Home / ಲೇಖನ / ಸಾಹಿತ್ಯ / ‘ಸರ್‍ವೋದಯ’ ಕುವೆಂಪು ಉದ್ಘೋಷಿಸಿದ ಯುಗಮಂತ್ರ

‘ಸರ್‍ವೋದಯ’ ಕುವೆಂಪು ಉದ್ಘೋಷಿಸಿದ ಯುಗಮಂತ್ರ

ಜಗತ್ತಿಗೆ ಬಂದ ಋಷಿಮಹರ್‍ಷಿಗಳ ಹಾಗೂ ದಾರ್‍ಶನಿಕರೆಲ್ಲರ ಅಂತರಂಗದ ಅಭೀಷ್ಟೆ ಸರ್‍ವರ ಹಾಗು ಸರ್‍ವದರ ಉದಯವೇ ಆಗಿರುವುದು ಸರ್‍ವವೇದ್ಯ. ದುಃಖಕ್ಕೆ ಕಾರಣವಾದ ಯಾವುದೇ ಅತಿ ಹಾಗು ಮಿತಿಯನ್ನು ನಿರಾಕರಿಸಿ, ಸಮತ್ವದ ಸಾರ್‍ವಕಾಲಿಕತೆಯನ್ನು ಜಗತ್ತಿಗೆ ವೈಜ್ಞಾನಿಕ ನೆಲೆಯಲ್ಲಿ ಸಾರಿದ ಗೌತಮ ಬುದ್ಧನಾಗಲೀ, ಜಗತ್ತಿಗೆ ಮಹತ್ವದ್ದನ್ನು ಕರುಣಿಸಿದ ಹಿಂದೂ ಧರ್ಮದ ಅಧ್ಯಾತ್ಮ, ಕ್ರಿಶ್ಚಿಯನ್ ಧರ್ಮದ ದಯೆ, ಕರುಣೆ, ಸೇವೆ ಹಾಗು ಇಸ್ಲಾಂ ಧರ್ಮದ ಸಮಾನತೆಯಾಗಲೀ, ಅಲ್ಲದೇ ಇತರ ಧರ್ಮಗಳ ಅಂತರಂಗದ ಆಶಯಗಳಾಗಲೀ ಈ ಎಲ್ಲದರ ಅಂತಿಮ ಗುರಿ ಸರ್‍ವೋದಯವೇ ಆಗಿದೆ. ಆ ಸರ್‍ವೋದಯ ತತ್ತ್ವ ಕಾಲ ಕಾಲಕ್ಕೆ ಅನುರಣಿಸುತ್ತಾ ಕುವೆಂಪು ಅವರ ಪೂರ್‍ಣದೃಷ್ಟಿಯಲ್ಲಿ ತನ್ನ ತುರಿಯಾವಸ್ಥೆಯನ್ನು ಮುಟ್ಟಿದೆ.

ಆಧುನಿಕ ಕಾಲಕ್ಕೆ ಕುವೆಂಪು ಅವರನ್ನು ಬಿಟ್ಟರೆ ಸರ್ವೋದಯವನ್ನು ತಮ್ಮ ಸಾಹಿತ್ಯದ ಹೃದಯವಾಗಿಸಿಕೊಂಡ ಸಾಹಿತಿ ಸಿಗುವುದು ದುರ್‍ಲಭ. ಸರ್‍ವೋದಯವನ್ನು ಯುಗದ ಮಂತ್ರವಾಗಿ ಒಪ್ಪಿ ಅಪ್ಪಿಕೊಂಡು ತಮ್ಮ ಸಾಹಿತ್ಯದಲ್ಲಿ ಅನುರಣಿಸಿದ ಕುವೆಂಪು, ಅಂತಿಮವಾಗಿ ಸಾರ ರೂಪದಲ್ಲಿ ಅನಿಕೇತನ ಅಥವಾ ವಿಶ್ವಮಾನವ ಗೀತೆಯನ್ನ, ಪಂಚಮಂತ್ರ ಹಾಗು ಸಪ್ತಸೂತ್ರಗಳ ಮೂಲಕ ವಿಶ್ವಮಾನವ ಸಂದೇಶವಿತ್ತು, ಕಾಲ ಕಾಲದಿಂದಲೂ ಮನುಕುಲಗಳ ಬೆನ್ನಿಗೆ ಕಟ್ಟಿಕೊಂಡು ಬಂದ ಎಲ್ಲ ಕಿಲ್ಬಿಷಗಳಿಂದ ಮುಕ್ತಗೊಂಡ ಸರ್‍ವ ಸಮಾನತೆಯ ಸರ್‍ವೋದಯವನ್ನು ಕರುಣಿಸಿದ್ದಾರೆ. ಅವರ ಮಹಾಕಾವ್ಯವಾದ ‘ಶ್ರೀ ರಾಮಾಯಣ ದರ್‍ಶನಂ’ ನ ಎಲ್ಲ ಪಾತ್ರಗಳೂ ವಿಕಾಸಗೊಂಡು ಪರಸ್ಪರ ಸರ್ವರ ಉದಯಕ್ಕೆ ಪ್ರೇರಣೆ ನೀಡುವ ಉದಾತ್ತತೆಯಿಂದ ಮೆರೆದಿವೆ. ಅವರ ಮಹತ್ವದ ಕಾದಂಬರಿಗಳಲ್ಲಿ ಒಂದಾದ ‘ಕಾನೂರು ಹೆಗ್ಗಡತಿ’ ಹತ್ತು ವರ್‍ಷಗಳಾದ ಮೇಲೆ ಎನ್ನುವ ಅಂತಿಮ ಭಾಗದಲ್ಲಿ ಎಲ್ಲ ಜಾತಿಯವರೂ, ಎಲ್ಲ ಧರ್‍ಮದವರೂ ಗುಡ್ಡದ ಮೇಲಿನ ಗೌತಮ ಬುದ್ಧನ ಕಡೆಗೆ ಮೊಗಮಾಡಿರುವುದು ಸರ್‍ವೋದಯದ ಪ್ರತಿಮಾ ಸ್ವರೂಪದ್ದಾಗಿದ್ದರೆ, ಮತ್ತೊಂದು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕುವೆಂಪು ಕಾದಂಬರಿಯ ಪ್ರವೇಶಿಕೆಗೆ ಬರೆದ ಬರಹವೂ ಕೂಡ, ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ… ಎಲ್ಲವುದಕ್ಕೂ ಇದೆ ಅರ್‍ಥ, ನೀರೆಲ್ಲವೂ ತೀರ್‍ಥ’ ಎಂದು ಸರ್ವಸಮಾನತೆಯ ಸರ್ವೋದಯದ ಪುಣ್ಯತೀರ್ಥಕ್ಕೆ ಕರೆದೊಯ್ಯುತ್ತದೆ.

