಾಪಾಪಿ, ತಂದೆ, ನನ್ನನ್ನು ಕ್ಷಮಿಸಿ, ಅನುಗ್ರಹಿಸಿ.”

ವಿದ್ಯಾರಣ್ಯರು ತಿಳಿನೀರಿನ ಕೊಳದಲೆಯ ಕುಳಿನಗೆ ನಕ್ಕು ಮೆಲ್ಲನೆ ಅವನ ತಲೆ ನೇವರಿಸಿದರು. ಸದಾನಂದನ ಮನಸ್ಸಿಗೇನೋ ಒಂದು ಬಗೆಯ ಶಾಂತಿ, ಸಮಾಧಾನ ಬಂದಂತಾಯಿತು. ಇದುವರೆಗೂ ಮನಸ್ಸಿನಲ್ಲಿದ್ದ ಬಿರುಗಾಳಿ ಇದ್ದಕ್ಕಿದ್ದಂತೆ ಇಲ್ಲವಾಗಿ ಚೇತನದ ಕುಡಿದೀಪ ನೇರವಾಗಿ ಉರಿಯಲಾರಂಭಿಸಿತು. ವಿದ್ಯಾರಣ್ಯರು ಎರಡೂ ಕೈಗಳಿಂದ ಅವನನ್ನು ಮೆಲ್ಲನೆ ಹಿಡಿದು ಮೇಲೆಬ್ಬಿಸಿದರು. ಸದಾನಂದ ಕೈಮುಗಿದು ಕೊಂಡು ಗುರುಗಳ ಎಡಪಕ್ಕಕ್ಕೆ ನಿಂತ, ಮೈಥಿಲೀ ಬಂದು ವಿದ್ಯಾರಣ್ಯರಿಗೆ ನಮಸ್ಕರಿಸಿ ಬಲಗಡೆಗೆ ನಿಂತಳು.

“ಮಗು, ಕ್ಷಮೆ ನೀಡಲು ನಾನಾರು? ಸರ್ವಕ್ರಿಯೆಗಳಿಗೂ ಹೊಣೆಯಾದವನೊಬ್ಬನು ಮಾತ್ರ ಕ್ಷಮೆ ನೀಡಬಲ್ಲವನು ನಾವು ಪಾಪಿಗಳಿರಬಹುದು. ಪುಣ್ಯವಂತರಿರಬಹುದು. ಅದನ್ನು ನಿರ್ಣಯಿಸುವುದು ನಮ್ಮಿಂದ ಸಾಧ್ಯವಿಲ್ಲ. ಪರಿಪೂರ್ಣತೆ ಪಡೆದವನೊಬ್ಬನೇ ಎಲ್ಲವನ್ನೂ ತಿಳಿಯಬಲ್ಲ. ಮಾನವನ ದೃಷ್ಟಿ ಬಹಳ ಸಂಕುಚಿತ, ಬಹಳ ಸಣ್ಣದು. ಸಹಜವಾಗಿಯೇ ಅದು ತಪ್ಪು ನೋಟದಿಂದ ನೋಡುತ್ತದೆ. ನಮಗೆ ಒಂದು ಪಾಪವಾಗಿ ಕಾಣಬಹುದು. ಅದೇ ಮತ್ತೊಬ್ಬರಿಗೆ ಪುಣ್ಯವಾಗಿ ತೋರಬಹುದು. ಇವೆರಡರ ಒಕ್ಕೂಟವೇ ಜೀವನ. ಹಗಲು ರಾತ್ರಿಗಳ ಕೂಡಿಕೆಯಿಂದಲೇ ದಿನ ಕೃಷ್ಣಪಕ್ಷ, ಶುಕ್ಲ ಪಕ್ಷಗಳ ಸೇರುವಿಕೆಯಿಂದಲೇ ಮಾಸ. ಅಂತೆಯೇ ಪಾಪ-ಪುಣ್ಯಗಳ ಮಿಶ್ರಣ ನಮ್ಮ ಬಾಳು. ನಮ್ಮ ನೋಟ ಹಿರಿದಾದಷ್ಟೂ, ನಮ್ಮ ಬಾಳು ಬೆಳೆದಷ್ಟೂ, ನಮ್ಮ ಹೃದಯ ವಿಸ್ತಾರವಾದಷ್ಟೂ ಅವುಗಳೆರಡರ ಐಕ್ಯ ನಮಗೆ ತೋರುತ್ತದೆ. ಆ ಭಾವನೆ, ಆ ಅನುಭವ, ಆ ಕಲ್ಪನೆ ಬಂದಾಗ ಮಾತ್ರ ಸಾಧನೆ ಸಾಧ್ಯ. ಸಾಧನೆ ಸಾರ್ಥಕ!”

ವಿದ್ಯಾರಣ್ಯರು ಮಾತು ಮುಗಿಸಿ ಮುಗುಳು ನಕ್ಕರು. ಮೈಥಿಲೀ, ಸದಾನಂದರ ಹೃದಯಗಳಲ್ಲಿ ಹೂ ಚೆಲ್ಲಿದಂತಾಯಿತು. ಇಬ್ಬರೂ ನಿಂತಲ್ಲಿಂದಲೇ ಗುರುಗಳಿಗೆ ತಲೆಬಾಗಿದರು. ವಿದ್ಯಾರಣ್ಯರು ಕಣ್ಣು ಮುಚ್ಚಿ ಸಮಾಧಿಯಲ್ಲಿ ಹೊಕ್ಕರು. ಬೆಳುದಿಂಗಳು ಹೊರಗೆ ಪ್ರಪಂಚವನ್ನೆಲ್ಲಾ ತನ್ನ ವಿಶಾಲಹೃದಯದಲ್ಲಿ, ಹಾಲುನಗೆಯಲ್ಲಿ ತೇಲಿಸುತ್ತಿತ್ತು.
*****