ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

ಸತ್ಯ: ಸರಳತೆ ಮತ್ತು ಸಂಕೀರ್ಣತೆಯ ನಡುವೆ

ಸತ್ಯವು ಸರಳವಾಗಿರುತ್ತದೆ ಎನ್ನುತ್ತಾರೆ, ಆದರೆ ಸರಳವಾದ್ದೆಲ್ಲವೂ ಸತ್ಯವೇ? ಕೆಲವೆಡೆ ಸರಳೀಕರಣವನ್ನು ನಾವು ಒಪ್ಪುವುದಿಲ್ಲ. ಉದಾಹರಣೆಗೆ, ಕತೆ ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅನುಭವವನ್ನು ಸರಳೀಕರಿಸಿ ಬರೆದ ಬರವಣಿಗೆಗಳು ತೆಳುವಾಗಿ ಅನಿಸುತ್ತವೆ. ಸಾಹಿತ್ಯ ಕೃತಿಗಳ ಓದಿನಿಂದ ನಾವು ಆಳವಾದ ಅನುಭವವೇನನ್ನಾದರೂ ಪಡೆಯಬೇಕಿದ್ದರೆ ಅವು ಪಾತ್ರಗಳನ್ನು, ಸನ್ನಿವೇಶಗಳನ್ನು ಸರಳೀಕರಿಸದೆ ಯಥಾವತ್ತಾದ ಚಿತ್ರಣವನ್ನು ಕೊಡಬೇಕು. ಇದು ಬಹುಶಃ ಆಧುನಿಕ ಸಂವೇದನೆ ಎಂದೂ ಹೇಳಬಹುದು. ಕನ್ನಡ ಸಾಹಿತ್ಯದಲ್ಲೇ ನವೋದಯ ಮತ್ತು ನವ್ಯ ಕಾಲಘಟ್ಟಗಳ ಕೃತಿಗಳನ್ನು ನೋಡಿದರೆ ನಮಗಿದು ಗೊತ್ತಾಗುತ್ತದೆ. ತೋರಮಟ್ಟಿಗೆ ಹೇಳುವುದಾದರೆ, ನವೋದಯ ಸಾಹಿತ್ಯದಲ್ಲಿ ಒಂದು ಬಗೆಯ ಸರಳೀಕರಣವನ್ನು ಕಾಣುತ್ತೇವೆ; ನವ್ಯದ ಕಾಲಘಟ್ಟದಲ್ಲಿ ಸಂಕೀರ್ಣತೆಗೆ ಹೆಚ್ಚಿನ ಒತ್ತು. ಸದ್ಯ ಸಾಹಿತ್ಯ ವಿಮರ್ಶೆ ಲೇಖಕನಿಂದ ಓದುಗನತ್ತ ಚಲಿಸಿರುತ್ತ, ಸಂಕೀರ್ಣತೆಯೆನ್ನುವುದು ನಮ್ಮ ಓದಿನ ವಿಧಾನವೆಂದು ಕೂಡಾ ಹೇಳಬಹುದು. ಆದ್ದರಿಂದಲೇ ನಾವು ಮೇಲ್ಮೈಯ ಸರಳತೆಯ ಹಿಂದಿರುವ ಸಂಕೀರ್ಣತೆಯನ್ನು ಕಾಣುವುದರಲ್ಲಿ ಆಸಕ್ತರು.

ಆದರೆ ದಲಿತ-ಬಂಡಾಯ ಅಥವಾ ಅದಕ್ಕೂ ಹಿಂದೆ ಬಂದಿದ್ದ ಪ್ರಗತಿಶೀಲ ಸಾಹಿತ್ಯ ಮಾರ್ಗಗಳ ಧೋರಣೆಗಳನ್ನು ನೋಡಿದರೆ, ಅವೂ ಕೂಡಾ ಸರಳೀಕರಣವನ್ನು ಅಪೇಕ್ಷಿಸುವಂತೆ ಅನಿಸುತ್ತವೆ. ಸಂಕೀರ್ಣತೆ ಇಂಥ ದೃಷ್ಪಿಯಲ್ಲಿ ಕಾಣುತ್ತದೆ. ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಯನ್ನು ಅದು ಸಂಕೀರ್ಣ ಅರ್ಥಾತ್ ಕಲೆಗಾರಿಕೆಯಾಗಿದೆ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳೇ ಕೆಲವರು ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸರಳೀಕರಣವು ಅರ್ಥಪೂರ್ಣವೂ ಸಂಕೀರ್ಣತೆಯು ಅರ್ಥಹೀನವೂ ಆಗಿ ಹಲವರಿಗೆ ಅನಿಸಿದರೆ ಆಶ್ಚರ್ಯವಿಲ್ಲ.

