ಭಾಗ-೨

ಆತ ತನ್ನ ಹೆತ್ತಮ್ಮನನ್ನು ಒಬ್ಬ ಉತ್ಕಟ ಪ್ರೇಮಿಯಂತೆ ಪ್ರೀತಿಸುತ್ತಾನೆ. ತಾಯಿಯ ಪ್ರೀತಿಯ ಅಭಿಲಾಷೆಯಿಂದ ಹೊರಬರಲಾಗದೆ ತನ್ನನ್ನು ಆರಾಧಿಸಿ, ಪ್ರೀತಿಸಿದ ಬಾಲ್ಯದ ಗೆಳತಿಯಿಂದ ದೂರ ಸರಿಯುತ್ತಾನೆ. ಪ್ರೇಮ ಕಾಮದ ಹುಡುಕಾಟದಲ್ಲಿ ಅಸಂಬದ್ಧವೆನಿಸುವಂತೆ ತನಗಿಂತ ಹಿರಿಯಳಾದ ಮೂರು ಮಕ್ಕಳ ತಾಯಿಯಲ್ಲಿ ಅನುರಕ್ತನಾಗುತ್ತಾನೆ. ಆದರೂ ಅಲ್ಲಿಯೂ ತೃಪ್ತನಾಗದ ವಿರಮಿಸದ ವ್ಯಾಕುಲ ಚಿತ್ತ ತಹತಹಕೆ ಆತನದು. ಆತ ತನ್ನ ಗೆಳತಿಯರನ್ನು ಮೋಹಿಸುತ್ತಾನೇ ಹೊರತು ಎಂದಿಗೂ ಅವರನ್ನು ಅವನಿಗೆ ಪ್ರೀತಿಸಲಾಗಲೇ ಇಲ್ಲ. ಯಾಕೆಂದರೆ ಆ ಪೂರ್ಣ, ಸಂಪೂರ್ಣ ಪ್ರೀತಿ ಆತನಿಗೆ ತಿಳಿದಿಲ್ಲದ ವಯಸ್ಸಿನಲ್ಲೇ ಹುಟ್ಟಿದ್ದು ತಾಯಿಯ ಬಗ್ಗೆ. ಇದೇ ಇಡಿಪಸ್ ಕಾಂಪ್ಲೆಕ್ಸ್. ಇಂತಹ ಅಸಂತುಲಿತ ಮನಸ್ಥಿತಿಯ ನಾಯಕ ‘ಪೌಲ’ ನಮಗೆ ಕಾಣಸಿಗುವುದು ಡಿ.ಎಚ್. ಲಾರೆನ್ಸನ “ಸನ್ಸ್ ಎಂಡ್ ಲವರ್‍ಸ್” ಕಾದಂಬರಿಯಲ್ಲಿ. ಇದು ಲಾರೆನ್ಸನ ಮನಸ್ಥಿತಿಯೂ ಹೌದು.

“ಇಡಿಪಸ್ ಕಾಂಪ್ಲೆಕ್ಸ್” ಎಂದರೆ ತಂದೆಯ ಮೇಲಿನ ದ್ವೇಷ, ಜಿಗುಪ್ಸೆಯ ಹಿನ್ನೆಲೆಯಲ್ಲಿ ತಾರುಣ್ಯದ ಮಗನಿಗೆ ತನ್ನ ತಾಯಿಯ ಬಗ್ಗೆ ಅವನಿಗೆ ಅರಿವಿಲ್ಲದೇ ಮೂಡುವ ಅತಿಯಾದ [ಲೈಂಗಿಕ ಬಯಕೆಯನ್ನೂ ಒಳಗೊಂಡಂತೆ] ಪ್ರೇಮ. ಗ್ರೀಕ ನಾಟಕಕಾರ ಸೋಪೋಕ್ಲಿಸನ “ಇಡಿಪಸ್ ರೆಕ್ಸ” ಎಂಬುದು ಗ್ರೀಕ ರಾಜ ಇಡಿಪಸ್ನ ದುರಂತ ಬದುಕಿನ ಸುತ್ತ ಹೆಣೆದ ನಾಟಕ. ಇಡಿಪಸ್ ಶಾಪದ ಕಾರಣ ತನಗೆ ಗೊತ್ತಿಲ್ಲದೇ ಸ್ವಂತ ತಂದೆಯನ್ನು ಕೊಂದು ತಾಯಿಯನ್ನು ವಿವಾಹವಾಗುತ್ತಾನೆ. ಸಂತಾನವನ್ನು ಪಡೆಯುತ್ತಾನೆ. ಆದರೆ ನೈಜತೆಯ ಅರಿವಾಗುತ್ತಲೇ ಬದುಕು ದುರ್ಭರವಾಗುತ್ತದೆ. ಅಸಹನೀಯವಾಗುತ್ತದೆ. ತಪ್ಪಿಗೆ ಪ್ರಾಯಶ್ಚಿತ್ತವಾಗಿ ತನ್ನ ಕಣ್ಣುಗಳನ್ನು ತಾನೆ ಇರಿದುಕೊಂಡು ಕುರುಡನಾಗುತ್ತಾನೆ ಇಡಿಪಸ್. ತಾಯಿ ಜಿಗುಪ್ಸೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಕಾರಣದಿಂದ ತಾಯಿಯ ಬಗ್ಗೆ ಹೊಂದಿದ ಅಸಂಗತವಾದ ಈ ಮನೋವ್ಯಾಕುಲತೆಯನ್ನು ೨೦ನೇ ಶತಮಾನದ ಶ್ರೇಷ್ಠ ಮನಃಶಾಸ್ತ್ರಜ್ಞ ಸಿಗ್ಮಂಡ ಪ್ರಾಯ್ಡ “ಇಡಿಪಸ್ ಕಾಂಪ್ಲೆಕ್ಸ್” ಎಂದು ಹೆಸರಿಸಿದ್ದಾನೆ.