ಸರ್ವೋದಯ ತತ್ವ ಸರ್‍ವಾಂಗ ಸುಂದರವಾಗಿ ಪೂರ್‍ಣತೆಯಲ್ಲಿ ಅವತರಿಸಿರುವುದು ಅವರ ಕವನ ಸಂಕಲನ ‘ಇಕ್ಷು ಗಂಗೋತ್ರಿ’ಯ ‘ಶ್ರೀಸಾಮಾನ್ಯರ’ ದೀಕ್ಷಾ ಗೀತೆಯಲ್ಲಿ. ಅದು ಆ ತತ್ವವನ್ನು ಶಿಖರಪ್ರಾಯವಾಗಿ ಜಗತ್ತಿಗೆ ಸಾರುತ್ತದೆ. ಅದನ್ನು ಪರಕೀಯರ ದಾಸ್ಯದಿಂದ ಮುಕ್ತಗೊಂಡ ಭಾರತ ತನ್ನದೇ ಆದ ಸರ್ವೋದಯಕ್ಕೆ ಪೂರಕವಾದ ಸಂವಿಧಾನವನ್ನು ರಚಿಸಿಕೊಂಡು ಅದು ಜಾರಿಗೆ ಬಂದ ೧೯೫೦ ನೇ ಜನವರಿ ೨೬ ರಂದು ಕುವೆಂಪು ತಮ್ಮ ದಾರ್ಶನಿಕ ದೃಷ್ಟಿಯಿಂದ ರಚಿಸಿರುವುದು ಅರ್‍ಥಪೂರ್‍ಣವಾಗಿದೆ. ಸಂವಿಧಾನ ಅಂತಿಮವಾಗಿ ಸಾಧಿಸಬೇಕಾದ ಗುರಿಯ ಆಶಯವನ್ನು ಈ ದೀಕ್ಷಾಗೀತೆ ಪೂರ್ಣ ಪ್ರಮಾಣದಲ್ಲಿ ನಿರ್ದೇಶಿಸಿ ಅಭಿವ್ಯಕ್ತಿಸಿದೆ.

ದೇವರ ದೃಷ್ಟಿಯಲ್ಲಿ ಯಾವುದೇ ರೀತಿಯ ತರತಮ ಭಾವಕ್ಕೆ ಎಡೆಯಿಲ್ಲ. ಹೇಗೆ ತಾಯಿ ತನ್ನ ಎಲ್ಲ ಮಕ್ಕಳನ್ನೂ ಅದು ಸಶಕ್ತವಾಗಿರಲಿ ಇಲ್ಲ ಅಶಕ್ತವಾಗಿರಲಿ ಸಮಾನ ಪ್ರೀತಿಯಿಂದ ಕಂಡು ಆದರಿಸಿ, ಅವರ ಸರ್ವಾಂಗೀಣ ಬೆಳವಣಿಗೆಗೆ ಹಸಿದು ಹಂಬಲಿಸುವಳೋ ಹಾಗೆ ಆಡಂಬರಕ್ಕೆ ದೂರವಾದ ದೈವ ‘ಶ್ರೀ ಸಾಮಾನ್ಯ’ತೆಯನ್ನು ಪುರಸ್ಕರಿಸಿ ಆಶೀರ್ವದಿಸುತ್ತದೆ ಎನ್ನುವುದನ್ನು ಕುವೆಂಪು ತಮ್ಮ ಅಂತರ್‍ಮುಖದ ತಪಸ್ಸಿನಿಂದ ಪ್ರಾಪ್ತವಾದ ದಾರ್ಶನಿಕತೆಯಿಂದ ಅಭಿವ್ಯಕ್ತಿಸಿದ್ದಾರೆ. ತಾಯಿಯ ಸ್ಥಾನದಲ್ಲಿರುವ ಭಾರತದ ಸಂವಿಧಾನವೂ ಆ ತಾಯ್ತನದಿಂದ ಹೊರಗುಳಿಯದಂತೆ ಭಾರತೀಯರು ಎಚ್ಚರದಿಂದಿರಬೇಕು.