ಸರಳೀಕರಣವೆನ್ನುವುದು ಬಹುದೊಡ್ಡ ಆಕರ್ಷಣೆಯೆನ್ನುವುದರಲ್ಲಿ ಸಂದೇಹವಿಲ್ಲ. ಕಪ್ಪು ಬಿಳುಪು, ಒಳಿತು ಕೆಟ್ಟದು, ಪೂರ್ವ ಪಶ್ಚಿಮ, ಬ್ರಾಹ್ಮಣ ಅಬ್ರಾಹ್ಮಣ, ನಾವು ಅವರು, ಸ್ವದೇಶೀ ವಿದೇಶೀ, ಹಳತು ಹೊಸತು -ಇಂಥ ಯುಗ್ಮಗಳೆಲ್ಲ ಒಂದು ರೀತಿಯಲ್ಲಿ ಸರಳೀಕರಣವೇ ಸರಿ. ವಸ್ತು ವಿಷಯಗಳನ್ನು ಎರಡಾಗಿ ವಿಭಜಿಸಿ ನೋಡುವುದು ನಮಗೆ ಹಿಂದಿನಿಂದಲೂ ರೂಢಿಯಾದ ಸಂಗತಿ. ಈಗಲೂ ನಮ್ಮ ವೈಚಾರಿಕತೆಗೆ ಇದು ಅಗತ್ಯವಾಗಿದೆ. ಪೂರ್ವ ಪಶ್ಚಿಮ, ಬ್ರಾಹ್ಮಣ ಅಬ್ರಾಹ್ಮಣ ಮುಂತಾದ ಈ ಯುಗ್ಮಗಳು ವಾಸ್ತವವಲ್ಲವೇ ಎಂದು ಇವುಗಳ ಪರವಾಗಿ ಕೇಳಬಹುದು. ವಾಸ್ತವವೇ. ಆದರೆ ಅವು ಮಾತ್ರವೇ ವಾಸ್ತವವೂ ಅಲ್ಲ. ಉದಾಹರಣೆಗೆ, ಕಪ್ಪು ಬಿಳುಪು ಎರಡು ಮಾತ್ರವೇ ಬಣ್ಣಗಳಿರುವುದೇ? ಇವುಗಳ ನಡುವೆ ಏನೂ ಇಲ್ಲವೇ? ಹಾಗೂ ಒಳಿತು ಸಂಪೂರ್ಣವಾಗಿ ಒಳಿತೇ, ಕೆಟ್ಟುದು ಸಂಪೂರ್ಣವಾಗಿ ಕೆಟ್ಟುದೇ?

ಒಂದು ರೀತಿಯ ವಿಭಜನೆಯಿಲ್ಲದೆ ನಾವು ಲೋಕವನ್ನು ಅರ್ಥಮಾಡಿಕೊಳ್ಳಲಾರೆವು ಎನ್ನುವುದು ನಿಜವಾದರೂ, ಯಾವ ರೀತಿಯ ವಿಭಜನೆ ಯಾವುದನ್ನು ಎತ್ತಿ ತೋರಿಸುತ್ತದೆ, ಹಾಗೂ ಯಾವುದನ್ನು ಮರೆಸುತ್ತದೆ ಎನ್ನುವುದರ ಅರಿವು ನಮಗೆ ಇರಬೇಕು. ಯಾವ ಆಧಾರದ ಮೇಲೆ ನಾವು ಲೋಕವನ್ನು ವಿಭಜಿಸುತ್ತೇವೆ ಎನ್ನುವುದು ಮುಖ್ಯ. ಸಂಸ್ಕೃತಿ ಸಂದರ್ಭದಲ್ಲಿ ಪೂರ್ವ ಪಶ್ಚಿಮ ಎಂಬ ವಿಭಜನೆ ಸರಿಯೆನಿಸಬಹುದು; ಆರ್ಥಿಕ ಸಂದರ್ಭದಲ್ಲಿ ಉತ್ತರ ದಕ್ಷಿಣ, ಶ್ರೀಮಂತ ಬಡವ ಎಂಬ ವಿಭಜನೆಗಳು ಸರಿಯಾಗಿರಬಹುದು.