ಕೃತಿಕಾರ ತನ್ನ ಬದುಕಿನ ರೇಖೆಗಳನ್ನು ಚಿತ್ತಾರಗಳನ್ನು ಕಾಲ್ಪನಿಕವೆಂಬಂತೆ ತನ್ನ ಕೃತಿಗಳಲ್ಲಿ ಒಡನೂಡಿಸಿದರೆ ಕ್ರಮೇಣ ಆತನ ಕೃತಿಗಳೇ ಅವನ ಬದುಕನ್ನು ಪ್ರಪಂಚಕ್ಕೆ ಸ್ಪುಟಗೊಳಿಸುತ್ತವೆ. ಲಾರೆನ್ಸನ ಬರವಣಿಗೆಯ ಆಕರ್ಷಣೆ ಎಂದರೆ ತನ್ನ ಬದುಕಿನ ನೈಜ ಘಟನೆಗಳನ್ನು, ಅನುಭವಗಳನ್ನು ತನ್ನ ಕಾಲ್ಪನಿಕ ಬರವಣಿಗೆಯಲ್ಲಿ ಭಟ್ಟಿ ಇಳಿಸಿರುವುದು. ಆತ ದೈವಿಕೃತವಾದ ಸಾಮಾನ್ಯರ ಕಲ್ಪನೆಗೆ ನಿಲುಕದ ಪ್ರೇಮವನ್ನು ಸತತವಾಗಿ ಬೆನ್ನುಹತ್ತಿದ. ಲಾರೆನ್ಸನ ಬದುಕಿನಲ್ಲಿ ಹೆಜ್ಜೆ ಸಪ್ಪಳ ಬಿಟ್ಟು ಎದ್ದ ಮೂರು ಹೆಣ್ಣುಗಳಿಂದಲೂ ಅದನ್ನು ನೀಡಲಾಗಲೇ ಇಲ್ಲ. ಒಂದು ರೀತಿಯಲ್ಲಿ ಆತನ ಬದುಕು ರಮ್ಯತೆಯ ಸೋಗಿನಲ್ಲಿ ಅಸ್ತವ್ಯಸ್ತ ಜೀವನ ಕ್ರಮದ ಹಾದಿ.

