ರಾಜ ಒಡೆಯರ ತರುವಾಯ ಅವರ ಮೊಮ್ಮಕ್ಕಳು ಚಾಮರಾಜ ಒಡೆಯರು ಪೂರ್ವ ಯೌವನದಲ್ಲಿಯೇ ಪಟ್ಟಕ್ಕೆ ಬಂದರು. ಊಳಿಗದವರು ತಮ್ಮ ಸ್ವಂತ ಪ್ರಯೋಜನದಲ್ಲಿಯೇ ದೃಷ್ಟಿಯುಳ್ಳವರಾಗಿ ದೊರೆಗಳ ಶಿಕ್ಷಣದ ಚಿಂತೆಯನ್ನು ಮಾಡದೆ ದೊರೆಗಳ ಇಷ್ಟದಂತೆ ನೆರವೇರಿಸುತ್ತಿದ್ದರು. ದೊರೆಗಳಿಗೆ ಆಟಪಾಟಗಳಲ್ಲಿಯೂ ಸುಖವಿಲಾಸಗಳಲ್ಲಿಯೂ ಆಸಕ್ತಿಯು ದಿನೇ ದಿನೇ ಹೆಚ್ಚಿತು. ಪಾಠ ಹೇಳುವುದಕ್ಕಾಗಿ ನಿಯಮಿತನಾಗಿದ್ದ ರಂಗನಾಥ ದೀಕ್ಷಿತನೂ, ವೈದ್ಯನಾಗಿದ್ದ ಬೊಮ್ಮರಸಪಂಡಿತನೂ ಇಬ್ಬರೂ ದೊರೆಗಳ ಸುಖಾಪೇಕ್ಷೆಗೆ ಅನುಕೂಲರಾಗಿಬಿಟ್ಟರು. ಅರಮನೆಯಲ್ಲಿ ದುರ್ಮಾರ್ಗಿಗಳು ಹೆಚ್ಚಾಗಿ ಗೌರವ ಗಾಂಭೀರ್ಯಗಳು ಮಾಯವಾಗಿ ಅದು ದುರ್ನಡತೆಗೂ ಅಸಹ್ಯಕ್ಕೂ ನೆಲೆಯಾಯಿತು.
ಇದನ್ನು ಕಂಡು ದಳವಾಯಿ ಕೆಲಸ ಮಾಡುತ್ತಿದ್ದ ಬೆಟ್ಟದ ಅರಸಿನವರು ಈ ದುರ್ಮಾರ್ಗಿಗಳನ್ನು ಕರೆಯಿಸಿ “ನೀವುಗಳು ಇನ್ನು ಮೇಲೆ ನಿಮ್ಮ ಕೆಲಸಗಳನ್ನು ಮಾಡಬೇಡಿ” ಎಂದು ಕಟ್ಟುಮಾಡಿದರು; ದೊರೆಯ ಊಳಿಗಕ್ಕೆ ವೈದ್ಯರನ್ನೇ ನಿಯಮಿಸಿದರು. ಬೊಮ್ಮರಸ ಪಂಡಿತನನ್ನು “ನೀವು ಇನ್ನು ಮೇಲೆ ಅಂತಃಪುರಕ್ಕೆ ಹೋಗತಕ್ಕ ಕೆಲಸವಿಲ್ಲ; ಒಳಬಾಗಲಲ್ಲಿರುವ ಅವ್ವೇರುಗಳಿಗೆ ಔಷಧ ಕೊಡುವುದಷ್ಟೋ ಅಷ್ಟೇ” ಎಂದು ಗೊತ್ತುಮಾಡಿ, ರಾಣೀವಾಸ ವಿಚಾರಮಾಡಿ ಚಿಕಿತ್ಸೆಮಾಡಲು ನಂಬಿಕಸ್ತನಾಗಿದ್ದ ತಿರುವೇಂಗಳಯ್ಯನೆಂಬಾತನನ್ನು ವೈದ್ಯಕ್ಕೆ ನೇಮಿಸಿದರು. ಹೀಗೆ ಮಾಡಿ ಬೆಟ್ಟದ ಅರಸಿನವರು ಅರಮನೆಯು ಎಂದಿನಂತೆ ಗೌರವದ ಸ್ಥಾನವಾಗಿ ದೊರೆಗಳ ದುರ್ಬುದ್ದಿಯನ್ನು ಬಿಟ್ಟಾರೆಂದು ಹಾರೈಸಿದರು. ಆದರೆ ದೊರೆಗಳಿಗೆ ಈ ಏರ್ಪಾಡುಗಳು ಸರಿಬೀಳಲಿಲ್ಲ. ಮೊದಲಿನ ಸ್ನೇಹಿತರು ಪರಿಚಾರಕರನ್ನೇ ಹತ್ತಿರ ಇಟ್ಟುಕೊಂಡು “ದಳವಾಯಿಗಳ ಆಜ್ಞೆಯನ್ನು ನೀವೇಕೆ ಕೇಳಬೇಕು? ನಿಮ್ಮನ್ನು ಆಜ್ಞಾಪಿಸಲು ಅವರು ಯಾರು?” ಎಂದು ಮೊದಲಿನಂತೆಯೇ ಇದ್ದರು. ಇದನ್ನು ಕೇಳಿದ ದಳವಾಯಿಗಳು ಬಹಳ ವ್ಯಸನಪಟ್ಟು “ಇದುವರೆಗೂ ನಮ್ಮ ಮಾತಿನಲ್ಲಿ ದೊರೆಗಳು ಗೌರವವನ್ನಿಟ್ಟಿದ್ದರು. ಈಗ ಪ್ರಾಯ ಬಂತು. ನಮ್ಮಂತಹವರ ಮಾತು ಬೇಕಾಗಿಲ್ಲ” ಎಂದು ಖೇದದಿಂದ ಆಪ್ತರಲ್ಲಿ ಮಿತ್ರರಲ್ಲಿ ಹೇಳಿಕೊಂಡು ಸುಮ್ಮನಾದರು. ದಳವಾಯಿಗಳ ತಮ್ಮ ದೊಡಚಾಮಪ್ಪನೂ, ಮಗ ಚಿಕ್ಕ ಚಾಮಪ್ಪನೂ ಇಬ್ಬರೂ ಈ ಮಾತನ್ನು ಕೇಳಿ ಮನಸ್ಸಿನಲ್ಲಿ ಚಿಂತಿಸುತ್ತಿದ್ದರು. ಒಂದುದಿನ ಬೆಳಿಗ್ಗೆ ಮೂರನೆ ಜಾವದಲ್ಲಿ ನಿಶ್ಶಬ್ದವಾಗಿದ್ದಾಗ ಇಬ್ಬರೂ ಯಾರಿಗೂ ತಿಳಿಯದಂತೆ ಕದದ ಹಿಂದೆ ಕುಳಿತು, “ಈ ಅಯೋಗ್ಯ ದೊರೆಗೆ ಮಾಟವನ್ನು ಮಾಡಿಸಿಯೋ ವಿಷವನ್ನಿಡಿಸಿಯೋ ಕೊಲ್ಲಿಸಿದರೆ ಮುಂದೆ ಇಮ್ಮಡಿ ರಾಜ ಒಡೆಯರಿಗೆ ಪಟ್ಟವಾಗುವುದು, ಅವರು ಇನ್ನೂ ಬಾಲಕರಾದ್ದರಿಂದ ನಮ್ಮ ತಂದೆಯವರಿಗೆ ಅಧಿಕಾರವೆಲ್ಲವೂ ಬರುವುದು” ಎಂದು ರಹಸ್ಯವಾಗಿ ಮಾತನಾಡಿಕೊಳ್ಳುತ್ತಿದ್ದರು. ಅವರಿಗೆ ತಿಳಿಯದಂತೆ ಈ ಮಾತುಗಳನ್ನು ಚನ್ನವ್ವೆಯಯೆಂಬಾಕೆಯು ಕೇಳುತ್ತಿದ್ದಳು. ಬೆಳಕು ಹರಿದಮೇಲೆ ಆ ಚನ್ನವ್ವೆಯು ಅರಮನೆಗೆ ಹೋಗಿ ಮಾತುಶ್ರೀ ಹೊನ್ನಾಜಮ್ಮಣ್ಣಿಯವರ ಸನ್ನಿಧಿಯಲ್ಲಿ ಚಾಕರಿ ಮಾಡುತ್ತಿದ್ದವಳಾದ್ದರಿಂದ ಸುಲಭವಾಗಿ ಅಂತಃಪುರವನ್ನು ಪ್ರವೇಶಿಸಿ ಮಾತುಶ್ರೀಯವರಿಗೆ ತಾನು ಕೇಳಿದುದನ್ನು ತಿಳಿಸಿಬಿಟ್ಟಳು. ಅಲ್ಲದೆ ದೊರೆಗಳಿಗೆ ಸ್ತನ್ಯವನ್ನು ಕೊಡುತ್ತಿದ್ದು ಆಗಲೂ ಆರೋಗಣೆಯನ್ನು ಮಾಡಿಸುತ್ತಿದ್ದ ನಂಜವ್ವೆಯೊಡನೆಯೂ ಹೇಳಿದಳು. ನಂಜವ್ವೆಯರು ಈ ಮಾತನ್ನು ದೊರೆಗೆ ಊಟಮಾಡುವಾಗ ತಿಳಿಸಿದರು. ರಾಜರಿಗೆ ಬಹಳ ಕೋಪ ಬಂತು.
ಬಳಿಕ ದೊರೆಗಳು ತಮ್ಮ ಸಾಮಾಜಿಕರನ್ನು ಕರೆಸಿ ಈ ಸಂಗತಿಯನ್ನು ತಿಳಿಯಹೇಳಿ “ನೀವು ಇದರ ವಿವರವನ್ನು ಗೋಪ್ಯವಾಗಿ ತಿಳಿದುಬನ್ನಿ” ಎಂದರು. ಅವರು ರಾಜರ ಮನೋಗತವನ್ನು ತಿಳಿದವರಾಗಿ ಹೊರಗೆ ಹೋಗಿ ವಿಚಾರಿಸಿಕೊಂಡು ಬಂದು “ಎಲ್ಲವೂ ನಿಜ, ಮಹಾಸ್ವಾಮಿ!” ಎಂದುಬಿಟ್ಟರು. ಅದನ್ನು ಕೇಳಿ ಯೋಚನೆ ಮಾಡಿ ತಮ್ಮ ಹೆತ್ತಪ್ಪಾಜಿಯವರಿಗೆ ಕಾಗದ ಬರೆಸಿ ಉತ್ತರವನ್ನು ತರಿಸಿಕೊಂಡು ದೊರೆಗಳು ದೊಡ್ಡಚಾಮ, ಚಿಕ್ಕಚಾಮವ್ವರಿಬ್ಬರಿಗೂ ಮರಣದಂಡನೆಯನ್ನು ವಿಧಿಸಿದರು. ಅವರಿಬ್ಬರೂ ಈ ರೀತಿ ದುರ್ಮರಣಕ್ಕೆ ತುತ್ತಾದರು.
ಬೆಟ್ಟದ ಅರಸರು ದೊರೆಗಳಿಗೆ ವರಸೆಯಲ್ಲಿ ಚಿಕ್ಕಪ್ಪನಂತಿದ್ದರು. ಮನೆತನದಲ್ಲಿ ಹಿರಿಯರೂ ಶೂರರೂ ಆಗಿದ್ದರು. ಆದರೂ ಮುಂದೇನಾಗುವುದೋ ಎಂದು ಬೆಟ್ಟದ ಅರಸರು ಯೋಚಿಸುತ್ತಿ ದ್ದರು. ಇವರು ಎಲ್ಲಿಯಾದರೂ ಹೊರಗೆ ಹೊರಟುಬಿಟ್ಟರೆ ಪಾಳೆಯಗಾರರ ಜೊತೆ ಸೇರಿಕೊಂಡು ಪ್ರಬಲವಾದಾರೆಂದು ರಾಜರು ಚಿಂತಿಸಿ ಇವರನ್ನು ಶಿಕ್ಷೆಸಿಬಿಡಬೇಕೆಂದುಕೊಂಡು, ಅವರನ್ನು ಕರೆಯಿಸಿ, ಕಣ್ಣಿಗೆ ಭಾಂಡಕರ್ಪೂರವನ್ನು ಕಟ್ಟಿಸಿ, ಕಣ್ಣುಗಳನ್ನು ಕೀಳಿಸಿ, “ಇನ್ನು ಮೇಲೆ ನೀವು ನಿಮ್ಮ ಮನೆಯಲ್ಲಿ ಇರತಕ್ಕದ್ದು, ಮನೆಯ ಹೊಸ್ತಿಲು ದಾಟಿ ಹೊರಗೆ ಬಂದರಾದರೆ ನಮ್ಮ ಆಗ್ರಹಕ್ಕೆ ಪಾತ್ರರಾಗುವಿರಿ” ಎಂದು ಕಠೋರವಾಗಿ ನುಡಿದುಬಿಟ್ಟರು. ದಳವಾಯಿತನವು ಬೆಟ್ಟದ ಅರಸಿನವರಿಗೆ ತಪ್ಪಿತು. ಈ ರೀತಿಯಲ್ಲಿ ಬೆಟ್ಟದ ಅರಸರು ದೊರೆಗಳ ವಿಲಾಸವನ್ನು ತಡೆಯಲು ಪ್ರಯತ್ನ ಪಟ್ಟು ಕ್ರೂರಶಿಕ್ಷೆಗೆ ಗುರಿಯಾದರು.
ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕತಾ|
ಏಕೈಕಮಪ್ಯನರ್ಥಾಯ ಕಿಂ ಯತ್ರಚತುಷ್ಟಯ೦||
*****
[ವಂಶರತ್ನಾಕರ ಪುಟ ೫೩-೫೫; ವಂಶಾವಳಿ ಸಂ. ೧, ಪುಟ ೫೪-೫೫]