ನಮ್ಮ ಅರಿವಿಗೆ ಮತ್ತು ಅಗತ್ಯಕ್ಕೆ ತಕ್ಕಂತೆ ನಾವು ಉಪಯೋಗಿಸುವ ಆಧಾರಗಳು ಬೇರೆ ಬೇರೆಯಾಗಿದ್ದು ಒಂದು ಆಧಾರದ ಮೇಲೆ ಒಂದು ಗುಂಪಿಗೆ ಸೇರಿದ ವಸ್ತುಗಳು ಇನ್ನೊಂದು ಆಧಾರದ ಮೇಲೆ ಬೇರೆ ಬೇರೆ ಗುಂಪಿಗೆ ಸೇರ್ಪಡೆಗೊಳ್ಳುವುದು ಸಾಧ್ಯ. ಉದಾಹರಣೆಗೆ, ಜಾತಿಯ ಆಧಾರದ ಮೇಲೆ ರಾಮನು ಬ್ರಾಹ್ಮಣನೂ ಗೋಪಿಯು ಅಬ್ರಾಹ್ಮಣನೂ ಆಗಿರಬಹುದು. ಆದರೆ ಬಡತನದ ಆಧಾರದ ಮೇಲೆ ರಾಮನೂ ಗೋಪಿಯೂ ಇಬ್ಬರೂ ಬಡವರೇ ಇರಬಹುದು. ಭಾಷೆಯ ಆಧಾರದ ಮೇಲೆ ರಶೀದ್ ಮತ್ತು ಅಬ್ದುಲ್ ಇಬ್ಬರೂ ಉರ್ದು ಮಾತಾಡುವ ಒಂದೇ ಪಂಗಡದವರಾಗಿರಬಹುದು; ಆದರೆ ರಾಷ್ಟ್ರೀಯತೆಯ ಆಧಾರದ ಮೇಲೆ ರಶೀದ್ ಭಾರತೀಯನೂ ಅಬ್ದುಲ್ ಪಾಕಿಸ್ತಾನಿಯೂ ಆಗಿರಬಹುದು.

ಇದರಲ್ಲಿ ಸಂಕೀರ್ಣತೆಯ ಪ್ರಶ್ನೆಯೆಲ್ಲಿ ಎಂದು ಕೇಳಬಹುದು. ಸಂಕೀರ್ಣತೆ ಇರುವುದು ವ್ಯಕ್ತಿಯೊಬ್ಬನ ಇಂಥ ಸಂಬಂಧ ಜಾಲವನ್ನು ಗುರುತಿಸುವುದರಲ್ಲಿ. ಯಾಕೆಂದರೆ ಈ ಸಂಬಂಧಗಳು ಮನುಷ್ಯರ ವರ್ತನೆಗಳನ್ನು, ಅವರ ಆಯ್ಕೆಗಳನ್ನು, ಔದಾರ್ಯ ಅನುಕಂಪ ಇತ್ಯಾದಿ ಮನೋಭಾವಗಳನ್ನು ಹಾಗೂ ಆ ಮೂಲಕ ಅವರ ಧೋರಣೆಗಳನ್ನು ನಿರ್ಧರಿಸುತ್ತವೆ. ಉದಾಹರಣೆಗೆ ಸ್ವಕುಟುಂಬದವನ ತಪ್ಪಿನ ಬಗ್ಗೆ ನಾವು ಉದಾರವಾಗಿರುತ್ತೇವೆ, ಕುಟುಂಬದ ಹೊರಗಿನವರ ಅಂಥದೇ ತಪ್ಪಿನ ಕುರಿತು ಕಠಿಣವಾಗಿರುತ್ತೇವೆ. ಜಾತಿ, ಮತ, ಧರ್ಮ, ವರ್ಣ, ದೇಶ, ಪ್ರದೇಶ, ಭಾಷೆ, ಕುಟುಂಬ, ಗೆಳೆತನ, ಉದ್ದೋಗ, ಹವ್ಯಾಸ, ವಯಸ್ಸು, ಲಿಂಗ, ಕಾಲ ಮುಂತಾದ ಅದೆಷ್ಟೋ ವಿಷಯಗಳನ್ನು ಹೊಂದಿಕೊಂಡು ನಮ್ಮ ಸಂಬಂಧ ವರ್ತುಲಗಳು ನಿರ್ಮಾಣವಾಗುತ್ತ ಹೋಗುತ್ತವೆ. ಕೆಲವು ಕಾಯಿಲೆಗಳು ಸಹಾ ಇಂಥ ಸಂಬಂಧ ಜಾಲವನ್ನು ರಚಿಸಬಹುದು! ಇವುಗಳು ಪ್ರಾಬಲ್ಯದಲ್ಲಿ ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಬಹುಶಃ ಜಾತಿ ಮತ ಧರ್ಮ ಎಂಬುದು ಬಹಳ ಬಲಿಷ್ಟವಾದ ಬೆಸುಗೆಯೆವನಿಸುತ್ತದೆ. ರಾಸ್ಟ್ರೀಯತೆ, ಭಾಷೆ ಮುಂತಾದುವು ಕೂಡ ಗಾಢ ಸಂಬಂಧಗಳನ್ನು ಹೊಸೆಯುತ್ತವೆ. ಇವುಗಳಲ್ಲಿ ಕೆಲವರ ಮೇಲೆ ನಮಗೆ ನಿಯಂತ್ರಣವಿರಬಹುದು-ಉದಾಹರಣೆಗೆ, ನಮ್ಮ ಧರ್ಮವನ್ನು ಬದಲಿಸಿಕೊಳ್ಳಬಹುದು. ಆದರೆ ಅಷ್ಠಕ್ಕೆ ಅದೇನೂ ದುರ್ಬಲವಾದ ಬೆಸುಗೆ ಎನ್ನುವಂತಿಲ್ಲ. ಇನ್ನು ಕೆಲವರ ಮೇಲೆ ನಮಗೆ ನಿಯಂತ್ರಣ ಇರುವುದಿಲ್ಲ-ಉದಾಹರಣೆಗೆ, ನಮ್ಮ ಮೈಬಣ್ಣದ ಮೇಲೆ ನಮಗೆ ಹತೋಟಿಯಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಮೈಬಣ್ಣ ಮುಖ್ಯವಾಗದೇ ಇರಬಹುದು. ಹೀಗೆ ಯಾವ ಸಂದರ್ಭದಲ್ಲಿ ಯಾವ ಗುಣಗಳು ಮುಖ್ಯವಾಗುತ್ತವೆ ಎನ್ನುವುದು ಕುತೂಹಲದ ಸಂಗತಿ. ಹಿಂದೆ ಕ್ರಿಸನ್‍ಡಮ್ (ಕ್ರಿಶ್ಚಿಯನ್ ಜಗತ್ತು) ಎಂಬೊಂದು ಪರಿಕಲ್ಪನೆಯಿತ್ತು. ಈಗ ಮುಸ್ಲಿಂ ಜಗತ್ತು ಎಂಬ ಪರಿಕಲ್ಪನೆಯನ್ನು ಕಾಣುತ್ತೇವೆ. ಲೋಕದ ಕಾರ್ಮಿಕರೆಲ್ಲರೂ ಒಂದೇ ಪಂಗಡದವರು, ಯಾಕೆಂದರೆ ಕಾರ್ಮಿಕರೆಲ್ಲರೂ ಶೋಷಣೆಗೆ ಒಳಗಾದವರು ಎಂದು ಕಾರ್ಲ್ ಮಾರ್ಕ್ಸ್ ಹೇಳಿದ. ಲೋಕದ ಹೆಣ್ಣುಗಳೆಲ್ಲರೂ ಒಂದೇ ಪಂಗಡದವರು, ಯಾಕೆಂದರೆ ಹೆಣ್ಣುಗಳೆಲ್ಲರೂ ಶೋಷಣೆಗೆ ಒಳಗಾದವರು ಎನ್ನುತ್ತಾರೆ ಸ್ತ್ರೀವಾದಿಗಳು. ಎಲ್ಲಾ ಪೂರ್ವ ವಸಾಹತುಗಳೂ ಒಂದೇ, ಯಾಕೆಂದರೆ ಅಲ್ಲೆಲ್ಲಾ ನವವಸಾಹತುಶಾಹಿ ರಾಜ್ಯವಾಳುತ್ತಿದೆ ಎನ್ನುತ್ತಾರೆ ನವವಸಾಹತು ವಿಮರ್ಶಕರು. ಇದೇ ರೀತಿ, ಜಾಗತೀಕರಣದ ಈ ದಿನಗಳಲ್ಲಿ ಮನುಷ್ಯನಿಗೆ ಆತ ಯಾವ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದಾನೆ, ಅಲ್ಲಿ ಏನಾಗಿದ್ದಾನೆ ಎಂಬುದನ್ನು