ಹೀಗಾಗಬಹುದೆಂದು
ನಾನೆಣಿಸಿರಲಿಲ್ಲ ಕನಸಿನಲ್ಲಿಯೂ.
ಒಡಹುಟ್ಟಿದ ತಂಗಿಯೆಂದು
ಅನ್ನವಿಟ್ಟು ಆದರಿಸಿದೆ,
ನಿನ್ನ ಉನ್ನತಿಯ ಬಯಸಿದೆ,
ನಿಯತ್ತಿನಿಂದ ಶ್ರಮಿಸಿದೆ,
ಮನಸಾರ ಹರಸಿದೆ.
ನನ್ನ ಸೇವಕರಾದ
ಕಲಾವಿದರನ್ನೂ, ತಂತ್ರಜ್ಞರನ್ನೂ
ನಿನ್ನ ಸೇವೆಗೆ ನೇಮಿಸಿದೆ.
ನನ್ನ ಆರಾಧಕನನ್ನೇ
ನಿನ್ನನಾಧರಿಸಲು ಬೇಡಿದೆ.
ನನ್ನ ಬೆಡಗು ಬಿನ್ನಾಣಗಳನ್ನೂ
ಮನರಂಜಿಪ ಕಾರ್ಯಕ್ರಮಗಳನ್ನೂ
ನನಗೂ ಕೊಟ್ಟೆ – ನಿನ್ನ
ಉನ್ನತಿಯ ಬಯಸಿದೆ.
ಮನಸಾರ ಹರಸಿದೆ.
ಆದರೆ ಎಂತಹ ಘೋರ ಫಲಿತಾಂಶ!
ನನ್ನ ಪತಿ “ಶೋತೃ” ಮೈ ಮರೆತ
ನಿನ್ನ ರೂಪ ಲಾವಣ್ಯದಲಿ!
ಮರುಳಾದ ನಿನ್ನ ಒನಪು, ವೈಯಾರಕ್ಕೆ
ನನ್ನ ಮರೆಯುತ, ನಿನ್ನೆಡೆಗೆ
ಬಹು ಬೇಗ ಸರಿದ… ನನ್ನಿನಿಯ
“ಶೋತೃ ಬಾಂಧವ” ನಿನ್ನ
“ಪ್ರಿಯ ವೀಕ್ಷಕ”ನಾದ!
ನನ್ನ ಹಿರಿಮೆ, ಆಕರ್ಷಣೆ
ಬರುಬರುತ್ತಾ ಕಡಿಮೆಯಾಗಿ,
ನವ ಯುವತಿ ನೀನಾದೆ
“ದೂರದರ್ಶನ” ರಾಣಿ!
ಗರತಿ ನಾ ಮೂಲೆಗುಂಪಾದೆ
ನಿನ್ನ ನತದೃಷ್ಟ ಹಿರಿಯಕ್ಕ
“ಆಕಾಶವಾಣಿ”!
*****
೧೪-೦೬-೧೯೮೫