ಮಲ್ಲೇಶಿಯ ನಲ್ಲೆಯರು

ಮಲ್ಲೇಶಿಯ ನಲ್ಲೆಯರು

ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು ದಿನ ತಮ್ಮ ತೋಟವನ್ನು ನೋಡಲಿಕ್ಕೆ ಹೋದಾಗ ಅಲ್ಲಿಯ ಕಾವಲುಗಾರನಾದ ಮಲ್ಲೇಶಿಯು ತನ್ನ ಯಜಮಾನರನ್ನು ತೋಟದಲ್ಲೆಲ್ಲ ಅಡ್ಡಾಡಿಸಿಕೊಂಡು ಬಂದನು. ಮಲ್ಲೇಶಿಯ ದಕ್ಷತೆಗಾಗಿ ಆ ತೋಟದಲ್ಲಿ ಕಾಗೆ ಗುಬ್ಬಿಗಳು ಕೂಡ ಅಡ್ಡ ಹಾಯುತ್ತಿರಲಿಲ್ಲ. ತೋಟದ ಬೇಲಿಗಳು ಅಚ್ಚಳಿಯದೆ ಕೋಟೆಯ ಗೋಡೆಗಳಂತೆ ಭದ್ರವಾಗಿ ಕಂಗೊಳಿಸುತ್ತಿದ್ದವು. ಮಾಡಿಟ್ಟ ಹಾದಿಗಳಲ್ಲದೆ ತೋಟದಲ್ಲಿ ಅತ್ತಿತ್ತ ದನಕರುಗಳ ಅಥವಾ ಮನುಷ್ಯನ ತುಳುಕಲಿನ ಸಂಪರ್ಕವೇ ಇದ್ದಿಲ್ಲ. ಕಾಯಿಪಲ್ಲೆಗಳ ಮಡಿಗಳಾಗಲಿ, ಹಣ್ಣು ಹಂಪಲಿನ ಗಿಡಗಳಾಗಲಿ ಕಬ್ಬು ಬಾಳೆಗಳ ಫಡಗಳಾಗಲಿ ಅಬಾಧಿತವಾಗಿದ್ದು ಸಸಿಬಳ್ಳಿಗಿಡಗಳೆಲ್ಲ ಪ್ರಫುಲ್ಲಿತವಾಗಿ ತೋರಿ ದೇಸಾಯರ ಮನಸ್ಸಿಗೆ ಆನಂದವನ್ನಿತ್ತವು. ಮಲ್ಲೇಶಿಯ ಕಣ್ಣು ತಪ್ಪಿಸಿ ಒಂದು ಕಾಯಿ, ಒಂದು ಹೂವನ್ನು ಕೂಡ ತೆಗೆದುಕೊಂಡು ಮನೆಗೆ ಹೋಗುವೆನೆಂದರೆ ಪ್ರತ್ಯಕ್ಷ ತೋಟಿಗನಿಗೆ ಕೂಡ ಅಸಾಧ್ಯವಾಗಿತ್ತು.

ಯಜಮಾನರು ಅತ್ತಿತ್ತ ತಿರುಗಾಡಿ ನೋಡಿ ಬಂದು, ದಟ್ಟಾಗಿ ಬೆಳೆದಿರುವ ಮಾವಿನ ಮರದ ಅಡಿಯಲ್ಲಿರುವ ಕಟ್ಟೆಯ ಮೇಲೆ ಕುಳಿತು “ಅಹುದು, ಮಗನೆ ಮಲ್ಲೇಶಿ, ತೋಟವನ್ನು ಬಲು ಚನ್ನಾಗಿ ಕಾದಿರುವಿ. ಈ ವರ್ಷದ ಆಕಾರವು ಹೋದ ವರ್ಷದ ಆಕಾರಕ್ಕೆ ಇಮ್ಮಡಿಯಾಗಿ ಕಾಣುತ್ತದೆ.” ಎಂದು ಕಾವಲುಗಾರನನ್ನು ಕೊಂಡಾಡಿದರು.

ಮಲ್ಲೇಶಿಯು ಸಂತೋಷದಿಂದ ಉಬ್ಬಿ ತನ್ನ ಕೈಯಲ್ಲಿರುವ ತುಬಾಕಿಯನ್ನು ಎಡಗೈಯಲ್ಲಿ ಹಿಡಿದು ಯಜಮಾನರಿಗೆ ಪ್ರಣಾಮ ಮಾಡಿ ಅಭಿಮಾನ ವ್ಯಂಜಕವಾದ ನಗೆ ನಕ್ಕನು. ದೇಸಾಯರು ತಮ್ಮ ಶಿರೋಭೂಷಣವನ್ನು ತೆಗೆದು ಕೆಳಗಿರಿಸಿ ಬೆವರೊರೆಸಿಕೊಂಡು, “ಮಲ್ಲೇಶಿ, ಭರಮನು ತೀರಿ ಕೊಂಡಾಗಿನಿಂದ ನಮ್ಮ ಟಾಂಗೆಯನ್ನು ಹೊಡೆಯುವವರಿಲ್ಲದಂತಾಗಿದೆ, ಹುಡುಗಾ,” ಎಂದು ನುಡಿದರು.

“ಅಹುದು ದೇವರೂ, ಭರಮಪ್ಪನಂಥ ಜಾಣನಾದ ಟಾಂಗೆಯವನು ಸಿಕ್ಕುವದು ಎಂಥ ಮಾತೊ ಕಾಣೆನು.” ಎಂದು ಮಲ್ಲೇಶಿಯು ನಿರ್ವ್ಯಾಜವಾದ ತನ್ನ ಅಭಿಪ್ರಾಯವನ್ನು ಹೇಳಿದನು.

“ನೀನು ನಮ್ಮ ಟಾಂಗೆಯನ್ನು ಹೊಡೆಯಬಲ್ಲಿಯಾ ಮಲ್ಲೇಶಿ?”

“ಹೊಡಿ ಅಂದರೆ ಹೊಡೆಯುವೆನು ದೇವರೂ. ಕನಕನೂರಿನ ದೊರೆಗಳ ಮನೆಯಲ್ಲಿದ್ದಾಗ ನಾನು ಟಾಂಗೆಯನ್ನೇ ಹೊಡೆಯುತ್ತಿದ್ದೆನು.”

“ಅಹುದೋ! ಅವರ ಕುದುರೆಗಳು ತಟ್ಟುಗಳಾಗಿದ್ದವು. ನಮ್ಮ ಕುದುರೆಗಳು ಮದ್ದಾನೆಯಂಥವು. ಭರಮನಿಗೆ ಕೂಡ ಚನ್ನಾಗಿ ವಣಿಯುದಿಲ್ಲ.

“ಹಣಿಯದೇನು ದೇವರೂ? ಅದರಮ್ಮ ಹಣಿದಾಳು! ಹತ್ತಿ ನಾಲ್ಕು ತಿರವು ತಿರುವಿದರೆ ಕುದುರೆಯ ನೆಲೆ ನಮಗೂ ನಮ್ಮ ನೆಲೆ ಕುದುರೆಗೂ ಗೊತ್ತಾಗಿಹೋಗುವದು, ಹೆಂಗಸೊಂದೆಯೇ ಅಡಮುಟ್ಟ ಮಿಕ ನೋಡಿರಿ! ಅದರ ನೆಲೆ ಮಾತ್ರ ಯಾರಿಗೂ ಹತಿಲ್ಲ.”

“ಹೆಂಗಸರ ನೆನಪು ಒಳಿತಾಗಿ ತೆಗೆದಿ ಮಲ್ಲೇಶೀ. ನಮ್ಮ ಮನೆಯವರ (ದೊರೆಸಾನಿಯವರ) ಕೈ ಕೆಳಗೆ ಒಬ್ಬ ಇಚ್ಚಕಳಾದ ಹೆಣ್ಣು ಮಗಳು ಬೇಕಾಗಿದ್ದಾಳೆ. ನೀನು ಒಳ್ಳೆಯದೊಂದು ಹೆಣ್ಣು ನೋಡಿಕೊಂಡು ಬರಬಾರದೆ ? ನಿನ್ನ ಮದುವೆಯನ್ನು ಮಾಡಿ ಗಂಡ ಹೆಂಡರನ್ನು ಕೂಡೆಯೇ ಅರಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ನೀನು ಟಾಂಗೆಯನ್ನು ಹೊಡೆದರೆ ನಿನಗೆ ತಿಂಗಳಾ ನಾಲ್ಕು ವರಾಹ ಸಂಬಳ ದೊರಕುವದು.”

“ಮದುವೆಯ ಗೋಳಿಗೆ ನನ್ನನ್ನು ಹಾಕಬೇಡಿರಿ ದೇವರೂ; ಕೈ ಜೋಡಿಸುತ್ತೇನೆ. ಮನುಷ್ಯನಿಗೆ ಈಗಿದ್ದ ಸ್ವಾತಂತ್ರ್ಯವು ಮದುವೆಯಾದ ಮೇಲೆ ಹೇಗೆ ಬಂದೀತು? ಸೀರೆ ತಾ; ಕುಪ್ಪಸ ತಾ; ತೋಳಬಂದೀ
ತಾ; ಟಿಕ್ಕೆ ತಾ; “ತಾ” ಎಂಬ ಸೊಲ್ಲು ತಪ್ಪುವದೇ ಇಲ್ಲ! ಹೆಂಡತಿಯು ಜಾತ್ರೆಗೆ ಹೊರಟರೆ ನಾವು ಹಿಂಬಾಲಿಸಿ ನಡೆಯಲೇಬೇಕು. ಅವಳು ಊರಲ್ಲಿ ಜಗಳವನ್ನು ಕೊಂಡುತಂದರೆ ನಾವು ಅವಳನ್ನು ಮೇಲು ಕಟ್ಟಿ ವ್ಯಾಜ್ಯಕ್ಕೆ ಸಿದ್ದರಾಗಬೇಕು. “ಮದುವೆಯನ್ನು ಬಿಟ್ಟು ಕೊಟ್ಟು ಶಿವಶಿವ ಎಂದಿದ್ದು ಕೊಂಡಿರುವದು ಒಳಿತಲ್ಲವೆ?” ಎಂದು ಮಲ್ಲೇಶಿಯು ಉಪನ್ಯಾಸ ಮಾಡಿದನು.

“ಹುಚ್ಚ ನನ್ನ ಮಗನೆ, ಮನುಷ್ಯನು ಮದುವೆಯನ್ನೊಲ್ಲೆನೆಂದರೆ ಲೋಕವೆಂತು ಸಾಗುವದು? ನಿಮ್ಮಪ್ಪನು ಮದುವೆಯಾಗಿದ್ದನು; ನಿಮ್ಮ ಮುತ್ತಾತನು ಮದುವೆಯಾಗಿದ್ದನು; ಅವರ ಅಪ್ಪನಾದರೂ ಮದುವೆಯಾಗಿದ್ದನು.” ಎಂದು ದೇಸಾಯರು ಯುಕ್ತಿವಾದ ಮಾಡಿ ಬೋಧಿಸಿದರು.

“ಮದುವೆಯನ್ನು ಮಾಡಿಕೊಳ್ಳುವದು ಸುಲಭವಾಗಿರಬಹುದು; ಆದರೆ ಪರಿಣಾಮವು ಹೇಗಾಗುವದೋ ಯಾರು ಬಲ್ಲರು? ನನ್ನ ತಾಯಿತಂದೆಗಳೀರ್ವರೂ ದಿನ ಬೆಳಗಾದರೊಮ್ಮೆ ಜಗಳ ಮಾಡದೆ ಇರಲಿಲ್ಲ.”

“ಮಲ್ಲೇಶಿ, ಸುಮ್ಮನೆ ನನ್ನ ಮಾತು ಕೇಳಿ ನೀನು ಮದುವೆಯಾಗು. ಹಾಗೆ ವಾದಿಸಬೇಡ.”

“ತಂದೆಯವರು ಕುಳಿತು ಮದುವೆಯಾಗೆಂದು ಹಟ ತೊಟ್ಟರೆ ಯತ್ನವಿಲ್ಲ, ಮದುವೆಯಾಗಲೇಬೇಕು. ಆದರೆ ಹೆಣ್ಣು ನೋಡಿಕೊಂಡು ಬರುವ ಕೆಲಸವಾದರೂ ನನ್ನದೇ ಎಂದು ಹೇಳುತ್ತಿರಲ್ಲ! ಎಂದು ಮಲ್ಲೇಶಿಯು ಅಧೈರ್ಯದಿಂದ ನುಡಿದನು.

“ಹಣ ವೆಚ್ಚ ಮಾಡಿ ಮದುವೆ ಮಾಡುವ ಕೆಲಸವು ನನ್ನದು; ತಿರುಗಾಡಿ ಒಂದು ಹೆಣ್ಣು ನೋಡಿಕೊಂಡು ಬರಲಾರೆಯಾ ? ನಿನ್ನಂಥ ಹುಡುಗನಿದ್ದರೆ, ಹೆಣಿಗೇನು ಕಡಿಮೆ?”