ಹೊಂದಿಕೊಂಡು ಅಸ್ಮಿತೆಯೊಂದು ನಿರ್ಮಾಣವಾಗಿದೆ. ನೀವು ಡೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಎಲ್ಲೇ ಇದ್ದರೂ ಡೆಲ್ ಕಂಪೆನಿಯ ಹೆಸರಲ್ಲಿ ಗುರುತಿಸಲ್ಪಡುತ್ತೀರಿ. ರಾಷ್ಟ್ರೀಯತೆಯ ಸಂಬಂಧ ಸ್ವಲ್ಪ ಹಿಂದಕ್ಕೆ ಸರಿದು ಈ ಬಹುರಾಷ್ಪೀಯತೆಯ ಸಂಬಂಧವೇ ನಿಮಗೆ ಪ್ರಿಯವಾದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ!

ಸಂಬಂಧಗಳಂತೆಯೇ ಮನುಷ್ಯನು ಸಂಘರ್ಷಗಳಿಗೂ ಒಳಗಾಗುತ್ತಾನೆ. ಸಂಬಂಧ ಮತ್ತು ಸಂಘರ್ಷಗಳು ಎರಡೂ ಒಂದೇ ನಾಣ್ಯದ ಎರಡು ಮಗ್ಗುಲುಗಳಂತೆ. ಉದಾಹರಣೆಗೆ, ಧರ್ಮ ಮತ್ತು ರಾಷ್ಟ್ರೀಯತೆಗಳ ನಡುವಣ ಸಂಘರ್ಷ ಇಂದು ನಾವು ಎಲ್ಲೆಲ್ಲೂ ಕಾಣುವಂಥ ಒಂದು ಕಟು ಸತ್ಯ. ಅದೇ ರೀತಿ ಆಧುನಿಕತೆ ಮತ್ತು ಪರಂಪರೆಗಳ ನಡುವಣ ಸಂಘರ್ಷವನ್ನು ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವಿಸಿಕೊಂಡು ಬಂದಂಥ ಸಂಗತಿ. ಇಂಥ ಕಡೆ ಕಲವೊಮ್ಮೆ ಮನುಷ್ಯನಿಗೆ ಆಯ್ಕೆಗಳು ಕಷ್ಟವಾಗುತ್ತವೆ. ಯಾಕೆಂದರೆ ಒಂದೊಂದು ಸಂಬಂಧವೂ ಪ್ರತ್ಯೇಕವಾದ ನಿಷ್ಠೆಯನ್ನು ಅಪೇಕ್ಷಿಸುತ್ತವೆ. ಮನುಷ್ಯ ತನ್ನ ಸಂಬಂಧಗಳ ಜಾಲದಲ್ಲಿ ಎಲ್ಲಕ್ಕೂ ಒಂದೇ ರೀತಿಯ ನಿಷ್ಠೆಯನ್ನು ತೋರುವುದು ಕೆಲವು ಸಲ ಅಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಹಿಂದಿನಿಂದಲೂ ಕೆಲವರು ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆ ಎಂಬ ಆದರ್ಶವೊಂದನ್ನು ಪ್ರತಿಪಾದಿಸುತ್ತ ಬಂದಿರುವುದು. ಆದರೆ ಇದು ಎಂದಿಗೂ ವಾಸ್ತವವಾಗುವುದು ಸಾಧ್ಯವಿಲ್ಲವೆನ್ನುವುದು ನಮಗೀಗ ಗೊತ್ತಾಗಿದೆ, ಮಾತ್ರವಲ್ಲ ಅಪೇಕ್ಷಣೀಯವೂ ಅಲ್ಲವೆಂದು ತಿಳಿದಿದ್ದೇವೆ.