ಶ್ರೀಸಾಮಾನ್ಯ’ವೇ ಭಗವನ್ ಮಾನ್ಯಂ;
ಶ್ರೀಸಾಮಾನ್ಯನೆ ಭಗವದ್ ಧನ್ಯಂ!
ಸಾಮಾನ್ಯತೆ ಭಗವಂತನ ರೀತಿ;
ಸಾಮಾನ್ಯವೆ ದಿಟ ಭಗವತ್ ಪ್ರೀತಿ!

ಭಗವಂತನಿಗೆ ಪ್ರಿಯವಾದುದು ವೈಭೋಗ ವಿಜೃಂಭಣೆಗಳಲ್ಲ. ಅವನು ಮಾನ್ಯ ಮಾಡುವುದು ಸಾಮಾನ್ಯತೆಯನ್ನು. ಅವನಿಗೆ ಪರಮಪ್ರಿಯವಾದುದು ಶ್ರೀಸಾಮಾನ್ಯವೆ ಹಾಗು ಶ್ರೀಸಾಮಾನ್ಯನೇ ಇದನ್ನು ಅಂತಃಕರಣ ಪೂರ್‍ವಕವಾಗಿ ಅರಿತು ಅಳವಡಿಸಿಕೊಂಡ ಕುವೆಂಪು, ‘ಸಾಮಾನ್ಯದ ಪೂಜೆಗೆ ಶ್ರೀ ದೀಕ್ಷೆಯ ಕೊಳ್ಳಿಂ’ ಎಂದು ಸರ್‍ವರ ಉದಯಕ್ಕೆ ಮೂಲ ಸೆಲೆಯಾದ ಸಾಮಾನ್ಯತೆಯನ್ನು ಒಂದು ಪೂಜೆಯಾಗಿ ಪರಿಗಣಿಸಿ ಧೀಕ್ಷೆಯನ್ನು ಕೊಡುತ್ತಾರೆ. ಅದು ಕೇವಲ ದೀಕ್ಷೆಯಲ್ಲ. ಮಹತ್ವದ ಶ್ರೀದೀಕ್ಷೆ. ಶ್ರೀದೀಕ್ಷೆ ಎಂಬುದು ಸರ್‍ವರ ಸರ್‍ವೋದಯದ ಶ್ರೀರಕ್ಷೆ. ಅವರ ‘ಜಲಗಾರ’ ನಾಟಕದಲ್ಲಿ ಸಮಾಜ ಅತ್ಯಂತ ಕೀಳಾಗಿ ಕಂಡ ಜಲಗಾರನನ್ನು ಶಿವನಿಗೆ ಎಣೆಮಾಡಿದ ತನ್ಮೂಲಕ ಕೊಟ್ಟ ಶ್ರೀದೀಕ್ಷೆ. ಹಾಗೆ ಅವರ ‘ಶೂದ್ರ ತಪಸ್ವಿ’ ನಾಟಕವೂ ಕೂಡ ಆ ದಿವ್ಯ ಪ್ರತಿಭೆಯಿಂದ ಕಂಗೊಳಿಸುತ್ತದೆ. ಶತಶತಮಾನಗಳಿಂದ ವರ್‍ಣವ್ಯವಸ್ಥೆಯ ಅಸಮಾನತೆಯನ್ನೇ ಆತ್ಮವಾಗಿಸಿಕೊಂಡು ಕಳೆಯನ್ನೆ ಬೆಳೆ ಎಂದು ಭ್ರಮಿಸಿರುವ ಭಾರತೀಯರಿಗೆ ಹೊಸ ಬೆಳಕನ್ನು ನೀಡಿ ಹುಸಿ ಶ್ರೇಷ್ಠತೆಗೆ ಬಿಸಿ ಮುಟ್ಟಿಸಿದ ಅತ್ಯಪೂರ್‍ವ ಕೃತಿ. ತಪಶ್ಯಕ್ತಿಗೆ ಶ್ರೇಷ್ಠ ಕನಿಷ್ಠತೆಗಳಿಲ್ಲ ಎಂಬ ದಿವ್ಯತೆಯನ್ನು ಸಾರಿದ ಆ ಕೃತಿಗೆ ಸರಿಗಟ್ಟುವ ಮತ್ತೊಂದು ಕೃತಿ ಇಲ್ಲವೆಂದೇ ಹೇಳಬೇಕು. ಎಲ್ಲ ರೀತಿಯ ಕಲ್ಮಷವನ್ನು ಕಳವ ತನ್ಮೂಲಕ ಆತ್ಮಶಕ್ತಿ ಪ್ರಖರಗೊಂಡು ಪ್ರಜ್ವಲಿಸುವಂತೆ ಮಾಡುವ ದಿವ್ಯ ಕಾವ್ಯ ಪ್ರತಿಭೆ ಕುವೆಂಪು ಅವರದು.