“ಕಡಿಮೆಯಿಲ್ಲ ನನ್ನೊಡೆಯರೆ, ಅರ್ಧದೇಶವೇ ಹೆಣ್ಣಾಗಿರುವದು. ಎಲ್ಲಿ ನೋಡಿದಲ್ಲಿಯೂ ಹೆಂಗಸರಾಗಿದ್ದರೂ ಹಿಡಿಯಲಿಕ್ಕೆ ಹೋದರೆ ಒಬ್ಬಳೂ ಕೈಗೆ ಹತ್ತುವದಿಲ್ಲ. ಆದರೂ ಎರಡು ದಿವಸ ನನ್ನನ್ನು ಬಿಡಿರಿ. ಹೇಗಾದರೂ ಮಾಡಿ ಒಂದು ಹೆಣ್ಣನ್ನು ಗೊತ್ತು ಮಾಡಿಕೊಂಡು ಬರುವೆನು.”

“ಹೋಗು; ಎರಡು ದಿವಸ ನಿನಗೆ ಅಪ್ಪಣೆಯಿದೆ, ಉತ್ತಮಳಾದ ಕನ್ನೆಯನ್ನು ಆರಿಸಿಕೊಂಡು ಬಾ.”

ಮರುದಿವಸ ಮಲ್ಲೇಶಿಯು ಪ್ರಾತಃಕಾಲದಲ್ಲೆದ್ದು ಕ್ಷೌರ ಮಾಡಿಸಿಕೊಂಡು ಎರಕೊಂಡನು. ಕೇವೆಯ ಬಣ್ಣದ ಹೊಸ ಚಲ್ಲಣವನ್ನು ತೊಟ್ಟು ಮೈಗೆ ತಿಟಿತಿಟಿಯಾಗಿರುವ ಗಂಜಿಯ ಅಂಗಿಯನ್ನು ತೊಟ್ಟು ಕೊಂಡನು. ಯಜಮಾನರ ಶೇಷವಸ್ತ್ರವಾಗಿದ್ದ ಕಂಪು ಜರದ ಪೇಟೆಯನ್ನು ಓರೆಕಿಟ್ಟಾಗಿ ತಲೆಗೆ ಸುತ್ತಿಕೊಂಡು ಬಲಗಿವಿಯ ಸಂದಿನಲ್ಲಿ ಮಲ್ಲಿಗೆಯ ಹೂಗೊಂಚಲವನ್ನು ಸಿಕ್ಕಿಸಿಕೊಂಡನು. ಹೆಜ್ಜೆಗೊಮ್ಮೆ ರವರವಿಸುವ ಕಾಲಮರೆಗಳನ್ನು ಮೆಟ್ಟಿಕೊಂಡು ಆ ಕನ್ಯಾರ್ಥಿಯಾದ ನವತರುಣನು ನೆಲ ಅದರುವಂತೆ ಹೆಜ್ಜೆಗಳನ್ನು ತುಳಿಯುತ್ತೆ ಪೇಟೆಯ ಹಾದಿಯನ್ನು ಹಿಡಿದು ನಡೆದನು. ಮಾರ್‍ಗದಲ್ಲಿ ಚರಂತಯ್ಯನ ಮಠವನ್ನು ಕಂಡು ಮಲ್ಲೇಶಿಯು ಒಳ್ಳೇ ಬಿಂಕದಿಂದ ಒಳಗೆ ಹೊಕ್ಕು “ಇರಸಂಗಯ್ಯನವರೂ ಸ್ವಾಮೀ!” ಎಂದು ಕೂಗಿದನು. ಅಯ್ಯನವರು ಮಠದಲ್ಲಿ ಇದ್ದಿಲ್ಲ. ಯಾವಳೋ ತರುಣಿಯೋರ್ವಳು ಬಾಗಿಲದ ಫಡಕಿನ ಮರೆಗೆ ನಿಂತು ಅರ್ಧ ಮೊರೆಯನ್ನು ಮೆಲ್ಲನೆ ಹೊರಗೆ ಚಾಚಿ “ಅಯ್ಯನವರು ಹೊರಗೆ ಹೋಗಿದ್ದಾರೆ” ಎಂದು ಮಂಜುಲವಾದ ಧ್ವನಿಯಿಂದ ಹೇಳಿದಳು.

ಮಲ್ಲೇಶಿಯು ಆ ಚೆಲುವೆಯಾದ ತರುಣಿಯನ್ನು ನೋಡಿ ತನ್ನ ಮನಸ್ಸಿನಲ್ಲಿಯೇ “ಹುಡಿಗಿ ಮಾತ್ರ ಬಲು ಗಾಂವು!” ಎಂದು ಉದ್ಗಾರ ತೆಗೆದು, ಇನ್ನವಳನ್ನು ಮಾತಾಡಿಸಬಹುದೋ ಬೇಡವೋ ಎಂಬ ಯೋಚನೆಯಲ್ಲಿ ಕ್ಷಣಹೊತ್ತು ಸುಮ್ಮನೆ ನಿಂತುಕೊಂಡನು.

“ಯಾಕೆ ಬಂದಿರುವಿರಿ? ನೀರು-ನಿಡಿ ಏನಾದರೂ ಬೇಕೇನು? ಎಂದು ಕೇಳಿ ಆ ಸುಂದರಿಯಾದ ಯುವತಿಯು ಮಲ್ಲೇಶಿಯ ವೇಷವನ್ನು ಚನ್ನಾಗಿ ನಿರೀಕ್ಷಿಸಿ ನೋಡಿ ವಿನೋದದಿಂದ ಮಂದಹಾಸಗೈದಳು.

ಮಲ್ಲೇಶಿಯು ಹೊಸ ಹರೆಯದ ಹುಡುಗನಾಗಿದ್ದರೂ ನಾರಿಯರ ಹೃದ್ಗತವನ್ನು ಕಂಡುಹಿಡಿಯುವಷ್ಟು ಚಾತುರ್ಯವು ಅವನಲ್ಲಿದ್ದಿಲ್ಲ. ಸಂಭಾಷಣಾನುಕೂಲವಾದ ಪ್ರಸಕ್ತಿಯನ್ನು ಜಾಣೆಯಾದ ಆ ಯುವತಿಯು ತೆಗೆದಿದ್ದರೂ ಸಮಯಗ್ರಹಣಶಕ್ತಿಯಿಲ್ಲದವನಾದ ಆ ಹೆಡ್ಡನು ತನಗೆ ನೀರು ಬೇಡವೆಂದು ಅಸಭ್ಯವಾದ ರೀತಿಯಿಂದ ಹೇಳಿದನು. ತರುಣನಾದ ಪುರುಷನಲ್ಲಿ ಮೂಢತನದ ವಿಶೇಷಾಂಶವು ಕಂಡುಬಂದಲ್ಲಿ ಕಾಮಿನಿಯರ ವಿನೋದಕ್ಕೆ ಪ್ರಶಸ್ತವಾದ ಆಸ್ಪದವುಂಟಾಗುವದು ಸಹಜವು. ಆಮೇರೆಗೆ ಆ ಯುವತಿಯು ಮನಸ್ಸಿನ ಸಂಕೋಚವನ್ನು ದೂಡಿ ಬಾಗಿಲದ ಮರೆಯಿಂದ ಹೊರಗೆ ಬಂದು-

“ಹಾಗಾದರೆ ಇಲ್ಲಿ ನಿಮ್ಮದೇನು ಕೆಲಸ? ಮದುವೆಯ ಕಾರ್ಯವೇನಾದರೂ ಇರುವದೋ? ಸೊಬಗಿನ ಉಡಿಗೆತೊಡಿಗೆಗಳನ್ನು ಮಾಡಿಕೊಂಡು ಬಂದವರಾದ ನೀವು ಮದಿಮಕ್ಕಳಂತೆ ಕಾಣುವಿರಿ!” ಎಂದು ವಿನೋದಗೈದು ಪ್ರಶ್ನೆ ಮಾಡಿದಳು.

ಆ ಯುವತಿಯ ಪ್ರಶ್ನಕ್ಕೆ ಮಲ್ಲೇಶಿಯು ಬೆರಗಾಗಿ ನಿಂತು “ನನ್ನ ಮನಸಿನಲ್ಲಿಯ ಮಾತು ನಿನಗೆ ತಿಳಿದದ್ದು ಹೇಗೆ? ಮದುವೆಯಾಗುವದು ನನ್ನ ಮನಸಿನಲ್ಲಿದೆ ಸರಿ. ಅದಕ್ಕಾಗಿ, ಇರಸಂಗಯ್ಯನವರ ಗೊತ್ತಿನಲ್ಲಿ ಎಲ್ಲಿಯಾದರೂ ಒಂದು ಹೆಣ್ಣು ಇದೆಯೇ ಎಂದು ಕೇಳಲು ನಾನು ಬಂದಿದ್ದೇನೆ. ನೀನು ಯಾರು, ಹೊಸಬಳಾಗಿ ತೋರುವಿ?” ಎಂದು ಕೇಳಿದನು.

“ಇಲ್ಲಿಯೇ ನೆರೆಹಳ್ಳಿಯಾದ ಮಂಗನೂರಿನವರು ನಾವು. ನನಗೊಂದು ಚಿಂತಾಕವು ಬೇಕಾಗಿರುವದರಿಂದ ನಮ್ಮ ತಂದೆಯು ಇರಸಂಗಯ್ಯನವರನ್ನು ಕರಕೊಂಡು ಪೇಟೆಗೆ ಹೋಗಿದ್ದಾನೆ. ನಿಮಗೆ ಹೆಣ್ಣು ಎಂಥದಿರಬೇಕು? ಕಪ್ಪು ಬಣ್ಣದವಳೂ ಒಂಟಿಗಣಿನವಳೂ ಇದ್ದರೆ ಸಾಗುವದೇನು?”

“ದೊರೆಗಳ ಮನೆಯಲ್ಲಿರುವವನು ನಾನು. ಧನಿಯರು ಅಪರೂಪವಾದ ಹೆಣ್ಣು ನೋಡಿಕೊಂಡು ಬಾರೆಂದು ಹೇಳಿದ್ದಾರೆ. ನಿನ್ನಂಥ ಹುಡುಗೆಯಿದ್ದರೆ ಬಲು ಸೊಗಸಾದೀತು! ನಿನ್ನ ಮದುವೆಯಾಗಿರುವದೇನು? ಯಾವ ಬಗೆ ನಿಮ್ಮದು?”

“ನಾವು ನರವಲ ರಡ್ಡಿಗಳು. ನಮ್ಮಪ್ಪನು ಇನ್ನೂ ನನ್ನ ಮದುವೆಯನ್ನು ಮಾಡಿಲ್ಲ.”

“ಹಾಗಾದರೆ ಕೂಡಿತಲ್ಲ! ನಾನೂ ನರವಲ ರಡ್ಡಿಯು, ನಾನೇ ನಿನಗೊಂದು ಒಳ್ಳೆ ಚಿಂತಾಕನ್ನು ಕೊಡಿಸುವೆನು. ಎರಡು ತೋಳಬಂದಿಗಳನ್ನು ಕೊಡಿಸುವೆನು. ನನ್ನನ್ನು ಮದುವೆಯಾಗುವಿಯೇನು, ಹೇಳಿಬಿಡು” ಎಂದು ಮಲ್ಲೇಶಿಯು ಆಸ್ಥೆಯಿಂದ ಕೇಳಿದನು.

“ಮದುವೆಯಾದ ಬಳಿಕ ನಾನು ಏಳೆಂದು ಹೇಳಿದಾಗ ನೀವು ಏಳ ಬೇಕು, ಕೂಡೆಂದಾಗ ಕೂಡಬೇಕು. ಈ ಮಾತಿಗೆ ನೀವು ಒಪ್ಪುವಿರೊ?” ಎಂದು ಆ ತರುಣಿಯು ವಿನೋದಗೈದು ಕೇಳಿದಳು.

“ಹೆಂಡತಿ ಬೇಕಾದ ಬಳಿಕ ಅವಳು ಹೇಳಿದಂತೆ ನಡಕೊಳ್ಳಲೇ ಬೇಕು.”

“ಹಾಗಾದರೆ ನಾಳೆ ಬೆಳಗಿನಲ್ಲಿ ನೀವು ಇಲ್ಲಿಗೆ ಬಂದು ನಮ್ಮ ತಂದೆ ಯವರನ್ನು ಕೇಳಿರಿ. ನನ್ನ ಕೈಯಲ್ಲಿ ಏನಿದೆ?” ಎಂದು ಆ ವಿನೋದಗಾರತಿಯು ಮಂದಸ್ಮಿತೆಯಾಗಿ ನುಡಿದಳು.

“ಮಾತು ತಿರುಗಿ ಬಿದ್ದಿತಲ್ಲ! ನಿಮ್ಮ ತಂದೆಯು ಒಪ್ಪದಿದ್ದರೆ ಮುಂದೆ ಗತಿಯೇನು?” ಎಂದು ಮಲ್ಲೇಶಿಯು ಅಧೀರನಾಗಿ ನುಡಿದನು.

“ಅದಕ್ಕೆ ನಾನೇನು ಮಾಡಲಿ?”

“ಆಗಲಿ, ನಾನು ಬೆಳಗಿನಲ್ಲಿ ಇಲ್ಲಿಗೆ ಬರುವೆನು” ಎಂದು ಹೇಳಿ ಮಲ್ಲೇಶಿಯು ಹೊರಟೆದ್ದು ನಡೆದನು.