ಹೊರ ಜಗತ್ತು ಹೀಗಾದರೆ ಮನುಷ್ಯನ ಒಳ ಜಗತ್ತು ಇನ್ನಷ್ಟು ಸಂಕೀರ್ಣ. ಒಳ ಜಗತ್ತು ಎಂದರೆ ನಮ್ಮ ಮನೋಲೋಕ. ಅದು ಎಂದೂ ಇದ್ದಂತೆ ಇರುವುದಿಲ್ಲ. ಕ್ಷಣ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಸ್ಮೃತಿ ಮತ್ತು ವಿಸ್ತೃತಿಗೆ ಒಳಗಾಗಿಯೂ ಇರುತ್ತದೆ. ಕಾಲಮಾನವೆನ್ನುವುದು ನಮ್ಮ ಹೊರಗನ್ನು ಬಾಧಿಸಿದಂತೆಯೇ ಒಳಗನ್ನೂ ಬಾಧಿಸುತ್ತಿರುತ್ತದೆ. ನಿನ್ನೆಯ ನಾನೇ ಇವತ್ತಿನ ನಾನು? ಇದು ಕೇವಲ ಆಧ್ಯಾತ್ಮಿಕ ಅಥವಾ ತಾತ್ವಿಕ ಪ್ರಶ್ನೆಯೂ ಅಲ್ಲ. ಕೊಲೆ ಆಪಾದಿತ ಅನ್ನುತ್ತಾನೆ: ನಾನೀಗ ಬದಲಾಗಿದ್ದೇನೆ. ಈ ಬದಲಾಗಿರುವ ನನ್ನನ್ನು ಯಾಕೆ ಶಿಕ್ಷಿಸುತ್ತೀರಿ? ಹೊರಗಿಂದ ನಮಗೆ ಏಕವ್ಯಕ್ತಿಯಾಗಿ ತೋರುವ ಮನಷ್ಯ ಸಹಾ ಒಳಗೆ ವಿಕ್ಷಿಪನಾಗಿರುವುದು ಸಾಧ್ಯ. ಅದಕ್ಕೇ ಹ್ಯಾಮ್ಲೆಟ್ ಕೇಳುವುದು: ಕೊಲೆ ಮಾಡಿದ ಆ ಹ್ಯಾಮ್ಲೆಟ್ ಬೇರೆಯೇ. ಆತನನ್ನು ಬೇಕಾದರೆ ಶಿಕ್ಷಿಸಿ, ಆದರೆ ಕೊಲೆ ಮಾಡದ ಹ್ಯಾಮ್ಲೆಟ್‍ನ್ನ ಯಾಕೆ ಶಿಕ್ಷಿಸುತ್ತೀರಿ? ಶೇಕ್ಸ್‌ಪಿಯರ್ ನಿರ್ಮಿಸಿದ ಅದ್ಭುತ ಪಾತ್ರ ಈ ಹ್ಯಾಮ್‌ಲೆಟ್ ಎನ್ನುವನು. ಹಾಗೂ ಶೇಕ್ಸ್‌ಪಿಯರಿಗೆ ಗೊತ್ತಿತ್ತು ಮನುಷ್ಯ ಯಾವ ಕಾಲಕ್ಕೂ ಅತ್ಯಂತ ಸಂಕೀರ್ಣನಾದ ವ್ಯಕ್ತಿ ಎನ್ನುವುದು.

ಇದು ತಿಳಿಯಬೇಕಾದರೆ ನಾವು ದೂರ ಎಲ್ಲೂ ಹೋಗಬೇಕಿಲ್ಲ. ಒಂದು ಸ್ವಲ್ಪ ಹೊತ್ತು ಆತ್ಮಾವಲೋಕನ ಮಾಡಿಕೊಂಡರೆ ಸಾಕು. ಎಷ್ಟು ಜನರನ್ನು ನಾವು ಮನಸ್ಸಲ್ಲೇ ಕೊಂದಿಲ್ಲ? ಎಷ್ಟು ಜನರನ್ನು ಹೊರಗಿಂದ ಹೊಗಳಿದರೂ ಒಳಗೊಳಗೇ ದ್ವೇಷಿಸುತ್ತಿಲ್ಲ? ಎಷ್ಟು ಜನರೊಂದಿಗೆ ಮಾನಸಿಕ ಹಾದರದಲ್ಲಿ ತೊಡಗುವುದಿಲ್ಲ? ದಿನಕ್ಕೆಷ್ಟು ಬಾರಿ ಕೊರಗುತ್ತಿಲ್ಲ, ತೊಳಲುತ್ತಿಲ್ಲ? ಆ ಕಾರಣಗಳಾದರೂ ನಮಗೆ ಸಷ್ಟವಿವೆಯೇ? ಅದೂ ಇಲ್ಲ. ನಾವು ಆದರ್ಶರೂಪರೆಂದು ತಿಳಿದುಕೊಂಡಿರುವ ಸಂತರ, ಯೋಗಿಗಳ ಅಂತರಂಗದ ಜೀವನ ನಮಗೆ ಯಾರಿಗೂ ಗೊತ್ತಿರುವುದಿಲ್ಲ. ಗೊತ್ತಾದರೆ ನಮಗೆ ಆಘಾತವಾಗುತ್ತದೆ. ಆದರೆ ಆಘಾತ ಯಾಕೆ ಆಗಬೇಕು? ಮನುಷ್ಯರು, ಕೇವಲ ಮನುಷ್ಯರು! ಆದರೂ ಮನಸಿನಲ್ಲಿ ಅಂದುಕೊಳ್ಳುವುದಕ್ಯೂ ಅದನ್ನು ಕಾರ್ಯಗತಗೊಳಿಸುವುದಕ್ಕೂ ವ್ಯತ್ಯಾಸವಿದೆ. ಅದು ನಿಜ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಮನುಷ್ಯನ ಸೂಕ್ಷ್ಮ ಜಗತ್ತಿನ ಬಗ್ಗೆ. ಪ್ರಸಿಡೆಂಟ್ ಕ್ಲಿಂಟನ್ ತಾನು ಲೆವಿನ್ಸ್‍ಕಿಯ ಜತೆ ನಡೆಸಿದ ‘ಅಫೇರ್’ ಬಗ್ಗೆ ನುಡಿದ ಸತ್ಯವೆಂದರೆ, ಅದು ಸಾಧ್ಯವಿದ್ದುದರಿಂದ ಆಯಿತು ಎಂದು. ಜೀವನವೆಂದರೆ ನೀರ್ಗಲ್ಲಿನ ಹಾಗೆ; ಅದು ತೋರಿಸುವುದಕ್ಕಿಂತ ಮುಚ್ಚಿಡುವುದೇ ಹೆಚ್ಚು. ಹೀಗಿರುತ್ತ ಸತ್ಯವಾಗಲಿ ಸಾಹಿತ್ಯವಾಗಲಿ ಕೇವಲ ಹೊರನೋಟಕ್ಕೆ ಸಿಗುತ್ತದೆಂದು ಎಂದುಕೊಳ್ಳುವುದು ಸರಿಯಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೩
Next post ತಂಗಿ

ಸಣ್ಣ ಕತೆ

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys