ಪ್ರೀತಿಪಾತ್ರರು ತಾವು ದೂರವಿರುತಿರುವಾಗ
ಮುಗಿಲ ಚಿಕ್ಕೆಯನೆಣಿಸೆ ಬರುವ ರೋಮಾಂಚನವು
ಬರುತಿಹುದು. ಪ್ರೀತಿಯೊಳಗೊಂದಮೃತಸಿಂಚನವು
ಕಾಣುವದು. ಒಲಿದವರ ರೂಹು ಮರೆಯಾದಾಗ
ಎದೆ ಕೊರಗುವದು ಕೇಳಿ ಎಂದು ಬಹರವರೀಗ ?
ಹಾತೊರೆಯುವದು ಒಲುಮೆಗಣ್ಣು ತನಗಂಜನವು
ಬೇಕೆಂದು. ಬಂದಿರುವ ಕನಸು ನಿರ್‍ವಂಚನವು
ಅಂದೆಲ್ಲ. ಮುಂದೊಮ್ಮೆ ಪ್ರಿಯರು ಬಂದಿರುವಾಗ
ಮೂಗವಡಿದಿದೆ ಬಾಯಿ, ಬೇಸರಿಯುವದು ನೇತ್ರ.
ಕೀಸರಿಡುವದು ಮನವು,- ಏಕಾಂತಮಯವಿರಲಿ
ಬಾಳು ಕಾಂತಾರದಂತೆಂದು ಒಡನುಡಿಯುವದು.
ಇದುವೆ ಪ್ರೀತಿಯ ಸೂತ್ರ : ಎಂದಿಗಿರದು ಸುಸೂತ್ರ !
ಬರವ ಬಯಸುವದಿರವ ಸಹಿಸದದು! ಕೆಳೆಯಿರಲಿ,
ಮದುವೆಯಾ ಮುದವಿರಲಿ,- ಇಂತದಿಬ್ಬಗೆಯಿಹುದು!
*****



