ಕುವೆಂಪು ಅವರು ಯುಗ ಮಂತ್ರವಾಗಿ ಘೋಷಿಸಿದ್ದು ಸರ್‍ವರೂ ಮನನ ಮಾಡಿಕೊಳ್ಳಬೇಕಾದ,

“ಕೊನೆಗೊಂಡಿತೊ ಓರೋರ್‍ವರ ಗರ್‍ವದ ಕಾಲ,
ಇದು ಸರ್‍ವರ ಕಾಲ!
‘ಸರ್‍ವೋದಯ!’ ‘ಸರ್‍ವೋದಯ!’
ಸರ್‍ವೋದಯ ಯುಗ ಮಂತ್ರ!
‘ಸರ್‍ವೋದಯವೆ ಸ್ವಾತಂತ್ರ್ಯದ ಶ್ರೀ ತಂತ್ರ’

ಎಂಬುದು. ಸರ್‍ವೋದಯವೆಂಬುದು ಕೇವಲ ಘೋಷಣೆಯಾಗಿ ಉಳಿಯುವಂಥದ್ದಲ್ಲ. ಅದು ಯುಗದ ಮಂತ್ರವಾಗಿ ಸಾಕಾರಗೊಳ್ಳಬೇಕು ಎಂಬುದು ಕುವೆಂಪು ಅವರ ಅಂತರಂಗದ ಆಶಯ. ಮೇಲು-ಕೀಳು, ಅಧ್ಯಕ್ಷ-ಸೇನಾನಿ, ಕಮ್ಮಾರ-ಚಮ್ಮಾರ, ಕಾರ್‍ಮಿಕ-ಕಲೆಗಾರ ಎಂಬ ತರತಮ ಭಾವಕ್ಕೆ ಎಡೆ ಇಲ್ಲದೆ ಎಲ್ಲರೂ ಸಮಾನರು, ಯಾರೂ ಯಾರ ಪಾದವನ್ನೂ ಹಿಡಿಯುವ ಹೀನತೆ ಇರದೆ, ಸರ್‍ವ ಸ್ವತಂತ್ರನಾಗಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಂಡು ಆತ್ಮಶಕ್ತಿಯಿಂದ, ಆತ್ಮಾಭಿಮಾನದಿಂದ ಬದುಕಬೇಕೆಂಬ ದಿವ್ಯ ಸಂದೇಶ ಅವರದು. ‘ತನಗೆ ತಾನ್ ನಿಂದೆಯಪ್ಪುದೆ ಕೊಂದುಕೊಂಡಂತೆ’ ಎಂಬ ಸಂಜೀವಿನಿ ಸಂದೇಶವನ್ನು ಸಾರಿ ಸರ್‍ವ ಸಮಾನತೆಯನ್ನು ಒಪ್ಪಿ ಅಚಲತೆಯಿಂದ ಅಪ್ಪಿ ಆಲಂಗಿಸಿಕೊಂಡ ಕುವೆಂಪು ಯಾರೂ ಯಾರಿಗೂ ನಡು ಬಗ್ಗಿಸದೆ ಸ್ವಾಭಿಮಾನದಿಂದ ನೆಟ್ಟಗೆ ನೇರ ನಡೆಗೆ ನಿಲ್ಲಬೇಕು, ಶತಶತಮಾನಗಳ ಅಭ್ಯಾಸಬಲದಿಂದ ಬಂದಿರುವ ತಲೆ ತಗ್ಗಿಸುವುದನ್ನು ತೊಡೆದು, ಕುಸಿದ ಎದೆಯನ್ನು ಮೇಲೆತ್ತಿ ಸ್ವಾಭಿಮಾನದ ಹಾಗು ಸಮಾನತೆಯ ಪಾಂಚಜನ್ಯವನ್ನು ನಭಕ್ಕಡರುವಂತೆ ಮೊಳಗಿಸಬೇಕು. ದಾಸ್ಯದ ಕಾಲ ಕಳೆದು ಸ್ವಾತಂತ್ರ್ಯದ ಶ್ರೀಸಿದ್ಧಿಯಲ್ಲಿ ಈ ನಾನು, ನನ್ನದು, ನನ್ನದೇ ನೆಲ, ಹೊಲ, ಕಾನ್, ಬಾನ್, ನುಡಿ, ಗುಡಿ, ಹೊಳೆ, ಬೆಳೆ ಎಲ್ಲವೂ ನಿನ್ನದು ನಿನಗಾಗಿಯೇ ಎಂಬುದನ್ನರಿತು. ನಿನ್ನ ಏಳ್ಗೆಯೇ ಸರ್‍ವರ ಏಳ್ಗೆ ಎಂಬ ವಿಶಾಲ ದೃಷ್ಟಿಯಿಂದ ಸ್ವಾತಂತ್ರ್ಯದ ಉದ್ಘೋಷವನ್ನು ಮೊಳಗಿಸಬೇಕು ಎನ್ನುತ್ತಾರೆ.

ಯಾವುದನ್ನು ಅಳವಡಿಸಿಕೊಂಡು ಅನುಸರಿಸಿದರೆ ಆನಂದ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ಕುವೆಂಪು ಅರಿತವರು. ಹಾಗಾಗಿ ಹೆಸರಾಸೆಗೆ ಹಂಬಲಿಸದೆ, ಕೀರ್‍ತಿ ಎಂಬ ಹೆಬ್ಬಾವನ್ನು ಆಲಂಗಿಸಿ ಅಪ್ಪಿಕೊಳ್ಳದೆ, ಸರ್ವ ಶ್ರೇಷ್ಠನಾದವನು ಭಗವಂತ, ಆತನ ರೀತಿಯೇ ಶ್ರೀಸಾಮಾನ್ಯ ಸ್ವರೂಪದ್ದು, ಸಾಮಾನ್ಯನಾದವನೇ ನಿಜವಾದ ಅರ್‍ಥದಲ್ಲಿ ಶ್ರೀಮಂತ, ಆತನೇ ಸರ್ವಸ್ವ, ಆ ಸಾಮಾನ್ಯತೆಗೆ ನಾವು ಹಿಂಜರಿಯೆವು ಎನ್ನುವುದು ಆತ್ಮದ್ಯೋತಕವಾಗಬೇಕು. ನೇಗಿಲು, ಲೇಖನಿ, ತಕ್ಕಡಿ, ಕತ್ತಿ ಇವೆಲ್ಲವೂ ಸಮರಸವಾದ ಸಂಪತ್ತು. ಪತ್ರಿಕೆಗಳು ಪ್ರಬೋಧಿಸುವ ತಾತ್ಕಾಲಿಕವಾದ ಹುಲ್ಲಿನ ಬೆಂಕಿಯ ಹೆಸರಿನ ಭ್ರಮೆ ಸಲ್ಲದು. ಅಜ್ಞಾತವಾಗಿ ದಿನನಿತ್ಯ ಪ್ರೀತಿಯಿಂದ ಬಾಳಿ, ನಲುಮೆಯ ಸೇವೆಗೈವುದೇ ನಮ್ಮ ಆತ್ಮಕ್ಕೆ ಚಿರಶಾಂತಿಯನ್ನು ನೀಡುತ್ತದೆ. ಅದೇ ನಿಜವಾದ ಅರ್‍ಥದಲ್ಲಿ ಸ್ವರ್‍ಗ, ಅದೇ ಶ್ರೀಸಾಮಾನ್ಯರ ದಿವ್ಯ ಮಾರ್‍ಗ ಎನ್ನುವುದು ಕುವೆಂಪು ಕರುಣಿಸಿದ ಚಿರಂತನವಾದ ಹಾಗು ಚಿರನೂತನವಾದ ಸನ್ಮಾರ್‍ಗ.

ನಮ್ಮ ಅಂತರಂಗದ ಅಭೀಪ್ಸೆ ಲೌಕಿಕ ನೆಲೆಯಲ್ಲೇ ನಿಲ್ಲಬಾರದು. ಅದು ಸತ್ಯದ ಶಾಶ್ವತ ಪೀಠದಲ್ಲಿ ವಿರಾಜಮಾನವಾಗಬೇಕು. ಋಷಿಯ ಕಣ್ಣಿಗೆ ಕಾಣುವ ತ್ರಿಕಾಲಗಳೂ ಏಕಕಾಲದಲ್ಲಿ ಸಂಗಮಿಸಿ ಸಾರುವ ಸರ್‍ವೋದಯದ ಐಕ್ಯತೆಯ ಸಾರ ಸರ್‍ವಸ್ವವಾಗಬೇಕು. ರಸ‌ಋಷಿ ಸದೃಶ ಕವಿಯ ದೈವಿಕಲೆ ಸಾರುವುದು ಅದನ್ನೇ. ಸರ್‍ವರ ಉದಯಕ್ಕೆ ತನ್ನನ್ನು ತಾನು ಸಮರ್‍ಪಿಸಿಕೊಂಡ ತ್ಯಾಗಿಯೇ ನಿಜವಾದ ಯೋಗಿ. ಗುರುವಿನ ದೀಕ್ಷಾಮಂತ್ರವೆಂದರೆ ಸರ್‍ವೋದಯ, ಸರ್‍ವ ಪ್ರೇಮ, ಸಮಾನತಾ ಭಾವ. ಆದ್ದರಿಂದ ಹುಸಿ ಹೆಮ್ಮೆಯಿಂದ ಬೀಗುವುದು ನಾಗರಿಕ ಲಕ್ಷಣವಲ್ಲ. ಭಗವದ್ ದೃಷ್ಟಿಯಲ್ಲಿ ನಾವು ಶ್ರೀಸಾಮಾನ್ಯರು ಎಂಬುವ ಸಾರ್‍ವಕಾಲಿಕ ಸತ್ಯವನ್ನು ಮಾನ್ಯಮಾಡಿ ಸಾಮಾನ್ಯದ ಪೂಜೆಯನ್ನು ಕೈಗೊಳ್ಳುವ ಮೂಲಕ ಸರ್‍ವೋದಯವನ್ನು ಸಾಧಿಸುವ ದೀಕ್ಷೆಯನ್ನು ಸ್ವೀಕರಿಸಿ ಕಂಕಣಬದ್ಧರಾಗಬೇಕೆಂಬ ಕರುಳಿನ ಕರೆಯನ್ನು ಕುವೆಂಪು ಅವರು ಸರ್‍ವ ಪ್ರಜಾಧಿಪತ್ಯದ (ರಿಪಬ್ಲಿಕ್ ಡೇ) ದಿನದಂದು ಕರುಣಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ೧೯೪೭, ಆಗಸ್ಟ್ ೧೫ ರಂದು ಕುವೆಂಪು ಬರೆದ ‘ಶ್ರೀಸ್ವಾತಂತ್ರ್ಯೋದಯ ಮಹಾಪ್ರಗಾಥಾ ಕಾವೇರಿಯಂತೆ ಹರಿವ ದೀರ್‍ಘ ಕವಿತೆಯಲ್ಲಿ,

‘ಧರ್‍ಮಕ್ಕೆ! ಸತ್ಯಕ್ಕೆ!
ನಾವೆತ್ತಿದೀ ಧ್ವಜಂ!
ಪುಣ್ಯಕ್ಕೆ! ಪ್ರೇಮಕ್ಕೆ!
ತಾನಕ್ಕೆ ಬಲ್ ಭುಜಂ!’

ಎಂದು ನಾವು ನಭಕ್ಕೆ ಹೆಮ್ಮೆಯಿಂದ ಎತ್ತಿ ಹಿಡಿದ ನಮ್ಮ ರಾಷ್ಟ್ರಧ್ವಜ ಧರ್ಮಕ್ಕಾಗಿ, ಸತ್ಯಕ್ಕಾಗಿ, ಪುಣ್ಯಕ್ಕಾಗಿ, ಪ್ರೇಮಕ್ಕಾಗಿ ಅದು ಶಾಶ್ವತವಾಗಿ ಭುಜಬಲವಾಗಿ ನೆಲೆಗೊಳ್ಳಲಿ ಎನ್ನುವ ಹಂಬಲ ಅವರದು.

ಸಾರಿ ಬಾ ಸರ್‍ವರ್‍ಗೆ ಸ್ವಾತಂತ್ರಮಂ;
ಸಾರಿ ಬಾ ಸರ್‍ವರ್‍ಗೆ ಸಾಮ್ಯತ್ವಮಂ;
ಸರ್‍ವರ್‍ಗೆ ಸಾರಿ ಬಾ ಸೌಹಾರ್‍ದಮಂ,
ಸರ್‍ವ ಲೋಕದ ಸರ್‍ವ ಸಂತೋಷಮಂ;
ಸರ್‍ವರಿಂ ಸರ್‍ವರಾ ಉದ್ಧಾರಮಂ!

ಎಂದು ಎಲ್ಲರಿಂದ ಎಲ್ಲರ ಉದ್ಧಾರವಾಗಬೇಕು, ಸೃಷ್ಟಿ ನಿಯತಿಯಂತೆ ಸರ್‍ವರಿಗೂ ಸ್ವಾತಂತ್ರ್ಯವಿರಬೇಕು, ಸಾಮರಸ್ಯ ಸೌಹಾರ್‍ದತೆಯಿರಬೇಕು, ಸಕಲ ಲೋಕದ ಸರ್ವ ಸಂತೋಷ ಸರ್ವರಿಗೂ ಸಿಗುವಂತಾಗಬೇಕು ಎಂದು ಎದೆದುಂಬಿ ಹಾರೈಸಿದ್ದಾರೆ. ‘ಸರ್‍ವರಿಗೆ ಸಮಬಾಳು! ಸರ್ವರಿಗೆ ಸಮಪಾಲು’ ಎಂಬುದು ಕುವೆಂಪು ಉದ್ಘೋಷಿಸಿದ ಯಾವ ಸಂಶಯಕ್ಕೂ ಎಡೆ ಇರದ ನವ ಯುಗದ ನವವಾಣಿ, ನಿಶ್ಚಿತವಾಣಿ. ಅದರ ಅಂತಿಮ ಗುರಿ ಸರ್ವೋದಯ. ಕುವೆಂಪು ಅವರ ‘ಅನಿಕೇತನ’ ಕವಿತೆ ಚೈತನ್ಯದ ಸರ್‍ವ ಸ್ತರದ ಉದಯವಾಗಬೇಕೆಂಬ ಸತ್ವವನ್ನು ಸಾಲು ಸಾಲಿನಲ್ಲಿ ತುಂಬಿಕೊಂಡಿದೆ. ಚೇತನ ಯಾವುದೇ ಜಾತಿ, ಮತ, ಕುಲ ಗೋತ್ರ, ದೇಶ, ಭಾಷೆಗಳಿಗೆ ಬಂಧಿತವಾಗಿ ಸೀಮಿತವಾಗದೆ, ಅದು ಅನಿಕೇತನವಾಗಿ ಸರ್ವೋದಯದ ಪುಣ್ಯತೀರ್ಥದಲ್ಲಿ ಮಿಂದು ಪಾವನವಾಗಬೇಕೆಂಬ ಹಿರಿದಾದ ಆಶಯವನ್ನ ಆ ಕವಿತೆ ಸಾರುತ್ತದೆ. ಕುವೆಂಪು ಅವರೊಡನೆ ಮಾತನಾಡುತ್ತಿರುವಾಗ ನಾನೊಮ್ಮೆ ಕೇಳಿದೆ. ‘ಸಾರ್, ತಮ್ಮಜೀವಿತದ ಸಿದ್ಧಿ ಆಯಿತೆ?’ ಎಂದು. ಅದಕ್ಕೆ ಅವರು ಮಂದಸ್ಮಿತರಾಗಿ ಹೇಳಿದ ಮಾತೆಂದರೆ, ‘ನಿಮಗೆ ನನ್ನ ಅನಿಕೇತನ ಪದ್ಯದ ಕಡೆಯ ಸಾಲು ಜ್ಞಾಪಕವಿದೆಯೇ?’ ಎಂದು. ‘ಹೌದು ಆ ಸಾಲು ‘ಆಗು ಆಗು ಆಗು ಆಗು’ಎಂದು ಎಂದೆ. ‘ನಿರಂತರ ಆಗುವಿಕೆಯೇ ಸತ್ಯ, ಸಿದ್ಧಿ ಮುಂತಾದುವೆಲ್ಲ ಭ್ರಮೆ’ ಎಂದರು. ನಿರಂತರ ಆಗುವಿಕೆಯಲ್ಲೇ ಸರ್‍ವೋದಯದ ಸಾಕ್ಷಾತ್ಕಾರವಿದೆ.

ಮನುಜ ಮತ, ವಿಶ್ವಪಥ, ಸರ್‍ವೋದಯ, ಸಮನ್ವಯ ಹಾಗು ಪೂರ್ಣದೃಷ್ಟಿ ಇವು ಕುವೆಂಪು ವಿಶ್ವಕ್ಕೆ ಕೊಟ್ಟ ಪಂಚ ಮಂತ್ರಗಳು. ಈ ಪಂಚಮಂತ್ರಗಳು ಪೂರ್‍ಣ ಪ್ರಮಾಣದಲ್ಲಿ ಅವರ ಮೇರು ಕೃತಿಯಾದ ‘ಶ್ರೀರಾಮಾಯಣ ದರ್ಶನಂ’ನಲ್ಲಿ ಮೈದಳೆದಿವೆ. ಕುವೆಂಪು ಅವರ ವಾಲ್ಮೀಕಿ ವೃದ್ಧನಲ್ಲ, ತರುಣ ತೇಜಸ್ವಿ ತಪೋವಲ್ಕಲ ವಸ್ತ್ರಶೋಭಿ.

ಅವನಿಗೆ ಸಂಜೀವಿನಿ ವಿದ್ಯೆ ಕರಗತ. ಸತ್ತ ಗಂಡು ಕ್ರೌಂಚಕ್ಕೆ ಜೀವ ಬರಿಸಿ ಜೋಡಿ ಕ್ರೌಂಚಗಳೆರಡನ್ನೂ ಆಕಾಶದಲ್ಲಿ ಹಾರಿ ಬಿಟ್ಟು ಕಾವ್ಯಕ್ಕೆ ತೊಡಗುತ್ತಾನೆ. ಹಾಗಾಗಿ ‘ಶ್ರೀ ರಾಮಾಯಣ ದರ್‍ಶನಂ’ ಎಲ್ಲ ಪಾತ್ರಗಳೂ ಜೀವ ತುಂಬಿಕೊಂಡು ಸರ್‍ವೋದಯದತ್ತ ತುಡಿದು ಮಿಡಿಯುತ್ತವೆ. ಮಹರ್‍ಷಿ ವಾಲ್ಮೀಕಿಯ ಕೈಯಲ್ಲಿ ಅಪೂರ್‍ಣವಾದ ಪಾತ್ರಗಳೆಲ್ಲವೂ ಪರಿಪೂರ್‍ಣತೆಯತ್ತ ಪಯಣಿಸಿ ಪೂರ್ಣತೆಯನ್ನು ಪಡೆದುಕೊಳ್ಳುತ್ತವೆ. ಮಂಥರೆ ಮಮತೆಯ ಸುಳಿಯಾಗುತ್ತಾಳೆ. ಊರ್‍ಮಿಳೆ ತಪಸ್ಸಿನ ಫಲವಾಗಿ ‘ತನ್ನತಾನ್ ಇಲ್ಲಗೈವುದೆ ಎಲ್ಲ ಸಾಧನೆಯ ಪರಮಗುರಿ ಮೇಣ್ ತಪಕೆ ಕೇಳ್ ತಂಗೆ ಪರಮಪ್ರಯೋಜನಂ’ ಎನ್ನುವ ಎತ್ತರಕ್ಕೆ ಏರುತ್ತಾಳೆ. ರಾಮನಲ್ಲಿ ರಾವಣ, ರಾವಣನಲ್ಲಿ ರಾಮತ್ವ ಏಕೀರ್‍ಭವಿಸಿರುವ ಪ್ರಾಕೃತಿಕ ಸತ್ಯವನ್ನು ಅದು ಸಾರುತ್ತದೆ. ಸೀತೆಯೊಂದಿಗೆ ರಾಮನೂ ಅಗ್ನಿ ಪ್ರವೇಶ ಮಾಡುವಲ್ಲಿ ಸಮಾನತೆ ಸಾರುವ ಸಂದೇಶವಿದೆ. ಸೀತೆಯಲ್ಲಿ ಮಾತೆಯನ್ನೂ ಕಾಣುವ ರಾವಣನ ಹೃದಯ ಪರಿವರ್‍ತನೆಯಿದೆ. ಎಲ್ಲರಿಂದ ಇರಲಿ ಮಗ ಭರತನಿಂದಲೇ ತಿರಸ್ಕಾರಕ್ಕೆ ಗುರಿಯಾದ ಕೈಕೆ ಎಲ್ಲರ ಥೂ ಛೀ ಕಾರದ ನಡುವೆ ಅಂತರಂಗದಲ್ಲಿ ಸರ್‍ವೋದಯಕ್ಕಾಗಿ ಮಾಡಿದ ತಪಸ್ಸಿದೆ. ನಂದೀಗ್ರಾಮಕ್ಕೆ ಬಂದ ರಾಮ ಕೈಕೆಯ ಕಾಲಿಗೆ ನಮಸ್ಕರಿಸಿದಾಗ, ‘ತನುವಂ ಪೆತ್ತ ತಾಯಿ ನಾನಲ್ತು. ಆತ್ಮಂ ಪೆತ್ತ ತಾಯೆನುತ’ ರಾಮನನ್ನು ಹಿಡಿದು ಎತ್ತುತ್ತಾಳೆ. ಆಗ ಕುವೆಂಪು, ‘ಅಪ್ರಕಟಮಾದೊಡೇನ್? ಅಪುಣ್ಯ ರೂಪದಿ ತೋರ್‍ದೊಡೇಂ? ತಪಂ ತಪಮಲ್ತೆ?’ ಎಂದು ಕೈಕೆಯ ತಪಸ್ಸಿನ ಮಹಿಮೆಯನ್ನು ಕೊಂಡಾಡುತ್ತಾರೆ. ಹೀಗೆ ಇಲ್ಲಿಯ ಎಲ್ಲ ಪಾತ್ರಗಳು ಸರ್‍ವೋದಯಕ್ಕಾಗಿ ಸಮರ್‍ಪಿಸಿಕೊಂಡ ಪಾತ್ರಗಳಾಗಿ ಪಾವಿತ್ರ್ಯತೆಯನ್ನು ಪಡೆದುಕೊಂಡಿವೆ. ‘ಶ್ರೀರಾಮಾಯಣ ದರ್‍ಶನಂ’ನ ಉಸಿರು ಸರ್‍ವೋದಯ. ಅದು ಅಲ್ಲಿ ತನ್ನ ಪರಿಪೂರ್‍ಣತಾವಸ್ಥೆಯಲ್ಲಿ ಮೈದೋರಿದೆ.

ಈ ಕಾವ್ಯದ ಮಹತ್ವವನ್ನು ಮನಗಂಡ ಸರ್‍ವೋದಯದ ಆಚಾರ್‍ಯ ವಿನೋಬಭಾವೆ ಅವರು ಖುದ್ದು ಮೈಸೂರಿಗೆ ಬಂದು ಕುವೆಂಪು ಅವರನ್ನು ಅಭಿನಂದಿಸಿರುವುದು ಕುವೆಂಪು ಅವರ ಸರ್‍ವೋದಯ ಸಾಹಿತ್ಯಕ್ಕೆ ಸಂದ ದೊಡ್ಡ ಗೌರವವಾಗಿದೆ. ಕುವೆಂಪು ಅವರಿಂದಾಗಿ ಸರ್‍ವೋದಯ ತತ್ವ ಯುಗಮಂತ್ರವಾಗಿ ಪರಿಣಮಿಸಿದೆ. ಮನುಕುಲದ ಬದುಕಿನ ಸಾಂಗತ್ಯ ಸರ್‍ವೋದಯದಿಂದಲೇ ಎಂಬ ಸಾರ್‍ವಕಾಲಿಕ ಸತ್ಯ ನಮ್ಮ ಉಸಿರಾಗಲಿ.
*****
೨೦೧೪

Tagged:

Leave a Reply

Your email address will not be published. Required fields are marked *

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...