ಆತನ ಪ್ರಸಿದ್ಧ ಕವನಗಳಲ್ಲಿ ಒಂದಾದ “ಸ್ನೇಕ್” ವಿಮರ್ಶಕರ ವಿದ್ವತ್ತನ್ನು ಒರೆಗಲ್ಲಿಗೆ ಹಚ್ಚಿದ ಅಪರೂಪದ ಕವನ. ನಿಸರ್ಗ ಹಾಗೂ ಜೀವಿಗಳ ಮೇಲೆ ಮಾನವನ ವಿನಾಶಕಾರಿ ಪ್ರವೃತ್ತಿಯನ್ನು ಬಿಂಬಿಸುವ ಕವಿತೆಯ ಒಳನೋಟ ದಮನಕ್ಕೊಳ್ಳಪಟ್ಟ ವ್ಯಕ್ತಿಯ ಬದುಕಿಗೆ ಪ್ರತಿಮೆಯಾಗೂ ನಿಲ್ಲುತ್ತದೆ. ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳಲು ಲಾರೆನ್ಸನ ಮನೆಯ ಹಿತ್ತಲಿನ ಕೊಳದಲ್ಲಿ ಬಂದ ಜೀವಜಗತ್ತಿನ ಒಂದು ಭಾಗವಾದ ಸ್ನೇಕ್ ಲಾರೆನ್ಸಗೆ ದೈವಿಕ ಪ್ರಕಲ್ಪದಂತೆ ಕಾಣಿಸುತ್ತದೆ. ಆದರೆ ಹಾವನ್ನು ನೋಡಿ ಹೆದರಿ ಆತ ಅದನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಈ ಪ್ರಯತ್ನಕ್ಕೆ ಮೂಲ ಶಿಕ್ಷಣ, ಆಧುನಿಕತೆ ನಾಗರೀಕತೆಗಳ ಲೇಪನದಿಂದ ವಿಪರೀತ ಪರಿಷೃತಗೊಂಡ ಮೆದುಳು, ಅಥವಾ ಬುದ್ದಿ ಕಾರಣ. ಪುನಃ ಆತನಲ್ಲಿ ಸಹಜ ಸ್ವಭಾವ ಉದ್ದಿಪನಗೊಂಡು ಆತ ಪಶ್ಚಾತ್ತಾಪ ಪಡುತ್ತಾನೆ. ಇದು ಲಾರೆನ್ಸನ ರಕ್ತಗತ ಪ್ರಜ್ಞೆ ಹಾಗೂ ಸಂಗ್ರಹಿತ ಪ್ರಜ್ಞೆಗಳ ಮೇಲಾಟ.

ಆತನ ಮೊದಲ ಕಾದಂಬರಿ “ದಿ ವೈಟ್ ಪಿಕೊಕ್”. ೧೯೦೬ರಲ್ಲಿ ಬರೆಲಾರಂಭಿಸಿದ ಲಾರೆನ್ಸ ಈ ಕಾದಂಬರಿಯನ್ನು ಮೂರು ಸಲ ತಿದ್ದಿ ಮೊದಲ ಸಲ ೧೯೧೧ ಪ್ರಕಟಿಸಿದ. ಇದು ಕೂಡ ಅಸಂಗತ ದಾಂಪತ್ಯದ ರಸಹೀನತೆಯ ಮೇಲಿನ ಚೌಕಟ್ಟು. ಆಧುನಿಕ ಬದುಕು ಕಟ್ಟಿಕೊಟ್ಟ ವಿಘಟಕ ಚಿದ್ರ ವಿಚಿದ್ರ ಪಾತ್ರಗಳು ಕಾದಂಬರಿಯ ಉದ್ದಕ್ಕೂ ಮೌನವಾಗಿ ರೋಧಿಸುತ್ತವೆ. ಮದ್ಯಮವರ್ಗದ ಹುಡುಗಿ ಲೆಟ್ಟಿ ಬ್ರೆಡಸಲ್, ಆದರ್ಶಗಳ ನೇಗಿಲು ಹಿಡಿದ ರೈತ ಯುವಕ ಜಾರ್ಜ ಸಾಕ್ಸಟನ್ ಮತ್ತು ಅಭಿವೃದ್ಧಿ ಹೆಸರಲ್ಲಿ ಪ್ರಕೃತಿಯ ಒಡಲಿಗೆ ಕೊಡಲಿ ಹಿಡಿದ ಗಣಿಮಾಲಿಕನ ಮಗ ಲೆಸ್ಲಿ ಟೆಂಪೆಸ್ಟ ಈ ಮೂವರ ತ್ರಿಕೋನ ಪ್ರೇಮ ಹೆಣೆಯುತ್ತ ಇಪ್ಪತ್ತನೇ ಶತಮಾನದ ಪೂರ್‍ವಾರ್ಧದ ಔದ್ಯೋಗಿಕರಣದ ಕರಾಳ ಪರಿಣಾಮಗಳು ಸೂಕ್ಷ್ಮವಾಗಿ ಬಿಚ್ಚಿಕೊಳ್ಳುತ್ತವೆ.

ಅವನಲ್ಲಿ ಎಂದಿಗೂ ಒಪ್ಪಂದ ಮಾಡಿಕೊಳ್ಳದಂತಹ ಅವನದೇ ಆದ ತತ್ವಗಳಿದ್ದವು, ಆದರ್ಶಗಳಿದ್ದವು. ಆನೇಕ ಹೆಣ್ಣುಗಳು ಆತನ ಬದುಕಿನಲ್ಲಿ ನೃತ್ಯಗೈದರೂ ತಾಯಿ ಪ್ರೀತಿ ಹೊರತಾಗಿ ಆತ ಏಕಾಂತವನ್ನು ಒಂಟಿ ಬದುಕನ್ನು ಬಹಳವಾಗಿ ಪ್ರೀತಿಸಿದ. ಮಾನವನ ನಿಸರ್ಗದತ್ತ ಸಹಜ ಸ್ವಭಾವ ಮಾತ್ರ ಆತನ ಸಂಕಟವನ್ನು ನೀಗಿಸಬಲ್ಲದು ಎನ್ನುತ್ತಾನೆ ಲಾರೆನ್ಸ. ಅವನ ಸಾಮಾಜಿಕ ಕಳಕಳಿ, ನಿಸರ್ಗದೊಂದಿಗಿನ ಜೀವವೈವಿಧ್ಯತೆಯ ಅನುಬಂಧ ಅದರಲ್ಲಿರುವ ಅಲೌಕಿಕ ಆನಂದ, ನಿರಂತರ ಪಟ್ಟಭಧ್ರ ಹಿತಾಸಕ್ತಿಗ ಮಾನವನಿರ್‍ಮಿತ ಜಗತ್ತಿನೊಂದಿಗೆ ನಿರಂತರ ಆತನ ಲೇಖನಿಯ ಸಂಘರ್ಷ. ಇಪ್ಪತ್ತನೆಯ ಶತಮಾನದ ಪೂರ್‍ವಾರ್ಧದಲ್ಲಿ ಆಧುನಿಕ ಜಗತ್ತು ಅದರ ಟಿಸಿಲುಗಳಾದ ಕೈಗಾರಿಕೆ ನಗರೀಕರಣ ಇವುಗಳ ಅನಿಷ್ಟ ಪರಿಣಾಮಗಳನ್ನು ತನ್ನ ಬರವಣಿಗೆಗಳಿಂದ ಧಿಕ್ಕರಿಸುತ್ತ ಆತ ಗಳಿಸಿದ್ದು ವೈರಿಗಳನ್ನು.

“ಮನಿ ಮ್ಯಾಡನೆಸ್” ಕವಿತೆ ಮಾಡ್ರ್‍ಅನ್ ಜಗತ್ತಿನ ಇನ್ನೊಂದು ತಿಕ್ಕಲಿನ ಪರಿಚಯ ಮಾಡಿಸುತ್ತದೆ. ಹಣ ಈ ಜಗತ್ತಿನ ಮಹಾನ್ ಉನ್ಮಾದ ಎನ್ನುವ ಲಾರೆನ್ಸ ಹಣ ಇಲ್ಲದಿರೆ ಮಣ್ಣು ತಿನ್ನಬೇಕಾಗುತ್ತದೆ ಎಂಬ ಸಾಮಾನ್ಯನ ಆತಂಕ ಅವನನ್ನು ಭಯಾನಕ ಕ್ರೌರ್ಯಕ್ಕೆ ಹೇಗೆ ಉದ್ದಿಪಿಸುತ್ತದೆ ಎಂದು ಚಿಂತಿತನಾಗುತ್ತಾನೆ. ಪುನಃ ನಿಸರ್ಗ ಕೇಂದ್ರಿತ ಬದುಕಿಗೆ ಹಿಂದಿರುಗಿ ಮುಕ್ತ ಜೀವನದ ಆನಂದವನ್ನು ತರ್‍ಕಿಸುವಂತೆ ಮಾಡುತ್ತಾನೆ ಲಾರೆನ್ಸ್.

ಕ್ಷಯರೋಗ ಪೀಡಿತನಾದ ಲಾರೆನ್ಸ್ ೧೯೩೦ ಮಾರ್ಚ ೪ ರಂದು ಫ್ರಾನ್ಸಿನ ವ್ಯಾನಿಸನಲ್ಲಿ ತನ್ನ ೪೫ನೇ ವಯಸ್ಸಿಲ್ಲಿ ಮರಣಿಸಿದ. ಹೀಗಾಗಿ ಅಪ್ರಕಟಿತ ಕೃತಿಗಳನ್ನು ಉಳಿದುಬಿಟ್ಟವು. ಲಾರೆನ್ಸನ ಶೈಲಿಗೆ ಮೆಚ್ಚಿದ ಕಾಂಬ್ರೀಜ್ಜ್ ಪ್ರೊಫೆಸರ್ ಶೇಷ್ಠ ವಿಮರ್ಶಕ ಎಫ್.ಆರ್ ಲೇವಿಸ್ ಅವುಗಳನ್ನು ಜಗತ್ತಿಗೆ ಪರಿಚಯಿಸಿದ.
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)