ಅಲ್ಲಿಂದಲವನು ಮತ್ತೊಂದು ಓಣಿಯನ್ನು ಹಿಡಿದು “ಬಾಳುಗೋಪಾಳ ಕವಿತೀ, ನಾಡೊಳಗಾಗೆ ಪ್ರಖ್ಯಾತೀ! ಬಡಿತೊ ನನಗ ಭ್ರಾಂತೀ, ಮನದೊಳಗಿಲ್ಲ ಅಗದಿ ಶಾಂತೀ!” ಎಂದು ಲಾವಣೀಪದವನ್ನು ಹಾಡುತ್ತೆ ನಡೆದಿದ್ದನು. ಅಷ್ಟರಲ್ಲಿ ಸೊಕ್ಕಿನದೊಂದು ದೊಡ್ಡ ಹೋರಿಯು ಒಳ್ಳೆ ಭರದಿಂದ ಲೋಡುತ್ತ ಮಲ್ಲೇಶಿಯೆದುರಿನಲ್ಲಿ ಬರುತ್ತಿತ್ತು. ಅಷ್ಟರಲ್ಲಿ ಮಲ್ಲಪ್ಪ ಮಲ್ಲಪ್ಪ, ಆ ಹೋರಿಯನ್ನು ತಿರುವು ನನ್ನ ಮಗನೆ” ಎಂದು ಒಬ್ಬ ಮುದುಕಿಯು ಅಂಗಲಾಚಿ ಹೇಳಿಕೊಂಡಳು. ಸಮರ್ಥನಾದ ಮಲ್ಲೇಶಿಯು ಆ ಹೋರಿಯನ್ನು ತಡೆದು ನಿಲ್ಲಿಸಿ ಅದರ ಕೊರಳಲ್ಲಿಯ ದೃಷ್ಟಿಕಣ್ಣಿಯನ್ನು ಹಿಡುಕೊಂಡು ನಿಂತನು.

“ಒಳಿತು ಮಾಡಿದಿ ಮಗನೆ, ಹೋರಿಯನ್ನು ಹಿಡಿದು ತಂದು ಗೋದಲೆಯಲ್ಲಿ ಬಿಗಿ.” ಎಂದು ಆ ಮುದಕಿಯು ಹೇಳಿದ ಮೇರೆಗೆ ಮಲ್ಲೇಶಿಯು ಅದನ್ನು ಅವಳ ಮನೆಗೆ ತೆಗೆದುಕೊಂಡು ಹೋಗಿ ಕಟ್ಟಿ ಪಡಸಾಲೆಯ
ಪಾವಟಿಗೆಯ ಮೇಲೆ ಕುಳಿತು ಎಲೆ ಅಡಿಕೆ ತಂಬಾಕಗಳನ್ನು ಹಾಕಿಕೊಳ್ಳಲಾರಂಭಿಸಿದನು.

“ಮಲ್ಲೇಶಿ, ನೀನೀಗ ದೊರೆಗಳ ಮನೆಯಲ್ಲಿ ಟಾಂಗೇ ಹೊಡೆಯಲಿಕ್ಕೆ ನಿಂತಿರುವಿಯಂತೆ, ಅಹುದೇನು?” ಎಂದು ಆ ಮುದುಕೆಯು ಕೇಳಿದಳು.

“ಆಹುದು ಸಂಗವ್ವತ್ತೀ. ಆದರೆ ಆ ಕೆಲಸವನ್ನು ಹಿಡಿಯಬೇಕಾದರೆ ಮೊದಲು ನಾನು ಮದುವೆಯಾಗಲೇಬೇಕೆಂದು ದೊರೆಗಳು ಹೇಳಿದ್ದಾರೆ.”

“ಹಾಗೇಕಂತೆ?” ಎಂದು ಸಂಗವ್ವನು ಕೇಳಿದಳು.

“ದೊರೆಸಾನಿಯವರ ಕೈಕೆಳಗೆ ಒಳ್ಳೆಯದೊಂದು ಹೆಣ್ಣಾಳು ಬೇಕಾಗಿದೆಯಂತೆ. ನನಗೆ ತಿಂಗಳಾ ನಾಲ್ಕು ವರಾಹ ಸಂಬಳ, ಗಂಡಹೆಂಡರು ಕೂಡಿಯೇ ಅರಮನೆಯಲ್ಲಿ ಊಟ ಮಾಡಿ ಅಲ್ಲಿಯೇ ಇರಬೇಕು. ಅತ್ತೀ, ನಿನ್ನ ಗೊತ್ತಿನಲ್ಲಿ ಒಳ್ಳೇ ಹೆಣ್ಣು ಇರುವದೇನು?”

“ಹೆಣ್ಣಿಗೇನು ತುಟ್ಟಿ, ಮಲ್ಲಣಾ? ನನ್ನ ಮನೆಯಲ್ಲಿ ಒಂದು ಹೆಣ್ಣು ಬೆಳೆದು ಕೂತಿದೆ. ನಮ್ಮ ತಂಗಿಯ ಮಗಳು ನೀಲಗಂಗೆಗೆ ಈಗ ಹದಿನೆಂಟು ವರ್ಷ” ಎಂದು ಸಂಗವ್ವನು ಅನುಸಂಧಾನಪೂರ್ವಕವಾಗಿ ನುಡಿದಳು.

“ಹದಿನೆಂಟು ವರ್ಷಗಳಾದರೆ ಏನಾಯಿತು? ಕಂಡಕಂಡವರನ್ನು, ಮದುವೆಯಾಗೆನ್ನುವಿಯೇನು ದೊಡ್ಡಮ್ಮಾ?” ಎಂದು ಉದ್ದಾಮಳಾದ ನೀಲಗಂಗೆಯು ನಡುಮನೆಯಿಂದ ಹೊರಗೆ ಬಂದು ಕೇಳಿದಳು.

“ಸುಮ್ಮನಿರು ನೀಲಿ, ಇಂಥ ಮಾತು ಮಾತಾಡಿಯೇ ನೀನು ಮನೆ-ಮೂಳಳಾಗಿ ಕೂತಿರುವಿ. ನಮ್ಮ ಮಲ್ಲೇಶಿಯಂಥ ಗಂಡನು ಸಿಕ್ಕಬೇಕಾದರೆ ದೇವರಲ್ಲಿ ಪಡೆದು ಬರಬೇಕು!” ಎಂದು ನೀಲಗಂಗೆಯ ದೊಡ್ಡಮ್ಮನು ಸಿಟ್ಟು ಮಾಡಿ ನುಡಿದಳು.

“ಔ, ಗಂಡನೇ! ಹೀಗೆ ತಂಬಾಕ ತಿಂದು ಪಿಚಿಪಿಚಿಯಾಗಿ ಉಗುಳುವ ಗಂಡನನ್ನು ಯಾರು ಮಾಡಿಕೊಂಡಾರು?”

“ತಂಬಾಕು ತಿಂದರೆ ದಿನಾಲು ಮೂರು ಸಾರೆ ಹಲ್ಲು ತಿಕ್ಕಿಕೊಳ್ಳುತ್ತೇನೆ” ಎಂದು ಮಲ್ಲೇಶಿಯು ತಂಬಾಕವನ್ನು ಗುಳಿ ಕಿರಿಮೀಸೆಯನ್ನು ಒರಿಸಿ ಕೊಂಡು ನೀಲಗಂಗೆಯ ಮುಖವನ್ನು ಸ್ಪರ್ಧೆಯಿಂದ ನೋಡುತ್ತ ನುಡಿದನು.

“ನೀಲಾ, ಇವನು ತಂಬಾಕವನ್ನು ಬಿಟ್ಟ ಮೇಲಾದರೂ ಇವನನ್ನು ಮದುವೆಯಾಗುವೆಯಾ?” ಎಂದು ಸಂಗವ್ವನು ಮಧ್ಯಸ್ಥಳಾಗಿ ಕೇಳಿದಳು.

“ಬಿಟ್ಟು ತೋರಿಸಲಿ, ಆ ಮೇಲೆ ಮುಂದಿನ ಮಾತು.” ಎಂದು ನಗದವಳಾದ ನೀಲೆಯು ಮೆಲ್ಲನೆ ನಕ್ಕು ನುಡಿದಳು.

“ಬಿಟ್ಟಾನು; ಯಾವ ದೊಡ್ಡ ಮಾತು?” ಎಂಬ ಆಶ್ವಾಸನವನ್ನು ನೀಲಗಂಗೆಗಿತ್ತು ಸಂಗವ್ವನು ಮಲ್ಲೇಶಿಯನ್ನು ಕುರಿತು “ಮಲ್ಲೇಶಾ, ನಿನ್ನ ಕೆಲಸವಾಯಿತು ಹೋಗು, ಹುಡಿಗಿಯು ನಗುತ್ತಾಳೆ ಕಾಣದೆ? ಈಗ ನಮ್ಮ ಲೆಂಕಪ್ಪನು ಹೊಲಕ್ಕೆ ಹೋಗಿದ್ದಾನೆ. ನಾಳೆ ಮಾತುಕತೆಯಾಡೋಣಂತೆ”, ಎಂದು ಹೇಳಿದಳು.

ಮಲ್ಲೇಶಿಯು ಅಲ್ಲಿಂದೆದ್ದು ಹೊರಗೆ ಬಂದು “ಹುಡಿಗಿಯು ಬಲು ಬಾಯಿಬಡಿಕೆಯಾಗಿ ತೋರುತ್ತಾಳೆ. ಈಕೆಯ ದೆಸೆಯಿಂದ ನಾವು ತಂಬಾಕ ತಿನ್ನುವದನ್ನು ಬಿಡಬೇಕೆ? ಆದರೂ ಇವಳು ಬಲು ಚೆಲುವೆ. ಆಳು ದುಂಡಗಾಗಿದ್ದು ಮೈ ಬಣ್ಣ ಕೆಂಪಾಗಿದೆ. ಅರಮನೆಯಲ್ಲಿ ಇರಲು ಒಪ್ಪುತ್ತಾಳೆ. ಎಲ್ಲಿಗೆ ಬರುತ್ತದೋ ನೋಡೋಣ,” ಎಂದು ತನ್ನೊಳಗೆ ತಾನೇ ಮಾತಾಡುತ್ತ ನಡೆದನು. ಸಂಗವ್ವನ ಮನೆಯಲ್ಲಿರುವಾಗಲೇ ಮಲ್ಲೇಶಿಗೆ ನೀರಡಿಕೆ ಯಾದಂತಾಗಿತ್ತು. ಆದರೆ ಆ ಪ್ರಸಂಗದಲ್ಲಿ ನೀರು ಬೇಡುವ ಅವಕಾಶವೇ ಅವನಿಗಿದಿಲ್ಲ. ಮುಂದೆ ಹನುಮಂತದೇವರ ಗುಡಿಯ ಓಣಿಯಲ್ಲಿರುವ ಹೊಕ್ಕು ತುಂಬುವ ಬಾವಿಯನ್ನು ಕಂಡು ನೀರಡಿಕೆಯನ್ನಾರಿಸಿಕೊಳ್ಳುವದಕ್ಕಾಗಿ ಆ ಬಾವಿಯಲ್ಲಿಳಿದು ನೀರು ಕುಡಿದನು. ನೀರು ಕುಡಿದು ಮೇಲಕ್ಕೆ ಬರುವಷ್ಟರಲ್ಲಿ ಒಬ್ಬ ತರುಣಿಯು “ಮಲ್ಲೇಶಿ, ಈ ಕೊಡವನ್ನು ಹೊರಿಸಿ ಹೋಗಬಾರದೆ?” ಎಂದು ಕೇಳಿಕೊಂಡಳು. ಆ ತರುಣಿಯ ಮಾತನ್ನು ಕೇಳಿ ಮಧ್ಯಮವಯಸ್ಕಳಾಗಿದ್ದ ಚಾರುವಾಕೆಯಾದ ವಿಧವೆಯು ನಕ್ಕು:

“ಯಾಕೆ ಅಂಬೂ, ನಾವಿಷ್ಟು ಜನ ಹೆಣ್ಣುಮಕ್ಕಳಿರಲಿಕ್ಕೆಯೂ ಮಲ್ಲೇಶಿಯ ಕೈಯಿಂದಲೇ ಕೊಡ ಹೊರಿಸಿಕೊಳ್ಳುವ ಉಬ್ಬೇಕೆ? ಕಬ್ಬಿನಂಥ ಹುಡುಗನನ್ನು ಕಂಡು ಅವನ ಮೇಲೆ ನಿನ್ನ ಕಣ್ಣು ಹೋಯಿತಲ್ಲೇ? ಮದುವೆ ಯಾಗುವೆನೆಂದು ಹೇಳಿದರೆ ಮಾತ್ರ ಮಲ್ಲೇಶಿಯು ಕೊಡ ಹೊರಿಸುವನು. ಸುಮ್ಮಸುಮ್ಮನೆ ಕೊಡ ಹೊರಿಸೆಂದರೆ ಯಾರಿಗೆ ಯಾರು ಹೊರಿಸುತ್ತಾರೆ?” ಎಂದು ನುಡಿದಳು.

ಮಲ್ಲೇಶಿಗೆ ಆ ವಿಧವೆಯಾಡಿದ ಮಾತಿನ ಭಾವವು ತಿಳಿಯಲಿಲ್ಲ. ಅಂಬೆಯು ಅವಿವಾಹಿತೆಯಾದ ಕನ್ನೆಯೆಂಬದನ್ನು ಮಾತ್ರ ಅವನು ಊಹಿಸಿ ಕೊಂಡನು. ಆದರೆ ಮೇಲ್ಕಂಡ ಮಾತಿನ ಬಾಣವು ಅಂಬೆಯ ಎದೆಯಲ್ಲಿ ಒಳಿತಾಗಿ ನಟ್ಟಿತು. ನಾಚಿಕೆಗಾಗಿ ಅವಳ ಮುಖವು ಬಹು ಚಮತ್ಕಾರವಾಗಿ ಕಂಡಿತು. ಮಲ್ಲೇಶಿಯು ಕೊಡ ಹೊರಿಸಿದ್ದೂ ಅವಳಿಗೆ ತಿಳಿಯಲಿಲ್ಲ. ತಾನು ಹೊತ್ತು ಕೊಂಡದ್ದೂ ತಿಳಿಯಲಿಲ್ಲ. ಸುಮ್ಮನೆ ಕೊಡವನ್ನು ಹೊತ್ತು ಕೊಂಡು ನಿಂತುಬಿಟ್ಟಳು.

“ಆದದ್ದಾಯಿತು ಮಲ್ಲೇಶಿ, ನನ್ನ ಕೊಡವನ್ನಷ್ಟು ಹೊರಿಸಿಬಿಡು” ಎಂದು ಆ ವಿಧವೆಯು ಕೇಳಿಕೊಂಡಳು. ಅವಳ ಮಾತನ್ನು ಕೇಳಿದಾಕ್ಷಣವೇ ಅಂಬೆಗೆ ಪ್ರಜ್ಞೆ ಬಂದಿತು. ಅವಳ ವಿನೋದವೃತ್ತಿಯಾದರೂ ಜಾಗ್ರತಿಯನ್ನು ಹೊಂದಿತು.

“ಛಾಯವ್ವಕ್ಕಾ, ಸುಮ್ಮಸುಮ್ಮನೆ ಯಾರಿಗೆ ಯಾರು ಕೊಡವನ್ನು ಹೊರಿಸುತ್ತಾರೆ?” ಎಂದು ಆ ಚತುರೆಯಾದ ಕನ್ಯೆಯು ಆ ವಿಧವೆಯ ಮೇಲೆ ವಾಗ್ಬಾಣವನ್ನು ಬಿಟ್ಟು, ವಿಜಯಶಾಲಿನಿಯ ದಂಭದಿಂದ ನಕ್ಕಳು.

“ಗೈಯಾಳೀ! ಹಳೆ ಗೈಯಾಳಿ! ಇಂಥ ಮಾತು ಆಡುವಿಯಾ? ಆರಮುದುಕೆಯೂ ವಿಧವೆಯೂ ಆದ ನಾನು ನಿನಗಾಗಿ ಇನ್ನು ಮೇಲೆ ಮೊದಲಗಿತ್ತಿಯಾಗಬೇಡವೆ? ನಿನ್ನನ್ನು ಮಾತ್ರ ಇದೇ ಮಲ್ಲೇಶಿಯ ಕೊರಳಿಗೆ ಕಟ್ಟದಿದ್ದರೆ ನನ್ನ ಹೆಸರು ಛಾಯವ್ವನಲ್ಲ!”

ಈ ವಿನೋದಮಯವಾದ ವ್ಯಾಜ್ಯದ ಅರ್ಥವು ಮಲ್ಲೇಶಿಗೆ ಚನ್ನಾಗಿ ತಿಳಿಯದಿದ್ದರೂ ಛಾಯವ್ವನು ಅಂಬೆಯನ್ನು ತನಗೆ ನಿಶ್ಚಯವಾಗಿ ಕೂಡಿಸುವಳೆಂದು ಆ ಮೂಢನು ದೃಢವಾಗಿ ನಂಬಿ ಬಹುಪರಿಯಾಗಿ ಉಬ್ಬಿದನು. ಆ ಹೆಂಗಸರಿಬ್ಬರೂ ಕೊಡಗಳನ್ನು ಹೊತ್ತು ಕೊಂಡು ತಮ್ಮ ತಮ್ಮ ಮನೆಗೆ ನಡೆದ ಬಳಿಕ ಮಲ್ಲೇಶಿಯು ನೆಟ್ಟಗೆ ಛಾಯವ್ವನ ಮನೆಗೆ ಬಂದು ಬಿಟ್ಟನು.

“ಯಾಕೆ ಬಂದಿ ಮಲ್ಲೇಶಿ? ಮದುವೆಯ ಅವಸರವು ಬಹಳಾಗಿದೆ ಏನು?” ಎಂದು ವಿನೋದಿನಿಯಾದ ಆ ವಿಧವೆಯು ನಗೆಯಾಡಿ ಕೇಳಿದಳು.

“ಅಹುದು ಛಾಯಾವ್ವಾ. ಬೇಗನೆ ಮದುವೆಯಾಗೆಂದು ದೊರೆಗಳು ಅಪ್ಪಣೆ ಮಾಡಿದ್ದಾರೆ. ದೊರೆಸಾನಿಯವರ ಕೈ ಕೆಳಗೆ ಒಂದು ಹೆಣಾಳು ಬೇಕಾಗಿದೆಯಂತೆ. ಇಲ್ಲವಾದರೆ ನನಗೆಲ್ಲಿ ಮದುವೆಯ ಅವಸರ?”

“ಹೊಲವಿಲ್ಲ, ಮನೆಯಿಲ್ಲ, ನಿನ್ನ ಮದುವೆ ಹೇಗಾಗಬೇಕು ಮಲ್ಲೇಸಿ?”

“ಹೀಗೇನು! ಆ ಹುಡುಗಿಯನ್ನು ನನಗೆ ಗಂಟುಹಾಕುವೆನೆಂದು, ನೀನು ಬಾವಿಯಲ್ಲಿದ್ದಾಗ ಭಾಷೆಯನ್ನು ಕೊಡಲಿಲ್ಲವೆ? ಈಗೇಕೆ ಹೀಗೆ: ಮಾತಾಡುವಿ ಚಿಗವ್ವಾ?” ಎಂದು ಮಲ್ಲೇಶಿಯು ಸಾಶಂಕನಾಗಿ ಕೇಳಿದನು.

“ಆಹುದಲ್ಲೆ? ನಾನು ಮರತೇ ಬಿಟ್ಟೆನು!” ಎಂದು ಛಾಯವ್ವನು ಗಹಗಹಿಸಿ ನಕ್ಕಳು.

“ಇನ್ನು, ಮನೆಯೆಂದರೆ ನಾವು ಗಂಡಹೆಂಡರು ಅರಮನೆಯಲ್ಲಿಯೇ ಇರತಕ್ಕವರು. ಇನ್ನೊಂದು ನಾಲ್ಕು ವರ್ಷಕ್ಕೆ ನಮ್ಮ ಧನಿಯರು ನನಗೊಂದು ಹೊಲವನಾದರೂ ಕೊಡುವೆನೆಂದು ಹೇಳಿದ್ದಾರೆ. ಸದ್ಯಕ್ಕೆ ನನಗೆ ತಿಂಗಳಾ ನಾಲ್ಕು ವರಾಹ ಸಂಬಳ, ಆಮೇಲೆ ಮದುವೆಯ ವೆಚ್ಚವು ನಮ್ಮ ಯಜಮಾನರದು.”

ಅಷ್ಟರಲ್ಲಿ ಅಂಬೆಯು ಬರಿದಾದ ಕೊಡವನ್ನು ಬಗಲಲ್ಲಿಟ್ಟು ಕೊಂಡು ಬಂದು ಇನ್ನೊಂದು ಕೊಡಕ್ಕೆ ಬಾವಿಗೆ ಬರುವಿಯೇನೆಂದು ಛಾಯವನನ್ನು ಕೇಳಿದಳು. ಅಂಬೆಯನ್ನು ಕಂಡು ಛಾಯವನು ಕಣ್ಣು ಚಿವುಟಿ “ಬಾರಲೆ, ಮದಿಮಗಳೆ! ಇಲ್ಲಿ ನೋಡು, ನಿನ್ನ ಗಂಡನು ಮದುವೆಗೆ ಆತುರನಾಗಿ ಬಂದು ಕುಳಿತಿದ್ದಾನೆ. ಸಂಜೆಯೊಳಗಾಗಿ ‘ಸಾಮಧ್ಯಮ’ವಾಗಿಹೋಗಲಿ!”

“ಸುಮ್ಮನೆ ಬರಬಾರದೆ ಛಾಯವ್ವಾ. ಮುದಿಹುಚ್ಚು ತಲಿಗೇರಿತೆಂದು ಹೀಗೆ ಮಾತಾಡುವಿಯೇನು?” ಎಂದು ಅಂಬೆಯು ಅಸಹನೆಯಾಗಿ ನುಡಿದು ತಲೆಬಾಗಿಲದ ಹೊರಗೆ ಬಂದು ನಿಂತಳು. ಛಾಯವ್ವನಾದರೂ ತನ್ನ ಕೊಡವನ್ನು ತೆಗೆದುಕೊಂಡು ಬಾವಿಗೆ ಹೋಗಲು ಸಿದ್ಧಳಾದಳು. ಮಲ್ಲೇಶಿಯು ಅರಮನೆಯ ಹಾದಿಯನ್ನು ಹಿಡಿದನು.

“ಹುಡಿಗಿಯು ಮನಸ್ಸಿನಲ್ಲಿ ಯಾಕೋ ಸಂಕೋಚಗೊಂಡಿದ್ದಾಳೆ; ಆದರೇನಾಯಿತು? ಒಲ್ಲೆನೆಂಬುವ ಮಾತು ಅವಳ ಬಾಯಿಯಿಂದ ಬರಲಿಲ್ಲ. ಸಾಕಾಗದೇನು? ಆಕೆ ಒಲ್ಲೆನೆನ್ನಲಿ, ಬಿಡಲಿ, ಛಾಯವ್ವನಂತೂ ಅವಳನ್ನು ನನಗೆ ಕೊಡಿಸುವದು ಗಟ್ಟಿ ಮಾತು, ಹುಡಿಗಿ ಮಾತ್ರ ಅಪರೂಪದ ಹುಡಿಗಿ!” ಎಂದು ವಿಚಾರಗೈಯುತ್ತ ಮಲ್ಲೇಶಿಯು ಅರಮನೆಗೆ ಬಂದನು.

ಶರಣೆಂದು ಪ್ರಣಾಮಮಾಡಿ ನಿಂತ ಮಲ್ಲೇಶಿಯ ವೇಷವನ್ನು ಕಂಡು ಹೇಮರಡ್ಡಿ ಪ್ರಭುಗಳು ಮುಗುಳುನಗೆ ನಕ್ಕು “ಉಡಿಗೆ ತೊಡಿಗೆಗಳ ಸೊಬಗು ಬಹಳವಾಗಿದೆಯೋ ಮಲ್ಲೇಶಿ!” ಎಂದು ಕೇಳಿದರು.

“ಹೆಣ್ಣು ನೋಡಲಿಕ್ಕೆ ಹೋಗಿದ್ದೆನಲ್ಲವೆ ಧನಿಯರೆ?” ಎಂದು ಮಲ್ಲೇಶಿಯು ಬೆಸಗೊಂಡನು.

“ಎಲ್ಲಿಯಾದರೂ ಗೊತ್ತು ಮಾಡಿಕೊಂಡು ಬಂದಿಯಾ?”

“ಮೂರು ತಾವಿನಲ್ಲಿ ಮೂರು ಹೆಣ್ಣು ನೋಡಿಕೊಂಡು ಬಂದಿದ್ದೇನೆ ದೇವರೂ, ಹೆಣ್ಣಿನ ತಾಯಿತಂದೆಗಳನ್ನಷ್ಟೇ ಕೇಳಿದರೆ ಹೆಣ್ಣಿನ ಸರ ಪೋಣಿಸಬಹುದು. ಆದರೆ ಆ ಹೆಣ್ಣುಗಳನ್ನು ತಡೆಯುವದೂ ಚಿಣಗೀ ಹಾವುಗಳನ್ನು ತಡೆಯುವದೂ ಒಂದೇ, ಕೈಗೆ ಸಿಕ್ಕದೆ ಟಣಟಣನೆ ಜಿಗಿದಾಡುತ್ತವೆ.”

“ಜಿಗಿದಾಡಲಿ, ಎಲ್ಲಿಯವರೆಗೆ ಜಿಗಿದಾಡ ಬಲ್ಲರವರು? ಬಲ್ಲಿದನಾದ ಗಂಡನಿದ್ದರೆ ಹೆಂಡತಿಯು ಮೆತ್ತಗೆ ಹಣ್ಣಾಗಿರುವಳು.”

“ಹೇಳಬೇಡಿರಿ ಧನಿಯರೆ, ತಂದೆಗಳಾದ ತಾವು ಊರಿಗೆ ಊರನ್ನೇ ಆಳುವಿರಿ; ಆದರೆ ಅರಮನೆಯಲ್ಲಿ ನೀವೇ ಹೇಗೆ ಹುದುಗಿಕೊಂಡಿರುವಿರಿ ನೋಡಿರಿ.”

ಹೇಮರಡ್ಡಿ ಪ್ರಭುಗಳಿಗೆ ಮಲ್ಲೇಶಿಯ ಮಾತು ಕೇಳಿ ನಗೆ ಬಂದಿತು. ಆದರೂ ಅವರು ಕೋಪದ ಆವಿರ್ಭಾವವನ್ನು ಮಾಡಿ “ಹುಚ್ಚು ಸೂಳೆಯ ಮಗನೆ!” ಎಂದು ಉದ್ಗಾರ ತೆಗೆದರು.

“ನಾನೇನು ಸುಳ್ಳು ಹೇಳಿರುವೆನೆ? ನನ್ನ ಮೇಲೇಕೆ ಕೋಪ ದೇವರೂ?” ಎಂದು ಮಲ್ಲೇಶಿಯು ಬೊಗಸೆಯೊಡ್ಡಿ ಕೊಂಡು ನಿಂತು ಕೇಳಿದನು.

ದೊರೆಗಳು ನಕ್ಕು “ನಿನ್ನಂತೆಯೇ ಆಗಲಿ, ಮಲ್ಲೇಶೀ. ನಿನಗೆ ಹೆಂಡತಿಯಿಂದ ಪೀಡೆಯಾಗುವದೆಂದು ಕಂಡರೆ ನೀನು ಮದುವೆಯ ಗೋಜಿಗೆ ಹೋಗಲೇಬೇಡ.” ಎಂದು ಹೇಳಿದರು.

“ಬೇಡವೆಂದರೆ ಅರಮನೆಯಲ್ಲಿ ಅವ್ವನವರ ಕೈಕೆಳಗೊಂದು ಹೆಣ್ಣಾಳು ಬೇಕಾಗಿಲ್ಲವೆ?” ಎಂದು ಮಲ್ಲೇಶಿಯು ಚಕಿತನಾಗಿ ಕೇಳಿದನು.

ನಮ್ಮಲ್ಲಿ ಅಡಿಗೆ ಮಾಡುವ ಭೀಮವ್ವನ ಮಗಳು ಇಂದೆಯೇ ಬಂದಿರುವಳು. ಅವಳನ್ನೇ ಅರಮನೆಯಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.”

“ಹಾಗಾದರೆ ನಮ್ಮ ಯತ್ನವೆಲ್ಲ ಹೊಳೆಯಲ್ಲಿ ಹುಳಿ ತೊಳೆದಂತಾಯಿತಲ್ಲ.” ಎಂದು ಮಲ್ಲೇಶಿಯು ಭಗ್ನೋತ್ಸಾಹನಾಗಿ ನುಡಿದನು.

“ಹಾಗೆ ಆಸೆಗುಂದಬೇಡ ಮಲ್ಲೇಶೀ, ನಿನ್ನ ಮನಸ್ಸಿನಲ್ಲಿ ಲಗ್ನವಾಗುವದಿದ್ದರೆ ಆಗು, ಲಗ್ನದ ವೆಚ್ಚವೆಲ್ಲ ನಮ್ಮ ಮೈಮೇಲೆ ” ಎಂದು ದೇಸಾಯರು ಕೃಪಾವಂತರಾಗಿ ಹೇಳಿದರು.

“ಲಗ್ನವು ನನಗೆಲ್ಲಿ ಅಡಗಾಣಿಸಿದೆ ದೇವರೂ? ನನ್ನ ಲಗ್ನದಿಂದ ದೊರೆಸಾನಿಯವರಿಗೆ ಹಿತವಾಗುವಂತಿದ್ದರೆ ನಾನು ಮಾಡಿಕೊಳ್ಳ ತಕ್ಕವನು.”

“ಸದ್ಯಕ್ಕೆ ನಿನ್ನ ಹೆಂಡತಿಯ ಕೆಲಸವು ಅರಮನೆಯಲ್ಲಿಲ್ಲ. ನಿನಗೆ ಇಷ್ಟವಿದ್ದಾಗ ನೀನು ಲಗ್ನವಾಗು.”

“ಅದೆಲ್ಲ ಆದೀತು ನನ್ನ ತಂದೆಯವರೆ. ಆದರೆ ಈಗ ನನಗೊಂದು ಮಾತಿನ ಬಗ್ಗೆ ಬಿರಿಬಂದಂತಾಗಿದೆ.”

“ಅದೇನು ಮಲ್ಲೇಶಿ”

“ಲಗ್ನ ಮಾಡಿಕೊಳ್ಳುವೆನೆಂದು ನಾನು ಮೂರುಮಂದಿ ಹುಡಿಗೆಯರಿಗೆ ವಚನಕೊಟ್ಟು ಬಂದಿದ್ದೇನೆ. ಅವರೆಲ್ಲರಿಗೆ ಇನ್ನೇನು ಹೇಳಲಿ?” ಎಂದು ಮಲ್ಲೇಶಿಯು ಚಿಂತಾಕುಲನಾಗಿ ಕೇಳಿದನು.

“ಆ ಮೂವರು ಹೆಣ್ಣು ಮಕ್ಕಳಲ್ಲಿ ನೀನೆಷ್ಟು ಜನರನ್ನು ಮದುವೆಯಾಗ ತಕ್ಕವನು? ಒಬ್ಬಳನ್ನೊ ಇಬ್ಬರನ್ನೊ?”.

“ಒಬ್ಬಳನ್ನೇ” ಮಲ್ಲೇಶಿಯು ಏನೂ ಸಂಶಯವಿಲ್ಲದೆ ಉತ್ತರವನ್ನಿತ್ತನು.

“ಒಬ್ಬಳನ್ನೇ ಮದುವೆಯಾಗುವಿ. ಒಬ್ಬಳನ್ನೇ ಮದುವೆಯಾಗುವ ಪಕ್ಷದಲ್ಲಿ ಉಳಿದ ಸೌಭಾಗ್ಯಕಾಂಕ್ಷಿಣಿಯರಾದ ಇಬ್ಬರಿಗೆ ಏನು ಹೇಳುವಿ?”

ಈ ಪ್ರಶ್ನವನ್ನು ಕೇಳುತ್ತಲೆ ಮಲ್ಲೇಶಿಗೆ ದಿಗಿಲು ಬಡಿದಂತಾಯಿತು. ಮೂಢನಾದ ಈ ತರುಣನು ಯಜಮಾನರ ಮುಖವನ್ನು ಹುಳುಹುಳನೆ ನೋಡುತ್ತ ನಿಂತನು. ಹೇಮರಡ್ಡಿ ಪ್ರಭುಗಳು ತಮ್ಮ ಹಸ್ತದಿಂದ ಪ್ರಶ್ನೆ ಸೂಚಕವಾದ ಹಾವಭಾವವನ್ನು ಮಾಡಿ “ಯಾಕೆ ಮಲ್ಲೇಶಿ, ನಾನು ಕೇಳಿದ ಪ್ರಶ್ನೆಕ್ಕೆ ಏನೆನ್ನುವಿ?” ಎಂದು ಕೇಳಿದರು.

“ಏನೆಂದು ಹೇಳಲಿ ಪ್ರಭುಗಳೆ? ಹುಚ್ಚು ಹಿಡಿಯುವ ಮಾತಿದು. ಆದರೂ ಒಬ್ಬಳನ್ನು ಲಗ್ನವಾಗಿದ್ದೇನೆ, ಉಪಾಯವಿಲ್ಲೆಂದು ಉಳಿದ ಇಬ್ಬರಿಗೆ ಹೇಳಬಹುದಷ್ಟೆ?”

“ಅಷ್ಟರಿಂದಲೇ ಅವರಿಗೆ ಸಮಾಧಾನವಾಗಬಹುದೇನು ಮಲ್ಲೇಶಿ?”

ಮಲ್ಲೇಶಿಯು ತುಸು ಆಲೋಚಿಸಿ ಇಲ್ಲವೆಂದು ಹೇಳಿದನು.

“ಹಾಗಾದರೆ ಇಬ್ಬರಿಗೆ ಅಸಮಾಧಾನವಾಗುವಲ್ಲಿ ಮೂವರಿಗೂ ಅಸಮಾಧಾನವಾದರೆ ವಿಶೇಷವೇನೂ ಹೆಚ್ಚು ಕಡಿಮೆಯಾಗಲಿಕ್ಕಿಲ್ಲ. ಅದಿರಲಿ. ಆ ಮೂವರು ಕನ್ಯೆಯರಲ್ಲಿ ಯಾರಾರು ತಮ್ಮ ತಮ್ಮ ಒಪ್ಪಿಗೆಯನ್ನು ಹೇಗೆ ಹೇಗೆ ಕೊಟ್ಟಿರುವರು ಹೇಳು ನೋಡೋಣ.”

ಮಲ್ಲೇಶಿಯ ತನ್ನ ಕನ್ಯಾನ್ವೇಷಣದ ವೃತ್ತಾಂತವನ್ನು ಯಥಾ ಪ್ರಕಾರವಾಗಿ ಹೇಳಿದನು. ಆ ಸಂಗತಿಯನ್ನು ಕೇಳ ಕೇಳುವಷ್ಟರಲ್ಲಿ ಹೇಮರಡಿ ಪ್ರಭುಗಳು ವಿಪರೀತವಾಗಿ ನಕ್ಕು ನಕ್ಕು ತನ್ನ ಪಕ್ಕಡಿಗಳನ್ನು ನೋಯಿಸಿ ಕೊಂಡರು. ನಗೆ ನಿಂತು ಮಾತಾಡುವಷ್ಟು ಅವಸಾನವು ದೊರಕಿದ ಬಳಿಕ ದೊರೆಗಳಂದದ್ದು:

“ಹುಡುಗನೆ, ನಿನಗೆ ಹೆಂಗಸರ ಸ್ವಭಾವಗುಣಗಳು ಎಷ್ಟು ಮಾತ್ರವೂ ತಿಳಿದಿಲ್ಲ. ಆ ಮೂವರು ಸ್ತ್ರೀಯರಲ್ಲಿ ಒಬ್ಬಳಾದರೂ ನಿನ್ನನ್ನು ಮದುವೆ ಯಾಗಲಪೇಕ್ಷಿಸಲಿಲ್ಲ. ಆ ಗಾಡಿಕಾರತಿಯರ ವಿನೋದದ ಮಾತಿಗೆ ನೀನು ಮೋಸಹೋಗಿರುವಿ, ಬೇಕಾದರೆ ನಾಳೆ ನೀನು ಆ ಕನ್ಯೆಯರನ್ನು ಕಂಡು ‘ನಾನು ನಿಮ್ಮನ್ನು ಮದುವೆಯಾಗುವ ದಿಲ್ಲ’ ವೆಂದು ಹೇಳಿದರೆ ಅವರಿಗೆ ಹೆಚ್ಚಾದ ವಿನೋದವೇ ಆಗುವದಲ್ಲದೆ ತಿಲಮಾತ್ರವಾದರೂ ವಿಷಾದವೆನಿಸದು. ಬೇಕಾದರೆ ಪರೀಕ್ಷಿಸಿ ನೋಡು.”

ತಲೆಯ ಮೇಲಿನ ದೊಡ್ಡದೊಂದು ಭಾರವೇ ಇಳಿದಂತಾಗಿ ಮಲ್ಲೇಶಿಯು ಸಮಾಧಾನದ ಉಸುರ್ಗರೆದು-

“ಪೀಡೆ ಕಡಿಯಿತು ದೇವರೂ, ಇಂದಿನ ರಾತ್ರಿ ಕಣ್ಣು ತುಂಬಾ ನಿದ್ದೆ ಮಾಡುವೆನು” ಎಂದು ಹೇಳಿದನು.
* * *

ತನಗೂ ಕನ್ನೆಯರಿಗೂ ಗೋತ್ರ ಕೂಡುವದೇ ಇಲ್ಲವೆಂದು ಮಲ್ಲೇಶಿಯು ನಿಶ್ಚಿತವಾಗಿ ತಿಳಿದು, ಲಗ್ನದ ಹಂಬಲವನ್ನು ಸರ್ವಥಾ ಬಿಟ್ಟು ನಿಶ್ಚಿಂತನಾಗಿದ್ದನು. ಶ್ರೀಮಂತರೂ ಕೃಪಾಳುಗಳೂ ಆಗಿದ್ದ ಯಜಮಾನರ ಮನೆಯಲ್ಲಿ ಮೂರು ಹೊತ್ತು ಸಮೀಚೀನವಾದ ಊಟವಾಗುತ್ತಿತ್ತು. ಮೇಲೆ ದುಡಿಕೆಯಾದರೂ ಅಷ್ಟಕ್ಕಷ್ಟೆಯೇ. ಆದ್ದರಿಂದ ದಾಂಪತ್ಯ ಸ್ಥಿತಿಗಿಂತಲೂ ಇದೇ ಒಳಿತೆಂದು ಅವನು ನಂಬಿದ್ದನು. ದಿನಾ ಧನಿಯರು ಸಾಯಂಕಾಲದಲ್ಲಿ ತಿರುಗಾಡಲಿಕ್ಕೆ ಹೊರಟರೆ ಎರಡು ಮೂರು ಗಳಿಗೆ ಟಾಂಗೆಯನ್ನು ಹೊಡಕೊಂಡು ಬಂದನೆಂದರೆ ಮಲ್ಲೇಶಿಯ ಕೆಲಸ ಮುಗಿಯಿತು. ವಾರಕ್ಕೊಂದೆರಡಾವರ್ತಿ ಹೇಮರಡ್ಡಿ ಪ್ರಭುಗಳು ಸಮೀಪದಲ್ಲಿಯೇ ಇರುವ ಜಿಲ್ಲೆಯ ಸ್ಥಾನವಾದ ಪಟ್ಟಣಕ್ಕೆ ಹೋಗಿ ಬಂದರೆ ಹೆಚ್ಚಿನ ಕೆಲಸವಾಯಿತು. ದೇಸಾಯರ ಊರಿನಲ್ಲಿರುವ ಹೊಲೆಯರು ಸರತಿಯ ಮೇಲೆ ಟಾಂಗೇದ ಕುದುರೆಗಳ ಮೈತಿಕ್ಕಿ ಹೋಗುವರು. ಮನೆಯ ಆಳುಮಗಳು ಕುದುರೆಗಳಿಗೆ ಬೇಕಾದಷ್ಟು ಕಡಲೆಗಳನ್ನು ಒನೆದುಕೊಟ್ಟು ಹೋಗುವಳು. ಕುದುರೆಗಳಿಗೆ ಆ ಧಾನ್ಯವನ್ನು ತಿನ್ನಿಸುವದು, ಹುಲ್ಲು ಹಾಕುವದು, ನೀರು ಕುಡಿಸುವದು ಮುಂತಾದ ಕೆಲಸಗಳನ್ನು ಮಾತ್ರ ಮಲ್ಲೇಶಿಯು ತಾನೇ ಮಾಡುತ್ತಿದ್ದನು.

ವಂಚನಾರಹಿತನೂ, ಸಮರ್ಥನೂ, ತರುಣನೂ ಆದ ಮಲ್ಲೇಶಿಗೆ ತನಗಿದ್ದಷ್ಟೆಯೇ ಅಲ್ಪ ಕೆಲಸದಿಂದ ಸಮಾಧಾನವಿದ್ದಿಲ್ಲ. ಅನಲಸನಾದ ಆ ಬಂಟನಿಗೆ ಕೆಲಸವಿಲ್ಲದೆ ಸುಮ್ಮನೆ ಬಿಟ್ಟು ಕೊಂಡಿರುವದು ಸೇರುತ್ತಿದ್ದಿಲ್ಲ. ಗ್ರಾಮದ ಸಮಾಚಾರಗಳನ್ನರಿತುಕೊಳ್ಳುವದಕ್ಕಾಗಿ ದೇಸಾಯರು ಹೊರ ಹೊರಟಾಗ ಅವರ ಮುಂದೆ ಮುಂದೆ ಹೋಗತಕ್ಕವರಾವ ಓಲೆಕಾರರಿದ್ದಾಗ್ಗೆಯೂ ಮಲ್ಲೆಶಿಯು ತಾನೊಬ್ಬ ಅನುಚರನಾಗಿ ಅವರೊಡನೆ ನಡೆದನೇ, ದೊರೆಸಾನಿಯವರು ಮಲ್ಲೇಶಿಯನ್ನು ಕರೆದು ಒಂದು ಕೆಲಸವನ್ನು ಹೇಳಿದರೆ ಅದು ಅವನಿಗೊಂದು ಪ್ರಸಾದವೇ. ಅಡಿಗೆಯ ಭೀಮನೊಂದು ಕೆಲಸವನ್ನು ಹೇಳಿದರೂ ಅವನಿಗೆ ಎಗ್ಗು ಇದ್ದಿಲ್ಲ. ದೊರೆಸಾನಿಯವರ ಅನುಚರಳಾಗಿ ಬಂದಿದ್ದ ಗಿರಿಬಾಯಿಯು, ಭೀಮವ್ವನ ಮಗಳು, ತನ್ನ ದೊಂದು ಕೆಲಸವನ್ನು ಹೇಳಿದರೂ ಅದನ್ನು ಮಲ್ಲೇಶಿಯು ಸಂತೋಷದಿಂದಲೇ ಮಾಡುವನು. ಚಿಕ್ಕ ಬಾಲಕರಿಗೆ ಕ್ರಮಕ್ರಮವಾಗಿ ಜಗತ್ತಿನ ಪರಿಚಯವಾಗುವಂತೆ ಮಲ್ಲೇಶಿಗೆ ಲೋಕವ್ಯವಹಾರದ ರೀತಿಗಳು ಮೆಲ್ಲ ಮೆಲ್ಲನೆ ತಿಳಿಯಲಾರಂಭಿಸಿದ್ದರೂ ತಾನು ಉತ್ಕ್ರಾಂತಿಯ ಮಾರ್ಗದಲ್ಲಿರುವೆನೆಂಬದು ಅವನಿಗೆ ಚನ್ನಾಗಿ ತಿಳಿದಿದ್ದಿಲ್ಲ. ಒಂದು ದುಡ್ಡಿಗೆ ಮೂರು ಪೂರ್ಣಾಂಕ ಮೂರು ನಾಲ್ಕನೆಯಂಶ ಬಾಳೇ ಹಣ್ಣಾದರೆ ಏಳು ಪೂರ್ಣಾಂಕ ಐದು ದಶಮಾಂಶ ದುಡ್ಡಿಗೆಷ್ಟು ಹಣ್ಣುಗಳೆಂದು ಶಾಲೆಯ ಮಾಸ್ತರರು ಕೇಳಿದರೆ ಮಲ್ಲೇಶಿಯಿಂದ ಹೇಳಲಿಕ್ಕಾಗದಿದ್ದರೂ, ದುಡ್ಡಿಗೆ ಹತ್ತು ಬಿಳಿಯೆಲೆ, ನೂರು ಬಿಳಿಯಲೆಗಳನ್ನು ತಾರೆಂದು ದೊರೆಸಾನಿಯವರು ಹೇಳಿದಾಗ ಅವನು ಆ ವ್ಯಾಪಾರ ವನ್ನು ಸಮಾಧಾನಕರವಾಗಿ ಮಾಡಿಕೊಂಡು ಬರುವನು. ರೂಪಾಯದಲ್ಲಿ ಏಳಾಣೆ ಹೋದರೆ ಉಳೆಯಿತೆಷ್ಟೆಂಬುದನ್ನು ಅವನು ಕೆಲವೊಂದು ಟೂಕಿಯಿಂದ ತಪ್ಪದೆ ಹೇಳುವನು. ಹೇಳುವದೇನೆಂದರೆ, ದಿನದಿನಕ್ಕೆ ಮಲೇಶಿಯ ದಡ್ಡತನವು ಕಡಿಮೆಯಾಗಿ ಅವನು ಇಚ್ಛಕನಾಗಿ ನಡಕೊಳ್ಳುವದರಿಂದ ಅವನ ಮೇಲೆ ಎಲ್ಲರ ಪ್ರೇಮವೂ ನೆಲಿಸಿತು.

ದೊರೆಸಾನಿಯವರು ಹೇಳಿದ ಪೇಟೆಯ ವ್ಯಾಪಾರಗಳ ಲೆಕ್ಕವನ್ನು ಒಪ್ಪಿಸಿಕೊಳ್ಳುವವಳು ಗಿರಿಬಾಯಿಯು. ಅದಕ್ಕಾಗಿ ತೊಂದರೆಯಾಗಬಾರದೆಂದು ಗಿರಿಬಾಯಿಯು ಮಲ್ಲೇಶಿಯನ್ನು ಕುಳ್ಳಿರಿಸಿಕೊಂಡು ಪೇಟೆಯಿಂದ ತರತಕ್ಕ ಪದಾರ್ಥಗಳೆಷ್ಟು, ಅವುಗಳ ಬೆಲೆಯೇನು ಮುಂತಾದ ಸಂಗತಿಗಳನ್ನು ಅವನಿಗೆ ಚನ್ನಾಗಿ ತಿಳಿಸಿ ಹೇಳಿ, ಕೊಟ್ಟ ರೂಪಾಯದಲ್ಲಿ ಮರಳಿ ಬರತಕ್ಕ ರೊಕ್ಕವೆಷ್ಟೆಂಬದನ್ನಾದರೂ ಹೇಳಿಕೊಡುತ್ತಿದ್ದಳು. ಮಲ್ಲೇಶಿಯ ವಿನಯ, ಶಿಕ್ಷಣ ಕೊಳಗಾಗುವ ಆವನ ಮನೋವೃತ್ತಿ, ಅವನ ದಕ್ಷತೆ, ಅವನ ಶಾಂತ ವೃತ್ತಿಗಳನ್ನು ಕಂಡು ಗಿರಿಬಾಯಿಯು ಅವನ ಹೆಡ್ಡತನದ ದೋಷವನ್ನು ಎಣಿಸದಾದಳು. ಹೀಗೆ ಮೂರುನಾಲ್ಕು ತಿಂಗಳುಗಳು ಸಂದು ಹೋದ ಹಾಗೆ ಮಲ್ಲೇಶಿಯ ವ್ಯವಹಾರ ಚಾತುರ್ಯವು ವೃದ್ಧಿಯನ್ನು ಹೊಂದುತ್ತೆ ನಡೆಯಿತು.

ಒಂದು ದಿನ ದೊರೆಸಾನಿಯವರು ಮಲ್ಲೇಶಿಗೆ ಅಡಿಕೆ-ಎಲೆ, ಉತ್ತತ್ತಿ ತೆಂಗಿನಕಾಯಿ, ಬಾಳೆಹಣ್ಣು, ಜೇನುತುಪ್ಪ, ಕಪ್ಪುರಗಳನ್ನು ತಾರೆಂದು ಆಜ್ಞಾ ಪಿಸಿದರು. ಆಗ ಗಿರಿಬಾಯಿಯು ಮಲ್ಲೇಶಿಯನ್ನು ಕಂಡು ತುಸು ನಕ್ಕು “ಮಲ್ಲೇಶಿ, ಪದಾರ್ಥಗಳು ಬಹಳಾದವು. ನಿನಗೆ ನೆನಪು ಉಳಿಯುವದು ಎಂಥ ಮಾತೋ. ನೀನು ಓದು ಕಲಿತಿದ್ದರೆ ಹೇಗೆ ಒಳಿತಾಗುತ್ತಿತ್ತು ನೋಡು.” ಎಂದು ಮಾತಾಡಿದಳು.

“ಇದಕ್ಕೇಕಿಷ್ಟು ಚಿಂತೆ ಗಿರಿಬಾಯಿ? ನನಗೆ ಓದು ಬರದಿದ್ದರೂ ನಿಮ್ಮ ಪದಾರ್ಥಗಳ ಹೆಸರುಗಳನ್ನೆಲ್ಲ ಕಾಗದದ ಮೇಲೆ ಬರೆದುಕೊಡುವೆನು, ಪರೀಕ್ಷೆ ಮಾಡಿ ನೋಡು” ಎಂದು ಮಲ್ಲೇಶಿಯು ವಿನೋದದಿಂದ ನುಡಿದನು.

ಮಲ್ಲೇಶಿಯ ದಂಭವನ್ನು ಮುರಿಯಬೇಕೆಂದು ಗಿರಿಬಾಯಿಯ ಸಂಗ ಡಲೆ ಮಸಿ ಲೆಕ್ಕಣಿಕೆಗಳನ್ನು ತಂದು ಮುಂದಿರಿಸಿದಳು. ಮಲ್ಲೇಶಿಯು ನುರಿತವನಾದ ಲೇಖಕನ ಜಂಬದಿಂದ ಕುಳಿತು ಆ ಕಾಗದದ ಮೇಲೆ ಒಂದು ಅಡಿಕೆಯ ಆಕಾರದ ಗುಂಡನ್ನೂ, ಎಲೆಯ ಮಾಟದ ಚಿತ್ರವನ್ನೂ, ಉತ್ತತಿಯ ಆಕಾರವನ್ನೂ, ತೆಂಗಿನ ಆಕಾರದ ಮತ್ತೊಂದು ದೊಡ್ಡ ಗುಂಡನ್ನೂ, ಕಪ್ಪುರದ ಒಡೆಯಂಥ ಚೌಕೋನವನ್ನೂ ಬರೆದನು. ಅವನ ಲೇಖನ ಕೌಲ್ಯವನ್ನು ಕಂಡು ದೊರೆಸಾನಿಯವರು ಪರಿಹಾಸಮಾಡಿ ಬಿದ್ದು ಬಿದ್ದು ನಕ್ಕರು. ಗಿರಿಬಾಯಿಯಾದರೂ ಕೊಂಚ ನಕ್ಕು ಆದರೂ, ಅವ್ವನವರೆ, ಈ ಚಮತ್ಕಾರವಾದ ಪಟ್ಟಿಯನ್ನು ಮಲ್ಲೇಶಿಯು ಪೇಟೆಗೆ ತೆಗೆದು ಕೊಂಡು ಹೋದನೆಂದರೆ ಅವನು ಒಂದು ಪದಾರ್ಥವನ್ನಾದರೂ ಮರೆತು ಬರಲಿಕ್ಕಿಲ್ಲ. ಅಕ್ಷರ ಲೇಖನದ ಕೆಲಸವೇ ಈತನ ಈ ಚಮತ್ಕಾರವಾದ ಲೇಖನದಿಂದ ಆದಂತಾಗಲಿಲ್ಲವೆ? ಮಲ್ಲೇಶಿಯು ಬರಬರುತ್ತೆ ಚತುರನಾಗುತ್ತೆ ನಡೆದಿದ್ದಾನೆ” ಎಂದು ಹೇಳಿ ಮಲ್ಲೇಶಿಯನ್ನು ಕುರಿತು, “ಮಲ್ಲೇಶೀ, ನಿನ್ನ ಪಟ್ಟಿಯಲ್ಲಿ ಜೇನುತುಪ್ಪವನ್ನು ಬರೆಯಲಿಲ್ಲವಲ್ಲ?” ಎಂದು ಕೇಳಿದಳು.

“ಜೇನುತುಪ್ಪಕ್ಕೆ ಈ ಬೆಳ್ಳಿಯ ಬಟ್ಟಲವೇ ಸಾಕ್ಷಿ. ಅದನ್ನು ಬರೆಯಲೇಬೇಕೆ?” ಎಂದು ಆಢ್ಯತೆಯಿಂದ ಮಲ್ಲೇಶಿಯು ಕೇಳಿದನು.

ಈ ಉತ್ತರದಿಂದ ಗಿರಿಬಾಯಿಗೆ ಸಂತೋಷವಾಯಿತು. ಮಲ್ಲೇಶಿಯ ಚಲುವಾದ ಮುಖಕ್ಕೆ ಕಲಂಕದಂತಿರುವ ಅವನ ಮಢತನದ ಲಕ್ಷಣವು ಈಗಲೇ ತೊಳೆದುಹೋಯಿತೋ ಎಂಬಂತೆ ಆ ಯುವತಿಯ ಕಣ್ಣಿಗೆ ಅವನ ಮುಖವು ಚಂದ್ರಮನ ಶುದ್ಧ ಮಂಡಲದಂತೆ ನಿರ್ಮಲವಾಗಿ ಕಂಡಿತು. ಅಂದಿನಿಂದ ಅವಳು ಜನರ ಕಣ್ಣು ತಪ್ಪಿಸಿ ಮಲ್ಲೇಶಿಗೆ ಅಕ್ಷರಗಳ ಪರಿಚಯವನ್ನು ಮಾಡಿಕೊಡಲಾರಂಭಿಸಿದಳು. ಮಲ್ಲೇಶಿಯು ಏಕಪಾಠಿಯಾಗಿರದಿದ್ದರೂ ವಿಶೇಷ ಪ್ರಯಾಸವಿಲ್ಲದೆ ತಿಂಗಳೆರಡು ತಿಂಗಳುಗಳಲ್ಲಿ ಸುಲಭವಾದ ಶಬ್ದಗಳನ್ನು ಬರೆಯಬಲ್ಲಷ್ಟು ಅಕ್ಷರಸ್ಥನಾದನು. ಗಿರಿಬಾಯಿಯು ತನ್ನ ಚಿಕ್ಕಮ್ಮನ ಮನೆಯಲ್ಲಿರುವಾಗ ಶಾಲೆಗೆ ಹೋಗಿ ಐದು ಇಯತ್ತೆಗಳವರೆಗೆ ಅಭ್ಯಾಸ ಮಾಡಿದ್ದಳು. ಮುಂದೆ ಅವಳು ಅದೇ ಶಾಲೆಯಲ್ಲಿ ಮೂರು ವರ್ಷ ಕಸೀದೆ ಕಲಿಸುವ ಶಿಕ್ಷಕಳಾಗಿದ್ದು ಕೊಂಡಿದ್ದಳು. ಆದರೆ ಗಿರಿಬಾಯಿಯಲ್ಲಿ ವಿಶೇಷವಾದ ಅಭಿಮಾನವುಳ್ಳವಳಾದ ಶಾಲೆಯ ಮುಖ್ಯ ಶಿಕ್ಷಕರು ಮತ್ತೊಂದೂರಿಗೆ ಹೋದ ಬಳಿಕ ಅವಳು ತನ್ನ ತಾಯಿಯ ಬಳಿಗೆ ಬಂದು ದೊರೆಸಾನಿಯವರ ಅನುಚರಳಾಗಿ ಇದ್ದು ಕೊಂಡಿದ್ದಳು. ಅವಳ ವಿದ್ಯೆಯು ಅಲ್ಪವೇ ಆಗಿದ್ದರೂ ಅವಳಿಂದ ಮಲ್ಲೇಶಿಯು ಕಲಿತದ್ದು ಬಹಳಾಯಿತು. ತಕ್ಕಮಟ್ಟಿಗೆ ರೂಪವತಿಯಾಗಿದ್ದ ಆ ತರುಣಿಯು ಮನಬಿಚ್ಚಿ ಅವನೊಡನೆ ಮಾತುಕಥೆ ಯಾಡುತ್ತಿರುವದರಿಂದ ಹೆಂಗಸರೆಂದರೆ ವಿಜಾತೀಯವಾದ ಪ್ರಾಣಿಗಳೆಂಬ ಅವನ ಕಲ್ಪನೆಯು ದೂರಾಯಿತು. ಮಮತೆಯ ಮಾತುಗಳೇ ಮೊದಲು ಮೃದುವಾದವುಗಳು. ಮೃದುಭಾಷಿಣಿಯರ ಮಂಜುಲವಾದ ವಾಣಿಯಿಂದ ಹೊರಟಂಥ ಅಂಥ ಮಾತುಗಳು ಕೇಳುವವರ ಕಿವಿಗೆ ಆಹ್ಲಾದವನ್ನೀಯಬೇಡವೇ? ತಕ್ಕಮಟ್ಟಿಗೆಯೇ ಆಗಲಿ, ಅವನಿಗೆ ಅವಳು ವ್ಯವಹಾರ ಚಾತುರ್‍ಯವನ್ನು ಕಲಿಸಿದಳು; ಸುಸಂಸ್ಕೃತವಾದ ನಾಲ್ಕು ಶಬ್ದಗಳನ್ನುಚರಿಸುವಷ್ಟು ಅಕ್ಷರಜ್ಞಾನವನ್ನು ಮಾಡಿಕೊಟ್ಟಳು. ಅವನವಳಿಗೆ ಕೃತಜ್ಞನಾಗಿ ನಡ ಕೊಂಡನು; ಅವಳಲ್ಲಿ ಆದರವುಳ್ಳವನಾಗಿದ್ದನು. ಅವಳ ನಡತೆ ನಡಾವಳಿ ಸವಿನುಡಿಗಳಿಗೆ ಮನಸೋತವನಾಗಿದ್ದನು. ಮಲ್ಲೇಶಿಯಾದರೂ ಸಭ್ಯನು, ಪ್ರಾಮಾಣಿಕನು, ಸ್ವಭಾವತಃ ಕುಚೇಷ್ಟಾ ರಹಿತನು. ಇಂಥವನು ಬರ ಬರುತ್ತ ಸೌಜನ್ಯಯುತನಾಗಿ ನಡೆಯಲಾರಂಭಿಸಿರಲು ಗಿರಿಬಾಯಿಯಾದರೂ ಅವನಲ್ಲಿ ಪಕ್ಷಪಾತವುಳ್ಳವಳಾದದ್ದು ಆಶ್ಚರ್ಯವಲ್ಲ.

ಒಂದು ದಿನ ದೊರೆಸಾನಿಯವರು ನೋಡಿಕೊಳ್ಳುವ ದೊಡ್ಡ ಕನ್ನಡಿಯು ಗಿರಿಬಾಯಿಯ ಕೈತಪ್ಪಿ ಬಿದ್ದು ಪಳ್ಳನೆ ಒಡೆದು ಎರಡು ಹೋಳಾಯಿತು. ಗಿರಿಬಾಯಿಯ ಮೈಮೇಲೆ ದೊಡ್ಡದೊಂದು ಸಂಕಟವೇ ಬಂದಂತಾಗಿ ಅವಳು ಮಲ್ಲೇಶಿಯನ್ನು ಏಕಾಂತದಲ್ಲಿ ಕರೆದು ಆ ಒಡೆದ ಕನ್ನಡಿ ಯನ್ನು ತೋರಿಸಿ ಇನ್ನೇನು ಗತಿ ಮಾಡಲೆಂದು ಕಣ್ಣೀರು ತಂದಳು. ಮಲ್ಲೇಶಿಯು ತುಸು ಧ್ಯಾನಿಸಿ “ಚಿಂತೆ ಮಾಡಬೇಡ ಗಿರಿಬಾಯಿ, ಈ ಕನ್ನಡಿಯನ್ನು ದೊರೆಗಳು ಕೊಂಡು ತರುವಾಗ ಆ ಅಂಗಡಿಯಲ್ಲಿ ಇಂಥದೇ ಇನ್ನೊಂದು ಕನ್ನಡಿ ಇರುವದನ್ನು ನಾನು ನೋಡಿದ್ದೇನೆ. ಈ ಒಡಕ ಕನ್ನಡಿಯನ್ನು ಎಲ್ಲಿಯಾದರೂ ಚಲ್ಲಿ ಕೊಟ್ಟು ನಾನು ಆ ಹೊಸ ಕನ್ನಡಿಯನ್ನು ತಂದುಕೊಡುತ್ತೇನೆ.” ಎಂದು ಒಳ್ಳೆ ಮಮತೆಯಿಂದ ಆ ತರುಣಿಗೆ ಆಶ್ವಾಸನವನ್ನಿತ್ತನು.

ತಡವಿಲ್ಲದೆ ಮಲೇಶಿಯು ತನ್ನ ಸಂದುಕದೊಳಗಿಂದ ನಾಲ್ಕು ರೂಪಾಯಿಗಳನ್ನು ತೆಗೆದುಕೊಂಡು ಸಮೀಪದಲ್ಲಿಯೇ ಇರುವ ಪೇಟೆಯ ಊರಿಗೆ ಹೋಗಿ ಕನ್ನಡಿಯನ್ನು ಕೊಂಡುಕೊಂಡು, ಒಂದೇ ತಾಸಿನಲ್ಲಿ ಮರಳಿ ಬಂದು ಅದನ್ನು ಗಿರಿಬಾಯಿಯ ಸ್ವಾಧೀನ ಮಾಡಿದನು. ಅವಳು ಸಂತುಷ್ಟಳಾಗಿ ಮಲ್ಲೇಶಿಯ ಉಪಕಾರವನ್ನು ಕೊಂಡಾಡಿದಳು. ಅವಳ ಶುಚಿಸ್ಮಿತವಾದ ಮುಖವನ್ನು ಕಂಡು ಅವನ ಮನಸ್ಸಿನಲ್ಲಿ ಒಂದು ಪ್ರಕಾರದ ತೃಪಿಯುಂಟಾದಂತಾಗಿ ತಾನಿಂದು ಧನ್ಯನೇ ಆದೆನೆಂದು ಅವನು ಭವಿಸಿಕೊಂಡನು. ಆ ನೆವದಿಂದ ಮಲ್ಲೇಶಿ ಗಿರಿಬಾಯಿಯವರ ನಡುವೆ ದೃಢವಾದ ಸ್ನೇಹವು ನೆಲೆ ಗೊಂಡಿತು. ಗಿರಿಬಾಯಿಗೆ ತಾನೊಂದು ಉಪಕಾರ ಮಾಡದಿದ್ದ ದಿವಸವು ಮಲ್ಲೇಶಿಗೆ ದುರ್ದಿನವು. ಮಲ್ಲೇಶಿಯನ್ನು ಸಂತೋಷಗೊಳಿಸದಿದ್ದ ದಿವಸವು ವ್ಯರ್ಥವಾಗಿ ಹೋಯಿತೆಂದು ಆ ಬಾಲೆಯು ವ್ಯಸನಪಡುವಳು. ತರುಣ ತರುಣಿಯರ ನಡುವಿನ ಸ್ನೇಹವು ಪ್ರೇಮದಲ್ಲಿ ಪರಿಣಮಿಸಿತೆಂದು ಹೇಳುವ ಕಥೆಗಾರನ ಫಲಿತಾರ್ಥವೂ “ಮಳೆ ಬಂದಲ್ಲಿ ಕೆಸರಾದೀತೈ!” ಎಂದು ಹೇಳುವ ಬುಡುಬುಡಿಗನ ಭವಿಷ್ಯಜ್ಞಾನವೂ ಒಂದೇ ಸರಿ.

ಒಂದು ದಿನ ಮಲ್ಲೇಶಿಯು ತಲೆನೋವಿಗಾಗಿ ಹಾಸಿಗೆ ಹಿಡಿದು ಮಲಗಿ ಕೊಂಡನು. ಹೇಮರಡ್ಡಿ ಪ್ರಭುಗಳೂ ದೊರೆಸಾನಿಯವರೂ ಮಲ್ಲೇಶಿಗೆ ತಲೆನೋವಾದದ್ದು ಕೇಳಿ ವ್ಯಥಿತರಾಗಿ, ಏನೂ ಕೆಲಸ ಮಾಡದೆ ವಿಶ್ರಾಂತಿಯನ್ನು ತೆಗೆದು ಕೊಳ್ಳೆಂದು ಅವನಿಗೆ ಹೇಳಿದಳು. ಮಧ್ಯಾಹ್ನದ ಮೇಲೆ ಗಿರಿಬಾಯಿಯು ದಾಲಚಿನ್ನಿಯ ಎಣ್ಣೆಯನ್ನು ತೆಗೆದುಕೊಂಡು ಮಲ್ಲೇಶಿಯ ಬಳಿಗೆ ಹೋಗಿ ಅವನ ಹಣೆಯ ಮೇಲೆ ತನ್ನ ಹಸ್ತವನ್ನಿಟ್ಟು “ಮಲ್ಲೇಶಿ, ತಲೆಬೇನೆ ಹೇಗಿದೆ?” ಎಂದು ಬಲು ಮಮತೆಯಿಂದ ಕೇಳಿದಳು, ಆ ನವಯುವತಿಯ ಕೋಮಲವಾದ ಹಸ್ತ ಸ್ಪರ್ಶವನ್ನನುಭವಿಸಿದ ಕೂಡಲೆ ಮಲ್ಲೇಶಿಯ ಮೈಯಲ್ಲಿ ಭರನೆ ವಿದ್ಯುತ್ ಪ್ರವಾಹವು ಸಂಚರಿಸಿದಂತಾಗಿ ಅವನು ಚಟ್ಟನೆ ಎದ್ದು ಕುಳಿತು ಗಿರಿಬಾಯಿಯ ಹಸ್ತವನ್ನು ತನ್ನ ಕೈಯಲ್ಲಿ ಗಟ್ಟಿಯಾಗಿ ಹಿಡಿದು “ಓ! ಅಮೃತಹಸ್ತವೆ! ಓ, ಸಿರಿಗಂಧದ ಪೂಸೆ!” ಎಂದು ಉದ್ಗಾರ ತೆಗೆದು, “ಗಿರಿಬಾಯಿ, ಚಮತ್ಕಾರ ನೋಡಿದಿಯಾ? ನಿನ್ನಿ ಕೋಮಲವಾದ ಹಸ್ತ ಸ್ಪರ್ಶದಿಂದ ನನ್ನ ತಲೆನೋವೆಲ್ಲ ಭರನೆ ಇಳಿದು ಹೋಯಿತು. ಆದರೆ ನನ್ನೆದೆ ಮಾತ್ರ ಯಾಕೋ ಡಬ ಡಬ ಹಾರಲಾರಂಭಿಸಿದೆ. ಇಲ್ಲಿಷ್ಟು ಕೈಯಾಡಿ ಸಬಾರದೆ?” ಎಂದು ನುಡಿದವನೇ ಅವಳ ಪದ್ಮಕೋಮಲವಾದ ಹಸ್ತವನ್ನು ತನ್ನ ಎದೆಗೆ ತಗಲಿಸಿ ಆ ಹಸ್ತವನ್ನು ಅವಳು ಸೆಳಕೊಳ್ಳದಂತೆ ಅವನ್ನು ಗಟ್ಟಿಯಾಗಿ ತನ್ನ ಎರಡೂ ಕೈಗಳಿಂದ ಹಿಡುಕೊಂಡು “ಓ ಹೂವಿನ ಹಸ್ತವೆ ! ಓ ಸಿರಿಗಂಧದ ಪೂಸೆ!” ಎಂದು ಮತ್ತೆ ಕೂಗಿದನು.

ಹೀಗೆ ಗಟ್ಟಿಗಟ್ಟಿಯಾಗಿ ಉಚ್ಚರಿಸಿದ ಅವನ ಉದ್ಗಾರಗಳನ್ನು ಹೊರಗಿದ್ದವರಾರಾದರೂ ಕೇಳಿದರೆ ಪರಿಣಾಮವೇನೆಂಬ ಭೀತಿಯಿಂದ ಗಿರಿ ಬಾಯಿಯು ತಾನೇನು ಮಾಡುವೆನೆಂಬದನ್ನು ಅರಿಯದೆ ತನ್ನ ದೊಂದು ಕೈಯನ್ನು ಮಲ್ಲೇಶಿಯ ಹೆಗಲಮೇಲೆ ಹಾಕಿ, ಮತ್ತೊಂದು ಕೈಯಿಂದ ಅವನ ಬಾಯನ್ನು ಗಟ್ಟಿಯಾಗಿ ಮುಚ್ಚಿ “ಮಲ್ಲೇಶಿ, ನೀನು ಹಾಗೆ ಕೂಗಿದರೆ ಜನರು ವಿಪರೀತವಾದ ಕಲ್ಪನೆಯನ್ನು ಮಾಡಬಹುದಲ್ಲವೆ?” ಎಂದು ಕೇಳಿದಳು.

“ಗಿರಿಬಾಯಿ, ಬೇನೆಯಿಂದ ಪೀಡಿತನಾದ ನಾನು ನಿನ್ನ ಹಸ್ತದಿಂದ ಉಂಟಾದ ಸಹಾನುಭೂತಿಯ ಮೂಲಕ ಹಾಗೆ ಚಕಿತನಾಗಿ ಕೂಗಿದೆನು, ನೀನು ತಳೆದಿರುವ ಶಂಕೆಯಾದರೂ ಸರಿಯಾದದ್ದು. ಸದ್ಯಕ್ಕೆ ನನ್ನ ಕೊರಳಿನಲ್ಲಿರುವ ನಿನ್ನೀ ಸುಖಮಯವಾದ ಬಾಹುಪಾಶವನ್ನು ಇನ್ನೊಂದು ಕ್ಷಣ ಹೊತ್ತಾದರೂ ನೀನು ಹೀಗೆಯೇ ಇರಗೊಟ್ಟರೆ ನಾನು ಕೃತಾರ್ಥನಾಗುವೆನು” ಎಂದು ಹೇಳಿಕೊಂಡು ಮಲ್ಲೇಶಿಯು ತನ್ನ ಹೆಗಲ ಮೇಲಿರುವ ಗಿರಿಬಾಯಿಯ ನಳಿತೋಳನ್ನು ಅಲ್ಲಿಯೇ ಗಟ್ಟಿಯಾಗಿ ಹಿಡಿದುಕೊಂಡು ಕುಳಿತನು.

ಪ್ರೇಮದ ಉತ್ಪತ್ತಿಯ ಮೇಘದ ಉತ್ಪತ್ತಿಯೂ ಹೇಗಾಗುವದೋ ಯಾರು ಬಲ್ಲರು? ಈ ಗಳಿಗೆಯಲ್ಲಿ ಬರಿದಾಗಿ ತೋರುವ ಮುಗಿಲಿನಲ್ಲಿ ಇನ್ನೊಂದು ಕ್ಷಣಕ್ಕೆ ಅಗಾಧವಾದ ಮೇಘಸಮುದಾಯವು ಹುಟ್ಟಿ, ಮಿಂಚು, ಕೋಲುಮಿಂಚು, ತಂಗಾಳಿಗಳ ವಿಲಕ್ಷಣವಾದ ಆಟವು ತೋರುವದುಂಟು. ಹಾಗೆಯೇ ಪ್ರೇಮೋದ್ಗಮಕ್ಕಾದರೂ ಹೇಳಿಕೊಳ್ಳುವಂಥ ನನ ಬೇಕಾಗುತ್ತದೆಂತಲ್ಲ. ಅಪ್ರತ್ಯಕ್ಷವಾದ ಕಾರಣಗಳು ಅನೇಕವಾಗಿರಬಹುದು. ಪದಾರ್ಥ ವಿಜ್ಞಾನಶಾಸ್ತ್ರೀಯು ವಿದ್ಯುತ್ತಿನ ಉತ್ಪತ್ತಿಯ ಅನೇಕವಾದ ಕಾರಣಗಳನ್ನು ಕಂಡುಹಿಡಿದಿರಬಹುದು. ಆದರೆ ಅಕಸ್ಮಾತ್ತಾಗಿ ಜಗ್ಗನೆ ಮಿನುಗಿದ ಕೋಲು ಮಿಂಚಿನ ಚಮತ್ಕಾರವನ್ನು ಕಂಡು ಆ ಶಾಸ್ತ್ರಿಯು ಫಕ್ಕನೆ ಚಕಿತನಾಗಿ ಮೂರ್ಛಿತನು ಕೂಡ ಆಗಬಹುದು. ಗಿರಿಬಾಯಿಯ ಅಂಗಗಳಲ್ಲಿ ಪ್ರೇಮದ ಸಂಚಾರವಂತಾಯಿತೋ ಹೇಳಲಾಗದು. ಅವಳ ಮುಖದಲ್ಲಿ ವಿಲಕ್ಷಣವಾದ ತೇಜಸ್ಸು ತೋರಿತು. ಮೈಯಲ್ಲೆಲ್ಲ ರೋಮಾಂಚಗಳೆದ್ದವು. ಚಿತ್ತವು ಚಮತ್ಕಾರವಾದದ್ದಾಯಿತು. ಲೀಲೆಯಿಂದವಳು ಮಲ್ಲೇಶಿಯ ಗದ್ದವನ್ನು ಹಿಡಿದು “ಹುಚ್ಚ ಹುಡುಗನಿರುವಿ ನೀನು!” ಎಂದು ನುಡಿದು ಮಂದಹಾಸ ಗೈದಳು.

ತತ್‌ಕ್ಷಣವೇ ಮಲ್ಲೇಶಿಯು ಚತುರನಾದ ಕಾಮಿಯಂತೆ ಆ ನವತರುಣಿಯ ಅಧರವನ್ನು ಚುಂಬಿಸಿ ಹುಚ್ಚೆದ್ದು ಕುಣಿದನು. ಕತ್ತಲೆಯಲ್ಲಿ ಎಂಥದಾದರೂ ಒಂದು ಪ್ರಕಾಶದ ಅಪೇಕ್ಷೆಯಾಗುವದುಂಟು. ಆದರೆ ಅತಿ ದೀಪ್ತಿಮಯವಾದ ವಿದ್ಯುಲ್ಲತೆಯ ತೇಜಸ್ಸು ಕಣ್ಣಿಗೆ ಸರ್ವಥಾ ಸಹನವಾಗದಿರುವಂತೆ ಪ್ರೇಮಸಮ್ಮೂಢನಾದ ಮಲ್ಲೇಶಿಯ ಚಿತ್ರಕ್ಕೆ ಆಕಸ್ಮಾತ್ತಾಗಿ ತೋರಿದ ಗಿರಿಬಾಯಿಯ ಮೃದುಹಾಸವು ವಿಭ್ರಮವನ್ನುಂಟು ಮಾಡಿತು.

ಈ ಸಂಗತಿಯಾದ ಬಳಿಕ ಗಿರಿಬಾಯಿ ಮಲ್ಲೇಶಿಗಳು ಚಮತ್ಕಾರವಾದ ಚಿತ್ತ ವೃತ್ತಿಯುಳ್ಳವರಾದರು. ಅವರ ಸಲಿಗೆಯ ಮಾತುಗಳು ನಿಂತುಹೋಗಿ ನೇತ್ರ ವ್ಯಾಪಾರಗಳಿಂದಲೇ ಅವರ ಸಂವಾದಗಳು ನಡೆದವು. ಹೆಸರುಗೊಂಡು ಅವರು ಒಬ್ಬರೊಬ್ಬರನ್ನು ಕರೆಯದಾದರು. ಮಲ್ಲೇಶಿಯನ್ನು ಓರೆ ಕಣಿನಿಂದ ನೋಡುತ್ತ ಬರುವ ಗಿರಿಬಾಯಿಯನ್ನು ನೋಡಿ ದೊರೆಸಾನಿಯವರು ನಕ್ಕರು. ಜಾಣರು ಮತ್ತಿನ್ನೆಷ್ಟು ಪರೀಕ್ಷೆ ಮಾಡಿ ನೋಡುವರು? ಎಲ್ಲರಿಗೂ ಬೇಕಾದ ಮಾತದು. ಅಂದಮೇಲೆ ಗಿರಿಜಾ ಮಲ್ಲೇಶ್ವರರ ಕಲ್ಯಾಣೋತ್ಸವವು ಬೇಗನೆ ಆಗಿಹೋಯಿತು.

ಮಲ್ಲೇಶ್ವರನು ಅಕ್ಷರಸ್ಥನೂ ವಿನಯಶೀಲನೂ ಅಭಿಜಾತನೂ ಆದ ನಾಗರಿಕನಾದದ್ದು ಕಂಡು ದೊರೆಗಳು ಅವನನ್ನು ಅರಮನೆಯ ಕೋಶಾಧ್ಯಕ್ಷನನ್ನಾಗಿ ಮಾಡಿದರು. ಗಿರಿಬಾಯಿಯಂತೂ ದೊರೆಸಾನಿಯವರ ವಿಶ್ವಾಸದ ಪರಿಚಾರಿಕೆಯು. “ಊರನ್ನಾಳುವ ದೊರೆಗಳೇ ಮನೆಯಲ್ಲಿ ಬಾಗಿಬಾಗಿ ನಡಕೊಳ್ಳುವದನ್ನು ಕಂಡು, ನಮ್ಮಂಥವರ ಹೆಂಡರು ನಮ್ಮ ತಲೆಮೇಲೇರಿ ಕುಳ್ಳಿರುವದೇನು ಆಶ್ಚರ್ಯ ತಾಯಿಯವರೇ?” ಎಂದು ಮಲ್ಲೇಶಿಯು ಆಗಾಗ್ಗೆ ದೊರೆಸಾನಿಯವರ ಮುಂದೆ ದೂರಿಕೊಂಡರೂ ವೈವಾಹಿಕ ಸ್ಥಿತಿಯು ಸುಖಕರವಾದದ್ದೆಂಬದು ಅವನ ನಿಜವಾದ ಅಭಿಪ್ರಾಯವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದರ್ಸ್ ಡೇ
Next post ನನ್ನವಳು ಬಳಿಯಿಲ್ಲ

ಸಣ್ಣ ಕತೆ

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys